ಯೋಗಶಾಸ್ತ್ರದ ಕುರಿತಾಗಿ ಭಾರತೀಯ ಮನಶ್ಶಾಸ್ತ್ರಜ್ಞ ಪ್ರೊ| ಆರ್.ಎಲ್. ಕಪೂರ್ ನಡೆಸಿದ ತಮ್ಮ ಜೀವಮಾನದ ಅನ್ವೇಷಣೆಯ ಕುರಿತು ರೋಚಕ ಅನುಭವಗಳನ್ನು ವಿವರಿಸುವ ಪುಸ್ತಕ – ` Another Way to Live – A Psychiatrist Among Indian Ascetics’.
`ಉತ್ಥಾನ’ದ ಓದುಗರಿಗಾಗಿ ಭೀಮಸೇನ ಪುರೋಹಿತ ಅವರು ಈ ಪುಸ್ತಕದ ಸಂಗ್ರಹಾನುವಾದ ನೀಡಿದ್ದಾರೆ…
ಭಾಗ-೧
ಗುರುಗಳ ಚರಣದಲ್ಲಿ
ಪ್ರಾರಂಭ
ಇದು ಒಂದು ಸಂಶೋಧನಗ್ರಂಥ. ನಾನೊಬ್ಬ ಮನೋವೈದ್ಯ. ಮನಶ್ಶಾಸ್ತ್ರವು ಮಾನಸಿಕ ಖಿನ್ನತೆಯನ್ನು ದೂರಮಾಡುವಲ್ಲಿ ಸಮರ್ಥವಿದ್ದರೂ, ಧನಾತ್ಮಕವಾಗಿ ಮಾನಸಿಕ ಆರೋಗ್ಯವನ್ನು ಹೆಚ್ಚಿಸುವಲ್ಲಿ ಅದರ ವಿಧಾನ ಅಷ್ಟು ಸಮರ್ಥವಾಗಿದೆಯೆನ್ನಲಾಗದು. ಈ ದಿಶೆಯಲ್ಲಿ `ಯೋಗ’ ಒಂದು ಅದ್ಭುತ ಸಾಧನ. ಯೋಗವು ಶಾರೀರಿಕ ಆರೋಗ್ಯಕ್ಕೆ ಹೇಗೆ ಉಪಯುಕ್ತ ಎಂಬುದರ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ. ಆದರೆ ಆಂತರಿಕ ಭಾವನೆಗಳ ಸ್ಥಿತಿಯನ್ನು ನಿಯಂತ್ರಿಸುವಲ್ಲಿ ಯೋಗವು ಹೇಗೆ ಸಹಕಾರಿ ಎಂಬುದು ಪರಿಶೀಲನಾರ್ಹ ವಿಷಯವಾಗಿದೆ. ಇದಕ್ಕೆ ಕಾರಣ ಯಾವ ಸಂಶೋಧಕರೂ ತಮ್ಮನ್ನು ತಾವೇ ಈ ನಿಟ್ಟಿನಲ್ಲಿ ಪ್ರಯೋಗಕ್ಕೆ ಒಳಪಡಿಸಿಕೊಳ್ಳದಿದ್ದದ್ದು. ಹೀಗಾಗಿ ನಾನು ಒಬ್ಬ ವಿಜ್ಞಾನಿಯಾಗಿಯೂ ಹಾಗೂ ಸ್ವತಃ ಪ್ರಯೋಗದ ವಸ್ತುವಾಗಿಯೂ ಈ ಸಂಶೋಧನೆಯನ್ನು ಮುಂದುವರಿಸಲು ನಿಶ್ಚಯಿಸಿದೆ. Indian Council for Medical Research ಸಂಸ್ಥೆಯಿಂದ ಈ ಸಂಶೋಧನೆಗೆ ಆರ್ಥಿಕ ನೆರವು ದೊರೆಯಿತು. ಯೋಗವನ್ನು ಕಲಿಸಿಕೊಡುವ ಗುರುಗಳನ್ನು ಹುಡುಕುವುದು ನನ್ನ ಮುಂದಿನ ಜವಾಬ್ದಾರಿಯಾಗಿತ್ತು.
ಮೊದಲಿಗೆ ನನ್ನ ಬಗ್ಗೆ ಹಲವು ವಿಚಾರಗಳನ್ನು ಹೇಳುವುದು ಪ್ರಸ್ತುತವೆನಿಸುತ್ತದೆ. ನಾನು ಒಃಃS ಮೊದಲನೇ ವರ್ಷದಲ್ಲಿದ್ದಾಗ ನನಗೆ ಅಧ್ಯಾತ್ಮದ ಸೆಳೆತ ಹುಟ್ಟಿತು. ನನಗೆ ವೈದ್ಯಕೀಯ ವ್ಯಾಸಂಗವು ಅಷ್ಟಾಗಿ ರುಚಿಕರವೆನಿಸಲಿಲ್ಲ. ಆ ಸಂದರ್ಭದಲ್ಲಿ ಭಗವದ್ಗೀತೆಯನ್ನು ಓದಲು ಪ್ರಾರಂಭಿಸಿದೆ. ಮೂರನೇ ವರ್ಷದಲ್ಲಿ ಪ್ರೊ. ನೇಕಿ ಎಂಬವರ ಭೇಟಿಯಾದಮೇಲೆ ಮನಶ್ಶಾಸ್ತ್ರದಲ್ಲಿ ಆಸಕ್ತಿ ಹುಟ್ಟಿತು. ಒಃಃSನ ನಂತರ ನಾನು ಆiಠಿಟomಚಿ iಟಿ Psಥಿಛಿoಟogiಛಿಚಿಟ ಒeಜiಛಿiಟಿeನ ವ್ಯಾಸಂಗ ಮಾಡಿದೆ. ಪ್ರೊ. ಎಸ್.ಕೆ. ರಾಮಚಂದ್ರರಾವ್, ಪ್ರೊ. ಎನ್.ಸಿ. ಸೂರ್ಯರಂಥ ಖ್ಯಾತ ತಜ್ಞರ ಜೊತೆಗಿನ ಒಡನಾಟ ನನ್ನ ಆಸಕ್ತಿಯನ್ನು ಹೆಚ್ಚಿಸಿತು.
ನನಗೆ ಮದುವೆಯಾದ ಮೇಲೆ, ಈಡನ್ಬರ್ಗ್ನಲ್ಲಿ ಪ್ರೊ. ಕಾರ್ಸ್ಟೇರ್ ಅವರ ವಿದ್ಯಾರ್ಥಿಯಾಗಿ ಅಭ್ಯಾಸ ಮಾಡಿದೆ. ಭಾರತಕ್ಕೆ ಮರಳಿ ಬಂದು ನಿಮ್ಹಾನ್ಸ್ನಲ್ಲಿ ನನ್ನ ವೃತ್ತಿಯನ್ನು ಆರಂಭಿಸಿದೆ. ಇವೆಲ್ಲದರ ನಡುವೆ ಒಂದು ವಿಷಯ ಸ್ಪಷ್ಟವಾಗಿತ್ತು: ನಮ್ಮ ಸಮಾಜದಲ್ಲಿನ ಮಾನಸಿಕ ಒತ್ತಡವನ್ನು ನಿವಾರಿಸಲು ಸಾಧ್ಯವೇ ಇಲ್ಲವೇನೊ ಎನಿಸಿತು. ಒಂದು ರೀತಿಯ ಒತ್ತಡವನ್ನು ತೆಗೆದುಹಾಕಿದರೆ ಮತ್ತೊಂದು ರೀತಿಯಲ್ಲಿ ಹುಟ್ಟುತ್ತದೆ. ಆದ್ದರಿಂದ ಒತ್ತಡವನ್ನು ನಿವಾರಿಸುವುದಕ್ಕಿಂತ ಅದನ್ನು ನಿಯಂತ್ರಿಸುವ ಬಗೆಯು ಹೆಚ್ಚು ಉಪಯುಕ್ತ, ಮತ್ತು ಈ ನಿಯಂತ್ರಣಕ್ಕೆ ನಮ್ಮ ಪರಂಪರೆ ಕೊಟ್ಟಿರುವ ಪರಿಹಾರವೇ `ಯೋಗ’.
ಮೊದಮೊದಲು ಯೋಗದ ಗುರುಗಳನ್ನು ಭೇಟಿಮಾಡುವುದು ಕ್ಲೇಶದಾಯಕವಾಗಿತ್ತು. ಅದಕ್ಕೆ ನನ್ನಲ್ಲಿದ್ದ ಕೆಲವು ಪೂರ್ವಗ್ರಹಗಳೂ ಕಾರಣ. ಆದರೂ ಕಡೆಗೆ ೧೯೮೦ರ ಹೊತ್ತಿಗೆ ಯೋಗದ ಬಗ್ಗೆ ಸಂಶೋಧನೆಗೆ ದೃಢಮನಸ್ಕನಾಗಿ ಮುಂದಾದೆ. ಯೋಗವು ಮಾನಸಿಕ ನೆಮ್ಮದಿಯನ್ನೂ, ಏಕಾಗ್ರತೆಯನ್ನೂ ಸಾಧಿಸುವ ಸಾಧನ ಎಂಬುದು ಎಲ್ಲರ ಅಭಿಮತ. ಆದರೆ ಯೋಗವು ಇನ್ನೂ ಹಲವು ರೀತಿಯಲ್ಲಿ ಉಪಯುಕ್ತ ಎನ್ನುವುದು ನನ್ನ ಎಣಿಕೆಯಾಗಿತ್ತು. ಅದನ್ನು ಪರಿಷ್ಕರಿಸಲು ನಾನೇ ಸ್ವತಃ ಯೋಗದ ಅನುಭವವನ್ನು ಪಡೆಯಲು ನಿಶ್ಚಯಿಸಿದೆ.
ಒಬ್ಬ ಯೋಗಗುರುಗಳನ್ನು ಹುಡುಕಿ, ಅವರಿಂದ ಯೋಗಸೂತ್ರಗಳನ್ನು ಕಲಿಯುವುದು ನನ್ನ ಮೊದಲ ಕೆಲಸವಾಗಿತ್ತು. ಪಾತಂಜಲ ಯೋಗಸೂತ್ರಗಳು ಸಂಕ್ಷಿಪ್ತವಾದ ಮತ್ತು ಸ್ಪಷ್ಟವಾದ ವಿವರಗಳನ್ನು ನೀಡುತ್ತವೆ. ಯೋಗದ ಗುರಿ, ಅಭ್ಯಾಸ, ಫಲ ಎಲ್ಲದರ ಚರ್ಚೆ ಈ ಸೂತ್ರಗಳಲ್ಲಿದೆ. ಯೋಗದ ಅನುಭವಗಳನ್ನು ದಾಖಲಿಸುವುದು ಮತ್ತೊಂದು ಕೆಲಸವಾಗಿತ್ತು. ಅದಕ್ಕಾಗಿ ಒಂದು ಡೈರಿಯನ್ನು ಬರೆಯಲು ನಿರ್ಧರಿಸಿದೆ. ಪ್ರತಿನಿತ್ಯದ ಅನುಭವಗಳನ್ನು ಅದರಲ್ಲಿ ದಾಖಲಿಸಲು ಆರಂಭಿಸಿದೆ. ಕಾಲಕಾಲಕ್ಕೆ ಅದನ್ನು, ವೈದ್ಯೆಯಾದ ನನ್ನ ಪತ್ನಿಗೂ ತೋರಿಸಿ, ವಿಮರ್ಶೆಗೊಳಪಡಿಸಿ ಅವರಿಂದ ಸಲಹೆ ಪಡೆಯಲು ನಿರ್ಧರಿಸಿದೆ.
