೨೦೧೪ರ ವಾರ್ಷಿಕ ಕಥಾ ಸ್ಪರ್ಧೆಯಲ್ಲಿ ಮೆಚ್ಚುಗೆ ಬಹುಮಾನ ಪಡೆದ ಕಥೆ
ಪ್ರಕೃತಿ ಮಾನವನ ವಿಕಾಸದಲ್ಲಿ ತರುವ ಬದಲಾವಣೆ ಒಂದಾದ್ರೆ, ಸ್ವತಃ ಮಾನವನೇ ತನ್ನ ಮುಂದಿನ ವಿಕಸನವನ್ನು ನಿರ್ಧರಿಸಬಲ್ಲಷ್ಟು ಶಕ್ತಿಶಾಲಿ. ಆದರೆ ಅದು ಬೇಡುವ ಬೆಲೆ ಮಾತ್ರ ದೊಡ್ಡದು. ಹೊಸತು ತೆರಲು ಗಟ್ಟಿ ಮನಸ್ಸು ರೂಪುಗೊಳ್ಳಬೇಕು.
ಹಾ… ತಗೋ, ನೀನೇ ಓದು…… ಸೂಕ್ಷ್ಮದೇಹದಲ್ಲಿ ಆದ ಬದಲಾವಣೆ ನೈಜದೇಹಕ್ಕೆ ವರ್ಗಾವಣೆಗೊಳ್ಳುವುದು ಸ್ಪಷ್ಟವಾಗೇ ಇದೆ. ಮೊದಲು ಬದಲಾವಣೆ ಮನಸ್ಸಿನಲ್ಲಿ ನಡೆಯಬೇಕು. ಅದು ಕತ್ತರಿಸಿದರು ಕತ್ತರಿಸಲಾಗದ ವಜ್ರದ ತುಂಡಿನಂತೆ ಗಟ್ಟಿಯಾಗಿರಬೇಕು. ಶ್ರೀರಾಮಕೃಷ್ಣ ಪರಮಹಂಸರ ಬಾಲ್ಯವೇ ಅದಕ್ಕೆ ದೊಡ್ಡ ಉದಾಹರಣೆ. ಬಾಳೆತೋಟದಲ್ಲಿ ಕುಳಿತು ರಾಮ…. ರಾಮ…… ಅಂತ ಜಪಿಸುತ್ತಿದ್ದರೆ ಅದೆಷ್ಟು ಬೇಗ ರಾಮನೊಲಿಯುತ್ತಾನೆ, ಅವನ ಭಕ್ತ ಆಂಜನೇಯನಿಗೊಲಿದಂತೆ ಎಂದು ಯಾರೋ ಹೇಳಿದ ಮಾತಿಗೆ ಟೊಂಕಪಟ್ಟಿಗೆ ಟವೆಲ್ ಬಿಗಿದುಕೊಂಡು ಬಾಲದಂತೆ ಕಾಣಿಸಿ ರಾಮ, ರಾಮ ಎನ್ನುತ್ತಾ ಕುಳಿತವನಿಗೆ ಸೂರ್ಯ ಅದೆಷ್ಟು ಸಾರಿ ಹುಟ್ಟಿ ಸತ್ತರು ಏರಿಳಿತಗೊಳ್ಳದ ಫಲವಾಗಿ ಸಂಪೂರ್ಣ ಆಂಜನೇಯನೆ ಮೈವೆತ್ತಂತಾಗಿ ಬಿಟ್ಟ. ಅದರ ಕುರುಹು ಎಂಬಂತೆ ಬೆನ್ನುಮೂಳೆಯ ಒಂಬತ್ತನೆ ವರ್ಟೆಬ್ರಾ (Verterba) ಬಾಲದಂತೆ ೨-೩ ಇಂಚು ಹೊರಕ್ಕೆ ಬೆಳೆದುಕೊಂಡಿತ್ತು.
………ಆದ್ರೆ ಇದೆಲ್ಲ ಹೇಗೆ ಸಾಧ್ಯ ಅಂತೀನಿ, ಇಫ್ ಇಟ್ ಹ್ಯಾಪನ್ಸ್ ಸೋ, ಮಸ್ಟ್ ಲೀಡ್ ಟು ಎವಲುಷನ್. ಒಂದು ವೇಳೆ ನಾವು ಅಂದುಕೊಂಡ ಹಾಗೆ ನಮ್ಮ ಬಾಡಿ ಚೇಂಜ್ ಆದ್ರೆ ಇಟ್ ಇಂಡ್ಯೂಜಲ್ ವಿಲ್ ಗಿವ್ ರೈಸ್ ಟು ನ್ಯೂ ಸ್ಪಿಸಿಸ್…… ನೋ, ನೆವರ್, ಸಾಧ್ಯನೇ ಇಲ್ಲ; ಆ ಜೀವಿ ಮನಸ್ಸಿನಿಂದ ಉಂಟಾದ ಬದಲಾವಣೆ ಅದಕ್ಕೆಷ್ಟು ಸಂಬಂಧಿಸಿದ್ದವೋ ಅದು ವಿಕಾಸ ಹಂತಕ್ಕೆ ಹೋಗೋದು ಮುಂದಿನ ಪೀಳಿಗೆಗಳ ಮ್ಯಾಲೆ ನಿಂತಿದ್ದು ಅರ್ಥಮಾಡ್ಕೊಳಯ್ಯಾ…. ಡಾಕ್ಟ್ರಪ್ಪ ಈ ಚರ್ಚೆಗಳಿಗೆ ಎದುರಾ ಬದುರಾಗಿದ್ದವರು ಡಾ|| ವಿನಯ ಎಂಬ ಸುಮಾರು ಆರೂವರೆ ಫೂಟ್ನ ಬಿಳುಚು ದೇಹ ಮತ್ತು ಹಕ್ಕಳೆಯಂತ ಮೈಗೆ ಬಿಳಿಬೂದಿ ಮೆತ್ತಿಕೊಂಡು, ಬುಸುಬುಸು ಚಿಲುಮೆ ಹೊಗೆಬಿಡುತ್ತಾ ವಿನಯನ ಮೊಣಕಾಲಿನವರೆಗೆ ಜಡೆ ಇಳಿಬಿಟ್ಟಿದ್ದ ಬೊಲೆನಾಥ ಎಂಬ ಹೆಸರಿನ ಕುಳ್ಳನೆಯ ಅಘೋರಿ. ಚೂಪಾಗಿ ನುಗ್ಗುತ್ತಿದ್ದ ಅವರಿಬ್ಬರ ಚರ್ಚೆ ಕಾವಲುಪೇದೆ ಕಾರ್ನೆಗಿಯ ಲಾಠಿ ಬಂದಿಖಾನೆಯ ಸರಳುಗಳನ್ನು ಜಣ್ ಅನ್ನಿಸಿ ಪೀಂ…… ಅಂತ ಸಿಟಿ ಊದಿದಾಗಲೇ ಕೊನೆಗೊಂಡಿದ್ದು. ಈಗ ಕೇವಲ ಟಕ್ ಟಕ್ ಎಂಬ ಬೂಟಿನ ಶಬ್ದವೇ ಜೀವ ತುಂಬಿಕೊಂಡು, ಏನೇನೋ ಮಾಡುತ್ತಿದ್ದವರೆಲ್ಲ ಕರಿ ಹಾಸಿಗೆಗಳಲ್ಲಿ ಅಂಗಾತವಾದರು, ಜೀರುಂಡೆಯ ಗುಂಯ್ ಶಬ್ದಕ್ಕೂ ಆಸ್ಪದವಿರಲಿಲ್ಲ. ಕೇವಲ ಕೊಲ್ಲುವ, ಕೊಂದ, ಕೊಲ್ಲಲಿರುವ ಆಗಾಧ ಮೌನ. ಆ ಭಾರಿ ಹಬ್ಬಿದ ಚೌಕಟ್ಟಿನೊಳಗೆಲ್ಲ ತುಂಬಿಕೊಂಡು, ನಖಶಿಖಾಂತ ತಟಸ್ಥವಾಗಿತ್ತು. ಚೌಕಟ್ಟಿನ ಮುಖ್ಯದ್ವಾರದ ಸಣ್ಣ ಗೇಟಿನ ಆಚೆ ಇಚೆ ಇಬ್ಬರು ಪೇದೆಗಳು ಟಾರ್ಚ್ ಹಾಕುತ್ತಾ ಆಕಳಿಸುತ್ತಿದ್ದರು.
