ಇದ್ದಕ್ಕಿದ್ದಂತೆ ಅಪ್ಪಳಿಸಿದ ಬಾಣ ಚಂಪೆಯ ಸ್ವಪ್ನ ಸಾಮ್ರಾಜ್ಯವನ್ನು ಪುಡಿಗುಟ್ಟಿತು. ಅವಳು ದಿಗ್ಭ್ರಾಂತಳಂತೆ ಸುತ್ತ ನೋಡಿದಳು. ಈಗ ಶಂಖನೂ ಜಾಗೃತನಾಗಿದ್ದ.
“ಓ… ಇಲ್ಲಿಗೂ ಬಂದುಬಿಟ್ಟರು!’’ ಎಂದು ಉದ್ಗರಿಸಿದ.
ಅವನ ಕೈಗಳು ಚುರುಕಾದವು.
ಅವನ ಕಣ್ಣುಗಳು ಬಲ ದಂಡೆಯ ಮೇಲೆ ಚಲಿಸುತ್ತಿರುವ ಆಕೃತಿಗಳನ್ನು ನೋಡುತ್ತಿದ್ದವು.
“ಚಂಪಾ, ದೋಣಿಗಾರನನ್ನು ಎಬ್ಬಿಸು. ಬೇಗ ಬೇಗ…’’ ಎಂದು ಅವಸರಿಸಿದ.
ಅವನ ಧ್ವನಿಯನ್ನು ಕೇಳಿಯೇ ಜಯ ಎಚ್ಚರಗೊಂಡ.
ತಡಮಾಡದೆ ಹುಟ್ಟನ್ನು ಕೈಗೆತ್ತಿಕೊಂಡ.
“ಅಯ್ಯ, ನಾವು ತಪ್ಪು ಮಾಡಿದೆವು ನದಿಯ ಮಧ್ಯಕ್ಕೆ ದೋಣಿಯನ್ನು ತರಬಾರದಿತ್ತು. ಈಗ ಅವರ ಬಾಣಗಳ ಅಳವಿನಿಂದಾಚೆಗೆ, ಎಡಗಡೆಗೆ ದೋಣಿ ಹೋಗಲಿ” ಎಂದ ಶಂಖ.
ದೋಣಿ ಎಡಕ್ಕೆ ಸರಿದು, ದಡದ ಸಮೀಪದಲ್ಲಿ ಸಾಗತೊಡಗಿತು.
“ಏನೋ ಅದೃಷ್ಟವಶಾತ್ ದೋಣಿಯ ಪಕ್ಕದಲ್ಲಿ ಬಾಣ ನಾಟಿದೆ. ದೋಣಿಗೇನಾದರೂ ರಂಧ್ರವಾಗುತ್ತಿದ್ದರೆ ಕಷ್ಟವಿತ್ತು” ಎಂದ ದೋಣಿಗಾರ.
ಈಗ ಅವರು ಬಾಣಗಳ ಅಳವಿನಿಂದ ದೂರವಿದ್ದರು. ಆ ಕಡೆಯ ದಡದಲ್ಲಿ ರುದ್ರನ ಭಟರು ಕುದುರೆಗಳನ್ನೇರಿ, ದೋಣಿಗೆ ಸಮಾನಾಂತರವಾಗಿ ಧಾವಿಸಿ ಬರುವುದು ಕಾಣಿಸುತ್ತಿತ್ತು. ಅವರು ಬಾಣಗಳನ್ನು ಪ್ರಯೋಗಿಸುತ್ತಿದ್ದರಾದರೂ, ಅವು ಇಲ್ಲಿಗೆ ತಲಪುವಷ್ಟರಲ್ಲಿ ರಭಸವನ್ನು ಕಳೆದುಕೊಂಡು ನೀರಲ್ಲಿ ಬೀಳುತ್ತಿದ್ದವು. ಅಲ್ಲದೆ ಓಡುತ್ತಿರುವ ಕುದುರೆಯ ಮೇಲೆ ಕುಳಿತು ಗುರಿಯನ್ನು ಸಾಧಿಸುವುದು ಬಹಳ ಕಷ್ಟವಿತ್ತು. ಇದರಿಂದಾಗಿ ದೋಣಿಯಲ್ಲಿದ್ದವರು ಸುರಕ್ಷಿತರಾಗಿದ್ದರು. ಹಾಗೆಂದು ಅಪಾಯ ತಪ್ಪಿತು ಎನ್ನುವ ಹಾಗಿಲ್ಲ. ಪ್ರವಾಹದ ವಿರುದ್ಧ ದಿಕ್ಕಿನಲ್ಲಿ ದೋಣಿ ನಡೆಸುವುದು ಸುಲಭವಿರಲಿಲ್ಲ. ಹುಟ್ಟು ಹಾಕಿ ಹಾಕಿ ರಟ್ಟೆಗಳು ನೋಯುತಿದ್ದವು. ಅವರು ಕುದುರೆಗಳನ್ನೇರಿ ಬರುತ್ತಿದ್ದ ಕಾರಣ ದೋಣಿಯನ್ನು ಅನುಸರಿಸುವುದು ಅವರಿಗೆ ಬಹು ಸುಲಭವಾಗಿತ್ತು.