ನನ್ನ ಸಂಶೋಧನೆ ಒಂದು ವರ್ಷದ ವರೆಗೂ ನಡೆಯಿತು. ಅಷ್ಟು ಹೊತ್ತಿಗೆ ಯೋಗದ ಆಸಕ್ತಿಯು ನನ್ನನ್ನು ಸಂಪೂರ್ಣ ವ್ಯಾಪಿಸಿಕೊಂಡಿತ್ತು.
ಯೋಗ: ತತ್ತ್ವ ಮತ್ತು ಅಭ್ಯಾಸ
ಯೋಗಪದ್ಧತಿಗೆ ಪ್ರಾಚೀನ ಇತಿಹಾಸವಿದೆ. ಆರ್ಯಪೂರ್ವ ಕಾಲದಿಂದಲೂ ಕೆಲವು ಯೋಗಪದ್ಧತಿಗಳು ಅಸ್ತಿತ್ವದಲ್ಲಿರುವುದು ಕಾಣುತ್ತದೆ. ಮೊಹೆಂಜೊದಾರೋವಿನ ಉತ್ಖನನದಲ್ಲಿ ದೊರೆತ ಮಣ್ಣಿನ ಬೊಂಬೆಗಳು ಯೋಗಾಸನಗಳನ್ನೇ ಹೋಲುತ್ತವೆ. ವೇದ-ಉಪನಿಷತ್ತುಗಳಲ್ಲಿ ಅನೇಕ ಕಡೆ `ಯೋಗ’ ಪದದ ಬಳಕೆ ಇದೆ. ಕಠೋಪನಿಷತ್ತಿನಲ್ಲಿ ಯೋಗವೆಂದರೆ `ಇಂದ್ರಿಯಗಳನ್ನು ನಿಯಂತ್ರಿಸುವ ಬಗೆ’ ಎಂದು ಹೇಳಲಾಗಿದೆ. ಭಗವದ್ಗೀತೆಯಲ್ಲಿ ಪರಮಾತ್ಮನಲ್ಲಿನ ಲೀನತೆಯೇ ಯೋಗವೆಂದು ಪರಿಷ್ಕರಿಸಲಾಗಿದೆ. ಈ ತಲ್ಲೀನತೆಯಿಂದ ಯೋಗಿಯು ತನ್ನಲ್ಲಿ ಸಕಲ ಪದಾರ್ಥಗಳನ್ನೂ, ಸಕಲ ಪದಾರ್ಥಗಳಲ್ಲಿ ತನ್ನನ್ನೂ ಕಾಣುವನು. ಯೋಗಪದ್ಧತಿಯು ಬೌದ್ಧಸಂಸ್ಕೃತಿಯ ಭಾಗವೂ ಆಗಿತ್ತು. `ಸತ್ತಿಪಠನ’ವೆಂಬ ಮನೋವೈದ್ಯಕೀಯ ಚಿಕಿತ್ಸೆಯು ಯೋಗಕ್ಕಿಂತ ಭಿನ್ನವಾಗಿಲ್ಲ. ಹೀಗಾಗಿ ಪತಂಜಲಿಯ ಯೋಗಸೂತ್ರಗಳೇ ಯೋಗಶಾಸ್ತ್ರದಲ್ಲಿ ಪ್ರಪ್ರಥಮ ಪ್ರಯೋಗವಲ್ಲದಿದ್ದರೂ, ಅದೊಂದು ಕ್ರಮಬದ್ಧವಾಗಿ ರಚಿತವಾದ ಶಾಸ್ತ್ರವಾಗಿದೆ.
ಯೋಗವು ಮೋಕ್ಷವನ್ನು ಸಾಧಿಸಲು ಇರುವ ಉಪಾಯ ಎಂದೇ ಪರಿಗಣಿಸಲಾಗುತ್ತದೆ. ಮೋಕ್ಷವೆಂದರೆ ಭೌತಿಕ ಬಂಧನಗಳನ್ನೆಲ್ಲ ತೊಡೆದು ಆತ್ಮಾನುಭವ ಪಡೆಯುವುದು. ಯೋಗದ ಪರಿಕಲ್ಪನೆಗಳು ಸಾಂಖ್ಯ, ವೇದಾಂತ, ಬೌದ್ಧ ದರ್ಶನಗಳಲ್ಲಿ ಹರಡಿಕೊಂಡಿವೆ. ಯೋಗಗಳಲ್ಲಿ ಹಲವು ಬಗೆಗಳಿವೆ. ಹಠಯೋಗವು ದೈಹಿಕ ಪರಿಶ್ರಮವನ್ನು ಒತ್ತಿಹೇಳಿದರೆ, ಮಂತ್ರಯೋಗವು ಮಂತ್ರಗಳ ಪಠನ, ಸಿದ್ಧಿಗಳನ್ನು ಬೋಧಿಸುತ್ತದೆ. ಕರ್ಮಯೋಗವು ಫಲಾಪೇಕ್ಷೆಯಿಲ್ಲದೆ ಕರ್ಮಮಾಡಲು ತಿಳಿಸಿದರೆ, ಕ್ರಿಯಾಯೋಗವು ಈಶ್ವರನಲ್ಲಿ ಸಮರ್ಪಣಭಾವವನ್ನು ತಿಳಿಸುತ್ತದೆ. ಕುಂಡಲಿನೀ ಯೋಗವು ಪ್ರಾಣಸಂಚಾರವನ್ನು ಪ್ರೇರಿಸುವ ವ್ಯಾಯಾಮವನ್ನು ಹೇಳಿದರೆ, ಭಕ್ತಿಯೋಗವು ಭಗವಂತನೊಂದಿಗೆ ಸ್ನೇಹಭಾವವನ್ನು ಹೇಳುತ್ತದೆ.
ಪಾತಂಜಲ ಯೋಗಸೂತ್ರಗಳು ದೈಹಿಕ ಮತ್ತು ಮಾನಸಿಕ ಅಭ್ಯಾಸಗಳನ್ನೊಳಗೊಂಡ `ರಾಜಯೋಗ’ವನ್ನು ಹೇಳುತ್ತವೆ. ಇದರಲ್ಲಿ ಒಟ್ಟು ೧೯೬ ಸೂತ್ರಗಳಿದ್ದು, ನಾಲ್ಕು ಪಾದಗಳಲ್ಲಿ ವಿಭಜಿಸಲಾಗಿದೆ. ಮೊದಲನೆಯದಾದ `ಸಮಾಧಿಪಾದ’ದಲ್ಲಿ ಯೋಗದ ಅರ್ಥ, ಉದ್ದೇಶ, ಗುರಿಗಳ ವಿವರವಿದೆ. ಎರಡನೆಯ `ಸಾಧನಾಪಾದ’ದಲ್ಲಿ ಜೀವನದಲ್ಲಿನ ದುಃಖ-ದುಮ್ಮಾನಗಳಿಗೆ ಕಾರಣಗಳು ಮತ್ತು ಅವಕ್ಕೆ ಪರಿಹಾರಗಳನ್ನು ಹೇಳಲಾಗಿದೆ. ಮೂರನೆಯ ಭಾಗವಾದ `ವಿಭೂತಿಪಾದ’ದಲ್ಲಿ ದೈಹಿಕ ಮತ್ತು ಮಾನಸಿಕ ತಂತ್ರಗಳು ಮತ್ತು ಅವುಗಳ ಪರಿಣಾಮಗಳು, ವಿಶೇಷ ಶಕ್ತಿಗಳು ನಿರೂಪಿತವಾಗಿವೆ. ಕೊನೆಯದಾದ `ಕೈವಲ್ಯಪಾದ’ದಲ್ಲಿ ತಾತ್ವ್ತಿಕ ಅಂಶಗಳನ್ನು ತಿಳಿಸಿ, ಅಂತಿಮ ಫಲವಾದ ಮೋಕ್ಷದ ವಿವರಣೆಗಳಿವೆ.
ಯೋಗಸೂತ್ರಗಳ ಮೂಲವು ಸಾಂಖ್ಯದರ್ಶನದೊಂದಿಗೆ ಬೆಸೆದುಕೊಂಡಿದೆ. ಆದರೆ ಯೋಗಕ್ಕೂ, ಸಾಂಖ್ಯತತ್ತ್ವಕ್ಕೂ ಇರುವ ಭೇದವೆಂದರೆ ಈಶ್ವರನ ಅಸ್ತಿತ್ವ ಕುರಿತು. ಸಾಂಖ್ಯದರ್ಶನವು ನಿರೀಶ್ವರವಾದವಾಗಿದ್ದು, ಯೋಗವು ಈಶ್ವರನನ್ನು ಅಂಗೀಕರಿಸುತ್ತದೆ. ಈ ತತ್ವ್ತಗಳ ಸಾರವಿಷ್ಟು: ಜಗತ್ತಿನ ಮೂಲಕಾರಣ ಎರಡು ಅಂಶಗಳು – ಪ್ರಕೃತಿ ಮತ್ತು ಪುರುಷ. ಪ್ರಕೃತಿಯು ಕ್ರಿಯಾಶೀಲವಾದದ್ದೂ, ಪರಿಣಾಮಹೊಂದುವುದೂ ಆಗಿದೆ. ಈ ಜಗತ್ತಿನ ಸೃಷ್ಟಿಯು ಪ್ರಕೃತಿಯಿಂದಾಗಿದೆ. ಪುರುಷ ಅಂಶವು ಕ್ರಿಯಾಶೀಲವಲ್ಲದ, ಆದರೆ ಅನಂತವಾದ ತತ್ತ್ವವಾಗಿದ್ದು ಜಗತ್ತಿನ ಆಗು-ಹೋಗುಗಳಿಗೆ ಸಾಕ್ಷಿರೂಪವಾಗುತ್ತದೆ.
“ಪುರುಷನು ಪ್ರಕಾಶಿಸುತ್ತಾನೆ. ಆದರೂ ನಿರಾಕಾರನಾಗಿದ್ದಾನೆ. ಅವನೇ ವಿಶ್ವದ ಆತ್ಮನು. ಪುರುಷನು ಸರ್ವತ್ರ ವ್ಯಾಪ್ತನೂ, ಜನ್ಮರಹಿತನೂ, ಕಲ್ಮಶರಹಿತನೂ ಆಗಿದ್ದಾನೆ” – ಮುಂಡಕೋಪನಿಷತ್ತು.
ಯೋಗಾಭ್ಯಾಸದಿಂದ ಕ್ರಮೇಣ ಚಂಚಲವಾದ ಪ್ರಕೃತಿತತ್ತ್ವವು ಶಾಂತವಾಗಿ ಪುರುಷತತ್ತ್ವವು ಬೆಳಗುತ್ತದೆ.