ನೆತ್ತಿಯ ಮೇಲುಗಡೆ ಕಲ್ಲಿನಲ್ಲಿ ದೊಡ್ಡದಾಗಿ ಅಂಡಮಾನ್ ಜೈಲು ಎಂಬ ಹಿಂದಿ ಬರಹ ಕೆತ್ತಲ್ಪಟ್ಟಿತ್ತು. ಇತ್ತ ಒಳಗಡೆ ಕತ್ತಲ ಕೊಣೆಯಲ್ಲಿನ ಬಿಸಿ ಬಿಸಿ ಚರ್ಚೆಯಲ್ಲಿ ತೊಡಗಿದ್ದ ಡಾ|| ವಿನಯ ಗುಡ್ ಮಾರ್ನಿಂಗ್ ಅಂತ ಹೇಳಿ ಅಘೋರಿಯ ಕಡೆ ನಸುನಕ್ಕು ಮಲಗಿದ. ವೆರಿ ಗುಡ್ಮಾರ್ನಿಂಗ್ ಅಂತ ಉತ್ತರಿಸಿದ ಅಘೋರಿ ಕಾಪಿಟ್ಟುಕೊಂಡುಬಂದ ಬೆನ್ನಿಗೆ ಮತ್ತೇನು ತಾಗದಂತೆ ಗೋಡೆಯ ಕಡೆ ಬೆನ್ನು ಮಾಡಿ ತನ್ನ ನಿಸರ್ಗದತ್ತ ಮೈ ಚರ್ಮದಂತೆ ಯಾವಾಗಲೂ ಮೈಮೇಲಿರುತ್ತಿದ್ದ ಕಾವಿ ಶಾಲನ್ನು ಬೆನ್ನಿಗೆ ತಾಗಿಯೂ ತಾಗದಂತೆ ಸುತ್ತಿಕೊಂಡು ನಿಧಾನವಾಗಿ ಮುದುಡಿ ಮಲಗಿದ.
***
ಬಾವಿಯ ಗಡಗಡೆ ಗುಂಟ ಮೇಲಕ್ಕೆ ಬರುವ ತುಂಬುಕೊಡದಂತೆ ಪೂರ್ವದಲ್ಲಿ ಸೂರ್ಯ ಸ್ಪಷ್ಟ್ಟವಾಗತೊಡಗಿದ್ದ. ಅಲ್ಲಿಯವರೆಗೆ ಮೌನವಾಗಿದ್ದ ಜೈಲಿನ ಕೋಣೆಗಳೆಲ್ಲ ಪೇದೆಗಳ ಲಾಠಿ, ಪೀಪಿ, ಬೈಗುಳಗಳ ಚೀರುಗಳಿಗೆ ಎಚ್ಚರಗೊಳ್ಳತೊಡಗಿದವು. ಕಣ್ಣು ಉಜ್ಜಿಕೊಂಡು ಮೇಲೆದ್ದ ಡಾ|| ವಿನಯ ತನ್ನ ಮಗ್ಗುಲಕ್ಕೆ ಅದ್ಯಾವಾಗಲೋ ಎದ್ದು ಪದ್ಮಾಸನ ಹಾಕಿ ಬೆನ್ನು ಮೇಲೆ ಮಾಡಿಕೊಂಡು ತೂಗಿಬಿಟ್ಟ ಪೆಂಡುಲಮ್ನ ಚಲನೆಯಂತೆ ಭಾರವಾದ ಉಸಿರು ಬಸಿಯುತ್ತಾ ಯೋಗಿಯಂತೆ ಪೀಠಸ್ತನಾಗಿದ್ದ ಆಘೋರಿಯ ಕಡೆ ನೋಡಿ ಆಕಳಿಸಿ ಸರಳುಗಳ ಕಡೆ ಬಂದು ನಿಂತ. ಎಲ್ಲರೂ ಕೋಣೆಗಳಿಂದ ಆಚೆ ಬಂದು ತಮ್ಮ ತಮ್ಮ ಕೆಲಸಗಳಿಗೆ ಅಣಿಯಾಗಿ ನಿಯೋಜಿಸಲ್ಪಟ್ಟ ಪೇದೆಗಳ ಹಿಡಿತದಲ್ಲಿ ಜೈಲಿನ ಆವರಣದ ಆಚೆ ಹೋದರು. ಎಲ್ಲ ಕೋಣೆಗಳನ್ನು ಪರೀಕ್ಷಿಸುತ್ತಾ ಬಂದ ನಿಗಾಘಟಕದ ಪೇದೆ ಎಡ್ಗರ್ ಸರಳುಗಳ ಮುಂದೆ ಆಕಳಿಸುತ್ತಾ ನಿಂತಿದ್ದ ನಂ. ೧೧೭೨ರ ಡಾ|| ವಿನಯನನ್ನು ದಿಟ್ಟಿಸಿ ಹುಂ ಅಂದನು. ಮೂಲೇಲಿ ಇದ್ದ ಮೀನಿನ ಬಲೆ, ಬುಟ್ಟಿ ಕೈಗೆ ಎತ್ತಿಕೊಂಡ ವಿನಯ ಹೊರನಡೆದ. ಒಳ ಇಣುಕಿದ ಪೇದೆ ಅಘೋರಿಯ ಭಂಗಿ ಕಂಡು ಮಾತಾಡಿಸಲು ಯೋಗ್ಯವಲ್ಲವೆಂದು ಸರಳುಗಳಿಗೆ ಎರಡು ಸಾರಿ ಬಡಿದು ಪೀಪಿ ಊದಿ ಮುಂದೆ ನಡೆದ. ಅಷ್ಟೊತ್ತು ಕಲ್ಲಾಗಿದ್ದ ಅಘೋರಿಯ ದೇಹ ಸೆಲ್ಫ್-ಹಿಪ್ನಾಟಿಸಂನ ತುತ್ತತುದಿಗೆ ಡಿಕ್ಕಿ ಹೊಡೆದು ಬಂದಿತ್ತು.
ಸುಪ್ತಮನಸ್ಸಿಗೆ ದಿನೇದಿನೇ ಹೆಚ್ಚೆ ಎಂಬಂತೆ ಆದೇಶ ಉಣ್ಣಿಸತೊಡಗಿದ್ದ. ಒಂದು ಸಾರಿ ದೀರ್ಘ ಉಸಿರು ಎಳೆದುಕೊಂಡು ಒಳಗಣ್ಣನ್ನು ಬೆನ್ನಿನ ಚಿತ್ರಕ್ಕೆ ಕೇಂದ್ರೀಕರಿಸಿಕೊಂಡ. ಪುಕ್ಕ ಒಂದು ಬೆನ್ನಿಗೆ ಅಂಟಿದಂತಾಗಿ ಹೊದ್ದಿದ್ದ ಶಾಲಿಗೆ ತಾಗಿಕೊಂಡಿತ್ತು. ನಿಧಾನಕ್ಕೆ ಮೇಲೆದ್ದ ಅಘೋರಿ ಕೋಣೆಯ ಹೊರಕ್ಕೆ ಬಂದು ನಿಂತು ಗುದ್ಲಿ, ಕುರ್ಪಿ ಕೈಗೆತ್ತಿಕೊಂಡ. ಇಷ್ಟೇಕೆ ಲೇಟು ಎಂಬಂತೆ ದಿಟ್ಟಿಸತೊಡಗಿದ ಪೇದೆ ಎಡ್ಗರ್ನನ್ನು ಅಘೋರಿಯ ಅತಾರ್ಕಿಕ ಮುಖ, ಭೋರ್ಗರೆಯುತ್ತಿದ್ದ ಮಂದಸ್ಮಿತ ಪ್ರಜ್ವಲಿತ ಕಣ್ಣುಗಳು ಸುಮ್ಮನಾಗಿಸಿದವು. ತನ್ನ ಪಾಡಿಗೆ ತಾನೆಂಬಂತೆ ಅಘೋರಿ ಆವರಣದ ಒಳಗೆ ನಿರ್ಮಿಸಿದ್ದ ಕೈತೋಟಕ್ಕೆ ನಡೆದ. ಅಲ್ಲಿ ಆಗಲೇ ಸಾಕಷ್ಟು ಕೈದಿಗಳು ದ್ವಿದಳನ ಕ್ರಿಯೆಯಂತೆ ಒಂದೇ ಸಮನೆ ಕೆಲಸದಲ್ಲಿ ತೊಡಗಿದ್ದರು. ನಡುನಡುವೆ ರಪ್ ರಪ್ ಎಂಬ ಲಾಠಿ ಶಬ್ದ ಅದಕ್ಕೆ ಉತ್ತರವಾಗಿ ಹೋ…….ಹು…… ತೂರಿಬರುತ್ತಿದ್ದವು. ಬದುವು ಮಾಡಲು ಗುದ್ಲಿ, ಕುರ್ಪಿಯ ಜೊತೆಗೆ ಕುಳಿತ ಅಘೋರಿಯ ಎದುರುಗಡೆಯ ಮುಖದಲ್ಲಿ ಎರಡು ಅಳುವ ಕಣ್ಣುಗಳು ಕಾಣಿಸಿಕೊಂಡವು. ಏಕೆ ಎಂಬಂತೆ ಅಘೋರಿ ಅವನ ಕಡೆ ನೋಡಿದ. ತಕ್ಷಣವೇ ಹಿಂದಿನಿಂದ ಟಕ್ ಟಕ್ ಅಂತ ಬಂದ ಪೇದೆ ಅವನ ಕುಂಡಿಗೆ ಲಾಠಿ ಬಡಿದು ಸಾಹೇಬ್ ಬುಲಾರೇ ಆವೊ……. ಎಂದು ಎಬ್ಬಿಸಿ ಕರೆದುಕೊಂಡು ಹೋದ. ಅವನ ಅನತಿ ಮಗ್ಗುಲಕ್ಕೆ ಕುಳಿತಿದ್ದ ಕನ್ನಡದ ಖೈದಿ ಅವನಿಗೆ ನಾಳೆ ಬೆಳಗಿನ ಜಾವ ನೇಣಿಗೇರಿಸ್ತಾರಂತೆ ಎಂದು ಅಘೋರಿಯ ಕಡೆ ನಿಧಾನಕ್ಕೆ ಪಿಸುಗುಟ್ಟಿದ. ಹೋಗುತ್ತಿದ್ದ ಅವನನ್ನೇ ದಿಟ್ಟಿಸಿದ ಅಘೋರಿಯ ಕಣ್ಣುಗಳ ಸ್ಥಿತಿ ಹಾಗೆ ಇತ್ತು – ಸಾವಿರ ಕುದುರೆಗಳ ಹೆಡೆಮುರಿಕಟ್ಟಿದ ಧೀರನ ವೀರೊನ್ಮತ್ತತೆಯಂತೆ.
