ಸುಖಸಂಜೀವಿನಿ ಸೀನಿಯರ್ ಸಿಟಿಜನ್ ಕಂಮ್ಯೂನ್‌ನ ನಿವಾಸಿಗಳೆಲ್ಲ ತಾರಕ ಸ್ವರದಲ್ಲಿ ವಿಷ್ಣು ಸಹಸ್ರನಾಮ, ಶಿವಾನಂದ ಲಹರಿ ಹಾಡಿ ಮಂಗಳಾರತಿ ಎತ್ತಿ, ಪ್ರಸಾದ ಸ್ವೀಕರಿಸಿದರು. ಯಾವೊಂದು ಸ್ತೋತ್ರಗಳೂ ಬರದಿದ್ದರೂ ಆಶಾ ಮಂಗಳವಾರ ಮತ್ತು ಶುಕ್ರವಾರಕ್ಕಾಗಿ ಕಾದು ಸಹಚರರು ಹೇಳುವ ಸ್ತೋತ್ರಗಳನ್ನು ಖುಷಿಯಿಂದ ಕೇಳುತ್ತಿದ್ದಳು.
“ಏನ್ರೀ, ಆಶಾ ನಮ್ಮ ಸತ್ಸಂಗದಲ್ಲಿ ಹೇಳುವ ಸ್ತೋತ್ರಗಳು ಕಲಿಯಲು ಆಯಿತೇ? ಅಂದಹಾಗೆ ನಿಮ್ಮ ಶುಗರ್ ಈಗ ನಿಯಂತ್ರಣಕ್ಕೆ ಬಂತೇ?’’
‘ಹೌದಲ್ಲವಾ?’ ಆಶಾ ಮನಸ್ಸಿನಲ್ಲಿಯೇ ಮಾತನಾಡಿಕೊಂಡಳು. ನಾನೀಗ ೪೦ ಯೂನಿಟ್ ಇನ್ಸುಲಿನ್‌ನಿಂದ ೧೦ ಯೂನಿಟ್ ಇನ್ಸುಲಿಗೆ ಬಂದಿದ್ದೇನೆ. ನನ್ನ ಡಯಟೀಶಿಯನ್ ಹೇಳಿದ ಹಾಗೆ ಮಾಡಿದರೆ ಇನ್ಸುಲಿನ್ ಇಲ್ಲದೆಯೇ ಇರಬಹುದು. ಸುಖಸಂಜೀವಿನಿಗೆ ಬಂದ ಮೇಲೆ ಆಶಾಳ ಆರೋಗ್ಯ ಮೊದಲಿಗಿಂತಲೂ ಚೆನ್ನಾಗಿತ್ತು. ನಿರುಮ್ಮಳವಾದ ಮನಸಿನಿಂದ ಇರುವುದನ್ನೂ ಕಲಿತಿದ್ದಳು. ಅವಳೀಗ ಮೊದಲಿನ ಆಶಾ ಆಗಿರಲಿಲ್ಲ. ಗತಿಸಿದ ತಂಗಿ ವಿರಜಾ ಇದ್ದದ್ದು ಹೀಗೆ ಅಲ್ಲವೇ. ಜೀವನದಲ್ಲಿ ಹಣ, ನೆಮ್ಮದಿ, ಆರೋಗ್ಯ ಮತ್ತು ಹೆಸರು – ಎಲ್ಲವನ್ನೂ ಸಂಪಾದಿಸಿದ್ದರೂ ಯಾವುದಕ್ಕೂ ಅಂಟಿಕೊಳ್ಳದ ಗುಣ. ಅವಳ ಈ ಸ್ವಭಾವವೇ ಅವಳಿಗೆ ಬೇಗ ಮುಕ್ತಿಯನ್ನು ಹೊಂದಲು ಅನುವಾಗಿಸಿತ್ತು.
ಆಶಾ, ಸುಖಸಂಜೀವಿನಿಯ ಆವರಣದಲ್ಲಿದ್ದ ಗಿಡಗಳಿಗೆ ನೀರು ಹಾಕಲು ಮುಂದಾದಳು. ಇಲ್ಲಿಗೆ ಬಂದಾಗಿನಿಂದಲೂ ಆಶಾ ಬೆಳಗೆದ್ದು ಪಾರಿಜಾತ ಹೂಗಳನ್ನು ಆರಿಸಿ, ದಾಸವಾಳ, ಕಣಿಗಲೆ ಹೂಗಳನ್ನು ಬಿಡಿಸಿ ದೇವರಿಗೆ ನೀಡುವ ಅಭ್ಯಾಸ ಮಾಡಿಕೊಂಡಿದ್ದಳು. ಹೂಗಳ ಪರಿಮಳ, ಗಿಡಗಳ ಜೊತೆ ಮಾತು ಅವಳಿಗೆ ಆಪ್ಯಾಯವಾಗಿತ್ತು. ಹಿರಿಯರ ಸಮುಚ್ಚಯದ ಸುಖಸಂಜೀವಿನಿಯ ಸಹಚರರು ಅನೇಕರು ವೇದ, ಭಗವದ್ಗೀತೆ ಕಲಿಯಲು ಹೋಗುತ್ತಿದ್ದರು. ಅವರ ಜೊತೆ ಈಗ ಆಶಾಳು ಸೇರಿದ್ದಲ್ಲದೆ ಕಲಿತದ್ದನ್ನು ಪಾರಾಯಣ ಮಾಡುವುದನ್ನು ಸುಖಿಸಲು ಕಲಿತಳು. ವಿರಜಾಳಿಗೆ ಈ ಎಲ್ಲವನ್ನೂ ಹೇಳಿಕೊಳ್ಳುವ ಎಂದರೆ ವಿರಜಾ ಇರಲೇ ಇಲ್ಲ. ಆದರೂ, ಆಶಾಗೆ ಒಂಟಿತನ ಕಾಡಲಿಲ್ಲ.
ಮಲಗಿದ್ದ ಆಶಾಳಿಗೆ ಹಿಂದಿನ ನೆನಪುಗಳು ಒಂದೊಂದಾಗಿ ಕಣ್ಣುಮುಂದೆ ಬಿಚ್ಚಿಕೊಳ್ಳಲು ಶುರುವಾಯಿತು. ವಿರಜಾ ಹೇಳಿದ ಮಾತಿನ ಸತ್ಯ ಆಶಾಳಿಗೆ ಈಗ ಅರ್ಥವಾಗಿತ್ತು. “ಸುಖವನ್ನು ಬೇರೊಬ್ಬರಿಂದ, ತನ್ನದಲ್ಲದ ಬೇರೆಯದರಿಂದ ಪಡೀತೀನಿ ಎನ್ನುವುದು ಎಷ್ಟು ಶಾಶ್ವತ. ಆ ಇನ್ನೊಂದು ಅನ್ನುವುದು ಬದಲಾದರೆ ಅಥವಾ ಇಲ್ಲವಾದರೆ ನಿನ್ನ ಸುಖಕ್ಕೆ ಆಗ ಎಲ್ಲಿಗೆ ಹೋಗುತ್ತಿ? ನಿನ್ನ ಅಂತರ್ಜಗತ್ತಿನಲ್ಲಿ ಇದ್ದು ಸುಖಿಸುವುದನ್ನು ಕಲಿಯೇ” ವಿರಜಾಳ ಮಾತು ಆಶಾಳನ್ನು ಕಾಡುತ್ತಿತ್ತು. ನಿದ್ದೆಯಲ್ಲಿ ಆಶಾ ನೆನಪಿನೊಳಗೆ ಜಾರಿದಳು.