ಯೋಗವು ಈಶ್ವರನನ್ನು ಕುರಿತು ಹೇಳುತ್ತದೆ. ಈಶ್ವರ ಎಂದರೆ ಒಂದು ಸರ್ವೋತ್ಕೃಷ್ಟ ಶಕ್ತಿ. ಯೋಗವು ಮನದ ಕ್ಷೆಭೆಗಳನ್ನು ನಿವಾರಿಸುವಲ್ಲಿ ಸಹಕರಿಸುತ್ತದೆ. ವಿವೇಕಾನಂದರು ಹೇಳುತ್ತಾರೆ, “ಸರೋವರವು ಕೆಸರಿನಿಂದ ಕೂಡಿದ್ದರೆ, ಅಲೆಗಳಿದ್ದರೆ ಅದರ ತಳವು ಕಾಣುವುದಿಲ್ಲ. ಯಾವಾಗ ಕಲ್ಮಶವೆಲ್ಲಾ ಹೋಗಿ ಅಲೆಗಳು ನಿಲ್ಲುತ್ತವೋ ಆಗ ಮಾತ್ರ ಸರೋವರದ ತಳವೂ ಕಾಣುತ್ತದೆ. ಈ ತಳವೇ ನಮ್ಮ ಆತ್ಮ. ಸರೋವರವು ನಮ್ಮ ಚಿತ್ತ ಮತ್ತು ಅಲೆಗಳು ಎಂದರೆ ನಮ್ಮ ಮನೋವೃತ್ತಿಗಳು.” ಈ ಸ್ಥಿತಿಯನ್ನು ತಲಪಲು ಮುಖ್ಯವಾದ ಮಾರ್ಗವೆಂದರೆ ಪ್ರಾಪಂಚಿಕ ಬಯಕೆಗಳನ್ನು ತ್ಯಜಿಸುವುದು. ಇದೇ ಸಮಾಧಿಸ್ಥಿತಿ. ಕೆಲವರಿಗೆ ಜನ್ಮತಃ ಈ ವೈರಾಗ್ಯವಿದ್ದರೆ ಉಳಿದ ಕೆಲವರು ಅದನ್ನು ನಂಬಿಕೆ, ಶಕ್ತಿ, ಸಾಧನೆಗಳಿಂದ ಪಡೆಯುತ್ತಾರೆ. ಇನ್ನು ಕೆಲವರು ಈಶ್ವರನಲ್ಲಿ ತಮ್ಮನ್ನು ಸಮರ್ಪಿಸಿಕೊಂಡು, ಬದುಕಿನ ಎಲ್ಲವನ್ನೂ ಈಶ್ವರನ ಲೀಲೆಯೆಂದು ಅಂಗೀಕರಿಸಿ ವಿರಕ್ತರಾಗುತ್ತಾರೆ. ಈ ಹಾದಿಯಲ್ಲಿ ಬರುವ ಕಷ್ಟಗಳನ್ನು ದೂರಮಾಡುವುದೇ `ಯೋಗ’ದ ಉಪಯೋಗ.
ಯೋಗದ ತರಬೇತಿಯಲ್ಲಿ ೮ ಘಟ್ಟಗಳಿವೆ. ಮೊದಲ ೫ ಘಟ್ಟಗಳು ಬಾಹ್ಯಪಾದಗಳಾಗಿದ್ದು ದೈಹಿಕ ನಡವಳಿಕೆಗಳಿಗೆ ಒತ್ತುಕೊಡುತ್ತವೆ. ಕೊನೆಯ ಮೂರು, ಆಂತರಿಕಪಾದಗಳಾಗಿದ್ದು ಧ್ಯಾನವನ್ನು ಹೇಳುತ್ತವೆ.
ಯಮ ಮತ್ತು ನಿಯಮ ಮೊದಲೆರಡು ಪಾದಗಳು. ಯಮದಲ್ಲಿ ೫ ಅಂಶಗಳಿವೆ: ಕಳ್ಳತನ ಮಾಡದಿರುವುದು, ಸತ್ಯ, ಅಹಿಂಸೆ, ಮನೋನಿಗ್ರಹ ಮತ್ತು ದುರಾಸೆಯನ್ನು ಬಿಡುವುದು. ನಿಯಮದಲ್ಲಿ ಶುದ್ಧತೆ, ಸಂತೃಪ್ತಿ, ಸಂಯಮ, ಸ್ವಾಧ್ಯಾಯ ಮತ್ತು ಈಶ್ವರಸಮರ್ಪಣೆಯ ಭಾವಗಳಿವೆ. ಯಮ ಮತ್ತು ನಿಯಮಗಳನ್ನು ಸಾಧಿಸುವುದು ಕಷ್ಟಕರ. ಆದರೆ ಇವುಗಳ ಅಭ್ಯಾಸದಿಂದ ಮನಸ್ಸು ಪರಿಶುದ್ಧವಾಗಿ ಸಮಾಧಿಸ್ಥಿತಿಯನ್ನು ತಲಪುವುದು.
ಆಸನ, ಪ್ರಾಣಾಯಾಮ ಮತ್ತು ಪ್ರತ್ಯಾಹಾರ – ಇವು ಉಳಿದ ಮೂರು ಬಾಹ್ಯ ಪಾದಗಳು. ಆಸನ ಎಂದರೆ ಒಂದು ನಿರ್ದಿಷ್ಟ ಭಂಗಿಯಲ್ಲಿ ಕುಳಿತು ಅನಂತತ್ವದ ಚಿಂತನೆ ಮಾಡುವುದು. ಇದನ್ನು ಸಾಧಿಸಲು ಬಹು ಸಮಯದ ಅಭ್ಯಾಸ ಅನಿವಾರ್ಯ. ಪ್ರಾಣಾಯಾಮವು ಪ್ರಕಾಶದ ಆವರಣವನ್ನು ನಿವಾರಿಸಿ ಏಕಾಗ್ರತೆ ಯನ್ನುಂಟುಮಾಡುತ್ತದೆ. ಪ್ರತ್ಯಾಹಾರವೆಂದರೆ ಇಂದ್ರಿಯಗಳನ್ನು ಮನಸ್ಸಿನ ಹತೋಟಿಗೆ ತರುವುದು.
ಆಂತರಿಕವಾದ ಮೂರು ಪಾದಗಳೆಂದರೆ ಧಾರಣ, ಧ್ಯಾನ ಮತ್ತು ಸಮಾಧಿ. ಧಾರಣವೆಂದರೆ ಒಂದೇ ವಸ್ತುವನ್ನು ನೋಡುತ್ತಾ ಏಕಚಿತ್ತರಾಗುವುದು. ಧ್ಯಾನವೆಂದರೆ, ಧಾರಣವನ್ನೇ ನಿರಂತರವಾಗಿ, ಯಾವ ಅಡೆತಡೆಯೂ ಇಲ್ಲದೆ ನೋಡುತ್ತಾ ಏಕಾಗ್ರತೆ ಸಾಧಿಸುವುದು. ಸಮಾಧಿಸ್ಥಿತಿಯಲ್ಲಿ ತಮ್ಮ ಆತ್ಮಾನುಭವವೇ ಕೆಲವು ಕಾಲ ಲೀನವಾದಂತೆ ಭಾಸವಾಗುತ್ತದೆ. `ತಾನು’ ಎಂಬ ಅಹಂಭಾವವನ್ನು ಮರೆತು ಧ್ಯಾನ ಮಾಡಿದಾಗ ಈ ಸ್ಥಿತಿ ಪ್ರಾಪ್ತವಾಗುತ್ತದೆ.
ಪತಂಜಲಿಯ ಪ್ರಕಾರ ಈ ಎಂಟು ಪಾದಗಳಿಂದ ಕೂಡಿದ ಯೋಗವನ್ನು ಅಭ್ಯಾಸ ಮಾಡುವುದರಿಂದ ಮತ್ತು ಸಮಾಧಿಸ್ಥಿತಿಯಲ್ಲಿ ಹೆಚ್ಚುಕಾಲ ಕಳೆಯುವುದರಿಂದ ವಿಶೇಷ ಶಕ್ತಿಗಳು ದೊರೆಯುತ್ತವೆ. ಅವನ್ನು ‘ವಿಭೂತಿ’ ಎಂದು ಕರೆಯುತ್ತಾರೆ. ಭೂತ-ಭವಿಷ್ಯತ್ತುಗಳ ಜ್ಞಾನ, ಪೂರ್ವಜನ್ಮಜ್ಞಾನ ಮುಂತಾದವು ಈ ಶಕ್ತಿಗಳು. ಈ ವಿಶೇಷ ಶಕ್ತಿಗಳನ್ನೂ ಅಪೇಕ್ಷಿಸದೆ ಸಾಧನೆ ಮಾಡಿದರೆ ಅದು ‘ಕೈವಲ್ಯ’ಕ್ಕೆ ದಾರಿಯಾಗುತ್ತದೆ. ಕೈವಲ್ಯದ ಸ್ಥಿತಿಯಲ್ಲಿ ಯಾವ ಭೌತಿಕ ಬಂಧನವೂ ಇರದೆ, ಪ್ರಕೃತಿ-ಪುರುಷರ ಯಥಾಸ್ವರೂಪವು ಅನುಭವಕ್ಕೆ ಬರುವುದು.
ಪಾತಂಜಲ ಯೋಗಶಾಸ್ತ್ರವು ಆಧುನಿಕ ಮನೋವಿಜ್ಞಾನದ ಮುಂದುವರಿದ ಹಂತಗಳನ್ನು ಮುಟ್ಟುತ್ತದೆ ಎಂದು ಕೆಲವೊಮ್ಮೆ ಭಾಸವಾಗುತ್ತದೆ. ಅನೇಕ ಮನಶ್ಶಾಸ್ತ್ರಜ್ಞರು ಮಾನವನ ದುಃಖಗಳಿಗೆ ಬೇರೆ ಬೇರೆ ಕಾರಣಗಳನ್ನು ಹೇಳುತ್ತಾರೆ.
ಫ್ರಾಯ್ಡ್ ಮತ್ತು ಸಹಚರರು ಮನಸ್ಸಿನ ಸಂದಿಗ್ಧತೆಗಳೇ ದುಃಖಕ್ಕೆ ಕಾರಣ ಎಂದು ಹೇಳಿದರೆ, ಜೆ.ಬಿ. ವಾಟ್ಸನ್ ಮತ್ತು ತಂಡವು ಮಿಥ್ಯಾಜ್ಞಾನವೇ ದುಃಖಕ್ಕೆ ಕಾರಣ ಎಂದು ಹೇಳುತ್ತದೆ. ಪಾತಂಜಲ ಯೋಗಸೂತ್ರಗಳು ಭಿನ್ನವಾದ ತತ್ತ್ವವನ್ನು ಹೇಳುತ್ತವೆ. ಅದರ ಪ್ರಕಾರ ಪೂರ್ವಕರ್ಮವೇ ಈ ಕ್ಲೇಶಗಳಿಗೆ ಕಾರಣ. ಒಟ್ಟು ೫ ತರಹದ ಕ್ಲೇಶಗಳಿವೆ: ಅಜ್ಞಾನ, ಅಹಂಕಾರ, ಪರಾಜಯ, ಆಕರ್ಷಣೆ, ಬದುಕುವ ಆಸೆ. ಇವೆಲ್ಲವೂ ಪೂರ್ವಕೃತ ಕರ್ಮಗಳಿಂದ ನಿರ್ಧರಿತವಾಗುತ್ತವೆ. ಯೋಗದಿಂದ ವ್ಯಕ್ತಿಯು ಈ ಕರ್ಮಗಳ ಪರಿಣಾಮಗಳನ್ನು ತಡೆದು ಹೆಚ್ಚು ಸಾತ್ತ್ವಿಕನಾಗುತ್ತಾನೆ. ಯೋಗಾಭ್ಯಾಸ ಮಾಡಿದ ಯೋಗಿಯು, ಹಿಂಸೆ, ಮೋಹ, ಕಾಮ ಮುಂತಾದ ಎಲ್ಲ ದುರ್ಗುಣಗಳಿಂದ ದೂರವಾಗಿ, ಮಾನಸಿಕ ಶುದ್ಧತೆ ಮತ್ತು ದೃಢತೆಯನ್ನು ಪಡೆಯುತ್ತಾನೆ.