ಮಧ್ಯಾಹ್ನದ ಊಟಕ್ಕೆ ಸೈರನ್ ಹೊಡೆದುಕೊಂಡ ಮೇಲೆ ಎಲ್ಲ ಖೈದಿಗಳು ಲಗುಬಗೆಯಿಂದ ನಡುವಿನ ಹಜಾರಕ್ಕೆ ತಾಟು ಹಿಡಿದು ಬಂದು ಸಾಲಾಗಿ ನಿಂತರು. ಪ್ರತಿಯೊಬ್ಬರ ತಾಟಿಗೂ ಒಂದು ಕಪ್ ಅನ್ನ ಮೇಲೆ ಸಾಂಬರಿನಂತೆ ಕಾಣಿಸುತ್ತಿದ್ದ ನೀರು. ಪಾಳೆ ಸಣ್ಣದಾಗುತ್ತಾ ಹೋಯಿತು. ಒಮ್ಮೆಲೆ ಎಲ್ಲರ ಚಿತ್ತ ಕದಲಲೆಂಬಂತೆ ಮುಖ್ಯದ್ವಾರದ ತುದಿಯ ದೊಡ್ಡ ಘಂಟೆ ಢಣ್ ಅಂತ ಮೂರು ಸಾರಿ ಬಡಿಯಿತು. ಒಬ್ಬರಿಗೊಬ್ಬರು ಸಪ್ಪನೆ ಮುಖ ನೋಡಿಕೊಳ್ಳತೊಡಗಿದ ಕೈದಿಗಳ ದೃಷ್ಠಿ ಮೂಲೆ ಕಡೆಯಿದ್ದ ಡಿ-ವಾರ್ಡ್ನ ಕಡೆ ಹರಿಯಿತು. ಏನೂ ಕಾಣಿಸಲು ಸಾಧ್ಯವಿಲ್ಲದ್ದರಿಂದ ಬರೀ ಕತ್ತಲೆಯನ್ನೆ ದಿಟ್ಟಿಸತೊಡಗಿದರು. ಮಲಗಿದ್ದ ಹಾಸಿಗೆಯ ತುದಿಗಳಿಂದಲೇ ಅದ್ಯಾವಾಗಲೋ ಶವವಾಗಿದ್ದ ಕೈದಿಯ ದೇಹವನ್ನು ನಾಲ್ಕು ಜನ ಪೇದೆಗಳು ಸರ್ ಸರ್ ಅಂತ ಎಳೆದುಕೊಂಡು ಬೆಳಕಿನ ಹಜಾರಕ್ಕೆ ತಂದರು. ಊಟದ ಪಾಳೆಗೆ ನಿಂತಿದ್ದ ಖೈದಿಗಳೆಲ್ಲ ದುರ್ನಾತಕ್ಕೆ ಮೂಗು ಮುಚ್ಚಿಕೊಂಡರು.
ಹೌದು, ಡಿ-ವಾರ್ಡ್ ಅಂದರೆ ಅಂತಹದ್ದೇ ಬೆಳಕು, ಶಬ್ದ ಎಂಬವುಗಳಿಗೆ ವಿಮುಖವಾಗಿ ನಿಂತ ಕೊಲ್ಲುವ ಬಂದಿಖಾನೆಗಳು. ಮೌನಕ್ಕೆ ಕೊಲ್ಲುವ ಕ್ರೌರ್ಯದ ರೂಪ, ಹುಚ್ಚನಂತಾಗಿಸುವ ಹಟ. ಅಪಾಯಕಾರಿಗಳೆಂದು ಪರಿಗಣಿಸಲ್ಪಟ್ಟವರು ಅಲ್ಲಿ ಮನುಷ್ಯರೂಪದಲ್ಲಿ ಬಂಧಿಸಲ್ಪಟ್ಟು ಅವರ ಶಿಕ್ಷೆ ಜೀವಿತಾವಧಿಯದ್ದಾಗಿದ್ದರೂ ಅದನ್ನು ಪೂರೈಸದೆ ಅಲ್ಲಿನ ಕೊಲ್ಲುವ ಮೌನಕ್ಕೆ ಬಹುಬೇಗ ಜೀವತೆತ್ತು ಹೆಣವಾಗಿ ಉಳಿದಿದ್ದ ಖೈದಿಗಳಲ್ಲಿನ ಬದುಕಿನ ಪಸೆಯನ್ನು ಕಿತ್ತೆಸೆಯುತ್ತಿದ್ದರು.
ಹೇ……. ಚೋಡೊ ತುಮಾರಿ….. ಚೋಡೊ…… ಕತ್ತಲ ಕೋಣೆಯಿಂದ ನರಳಿಕೆಯೊಂದು ಚೀರಿಕೊಂಡಿತು. ಪ್ರತಿದಿನ ಊಟಕ್ಕೆ ಪಾಳೆನಿಂತಾಗ ಆ ನರಳಾಟ ಕಿವಿಗಳಿಗೆ ಸಾಮಾನ್ಯವಾಗಿ ಬಂದು ತಲಪಿ …..ಛೆ ಅನ್ನಿಸಿಕೊಂಡು ಬಂದಿಖಾನೆಯ ದಟ್ಟಗೋಡೆಗಳಿಗೆ ಬಡಿದು ಕರಗಿಹೋಗುತ್ತಿತ್ತು. ವಿಷಯ ತಿಳಿದ ಜೈಲರ್ ಹಜಾರಕ್ಕೆ ಬಂದ. ಅಂಕುಡೊಂಕಾಗಿದ್ದ ಪಾಳೆ ಸ್ಕೇಲಿನ ಗೆರೆಯಂತಾಯಿತು. ಇಸ್ಕೆ ಸಂಬಂಧಿ ಕೊಯಿ ಹೈ ಕ್ಯಾ? ಕೇಳಿದ ಜೈಲರ್. ನಹಿ ಸಾಬ್ ಹೇಳಿದ ಪೇದೆ ಎಡ್ಗರ್. ………. ಇಸ್ಮೆ ಅಸ್ಥಿಯೋಂಕೊ ಸಮುಂದರ್ ಮೇ ಬಾಹಾದೊ ಎಂದು ಹೇಳಿ ಜೈಲರ್ ಹೊರಟುಹೋದ. ಅಂದೇ ಸಾಯಂಕಾಲ ಪ್ರಾರ್ಥನೆಯೊಂದಿಗೆ ಶವಪೆಟ್ಟಿಗೆಯಲ್ಲಿ ಅವನ ದೇಹವನ್ನು ಹಿಂದೂಮಹಾಸಾಗರದ ಅನತಿ ದೂರದಲ್ಲಿ ಮೂರನೇ ಬಾರಿಯ ಇಗರ್ಜಿಯ ಘಂಟೆ ಶಬ್ದದೊಂದಿಗೆ ಮುಳುಗಿಸಲಾಯಿತು. ಇಗರ್ಜಿ ಗಂಟೆ ಬಾರಿಸಿದ ಪೀಟರ್ ‘ಎಷ್ಟಾದವು?’ ಲೆಕ್ಕ ಹಾಕಿದ; ಹುಂ…..ಹುಂ…. ಲೆಕ್ಕ್ಕ ಸಿಗಲಿಲ್ಲ.