“ನಿನಗೆಂತಾ ಹುಚ್ಚೇ, ಈ ಸರಿರಾತ್ರಿಯಲ್ಲಿ ಫೋನ್ ಮಾಡಿದ್ದೀ” – ಬೇಸರದಿಂದ ವಿರಜಾ ಕೇಳಿದಳು. ಆ ಕಡೆಯಿಂದ ಆಶಾ ಕಿಲಕಿಲ ನಗುತ್ತಾ “ನಾನೊಂದು ಹೊಸ ಹಾಡಿನ ಯುಟ್ಯೂಬ್ ನೋಡಿದೆ. ನಮ್ಮ ಕಾಲದ ಯಾವ ಸಿನೆಮಾ ಹಾಡಿಗಿಂತಲೂ ಕಡಮೆ ಇಲ್ಲವೇ. ಅಷ್ಟು ಕಾಡುತ್ತೆ ಕಣೆ. ಕಿವಿಯಲ್ಲಿ ವೆಲ್ವೆಟ್ ಇಟ್ಟು ಮೃದುವಾಗಿ ತಿರುಚಿದಂತೆ ಆಗುತ್ತೆ.”
“ನಿನ್ನ ತಲೆ, ಅದಕ್ಕೆ ನಂಗೆ ಯಾಕೆ ಡಿಸ್ಟರ್ಬ್ ಮಾಡ್ತೆ.”
“ಪರವಾಗಿಲ್ಲ ನಿನ್ನ ಧ್ಯಾನದಿಂದ ಒಂದಿಷ್ಟು ಹೊರಗೆ ಬಂದು ಈ ತರಹದ ಹಿತವಾದ ಸುಖವನ್ನೂ ಅನುಭವಿಸು.”
ಅಕ್ಕ ಆಶಾಳ ಸ್ವಭಾವ ಗೊತ್ತಿದ್ದರಿಂದ ಅವಳ ಮಾತಿಗೆ ತಂಗಿ ವಿರಜಾ ಮೆಲ್ಲಗೆ ನಕ್ಕಳು. “ಸರಿ, ಲಿಂಕ್ ಕಳುಹಿಸು. ನಾಳೆ ಆದರೆ ನೋಡ್ತೀನಿ. ಈಗ ಫೋನ್ ಇಡು’’ ಎಂದು ಹೇಳಿ ಮೆಲ್ಲಗೆ ನಿದ್ದೆಗೆ ಜಾರಿದಳು.
ಆದರೆ ಆಶಾ ಮತ್ತೊಮ್ಮೆ ದೀಪಿಕಾಪಡುಕೋಣೆಯ ಸ್ನಿಗ್ಧ ಸೌಂದರ್ಯ, ಆ ಹಾಡಿನ ಮಾಧುರ್ಯ ಮತ್ತು ಎಲ್ಲೋ ಕಳೆದುಹೋಗುವಂತೆ ಇದ್ದ ಆ ಕಾಡಿನ ಚಿತ್ರ ಅವಳನ್ನು ಕೊರೆಯುತ್ತಲೇ ಇತ್ತು. ನಿದ್ದೆ ಬಾರದೆ ಹೊರಳುತ್ತಾ ಗುನುಗುತ್ತಿದ್ದಳು “ಕೋಯಿ ಆಯಾ ಚಿಲಕಾಯಿ ಮಧುಶಾಲಾ ಮೇರ ಚೈನ್ ರೈನ್ ನೈನ್ ಅಪನೆ ಸಾಥ್ ಲೇಗಯೆ…” ಎಷ್ಟು ಹೊತ್ತಿಗೆ ನಿದ್ದೆ ಬಂದಿತು ಎಂದು ಗೊತ್ತಿಲ್ಲ. ಬೆಳಗ್ಗೆ ಬಾಗಿಲ ಕರೆಗಂಟೆ ಸದ್ದಾದಾಗಲೇ ದಡಬಡ ಎದ್ದು ಬಾಗಿಲು ತೆರೆದರೆ, ಕನಕ ನಗುತ್ತಾ ನಿಂತಿದ್ದಳು. “ಆಶಮ್ಮಾ, ಎಷ್ಟುಸಲ ಬೆಲ್ ಮಾಡೋದು. ಮನೇಲಿ ನೀವಿಲ್ಲ ಅಂತ ಹೊರಟು ಬಿಡುತ್ತಿದೆ” ಎಂದು ಬಾಗಿಲು ದೂಡಿಕೊಂಡು ರಭಸದಿಂದ ಒಳಗೆ ನುಗ್ಗಿದಳು.
ಬಾತ್‌ರೂಮಿನಲ್ಲೂ ಕೂಡ ಅದೇ ಗುನುಗುನು, ಮತ್ತೆ ಮೆಲ್ಲಗೆ ಯಾರೋ ಅವಳನ್ನು ಬರಸೆಳೆದು ನೀನು ಒಂಟಿಯಲ್ಲ ಅಂದಂತೆ ಭಾಸ.
ಕಾಫಿ ಮಾಡಿ ಕೆಲಸದ ಕನಕನಿಗೂ ಕೊಟ್ಟು ಒಂದುರಾಶಿ ತರಕಾರಿ ಹಾಕಿಕೊಂಡು, ಅಡುಗೆ ಯುಟ್ಯೂಬ್ ನೋಡುತ್ತಾ ಏನು ಅಡುಗೆ ಮಾಡಲಿ ಎಂದು ಬೇಸರಿಸಿಕೊಂಡೇ ಹೆಚ್ಚಲು ಕುಳಿತಳು.
ಅದೇ ಸಮಯಕ್ಕೆ ಹೊಸ ಗೆಳತಿಯೊಬ್ಬಳು ಫೋನಾಯಿಸಿ “ಈವತ್ತು ವಿಶ್ವೇಶ್ವರಪುರದ ತಿಂಡಿ ಬೀದಿಲಿ ಅವರೆಕಾಯಿ ತಿಂಡಿ ಮೇಳ ಇದೆ, ಬನ್ನಿ ಹೋಗೋಣ. ನಂದನ, ರಶ್ಮಿ, ಸಹನಾ ಎಲ್ಲರೂ ಬರುತ್ತಿದ್ದಾರೆ.”
ಆಶಾಳಿಗೆ ಆದ ಖುಷಿಗೆ ಕೊನೆ ಇಲ್ಲ. ಸದ್ಯ ತರಕಾರಿ ಹೆಚ್ಚಿ ಅಡುಗೆ ಮಾಡುವ ಕಥೆ ತಪ್ಪಿತಲ್ಲ ಅಂತ. ಅರ್ಧಂಬರ್ಧ ಹೆಚ್ಚಿದ್ದನ್ನು ಫ್ರಿಡ್ಜ್ನಲ್ಲಿ ತುರುಕಿ ಬೇಗಬೇಗ ರೆಡಿ ಆಗಿ, ಹಾಗೇ ದಾರೀಲಿ ಸಿಗುವ ಪಾರ್ಲರ್ ಹೋಗಿ ಒಂದಷ್ಟು ಟಚ್‌ಅಪ್ ಮಾಡಿಸಿಕೊಂಡರೆ ಎಂಥ ನಡುವಯಸ್ಸಿನ ಹೆಂಗಸನ್ನೂ ತಾನು ಈ ೬೩ ವಯಸ್ಸಿನಲ್ಲಿ ಮೀರಿಸಬಹುದೆಂದು ಲೆಕ್ಕಾಚಾರ ಹಾಕಿ ಆಶಾ ತಯಾರಾದಳು. ಹೀಲ್ಸ್ ಚಪ್ಪಲಿ ಮೆಟ್ಟಿ ನಿಂತಾದ ಮೇಲೆ ಮಂಡಿ ನೋಯುತ್ತಿದೆ ಅನಿಸಿದರೂ ಅದರ ಕಡೆ ಗಮನ ಕೊಡದೆ ಕಾರ್ ಕೀ ಹಿಡಿದು ಮನೆ ಬಾಗಿಲು ಹಾಕಿ ಹೊರಹೊರಟಳು. ದಾರಿಯುದ್ದಕ್ಕೂ ಇಳಿವಯಸ್ಸಿನ ಗೆಳತಿಯರೆಲ್ಲ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರು. ವಯಸ್ಸಾಗಿರುವುದು ದೇಹಕ್ಕೆ ಮಾತ್ರ, ಮನಸ್ಸಿಗಲ್ಲ. ಈ ಖುಷಿಯಲ್ಲೇ ಎಲ್ಲ ಕಡೆ ತಿರುಗಾಡುತ್ತ, ಅಷ್ಟೇನೂ ಹೊಂದಿಕೊಳ್ಳದ ಸೊಸೆ ಮತ್ತು ಮೊಮ್ಮಕ್ಕಳ ಜೊತೆ ಇವರೂ ಏನೇನೂ ಹೊಂದಿಕೊಳ್ಳದೆ, ಗೆಳತಿಯರೊಂದಿಗೆ ತಿರುಗಾಡುತ್ತಾ ಕಾಲಕಳೆಯುವ ಗುಂಪು ಅದಾಗಿತ್ತು.
