ಮಾನವಜೀವಿಯನ್ನು ಮಗುವಾಗಿರುವಾಗ ಪೋಷಿಸಿ ಬೆಳೆಸಲು, ಖಾಯಿಲೆ ಬಿದ್ದಾಗ ಗುಣಪಡಿಸಿ ದೇಹ ಪುಷ್ಟವಾಗಿಸಲು ಅಮೃತದಂತಹ ಹಾಲು ನೀಡುವವಳು ಗೋಮಾತೆ. ಪರಿಶುದ್ಧ ಪಾನೀಯವೆಂದರೆ ಹಾಲು. ಮೊಸರು, ಬೆಣ್ಣೆ, ತುಪ್ಪ ಎಲ್ಲವೂ ಅಮೃತಸಮಾನ ಆಹಾರವಸ್ತುಗಳು. ಗೋವಿನ ಸೆಗಣಿಯು ಕ್ರಿಮಿನಾಶಕ ಗುಣ ಹೊಂದಿದೆ. ಗೋಮೂತ್ರವು ಆಯುರ್ವೇದ ವೈದ್ಯಕೀಯದಲ್ಲಿ ಅತ್ಯಂತ ಪರಿಣಾಮಕಾರಿ ಚಿಕಿತ್ಸೆಗಳಿಗೆ ಬೇಕಾಗಿರುವುದು ಆಧುನಿಕ ಸಂಶೋಧನೆಗಳಿಂದಲೂ ದೃಢಪಟ್ಟಿದೆ.
ಜೀವಮಾನವಿಡೀ ಮಾನವನಿಗಾಗಿ ದುಡಿದು ಸವೆಯುವ ಗೋಸಂತತಿಯು ಪ್ರತಿಫಲವಾಗಿ ಬಯಸುವುದು ಹಾದಿಬೀದಿಯಲ್ಲಿರುವ ಹುಲ್ಲು, ಸೊಪ್ಪು, ಕಲಗಚ್ಚು ನೀರು ಮಾತ್ರ. ಎತ್ತುಗಳು ಬಂಡಿ ಎಳೆಯುವ, ಗದ್ದೆ ಉಳುವ, ಗಾಣ ತಿರುಗಿಸುವ ಅಗತ್ಯ ಅವಕಾಶ ಈ ಕಾಲದಲ್ಲಿ ಕಡಮೆ ಇದೆ ನಿಜ. ಆದರೆ ಎತ್ತುಗಳ ಸಹಿತ ಮುದಿಗೋವುಗಳು ಕೂಡ ಬದುಕಿನುದ್ದಕ್ಕೂ ಉತ್ತಮವಾದ ಗೊಬ್ಬರ ನೀಡಿ ಕೃಷಿಗೆ ಸಹಕರಿಸುವುದು ಸತ್ಯ. ಗೋಬರ್ಗ್ಯಾಸ್ಗೂ ಸೆಗಣಿ, ಗಂಜಳ ಬೇಕು. ತೀರಾ ಮುದಿತನ, ಅಪಘಾತ, ರೋಗರುಜಿನಗಳಿಂದ ಯಾವುದೇ ಜೀವಿಗೆ ಸಾವು ಸಂಭವಿಸುವುದು ನಿರೀಕ್ಷಿತ ಅಥವಾ ನಿಶ್ಚಿತ. ಪರಿಸ್ಥಿತಿ ಹೀಗಿರಲು ಉಪಯೋಗ ಕಡಮೆಯಾಯಿತೆಂದು ಪ್ರಾಣಿಯನ್ನು ಕಡಿದು ಕೊಲ್ಲುವ ತತ್ತ್ವ ಅತ್ಯಂತ ಅಮಾನವೀಯ.
ಜಗತ್ತಿನ ಯಾವುದೇ ಧರ್ಮವು ಹಿಂಸೆಯನ್ನು, ಕೊಲೆಯನ್ನು, ಕೃತಘ್ನತೆಯನ್ನು ಒಪ್ಪಲಾರದು, ಪ್ರೋತ್ಸಾಹಿಸಲಾರದು. ಹಿಂದೊಮ್ಮೆ ನಮ್ಮ ದೇಶದ ಪ್ರಮುಖಪಕ್ಷವೊಂದರ ಚುನಾವಣಾ ಚಿಹ್ನೆಯಾಗಿದ್ದ ಹಸು ಮತ್ತು ಕರು ಈಗ ರಾಕ್ಷಸೀ ವಾಂಛೆಗೆ, ವಿವಿಧ ರೀತಿಯ ಹಿಂಸೆಗೆ ಬಲಿಯಾಗುತ್ತಿರುವುದು ತೀರಾ ದುರಂತ. ಹಿಂಸ್ರಪಶುವಿಗಿಂತಲೂ ಕೀಳಾಗಬೇಕೇ ಮಾನವಬುದ್ಧಿ? ನಿಜವಾಗಿ ಚಿಂತಿಸಿದರೆ ರಾಷ್ಟ್ರೀಯ ಪ್ರಾಣಿ ಅನ್ನಿಸಬೇಕಾದ ಅರ್ಹತೆ ಗೋವಿಗೆ ಇದೆ.
ಇಂದು, ಈ ಎಲ್ಲ ಕಾರಣಕ್ಕಾಗಿ, ಗೋಹತ್ಯೆ ನಿಷೇಧ ಕಾನೂನು ಯಾವುದೇ ಜಾತಿ, ಮತ, ಪಕ್ಷ ಮೀರಿದ ಸಿದ್ಧಾಂತವಾಗಬೇಕಾಗಿದೆ. ಭಾರತೀಯರೆಲ್ಲರ ಸುಸಂಸ್ಕೃತ ಮನಸ್ಸುಗಳು ಈ ದಿಸೆಯಲ್ಲಿ ಸ್ಪಂದಿಸಬೆಕು. ಈಗಾಗಲೇ ನಶಿಸಿಹೋಗುತ್ತಿರುವ ಗೋಸಂತತಿಯನ್ನು ಉಳಿಸಿ ಬೆಳೆಸದಿದ್ದರೆ `ಪ್ಯಾಕೆಟ್ಗಳಲ್ಲಿ ಹಾಲು ಬಂದೇ ಬರುತ್ತದೆ’ ಎಂಬ ನಿಶ್ಚಿಂತೆಯ ಸಮಾಧಾನಸ್ಥಿತಿ ಬರಿಯ ಭ್ರಮೆಯಾದೀತು ಎಂಬುದು ಚಿಂತನೀಯ ವಿಚಾರ. ?