ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಫ಼ೆಬ್ರವರಿ 2015 > ದಿನ ದಿನವೂ ಬರಬೇಕು ಅವಳು . . .

ದಿನ ದಿನವೂ ಬರಬೇಕು ಅವಳು . . .

ಪೆಟ್ಟು ತಿನ್ನುತ್ತಲೇ ಕಣ್ಣೀರಿನಿಂದಲೇ ಬದುಕು
ದೂಡುವ ಇವರ ಜೀವನವನ್ನು
ಹತ್ತಿರದಿಂದ ಕಂಡಾಗ ಇವರು ತಮ್ಮ ಬದುಕಿನಲ್ಲಿ
ರೂಢಿಸಿಕೊಂಡಿರುವ ತಾಳ್ಮೆ, ಧೈರ್ಯ, ಧೃತಿ,
ನಿರ್ಲಿಪ್ತತೆಗಳಿಗೆ ವಿದ್ಯಾವಂತರು ಕೂಡ ಮೂಗಿನ ಮೇಲೆ ಬೆರಳಿಡಬೇಕಾಗುತ್ತದೆ!

Dinadinavu barbeku avaluವಳು ಒಂದೇ ಒಂದು ದಿನ ಬರದಿದ್ದರೂ ಮನಸ್ಸೆಲ್ಲ ಇರಿಸುಮುರಿಸು, ಎಲ್ಲರ ಮೇಲೂ ಎಲ್ಲದರ ಮೇಲೂ ವಿನಾಕಾರಣ ಹರಿಹಾಯುವಂಥ ಅಸಮಾಧಾನದ ಸಿಟ್ಟು. ಅವಳು ಒಂದು ದಿನ ಮನೆಗೆ ಬರಲಿಲ್ಲವೆನ್ನಿ, ಇಡೀ ಮನೆಯೆಲ್ಲವೂ ಸ್ನಾನವೇ ಮಾಡದಂತೆ ಬಹಳ ಗಲೀಜಾಗಿ ಕೊಳಕಾಗಿ ಕಾಣಬರುತ್ತದೆ. ಅವಳು ಬಾರದೇ ಉಳಿದ ದಿನ ಅಡಿಗೆಮನೆಯಂತೂ ಹೇಸಿಗೆಯಾಗಿ ರೇಜಿಗೆ ಹುಟ್ಟಿಸಿಬಿಡುತ್ತದೆ! ಸ್ನಾನದ ಮನೆ, ಹಿತ್ತಿಲು, ಮನೆಯ ಅಂಗಳ ಒಂದೊಂದೂ ಅವಲಕ್ಷಣವಾಗಿ ಕಾಣುತ್ತ ಅವಳು ಬಂದಿಲ್ಲವಲ್ಲ…. ಎಂದು ಆರೆಂಟು ಬಾರಿ ನೆನಪಿಸಿ ಮನಸ್ಸಿಗೆ ಕಿರಿಕಿರಿ ಉಂಟುಮಾಡುತ್ತವೆ.
ಹಾಗೆಂದು ಅವಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿಬಿಟ್ಟಿದ್ದಾಳೆ ಎಂದು ಪ್ರತಿದಿನವೂ ಯಾರೂ ನೆನಪಿಸಿಕೊಳ್ಳುವುದಿಲ್ಲ. ಆದರೆ ಅವಳು ಬರದಿದ್ದರೆ ಮಾತ್ರ ಖಂಡಿತಾ ದೊಡ್ಡ ತಲೆನೋವು! ದಿನದಿನವೂ ಬರುವ ಅವಳಿಗೆ ವಿಶೇಷವಾದ ಮರ್ಯಾದೆಯ ಮಣೆಯೇನೂ ಯಾರೂ ಹಾಕುವುದಿಲ್ಲ. ಆದರೆ ಒಂದು ದಿನ ಬರದಿದ್ದರೂ ಅವಳಿಗೆ ಶಾಪ ಮಾತ್ರ ತಪ್ಪಿದ್ದಲ್ಲ.

ಯಾರವಳು?
ಯಾರವಳು? ಯಾರಾಕೆ? ಎಂದರೆ ಅವಳೇ, ಮನೆಗೆಲಸದ ಮಹಿಳೆ! ಈಗಿನ ದಿನಗಳಲ್ಲಿ Maid Servent ಎಂದು ಕರೆಯಿಸಿಕೊಳ್ಳುವ ಅಥವಾ ನಾನು `House Keeper’ ಎಂದು ಹೇಳಿಕೊಳ್ಳುವ ಅವಳು ನಗರಜೀವನದ ಹೆಚ್ಚಿನ ಮಹಿಳಾಮಣಿಗಳಿಗೆ ಅನಿವಾರ್ಯ ಅಥವಾ ಅಗತ್ಯತೆ! ಮನೆಯನ್ನು ಗುಡಿಸಿ, ಒರೆಸಿ ಪಾತ್ರೆಗಳನ್ನು ತೊಳೆದು, ಬಟ್ಟೆ ಒಗೆದು, ಬಚ್ಚಲು ತಿಕ್ಕಿ, ಸಿಂಕ್ ತೊಳೆದು, ಇವೆಲ್ಲ ಮಾಡಲು ಅವಳು ಪ್ರತಿನಿತ್ಯವೂ ಬರಲೇಬೇಕು. ಇನ್ನೂ ಅನೇಕ ಮನೆಗಳಲ್ಲಿ ಬೆಳಗಿನಲ್ಲೇ ಬಂದು ಅಂಗಳ ತೊಳೆದು ರಂಗವಲ್ಲಿ ಇಡಲೂ ಆಕೆಯೇ ಬೇಕು! ಹಿತ್ತಿಲಿನಲ್ಲಿರುವ ಗಿಡಗಳಿಗೆ ನೀರುಣಿಸಲೂ ಆಕೆಯೇ ಬೇಕು! ಹಾಲು, ನೀರು, ವಿದ್ಯುತ್ ಹೇಗೆಯೋ ಹಾಗೆಯೇ ಮನೆಗೆಲಸದಾಕೆ ಸಹಾ! ಕೆಲವರನ್ನು ಹೊರತುಪಡಿಸಿ ಮಧ್ಯಮವರ್ಗದ ಗೃಹಿಣಿಯರಿಗೆ ಆಕೆ ಬೇಕೇಬೇಕು! ಇನ್ನು ಮೇಲುವರ್ಗದ ಮನೆಯವರಿಗಂತೂ ಕೇಳುವುದೇ ಬೇಡ. ಅವರವರ ಅನುಕೂಲಕ್ಕೆ, ಪ್ರತಿಷ್ಠೆಗೆ ತಕ್ಕಂತೆ ಅವರ ಮನೆಗೆ ಬರುವ ಮನೆಗೆಲಸದವರ ಸಂಖ್ಯೆಯೂ ದೊಡ್ಡದು! ಬೆಳಗಿನ ಕೆಲಸಗಳಿಗೆ ಒಬ್ಬಳು, ಸಂಜೆಗೆಲಸಕ್ಕೆ ಮತ್ತೊಬ್ಬಳು, ಮನೆಯಲ್ಲೇ ಅಡುಗೆಯಾಕೆ ಒಬ್ಬಳು, ಸುತ್ತುಗೆಲಸಕ್ಕೆ ಇನ್ನೊಬ್ಬಳು, ಬಾಣಂತಿ ಮಗುವಿಗೆ ನೀರೆರೆದು ಹೋಗಲೆಂದು ಬರುವವಳೊಬ್ಬಳು, ಕಿಟಕಿ, ಬಾಗಿಲು ಮತ್ತಿತರ ವಸ್ತುಗಳ ಧೂಳೆಲ್ಲ ಒರೆಸಿಟ್ಟು ಹೋಗಲು ಮಗದೊಬ್ಬಳು…. ಹೀಗೆ ಅವರವರ ಅಂತಸ್ತು ಅನುಕೂಲಕ್ಕೆ ತಕ್ಕಂತೆ ಮನೆಗೆಲಸದವರ ಸಂಖ್ಯೆ!

