ಭಾಗಕ್ಕ ವಿಷಕಂಠನಂತೆ ಅಷ್ಟೂ ದುಃಖ, ಸಮುದ್ರದ ವಿಷವನ್ನೆಲ್ಲಾ ಒಮ್ಮೆಲೆ ನುಂಗಿ ಶಾಂತವಾಗಿಬಿಟ್ಟರು…
“ಅಧಿಕಸ್ಯ ಅಧಿಕ ಫಲಂ” ಎಂದೇ ಶಾಸ್ತ್ರಗಳಲ್ಲಿ ಹೇಳಿದ್ದಾರೆ. ಅಧಿಕಮಾಸದ ಹಿರಿಮೆಯನ್ನು ವರ್ಣಿಸುವ ನಿಮ್ಮ ದಾನ, ಬಾಗಿನಗಳ ಪುಣ್ಯಫಲವನ್ನು ಅರಿಯುವ ವ್ಯಾಖ್ಯಾನವನ್ನಿಲ್ಲಿ ಆರಂಭಿಸುತ್ತಿದ್ದೇನೆ. “ಹರಿಃ ಓಂ” ಎಂದು ಆಚಾರ್ಯರು ಟೇಪ್ ರಿಕಾರ್ಡರಿನಲ್ಲಿ ಕ್ಯಾಸೆಟ್ ಮೂಲಕ ನುಡಿಯುತ್ತಿದ್ದರು. ಭಾಗಕ್ಕ ಮಲಗಿದಲ್ಲಿಂದಲೇ ಆಸಕ್ತಿಯಿಂದ ಕೇಳಲು ಪ್ರಯತ್ನಿಸುತ್ತಿದ್ದರು. ಅಷ್ಟೇ ಅವರಿಂದ ಸಾಧ್ಯವಿತ್ತು. ಹಿಂದೆಲ್ಲಾ ಮಾಡಿ ದಣಿದ ದೇಹ. ಮಲಗಿದಲ್ಲಿಂದ ಹೊರಳಲೂ ಪರಾವಲಂಬಿಯಾಗಿಬಿಟ್ಟಿದೆ. ಚಕ-ಚಕನೇ ಓಡಾಡಿ ಎಂಥೆಂಥಾ ಕೆಲಸಗಳನ್ನೂ ಹೊಡೆದು ಹಾಕುವ ಶಕ್ತಿಯಿದ್ದ ದೇಹವೀಗ `ನೀ ಅಲುಗಿಸಿದರೆ ಉಂಟು, ಇಲ್ಲವಾದರೆ ಇಲ್ಲ’ ಎಂಬ ದಯನೀಯ ಸ್ಥಿತಿಗೆ ಬಂದು ನಿಂತಿದೆ. ಹಾಳು ಹೃದಯ ನಿಲ್ಲದೇ ಓಡುತ್ತಿದೆ. ಅದರಾಚೆ ಮನಸ್ಸು, ತಲೆ ಎಲ್ಲ.
ಕ್ಯಾಸೆಟ್ ಕಾಲನ ಹಾಗೆ ಅವರ ಭಾವನೆಗಳಿಗೆ ಕಾಯದೇ “ಇಂದಿಲ್ಲಿ `ಅಪೂಪ’ ಎಂದರೆ ಛಿದ್ರಗಳಿರುವ ದಾನದ ಮಹತ್ತ್ವವನ್ನು ಬಣ್ಣಿಸುತ್ತೇನೆ” ಎನ್ನುತ್ತಾ ಓಡುತ್ತಿತ್ತು. ಭಾಗಕ್ಕ ಗತಕಾಲಕ್ಕೆ ಜಾರಿದರು. ತಾವು ಮಾಡಿದ ದಾನಗಳಿಗೆ ಲೆಕ್ಕವಿದೆಯೇ? ಆಗೆಲ್ಲ ಅಧಿಕಮಾಸವೆಂದರೆ ತಿಂಗಳಿಡೀ ಸಂಭ್ರಮ. ಬಾಗಿನವಾಗಬೇಕು. ಆಚಾರ್ಯರಿಗೆ, ಅಣ್ಣ-ತಮ್ಮಂದಿರಿಗೆ ಯಾರನ್ನೂ ಬಿಡದೇ ಅತ್ರಸವನ್ನೇ ಮಾಡಿ ಕೊಡುತ್ತಿದ್ದರು ಭಾಗಕ್ಕ. ಎಷ್ಟೇ ಕಷ್ಟವಾದರೂ ಎರಡು, ಮೂರು ದಿನ ಅಕ್ಕಿ ನೆನಸಿ, ಆರಿಸಿ, ಕುಟ್ಟಿ, ಬೆಲ್ಲ ಸೇರಿಸಿ ಹಿಟ್ಟು ಮಾಡುವುದು. ಅತ್ತೆ ತಟ್ಟಬೇಕು. ತಾನು ಎಣ್ಣೆಗೆ ಹಾಕಬೇಕು. `ಅಧಿಕಮಾಸದಾಗ ಏನ ಆದ್ರೂ ನಮ್ಮ ಭಾಗಿ ಅತಿರಸ ಮಾಡದ ಬಿಡುವಾಕಿಯಲ್ಲ’ ಎಂದು ನಗೆಯಾಡುತ್ತಿದ್ದರು ಲಕ್ಷ್ಮಕ್ಕ, ಭಾಗಕ್ಕನ ಅತ್ತೆ. ಅಷ್ಟೇ ಏಕೆ ಹೆಂಗಳೆಯರೆಲ್ಲಾ ಸೇರಿ ದಿನವೂ ಮೂವತ್ತ್ಮೂರು ಹಾಡುಗಳು, `ಲಕ್ಷ್ಮಿ ಶೋಭಾನೆ’ ಹೇಳುವುದು, ಮೂವತ್ತ್ಮೂರು ದಂಪತಿಗಳಿಗೆ ಊಟೋಪಚಾರ, ದಕ್ಷಿಣೆ ಸಹಿತ ಎಲೆ ಅಡಿಕೆ, ಎಲ್ಲಕ್ಕೂ ಮುಂದಿರುತ್ತಿದ್ದರು ಭಾಗಕ್ಕ. ಎಲ್ಲ ನೆನೆಯುತ್ತಾ “ಇಷ್ಟೆಲ್ಲಾ ಮಾಡಿದ ಜೀವಕ್ಕ ಏನು ಗತಿ ತಂದಿಟ್ಟಿ ನೋಡು. ಈಸರೆ ಅಧಿಕಮಾಸದಾಗ ಬರೇ ನಿನ್ನ ನಾಮಸ್ಮರಣಿ ಯಷ್ಟೇ” ಎಂದು ಹಲುಬಿದರು. ಕಥೆ ಆಗಲೇ ಮುಂದೋಡಿತ್ತು. ಮತ್ತೆ ಅತ್ತ ಗಮನ ಕೇಂದ್ರೀಕರಿಸಲು ಪ್ರಯತ್ನಿಸುತ್ತಿದ್ದಂತೆ ಸೊಸೆಯ ಧ್ವನಿ ಕರ್ಣಕಠೋರವಾಗಿ ಎಲ್ಲ ತರಂಗಾಂತರಗಳನ್ನು ಮೀರಿ ಕೇಳಿ ಬಂತು.
