ಕವಿಗಳ ಕಥೆಗಳಲ್ಲಿ ಪದ್ಯಗಳದ್ದೇ ಪ್ರಾಮುಖ್ಯ. ಒಬ್ಬೊಬ್ಬ ಕವಿಯ ಪದ್ಯವೂ ಒಂದೊಂದು ರೀತಿ. ಪ್ರತಿಯೊಬ್ಬ ಕವಿಯೂ ಅವನ ಮನೋಭಾವಕ್ಕೆ ತಕ್ಕಂತೆ ಪದ್ಯಗಳನ್ನು ಬರೆಯುತ್ತಾನೆ. ಪದ್ಯಕ್ಕೆ ಛಂದಸ್ಸು ಮೊದಲ ಅಲಂಕಾರ. ಆ ಬಳಿಕ ಅದರಲ್ಲಿ ಇರುವ ಪ್ರಾಸ-ಅನುಪ್ರಾಸ ಮೊದಲಾದವು ಇನ್ನಷ್ಟು ಶೋಭೆಯನ್ನು ಕೊಡುವಂತಹವು. ಅವೆಲ್ಲಕ್ಕಿಂತ ಮುಖ್ಯವಾಗಿ ಅದರಲ್ಲಿ ಇರುವಂತಹ ಅರ್ಥದ ಮಹತ್ತ್ವ. ಒಂದು ಸರಳವಾದ ವಾಕ್ಯವನ್ನೇ ಕವಿಯಾದವನು ಹೇಳಿದಾಗ ಅದು ಬೇರೆಯದೇ ರೀತಿಯಲ್ಲಿ ವಿಶೇಷವಾಗಿ ಸಂತಸವನ್ನು ಕೊಡುವಂತೆ ಇರುತ್ತದೆ. ಆ ಕಾರಣದಿಂದಲೇ “ಕಿವಿಯಿಂದೀಂಟಿಸುವರ್ ಸಮಸ್ತ ರಸಮಂ” (ಕಿವಿಯಿಂದಲೇ ಎಲ್ಲ ರಸವನ್ನೂ ಹೀರುವಂತೆ ಮಾಡುತ್ತಾರೆ) ಎಂದು ನೇಮಿಚಂದ್ರ ಎಂಬ ಕವಿ ಹೇಳಿದ್ದಾನೆ.
ಸಭೆಯಲ್ಲಿ ಕವಿಗಳು ಕೇಳಿದ ವಿಷಯವನ್ನು ಕುರಿತು ತತ್‍ಕ್ಷಣ ರಚಿಸಿ ಹೇಳುವ ಪದ್ಯಗಳನ್ನು ಆಶುಕವಿತೆ ಎನ್ನುತ್ತಾರೆ. ಹಾಗಲ್ಲದೆ ಮನೆಯಲ್ಲಿ ವಿರಾಮದಲ್ಲಿ ಕುಳಿತು ಬರೆದ ಪದ್ಯಕ್ಕೆ ಗೃಹಕವಿತ್ವ ಎಂದು ಹೇಳುತ್ತಾರೆ. ಆಶುಕವಿತೆಗೆ ಅದನ್ನು ವೇಗವಾಗಿ ರಚಿಸಿ ಹೇಳುವುದು ಎಂಬ ಪ್ರಾಮುಖ್ಯವಿದ್ದರೂ ಒಂದು ಬಾರಿ ಬರೆದ ತತ್‍ಕ್ಷಣ ಅದೇ ಶ್ರೇಷ್ಠವಾದ ಪದ್ಯವೆಂದು ಹೇಳುವುದಕ್ಕೆ ಆಗುವುದಿಲ್ಲ. ಅದೇ ಪದ್ಯದ ಭಾವವನ್ನು ಮನೆಯಲ್ಲಿ ಕುಳಿತು ನಿಧಾನವಾಗಿ ಆಲೋಚಿಸಿದರೆ ಇನ್ನಷ್ಟು ಚೆನ್ನಾಗಿ ಬರೆಯುವ ಸಾಧ್ಯತೆಯೂ ಇರುತ್ತದೆ. ಆ ಕಾರಣ ಗೃಹಕವಿತ್ವವನ್ನು ವಿಮರ್ಶಿಸುವಾಗ ವಿದ್ವಾಂಸರು ಯಾವ ರಿಯಾಯಿತಿಯನ್ನೂ ತೋರುವುದಿಲ್ಲ. ಗೃಹಕವಿತ್ವದಲ್ಲಿ ಬರೆದ ಪದ್ಯವನ್ನು ಮತ್ತೆ ಮತ್ತೆ ಓದಿ ತಿದ್ದಿ ಪರಿಷ್ಕಾರವನ್ನು ಮಾಡುವುದಕ್ಕೆ ಕೂಡ ಅವಕಾಶ ಇರುತ್ತದೆ. ಹೀಗಾಗಿ ಹಿಂದಿನ ಕವಿಗಳು ತಮ್ಮ ಆಪ್ತರಾದ ವಿದ್ವಾಂಸರ ಬಳಿ ತಿದ್ದುಪಡಿ ಮಾಡಿಸಿಕೊಂಡಿದ್ದಾಗಿ ಕೂಡ ಬರೆದುಕೊಂಡಿದ್ದಾರೆ. ಕನ್ನಡದ ಶ್ರೇಷ್ಠಕವಿಗಳೆನಿಸಿಕೊಂಡ ರನ್ನ, ರುದ್ರಭಟ್ಟ, ದುರ್ಗಸಿಂಹ ಮೊದಲಾದವರು ತಮ್ಮ ಕಾವ್ಯವನ್ನು ಪರಿಷ್ಕರಿಸಿದವರ ಹೆಸರುಗಳನ್ನೂ ಹೇಳಿದ್ದಾರೆ. ಅದೇ ರೀತಿಯಲ್ಲಿ ಕಾಳಿದಾಸ ತನ್ನ ಪದ್ಯಗಳನ್ನು ಪರಿಷ್ಕಾರ ಮಾಡಿದಷ್ಟು ಚೆನ್ನಾಗಿ ಮತ್ತಾರೂ ಮಾಡಿಲ್ಲ ಎಂದು ವಿದ್ವಾಂಸರು ಹೇಳುತ್ತಾರೆ. ಏಕೆಂದರೆ ಅವನ ಪದ್ಯಗಳಲ್ಲಿ ಒಂದೊಂದು ಶಬ್ದವನ್ನೂ ಸಾಕಷ್ಟು ಅಳೆದು ತೂಗಿ ಬಳಸಿದ್ದಾನೆ. ಅವನ ಯಾವುದೇ ಪದ್ಯದಲ್ಲಿ ಯಾವುದೋ ಒಂದು ಶಬ್ದದ ಬದಲಿಗೆ ಬೇರೆ ಇನ್ನೊಂದು ಶಬ್ದವನ್ನು ಹಾಕಬಹುದೇ ಎಂದು ಪರಿಶೀಲಿಸಿ ನೋಡಿದ ಹಿರಿಯರನೇಕರು, ‘ಅದರಿಂದ ಪದ್ಯದ ಸೌಂದರ್ಯ ಹಾಳಾಗುತ್ತದೆಯಷ್ಟೆ’ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಹೀಗೆ ಕಾಳಿದಾಸ ಸಕಲಾರ್ಥದಲ್ಲಿ ಪರಿಪೂರ್ಣತೆಯನ್ನು ಸಾಧಿಸಿದ್ದಾನೆ. ಅವನ ಪರಿಷ್ಕಾರಪಾಂಡಿತ್ಯಕ್ಕೆ ನಿದರ್ಶನವಾಗಿ ಒಂದು ಕಥೆ ಅನೇಕ ಭಾಷೆಗಳಲ್ಲಿ ಪ್ರಚಲಿತದಲ್ಲಿದೆ.
ಕಾಳಿದಾಸನ ಮೇಲೆ ಭವಭೂತಿಗೆ ಅಪಾರ ಗೌರವ ಬೆಳೆದಿತ್ತು. ಇಬ್ಬರಿಗೂ ಸ್ನೇಹವೂ ಚೆನ್ನಾಗಿತ್ತು. ಭವಭೂತಿ ಉತ್ತರರಾಮಚರಿತೆಯೆಂಬ ನಾಟಕವನ್ನು ಬರೆದುಕೊಂಡು ಬಂದಿದ್ದ. ಅದನ್ನು ಕಾಳಿದಾಸ ಓದಿ ಅವನ ಅಭಿಪ್ರಾಯವನ್ನು ತಿಳಿಸಿದರೆ ಚೆನ್ನಾಗಿರುತ್ತದೆ ಎಂದು ಅನಿಸಿತ್ತು. ಕಾಳಿದಾಸನ ಅಭಿಪ್ರಾಯಕ್ಕೆ ತಕ್ಕಂತೆ ತಿದ್ದುಪಡಿ ಮಾಡಿದರೆ ಅವನ ಕೃತಿ ಇನ್ನೂ ಉತ್ಕೃಷ್ಟವಾಗುವುದರಲ್ಲಿ ಯಾವುದೇ ಸಂಶಯವಿರಲಿಲ್ಲ.
