ಕಳೆದ ವರ್ಷವಷ್ಟೇ (೨೦೧೪) ಪ್ರಕಟಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಓದುಗರ ಗಮನ ಸೆಳೆದ ಪುಸ್ತಕ ವಮ್ಸೀ ಜುಲುರಿ ಅವರ – ` Rearming Hinduism; Nature, Hinduphobia and the Return of Indian Intelligence’. ವಮ್ಸೀ ಅವರು ಸ್ಯಾನ್ಫ್ರಾನ್ಸಿಸ್ಕೋ ವಿಶ್ವವಿದ್ಯಾಲಯದ ಮಾಧ್ಯಮ ಅಧ್ಯಯನ ವಿಭಾಗದ ಪ್ರಾಧ್ಯಾಪಕರು; ಆ ಮೂಲಕ ಅವರು ಇಡೀ ಜಗತ್ತನ್ನು ಗಮನಿಸುತ್ತಾ ಮಾತನಾಡುತ್ತಿದ್ದಾರೆ ಎಂಬ ಕಾರಣಕ್ಕೆ ಪುಸ್ತಕ ಮಹತ್ತ್ವವನ್ನು ಪಡೆದುಕೊಳ್ಳುತ್ತದೆ. `ಉತ್ಥಾನ’ದ ಓದುಗರಿಗಾಗಿ ಎಚ್. ಮಂಜುನಾಥ ಭಟ್ ಅವರು ಹೊತ್ತಗೆಯ ಹೂರಣವನ್ನು ಇಲ್ಲಿ ಕನ್ನಡದಲ್ಲಿ ಲಭ್ಯವಾಗಿಸಿದ್ದಾರೆ.
ಬೆಂಗಳೂರಿನಲ್ಲಿ ೨೦೧೫ ಡಿಸೆಂಬರ್ ಮೊದಲ ವಾರದಲ್ಲಿ ಜರಗಿದ ‘ಬೆಂಗಳೂರು ಸಾಹಿತ್ಯೋತ್ಸವ’ ಆರಂಭವಾಗುವುದಕ್ಕೆ ಮುನ್ನವೇ ಒಂದು ವಿವಾದವನ್ನು ಹುಟ್ಟುಹಾಕಿತು. ಉತ್ಸವದ ಸಂಘಟಕರಲ್ಲಿ ಒಬ್ಬರಾದ ವಿಕ್ರಮ್ ಸಂಪತ್ ಅವರು ತನ್ನ ಒಂದು ಲೇಖನದಲ್ಲಿ ಪ್ರಸ್ತುತ ದೇಶದಲ್ಲಿ ಪ್ರಶಸ್ತಿ-ಪುರಸ್ಕಾರಗಳನ್ನು ವಾಪಸು ಮಾಡುತ್ತಿರುವ ಸಾಹಿತಿ-ಲೇಖಕರನ್ನು ಕುರಿತು ಕೀಳಾಗಿ ಬರೆದಿರುವುದರಿಂದ ತಾವು ಈ ಉತ್ಸವದಲ್ಲಿ ಭಾಗವಹಿಸುವುದಿಲ್ಲವೆಂದು ಮೂವರು ಕನ್ನಡ ಲೇಖಕರು ಹೇಳಿಕೆ ನೀಡಿದರು. ಆ ಹೇಳಿಕೆಗೆ ಉತ್ತರ ನೀಡುವಾಗ ವಿಕ್ರಮ್ ಸಂಪತ್ ‘ಸಹಿಷ್ಣು ಮಾಫಿಯಾ’ ಎನ್ನುವ ಒಂದು ಪದವನ್ನು ಬಳಸಿದ್ದರು. ಅದನ್ನು ಕಂಡು ಇನ್ನಷ್ಟು ಜನ ಉರಿದುಬಿದ್ದರು. ದೇಶದಲ್ಲಿಂದು ಕಾಣಿಸುತ್ತಿರುವ (ಅವರಿಗೆ ಕಂಡ) ಅಸಹಿಷ್ಣುತೆ ವಿರುದ್ಧ ಪ್ರತಿಭಟನೆಯಾಗಿ ಅಕಾಡೆಮಿಗಳು ನೀಡಿದ ಪ್ರಶಸ್ತಿಗಳನ್ನು ವಾಪಸು ಮಾಡುವ ಮೂಲಕ ತ್ಯಾಗ, ಉದಾತ್ತತೆಗಳನ್ನು ಮೆರೆದವರನ್ನು ‘ಮಾಫಿಯಾ’ ಎಂದು ಕರೆಯುವುದೆಂದರೇನು ಎಂಬುದವರ ತೀವ್ರ ಆಕ್ಷೇಪ.
ನಿಜವೆಂದರೆ, ಕೆಲವು ಸಲ ಸತ್ಯ ತನಗೆ ದೊರೆತ ಇಕ್ಕಟ್ಟಿನ ಸ್ಥಳದಲ್ಲೇ ಒದ್ದುಕೊಂಡು ಹೊರಬಂದಿರುತ್ತದೆ. ಕೆಲವರಿಗೆ ಬಂದ ಸಿಟ್ಟು ‘ಕಂಡದ್ದು ಕಂಡಹಾಗೆ ಹೇಳಿದರೆ ಕೆಂಡದಂತಹ ಕೋಪ’ ಎಂಬ ಗಾದೆಮಾತಿಗೆ ಸರಿಯಾಗಿ ಒಪ್ಪುವಂತಿತ್ತು. ತಾವೇನು ಮಾಡುತ್ತಿದ್ದೇವೆ ಎಂಬುದು ಅವರಿಗೆ ಗೊತ್ತಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅವರು ಸರಿಯಾದ ಆಧಾರವಿಲ್ಲದಿದ್ದರೂ ತಳೆದಿರುವ ಕೋಪ, ಅವರ ಮಾತುಗಳು, ಮಾಡುತ್ತಿರುವ ಕೆಲಸದ ಪರಿಣಾಮವನ್ನು ಗಮನಿಸಿ ಹೇಳುವುದಾದರೆ ‘ಮಾಫಿಯಾ’ ಪದಕ್ಕೆ ಅವರು ಅರ್ಹರೆನಿಸುತ್ತಾರೆಂದು ಬೇಸರದಿಂದ ಹೇಳಬೇಕಾಗುತ್ತದೆ.
ಈ ‘ಸಹಿಷ್ಣುತೆ’ಯ ಬೇರು ಬಹಳಷ್ಟು ಆಳದಲ್ಲಿದೆ ಎಂಬುದು ಸ್ಪಷ್ಟ. ನರೇಂದ್ರ ಮೋದಿ ಅವರ ರಾಜಕೀಯ ಉಚ್ಛ್ರಾಯದೊಂದಿಗೆ ಇದು ಅಂಕುರಿಸಿ ಬೆಳೆಯುತ್ತಾ ಬಂದು ಭಾರತೀಯ ಜನತಾ ಪಕ್ಷದ ಸ್ವಂತ ಬಲದೊಂದಿಗೆ ಅವರು ಪ್ರಧಾನಿ ಆದಾಗ ಈ ‘ಸಹಿಷ್ಣು’ಗಳಿಗೆ ಅದು ನುಂಗಲಾರದ ತುತ್ತಾಯಿತು. ಕೆಲವರಿಗೆ ಬಹುಶಃ ರಾತ್ರಿ ನಿದ್ರೆಯೂ ತಪ್ಪಿರಬೇಕು. ಈ ಮೋದಿಯಾದರೋ ಕಾಂಗ್ರೆಸ್ ಪ್ರಧಾನಿಗಳಂತೆ ಸುಮ್ಮನೆ ಕುಳಿತುಕೊಳ್ಳುವ ಬದಲು ಬಹಳಷ್ಟು ದೇಶಗಳಿಗೆ ಭೇಟಿ ನೀಡುತ್ತಿದ್ದಾರೆ. ಅಲ್ಲಿ ಇವರಿಗೆ ಉತ್ತಮ ಗೌರವವೂ ಸಿಗುತ್ತಿದೆ. ಮೋದಿ ಅವರ ಅಪೇಕ್ಷೆಯಂತೆ ಆ ರಾಷ್ಟ್ರಗಳಿಂದ ಭಾರತಕ್ಕೆ ಸಾಕಷ್ಟು ಬಂಡವಾಳವೂ ಹರಿದುಬರಬಹುದು. ಅದರಿಂದ ಮೋದಿ ಸರ್ಕಾರ ಇನ್ನಷ್ಟು ಗಟ್ಟಿಯಾಗಬಹುದು. ಹಾಗಾದರೆ ಇನ್ನೇನು ಗತಿ ಎಂದು ಈ ‘ಸಹಿಷ್ಣು’ಗಳು ಚಿಂತೆಗೀಡಾಗಿದ್ದಾರೆ.
ಕೇವಲ ಇತರ ಮತಗಳಿಗಿಂತ ನಮ್ಮದು ಶ್ರೇಷ್ಠ ಎಂದು ಹೇಳುತ್ತಾ ಕುಳಿತಿರುವ ಕಾಲ ಇದಲ್ಲ; ಬದಲಾಗಿ ನಾಗರಿಕತೆಯ ಆತ್ಮಜ್ಞಾನ(ಸ್ವರೂಪದರ್ಶನ)ಕ್ಕೆ ಮರಳುವ ಕಾಲ. ಬುದ್ಧಿಮತ್ತೆಯು ನಮಗೆ ಮಾರ್ಗದರ್ಶನ ನೀಡುವ ರೀತಿಯಲ್ಲಿ (ಧಿಯೋ ಯೋ ನಃ ಪ್ರಚೋದಯಾತ್ – ಗಾಯತ್ರೀ) ಅದನ್ನು ಗೌರವಿಸುವ ಕಾಲ…
ಇತರ ಪ್ರಾಚೀನ ನಾಗರಿಕತೆಗಳು ಈಗ ಕೇವಲ ಇತಿಹಾಸ ಪುಸ್ತಕಗಳಲ್ಲಿ ಮಾತ್ರ ಉಳಿದಿವೆ, ಪ್ರೀತಿ ಮತ್ತು ಸ್ವಾತಂತ್ರ್ಯ ಆಗಿದ್ದ ಮತವನ್ನು ದ್ವೇಷ ಮತ್ತು ಬಲಾತ್ಕಾರಗಳಾಗಿ ಪರಿವರ್ತಿಸಿದವರ ಮಧ್ಯೆ ಹಿಂದೂಧರ್ಮ ಸಾವಿರಾರು ವರ್ಷಗಳಿಂದ ಒಂದೇ ರೀತಿ ಉಳಿದುಕೊಂಡು ಬಂದಿದೆ, ಯಾರಿಗೂ ಇದನ್ನು ಅಳಿಸಿಹಾಕಲು ಸಾಧ್ಯವಾಗಿಲ್ಲ…
ಮಾಫಿಯಾ ಏಕಲ್ಲ?
ಈ ‘ಸಹಿಷ್ಣು’ಗಳಲ್ಲಿ ತುಂಬ ಜನ ವಿದೇಶಗಳಿಂದ ಬರುವ ಹಣದಲ್ಲಿ ವಿಲಾಸಿಜೀವನ ನಡೆಸುತ್ತಿದ್ದ ಸರ್ಕಾರೇತರ ಸಂಸ್ಥೆ (ಎನ್ಜಿಓ)ಗಳವರೂ ಇದ್ದಾರೆನಿಸುತ್ತದೆ. ಲೆಕ್ಕಕೊಡದೆ ವಿದೇಶೀ ಹಣದಲ್ಲಿ ಗಮ್ಮತ್ತು ಮಾಡುತ್ತಿದ್ದವರಿಗೆ ಕೇಂದ್ರಸರ್ಕಾರ ಬ್ರೇಕ್ ಹಾಕಿದೆ. ಇನ್ನು ದೇಶದ ಇಂದಿನ ಒಂದು ದುರಂತವೆಂದರೆ ಇಲ್ಲಿ ಮುಸ್ಲಿಂಲೀಗ್ ಸೆಕ್ಯುಲರ್ ಎನಿಸುತ್ತದೆ; ಸೂಫಿ ಹೆಸರಿನಲ್ಲಿ ಮುಸ್ಲಿಂ ಕೋಮುವಾದ ಸೇರಿಕೊಳ್ಳುತ್ತದೆ. ಆದರೆ ಬಿಜೆಪಿಗೆ ಕೋಮುವಾದಿ ಎಂಬ ಪಟ್ಟ. ಇದರಲ್ಲಿ ಎಡ, ಪ್ರಗತಿಪರ ಚಿಂತಕರ ದೊಡ್ಡ ಪ್ರಾತ್ರವಿದೆ. ಇನ್ನೂ ಬಿಟ್ಟರೆ ಮೋದಿ ತುಂಬ ಗಟ್ಟಿಯಾಗಿ ಮತ್ತೆ ಅಲುಗಾಡಿಸುವುದೇ ಕಷ್ಟವಾಗಬಹುದೆಂದು ಇವರೆಲ್ಲ ಒಮ್ಮೆಗೇ ತಿರುಗಿಬಿದ್ದಿದ್ದಾರೆ. ದಾಭೋಲ್ಕರ್, ಪಾನ್ಸರೆ ಅವರ ಹತ್ಯೆಯಾದಾಗ ಬಾಯ್ಮುಚ್ಚಿಕೊಂಡಿದ್ದವರು ಕಲಬುರ್ಗಿ ಹತ್ಯೆಯವರೆಗೆ ಏಕೆ ಕಾದರೊ! ಕರ್ನಾಟಕದಲ್ಲಿ ೬೦೦ರಷ್ಟು ರೈತರು ಆತ್ಮಹತ್ಯೆಗೈದರೂ ಕರಗದವರು ದಾದ್ರಿಯ ಘಟನೆ ಆಗುತ್ತಲೇ ಏನೋ ಸೂಚನೆ ಸಿಕ್ಕವರಂತೆ ಮೂಲೆಯಲ್ಲಿದ್ದ ಪ್ರಶಸ್ತಿಫಲಕ ಎತ್ತಿಕೊಂಡು ಝಳಪಿಸತೊಡಗಿದರು. ಇತ್ತೀಚಿನ ವರದಿಯ ಪ್ರಕಾರ ಕಲಬುರ್ಗಿ ಹತ್ಯೆಯ ಬಗ್ಗೆ ಕರ್ನಾಟಕ ಸರ್ಕಾರ ನಡೆಸುತ್ತಿರುವ ಸಿಐಡಿ ತನಿಖೆ ಟೇಕಾಫೇ ಆಗಿಲ್ಲ; ಅದಕ್ಕೆ ಹಣದ ಕೊರತೆಯೂ ಇದೆಯಂತೆ. ಸಿಬಿಐ ತನಿಖೆ ನಡೆಸೋಣವೆಂದು ಕೇಂದ್ರಸರ್ಕಾರ ಹೇಳಿದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅದಕ್ಕೆ ಒಪ್ಪುತ್ತಿಲ್ಲ.
ಒಟ್ಟಿನಲ್ಲಿ ಪ್ರಶಸ್ತಿ ವಾಪಸು ಮಾಡುತ್ತಿರುವವರಿಗೆ ದೇಶದ ಗಡಿಯಾಚೆ ವಿದೇಶದಲ್ಲೂ ಮೋದಿ ಅವರ ಹೆಸರು ಕೆಡಿಸಬೇಕೆಂಬ ಉದ್ದೇಶವಿದೆ. ವಿದೇಶದಿಂದ ಬಂಡವಾಳ ಬರಬಾರದು; ಅಂದರೆ ದೇಶದ ಆರ್ಥಿಕ ಪ್ರಗತಿಗೆ ತಡೆಯಾಗಬೇಕು. ಆ ರೀತಿಯಲ್ಲಾದರೂ ಮೋದಿ ಸರ್ಕಾರ ಕಷ್ಟಕ್ಕೆ ಸಿಲುಕಬೇಕು – ಎಂಬಲ್ಲಿಯವರೆಗೆ ಪ್ರಸ್ತುತ ಸಾಹಿತಿ-ಲೇಖಕರ ಉದ್ದೇಶ ಇರುವಂತಿದೆ; ಹಾಗಿರುವಾಗ ಇವರದ್ದು ‘ಮಾಫಿಯಾ’ ಎನ್ನಬಾರದೇಕೆ?