“’ರೊಕ್ಕಾ ಜಾಸ್ತಿ ಮಾಡ್ರಿ’ ಅಂದರ ಎಲ್ಲಿಂದ ಮಾಡ್ತಾರೋ ಸಿದ್ದಾ. ನಾಯೇನ್ ಹಿತ್ತಲದಾಗ ರೊಕ್ಕದ ಗಿಡಾ ಹಚ್ಚೇನಿ?” ಹೌದು. ಅದು ಸೊಸೆ ಸುಚಿತ್ರಳ ಧ್ವನಿಯೇ. ಪರಿಸ್ಥಿತಿಯ ಅರಿವು ಭಾಗಕ್ಕನಿಗಾಯಿತು. ಈ ಪ್ರಹಾರ ಕೆಲಸದ ಆಳು ಸಿದ್ದ ಮತ್ತು ಕಮಲಿಯ ಮೇಲೆ ನಡೆದಿರಬೇಕು. “ಅವ್ವಾರ, ಎಲ್ಲಾ ಕೆಲಸಕ್ಕ ಕೂಡಿ ಎಡ್ಡನೂರು ರೂಪಾಯಿ ಎಲ್ಲಿ ಸಾಕಾಗ್ತಾವ? ಬರೇ ಹೊಟ್ಟಿಗೆ ಆಗಂಗಿಲ್ಲ” ಸಿದ್ದನ ಅಳಲು. ಸಿದ್ದ ಮತ್ತು ಕಮಲಿ ವಿನೀತರಾಗಿ ಕಣ್ಣಲ್ಲಿ ನೀರು ತುಂಬಿಕೊಂಡು ನಿಂತಿರಬೇಕು ಎಂದು ಅವರ ಮನ ಊಹಿಸಿತು. `ಸುಚಿತ್ರ ಘಟವಾಣಿ. ಅವರಿಗೆ ಸೋಲುವ ಹೆಣ್ಣೇ? ತನಗೇ ಬಗ್ಗಲಿಲ್ಲ’ ಎಂದುಕೊಂಡರು. ಅಂತೆಯೇ ಸುಚಿತ್ರ “ನೋಡ್ ಕಮಲಿ, ನೂರು ರೂಪಾಯಿಗೆ ಎಲ್ಲಾ ಕೆಲಸ ಮಾಡ್ಲಿಕ್ಕೆ ನಮ್ಮ ಮನಿ ಮುಂದ ಆಳಗೋಳು ಕ್ಯೂ ಹಚ್ಚಿ ನಿಂದರತಾರ. ಏನೋ ನೀವು ಹಳೇ ಕಾಲದಿಂದ ಇದ್ದೀರಿ ಅಂತ ಬಿಟ್ಟೇನಿ. ನಾ ಒಂದ್ ಪೈಸೆ ಹೆಚ್ಚಗಿ ಕೊಡೂದಿಲ್ಲಾ. ಬೇಕಾದ್ರ ಮಾಡ್ರಿ. ಇಲ್ಲಾಂದ್ರ ಈವತ್ತ….ನ ಕೆಲಸ ಬಿಟ್ಟು ಹೋಗ್ರಿ” ಎಂದವಳೇ ಬಿರಬಿರನೇ ಹೊರನಡೆದಿದ್ದಳು.
ಮುಂದೆ ಎರಡೇ ನಿಮಿಷಗಳಲ್ಲಿ ಕಣ್ಣು ಮೂಗು ಒರೆಸಿಕೊಂಡ ಸಿದ್ದ-ಕಮಲಿಯರು ಭಾಗಕ್ಕನ ಮುಂದೆ ನಿಂತಿದ್ದರು. ತಮ್ಮ ಮನೆತನಕ್ಕಾಗಿ ತಲೆತಲಾಂತರದಿಂದ ದುಡಿಯುತ್ತಿದ್ದ ಆಳುಗಳ ಸ್ಥಿತಿಗೋ, ತಮ್ಮ ಅಸಹಾಯಕತೆಗೋ ಅವರಿಗೆ ಸಂತಾಪವಾಯಿತು. “ಯಾಕೋ ಇಲ್ಲಿ ಇಷ್ಟ ಬೇಯ್ಕೊತ ಇದ್ದೀರಿ? ಎಲ್ಲಾರ ಬ್ಯಾರೆ ಕಡೆ ಛೊಲೊ ಕೆಲಸ ನೋಡಕೊಂಡ ಹೋಗ್ಬಾರ್ದ?” ಎಂದು ಆಕ್ಷೇಪಿಸಿದರು. ಕಮಲಿ ಮರೆಸುವ ಯತ್ನ ಮಾಡುತ್ತ “ಬಿಡ್ರಿ ಅವ್ವಾರ, ಇದು ದಿನದ ಕಥಿ. ಇದರಾಗ ಹೊಸಾದೇನೈತಿ? ನೀವು ಆರಾಮಾಗಿ ಮನಿಕ್ಕಳ್ರಿ” ಎಂದು ಅವರ ಹೊದಿಕೆ ಸರಿ ಮಾಡಿದಳು. “ಎಷ್ಟು ದಿನಾಂತ ಹೀಂಗ ಒದ್ದಾಡ್ತೀರಿ? ಅದು ಸೋಲೋ ಹೆಣ್ಣ ಅಲ್ಲ” ಎಂದು ನಿಡುಸುಯ್ದರು ಭಾಗಕ್ಕ. ಸಿದ್ದ ಗಟ್ಟಿಯಾಗಿ “ಅವ್ವಾರ ನೀವಿರಾಗಂಟ ಯಾರೇನ ಹೇಳಿದ್ರೂನು ನಿಮ್ಮನಿ ಕೆಲ್ಸ ಬಿಟ್ಟು ಹೋಗಾಂಗಿಲ್ಲರೀ. ಆ ಮ್ಯಾಲ `ನಿಂದ್ರ’ ಅಂದ್ರೂನೂ ಒಂದ್ ಗಳಿಗಿ ನಿಂದ್ರಂಗಿಲ್ಲ. ತುತ್ತ ಹಾಕಿದ ಕೈ ನಿಮ್ಮದು. ನಿಮ್ಮನ್ ಈ ಪರಿಸ್ಥಿತಿಯಾಗ ಬಿಟ್ಟು ನಾವೆಲ್ಲೂ ಹೋಗಾಂಗಿಲ್ಲ. ಮಕ್ಕಳು ಎಲ್ಲೆಲ್ಲೊ ಬ್ಯಾರೆ ಕಡೆ ದಗದಕ್ಕ ಹೋಗಾಕತ್ತಾರು. ಹೆಂಗೋ ಹೊಟ್ಟಿಗೆ ಹಿಟ್ಟಾಗತೈತಿ. ನೀವು ಈ ಇಚಾರ ಮನಸ್ನ್ಯಾಗ ಇಟ್ಕೊಬ್ಯಾಡ್ರಿ. ಆರಾಮಾಗಿ ಎದ್ದ್ ಓಡಾಡಿ ಬಿಡ್ರಿ” ಎಂದು ಹೇಳುತ್ತ ತಲೆಕೆಳಗೆ ಹಾಕಿ ಹೊರಟೇ ಬಿಟ್ಟ.
`ಆರಾಮಾಗಿ ಬಿಡೋದ’ ಅವರ ಮುಖದ ಮೇಲೆ ವಿಷಾದದ ನಗು ಸುಳಿಯಿತು. `ನಿಮಗೆಲ್ಲೊ ಭ್ರಮೆ. ನಾನು ಆರಾಮಾಗೋದ…………’ ಎಂದು ಅಸ್ಪಷ್ಟವಾಗಿ ನುಡಿದರು. ಕಮಲಿ ಅವರ ಕಾಲು ಒತ್ತುತ್ತಿದ್ದಂತೆ ಅವರ ಕಣ್ಣಂಚು ನೆನಪುಗಳ ಹಿಂದೋಡಿ ತೇವವಾಯಿತು.