ಕಾಳಿದಾಸ ಸುಖಾಸನದಲ್ಲಿ ಕುಳಿತುಕೊಂಡಿದ್ದ. ಭವಭೂತಿ ಕಾಳಿದಾಸ ಹೇಳಿದಂತೆ ಅವನಿಗೆ ಓದಿ ಕೇಳಿಸುತ್ತಿದ್ದ. “ರಾಮನ ಪಟ್ಟಾಭಿಷೇಕವೆಲ್ಲ ಆಗಿದೆ. ಆ ಸಂಭ್ರಮದ ಆಚರಣೆಗಳೆಲ್ಲ ಆಗಿವೆ. ಆ ಸಂದರ್ಭದಲ್ಲಿ ರಾಮನ ಬಳಿ ಲಕ್ಷ್ಮಣ ಬಂದು ‘ಚಿತ್ರಕಾರನೊಬ್ಬ ನಿನ್ನ ಕಥೆಯನ್ನು ಪೂರ್ತಿಯಾಗಿ ಚಿತ್ರಿಸಿದ್ದಾನೆ. ಅದನ್ನು ನೋಡುವುದಕ್ಕೆ ಬರಬೇಕು’ ಎಂದು ಬಿನ್ನವಿಸಿಕೊಂಡ. ಸೀತೆಯೂ ರಾಮನ ಜೊತೆಯಲ್ಲಿ ಆ ಚಿತ್ರಗಳನ್ನು ನೋಡುವುದಕ್ಕೆ ಸಾಗಿದಳು. ಮೂವರೂ ಚಿತ್ರಗಳನ್ನು ನೋಡುತ್ತ ಸಾಗುತ್ತಿರುವಾಗ ತಮ್ಮ ಹಳೆಯ ನೆನಪುಗಳನ್ನು ಮತ್ತೆ ಮತ್ತೆ ನೆನಪಿಸಿಕೊಂಡು ಮಾತನಾಡಿಕೊಳ್ಳತೊಡಗಿದರು. ವನವಾಸದ ಸಂದರ್ಭದ ಒಂದು ಚಿತ್ರವನ್ನು ನೋಡಿ ಆ ದಿನಗಳು ಹೇಗಿದ್ದವು ಎಂದು ನೆನಪಿಸಿಕೊಳ್ಳುತ್ತಾ ರಾಮ ಹೀಗೆ ಹೇಳಿದ. “ದೇವಿ ಸೀತೆಯೇ! ಆ ಗೋದಾವರಿಯ ತೀರಗಳಲ್ಲಿ ನಾವು ಇದ್ದಾಗ, ಲಕ್ಷ್ಮಣ ನಮ್ಮ ಸೇವೆಯನ್ನು ಮಾಡುತ್ತಿದ್ದನಲ್ಲ, ಆ ದಿನಗಳು ನಿನಗೆ ನೆನಪಿವೆಯೇ?”
ಕಿಮಪಿ ಕಿಮಪಿ ಮಂದಂ ಮಂದಮಾಸತ್ತಿಯೋಗಾ-
ದವಿರಲಿತಕಪೋಲಂ ಜಲ್ಪತೋರಕ್ರಮೇಣ
ಅಶಿಥಿಲಪರಿರಂಭವ್ಯಾಪೃತೈಕೈಕದೋಷ್ಣೋ-
ರವಿದಿತಗತಯಾಮಾ ರಾತ್ರಿರೇವಂ ವ್ಯರಂಸೀತ್ ||
(ನಾವಿಬ್ಬರೂ ರಾತ್ರಿ ಯಾವುದೇ ಕ್ರಮವಿಲ್ಲದಂತೆ ಸಣ್ಣನೆಯ ದನಿಯಲ್ಲಿ ಏನನ್ನೋ ಹರಟೆ ಹೊಡೆಯುತ್ತಾ ಒಬ್ಬರನ್ನೊಬ್ಬರು ತಬ್ಬಿಕೊಂಡು ಇರುವಾಗ ಸಮಯ ಕಳೆದದ್ದೇ ಗೊತ್ತಾಗುತ್ತಿರಲಿಲ್ಲ. ರಾತ್ರಿ ಹೀಗೆ ಕಳೆದಿತ್ತು)