“ಒಂದೆರಡು ಹರದಾರಿ ಮುಂದೆ ಒಂದು ಕಡವಿದೆ” ಎಂದ ದೋಣಿಗಾರ. ಕಡವು ಅಂದರೆ ಪ್ರವಾಹವು ವಿಶಾಲವಾಗಿ, ಆಳವಿಲ್ಲದೆ ಹರಿಯುವ ಪ್ರದೇಶ. ಆ ಕಡೆಯಿಂದ ಈ ಕಡೆಗೆ ದಾಟುವುದು ಕೊಂಚ ಸಲೀಸು ಅನಿಸುವಂತಹ ಆಯಕಟ್ಟಿನ ಸ್ಥಳ.
“ಯಾಕೆ ಅಲ್ಲಿ ದೋಣಿ ಸಾಗಲಾರದೆ?’’ ಶಂಖ ಕೇಳಿದ.
“ಅದಕ್ಕಲ್ಲ. ಅವರು ಅಲ್ಲಿ ದೋಣಿಯೊಂದನ್ನು ಪಡೆದುಕೊಂಡರೆ ನದಿಯಲ್ಲಿ ನಮ್ಮನ್ನು ಅಟ್ಟಿಕೊಂಡು ಬರುವುದು ಇನ್ನೂ ಸುಲಭ. ನಮ್ಮ ದೋಣಿಯನ್ನು ಮುಳುಗಿಸಿದರೂ ಮುಳುಗಿಸಿಯಾರು. ಆಗ ಇವರನ್ನೆಲ್ಲ ಉಳಿಸಿಕೊಳ್ಳುವುದು ಹೇಗೆ?’’ ಜಯ ವಿವರಿಸಿದ.
ಎದುರಾಗಲಿರುವ ಆಪತ್ತು ಏನೆಂದು ಈಗ ಶಂಖನಿಗೆ ಸ್ಪಷ್ಟವಾಯಿತು. ನಿಜವೇ ಅವರು ಅದನ್ನೇ ಮಾಡುತ್ತಾರೆ. ನಾವು ತಪ್ಪಿಸಿಕೊಳ್ಳುವುದು ಹೇಗೆ?
“ಅಲ್ಲ, ನಾವು ದೋಣಿಯನ್ನು ಬಿಟ್ಟು ಪಕ್ಕದ ದಡವನ್ನು ಸೇರಿಕೊಂಡರೆ ಹೇಗೆ?’’ ಚಿತ್ರಕ ಕೇಳಿದ.
“ಅದಾಗದು ಚಿತ್ರಕ. ಆ ಕಡೆ ನೋಡು. ದಟ್ವವಾದ ಅರಣ್ಯ ಪ್ರದೇಶ. ಇಲ್ಲಿ ಕ್ರೂರ ಮೃಗಗಳ ಹಾವಳಿ ಹೆಚ್ಚು. ಉತ್ತರದ ಕಾಡಿನಂತೆ ಅಲ್ಲ. ಅಲ್ಲದೆ ಅವರು ನದಿಯನ್ನು ದಾಟಿ ಬಂದರೆ ನಾವಾಗಿ ಅವರ ಕೈಗಳಲ್ಲಿ ಸಿಕ್ಕಿಕೊಂಡಂತೆ ಆದೀತು. ಅದು ಇನ್ನೂ ಅಪಾಯಕಾರಿ. ಬೇರೇನಾದರೂ ಉಪಾಯ ಹುಡುಕಬೇಕಷ್ಟೆ’’ ಎಂದ ಶಂಖ ಯೋಚನಾಪರನಾಗಿ.
ಮಧ್ಯಾಹ್ನದ ಹೊತ್ತಿಗೆ ಮೂವರೂ ಹುಟ್ಟುಹಾಕಿ ಸೋತಿದ್ದರು. ತೋಳುಗಳು ನೋಯುತ್ತಿದ್ದವು. ಒಂದಿಷ್ಟಾದರೂ ವಿಶ್ರಾಂತಿ ಬೇಕೇ ಬೇಕಿತ್ತು. ಅವರು ಎಡದಂಡೆಗೆ ಹೊಂದಿಕೊಂಡು ದೋಣಿಯನ್ನು ನಿಲ್ಲಿಸಿದರು. ಒಂದಿಷ್ಟು ಆಹಾರ ಸೇವಿಸಿದರು. ದೋಣಿಯಲ್ಲೇ ಕಾಲು ಚಾಚಿ ವಿಶ್ರಾಂತಿ ಪಡೆದರು.
ರುದ್ರನೂ ಅವನ ಭಟರೂ ಇದನ್ನು ಗಮನಿಸಿದರು. ಬಹುಶಃ ಅವರಿಗೂ ಆಯಾಸವಾಗಿರಬೇಕು. ಅವರು ನದಿಯ ಬಲದಂಡೆಯಲ್ಲಿ ಕುದುರೆಗಳಿಂದ ಇಳಿದು ವಿಶ್ರಮಿಸಿದರು. ಆಗಲೂ ಇವರತ್ತ ಒಂದು ದೃಷ್ಟಿ ಇಟ್ಟೇ ಇದ್ದರು.