***
ಭಾಗೀರಥಿ ನವವಧುವಾಗಿ ಮನೆಗೆ ಕಾಲಿಟ್ಟಾಗ ಸಿದ್ದ ಹತ್ತೋ, ಹನ್ನೆರಡೊ ವರ್ಷದವನಿರಬೇಕು. ಅಂದಿನಿಂದ ಅವಳೇ ಅವನಿಗೆ ಊಟ ಬಡಿಸುತ್ತಿದ್ದದ್ದು. `ಚಿಗವ್ವಾರ’ ಎಂದರೆ ಸಾಕು ಭಾಗೀರಥಿ ಅವನಿಗೆ ಬಡಿಸಿ ಅವನ ಮುಂದೆ ಕುಳಿತು ನಗೆಯಾಡಿ ಅವ ಹೊಟ್ಟೆ ತುಂಬ ಊಟ ಮಾಡುವಂತೆ ಮಾಡುತ್ತಿದ್ದಳು. ಚಳಿಯಲ್ಲಿ ಮಳೆಯಲ್ಲಿ ಒಂಚೂರು ಕಷಾಯವೋ, ಕಾಫಿಯೋ ಮಾಡಿದಾಗಲೊಮ್ಮೆ ಅವನ ಹೊಟ್ಟೆ ಸೇರುತ್ತಿತ್ತು. ಹೀಗಾಗಿ ಸಿದ್ದನಿಗೆ ಅವನ `ಚಿಗವ್ವಾರು’ ಅಷ್ಟೇ ಆಪ್ತೆ. ಭಾಗೀರಥಿ ಏನು ಬೇಕೆಂದರೂ ಸರಿಯೇ. “ಎಲ್ಲಿ ನಿನ್ನ ಹನುಮಂತ? ನಿನ್ನ ಸಲುವಾಗಿ ಸಮುದ್ರ ಹಾರ್ಲಿಕ್ಕೂ `ಸೈ’ನ” ಎಂದು ರಾಯರು ನಗೆಯಾಡುತ್ತಿದ್ದರು.
ಭಾಗೀರಥಿ ಕಾಲಿರಿಸಿದ್ದು ತುಂಬಿದ ಮನೆಗೇ. ಅತ್ತೆ-ಮಾವ ಮಮತಾಮಯಿಗಳು. ಇಬ್ಬರು ಹೆಣ್ಣು ಮಕ್ಕಳು ಮದುವೆಯಾಗಿ ಹೋದೊಡನೆ ಬಂದ ಸೊಸೆಯನ್ನೇ ಮಗಳೆಂದು ಭಾವಿಸಿದವರು. ಭಾಗಿಯೂ ಅವರಿಗೆ ಚೆನ್ನಾಗಿಯೇ ಹೊಂದಿಕೊಂಡಳು. ಅವರ ಮಡಿ, ಮೈಲಿಗೆ ತುಸು ಜಾಸ್ತಿಯೇ ಎನಿಸಿದರೂ ಒಗ್ಗಿಕೊಂಡಳು. ರೇವತಿ ಹುಟ್ಟಿದಾಗಲೂ ಅತ್ತೆ-ಮಾವ ಸಂಭ್ರಮಿಸಿದ್ದರು. “ಭಾಗೀ, ನಿನ್ಹಂಗ ನಕ್ಷತ್ರಾಗೇದವಾ ಕೂಸು” ಎಂದು ದೃಷ್ಟಿ ನಿವಾಳಿಸಿದ್ದೇ ಬಂತು. ಮುಂದೆ ಎರಡೇ ವರ್ಷಗಳಲ್ಲಿ `ಮನೋಜ’ ಹುಟ್ಟಿದ ಮೇಲಂತೂ ಆಕಾಶಕ್ಕೆ ಮೂರೇ ಗೇಣು ಉಳಿದಿತ್ತು. ಕುಲಪುತ್ರನ ಜಾವಳ, ಚಂಡಿಕೆಯೆಲ್ಲ ಸಾಂಗವಾಗೇ ನಡೆದಿತ್ತು. ಅತ್ತೆ-ಸೊಸೆ ಎಷ್ಟೊಂದು ಅನ್ಯೋನ್ಯ ಎಂದರೆ ಆಗಾಗ ಬರುತ್ತಿದ್ದ ಅತ್ತಿಗೆಯರು “ನಮ್ಮವ್ವಗ ಹೆಣ್ಮಕ್ಕಳ ನೆನಪು ಬರದ್ಹಾಂಗ ಮಾಡೀದಿ” ಎಂದು ಪ್ರೀತಿಯಿಂದಲೇ ಆಕ್ಷೇಪಿಸುತ್ತಿದ್ದರು.
ಹೊಲ, ತೋಟ, ಗದ್ದೆ ಬೇಕಾದಷ್ಟು ಉತ್ಪನ್ನಗಳು. ಎಲ್ಲವನ್ನೂ ಸಿದ್ದನ ಅಪ್ಪನೇ ನೋಡಿಕೊಳ್ಳುತ್ತಿದ್ದ. ಪ್ರತಿ ಸುಗ್ಗಿಗೂ ಅವನಿಗೆ ಬೇಕಾದಷ್ಟು ಕಾಳು-ಕಡಿ ಮೇಲೆ ದುಡ್ಡು. ಸಾಕೆಂದರೂ ಕೊಡುತ್ತಿದ್ದ ಧಣಿ ಅವಳ ಮಾವ. ಸಿದ್ದ ಮದುವೆಯಾಗಿ ಕಮಲಿಯನ್ನು ಕರೆದುಕೊಂಡು ಬಂದಾಗ ಭಾಗಿಯೇ ಅವಳಿಗೆ ಹೊಸ ಸೀರೆ, ತಾಳಿ ಕೊಟ್ಟು ಹರಸಿದ್ದು. ಬೇಕಾದಷ್ಟು ಒಡವೆ, ವಸ್ತ್ರ, ಧನ, ಕನಕ ಯಾವುದಕ್ಕೂ ಕಡಮೆ ಇಲ್ಲದ ಸಂಪತ್ತು. ಆದರೆ ಬೇಡಿ ಬಂದ ಭಾಗ್ಯ ಎಷ್ಟು ದಿನವಿತ್ತೋ. ರೇವತಿಯ ಮದುವೆಯ ನಂತರ ಭಾಗಕ್ಕನ ಕೈ-ಕಾಲುಗಳು ಆಗಾಗ ಕಂಪಿಸುತ್ತಿದ್ದವು. ಏನೇನೋ ತೊಂದರೆಗಳು. ಯಾಕೋ ದೇಹ ಸರಿಯಾಗಿ ಜೊತೆ ಕೊಡುತ್ತಿಲ್ಲ ಎನಿಸಿದರೂ ಸಂತೋಷದ ಸಂದರ್ಭದಲ್ಲಿ ಹೇಳಲು ಮನಸ್ಸು ಬರಲಿಲ್ಲ. ಅತ್ತೆಯನ್ನು ಜೊತೆ ಮಾಡಿಕೊಂಡು ರೇವತಿಯ ಬಾಣಂತನ ಮುಗಿಸುವವರೆಗೆ ಸಾಕು-ಬೇಕಾಯ್ತು. ಅವಳೂ ವಿದೇಶಕ್ಕೆ ಹೋಗಿ ನೆಲೆಸಿದಳು. ಮುಂದೆ ಎಲ್ಲರಿಗೂ ಉಳಿದ ಆಸೆ ಮನೋಜ್ನದೇ. ಅತ್ತೆಯೇ ಮುಂದೆ ನಿಂತು ಮನೋಜ್ನ ಮದುವೆ ಮಾಡಿದರು. ಅವರ ಗೆಳತಿಯ ಮೊಮ್ಮಗಳೇ ಸುಚಿತ್ರ. “ರುಕ್ಮಾಂಬಾನ ಮೊಮ್ಮಗಳಂದ್ರ ಕೇಳೂದ ಬ್ಯಾಡಾ. ಅಕೀ ಹಂಗನ ಇದ್ದಾಳಂತ. ನಮಗಿಂತ ದೊಡ್ಡ ಮನಿತನಾ ಅವರದು. ಊರಾಗ ಛೊಲೋ ಹೆಸರು” ಎಂದೆಲ್ಲಾ ಬಯಸಿ ತಲೆ ಮೇಲೆ ಕಲ್ಲುಚಪ್ಪಡಿ ಎಳೆದುಕೊಂಡಂತಾಗಿತ್ತು.