ಸಂಶೋಧನೆಯ ಕಾರ್ಯರೂಪ
ಹಿಂದೆ ಹೇಳಿದಂತೆ ನನ್ನ ಸಂಶೋಧನೆಗೆ ಗುರುಗಳನ್ನು ಹುಡುಕಬೇಕಿತ್ತು. ನಾನು ಮೊದಲು ಅವರನ್ನು ಭೇಟಿ ಮಾಡುವುದಕ್ಕಿಂತ ಮುಂಚೆ ಆಶ್ರಮದ ಶಿಷ್ಯನಿಂದ ಅವರ ಬಗ್ಗೆ ಕೇಳಿ ತಿಳಿದು ಪ್ರಭಾವಿತನಾಗಿದ್ದೆ. ಅಲ್ಲದೆ ಅವರ ಸತ್ಸಂಗಗಳಲ್ಲಿ ಭಾಗವಹಿಸಿದ್ದೆ. ನಾನು ಗುರುಗಳನ್ನು ಭೇಟಿಮಾಡಿ ನನ್ನ ಯೋಗಾಸಕ್ತಿಯನ್ನು ತಿಳಿಸಿದಾಗ, ಮೊದಲು ಏನೂ ಹೇಳದಿದ್ದರೂ, ಮುಂದಿನ ಭೇಟಿಯಲ್ಲಿ ನೀನು ಏತಕ್ಕಾಗಿ ಯೋಗವನ್ನು ಇಚ್ಛಿಸಿರುವೆ? ಎಂದು ಕೇಳಿದರು. ಜೀವನದಲ್ಲಿ ಪ್ರಬುದ್ಧತೆಯನ್ನು ಪಡೆಯಲು ಎಂದು ನಾನು ಉತ್ತರಿಸಿದೆ. ಅಲ್ಲದೆ ನನ್ನ ಸಂಶೋಧನೆಯ ವಿವರಗಳನ್ನೂ ತಿಳಿಸಿದೆ. ಜೋರಾಗಿ ನಗುತ್ತಾ ಗುರುಗಳು ಹತ್ತಾರು ವರ್ಷಗಳ ಸಾಧನೆಯಿಂದ ಯೋಗಿಗಳು ಪಡೆದ ಅನುಭವವನ್ನು ನಿನ್ನಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವೆ? ಇಷ್ಟಕ್ಕೂ ಅವರೇಕೆ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾರೆ? ಎಂದರು. ಸ್ವಲ್ಪ ಹೊತ್ತಿನ ಮೌನದ ನಂತರ, ಮತ್ತೆ ಗುರುಗಳು ಕೇಳಿದಾಗ, ನಾನು ಗುರುಗಳೇ, ಬದುಕಿನ ಉಳಿದೆಲ್ಲ ಯಶಸ್ಸುಗಳು ದೊರಕಿದ್ದರೂ ನಾನು ಸಂಪೂರ್ಣ ತೃಪ್ತನಾಗಿಲ್ಲ. ಅಂತಹ ಸ್ಥಿತಿಯನ್ನು ತಲಪಲು ಬದುಕಿನಲ್ಲಿ ಇನ್ನೊಂದು ಹಾದಿಯಿದೆಯೆ? ಎಂದು ಕೇಳಿದೆ.
ಆಗ ಗುರುಗಳು ಯೋಗದ ಉಪಯೋಗಗಳನ್ನು, ಅದರ ಸಾಧನೆಯ ಬಗೆಯನ್ನು ಹೇಳಿದರು. ಜೊತೆಗೆ ಮನಸ್ಸನ್ನು ಹತೋಟಿಯಲ್ಲಿಡಲು ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳಬೇಕೆಂದು ತಿಳಿಸಿದರು. ಯಾವ ಅಭ್ಯಾಸಗಳು? ಎಂದು ನಾನು ಕೇಳಿದಾಗ, ಗುರುಗಳು ಶಾಂತಚಿತ್ತರಾಗಿ ಹೇಳಿದರು: ಶಿಸ್ತು. ಬದುಕಿನ ಪ್ರತಿಯೊಂದು ವಿಭಾಗದಲ್ಲೂ ಒಂದು ಕ್ರಮವಿರಲಿ. ಬಟ್ಟೆ, ಪುಸ್ತಕಗಳು, ಆಹಾರ ಎಲ್ಲದರಲ್ಲೂ ಶಿಸ್ತು ಇರುವುದು ಮೊದಲ ಘಟ್ಟ. ಹಾಗೆಂದು ಅದು ಮಿತಿಯನ್ನೂ ಮೀರದಿರಲಿ. ಅನಿವಾರ್ಯ ಸಂದರ್ಭಗಳಲ್ಲಿ ಕೆಲವು ನಿಯಮಗಳನ್ನು ಸಡಿಲು ಮಾಡಿಕೊಳ್ಳಲೂಬೇಕು. ಆದರೆ ಅನವಶ್ಯ ಸಂಗತಿಗಳನ್ನು ಸಂಪೂರ್ಣ ಬದಿಗಿಡಬೇಕು.
ಈ ಹೊಸ ಚಟುವಟಿಕೆಗಳಿಗೆ ಹೊಂದಿಕೊಳ್ಳಲು ನನಗೆ ಸುಮಾರು ಒಂದು ತಿಂಗಳೇ ಬೇಕಾಯಿತು. ಬೆಳಗ್ಗೆ ೪ ಗಂಟೆಗೆ ಏಳುವುದು, ಸ್ವಲ್ಪ ಯೋಗಾಭ್ಯಾಸ, ಯೋಗದ ಪುಸ್ತಕಗಳ ಅಧ್ಯಯನ, ಜೊತೆಗೆ ಕೆಲವು ಸಮಯ ನಿಮ್ಹಾನ್ಸ್ ರೋಗಿಗಳೊಂದಿಗೆ ಒಡನಾಟ, ಪ್ರತಿನಿತ್ಯ ಡೈರಿ ದಾಖಲಿಸುವುದು – ಇವು ನನ್ನ ದಿನದ ಕಾರ್ಯಗಳಾದವು. ಅಲ್ಲದೆ ನಾನು ಸಸ್ಯಾಹಾರಿಯಾಗುತ್ತಾ ಬಂದೆ. ತಂಬಾಕು ಮತ್ತು ಮದ್ಯಸೇವನೆಯನ್ನು ನಿಯಂತ್ರಿಸಿದೆ. ನಾನು ದಾಖಲಿಸಿದ ಡೈರಿಯನ್ನು ಕಾಲಕಾಲಕ್ಕೆ ನೋಡಿ, ಗುರುಗಳು ಸಲಹೆಗಳನ್ನು ನೀಡುತ್ತಿದ್ದರು. ಕೆಲವು ಬಾರಿ ಅನಿವಾರ್ಯ ಸಭೆಗಳಿಗಾಗಿ ದಿನದ ಕೆಲಸಗಳು ಅಪೂರ್ಣವಾಗುತ್ತಿದ್ದವು. ಆದರೂ, ವೃತ್ತಿಗೆ ಸಂಬಂಧಿಸಿದ ಕೆಲಸಗಳನ್ನು ಬಿಡದಿರಲು ಗುರುಗಳು ಸೂಚಿಸಿದ್ದರು.
ಗುರುಗಳ ಸೂಚನೆಗಳನ್ನನುಸರಿಸಿ, ನಿಧಾನವಾಗಿ ಯೋಗ ಕಲಿಯಲು ಪ್ರಾರಂಭಿಸಿದೆ. ಅದರ ಕೆಲವು ವಿವರಗಳು ಇಂತಿವೆ.
ಯೋಗನಿದ್ರೆ: ತಂತ್ರಶಾಸ್ತ್ರಗಳಲ್ಲಿರುವ ಈ ವಿಧಾನವನ್ನು ಸ್ವಾಮಿ ಸತ್ಯಾನಂದರು ಸರಳೀಕರಿಸಿ ತಮ್ಮ ಗ್ರಂಥದಲ್ಲಿ ಪ್ರಕಟಿಸಿದ್ದಾರೆ. ಇದರಲ್ಲಿ ವ್ಯಕ್ತಿಯು ಅಂಗಾತ ಮಲಗಿ ದೇಹದ ಅಂಗಗಳನ್ನು ಸಡಿಲಗೊಳಿಸಬೇಕು. ಅನಂತರ ಕ್ರಮೇಣ ದೇಹದ ಅಂಗಗಳ ಮೇಲೆ, ನಂತರ ಉಸಿರಿನ ಮೇಲೆ ಮನಸ್ಸನ್ನು ಕೇಂದ್ರೀಕರಿಸಬೇಕು. ಈ ಕ್ರಿಯೆಯ ನಡುವೆ ಮಾನಸಿಕವಾಗಿ ಒಂದು ಸಂಕಲ್ಪವನ್ನು ಇಟ್ಟುಕೊಂಡು, ಅದನ್ನು ಮತ್ತೆ ಮತ್ತೆ ಹೇಳಿಕೊಳ್ಳುತ್ತಿರಬೇಕು. ಯೋಗನಿದ್ರೆಯು ಆಂತರಿಕ ಪ್ರಜ್ಞೆಯನ್ನು ಪ್ರಭಾವಿಸುತ್ತದೆ. ನಾವು ಮಾಡುವ ಸಂಕಲ್ಪವು ಸರಳವೂ, ಸ್ಪಷ್ಟವೂ ಇದ್ದಷ್ಟೂ ಒಳ್ಳೆಯದು. ನಾನು ಯಾವಾಗಲೂ ಒಂದೇ ವಿಚಾರವನ್ನು ಯೋಚಿಸುತ್ತಿದ್ದೆ: `ಗುರುಗಳು ಹೇಳಿದ ರೀತಿಯಲ್ಲಿ ಯೋಗಾಭ್ಯಾಸದ ಸಾಧನೆ ಮಾಡಬೇಕು’ ಎಂದು.
ಯೋಗನಿದ್ರೆಯಲ್ಲಿ ಹೇಳಿರುವ ಮಾಂಸಖಂಡಗಳ ಸಂಕೋಚನ ಮತ್ತು ವಿಕಸನಗಳು ಆಧುನಿಕ ವೈದ್ಯಕೀಯ ವಿಧಾನದಂತೆಯೇ ಇವೆ. ದೇಹದ ಬೇರೆಬೇರೆ ಅಂಗಗಳ ಮೇಲೆ ಮನಸ್ಸನ್ನು ಕೇಂದ್ರೀಕರಿಸುವುದರಿಂದ, ಉಸಿರಿನ ಮೇಲೆ ಕೇಂದ್ರೀಕರಿಸುವುದು ಸುಲಭವಾಗುತ್ತದೆ. ಯೋಗನಿದ್ರೆಯು ಮನಸ್ಸನ್ನು ಜಾಗೃತಗೊಳಿಸಿ, ಪ್ರಶಾಂತಗೊಳಿಸುತ್ತದೆ. ಯೋಗನಿದ್ರೆಯು ಒಂದು ರೀತಿ ಅಮೌಖಿಕ ಸಂವಹನ. ಒಂದು ಗಂಟೆಯ ಯೋಗನಿದ್ರೆಯು ೪ ಗಂಟೆಗಳ ಪೂರ್ಣನಿದ್ರೆಗೆ ಸಮ. ಯೋಗನಿದ್ರೆಯ ನಂತರವೂ ಮನಸ್ಸು ಉಲ್ಲಸಿತವೂ ಮತ್ತು ಉತ್ಸಾಹಭರಿತವೂ ಆಗಿರುತ್ತದೆ. ಯೋಗನಿದ್ರೆಯ ಅಭ್ಯಾಸದಿಂದ, ಆಂತರಿಕ ಸಂವಾದ, ವ್ಯಾಖ್ಯಾನಗಳಿಂದ ಆಗುವ ಪದಾರ್ಥಗಳ ಗ್ರಹಿಕೆಯು ಕಡಮೆಯಾಗಿ ನಮ್ಮದೇ ಇಂದ್ರಿಯಗಳ, ಆತ್ಮದ ಅನುಭವ ಹೆಚ್ಚಾಗುತ್ತದೆ. ನನ್ನ ಪ್ರಕಾರ ಇದೇ ಆಧ್ಯಾತ್ಮಿಕ ಅನುಭವದ ಸ್ಥಿತಿ.