ಭಾರತದಲ್ಲಿ ಅಲ್ಪಸಂಖ್ಯಾತರ ಬಗೆಗೆ ಅಸಹಿಷ್ಣುತೆ ಹೆಚ್ಚುತ್ತಿದೆ ಎನ್ನುವ ಇವರ ಏಕಮುಖದ ವಾದ ಮುಂದುವರಿಯುತ್ತಲೇ ಇದೆ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಹೇಗಿದ್ದಾರೆ? ನೆರೆಯ ಬಂಗ್ಲಾದೇಶದಲ್ಲಿ ಹಿಂದುಗಳು, ಅವರ ದೇವಾಲಯಗಳು ಸುರಕ್ಷಿತವಾಗಿವೆಯೆ? ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ಮುಸ್ಲಿಮರು ಎಷ್ಟಿದ್ದಾರೆ? ಏನು ಮಾಡುತ್ತಿದ್ದಾರೆ? ಅವರು ಅಲ್ಪಸಂಖ್ಯಾತರಾಗಿದ್ದರೆ ಅಲ್ಲಿನ ಸರ್ಕಾರಗಳು ಅವರನ್ನು ಹೇಗೆ ನಡೆಸಿಕೊಳ್ಳುತ್ತಿವೆ? ಅಲ್ಲಿ ಸಹಿಷ್ಣುತೆ ಇದೆಯೆ ಅಥವಾ ಅಸಹಿಷ್ಣುತೆ ಇದೆಯೆ? ಈ ಯಾವ ವಿಚಾರಗಳೂ ಇವರಿಗೆ ಬೇಡ; ಒಂದು ರೀತಿಯಲ್ಲಿ ಹೇಳುವುದಾದರೆ ಕೂಪಮಂಡೂಕದಂತೆ ವಾದಿಸುವ ಇವರಿಗೆ ಭಾರತ ಸರಿಯಾಗಿರಬೇಕು, ಅಷ್ಟೆ. ಭಾರತದಲ್ಲಂತೂ ಬಹುಸಂಖ್ಯಾತರಿಗಿಂತ ಹೆಚ್ಚಿನ ಸವಲತ್ತು ಪಡೆದು ಅಲ್ಪಸಂಖ್ಯಾತರೆಂದರೆ ತಾವು ಮಾತ್ರ ಎಂಬಂತೆ ಒಂದು ಸಮುದಾಯ ತನ್ನ ಸಂಖ್ಯೆಯನ್ನು ಇತರ ಎಲ್ಲರನ್ನು ಹಿಂದಿಕ್ಕಿ ಬೆಳೆಸಿಕೊಳ್ಳುತ್ತಿದ್ದರೂ ಇಂತಹ ಮಾತು ಕೇಳಬೇಕಾಗುತ್ತಿದೆಯಲ್ಲಾ ಎಂಬುದೇ ದುರಂತ; ಹೀಗೆ ಆರೋಪಿಸುವವರು ಮುಖ್ಯವಾಗಿ ವಿದ್ಯಾವಂತರಾದ ಬುದ್ಧಿಜೀವಿಗಳು ಎಂಬುದು ಇನ್ನೊಂದು ದುರಂತ.
ಈ ಹಿನ್ನೆಲೆಯಲ್ಲಿ ಕಳೆದ ವರ್ಷವಷ್ಟೇ (೨೦೧೪) ಪ್ರಕಟಗೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಓದುಗರ ಗಮನ ಸೆಳೆದ ಒಂದು ಪುಸ್ತಕವನ್ನು ಇಲ್ಲಿ ಪರಿಶೀಲಿಸಬಹುದು. ಪುಸ್ತಕ ವಮ್ಸೀ ಜುಲುರಿ ಅವರ Rearming Hinduism (ಹಿಂದೂಧರ್ಮಕ್ಕೆ ಮತ್ತೆ ಶಸ್ತ್ರಸಂಯೋಜನೆ); Nature, Hinduphobia and the Return of Indian Intelligence (ನಿಸರ್ಗ, ಹಿಂದೂಭಯ ಮತ್ತು ಭಾರತೀಯ ಬುದ್ಧಿಮತ್ತೆಯ ಮರಳಿಕೆ) ಎಂಬುದನ್ನು ಪುಸ್ತಕಕ್ಕೆ ಉಪಶೀರ್ಷಿಕೆಯಾಗಿ ನೀಡಲಾಗಿದೆ. ವಮ್ಸೀ ಅವರು ಸ್ಯಾನ್ಫ್ರಾನ್ಸಿಸ್ಕೋ ವಿಶ್ವವಿದ್ಯಾಲಯದ ಮಾಧ್ಯಮ ಅಧ್ಯಯನ ವಿಭಾಗದ ಪ್ರಾಧ್ಯಾಪಕರು; ಆ ಮೂಲಕ ಅವರು ಇಡೀ ಜಗತ್ತನ್ನು ಗಮನಿಸುತ್ತಾ ಮಾತನಾಡುತ್ತಿದ್ದಾರೆನ್ನಬಹುದು. (ವೆಸ್ಟ್ಲ್ಯಾಂಡ್ ಲಿಮಿಟೆಡ್ ಈ ಪುಸ್ತಕವನ್ನು ಪ್ರಕಟಿಸಿದೆ).
ಹೊಸ ತಲೆಮಾರಿನ ಪ್ರಶ್ನೆ
ಹಿಂದೂಧರ್ಮವು ಎದ್ದೇಳುತ್ತಿರುವ ಒಂದು ಕಾಲಘಟ್ಟದಲ್ಲಿ ನಾವಿದ್ದೇವೆ. ಸುದೀರ್ಘ ನಿದ್ರೆಯಿಂದ ಅಲ್ಲವಾದರೂ ಸುದೀರ್ಘ ಮೌನದಿಂದ ಎದ್ದೇಳುತ್ತಿರುವುದಂತೂ ಸತ್ಯ. ಇದೊಂದು ಅಮೂಲ್ಯ ನಿಧಿಯಾಗಿದ್ದು, ಇದನ್ನು ಸಂರಕ್ಷಿಸಿ ಇಡುವುದು ಅವಶ್ಯ. ಹಿಂದೂ ನಾಗರಿಕತೆ ಎಂಬುದೊಂದು ದೊಡ್ಡ ಸಂಕೀರ್ಣ ವಸ್ತು. ಓರ್ವ ಹಿಂದು ಎಂತಹ ಜ್ಞಾನಸಾಗರದಿಂದ ಬಂದಿರುವನೋ ಅದನ್ನು ಇಂದಿನ ಅಳತೆಗೋಲಿನಿಂದ ಅಳೆಯಲು ಅಸಾಧ್ಯ. ಬಹುಕಾಲದಿಂದ ನಾವು ಜಗತ್ತಿಗೆ ಮತ್ತು ಸ್ವತಃ ನಮಗೆ ನಾವು ಈ ಬಗೆಯ ಹಿಂದೂಧರ್ಮದವರೆಂದು ಹೇಳಿಕೊಂಡಿಲ್ಲ. ಇದಕ್ಕೆ ನಮ್ಮ ಸೌಮ್ಯಸ್ವಭಾವ ಮತ್ತು ಧರ್ಮದ ಬಗೆಗಿನ ಬೇಕಾಬಿಟ್ಟಿ (easy – going) ನಡತೆ ಕಾರಣವಿರಬಹುದು. ೧೯೪೭ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದರೂ ಇದುವರೆಗೆ ಈ ಮತ ನಿಶ್ಶಬ್ದವಾಗಿತ್ತು; ನಾವು ಆಚರಿಸುತ್ತಿದ್ದುದು ನಿಜ. ಆದರೆ ಇಂದಿನ ತಲೆಮಾರು ಈಗ ಕೇಳುತ್ತಿರುವ ‘ಈಗ ಹಿಂದು ಆಗಿರುವುದೆಂದರೆ ನಿಜವಾಗಿಯೂ ಏನು?’ ಎನ್ನುವ ಪ್ರಶ್ನೆಯನ್ನು ನಾವು ಕೇಳಲಿಲ್ಲ. ಜಗತ್ತಿನ ಇಂದಿನ ಸಮಸ್ಯೆಗಳಿಗೆ ನಮ್ಮ ಪರಿಹಾರ ಏನೆಂದು ಕೂಡ ನಾವು ಹೇಳಲಿಲ್ಲ. ದೇವರಲ್ಲಿನ ನಂಬಿಕೆ, ಆಚರಣೆಗಳಿಗಿಂತ ಇದು ಹೆಚ್ಚಿನದೆಂದು ನಮಗೆ ತೋರಲಿಲ್ಲ. ಈಗ ‘ನಾವು ಯಾರು? ಇಷ್ಟು ದೂರ ಬಂದದ್ದು ಹೇಗೆ?’ ಎಂದು ಕೇಳಲು ಆರಂಭಿಸಿದ್ದೇವೆ ಎಂಬ ನಿಲವನ್ನು ಪುಸ್ತಕದ ಪೀಠಿಕೆ ಎಂದು ಪರಿಗಣಿಸಬಹುದು.
ಸ್ವಾತಂತ್ರ್ಯದ ಬಳಿಕ ೬೦ ವರ್ಷಕಾಲ ಇಲ್ಲಿ ಸರ್ಕಾರಗಳು ಜನರ ಅತ್ಯುತ್ತಮ ಗುಣಗಳನ್ನು ಬೆಳೆಸುವ ಶಿಕ್ಷಣವನ್ನು ಜಾರಿಗೆ ತರಲಿಲ್ಲ. ಮಾಡಿದ್ದೆಂದರೆ ನಮ್ಮ ಇಂಜಿನಿಯರಿಂಗ್ ಬುದ್ಧಿವಂತಿಕೆಯನ್ನು ಹೊರತಂದು ಮಾರಾಟಮಾಡಿದ್ದು ಮಾತ್ರ. ಹಿಂದೂಧರ್ಮ ಇತರ ಎಲ್ಲಕ್ಕಿಂತ ಮುಖ್ಯವಾಗಿ ಬುದ್ಧಿಮತ್ತೆ (intelligence)ಗೆ ಪರವಾದದ್ದು. ಇಷ್ಟು ವರ್ಷಗಳ ಕಾಲ ನಾವು ಉಳಿದುಬಂದದ್ದು ದೈಹಿಕ ಬಲದಿಂದಲ್ಲ, ಕ್ರೂರವಾಗಿ ಇತರರನ್ನು ನಾಶಮಾಡಿಯೂ ಅಲ್ಲ; ಬದಲಾಗಿ ಬುದ್ಧಿಮತ್ತೆಯ ಬಗೆಗಿನ ಗೌರವದಿಂದ. ದಿವ್ಯಶಕ್ತಿಗೆ ಶರಣಾಗುತ್ತ ಮಾನವರಾಗಿ ಬಲಶಾಲಿಗಳಾಗಿ ನಾವು ಉಳಿದುಬಂದೆವು. ಇದು ಸ್ವಾರ್ಥ, ಇತರರ ಶೋಷಣೆ, ಭಾರೀ ಲಾಭಗಳಿಕೆ ಹಾಗೂ ಕ್ರೌರ್ಯದ ಬುದ್ಧಿಮತ್ತೆ ಅಲ್ಲ ಎನ್ನುವ ಲೇಖಕ ವಂಶೀ ಅವರು, ನನಗೆ ಹಿಂದೂಧರ್ಮವೆಂದರೆ ಒಂದು ಧರ್ಮ ಅಥವಾ ಮತಕ್ಕಿಂತ ಹೆಚ್ಚು; ಒಂದು ಜೀವನವಿಧಾನ ಎಂಬುದಕ್ಕಿಂತಲೂ ಹೆಚ್ಚು. ಇದು ಜೀವನವನ್ನು ಬುದ್ಧಿಮತ್ತೆಯ ಮೂಲಕ ತಿಳಿಯುವ ರೀತಿ ಎಂದು ಹೇಳುತ್ತಾರೆ.
ಕೇವಲ ಇತರ ಮತಗಳಿಗಿಂತ ನಮ್ಮದು ಶ್ರೇಷ್ಠ ಎಂದು ಹೇಳುತ್ತಾ ಕುಳಿತಿರುವ ಕಾಲ ಇದಲ್ಲ; ಬದಲಾಗಿ ನಾಗರಿಕತೆಯ ಆತ್ಮಜ್ಞಾನ(ಸ್ವರೂಪದರ್ಶನ)ಕ್ಕೆ ಮರಳುವ ಕಾಲ. ಬುದ್ಧಿಮತ್ತೆಯು ನಮಗೆ ಮಾರ್ಗದರ್ಶನ ನೀಡುವ ರೀತಿಯಲ್ಲಿ (ಧಿಯೋ ಯೋ ನಃ ಪ್ರಚೋದಯಾತ್ – ಗಾಯತ್ರೀ) ಅದನ್ನು ಗೌರವಿಸುವ ಕಾಲ ಎನ್ನುವ ಲೇಖಕರು, ಇತರ ಪ್ರಾಚೀನ ನಾಗರಿಕತೆಗಳು ಈಗ ಕೇವಲ ಇತಿಹಾಸ ಪುಸ್ತಕಗಳಲ್ಲಿ ಮಾತ್ರ ಉಳಿದಿವೆ, ಪ್ರೀತಿ ಮತ್ತು ಸ್ವಾತಂತ್ರ್ಯ ಆಗಿದ್ದ ಮತವನ್ನು ದ್ವೇಷ ಮತ್ತು ಬಲಾತ್ಕಾರಗಳಾಗಿ ಪರಿವರ್ತಿಸಿದವರ ಮಧ್ಯೆ ಹಿಂದೂಧರ್ಮ ಸಾವಿರಾರು ವರ್ಷಗಳಿಂದ ಒಂದೇ ರೀತಿ ಉಳಿದುಕೊಂಡು ಬಂದಿದೆ, ಯಾರಿಗೂ ಇದನ್ನು ಅಳಿಸಿಹಾಕಲು ಸಾಧ್ಯವಾಗಿಲ್ಲ – ಎಂದು ಹೆಮ್ಮೆಪಡುತ್ತಾರೆ.
ವಿದ್ಯಾವಂತರ ಮಯಸಭೆ
‘ದಿ ಅಕಾಡೆಮಿಕ್ ಮಯಸಭಾ’ ಎನ್ನುವ ಅಧ್ಯಾಯದಲ್ಲಿ ವಂಶೀ ಅವರು ವಿದ್ಯಾವಂತವರ್ಗ ಹೇಗೆ ಹಿಂದೂಧರ್ಮವನ್ನು ಅವಗಣನೆ ಮಾಡಿದೆ ಎಂದು ವಿವರಿಸಿದ್ದಾರೆ. ಹಿಂದೂಧರ್ಮಕ್ಕೆ ಎದುರಾಗಿರುವ ಸವಾಲು ಸರ್ಕಾರ ಅಥವಾ ಸೇನೆಯದ್ದಲ್ಲ. ಮುಖ್ಯವಾಗಿ ವಿದ್ಯಾವಂತವರ್ಗ ಮತ್ತು ಮಾಧ್ಯಮಗಳೆನ್ನುವ ಎರಡು ಸಂಸ್ಥೆಗಳಿಂದ ಬಂದದ್ದು. ಇವುಗಳ ಕಾಮನ್ಸೆನ್ಸ್ನಲ್ಲಿ ಸೆನ್ಸೇ ಇಲ್ಲ; ಹಿಂದೂಧರ್ಮ ಯಾವುದು, ಹಿಂದೂ ಮೂಲಭೂತವಾದ ಯಾವುದು – ಎಂಬುದನ್ನು ತಿಳಿಯುವಲ್ಲೇ ಇವು ಸೋತಿವೆ. ಇಂದು ಈ ಎರಡು ಜಗತ್ತಿನ ಮೇಲೆ ಭಾರೀ ಪ್ರಭಾವ ಬೀರುತ್ತಿವೆ. ಇವು ಎಷ್ಟು ಪ್ರಭಾವಿ ಮತ್ತು ಸರ್ವವ್ಯಾಪಿ ಎಂದರೆ ನಮಗೆ ಅವುಗಳನ್ನು ಪ್ರಶ್ನಿಸಲು ಬಾರದಿದ್ದರೆ ನಾವು ಯಾರೆಂಬುದೇ ಮರೆತುಹೋದೀತು ಎನ್ನುತ್ತಾರೆ. ವಿದ್ಯಾವಂತವರ್ಗ (academia) ಮತ್ತು ಮಾಧ್ಯಮಗಳು ಹೇಗೆ ಅಪಾಯಕಾರಿ ಆಗಬಹುದೆಂಬುದಕ್ಕೆ ಹಿಂದೂಧರ್ಮವನ್ನು ಅವು ನಿರ್ವಹಿಸಿರುವ ರೀತಿ ಉತ್ತಮ ಉದಾಹರಣೆ ಆಗಬಹುದು; ಅದರಲ್ಲೂ ಮಾಧ್ಯಮಗಳು ಎಸಗುವ ಅನಾಹುತಗಳನ್ನು ನಾವೀಗ ದಿನದಿನವೂ ಕಾಣುತ್ತಿದ್ದೇವೆ.