ಸಾಯಂಕಾಲದ ಹೊತ್ತಿಗೆ ಮತ್ತೆ ದೋಣಿಯೇರುವುದಕ್ಕೆ ಸಜ್ಜಾದರು.
“ಮುಂದೆ ಹೇಗೆ?’’ ಎಂದು ಜಯ ಕೇಳಿದ.
ಶಂಖನಿಗೂ ಅದೇ ಪ್ರಶ್ನೆ ಕಾಡುತ್ತಿತ್ತು.
ಕೊಂಚ ಹೊತ್ತು ಯೋಚಿಸುತ್ತಿದ್ದು ಮತ್ತೆ ಹೇಳಿದ.
“ಸದ್ಯ ಕತ್ತಲಾಗುವವರೆಗೂ ಹೀಗೇ ಮುಂದುವರಿಯೋಣ. ಒಂದು ದಿನದ ಪ್ರಯಾಣದಲ್ಲಿ ಗಂಗಾ ಯಮುನಾ ನದಿಗಳ ಸಂಗಮವನ್ನು ಸೇರಬಹುದು. ಅಲ್ಲಿಯವರೆಗೆ ನಾವು ಅವರ ಕೈಗೆ ಸಿಗದಿದ್ದರೆ, ನೀವಿಬ್ಬರು ನಮ್ಮನ್ನು ಯಮುನೆಯ ದಡದಲ್ಲಿ ಬಿಟ್ಟು ಶ್ರಾವಸ್ತಿಗೆ ಹಿಂದಿರುಗಿ’’
“ನೀವು ಮುಂದೇನು ಮಾಡುತ್ತೀರಿ?’’
ಶಂಖ ದೋಣಿಗಾರನ ಪ್ರಶ್ನೆಗೆ ಉತ್ತರಿಸಲಿಲ್ಲ. ಮೆಲುವಾಗಿ ನಕ್ಕು,
“ಇನ್ನು ಹೊರಡೋಣ” ಎಂದ. ಎಲ್ಲರೂ ಎದ್ದರು.
ದೋಣಿ ಹೊರಟಿತು.
* * *
ರುದ್ರ ತನ್ನ ಸಹಚರರ ಜತೆ ಬಲದಂಡೆಯಲ್ಲಿ ಕಾದು ಕುಳಿತಿದ್ದ.
ಚಿತ್ರಕನ ಕುಟುಂಬ ವಿಶ್ರಾಂತಿಗಾಗಿ ದೋಣಿಯನ್ನು ನಿಲ್ಲಿಸಿದ್ದನ್ನು ನೋಡಿದವನು ತನ್ನವರಿಗೂ ಕುದುರೆಗಳಿಂದ ಇಳಿಯುವಂತೆ ಆದೇಶಿಸಿದ್ದ. ಅವರಿಗೂ ಆಯಾಸವಾಗಿತ್ತು.
ಚಿತ್ರಕನ ಕಡೆಯವರು ದೋಣಿಯೇರಿದ್ದನ್ನು ಕಂಡು ರುದ್ರನೂ ತನ್ನವರೊಂದಿಗೆ ನದಿ ತೀರದಗುಂಟ ಮುಂದೆ ಸಾಗಿದ. ಅವನಿಗೂ ಮುಂದೇನು ಮಾಡುವುದು ಇದರ ಎಂಬ ಗೊಂದಲ. ಅವರ ಮೇಲೆ ಆಕ್ರಮಣ ಮಾಡುವುದು ಸಾಧ್ಯವಿರಲಿಲ್ಲ. ಯಾಕೆಂದರೆ ಅವರು ಎಡದಂಡಗೆ ಸಮೀಪವಾಗಿ ಸಾಗುತ್ತಿದ್ದರು.
ಅಲ್ಲಿಗೆ ತನ್ನವರ ಬಾಣಗಳು ತಾಗುತ್ತಿರಲಿಲ್ಲ. ನದಿಯ ನೀರಿಗಿಳಿಯದೆ ಅವರನ್ನು ಹಿಡಿಯುವಂತೆಯೂ ಇರಲಿಲ್ಲ. ದೋಣಿಯೊಂದು ಸಾಗುತ್ತ ಇದ್ದು, ಅವರನ್ನು ಮಟ್ಟ ಹಾಕಿಬಿಡುತ್ತಿದ್ದೆ ಎಂದು ಹಲ್ಲುಕಡಿದ. ಏನಾದರೇನು, ಅವರು ಸದ್ಯ ಸಿಗುವಂತಿಲ್ಲ. ಆದರೂ ಕನಿಷ್ಠ ಪಕ್ಷ ಕಣ್ಣಿಗೆ ಕಾಣುತ್ತಿದ್ದಾರೆ ಎಂಬುದೊಂದು ಸಮಾಧಾನ. ನದಿಯ ಪಾತ್ರ ಸಮತಲವಾಗಿದ್ದು ದೋಣಿಯು ನಿಲ್ಲುವ ಸಾಧ್ಯತೆಯೂ ಇಲ್ಲ. ಎಲ್ಲಾದರೂ ಕಲ್ಲುಬಂಡೆಗಳು ತುಂಬಿದ ತಾಣ ಸಿಕ್ಕರೆ ಅಲ್ಲಿ ದೋಣಿ ನಿಲ್ಲುವುದೋ ಏನೋ. ಹಾಗೆಂದು ಎಷ್ಟು ದೂರ ಹೀಗೇ ಹೋಗುವುದು?