ನಮ್ಮ ಬೀದಿಯ ಕೊನೆಯ ದೊಡ್ಡ ಮೂರು ಮಹಡಿಗಳ ಮನೆಯ ಅಜ್ಜಿಯೊಬ್ಬರು ಇತ್ತೀಚೆಗೆ ಪರಿಚಯವಾಗಿದ್ದರು. ನಮ್ಮ ಇಡೀ ಬೀದಿಯವರಲ್ಲೇ ಅತ್ಯಂತ ಶ್ರೀಮಂತರೆನಿಸಿಕೊಂಡವರು. ಪಾರ್ಕ್‌ನಲ್ಲಿ ನನ್ನೊಂದಿಗೆ ಮಾತಾಡುತ್ತಾ ಕುಳಿತಿದ್ದ ಅವರು “ನಮ್ಮ ಮನೆಯಲ್ಲೆಲ್ಲ ಮನೆಗೆಲಸದವರದ್ದೇ ಗಲಾಟೆ, ಓಡಾಟ ನೋಡಿ! ಅವರದ್ದೇ ದರ್ಬಾರು ಎನ್ನಬೇಕೋ, ಹಾವಳಿ ಅನ್ನಬೇಕೋ ಗೊತ್ತಾಗ್ತಾ ಇಲ್ಲ. ಒಟ್ಟು ಏಳು ಮಂದಿ ದಿನಾ ಕೆಲಸಕ್ಕೆ ಬಂದು ಹೋಗ್ತಾರೆ ನೋಡಿ…” ಎಂದರು. ಇತ್ತೀಚೆಗಷ್ಟೇ ಧಾರವಾಡದ ತನ್ನ ವಾಸ್ತವ್ಯ ಬಿಟ್ಟು ಇಲ್ಲಿ ಮಗನ ಮನೆಯಲ್ಲೇ ಇರಲೆಂದು ಬಂದಿದ್ದವರು ಅವರು. “ನಾವೆಲ್ಲ ಕಷ್ಟಪಟ್ಟು ರಟ್ಟೆ ಬಗ್ಗಿಸಿ ದುಡಿದು ಮಕ್ಕಳನ್ನು ಸಾಕಿದವರು, ಬಡತನದಲ್ಲೇ ಬದುಕು ಕಳೆದವರು. ಈಗ ಇವರ ದರ್ಬಾರೆಲ್ಲ ನನಗೆ ಅರ್ಥವಾಗೋಲ್ಲಪ್ಪ” ಎಂದರು. ಸುಮ್ಮನಿರಲಾರದೆ ನಾನು ಕೇಳಿದೆ. “ಅಲ್ಲಾ ಅಜ್ಜಿ, ಇಷ್ಟೊಂದು ಕೆಲಸದವರಿರ್‍ತಾರಲ್ಲ ನಿಮ್ಮ ಮನೇಲಿ? ಮತ್ತೆ ನಿಮ್ಮ ಸೊಸೆಗೇನು ಕೆಲಸ ಮನೇಲಿ ಹಾಗಾದರೆ?” ಅಜ್ಜಿ ತನ್ನ ಮೂತಿಯನ್ನು ತುಸುವೇ ವಾರೆಯಾಗಿಸಿ ನುಡಿದರು. “ಅಯ್ಯೋ, ಸುಮ್ಮನಾಗುತ್ತೆಯೆ? ಇವರಿಗೆಲ್ಲ ಕೆಲಸ ಹೇಳ್ತಾ ಇರೋದೇ ಅವಳ ಕೆಲಸ, ಅಷ್ಟೆ! ಕೆಲಸ ಹೇಳಿ ಮಾಡಿಸಿ, ಹೇಳಿ ಮಾಡಿಸಿ ಸಾಕಾಗುತ್ತಂತೆ ಅವಳಿಗೆ…”

ಆದ್ಯತೆಯ ವಿಷಯ
ಅಂತೂ ಸಾಧಾರಣವಾಗಿ ಮನೆಗೆಲಸಕ್ಕೆ ಹೆಂಗಸು ಸಿಕ್ಕದಿದ್ದರೆ ಗೃಹಿಣಿಯರಿಗೆ ದೊಡ್ಡ ತಲೆನೋವೇ! ಹೀಗಾಗಿಯೇ ಎಷ್ಟೋ ಬಾರಿ ಮನೆ ಬದಲಾಯಿಸುವಾಗ ಅಥವಾ ವರ್ಗವಾಗಿ ಪರಊರಿಗೆ ಹೋದಾಗ ಅಲ್ಲಿ ಮಹಿಳೆಯರು ವಿಚಾರಿಸಿಕೊಳ್ಳುವ ಮೊದಲನೇ ವಿಷಯವೇ “ಇಲ್ಲಿ ಮನೆಗೆಲಸಕ್ಕೆ ಜನ ಸಿಗುತ್ತಾರಾ…?” ಎಂದು. ಈ ವಿಷಯದಲ್ಲಿ ಗಂಡಸರಿಗಿಂತ ಹೆಂಗಸರಿಗೇ ಆತಂಕ, ಕಾಳಜಿ. ಕೆಲಸದವಳಿಲ್ಲದಿದ್ದರೆ ಗೃಹಿಣಿಯ ಮೇಲೆ ತಾನೇ ಪೂರ್ತಿ ಹೊರೆ? ಏನೆಲ್ಲ ಆಧುನಿಕ ಸೌಲಭ್ಯಗಳು, ವ್ಶೆಜ್ಞಾನಿಕ ಕೊಡುಗೆಗಳು ಅಡುಗೆ ಮನೆಯಲ್ಲಿ ರಾರಾಜಿಸುತ್ತಿದ್ದರೂ ಗೃಹಿಣಿಯರಿಗೆ ಅಡುಗೆ, ತಿಂಡಿ ತಯಾರಿಸುವುದೇ ದೊಡ್ಡ ರಗಳೆಯಾಗಿರುವಾಗ ಇನ್ನು ತೊಳಿ, ಬಳಿ, ಒಗೆ, ತೆಗೆ, ಗುಡಿಸು, ಒರೆಸು ಎಂದು ಹೊರಗೆಲಸಗಳನ್ನೂ ಮಾಡುವ ಹೊರೆ ಹೊರಲು ಸಾಧ್ಯವೆ? ಮೂರು ಹೊತ್ತೂ, ಮೂವತ್ತು ದಿನವೂ ಈ ಎಲ್ಲ ಕೆಲಸಗಳನ್ನು ಮಾಡುತ್ತ ಬಸವಳಿಯುತ್ತಿರುವುದೆ? ಇಲ್ಲ…. ಸಾಧ್ಯವೇ ಇಲ್ಲ! ಮನೆಗೆಲಸಕ್ಕೆ ಒಬ್ಬಳು ಬೇಕೇ ಬೇಕು! ಇನ್ನು ಉದ್ಯೋಗಸ್ಥ ಮಹಿಳೆಗಂತೂ ಮನೆಗೆಲಸದಾಕೆ ತುಂಬಾ ಅನಿವಾರ್ಯವೇ ಸರಿ, ಬೇಕೇಬೇಕಲ್ಲವೇ?
ಆದರೆ ಈ ಮನೆಗೆಲಸದ ಹೆಂಗಸರ ಬದುಕಿನತ್ತಲೂ ಕಣ್ಣು ಹಾಯಿಸಿ ನೋಡಬೇಕಾಗಿದೆ. ಧನುರ್ಮಾಸದ ಛಳಿಯೇ ಇರಲಿ, ಸುರಿವ ಮಳೆಗಾಲವೇ ಇರಲಿ, ಬೆಳಗಿನ ನಸುಕಿನಲ್ಲೇ ಎದ್ದು ಈ ಹೆಂಗಸರು ತಮ್ಮ ಮನೆಯವರಿಗೊಂದಿಷ್ಟು ಆಹಾರ ಬೇಯಿಸಿಟ್ಟು, ಬೇರೆ ಬೇರೆ ಮನೆಗಳ ಕೆಲಸಕ್ಕೆ ಹೊರಡುತ್ತಾರೆ. ದೊಡ್ಡ ದೊಡ್ಡ ಬಂಗಲೆಗಳ ಗೇಟಿನೊಳಗಿನ ಅಂಗಳಗಳು ಇವರನ್ನೇ ಕಾಯುತ್ತಿರುತ್ತವೆ. ತೋಯಿಸಿಕೊಂಡು ರಂಗವಲ್ಲಿಯ ಸಿಂಗಾರ ಪಡೆಯಲೋಸುಗವೇ ಇವರನ್ನು ಎದುರುನೋಡುತ್ತಿರುತ್ತವೆ. ಆಯಾ ಬಂಗಲೆಗಳ ಒಡತಿಯರು ಒಳಗೆ ಬೆಚ್ಚಗೆ ಹೊದ್ದು ಬೆಳಗಿನ ಸಕ್ಕರೆ ಸವಿ ನಿದ್ದೆಯಲ್ಲಿ ಮಲಗಿಯೋ, ಅಥವಾ ಬೆಚ್ಚಗಿನ ಸ್ವೆಟರ್, ಕಾಲುಚೀಲ, ಸ್ಕಾs ಧರಿಸಿ ವಾಕಿಂಗ್, ಜಾಗಿಂಗ್ ಎಂದು ಪಾರ್ಕ್ ಬಳಿ ಹೋಗಿರುತ್ತಲೋ ಇರುವಾಗ ಈ ಕೆಲಸದಾಕೆಯರು ಅವರ ಮನೆಯ ಅಂಗಳ ತೊಳೆದು ರಂಗವಲ್ಲಿ ಬಿಡಿಸುತ್ತಿರುತ್ತಾರೆ, ಅವರ ಮನೆಯ ಮುಸುರೆ ಪಾತ್ರೆಗಳನ್ನು ಥಳಥಳನೆ ಬೆಳಗುತ್ತಿರುತ್ತಾರೆ. ನೀರಿನ ಶೈತ್ಯ ತಮ್ಮನ್ನು ಎಂದೂ ಬಾಧಿಸುವುದಿಲ್ಲ ಎಂಬಂತೆ ಕೊಳೆಯ ಬಟ್ಟೆಗಳನ್ನು ಒಗೆದು ಹಿಂಡುತ್ತಿರುತ್ತಾರೆ.