ಹಿಂದೂಧರ್ಮದ ಕುರಿತು ಇಂದು ಮೂರು ಬಗೆಯ ಚರ್ಚೆಗಳು ನಡೆಯುತ್ತಿವೆ ಎಂದು ಲೇಖಕರು ಅವನ್ನು ವಿವರಿಸುತ್ತಾರೆ. ಒಂದನೆಯದು ಮುಖ್ಯವಾದದ್ದು, ಅಧಿಕಾರಯುತವಾದದ್ದು, ಮೂರ್ತವಾದದ್ದು, ಘನತೆ ಇರುವಂಥದ್ದು, ನೈತಿಕ ತುರ್ತು ಇರುವಂಥದ್ದು. ವಿಮರ್ಶಾತ್ಮಕ ಅಕಾಡೆಮಿಕ್ ಪರಂಪರೆಯಿಂದ ಬಂದ ಅದು ಎಡ, ಸೆಕ್ಯುಲರ್ (ಜಾತ್ಯತೀತ) ಎರಡೂ ಹೌದು. ಅಮೆರಿಕದಲ್ಲಿ ಹಿಂದೂ ಭಯ (ಹಿಂದೂ ಫೋಬಿಯ) ಎಡ ಮತ್ತು ಬಲಪಂಥೀಯ ಎರಡು ಕಡೆಯಿಂದಲೂ ಬರುತ್ತಿದೆ. ಅದೇ ಒಂದು ಸಾಧನೆ. ಏಕೆಂದರೆ (ಹಿಂದೂಧರ್ಮವನ್ನು ಟೀಕಿಸುವುದನ್ನು ಬಿಟ್ಟು) ಬೇರೆ ಯಾವುದರಲ್ಲೂ ಎಡ ಮತ್ತು ಬಲಪಂಥಗಳಲ್ಲಿ ಒಮ್ಮತ ಇಲ್ಲ. ಉದಾರವಾದಿ ಪತ್ರಿಕೆಗಳಾದ ನ್ಯೂಯಾರ್ಕ್ ಟೈಮ್ಸ್, ದಿ ಗಾರ್ಡಿಯನ್ಗಳಲ್ಲಿ ಈ ಬಗೆಯ ಚರ್ಚೆ ನಡೆಯುತ್ತದೆ. ಇದಕ್ಕೆ ಹೊರತಾದ ಹಿಂದೂ ಯಥಾಸ್ಥಿತಿವಾದಿ (ಕನ್ಸರ್ವೇಟಿವ್) ಅಭಿಪ್ರಾಯ ಪಾಶ್ಚಾತ್ಯ ಪತ್ರಿಕೆಗಳಲ್ಲಿ ಸಾಮಾನ್ಯವಾಗಿ ಪ್ರಕಟವಾಗುವುದಿಲ್ಲ – ಎಂದವರು ತಿಳಿಸುತ್ತಾರೆ; ಭಾರತದ ವಿದ್ಯಾವಂತರ ನಡುವೆಯೂ ಇದೇ ಸ್ಥಿತಿ ಇದೆ ಎನ್ನುತ್ತಾರೆ.
ಎರಡನೇ ಚರ್ಚೆ ಪ್ರಬಲವಾಗಿದ್ದು, ಅದು ಹಿಂದೂಧರ್ಮಕ್ಕೆ ಸಂಬಂಧಿಸಿ ರೂಪುಗೊಳ್ಳುತ್ತಿರುವ ನಾಗರಿಕತೆಗೆ ಪರವಾದ ವಾಗ್ವಾದ(discourse)ವಾಗಿದೆ. ಇದರಲ್ಲಿ ಆಧುನಿಕ ಹಿಂದುಗಳು ತಮ್ಮ ಮತ, ಸಂಸ್ಕೃತಿ ಮತ್ತು ಇತಿಹಾಸಗಳನ್ನು ಕುರಿತು ಮಾತನಾಡುವ ರೀತಿ ಸೇರಿದೆ. ಇದರಲ್ಲಿ ಅರೆವಿದ್ವತ್ಪರ ಮತ್ತು ಪಾಪ್ ಸಂಸ್ಕೃತಿಪರ ಚಿಂತನೆಯ ಎರಡು ರೀತಿಗಳೂ ಸೇರಿವೆ. ಟೀಕಾಕಾರರು ಇದನ್ನು ಹಿಂದೂರಾಷ್ಟ್ರೀಯತೆ, ಉಗ್ರವಾದ, ಫ್ಯಾಸಿಸಮ್, ಅಥವಾ ಮೂಲಭೂತವಾದ ಎನ್ನುತ್ತಾರೆ. ಹಿಂದೂ ರಾಷ್ಟ್ರೀಯವಾದಿ ಪಕ್ಷಗಳ ವಾದ ಇದರಲ್ಲಿ ಇರಬಹುದು. ಆದರೆ ಇದು ರಾಜಕೀಯ ಕಾರ್ಯಸೂಚಿ(ಅಜೆಂಡಾ)ಗಿಂತ ತುಂಬ ಹೆಚ್ಚಿನದು. ಇದರಲ್ಲಿ ಎಲ್ಲ ಹಿಂದುಗಳು ಸೇರುತ್ತಾರೆ. ಜಗತ್ತನ್ನು ಸ್ವಾಧೀನಪಡಿಸಿಕೊಳ್ಳಲು ಅಥವಾ ಮತಾಂತರಕ್ಕೆ ಅವರ ರಹಸ್ಯತಂತ್ರವೇನೂ ಇಲ್ಲ. ಅವರಲ್ಲಿ ಕೆಲವರು ಮುಸ್ಲಿಮರು ಮತ್ತು ಕ್ರೈಸ್ತರ ವಿರುದ್ಧ ಇಂಟರ್ನೆಟ್ನಲ್ಲಿ ಕಿರುಚಾಡಬಹುದು; ಅವರು ಅದಕ್ಕಿಂತ ಹೆಚ್ಚೇನೂ ಮಾಡುವವರಲ್ಲ. ಅವರಲ್ಲಿ ಸಿಟ್ಟಿದೆ; ಅವರು ಹತಾಶರಾಗಿದ್ದಾರೆ. ಎಡಪಂಥ ಮತ್ತು ಸೆಕ್ಯುಲರ್ವಾದದಲ್ಲಿ ಅವರಿಗೆ ವಂಚನೆ ಮಾತ್ರ ಕಾಣುತ್ತದೆ. ಆಧುನಿಕ ಜಾಗತಿಕ ವಾತಾವರಣದಲ್ಲಿ ತಮಗೆ ವೈಚಾರಿಕ ಹಾಗೂ ಅರ್ಥಪೂರ್ಣವಾದ ಸ್ಥಾನಮಾನ ಸಿಕ್ಕಿದರೆ ಸಾಕು ಎನ್ನುವ ಅವರು ರಾಷ್ಟ್ರೀಯ ಕಥನ ಬೇಕೆಂದು ಬಯಸುತ್ತಾರೆ. ಅವರ ಕೆಲವು ಮಾತು ತೀವ್ರ ಸ್ವರೂಪದಲ್ಲಿದ್ದು ಅವರ ಕೆಲವು ಚಟುವಟಿಕೆಗಳು ಆಕ್ರಮಣಕಾರಿಯಂತೆ ಕಂಡರೂ ಅವರ ಈ ವಾಗ್ವಾದ ಪ್ರಬಲವಲ್ಲ. ಪಠ್ಯಪುಸ್ತಕಗಳಲ್ಲಿ ಸೇರಿಲ್ಲ; ಪತ್ರಿಕೆಗಳ ಪ್ರಮುಖಪುಟ(ಓಪ್-ಎಡ್)ಗಳಲ್ಲಿ ಲೇಖನವಾಗಿಯೂ ಈ ವಿಷಯಗಳು ಬರುವುದಿಲ್ಲ ಎಂದು ಲೇಖಕರು ವಿವರಿಸುತ್ತಾರೆ.
‘ಸ್ಲಂ-ಡಾಗ್’ ಅಧ್ಯಯನ
ಹಿಂದೂಧರ್ಮದ ಬಗೆಗಿನ ಮೂರನೇ ಚರ್ಚೆ ಈಚೆಗೆ ಅಲ್ಲಲ್ಲಿ ಕಾಣಸಿಗುತ್ತದೆ; ಮತ್ತು ಸಹಜ ಎನಿಸಿಬಿಟ್ಟಿದೆ. ಒಂದನೆಯದಕ್ಕೆ ಸಮಾನ ಎನಿಸುವಂತಿದೆ. ವಿದ್ಯಾವಂತವರ್ಗ ಇದನ್ನು ಗಮನಿಸದಿದ್ದರೂ ಇಲ್ಲಿ ನಡೆಯುವ ಕೆಲಸ ಭಾರೀ ಪ್ರಚಾರ ಪಡೆದುಬಿಡುತ್ತದೆ. ಉದಾಹರಣೆಗೆ, ಇವರು ಸೀದಾ ಹೋಗಿ ‘ಸ್ಲಂ-ಡಾಗ್ ಮಿಲಿಯನೇರ್’ ಚಿತ್ರವನ್ನು ಕುರಿತು ಅಧ್ಯಯನ ನಡೆಸುತ್ತಾರೆ. ಅಲ್ಲಿರುವ ವಿಧಿಯನ್ನು ಕುರಿತ ಹಿಂದೂ ವಿವರಣೆಯ ಹುಸಿಚಿತ್ರಣ ಇವರಿಗೆ ಪ್ರಮುಖ ವಿಷಯವಾಗುತ್ತದೆ. ಅಲ್ಲಿನ ಹಿಂದೂ ಖಳನಾಯಕರು ಬಡ ಮುಸ್ಲಿಂ ಬಾಲಕರ ದಮನ ಮಾಡುತ್ತಾರೆ; ತಮ್ಮ ಮೇಲೆ ಹಿಂದುತ್ವವನ್ನು ಹೇರುತ್ತಾರೆ ಎಂದು ಆರೋಪಿಸಲಾಗುತ್ತದೆ. ನಿಜವಾಗಿಯೂ ಅಂಧರೆನಿಸುವ ವಿದ್ಯಾವಂತವರ್ಗ ಇಂದು ಈ ಪೂರ್ವಗ್ರಹಕ್ಕೆ ಗುರಿಯಾಗಿದೆ. ಹಿಂದೂಫೋಬಿಯ ಎಂದರೆ ಇದೇ ಎನ್ನುವ ಲೇಖಕ ವಂಶೀ, ಅದನ್ನು ಗುರುತಿಸಿ ಬಯಲುಮಾಡಿ ನಾಶಗೊಳಿಸುವುದೇ ತಮ್ಮ ಈ ಪುಸ್ತಕದ ಗುರಿ ಎಂದು ಸಾರುತ್ತಾರೆ.
ಹಿಂದೂಧರ್ಮ ತುಂಬ ಪ್ರಾಚೀನ ಇರಬಹುದು. ಆದರೆ ನಾವಿಲ್ಲಿ ಹೇಳುವುದು ಹಿಂದೂಧರ್ಮವೇ ಅಲ್ಲ; ಬದಲಾಗಿ ಅದರ ಬಗೆಗಿನ ವಾಗ್ವಾದ. ಆದ್ದರಿಂದ ಆಧುನಿಕ ಜಗತ್ತಿನಲ್ಲಿ ಕೆಲವು ಚಿಂತನೆ, ಊಹೆ ಮತ್ತು ಮಾಮೂಲಾದ ಅಂಶಗಳು ಹೇಗೆ ಹಿಂದೂಧರ್ಮದ ಬಗೆಗಿನ ಕಥೆಗಳಿಗೆ ಬಣ್ಣಹಚ್ಚಿವೆ ಎಂದು ತಿಳಿಯಬೇಕು. ಮಾನವಿಕಶಾಸ್ತ್ರ, ಸಮಾಜವಿಜ್ಞಾನ ಮುಂತಾಗಿ ವಿದ್ವಾಂಸರ ಚಿಂತನೆಯ ಇತಿಹಾಸವನ್ನು ಕಾಣಬೇಕು. ಕೆಲವು ಸಲ ಹಿಂದೂಧರ್ಮದ ಬಗೆಗಿನ ಸತ್ಯವನ್ನೇ ದಮನ ಮಾಡಲಾಗಿದೆ. ಈ ಸ್ಥಗಿತತೆ ಕೇವಲ ಮಾತಿನಿಂದ ದೂರ ಆಗದು. ಆದರೂ ಇತಿಹಾಸ ಮತ್ತು ಸಾಂಸ್ಕೃತಿಕ ಕ್ಷೇತ್ರದ ಹಿಂದೂ ವಿದ್ವಾಂಸರು ತಮ್ಮ ಧರ್ಮವನ್ನು ಕುರಿತು ಹೇಳುತ್ತಿರುವ ಮಾತುಗಳು ಅವರ ಸಾಮಾನ್ಯಜ್ಞಾನವನ್ನೇ ಪ್ರಶ್ನಿಸುವಂತಿವೆ. ಇದು ಕೇವಲ ಮಾಹಿತಿ ಕೊರತೆಯಲ್ಲ. ಪ್ರಸಿದ್ಧ ಲೇಖಕ, ಸಾಹಿತ್ಯ ವಿಮರ್ಶಕ, ಹೋರಾಟಗಾರ, ಪತ್ರಕರ್ತ ಎಲ್ಲರೂ ಒಂದೇ ರೀತಿ ಹೇಳುತ್ತಿದ್ದಾರೆ. ಉದಾಹರಣೆಗೆ, ‘ಹಿಂದೂಧರ್ಮ ಎಂಬ ಮತ ಅಥವಾ ಧರ್ಮ ಇರಲೇ ಇಲ. ೧೯ನೇ ಶತಮಾನದಲ್ಲಿ ಬ್ರಿಟಿಷರು ಮತ್ತು ಬ್ರಾಹ್ಮಣರು ಅದನ್ನು ಕಂಡುಹಿಡಿದರು’ ಎಂಬುದು ಅಂತಹ ಒಂದು ಮಾತು. ಆದರೆ ವಿರೋಧಾಭಾಸವೆಂದರೆ, ಶತಮಾನಗಳಿಂದ ಬಂದ ಜಾತಿಪದ್ಧತಿಗೆ ಹಿಂದೂಧರ್ಮವೇ ಕಾರಣ ಎನ್ನುತ್ತಾರೆ! ಹಿಂದೂಧರ್ಮದಲ್ಲಿ ಹಿಂಸೆ ತುಂಬಿಹೋಗಿದ್ದು, ಬೌದ್ಧಧರ್ಮ ಇಸ್ಲಾಂ ಮತ್ತು ಕ್ರೈಸ್ತಮತಗಳು ಅದನ್ನು ನಾಗರಿಕಗೊಳಿಸಿದವು ಎನ್ನುತ್ತಾರೆ. ಇನ್ನು ಹಿಂದೂಧರ್ಮ ಭಾರತೀಯವಾದದ್ದಲ್ಲ; ಅವರು (ಆರ್ಯರು) ಭಾರತಕ್ಕೆ ದಾಳಿ ಮಾಡಿದವರು ಎಂದು ವಾದಿಸುತ್ತಾರೆ ಎನ್ನುವ ಲೇಖಕರು, ಈ ಚಿಂತನೆಗಳು ನಿಲ್ಲುವುದಿಲ್ಲ. ಹಿಂದೂಧರ್ಮ, ಹಿಂದೂ ಇತಿಹಾಸದ ಬಗೆಗಿನ ಸಾಹಿತ್ಯಗಳು ಇದನ್ನು ಒಪ್ಪುವುದಿಲ್ಲ ಎಂದು ಅಭಿಪ್ರಾಯಪಡುತ್ತಾರೆ.
ಆ ಸಿದ್ಧಾಂತಗಳನ್ನು ನಾವು ವಿರೋಧಿಸುತ್ತೇವೆ. ಅವರನ್ನು ಫ್ಯಾಸಿಸ್ಟ್, ಕಮ್ಯುನಿಸ್ಟ್ ಎಂದು ಬೈಯುತ್ತೇವೆ, ಅವರ ಮತಗಳನ್ನು ಟೀಕಿಸುತ್ತೇವೆ. ಆದರೆ ಚರ್ಚೆಯಲ್ಲಿ ನಮ್ಮನ್ನು ಇಡಬೇಕೆಂದಿದ್ದ ಜಾಗದಲ್ಲಿ ಅವರು ಇಟ್ಟುಬಿಟ್ಟಿದ್ದಾರೆ. ನಮ್ಮನ್ನು ಉಗ್ರವಾದಿಗಳು, ಹುಚ್ಚರು, ವಂಚಕರು ಎಂದೆಲ್ಲ ಚಿತ್ರಿಸಿದ್ದಾರೆ. ಆದರೆ ಅವರು ಒಂದನ್ನು ತಿಳಿದುಕೊಳ್ಳಬೇಕು. ನಮ್ಮಲ್ಲಿ ಕೂಡ ಬುದ್ಧಿಶಾಲಿಗಳು, ಲೇಖಕರು ಇದ್ದಾರೆ. ವಿದ್ಯಾವಂತವರ್ಗ ಅಂಥವರನ್ನು ಮುನ್ನೆಲೆಗೆತರಲು ಬೇಕಾದ ಸಲಕರಣೆಗಳನ್ನು ನೀಡುತ್ತದೆ. ಸಮಾಜವಿಜ್ಞಾನ ಮತ್ತು ಇತಿಹಾಸಗಳು ಹಿಂದೂಚಿಂತನೆಯಿಂದ ಕಲಿತವೆಂದರೆ ಅದರಿಂದ ಜ್ಞಾನ ಮತ್ತು ಮಾನವೀಯತೆಗಳು ಲಭಿಸುವುದಷ್ಟೇ ಅಲ್ಲ; ಜಗತ್ತಿನ ಭವಿಷ್ಯವೇ ಬದಲಾಗಲು ಸಾಧ್ಯ; ಅದು ನಮ್ಮ ಗುರಿಯಾಗಬೇಕು ಎಂದು ಬಯಸುತ್ತಾರೆ.
ವಸ್ತುನಿಷ್ಠತೆಯ ಮಿತಿ
ನೀವು ಒಬ್ಬ ವಿಜ್ಞಾನಿ, ಡಾಕ್ಟರ್ ಅಥವಾ ಇಂಜಿನಿಯರ್ ಆಗಿದ್ದರೆ ಮತೀಯ (ಧಾರ್ಮಿಕ) ಅಥವಾ ವೈಜ್ಞಾನಿಕ ಎರಡೂ ಏಕಕಾಲಕ್ಕೆ ಆಗಿರಲು ಹೇಗೆ ಸಾಧ್ಯ? – ಎಂದು ಸಮಾಜವಿಜ್ಞಾನವು ಪ್ರಶ್ನಿಸುತ್ತದೆ. ವೈಜ್ಞಾನಿಕ ಆಗಿರುವುದೆಂದರೆ ವಸ್ತುನಿಷ್ಠ (objective) ಆಗುವುದು; ಅಲ್ಲಿ ವ್ಯಕ್ತಿನಿಷ್ಠತೆ (subjective)ಗೆ ಅವಕಾಶ ಇಲ್ಲ; ಅಂದರೆ ಜಗತ್ತನ್ನು ಮಾನವೀಯವಾಗಿ ನೋಡುವುದಲ್ಲ; ನಿರ್ಭಾವುಕವಾಗಿ ನೋಡುವುದು. ಭೌತಿಕ ಪ್ರಪಂಚದ ಭೌತಶಾಸ್ತ್ರ, ರಸಾಯನಶಾಸ್ತ್ರಗಳಲ್ಲಿ ಇದು ಚೆನ್ನಾಗಿ ಕೆಲಸ ಮಾಡುತ್ತದೆ. ಜಗತ್ತಿನ ಕೆಲಸ(ವ್ಯವಹಾರ)ಗಳು ಹೇಗೆ ನಡೆಯುತ್ತವೆಂದು ವಿಜ್ಞಾನ ಕಳೆದ ಕೆಲವು ಶತಮಾನಗಳಲ್ಲಿ ತಿಳಿಸುತ್ತಾ ಬಂತು. ತಂತ್ರಜ್ಞಾನವಂತೂ (ಕೆಲವುಸಲ ಹುಚ್ಚು ಎನಿಸಿದರೂ) ಅದ್ಭುತವಾಗಿ ಮುಂದೆ ಜಿಗಿದಿದೆ. ಆದರೆ ಮಾನವೀಯ ಜಗತ್ತಿನಲ್ಲಿ, ಸಮಾಜವಿಜ್ಞಾನಗಳಲ್ಲಿ ವಸ್ತುನಿಷ್ಠತೆ ತುಂಬ ಕಷ್ಟ. ಅಲ್ಲಿ ವಸ್ತುನಿಷ್ಠತೆಯಲ್ಲದೆ ಸತ್ಯಗಳ ವ್ಯಾಖ್ಯೆಯೂ (ಕಳೆದ ಕೆಲವು ದಶಕಗಳಲ್ಲಿ) ಬದಲಾಗುತ್ತಾ ಬಂದಿದೆ ಎನ್ನುವ ಲೇಖಕರು, ಇಂದಿನ ವಿದ್ಯಾವಂತವರ್ಗ ಏಕೆ ಹೀಗೆ ಬದಲಿಹೀರೋಗಳಂತೆ, ದ್ರಷ್ಟಾರರಂತೆ, ವಿಮೋಚಕರಂತೆ ವರ್ತಿಸುತ್ತಿದೆ ಎಂದು ತಿಳಿಯಲು ಇತಿಹಾಸವನ್ನು ನೋಡಬೇಕು, ಆಗ ಅವರ ನಿಜಬಣ್ಣ ತಿಳಿಯುತ್ತದೆ ಎಂದು ವಿವರಿಸುತ್ತಾರೆ.
ಮುಂದುವರಿದು, ೨೦ನೇ ಶತಮಾನದ ಆರಂಭದಿಂದ ೬೦ರ ದಶಕದ ಕೊನೆಯವರೆಗೂ ಸಮಾಜವಿಜ್ಞಾನಗಳು ತಾವು ವಸ್ತುನಿಷ್ಠ ಎನ್ನುತ್ತಿದ್ದವು. ಅಂತಹ ಮನಶ್ಶಾಸ್ತ್ರ, ಮಾನವಶಾಸ್ತ್ರ, ಇತಿಹಾಸ ಇತ್ಯಾದಿಗಳಲ್ಲಿ ಹೆಚ್ಚಿನ ಭಾಗ ವಸ್ತುನಿಷ್ಠವಾಗಿರಲಿಲ್ಲ; ಪಕ್ಷಪಾತದಿಂದ ಕೂಡಿದ್ದವು. ಜನಾಂಗವಾದಿ, ಸಾಮ್ರಾಜ್ಯಶಾಹಿ ಹಾಗೂ ಲೈಂಗಿಕ ಧೋರಣೆ ಹೊಂದಿದ್ದವೆಂಬುದು ಈಗ ಸ್ಪಷ್ಟವಾಗುತ್ತಿದೆ. ಬಿಳಿಯರಿಗೆ ಹೊರತಾದವರ ತಲೆಯ ಗಾತ್ರ ನೋಡಿ ಅದು ಚಿಂಪಾಂಜಿಗೆ ಹೋಲುತ್ತದೆ ಎಂದವರಿದ್ದಾರೆ; ಅಂದರೆ ತಮ್ಮದು ಹಾಗಿಲ್ಲ, ತಾವು ಅವರಿಗಿಂತ ಮೇಲೆ ಎನ್ನುವ ವಾದ. ಹಾಗೆಯೇ ಅಮೆರಿಕದ ಬಡ ವಲಸೆಗಾರರಿಗೆ ಪ್ರಶ್ನಪತ್ರಿಕೆ ನೀಡಿ ಉತ್ತರ ಪಡೆದು ಅವರಿಗೆ ಅಮೆರಿಕದ ನಡವಳಿಕೆ ಗೊತ್ತಿಲ್ಲ ಎಂಬುದರಿಂದ ಅವರ ಐಕ್ಯೂ (ಬುದ್ಧಿವಂತಿಕೆ)ವೇ ಕಡಮೆ ಎನ್ನುವುದು – ಎಂದು ವಿವರಿಸುವ ಲೇಖಕರು, ಆ ಹಂತದಲ್ಲಿ ಹಿಂದೂಧರ್ಮ ಮತ್ತು ಹಿಂದುಗಳ ಬಗೆಗೆ ಇಷ್ಟಬಂದ ಹಾಗೆ ಮಾಡಿದರು; ನಮ್ಮ ಗ್ರಂಥಗಳ ತಪ್ಪು ಅನುವಾದ ಮಾಡಿದರು; ತಪ್ಪು ಜನಾಂಗೀಯ ಸಿದ್ಧಾಂತಗಳ ಕಥೆ ಹೆಣೆದರು. ಅವರಿಗೆ ಅದಕ್ಕೆ ಯಾವ ಶಿಕ್ಷೆಯೂ ಆಗಲಿಲ್ಲ. ಏಕೆಂದರೆ ಅವರು ಆಗ ಜಗತ್ತಿನ ಯಜಮಾನರಾಗಿದ್ದರು – ಎನ್ನುತ್ತಾರೆ.
೨೦ನೇ ಶತಮಾನದ ಆರಂಭದಿಂದ ೬೦ರ ದಶಕದ ಕೊನೆಯವರೆಗೂ ಸಮಾಜವಿಜ್ಞಾನಗಳು ತಾವು ವಸ್ತುನಿಷ್ಠ ಎನ್ನುತ್ತಿದ್ದವು. ಅಂತಹ ಮನಶ್ಶಾಸ್ತ್ರ, ಮಾನವಶಾಸ್ತ್ರ, ಇತಿಹಾಸ ಇತ್ಯಾದಿಗಳಲ್ಲಿ ಹೆಚ್ಚಿನ ಭಾಗ ವಸ್ತುನಿಷ್ಠವಾಗಿರಲಿಲ್ಲ; ಪಕ್ಷಪಾತದಿಂದ ಕೂಡಿದ್ದವು. ಜನಾಂಗವಾದಿ, ಸಾಮ್ರಾಜ್ಯಶಾಹಿ ಹಾಗೂ ಲೈಂಗಿಕ ಧೋರಣೆ ಹೊಂದಿದ್ದವೆಂಬುದು ಈಗ ಸ್ಪಷ್ಟವಾಗುತ್ತಿದೆ. ಬಿಳಿಯರಿಗೆ ಹೊರತಾದವರ ತಲೆಯ ಗಾತ್ರ ನೋಡಿ ಅದು ಚಿಂಪಾಂಜಿಗೆ ಹೋಲುತ್ತದೆ ಎಂದವರಿದ್ದಾರೆ; ಅಂದರೆ ತಮ್ಮದು ಹಾಗಿಲ್ಲ, ತಾವು ಅವರಿಗಿಂತ ಮೇಲೆ ಎನ್ನುವ ವಾದ.
ವಸಾಹತುಶಾಹಿ ಹಕ್ಕು
ಇದರಿಂದ ಸ್ಪಷ್ಟವಾಗುವ ಅಂಶವೆಂದರೆ, ಅವರಿಗಿದ್ದ ವಿಶೇಷ ಹಕ್ಕಿನಲ್ಲಿ ಹಿಂದುಗಳ ಬಗೆಗಿನ ಅವರ ವಿಚಿತ್ರ ಪೂರ್ವಗ್ರಹಗಳು ಅಡಗಿಹೋಗುತ್ತಿದ್ದವು. ಮಿಷನರಿಪ್ರೇರಿತ ತಾರತಮ್ಯಗಳನ್ನು ಅಕಾಡೆಮಿಕ್ ಗೌರವದಲ್ಲಿ ಅಡಗಿಸಿದರು (ಅಂತಹ ರೂಪನೀಡಿದರು). ತಮಗೆ ಈ ವಿಷಯದಲ್ಲಿ ಮಾತನಾಡುವ ಅಧಿಕಾರ ಎಲ್ಲಿಂದ ಬಂತೆಂದು ಅವರು ಸ್ಪಷ್ಟಪಡಿಸಲಿಲ್ಲ. ಒಟ್ಟಿನಲ್ಲಿ ವಸ್ತುನಿಷ್ಠತೆಯ ಶೈಕ್ಷಣಿಕ (ಅಕಾಡೆಮಿಕ್) ಪರಂಪರೆ ಆಗ ಇರಲು ಸಾಧ್ಯವಿರಲಿಲ್ಲ. ಜನಾಂಗವಾದ, ವಸಾಹತುಶಾಹಿಗಳಿಂದಾಗಿ ಹಿಂದೂಗಳು ಅವರ ಮಿತ್ರರಾಗಲು ಕೂಡ ಸಾಧ್ಯವಿರಲಿಲ್ಲ; ಹೀಗೆ ಅವರಿಗೆ ಮೇಲಿನ ಕೆಲವು ವಿಷಯಗಳ ಬಗ್ಗೆ ಮಾತನಾಡುವ ಅಧಿಕಾರ ಇರಲಿಲ್ಲ ಎನ್ನುತ್ತಾರೆ.
೧೯೬೦-೭೦ರ ದಶಕಗಳಲ್ಲಿ ವಿದ್ಯಾವಂತವರ್ಗ (academia)ದಲ್ಲಿ ಒಂದು ಏರುಪೇರಾಯಿತು. ಹಳೆಯ ವಸ್ತುನಿಷ್ಠತೆ, ‘ಜಾಗತಿಕ ಜ್ಞಾನ’ಗಳಿಗೆ ಪೆಟ್ಟುಬಿತ್ತು. ಹಳೆಯ ಯಾಜಮಾನ್ಯಕ್ಕೆ ಸವಾಲೊಡ್ಡಲಾಯಿತು. ಮಾರ್ಕ್ಸ್ವಾದಿಗಳು, ತೃತೀಯ ಜಗತ್ತಿನವರು, ಸ್ತ್ರೀವಾದಿಗಳು ಮುಂತಾದವರು ಭಾರೀ ಗದ್ದಲದೊಂದಿಗೆ ವಿದ್ಯಾವಂತ ಕ್ಷೇತ್ರಕ್ಕೆ ಲಗ್ಗೆಯಿಟ್ಟರು. ಸಮಾಜವಿಜ್ಞಾನಿಗಳ ‘ವಸ್ತುನಿಷ್ಠತೆ’ಗೆ ಅದರ ಸ್ವರೂಪದರ್ಶನ ಮಾಡಿಸಲಾಯಿತು. ಅದು ನಿಜವಾದ ವಸ್ತುನಿಷ್ಠತೆಯಲ್ಲ; ಅವರದ್ದು ಜಾಗತಿಕ (ವೈಶ್ವಿಕ) ಜ್ಞಾನವೂ ಅಲ್ಲ; ಬದಲಾಗಿ ಅದು ನಿರ್ದಿಷ್ಟ ಗುಂಪುಗಳ ಪಕ್ಷಪಾತ ಹಾಗೂ ಅಭಿಪ್ರಾಯ – ಎಂದು ತಿಳಿಸಲಾಯಿತು. ಅವು ಐರೋಪ್ಯ ಮೂಲದವು; ಮತ್ತು ಪುರುಷಪ್ರಧಾನ ವ್ಯವಸ್ಥೆಯಿಂದ ಬಂದಂಥವು. ಆದ್ದರಿಂದ ಅವುಗಳನ್ನು ‘ಮೃತ ಬಿಳಿ ಪುರುಷರು’ (dead white males) ಎಂದು ಒರಟಾಗಿ ಕರೆಯಲಾಯಿತು. ವಿದ್ಯಾವಂತ ವಲಯದಲ್ಲಿ ಹಲವು ಸ್ವರಗಳು ಕೇಳಿಸಿದವು. ಮತ್ತೆ ಮಾಧ್ಯಮ ಮತ್ತು ಸಂಸ್ಕೃತಿ ಕ್ಷೇತ್ರಗಳಲ್ಲೂ ಅದು ಬಂತು. ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಅಧ್ಯಯನ, ಜನಾಂಗೀಯ ಅಧ್ಯಯನ ವಿಭಾಗಗಳು ಆರಂಭಗೊಂಡವು. ಒಳ್ಳೆಯ ಅಂಶವೆಂದರೆ, ಇಲ್ಲಿ ಯಾರ ತಲೆಬುರುಡೆಯನ್ನೂ ಅಳೆದು ಲೇಬಲ್ ಅಂಟಿಸಲಿಲ್ಲ. ಹಲವು ಜನ ಮತ್ತು ಸಮುದಾಯಗಳ ವೈವಿಧ್ಯ, ಸಬಲೀಕರಣಗಳು ಬಂದವು ಎಂದು ಲೇಖಕರು ಗುರುತಿಸುತ್ತಾರೆ.