ಜಲನೇತಿ: ಇದು ನಾಸಿಕದ್ವಾರವನ್ನು ಶುದ್ಧಗೊಳಿಸುವ ಪ್ರಕ್ರಿಯೆ. ಸ್ವಲ್ಪ ಉಪ್ಪು ಬೆರೆಸಿದ ಬೆಚ್ಚಗಿನ ನೀರನ್ನು ಒಂದು ರಂಧ್ರದಿಂದ ಒಳಗೆಳೆದು ಮತ್ತೊಂದು ರಂಧ್ರದಿಂದ ಹೊರಬಿಡಬೇಕು. ಇದೇ ಕ್ರಿಯೆಯನ್ನು ಇನ್ನೊಂದು ರಂಧ್ರದೊಂದಿಗೂ ಮಾಡಬೇಕು. ಅನಂತರ ಜೋರಾಗಿ ಉಸಿರಾಡುವ ಮೂಲಕ ಒಳಗಿರುವ ನೀರಿನಂಶವನ್ನು ಹೊರಹಾಕಬೇಕು. ಈ ವಿಧಾನವೂ ಸ್ವಾಮಿ ಸತ್ಯಾನಂದರ `ಆಸನ, ಪ್ರಾಣಾಯಾಮ, ಮುದ್ರಾ ಮತ್ತು ಬಂಧ’ ಎಂಬ ಗ್ರಂಥದಲ್ಲಿ ಹೇಳಲ್ಪಟ್ಟಿದೆ. ಈ ಕ್ರಿಯೆ ಉಸಿರಾಟದ ಮಾರ್ಗವನ್ನು ಶುದ್ಧಮಾಡಿ, ಪ್ರಾಣಾಯಾಮ ಮಾಡುವುದು ಸುಲಭವೆನಿಸುತ್ತದೆ. ಇದರಿಂದ ಕುಂಡಲಿನಿ ಜಾಗೃತವಾಗುತ್ತದೆ ಎಂಬುದು ನನ್ನ ಅನುಭವಕ್ಕೇನೂ ಬರಲಿಲ್ಲ.
ಪ್ರಾಣ, ಪ್ರಾಣಕೇಂದ್ರಗಳು ಮತ್ತು ಕುಂಡಲಿನಿ: ಈ ಪದಗಳನ್ನು ಯೋಗದಲ್ಲಿ ಅನೇಕ ಬಾರಿ ಉಪಯೋಗಿಸಲಾಗುತ್ತದೆ. ಪ್ರಾಣವೆಂಬುದು ವಿಶ್ವಶಕ್ತಿ. ಅದು ಪ್ರಕೃತಿಯೊಂದಿಗೆ ಬೆರೆತಿದೆ. ಎಲ್ಲ ಜೀವಿಗಳಲ್ಲಿ, ನಿರ್ಜೀವಿಗಳಲ್ಲಿ ವ್ಯಾಪಿಸಿಕೊಂಡಿದೆ.
ಮನುಷ್ಯನ ದೇಹದಲ್ಲಿ, ಪ್ರಾಣವು ನಾಡಿಗಳ ಮೂಲಕ ಪ್ರವಹಿಸುತ್ತದೆ. ಮಾನವನ ದೇಹದಲ್ಲಿ ಸಹಸ್ರಾರು ನಾಡಿಗಳಿದ್ದು, `ಸುಷುಮ್ನಾ’ ನಾಡಿಯು ಮುಖ್ಯವಾದುದು. ಈ ನಾಡಿಯು ಬೆನ್ನುಮೂಳೆಯ ಮೂಲಕ ಹಾದುಹೋಗುತ್ತವೆ. ಈ ಹಾದಿಯಲ್ಲಿ ೮ ಚಕ್ರಗಳಿದ್ದು, ಈ ಚಕ್ರಗಳು ಪ್ರಾಣಚಲನೆಯನ್ನು ಉದ್ದೀಪನಗೊಳಿಸುತ್ತವೆ. ತನ್ಮೂಲಕ ಕುಂಡಲಿನಿಯು ವಿಕಸನವಾಗುವುದು. ಕುಂಡಲಿನಿಯ ವಿಕಸನದಿಂದ ವ್ಯಕ್ತಿಯು ದೈಹಿಕ ಮತ್ತು ಮಾನಸಿಕ ಅನುಭವಗಳನ್ನು ಮತ್ತು ವಿಶೇಷ ಶಕ್ತಿಗಳನ್ನು ಪಡೆಯುತ್ತಾನೆ. `ಆತ್ಮಜ್ಞಾನದಿಂದ ಮೋಕ್ಷ’ ಎಂಬ ಸಾಂಖ್ಯತತ್ತ್ವವನ್ನನುಸರಿಸಿ ಈ ಎಲ್ಲ ವಿಚಾರಗಳೂ ರೂಪುಗೊಂಡಿವೆ.
ಆಸನ: ಆಸನವೆಂಬುದು ದೇಹದ ಭಂಗಿ, ತನ್ಮೂಲಕ ವ್ಯಾಯಾಮ ಮಾಡಿ ದೇಹದ ಆರೋಗ್ಯವನ್ನು ವೃದ್ಧಿಸುವುದು. ಪತಂಜಲಿಯು ಯಾವ ಭಂಗಿಯು ದೇಹಕ್ಕೆ ಅನುಕೂಲವೋ ಆ ಭಂಗಿಯು ಅವರವರಿಗೆ ಉತ್ತಮ ಎಂದು ಹೇಳಿದ್ದಾರೆ. ಹಠಯೋಗಿಗಳು ಚಿತ್ರ-ವಿಚಿತ್ರ ಭಂಗಿಗಳನ್ನು ಅಭ್ಯಾಸ ಮಾಡುತ್ತಾರೆ. ಯೋಗ ಮಾಡುವ ಯೋಗಿಯ ಮಾಂಸಖಂಡಗಳು ಗಟ್ಟಿಯಾಗಿದ್ದು ಆರೋಗ್ಯಪೂರ್ಣವಾಗಿರುತ್ತವೆ.
ನನ್ನ ಬೆನ್ನುನೋವಿನ ಬಗ್ಗೆ ಗೊತ್ತಿದ್ದ ನನ್ನ ಗುರುಗಳು ಅದರ ಪರಿಹಾರಕ್ಕಾಗಿ ಕೆಲವು ಆಸನಗಳನ್ನು ಹೇಳಿಕೊಟ್ಟರು. ಅದರಲ್ಲಿ ಮುಖ್ಯವಾದುದು ‘ಸಿದ್ಧಾಸನ’. ಈ ಆಸನದಲ್ಲಿ ವ್ಯಕ್ತಿಯು ನೇರವಾಗಿ ಕುಳಿತು, ಮಂಡಿಗಳು ನೆಲಕ್ಕೆ ತಾಗುವಂತಿರುತ್ತವೆ. ಎಡಹಿಮ್ಮಡಿಯ ಮೇಲೆ ಬಲಹಿಮ್ಮಡಿ ಇರುತ್ತದೆ. ಯಾವುದೇ ಆಸನಗಳನ್ನು ಮಾಡುವಾಗ ಆ ಕ್ರಿಯೆ ಮತ್ತು ಸಂಬಂಧಿಸಿದ ಅಂಗಗಳ ಬಗ್ಗೆಯೇ ಲಕ್ಷ್ಯವಿರಿಸುವುದು ಉತ್ತಮ. ಇದರಿಂದ ಯೋಗನಿದ್ರೆಯ ರೀತಿಯಲ್ಲಿ ಮನಸ್ಸಮಾಧಾನ ಮತ್ತು ಅಮೌಖಿಕವಾದ ಜಾಗೃತಿಯ ಅನುಭವವಾಗುತ್ತದೆ. ಇದರಿಂದ ಯಾವ ಅಂಗಗಳು ಯಾವ ಕ್ರಿಯೆಗೆ ಅನುಕೂಲ ಎಂಬುದರ ಜ್ಞಾನವೂ ಸಿಗುತ್ತದೆ. ಇದು ಮನಸ್ಸನ್ನು ತಿಳಿಗೊಳಿಸಲು ಸಹಕಾರಿಯಾಗುತ್ತದೆ.
ಪ್ರಾಣಾಯಾಮ: ಉಸಿರಾಟದ ನಿಯಂತ್ರಣವೇ ಪ್ರಾಣಾಯಾಮ. ಸಾಮಾನ್ಯವಾಗಿ ನಮಗೆ ಉಸಿರಾಟದ ಪ್ರಜ್ಞೆ ಇರುವುದಿಲ್ಲ. ಯಾವಾಗ ಅತಿಯಾದ ಒತ್ತಡ ಅಥವಾ ಭಯದ ಸಂದರ್ಭದಲ್ಲಿ ಉಸಿರಾಟದ ಅವಧಿ ಕ್ಷೀಣವಾಗುತ್ತದೋ ಆಗಲೇ ಅದರ ಅನುಭವ ಬರುತ್ತದೆ. ನಿಯಮಿತವಾಗಿ ಉಸಿರಾಟವನ್ನು ನಿಯಂತ್ರಿಸುವ ಮೂಲಕ ಪ್ರಶಾಂತತೆಯ ಭಾವವನ್ನು ಪಡೆಯಬಹುದು. ಯೋಗದ ಪ್ರಕಾರ ಪ್ರಾಣಾಯಾಮದಿಂದ ಹಲವಾರು ಉಪಯೋಗಗಳಿವೆ. ಮುಖ್ಯವಾಗಿ ಅದು ಪ್ರಾಣಸಂಚಾರವನ್ನು ಉತ್ತೇಜಿಸುತ್ತದೆ ಮತ್ತು ನಿರಂತರವಾಗಿ ಮನಸ್ಸು ಜಾಗೃತವಾಗಿರುವಂತೆ ಮಾಡುತ್ತದೆ.
ತ್ರಾಟಕ: ಇದು ಏಕಾಗ್ರತೆಯನ್ನು ಹೆಚ್ಚಿಸುವ ತಂತ್ರ. ಒಂದು ಮೇಣದ ಬತ್ತಿಯನ್ನು ಕಣ್ಣಿನ ನೇರಕ್ಕೆ ಇಟ್ಟುಕೊಂಡು, ಸಿದ್ಧಾಸನದಲ್ಲಿ ಕುಳಿತು ದೀಪದ ಜ್ವಾಲೆಯನ್ನೇ ಕಣ್ಣು ಮಿಟುಕಿಸದೆ ನೋಡಬೇಕು. ಅನಂತರ ಕಣ್ಣುಮುಚ್ಚಿ ಹುಬ್ಬುಗಳ ಮಧ್ಯೆ ಆ ಜ್ವಾಲೆಯನ್ನು ಧ್ಯಾನಿಸಬೇಕು. ಮತ್ತೆ ಕಣ್ಣುಬಿಟ್ಟು ಜ್ವಾಲೆಯನ್ನು ನೋಡಬೇಕು. ಈ ಕ್ರಿಯೆಯನ್ನು ೩ ಬಾರಿ ಆವರ್ತಿಸಬೇಕು. ಕ್ರಮೇಣ ಹುಬ್ಬುಗಳ ಮಧ್ಯೆ ಧ್ಯಾನಿಸುವ ಸಮಯ ಜಾಸ್ತಿಯಾಗುತ್ತಾ ಏಕಾಗ್ರತೆ ಹೆಚ್ಚುತ್ತದೆ.