ಸಾಯಂಕಾಲದ ಹೊತ್ತಿಗೆ ಅವರು ಒಂದು ಕಡವಿನ ಬಳಿಗೆ ಬಂದರು. ಅದು ನದಿಯನ್ನು ದಾಟುವುದಕ್ಕಿದ್ದ ತಾವು ಹೌದಾದರೂ, ಅಲ್ಲಿ ದಾಟುವವರು ಯಾರೂ ಇರಲಿಲ್ಲ. ಅದು ಕಡುಬೇಸಗೆಯಲ್ಲಿ ನದಿಯ ನೀರು ಕಡಮೆಯಾದಾಗ ಮಾತ್ರ ಬಳಕೆಯಾಗುತ್ತಿದ್ದ ಕಡವು. ಹಾಗಾಗಿ ಈಗ ಅಲ್ಲಿಗೆ ಯಾರೂ ಬರುತ್ತಿರಲಿಲ್ಲ. ದಡಕ್ಕೆ ಆನಿಸಿ ನಿಲ್ಲಿಸಿದ್ದ ಒಂದೆರಡು ದೋಣಿಗಳನ್ನು ಬಿಟ್ಟರೆ ಬೇರೆ ಏನೂ ಇರಲಿಲ್ಲ. ದೋಣಿಗಾರರೂ ಕಾಣಿಸಲಿಲ್ಲ. ಚಿತ್ರಕನವರಿದ್ದ ದೋಣಿ ನಿಧಾನವಾಗಿ ಕಡವನ್ನು ದಾಟಿ ಮುಂದುವರಿಯಿತು. ರುದ್ರ ಕುದುರೆಯನ್ನು ನಿಲ್ಲಿಸಿ,
“ಏಯ್, ಅಲ್ಲಿ ಯಾರಾದರೂ ದೋಣಿಗಾರರಿದ್ದರೆ ಕರೆದು ತನ್ನಿ” ಎಂದು ತನ್ನವರಿಗೆ ಆಜ್ಞೆಮಾಡಿದ.
ಅವರು ಹುಡುಕಾಡಿ ಯಾರೂ ಸಿಗದೆ ಮರಳಿ ಬಂದರು.
ಅನತಿ ದೂರದಲ್ಲಿ ಒಂದೆರಡು ಗುಡಿಸಲುಗಳಿದ್ದವಾದರೂ, ಅಲ್ಲಿ ಜನರಾರೂ ಇರಲಿಲ್ಲ. ಎಷ್ಟು ಹುಡುಕಿದರೂ, ಕೂಗಿ ಕರೆದರೂ ಯಾರ ಸುಳಿವೂ ಇಲ್ಲ.
ಇಷ್ಟಾಗುವಾಗ ಚಿತ್ರಕನವರಿದ್ದ ದೋಣಿ ದೂರ ಸಾಗಿತ್ತು.
ರುದ್ರನಿಗೆ ಅಸಹನೆ.
“ದೋಣಿಗಾರರಿಲ್ಲದಿದ್ದರೆ ಸಾಯಲಿ. ನಿಮ್ಮಲ್ಲಿ ಯಾರಿಗಾದರೂ ದೋಣಿ ನಡೆಸುವುದು ಬರುತ್ತದೇನು? ನಾವೇ ದೋಣಿಯನ್ನೇರಿ ಅವರ ಬೆನ್ನು ಹಿಡಿಯೋಣ” ಎಂದ.
ಅನುಚರರಲ್ಲಿ ಒಂದಿಬ್ಬರು ತಮಗೆ ಸ್ವಲ್ಪಮಟ್ಟಿಗೆ ಹುಟ್ಟುಹಾಕುವುದು ತಿಳಿದಿದೆ ಎಂದರು. ಕುದುರೆಗಳನ್ನು ಅಲ್ಲೇ ಬಿಟ್ಟು, ಅವುಗಳನ್ನು ನೋಡಿಕೊಳ್ಳುವುದಕ್ಕೆ ಒಬ್ಬನನ್ನು ನಿಲ್ಲಿಸಿ ಅವರೆಲ್ಲ ದೋಣಿಗಳಿದ್ದಲ್ಲಿಗೆ ಹೋದರು. ಎರಡು ದೋಣಿಗಳಿದ್ದವು. ಅವುಗಳು ದೊಡ್ಡ ದೋಣಿಗಳಲ್ಲ. ಅದರಲ್ಲೂ ಒಂದರ ತಳ ಒಡೆದಿತ್ತು. ಮತ್ತೊಂದು ಕಿರುದೋಣಿ. ಅದನ್ನು ಕಟ್ಟಿದ್ದ ಹಗ್ಗವನ್ನು ಬಿಚ್ಚಿ, ಅವರೆಲ್ಲ ಅದನ್ನೇರಿಕೊಂಡರು.