ಆದರೆ ಆಕ್ಷೇಪಾರ್ಹ ಅಂಶವೆಂದರೆ, ವೈವಿಧ್ಯ, ಸಬಲೀಕರಣಗಳು ಫ್ಯಾಶನ್ ಆದವು. ಬೌದ್ಧಿಕ ಕ್ರಿಯೆಯನ್ನು ಒಳ್ಳೆಯ ಮತ್ತು ಕೆಟ್ಟ ಅಸ್ಮಿತೆ(ಐಡೆಂಟಿಟಿ)ಗಳ ಲೆಕ್ಕಾಚಾರಕ್ಕೆ ಇಳಿಸಲಾಯಿತು. ಎಲ್ಲವೂ ಸಾಪೇಕ್ಷವಾದ ಕಾರಣ ಸತ್ಯ ಬಹುತೇಕ ಅಪ್ರಸ್ತುತ ಎನಿಸಿತು. ಎಲ್ಲವೂ ಕೇವಲ ‘ಅಭಿಪ್ರಾಯ’ ಎನಿಸಿ ಕೆಲವು ಅಭಿಪ್ರಾಯಗಳನ್ನು ವೈಭವೀಕರಿಸುವುದು ಮತ್ತೆ ಕೆಲವನ್ನು (ವಾದ, ತರ್ಕಗಳಿಗೆ ಬದಲಾಗಿ ಅಸ್ಮಿತೆ, ಲೇಬಲ್ ಆಧಾರದಲ್ಲಿ) ಖಂಡಿಸುವುದು ಮುಖ್ಯವಾಯಿತು. ಇದನ್ನು ಆಧುನಿಕೋತ್ತರ ವಿದ್ಯಮಾನ ಎನ್ನಬಹುದು. ಇದು ಆಧುನಿಕೋತ್ತರವೋ ಅಲ್ಲವೋ, ಅದರ ಉದ್ದೇಶ, ಪರಿಕಲ್ಪನೆ ಏನಿತ್ತೋ, ಹಿಂದುಗಳ ಮಟ್ಟಿಗಂತೂ ಅದು ಕ್ಲೀಶೆಗಳ ಕೆಟ್ಟರೂಪವನ್ನಷ್ಟೇ ಪಡೆಯಿತು ಎನ್ನುವ ಲೇಖಕರು, ಹಳೆಕಾಲದ ಮುಖ್ಯಧಾರೆಯ ವಿದ್ಯಾವಂತ ವರ್ಗದ ಪ್ರಕಾರ ನಾವು ‘ಇತರರು’; ಅನಂತರ ಎಲ್ಲ ಇತರರಿಗೆ ಜನಾಂಗೀಯರು; ಮೇಜಿನ ಮುಂದೆ ಸೀಟು ಸಿಕ್ಕಿದಾಗ ನಮ್ಮನ್ನು ಜಾಗತಿಕ ಧರ್ಮ ಮತ್ತು ಜನಾಂಗಹತ್ಯೆಗಳ ಖಳರೆಂದು ಜೊತೆಗೆ ಸೇರಿಸಲಾಯಿತು ಎಂದು ಗುರುತಿಸುತ್ತಾರೆ.
ದುಷ್ಟ ಪದವಾಗಿ ಹಿಂದು
ವಿಶ್ವವಿದ್ಯಾಲಯಗಳ ಕ್ಲಾಸ್ರೂಂಗಳಲ್ಲಿ ಹಿಂದು ಎಂಬುದೊಂದು ಕೆಟ್ಟ ಪದವಾಯಿತು. ಅದು ಪ್ಯಾಕೇಜಿನ ಒಂದು ಭಾಗ. ನೀವು ಜನಾಂಗದ್ವೇಷ, ಕಾಮುಕತೆ, ಕಾರ್ಮಿಕರ ಶೋಷಣೆ, ಯುದ್ಧ ಹಾಗೂ ಜಗತ್ತಿನ ಸಾಮಾಜಿಕ-ರಾಜಕೀಯ ಅನಿಷ್ಟಗಳನ್ನು ವಿರೋಧಿಸುವುದಾದರೆ ಅದರೊಂದಿಗೆ ಪ್ಯಾಕೇಜಿನಲ್ಲಿ ಬಂದ ಹಿಂದೂ ಪದವನ್ನು ಕೂಡ ಒಪ್ಪಬೇಕು. ಹಿಂದು ಎನ್ನುವುದು ಎಡ-ಬಲ ಎರಡರಿಂದಲೂ ಟೀಕೆಗೆ ಗುರಿಯಾಯಿತು. ವಿದ್ಯಾವಂತರ ನಡುವೆ ಹಿಂದುಗಳು ವಿಚಿತ್ರ ತಿರಸ್ಕಾರಕ್ಕೆ ಗುರಿಯಾದರು. ಯೂರೋಪ್, ಅಮೆರಿಕಗಳ ವಿದ್ಯಾವಂತವರ್ಗ ಯಶಸ್ವಿ ಹಿಂದುಗಳನ್ನು ಸಮಾನವಾಗಿ ಕಂಡದ್ದಿದೆ. ಉದಾಹರಣೆಗೆ, ಅಮೆರಿಕ ಅಧ್ಯಕ್ಷ ಜಾನ್ ಕೆನೆಡಿ ಪ್ರಧಾನಿ ನೆಹರು ಅವರಿಗೆ ‘ನೀವು ನಮ್ಮಂತೆಯೇ’ ಎಂದ ಹಾಗೆ. ಅವರ ವಾದವನ್ನು ಒಪ್ಪದಿದ್ದರೆ ಜನಾಂಗೀಯವಾದಿ, ಜಾತಿವಾದಿ, ಹಿಂದೂ ಮೂಲಭೂತವಾದಿ ಎನಿಸಬೇಕಾಗುತ್ತದೆ; ಹಿಂದೂ ಬುದ್ಧಿಜೀವಿಯಾಗಿ ಮಾತನಾಡುವಂತಿಲ್ಲ ಎನ್ನುವ ‘ರಿಆರ್ಮಿಂಗ್ ಹಿಂದೂಯಿಸಂ’ನ ಲೇಖಕರು, ಇನ್ನೊಂದು ಅಂಶದ ಕಡೆಗೂ ಗಮನ ಸೆಳೆಯುತ್ತಾರೆ.
ಓರ್ವ ಮಹಿಳೆ ಸ್ತ್ರೀವಾದಿಯಾಗಿ ಜ್ಞಾನವನ್ನು ಪ್ರಕಟಿಸಬಹುದು. ಮುಸ್ಲಿಂ ಆಗಿದ್ದು ಇಸ್ಲಾಂವಾದಿ ಇತಿಹಾಸಕಾರ ಎನಿಸಿಕೊಳ್ಳಬಹುದು. ಆದರೆ ಒಬ್ಬ ಹಿಂದು ಎಂದು ನೀವು ನಿಮ್ಮನ್ನು ಪ್ರತಿನಿಧಿಸಲಾರಿರಿ! ವಸ್ತುನಿಷ್ಠ ಜ್ಞಾನದ ಮಾತು ದೂರವೇ ಉಳಿಯಿತು. ಉದಾರವಾದಿ, ಪ್ರಗತಿಪರ ಅಥವಾ ಇಗ್ಯಾಲಿಟೇರಿಯನ್ ಎಂದು ಹೇಳಿಕೊಳ್ಳುವುದು ಅಸಂಭವ. ನಿಮ್ಮ ೫,೦೦೦ ವರ್ಷಗಳ ಬುದ್ಧಿಮತ್ತೆಯನ್ನು ನೀವು ಬಾಗಿಲಿನ ಹೊರಗೇ ಬಿಡಬೇಕು (ಕಾಲಿನ ಚಪ್ಪಲಿಯಂತೆ). ಕಾನೂನಿನ ನಿರ್ಬಂಧ, ವಿದ್ಯಾವಂತರ ನಡುವಣ ತಿರಸ್ಕಾರ, ವಿಚಿತ್ರವಾದ ಜನಾಂಗೀಯ ದ್ವೇಷ, ಪೂರ್ವಗ್ರಹ ಇವೆಲ್ಲ ಹಿಂದೆ ಇಡೀ ಜಗತ್ತಿಗೆ ಇದ್ದರೆ ಈಗ ಹಿಂದುಗಳ ವಿರುದ್ಧ ಮಾತ್ರ ಇದೆ ಎಂದವರು ತಿಳಿಸುತ್ತಾರೆ.
ವಸಾಹತುಶಾಹಿಗಳು, ಮುಖ್ಯವಾಗಿ ಬ್ರಿಟಿಷರು ಮತ್ತು ಫ್ರೆಂಚರು ಮುಂದೆ ತಂದ ‘ಪೌರ್ವಾತ್ಯವಾದ’ (Orientalism) ಎಂಬ ಸಿದ್ಧಾಂತದಿಂದ ಕೂಡ ಹಿಂದೂಧರ್ಮಕ್ಕೆ ಹಾನಿಯಾಯಿತು. ಮಾನವಿಕತೆ (ಹ್ಯುಮ್ಯಾನಿಟೀಸ್) ಮತ್ತು ಸಮಾಜವಿಜ್ಞಾನಗಳಲ್ಲಿ ಒಂದು ಪ್ರಭಾವಿ ಚಿಂತನೆಯಾದ ಅದು ಹುಸಿ ಆದರೆ ಶಕ್ತಿಶಾಲಿ ಫ್ಯಾಂಟಸಿ(ಭ್ರಮೆ)ಗಳ ಮೂಲಕ ತನ್ನ ಇಚ್ಛೆಯನ್ನು ಇತರರ ಮೇಲೆ ಹೇರುತ್ತದೆ; ಅಂದರೆ ಕೆಲವು ಸ್ಟೀರಿಯೋಟೈಪ್ (ಮೂಮೂಲಿ ನಕಲು)ಗಳನ್ನು ಸಿದ್ಧಪಡಿಸಿಕೊಳ್ಳುತ್ತದೆ. ವಸಾಹತುಶಾಹಿಗಳು ತಮ್ಮ ಆಳ್ವಿಕೆಗೆ ಸಮರ್ಥನೆಯಾಗಿ ಮತ್ತು ಏಷ್ಯಾ, ಆಫ್ರಿಕಗಳಲ್ಲಿ ತಾವು ನಡೆಸಿದ ಲೂಟಿಗೆ ಪೂರಕವಾಗಿ ಪೌರ್ವಾತ್ಯವಾದವನ್ನು ಬಳಸಿಕೊಂಡರು. ಒಂದು ವಾಗ್ವಾದವಾಗಿ ಪೌರ್ವಾತ್ಯವಾದ ಏನನ್ನು ಹೇಳಬಹುದು, ಏನನ್ನು ಹೇಳಬಾರದು; ಹೇಳದಿರುವ ಅನಿವಾರ್ಯತೆಗಳೇನು ಎಂಬುದನ್ನೆಲ್ಲ ಒಳಗೊಂಡಿರುತ್ತದೆ. ಇಲ್ಲಿ ವಾಗ್ವಾದದ ಹಿಂದೆ ಸಾಂಸ್ಥಿಕ ಅಧಿಕಾರವಿರುತ್ತದೆ. ಆದ್ದರಿಂದ ಅದು ಅಧಿಕಾರವೇ ಆಗಿರುತ್ತದೆ. ಅದನ್ನು ಸತ್ಯವಾಗಿ ಸ್ವೀಕರಿಸಬೇಕು ಹೊರತು ಕೇವಲ ಅಭಿಪ್ರಾಯವಾಗಿ ಅಲ್ಲ; ಮಾಧ್ಯಮಗಳು ಸ್ಟೀರಿಯೋಟೈಪ್ ಆದಾಗ ಅದರಲ್ಲಿ ಹೇರಿಕೆಯೂ ಇರುತ್ತದೆ. ಉದಾಹರಣೆಗೆ, ಭಾರತವನ್ನು ಕುರಿತು ಹಾಲಿವುಡ್ನ ಒಂದು ಸಿನೆಮಾ ಮಾಡಿದರೆ ಅದರಲ್ಲಿ ಬಡತನ, ಹಾವು, ವಿಧಿವಾದಗಳು ಇರಲೇಬೇಕು. ಭಾರತ ಹೇಗಿದೆಯೋ ಹಾಗಲ್ಲ, ಅದು ಹಾಲಿವುಡ್ ಸಿನೆಮಾದ ಹಾಗಿರಬೇಕು ಎಂದು ಲೇಖಕರು ವಿವರಿಸುತ್ತಾರೆ.
ವಸಾಹತುಶಾಹಿ ಹೇರಿಕೆ
ಮುಂದುವರಿದು, ಆದರೆ ಭಾರತ ಮತ್ತು ಹಿಂದೂಧರ್ಮಗಳ ಬಗೆಗಿನ ಪೌರ್ವಾತ್ಯವಾದಿ ಸಂಸ್ಕೃತಿಯು ಸ್ಥಿತಿಸ್ಥಾಪಕಗುಣವನ್ನು ತೋರಿಸಿದೆ. ೧೮೦೦ರಿಂದ ೧೯೪೦ರ ವರೆಗಿನ ಅವಧಿಯಲ್ಲಿ ಅದು ವಸಾಹತುಶಾಹಿಯ ರಾಜಕೀಯ ಹಿತಾಸಕ್ತಿಗೆ ಅನುಗುಣವಾಗಿದ್ದು, ಮತಪ್ರಚಾರ, ಜನರನ್ನು ‘ನಾಗರಿಕ’ರನ್ನಾಗಿಸುವುದು (civilising mission) ಮುಂತಾದ ಸಿದ್ಧಾಂತಗಳಿಂದ ಪ್ರೇರಿತವಾಗಿತ್ತು. ಪಾಶ್ಚಾತ್ಯ ಲೇಖಕರು, ವಿದ್ವಾಂಸರು, ಕಲಾವಿದರು, ರಾಜಕಾರಣಿಗಳೆಲ್ಲ ಹಿಂದೂಧರ್ಮವು ಹಿಂಸಾತ್ಮಕವಾದದ್ದು, ಮೂಢನಂಬಿಕೆಗಳಿಂದ ತುಂಬಿದ್ದು, ಇಲ್ಲಿನ ಜನ ಕೆಳಮಟ್ಟದವರು ಎಂದು ಹೇಳುತ್ತಾ ಬಂದರು. ಆಗ ಭಾರತ ವಸಾಹತಾಗಿದ್ದ ಕಾರಣ ಭಾರತೀಯರಲ್ಲಿ ಕೆಲವರಾದರೂ ಅದನ್ನು ಒಪ್ಪಿದರು ಎನ್ನುತ್ತಾರೆ.
ಇನ್ನು ಎರಡನೇ ಹಂತ ವಸಾಹತೋತ್ತರ ಕಾಲವಾಗಿದ್ದು, ಅಲ್ಲಿ ಅಮೆರಿಕ ಮತ್ತು ಸೋವಿಯತ್ ರಷ್ಯಾಗಳ ನಡುವಣ ಶೀತಲಸಮರ ಪ್ರಧಾನವಾಯಿತು. ಆಗ ವಿದ್ಯಾವಂತವರ್ಗ ಹಳೆಯ ಸ್ಟೀರಿಯೋ ಟೈಪ್ನಿಂದ ಸ್ವಲ್ಪ ಬದಲಾದರೂ ಹೊಸ ಸಿದ್ಧಾಂತಗಳ ಮೂಲಕ ಅದನ್ನು ಉಳಿಸಿಕೊಂಡಿತು. ೧೯೫೦ರಿಂದ ೮೦ರ ದಶಕದ ವರೆಗಿನ ಆ ಅವಧಿಯಲ್ಲಿ ಶೀತಲಸಮರದ ಲೆಕ್ಕಾಚಾರದಂತೆ ಹಿಂದೂಧರ್ಮವನ್ನು ನಕಾರಾತ್ಮಕವಾಗಿಯೇ ಕಂಡರು. ಕ್ರೈಸ್ತ ಅಮೆರಿಕನ್ ನಾಯಕರಿಗೆ ಹಿಂದೂ ಭಾರತಕ್ಕಿಂತ ಇಸ್ಲಾಮಿಕೇ ಪಾಕಿಸ್ತಾನ, ಅದರ ಜನರಲ್ಗಳೇ ಇಷ್ಟವಾದರು. ಭಾರತ ಬಡದೇಶವಾಗಿರಲು ಹಿಂದೂಧರ್ಮವೇ ಕಾರಣ ಎಂಬ ಉತ್ತರ ಪ್ರಚಲಿತವಿತ್ತು. ‘ಹಿಂದೂ ಬೆಳವಣಿಗೆ ದರ’ (Hindu Rate of Growth) ಎಂಬ ಮಾತು ಅದಕ್ಕೊಂದು ಉದಾಹರಣೆ.