ಅಘೋರಿಯು ನಾಲ್ಕು ಹೆಜ್ಜೆ ಹಿಂದೆ ಸರಿದು ಹೊದ್ದ ಶಾಲನ್ನು ಬಿಚ್ಚಿದ. ಹಾಲು ನೊರೆಯ ಬಿಳುಪಿನ ಚುಮುಚುಮು ಗರಿಗಳ ಎರಡು ದೈತ್ಯ ರೆಕ್ಕೆಗಳು ಆಚೆಗೆ ಬಂದವು. ನೋಡಿದ ಖೈದಿ, ಪೇದೆಗಳೆಲ್ಲ ದಂಗಾಗಿ ನಿಂತರು. ಜೋರಾಗಿ ಹರ ಹರ ಮಹಾದೇವ ಎಂದು ಉಸಿರು ಎಳೆದುಕೊಂಡ ಅಘೋರಿ ಬೆನ್ನಿಗೆ ಅಂಟಿದ್ದ ರೆಕ್ಕೆಗಳನ್ನು ಜೋರಾಗಿ ಬೀಸಿದ.
ಇತ್ತ ದಿನದ ಕೆಲಸವನ್ನು ಪೂರ್ಣಗೊಳಿಸಿದ ಕೈದಿಗಳೆಲ್ಲ ತಮ್ಮ ತಮ್ಮ ರೂಮು ಸೇರಿಕೊಂಡರು. ಅಘೋರಿ, ಡಾ|| ವಿನಯನನ್ನು ಬಿಟ್ಟರೂ ಆ ರೂಮಿನಲ್ಲಿ ಮತ್ತೋರ್ವ ಬಂಧಿಯಾಗಿದ್ದವನು ಕರ್ನಾಟಕದ ಖೈದಿಯೇ; ಹೆಸರು ಮರೆಸುವಷ್ಟು ಅಡ್ಡ ಹೆಸರಿನಿಂದ ಅಲ್ಲಲ್ಲಿ ಕರೆಸಿಕೊಳ್ಳಲ್ಪಡುತ್ತಿದ್ದವನು. ತಲೆಯಲ್ಲಿನ ಕೂದಲುಗಳೆಲ್ಲ ಉದುರಿ ತಾಮ್ರದ ಚೊಂಬಾಗಿದ್ದ ಪ್ರದೇಶದಲ್ಲಿ ಆಕಸ್ಮಾತ್ತಾಗಿ ಉಳಿದುಕೊಂಡಿದ್ದ ಒಂದೇ ಒಂದು ಕೂದಲು ಅವನನ್ನು ಎಲ್ಲರೂ ‘ಏಕ್ಬಾಲ್’ (ಇಕ್ಬಾಲ್!) ಅಂತ ಕರೆಯುವಂತೆ ಮಾಡಿತ್ತು.
ಯಾಕೆ ಏಕ್ಬಾಲ್ ಬಾಯ್ ಒಂದೇ ಸಮನೆ ಪೇಚಾಡ್ತಾ ಇದ್ದೀರಿ, ಏನಾಗಿದೆ? ಏನೋ ಯೋಚಿಸುತ್ತಾ ಅತ್ತಿಂದಿತ್ತ ಇತ್ತಿಂದತ್ತ ರೂಮಿನೊಳಗೆ ಒದ್ದಾಡುತ್ತಿದ್ದ ಏಕ್ಬಾಲ್ನನ್ನು ಡಾ|| ವಿನಯ ಪ್ರಶ್ನಿಸಿದ. ಅಘೋರಿ ಅದ್ಯಾವುದೋ ಪುಸ್ತಕದಲ್ಲಿ ದೃಷ್ಟಿ ನೆಟ್ಟಿದ್ದ. ನಿನ್ನ ಹತ್ರ ನೂರು ರೂಪಾಯಿ ಐತೇನು? ಏಕ್ಬಾಲ್, ಕೊಂಚ ಅವನನ್ನೆ ದಿಟ್ಟಿಸಿದ. ವಿನಯ ಏಕೆ ಎಂದು ಕಣ್ಣಲ್ಲೆ ಕೇಳಿ ಉಡದಾರಕ್ಕೆ ಗಂಟಾಕಿ ಕೊಂಡಿದ್ದ ಸಣ್ಣ ಅರಿವೆಯಿಂದ ತೆಗೆದ ನೂರರ ನೋಟನ್ನು ಅವನ ಕೈಗಿತ್ತ. ಇಸಿದುಕೊಂಡ ಏಕ್ಬಾಲ್ ಸರಳುಗಳ ಹತ್ರಕ್ಕೆ ಬಂದು ನಿಂತು ಮುಂದೆ ಗಸ್ತು ತಿರುಗುತ್ತಿದ್ದ ಪೇದೆ ಕಾರ್ನೆಗ್ಗೆ ಎಡಗೈನ ಕಿರುಬೆರಳನ್ನು ತೋರಿಸಿದ. ಕಾರ್ನೆಗಿ ರೂಮಿನ ಬೀಗ ತೆಗೆದು ಮತ್ತೆ ಬೀಗ ಹಾಕಿದ. ವಿನಯ ಹೋರಹೋದ ಅವನನ್ನೆ ಕುರಿತು ಯೋಚಿಸತೊಡಗಿದ. ಏಕ್ಬಾಲ್ ಹಾಗೆ ಆರು ರೂಮುಗಳ ಮುಂದೆ ಸಾಗಿ ಏಳನೆಯದರ ಮುಂದೆ ನಿಂತುಕೊಂಡು ಹಿಂದೆಮುಂದೆ ತಿರುಗಿ ನೂರರ ನೋಟನ್ನು ರೂಮಿನೊಳಗೆ ಒಗೆದು ಏಕ್ಬಾಲ್ ಎಂದು ಪಿಸುಗುಟ್ಟಿ ಒಂದು ಸಾರಿ ಕೆಮ್ಮಿ ಬಾತ್ರೂಮುಗಳ ಕಡೆ ನಡೆದ. ಹಿಂದೆಯೆ ಏಳನೆಯ ರೂಮಿನ ಸರಳುಗಳಿಂದ ಸುಂದರ, ಬೆಳ್ಳನೆಯ ಸಪುರಾದ ಹರೆಯ ಮೊಹಮ್ಮದ್ ಹೆಸರಿನ ದೇಹವೊಂದು ಸರಳುಗಳ ಆಚೆ ಕೈ ತೂರಿ ಎರಡು ಸಾರಿ ಚಿಟ್ಟಿಗೆ ಹೊಡೆಯಿತು. ಗಸ್ತು ತಿರುಗುತ್ತಿದ್ದ ಕಾರ್ನೆಗಿ ಓಡಿ ಬಂದು ಬೀಗ ತೆಗೆದು ಮೊಹಮ್ಮದ್ನನ್ನು ಆಚೆ ಬಿಟ್ಟು ಒಂದು ಸಾರಿ ಅವನ ಕುಂಡಿಗೆ ಬಡಿದು ಕಹಾ ಹೈ ಮೇರಾ ಬೀಸ್ ರೂಪಯಾ ಎಂದು ಕೈ ಒಡ್ಡಿದ. ಇಪ್ಪತ್ತರ ನೋಟೊಂದನ್ನು ಕಾರ್ನೆಗಿ ಕೈಗಿಟ್ಟ ಮೊಹಮ್ಮದ್ ಪಟಪಟನೆ ಬಾತ್ರೂಮಗಳ ಕಡೆ ಹೆಜ್ಜೆ ಹಾಕಿದ. ಮೊಹಮ್ಮದ್ನನ್ನು ಕಂಡವನೇ ಏಕ್ಬಾಲ್ ಮೈ ಏಕ್ಬಾಲ್ ಎಂದು ಬಾತರೂಮಿನೊಳಗೆ ನಡೆದ. ಹಿಂದೆಯೆ ಮೊಹಮ್ಮದ್ ನಡೆದು ಬಾಗಿಲು ಚಿಲಕ ಹಾಕಿದ.