ದೈತ್ಯ ಶ್ರಮ!
ಇನ್ನು ಬೇಸಿಗೆಯ ಬಿಸಿಲು ಧಗಧಗಿಸುತ್ತಿದ್ದರೂ ಈ ಕೆಲಸದ ಹೆಂಗಸರು ಉರಿಬಿಸಿಲಲ್ಲೇ ಮನೆಯಿಂದ ಮನೆಗೆ ನಡೆಯುತ್ತ ಕೆಲಸಗಳನ್ನು ಪೂರೈಸಿಕೊಟ್ಟೇ ತಮ್ಮ ತಮ್ಮ ಮನೆಗೆ ಮರಳುತ್ತಾರೆ. ಒಂದೆರಡು ಮನೆ ಮಾತ್ರ ಹಿಡಿದು ಕೆಲಸ ವಹಿಸಿಕೊಂಡರೆ ಎಷ್ಟೋ ಬಡಹೆಂಗಸರಿಗೆ ಹೊಟ್ಟೆ ತುಂಬುವುದಿಲ್ಲ. ಅವರಿಗೂ ಅವರವರ ಮನೆಯಲ್ಲಿ ಉಣ್ಣುವ ಹಲವು ಬಾಯಿಗಳು, ಓದುವ ಮಕ್ಕಳೂ ಇರುತ್ತಾರೆ. ಕೆಲವು ಕೆಲಸದ ಹೆಂಗಸರ ಕುಟುಂಬದಲ್ಲಿ ಕಾಡುವ ಕುಡುಕ ಗಂಡನ ಕಾಟವಂತೂ ಇದ್ದೇ ಇರುತ್ತದೆ! ಹೀಗಾಗಿ ಒಬ್ಬ ಹೆಂಗಸು ಹತ್ತು ಹಲವು ಮನೆಯ ಗುತ್ತಿಗೆ ಪಡೆದು ದುಡಿದಾಳು ದೈತ್ಯಶ್ರಮದಲ್ಲಿ! ಕೆಲವೊಮ್ಮೆ ಯಾರ ಮನೆಯಲ್ಲೂ ಕೆಲಸ ಸರಿಯಾಗಿ ಪೂರೈಸದೇ ಮತ್ತೊಂದು ಮನೆಗೆಂದು ಓಡಿಯಾಳು! “ಪಾತ್ರೆ ಸರಿಯಾಗಿ ತೊಳೆದಿಲ್ಲ. ಸೋಪು, ಸಬೀನಾ ಹಾಕಿದ್ದು ಹಾಗೆ ಹಾಗೇ ಇದೆ. ಮುಸುರೆಯೂ ಹೋಗಿಲ್ಲ. ಮೂಲೆ ಸಂದು ನೋಡಿ ಕಸ ಗುಡಿಸಿಲ್ಲ. ಬಂದ ತಕ್ಷಣ ಸೂಮಾಲೆ ಅಂತ ಮಾಡಿ ಇನ್ನೊಂದು ಮನೆಗೆ ಓಡೋದೇ” ಎಂದು ಮರುದಿನ ಆಕೆ ಬಂದಾಗ ಗೃಹಿಣಿ ಬೈದರೆ ಅವಳೂ ಹೇಳಿಯಾಳು, “ಏನು ಮಾಡೋದಮ್ಮಾ? ನಿಮ್ಮ ಮನೇ ಕೆಲಸ ಒಂದೇ ಮಾಡ್ಕೊಂಡು ಕೂತರೆ ನಮ್ಮ ಹೊಟ್ಟೆ ತುಂಬಬೇಕಲ್ಲ? ಕೊಡ್ತೀರಾ ನಾವು ಕೇಳೋವಷ್ಟು ಸಂಬಳಾನ ನೀವು?….”
ನಮ್ಮ ಮನೆಗೆ ಈ ಮೊದಲು ಒಬ್ಬಾಕೆ ಜಯಲಕ್ಷ್ಮಿ ಎನ್ನುವವಳು ಕೆಲಸಕ್ಕೆಂದು ಬರುತ್ತಿದ್ದಳು. ಅಷ್ಟೇನೂ ಚೊಕ್ಕಟವಾಗಿ ಕೆಲಸ ಮಾಡುತ್ತಿರಲಿಲ್ಲವೆಂಬ ಅಸಮಾಧಾನ ನನಗಿದ್ದೇ ಇತ್ತು. ಆಮೇಲಾಮೇಲೆ ನೋಡಬೇಕು ಅವಳ ಕೆಲಸದ ಧಾವಂತದ ವೈಖರಿ! ಬಾಗಿಲನ್ನು ಧಡಾರನೆ ಶಬ್ದಮಾಡಿ ನೂಕಿಕೊಂಡು ಒಳಬರುತ್ತಲೇ ಅಲ್ಲೇ ಸೋಫಾದ ಮೇಲೆ ಕುಳಿತು ಪುಸ್ತಕ ಹಿಡಿದಿರುತ್ತಿದ್ದ ನನ್ನನ್ನು ಕಂಡು ತಕ್ಷಣವೇ “ನಾನಿನ್ನೂ ಮೂರು ಕಡೆ ಕೆಲಸಕ್ಕೆ ಹೋಗಬೇಕು. ಗಂಟೆ ಹನ್ನೆರಡು ಆಗಿಹೋಯಿತು. ಇನ್ನೂ ಕೆಳಗಡೆ ಮನೇಲಿ ಪಾತ್ರೆ ತೊಳೆದಿಲ್ಲ. ಆ ಕಡೆ ಅಪಾರ್ಟ್‌ಮೆಂಟ್ಸ್‌ನಲ್ಲಿ ಮೆಟ್ಟಿಲು ಗುಡಿಸೋಕೆ ಹೋಗಿಲ್ಲ. ಮುಂದಿನ ರಸ್ತೇಲಿ ಮೇಡಂ ಮನೇಲಿ ಬಟ್ಟೆ ಒಗೀಬೇಕು….” ಎಂದು ಅನೌನ್ಸ್ ಮಾಡಿಯೇ ಒಳಹೋಗುತ್ತಿದ್ದಳು. ನಾಲ್ಕು ದಿನ, ಹತ್ತು ದಿನ ಸುಮ್ಮನಿದ್ದೆ ಕೇಳಿಸಿಕೊಂಡು. ಬಂದ ತಕ್ಷಣ ಅದದೇ ಮಾತುಗಳ Retation! ಸಹನೆ ತಪ್ಪಿ, ಒಂದು ದಿನ ಕೇಳಿದೆ. “ನೀನೇನು ನಮ್ಮ ಮನೇಗೆ ಬರೋದು ಕೆಲಸಕ್ಕಾ? ಅಥವಾ ಯಾರ್‍ಯಾರ ಮನೇಲಿ ಎಷ್ಟೆಷ್ಟು ಕೆಲಸ ಬಾಕಿ ಇದೆ ಅಂತ ಹೇಳಿಹೋಗುವುದಕ್ಕೆ ಬರ್‍ತಾ ಇದೀಯಾ?” ಅಂತ. “ಅಯ್ಯೋ ಬಿಡಿ, ಮೂರು ಹೊತ್ತೂ ಪುಸ್ತಕ ಓದ್ಕೊಂಡು ಕೂತಿರ್‍ತೀರ. ನಿಮಗೇನು ಗೊತ್ತಾಗುತ್ತೆ ನನ್ನ ಕಷ್ಟ? ನಮ್ಮಂಥವರು ರೆಟ್ಟೆ ಬಗ್ಗಿಸಿ ದುಡಿದು ಸಾಯ್ತೀವಿ ತಿಳ್ಕೊಳ್ಳಿ” ಎಂದು ಒಮ್ಮೆ ಘರ್ಜಿಸಿಬಿಟ್ಟಳು! ನಾನು ಓದುತ್ತಿರುತ್ತೇನೆ ಎನ್ನುವುದೇ ಇವಳ ಕಣ್ಣು ಕುಕ್ಕಿಸಿಬಿಟ್ಟಿತೇ? ಬೇರೆ ಹೆಂಗಸನ್ನು ಹೇಗೋ ಕಷ್ಟಪಟ್ಟು ಅಲ್ಲಿ ಇಲ್ಲಿ ವಿಚಾರಿಸಿ ಗೊತ್ತುಪಡಿಸಿಕೊಂಡಾದ ಮೇಲೆಯೇ ಇವಳನ್ನು ಬೇಡವೆಂದು ಸಾಗಹಾಕಿದೆ ಅನ್ನಿ!