ಮುಂದೆ ಕೆಲ ದಿನಗಳಲ್ಲಿ `ಛಳಿಜ್ವರ’ವೆಂದು ಮಲಗಿದ ಅತ್ತೆ ಲಕ್ಷ್ಮಕ್ಕ ಏಳಲೇ ಇಲ್ಲ. ಹಿಂದೆಯೇ ಮಾವ. ಅವರದೇ ಪುಣ್ಯ. ಸುಚಿತ್ರಳ ಅವಾಂತರಗಳನ್ನೆಲ್ಲ ನೋಡಲು ಬದುಕಿರಲೇ ಇಲ್ಲ. ಅಪ್ಪ-ಅಮ್ಮ ಇಬ್ಬರೂ ಕಾಲವಾದಾಗ ಬಿಟ್ಟಿರಲಾರದವರಂತೆ ಗಂಗಾಧರ, ಭಾಗಿಯ ಪತಿ ಕೂಡ ಹಿಂದೆಯೇ ಹೃದಯಾಘಾತವಾಗಿ ನಡೆದಿದ್ದ. ಈ ಎಲ್ಲ ತೊಂದರೆಗಳನ್ನು ಅನುಭವಿಸಲು ಭಾಗಕ್ಕ ಒಬ್ಬರನ್ನೇ ಬಿಟ್ಟು ನಡೆದಿದ್ದರು. ಅದೇ ಆಘಾತದಿಂದಲೋ ಏನೋ ಭಾಗಕ್ಕನಿಗೆ ಪ್ಯಾರಾಲಿಸಿಸ್ ಅಟ್ಯಾಕ್ ಆಯಿತು. ಬಲಪಾರ್ಶ್ವ ಹೊರಳುವಂತೆಯೇ ಇಲ್ಲ. ಮುಂದಂತೂ ಸುಚಿತ್ರ ಅವರನ್ನು `ಕಸಕ್ಕೆ ಸಮ’ ಮಾಡಿಬಿಟ್ಟಿದ್ದಳು. ಅವರು ಏನೆಲ್ಲ ವಾತ್ಸಲ್ಯಧಾರೆ ಹರಿಸಿದರೂ ಪ್ರಯೋಜನವಾಗಲಿಲ್ಲ. ಅತ್ತೆಯನ್ನು ನೋಡಲೂ ಅವಳು ಬಯಸುತ್ತಿರಲಿಲ್ಲ. ಮನೋಜನಿಗೂ ಮಣಿಯದೇ ಅವನೇ ಅವಳ ಕೈಯಲ್ಲಿ ಮಣಿದು ಹೋದ. ಇತ್ತ ಅಮ್ಮ, ಅತ್ತ ಹೆಂಡತಿಯ ನಡುವೆ ದಾಳವಾದ. ಎಲ್ಲ ಕೆಲಸಗಳಿಗೂ ಭಾಗಕ್ಕ ಕಮಲಿಯನ್ನೇ ಆಶ್ರಯಿಸಿದರು. ಮನೋಜ, ಸಿದ್ದ-ಕಮಲಿಯರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಸುಚಿತ್ರಳಿಗೆ ಗೊತ್ತಾಗದಂತೆ ಅವರ ಕೈಗೆ ಆಗಾಗ ಕಾಸು ಕೊಡುತ್ತ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಲು ಹೇಳುತ್ತಿದ್ದ. ಭಾಗಕ್ಕನಿಗೀಗ ತಾವು ಮೋಸಹೋದದ್ದು ಸ್ಪಷ್ಟವಾಗಿತ್ತು.
ಸುಚಿತ್ರಳದು ಒಳ್ಳೆಯ ಮನೆತನವೇ. ಆದರೂ ಅವಳು ಬೆಳೆದದ್ದೆಲ್ಲಾ ಮುಂಬೈಯಲ್ಲಿ. ತನ್ನ ಸೋದರಮಾವನ ಮನೆಯಲ್ಲಿ. ಅವಳಿಗೆ ಈ ಯಾವ ಕಂದಾಚಾರದಲ್ಲೂ ನಂಬಿಕೆ ಇರಲಿಲ್ಲ. ಪೂಜೆ, ದೇವರು, ಭಕ್ತಿ ಎಲ್ಲ ಹತ್ತಿರವೇ ಸುಳಿಯಲಿಲ್ಲ. ಮನೋಜನೇ ಅವಳಿಗೆ ಹೊಂದಿಕೊಳ್ಳಬೇಕಾದರೆ ವಿಶ್ವಪ್ರಯತ್ನ ಪಡಬೇಕಾಯಿತು. ತಾನೇನೇ ಹೇಳಿದರೂ ನೋವಾಗುವುದು ಮನೋಜನಿಗೆ ಎಂದರಿತ ಭಾಗಕ್ಕ ಸುಮ್ಮನಾಗುತ್ತಿದ್ದರು. ರೇವತಿಯ ಸಂಪರ್ಕ ಬರೀ ಫೋನ್ ಮೂಲಕ. ಕಳೆದ ಬಾರಿ ಬಂದಾಗ ಸುಚಿತ್ರಳ ವರ್ತನೆ ನೋಡಿ ಬೇಸತ್ತು ಹೋದವಳು ತಿರುಗಿ ಬರುವ ಮಾತನ್ನೇ ಆಡುವುದಿಲ್ಲ. ಏನಿದ್ದರೂ ಎಲ್ಲಾ ಫೋನಿನಲ್ಲೆ.