ಭವಭೂತಿ ಪದ್ಯವನ್ನು ಓದಿ ಮುಗಿಸುತ್ತಿದ್ದಂತೆ ಕಾಳಿದಾಸ “ಒಂದು ಸೊನ್ನೆ ಹೆಚ್ಚಾಯಿತು” ಎಂದ. ಕಾಳಿದಾಸನ ಈ ಮಾತನ್ನು ಥಟ್ಟನೆ ಗ್ರಹಿಸಿದ ಭವಭೂತಿ. ಕೊನೆಯ ಸಾಲಿನಲ್ಲಿ ‘ರಾತ್ರಿರೇವ ವ್ಯರಂಸೀತ್’ ಎಂದು ಬದಲಾಯಿಸಿದ. ಆಗ ಪದ್ಯದ ಅರ್ಥ ಇನ್ನೂ ವಿಶೇಷವಾಯಿತು. “ಸೀತೆ ರಾಮ ಇಬ್ಬರೂ ವನವಾಸದಲ್ಲಿ ಇರುವಾಗ ರಾತ್ರಿ ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಸಣ್ಣ ದನಿಯಲ್ಲಿ ಯಾವುದೇ ಕ್ರಮವಿಲ್ಲದೆ ಹರಟೆ ಹೊಡೆಯುತ್ತಾ ಇದ್ದರೆ ರಾತ್ರಿಯೇ ಕಳೆದುಹೋಯಿತು” ಎಂದು ಬದಲಾಯಿತು. ‘ರಾತ್ರಿ ಹೀಗೆ ಕಳೆಯಿತು’ ಎಂಬುದಕ್ಕಿಂತ, ‘ಹರಟೆಯಲ್ಲಿ ಸಮಯ ಹೋದದ್ದು ಗೊತ್ತಾಗದೆ ರಾತ್ರಿಯೇ ಕಳೆದುಹೋಯಿತು’ ಎಂದು ಹೇಳಿದರೆ ಇನ್ನೂ ಸ್ವಾರಸ್ಯವಿರುತ್ತದೆ.
ಭವಭೂತಿ ಸ್ವತಃ ಪ್ರತಿಭಾಶಾಲಿಯಾದ ಕವಿಯಾದ ಕಾರಣ ಮೊದಲಿಗೇ ಅವನು ‘ರಾತ್ರಿರೇವ ವ್ಯರಂಸೀತ್’ ಎಂದೇ ಬರೆದಿರಬಹುದು. ವಾಲ್ಮೀಕಿಮಹರ್ಷಿಗಳ ರಾಮಾಯಣದ ಮೂಲದಲ್ಲಿ ಕೂಡ ಒಂದು ಕಡೆಯಲ್ಲಿ “ಕ್ಷಣಮಿವ ಸಾ ವಿಬಭೌ ವಿಭಾವರೀ ಚ” (ರಾತ್ರಿ ಪೂರ್ತಿ ಒಂದು ಕ್ಷಣದಂತೆ ಕಳೆದುಹೋಯಿತು) ಎಂಬ ಪದ್ಯವಿದೆ. ಅದರಿಂದಲೂ ಸ್ಫೂರ್ತಿಯನ್ನು ಪಡೆದಿರಬಹುದು. ಕೆಲವು ತಾಳೆಗರಿಯ ಪುಸ್ತಕಗಳಲ್ಲಿ ಈ ಪದ್ಯಕ್ಕೆ ‘ರಾತ್ರಿರೇವಂ’ ಎಂದೂ, ಇನ್ನು ಕೆಲವು ಪುಸ್ತಕಗಳಲ್ಲಿ ‘ರಾತ್ರಿರೇವ’ ಎಂದೂ ಬರೆದಿರುವ ಪಾಠಾಂತರಗಳು ಸಿಗುತ್ತವೆ. ಆ ಕಾರಣದಿಂದಲೇ ಯಾರೋ ಚಾತುರ್ಯದಿಂದ ಈ ಕಥೆಯನ್ನು ಕಟ್ಟಿದ್ದಾರೆ.
ಬ್ರಹ್ಮರಾಕ್ಷಸನೊಡನೆ ವಿದ್ಯಾವಿನೋದ..
