ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
60ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

ಕವನಗಳು

ಆತ್ಮAatma

ದೂರ ದಿಗಂತದಿ
ಮಿನುಗುವ ಪುಟ್ಟ
ನಕ್ಷತ್ರವೊಂದು
ಕಣ್ಣು ಮಿಟುಕಿಸಿ
ಕೇಳುತ್ತಿತ್ತು ನಿರಂತರವಾಗಿ
`ನೀ ನನ್ನ ಎತ್ತರ
ಏರಬಲ್ಲೆಯಾ?
ನನ್ನಂತೆಯೇ ಮಿನುಗಬಲ್ಲೆಯಾ?’

ಇರುಳ ನೀರವತೆಯಲ್ಲಿ
ಆ ಮಿಣುಕಿಗೆ
ಅಸಡ್ಡೆ ತೋರಿ
ಮುಖ ತಿರುಗಿಸಿದ್ದೆ

ಅರೇ! ಎಲ್ಲೆಲ್ಲೂ
ಕಣ್ಣು ಮಿಟುಕಿಸುತ್ತ
ಅಣಕಿಸುತ್ತಿರುವ
ತಾರಾಪುಂಜಗಳೇ!

ಅಸಹನೆಯ ತೀವ್ರತೆಯಲ್ಲಿ
ಮತ್ತೆ ಆ ಮಾಯಾವಿ
ತಾರೆಯೆಡೆಗೆ ನಿರುಕಿಸಲು
ಕುಹಕಿಯ ಆರ್ಭಟ
ಎಲ್ಲೆ ಮೀರಿತ್ತು
ರೋಷಗೊಂಡಿದ್ದೆ ನಾನಾಗ
ಕೊಂಕಿಗೆ ತಕ್ಕ ಉತ್ತರ
ಹೇಳಬಯಸಿದ್ದೆನಾದರೂ
ಕೈಲಾಗದ ಅಸಹಾಯಸ್ಥಿತಿ

ಅದೊಂದು ದಿನ
ಅದಾವ ಮಾಯದಲ್ಲೋ
ನಕ್ಷತ್ರ ಕಣ್ಣು ಮಿಟುಕಿಸಿದಷ್ಟೇ
ವೇಗದಲ್ಲಿ ನಾನೂ

ಅದರ ಸಮಕ್ಕೆ ನಿಂತು
ಸಡ್ಡು ಹೊಡೆದು
ಸವಾಲಿಗೆ ಉತ್ತರಿಸಿದ್ದೆ
ಫಳಫಳನೆ
ಹೊಳೆಯುವ ಚುಕ್ಕಿಯಾಗಿದ್ದೆ.