ಹತ್ತು ಜನರ ಭಾರಕ್ಕೆ ಆ ದೋಣಿ ನದಿಯ ನೀರಿನಲ್ಲಿ ಮುಳುಗದಿದ್ದುದು ಒಂದು ಪವಾಡ ಎನ್ನಬೇಕು. ಹುಟ್ಟು ಹಾಕುವುದನ್ನು ತಿಳಿದಿದ್ದೇವೆ ಎಂದವರು ಹುಟ್ಟುಗಳನ್ನು ಕೈಗೆತ್ತಿಕೊಂಡರು. ದೋಣಿ ಓಲಾಟವಾಡುತ್ತ ಮುಂದೆ ಸಾಗಿತು.
ಕತ್ತಲು ದಟ್ಟವಾಗುತ್ತಿದ್ದ ಕಾರಣ ಅವರಿಗೆ ಸುತ್ತಲೂ ಏನಿದೆ ಎಂದು ಕಾಣಿಸುತ್ತಿರಲಿಲ್ಲ. ಆ ಸಣ್ಣ ದೋಣಿಯಲ್ಲಿ ಇಷ್ಟು ಮಂದಿ ಕುಳಿತಾಗಲೇ ದೋಣಿ ಕೆಳಗೆ ಜಗ್ಗಿ, ನೀರು ಅದರ ಅಂಚು ಮುಟ್ಟುವ ಹಾಗಿತ್ತು. ಆದರೂ ಅದನ್ನೆಲ್ಲ ಲೆಕ್ಕಿಸದೆ ಮುಂದಿನ ದೋಣಿಯನ್ನು ಹಿಡಿಯುವ ಪ್ರಯತ್ನದಲ್ಲಿ ಅವರಿದ್ದರು.
ದುರ್ದೈವವಶಾತ್ ಹುಟ್ಟು ಹಾಕುತ್ತಿದ್ದವರು ಪರಿಣತರಲ್ಲದ ಕಾರಣ ಅವರೊಳಗೆ ತಾಳಮೇಳವಿಲ್ಲದೆ ದೋಣಿ ಮುಂದೆ ಹೋಗುವುದಕ್ಕಿಂತ ಹೆಚ್ಚಾಗಿ ಆಚೀಚೆ ತಿರುಗುತ್ತಿತ್ತು.
ರುದ್ರ ಮಾತ್ರ ಅವರನ್ನು ಆತುರಪಡಿಸುತ್ತಿದ್ದ. ಇದು ಚಿತ್ರಕಾದಿಗಳನ್ನು ಹಿಡಿಯುವ ಕೊನೆಯ ಅವಕಾಶ ಎಂದು ಅವನಿಗೆ ಖಚಿತವಾಗಿತ್ತು. ಈ ಸಲ ಅವರು ತಪ್ಪಿಸಿಕೊಂಡರೆ ಮತ್ತೆಂದೂ ಅವರನ್ನು ತಾನು ಹಿಡಿಯಲಾರೆ. ಬರಿಗೈಯಲ್ಲಿ ಹಿಂದೆ ಹೋದರೆ ತನ್ನ ತಲೆಗೇ ಸಂಚಕಾರ ಬಂದರೂ ಬಂದೀತು. ಸಿಂಧು ರಾಜನ ಸಿಟ್ಟು ಎಷ್ಟೆಂದು ಅವನು ಬಲ್ಲ. ಆದುದರಿಂದ ಅವನ ಎದೆಯಲ್ಲಿ ಭೀತಿ ಬೇರು ತೊಡಗಿತ್ತು. ಇಷ್ಟು ಕಾಲ ಬೇರೆಯವರ ಜೀವವನ್ನು ಹುಲ್ಲುಕಡ್ಡಿಗಿಂತ ಕಡೆಯಾಗಿ ಕಂಡವನು ತನ್ನ ಪ್ರಾಣದ ಪ್ರಶ್ನೆ ಬಂದಾಗ ಮಾತ್ರ ಕಂಗೆಟ್ಟ. ಪ್ರಾಣದ ಬೆಲೆ ಅರಿವಾಗುತ್ತಿತ್ತು ಅವನಿಗೆ.
ಸುತ್ತಲೂ ಆವರಿಸಿದ ಕತ್ತಲು. ಗಂಗಾಪ್ರವಾಹದಲ್ಲಿ ಈಗ ಮುಳುಗಿಬಿಡುತ್ತದೆ ಎಂಬಂತೆ ಆತಂಕ ಹುಟ್ಟಿಸುತ್ತಿರುವ ದೋಣಿ. ಹೇಗೆ ಹೇಗೋ ಚಲಿಸುತ್ತ, ಎಲ್ಲಿಗೆ ಹೋಗುತ್ತಿದ್ದೇವೆ ಎಂಬ ಅರಿವೇ ಇಲ್ಲದ ಯಾನ… ರುದ್ರನ ಬುದ್ಧಿ ಮಂಕಾಗುತ್ತಿತ್ತು. ಅವನ ಅನುಚರರಿಗೂ ಏನೋ ಅಗೋಚರವಾದ ಭಯ ಕಾಡುತ್ತಿತ್ತು. ಅವರು ಉಸಿರಾಡುವುದಕ್ಕೂ ಹೆದರಿದವರಂತೆ ಮೌನವಾಗಿದ್ದರು. ಹೀಗೆ ಸ್ವಲ್ಪ ಹೊತ್ತು ಕಳೆಯಿತು. ಆಕಾಶದಲ್ಲಿ ಕ್ಷೀಣವಾದ ಚಂದ್ರ ಕಾಣಿಸಿಕೊಂಡ. ತೆಳ್ಳನೆಯ ಬೆಳಕು ಹರಿಯಿತು. ಅಸ್ಪಷ್ಟವಾಗಿಯಾದರೂ ನದಿಯ ದಡದ ದೃಶ್ಯಗಳು ಗೋಚರವಾಗತೊಡಗಿದವು.