ವಿದ್ವಾಂಸರಾದ ಬ್ರಾಹ್ಮಣರು ತಮ್ಮ ವಿದ್ಯೆಯನ್ನು ಸರಿಯಾದ ಶಿಷ್ಯನನ್ನು ಹುಡುಕಿ ಕಲಿಸಿಕೊಡದಿದ್ದರೆ ಸತ್ತಮೇಲೆ ಬ್ರಹ್ಮರಾಕ್ಷಸರಾಗುತ್ತಾರೆ ಎಂದು ಹೇಳುತ್ತಾರೆ. ತಾವು ಕಲಿತ ವಿದ್ಯೆಯನ್ನು ಸರಿಯಾಗಿ ಮುಂದಿನ ತಲೆಮಾರಿಗೆ ದಾಟಿಸುವ ಕರ್ತವ್ಯವನ್ನು ನಮ್ಮ ಪರಂಪರೆ ಎಷ್ಟು ಗೌರವಿಸಿದೆ ಎಂಬುದಕ್ಕೆ ಇದೊಂದು ಸಾಕ್ಷಿ ಎಂದೇ ಹೇಳಬಹುದು. ಹೀಗೆ ಬ್ರಹ್ಮರಾಕ್ಷಸ ಆದಂತಹವರು ತಮ್ಮ ವಿದ್ಯೆಯನ್ನು ಬಲ್ಲವರು ಅಥವಾ ಅದಕ್ಕೆ ಉತ್ತರಾಧಿಕಾರಿಯಾದಂತಹವರು ಕಂಡ ಮೇಲೆ ರಾಕ್ಷಸತ್ವದಿಂದ ಬಿಡುಗಡೆಯನ್ನು ಪಡೆಯುತ್ತಾರೆ ಎಂದೂ ಹೇಳುತ್ತಾರೆ. ಇದಕ್ಕೆ ಹಿಂದಿನ ಕಾಲದಿಂದಲೂ ಅನೇಕ ಕಥೆಗಳು ಕಾಣಿಸುತ್ತಲೇ ಇರುತ್ತವೆ.
ಒಂದು ಬಾರಿ ಭೋಜರಾಜ ತನ್ನ ವಿಲಾಸಕ್ಕಾಗಿ ಒಂದು ಭವ್ಯವಾದ ಅರಮನೆಯನ್ನು ಕಟ್ಟಿಸಿದ. ಎಲ್ಲ ರೀತಿಯಿಂದಲೂ ವಿಶೇಷವಾಗಿದ್ದ ಆ ನವಾಗಾರವನ್ನು ಪ್ರವೇಶಿಸಬೇಕೆಂದು ಸುಮುಹೂರ್ತವನ್ನು ನೋಡುತ್ತಿರುವ ಸಂದರ್ಭದಲ್ಲಿ ಒಬ್ಬ ಬ್ರಹ್ಮರಾಕ್ಷಸ ಅಲ್ಲಿ ಪ್ರವೇಶಿಸಿಬಿಟ್ಟ. ರಾತ್ರಿಯ ಹೊತ್ತು ಆ ಮನೆಯಲ್ಲಿ ಯಾರು ಉಳಿದುಕೊಂಡರೂ ಅವರನ್ನು ತಿಂದುಬಿಡುತ್ತಿದ್ದ. ಆ ಬ್ರಹ್ಮರಾಕ್ಷಸ ಹಿಂದೆ ಯಾವತ್ತೋ ಕಲಿತ ಪದ್ಯಗಳನ್ನು ಶಾಸ್ತçವನ್ನೆಲ್ಲ ಹೇಳುತ್ತಿರುತ್ತಾನೆ ಎಂದು ಗೊತ್ತಾಯಿತು. ಅವನ ಬಾಧೆಯನ್ನು ತಾಳಲಾರದೆ ಭೋಜರಾಜ ಕೆಲವು ಮಾಂತ್ರಿಕರನ್ನು ಕರೆಸಿದ. ಆ ಮನೆಯಿಂದ ಅವನನ್ನು ಓಡಿಸಲು ಹೋದ ಆ ಮಾಂತ್ರಿಕರೂ ಅವನಿಗೆ ಆಹಾರವಾದರು. ಹೇಗೆ ಮಾಡಿದರೂ ಆ ಬ್ರಹ್ಮರಾಕ್ಷಸನ ನಿವಾರಣೆಯಾಗದ ಕಾರಣ ಚಿಂತಿತನಾಗಿದ್ದ ಭೋಜರಾಜನ ಬಳಿ ಕಾಳಿದಾಸ, ತಾನೇ ಹೋಗಿ ಆ ಬ್ರಹ್ಮರಾಕ್ಷಸನನ್ನು ಅಲ್ಲಿಂದ ಹೊರಕ್ಕೆ ಕಳಿಸುವುದಾಗಿ ಹೇಳಿದ. ಭೋಜರಾಜನಿಗೆ ಕಾಳಿದಾಸನ ಮೇಲೆ ಅಪಾರವಾದ ವಿಶ್ವಾಸ. ಆದರೂ ಎಡವಟ್ಟಾದರೆ ಅಂತಹ ಆಪ್ತನಾದ ಸ್ನೇಹಿತನನ್ನೂ ಉತ್ತಮ ಕವಿಯನ್ನೂ ಕಳೆದುಕೊಳ್ಳುತ್ತೇನಲ್ಲಾ ಎಂಬ ಭಯ.
