“ಅಮ್ಮಾ…!’’ ಪಿಂಕಿ ಕಿರುಚಿದಾಗಲೇ ಅವಳ ಅಮ್ಮನಿಗೆ ಗಾಬರಿಯಾಗಿತ್ತು. ಅಡುಗೆಮನೆಯಿಂದ ಮಗಳು ಕುಳಿತು ಹೋಂವರ್ಕ್ ಮಾಡುತ್ತಿದ್ದ ಕೋಣೆಗೆ ಓಡಿದರು. ಆ ಕೋಣೆಯಲ್ಲಿ ಅವಳು ಜಿರಳೆಯನ್ನು ಏನಾದರೂ ನೋಡಿ ಕೂಗಿರಬಹುದು ಎಂಬ ಅನುಮಾನ. ಅದನ್ನು ಕಂಡರೆ ತನಗೆ ಪಿಂಕಿಗಿಂತ ಹೆಚ್ಚು ಭಯ; ಮನೆಯಲ್ಲಿ ಬೇರೆ ಇನ್ನು ಯಾರೂ ಇಲ್ಲ. ಪಿಂಕಿಯನ್ನು ಹೊರಗೆಳೆದು ಆ ಕೋಣೆಯ ಬಾಗಿಲು ಹಾಕಿಬಿಡಬೇಕು. ಅನಂತರ ಆ ಬಾಗಿಲ ಕೆಳಗಿನ ಸಂದಿಯಿಂದ ಜಿರಳೆ ಏನಾದರೂ ಹೊರಗೆ ಬಂದುಬಿಡುತ್ತದೆಯೇ ಎಂದು ನೋಡುತ್ತ ಕುಳಿತಿರಬೇಕು. ಪಿಂಕಿಯ ತಂದೆ ಮನೆಗೆ ಬರುವವರೆಗೆ ಹಾಗೆ ಕಾಯುವುದೊಂದೇ ಕೆಲಸ, ಇನ್ನು ಏನೂ ಮಾಡಲಾಗುವುದಿಲ್ಲ. ಇಷ್ಟೆಲ್ಲ ವಿಚಾರಗಳು ಅಡುಗೆಮನೆಯಿಂದ ಮಗಳು ಕುಳಿತಿದ್ದ ಕೋಣೆಯವರೆಗೆ ಓಡುವಷ್ಟರಲ್ಲಿ ಅವರ ಮನೋಭೂಮಿಯಲ್ಲಿ ನಾಗಾಲೋಟದಿಂದ ಅವರಿಗಿಂತ ಮುಂದೆ ಓಡಿದ್ದವು. ಎಷ್ಟಾದರೂ ಸ್ವರಕ್ಷಣೆಗೆ ಆದ್ಯತೆ ಅಲ್ಲವೆ!
ಕೋಣೆಯಲ್ಲಿ ತನ್ನ ಕಿವಿಗಳನ್ನು ತನ್ನ ಕೈಗಳಿಂದ ಒತ್ತಿ ಕುಳಿತಿದ್ದ ಮಗಳನ್ನು ಕಂಡು ಜಿರಳೆ ಇರುವುದು ಅವರಿಗೆ ಗ್ಯಾರಂಟಿಯಾಗಿತ್ತು.
“ಎಲ್ಲೇ ಜಿರಳೆ…?’’ ಆತಂಕದಿಂದ ಪಿಂಕಿಯನ್ನು ಕೇಳಿದರು.
ಅವಳು ತನ್ನ ಕೈಗಳನ್ನು ಕೆಳಗಿಳಿಸಿ, ಆಶ್ಚರ್ಯದಿಂದ, “ಜಿರಳೆನಾ…!? ಎಲ್ಲಿ…?’’ ಎಂದು ತಕ್ಷಣ ಕುರ್ಚಿಯಿಂದ ಎದ್ದಳು.
“ಅಲ್ಲಾ ಕಣೆ, ಅಷ್ಟು ಜೋರಾಗಿ ಕಿರುಚಿದೆಯಲ್ಲ, ಜಿರಳೆ ಇಲ್ಲವೇನೇ…?”
“ಜಿರಳೆ ಇದ್ದಿದ್ದರೆ ಚೆನ್ನಾಗಿತ್ತು. ಅಪ್ಪನ್ನೋ ಪಕ್ಕದ ಮನೆಯ ರಾಹುಲ್‌ನೋ ಕರೆದಿದ್ದರೆ ಅದಕ್ಕೆ ಗತಿ ಕಾಣಿಸಿರೋರು…!’’