ಮನೋಜನ ಮಗುವನ್ನು ಕಾಣುವ ಹೆಬ್ಬಯಕೆಯಲ್ಲಿ ಭಾಗಕ್ಕನ ಜೀವ ತುಡಿಯುತ್ತಿತ್ತು. ತಾಯಿಯಾದಾಗ ಲಾದರೂ ಅವಳು ಬದಲಾಗುವಳೋ ಎಂಬ ದೂರದ ಆಸೆ. ಈಗಂತೂ ಮದುವೆಯಾಗಿ ಹನ್ನೆರಡು ವರ್ಷಗಳೇ ಆಯಿತಲ್ಲ. ಆ ಭಾಗ್ಯವೂ ಇಲ್ಲವೆಂದು ತಿಳಿದ ಮೇಲೆ ಭಾಗಕ್ಕ ಪೂರಾ ಹಾಸಿಗೆಗೆ ಅಂಟಿದ್ದು. ಅವರ ಎರಡೂ ಕಾಲುಗಳು ಮುಷ್ಕರ ಹೂಡಿದವು. ಎಲ್ಲಾ ಮಲಗಿದಲ್ಲೇ. ಸುಚಿತ್ರಳ ದರ್ಶನವೇ ದುರ್ಲಭವಾಯಿತು. ತಡೆಯಲಾರದೇ ಭಾಗಕ್ಕ ಮನೋಜನಿಗೆ ದತ್ತು ತೆಗೆದುಕೊಳ್ಳಲು ಸೂಚಿಸಿದರು. ಸುಚಿತ್ರ ಅಗ್ನಿಪರ್ವತದಂತೆ ಸಿಡಿದಳು. “ಮಕ್ಕಳನ್ನು ಹಡಿಯೋದು, ಬೆಳೆಸೋದು ಬಿಟ್ರ ಬ್ಯಾರೆ ಕೆಲಸ ಇಲ್ಲೇನು? ನಮಗ ಮಕ್ಕಳಾಗುದಿಲ್ಲಂತ ಯಾವ ದೇಶನೂ ನಿಂದ್ರೂದಿಲ್ಲ. ನನಗ ನಮ್ಮಣ್ಣನ ಮಕ್ಕಳ ಮಕ್ಕಳಿದ್ದಂಗ” ಎಂದು ಘೋಷಿಸಿಬಿಟ್ಟಳು. ಮುಂದೆ ಮನೋಜನದು ಮಾತೇ ಇಲ್ಲ. ಕೆಲದಿನ ಎಲ್ಲ ನೋಡಿ ನೊಂದುಕೊಂಡು “ಎಂಥ ದೊಡ್ಡ ಮನಿತನಾ. ಇಲ್ಲಿಗೇ ನಿಂತುಹೋಗ್ತದಲ್ಲss” ಎಂದು ಕಮಲಿಯ ಮುಂದೆ ಹಳಹಳಿಸಿದ್ದೇ ಬಂತು ಭಾಗಕ್ಕನ ಭಾಗ್ಯ.
ಮನೋಜನಿಗೆ ಪ್ರಮೋಶನ್ ಆಯಿತು. ಊರೂರು ಸುತ್ತತೊಡಗಿದ. ಇಂದು ಇಲ್ಲಿದ್ದರೆ ನಾಳೆ ಮುಂಬೈ, ಕಲ್ಕತ್ತ, ದೆಹಲಿ, ಹೀಗೆ. ಮನೆಯಲ್ಲೆಲ್ಲ ಸುಚಿತ್ರಳದೇ ರಾಜ್ಯ. ಅಮ್ಮಾವ್ರ ದರ್ಬಾರು ಕೇಳುವುದೇನಿದೆ? ಮನೆಯಲ್ಲಿ ಅಡಿಗೆ, ಊಟ, ಕೇಳಬೇಡಿ. ಭಾಗಕ್ಕನ ಊಟವೂ ಕಮಲಿಯ ಮನೆಯಿಂದಲೇ ಬರತೊಡಗಿತು. ಕ್ಲಬ್, ಗೆಳತಿಯರು, ಆಧುನಿಕ ಶೈಲಿಯ ಜೀವನಕ್ಕೆ ಮಾರುಹೋಗಿದ್ದಳು ಸುಚಿತ್ರ. ಅವಳ ಬಾಯಲ್ಲಿ ಈಗ ಅತ್ತೆ ಹೋಗಿ `ಮುದುಕಿ’ಯಾಗಿದ್ದರು. ಮನೋಜನಿಗೆ ದೂರಲೆತ್ನಿಸಿದಾಗ “ಅಮ್ಮಾ, ಅಕೀ ಸ್ವಭಾವ ನಿನಗ ಗೊತ್ತದಲಾ. ನಾ ಊರೂರು ಸುತ್ತಾಂವಾ. ಏನರ ಹೇಳಿದರ ತ್ರಾಸಾಗೋದು ನಿನಗ” ಎಂದುಬಿಟ್ಟ. ಭಾಗಕ್ಕ ಸುಮ್ಮನಾಗಿಬಿಟ್ಟರು. ವಿಷಕಂಠನಂತೆ ಅಷ್ಟೂ ದುಃಖ, ಸಮುದ್ರದ ವಿಷವನ್ನೆಲ್ಲಾ ಒಮ್ಮೆಲೆ ನುಂಗಿ ಶಾಂತವಾಗಿಬಿಟ್ಟರು. ಯಾರಿಗೆ ದೂರಿ ಏನು ಪ್ರಯೋಜನ?
ಅಮ್ಮಾವ್ರ ದರ್ಬಾರು ಅಡೆ-ತಡೆಯಿಲ್ಲದೇ ಹರಿವ ನದಿಗೆ ರಭಸ ಬಂದಂತೆ ಮುಂದುವರಿಯಿತು. ಹೊಲ, ತೋಟಗಳೆಲ್ಲ ಒಂದೊಂದಾಗಿ ಮಾರಾಟವಾದವು. ದುಡ್ಡೆಲ್ಲಿ ಸೇರಿತೊ ಗೊತ್ತಿಲ್ಲ. ಭಾಗಕ್ಕನ ಅಸಂಖ್ಯ ಒಡವೆಗಳು, ಲಕ್ಷ್ಮಕ್ಕನ ಕೆಲ ಒಡವೆಗಳು ಸುಚಿತ್ರಳ ಬೀರು ಸೇರಿದವು. ಚಿನ್ನದಂಗಡಿ ಸೇರಿ ಮಾರ್ಪಾಟಾಗಿ ಬರುತ್ತಿದ್ದವು.
ಅವಳಣ್ಣನ ಮಕ್ಕಳೋ ಇವಳಿಗಿಂತ ಹೆಚ್ಚಿನವು. “ಹಾಯ್ ಆಂಟಿ” ಎನ್ನುತ್ತ ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಬಂದಾಗ ಸುಚಿತ್ರ ಭಾಗಕ್ಕನ ಒಡವೆಯೊಂದನ್ನು ಅವರ ಕೈಲಿಟ್ಟು “ಬರ್ತಡೇ ಗಿಫ್ಟ್. ತಗೊಳ್ರಿ. ಇವನ್ನ ಮುರಿಸಿ ಏನ ಬೇಕೋ ಮಾಡಿಸಿಕೊಳ್ರಿ” ಎಂದು ಅವರ ಕಣ್ಣ ಮುಂದೆಯೇ ಕೊಡುತ್ತಿದ್ದಳು. ನೋವಾಗಲಾರದ ಸ್ಥಿತಿಗೆ ಮನಸ್ಸು ತಲಪಿತ್ತು. ಕಣ್ಣಿರು ಬತ್ತಿ ಹೋಗಿದ್ದವು. ಆದರೂ ಲಕ್ಷ್ಮಕ್ಕನ ವಜ್ರದ ನತ್ತನ್ನು “ಏಯ್ ಪಿಂಕಿ, ಯುಗಾದಿ ಗಿಫ್ಟ್ ನಿನಗ” ಎಂದು ಸುಚಿತ್ರ ಎಸೆದಾಗ ತನ್ನ ಹೃದಯವನ್ನೇ ಎತ್ತಿ ಎಸೆದಂತಾಗಿತ್ತು ಭಾಗಕ್ಕನಿಗೆ. “ಓಹ್ ಓಲ್ಡ ಮಾಡೆಲ್. ಇದು ಮುದುಕೀದ?” ಎಂದು ಪಿಂಕಿ ಕೇಳಿದ್ದು ಸ್ಪಷ್ಟವಾಗಿ ಕೇಳಿಸಿತ್ತು. “ಅಲ್ಲ ಮುದುಕಿ ಅತ್ತೀದು” ಎಂದು ಸುಚಿತ್ರ ಉತ್ತರಿಸಿದ್ದಳು. “ಅಂದರ, ಡಬಲ್ ಮುದುಕೀದು” ಎಂದು ಇಬ್ಬರೂ `ಗೊಳ್’ ಎಂದು ನಕ್ಕಾಗ ಬರಡಾಗಿದ್ದ ಹೃದಯದಲ್ಲೂ ನೋವಿನ ಸೆಲೆ ಚಿಮ್ಮಿ ಕಣ್ಣೀರು ಉಕ್ಕಿದ್ದವು. `ಮುಪ್ಪು ನಿಮಗೂ ಕಾದದ’ ಎಂದರು ಮನಸ್ಸಿನಲ್ಲೆ.