ಇಲ್ಲದ ನಿಯಮಗಳು
ಹಾಗೆ ನೋಡಿದರೆ, ಈ ಮನೆಗೆಲಸದ ಹೆಂಗಸರು ಪಡೆಯುವ ಸಂಬಳವೂ ಕಡಮೆಯೇ, ಅಲ್ಲವೇ ಎಂದು ನಾನೆಂದರೆ ಕೆಲವು ಮನೆಯೊಡತಿಯರು ಜಗಳಕ್ಕೇ ಬಂದಾರು ನನ್ನ ಜೊತೆಗೆ! ಆದರೂ ಈ ಮಾತು ಸತ್ಯವೇ ಅಲ್ಲವೇ? ಬೇರೆಲ್ಲ ಉದ್ಯೋಗಗಳಿಗೆ ಹೋಲಿಸಿದರೆ ಮನೆಗೆಲಸದವರು ಐess ಠಿಚಿiಜ ತಾನೆ? ಇವರಿಗೆಲ್ಲ ಕೆಲಸದ ಗ್ಯಾರಂಟಿ ಏನಾದರೂ ಇದೆಯಾ? ಪಿ.ಎಫ್. ಇದೆಯಾ? ಗ್ರಾಚ್ಯುಟಿ ಕೊಡುತ್ತೇವಾ? ಅಥವಾ ಇವರಿಗೆ ಪೆನ್‌ಶನ್ ಅಂತ ಏನಾದರೂ ಸಿಗುತ್ತಾ? ಏನಿದೆ ಪಾಪ? ಮನೆಯೊಡತಿಗೇನಾದರೂ ಸಿಟ್ಟು ಬಂದು “ನಾಳೆಯಿಂದ ನೀನು ಕೆಲಸಕ್ಕೆ ಬರೋದು ಬೇಡ” ಎಂದರೆ ಮುಗಿಯಿತಲ್ಲ? ಕೊಡುವ ಅಲ್ಪ ಸಂಬಳಕ್ಕೇ ಸ್ವಲ್ಪವಾದರೂ ಮಾನವೀಯತೆ ಬೆರೆಸಿ ನಡೆಸಿಕೊಳ್ಳುವುದು ಮನೆಯೊಡತಿಗೆ ಸೇರಿದ್ದಷ್ಟೆ? ಇಷ್ಟಕ್ಕೂ ಭಾನುವಾರವೂ ಇವರಿಗೆ ರಜೆ ಇಲ್ಲ. ಎಷ್ಟೋ ಮನೆಗಳಲ್ಲಿ ಅಂದು ಗಂಡಸರು, ಮಕ್ಕಳು ಮನೆಯಲ್ಲೇ ಇರುತ್ತಾರೆ ಎಂದು ಕೆಲಸಗಳೂ ಧಂಡಿಯಾಗಿ ಹೊರಿಸುವುದೇ ಹೆಚ್ಚು. ವರ್ಷಕ್ಕೆ ಇಷ್ಟು ಎಂದೇನಾದರೂ `ಸಿ.ಎಲ್’ಗಳು ಇವರ ಕೆಲಸದ ನಿಯಮಗಳಲ್ಲಿ ಸೇರಿರುವುದೂ ಇಲ್ಲವಲ್ಲ! ಇವರುಗಳೇ ಇದ್ದಕ್ಕಿದ್ದಂತೆ ಆಗಾಗ ಗೈರುಹಾಜರಾಗಿ ಒಡತಿಯರ ಕೆಂಗಣ್ಣಿಗೆ ಗುರಿಯಾಗಬೇಕಷ್ಟೇ!
ಇನ್ನು ಕೆಲವು ಮನೆಗಳಲ್ಲಿ ಅನಿವಾರ್ಯ ಕಾರಣ ಗಳಿಂದಲೋ, ಹುಷಾರಿಲ್ಲದೆ ಅನಾರೋಗ್ಯವಾಗಿದ್ದಕ್ಕೋ ಮೂರು ದಿನ, ನಾಲ್ಕಾರು ದಿನ ಬಾರದೇ ಉಳಿದಳೆನ್ನಿ, ಮತ್ತೆ ಆಕೆ ಕೆಲಸಕ್ಕೆಂದು ಬಂದಾಗ ಆ ಮೂರು ನಾಲ್ಕು ದಿನಗಳ ಪಾತ್ರೆಪಡಗಗಳೆಲ್ಲ ಗಲೀಜಾಗಿ ಮುಸುರೆಯ ಹಳಸು ವಾಸನೆ ಬೀರುತ್ತ ಅವಳಿಗಾಗಿಯೇ ಕಾಯುತ್ತಿರುತ್ತವೆ. ನಾಲ್ಕು ದಿನಗಳ ಬಟ್ಟೆಬರೆಗಳೆಲ್ಲ ವಾಸನೆ ಕೂಡಿಸಿಕೊಂಡು ಬಕೆಟ್‌ಗಳಲ್ಲಿ ಇವಳಿಗಾಗಿ ಕಾಯುತ್ತಿರುತ್ತವೆ. ಮೂರು ನಾಲ್ಕು ದಿನ ಬಾರದೇ ಉಳಿದ ತಪ್ಪಿಗೆ, ಹುಷಾರಿಲ್ಲದೇ ಮಲಗಿದ್ದ ತಪ್ಪಿಗೆ ಇಂದು ರಾಶಿರಾಶಿ ಪಾತ್ರೆಗಳನ್ನು ಗಲೀಜು, ವಾಸನೆ ಲೆಕ್ಕಿಸದೇ ಆಕೆ ತೊಳೆಯಲೇಬೇಕು! ಬಟ್ಟೆ ರಾಶಿ ನೋಡಿ ಗೊಣಗಿಡದೆ ಒಗೆದು ಒಣಗಿಸಲೇಬೇಕು! “ನನ್ನ ಕೈಲಿ ಅದೆಲ್ಲ ಮಾಡ್ಕೊಳ್ಳೋಕೆ ಆಗೋಲ್ಲಮ್ಮ, ಅಭ್ಯಾಸನೂ ಇಲ್ಲ ಅಂತ ನಿನಗೆ ಗೊತ್ತಲ್ವಾ? ಯಾಕೆ ಅಷ್ಟು ರಜೆ ಹಾಕಿದ್ದೆ? ಬೇರೆ ಯಾರನ್ನಾದರೂ ನಿನ್ನ ಬದಲಿಗೆ ನಾಲ್ಕು ದಿನಕ್ಕೆ ಅಂತ ಕಳಿಸಿದ್ದರೆ ಈಗ ನಿನಗೆ ಇಷ್ಟು ಕಷ್ಟ ಆಗ್ತಿತ್ತಾ ಹೇಳು?” ಎಂದು ಮನೆಯೊಡತಿ ಹೇಳಿಬಿಟ್ಟರೆ ಆಯಿತು! ಕೆಲಸದ ಭಾರವೆಲ್ಲ ಕೆಲಸದವಳ ಮೇಲೆಯೇ ತಾನೇ? ಒಟ್ಟಿನಲ್ಲಿ ರಜೆ ಹೋಗುವುದಿದ್ದರೆ ಬದಲಿ ವ್ಯವಸ್ಥೆ ಮಾಡಿಯೇ ಹೋಗಬೇಕೆನ್ನುವ ಜವಾಬ್ದಾರಿ! ಇದು ಕೆಲವರ ಮನೆಯಲ್ಲಿ ಆಗುವಂಥದ್ದು. ಇನ್ನು ಕೆಲವರ ಮನೆಯಲ್ಲಿ ಹೀಗಾಗದು, ಆದರೆ ನಾಲ್ಕಾರು ದಿನ ರಜೆ ಮುಗಿಸಿ ಕೆಲಸಕ್ಕೆಂದು ಹೋದಾಗ “ಹೇಳದೇ ಕೇಳದೇ ಕೆಲಸಕ್ಕೆ ಬರೋದು ನಿಲ್ಲಿಸಿಬಿಟ್ರೆ ಹೇಗೆ? ನನ್ನ ಕೈಲಿ ಮಾಡಿಕೊಳ್ಳೋಕೆ ಆಗೋಲ್ಲ ಅಂತ ಗೊತ್ತಿಲ್ವಾ? ನಾನು ಬೇರೆಯವರನ್ನು ಹಾಕಿಕೊಂಡಾಯ್ತು, ನೀನು ಬೇಡ, ಹೋಗು!” ಎಂದು ರಪ್ಪೆಂದು ಬಾಗಿಲು ಮುಚ್ಚಿಯಾರು! ಕೆಲಸವನ್ನೇ ಕಳೆದುಕೊಳ್ಳಬೇಕಾಗಿ ಬಂದುದು ಕೆಲಸದಾಕೆಯ ಹಣೆಬರಹ! ಹಾಗೆಂದು ಎಲ್ಲ ಮನೆಯೊಡತಿಯರೂ ಹೀಗೇ ಅಲ್ಲ, ಕೆಲಸದಾಕೆ ಬಾರದ ದಿನ ತಾವೇ ಎಲ್ಲ ಹೇಗಾದರೂ (ಗೊಣಗಿಕೊಂಡಾದರೂ!) ಮಾಡಿಕೊಂಡು ನಿಭಾಯಿಸಿಯಾರು! ಮತ್ತೆ ಆಕೆ ಬಂದಾಗ “ಅಬ್ಬ! ಇವತ್ತು ಬಂದೆಯಾ ಸಧ್ಯ! ನನಗೆ ಸಾಕಾಗಿ ಹೋಯ್ತಮ್ಮ ಮಾಡಿಕೊಂಡು” ಎಂದು ನಗುಮುಖದಿಂದ ಸ್ವಾಗತಿಸಿಯಾರು!

