ವ್ಯಾಧಿಗ್ರಸ್ತನಾದ ರೋಗಿಗೆ ಆರೋಗ್ಯವನ್ನು ದೊರಕಿಸಿಕೊಡುವಲ್ಲಿ ಸದ್ವೈದ್ಯನಾದವನು ಆಪ-ಪರ ಭಾವವನ್ನು ವಹಿಸಲಾರನು. ಹುದಲಲ್ಲಿ ಸಿಕ್ಕುಬಿದ್ದ ಆಕಳನ್ನು ಕಂಡು ನೊಂದುಕೊಂಡ ಅಂತಃಕರಣವುಳ್ಳವನು ಅದನ್ನು ಮೇಲಕ್ಕೆ ತೆಗೆಯಲು ಪ್ರಯತ್ನಿಸುವನೇ ಹೊರತು, ಅದು ಹಿಂಡುವದೋ ಬರಡಾದುದೊ ಎಂಬುದನ್ನು ವಿಚಾರಿಸುತ್ತ ಕೂಡ್ರಲಾರನು. ಮಡುವಿನಲ್ಲಿ ಮುಳುಗುವವನನ್ನು ಕಂಡು ದಯಾರ್ದ್ರನಾದ ಸಮರ್ಥನು ಅವನು ಅಂತ್ಯಜನೋ ಬ್ರಾಹ್ಮಣನೊ ಎಂದು ವಿಚಾರಿಸುತ್ತ ಕೂಡ್ರದೆ, ಅವನನ್ನು ದಂಡೆಗೆ ಮುಟ್ಟಿ ಪ್ರಾಣವನ್ನು ರಕ್ಷಿಸುವದೇ ತನ್ನ ಕರ್ತವ್ಯವೆಂದು ತಿಳಿಯುವನು. ಅರಣ್ಯದಿಂದ ಕಳ್ಳರಿಂದ ವಸ್ತ್ರವನ್ನು ಸೆಳೆದುಕೊಂಡು ನಗ್ನಳಾದ ಸ್ತ್ರೀಯನ್ನು ಕಂಡ ಶಿಷ್ಟನು, ಅವಳಿಗೆ ವಸ್ತçವನ್ನು ಹೊದಿಸದೆ ಎಂದೂ ನಿಲ್ಲನು. ಇವೆಲ್ಲವುಗಳಂತೆ ಅಜ್ಞಾನ, ಅಪರಾಧಗಳಿಂದ ಕೂಡಿ, ಪೂರ್ವಕರ್ಮದಿಂದ ದುಃಖಿತರೂ ಜನರಿಂದ ನಿಂದಿತರೂ ಆದವರಿಗೆ ತಾನು ಸಹಾಯಕನಾಗಿ ದುಃಖವನ್ನು ಹಿಮ್ಮೆಟ್ಟಿಸಿ ಸುಖವಾಗುವಂತೆ ಪ್ರಯತ್ನಿಸುವನು.
ತನ್ನೊಡನೆ ಸಬಂಧವುಂಟಾದವರಲ್ಲಿ ಕೆಲ ದೋಷಗಳನ್ನು ಕಂಡರೆ, ಅವನ್ನು ವರ್ಜಿಸಿ ಅವರೊಡನೆ ಪ್ರೇಮವನ್ನು ಬೆಳೆಸುವನು. ಪೂಜೆಯಿಂದ ದೇವರನ್ನು ಸುಶೋಭಿತಗೊಳಿಸಿ, ಬಳಿಕ ಪ್ರಸನ್ನ ಚಿತ್ತದಿಂದ ಅವನನ್ನು ನೋಡುವದು; ಹೊಲದಲ್ಲಿ ಬೀಜ ಬಿತ್ತಿ ಫಲಾಶೆಯಿಂದ ಅದನ್ನು ಕಾಣುವದು; ಅತಿಥಿಯನ್ನು ಸಂತುಷ್ಟಗೊಳಿಸಿ, ಬಳಿಕ ಅವನಿಂದ ಆಶೀರ್ವಾದ ಪಡೆಯುವದು; ಇವೆಲ್ಲವುಗಳಂತೆ ತನ್ನ ಗುಣಗಳಿಂದ ಅಥವಾ ಸಾಧನಗಳಿಂದ ನೆರೆಯವರ ನ್ಯೂನತೆಗಳನ್ನು ಹೋಗಲಾಡಿಸಿ ಅವರನ್ನು ಆದರದಿಂದ ನೋಡಬೇಕು. ಇಷ್ಟೇ ಅಲ್ಲ, ಅವರ ಮನವನ್ನು ನೋಯಿಸುವ ಮಾತುಗಳನ್ನು ಆಡಕೂಡದು. ಅವರ ಅನಾಚಾರಗಳನ್ನು ಉಲ್ಲೇಖಿಸಲಾಗದು ಮತ್ತು ಅವರು ಮಾಡಿದ ಪಾಪಗಳನ್ನು ಉಚ್ಛರಿಸಿ, ಅವರಿಗೆ ಖೇದವನ್ನುಂಟು ಮಾಡಬಾರದು. ಪತಿತರನ್ನು ಪಾವನಗೊಳಿಸಲು ಪ್ರಯತ್ನಿಸಬೇಕು. ಮರ್ಮಚ್ಛೇದ ಮಾಡಲಾಗದು. ಯಾವನೊಬ್ಬ ಉತ್ತಮ ಪುರುಷನನ್ನು ಕನಿಷ್ಠನನ್ನಾಗಿ ಎಣಿಸದೆ ಆತನ ದೋಷಗಳನ್ನು ದುರ್ಲಕ್ಷಿಸಬೇಕು. ಅರ್ಜುನ! ಇವೆಲ್ಲವು ‘ಅಪೈಶೂನ್ಯ’ ದ ಅಥವಾ ಸುಜನತೆಯ ಲಕ್ಷಣಗಳಾಗಿವೆ. ಇದೊಂದು ಮೋಕ್ಷ ಮಾರ್ಗದೊಳಗಿನ ಸುಖಸಾಧನವಾಗಿದೆ.
[ಜ್ಞಾನೇಶ್ವರೀ ಗೀತೆ, ಅಧ್ಯಾಯ ೬.
ಅನುವಾದ: ಅಣ್ಣಪ್ಪ ಕೃಷ್ಣಾಜಿರಾವ ಕುಲಕರ್ಣಿ.]