ಭೋಜರಾಜ ಅವನ ಭಯವನ್ನು ವ್ಯಕ್ತಪಡಿಸಿದಾಗ ಕಾಳಿದಾಸ, “ದೇವ, ಇವನು ನಿಶ್ಚಿತವಾಗಿಯೂ ಸಕಲಶಾಸ್ತ್ರಪ್ರವೀಣನೂ ಒಳ್ಳೆಯ ಕವಿಯೂ ಆಗಿರುವ ಬ್ರಹ್ಮರಾಕ್ಷಸನೇ ಆಗಿರಬೇಕು. ಹಾಗಾಗಿ ಅವನನ್ನು ಸಂತೋಷಪಡಿಸಿ ನಾನು ಈ ಕಾರ್ಯವನ್ನು ಸಾಧಿಸುತ್ತೇನೆ. ಮಾಂತ್ರಿಕರಾಗಲೀ ಅಥವಾ ಇನ್ನಾರಾಗಲೀ ಹೋಗುವುದು ಬೇಡ. ನನ್ನ ಮಂತ್ರವನ್ನು ನೋಡುವಿರಂತೆ!” ಎಂದ.
ಆ ರಾತ್ರಿ ಹೊಸ ಅರಮನೆಯಲ್ಲಿ ಕಾಳಿದಾಸ ಹೋಗಿ ಮಲಗಿದ. ರಾತ್ರಿಯ ಮೊದಲ ಯಾಮದಲ್ಲಿ ಬ್ರಹ್ಮರಾಕ್ಷಸ ಬಂದ. ಅವನಿಗೂ ಅಪೂರ್ವತೇಜಸ್ವಿಯಾದ ಇವನನ್ನು ನೋಡಿ ಅಚ್ಚರಿಯಾಯಿತು. ಅವನು ಒಂದೊಂದು ಜಾವದಲ್ಲಿಯೂ ಪಾಣಿನಿಯ ಒಂದೊಂದು ಸೂತ್ರವನ್ನು ಹೇಳುತ್ತಿದ್ದ. ಅದನ್ನು ಸಮಸ್ಯೆಯಂತೆ ತೆಗೆದುಕೊಂಡು ಪದ್ಯರಚನೆಯನ್ನು ಮಾಡಿ ಮುಂದುವರೆಸದಿದ್ದರೆ ಇವನು ಯಾರೋ ಅಜ್ಞಾನಿ ಎಂದು ಅವರನ್ನು ತಿಂದುಬಿಡುತ್ತಿದ್ದ. ಈ ವ್ಯಕ್ತಿಯನ್ನೂ ಹಿಂದಿನಂತೆಯೇ ಪರೀಕ್ಷಿಸಬೇಕೆಂದು ಯೋಚಿಸಿಕೊಂಡು “ಸರ್ವಸ್ಯ ದ್ವೇ” (ಎಲ್ಲಕ್ಕೂ/ಎಲ್ಲರಿಗೂ ಎರಡು) ಎಂದು ಒಂದು ಸೂತ್ರವನ್ನು ಹೇಳಿದ. ಸ್ಥೂಲವಾಗಿ ಹೇಳುವುದಾದರೆ, ಈ ಪಾಣಿನಿಯ ಸೂತ್ರವು ಒಂದೇ ಶಬ್ದವನ್ನು ಎರಡು ಬಾರಿ ಹೇಗೆ ಬಳಸಬಹುದು ಎಂಬುದನ್ನು ಸೂಚಿಸುವುದಕ್ಕೆ ಬರುವಂತಹದ್ದು. ಉದಾಹರಣೆಗೆ- “ಹಳ್ಳಿ ಹಳ್ಳಿಯೂ ಸುಂದರವಾಗಿದೆ” ಎಂಬ ವಾಕ್ಯದಲ್ಲಿ ಹಳ್ಳಿ- ಎಂಬ ಶಬ್ದವನ್ನು ಎರಡು ಬಾರಿ ಬಳಸಿದಂತೆ, ಇಂತಹ ಅನೇಕ ಸಂದರ್ಭಗಳಲ್ಲಿ “ಎಲ್ಲಕ್ಕೂ ಎರಡು” ಬಾರಿ ಶಬ್ದಪ್ರಯೋಗ ಬರುತ್ತದೆ ಎಂದು ಪಾಣಿನಿಯ ಸೂತ್ರ.