ಬದಲಾದ ಕಾಲ
ಈಗಿನ ದಿನಗಳಲ್ಲಿ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ. ಕಾರಣವೆಂದರೆ ಮನೆಗೆಲಸದಾಕೆ ತನ್ನ ಬಳಿ ಇಟ್ಟುಕೊಂಡಿರುವ ಮೊಬೈಲ್! ಹೆಚ್ಚು ಕಡಮೆ ಈಗ ಎಲ್ಲರ ಬಳಿಯಲ್ಲೂ ಮೊಬೈಲ್ ಫೋನ್ ಇರುವುದರಿಂದ ಕೆಲಸಕ್ಕೆ ಬರುವ, ಬಾರದಿರುವ ಬಗ್ಗೆ ಎಲ್ಲದಕ್ಕೂ ಸಂದೇಶಗಳು ರವಾನೆಯಾಗುತ್ತವೆ. ಇತ್ತೀಚೆಗಷ್ಟೇ ಈ ಮನೆಗೆಲಸದ ಮಹಿಳೆಯರಲ್ಲಿ ಬಡತನದ ರೇಖೆ ತುಸುವೇ ಸುಧಾರಿಸಿರುವುದೂ ಸುಳ್ಳಲ್ಲ. ಅವರ ಉಡುಗೆ ತೊಡುಗೆಗಳು ಒಪ್ಪ ಓರಣದಲ್ಲಿರುವಿಕೆ ಎಲ್ಲವೂ ಶಿಸ್ತು, ಚೊಕ್ಕತನದತ್ತ ವಾಲುತ್ತಿದೆ. ಮೊಬೈಲ್ ಅಂತೂ ರಾರಾಜಿಸುತ್ತಿರುತ್ತದೆ. ಇವೆಲ್ಲವೂ ಒಳ್ಳೆಯ ಬೆಳವಣಿಗೆ. ಬದುಕಿನ ಕನಿಷ್ಟ ಅನುಕೂಲ, ಸುಖ ಸಂತೋಷಗಳಾದರೂ ಅವರ ಬಳಿ ಸಾರಿರುವುದಕ್ಕಾಗಿ ನಾವು ಸಂತೋಷಪಡಬೇಕು. ಅವರೆಲ್ಲರ ಮನೆಯಲ್ಲಿಯೂ ಟಿವಿ ಇರುತ್ತದೆ. ಮನೆಯೊಡತಿಯ ಬಳಿ ಸೀರಿಯಲ್ ಕಥೆಗಳ ಬಗ್ಗೆ ಮಾತನಾಡುತ್ತಲೋ, ಕ್ರೈಮ್ ಕಾರ್ಯಕ್ರಮಗಳ ಬಗ್ಗೆ ಹೇಳುತ್ತ ವಿಷಾದಪಡುತ್ತಲೋ ಅವರ ಮನೆಗೆಲಸಗಳು ಸಾಗುತ್ತಿರುತ್ತವೆ.
ನಾಲ್ಕಾರು ವರ್ಷಗಳ ಹಿಂದಷ್ಟೇ ಈ ಕೆಲಸದ ಹೆಂಗಸರು ಒಬ್ಬೊಬ್ಬರ ಬಳಿ ಮಾತ್ರ ಮೊಬೈಲ್ ಇರಲು ಪ್ರಾರಂಭವಾಗಿದ್ದು, ಅದು ಸ್ಥಿತಿವಂತ ಗೃಹಿಣಿಯರ, ದುಡಿವ ಮಹಿಳೆಯರ ಅಚ್ಚರಿಗೂ ಕಾರಣವಾಗಿದ್ದ ದಿನಗಳವು! ನಾನಾಗ ಕಾಲೇಜಿನಲ್ಲಿ ಇನ್ನೂ ಸರ್ವಿಸ್‌ನಲ್ಲಿದ್ದೆ. ಸ್ಟ್ಯಾಫ಼್‌ರೂಂನಲ್ಲಿ ಕುಳಿತಿದ್ದಾಗ ನನ್ನ ಸಹೋದ್ಯೋಗಿ ಮಹಿಳೆ ಹೇಳುತ್ತಿದ್ದರು. “ಅಲ್ರೀ…. ಕಾಲ ಬದಲಾಗಿ ಹೋಗಿದೆ ನೋಡಿ! ನಮ್ಮ ಮನೇಲಿ ಕೆಲಸದಾಕೆ ಇದ್ದಕ್ಕಿದ್ದಂತೆ ಬಿಟ್ಟುಬಿಟ್ಟಳು. ಬೇರೆಯವಳಿಗಾಗಿ ಹುಡುಕ್ತಾ ಇದ್ದೆ. ಮೊನ್ನೆ ಒಬ್ಬಳು ಬಂದಳು, ಬೆಲ್ ಮಾಡಿದಳು. ಬಾಗಿಲು ತೆಗೆದೆ, `ಮೂಲೆ ಮನೆಯ ಮಹಾಲಕ್ಷ್ಮಿಯವರು ಕಳಿಸಿದರು. ಕೆಲ್ಸಕ್ಕೆ ಬೇಕೂಂತ ಹೇಳಿದ್ದಿರಂತೆ, ಮನೆ ನೋಡ್ಕೊಂಡು ಹೋಗೋಣ ಅಂತ ಬಂದೆ…’ ಎಂದು ಒಳಗಡೆ ಬಂದು ಇಡೀ ಮನೆ, ರೂಂಗೆಲ್ಲ ಹೋಗಿ ನೋಡಿದಳು. `ಮೂರು ಬೆಡ್‌ರೂಮಾ…?’ ಅಂದಳು. `ವಾಷಿಂಗ್ ಮಿಷೆನ್ ಇದೇ ತಾನೆ? ನಾನು ಬಗ್ಗಿ ಒರೆಸೋಲ್ಲ. ನಿಂತ್ಕೊಂಡು ಒರೆಸೋದು ತಂದಿಡಿ..’ ಎಂದಳು. ನಾನು ಏನಾದರೂ ಹೇಳುವುದಕ್ಕೆ ಮುಂಚೆಯೇ `ನನಗೆ ಈಗ ಮಾತಾಡೋಕೆ ಟೈಮಿಲ್ಲ. ನನ್ನ ಮೊಬೈಲ್ ನಂಬರ್ ತಗೊಳ್ಳಿ, ರಾತ್ರಿ ಎಂಟುಗಂಟೆ ಮೇಲೆ ನನಗೆ ಫೋನ್ ಮಾಡಿ. ಏನು ಕೆಲಸ, ಎಷ್ಟು ಸಂಬಳ ಎಲ್ಲ ಮಾತಾಡೋಣ’ ಅಂತ ನಂಬರ್ ಕೊಟ್ಟು ಹೊರಟೇಹೋದಳು….!” ಎಂದರು ನನ್ನ ಸಹೋದ್ಯೋಗಿ.