ಸೆಕ್ಯುಲರ್ ನೆಹರು
ಇನ್ನು ದೇಶದ ಒಳಗೆ ಕೂಡ ನೆಹರು ಪ್ರಣೀತ ಸೆಕ್ಯುಲರಿಸಂನ ಕೆಳಗೆ ವಿದ್ಯಾವಂತವರ್ಗದ ನಡುವೆ ಹಿಂದೂಧರ್ಮದ ವಿಷಯದಲ್ಲಿ ಸ್ಥೂಲವಾದ ಅಲಕ್ಷ್ಯಭಾವನೆ ಬಂತು; ಮಾಧ್ಯಮ, ಬುದ್ಧಿಜೀವಿಗಳಲ್ಲಿ ಅದು ಪ್ರತಿಫಲಿತವಾಯಿತು. ಸ್ವತಂತ್ರ ಭಾರತದ ಶಾಲಾಮಕ್ಕಳು ತಮ್ಮ ಧರ್ಮ ಮತ್ತು ಪರಂಪರೆಗಳ ಹೆಚ್ಚಿನ ತಿಳಿವಳಿಕೆ ಪಡೆಯಲಿಲ್ಲ.
ಇಂದಿನ ಹಂತದಲ್ಲಿ ಹಿಂದೂಭಯದ ಪೌರ್ವಾತ್ಯವಾದವು ಹೆಚ್ಚು ಸೂಕ್ಷ್ಮ ಆಗಿದೆ. ಈಗ ಕೂಡ ಓರಿಯೆಂಟಲಿಸಂ ಹಿಂದುಗಳ ವಿರುದ್ಧವಿದ್ದು ವಸಾಹತುಶಾಹಿ ಮತ್ತು ಶೀತಲಸಮರದ ಕಾಲದಷ್ಟು ಅಲ್ಲವಾದರೂ ಈಗಲೂ ಅದು ಹಿಂದುಗಳ ಮೇಲೆ ಕೀಳರಿಮೆಯನ್ನು ಹೇರುವುದು ಇದ್ದೇ ಇದೆ. ಹಿಂದೆ ಹಿಂದುಗಳನ್ನು ವಂಚಿತರು (ಕಳಕೊಂಡವರು), ದುರ್ಬಲರು ಎನ್ನುತ್ತಿದ್ದರೆ ಈಗ ಪೂರ್ತಿ ಬದಲಾಗಿದೆ; ಮತ್ತೊಂದು ಬಗೆಯ ಸ್ಟೀರಿಯೋಟೈಪ್ ರೂಪಿಸಿಕೊಂಡು ಹಿಂದುಗಳನ್ನು ದುಷ್ಟರು, ಅತ್ಯಾಚಾರಿಗಳು, ಕಾಮುಕರು, ದಮನಕಾರಿಗಳು ಎನ್ನುತ್ತಿದ್ದಾರೆ. ತಮಾಷೆ ಎಂದರೆ ೧೯೬೦ರ ದಶಕದಲ್ಲಿ ಈಗ ಹಿಂದೂಧರ್ಮವನ್ನು ಖಂಡಿಸುವ ಇದೇ ಪಾಶ್ಚಾತ್ಯ ಯುವಕರು ಹಿಪ್ಪಿಗಳಾಗಿ ಪೂರ್ವದ ಸಂಸ್ಕೃತಿ ಮತ್ತು ಮತಧರ್ಮಗಳಿಗೆ ಪರವಾಗಿದ್ದರು, ಮತ್ತು ಪಶ್ಚಿಮದ ಕೈಗಾರಿಕಾ ಸಮಾಜವನ್ನು ಅತ್ಯಾಚಾರಿ, ಕಾಮುಕ, ವರ್ಗತಾರತಮ್ಯವಾದಿ ಎಂದು ಟೀಕಿಸುತ್ತಿದ್ದರು! ಇನ್ನೊಂದು ಗಮನಾರ್ಹ ಅಂಶವೆಂದರೆ, ಮೂಲೆಗೆ ತಳ್ಳಲ್ಪಟ್ಟ ಸಮುದಾಯಗಳಿಗೆ ಧ್ವನಿ ನೀಡಬೇಕೆಂಬ ಉದ್ದೇಶವಿಟ್ಟುಕೊಂಡು ಕಳೆದ ೫೦ ವರ್ಷಗಳಲ್ಲಿ ಸಾಂಸ್ಕೃತಿಕ ಅಧ್ಯಯನ, ವಸಾಹತೋತ್ತರ ಅಧ್ಯಯನ, ಜನಾಂಗೀಯ ಅಧ್ಯಯನ, ದಕ್ಷಿಣ ಏಷ್ಯ ಅಧ್ಯಯನಗಳೆಲ್ಲ ನಡೆದವು; ಈಗ ೫೦ ವರ್ಷ ಆಗುವಾಗ ಅಂತಹ ಆದರ್ಶ ಸುಳ್ಳಾಗಿ ಹಿಂದುಗಳು ಮತ್ತಷ್ಟು ಮೌನ ಆಗಬೇಕಾಗಿದೆ ಎಂದು ಲೇಖಕ ವಂಶೀ ಆಕ್ಷೇಪಿಸುತ್ತಾರೆ.
ಇಂದು ವಿದ್ಯಾವಂತವರ್ಗ ಮತ್ತು ಮಾಧ್ಯಮಗಳನ್ನು ಬಾಧಿಸುವ ಹಿಂದೂಫೋಬಿಯ ಪೌರ್ವಾತ್ಯವಾದವಲ್ಲದೆ ಬೇರೇನೂ ಅಲ್ಲ. ದುರದೃಷ್ಟವೆಂದರೆ, ಈ ರಾಜಕೀಯ-ಬೌದ್ಧಿಕ ಸಮುದಾಯ ಇತರರ ವಿಷಯದಲ್ಲಿ ಪೌರ್ವಾತ್ಯವಾದವನ್ನು ಬೇಗ ಗುರುತಿಸುತ್ತದೆ. ಆದರೆ ಹಿಂದುಗಳ ವಿಷಯದಲ್ಲಿ ನಿಷ್ಕ್ರಿಯ ಆಗುತ್ತದೆ ಎನ್ನುವ ಲೇಖಕರು, ಇದಕ್ಕೆ ಭಿನ್ನವಾಗಿ ರಾಜಕೀಯ – ಐತಿಹಾಸಿಕ ವಾಸ್ತವದ ನೆಪದಲ್ಲಿ ಹಿಂದೂಧರ್ಮದ ವಿಷಯದಲ್ಲಿ ವಿದ್ವಾಂಸರ ನಡುವೆ ಒಂದು ಒಮ್ಮತ ಮೂಡಿದೆ, ಹಿಂದೂಧರ್ಮ ತನ್ನನ್ನೇ ಪೌರ್ವಾತ್ಯವಾದವನ್ನಾಗಿ ರೂಪಿಸಿಕೊಂಡಿದೆ ಎನ್ನುತ್ತಾರೆ.
ಇದೇ ಸುಳ್ಳನ್ನು ಆಧರಿಸಿ ವಿದ್ಯಾವಂತವರ್ಗದ ಎಡಪಂಥೀಯರು ಇತರ ಕಡೆಯ ಅನ್ಯಾಯ, ಸುಳ್ಳು, ದಮನಗಳ ವಿಷಯದಲ್ಲಿ ಒಂದು ರೀತಿ ನಡೆದುಕೊಂಡರೆ ಹಿಂದುಗಳು ಮತ್ತು ಭಾರತದ ವಿಷಯದಲ್ಲಿ ಬೇರೊಂದುರೀತಿ ನಡೆದುಕೊಳ್ಳುತ್ತಾರೆ. ಪಾಶ್ಚಾತ್ಯ ಪ್ರಪಂಚವು ಮಾಡುವ ಭಾರತದ ಬಗೆಗಿನ ಒಂದು ವಿಮರ್ಶೆಯಲ್ಲಿ ಹಿಂದುಗಳನ್ನು ವಸಾಹತುಶಾಹಿಗಳಿಗೆ ಹೋಲಿಸಲಾಗಿದೆ. ಬ್ರಿಟನ್, ಫ್ರಾನ್ಸ್ ಮತ್ತು ನಂತರದ ಅಮೆರಿಕಗಳು ಹಿಂದಿನ ವಸಾಹತುಗಳಿಗೆ, ಮೂಲನಿವಾಸಿಗಳಿಗೆ ಮತ್ತು ಕರಿಯರಿಗೆ ಏನು ಮಾಡಿದರೋ ಅದನ್ನು ಹಿಂದುಗಳು ಭಾರತದ ಇತರರಿಗೆ ಮಾಡುತ್ತಿದ್ದಾರೆ, ಐರೋಪ್ಯ ವಸಾಹತುಶಾಹಿಯಲ್ಲಿ ಚರ್ಚ್ ಏನು ಮಾಡಿತೋ ಹಿಂದೂಧರ್ಮದಲ್ಲಿ ಬ್ರಾಹ್ಮಣರು ಅದನ್ನೇ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸುತ್ತಾರೆಂದು ಪುಸ್ತಕ ತಿಳಿಸುತ್ತದೆ.
ವಿದ್ಯಾವಂತವರ್ಗ ಹಿಂದೂಧರ್ಮದ- ಬಗೆಗಿನ ಇಂತಹ ಭಯದಲ್ಲಿ ಹಿಂದೂಧರ್ಮದ ‘ಪರ್ಯಾಯ’ (alternative) ಇತಿಹಾಸಗಳನ್ನು ಘೋಷಿಸುತ್ತದೆ; ಪ್ರಕಟಿಸುತ್ತದೆ. ಈ ಪರ್ಯಾಯ ನಿಜವಾಗಿ ಪರ್ಯಾಯ ಅಲ್ಲ; ಕೇವಲ ಹಿಂದೂಭಯದ ಜಗತ್ತಿನ ಕಥೆ. ಇತಿಹಾಸದ ಬದಿಗೆ ತಳ್ಳಲ್ಪಟ್ಟ ಸ್ವರದ ಸಬಲೀಕರಣ ಎನ್ನುವ ಹೆಸರಿನಲ್ಲಿ ಹಿಂದೂಧರ್ಮದ ವಿರುದ್ಧ ಅಂತಹ ಷಡ್ಯಂತ್ರಗಳು ನಡೆಯುತ್ತವೆಂದು ಪುಸ್ತಕ ಅಸಮಾಧಾನ ಸೂಚಿಸುತ್ತದೆ.
ವೆಂಡಿಯ ವಿತಂಡವಾದ
ಪಾಶ್ಚಾತ್ಯ ಲೇಖಕಿ ವೆಂಡಿ ಡೊನಿಗರ್ ಅವರ ಪುಸ್ತಕ The Hindus: An Alternative History’ ಎರಡು ವರ್ಷಗಳ ಹಿಂದೆ ಭಾರತದಲ್ಲೂ ಸಾಕಷ್ಟು ಸುದ್ದಿಮಾಡಿತ್ತು. ಅದನ್ನು ವಂಶೀ ಜುಲುರಿ ಇಲ್ಲಿ ಸರಿಯಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ; ಇಡೀ ಒಂದು ಅಧ್ಯಾಯ ಆ ಕುರಿತಾಗಿದೆ. ‘ಒಂದು ಬದಲಿ ಇತಿಹಾಸದ ಸುಳ್ಳು’ (The Myth of an ‘Alternative History’) ಎಂಬುದು ಅಧ್ಯಾಯದ ಶೀರ್ಷಿಕೆ. ವೆಂಡಿ ಅವರ ಪುಸ್ತಕವು ಅದೇ ಮುಖ್ಯಧಾರೆಯ ಹಿಂದೂಭಯದ ಪೌರ್ವಾತ್ಯವಾದಿ ಇತಿಹಾಸ ಎಂಬುದು ಜುಲುರಿ ಅವರ ನಿಲುವು. ವ್ಯಾಪಕ ಟೀಕೆಗಳು ಬಂದ ಹಿನ್ನೆಲೆಯಲ್ಲಿ ಪುಸ್ತಕ ನಿಷೇಧಗೊಳ್ಳುವ ಹಂತಕ್ಕೆ ಹೋಯಿತು. ಆಗ ಪ್ರಕಾಶಕರು ಅದನ್ನು ವಾಪಸು ಪಡೆದರು. ಈ ಪುಸ್ತಕ ಎಸಗಿದ ಭಾರೀ ಪ್ರಮಾದಗಳನ್ನು ಬಯಲಿಗೆಳೆಯದಿದ್ದರೆ ಅದೇ ಸತ್ಯ ಎಂದಾದೀತು ಎಂಬ ಭಯ ಲೇಖಕರದ್ದು. ಈ ಪುಸ್ತಕ ಮಾಮೂಲಿ ಆಧುನಿಕೋತ್ತರ ಎಡಪಂಥೀಯ ಎಂದುಬಿಡಬಹುದು. ಆದರೆ ಅದು ನಡೆಸಿದ ಹಿಂದೂಧರ್ಮದ ಮೇಲಿನ ದಾಳಿಯಿಂದಾಗಿ ಅದು ಬಲಪಂಥೀಯರು, ವರ್ಣದ್ವೇಷಿಗಳು, ಪಶ್ಚಿಮದ ಮತೀಯವಾದಿಗಳು ಎಲ್ಲರಿಗೂ ಇಷ್ಟವಾಯಿತು. ತನ್ನ ಪುಸ್ತಕ ಪ್ರಸಿದ್ಧ ಸಂಸ್ಕೃತ ಪಠ್ಯ ಆಧಾರಿತ ಕಥನಕ್ಕೆ ‘ಪರ್ಯಾಯ’ (ಬದಲಿ) ಎಂದು ಲೇಖಕಿ ಹೇಳಿಕೊಳ್ಳುತ್ತಾರೆ. ನಿಜವೆಂದರೆ ಭಾರತದಲ್ಲಿ ೧೯೮೦ರ ದಶಕದ ಬಳಿಕ ಕೆಲವು ರಾಜಕೀಯ ಲೆಕ್ಕಾಚಾರಗಳು ಮತ್ತು ತಪ್ಪು ಕ್ರಮಗಳಿಂದಾಗಿ ದೇಶದಲ್ಲಿ ಒಂದು ಆಕ್ರಮಣಕಾರಿ ಹಿಂದೂ ರಾಷ್ಟ್ರೀಯವಾದಿ ಚಳವಳಿ ಶುರು ಆಯಿತು. ಭಾರತದಲ್ಲಿ ಮುಸ್ಲಿಮರ ಸ್ಥಾನದ ಬಗ್ಗೆ ಕೆಲವು ಜನ ಹಿಂದುಗಳಲ್ಲಿ ಸಿಟ್ಟು ಕಾಣಿಸಿಕೊಂಡಿತು. ಯೋಚನೆಯೇ ಇಲ್ಲದೆ ಅಭಾರತೀಯ ಮತ್ತು ಅಹಿಂದೂ ರೀತಿಯಲ್ಲಿ ಕೆಲವು ಹಿಂದುಗಳು ‘ಮುಸ್ಲಿಮರಿಗೆ ಈ ದೇಶದಲ್ಲಿ ಸ್ಥಾನವಿಲ್ಲ; ಪಾಕಿಸ್ತಾನ ಅವರಿಗೆ ನೀಡಲಾದ ದೇಶವಾದ್ದರಿಂದ ಅವರು ಅಲ್ಲಿಗೆ ಹೋಗಬಹುದು’ ಎಂದರು. ಇಂತಹ ಮಾತುಗಳಿದ್ದರೂ ನಿಜವಾಗಿ ಪೂರ್ತಿ ಹೊರಹಾಕಿದ್ದು ಕಾಶ್ಮೀರದಿಂದ ಹಿಂದುಗಳನ್ನು! ಕೆಲವು ಹಿಂದುಗಳು ಹಿಂದೂಧರ್ಮದ ಶ್ರೀಮಂತಿಕೆ, ವೈವಿಧ್ಯಗಳನ್ನು ಮರೆತರು. ಕಾರಣ ಅವರು ಮೂಲಭೂತವಾದಿಗಳು ಎಂಬುದಲ್ಲ; ಬದಲಾಗಿ ಅವರ ತಿಳಿವಳಿಕೆಯ ಮಿತಿ. ಇದನ್ನು ಕಂಡ ಕೆಲವು ಪಾಶ್ಚಾತ್ಯ ವೀಕ್ಷಕರು ಭಾರತ ಫ್ಯಾಸಿಸ್ಟ್ ಆಗುತ್ತಿದೆ ಎಂದು ಭಾವಿಸಿದರು. ವೆಂಡಿ ಡೊನಿಗರ್ ಅವರ ಪುಸ್ತಕ ಅಂತಹ ಕಳವಳದಿಂದ ಬಂದದ್ದು ಎನ್ನುವ ಲೇಖಕರು, ಆಕೆಗೆ ಹಿಂದೂಧರ್ಮ, ಹಿಂದೂ ರಾಷ್ಟ್ರೀಯವಾದ ಹಾಗೂ ಹಿಂದೂ ಉಗ್ರವಾದಗಳ ನಡುವಣ ವ್ಯತ್ಯಾಸ ತಿಳಿದಿದ್ದರೆ ಆ ರೀತಿ ಬರೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ. ಜೊತೆಗೆ ಹಿಂದೂ ಮೂಲಭೂತವಾದ ಎಂಬುದೇ ಇಲ್ಲ; ಏಕೆಂದರೆ ಅದು ಕೇಂದ್ರೀಕೃತವಲ್ಲ; ಅದರ ಗ್ರಂಥಗಳ ಓದಿಗೆ ಕಟ್ಟುಪಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಸಮಸ್ಯೆ ಎಂದರೆ ಇಂದು ಹಿಂದೂಧರ್ಮ ಎಂದರೆ ಏನೆಂಬುದು ಎಲ್ಲರಿಗೂ ಸ್ಪಷ್ಟ ಆಗಿದೆ. ಆದರೆ ಹಿಂದೂಫೋಬಿಯದಲ್ಲಿ ಮುಳುಗಿರುವವರು ಮಾತ್ರ ಪ್ರಗತಿ ಪರ ವಿಮರ್ಶೆ ಎನ್ನುವ ಹೆಸರಿನಲ್ಲಿ ದಾಳಿ ಮಾಡುತ್ತಿದ್ದಾರೆ ಎಂದು ವಿವರಿಸುತ್ತಾರೆ.