“ರೀ, ಆಶಾ, ನಿಮಗೆ ಅನಂತನಾಗ್‌ರವರ ಪ್ರೇಮಾ, ಪ್ರೀತಿ, ಪ್ರಣಯ ಸಿನೆಮಾ ನೆನಪಿದೆಯಾ?’’
“ನೆನಪಿಲ್ಲದೆ ಏನು? ಅಂತಹ ಬೋಲ್ಡ್ ಸ್ಟೆಪ್ ನಾವೂ ಜೀವನದಲ್ಲಿ ತೊಗೋಬೇಕು.’’
ಎಲ್ಲಾ ಗೆಳತಿಯರೂ ಆ ಸಿನೆಮಾದ ಕಥೆಯ ಸುತ್ತ ಮಾತನಾಡುತ್ತ್ತ, ಹರಟುತ್ತ, ತಿರುಗುತ್ತ್ತ ಕಾಲಕಳೆಯುವುದನ್ನು ಕಲಿತಿದ್ದರು.
ಮನೆಗೆ ಬಂದರೆ ಆಶಾಳಿಗೆ ಒಂಟಿತನ ನೀಗಲು ಕಷ್ಟವಾಗುತ್ತಿತ್ತು. ಒಮ್ಮೆಯಂತೂ ಸರಿರಾತ್ರಿಯಲ್ಲಿ ನೀರು ಕುಡಿಯಲು ಅಡುಗೆಮನೆಗೆ ಹೋದವಳು, ಬೆನ್ನಹಿಂದೆ ಇದ್ದ ದೇವರಮನೆಯ ದೀಪ ಮುಂದಿದ್ದ ಗಾಜಿನ ಬಾಗಿಲ ಮೇಲೆ ಬಿದ್ದು ಅಲ್ಲಿ ಇನ್ನೊಂದು ಕೋಣೆಯನ್ನೇ ಸೃಷ್ಟಿ ಮಾಡಿತ್ತು. ಅದರಲ್ಲಿ ಇದ್ದ ತನ್ನ ಪ್ರತಿಬಿಂಬವನ್ನು ಕಂಡು ಆಶಾ ಚಿಟ್ಟನೆ ಚೀರುತ್ತ, ಗಡಗಡ ನಡುಗುತ್ತ ನಿಂತುಬಿಟ್ಟಿದ್ದಳು. ಇಡೀ ಮನೆಯಲ್ಲಿ ಒಬ್ಬಳೇ ಇರಲು ಹೆದರುತ್ತಿದ್ದಳು. ಆಶಾಗೆ ತಂಗಿ ವಿರಜಾ ಒಂದು ದೊಡ್ಡ ಅಚ್ಚರಿ. ತಂಗಿ ವಿರಜಾ ಆ ದೊಡ್ಡ ಮನೆಯಲ್ಲಿ ಹೇಗೆ ಒಬ್ಬಳೇ ನೆಮ್ಮದಿಯಿಂದ ಇರುತ್ತಾಳೆ? ವಿರಜಾಳ ಮುಖ ಎಂದೂ ಬಾಡಿದ್ದೇ ನೋಡಿಲ್ಲ. ಅವಳ ಮುಖದ ಮಂದಹಾಸ ಎಂದೂ ಅಳಿಸಿದ್ದೇ ಇಲ್ಲ. ಆಶಾಳಿಗೆ ಇದು ಅರ್ಥವಾಗದ ವಿಷಯ.
ಹೂ ಕಟ್ಟುತ್ತಾ ಕೂತಿದ್ದ ವಿರಜಾಗೆ ಅಕ್ಕ ಆಶಾ ಇದ್ದಕ್ಕಿದಂತೆ ಬಂದಿದ್ದು ನೋಡಿ ಸಂತಸವಾಯಿತು. ಇಬ್ಬರೂ ಒಂದೊಂದು ಲೋಟ ಸೂಪ್ ಕುಡೀತಾ ಕೂತಿದ್ದಾಗ ಆಶಾ ಬಾಯಿಬಿಟ್ಟಳು. “ವಿರಜಾ, ನನಗೆ ರಾತ್ರಿ ವೇಳೆ ಮನೆಯಲ್ಲಿ ಒಬ್ಬಳೇ ಇರಲು ಭಯವಾಗುತ್ತೆ. ಬೆಳಗ್ಗೆ ಬೋರ್ ಹೊಡೆಯುತ್ತೆ. ಈ ಒಂಟಿತನ ನನಗಾಗಲೊಲ್ಲದು. ನಾನು ಮತ್ತೊಮ್ಮೆ ಮದುವೆ ಮಾಡಿಕೊಂಡು ಬಾಳಸಂಗಾತಿಯ ಜೊತೆ ಇರಲು ಡಿಸೈಡ್ ಮಾಡಿದ್ದೀನಿ.’’
“ನಿನ್ನ ವಯಸೆಷ್ಟು ಆಶಾ, ನಿನಗೀಗ ೬೩ ಅಲ್ವಾ?’’
“ಏನಂತೆ, ಬಾಳಿನಲ್ಲಿ ಸಂಗಾತಿಯನ್ನು ಹುಡುಕಲು ವಯಸ್ಸು ಅಡ್ಡಿ ಆಗಬಾರದು. ಏಜ್ ಇಸ್ ಜಸ್ಟ್ ಎ ನಂಬರ್. ವಯಸ್ಸಾಗಿರುವುದು ನನ್ನ ದೇಹಕಷ್ಟೇ. ಮನಸ್ಸಿಗಲ್ಲ.’’
“ನಿಜವಾಗಿಯೂ.’’
“ಹೌದು. ಜೀವನದಲ್ಲಿ ಸುಖವಾಗಿರೋಕೆ ವಯಸ್ಸು ಅಡ್ಡ ಬರೋಲ್ಲ. ನಿನ್ನ ಹಾಗೆ ಇಲ್ಲದ ಮಿತಿ ಹಾಕ್ಕೊಂಡು ಸುಖದಿಂದ ವಂಚಿತಳಾಗಲಾರೆ.’’