—   ಲತಾ ಹೆಗಡೆ

ಹೆಬ್ಬಾವುHebbavu

ಹಾವಿಗೆ ಯಾಕೋ ಹಸಿವು ಹೆಚ್ಚಾಗೇತಿ

ಊರಿಗೆ ಊರ ನುಂಗಾಕ ಬಾಯಿ ಹಾಕೇತಿ|

ತಾಸಿಂದ ತಾಸಿಗೆ ಬಾಯಿ ಹಂಗ ಅಗಲಿಸತೈತಿ

ಯಾರಾರ ಹಿಡಿರೋ, ಬಿಟ್ಟರ ನಮ್ಮೂರ ನುಂಗತೈತಿ||

ಮಾರುದ್ದದ ಹಾವಲ್ಲೋ, ಊರಿಗೆ ಊರ ಹಂಗಾ ಸರಳ ನುಂಗುವ ಹಾವು

ಬುಸುಗುಟ್ಟುವ ಹಾವಲ್ಲೋ, ಯಾರಿಗೂ ತಿಳಿಯದಂಗ ಗಪ್ಪನ ಹರಿಯುವ ಹಾವು|

ಹಿಂದೆಲ್ಲೂ ಕಂಡಿಲ್ಲೋ, ಕೊನೆಯಿಲ್ಲದ ಬಾಲದ, ತೀರದ ಹಸಿವಿನ ಹಾವು

ಎಷ್ಟು ಊರು ನುಂಗೈತೋ ಏನೋ, ಊರಗಲ ಬಾಯಿಯ ದೊಡ್ಡ ಹೆಬ್ಬಾವು||

ಹಸಗೊಂಡು ಕಾಣದಂಗ, ಈ ಹೊತ್ತಿಗಾಗಿ ಅದೆಲ್ಲಿ ಅಡಗಿ ಕಾದಿತ್ತೋ

ಯಾವ ಮುಯ್ಯಿ ತೀರಿಸಾಕ, ನಮ್ಮೂರ ಮ್ಯಾಗ ಕಣ್ಣಿಟ್ಟು ಕುಂತಿತ್ತೋ|

ಹೊಳಿಯಂಗ ಹರಿತೈತೋ, ನೀರಿನ ಬಣ್ಣ ಮೈಮ್ಯಾಗ ಹರಡೈತೋ

ಆಗದವರ್ಯಾರೋ ಹಾವು ಹುಟ್ಟಿಸಿ, ನಮ್ಮೂರ ದಾರಿ ತೋರಿದಂಗೈತೋ||

ಓಡಲಾರದ ನಿಂತ ಓಣಿಗಳೆಲ್ಲಾ ಈ ಕುಂಬಕರ್ಣನ ಬಾಯಿಯ ಒಳಗ

ಹೊರಗ ಎಳಿಯಾಕ ಬರದಂಗ ಮುಳಗ್ಯಾವ ಇದರ ಹೊಟ್ಟಿಯ ಒಳಗ|

ಮುಳುಗಿದರೂ ಜೀವ ಹಿಡದೈತೋ ಊರು ಹಾವಿನ ಒಡಲಾಗ

ಸೂರಿಲ್ಲದ ಮಂದಿಯ ಜೀವನ ನಡದೈತೋ ಊರ ಹೊರಗಿನ ಬಯಲಾಗ||

ಬಲೆ ಇದ್ದರ ಕೊಡರಿ ಯಾರಾರ, ಈ ಹಾವ ಹಿಡಿಯಾಕ

ಊರ ನುಂಗಿ ಹೊಟ್ಟಿ ಉಬ್ಬಿರುವ ಹೆಬ್ಬಾವ ಹಿಡಿದಹಾಕಾಕ|

ಕೊಡಲಿ ಇದ್ದರ ಕೊಡರಿ ಯಾರಾರ, ಇದರ ಹೊಟ್ಟಿ ಹೋಳು ಮಾಡಾಕ

ಒಳಗ ಮುಳುಗಿ ನರಳುತಿರುವ ನಮ್ಮೂರ ಹೊಳ್ಳಿ ಹೊರಗ ತಗಿಯಾಕ||

—   ವಿಜಯ ಚಿಕ್ಕನರಗುಂದ

ನಾವು ನಿರಕ್ಷರಸ್ಥರಾದೆವು ಗೆಳತಿ Niraksharastharu

ಗೆಳತಿ,

ನಾವು ನಿರಕ್ಷರಸ್ಥರಾದೆವು ಈಗ

ಇದು ಟ್ಯಾಬ್, ಮೊಬೈಲ್, ಡಿಜಿಟಲ್ ಯುಗ

ಲಾಂಧ್ರ ಹಿಡಿದು ಎಲ್‌ಇಡಿ ತನಕ

ಸಾಗಿ ಬಂದೆವು ಹೇಗೋ

ಕಣ್ಣಿದ್ದರೂ ಕುರುಡರಂತೆ ಓದಲಾರೆವು

ಬುದ್ಧಿಯಿದ್ದರೂ ಪೆದ್ದುಗಳಂತೆ ಅರಿಯಲಾರೆವು

ಕೈಯ್ಯಿದ್ದರೂ ಹೆಳವರಂತೆ ಬರೆಯಲಾರೆವು

ಕಾಲಿದ್ದರೂ ಕುಂಟರಂತೆ

ಓಡುವ ಜಗದ ಮಾರ್ಗದಲಿ ನಡೆಯಲೂ ಆರೆವು

ಶಿಲಾಯುಗದ ಮನುಜರಾಗಿಬಿಟ್ಟೆವೊ ನಾವು?

ಅರ್ಥವಾಗದ ಭಾಷೆ ಅರ್ಥವಾಗದ ಯಂತ್ರೋಪಕರಣ

ಬಿಟ್ಟು ಕಣ್ಣು ತೆರೆದು ಕರಣ

ಬೆರಗಿನ ಕನ್ನಡಕದಿಂದ

ಭಯಹುಟ್ಟಿಸುವ ಭೂತಗನ್ನಡಿಯೆದುರು ನಿಂತು

ಚಾಲಿಸಲರಿಯದ ಹೀನಕೌಶಲರು!

ಗಗನಚುಂಬಿ ಕಟ್ಟಡಗಳ ನಿರುಕಿಸುತ್ತ

ಕೊರಳು ಉಳುಕಿಸಿಕೊಂಡು

ಕೋಟಿನೋಟಿನ ಎಣಿಕೆಯಂತ್ರಕೆ ಕೈಮುಗಿದು

ಹಳೆಯಕೋಟಿನ ಜೇಬಿನೊಳಗಿಂದ

ಹರಿದ ಐದರ ನೋಟು ತೆಗೆದು

ಬೈಟು ಕಾಫಿ ಹೀರಲು ಪಾನಿಪುರೀ ಸ್ಟಾಲಿಗೆ

ಹೋಗುವ ನಮ್ಮ ಖದರಿಗೆ ಏನು ಹೇಳಲಿ ಗೆಳತಿ

ಇನ್ನು ಟಿಕೆಟ್ಟು ಕಾದಿರಿಸೋಣ

ಕ್ಯಾಲಂಡರಿನಲ್ಲಿ ಬಸ್ಸು ಹೊರಡುವ ಟೈಮು

ಗುರುತು ಹಾಕಿಕೊಳ್ಳೋಣ

ನಡಿ, ಮನೆಗೆ ಸಂಜೆಯಾಯಿತು….

ಅದೊ ನೋಡು ಹಿಂಬಾಲಿಸುತ್ತಿದೆ

ಭೀಕರ ಕತ್ತಲು.

—   ವನರಾಗಶರ್ಮಾ

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