“ಮತ್ತೆ ಇನ್ನು ಯಾಕೆ ಹಾಗೆ ಜೋರಾಗಿ ಕಿರುಚಿದೆ…!?’’
“ಈ ಹೋಂವರ್ಕ್. ಹದಿನೈಯ್ದು ಪುಟಗಳು ಬರಿಬೇಕು; ಪ್ರತಿದಿನ ಇಷ್ಟು ಹೋಂವರ್ಕ್ ಮಾಡ್ತಾ ಕೂತುಕೊಂಡರೆ ಟೆಸ್ಟ್ಗೆ ಓದುವುದು ಯಾವಾಗ?’’
“ನಿನಗೆ ಚೆನ್ನಾಗಿ ಅರ್ಥವಾಗಲಿ ಅಂತ ಹೋಂವರ್ಕ್ ಕೊಟ್ಟಿರುತ್ತಾರೆ. ಅದನ್ನೆಲ್ಲ ಗಮನವಿಟ್ಟು ಮಾಡಿದರೆ ಟೆಸ್ಟಿಗೆ ಅನುಕೂಲವಾಗುತ್ತೆ ಅಲ್ವಾ?’’ ಮಗಳನ್ನು ರಮಿಸಲು ನೋಡಿದರು, ಅವಳ ಅಮ್ಮ.
“ಹೋಂವರ್ಕೇ ಬೇರೆ, ಟೆಸ್ಟಿಗೆ ಓದಿಕೊಳ್ಳುವುದೇ ಬೇರೆ” ಪಿಂಕಿ ತೀರ್ಪು ನೀಡಿಬಿಟ್ಟಳು. ಅದಕ್ಕೆ ಪ್ರತಿಯಾಗಿ ಹೇಳಲು ಅಮ್ಮನಿಗೆ ಏನು ಹೊಳೆಯಲಿಲ್ಲ.
ಪಿಂಕಿಯೇ ತನ್ನ ಸಮಸ್ಯೆಗೆ ತಾನೇ ಪರಿಹಾರವನ್ನು ಹೇಳಿದಳು. “ಅಮ್ಮಾ… ನಾಳೆಯೇ ನೀನು ಸ್ಕೂಲಿಗೆ ಬಂದು, ಪ್ರಿನ್ಸಿಪಾಲ್ ಹತ್ತಿರ ಮಾತಾಡು. ಇಷ್ಟು ಹೋಂವರ್ಕ್ ಕೊಡೋ ನಮ್ಮ ಕ್ಲಾಸ್ ಟೀಚರ್‌ನ ಬದಲಾಯಿಸಲು ಹೇಳಿಬಿಡು. ಎಷ್ಟೊಂದು ಟಾರ್ಚರ್ ಕೊಡ್ತಾರೆ…’’
ಪುಟ್ಟದಾದ ಕ್ರೋಧ ಪಿಂಕಿಯ ಮುಖದಲ್ಲಿ ಕಾಣುತ್ತಿತ್ತು. ಇಂಥ ನಡವಳಿಕೆಯನ್ನು ತನ್ನ ಮಗಳು ಪಿಂಕಿಯಲ್ಲಿ ನೋಡಲು ಅವಳ ಅಮ್ಮನಿಗೆ ಸುತರಾಂ ಇಷ್ಟವಿರಲಿಲ್ಲ. ಮಗಳ ತಲೆ ಸವರಿದರು. ಪಿಂಕಿಯು, ‘ಅಮ್ಮ ತನ್ನ ಶಾಲೆಗೆ ಬರಲು ಒಪ್ಪಿದ್ದಾಳೆಯೇ?’ ಎಂದು ಅವರತ್ತ ನೋಡಿದಳು. ಅಮ್ಮ ಇನ್ನೇನೋ ಹೇಳುತ್ತಾರೆ ಎಂದು ಪಿಂಕಿ ಗೊತ್ತಾಯಿತು. ‘ಏನು…?’ ಎನ್ನುವಂತೆ ಕಣ್ಣುಗಳನ್ನು ಕಿರಿದಾಗಿಸಿ, ತಲೆಯನ್ನು ಮೇಲೆ ಕೆಳಗೆ ಆಡಿಸಿದಳು.
