ಬರ್ತಿಯಾ ಚಿನ್ನಾ
ಹೋಗೋಣ ಮುನ್ನಾ ಬರ್ತಿಯಾ ಚಿನ್ನಾ
ಯಾರು ಕಾಣದ ಊರಿಗೆ |
ಮನಸಿನ ನೆಮ್ಮದಿ ಗೂಡಿಗೆ
ಬರ್ತಿಯಾ ಚಿನ್ನಾ ಹೋಗೋಣ ಮುನ್ನಾ ||೧||
ಕಳ್ಳ-ಕಾಕರ ಭಯವೇ ಇಲ್ಲ
ಸುಳ್ಳು-ಗಿಳ್ಳು ಹೇಳೋರಿಲ್ಲ
ಒಳ್ಳೆಯ ತನವೆ ಕಾಣುವದೆಲ್ಲ
ಬರ್ತಿಯಾ ಚಿನ್ನಾ ಹೋಗೋಣ ಮುನ್ನಾ ||೨||
ಲಂಚ-ಗಿಂಚ ಕೇಳೋರಿಲ್ಲ
ಮೋಸ ವಂಚನೆ ಮಾಡೋರಿಲ್ಲ
ಸಂಚು ಹೊಂಚಲಿ ಸುಲಿವವರಿಲ್ಲ
ಬರ್ತಿಯಾ ಚಿನ್ನಾ ಹೋಗೋಣ ಮುನ್ನಾ ||೩||
ಜೀವ ತೆಗೆಯುವ ಹುಂಬರಿಲ್ಲ
ಜೀತದಾಳಾಗಿ ದುಡಿಸೋರಿಲ್ಲ
ಜೀವಕೆ ಜೀವ ಕೊಡುವವರೆಲ್ಲ
ಬರ್ತಿಯಾ ಚಿನ್ನಾ ಹೋಗೋಣ ಮುನ್ನಾ ||೪||
ಗಂಡು-ಹೆಣ್ಣೆಂಬ ಭೇದವಿಲ್ಲ
ದಂಡಿನ ರಕ್ಷಣೆ ಗೊಡವೆಯಿಲ್ಲ
ಉಂಡು-ತಿಂದು ನಲಿಯುವರೆಲ್ಲ
ಬರ್ತಿಯಾ ಚಿನ್ನಾ ಹೋಗೋಣ ಮುನ್ನಾ ||೫||
ಬಡವ-ಬಲ್ಲಿದ ಎಂಬವರಿಲ್ಲ
ಜಾತಿ ಮತಗಳ ತಂಟೆಯಿಲ್ಲ
ಭೇದ-ಭಾವಗಳ ಛೇದವಿಲ್ಲ
ಬರ್ತಿಯಾ ಚಿನ್ನಾ ಹೋಗೋಣ ಮುನ್ನಾ ||೬||
ಸೂರ್ಯಗೆ, ಚಂದ್ರಗೆ ಗ್ರಹಣವಿಲ್ಲ
ಗ್ರಹಗಳೆಂದಿಗೂ ಮುನಿಯೋದಿಲ್ಲ
ಸಗ್ಗವು ಅಲ್ಲಿಯ ಗೃಹಗಳೆಲ್ಲ
ಬರ್ತಿಯಾ ಚಿನ್ನಾ ಹೋಗೋಣ ಮುನ್ನಾ ||೭||
ಶಾಂತಾ ಶಾಸ್ತ್ರಿ
ಹಸಿವಿನ ಹಾಡುಗಳು
ಸಿರಿವಂತರ ಹಾದಿ
ನಡುರಾತ್ರಿ ಬಿಕ್ಷುಕನೊಬ್ಬ ಓಡಾಡುತ್ತಿದ್ದಾನೆ
ಸಿರಿವಂತರ ಕೇರಿಯ ಓಣಿಯಲ್ಲಿ
ಸದ್ದಿಲ್ಲದೆ; ಹುಡುಕುತ್ತಿದ್ದಾನೆ ಮಹಲುಗಳಲಿ
ಯಾರಾದರೂ ಹಸಿದವರು ಇರುವರೇ ಎಂದು
ಮಲಗಿದ್ದಾರೆ ಎಲ್ಲರೂ ಸ್ವರ್ಗಸುಖದಲ್ಲಿ
ಬೀದಿಯೂ ಸಹ
ಬಡವರ ನುಂಗಿ
ಬಿಳಿ ಕಾಗದದ ಕನಸು
ಅಜ್ಜ ಪಟೇಲನ ಮನೆಯ ಜಗುಲಿಯಲ್ಲಿದ್ದಾನೆ
ಅಪ್ಪನಿಗೆ ತುಂಡು ನೆಲದ ಕನಸು
ಅಮ್ಮನಿಗೆ ತುಂಡು ಬಟ್ಟೆಯ ಕನಸು
ಬೀದಿ ಸುತ್ತುತ್ತಿದ್ದಾರೆ ಮಕ್ಕಳು
ಅನ್ನದ ವಾಸನೆಯ ಬೆನ್ನಹತ್ತಿ
ಬಿಳಿ ಕಾಗದ ಹಿಡಿದು ಅಜ್ಜ
ಕನಸು ಕಾಣುತ್ತಿದ್ದಾನೆ
ಅಜ್ಜ ಇನ್ನೂ ಪಟೇಲನ ಮನೆಯಲ್ಲಿದ್ದಾನೆ
ಇನ್ನೂ ಸಹ ಪಟೇಲರ ಮನೆಯಲ್ಲಿಯೇ ಇದ್ದಾನೆ
ಅಜ್ಜ ಇನ್ನೂ…………ಇದ್ದಾನೆ
ಸೂರ್ಯೋದಯವೆಂಬ ‘ಚಿತೆ’ ಎದುರು
ದರುಶನ
ಗಂಜಿ ಇರದ ಮನೆಯಲ್ಲಿ ಇಂದು ಹಬ್ಬದ ಸಡಗರ
ಅಮ್ಮ ರೊಟ್ಟಿ ತಟ್ಟುತ್ತಿದ್ದಾಳೆ
ಹರಿದ ಬಟ್ಟೆಯ ಚೆನ್ನಾಗಿ ಒಗೆದು ಧರಿಸಿದ್ದಾನೆ ಅಪ್ಪ
ನಾಜೂಕಾಗಿ ಕುಳಿತಿದ್ದಾನೆ ಜಗುಲಿಯಲ್ಲಿ
ಒಳಗಡೆಯ ಅಮ್ಮನ ನೋಡುತ್ತಾ
ಹಸಿದ ಮಕ್ಕಳ ಕೈಯ್ಯಲ್ಲಿ ರೊಟ್ಟಿ ಇದೆ!
ಅಮ್ಮನಿಗೆ ದೇವರ ದರುಶನ ಇಂದು!
– ಗಣಪತಿ ಹೆಗಡೆ, ತುಮಕೂರು