ಅಷ್ಟರಲ್ಲಿ ಸುಂಯ್ ಎಂಬ ಒಂದು ಸದ್ದೂ, ಅದರ ಬೆನ್ನಿಗೇ ‘ಅಯ್ಯೋ ಸತ್ತೆ’ ಎಂಬ ಆರ್ತನಾದವೂ ಹಠಾತ್ತನೆ ಕೇಳಿಸಿ ರುದ್ರನನ್ನು ವಾಸ್ತವಕ್ಕೆ ಇಳಿಸಿತು.
ಕತ್ತಲಲ್ಲಿ ಏನೂ ಕಾಣಿಸದಿದ್ದರೂ ತಮಗೆ ಆಪತ್ತು ಬಂದಿದೆ ಎಂಬ ಪ್ರಾಣಿ ಸಹಜವಾದ ಜಾಗೃತಿ ಅವರಲ್ಲಿಯೂ ಉಂಟಾಯಿತು. ಅಷ್ಟು ಹೊತ್ತು ಹುಟ್ಟು ಹಾಕುತ್ತಿದ್ದವರಲ್ಲಿ ಒಬ್ಬ ಹುಟ್ಟನ್ನು ಬಿಟ್ಟು, ದೋಣಿಯ ಪಕ್ಕಕ್ಕೆ ವಾಲಿ, ನೀರಿನೊಳಗೆ ಬಿದ್ದ. ಅದು ಉಳಿದವರ ಗಮನಕ್ಕೆ ಬರುವಷ್ಟರಲ್ಲಿ ದಢಕ್ ಎಂದು ದೋಣಿಗೆ ಏನೋ ಹೊಡೆಯಿತು.
“ಅಯ್ಯಯ್ಯೋ ಮೊಸಳೆ” ಎಂದೊಬ್ಬ ಅರಚಿದ.
ಈಗ ರುದ್ರನೂ ಅವನ ಯೋಧರೂ ಭಯದಿಂದ ಬೆವರಿ, ದೋಣಿಯ ಒಂದು ಪಾರ್ಶ್ವಕ್ಕೆ ಸರಿದರು. ದೋಣಿಯ ಆ ಭಾಗದಲ್ಲಿ ನೀರು ಒಳಗೆ ನುಗ್ಗಿತು.
ಮತ್ತೊಮ್ಮೆ ‘ಸುಂಯ್’ ಎಂಬ ಸದ್ದು. ಈಗ ಯಾರೂ ಆರ್ತನಾದ ಮಾಡಲಿಲ್ಲ.
“ಯಾರೋ ನಮ್ಮ ಮೇಲೆ ಬಾಣ ಹೊಡೆಯುತ್ತಿದ್ದಾರೆ. ನಾವು ಎಡದಂಡೆಗೆ ಹತ್ತಿರದಲ್ಲಿದ್ದೇವೆ. ದೋಣಿಯನ್ನು ಬಲಬದಿಗೆ ಸರಿಸಿ. ಬಿಲ್ಲುಗಾರರು ಸಿದ್ಧರಾಗಿ” ರುದ್ರ ಆದೇಶಿಸಿದ.
ಅವನು ಆದೇಶಿಸಿದ, ನಿಜ. ಆದರೆ ಆ ಮಸುಕು ಬೆಳಕಿನಲ್ಲಿ ಎಲ್ಲಿಗೆಂದು ಬಾಣ ಹೊಡೆಯುವುದು? ಕಪ್ಪು ನೆರಳುಗಳೆಲ್ಲ ಶತ್ರುಗಳಂತೆ ಕಾಣುವಾಗ!
ಈಗ ದೋಣಿಯಲ್ಲಿ ಹುಟ್ಟು ಹಾಕುತ್ತಿದ್ದವನು ಒಬ್ಬನೇ. ಅವನು ಹುಟ್ಟನ್ನು ಎಡಬಲಗಳಿಗೆ ಬದಲಿಸುತ್ತ ಎಷ್ಟು ಯತ್ನಿಸಿದರೂ ದೋಣಿ ಅವನ ನಿಯಂತ್ರಣಕ್ಕೆ ಸಿಗುತ್ತಿರಲಿಲ್ಲ. ಬಲಕ್ಕೆ ಹೋಗುವುದಿರಲಿ, ಮುಂದೆ ಹೋಗುವುದೇ ಕಷ್ಟವಿತ್ತು. ಅಷ್ಟರಲ್ಲಿ ಇನ್ನೊಂದು ಬಾಣ ರಭಸವಾಗಿ ಬಂದು ಹುಟ್ಟು ಹಾಕುತ್ತಿದ್ದವನ ಕೈಯನ್ನು ಸೀಳಿತು.