“ನಿನಗೆ ಕ್ಲಾಸ್ ಟೀಚರ್ ಬದಲಾಯಿಸುವುದು ಮುಖ್ಯವೋ, ಕಡಮೆ ಹೋಂವರ್ಕ್ ಮುಖ್ಯವೋ?’’ ಅಮ್ಮನ ಮಾತಿನಲ್ಲಿ ದೃಢತೆ ಇತ್ತು.
“ಎರಡೂ ಮುಖ್ಯ. ಹೊಸ ಕ್ಲಾಸ್ ಟೀಚರ್ ಬಂದರೆ ಕಡಮೆ ಹೋಂವರ್ಕ್ ಕೊಡ್ತಾರಲ್ವಾ?’’
“ಗೊತ್ತಿಲ್ಲ, ಅವರು ಇವರಿಗಿಂತ ಹೆಚ್ಚು ಹೋಂವರ್ಕ್ ಕೊಟ್ಟರೆ?’’
“ಆಗ ನೀನು ಮತ್ತೆ ಬಂದು ಹೇಳಬೇಕಾಗುತ್ತೆ!’’
“ಅದು ಸರಿಯಾಗುವುದಿಲ್ಲ. ನೀನೇ ಯೋಚನೆ ಮಾಡು, ಪ್ರತಿಸಲಿ ಅಮ್ಮ ಬರುವುದಿಲ್ಲ?’’
“ಹಾಗಾದರೆ ಅಷ್ಟು ಪುಟಗಳ ಹೋಂವರ್ಕೇ ಗತಿನಾ?’’
“ಇಲ್ಲ… ನಿನ್ನ ಸಮಸ್ಯೆನ ನೀನೇ ಪರಿಹರಿಸಿಕೊಳ್ಳಬೇಕು.’’
ಪಿಂಕಿಯ ತಾಳ್ಮೆ ಕಡಮೆ ಆಗುತ್ತಾ ಇತ್ತು. ಅಮ್ಮನ ಚುರುಕು ಕಣ್ಣುಗಳಿಗೆ ಅದು ಬೇಗ ಗೊತ್ತಾಯಿತು. ಅವರು “ನಿನ್ನ ಸಮಸ್ಯೆನ ನೀನೇ ಪರಿಹರಿಸಿಕೊಳ್ಳುವುದನ್ನು ನಿನಗೆ ಹೇಳಿಕೊಟ್ಟಿದ್ದೇನೆ. ಜ್ಞಾಪಿಸಿಕೋ…’’ ಎಂದರು.
‘ನಿನಗೆ ಹೇಳಿಕೊಟ್ಟಿದ್ದೀನಿ, ಜ್ಞಾಪಿಸಿಕೋ’ ಎಂಬ ಹೇಳಿಕೆಯನ್ನು ಕೇಳುತ್ತಿದ್ದಂತೆಯೇ, ಕೀಲಿ ಕೊಟ್ಟ ಬೊಂಬೆಯಂತೆ, ಯಾವಾಗಲೂ ಪಿಂಕಿಯ ನಡವಳಿಕೆಯೇ ಬದಲಾಗಿಬಿಡುತ್ತಿತ್ತು. ಕೆ.ಬಿ.ಸಿ. ಪ್ರಭಾವ ಅದು.
“ಹೌದಾ…? ಒಂದು ಸುಳಿವು ಕೊಡಮ್ಮ…’’
ಅದನ್ನು ಚೆನ್ನಾಗಿ ತಿಳಿದಿದ್ದ ಪಿಂಕಿಯ ಅಮ್ಮ, “ಆಹಾ… ನಾನು ಸುಳಿವನ್ನು ಪೂರ್ತಿ ಕೊಡುವುದಕ್ಕೆ ಮೊದಲೇ, ‘ಹೇಳಬೇಡ? ನಂಗೊತ್ತು? ನಂಗೊತ್ತು?’ ಅಂತ ನನ್ನ ಬಾಯಿ ಮುಚ್ಚಿಬಿಡುತ್ತಿ?’’ ಎಂದರು.
“ಪ್ಲೀಸ್, ಚಿಕ್ಕ ಸುಳಿವು ಕೊಡಮ್ಮ…’’ ಪಿಂಕಿ ಪ್ರೀತಿಯಿಂದ ಹುಸಿಮುನಿಸು ತೋರಿದಳು.