ವಿರಜಾ ನಗುತ್ತಾ ಹೇಳಿದಳು. “ಸುಖಕ್ಕೂ ವಯಸ್ಸಿಗೂ ಸಂಬಂಧ ಇಲ್ಲ. ಆದರೆ ಆನಂದಕ್ಕೂ ಮನಸ್ಸಿನ ಪ್ರಬುದ್ಧತೆಗೂ ಸಂಬಂಧ ಇದೆ. ಏನೋಮ್ಮಾ, ವಯಸ್ಸಾಗುತ್ತಿರುವ ದೇಹಕ್ಕೆ ಹೊಂದುವಂತಹ ಮನಸ್ಸೂ ಇರಬೇಕಲ್ವಾ? ದೇಹಕ್ಕೆ ಅರವತ್ತಾರು ಮನಸ್ಸಿಗೆ ಹದಿನಾರು ಆದರೆ ಆಗುವ ಏರುಪೇರು ಖಂಡಿತವಾಗಿಯೂ ಚೆನ್ನಾಗಿರೋಲ್ಲ ಕಣೇ. ವಯಸ್ಸಿನ ಜೊತೆ ಬಿಡುಗಡೆ ಆಗೋದು ಯಾವಾಗ? ಅದು ಸರಿ ನಾನು ಸುಖವಾಗಿಲ್ಲ ಅಂತ ಹೇಗೆ ಅಂದುಕೊಂಡೆ? ನನ್ನ ಸುಖವನ್ನು ನನ್ನ ನೆಮ್ಮದಿಯನ್ನು ನನ್ನ ಪ್ರಯತ್ನದಿಂದಲೇ ಪಡೀತ್ತಿದ್ದೀನಿ.’’
“ವಿರಜಾ, ನಿನಗಿದೆಲ್ಲ ಅರ್ಥವಾಗೋಲ್ಲ. ಬಾಳಸಂಗಾತಿಯನ್ನು ಪಡೆಯೋಕೆ ವಯಸ್ಸು ಅಡ್ಡಿಬರಬಾರದು. ಜೀವನದಲ್ಲಿ ಸಂಗಾತಿಯಿಂದ ನೆಮ್ಮದಿ, ಹೊಸ ಬದುಕು ಗಳಿಸಿಕೋತೀನಿ. ನಾನು ದಿವಾಕರನನ್ನು ಮದುವೆಯಾಗಿ ಸುಖವಾಗಿರುತ್ತೀನಿ.’’
“ಇನ್ನು ಸುಖವನ್ನು ಬೇರೊಬ್ಬರಿಂದ, ತನ್ನದಲ್ಲದ ಬೇರೆಯದರಿಂದ ಪಡೀತೀನಿ ಎನ್ನುವುದು ಎಷ್ಟು ಶಾಶ್ವತ. ಆ ಇನ್ನೊಂದು ಬದಲಾದರೆ ಅಥವಾ ಇಲ್ಲವಾದರೆ ನಿನ್ನ ಸುಖಕ್ಕೆ ಆಗ ಎಲ್ಲಿಗೆ ಹೋಗುತ್ತಿ? ನಿನ್ನ ಸುಖ, ನೆಮ್ಮದಿ ನಿನ್ನಲೇ ಇರುತ್ತೆ ಹುಡುಕಿಕೊ. ಹಿಂದಿನಕಾಲದಲ್ಲಿ ಇದಕ್ಕೇ ವಾನಪ್ರಸ್ಥಾಶ್ರಮ ಎಂದದ್ದು.”
“ಆಶಾ, ನೀನು ಯಾವುದನ್ನು ನೆಮ್ಮದಿ, ಸುಖ ಎಂದುಕೊಂಡಿದ್ದಿಯೋ ಅದು ನಿಜವಾಗಿಯೂ ಸತ್ಯವಲ್ಲ. ನೀನು ಮಿಥ್ಯೆಯ ಹಿಂದೆ ಹೋಗುತ್ತಿದ್ದೀ. ಸಂಸಾರದಲ್ಲಿ ಸಂಬಂಧದ ಅಗತ್ಯವಿದೆ ಒಪ್ಕೋತೀನಿ. ಆದರೆ ನೀನು ಆ ಹಂತವನ್ನು ದಾಟಿದ್ದಿಯಾ. ಈಗಲಾದ್ರೂ ನಿನ್ನಲ್ಲಿಯೇ ನಿನ್ನ ಸಂಗವನ್ನು ಹುಡುಕಿಕೊಳ್ಳೋದು ಕಲಿಯೇ, ಯೋಚಿಸಿನೋಡು.’’
ಆಶಾಗೆ ವಿರಜಾಳ ಈ ಮಾತು ಅರ್ಥವೇ ಆಗಲಿಲ್ಲ.
ಕೆಲದಿನಗಳ ಬಳಿಕ ವಿರಜಾಳಿಗೆ ಆಶಾಳಿಂದ ಫೋನು “ವಿರಜಾ, ನಾನೊಂದು ವಿಷಯ ನಿನಗೆ ಹೇಳಬೇಕು. ಒಂದು ಕಡೆ ಸೋಫಾದ ಮೇಲೆ ಕುಳಿತು ನನ್ನ ಮಾತನ್ನು ಕೇಳು. ಆದರೆ ತಿಳಿದುಕೋ ನೀನೇನೂ ನನಗೆ ಉಪದೇಶ ಮಾಡಲು ಬರಬೇಡ, ಗೊತ್ತಾಯಿತಾ? ನಾನು ದಿವಾಕರ್ ಎನ್ನುವವರ ಜೊತೆ ಮದುವೆ ಆದೆ.’’
ಆಶಾ ನಿರೀಕ್ಷಿಸಿದಂತೆ ವಿರಜಾ ಅಚ್ಚರಿ ವ್ಯಕ್ತಪಡಿಸಲಿಲ್ಲ. ಬದಲಾಗಿ ಕೇಳಿದಳು “ನೀನು ಏನನ್ನು ಹುಡುಕಿಕೊಂಡು ಹೋಗ್ತಿದ್ದಿಯಾ ಅನ್ನುವುದರ ಸ್ಪಷ್ಟತೆ ನಿನಗಿದೆಯಾ ಆಶಾ?’’
ಆಶಾ ಸಿಟ್ಟಿನಿಂದ ಕಿರುಚಿದಳು “ನೀನೇ ತುಂಬಾ ಬುದ್ಧಿವಂತೆ ಅಂತ ಆಡಬೇಡ. ತುಂಬಾ ಭಿನ್ನವಾಗಿ ಯೋಚಿಸುವ ನಿನ್ನ ಜೊತೆ ಮಾತಾಡೋಕೆ ನನಗೆ ಇಷ್ಟವಾಗಲ್ಲ.’’
ವಿರಜಾ ಬೇಸರಿಸದೆ “ಆಯ್ತು ಹಾಗೇ ಮಾಡು. ಫೋನ್ ಕೆಳಗಿಡು” ಎಂದು ಮಾತಿಗೆ ಮುಕ್ತಾಯ ಹಾಡಿದಳು.
ಆಶಾಳೊಂದಿಗೆ ಬಾಳಿಬದುಕಿದ ಗಂಡ ಚಂದ್ರಶೇಖರರ ನಿಧನದ ಅನಂತರ ಆಶಾ ಅಕ್ಷರಶಃ ಒಂಟಿಯಾದಳು. ಮಕ್ಕಳಂತೂ ಇವಳನ್ನು ಕ್ಯಾರೇ ಎನ್ನಲೂ ಕೂಡ ಬರುತ್ತಿರಲಿಲ್ಲ. ಒಂಟಿತನ ಸಹ್ಯವೆನಿಸಲಿಲ್ಲ. ಒಂಟಿತನ ನೀಗಲು ಆಶಾ ಆನ್‌ಲೈನ್ ಹಿರಿಯರ ಮ್ಯಾಟ್ರಿಮೋನಿಯಲ್‌ನಲ್ಲಿ ಸಿಕ್ಕ ದಿವಾಕರರನ್ನು ಧರ್ಮಸ್ಥಳದಲ್ಲಿ ಹಾರ ಬದಲಾಗಿಸಿಕೊಂಡು ಸಮಾಜದಲ್ಲಿ ದಿವಾಕರನ ಹೆಂಡತಿ ಆದಳು.