ಧ್ಯಾನ: ಯೋಗನಿದ್ರೆಯನ್ನು ಕಲಿತ ಮೇಲೆ, ನನ್ನ ಗುರುಗಳು ಧ್ಯಾನದ ತಂತ್ರಗಳನ್ನು ತಿಳಿಸಿದರು. ಅದರ ರೂಪರೇಷೆ ಹೀಗಿತ್ತು:
- ಸಿದ್ಧಾಸನದಲ್ಲಿ ಕುಳಿತು ಮೊದಲು ಸುತ್ತಲಿನ ಶಬ್ದಗಳನ್ನು ಆಲಿಸುತ್ತಾ, ನಿಧಾನವಾಗಿ ಮಾನಸಿಕವಾಗಿ ಸ್ಥಿರತೆಯನ್ನು ತರಬೇಕು.
- ಉಸಿರಾಟದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿ, ಆಗಾಗ ಬರುವ ಅನವಶ್ಯ ವಿಚಾರಗಳನ್ನು ತಡೆಯಬೇಕು.
- ಅನಂತರ ಉಸಿರಾಟದ ಮಾರ್ಗವನ್ನು ಕಲ್ಪಿಸಿಕೊಳ್ಳಬೇಕು. ನಾಭಿಯಿಂದ ಕಂಠದವರೆಗೆ ಉಸಿರು ಮೇಲೇಳುವುದನ್ನು, ಕಂಠ ದಿಂದ ನಾಭಿಯವರೆಗೆ ಒಳಹೋಗುವುದನ್ನು ಅನುಭವಿಸಬೇಕು. ಅನಂತರ `ಸೋ’ ಎಂದು ಉಚ್ಛ್ವಾಸದಲ್ಲಿಯೂ, `ಹಂ’ ಎಂದು ನಿಃಶ್ವಾಸದಲ್ಲಿಯೂ ಮಾನಸಿಕವಾಗಿ ಪಠಿಸಬೇಕು.
- ಅನಂತರ, ಈ ಸ್ಥಿತಿಯಲ್ಲಿ ಉಸಿರು, ಕಂಠದ ಹತ್ತಿರ ಬರುತ್ತಿದ್ದಂತೆ ನೇರಳೆಬಣ್ಣದ ಕಮಲವು ವಿಕಸನವಾದಂತೆ ಹಾಗೂ ಕಂಠದಿಂದ ಉಸಿರು ಹೊರಹೋಗುವಾಗ ಆ ಕಮಲವು ಸಂಕುಚಿತವಾದಂತೆ ಕಲ್ಪಿಸಿಕೊಳ್ಳಬೇಕು.
- ಸ್ವಲ್ಪ ಸಮಯದ ನಂತರ, ಅನ್ಯ ವಿಚಾರಗಳು ಮನಸ್ಸಿನಲ್ಲಿ ನುಸುಳುವುದು ನಿಲ್ಲುತ್ತದೆ. ಆಗ ಒಂದು ಚಿತ್ರವನ್ನು ಹುಬ್ಬುಗಳ ಮಧ್ಯೆ ಧ್ಯಾನಿಸಬೇಕು (ನಾನು ಮೇಣದ ಬತ್ತಿಯ ಜ್ವಾಲೆಯನ್ನು ಧ್ಯಾನಿಸುತ್ತಿದ್ದೆ). ಹೀಗೆ ತ್ರಾಟಕವನ್ನು ಅಭ್ಯಾಸಮಾಡಿದಂತೆ ಉಸಿರಾಟವು ದೀರ್ಘವೂ, ನಿಧಾನವೂ ಆಗುತ್ತದೆ.
- ಈ ಸ್ಥಿತಿಯಲ್ಲಿ, ನಮಗೆ ಇಷ್ಟವಾದ ಮಂತ್ರವನ್ನು ಪಠಿಸಬೇಕು. ಈಗ ನಮ್ಮ ಮನಸ್ಸು ಉಸಿರಾಟದಿಂದ ಹೊರಬಂದು, ನಾವು ಧ್ಯಾನಿಸುವ ಚಿತ್ರದ ಮೇಲೆ ಕೇಂದ್ರೀಕೃತವಾಗಿರುತ್ತದೆ.
- ಧ್ಯಾನದ ಅವಧಿ ಮುಗಿದ ಮೇಲೆ ಮತ್ತೆ ಮನಸ್ಸನ್ನು ಉಸಿರಾಟದ ಮೇಲೆ ತದನಂತರ, ಉಸಿರಾಟದ ಕಾಲ್ಪನಿಕ ಮಾರ್ಗ ನಂತರ ದೇಹದ ಅಂಗಗಳ ಮೇಲೆ ಕೇಂದ್ರೀಕರಿಸಿ, ನಿಧಾನವಾಗಿ ಕಣ್ಣು ತೆರೆಯಬೇಕು. ಕಣ್ಣು ತೆರೆಯುವಾಗ ಪೂರ್ಣವಾಗಿ ಉಸಿರೆಳೆದು, ಉಸಿರು ಬಿಡುವಾಗ ಜೋರಾಗಿ ಓಂಕಾರವನ್ನು ಹೇಳಬೇಕು. ಇದನ್ನು ಮೂರು ಸಲ ಆವರ್ತಿಸಬೇಕು.
ಧ್ಯಾನದ ಈ ನಿಯಮಗಳನ್ನು ಸರಿಯಾಗಿ ಪಾಲಿಸಲು ನನಗೆ ಅನೇಕ ದಿನಗಳು ಬೇಕಾದವು. ಪ್ರತಿನಿತ್ಯದ ಅಭ್ಯಾಸದೊಂದಿಗೆ ನಿಧಾನವಾಗಿ ಧ್ಯಾನವು ರೂಢಿಯಾಗತೊಡಗಿತು. ಕೊನೆಗೆ ಸುಮಾರು ೪೫ ನಿಮಿಷಗಳ ತನಕ ಅನಾಯಾಸವಾಗಿ ಧ್ಯಾನಮಾಡಲು ಶಕ್ತನಾದೆ. ಆದರೆ ನನ್ನ ಮನಸ್ಸು ಸರಿಯಿಲ್ಲದಿದ್ದಾಗ, ಧ್ಯಾನದ ಕೊನೆಯ ಸ್ಥಿತಿಯನ್ನು ತಲಪಲು ಬಹಳ ಸಮಯ ಬೇಕಾಗುತ್ತಿತ್ತು.
ಯೋಗದ ಬಗೆಗಿನ ಸಂಶೋಧನೆ ಮತ್ತು ಸಾಧುಗಳೊಂದಿಗಿನ ಒಡನಾಟ ನನಗೆ ಮನಶ್ಶಾಸ್ತ್ರ ಮತ್ತು ಭಾರತೀಯ ಅಧ್ಯಾತ್ಮದ ಒಲವನ್ನು ಮತ್ತಷ್ಟು ಹೆಚ್ಚಿಸಿತು. ವಿಜ್ಞಾನಿ, ಮನಶ್ಶಾಸ್ತ್ರಜ್ಞ, ಆಧ್ಯಾತ್ಮಿಕ ಗುರು ಎಲ್ಲರೂ ಸತ್ಯವನ್ನೇ ಗೌರವಿಸುತ್ತಾರೆ. ಸತ್ಯಕ್ಕೆ ವಿವಿಧ ಆಯಾಮಗಳಿವೆ. ಮನಶ್ಶಾಸ್ತ್ರಜ್ಞನು ವ್ಯಕ್ತಿಯನ್ನು ವೈಜ್ಞಾನಿಕ ಚೌಕಟ್ಟಿನಲ್ಲಿ ನೋಡಿದರೆ, ಒಬ್ಬ ಗುರು ಭಕ್ತನಂತೆ ಸ್ವೀಕರಿಸುತ್ತಾನೆ. ಆದರೆ, ದುಃಖಿತರಾದವರಿಗೆ ಸಾಂತ್ವನ ಹೇಳುವ ಕಾಯಕ ಇಬ್ಬರಲ್ಲೂ ಸಮಾನವಾಗಿದೆ. ಜೊತೆಗೆ, ಸಮಾಜದಲ್ಲಿ ಹೇಗೆ ಉತ್ತಮವಾಗಿ ಬದುಕಬೇಕೆಂಬ ವಿಚಾರದಲ್ಲೂ ಸಾಮ್ಯವಿದೆ.
ಧ್ಯಾನವು ಅನವಶ್ಯವಾದ ವಿಚಾರಸರಣಿಗಳನ್ನು ದೂರಮಾಡಿ ಏಕಾಗ್ರತೆ ಸಾಧಿಸಲು ಸಹಾಯ ಮಾಡುತ್ತದೆ. ಹಿಂದೆ ಹೇಳಿದ ಯೋಗನಿದ್ರೆ, ಪ್ರಾಣಾಯಾಮಗಳೂ ಈ ನಿಟ್ಟಿನಲ್ಲಿ ಕೆಲಸಮಾಡಿದರೂ, ಅವುಗಳಲ್ಲಿ ಸ್ವಲ್ಪ ದೈಹಿಕಶ್ರಮ ಅಡಗಿದೆ. ಆದರೆ ಧ್ಯಾನವು ಮೃದುವಾಗಿ ಮನಸ್ಸನ್ನು ಏಕಾಗ್ರತೆಯತ್ತ ಒಯ್ಯುತ್ತದೆ.
ಧ್ಯಾನದ ನಂತರವೂ ನಮ್ಮ ಪ್ರಜ್ಞೆಯ ವಿಸ್ತರಣೆಯು ಇರುತ್ತದೆ. ಧ್ಯಾನದಿಂದ ಕಾರ್ಯಕ್ಷಮತೆ ಹೆಚ್ಚುತ್ತದೆ. ಮತ್ತೊಂದು ಪ್ರಮುಖ ಅಂಶವೆಂದರೆ ಧ್ಯಾನವು ಭೂತ-ಭವಿಷ್ಯತ್ತುಗಳ ಚಿಂತೆಯನ್ನು ದೂರಮಾಡುತ್ತದೆ. ಈ ಎಲ್ಲ ಅನುಭವಗಳಾಗಬೇಕಾದರೆ ಧ್ಯಾನವನ್ನು ಸರಿಯಾದ ಕ್ರಮದಲ್ಲಿ ಮಾಡಬೇಕು. ಒಂದು ವೇಳೆ ಮನಸ್ಸು ಪ್ರಕ್ಷುಬ್ಧವಾಗಿದ್ದರೆ, ಆಗ ಧ್ಯಾನಕ್ಕಿಂತ ಯೋಗನಿದ್ರೆಯು ಹೆಚ್ಚು ಉಪಯುಕ್ತ.
ಸಂಶೋಧನೆಯ ಪ್ರಯಾಣ: ನನ್ನ ಯೋಗಾನುಭವಗಳ ಮೇಲಿನ ಪ್ರತಿಫಲನಗಳು
ನನ್ನ ಮನಸ್ಸಿನಲ್ಲಿ ಏಳುವ ಪ್ರಶ್ನೆಗಳಿಗೆಲ್ಲ ಉತ್ತರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಎಲ್ಲವನ್ನೂ ಡೈರಿಯಲ್ಲಿ ದಾಖಲಿಸುತ್ತಿದ್ದೆ. ಒಂದು ದಿನನಿತ್ಯದ ಅನುಭವಗಳನ್ನು ಬರೆಯಲು, ಇನ್ನೊಂದು ನನ್ನ ಕನಸುಗಳನ್ನು ದಾಖಲಿಸಲು. ನನಗೆ ವೈಯಕ್ತಿಕವಾಗಿ ಗಮನಕ್ಕೆ ಬಂದ ಅಂಶಗಳು, ನನ್ನ ಪತ್ನಿಯು ಗಮನಿಸಿದ ಅಂಶಗಳು ಮತ್ತು ಗುರುಗಳು ನೀಡಿದ ಸಲಹೆಗಳನ್ನೆಲ್ಲ ದಾಖಲಿಸುತ್ತಿದ್ದೆ.