ಅಮ್ಮ “ಸರಿ… ಏನೇ ಆದರೂ ಸ್ನೇ…’’ ಎನ್ನುವಷ್ಟರಲ್ಲಿ ಪಿಂಕಿ “ಹೇಳಬೇಡ? ಗೊತ್ತಾಯ್ತು… ‘ಏನೇ ಆದರೂ ಸ್ನೇಹಿತರನ್ನು ಬಿಟ್ಟು ಕೊಡಬೇಡ. ಯಾರನ್ನೂ ಶತ್ರುಗಳನ್ನಾಗಿ ಮಾಡಿಕೊಳ್ಳಬೇಡ…’ ತಾನೇ?’’ ಚಪ್ಪಾಳೆ ಹೊಡೆಯುತ್ತಾ ಪಿಂಕಿ ಅಮ್ಮ ಹೇಳುತ್ತಿದ್ದ ವಾಕ್ಯವನ್ನು ಪೂರ್ತಿ ಮಾಡಿದಳು.
“ಹೌದು, ನಿನ್ನ ಹೆಚ್ಚಿನ ಹೋಂವರ್ಕ್ಗೂ ಇದಕ್ಕೂ ಏನು ಸಂಬಂಧ ಯೋಚನೆ ಮಾಡು…’’ ಅಮ್ಮ ಪಿಂಕಿಯ ಅರಿವನ್ನು ಹೆಚ್ಚಿನ ಮಟ್ಟಕ್ಕೆ ಏರಿಸಲು ಪ್ರಯತ್ನಿಸಿದರು. ಪಿಂಕಿ ‘ಗೊತ್ತಿಲ್ಲ…’ ಎಂದು ತಲೆ ಆಡಿಸಿದಳು.
“ನೋಡು ನಿನ್ನ ಕ್ಲಾಸ್ ಟೀಚರ್ ಚೆನ್ನಾಗಿ ಪಾಠ ಮಾಡುತ್ತಾರೆ; ಎಲ್ಲಾ ಮಕ್ಕಳನ್ನು ಕಂಡರೆ ಅವರಿಗೆ ಬಹಳ ಇಷ್ಟ; ನೀವು ಗೊತ್ತಾಗಲಿಲ್ಲ ಎಂದರೆ ಮತ್ತೆ ತಿಳಿಸಿಕೊಡುತ್ತಾರೆ; ನೀವು ತರಗತಿಯಲ್ಲಿ ತರಲೆ ಮಾಡಿದರೆ ನಕ್ಕು ಸುಮ್ಮನಿರುತ್ತಾರೆ. ಹೌದು ತಾನೇ?’’
“ಹೌದು, ಹೆಚ್ಚು ಹೋಂವರ್ಕ್ ಕೊಡುವುದೊಂದನ್ನು ಬಿಟ್ಟರೆ ಅವರು ಬಹಳ ಒಳ್ಳೆಯವರು…’’
“ಅಂಥ ಒಳ್ಳೆಯ ಉಪಾಧ್ಯಾಯರ ಮೇಲೆ ನಾನು ಹೋಗಿ ಚಾಡಿ ಹೇಳಿದರೆ ಏನಾಗುತ್ತೆ ಗೊತ್ತಾ?’’
ಪಿಂಕಿ ಗೊತ್ತಿಲ್ಲವೆಂದು ತಲೆ ಆಡಿಸಿದಳು.
“ಅವರು ನಿಮ್ಮ ಶತ್ರುಗಳಾಗಿ ಬದಲಾಗುತ್ತಾರೆ, ಅಷ್ಟೇ.’’
ಪಿಂಕಿಗೆ ತಾನು ಇದನ್ನು ಊಹಿಸಿಯೇ ಇರಲಿಲ್ಲವಲ್ಲಾ ಎನ್ನಿಸಿತು. “ಹಾಗಾದರೆ ಏನು ಮಾಡುವುದು? ಈ ವರ್ಷವೆಲ್ಲ ಕಷ್ಟಪಡುತ್ತಾನೆ ಇರಬೇಕಾ?’’