ದಿವಾಕರರು ಹೇಳಿದ್ದರು “ನಾವಿಬ್ಬರೂ ಈ ಇಳಿವಯಸ್ಸಿನಲ್ಲಿ ಒಟ್ಟಿಗಿರಲು ಬಯಸಿದ್ದು ಒಂಟಿತನದ ವಿರುದ್ಧ. ನನ್ನ ಆಸ್ತಿಯನ್ನು ನಾನಾಗಲೇ ನನ್ನ ಮಕ್ಕಳಿಗೆ ಹಂಚಿಬಿಟ್ಟಿದ್ದೇನೆ. ನೀವು ಕೂಡ ನಿಮ್ಮ ಆಸ್ತಿಯನ್ನು ಮಕ್ಕಳ ಹೆಸರಿಗೆ ಬರೆದು ರಿಜಿಸ್ಟರ್ ಮಾಡಿಬಿಡಿ.’’ ದಿವಾಕರ್ ಬಗ್ಗೆ ಆಶಾಳಿಗೆ ಗೌರವ ಬಂದಿತ್ತು. ಆಶಾಳಿಗೆ ಗಂಡನಿಂದ ಬಂದಿದ್ದ ಆಸ್ತಿ, ಸೇವಿಂಗ್ಸ್ ಎಲ್ಲದರ ನಿರ್ವಹಣೆ ಹೇಗೆ ಮಾಡುವುದು. ಯಾವ ಯಾವ ಮ್ಯೂಚುಯಲ್ ಫಂಡ್ಸ್ನಲ್ಲಿ ಇಡಬೇಕು ಎಂದು ಅವಳ ಹಣದ ವಹಿವಾಟನ್ನು ದಿವಾಕರ್ ನೋಡಿಕೊಳ್ಳುತ್ತಿದ್ದರು.
ಒಟ್ಟಿಗೆ ಬದುಕಲು ಪ್ರಾರಂಭಿಸಿದ ಮೇಲೆ ಆತನ ಯೋಗಕ್ಷೇಮ, ಆತನ ಊಟೋಪಚಾರ ಎಲ್ಲದರ ಜವಾಬ್ದಾರಿಯನ್ನೂ ಆಶಾಳೇ ವಹಿಸಿಕೊಂಡಳು. ಹೊತ್ತೊತ್ತಿಗೆ ಸರಿಯಾಗಿ ಆತನ ಕ್ರಾನಿಕ್ ಕಾಯಿಲೆಗಳಿಗೆ ಔಷಧಿ ಕೊಡುವುದನ್ನು ಆಶಾ ಅಭ್ಯಾಸ ಮಾಡಿಕೊಂಡಳು. ಖರ್ಚುವೆಚ್ಚವನ್ನು ತಿಂಗಳ ಕೊನೆಯಲ್ಲಿ ಇಬ್ಬರೂ ಸಮನಾಗಿ ಹಂಚಿಕೊಳ್ಳುತ್ತಿದ್ದರು.
ಆಶಾ ಬಯಸಿದಂತೆ ಇಬ್ಬರೂ ವಿದೇಶ ಪ್ರವಾಸ, ಆಗಾಗ ಭಾರತದ ಪಂಚತಾರಾ ಹೋಟೆಲಿನಲ್ಲಿ ವಾಸ. ಆಶಾಳ ಕೊಳ್ಳುಬಾಕತನಕ್ಕೆ ಪೂರಕವಾಗಿ ಆತನೂ ಕೊಳ್ಳುಬಾಕನೇ. ಸ್ನೇಹಿತರ ಜೊತೆ ಹರಟುತ್ತಾ ಇವರಿಬ್ಬರೂ ನೆಮ್ಮದಿಯಾಗಿದ್ದರು. ಸುಖ ಸಂತೋಷ ಎಂದು ತಿರುಗಾಟ, ಚಿತ್ರವಿಚಿತ್ರ ಆಹಾರಗಳ ಸೇವನೆ ಅವಳ ದೇಹದ ತೂಕವನ್ನು ಜಾಸ್ತಿಮಾಡಿದ್ದು ಅಲ್ಲದೆ ಡಯಾಬಿಟಿಸ್ ಅನ್ನು ಅನಿಯಂತ್ರಣವಾಗಿಸಿತ್ತು. ಆದರೆ ಆಶಾ ಬಯಸಿದಂತೆ ಪ್ರೇಮಾ, ಪ್ರೀತಿ, ಪ್ರಣಯದಲ್ಲಿ ಜೀವನ ಕಳೆದುಹೋಗಿತ್ತು.
ಹೀಗೆಯೇ ಇದ್ದ ಜೀವನದಲ್ಲಿ ಆಶಾಳಿಗೂ ವಯಸ್ಸಾಗುತ್ತಾ ಬಂತು. ಮೊದಲಿನಂತೆ ಮನೆಯ ವಾರ್ತೆಯನ್ನು ನೋಡಿಕೊಳ್ಳಲು ಅತಿತೂಕ, ಅನಿಯಂತ್ರಿತ ಡಯಾಬಿಟಿಸ್‌ನಿಂದ ಕಷ್ಟವಾಯಿತು.
“ದಿವಾಕರ್, ಯಾಕೋ ತುಂಬಾ ಸುಸ್ತಾಗುತ್ತೆ.’’
“ಹಾಸ್ಪಿಟಲ್‌ಗೆ ಅಡ್ಮಿಟ್ ಆಗ್ತೀರಾ?’’
“ಆಸ್ಪತ್ರೆಗೆ ಹೋಗುವಂತದ್ದು ನನಗೇನೂ ಆಗಿಲ್ಲ. ಯಾಕೋ ಅಡುಗೆ ಮಾಡೋಕೂ ಮನಸ್ಸಿಲ್ಲ.’’
“ಅಡುಗೆಯವರನ್ನು ಗೊತ್ತು ಮಾಡಿಕೊಂಡು ಬಿಡಿ.’’
“ಹಾ, ಏನಂದ್ರಿ?”
“ನನ್ನಿಂದ ಅಡುಗೆಗಿಡುಗೆ ನಿರೀಕ್ಷೆ ಮಾಡಬೇಡಿ” ದಿವಾಕರ್ ನಗುತ್ತಾ ಹೇಳಿದರು. “ಮತ್ತೆ, ನಿಮ್ಮಡುಗೆಯಷ್ಟು ಅಡುಗೆಯವರದ್ದು ಚೆನ್ನಾಗಿರೋಲ್ಲ ಬಿಡಿ.’’
ವಿಧಿ ಇಲ್ಲದೆ ಆಶಾ ಮೊದಲಿನಂತೆ ಇರಲು ಪ್ರಯತ್ನಪಡುತ್ತಿದ್ದಳು.
ಒಮ್ಮೆ ಇದ್ದಕ್ಕಿದ್ದಂತೆ ಆತ ಹೇಳಿದರು “ಆಸ್ಟ್ರೇಲಿಯಾದ ಮಗ ಫೋನಾಯಿಸಿದ್ದ. ಅವನ ಮಗ ದಿಶಾಂತ್‌ನ ಗ್ರಾಜ್ಯುಯೇಶನ್ ಡೇ ಮುಂದಿನ ತಿಂಗಳು ಇದೆಯಂತೆ. ಈಗಲೇ ಬಂದು ಒಂದೆರಡು ತಿಂಗಳಿದ್ದು ಹೋಗಿ ಎಂದಿದ್ದಾನೆ. ಅಲ್ಲಿಂದ ಮಗಳು ವ್ಯಾನ್ಕೋವರ್‌ಗೆ ಬರಲು ಹೇಳಿದ್ದಾಳೆ.”