ಕಾಳಿದಾಸ ಅದನ್ನು ಕೇಳಿ ತತ್ಕ÷್ಷಣ ಆ ವ್ಯಾಕರಣ ಸೂತ್ರವನ್ನು ಬಳಸಿಕೊಂಡು ಅದನ್ನು ಪದ್ಯರೂಪದಲ್ಲಿ ಮುಂದುವರೆಸಿ ಉತ್ತರವನ್ನು ಹೇಳಿದ-
“ಸರ್ವಸ್ಯ ದ್ವೇ- ಸುಮತಿಕುಮತೀ ಸಂಪದಾಪತ್ತಿಹೇತೂ” (ಎಲ್ಲರಿಗೂ ಒಳ್ಳೆಯ ಬುದ್ಧಿ ಹಾಗೂ ಕೆಟ್ಟ ಬುದ್ಧಿ ಎಂಬ ಎರಡು, ಒಂದು ಸಂಪತ್ತನ್ನೂ, ಇನ್ನೊಂದು ಆಪತ್ತನ್ನೂ ತಂದುಕೊಡುತ್ತದೆ)
ಬ್ರಹ್ಮರಾಕ್ಷಸ ನಿರ್ಗಮಿಸಿದ. ಮತ್ತೆ ಎರಡನೆಯ ಜಾವದಲ್ಲಿ ಬಂದು “ವೃದ್ಧೋ ಯೂನಾ” (ವೃದ್ಧನು ಯುವಕನ) ಎಂದು ಇನ್ನೊಂದು ಸೂತ್ರವನ್ನು ಹೇಳಿದ. ಇದು ‘ವೃದ್ಧೋ ಯೂನಾ ತಲ್ಲಕ್ಷಣಶ್ಚೇದೇವ ವಿಶೇಷಃ” ಎಂಬ ಇನ್ನೊಂದು ಸೂತ್ರದ ಮೊದಲ ಭಾಗ. ಅದು ವಂಶವೊಂದನ್ನು ಹೇಳುವಾಗ ವೃದ್ಧನ ಹೆಸರೇ ಉಳಿದುಕೊಳ್ಳುತ್ತದೆ ಎಂಬಂತೆ ಸೂಚಿಸುವ ಸೂತ್ರ. ಅದನ್ನು ಪದ್ಯದಲ್ಲಿ ಬಳಸಿ ಕಾಳಿದಾಸ ಹೀಗೆ ಹೇಳಿದ-
“ವೃದ್ಧೋ ಯೂನಾ- ಸಹ ಪರಿಚಯಾತ್ ತ್ಯಜ್ಯತೇ ಕಾಮಿನೀಭಿಃ” (ಪ್ರಾಯದ ಯುವಕನ ಪರಿಚಯವಾದ ಕಾರಣ ಸುಂದರಿಯರಿಂದ ವೃದ್ಧನು ತ್ಯಜಿಸಲ್ಪಡುತ್ತಾನೆ)
ಬ್ರಹ್ಮರಾಕ್ಷಸ ನಿರ್ಗಮಿಸಿ ಮತ್ತೆ ಮೂರನೆಯ ಯಾಮದಲ್ಲಿ ಬಂದು “ಏಕೋ ಗೋತ್ರೇ” (ಒಂದು/ಒಬ್ಬನು ಗೋತ್ರದಲ್ಲಿ) ಎಂದು ಹೇಳಿದ. ಒಂದು ವಂಶವನ್ನು ನಿರ್ದೇಶಿಸುವಾಗ ಆ ಗೋತ್ರದವರಿಗೆಲ್ಲ ಹಿರಿಯನಿಂದ ಉಕ್ತವಾದ ಹೆಸರೇ ಉಳಿಯುತ್ತದೆ ಎಂಬರ್ಥದ ಸೂತ್ರ. ಉದಾಹರಣೆಗೆ- ‘ರಘು’ವಿನ ಮಗ ಅಜ, ಅವನಿಗೆ ರಾಘವ ಎಂಬ ಹೆಸರು ಸೂಕ್ತ. ಬಳಿಕ ಜನಿಸಿದ ಅಜನ ಮಗ ದಶರಥ, ಅವನ ಮಗ ರಾಮ ಇವರಿಗೂ ಕೂಡ ‘ರಾಘವ’ ಎಂಬ ಹೆಸರಿನಿಂದ ಕರೆಯಬಹುದು. ಈ ಶಬ್ದದ ಪ್ರಕ್ರಿಯೆಯನ್ನು ನಿರ್ದೇಶಿಸುವ ಸೂತ್ರವನ್ನು ಪದ್ಯವಾಗಿಸಿಕೊಂಡು ಕಾಳಿದಾಸ ಉತ್ತರಿಸಿದ-