“ಹಾಗೇನಿಲ್ಲ, ನೀವು ಐದಾರು ಜನ ನಿಮ್ಮ ತರಗತಿಯ ಹುಡುಗಿಯರು, ಹುಡುಗರು ಹೋಗಿ ಅವರಲ್ಲಿ ಪ್ರೀತಿಯಿಂದ ಕೇಳಿಕೊಳ್ಳಿ. ನಿಮಗೆ ಅಷ್ಟು ಹೋಂವರ್ಕ್ ಮಾಡಲು ಏಕೆ ಸಮಯ ಸಿಕ್ತಾ ಇಲ್ಲ ಅಂತ ಅವರಿಗೆ ಮನವರಿಕೆಯಾಗುವಂತೆ ಹೇಳಿ. ಏನಾಗುತ್ತೆ ಅಂತ ನೀವೇ ನೋಡಿ…’’ ಎಂದರು ಪಿಂಕಿಯ ಅಮ್ಮ.
“ಅವರು ಒಪ್ಪದೇ ಇದ್ದರೆ…?’’
“ಅವರು ಖಂಡಿತ ನಿಮಗೆ ಸಹಾಯ ಮಾಡುತ್ತಾರೆ. ಈ ರೀತಿ ನೀವೆಲ್ಲ ಕೇಳಿಕೊಂಡರೆ ಅವರು ನಿಮ್ಮನ್ನು ಸ್ನೇಹಿತರ ತರಾನೇ ನೋಡ್ಕೋತಾರೆ. ಆದರೆ ನಿಮ್ಮ ಪ್ರಯತ್ನ ಮಾತ್ರ ಸಂಪೂರ್ಣ ನಂಬಿಕೆಯಿಂದ ‘ಆಗೇ ಆಗುತ್ತೆ’ ಅಂದುಕೊಂಡು ಮಾಡಬೇಕು. ‘ಆಗುತ್ತೋ… ಇಲ್ಲವೋ…’ ಅಂತ ಅರೆಮನಸ್ಸಿನಿಂದ ಪ್ರಯತ್ನ ಪಡಬಾರದು. ಇದನ್ನು ಸಾಧಿಸಿದರೆ, ನಿನಗೆ ಸ್ನೇಹಿತರನ್ನು ಸಂಪಾದಿಸುವ ಕಲೆ ಗೊತ್ತಾಯ್ತು ಅಂತ ಅರ್ಥ!’’
ಪಿಂಕಿಯ ಅಮ್ಮ ಸ್ವಪ್ರಯತ್ನದ ಜೊತೆಗೆ, ಕೋಪವನ್ನು ಬಿಟ್ಟು ಸಮಧಾನದಿಂದ ಸನ್ನಿವೇಶವನ್ನು ಎದುರಿಸಿ, ಸ್ನೇಹವನ್ನು ಸಂಪಾದಿಸುವ ಉತ್ತಮ ಮಾರ್ಗವನ್ನು ಮಗಳಿಗೆ ತೋರಿಸಿಕೊಟ್ಟಿದ್ದರು. ಗಿಡವಾಗಿದ್ದನ್ನು ಬಗ್ಗಿಸುವ ಸೂಕ್ಷ÷್ಮ ಕಾರ್ಯ ಅದು. ಪ್ರೀತಿಯಿಂದ ವಿನಂತಿಸಿಕೊಳ್ಳುವ, ತನಗೆ ಬೇಕಾದುದನ್ನು ಘರ್ಷಣೆಯಿಲ್ಲದೆ ಪಡೆದುಕೊಳ್ಳುವ ನಾಯಕತ್ವದ ಅರಿವಿನ ಹಾದಿ ಅದು.
ಅಮ್ಮನ ಮಾತುಗಳನ್ನು ಕೇಳಿ ಪಿಂಕಿಗೆ ಒಳ್ಳೆಯ ಹುಮ್ಮಸ್ಸು ಬಂತು, “ಹೌದಮ್ಮಾ… ನೀನು ಹೇಳುವುದು ಸರಿಯಾಗಿದೆ, ನಮ್ಮ ಕ್ಲಾಸ್ ಟೀಚರ್ ಹತ್ತಿರ ನಾವು ಒಂದಷ್ಟು ಜನ ಹೋಗಿ ‘ಕಡಮೆ ಹೋಂವರ್ಕ್ ಕೊಡಿ’ ಅಂತ ಪ್ರೀತಿಯಿಂದ ಕೇಳಿಕೊಳ್ಳುತ್ತೇವೆ’’ ಎಂದಳು.