ಯೋಗವು ಆತ್ಮಜಾಗೃತಿಗೆ ಸಹಕಾರಿ. ಆದರೆ ಪ್ರಾರಂಭಿಕ ಹಂತದಲ್ಲಿ ಕೆಲವು ಅಡಚಣೆಗಳನ್ನು ಎದುರಿಸಬೇಕಾಗುತ್ತದೆ. ಯೋಗಕ್ಕೆ ಇಂತಹ ವಿಘ್ನಗಳು ಸಾಮಾನ್ಯ. ಇವನ್ನು `ವಿಕ್ಷೇಪ’ಗಳೆಂದು ಯೋಗಸೂತ್ರಗಳಲ್ಲಿ ಹೇಳಿದೆ. ಮೊದಲಿಗೆ ನನಗೆ ಇದ್ದ ಬೆನ್ನುನೋವು ಯೋಗದ ಆರಂಭದಲ್ಲಿ ಹೆಚ್ಚಾಯಿತು. ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಯೋಗವನ್ನು ಮುಂದುವರಿಸಲು ಗುರುಗಳು ಹೇಳಿದರು. ಇದರ ಜೊತೆಗೆ ಅನೇಕ ಕಟ್ಟ ಕನಸುಗಳು ಬೀಳುತ್ತಿದ್ದವು. ದಾರಿಯಲ್ಲಿ ಹೋಗುವಾಗ ನಾಲ್ಕು ಜನ ಬಂದು ಗೆಳೆಯನನ್ನು ಕೊಲೆಮಾಡುವಂತಹ ಭೀಕರ ಸ್ವಪ್ನಗಳು ನನ್ನ ಮನಸ್ಸನ್ನು ಕದಡುತ್ತಿದ್ದವು. ಈ ಕನಸುಗಳನ್ನೆಲ್ಲ ನನ್ನ ಡೈರಿಯಲ್ಲಿ ಬರೆದಿಡುತ್ತಿದ್ದೆ.
ಹಲವಾರು ದಿನಗಳ ಯೋಗಾಭ್ಯಾಸದ ನಂತರ, ಮಾನಸಿಕ ಒತ್ತಡ ಕಡಮೆಯಾಗಿದ್ದು ಅನುಭವಕ್ಕೆ ಬರತೊಡಗಿತು. ಕೆಟ್ಟ ಯೋಚನೆಗಳು ದೂರವಾಗಿ, ಸೌಮ್ಯವಾದ ಸಂಭ್ರಮಗಳ ಕನಸುಗಳು ಬೀಳುತ್ತಿದ್ದವು. ಎಲ್ಲದಕ್ಕಿಂತ ಹೆಚ್ಚಾಗಿ `ಆದದ್ದೆಲ್ಲಾ ಒಳಿತು’ ಎಂಬ ಭಾವ ಮೂಡಲು ಶುರುವಾಯಿತು. ಸ್ನೇಹಿತರು, ಪರಿಚಿತರು ಸರಿಯಾಗಿ ಮಾತನಾಡಿಸದಿದ್ದರೆ ಸಾಕು ಕೋಪಗೊಳ್ಳುತ್ತಿದ್ದ ನಾನು, ಯೋಗಾಭ್ಯಾಸದ ನಂತರ ಇಂತಹ ವಿಷಯಗಳಿಗೆ ಅಷ್ಟು ಪ್ರಾಮುಖ್ಯ ಕೊಡುವುದನ್ನು ನಿಲ್ಲಿಸಿದೆ. ತನ್ಮೂಲಕ ಸಹನೆ, ಶಾಂತಿ ಹೆಚ್ಚಾಯಿತು. ನನಗೆ ಬರುತ್ತಿದ್ದ ಮಾನಸಿಕ ವಿಕ್ಷೇಪಗಳನ್ನು ಎದುರಿಸಲು ಈ ಅಂಶಗಳೂ ಸಹಕರಿಸಿದವು –
- ಮತ್ತೊಬ್ಬರ ವರ್ತನೆಯ ಮೇಲೆ ನಮ್ಮ ಸಂತೋಷವನ್ನು ನಿರ್ಧರಿಸಬಾರದು.
- ತ್ಯಾಗ ಮತ್ತು ಹೊಂದಾಣಿಕೆಯ ಮನೋಭಾವವಿರುವುದು.
- ಜನರು ಹೀಯಾಳಿಸಿದರೂ, ಆತ್ಮಗೌರವವನ್ನು ಕಳೆದುಕೊಳ್ಳದಿರುವುದು.
ಜೊತೆಗೆ ಯೋಗದ ಎಂಟು ಅಂಗಗಳನ್ನು, ವಿಶೇಷವಾಗಿ ಯಮ-ನಿಯಮಗಳನ್ನು ಅಭ್ಯಾಸಮಾಡುವುದರಿಂದ ಈ ವಿಕ್ಷೇಪಗಳನ್ನು ತೆಗೆದುಹಾಕಬಹುದು.
`ಈಶ್ವರ ಪ್ರಣಿಧಾನ’ – `ಸರ್ವವನ್ನು ಈಶ್ವರನಲ್ಲಿ ಅರ್ಪಿಸುವುದು’ – ಇದೂ ಯೋಗದ ಒಂದು ಭಾಗ. ನಾನು ಈ ಭಾಗವನ್ನು ಅಭ್ಯಾಸಮಾಡುವಾಗೆಲ್ಲ ನನ್ನ ಯೋಚನೆಗಳನ್ನು ಬರೆದಿಡುತ್ತಿದ್ದೆ. `ದೇವರು ಇದ್ದಾನೋ, ಇಲ್ಲವೋ? ಬಹುಶಃ ದೇವರೆಂಬುದು ನಮ್ಮ ಸಂಕಟಗಳನ್ನು ನಿವೇದಿಸಿಕೊಳ್ಳಲು ಇರುವ ಒಂದು ಶಕ್ತಿಯೆ? ಮೋಕ್ಷವೆಂದರೆ, ಅದೊಂದು ಬೇರೆ ಸ್ಥಿತಿಯೆ? ಅಥವಾ ನಮ್ಮ ಕೋಪ, ಉದ್ವೇಗಗಳಿಂದ ಹೊರಬರುವುದೇ ಈ ಮೋಕ್ಷವೆ?” ಇಂತಹ ಮನಸ್ಸಿಗೆ ತೋಚಿದ ವಿಷಯಗಳನ್ನು ದಾಖಲಿಸುತ್ತಿದ್ದೆ.
ಕೆಲವು ಸ್ನೇಹಿತರು ಹೇಳುವಂತೆ, ಆಶ್ಚರ್ಯಕರ ಅನುಭವಗಳು ನನಗೆ ಯೋಗಾಭ್ಯಾಸದಿಂದ ಆಗಿರಲಿಲ್ಲ. ಆದರೆ ಒಂದು ರೀತಿಯ ಜಾಗೃತ ಆತ್ಮಪ್ರಜ್ಞೆಯ ಅನುಭವವಂತೂ ಆಗಿತ್ತು. ಬಹುಶಃ ಈ ಸ್ಥಿತಿಯ ಉತ್ತುಂಗದಲ್ಲಿ ಇನ್ನೂ ವಿಶೇಷ ಅನುಭವಗಳು ಆಗಬಹುದು ಎಂದು ಭಾವಿಸಿದೆ. ಯೋಗದ ಮಧ್ಯದಲ್ಲಿಯೂ ಕೆಲವೊಮ್ಮೆ ಸಂದೇಹಗಳು, ಅನಿಶ್ಚಿತತೆಗಳು ಸುಳಿದಾಡುತ್ತಿದ್ದವು. ಅದರಲ್ಲೂ ನಾನು ಯೋಗಾಭ್ಯಾಸವನ್ನು ಸರಿಯಾಗಿ ಮಾಡದ ದಿನಗಳಲ್ಲಿ ಇದು ಹೆಚ್ಚಾಗುತ್ತಿತ್ತು. ಆದರೆ ಇವೆರಡಕ್ಕೂ ಸಂಬಂಧವೇನೆಂಬುದು ನನಗೆ ಸ್ಪಷ್ಟವಾಗಲಿಲ್ಲ. ನನ್ನ ಗುರುಗಳು ಅಭ್ಯಾಸವನ್ನು ಮುಂದುವರಿಸಲಷ್ಟೇ ಹೇಳಿದರು.
ನನ್ನ ಹೆಂಡತಿಯೂ ನನ್ನನ್ನು ಗಮನಿಸುತ್ತಾ ತನ್ನ ಅನಿಸಿಕೆಗಳನ್ನು ಹೇಳುತ್ತಿದ್ದಳು. ಅದನ್ನು ನಾನು ಸಂಗ್ರಹಿಸಿದ್ದೇನೆ. ಅದರ ಸಾರ ಇಷ್ಟಿತ್ತು –
“ನನ್ನ ಪತಿಯು ಯೋಗವನ್ನು ಪ್ರಾರಂಭಿಸಿದ ದಿನಗಳಲ್ಲಿ, ಅವರ ಚಟುವಟಿಕೆಗಳಲ್ಲಿ ಬಹಳಷ್ಟು ಏರುಪೇರು ಕಂಡಿತು. ಆದರೆ ಇದು ಸಹಜ ಎಂದು ಗುರುಗಳು ಸಮಾಧಾನಪಡಿಸಿದ ಮೇಲೆಯೇ ನಾನು ಸುಮ್ಮನಾದೆ. ಸ್ವಲ್ಪ ದಿನಗಳ ಅಭ್ಯಾಸದ ನಂತರ ಅವರ ನಡವಳಿಕೆ ಸಹಜವಾಗತೊಡಗಿತು.
ಯೋಗದ ಪ್ರಭಾವವನ್ನು ಅಲ್ಪಕಾಲಿಕ ಮತ್ತು ದೀರ್ಘಕಾಲಿಕ ಎಂದು ವಿಮರ್ಶಿಸಬಹುದು. ಅವರಿಗೆ ಯೋಗಾಭ್ಯಾಸವು ತೃಪ್ತಿಕರವಾಗಿದ್ದ ದಿನಗಳಲ್ಲಿ ಬಹಳ ಉತ್ಸಾಹದಿಂದಿರುತ್ತಿದ್ದರು. ಸಣ್ಣ ತಪ್ಪುಗಳನ್ನು ಕ್ಷಮಿಸಲು ಆರಂಭಿಸಿದರು. ಅವರ ಮನೋಭಾವಗಳಲ್ಲಿನ ಚಂಚಲತೆ ಕಡಮೆಯಾಗಿತ್ತು.
ದೀರ್ಘಕಾಲದ ಅಭ್ಯಾಸದ ನಂತರ ನಾನು ಗಮನಿಸಿದ್ದು ಅವರ ಶಾಂತ ಸ್ವಭಾವ. ಅವರ ಸಹನಶಕ್ತಿ ಹೆಚ್ಚಾಗಿತ್ತು. ಜೊತೆಗೆ ವಿಷಯಗಳನ್ನು ಗ್ರಹಿಸುವ ಶಕ್ತಿಯೂ ವರ್ಧಿಸಿತ್ತು. ವರ್ತಮಾನದ ಬದುಕಿಗೆ ಹೆಚ್ಚು ಪ್ರಾಮುಖ್ಯತೆ ಕೊಡಲು ಪ್ರಾರಂಭಿಸಿದರು. ಕೆಲವೊಮ್ಮೆ ಯೋಗಾಭ್ಯಾಸ ಸರಿಯಾಗಿ ಆಗದಿದ್ದ ಸಮಯದಲ್ಲಿ ಬಹು ಉದ್ವೇಗವುಳ್ಳವರಾಗಿರುತ್ತಿದ್ದರು.