ಅತ್ತೆ ಎಷ್ಟು ಚೆನ್ನಾಗಿ ಕಾಣುತ್ತಿದ್ದರು. ಆ ನತ್ತು ಒಡವೆಗಳ, ಜೊತೆ ಒಂಬತ್ತು ಗಜದ ರೇಷ್ಮೆ ಸೀರೆಯುಟ್ಟು ಸಾಕ್ಷಾತ್ ಲಕ್ಷ್ಮಿಯಂತೆ ಶೋಭಿಸುತ್ತಿದ್ದರು. ಲಕ್ಷ್ಮಿಪೂಜೆಯ ಸಮಯದಲ್ಲಿ ಮಾವನಂತೂ ಕಣ್ತುಂಬ ನೋಡುತ್ತ ನಿಲ್ಲಬೇಕು. ಅತ್ತೆ “ಹಂಗೇನ ನೋಡ್ತೀರಿ?” ಎಂದರೆ ಸಾಕು “ಲಕ್ಷ್ಮೀನ ಲಕ್ಷ್ಮಿಪೂಜಾ ಮಾಡ್ಲಿಕತ್ತಾಳಲಾ ಅಂತ ನೋಡ್ಲಿಕ್ಕತ್ತೀನಿ” ಎಂದು ಕಣ್ಣಲ್ಲಿ ಮಿಂಚು ತುಳುಕಿಸಿ ನಗಬೇಕು. ಭಾಗಕ್ಕ ಆ ದೃಶ್ಯವನ್ನು ಕಣ್ತುಂಬಿಕೊಂಡು ನೋಡುತ್ತಿದ್ದರು. ಆ ವಜ್ರವನ್ನು ಅಂದಿನ ದಿನಗಳಲ್ಲಿ ಮದ್ರಾಸಿನಿಂದ ತಂದು ಪುಣೆಯಲ್ಲಿ ನತ್ತು ಮಾಡಿಸಲಾಗಿತ್ತು. ಅತ್ತೆ-ಮಾವಂದಿರಿಬ್ಬರಿಗೂ ಅದರ ಮೇಲೆ ವಿಶೇಷ ಪ್ರೀತಿ. ಅಂಥ ನತ್ತು ಅನ್ಯಾಯವಾಗಿ `ಅಪಾತ್ರರ ಪಾಲಾಯಿತಲ್ಲ’ ಎಂದು ದುಃಖ ಉಮ್ಮಳಿಸಿತ್ತು.
ಸುಚಿತ್ರ ನಾಲ್ಕು ದಿನಗಳ ಮಟ್ಟಿಗೆ ಅಣ್ಣನ ಸಂಸಾರದೊಂದಿಗೆ ಊರಿಗೆ ಹೋಗಿದ್ದಳು. ಮನೆಯೆಲ್ಲ ಬೀಗ ಹಾಕಲಾಗಿತ್ತು. ಭಾಗಕ್ಕನ ಕೋಣೆ ಮತ್ತು ಅದಕ್ಕೆ ಸೇರಿದ ಅಡಕಲು ಕೋಣೆಯೊಂದನ್ನು ಬಿಟ್ಟು ಹೋಗಿದ್ದಳು. ನೋಡಿಕೊಳ್ಳಲು ಸಿದ್ದ, ಕಮಲಿಯರಿದ್ದರು. ಅವಳು ಊರಿಗೆ ಹೋಗಿದ್ದು ಭಾಗಕ್ಕನಿಗೂ ಕೊಂಚ ನಿರಾಳವಾಗಿತ್ತು. ಸಿದ್ದ, ಕಮಲಿಯ ಜೊತೆಯಲ್ಲಿ ಮನಸ್ಸುಬಿಚ್ಚಿ ಮಾತನಾಡಬಹುದಾಗಿತ್ತು. ಮಲಗಿದಲ್ಲಿಂದ ಅಡಕಲು ಕೋಣೆಯನ್ನೇ ನೋಡಿದರು ಭಾಗಕ್ಕ. ಸಾಲಾಗಿ ಪೇರಿಸಿಟ್ಟ ಮೂರ್ನಾಲ್ಕು ಟ್ರಂಕುಗಳು. `ಥೂ, ಹಳೇ ಸಾಮಾನು, ಉಪಯೋಗಿಲ್ಲದ್ದು’ ಎಂದು ಸುಚಿತ್ರ ಎಸೆದದ್ದನ್ನೇ ಅದರಲ್ಲಿ ತುಂಬಿ ಇಡಲಾಗಿತ್ತು. ಏಕೋ ಅವನ್ನೊಮ್ಮೆ ನೋಡಬೇಕೆನ್ನಿಸಿತು ಭಾಗಕ್ಕನಿಗೆ. ಸುಖ, ಸಂಭ್ರಮದ ಅತೀತದಲ್ಲಿ ಕೆಲ ಕಾಲ ಕಳೆಯಬೇಕೆನ್ನಿಸಿತು. ಕಮಲಿ, ಸಿದ್ದರನ್ನು ಕೂಗಿದರು. ಒಂದೊಂದಾಗಿ ತೆರೆಯಲು ಹೇಳಿದರು.