ಹೋದ ಹತ್ತು ಹದಿನೈದು ನಿಮಿಷಗಳಲ್ಲಿ ಏಕ್ಬಾಲ್ ರೂಮಿಗೆ ವಾಪಾಸ್ಸಾಗಿ ಹಾಸಿಗೆಯಲ್ಲಿ ಅಂಗಾತವಾದ. ಮನಸ್ಸಿನಲ್ಲಿ ಮೂಡಿದ್ದ ಪ್ರಶ್ನಾರ್ಥಕ ಚಿಹ್ನೆ ದೊಡ್ಡದಾಗಿದ್ದರಿಂದ ವಿನಯ ಏಕ್ಬಾಲ್ನನ್ನು ಏನಾಯ್ತು ಬಾಯ್? ಎಲ್ಲಿಗೆ ಹೋಗಿದ್ದೆ, ನೂರು ರೂಪಾಯಿ ಏನು ಮಾಡಿದೆ? ಎಂದು ಕೇಳತೊಡಗಿದ. ಸರಳುಗಳ ಮುಂದೆ ಗಸ್ತು ತಿರುಗುತ್ತಿದ್ದ ಪೇದೆ ಕಾರ್ನೆಗಿಗೆ ಈ ಮಾತುಗಳು ಕೇಳಿಬಂದು ಹತ್ತಿರಕ್ಕೆ ಬಂದು ತುಜೆ ಭೀ ಸುಖ್ ಚಾಹಿಯೆ ತೋ ಬೊಲ್, ಸಿರ್ಫ್ ಸೌ ರೂಪಯೇ……. ಎಂದು ಹೇಳಿ ಕಣ್ಣಲ್ಲೆ ನಕ್ಕು ಪೀಪಿ ಉದುತ್ತಾ ಮುಂದೆ ಸಾಗಿದ. ಏನೂ ತಿಳಿಯದಾದ ಡಾ|| ವಿನಯ ಅಘೋರಿಯ ಕಡೆಗೆ ಮುಖಮಾಡಿದ. ಅಘೋರಿಯ ಸ್ಥಿತಿ ಯಥಾಪ್ರಕಾರವಿತ್ತು.
***
ಖೈದಿಯಾಗಿರುವ ವಿನಯ ಮೂಲತಃ ಡಾಕ್ಟರ್ ಉದ್ಯೋಗಿ. ತನ್ನದೇ ಬುದ್ಧಿಮತ್ತೆಯಿಂದ ಮಾರಕ ರೋಗಗಳಿಗೆ ಹೊಸ ಔಷಧಿ, ಸರಳವಾಗಿರುವಂಥದ್ದು, ಕಂಡುಹಿಡಿಯುವುದರಲ್ಲಿ ಕುತೂಹಲಿಯಾಗಿದ್ದವನು. ತಾನು ಕಂಡುಹಿಡಿದಿದ್ದ ಸಿಲ್ವರ್ ನ್ಯಾನೊ ಪಾರ್ಟಿಕಲ್ಸ್ ಹೊಂದಿದ್ದ ಅದೊಂಥರ ಸಸ್ಯರಸಕ್ಕೆ ಆಹಾರವಿಷದಿಂದ ಉಂಟಾದ ತೊಂದರೆಯನ್ನು ನಿವಾರಿಸುವ ಗುಣವಿದೆ ಎಂದು ತೋರಿಸಲೋಸುಗ ಕಾಲೇಜಿನ ಬಡ ವಿದ್ಯಾರ್ಥಿಯೊಬ್ಬನ ಮೇಲೆ ಹಣದ ಆಸೆ ತೋರಿಸಿ ಪ್ರಯೋಗಿಸಿದ್ದ. ವಿದ್ಯಾರ್ಥಿ ಮೂರೇ ದಿನಕ್ಕೆ ಅತಿವಾಂತಿಯಿಂದ ಅಸುನೀಗಿದ್ದ. ಆರೋಪಹೊತ್ತ ಡಾ|| ವಿನಯ, ವಾದ-ವಿವಾದಗಳನ್ನು ಎದುರಿಸಿ ಅಂಡಮಾನ್ ಜೈಲಿನ ಈ ರೂಮಿನೊಳಕ್ಕೆ ಖಾಯಂ ಖೈದಿಯಾಗಿ ತಳ್ಳಲ್ಪಟ್ಟಿದ್ದ. ಇನ್ನು ಅಘೋರಿಯದ್ದು ಕೂಗಳತೆಯಲ್ಲಿ ಸಿಕ್ಕಿಹಾಕಿಕೊಂಡ ಅಪರಾಧ. ಗಂಗಾಘಾಟ್ನ ಸಮೀಪದಲ್ಲಿ ನಡೆದ ಒಂದು ಕುಂಭಮೇಳದಲ್ಲಿ ರೂಢಿಗತದಂತೆ ಹಿಂದು ಭಕ್ತರು, ಸಾಧುಗಳು, ಅಘೋರಿಗಳು ಭಾಗವಹಿಸಿದ್ದರು. ಚೆಲ್ಲಿದ ಕೇಸರಿ ಬಣ್ಣದಂತೆ ಗಂಗಾ ತೀರವೆಲ್ಲ ಕೇಸರಿಮಯವಾಗಿತ್ತು. ಆಪಾದಮಸ್ತಕ ಬೆತ್ತಲ ದೇಹಗಳಾದ ನಾಗಾಸಾಧುಗಳು ಜಾಸ್ತಿಯಾಗೇ ಇದ್ದರು. ಅದ್ಯಾವ ಅಚಾತುರ್ಯದಿಂದಲೋ ಏನೋ ಕುಂಭಮೇಳ ದರ್ಶಿಸಲು ಹೋಗಿದ್ದ ಅಬಕಾರಿ ಇಲಾಖೆಯ ಅಧಿಕಾರಿಯೊಬ್ಬ ಕೊಲೆಯಾದ ಸುದ್ದಿ ಪೊಲೀಸರ ಮಧ್ಯೆ ಹರಡಿತು. ಕಾರ್ಯಪ್ರವೃತ್ತರಾದ ಪೊಲೀಸರು ಶೋಧಿಸಲೋಸುಗ ಹರಕುಬರುಕಾಗಿ ಉಳಿದಿದ್ದ ಸುಟ್ಟ ಕೈ ಮತ್ತು ಎರಡು ಕಾಲುಗಳು ಷಟ್ಸ್ಥಲ ರಂಗವಲ್ಲಿಯ ಸಣ್ಣ ಚಿತಾಗಾರದ ಮಗ್ಗುಲಲ್ಲಿ ಖಾಲಿಗೊಂಡ ಮಣ್ಣಿನ ಮಡಿಕೆಯ ಮೇಲೆ ಕಪ್ಪನೆ ಬಟ್ಟೆ ಹೊದಿಸಿ ಮೇಲುಗಡೆ ಹಸಿಯಾಗಿದ್ದ ತಲೆಬುರುಡೆ ಸ್ಥಾಪಿಸಿ ಹರಹರ ಮಹಾದೇವ್ ಎಂದು ಘೋಷಿಸುತ್ತಾ ಬಾಟಲಿಯಲ್ಲಿನ ಹೆಂಡವನ್ನು ಅಭಿಷೇಕಿಸುತ್ತಿದ್ದ ಬೋಲೆನಾಥ ಅಘೋರಿಯ ಅನತಿಯಲ್ಲಿ ದೊರಕಿದವು. ಪೊಲೀಸರು ಕಪಾಲವನ್ನು ಜಪ್ತಿಮಾಡಿ ವಿಧಿವಿಜ್ಞಾನ ಇಲಾಖೆಗೆ ಕಳುಹಿಸಿದರು. ಅವರ ಶಿಫಾರಸ್ಸಿನಂತೆ ಅದು ಕೊಲೆಯಾಗಿದ್ದ ಅಧಿಕಾರಿಯ ದೇಹಕ್ಕೆ ಹೊಂದಿಕೆಯಾಗುತ್ತಿತ್ತು. ಅಘೋರಿ ಬೋಲೆನಾಥ ಸಮುದ್ರದ ಮಧ್ಯೆ ತಲೆಎತ್ತಿದ್ದ ದೈತ್ಯ ಅಂಡಮಾನ್ ಜೈಲಿನಲ್ಲಿ ವಿನಯನ ಪಕ್ಕಕ್ಕೆ ಬಂದು ತಳ ಊರಿದ. ಹೀಗೆ ಜೈಲಿನ ಗೊಮ್ಮಟ ಪಂಜರದಲ್ಲಿ ಕೂಡಿಟ್ಟ ಒಂದೊಂದು ಬಿಳಿಹಕ್ಕಿಯದ್ದು ಒಂದೊಂದು ಕಥೆ. ಬಿಡಿಸುತ್ತಾ ಹೋದರೆ ದೊಡ್ಡ ದೊಡ್ಡ ಸಿಕ್ಕು. ಆದರೆ ಉಳಿದ ಬಿಳಿಹಕ್ಕಿಗಳಂತಲ್ಲದಿದ್ದ ಅಘೋರಿಯ ಬಲಿತ ಜೀವನ ತೂರಿಹೋಗಿ, ಬಂಧನ ಇಲ್ಲವಾಗಿ ಕಟ್ಟಳೆ ಕಟ್ಟಪ್ಪಣೆಗಳ ಮೀರಿ `ಚೋಡೊ ತುಮಾರಿ……..