ಮಾರನೆಯ ದಿನ ಶಾಲೆಯಲ್ಲಿ ಮಧ್ಯಾಹ್ನದ ಊಟದ ಬಿಡುವಿನ ಸಮಯದಲ್ಲಿ ತನ್ನ ಕೆಲವು ಆಪ್ತ ಗೆಳೆಯ-ಗೆಳತಿಯರನ್ನು ಪಿಂಕಿ ಕರೆದಳು. ಅವರೊಡನೆ ಹೋಂವರ್ಕ್ ಕಡಮೆ ಮಾಡಿಸುವ ಬಗ್ಗೆ ಮಾತನಾಡಿದಳು. ಅವರಿಗೆಲ್ಲ ಹೋಂವರ್ಕ್ ಮಾಡಲು ಏಕೆ ಸಮಯ ಸಾಕಾಗುತ್ತಿಲ್ಲ ಎಂದು ವಿಚಾರಿಸಿದಳು. ಅವರು ಹೇಳಿದ್ದನ್ನೆಲ್ಲ ಒಂದು, ಎರಡು, ಮೂರು… ಎಂದು ಗುರುತು ಹಾಕಿಕೊಂಡಳು. ಅನಂತರ ತಾನು ಕ್ಲಾಸ್ ಟೀಚರ್ ಬಳಿ ಹೋಗಿ ಅವರಿಗೆ ಕಡಮೆ ಹೋಂವರ್ಕ್ ಕೊಡಲು ವಿನಂತಿಸುತ್ತೇನೆ, ನೀವೆಲ್ಲ ನನ್ನ ಜೊತೆ ಬರುತ್ತೀರಾ? ಎಂದು ಕೇಳಿದಳು. ಮೊದಲು ಅವರೆಲ್ಲ ಒಪ್ಪಲಿಲ್ಲ. ‘ಟೀಚರ್ ಬೈದರೆ ಏನು ಮಾಡುವುದು?’ ಎಂದು ಹಿಂಜರಿದರು. ಕೊನೆಗೆ ಪಿಂಕಿ ‘ನಾನೇ ಮಾತನಾಡುತ್ತೇನೆ. ನೀವೆಲ್ಲ ನನ್ನ ಜೊತೆ ಪಕ್ಕದಲ್ಲಿ ಬಂದು ನಿಂತಿರಿ, ಟೀಚರ್ ಏನಾದರೂ ಕೇಳಿದರೆ ನಾನೇ ಉತ್ತರ ಕೊಡುತ್ತೇನೆ. ನಿಮ್ಮನ್ನು ಕೇಳಿದರೆ ನಾನೇ ನಿಮ್ಮನ್ನು ಕರೆತಂದೆ ಎಂದು ಹೇಳಿಬಿಡಿ’ ಎಂದು ಪುಸಲಾಯಿಸಿದಳು. ಕೊನೆಗೆ ಮೂವರು ಹುಡುಗಿಯರು ಮತ್ತು ಮೂವರು ಹುಡುಗರು ಅವಳ ಜೊತೆ ಬರಲು ಒಪ್ಪಿದರು.
ಊಟದ ಬಿಡುವಿನ ಅನಂತರ ಕ್ಲಾಸ್ ಟೀಚರ್ ಅವರದೇ ತರಗತಿ ಇತ್ತು. ಅವರು ಬಂದು ಕುರ್ಚಿಯಲ್ಲಿ ಕೂರುತ್ತಿದ್ದಂತೆ, ಪಿಂಕಿಯ ಜೊತೆಗೆ ಮೂವರು ಹುಡುಗಿಯರು ಹಾಗೂ ಮೂವರು ಹುಡುಗರು ಅವರ ಮೇಜಿನ ಅಕ್ಕ, ಪಕ್ಕ, ಮುಂದೆ ನಿಂತುಕೊಂಡರು. ಆಕೆ ಇವರನ್ನು ಆಶ್ಚರ್ಯದಿಂದ ನೋಡಿದರು.
ಅವರು “ಏನೂ…?’’ ಎಂದು ಕೇಳುವ ಮೊದಲೇ, ಪಿಂಕಿ “ಮಿಸ್… ನಮಗೊಂದು ಸಮಸ್ಯೆ ಇದೆ. ಅದಕ್ಕೆ ನಿಮ್ಮ ಹತ್ತಿರ ಕೇಳಿ ಪರಿಹಾರವನ್ನು ಪಡೆಯೋಣ ಅಂತ ಬಂದಿದೀವಿ” ಎಂದಳು.