ಆಶಾಳಿಗೆ ತುಂಬಾ ಖುಷಿ. “ಹೌದಲ್ವಾ? ಒಂದೇ ಕಡೆ ಇದ್ದು ಬೋರಾಗ್ತಾ ಇದೆ. ಯಾವಾಗ ಫ್ಲೈಟ್ ಬುಕ್ ಮಾಡ್ತೀರಾ? ನನ್ನ ಗೆಳತಿಯೊಬ್ಬಳ ಮಗನ ಮದುವೆ ಇದೆ. ಅದಾದ ಮೇಲೆ ಹೋದರೆ ಆಯಿತಲ್ಲವಾ?”
ಆತ ಕಣ್ಣಂಚಿನಲ್ಲಿ ಇವಳ ಕಡೆ ನೋಡಿ ತುಸು ಗೊಂದಲಕ್ಕೆ ಒಳಗಾದರು.
ಆದರೆ ಆಶಾಳಿಗೆ ಇದಾವುದೂ ಕಾಣಲಿಲ್ಲ. ‘ಇನ್ನೆರಡು ತಿಂಗಳು ಆಸ್ಟ್ರೇಲಿಯಾ ಸುತ್ತುಕೊಂಡು ಅಲ್ಲಿಂದ ಇದುವರೆಗೂ ನೋಡದಿದ್ದ ವ್ಯಾನ್ಕೋವರ್, ಅಲ್ಲಿಂದ ಕ್ರೂಸ್‌ನಲ್ಲಿ ಅಲಾಸ್ಕ’ ಎಂದು ಮನಸಿನಲ್ಲಿ ಹಿಗ್ಗುತ್ತಾ ಮೇಲೆದ್ದಳು.
ಎರಡು ದಿನದಿಂದ ಆಶಾ ತನ್ನ ವಿದೇಶೀ ಪ್ರವಾಸದ ಬಗ್ಗೆ ಗೆಳತಿಯರಲ್ಲಿ ಕೊಚ್ಚಿಕೊಳ್ಳುತ್ತಿದ್ದಳು. ತಂಗಿ ವಿರಜಾಳಿಗೆ ತನಗೆ ಸಿಕ್ಕ ಹೊಸ ಬದಲಾವಣೆ ಬಗ್ಗೆ ಖುಷಿ ಖುಷಿಯಿಂದ ಹೇಳಿದ್ದಳು. “ದಿವಾಕರವರ ಮಗನ ಮನೆಗೆ ಹೋಗುತ್ತಿದ್ದೇನೆ. ಹೊಸ ಜೀನ್ಸ್ ಸೆಟ್‌ಗಳನ್ನು ತೊಗೋಬೇಕು ಅಂತ ಇದ್ದೀನಿ. ಈವತ್ತು ಸಂಜೆ ಅವರ ಜೊತೆನೇ ಹೋಗಿ ಖರೀದಿ ಮಾಡ್ತೀನಿ” ಅಂತನೂ ಹೇಳಿದಳು. “ನಿನಗೇನಾದರೂ ಸೆಲ್ವಾರ್ ಕಮೀಜ್ ಬೇಕಾ?” ತಂಗಿಯನ್ನು ಕೇಳಿದಳು.
“ಹೂ, ಕಣೇ ಎಲ್ಲಾ ಹಳೇದಾಗಿದೆ. ಎರಡು ಸೆಟ್ ಅಚ್ಚ ಕಾಟನ್‌ದು ತಂದುಕೊಡು. ರೇಯಾನ್ ಮಿಕ್ಡ್, ಬ್ಲೆಂಡೆಡ್ ಕಾಟನ್ ತರಬೇಡಾ.’’
ಸಂಜೆ ಮನೆಗೆ ಬಂದ ಆಶಾಳಿಗಾಗಿ ಕಾಯುತ್ತಿದ್ದ ದಿವಾಕರ್ ಹೇಳಿದರು ನಾಳಿನ ಫ್ಲೆöÊಟ್‌ಗೆ ತಾವು ಸಿಡ್ನಿಗೆ ಹೋಗುವುದಾಗಿ ಹೇಳಿದರು.
“ಹೀಗೆ ಸರಕ್ಕಂತ ಹೇಳಿದರೆ, ನಾನಿನ್ನೂ ಏನೂ ರೆಡಿನೇ ಆಗಿಲ್ಲ”
ದಿವಾಕರ್ ಶಾಂತವಾಗಿ ಹೇಳಿದರು “ನಾನೊಬ್ಬನೇ ಹೋಗುತ್ತಿದ್ದೇನೆ. ಇನ್ನು ೬, ೭ ತಿಂಗಳು ಅಲ್ಲೇ ಇರುತ್ತೇನೆ. ಅಲ್ಲಿಂದ ಮಗಳ ಮನೆಗೆ ವ್ಯಾನ್ಕೋವರ್‌ಗೆ ಹೋಗುತ್ತೇನೆ.’’
“ನನ್ನೊಬ್ಬಳನ್ನೇ ಬಿಟ್ಟು ನೀವು ಹೋಗುತ್ತಿದ್ದೀರಾ? ಒಬ್ಬಳೇ ನಾನೇನು ಮಾಡಲಿ?”
ಆತ ಭಾವವಿಹೀನವಾಗಿ ಉತ್ತರಿಸಿದರು “ನಾನು ನಿಮ್ಮ ಜೀವನದಲ್ಲಿ ಬರದೆ ಇದ್ದಿದ್ದರೆ ಏನು ಮಾಡುತ್ತಿದ್ದಿರಿ? ನಿಮ್ಮ ಒಂಟಿತನವನ್ನು ನೀಗಲು ನಾನು ಬಂದಿದ್ದು ಹೌದು. ಆದರೆ ನನ್ನ ಮಕ್ಕಳನ್ನು ನಾನು ಬಿಟ್ಟಿರಲು ಸಾಧ್ಯವಿಲ್ಲ.’’
“ಅಂದರೆ, ನೀವು ನನ್ನ ಜೀವನದಲ್ಲಿ ಪ್ರವೇಶಿಸಿದ್ದರ ಕಾರಣ, ನಾವಿಬ್ಬರೂ ಮದುವೆ ಆದ ಕಾರಣ – ನನಗೊಬ್ಬಳಿಗಾಗಿ ಮಾತ್ರವೇ? ನಿಮಗೆ ಬೇಕಾಗಿದ್ದಾಗ ಮಾತ್ರಕ್ಕೇ?”
ಆತ ಉತ್ತರಿಸಲಿಲ್ಲ. ಬದಲಾಗಿ ಸಿಗರೇಟ್ ಸೇದಲು ಬಾಲ್ಕನಿಗೆ ಹೋದರು.