ಯಂಥವುಗಳಿಗೆ ಕಿವುಡಾಗಿತ್ತು. ತನ್ನ ಒಳಗಿನ ತಾನು ನಂಬಿದ್ದ ನಂಬುಗೆಗಳಿಗೆ ಗಟ್ಟಿಬೇರಾಗಿತ್ತು. ಕಪ್ಪನೆಯ ಬಾಗಿಲಿನ ಕಬ್ಬಿಣ ಗೀಳುಗಳಿಗೆ, ದಿಮ್ಮನೆ ಸೆಟೆದು ಗಟ್ಟಿಯಾಗಿ ನಿಂತ ಸುತ್ತಣ ಚೌಕಟ್ಟಿನ ಕಲ್ಲಿನ ಗೋಡೆಗಳಿಗೆ, ಟಕ್ ಟಕ್ ಎಂಬ ಬೂಟಿನ ಶಬ್ದಗಳಿಗೆ ಕೊನೆಗೆ ಇಗರ್ಜಿಯ ಡಣ್ ಡಣ್ ಶಬ್ದಕ್ಕೆ ಬೆನ್ನು ತೋರಿಸಬೇಕು, ಬೆನ್ನು ಬಲಿಯಬೇಕು, ಅದೇನೋ ಬೇಕು ಬೇಕಾಗಿತ್ತು. ಸೆಲ್ಫ್-ಹಿಪ್ನಾಟಿಸಂನಂತೆ ತೋರುತ್ತಿದ್ದ ಆತನ ಗುರು ಬಬಲಾದಿ ಅಘೋರಿ ತೊಂಬತ್ತೊಂದು ದಿನಗಳ ನಗ್ನ ಭಾವಭಂಗಿಯಲ್ಲಿ ತೋರಿಸಿಕೊಟ್ಟಿದ್ದ ಮನೋನಿಗ್ರಹದಂತಹ ಯೋಗದ ದಿನಚರಿಯಲ್ಲಿ ಮುಚ್ಚಿದ ಕಣ್ಣುಗಳ ಹಿಂದೆ ಎವೆಯಿಕ್ಕದೇ ನುಗ್ಗಿಬರುತ್ತಿದ್ದ ನಿರಂತರ ಬಿಡುಗಡೆಯ ಹಕ್ಕಿಯ ರೆಕ್ಕೆಗಳು ಅದು.
***
ಇತ್ತೀಚಿಗೆ ಅಘೋರಿಯ ಬೆನ್ನು ಮೇಲೆ ಹೊದ್ದಿದ್ದ ಕಾವಿ ಶಾಲಿನ ಮೈದಾನಕ್ಕೆ ಕೊಂಚ ಏರುಪೇರು ಉಂಟಾಗಿದ್ದು, ಕುಳಿತು ಕೈತೋಟದಲ್ಲಿ ಬದುವು ಮಾಡುವ ಸಮಯದಲ್ಲಿ ಉಬ್ಬಿದಂತೆ ಕೊರಕು ಬರಕು ಕಾಣುತ್ತಿದ್ದುದು, ಸೂಕ್ಷ್ಮಕಣ್ಣುಗಳಿಗೆ ಏನದು? ಎಂದು ಒಳಗೊಳಗೆ ಕೇಳಿಕೊಳ್ಳುವಂತೆ, ಇದೆ ಕೊನೆ ಎಂದು ಆಸೆಯ ಸೆಲೆಬತ್ತಿದ ಕಣ್ಣುಗಳಿಗೆ ಅದೇನೋ ರೋಗ ತಗಲಿ ಹೆಂಗಾಗಿದೆ ನೋಡು ಬೆನ್ನು ಎಂಬಂತೆ ಅಸಹ್ಯಕರ ಭಾವ ಮೂಡಿಸುವ ಬಿಂಬಗಳಂತೆ ತೋರುತ್ತಿದೆ. ಒಟ್ಟಿನಲ್ಲಿ ಯಾರೂ ಕೂಡಾ ಉಂಟಾಗುತ್ತಿದ್ದ ಬೆಳವಣಿಗೆಯನ್ನು ಅಘೋರಿಯಲ್ಲಿ ಪ್ರಶ್ನಿಸಿದಷ್ಟು ದೂರವಿರುತ್ತಿದ್ದರು. ಹಾಗೆ ಕೆಲವೊಂದಿಷ್ಟು ಬಿಳಿಹಕ್ಕಿಗಳು ದೇಕ್ತೆ ಜಾ ಅಭೀ ಥೋಡಿ ದಿನೋ ಮೆ ಉಸ್ಕೋ ಭೀ ಚರ್ಚ್ ಕಿ ಘಂಟಿ ಪಿತ್ತ್ ತಪ್ತಾ ಪಾಯೇಗಿ ಮಾತುಗಳು ಸೇರಿರುತ್ತಿದ್ದವು. ಆದರೆ ಇಗರ್ಜಿಯ ಅದೆಷ್ಟು ಸಂಜೆಯ ಗಂಟೆಯ ಸದ್ದುಗಳನ್ನು ಕೇಳಿಸಿಕೊಂಡಿದ್ದರು ಅಘೋರಿಯ ಕಣ್ಣುಗಳಲ್ಲಿನ ಬದುಕಿನ ಪಸೆ ಬಸಿದಿರಲಿಲ್ಲ. ಅದೆಷ್ಟು ಸಾರಿ ಸೂರ್ಯ ಹುಟ್ಟಿ ಸತ್ತರೂ ಜೈಲರ್ನ ಕೋಣೆಯ ಕ್ಯಾಲೆಂಡರ್ಗಳು ಬದಲಾದರೂ, ಡಿ-ವಾರ್ಡಿನ ಅಪಾಯಕಾರಿಗಳ ಪಟ್ಟಿಯಲ್ಲಿ ಸಿಕ್ಕಿಕೊಂಡು ರೌರವ ಕತ್ತಲು, ಮೌನದಲ್ಲಿ ಕೊರಗಿ, ಕರಗಿ ಒಂದು ದಿನ ಇಗರ್ಜಿಯ ಘಂಟೆ ಸದ್ದಿಗೆ ಹಿಂದೂ ಮಹಾಸಾಗರದ ನೀರಿನಲ್ಲಿ ದುಡುಂ ದುಡುಂ ಎಂದು ಮುಳುಗುತ್ತಿದ್ದ ಬಿಳಿಯ ಸಾವಿರ ಸಾವಿರ ಹಕ್ಕಿಗಳಿಗೆ ರೆಕ್ಕೆಗಳಿವು ಎಂದು ಒಂದು ದಿನವು ಮನದಲ್ಲಿ ಮೂಡಲಿಲ್ಲ. ಮೂಡಿದ್ದು ಬರೀ ತಳದಲ್ಲಿ ಟಿಸಿಲೊಡೆದು ಬಂಧಿಯಾಗಿದ್ದ ಕೋಣೆಯ ಅಂಗಾತ ನೆಲಕ್ಕೆ ಸುತ್ತಣ ಚೌಕಟ್ಟಿನ ಗೋಡೆಗೆ ಹಬ್ಬಿದ ಗಟ್ಟಿಯಾಗಿ ಹಿಡಿದಿಟ್ಟ ಬೇರುಗಳು. ಈ ಬೇರುಗಳ ಜಾಡಿಗೆ ಸುತ್ತುವರಿದ ಸಮುದ್ರದ ಮಧ್ಯೆ ಕಬಂಧಬಾಹುವಾಗಿ ಹಿಡಿದಿಟ್ಟ ಜೈಲಿನ ದಟ್ಟ ಕಮ್ಮಟ ಮೌನ, ಕತ್ತಲೆಯ ಸೋಂಕು. ಸೋಂಕು ತಾಗಿದ ಕೆಲವೇ ದಿನಗಳಲ್ಲಿ ಬೇರುಸಮೇತ ಬಿಳಿಯಹಕ್ಕಿ ಇಗರ್ಜಿಯ ಡಣ್ ಡಣ್ ಶಬ್ದದೊಂದಿಗೆ ಹಿಂದೂ ಮಹಾಸಾಗರದಲ್ಲಿ ದುಡುಂ ದುಡುಂ.