ಅವನ ಕೈಯಿಂದ ಹುಟ್ಟು ಜಾರಿ ನೀರಿಗೆ ಬಿತ್ತು. ಅವನ ಪಕ್ಕದಲ್ಲಿದ್ದ ಯೋಧ ಅದನ್ನು ಎತ್ತಿಕೊಳ್ಳುವುದಕ್ಕೆ ಕೈಚಾಚಿದ. ಅವನ ಚಾಚಿದ ಕೈ ನೀರನ್ನು ಮುಟ್ಟುತ್ತಲೇ ಅದನ್ನು ಯಾವುದೋ ಶಕ್ತಿಯು ಸೆಳೆದಂತಾಯಿತು. ಅವನು ದೋಣಿಯ ಅಂಚನ್ನು ಗಟ್ಟಿಯಾಗಿ ಹಿಡಿದಿದ್ದ. ಸೆಳೆತದ ರಭಸಕ್ಕೆ ದೋಣಿ ಮತ್ತಷ್ಟು ವಾಲಿತು. ದೋಣಿಯೊಳಗೆ ನೀರು ತುಂಬಿತು. ದೋಣಿ ನಿಧಾನಕ್ಕೆ ನೀರಿನಲ್ಲಿ ಮುಳುಗಿತು.
ಕಣ್ಣುಗಳು ಮೂಡಿದ್ದ ಬಂಡೆಗಳಂತಿದ್ದ ಮೊಸಳೆಗಳು ಈಗ ಚುರುಕಾದವು..
“ಅಯ್ಯೋ ಅಯ್ಯೋ..’’ ಎಂಬ ಯೋಧರ ಆರ್ತನಾದ, ರುದ್ರನ ಬೊಬ್ಬಾಟದ ಸದ್ದುಗಳು ನದಿಯ ಸಪ್ಪಳದಲ್ಲಿ ಲೀನವಾದವು.
ನದಿಯ ನೀರು ಕ್ಷಣಾರ್ಧದಲ್ಲಿ ಕೆಂಪಾಯಿತು. ಹೊಸ ನೀರು ಬಂದು ಕೆನ್ನೀರು ಕಾಣದಾಯಿತು.
ನದಿ ಹಿಂದಿನಂತೆ ಶುಭ್ರವಾಗಿ ಹರಿಯತೊಡಗಿತು.
* * *
ಹೀಗಾಗುವುದಕ್ಕೆ ಸ್ವಲ್ಪ ಹೊತ್ತಿನ ಮೊದಲು…
ಸೂರ್ಯ ಮುಳುಗಿ, ಇನ್ನೇನು ಕತ್ತಲಾಗಬೇಕು ಎನ್ನುವಾಗ ಶಂಖ, “ಅವರು ಕಡವಿನಿಂದ ಮುಂದೆ ಬಂದ ಹಾಗೆ ಕಾಣುವುದಿಲ್ಲ. ಇಗ ಅವರು ಗೋಚರಿಸದಿದ್ದರೂ, ನಮ್ಮನ್ನು ಹಿಂಬಾಲಿಸುತ್ತಿರಬಹುದು. ಬಹುಶಃ ಅಲ್ಲಿಂದ ದೋಣಿಯ ಮೇಲೆ ಹೊರಟಿರಬೇಕು. ನಮ್ಮ ಬೆನ್ನ ಹಿಂದೆ ಇದ್ದಾರು. ನುರಿತ ನಾವಿಕರಿಗೆ ವೇಗವಾಗಿ ದೋಣಿ ನಡೆಸಿ, ನಮ್ಮನ್ನು ಹಿಡಿಯುವುದು ಕಷ್ಟವೇನಲ್ಲ. ಈ ಆಪತ್ತನ್ನು ನಿವಾರಿಸಿಕೊಳ್ಳದಿದ್ದರೆ ನಾವು ಪಾಂಚಾಲವನ್ನು ಮುಟ್ಟಲಾರೆವು” ಎಂದ.
ಅದಕ್ಕೆ ದೋಣಿಗಾರ ಜಯ ಹೇಳಿದ, “ಅಯ್ಯಾ, ನಾವು ಕತ್ತಲಾದ ಮೇಲೆ ಮುಂದೆ ಹೋಗುವುದು ಕಷ್ಟ. ಹಗಲಾದರೂ ಎಚ್ಚರದಿಂದ ದೋಣಿ ನಡೆಸಬೇಕಾದ ಸ್ಥಳ ಮುಂದಿದೆ. ಅಲ್ಲಿ ನದೀ ಪಾತ್ರದಲ್ಲಿ ಕಲ್ಲು ಬಂಡೆಗಳಿವೆ. ಅವುಗಳನ್ನು ತಪ್ಪಿಸಿಕೊಂಡು ಹೋಗುವುದು ಬಹಳ ಕಷ್ಟ.”