ಆಕೆಗೆ ‘ಇವರಿಗೇನು ತೊಂದರೆ ಆಗಿದೆಯೋ?’ ಎಂದು ಆತಂಕವಾಯಿತು. “ಏನು ಸಮಸ್ಯೆ ಪಿಂಕಿ?’’ ಎಂದು ಕೇಳಿದರು.
“ಮಿಸ್, ಈ ಶುಭಾಂಶು ಅಂತರಶಾಲಾ ವಿಜ್ಞಾನದ ಪ್ರದರ್ಶನಕ್ಕೆ ರಾಕೆಟ್ ಮಾಡೆಲ್ ಮಾಡಬೇಕು; ಈ ಸಿಂಧು ಮುಂದಿನವಾರ ಅಂತರಜಿಲ್ಲಾ ಶಾಲಾ ಬ್ಯಾಡ್ಮಿಂಟನ್ ಟೀಮಿಗೆ ಆಯ್ಕೆಯಾಗಿದ್ದಾಳೆ, ಅವಳು ಸಂಜೆಯಿಂದ ರಾತ್ರಿಯವರೆಗೆ ತರಬೇತಿ ಪಡೆಯಬೇಕು; ಇನ್ನು ಶುಭಮನ್‌ಗೆ ಅಂತರ ಶಾಲಾ ಕ್ರಿಕೆಟ್ ಮ್ಯಾಚ್ ಇದೆ, ಬೆಳಗ್ಗೆ ವ್ಯಾಯಾಮ ಮಾಡಿ ಸಂಜೆ ಆಟವಾಡಬೇಕು; ಈ ದೀಪಾಳಿಗೆ ಅಂತರಶಾಲಾ ಅನುವಾದ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ಚರ್ಚಾ ಸ್ಪರ್ಧೆಗೆ ತಯಾರಾಗಲು ಬೇರೆಬೇರೆ ಪುಸ್ತಕಗಳನ್ನು ಓದಬೇಕು. ಅದರಿಂದ ಅವರಿಗೆಲ್ಲ ಹೋಂವರ್ಕ್ಗೆ ಸಾಕಷ್ಟು ಸಮಯ ಸಿಕ್ಕುತ್ತಾ ಇಲ್ಲ; ಉಳಿದವರು ಟೆಸ್ಟಿಗೆ ಓದಲು ಸಮಯ ಸಿಕ್ಕುತ್ತಿಲ್ಲ ಅಂತ ಹೇಳ್ತಿದಾರೆ. ದಯವಿಟ್ಟು ನಮಗೆ ಸ್ವಲ್ಪ ಕಡಮೆ ಹೋಂವರ್ಕ್ ಮಾಡಲು ಕೊಟ್ಟರೆ ತುಂಬಾ ಅನುಕೂಲವಾಗುತ್ತೆ. ಆಗ ನಮಗೂ ಹೋಂವರ್ಕ್ ಮುಗಿಸಿಲ್ಲ ಅನ್ನುವ ಬೇಜಾರು ಇರುವುದಿಲ್ಲ’’ ಎಂದು ಒಂದೇ ಉಸಿರಿಗೆ ಹೇಳಿದಳು.
ಕ್ಲಾಸ್ ಟೀಚರ್ ಮುಗುಳು ನಗುತ್ತ “ಹೋಗಿ ನಿಮ್ಮ ಜಾಗದಲ್ಲಿ ಕುಳಿತುಕೊಳ್ಳಿ” ಎಂದು ಅವರನ್ನು ಹಿಂದಕ್ಕೆ ಕಳಿಸಿದರು. ಅನಂತರ ತರಗತಿಯನ್ನು ಉದ್ದೇಶಿಸಿ “ಇವತ್ತಿನಿಂದ ನಿಮಗೆ ಕಡಮೆ ಹೋಂವರ್ಕ್ ಕೊಡ್ತೀನಿ. ಸರಿನಾ. ಆದರೆ ಮನೆಯಲ್ಲಿ ನೀವೆಲ್ಲ ಚೆನ್ನಾಗಿ ಅಭ್ಯಾಸ ಮಾಡಬೇಕು” ಎಂದರು. ತರಗತಿಯ ಎಲ್ಲಾ ಹುಡುಗ ಹುಡುಗಿಯರಿಗೂ ಆನಂದವಾಯಿತು. ಅವರೆಲ್ಲರೂ “ಓ…!’’ ಎಂದು ಒಕ್ಕೊರಲಿನಿಂದ ಕಿರುಚಿದರು.