ಅವರ ನೆನಪಿನ ಗಣಿಯನ್ನೇ ಹೂತಿಟ್ಟಂತಾಗಿತ್ತು. ಒಂದರಲ್ಲಿ ಮನೋಜ ತೊಟ್ಟ ಕಸೂತಿ ಮಾಡಿದ ಪುಟ್ಟ ಪುಟ್ಟ ಬಟ್ಟೆಗಳು. `ಅವರ ಮಕ್ಕಳಿಗೇಂತ ಕೆಲವನ್ನಾದರೂ ಇಡಬೇಕಂತ’ ಎಂದು ಲಕ್ಷ್ಮಕ್ಕ ಹೇಳುತ್ತಿದ್ದರು. ಭಾಗಕ್ಕ ತಮ್ಮ ಮೊಮ್ಮಕ್ಕಳಿಗಾಗಿ ಜೋಪಾನವಾಗಿಟ್ಟಿದ್ದರು. ಆದರೆ ಕೊಡುವ, ತೊಡುವ ಪ್ರಮೇಯವೇ ಬಂದಿರಲಿಲ್ಲ. ಇನ್ನೊಂದು ಟ್ರಂಕಿನಲ್ಲಿ ಕೃಷ್ಣಾಜಿನದಲ್ಲಿ ಸುತ್ತಿಟ್ಟ ದೇವರ ಪೆಟ್ಟಿಗೆ ಮತ್ತು ಉಪಗಾರಣಿಗಳ ಗಂಟು. ಅವೆಲ್ಲ ಕೆಲಸಕ್ಕೆ ಬಾರದವಾಗಿ ಕಂಡಿದ್ದವು ಸುಚಿತ್ರಳಿಗೆ. ಮೊದಲು ಭಾಗಕ್ಕನ ಮಾವ ನಿತ್ಯ ಪೂಜೆ ಮಾಡಿದರೆ ಅನಂತರ ಗಂಗಾಧರ ಮಾಡುತ್ತಿದ್ದ. ಊರಲ್ಲಿ ಇರುವಾಗ ಮನೋಜ ಕೂಡ ಮಾಡುತ್ತಿದ್ದುದುಂಟು. ಈಗ ಅವನು ಊರೂರು ಸುತ್ತಲಾರಂಭಿಸಿದ ನಂತರ ಸುಚಿತ್ರ ಅವನ್ನು ಗಂಟುಕಟ್ಟಿ ಬೆಳ್ಳಿಯವನ್ನೆಲ್ಲಾ ತೆಗೆದುಕೊಂಡು ಉಳಿದಂತೆ ಟ್ರಂಕಿನಲ್ಲಿಟ್ಟಿದ್ದಳು. ಅಲ್ಲದೇ “ಇಷ್ಟ ದೇವ್ರ? ಪೂಜಿ ಮಾಡಾವ್ರ್ಯಾರು? ಯಾರ್ಗರೆ ಕೊಟ್ಟ ಖಾಲಿ ಮಾಡ್ರಿ. ಏನರ ಮಾಡ್ರಿ. ನಾ ಅಂತೂ ಕೈ ಹಚ್ಚೂದಿಲ್ಲ” ಎಂದು ಆಜ್ಞೆ ಮಾಡಿದ್ದಳು. ಅಂದಿನಿಂದ ದೇವರು ಪಾಪ ಟ್ರಂಕಿನಲ್ಲೇ ಕುಳಿತಿದ್ದರು.
ಅದರ ಜೊತೆಗಿದ್ದ ಮೂಟೆ ದೇವರ ಪಾತ್ರೆಗಳದ್ದು. ಬರೀ ಕಂಚು, ಹಿತ್ತಾಳೆ, ತಾಮ್ರಗಳ ಪಂಚಪಾತ್ರೆ, ಉದ್ಧರಣೆ, ಗಂಟೆ ಮುಂತಾದ ಉಪಗಾರಣಿಗಳಿದ್ದವು. ಅವುಗಳ ಜೊತೆಯಲ್ಲಿ ಇನ್ನೊಂದು ವಸ್ತ್ರ ಸುತ್ತಿದ ಚಿಕ್ಕ ಗಂಟು. ಬಿಚ್ಚಿದಾಗ ಎಲ್ಲರ ಕಣ್ಣುಗಳೂ `ಫಳ್’ ಎಂದು ಹೊಳೆದವು. ಲಕ್ಷ್ಮಕ್ಕನ ಒಡವೆಗಳ ಗಂಟು. ಮಲಗಿದಲ್ಲಿಂದಲೇ ಕೊಂಚ ಮೇಲಕ್ಕೇರಿ ಕಮಲಿಯ ಆಸರೆ ತೆಗೆದುಕೊಂಡು ಕಣ್ಣು ತೆರೆದು ನೋಡಿದರು ಭಾಗಕ್ಕ. ಅದ್ಹೇಗೋ ಸುಚಿತ್ರಳ ಕೈಯಿಂದ ಅವು ಪಾರಾಗಿದ್ದವು. ಘಜನಿ ಮಹಮ್ಮದನ ದಂಡಯಾತ್ರೆಯ ಬಳಿಕ ಉಳಿದ ದೇವಾಲಯಗಳ ಹಾಗೆ ದೇವರ ಗಂಟಿನಲ್ಲಿ ಸೇರಿ ಬದುಕಿದ್ದವು. ಅಡ್ಡಿಕೆ, ಕೆನ್ನೆ ಸರಪಳಿಯಿಂದ ಹಿಡಿದು ಒಂದೊಂದಾಗಿ ಸಿದ್ದ ಎತ್ತಿ ಕೊಡುತ್ತಿದ್ದಂತೆ ಕಮಲಿ ತೋರಿಸುತ್ತಿದ್ದಳು. ಅವರು ತಮ್ಮನ್ನು ತಾವೇ ಮರೆತು “ಜೋಡ ಗೋಟಿದ್ದು ನೋಡ ಸಿದ್ದ. ಹ್ಞಾಂ, ಅವ. ಮತ್ತದು ಚಪಲಹಾರ, ಬಾಜುಬಂದ್ ಅದಯೇನ್ ನೋಡು……………” ಎನ್ನುತ್ತ ಪುಟ್ಟ ಹುಡುಗಿಯಂತೆ ಸಂಭ್ರಮಿಸಿದರು. ತಾನು, ಅತ್ತೆ ಎಲ್ಲ ಧರಿಸಿ ರಾಣಿಯರಂತೆ ಮೆರೆಯುತ್ತಿದ್ದ ಕ್ಷಣಗಳು ಕಣ್ಣಿಗೆ ಕಟ್ಟಿದವು. ಸಂತೋಷದಿಂದ ಕಣ್ಣುಗಳು ಹೊಳೆದವು.