“ಏನು ಮಾಡೋಣ?’’ ಚಿತ್ರಕ ಕೇಳಿದ. ಚಂಪೆ ಹಾಗೂ ಚಾರುವಿನ ಮುಖಗಳಲ್ಲೂ ಅದೇ ಪ್ರಶ್ನೆ.
“ನೋಡೋಣ” ಎಂದ ಶಂಖ.
ಕೊಂಚ ದೂರ ಬರುತ್ತಲೇ, “ಜಯಾ, ದೋಣಿಯನ್ನು ದಡದತ್ತ ಸರಿಸು. ಅಲ್ಲೇ ಯಾವುದಾದರೂ ಬಾಗಿದ ಮರದ ಕೊಂಬೆಯ ಮರೆಯಲ್ಲಿ ನಿಲ್ಲಿಸು. ನಾನು ಮುಗಿಸಬೇಕಾದ ಕಾರ್ಯವಿದೆ. ಅದಕ್ಕಾಗಿ ಹೋಗುತ್ತೇನೆ. ನೀವು ಇಲ್ಲಿ ಒಂದು ಪ್ರಹರ ಕಾಲ ಕಾದಿರಿ. ಅಷ್ಟು ಹೊತ್ತಿಗೆ ನಾನು ಬಾರದಿದ್ದರೆ, ಮುಂದೆ ಸಾಗಿ. ಇವರನ್ನು ಪಾಂಚಾಲಕ್ಕೆ ಮುಟ್ಟಿಸುವ ಹೊಣೆ ನಿನ್ನದು. ಮುಂದಿನ ಸಂಗಮದಲ್ಲಿ ಎಡಕ್ಕೆ ಅಂದರೆ ಯಮುನಾ ನದಿ ಪಾತ್ರದಲ್ಲಿ ಮುಂದೆ ಹೋಗು. ಅದು ದಕ್ಷಿಣ ಪಾಂಚಾಲದ ಸಮೀಪದಲ್ಲಿ ಸಾಗುತ್ತದೆ. ಈಗ ನಾನು ಇಳಿಯುತ್ತೇನೆ” ಎಂದ.
ದೋಣಿ ದಡಕ್ಕೆ ಬಂತು. ಶಂಖ ಆಯುಧಗಳ ಮೂಟೆಯಿಂದ ದೀರ್ಘವಾದ ಧನುಸ್ಸನ್ನೂ, ಹತ್ತಿಪ್ಪತ್ತು ಬಾಣಗಳನ್ನೂ ಎತ್ತಿಕೊಂಡು ದೋಣಿಯಿಂದ ಇಳಿದ. ಅವನ ಹೆಗಲಿಗೆ ಜೋತು ಬಿದ್ದ ಒರೆಯಲ್ಲಿ ಹರಿತವಾದ ಖಡ್ಗವಂತೂ ಇದ್ದೇ ಇತ್ತು.
“ನೀವು ಅಂಜಬೇಡಿ. ನಾನು ಮರಳದಿದ್ದರೂ ಜಯನೂ ಅವನ ಮಗನೂ ನಿಮ್ಮನ್ನು ಪಾಂಚಾಲಕ್ಕೆ ತಲಪಿಸುತ್ತಾರೆ. ಅವರಿಗೆ ಕೊಡಬೇಕಾದ ಹೊನ್ನನ್ನು ಕೊಟ್ಟಿದ್ದೇನೆ” ಎಂದು ಚಿತ್ರಕನಿಗೆ ಹೇಳಿದ. ಅವನ ಕಣ್ಣುಗಳ ಮಾತ್ರ ಚಂಪೆಯ ಆತಂಕಪೂರ್ಣ ದೃಷ್ಟಿಯನ್ನು ಸಂಧಿಸಿದವು.
“ಶಂಖ, ಜೋಪಾನವಪ್ಪ. ಏನು ಮಾಡಲು ಹೋಗುತ್ತಿದ್ದೀಯೋ ಗೊತ್ತಿಲ್ಲ. ನಿನ್ನನ್ನು ದೇವರು ಕಾಪಾಡಲಿ” ಎಂದಳು ಚಾರು.
ಉಳಿದವರು ಬಾಯಿ ಬಿಡದಿದ್ದರೂ, ಅವರ ಹೃದಯದ ಮೊರೆ ಅದೇ ಆಗಿತ್ತು.
ಶಂಖ ಅದಕ್ಕೇನೂ ಉತ್ತರಿಸಲಿಲ್ಲ.
ಎಡದಂಡೆಯ ಮೇಲೆ ನಿಬಿಡವಾಗಿ ಬೆಳೆದಿದ್ದ ಗಿಡ ಮರ ಬಳ್ಳಿಗಳ ನಡುವೆ ನಸುಳುತ್ತ ಕತ್ತಲಲ್ಲಿ ಕಾಣದಾದ.
(ಸಶೇಷ)
ಪ್ರವಾಹಕ್ಕೆ ಬಿದ್ದವರು
Month : February-2026 Episode : ಅಗ್ನಿಜಾಲ ಭಾಗ-19 Author : ರಾಧಾಕೃಷ್ಣ ಕಲ್ಚಾರ್




