ದೇಶಭಕ್ತಿ ಮತ್ತು ರಾಷ್ಟ್ರೀಯತೆ ಎರಡೂ ಹೆಚ್ಚುಕಡಮೆ ಒಂದೇ ಎಂಬುದು ಒಂದು ವಾದ. ಕೆಲವು ಅನುಭವಗಳು ಇವೆರಡರ ನಡುವಿನ ವ್ಯತ್ಯಾಸವನ್ನು ಶ್ರುತಪಡಿಸಬಲ್ಲವು.
ಈಚೆಗೆ ಒಮ್ಮೆ, ಸಾಹಿತ್ಯ ಸಂಬಂಧಿತ ಕಾರ್ಯಕ್ರಮವೊಂದಕ್ಕೆ ಕರ್ನಾಟಕದ ಕೆಲವರು ಮಧ್ಯಪ್ರದೇಶದ ರೇವಾಕ್ಕೆ ಹೋಗಿದ್ದರು. ಹೋದವರಲ್ಲಿ ಅರವತ್ತು ದಾಟಿದ ಪ್ರೌಢರ ಸಂಖ್ಯೆಯೇ ಅಧಿಕ. ಅಲ್ಲಿಯ ಒಂದು ಪತ್ರಿಕೋದ್ಯಮ ವಿಶ್ವವಿದ್ಯಾನಿಲಯದ ಆವರಣದಲ್ಲಿ ವಸತಿವ್ಯವಸ್ಥೆಯನ್ನು ಮಾಡಿದ್ದರು. ಅದೊಂದು ಸಾಮೂಹಿಕ ಸರಳ ವ್ಯವಸ್ಥೆ. ಹೆಚ್ಚಿನ ವ್ಯವಸ್ಥೆಯ ಅಪೇಕ್ಷೆಯಿರುವವರು ತಾವೇ ಖಾಸಗಿಯಾಗಿ ವಸತಿವ್ಯವಸ್ಥೆಯನ್ನು ಮಾಡಿಕೊಳ್ಳಬಹುದು ಎಂದೂ ಸಂಘಟಕರು ಮುಂಚೆಯೇ ತಿಳಿಸಿದ್ದರು. ಅಲ್ಲಿಯ ವ್ಯವಸ್ಥೆಯನ್ನು ನೋಡಿದ ಬಳಿಕ ಬೇರೆ ಕಡೆ ಶುಲ್ಕನೀಡಿ ವಸತಿಗೃಹದಲ್ಲಿ ವಸತಿಹೂಡುವ ನಿರ್ಣಯಕ್ಕೆ ಎಲ್ಲರೂ ಬಂದರು. ಒಂದೆಡೆ ಅಂಥ ವಸತಿವ್ಯವಸ್ಥೆಯನ್ನು ನಿಗದಿಮಾಡಿ ಅಲ್ಲಿಗೆ ತಮ್ಮ ಸಾಮಾನು – ಸರಂಜಾಮುಗಳನ್ನು ಒಯ್ಯಲೆಂದು ಆ ವಿಶ್ವವಿದ್ಯಾಲಯದ ಆವರಣಕ್ಕೆ ಬಂದರು. ಆಗ ಅಲ್ಲಿಯ ಪ್ರವೇಶದ್ವಾರದ ದ್ವಾರಪಾಲಕ ‘ಯಾಕೆ ಹೋಗುತ್ತೀರಿ, ಎಲ್ಲಿ ಹೋಗುತ್ತೀರಿ’ ಎಂದು ವಿಚಾರಿಸಿದರು. ಯಾಕೆಂದು ಅವರಿಗೆ ಉತ್ತರಿಸಿದಾಗ; ‘ಇಲ್ಲಿಯೇ ಎಲ್ಲ ವ್ಯವಸ್ಥೆಯನ್ನೂ ಮಾಡೋಣ, ಯಾಕೆ ಅಷ್ಟೊಂದು ಹಣವನ್ನು ದುರ್ವ್ಯಯ ಮಾಡುತ್ತೀರಿ?’ ಎಂದು ಭಾರೀ ಕಾಳಜಿ ತೋರಿದರು. ಅವರನ್ನು ಒಪ್ಪಿಸಿ ಅಲ್ಲಿಂದ ತಮ್ಮ ಚೀಲಗಳನ್ನು ತಂದುಕೊಳ್ಳಲು ಹೋದ ಪ್ರತಿನಿಧಿಗಳಿಗೆ ಸಾಕೋಸಾಕಾಯಿತು.