ಇತ್ತ ಇಗರ್ಜಿಯ ಗಂಟೆ ಬಾರಿಸಿದ ಪೀಟರ್ನ ಕೈಗೆ, ತಲೆಗೆ ಲೆಕ್ಕ ಸಿಗುತ್ತಿಲ್ಲ. ದಿನದ ಕೆಲಸ ಮುಗಿಸಿ ಊಟವಾದ ಬಳಿಕ ಡಾ|| ವಿನಯ ಪುಸ್ತಕದಲ್ಲಿ ಮುಳುಗಿದ್ದ ಅಘೋರಿಯ ಕಡೆ ನೋಡಿದ. ಅತ್ತ ಇನ್ನೊರ್ವ ಏಕ್ಬಾಲ್ನಿಗೆ ನೂರರ ಸೆಲೆ ಸಿಕ್ಕಿದ್ದರಿಂದ ಬಾತ್ರೂಮಿನ ಕಡೆ ಹೋಗಿದ್ದ. ವಿನಯ ಅಘೋರಿಯ ಪುಸ್ತಕದಲ್ಲಿ ಇಣುಕಿದ. ಸ್ವಾಮಿ ಜಗದಾತ್ಮಾನಂದರು ಬರೆದಿದ್ದ `ಬಿತ್ತಿದಂತೆ ಬೆಳೆ’ಯ ಸಮಗ್ರ ಅಧ್ಯಾಯದಲ್ಲಿ ಮಹಾನ್ ಮಾನವ ಎಡ್ಗರ್ ಕೇಸಿಯ ಅದ್ಭುತ ಘಟನಾವಳಿಗಳು ಕಾಣಿಸಿದವು. ಮನಸ್ಸು ಹೊರಳಿಸಿದ ವಿನಯ ಅಲ್ಲ, ದಿನಾಲು ಅದೇನು ಬೆಳಗ್ಗೆ ರಾತ್ರಿ ಯೋಗ ಮಾಡ್ತೀಯಲ್ಲ. ಇಂತಹ ಜೈಲಿನಲ್ಲಿ ಅದೆಲ್ಲ ಬೇಕಾ? ಪುಸ್ತಕದಿಂದ ಮುಖ ಆಚೆ ತೆಗೆದ ಅಘೋರಿ, ನೋಡಪ್ಪ, ನಾನೂ ಒಂದೀಟು ಓದಿಕೊಂಡವನೆ. ನನ್ನ ವಿದ್ಯೆ, ನನ್ನ ಗುರುವಿನ ಬಲ, ನನ್ನ ಅನುಭವ ನನ್ನ ಕಾಪಾಡ್ತಾವ. ನೋಡ್ತಿರು, ಒಂದು ದಿನ ನಿನ್ನ ಮುಖ ಮ್ಯಾಲೆತ್ತಿದಾಗ ನಾನು ಗಾಳ್ಯಾಗ ಹಾರಾಡ್ಕೋತ ಹೊಂಟಿರ್ತೀನಿ ಅಂದ.
ಹುಂ…. ಹಾಗಾದ್ರೆ ಮೊದ್ಲು ಆ ಎದುರಿಗಿರೋ ಹಜಾರದ ಗೋಡೇನ ಜಂಪ್ಮಾಡು; ಆಮೇಲೆ ಹಾರುವಂತೆ ಎಂದು ವಿನಯ ಜೋರಾಗಿ ನಕ್ಕ.
ನೋಡಪ್ಪ, ಆ ಗೋಡೆಗೇನಾದ್ರು ಜೀವವಿದ್ದಿದ್ರೆ ಅದೆಂದೋ ನನ್ನ ಗೆಳೆಯನಾಗ್ತಿತ್ತು.
ಅಂದ್ರೆ ಅದಕ್ಕೂ ಬಾಲ ಬೆಳೆಸಿಬಿಡ್ತಿದ್ರೇನೋ!
ಬಾಲ ಅದಕ್ಯಾಕಪ್ಪ, ನನಗೆ ಮೂಡಿದ್ರೆ ಆಯಿತು. ಬರೀ ಜಂಪಿಂಗ್!
ಹೋ… ಹೋ… ಪರಮಹಂಸರು ಜೋರಾಗೆ ಹಿಡ್ಕೊಂಡಿದ್ದಾರೆ ಅಂದಂಗಾಯ್ತು.
“ವಿನಯ ನಿನಗೆ ಗೊತ್ತಾ, ಪ್ರಕೃತಿ ಮಾನವನ ವಿಕಾಸದಲ್ಲಿ ತರುವ ಬದಲಾವಣೆ ಒಂದಾದ್ರೆ, ಸ್ವತಃ ಮಾನವನೇ ತನ್ನ ಮುಂದಿನ ವಿಕಸನವನ್ನು ನಿರ್ಧರಿಸಬಲ್ಲಷ್ಟು ಶಕ್ತಿಶಾಲಿ. ಆದರೆ ಅದು ಬೇಡುವ ಬೆಲೆ ಮಾತ್ರ ದೊಡ್ಡದು. ಹೊಸತು ತೆರಲು ಗಟ್ಟಿ ಮನಸ್ಸು ರೂಪುಗೊಳ್ಳಬೇಕು.
ಹಾಗಾದ್ರೆ ಡಾರ್ವಿನ್ನ ಎವಲುಷನ್ ಥಿಯರಿ ಸುಳ್ಳಾ?
ನೋಡಪ್ಪ, ಮುಖದ ಒಂದು ಮಗ್ಗುಲಕ್ಕೆ ನಿಂತು ನೋಡಿ ಒಂದೇ ಕಿವಿ ಇದೆ ಅಂತ ನಿರ್ಧರಿಸಿದರೆ ಹೇಂಗೆ? ಆ ಕಡೆಗೂ ಒಂದು ಕಿವಿ ಇರುತ್ತದೆ; ಬರೀ ಕಾಣಿಸ್ತಾ ಇಲ್ಲ ಅಷ್ಟೆ.
…. ಹುಂ, ಬಿಡು….. ಬಿಡು ಹೌದು, ಅದೇನು ಇತ್ತಿಚೆಗೆ ಬೆನ್ನು ಒಂದು ಥರಾ ಕಾಣಿಸುತ್ತಾ ಇದೆ? ವಿನಯ ಮಾತು ತಿರುಗಿಸಿದ.