ಸ್ಟ್ಯಾಫ಼್‌ರೂಂನಲ್ಲಿ ಕುಳಿತಿದ್ದ ಮತ್ತೊಬ್ಬ ಮಹಿಳೆ “ಅಯ್ಯೋ ಬಿಡಿ, ನಮ್ಮ ಮನೆಗೆ ಬರುವವಳ ವಿಷಯ ಏನಂತೀರ? ನನಗಿಂತ ಜಾಸ್ತಿ ಕಾಲ್‌ಗಳು ಅವಳಿಗೇ ಬರ್‍ತಾ ಇರ್‍ತಾವೆ. ಮೊಬೈಲ್ ಕಿವಿಗಿಟ್ಟುಕೊಂಡು ಮಾತಾಡ್ತಲೇ ಗುಡಿಸೋದು ಒರೆಸೋದು! ಪಾತ್ರೆ, ಬಟ್ಟೆ ತೊಳೆಯುವಾಗಲೂ ಮೊಬೈಲಲ್ಲಿ ಮಾತು, ಮಾತು, ಮಾತು! ಸಾಕಾಗಿಹೋಗಿದೆ, ಅವಳು ಮನೇಲಿ ಕೆಲಸ ಮಾಡ್ತಿದ್ದಷ್ಟು ಕಾಲ ಒಂದೇ ಸಮನೆ ಒಂದಾದ ಮೇಲೊಂದು ಅವಳ ಮೊಬೈಲ್ ಕರೀತಾನೇ ಇರುತ್ತೆ…” ಎಂದರು.
ಇನ್ನೊಬ್ಬ ಸಹೋದ್ಯೋಗಿ ಹೇಳಿದರು. “ಇದೆಲ್ಲಾ ಏನ್ಮಹಾ ರೀ? ಮೊನ್ನೆ ನನ್ನ ತಂಗಿ ಗಂಡ ಬಂದಿದ್ದರು. ನಾನು ಕಾಫಿ ಮಾಡೋಕೆ ಒಳಗೆ ಬಂದಿದ್ದೆ. ಬೆಲ್ ಆಯ್ತು. ಭಾವ ಹೋಗಿ ಬಾಗಿಲು ತೆಗೆದಿದ್ದಾರೆ. ಆಮೇಲೆ ಸೀದ ಒಳಗೆ ಬಂದು `ಅತ್ತಿಗೆ, ಯಾರೋ ಗೆಸ್ಟ್ ಬಂದಿದಾರೆ ನೋಡಿ’ ಅಂದರು. ಯಾರಪ್ಪಾ ಬಂದವರು ಅಂತ ನಾನು ಹೊರಗೆ ಬಂದು ನೋಡ್ತೀನಿ, ಬಂದಿದ್ದು ನಮ್ಮ ಮನೆಕೆಲಸದವಳು!…. ಹೇಗೆ ಬರ್‍ತಾಳೆ ದಿನಾ ಅವಳು ಗೊತ್ತಾ? ಎಂಥೆಂಥಾ ಸೀರೆ ಉಡ್ತಾಳೆ ಗೊತ್ತಾ? ವ್ಯಾನಿಟಿ ಬ್ಯಾಗ್ ಬೇರೆ, ಕೈಯಲ್ಲಿ ವಾಚ್ ಕೂಡ! ನೋಡೋಕೂ ತಕ್ಕಮಟ್ಟಿಗೆ ಚೆನ್ನಾಗೇ ಇದಾಳೆ ರೀ…! ನೀವು ನೋಡಬೇಕು ಅವಳ ಗತ್ತು! ಹೊರಗೆ ಹೈಹೀಲ್ಡ್ ಚಪ್ಪಲಿ ಬಿಟ್ಟು ಒಳಗೆ ಬಂದು ಅಡುಗೆ ಮನೆ ಕಟ್ಟೆಯ ಮೇಲೆ ಒಂದು ಕಡೆ ವ್ಯಾನಿಟಿಬ್ಯಾಗ್ ಇಡ್ತಾಳೆ. ಅದರೊಳಗಿಂದ ಮೊಬೈಲ್ ತೆಗೆದು ಹೊರಗಿಟ್ಟು ಎಡಗೈಯಿಂದ ವಾಚ್ ತೆಗೆದು ಅದರ ಪಕ್ಕದಲ್ಲಿಟ್ಟು ಆಮೇಲೆ ಕೆಲ್ಸ ಶುರುಮಾಡೋ ಸ್ಟೈಲ್ ನೋಡಬೇಕು ನೀವು! ಅವಳು ಕೆಲ್ಸದವಳು ಅಂತ ಗೊತ್ತಾದ ಮೇಲೆ ಭಾವನವರು ದಂಗಾಗಿಹೋದರು, ಗೊತ್ತಾ? ಕೆಲ್ಸನೂ ನೀಟಾಗಿ ಮಾಡ್ತಾಳೆ. ಹೆಚ್ಚು ರಜೆ ಹಾಕೋಲ್ಲ, ಆದ್ರಿಂದಲೇ ಇಟ್ಕೊಂಡಿದೀನಿ…”

ಅದಲು ಬದಲು!
ಅಬ್ಬ! ಮನೆಯೊಡತಿಯರ ಮಾತೇ! ಮನೆಕೆಲಸ ದವರಾದರೇನಾಯಿತು? ಚೆನ್ನಾಗಿ ನೀಟಾಗಿ ಇರಬಾರದೆ? ವಿದ್ಯಾವತಿಯಾದವರೇ ಹೀಗೆಲ್ಲ ಮಾತಾಡುವುದೇ ಎನ್ನಿಸಿಬಿಟ್ಟಿತ್ತು. ಇನ್ನೊಬ್ಬಾಕೆ ನನ್ನ ಗೆಳತಿ, ಹೊರಗೆ ದುಡಿಯುವಾಕೆ ಅಲ್ಲ, ಗೃಹಿಣಿ. ಆಕೆ ಒಂದುಸಲ ಹೇಳಿದ್ದು ನೆನಪಾಗುತ್ತಿದೆ. “ನನಗೆ ಮನೇಲಿ ನೈಟಿ ಹಾಕಿಕೊಂಡಿರೋದೇ ಅಭ್ಯಾಸ. ಮನೇಲೂ ಸೀರೆ ಉಟ್ಕೊಂಡು ಟ್ರಿಮ್ಮಾಗಿ ಇರೋಕೆ ಆಗುತ್ತಾ ಅಡುಗೆ, ತಿಂಡಿ ಮಾಡೋದು ಕೆಲಸಗಳಿರೋವಾಗ ಹೇಳು? ನಮ್ಮ ಮನೆಗೆ ಬರೋ ಕೆಲ್ಸದವಳು ನೀನೊಂದು ಸಲ ನೋಡು, ಹೇಗೆ ಬರ್‍ತಾಳೆ ಗೊತ್ತಾ? ಯಾವಾಗಲೂ ಮಿಣಮಿಣ ಅಂತ ವರ್ಕ್ ಮಾಡಿರೋ ಸೀರೆಗಳನ್ನೇ ಉಟ್ಕೊಂಡು ಬರ್‍ತಾಳೆ. ಏನು ಚೆನ್ನಾಗಿರೋ ಸೀರೆಗಳು ಗೊತ್ತಾ? ಮೊನ್ನೆ ಒಂದು ದಿನ ತುಂಬಾ ಅವಮಾನ ಆಗೋಯ್ತು ನನಗೆ. ಯಾರೋ ಬಂದವರು ಬೆಲ್ ಮಾಡಿದ್ದಾರೆ, ಕೆಲಸದವಳೇ ಹೋಗಿ ಬಾಗಿಲು ತೆಗೆದಿದಾಳೆ. ಅವರು ಯಾರೋ ಎಲ್‌ಐಸಿ ಏಜೆಂಟ್ ಒಳಗೆ ಬಂದು ದಿವಾನದ ಮೇಲೆ ಕೂತರು. ಇವಳು ಒಳಗೆ ಬಂದು ನನ್ನ ಹತ್ರ ಹೇಳಿದಳು. `ಅಮ್ಮ ಯಾರೋ ಬಂದಿದಾರೆ, ದಿವಾನದ ಮೇಲೆ ಕೂತಿದಾರೆ…’ ಯಾರೆಂದು ಗೊತ್ತಿಲ್ಲದೇ ಇವಳು ಒಳಗೆ ದಿವಾನದ ಮೇಲೆ ಯಾಕೆ ಕೂರಲು ಹೇಳಿದಳಪ್ಪ – ಅಂತ ಮನಸ್ಸಿನಲ್ಲಿ ಬೈದುಕೊಂಡೇ ನಾನು ಹೊರಗೆ ಬಂದು ನೋಡಿದೆ. ನನ್ನನ್ನೊಮ್ಮೆ ಆಪಾದಮಸ್ತಕ ನೋಡಿ ಆತ ಹೇಳಿದರು. `ಮನೆಯವರನ್ನೇ ಕರೆಯಮ್ಮ. ಅವರ ಹತ್ರನೇ ಪಾಲಿಸಿ ಪೇಪರ್‍ಸ್ ಬಗ್ಗೆ ಮಾತಾಡಬೇಕು. ಅವರನ್ನೇ ಕರೆ.’ ನಾನು `ಮನೆಯವಳು ನಾನೇ’ ಎಂದು ಹೇಳುವ ಮುನ್ನವೇ ಆತ ಮತ್ತೊಮ್ಮೆ ಅವಸರದಲ್ಲಿ ನುಡಿದರು. `ಹೋಗಮ್ಮ… ಈ ಮನೆ ಓನರ್‌ನೇ ಕರೆ. ಈಗ ತಾನೇ ಬಂದು ಬಾಗಿಲು ತೆಗೆದು ಒಳಗೆ ಹೋದ್ರಲ್ಲ ನನ್ನನ್ನ ಕೂತ್ಕೊಳ್ಳಿ ಅಂತ ಹೇಳಿ, ಅವರನ್ನೇ ಕರೆ.’ ನನ್ನ ಗತಿ ಏನಾಗಿರಬೇಕು ಹೇಳು? ಆತನ ಹತ್ರ `ನಾನೇ ಮನೆ ಯಜಮಾನ್ತಿ, ಅವಳಲ್ಲ’ ಅಂತ ಹೇಳಬೇಕಾದರೆ ಕುತ್ತಿಗೆಗೆ ಬಂತು. ಅವಮಾನದಿಂದ ಧ್ವನಿಯೇ ಕುಗ್ಗಿ ಹೋಗಿತ್ತು. ಆತ ಹೋದ ಮೇಲೆ ನಾನು ಒಳಗೆ ಹೋಗಿ ಬೀರುಕನ್ನಡೀಲಿ ನನ್ನನ್ನ ನೋಡ್ಕೊಂಡೆ. ಕೊಳೆ ಮೆತ್ತಿದ್ದ ಹಳೇ ನೈಟಿ, ಕೆದರಿದ್ದ ತಲೆಗೂದಲು, ಸ್ನಾನವಿನ್ನೂ ಮಾಡಿರದವಳು….! ನನ್ನನ್ನು ಕೆಲಸದವಳೆಂದು ತಿಳಿದಿದ್ದರಲ್ಲಿ ತಪ್ಪಿಲ್ಲವೆನ್ನಿಸಿತು. ಅದೇ ಅವಳು ಪಾತ್ರೆ ತೊಳೆಯುತ್ತಿದ್ದವಳನ್ನು ಹೊಸದಾಗಿ ಎಂಬಂತೆ ನೋಡಿದೆ. ಎಷ್ಟು ನೀಟಾಗಿ, ಚೆನ್ನಾಗಿ, ಓರಣವಾಗಿ ಶೃಂಗರಿಸಿಕೊಂಡು ಸೀರೆಉಟ್ಟು ಶಿಸ್ತಾಗಿ ಬಂದಿದ್ದಾಳೆ! ಅವಳೇ ಯಜಮಾನಿತಿ ಎನ್ನಿಸಿದ್ದರಲ್ಲೂ ತಪ್ಪೇನಿಲ್ಲ ಅನ್ನಿಸಿಬಿಟ್ಟಿತು….”
ಅನುಕೂಲವಿದ್ದರೂ ಇಲ್ಲದಿದ್ದರೂ ಮನೆಗೆಲಸದ ಮಹಿಳೆಯರಿಗೂ ಆತ್ಮಗೌರವ ಇದ್ದೇ ಇರುತ್ತದೆ. ಬದುಕನ್ನು ಭಿಕ್ಷೆಬೇಡಿ ಹೊರೆಯಹೋಗದೆ ಹೊರೆಹೊರೆ ಕೆಲಸಮಾಡಿ ಸಾಗಿಸುವ ಧೀಮಂತಿಕೆ ಇರುತ್ತದೆ. ಅವರಲ್ಲೂ ಚೊಕ್ಕಟತನ, ಶಿಸ್ತು, ಸದಭಿರುಚಿ ನೆಲೆಸಿರಬಾರದೇಕೆ? ಅವರನ್ನೂ ಗೌರವಿ ಸುವ, ಅವರ ಸಮಸ್ಯೆಗಳಿಗೆ ಸ್ಪಂದಿಸಿ ಸಹಾಯ ಮಾಡುವ ಮಾನವೀಯ ಪ್ರವೃತ್ತಿ, ನಮ್ಮಲ್ಲಿ ಬೆಳೆಯಬೇಕಷ್ಟೆ?

ಒದ್ದಾಟದ ಪರಿ
ಒಟ್ಟಿನಲ್ಲಿ ವಿದ್ಯೆಯಿಲ್ಲದೆ ಅಥವಾ ಅಕ್ಷರಜ್ಞಾನವೂ ಇಲ್ಲದೆ, ಬೇರೆಲ್ಲಿಯೂ ಯಾವ ರೀತಿಯ ಉದ್ಯೋಗವೂ ದೊರಕಲಾರದೆಯೋ, ಮಾಡಲಾಗದೆಯೋ ಇರುವಂಥ ಹೆಂಗಸರೇ ಈ `ಮನೆಕೆಲಸ’ದವಳಾಗಿ ತಮ್ಮನ್ನು ರೂಪಿಸಿಕೊಳ್ಳುತ್ತಾರೆ. ಆದರೂ ಹೀಗೆ ಪರರ ಮನೆಯಲ್ಲಿ ಬೆನ್ನುಬಗ್ಗಿಸಿ ದುಡಿಯುವ ಇವರ ಶ್ರಮಜೀವನಕ್ಕೆ ಹ್ಯಾಟ್ಸ್ ಆಫ಼್! ಪರರ ಬಚ್ಚಲು ಬಳಿದು, ಎಂಜಲು ಮುಸುರೆ ತೊಳೆದು, ಗಲೀಜು ತೆಗೆದು, ಬಟ್ಟೆ ಒಗೆದು, ಬೇರೆಯವರ ಮನೆಯ ತ್ಯಾಜ್ಯ ಹೇಸಿಗೆಗಳನ್ನು ತೆಗೆದು ಶುಭ್ರಗೊಳಿಸಿಕೊಟ್ಟು ಬದುಕನ್ನು ರೂಪಿಸಿಕೊಳ್ಳುವ ಈ ಅವರ ಜೀವನಕ್ರಮಕ್ಕೆ ಬೆನ್ನುಬಗ್ಗದ ನಾವು ತಲೆಯನ್ನಾದರೂ ಬಾಗಿಸಲೇಬೇಕು! ಅವರೊಂದು ದಿನ ಬಾರದೇ ಉಳಿದರೆ ಮನೆಯೊಡತಿಯ ಅವಸ್ಥೆ ಬಾಲಸುಟ್ಟ ಬೆಕ್ಕಿನಂತೆ! ಅವಳನ್ನು ಕಾಯುತ್ತಲೇ, ಶಾಪ ಹಾಕುತ್ತಲೇ ಒದ್ದಾಡುವ ಅವರ ಪರಿ!