ಅವರಿಗೂ ಕಾರ್ಯಕ್ರಮ ಆಯೋಜಿಸಿದ ಸಾಹಿತ್ಯದ ಸಂಸ್ಥೆಗೂ ಇದ್ದ ಸಂಬಂಧವೆಂದರೆ; ಆ ಸಾಹಿತ್ಯ ಸಂಸ್ಥೆ ಅವರು ಉದ್ಯೋಗ ಮಾಡುವ ಸಂಸ್ಥೆಯ ಆವರಣದಲ್ಲಿ ತನ್ನ ಪ್ರತಿನಿಧಿಗಳಿಗೆ ವಸತಿವ್ಯವಸ್ಥೆಯನ್ನು ಮಾಡಿತ್ತು ಎಂಬುದಷ್ಟೇ ಆಗಿತ್ತು. ಅವರಿಗೂ ಅಲ್ಲಿಗೆ ಬಂದ ಪ್ರತಿನಿಧಿಗಳಿಗೂ ಇದ್ದ ಸಂಬಂಧವೂ ಅಷ್ಟೇ ಅಥವಾ ಅದಕ್ಕಿಂತಲೂ ತೆಳುವಾದುದು. ಆದರೆ ಅವರು ತೋರಿದ ಕಾಳಜಿ ತಮ್ಮದೇ ಮನೆಗೆ ಬಂದ ಅತಿಥಿಗಳಿಗೆ ತೋರುವಷ್ಟು ಅಥವಾ ಅದಕ್ಕಿಂತಲೂ ಹೆಚ್ಚು.
ತಮ್ಮಲ್ಲಿಗೆ ಬಂದವರು ಅತೃಪ್ತಿಯಿಂದ ಹೋಗಬಾರದು ಎಂಬ ಆಪ್ತ ಭಾವವೊಂದು ಅವರ ಮಾತಿನಲ್ಲಿ ಅಪಾರವಾಗಿ ಧ್ವನಿಸಿತ್ತು. ಜತೆಗೆ, ಹಣವನ್ನು ಪೋಲುಮಾಡುವುದು ಕೂಡದು ಎಂಬ ಭಾವವೂ ಕೂಡ.
ತಮ್ಮ ಸಂಸ್ಥೆಗೆ ಬಂದವರು ಅತೃಪ್ತ ಮನಸ್ಸಿನಿಂದ ಹೋಗಕೂಡದು ಎಂಬ ಒಂದು ಸಾಂಸ್ಥಿಕಭಾವವೊಂದು ಅವರ ಮನಸ್ಸಿನಲ್ಲಿ ಕೆಲಸಮಾಡಿರಬಹುದೆಂದು ಊಹಿಸಲು ಅವಕಾಶವಿದೆ. ಆದರೆ ಅವರೇನು ಅಲ್ಲಿಯ ಯಜಮಾನರಲ್ಲ, ಆಡಳಿತಮಂಡಳಿಯ ಕನಿಷ್ಠ ಸದಸ್ಯರೂ ಅಲ್ಲ, ಲಾಭನಷ್ಟಗಳ ಪಾಲುದಾರರೂ ಅಲ್ಲ. ಅಂಥಲ್ಲಿ, ಉಳಿದವರ ದೃಷ್ಟಿಯಿಂದ ಯಃಕಶ್ಚಿತ್ ಎನ್ನುವ ದ್ವಾರಪಾಲಕರಿಗೆ ಇದ್ದುದು ಇಂಥ ಒಂದು ಸಾಂಸ್ಥಿಕಭಾವವಷ್ಟೆ ಎಂದು ಷರಾ ಬರೆದರೆ ಅದು ತಪ್ಪು ಅವಲೋಕನವಷ್ಟೆ ಆದೀತು.
ತನ್ನದೇ ಸಂಸ್ಥೆಯ ಬಗ್ಗೆ ಅಭಿಮಾನ ಇರುವುದು ಸಹಜ. ತನ್ನದಲ್ಲದಿದ್ದರೂ ತಾನು ಕೆಲಸಮಾಡುವ ಸಂಸ್ಥೆಯ ಬಗ್ಗೆಯೂ ಕೆಲವರಿಗೆ ಅಭಿಮಾನ ಇರುತ್ತದೆ. ಅದು; ತನ್ನ ಸಂಸ್ಥೆಗೆ ಬಂದು ಯಾರೂ ಅತೃಪ್ತಿಯಿಂದ, ಅಸಮಾಧಾನದಿಂದ ಹೋಗಕೂಡದು ಎಂಬ ಭಾವ. ಸಂಸ್ಥೆಯ ಬಗ್ಗೆ ಇರುವ ಈ ಭಾವವೇ ಬೆಳೆದು ದೊಡ್ಡದಾಗುತ್ತ ತನ್ನ ದೇಶದ ಬಗೆಗೂ ವಿಸ್ತರಿಸಬಲ್ಲುದು. ಜಪಾನಿಗೆ ಹೋದ ವಿವೇಕಾನಂದರಿಗೆ ಇಂಥ ಒಂದು ಅನುಭವವಾಗಿತ್ತು ನೋಡಿ; ಅವರು ಕೇಳಿದ ವಸ್ತುವೊಂದನ್ನು ಅಲ್ಲಿಯ ಒಬ್ಬ ಹುಡುಗ ಎಲ್ಲೋ ಕಷ್ಟಪಟ್ಟು ಸಂಪಾದಿಸಿ ತಂದು ಕೊಟ್ಟು, ಅನಂತರ, ಇದು ಈ ದೇಶದಲ್ಲಿ ಸಿಗಲು ಇಷ್ಟು ಕಷ್ಟವಾಯಿತೆಂದು ಎಲ್ಲೂ ಯಾರಿಗೂ ಹೇಳಬೇಡಿ ಎಂದು ಆ ಹುಡುಗ ಸ್ವಾಮೀಜಿ ಬಳಿ ಭಿನ್ನವಿಸಿಕೊಂಡ ಘಟನೆಯದು. ಆ ಹುಡುಗನಲ್ಲಿದ್ದುದು ತನ್ನ ದೇಶದ ಬಗೆಗಿನ ಭಾವ. ಅದಕ್ಕೆ ದೇಶದ ಭೌಗೋಳಿಕ ವ್ಯಾಪ್ತಿಯೂ ಇದೆ. ಈ ವ್ಯಾಪ್ತಿಯಲ್ಲಿ ಎಲ್ಲವೂ ಚೆನ್ನಾಗಿರಬೇಕು, ಯಾರಿಗೂ ಕೆಟ್ಟ ಭಾವನೆ ಮೂಡುವಂತಿರಕೂಡದು ಇತ್ಯಾದಿ ಭಾವನೆಗಳು ಇಲ್ಲಿ ಕೆಲಸಮಾಡುತ್ತವೆ. ದೇಶವ್ಯಾಪಿಯಾದ ಈ ಭಾವನೆಗಳು ಒಳ್ಳೆಯದೇ.