ಒಂದೇ ಕ್ಷಣವಷ್ಟೇ, ಮರುಕ್ಷಣ ಅವರ ಮುಖ ಕಳೆಗುಂದಿತ್ತು. ಕಾರ್ಮೋಡ ಆವರಿಸಿದಂತಾಯಿತು. “ಇನ್ನು ಮುಂದೆ ಇವೂ ಆ ರಾಕ್ಷಸಿ ಪಾಲಾಗ್ತವಲ್ರೋ” ಎಂದು ಅಳಲಾರಂಭಿಸಿದರು. “ನಮ್ಮನ್ನು ಮಾತು ಮಾತಿಗೆ `ದರಿದ್ರ ಮುದುಕಿ’ ಎನ್ನುವ ಅವಳ ಅಣ್ಣನ ಮಕ್ಕಳ ಪಾಲಾಗ್ತಾವ. ಅತ್ತಿ ಎಷ್ಟ ಹೇಳತಿದ್ರು `ಅಪಾತ್ರರಿಗೆ ದಾನ ಮಾಡಬಾರ್ದಂತ’ ಆದರೆ ಇವು ನನ್ನ ಕಣ್ಣ ಮುಂದನ ಅಪಾತ್ರರ ಪಾಲಾಗ್ತಾವ” ಎಂದು ಬಿಕ್ಕಿದರು. ಸಂಕಟಪಟ್ಟರು. ಸಿದ್ದ, ಕಮಲಿಯ ಕಣ್ಣಲ್ಲೂ ನೀರಾಡಿದವು. ಸ್ವಲ್ಪ ಸಮಯದ ನಂತರ ಸಿದ್ದ ಅವನ್ನೆಲ್ಲ ತಿರುಗಿ ಕಟ್ಟಲಾರಂಭಿಸಿದ. “ತಡಿ, ಸಿದ್ದ, ಎಣಸು ಅವನ್ನ” ಎಂದರು ಗಂಭೀರವಾಗಿ. ಅವರ ಮನದಲ್ಲೇನೋ ನಿರ್ಧಾರ ರೂಪುಗೊಳ್ಳುತ್ತಿತ್ತು. ಸಿದ್ದ ಅಚ್ಚರಿಯಿಂದ ಬದಲು ಹೇಳದೆ ಎಣಿಸಿದ. “ಮೂವತ್ತವರಿ ಚಿಗವ್ವ” ಎಂದ. “ಮನೋಜ ನನಗಂತ ಮಾವಿನ ಹಣ್ಣು ತಂದು ಆ ಕಪಾಟ ಮ್ಯಾಲೆ ಇಟ್ಟಿದ್ದಾ ನೋಡು. ಮೊನ್ನೆ ಬಂದಾಗನ ತಂದಿದ್ದ.” ಎಂದರು. ಕಮಲಿ ಹೋಗಿ ಮಾವಿನ ಹಣ್ಣು ತಂದಳು. ಭಾಗಕ್ಕ ಕೊಂಚ ಕೆಮ್ಮಿ ಸುಧಾರಿಸಿಕೊಂಡು “ಸಿದ್ದ, ನೀ ನನಗ ತಮ್ಮ ಇದ್ಹಾಂಗ ಇದ್ದೀದಿ. ನಾ ನಿನಗ ಇವನ್ನೆಲ್ಲಾ ಕೂಡಿಸಿ ಅಧಿಕದಾನ ಕೊಡತೇನಿ. ಉಪಯೋಗ ಮಾಡಕೋರಿ. ಬ್ಯಾರೇ ಊರಿಗೆ ಹೋಗಿ ಮಾರಿ ಆರಾಮ ಇರ್ರಿ. ಮದ್ಲಿಂದ ನಮ್ಮ ಮನಿತನಕ್ಕ ದುಡದೀರಿ. ಈಗ ನಿಮಗ ಒಪ್ಪೊತ್ತು ಊಟಕ್ಕಾಗೋವಷ್ಟು ಆಕಿ ಮಾಡವಳ್ಳು. ಇವೆಲ್ಲಾ ಮತ್ತ ಅವರ ಪಾಲಾಗಿ ಅಪಾತ್ರಾಗೋಕಿಂತ ನಿಮಗ ಸೇರಲಿ. ನಿಮ್ ಸಂಸಾರ ಉದ್ಧಾರ ಆಗಲಿ” ಎಂದು ನುಡಿದರು.
ಸಿದ್ದ, ಕಮಲಿಯರ ಬಾಯಿ ಆಶ್ಚರ್ಯದಿಂದ ತೆರೆದಂತೇ ಇತ್ತು. ಮೊದಲು ಚೇತರಿಸಿಕೊಂಡ ಸಿದ್ದ “ಅವ್ವಾ ಬ್ಯಾಡ್ರಿ. ನಮಗ ದಾನ ಕೊಡಾಕ ನಾವು ಬ್ರಾಂಬ್ರರಲ್ಲರಿ. ಇವೆಲ್ಲಾ ಮದ್ಲಿಂದ ಬಂದದ್ದು. ದೊಡ್ಡವ್ವಾರ್ದು. ಬ್ಯಾಡ್ರಿ” ಎಂದ. ಭಾಗಕ್ಕ “ಅದಕ್ಕನೋ ಸಿದ್ದಾ, ಇವೆಲ್ಲಾ ತಲೆತಲಾಂತರದಿಂದ ಬಂದದ್ದು. ನೀವು ಬ್ಯಾಡ ಅಂದ್ರ ಮತ್ತ ಅಕೀ ಪಾಲಾಗ್ತಾವ. ಹಂಗ ಇದರ ಅವಶ್ಯಕತಾ ನಿಮಗದ, ಆಕಿಗಿಲ್ಲ. ಆಕಿಗಿದರ ಕಿಮ್ಮತ್ತು ಗೊತ್ತಿಲ್ಲ. ನಿಮ್ಮ ಜೀವನಾರೇ ಬದಲಾಗ್ಲಿ. ನಾ ಮ್ಯಾಲೆ ಹೋಗಿ ನಿಮ್ಮ ದೊಡ್ಡವ್ವಾವ್ರಿಗೆ ಮಾರಿ ತೋರಸ್ಬೇಕು. ಬ್ಯಾಡ ಅನಬ್ಯಾಡ” ಎಂದು ದೀನರಾಗಿ ನುಡಿದರು.
ಸಿದ್ದ ಸುಮ್ಮನೆ ಕಮಲಿಯ ಮುಖ ನೋಡಿದ. ಆಶ್ಚರ್ಯದಿಂದ ಕಲ್ಲಿನಂತೆ ಕುಳಿತವಳು `ಬೇಡ’ ಎಂದು ತಲೆಯಾಡಿಸಿದಳು. ಭಾಗಕ್ಕ “ನನ್ನಾಣೆದ ನಿಮಗ” ಎಂದರು ಸಂತಾಪದಿಂದ. ಆ ಮಾತು ಅವರಿಬ್ಬರ ಬಾಯಿ ಕಟ್ಟಿತು. “ಕಮಲಿ ಇಲ್ಲಿ ಮಣಿ ಹಾಕು. ದೀಪ ಹಚ್ಚಿಡು. ರಂಗೋಲಿ ಹಾಕು” ಎನ್ನುತ್ತ ಮಲಗಿದಲ್ಲಿಂದಲೇ ಎಲ್ಲ ಸಿದ್ಧತೆ ಮಾಡಿಸಿದರು. ಸಿದ್ದ, ಕಮಲಿಯರಿಬ್ಬರ ಸಹಾಯದಿಂದ ಕಮಲಿಯನ್ನೇ ಆಧರಿಸಿ ಕುಳಿತ ಶಾಸ್ತ್ರ ಮಾಡಿದರು. `ದಾನ’ ಮಾಡಿ ಸಿದ್ದನನ್ನು ಆಶೀರ್ವದಿಸಿ ಸಮಾಧಾನದ ಉಸಿರು ಬಿಟ್ಟರು. ತಿರುಗಿ ತಮ್ಮನ್ನು ಎತ್ತಿ ಮಲಗಿಸುವಂತೆ ಹೇಳಿ, ಕಮಲಿಯ ಸಹಾಯದಿಂದ ಕೈಯೆತ್ತಿ ಮುಗಿದರು. “ಅಂತೂ ಅಪಾತ್ರಾಗಲಿಲ್ಲ. ಉಪಯೋಗ ಆತು” ಎನ್ನುತ್ತ ಸ್ತಬ್ಧರಾದರು. ನಿಶ್ಚಲ ಮನದಿಂದ ಅವರ ಆತ್ಮ ಪರಮಾತ್ಮನತ್ತ ಪ್ರಯಾಣ ಆರಂಭಿಸಿತ್ತು. ಆದರೆ ಅವರ ಮುಖದ ಮೇಲೆ ತೃಪ್ತಿಯ ಕಳೆಯಿತ್ತು. ದಿಗ್ವಿಜಯ ಸಾಧಿಸಿದ ಸಂತಸವಿತ್ತು.