ದಿನಕ್ಕೊಮ್ಮೆ ಕೆಲಸದಾಕೆ ಬಂದು ಕೆಲಸ ಮಾಡಿ ಹೋದಾಗಲೇ ಒಂದು ಮನೆಯ ಲಕ್ಷಣ ಎನ್ನುವುದು ಸುಳ್ಳಲ್ಲ. ಮನೆ ಗುಡಿಸಿ, ಒರೆಸಿ, ಪಾತ್ರೆಗಳನ್ನು ಲಕಲಕಿಸುವಂತೆ ತೊಳೆದು ಬಟ್ಟೆಗಳನ್ನೆಲ್ಲ ಝಗಮಗಿಸುವಂತೆ ಒಗೆದು ಒಣಗಿಸಿ ಅವಳು ಹೊರಟುಹೋದ ಮೇಲೆಯೇ ಮನೆಯೆಲ್ಲ ಚೊಕ್ಕವಾಗಿ ನಕ್ಕುನಲಿಯುವಂತಿರುತ್ತದೆ. ಅವಳು ಬಾರದೇ ಕೈಕೊಟ್ಟ ದಿನ ಮನೆಯಿಡೀ ಕೊಳಕಾಗಿ ಸಿಂಕ್‌ನಲ್ಲಿ ಮುಸುರೆ ಪಾತ್ರೆಗಳೇ ತುಂಬಿ ಹೇಸಿಗೆ, ರೇಜಿಗೆ ಹುಟ್ಟಿಸುತ್ತಿರುತ್ತದೆ. ಅವಳು ಬಾರದಿದ್ದ ದಿನ ಮನೆಯೆಲ್ಲ ಅವಲಕ್ಷಣ!

ದ್ವಂದ್ವ ಗುಣ
ಹಾಗೆಂದು ಮನೆಗೆಲಸದವರೆಲ್ಲರೂ ಒಳ್ಳೆಯವರೇ ಅಥವಾ ಕೆಟ್ಟವರೇ ಎಂದು ವಿಂಗಡಣೆ ಮಾಡಿ ಹೇಳುವಂತಿಲ್ಲ. ಅವರಲ್ಲೂ ಕಳ್ಳಿ, ಸುಳ್ಳಿಯರೂ ಇರುತ್ತಾರೆ, ಒಳ್ಳೆಯವರೂ ನಂಬಿಕಸ್ಥರೂ ಇರುತ್ತಾರೆ. ಕೆಲವು ಮನೆಕೆಲಸದ ಹೆಂಗಸರು ತಾವು ಕೆಲಸ ಮಾಡುವ ಮನೆಗಳಲ್ಲಿ ಆ ಮನೆಗೆ ಈ ಮನೆಗೆ ಚಾಡಿ ಬೆಸೆಯುತ್ತ ಬೆಸುಗೆ ತಪ್ಪಿಸುವವರಿದ್ದಾರೆ. ಆದರೆ ಎಲ್ಲರೂ ಹೀಗೇನಲ್ಲ. ಅವರಲ್ಲೂ ಮರ್ಯಾದೆಯಾಗಿ ತಮ್ಮ ಪಾಡಿಗೆ ತಾವು ದುಡಿಮೆ ಮಾಡಿಕೊಂಡು ಹೋಗುವವರಿದ್ದಾರೆ.
ತಮ್ಮ ಕೆಲಸದ ಆ ಮನೆಗೂ ಈ ಮನೆಗೂ ಸ್ನೇಹಸೇತುವೆ ನಿರ್ಮಿಸಿ ಸಂತೋಷಿಸುವವರಿದ್ದಾರೆ. ನಂಬಿಕಸ್ಥರಿರುವಂತೆಯೇ ವಿಶ್ವಾಸದ್ರೋಹಿಗಳೂ ಇದ್ದಾರೆ. ಮನುಷ್ಯಜೀವಿಗಳೇ ತಾನೇ ಅವರೂ? ತಾನು ಕೆಲಸ ಮಾಡುವ ಮನೆಯವರ ಸ್ವಂತ ಮಾತುಕಥೆಗಳಲ್ಲಿ ಮೂಗುತೂರಿಸಿಕೊಂಡು ಬರುವವರೂ ಇರುತ್ತಾರೆ. ತಾನು ಕೆಲಸ ಮಾಡುವ ಮನೆಯ ಒಳಗುಟ್ಟುಗಳನ್ನು ಕಾಯುವವರಿದ್ದಾರೆ, ಸ್ಫೋಟಿಸುವವರೂ ಇದ್ದಾರೆ! ಎಲ್ಲ ವಿಷಯಗಳಲ್ಲೂ ತಲೆತೂರಿಸಿ ಬೈಸಿಕೊಂಡು ತೆಪ್ಪಗಾದರೂ, ಸುದ್ದಿ ಹಬ್ಬಿಸಿ ಟಾಂಟಾಂ ಮಾಡುವವರೂ ಇರುತ್ತಾರೆ. ಗೃಹಕಲಹದ ಬೆಂಕಿಗೆ ಸದ್ದಿಲ್ಲದೆ ತುಪ್ಪ ಹೊಯ್ಯುವ ವಿಘ್ನಸಂತೋಷಿಗಳೂ ಇರುತ್ತಾರೆ! ಏನೇ ಆದರೂ ಯಾವುದಕ್ಕೂ ತಲೆಹಾಕದೆ ಒಪ್ಪವಾಗಿ ಕೆಲಸ ಮಾಡಿಟ್ಟು ಹೋಗುವವರೂ ಇದ್ದಾರೆ!
ಎಷ್ಟೋ ಮಂದಿ ಮನೆಕೆಲಸದ ಹೆಂಗಸರ ವೈಯುಕ್ತಿಕ ಬದುಕು ಕಣ್ಣೀರಿನಲ್ಲೇ ಕಳೆಯುತ್ತದೆ. ಇವರು ಕಷ್ಟಪಡುತ್ತಾ ದುಡಿದುದೆಲ್ಲ ಅವರ ಗಂಡಂದಿರ ಕುಡಿತದ ಚಟಕ್ಕೇ ವಿನಿಯೋಗಿಸಬೇಕಾಗಿ ಬರುತ್ತಿರುತ್ತದೆ. ಆದರೂ ಪಿಟ್ಟೆನ್ನದೆ ಕೆಲಸ ಮಾಡುತ್ತಲೇ, ಆ ಗಂಡ ಕುಡಿದು ಬಂದು ಹೊಡೆದಾಗ ಪೆಟ್ಟು ತಿನ್ನುತ್ತಲೇ ಕಣ್ಣೀರಿನಿಂದಲೇ ಬದುಕು ದೂಡುವ ಇವರ ಜೀವನವನ್ನು ಹತ್ತಿರದಿಂದ ಕಂಡಾಗ ಇವರು ತಮ್ಮ ಬದುಕಿನಲ್ಲಿ ರೂಢಿಸಿಕೊಂಡಿರುವ ತಾಳ್ಮೆ, ಧೈರ್ಯ, ಧೃತಿ, ನಿರ್ಲಿಪ್ತತೆಗಳಿಗೆ ವಿದ್ಯಾವಂತರು ಕೂಡ ಮೂಗಿನ ಮೇಲೆ ಬೆರಳಿಡಬೇಕಾಗುತ್ತದೆ! ಇವರಿಂದಲೂ ನಾವು ಕಲಿಯುವ ಪಾಠಗಳಿರುತ್ತವೆ!
ಅಂದಹಾಗೆ ಪ್ರಕೃತದಲ್ಲಿ ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿರುವಾಕೆ ತಮಿಳಿನ ಸೆಲ್ವಿ ಎಂಬ ಹೆಸರಿನವಳು. ನಾನು ಅದನ್ನು ಕನ್ನಡೀಕರಣಗೊಳಿಸಿ ಅವಳನ್ನು `ಚೆಲುವೀ’ ಎಂದೇ ಕರೆಯುತ್ತಿದ್ದೇನೆ. ಅವಳೂ ನಗುಮುಖದಿಂದ ಓಗೊಡುತ್ತಾಳೆ!
ಒಟ್ಟಿನಲ್ಲಿ ಮನೆಗೆಲಸದಾಕೆ ಎಂದರೆ ನಮ್ಮ ಬದುಕಿನ ಅವಿಭಾಜ್ಯ ಅಂಗ, ನಮ್ಮ ಮನೆಗೆ ದಿನವೂ ಬೇಕಲ್ಲವೆ ಅವಳ ಸಂಗ??

 ಡಾ. ಅನಸೂಯಾದೇವಿ
ಇಟ್ಟಮಡು
ಬೆಂಗಳೂರು – ೮೫

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