ನಾವಿಬ್ಬರೂ ನಮ್ಮ ಒಂಟಿತನವನ್ನು ಕಳೆಯಲು ಅಲ್ಲವೇ ಬಾಳಸಂಗಾತಿಗಳಾಗಿದ್ದು. ದಿವಾಕರ ನನ್ನೊಂದಿಗೆ ಸದಾ ಇರುತ್ತಾರೆ ಎಂದು ಪರಿಗ್ರಹಿಸಿದ್ದು. ಪಕ್ಕದ ಮನೆ ಸಹನಾಳ ಜೊತೆಯ ಸಂಬಂಧದಂತೆ ಅಲ್ಲವಲ್ಲ? ಒಂದರ್ಥದಲ್ಲಿ ದಿವಾಕರ್‌ರವರನ್ನು ಗಂಡ ಅಂತಲೇ ತಿಳಿದಿದ್ದೆ. ನನ್ನ ಬಾಳಸಂಗಾತಿಯಾಗಿ ಇರುತ್ತಾರೆ ಎಂದು ಗ್ರಹಿಸಿದ್ದು ನನ್ನದೇ ತಪ್ಪು. ದಿನವೂ ಬೇಸರಿಸದೆ ಇವರಿಗಿಷ್ಟವಾದ ಅಡುಗೆ ಮಾಡಿಹಾಕಿದೆ. ಎರಡು ಹೊತ್ತು ರುಚಿರುಚಿಯಾಗಿ ಅಡುಗೆ ಮಾಡಿ ಇಬ್ಬರೂ ಒಟ್ಟಿಗೆ ತಿನ್ನುತ್ತಿದ್ದಿವಿ. ಹೊತ್ತೊತ್ತಿಗೆ ಔಷಧೋಪಚಾರ ಮಾಡುತ್ತಿದ್ದೆ. ನನ್ನವರು ಎಂದು ಅಂದುಕೊಳ್ಳದಿದ್ದರೆ ನಾನೇಕೆ ಇವರ ಗೊರಕೆಯ ಸದ್ದನ್ನು ಸಹಿಸಿಕೊಳ್ಳುತ್ತಿದ್ದೆ? ಸಿಗರೇಟ್ ಸೇವನೆಯನ್ನು ಬಲವಂತವಾಗಿ ಸಹಿಸಿದೆನಲ್ಲಾ? ಇವರ ಮೇಲೆ ನನ್ನ ಮನಸಿನಲ್ಲಿ ಬಾಳಸಂಗಾತಿಯ ಭಾವ ಇದ್ದದ್ದರಿಂದಲ್ಲವೇ ಎಲ್ಲ ಅಪಸವ್ಯಗಳೂ ಸಹ್ಯವಾಗಿ ಕಂಡಿದ್ದು. ಇದೇ ಭಾವ ಇವರಿಗೆ ನನ್ನ ಮೇಲಿರಲಿಲ್ಲವಾ? ಈಗಿನ ನನ್ನ ಕೈಲಾಗದ ಸ್ಥಿತಿ ಇವರಿಗೆ ಸಾಕಾಯಿತೇ? ಆಶಾಳ ಪ್ರಶ್ನೆಗಳಿಗೆ ಉತ್ತರಿಸುವವರು ಯಾರೂ ಅಲ್ಲಿರಲಿಲ್ಲ.
ಆಶಾಗೆ ಇಷ್ಟು ದಿವಸ ದಿವಾಕರರೊಂದಿಗಿದ್ದ ಸಂಬಂಧದ ಅರ್ಥವೇ ಆಗಲಿಲ್ಲ. ಯಾಕೋ ಹಿಂದೊಮ್ಮೆ ವಿರಜಾ ಹೇಳಿದ ಮಾತು ಧುತ್ತೆಂದು ನೆನಪಿಗೆ ಬಂತು – ‘ನೀನು ಏನನ್ನು ಹುಡುಕಿಕೊಂಡು ಹೋಗ್ತಿದ್ದಿಯಾ ಅನ್ನುವುದರ ಸ್ಪಷ್ಟತೆ ನಿನಗಿದೆಯಾ ಆಶಾ? ಇನ್ನೇನೋ ಒಂದು ಹೇಳಿದ್ದಳಲ್ಲಾ, ಅದೇನದು? ಅದೆಂತದೋ ಅಂತರ್ಜಗತ್ತು ಅಂತ ಅಲ್ವಾ.
ತನ್ನ ಸುಂದರವಾದ ಬದುಕಿನಿಂದ ಗಂಡ ಚಂದ್ರಶೇಖರರು ಗತಿಸಿದಮೇಲೆ, ಮಕ್ಕಳು ಬೆಳೆದು ಮದುವೆ ಮಾಡಿಕೊಂಡಮೇಲೆ ಒಂಟಿತನ ನೀಗಲು ಆಶಾ ಮರುಮದುವೆ ಉತ್ತರ ಎಂದು ಭಾವಿಸಿದ್ದಳು. ಎಲ್ಲೋ ಒಂದುಕಡೆ ಮಕ್ಕಳಿಗೆ ಬುದ್ಧಿಕಲಿಸಲೂ ಕೂಡ ಆಶಾ ಮರುಮದುವೆ ಆಗಿದ್ದಳಾ? ಮಕ್ಕಳಿಗೆ ನೀವಿಲ್ಲದಿದ್ದರೆ ಏನಂತೆ ನಾನು ನಿಮ್ಮ ಮೇಲೆ ಪ್ರೀತಿಗಾಗಿ ಅವಲಂಬಿತವಾಗಿಲ್ಲ ಎಂದು ತೋರಿಸಿಕೊಳ್ಳುವ ಹುಚ್ಚುತನಕ್ಕೆ ಅವಳಲ್ಲಿದ್ದ ರಚ್ಚಿನ ಗುಣ ಕಾರಣವಾಗಿತ್ತಾ?
ಎದುರುಗಡೆ ಇದ್ದ ಗಂಡ ಚಂದ್ರಶೇಖರರ ಫೋಟೋ ಇವಳನ್ನು ನೋಡಿ ನಕ್ಕಂತೆ ಆಯಿತು. ವಿರಜಾ ಏನು ಹೇಳುತ್ತಾಳೋ. ಇನ್ನು ಮಕ್ಕಳಂತೂ ಯಾವ ಲೆಕ್ಕಕ್ಕೂ ಇಲ್ಲ. ಸ್ವಾರ್ಥಬಿಟ್ಟರೆ ಅವರಲ್ಲಿ ಏನೂ ಇರಲಿಲ್ಲ. ಇನ್ನು ಮೊಮ್ಮಕ್ಕಳ ಜೊತೆ ನಾನಿದ್ದದ್ದೂ ಅಷ್ಟಕ್ಕಷ್ಟೆ.
ದಿವಾಕರರು ಹೊರಡುವ ದಿನ ಬಂದಿತು. ಆಶಾಳು, ಅವರ ಮಗಳು ಮತ್ತು ಸೊಸೆಗಾಗಿ ಈ ಹಿಂದೆ ಕೊಂಡಿದ್ದ ಮೈಸೂರ್ ಕ್ರೇಪ್ ಸೀರೆಯನ್ನು ಅವರ ಕೈಯಲಿಟ್ಟು ಅವರಿಗೆ ಕೊಡಲು ನಿರ್ವಿಕಾರವಾಗಿ ಹೇಳಿದಳು.
ದಿವಾಕರ್ ಇಲ್ಲದ ಮನೆ ಖಾಲಿಖಾಲಿ ಅನಿಸಲು ಶುರುವಾಯಿತು. ಅವರಿದ್ದಾಗ ಮನೆಯೆಲ್ಲ ತುಂಬಿರುತ್ತಿದ್ದ ಸಿಗರೇಟ್ ವಾಸನೆಗೆ ಆಶಾ ಅಡಿಕ್ಟ್ ಆಗಿದ್ದಳು. ಈಗ ಆ ವಾಸನೆ ಇಲ್ಲದಿರುವುದು ಅವಳಿಗೆ ಎಂತದೋ ಹೊಸತನವೆನಿಸುತ್ತಿತ್ತು. ದೂರದ ಯಾರದೋ ಮನೆಯ ಮಲ್ಲಿಗೆಯ ವಾಸನೆಯನ್ನು ಆಘ್ರಾಣಿಸಲು ಕಲಿತುಕೊಂಡಳು. ಬೆಳಗ್ಗೆ ಹೊತ್ತು ಹೇಗೋ ಹೊತ್ತು ಹೋಗುತ್ತಿತ್ತು. ರಾತ್ರಿ ಮಾತ್ರ ಮನೆಯಲ್ಲಿ ಒಂಟಿಯಾಗಿರಲು ಅವ್ಯಕ್ತವಾದ ಅಳುಕು. ನಿದ್ದೆಗಳಿಲ್ಲದ ರಾತ್ರಿ ಅವಳ ಆರೋಗ್ಯವನ್ನು ಮತ್ತಷ್ಟು ಕೆಡಿಸಿತ್ತು. ಕಾಲುನೋವಿನಿಂದ ವಾಕಿಂಗ್ ಆಗುತ್ತಿರಲಿಲ್ಲ. ಇದೆಲ್ಲದರ ಮಧ್ಯೆಯೂ ಗೆಳತಿಯರೇನೊ ಇವಳನ್ನು ನೋಡಲು ಬರುತ್ತಿದ್ದರು. ಕಾಲಕ್ರಮೇಣ ಅವರು ಬರುವುದೂ ಕಡಮೆಯಾಯಿತು.