ಆದರೆ; ತನ್ನ ದೇಶದಲ್ಲೇ ಆಗಲೀ ಅನ್ಯ ದೇಶದಲ್ಲೇ ಆಗಲಿ, ತನ್ನ ಮನೆಯಲ್ಲೇ ಆಗಲಿ ಬೇರೆಡೆಯೇ ಆಗಲೀ ಯಾರಿಗೂ ತೊಂದರೆಯಾಗಕೂಡದು, ತನ್ನಿಂದಾದಷ್ಟು ಸಹಾಯ ಮಾಡಬೇಕು ಇತ್ಯಾದಿ ಭಾವವೂ ಮನುಷ್ಯನೊಳಗೆ ಕೆಲಸಮಾಡುತ್ತದೆ. ಇದೊಂದು ಉನ್ನತ ಸಾಂಸ್ಕೃತಿಕ ಭಾವನೆ.
ಆ ದ್ವಾರಪಾಲಕರಲ್ಲಿದ್ದುದು ಇಂಥ ಒಂದು ಉನ್ನತ ಸಾಂಸ್ಕೃತಿಕ ಭಾವನೆಯೇ ಇರಬೇಕು. ಅದು ಸಾಹಿತ್ಯ ಪ್ರತಿನಿಧಿಗಳ ಕಾಳಜಿಯನ್ನು ವಹಿಸಿ ಈ ಸಂದರ್ಭದಲ್ಲಿ ಅಭಿವ್ಯಕ್ತಿ ಪಡೆಯಿತು. ಉತ್ತಮ ಪ್ರತಿಭೆಯ ಅಭಿವ್ಯಕ್ತಿ ಉಳ್ಳವರು ಅಲ್ಲಿಯ ಸಾಹಿತ್ಯ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರಕಟಗೊಂಡಾರು. ಆದರೆ ಹಾಗಿಲ್ಲದ ಈ ದ್ವಾರಪಾಲಕರು ತಮ್ಮ ಸಂಪನ್ನ ಭಾವನೆಗಳಿಂದ ಎಲ್ಲರ ಮನಸ್ಸಿನಲ್ಲಿ ಸ್ಥಾಯಿಯಾಗಿ ಕುಳಿತುಬಿಟ್ಟರು.
ಇಂಥ ಸಾಂಸ್ಕೃತಿಕ ಭಾವನೆಗಳನ್ನು ಸಾಮೂಹಿಕವಾಗಿ ಒಂದು ಸಮಾಜದಲ್ಲೋ ಜನಾಂಗದಲ್ಲೋ ಕಾಣಲು ಸಾಧ್ಯ. ಸಂಸ್ಕಾರ ಮತ್ತಿತರ ಪ್ರಕ್ರಿಯೆಯ ಮೂಲಕ ಪ್ರಚೋದಿಸಲೂ ಸಾಧ್ಯ. ಭಾರತದಲ್ಲಿ ಇಂಥ ಉನ್ನತ ಭಾವನೆಗಳನ್ನು ಫಾಹಿಯಾನ್, ಮ್ಯಾಕ್ಸ್ಮುಲ್ಲರ್ ಮುಂತಾದ ಅನೇಕರು ಅಚ್ಚರಿಯಿಂದ ಕಂಡು ಇತಿಹಾಸದ ಪುಟಗಳಲ್ಲಿ ದಾಖಲಿಸಿದವರಿದ್ದಾರೆ.
ನಾವೊಂದು ಸಾಂಸ್ಕೃತಿಕ ರಾಷ್ಟ್ರವಾಗಿ ಲಾಗಾಯ್ತಿನಿಂದ ರೂಪುಗೊಂಡಿದ್ದು ಇಂಥ ಸಂಪನ್ನ ಸಂಸ್ಕೃತಿಯಿಂದಲೇ ಇರಬೇಕು.
***