ಪಠ್ಯಪುಸ್ತಕಗಳ ಕಥನ
ಮುಂದುವರಿದು, ಭಾರತೀಯ ಇತಿಹಾಸದ ಪ್ರಧಾನ ಕಥನ ಏನೆಂದು ಗಮನಿಸುವ ನಿಟ್ಟಿನಲ್ಲಿ ನಮ್ಮ ಇತಿಹಾಸ ಪಠ್ಯಪುಸ್ತಕಗಳು ಏನು ಹೇಳುತ್ತವೆ? ಅಮೆರಿಕದ ಪಠ್ಯಪುಸ್ತಕಗಳು (ಭಾರತದ ಬಗ್ಗೆ) ಏನು ಹೇಳುತ್ತವೆ? ಹಾಗೂ ಡೊನಿಗರ್ ಅವರ ‘ಪರ್ಯಾಯ ಇತಿಹಾಸ’ ಏನು ಹೇಳುತ್ತದೆ ಎಂಬುದನ್ನು ಪರಿಶೀಲಿಸುತ್ತಾರೆ. ಭಾರತದ ಪಠ್ಯಪುಸ್ತಕಗಳು ಭಾರತದ ನಾಗರಿಕತೆ ಸಿಂಧೂಕಣಿವೆಯಿಂದ ಆರಂಭವಾಯಿತು; ಆರ್ಯರು ದಾಳಿ ನಡೆಸಿ ಹೋಮ-ಹವನಗಳಿರುವ ತಮ್ಮ ವೈದಿಕಮತವನ್ನು ಇಲ್ಲಿ ಸ್ಥಾಪಿಸಿದರು; ಬೌದ್ಧಮತದ ಪ್ರಾದುರ್ಭಾವದ ವರೆಗೆ ಇಲ್ಲಿ ಪ್ರಾಣಿಬಲಿ ತುಂಬ ನಡೆಯುತ್ತಿತ್ತು ಎಂದು ತಿಳಿಸುತ್ತವೆ; ಅಮೆರಿಕದಲ್ಲೂ ಇದನ್ನೇ ಕಲಿಸಲಾಗುತ್ತದೆ. ಭಾರತದ ಪಠ್ಯಪುಸ್ತಕಗಳು ಹಿಂದೂ ಸುವರ್ಣಯುಗಕ್ಕೆ ಒತ್ತು ನೀಡಿದರೆ, ಅಮೆರಿಕದ ಪುಸ್ತಕಗಳು ರಾಮಾಯಾಣ, ಮಹಾಭಾರತಗಳಲ್ಲಿ ಪ್ರಾಣಿಗಳು ಮಾತನಾಡುವುದಕ್ಕೆ ಮತ್ತು ಇಲ್ಲಿ ಪ್ರಾಣಿ-ಪಕ್ಷಿಗಳ ಪೂಜೆ ಇದ್ದುದನ್ನು ವಿಚಿತ್ರ ಎಂಬಂತೆ ಚಿತ್ರಿಸುತ್ತವೆ. ಭಾರತದ ಪುಸ್ತಕಗಳು ಮುಸ್ಲಿಮರು ಭಾರತದ ಮೇಲೆ ದಾಳಿ ನಡೆಸಿದರು ಎಂದು ಹೇಳಿದರೂ ಕೂಡ ಮೊಘಲ್ ಚಕ್ರವರ್ತಿ ಅಕ್ಬರ ಸಾಮರಸ್ಯವನ್ನು ತಂದ; ಬ್ರಿಟಿಷ್ ವಸಾಹತಾಗಿ ಹಿಂದೂಧರ್ಮ ಸುಧಾರಣೆಗೊಂಡಿತು ಎನ್ನುತ್ತವೆ.
ಆದರೆ ಡೊನಿಗರ್ ಅವರ ‘ಪರ್ಯಾಯ’ ಇತಿಹಾಸದ ಪ್ರಕಾರ, ಸಿಂಧೂಕಣಿವೆಯದ್ದು ಹಿಂದೂ ಅಲ್ಲ. ನಾಜಿಗಳಂತಹ ಆರ್ಯರು ಹೋಮ-ಹವನಗಳ ವೈದಿಕಮತವನ್ನು ಭಾರತಕ್ಕೆ ತಂದರು. ಗ್ರೀಕ್ ದಾಳಿಯ ಮೂಲಕ ಭಾರತಕ್ಕೆ ಮಹಾನ್ ಚಿಂತನೆ ಬಂದ ಫಲವಾಗಿ ರಾಮಾಯಣ, ಮಹಾಭಾರತಗಳು ರಚನೆಯಾದವು. ಬೌದ್ಧರು ಸುಧಾರಣೆ ತರುವವರೆಗೆ ಹಿಂದೂಧರ್ಮದಲ್ಲಿ ವಿಪರೀತ ಪ್ರಾಣಿಬಲಿ ಇತ್ತು. ದ್ರೌಪದಿ ಪಾತ್ರದ ಕಲ್ಪನೆಗೆ ಗ್ರೀಕೇ ಮೂಲ. ಆಕೆಯ ಪುಸ್ತಕದಲ್ಲಿ ವೇದಗಳಲ್ಲಿ ಬಲಿ, ಮಹಾಭಾರತದಲ್ಲಿ ಹಿಂಸೆ ಎಂಬ ಅಧ್ಯಾಯಗಳ ಬಳಿಕ ಮೊಘಲರ ಕೆಳಗೆ ಸಂವಾದ-ಸಹನೆ ಎಂಬ ಅಧ್ಯಾಯವಿದೆ. ಬ್ರಿಟಿಷ್ ವಸಾಹತುವಿನ ಕೆಳಗೆ ಹಿಂದೂಧರ್ಮದ ಸುಧಾರಣೆ ಎಂಬ ಅಧ್ಯಾಯವೂ ಇದೆ. ಮುಂದುವರಿದು, ಭಾರತ ಸ್ವತಂತ್ರವಾದ ಬಳಿಕ ಮಾರ್ಗದರ್ಶನಮಾಡುವ ಬಾಹ್ಯಶಕ್ತಿಗಳಿಲ್ಲದ ಕಾರಣ ಹಿಂದುಗಳು ಉಗ್ರವಾದಿಗಳಾಗುತ್ತಿದ್ದಾರೆ ಎನ್ನುವ ತನಕ ಆಕೆ ಹೋಗುತ್ತಾರೆ. ಇದನ್ನು ‘ಪರ್ಯಾಯ’ ಕಥನ ಎನ್ನುವುದು ಹೇಗೆ ಎಂದು ಪ್ರಶ್ನಿಸುತ್ತಾರೆ; ಇದು ಪರ್ಯಾಯ ಎನ್ನುವ ಮೂಲಕ ಹೆಚ್ಚಿನ ಗೌರವ ಪಡೆಯುವ ತಂತ್ರ ಎಂದು ಅದಕ್ಕೆ ಆಕ್ಷೇಪಿಸುತ್ತಾರೆ; ಈ ತಥಾಕಥಿತ ‘ಪರ್ಯಾಯ’ ಅಮೆರಿಕದಿಂದ ಬಂದ ಕಾರಣ ಸುಲಭದಲ್ಲಿ ಜಗತ್ತಿಗೆ ಲಗ್ಗೆ ಇಡುತ್ತದೆ. ಸ್ಥಳೀಯ ಧ್ವನಿಗಳನ್ನು ನುಂಗಿಹಾಕುತ್ತದೆ ಎಂದು ಕಳವಳ ಸೂಚಿಸುತ್ತಾರೆ. (ಪ್ರಕಾಶಕರು ವಾಪಸು ಪಡೆದರೂ ಅದು ಭಾರೀ ಮಾರಾಟವಾಗಿದೆಯಂತೆ!)
ಆ ಪುಸ್ತಕ
ಕಳೆದ ಕೆಲವು ವರ್ಷಗಳಲ್ಲಿ ಹಿಂದೂಧರ್ಮದ ಬಗ್ಗೆ ಜಗತ್ತಿನಾದ್ಯಂತ ಯಾರ ಮಾತನ್ನು ಕೇಳಲಾಯಿತೋ ಅವರೆಲ್ಲ ಸರಿಯಾದ ತಿಳಿವಳಿಕೆ ಇಲ್ಲದ ಅಮರ್ತ್ಯಸೇನ್, ಡೊನಿಗರ್, ಮಾರ್ತಾ ನುಸ್ಸಬಾಮ್, ಪಂಕಜ್ ಮಿಶ್ರ, ಅರುಂಧತಿ ರಾಯ್ ಅಂಥವರು ಎಂದು ವಂಶೀ ಷರಾ ಬರೆಯುತ್ತಾರೆ. ಭಾರತದ ಎರಡು ಮಹಾಕಾವ್ಯಗಳನ್ನು ಬರೆದವರು ಬ್ರಾಹ್ಮಣರಲ್ಲ; ಒಬ್ಬ ಕಳ್ಳನಾಗಿದ್ದ ಕೆಳಜಾತಿ ಯವನಾಗಿದ್ದರೆ, ಇನ್ನೊಬ್ಬ ಬೆಸ್ತರವಳ ಮಗ; ದೇವರೆನಿಸಿದ ರಾಮ-ಕೃಷ್ಣ ಇಬ್ಬರೂ ಬ್ರಾಹ್ಮಣರಲ್ಲ. ಆದರೂ ಇಲ್ಲಿ ಬ್ರಾಹ್ಮಣರು ಯಾಜಮಾನ್ಯ ಮಾಡುತ್ತಾರೆಂದು ‘ಮೃತ ಬ್ರಾಹ್ಮಣ ಪುರುಷ’ (dead male brahmin) ನನ್ನು ಟೀಕಿಸುವುದು ನಡೆದೇ ಇದೆ ಎನ್ನುವ ಲೇಖಕರು, ಹಿಂದುಗಳಲ್ಲಿ ಕೆಲವರು ಸಿಟ್ಟಾಗಿರುವುದು ನಿಜ. ಭಯೋತ್ಪಾದಕರು ದೇಶದಲ್ಲಿ ಬಾಂಬ್ ಸ್ಫೋಟಿಸಿದಾಗ ಸಿಟ್ಟಿನಿಂದ ಲೇಖನ ಬರೆಯಬಹುದು, ಇಂಟರ್ನೆಟ್ ಮೂಲಕ ಬೈದಾಡಬಹುದು. (ಅಲ್ಪಸಂಖ್ಯಾತರು) ವಿಧೇಯತೆಯ ಪ್ರತಿಜ್ಞೆ ಮಾಡಲಿ ಮುಂತಾದ ತಪ್ಪು ಸಲಹೆಗಳನ್ನೂ ನೀಡಬಹುದು. ಆದರೆ ಅವರು ಈಗಲೂ ಶತಮಾನಗಳಿಂದ ಬಂದ ರೀತಿಯಲ್ಲೇ ಬದುಕುತ್ತಿದ್ದಾರೆ; ಬೇರೆಯವರ ಜೀವಿಸುವ ಅಧಿಕಾರವನ್ನು ಯಾರೂ ಪ್ರಶ್ನಿಸುವುದಿಲ್ಲ ಎಂದು ವಿವರಿಸುತ್ತಾರೆ.
ಮೂರು ಮೂಲಭೂತ ವಾಸ್ತವಗಳು
ಹಿಂದೂಧರ್ಮ ಮತ್ತು ಭಾರತೀಯ ಇತಿಹಾಸದ ಮೂರು ಮೂಲಭೂತ ವಾಸ್ತವಗಳನ್ನು ‘ಪರ್ಯಾಯ’ದ ಸುಳ್ಳು ಹೇಳುವವರು ಮರೆಯುತ್ತಾರೆ. ಒಂದನೆಯದಾಗಿ, ಇಲ್ಲಿ ಶೇ. ೮೦ರಷ್ಟು ಹಿಂದುಗಳಿದ್ದರೂ ಕೂಡ ಇದು ಶೇ. ೮೦ರಷ್ಟು ಬಿಳಿಯರಿರುವ ದೇಶದಂತೆ ಒಂದು ಶಕ್ತಿಕೂಟ (ಪವರ್ ಬ್ಲಾಕ್) ಆಗುವುದಿಲ್ಲ. ಹಿಂದೂ ರಾಷ್ಟ್ರೀಯವಾದಿ ಎನ್ನುವ ರಾಜಕೀಯ ಪಕ್ಷಗಳಿಗೆ ಹಿಂದುಗಳ ಬಹುಮತದ ವೋಟು ಸಿಗುವುದಿಲ್ಲ. ಭಾಷೆ, ಜಾತಿ, ಪಂಥ, ಪಂಗಡ, ಸಮುದಾಯ ಮುಂತಾಗಿ ಇದು ತುಂಬ ವೈವಿಧ್ಯಮಯ. ಯಾರಾದರೂ ಮಾನವಹಕ್ಕಿನವರು ‘ಹಿಂದುಗಳು ಮುಸ್ಲಿಮರನ್ನು ಕೊಲ್ಲುತ್ತಿದ್ದಾರೆಂದು’ ಬೊಬ್ಬೆಹೊಡೆದರೂ ಕೂಡ ಅಂತಹ ಸಾಮಾನ್ಯೀಕರಣಗಳು ನಿಜ ಆಗಿರುವುದಿಲ್ಲ. ದೇಶವಿಭಜನೆ ಆದಾಗ ಅದು ರಾಷ್ಟ್ರೀಯ ಸಂಘರ್ಷದಂತೆ ಕಂಡರೂ ಕೂಡ ಹಿಂದು-ಮುಸ್ಲಿಮರ ನಡುವೆ ಪರಸ್ಪರ ದಾಳಿ ನಡೆದದ್ದು ಗಡಿಭಾಗದ ಎರಡು ಪ್ರದೇಶ (ಪ್ರಾಂತ)ಗಳಲ್ಲಿ ಮಾತ್ರ; ಅದು ಕೇವಲ ಸ್ಥಳೀಯ ಘಟನೆಯಾಗಿತ್ತು.