ವಿರಜಾಳ ಮನೆಯಲ್ಲಿ ಎರಡು ದಿನ ಇದ್ದು ಬರಬಹುದಿತ್ತು. ವಿರಜಾ ನಿಜವಾಗಿಯೂ ಸಹೃದಯದವಳು. ಆದರೆ, ಆಶಾಳಿಗೆ ರಚ್ಚು ಮತ್ತು ಅಸೂಯೆ. ವಿರಜಾಳ ಜೊತೆ ಹೊಂದಿಕೊಂಡು ಇರಲು ಇವಳಿಗೆ ಸಾಧ್ಯವೇ ಇಲ್ಲ.
ಆಶಾಳ ಅವಸ್ಥೆಯನ್ನು ನೋಡಲಾರದೆ ವಿರಜಾಳೇ ಅವಳನ್ನು ಸುಖಸಂಜೀವಿನಿ ಹಿರಿಯರ ಸಮುಚ್ಚಯಕ್ಕೆ ಸೇರಿಸಿ ಬಂದಿದ್ದಳು.
ಅಲ್ಲಿಂದ ಆಶಾಳ ಜೀವನದ ಗತಿ ಬದಲಾಗಿತ್ತು. ತನ್ನ ನೆಮ್ಮದಿ ಸುಖಕ್ಕೆ ಬೇರೊಬ್ಬರನ್ನು ಅವಲಂಬಿಸಬೇಕೆಂಬ ಆಸರೆಯ ಬದುಕಿನಿಂದ ತನ್ನದೇ ಆದ ನೆಮ್ಮದಿಯ ಜೀವನವನ್ನು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿದ್ದಳು. ತಾನೇನೆಂದು ತನ್ನನ್ನೇ ತಾನು ಅರಿಯಲು ಆಶಾ ಹೆಣಗುತ್ತಿದ್ದಳು. ಇತ್ತೀಚೆಗೆ ದಿವಾಕರರಿಂದ ದೂರವಾಣಿ ಬರುವುದು ಕಡಮೆ ಆಗಿತ್ತು. ಅವರು ಅಲ್ಲಿನ ಪೌರತ್ವವನ್ನೂ ಪಡೆದಿದ್ದರು. ಆಶಾಳಿಗಾದರೂ ಅವರೊಂದಿಗೆ ಹೇಳಿಕೊಳ್ಳಲು ಏನೂ ವಿಷಯವಿರಲಿಲ್ಲ. ತಾನು ಸುಖಸಂಜೀವಿನಿಗೆ ಸೇರಿಕೊಳ್ಳುತ್ತಿದ್ದೇನೆ ಎಂದಾಗ ದಿವಾಕರರು ಸಂತಸದಿಂದಲೇ “ಒಳ್ಳೆಯ ಕೆಲ್ಸ ಮಾಡಿದಿರಿ, ಆದರೆ ನಾನು ಅಲ್ಲಿಗೆ ಬಂದರೆ ನಮ್ಮ ಮನೆಗೆ ಒಟ್ಟಿಗಿರಲು ಮರೆಯದೆ ಬನ್ನಿ’’ ಎಂದರು.
ಆಶಾ ಶಾಂತವಾಗಿ ಹೇಳಿದಳು “ಆಗಲಿ, ನಿಮಗೆ ಅಡುಗೆ ಮಾಡಿಹಾಕಲು ತಾನೇ? ನಿಮ್ಮ ಸ್ವಾರ್ಥಕ್ಕೆ ಖಂಡಿತವಾಗಿಯೂ ಬೆಲೆಕೊಡಲು ಯೋಚಿಸುತ್ತೇನೆ.’’ ಇತ್ತೀಚೆಗೆ ಆಶಾ ವ್ಯಂಗ್ಯ, ಸಿಟ್ಟು, ನಿರಾಸೆಗಳನ್ನು ಮೀರಿ ಬೆಳೆದಿದ್ದಳು. ಆದರೆ, ಮನಸ್ಸಿನಲ್ಲಿ ಬಂದದ್ದನ್ನು ನಿರ್ವಿಕಾರವಾಗಿ ಹೇಳಲು ಕಲಿತಿದ್ದಳು.
ಸುಖಸಂಜೀವಿನಿಯ ಅಡುಗೆಮನೆಯ ಲಾಗ್‌ಬುಕ್ ಅನ್ನು ಕಚೇರಿಯಲ್ಲಿನ ಕಂಪ್ಯೂಟರ್ ಮುಂದೆ ಕೂತು ಎಕ್ಸೆಲ್ ಶೀಟಿನಲ್ಲಿ ತುಂಬಿಸುವುದನ್ನು ಇಚ್ಛೆಯಿಂದ ಮಾಡುತ್ತಿದ್ದಳು. ಒಮ್ಮೊಮ್ಮೆ ಅಡುಗೆಯವರು ಕಡಮೆ ಜನ ಇದ್ದರೆ ತರಕಾರಿ ಹೆಚ್ಚಿಕೊಡಲು ಸಹಾಯ ಮಾಡುತ್ತಿದ್ದಳು. ಹೊತ್ತು ಹೋಗುವುದು ಆಶಾಳಿಗೆ ಗೊತ್ತಾಗುತ್ತಲೇ ಇರಲಿಲ್ಲ. ಆದರೂ ಒಮ್ಮೊಮ್ಮೆ ಹಿಂಡಿದ ಮನಸ್ಸಿನಲ್ಲಿ ಕುಳಿತುಬಿಡುತ್ತಿದ್ದಳು. ‘ನನ್ನ ಸುಖ ನನ್ನ ಜೀವನ ಅನ್ನೋ ಭರದಲ್ಲಿ ಮಕ್ಕಳಿಗೆ ನೀವಿಲ್ಲದಿದ್ದರೆ ಏನಂತೆ ಎಂಬ ಸಂದೇಶ ಕೊಟ್ಟು ದಿವಾಕರರೇ ನನ್ನ ಬದುಕು ಎಂದು ದುಡುಕಿ ಮಾಡಿದ ನಿರ್ಧಾರ ಮಕ್ಕಳನ್ನು ತನ್ನಿಂದ ಇನ್ನೂ ದೂರಮಾಡಿದೆ’ ಎಂಬ ಅರಿವು ಬೇಸರತರಿಸುತ್ತಿತ್ತು. ದಿವಾಕರ್‌ರವರನ್ನು ನೆನಪು ಮಾಡಿಕೊಳ್ಳದಂತೆ ಮನಸ್ಸಿನಲ್ಲಿ ಸಂಕಲ್ಪ ಮಾಡಿಕೊಂಡಳು. ಹಳೆಯ ಬೇಡದ ನೆನಪುಗಳನ್ನು ಹಳೆಯ ಕಡತಗಳನ್ನು ಹರಿದೆಸೆಯುವಂತೆ ಮಾಡಲು ಕಲಿಯಬೇಕು ಎಂದು ಆಶಾ ಯೋಚಿಸುತ್ತ ಗಿಡಗಳಿಗೆ ನೀರುಣಿಸಲು ಹೊರಟಳು.