“ಏಕೋ ಗೋತ್ರೇ- ಪ್ರಭವತಿ ಪುಮಾನ್ ಯಃ ಕುಟುಂಬಂ ಬಿಭರ್ತಿ” (ಗೋತ್ರದಲ್ಲಿ ಕುಟುಂಬವನ್ನು ಪಾಲನೆ ಮಾಡುವಂತಹ ಒಬ್ಬ ಸಮರ್ಥ ವ್ಯಕ್ತಿಯು ಮಾತ್ರ ಹುಟ್ಟುತ್ತಾನೆ)
ನಾಲ್ಕನೆಯ ಯಾಮದಲ್ಲಿ ಮತ್ತೆ ಬಂದ ರಾಕ್ಷಸ, “ಸ್ತ್ರೀ ಪುಂವಚ್ಚ” (ಹೆಂಗಸು ಗಂಡಸಿನಂತೆ) ಎಂದು ನಾಲ್ಕನೆಯ ಸೂತ್ರದ ಸಮಸ್ಯೆಯನ್ನು ಹೇಳಿದ. ಇದು ಹಿಂದೆ ಹೇಳಿದ ‘ವೃದ್ಧೋ ಯೂನಾ’ ಸೂತ್ರಕ್ಕೆ ಅನ್ವಯಿಸಿಯೇ ಇರುವ ಇನ್ನೊಂದು ಸೂತ್ರ, ಸ್ತ್ರೀಲಿಂಗದಲ್ಲಿಯೂ ಪುಲ್ಲಿಂಗದಂತೆಯೇ ಆಗುತ್ತದೆ ಎಂದು ಸೂಚಿಸುತ್ತದೆ. ಅದನ್ನು ಪದ್ಯವಾಗಿಸಿಕೊಂಡು ಕಾಳಿದಾಸ ಉತ್ತರಿಸಿದ-
“ಸ್ತ್ರೀ ಪುಂವಚ್ಚ- ಪ್ರಭವತಿ ಯದಾ ತದ್ಧಿ ಗೇಹಂ ವಿನಷ್ಟಮ್” (ಯಾವ ಮನೆಯಲ್ಲಿ ಹೆಂಗಸು ಗಂಡಸಿನಂತೆ ಆಗುತ್ತಾಳೋ ಆ ಮನೆ ನಷ್ಟವಾದಂತೆಯೇ ಸರಿ)
ಹೀಗೆ ಕಾಳಿದಾಸನ ನಾಲ್ಕೂ ಉತ್ತರಗಳನ್ನು ಕೇಳಿ ಬ್ರಹ್ಮರಾಕ್ಷಸ ಸಂತುಷ್ಟನಾಗಿ ಮುಂಜಾನೆಯ ಹೊತ್ತಾಗುತ್ತಿದೆಯೆಂದು ಅವನನ್ನು ಅಪ್ಪಿಕೊಂಡು, “ಸುಕವಿಯೇ! ನಿನ್ನಿಂದ ಸಂತುಷ್ಟನಾಗಿದ್ದೇನೆ. ನಿನಗೇನು ಬೇಕೆಂದು ಕೇಳು. ಕೊಡುತ್ತೇನೆ.” ಎಂದು ಕೇಳಿದ.
ಆಗ ಕಾಳಿದಾಸ, “ಅಯ್ಯಾ ಮಹಾನುಭಾವ! ದಯವಿಟ್ಟು ನೀನು ಈ ಮನೆಯನ್ನು ಬಿಟ್ಟು ಬೇರೆಡೆಗೆ ಹೋಗಬೇಕು.” ಎಂದು ಬಿನ್ನವಿಸಿಕೊಂಡ. ಆಗ ಬ್ರಹ್ಮರಾಕ್ಷಸನೂ ‘ತಥಾಸ್ತು’ ಎಂದು ಅಲ್ಲಿಂದ ನಿರ್ಗಮಿಸಿದ.
ಹೀಗೆ ಕಾಳಿದಾಸ ತನ್ನ ಪಾಂಡಿತ್ಯ ಪ್ರತಿಭೆಗಳಿಂದ ಬ್ರಹ್ಮರಾಕ್ಷಸನನ್ನು ನಿವಾರಿಸಿ ಅರಮನೆ ಭೋಜರಾಜನಿಗೆ ಹಿಂದಕ್ಕೆ ಸಿಗುವಂತೆ ಮಾಡಿದ.
***