ಎರಡನೆಯದು ಜಾತಿಯ ವಿಷಯ. ಪಾಶ್ವಾತ್ಯ ವಿದ್ವಾಂಸರು ಸ್ವಾತಂತ್ರ್ಯ, ವ್ಯಕ್ತಿಸ್ವಾತಂತ್ರ್ಯಗಳಿರುವುದು ತಮ್ಮಲ್ಲಿ ಮಾತ್ರವೆಂದೂ. ಭಾರತದಂತಹ ಕಡೆ ಜನ (ಎತ್ನಿಕ್ಗಳು) ಸಂಸ್ಕೃತಿ, ಮತಗಳ ಬಂಧನದಲ್ಲಿರುತ್ತಾರೆಂದೂ ಭಾವಿಸುತ್ತಾರೆ. ಭಾರತದಲ್ಲೀಗ ಜಾತಿಗಳು ಇಲ್ಲ ಎನ್ನುವುದು ತಪ್ಪಾದರೂ ಎಲ್ಲವೂ ಜಾತಿಗಳ ಪ್ರಕಾರವೇ ನಡೆಯುತ್ತದೆ ಎಂಬುದು ತಪ್ಪು. ದೇಶದಲ್ಲಿ ಜಾತಿತಾರತಮ್ಯವು ಕಾನೂನುಬಾಹಿರ. ದೇಶದಲ್ಲಿ ಸಂವಿಧಾನವಿದೆ; ತಕ್ಕಷ್ಟು ಬಲಶಾಲಿಯಾದ ಪ್ರಜಾಪ್ರಭುತ್ವವಿದೆ. ಹಿಂದೆ ಕೆಳಗಿದ್ದ ಜಾತಿಗಳು ಈ ಸಂಸ್ಥೆಗಳ ಮೂಲಕ ಈಗ ರಾಜಕೀಯಬಲವನ್ನು ಗಳಿಸಿವೆ. ಆರ್ಥಿಕವಾಗಿಯೂ ಬಲಶಾಲಿಯಾಗಿವೆ. ಜಾತಿಯ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಅಮೆರಿಕದಲ್ಲಿ ೨೦ನೇ ಶತಮಾನದ ಮಧ್ಯಭಾಗದವರೆಗೂ ಬಸ್ಗಳಲ್ಲಿ ಸೀಟುಗಳ ನಿಗದಿ (ವರ್ಣದ್ವೇಷ) ಇತ್ತೆಂದು ಪುಸ್ತಕ ಉಲ್ಲೇಖಿಸುತ್ತದೆ.
ಮೂರನೆಯದಾಗಿ ಹಿಂದುಗಳು ತಾವು ಪರಿಪೂರ್ಣರು ಎನ್ನುವುದಿಲ್ಲ. ಇತರ ಮತಗಳನ್ನು ಸಮಾನವೆಂದು ಕಾಣಲು ಅವರಿಗೆ ಸಾಧ್ಯವಿದೆ. ಇತರರ ಬಗೆಗೆ ಅವರು ಮಾನವೀಯ ತಿಳಿವಳಿಕೆ ಹೊಂದಿದ್ದಾರೆ. ಸುದೀರ್ಘಕಾಲದಿಂದ ವೈವಿಧ್ಯಸಹಿತವಾಗಿ ಬದುಕಿಬಂದ ಅನುಭವ ಅವರಿಗಿದೆ; ಹೀಗೆ ಅವರು ಕಾಸ್ಮೊಪೊಲಿಟನ್ ಆಗಿದ್ದಾರೆ. ಇಂದು ಒಬ್ಬ ಆಧುನಿಕ ಶಿಕ್ಷಿತ ಮಧ್ಯಮವರ್ಗದ ಹಿಂದುವಿನಲ್ಲಿ ಭಾರತದ ಬಡತನಕ್ಕೆ ಕಾರಣ ಏನೆಂದು ಕೇಳಿದರೆ, ಜನಸಂಖ್ಯೆ, ಸರ್ಕಾರದ ಭ್ರಷ್ಟಾಚಾರ, ಕಡಮೆ ಬುದ್ಧಿಮತ್ತೆ ಎಂದು ಉತ್ತರಿಸಬಹುದು. ಇವು ಹಿಂದೂಧರ್ಮದಿಂದ ಬಂದವುಗಳಲ್ಲ ಎಂದು ಲೇಖಕರು ತಿಳಿಸುತ್ತಾರೆ.
ಹಿಂದೂಧರ್ಮವನ್ನು ವ್ಯಾಖ್ಯಾನಿಸುವಲ್ಲಿ ವಿಫಲ ಆಗಿರುವುದೇ ಡೊನಿಗರ್ ಅವರ ಪುಸ್ತಕದ ಸಮಸ್ಯೆ. ಆಕೆ ಹೇಳುವಂತೆ ಹಿಂದೂಧರ್ಮದಲ್ಲಿ ಪ್ರಧಾನ ಕಥನ ಎಂಬುದಿಲ್ಲ. ಇದರಲ್ಲಿ ಕೇಂದ್ರೀಕೃತ ವ್ಯವಸ್ಥೆ, ಅಧಿಕಾರಶಾಹಿ, ಮೂಲಭೂತವಾದಿ ಶಕ್ತಿಗಳೂ ಇಲ್ಲ. ಮುಖ್ಯಧಾರೆ ಹಿಂದೂ ಇತಿಹಾಸ ಎಂಬುದಿಲ್ಲ. ಆದ್ದರಿಂದ ಒಂದು ‘ಪರ್ಯಾಯವು’ ಹೋರಾಟದ ಮೂಲಕ ಗುರುತಿಸಲ್ಪಡಬೇಕೆಂಬುದು ಕೂಡ ಸರಿಯಲ್ಲ ಎಂದು ಡೊನಿಗರ್ ಗ್ರಂಥದ ವೈಫಲ್ಯವನ್ನು ವಂಶೀ ಅವರು ಪಟ್ಟಿ ಮಾಡುತ್ತಾರೆ.
ಜಗದ್ಗುರು
ಹಿಂದೂಧರ್ಮಕ್ಕೆ ಮತ್ತೆ ಶಸ್ತ್ರ ತೊಡಿಸುವುದರ ಹಿಂದಿನ ನಮ್ಮ ಉದ್ದೇಶ ಯಾರಿಗೂ ಹಾನಿ ಎಸಗುವುದಲ್ಲ; ಬದಲಾಗಿ ಈ ಜಗತ್ತಿನಲ್ಲಿ ಹಾನಿಯುಂಟುಮಾಡುವ ಅಜ್ಞಾನವನ್ನು ನಿಶ್ಶಸ್ತ್ರಗೊಳಿಸುವುದಷ್ಟೇ ಆಗಿದೆ ಎಂದು ಪುಸ್ತಕದ ಶೀರ್ಷಿಕೆಗೆ ಸಂಬಂಧಪಟ್ಟಂತೆ ವಂಶೀ ಜುಲುರಿ ಹೇಳುತ್ತಾರೆ. ಅವರ ಉದ್ದೇಶದಲ್ಲಿ ಅವರು ಸಾಕಷ್ಟು ಸಫಲರಾಗಿದ್ದಾರೆ ಎಂಬುದರಲ್ಲಿ ಎರಡು ಮಾತಿಲ್ಲ. ಗ್ರಂಥದ ಉಪಸಂಹಾರದ ಅಧ್ಯಾಯಕ್ಕೆ ‘ಜಗದ್ಗುರು’ ಎನ್ನುವ ಶೀರ್ಷಿಕೆಯನ್ನು ಕೊಟ್ಟಿದ್ದಾರೆ; ‘ದೇಶ ಮತ್ತು ಕಾಲಗಳ ಪ್ರಶ್ನೆಗಳಿಗೆ ಸನಾತನದ ಉತ್ತರ’ ಎನ್ನುವುದು ಅದರ ಪುಟ್ಟ ವ್ಯಾಖ್ಯಾನ. ನಾವು ಯಾರೆಂದು ಕೇಳಿದೆವು. ಅದಕ್ಕೆ ಶ್ರೀಕೃಷ್ಣ ‘ಜಗದ್ಗುರು’ ಎಂದು ಉತ್ತರಿಸಿದ್ದಾನೆ ಎನ್ನುವಲ್ಲಿಗೆ ಈ ಅಧ್ಯಾಯ ಮುಕ್ತಾಯಗೊಳ್ಳುತ್ತದೆ. ಭಾರತ ವಿಶ್ವಗುರು ಸ್ಥಾನಕ್ಕೇರಬೇಕು; ಅಂತಹ ಅರ್ಹತೆ ಈ ರಾಷ್ಟ್ರಕ್ಕೆ, ಇಲ್ಲಿನ ಹಿಂದೂಧರ್ಮಕ್ಕೆ ಇದೆ ಎಂಬುದು ತಾತ್ಪರ್ಯ. ಹಿಂದೂಧರ್ಮದ ಪುನರ್ಜನ್ಮ ಎಂದರೆ ಇಡೀ ಜಗತ್ತಿಗೊಂದು ಭರವಸೆ. ಇದು ಒಂದು ನಾಗರಿಕತೆ ಏಳುತ್ತಿರುವುದಲ್ಲ; ಏಕೈಕ ನಾಗರಿಕತೆಯ ಕಥೆ. ನಾವು ಎಲ್ಲರನ್ನೂ ಜೊತೆಗೆ ಒಯ್ಯುತ್ತೇವೆ; ತಾರತಮ್ಯ ಮಾಡುವುದಿಲ್ಲ ಮುಂತಾದ ಉತ್ಸಾಹದ ಮಾತುಗಳನ್ನೂ ಆಡುತ್ತಾರೆ.
೨೦೧೪ – ಇದೊಂದು ಸಂತೋಷದ ತಿರುವು. ಭಾರತಕ್ಕೆ ಮಾತ್ರವಲ್ಲ, ಇಡೀ ಜಗತ್ತಿಗೂ. ಹಿಂದೂ ನಾಗರಿಕತೆಗೆ ತನ್ನ ನೆಲದಲ್ಲಿ ಹೆಮ್ಮೆ ತಂದುಕೊಟ್ಟ ವರ್ಷ. ಮಾನವನ ಭವಿಷ್ಯದ ಬುದ್ಧಿಮತ್ತೆ ಮರಳಿದ ವರ್ಷ. ಜಗತ್ತಿನ ಇತಿಹಾಸದಲ್ಲಿ ಭಾರತ ಹಿಂದಿನಿಂದ ಇದೇ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ. ಜಗತ್ತಿಗೆ ಇತರರೂ ತಮ್ಮ ಕೊಡುಗೆ ನೀಡಿರಬಹುದು. ಅವರ ಬುದ್ಧಿಮತ್ತೆ ಸಂಶೋಧನೆ, ತಂತ್ರಜ್ಞಾನಗಳ ರೂಪದಲ್ಲಿ ಬಂದಿರಬಹುದು. ಅಂತಹ ಬುದ್ಧಿಮತ್ತೆಗೆ ಈ ಗ್ರಹ ತುಂಬ ಬೆಲೆ ತೆರಬೇಕಾಗಿದೆ. ಯೂರೋಪಿನ ಉಚ್ಛ್ರಾಯ ಅಂಥದು. ಕಳೆದ ೫೦೦ ವರ್ಷಗಳಲ್ಲಿ ನಾವು ಹಕ್ಕಿಯಂತೆ ಹಾರಲು, ಸೂರ್ಯನಿಗೆ ತುಂಬ ಸಮೀಪ ಹೋಗಲು ಕಲಿತೆವು. ಈಗ ನಾವು ಭೂಮಿಯ ಮಕ್ಕಳು; ಅದರ ಯಜಮಾನರಲ್ಲ ಎಂದು ಪುನಃ ತಿಳಿಯಬೇಕಾಗಿದೆ ಎನ್ನುವ ಮೂಲಕ ಲೇಖಕರು, ಪರಿಸರ ಸಂರಕ್ಷಣೆಗೆ ಕೂಡ ಒತ್ತುನೀಡಿದ್ದಾರೆ; ಸನಾತನ ಧರ್ಮ ಅಂತಹ ಮೌಲ್ಯಗಳಿಗೆ ಒತ್ತುನೀಡುತ್ತದೆನ್ನುವ ಆಶಯವನ್ನು ಪ್ರಕಟಿಸಿದ್ದಾರೆ.
೨೦೧೪ರ ಚುನಾವಣೆ
ಸತ್ಯ ಮತ್ತು ಮಾಯೆಗಳು ೨೦೧೪ರ ಚುನಾವಣೆಯಷ್ಟು ಹಿಂದೆಂದೂ ಧ್ರುವೀಕರಣ ಆಗಿರಲಿಲ್ಲ. ಮಾಯೆಯ ಭಾಷೆ ಶಕ್ತಿಶಾಲಿಯಾದದ್ದು; ೬೬ ವರ್ಷಗಳ ವಸಾಹತೋತ್ತರ ಪ್ರತಿಷ್ಠೆ ಅದಕ್ಕಿದೆ ಎನ್ನುವ ಮೂಲಕ ವಂಶೀ ಅವರು ಪಕ್ಷರಾಜಕೀಯವನ್ನು ಕೂಡ ಪುಸ್ತಕದೊಳಗೆ ತಂದಿದ್ದಾರೆ. ಬಿಜೆಪಿ ಬಹುಮತ ಗಳಿಸಿ ಅಧಿಕಾರಸೂತ್ರ ಹಿಡಿದುದರಲ್ಲಿ ಅವರು ತುಂಬ ನಿರೀಕ್ಷೆಯನ್ನು ಇರಿಸಿಕೊಂಡಂತಿದೆ.
ನೈತಿಕತೆ ಮತ್ತು ನಾಗರಿಕತೆಗಳ ವೈಫಲ್ಯದ ಕೊನೆಯ ಸ್ಥಿತಿಯನ್ನು ನಾವು ತಲಪಿದ್ದೇವೆ. ಆದರೆ ಈ ಸ್ಥಿತಿಯನ್ನು ಈಗಲೂ ಬದಲಿಸಬಹುದು ಎನ್ನುವುದು ಮಾನವಜನಾಂಗಕ್ಕೆ ಹಿಂದೂಧರ್ಮದ ಮಹಾನ್ ಕೊಡುಗೆ. ನಮ್ಮ ಪೂರ್ವಿಕರು ಕೇವಲ ದುರ್ಬಲರನ್ನು ಕೊಲ್ಲುತ್ತಾ ಬದುಕಿದ್ದಲ್ಲ; ಅವರು ಬುದ್ಧಿಮತ್ತೆಯನ್ನು ಪೂಜಿಸಿ ಬೆಳೆಸಿದರು. ಅದು ಅನುಕಂಪದಲ್ಲಿ ಅದ್ದಿದಂತಹ ಬುದ್ಧಿಮತ್ತೆ ಎನ್ನುವ ‘ರಿಆರ್ಮಿಂಗ್ ಹಿಂದೂಯಿಸಂ’ನ ಲೇಖಕರು, ನಮ್ಮ ಪ್ರಾಚೀನ ತಿಳಿವಳಿಕೆ ಈಗ ಮತನಿರಪೇಕ್ಷತೆಯಾಗಿ ಬಂದಿದೆ. ಅಹಿಂಸೆ ಮಾನವಹಕ್ಕಿನ ರೂಪದಲ್ಲಿ ಬಂದಿದೆ; ಜೊತೆಗೆ ಪ್ರಾಣಿಗಳ ಹಕ್ಕಿನ ಪ್ರಶ್ನೆಯೂ ಬರುತ್ತಿದೆ ಎಂದು ವೈಶ್ವಿಕ ರೂಪವನ್ನು ನೀಡುತ್ತಾರೆ.
ಭಾರತ ವಿಶ್ವಗುರು ಆಗಬೇಕು ನಿಜ. ಆದರೆ ನಮ್ಮ ‘ಸಹಿಷ್ಣು ಮಾಫಿಯಾ’ಗಳು ಅದಕ್ಕೆ ಅವಕಾಶ ಕೊಡಬಹುದೆ?
Comments are closed.