ಅಘೋರಿ ಒಂದು ಉಸಿರೆಳೆದುಕೊಂಡು ನಸುನಕ್ಕು ಅವನನ್ನು ನೋಡಿದ. ಒಮ್ಮೆಲೆ ಮುಖ್ಯದ್ವಾರದ ತುದಿಯ ಘಂಟೆ ಡಣ್ ಅಂತ ಬಾರಿಸಿತು. ಕೇಳಿಸಿಕೊಂಡ ವಿನಯನ ಮುಖದಲ್ಲಿ ಗೆರೆಗಳು ಮೂಡಿದವು. ಕಿವಿಕೊಂಚ ಆ ಕಡೆ ಹೊರಳಿತು. ಡಿ-ಬ್ಲಾಕ್ನಿಂದ ನಾಲ್ಕು ಪೇದೆಗಳು ರಪ್ ರಪ್ ಎಂದು ಬೂಟಿನ ಶಬ್ದ ಮಾಡುತ್ತಾ ಹಜಾರಕ್ಕೆ ಬಂದದ್ದು ಕೇಳಿಸಿತು. ಕಾಣಿಸಬೇಕೆನ್ನುವಷ್ಟರಲ್ಲೇ ವಿನಯ ನೋಡದೆ ಹಾಸಿಗೆಯ ಮೇಲೆ ಬೋರಲಾಗಿ ಮಲಗಿ ಕಣ್ಣುಮುಚ್ಚಿದಂತೆ ಮಾಡಿದ. ಇತ್ತ ಅಘೋರಿ ಬರಸೆಳೆದುಕೊಂಡು ತಂದ ಆ ಮೃತ ದೇಹವನ್ನು ಕಂಡು ಮನಸ್ಸಿನಲ್ಲೆ ‘ಮಹಾದೇವ ಮಹಾದೇವ’ ಎಂದು ಎರಡು ಸಾರಿ ಜಪಿಸಿ ಕಣ್ಣು ಮುಚ್ಚಿದ. ಒಡನೆಯೇ ಹಕ್ಕಿಯೊಂದು ಜೋರಾಗಿ ರೆಕ್ಕೆ ಬಡಿಯುತ್ತಾ ಬಾನೆತ್ತರಕ್ಕೆ ತೂರಿ ಹೋದಂತೆ ಭಾಸವಾಯಿತು. ಬೆನ್ನು ಸವರಿಕೊಂಡ. ಪುಕ್ಕಗಳು ಜಾಸ್ತಿಯಾಗೆ ಬೆಳೆದಿದ್ದವು.
***
ಕಲ್ಲೆಸೆದಾಗ ತಮ್ಮ ವ್ಯಾಸವನ್ನು ದೊಡ್ಡದು ಮಾಡಿಕೊಳ್ಳುವ ನೀರಿನ ತರಂಗಗಳಂತೆ ಅಘೋರಿಯ ಬೆನ್ನು ದಿನೇ ದಿನೇ ಬಿಡಿಸುತ್ತಾ ಹೋಯಿತು. ಮೇಲೆ ಹೊದ್ದ ಶಾಲು ಅದರ ಗುಟ್ಟನ್ನು ಮಾತ್ರ ಬಿಟ್ಟುಕೊಡುತ್ತಿರಲಿಲ್ಲ. ಉಳಿದವರೂ ಅಷ್ಟೆ, ತಮಗೆಲ್ಲಿಯ ಆ ಗೋಜು ಎಂಬಂತೆ ದೂರದಲ್ಲೆ ಕಣ್ಣುಗಳಾಗಿದ್ದರು. ಅದಾಗಲೇ ಅಂಡಮಾನ್ ಜೈಲು ಹೊಕ್ಕು ಎರಡು ವರ್ಷಗಳೇ ಕಳೆದುಹೋಗಿದ್ದವು. ನಾಟಿ ಮಾಡಿಸಿದ್ದ ಕೈತೋಟದ ಹೂವುಗಳು ಬಾಡಿ ಅರಳಿ ಬಾಡಿ ಅರಳುವಂತೆ ಮಾಡಿದ್ದರು. ಇಗರ್ಜಿಯ ಗಂಟೆ ಶಬ್ದ ಲೆಕ್ಕವಿಲ್ಲದಷ್ಟು ಸಾರಿ ಬರೆದುಕೊಂಡಿದ್ದರು. ಅಘೋರಿಯ ಕಣ್ಣುಗಳಲ್ಲಿನ ಆ ಉಜ್ವಲಕಾಂತಿ ಹಾಗೇ ಇತ್ತು; ಅಲ್ಲಿರುವುದು ನಮ್ಮನೆ ಇಲ್ಲಿ ಬಂದೆ ಸುಮ್ಮನೆ ಎಂಬಂಥ ಭಾವ. ದಿನಗಳು ಉರುಳಿದ ಹಾಗೆ ಮೂಡಿದ ರೆಕ್ಕೆಗಳು ಗರಿಬಿಚ್ಚಲಿಕ್ಕೆ ಹಪಾಪಿಸಹತ್ತಿದವು. ಬಿದರಿನ ತಟ್ಟು ಬಿಡಿಸಿಕೊಂಡಂತೆ ಬೆನ್ನೆಲ್ಲ ಅಗಲವಾಗಿ ತೋರಹತ್ತಿತ್ತು. ಇತ್ತ ಅದ್ಯಾವುದೋ ಬೆನ್ನುಗೂನು ರೋಗದಂತಹ ಮಾರಿ ಅಂಟಿರಬಹುದೆಂದು ಸಹ ಬಿಳಿಹಕ್ಕಿಗಳೆಲ್ಲ್ಲ ಅಸಹ್ಯಪಟ್ಟುಕೊಳ್ಳಹತ್ತಿದವು. ವಿಷಯ ತಿಳಿದ ಪೇದೆಗಳು ಜೈಲರ್ನಿಗೆ ವಿಷಯ ಮುಟ್ಟಿಸಿ ಕಟ್ಟಕಡೆಯ ಇ-ಬ್ಲಾಕ್ನ ರೋಗಿಗಳ ಕೋಣೆಗಳಿಗೆ ವರ್ಗಾವಣೆಗೆ ಅಪ್ಪಣೆ ಪಡೆದು ತಂದರು.
ಯಥಾ ಪ್ರಕಾರ ಕೈತೋಟದಲ್ಲಿ ಕುರ್ಪಿಯಿಂದ ಕೆಲಸ ಮಾಡುತ್ತಾ ಕುಳಿತಿದ್ದ ಅಘೋರಿಯ ಎರಡೂ ಕೈಮಣಿಗಳನ್ನು ಬಿಗಿಯಾಗಿ ಹಿಡಿದು ಉಠೋ…. ಉಠೋ…. ಎಂದು ಎಬ್ಬಿಸಿ ಪೇದೆಯೊಬ್ಬ ಹೊದ್ದಿದ್ದ ಶಾಲು ತೆಗೆಯಲು ಮುಂದೆ ಧಾವಿಸಿದ. ಅಘೋರಿ ಅನುವು ಕೊಡಲಿಲ್ಲ.
ಎಲ್ಲ ಬಿಳಿಯಹಕ್ಕಿಗಳು ಅವನನ್ನು ನೋಡುತ್ತಾ ಎದ್ದು ನಿಂತರು. ಹಿಡಿದ ಬಿಗಿಯನ್ನು ಬಿಡಿಸಿದ ಅಘೋರಿಯು ನಾಲ್ಕು ಹೆಜ್ಜೆ ಹಿಂದೆ ಸರಿದು ಹೊದ್ದ ಶಾಲನ್ನು ಬಿಚ್ಚಿದ. ಹಾಲು ನೊರೆಯ ಬಿಳುಪಿನ ಚುಮುಚುಮು ಗರಿಗಳ ಎರಡು ದೈತ್ಯ ರೆಕ್ಕೆಗಳು ಆಚೆಗೆ ಬಂದವು. ನೋಡಿದ ಖೈದಿ, ಪೇದೆಗಳೆಲ್ಲ ದಂಗಾಗಿ ನಿಂತರು. ಜೋರಾಗಿ ಹರ ಹರ ಮಹಾದೇವ ಎಂದು ಉಸಿರು ಎಳೆದುಕೊಂಡ ಅಘೋರಿ ಬೆನ್ನಿಗೆ ಅಂಟಿದ್ದ ರೆಕ್ಕೆಗಳನ್ನು ಜೋರಾಗಿ ಬೀಸಿದ. ನೆಲಕ್ಕಿಕ್ಕಿದ್ದ ಕಾಲುಗಳು ಗಾಳಿಯಲ್ಲಿ ಚಿಮ್ಮಿದವು, ಸಹ ಬಿಳಿಯಹಕ್ಕಿಗಳೆಲ್ಲ ಜೋರಾಗಿ ಹೋ… ಎಂದು ಕೂಗುತ್ತಾ ಹಿಡಿಯಲು ಬಂದವು. ಆದರೆ ಆದಾಗಲೇ ಅವರ ಬೇರುಗಳು ಆ ಮಣ್ಣಿನಲ್ಲಿ ಹೂತು ಬಹಳ ದಿನಗಳಾಗಿದ್ದರಿಂದ ಕಾಲುಗಳು ಕದಲಲಿಲ್ಲ. ಮೇಲೆ ಮೇಲೆ ಹಾರಿದ ಅಘೋರಿಯ ರೆಕ್ಕೆಗಳು ಮುಖ್ಯದ್ವಾರದ ಘಂಟೆಗೆ ಬಡಿದವು. ಡಣ್…. ಡಣ್…. ಡಣ್…..