ಕ್ಲಾಸ್ ಟೀಚರ್ ಕೈ ಎತ್ತಿ “ಸದ್ದು…, ನೀವು ಹೀಗೆ ಜೋರಾಗಿ ಕೂಗಿದರೆ, ಪ್ರಿನ್ಸಿಪಾಲ್ ಬಂದು ಶಿಕ್ಷೆ ಕೊಡುತ್ತಾರೆ ಅಷ್ಟೇ! ಪಿಂಕೀ, ನೀನು ಧೈರ್ಯವಾಗಿ ಬಂದು ನಿಮ್ಮೆಲ್ಲರ ಸಮಸ್ಯೆಯ ಬಗ್ಗೆ ಹೇಳಿದ್ದು ನನಗೆ ಬಹಳ ಸಂತೋಷವಾಯಿತು. ನಾನು ನಿಮ್ಮ ಕ್ಲಾಸ್ ಟೀಚರ್ ಮಾತ್ರ ಅಲ್ಲ. ನಿಮ್ಮ ಸ್ನೇಹಿತೆ, ಗೆಳತಿ. ನಿಮಗೆ ತೊಂದರೆ ಆದಾಗ ಅದನ್ನು ನನ್ನ ಹತ್ತಿರ ಬಂದು ಹೇಳಿಕೊಳ್ಳಬಹುದು; ಹೇಳಿಕೊಳ್ಳಲೇಬೇಕು! ನಿಮಗೆ ಓದಲು ಅನುಕೂಲ ಮಾಡಿಕೊಡುವುದಕ್ಕಾಗಿಯೇ ನಾನು ಇರುವುದು” ಎಂದರು.
ಅದನ್ನು ಕೇಳಿ, ಪಿಂಕಿಗೆ ತಾನು ಎಲ್ಲರನ್ನು ಕೂಡಿಸಿಕೊಂಡು ಕೈಗೊಂಡ ಕ್ರಮವು ಸಫಲವಾಗಿದ್ದಕ್ಕೆ ಬಹಳ ಸಂತೋಷವಾಯಿತು. ಜೊತೆಗೆ ತನ್ನ ಅಮ್ಮನ ಮಾತುಗಳು ನೆನಪಾದವು; ‘ಅಮ್ಮ ನೀನು ನನ್ನ ಬೆಸ್ಟ್ ಫ್ರೆಂಡ್..’ ಎಂದು ಮನಸ್ಸಿನಲ್ಲಿ ಅಂದುಕೊಂಡಳು. ಅನಂತರ ಎದ್ದು ನಿಂತು, “ಹೌದು ಮಿಸ್, ಈಗ ನಮಗೆ ನೀವು ನಮ್ಮ ಕ್ಲಾಸ್ ಟೀಚರ್‌ಗಿಂತ ಹೆಚ್ಚಾಗಿ ನಮಗೆ ಮಾರ್ಗದರ್ಶನ ಮಾಡುವ ಒಳ್ಳೆಯ ಗೆಳತಿ ಅಂತ ಚೆನ್ನಾಗಿ ಗೊತ್ತಾಯಿತು. ಧನ್ಯವಾದಗಳು ಮಿಸ್” ಎಂದಳು.
ತಮ್ಮೆಲ್ಲರ ಸಮಸ್ಯೆಯನ್ನು ಅರಿತುಕೊಂಡು, ಸಹಪಾಠಿಗಳನ್ನು ಒಗ್ಗೂಡಿಸಿ, ಉಪಾಧ್ಯಾಯರ ಬಳಿ ಸಮಸ್ಯೆಯನ್ನು ತೆರೆದಿಟ್ಟು, ಸ್ವಪ್ರಯತ್ನದಿಂದ ಯಶಸ್ಸುಗಳಿಸಿದ ಪಿಂಕಿಯು ಯುವನಾಯಕಿಯಾಗುವ ಹಾದಿಯಲ್ಲಿ ಮೊದಲ ಸರಿಯಾದ ಹೆಜ್ಜೆಯನ್ನು ಇರಿಸಿದ್ದಳು. ಹೋಂವರ್ಕ್ ಕಡಮೆ ಮಾಡಿಸಿದ್ದಕ್ಕೆ ಪಿಂಕಿಯ ತರಗತಿಯ ಗೆಳೆಯ-ಗೆಳತಿಯರೆಲ್ಲ ಅವಳಿಗೆ ಅಭಿನಂದಿಸಿದರು.
***




