ಸತ್ಯವಸ್ತುವನ್ನು ಗುರುತಿಸುವುದು ಪರಮಾರ್ಥವಾಗಿರುತ್ತದೆ. ಹಾಗೂ ಅಸತ್ಯವಸ್ತುವನ್ನೇ ಸತ್ಯವೆಂದು ಭಾವಿಸಿ ವ್ಯವಹರಿಸುವುದು ಪ್ರಪಂಚವಾಗಿರುತ್ತದೆ. ನಮಗೆ ಕಾಣುವ ವಸ್ತು ಸತ್ಯವೇ ಇರುತ್ತದೆಂದೇನೂ ಇಲ್ಲ. ಆದರೆ ಅದರ ಅಸ್ತಿತ್ವವೇ ಇಲ್ಲವೆಂದೂ ಹೇಳಲಿಕ್ಕಾಗುವುದಿಲ್ಲ. ಅದು ಏನಾದರೊಂದು ಆಗಿರುತ್ತದೆ. ಒಂದು ದೃಷ್ಟಿಯಿಂದ ಸತ್ಯವಸ್ತುವು ಹೇಗೆ ಇರುತ್ತದೆಂದರೆ ಪ್ರತಿಯೊಬ್ಬ ಮನುಷ್ಯನು ಅದರಲ್ಲಿ ಯಾವ ಗುಣವನ್ನು ಆರೋಪ ಮಾಡುತ್ತಾನೆಯೋ ಅವೆಲ್ಲ ಗುಣಗಳು ಅದರಲ್ಲಿ ಇದ್ದೇ ಇರುತ್ತವೆ. ಅಲ್ಲದೆ ಇನ್ನೂ ಎಷ್ಟೋ ಗುಣಗಳೂ ಅದರಲ್ಲಿ ಇರುತ್ತವೆ, ಆದ್ದರಿಂದ ಅದು ನಿರ್ಗುಣವಾಗಿರುತ್ತದೆ. ಇನ್ನೊಂದು ದೃಷ್ಟಿಯಿಂದ ಅದು ಹೇಗೆ ಇರುತ್ತದೆ ಎಂದರೆ, ಪ್ರತಿಯೊಬ್ಬ ಮನುಷ್ಯನು ಯಾವ ಗುಣವನ್ನು ಅದಕ್ಕೆ ಹಚ್ಚುತ್ತಾನೆಯೋ ಆ ಗುಣವು ಕೇವಲ ಕಲ್ಪನೆಯಿಂದಲೇ ಅದರಲ್ಲಿ ಇದ್ದಂತೆ ಇರುತ್ತದೆ. ಆದ್ದರಿಂದ ಆ ವಸ್ತುವು ಗುಣಗಳ ಅಚೆಗೆ ಇರುತ್ತದೆ. ಈ ಅರ್ಥದಿಂದಲೂ ಕೂಡ ಅದು ನಿರ್ಗುಣವೇ ಆಗಿರುತ್ತದೆ. ನಮ್ಮ ದೇಹದ ರಚನೆಯಂತೆಯೇ ಸರ್ವ ಸೃಷ್ಟಿಯ ರಚನೆ ಇರುತ್ತದೆ. ದೇಹದಲ್ಲಿಯ ಪಂಚಕೋಶಗಳು ಸೃಷ್ಟಿಯಲ್ಲಿ ಇರುತ್ತವೆ. ಆದರೆ ಇವೆರಡರಲ್ಲಿ ವ್ಯತ್ಯಾಸವೇನೆಂದರೆ ದೇಹದಲ್ಲಿ ಅವು ಮೂರ್ತಸ್ವರೂಪವಾಗಿರುತ್ತವೆ ಹಾಗೂ ವಿಶ್ವದಲ್ಲಿ ಅವು ಅಮೂರ್ತಸ್ವರೂಪವಾಗಿರುತ್ತವೆ. ಭಗವಂತನಿಗೆ ಒಬ್ಬನೇ ಇರುವುದು ರುಚಿಸಲಿಲ್ಲವಾದ್ದರಿಂದ ಒಬ್ಬನೇ ಅನೇಕನಾದನು. ಅವನ ಈ ಗುಣವನ್ನೇ ಮನುಷ್ಯನು ತೆಗೆದುಕೊಂಡನು. ನಾವು ನಮ್ಮ ಸಂತೋಷಕ್ಕಾಗಿ ಉಪಾಧಿ ಬೆಳೆಸುತ್ತೇವೆ. ಅವನಲ್ಲಿ ಹಾಗೂ ನಮ್ಮಲ್ಲಿ ಇರುವ ವ್ಯತ್ಯಾಸವೇನೆಂದರೆ ಭಗವಂತನು ಉಪಾಧಿ ಬೆಳೆಸಿದರೂ ಅದರಲ್ಲಿ ಅವನು ಸಾಕ್ಷಿತ್ವದಿಂದ ಉಳಿದನು. ಆದರೆ ನಾವು ಮಾತ್ರ ಆ ಉಪಾಧಿಗಳಲ್ಲಿ ಸಿಕ್ಕಿಬಿದ್ದೆವು. ಉಪಾಧಿಗಳ ಅಂದರೆ ಪರಿಸ್ಥಿತಿಯ ಹೊರಗೆ ಯಾವನು ಇರುತ್ತಾನೆಯೋ ಅವನಿಗೆ ದುಃಖವಾಗುವುದಿಲ್ಲ. ನಿಜವಾಗಿ ನೋಡಿದರೆ ಉಪಾಧಿಯಿಂದ ಹೊರಗೆ ಬರುವುದಕ್ಕಾಗಿಯೇ ಈ ಎಲ್ಲ ಧಡಪಡ ಇರುತ್ತದೆ. ಉಪಾಧಿಗಳು ದುಃಖದಾಯಕವಾಗಬಾರದು ಎಂದು ಅನಿಸುತ್ತಿದ್ದರೆ ನಾವು ಸಾಕ್ಷಿತ್ವದಿಂದ ಇರಲು ಕಲಿಯಬೇಕು. ನಾವು ಜಗತ್ತಿನಲ್ಲಿ ಉಪಾಧಿ ಬೆಳೆಸುವುದು ನಮ್ಮ ಸಂತೋಷಕ್ಕಾಗಿ ಇರುತ್ತದೆ. ಅದರೆ ಭಗವಂತನ ಹೊರತಾಗಿ ಇರುವ ಆನಂದವು ವಸ್ತುಗಳನ್ನು ಅವಲಂಬಿಸಿಕೊಂಡಿರುವುದರಿಂದ ಆ ವಸ್ತುಗಳು ಇಲ್ಲದಂತಾದವೆಂದರೆ ಆ ಆನಂದವು ಇಲ್ಲದಂತಾಗುತ್ತದೆ, ಎಂದರೆ ಆ ಆನಂದವು ಅಶಾಶ್ವತವಾಗಿರುತ್ತದೆ. ಆದ್ದರಿಂದ ನಿಜವಾದ ಆನಂದವು ಎಲ್ಲಿ ಪ್ರಾಪ್ತವಾಗುತ್ತದೆ ಎಂಬುದನ್ನು ನೋಡಬೇಕು.
ಪ್ರಪಂಚದಲ್ಲಿ ನಾವು ಸಾಕ್ಷಿತ್ವದಿಂದ ನಡೆಯಬೇಕು
Month : August-2015 Episode : Author : ಬ್ರಹ್ಮಚೈತನ್ಯ ಗೋಂದಾವಲೇಕರ ಮಹಾರಾಜರು