ಒಟ್ಟಿನಲ್ಲಿ ಒಂದು ವರ್ಷದ ಯೋಗಾಭ್ಯಾಸವು, ನನ್ನ ಪತಿಯಲ್ಲಿ ಧನಾತ್ಮಕ ಅಂಶಗಳನ್ನು ಹೆಚ್ಚಿಸಿ, ಋಣಾತ್ಮಕ ಅಂಶಗಳನ್ನೆಲ್ಲ ಸಾಕಷ್ಟು ಕಡಮೆ ಮಾಡಿತು. ನನ್ನ ಪತಿಯು ಜೀವನವಿಡೀ ಯೋಗವನ್ನು ಆಶ್ರಯಿಸುತ್ತಾರೆ ಎಂಬುದು ನಿಸ್ಸಂದೇಹ.”
ನನ್ನ ಯೋಗದ ಪ್ರಯಾಣಕ್ಕೆ ಮುಖ್ಯ ಬೆನ್ನೆಲುಬು ನನ್ನ ಗುರುಗಳು. ಅವರ ಸಹಕಾರವಿಲ್ಲದೆ ಹೋಗಿದ್ದರೆ ನನ್ನ ಕಾರ್ಯ ಅಪೂರ್ಣವಾಗಿಯೇ ಉಳಿಯುತ್ತಿತ್ತು. ಅವರು ಕಾಲಕಾಲಕ್ಕೆ ನನ್ನಲ್ಲಿನ ಬದಲಾವಣೆಗಳನ್ನು ನೋಡಿ ಡೈರಿಯಲ್ಲಿ ತಮ್ಮ ಅನಿಸಿಕೆಗಳನ್ನು, ಕೆಲವು ಸೂಚನೆಗಳನ್ನು ಬರೆಯುತ್ತಿದ್ದರು. ಅವರು ಬರೆದ ಕೆಲವು ವಾಕ್ಯಗಳು ಹೀಗಿದ್ದವು –
- ನಿನ್ನ ಗುರುಗಳಿಗೆ ನಿನ್ನಲ್ಲಿ ನಂಬಿಕೆಯಿದೆ.
- ನ್ಯಾಯ-ಅನ್ಯಾಯಗಳು ಸಾಪೇಕ್ಷವಾಗಿವೆ. ಅವು ಬದಲಾಗುತ್ತವೆ.
- ಗುರಿಯಿಲ್ಲದ ಬದುಕು ವ್ಯರ್ಥ. ನೀನು ಮಾಡಿದ ಸಂಕಲ್ಪಗಳನ್ನು ಮರೆಯಬೇಡ.
- ನಂಬಿಕೆಯಿದ್ದಲ್ಲಿ ಸಂದೇಹ ಇದ್ದೇ ಇರುತ್ತದೆ. ಆದರೆ ಸರಿಯಾದ ತಿಳಿವಳಿಕೆ ಜಾಗೃತಿ ಮೂಡಿಸುತ್ತದೆ.
- ಸಾಧನೆಯೆಂದರೆ ಎಲ್ಲವನ್ನೂ ಪರೀಕ್ಷಿಸಿ ನೋಡಿ ಸತ್ಯವನ್ನು ತಿಳಿಯುವುದು. ನಮಗೆ ಕಾಣುವುದೇ ಸತ್ಯವಲ್ಲ.
- ತಾಳ್ಮೆಯಿಂದಿರು. ಇನ್ನೂ ಅಡಿಪಾಯ ಭದ್ರವಾಗಿಲ್ಲ. ಸಮಾಧಾನದಿಂದಿರು.
- ಅತಿಯಾದ ಅಪೇಕ್ಷೆಗಳು ಇರಬಾರದು. ಅಪೇಕ್ಷಿಸಿದ್ದು ಸಿಗಲಿಲ್ಲವೆಂದರೆ ಮನಸ್ಸು ಪ್ರಕ್ಷುಬ್ಧವಾಗುತ್ತದೆ.
- ಗಂಡ-ಹೆಂಡತಿ ಹಾರಾಡುವ ಪಕ್ಷಿಗಳಂತೆ. ಎರಡನ್ನೂ ಗಟ್ಟಿಯಾಗಿ ಕಟ್ಟಿದರೆ ಎರಡೂ ಹಾರಲು ಸಾಧ್ಯವಿಲ್ಲ.
- ಜೀವನದ ಜವಾಬ್ದಾರಿಯನ್ನು ನೀನೇ ಪೂರ್ಣ ತೆಗೆದುಕೋ, ಅಥವಾ ಪೂರ್ಣ ದೇವರಿಗೆ ಬಿಡು. ದುಃಖವೆಂದರೆ ಸ್ವಾತಂತ್ರ್ಯದ ಮರೆವು.
- ಸ್ವಾತಂತ್ರ್ಯವೆಂದರೆ ತನ್ನ ಆವಶ್ಯಕತೆಗಳನ್ನು ತಾನೇ ಪೂರೈಸಿಕೊಳ್ಳುವುದು. ಅಂತಹ ಪುರುಷರು ಬೇರೆಯವರಿಂದ ಏನನ್ನೂ ನಿರೀಕ್ಷಿಸುವುದಿಲ್ಲ.
- ಅನೇಕರು ದೇವರ ಮೇಲೆಯೇ ಎಲ್ಲವೂ ನಿಂತಿದೆ ಎನ್ನುವ ರೀತಿಯಲ್ಲಿ ಅವನನ್ನು ಪೂಜಿಸುತ್ತಾರೆ, ಆದರೆ ತಾವೇ ಎಲ್ಲದಕ್ಕೂ ಕಾರಣ ಎಂಬಂತೆ ವರ್ತಿಸುತ್ತಾರೆ.
- ಸೋಲೇ ಭಕ್ತಿಯ ಸೋಪಾನ. ಸದಾ ಗೆಲ್ಲುವವನಿಗೆ ಈ ಭಾವ ಸಾಧ್ಯವಿಲ್ಲ.
- ಆತ್ಮಾಭಿಮಾನವಿಲ್ಲದ ವ್ಯಕ್ತಿಗೆ ಅವಮಾನದ ಅರಿವೇ ಇರುವುದಿಲ್ಲ. ದಿನಕ್ಕೊಮ್ಮೆ ಅವಮಾನವಾಗುತ್ತಿರಬೇಕು.
- ನೀನು ಜಗತ್ತಿಗೆ ಏನನ್ನು ಕೊಡುತ್ತಿಯೋ ಅದನ್ನು ನೀನು ಗಳಿಸುತ್ತೀ.
- ಶ್ರದ್ಧೆಯೆಂದರೆ ನಾವು ಅಂದುಕೊಂಡಿದ್ದು ಆಗುವುದಲ್ಲ. ಬದಲಿಗೆ ಆಗುತ್ತಿರುವುದು ಮತ್ತು ಆಗಿ ಹೋಗಿರುವುದು – ಇವುಗಳಲ್ಲಿನ ನಂಬಿಕೆ. ಬಂದದ್ದನ್ನು ಸ್ವೀಕರಿಸುವ ಈ ಶ್ರದ್ಧೆ ಕೆಲವರಲ್ಲಿ ಮಾತ್ರವೇ ಇರುತ್ತದೆ.
ಯೋಗದ ಬಗೆಗೆ ಹೇಳಲು ಒಂದು ವರ್ಷದ ಅಭ್ಯಾಸ ಅಲ್ಪವೇ. ಆದರೂ ನನ್ನ ಕೆಲವು ಅನುಭವಗಳು ನನಗೆ ಮುದ ನೀಡುತ್ತಿದ್ದವು. ಮುಖ್ಯವಾಗಿ ಯೋಗದ ಉಪಯೋಗ ಜಾಗೃತಿ. ನಮ್ಮ ದೇಹದ ಬಗ್ಗೆ, ಅಂಗಗಳ ಬಗ್ಗೆ, ಸುತ್ತಲಿನ ಜಗತ್ತಿನ ಬಗ್ಗೆ ಒಂದು ಜಾಗೃತಭಾವ ಯೋಗದಿಂದ ಲಭಿಸುತ್ತದೆ. ಇದರಿಂದ ನಮ್ಮನ್ನು ನಾವೇ ಅರಿತುಕೊಳ್ಳಲು ಸಹಾಯವಾಗುತ್ತದೆ.
ಯೋಗಾಭ್ಯಾಸದಿಂದ ನನ್ನೊಳಗಿನ ಒಳ್ಳೆಯ ಮತ್ತು ಕೆಟ್ಟ ಗುಣಗಳೂ ಅರಿವಾಗತೊಡಗಿದವು. ಇದು ಮೊದಲಿಗೆ ಸ್ವಲ್ಪ ಕಿರಿಕಿರಿ ಅನಿಸಿದರೂ ಕ್ರಮೇಣ ಶಾಂತತೆಗೆ ದಾರಿಮಾಡಿತು. ಯೋಗವು ಒಳಗಿನ ಮತ್ತು ಹೊರಗಿನ ಪ್ರಪಂಚವನ್ನು ಯಥಾರ್ಥವಾಗಿ ಸ್ವೀಕರಿಸುವ ಗಟ್ಟಿಮನಸ್ಸನ್ನು ತಯಾರುಮಾಡುತ್ತದೆ. ತನ್ಮೂಲಕ ಆತ್ಮವಿಶ್ವಾಸ ಹೆಚ್ಚುತ್ತದೆ.
ಯೋಗದಿಂದ ಉಂಟಾಗುವ ನೆಮ್ಮದಿಯು ನಮ್ಮನ್ನು ಹೆಚ್ಚು ಉತ್ಸಾಹವಂತರನ್ನಾಗಿ ಮಾಡುತ್ತದೆ. ಅದರಿಂದ ಕೆಲಸದ ಒತ್ತಡ ಮತ್ತು ದೈಹಿಕ ಶ್ರಮ ನಮ್ಮನ್ನು ಬಾಧಿಸುವುದಿಲ್ಲ. ಈ ಕಾರಣಗಳಿಂದ ನನ್ನ ನಿದ್ರಾಸಮಯ ೪-೫ ಗಂಟೆಗಳಿಗೆ ಸೀಮೀತವಾಯಿತು ಮತ್ತು ದೇಹದ ತೂಕ ೧-೧೫ ಪೌಂಡ್ಗಳಷ್ಟು ಕಡಮೆಯಾಯಿತು.
ವರ್ತಮಾನದ ಬಗ್ಗೆ ಹೆಚ್ಚು ಪ್ರಾಮುಖ್ಯ ಕೊಡುವುದರಿಂದ ನಮ್ಮ ಚೈತನ್ಯಶಕ್ತಿ ವೃದ್ಧಿಯಾಗುತ್ತದೆ, ಮತ್ತು ಇಲ್ಲಿಯವರೆಗೂ ಗಮನ ಕೊಡದ ಅಂಶಗಳು ಅನುಭವಕ್ಕೆ ಬರುತ್ತವೆ. ಈ ತರಹದ ಗ್ರಹಿಕೆಗಳು ಅದ್ಭುತ ಅನುಭೂತಿಯನ್ನು ಸೃಷ್ಟಿಸುತ್ತವೆ. ಎಲ್ಲವನ್ನೂ ಇದ್ದಂತೆ ಸ್ವೀಕರಿಸುವ ಮನೋಭಾವವು ಈಶ್ವರನಲ್ಲಿ ಇಡೀ ಜಗತ್ತನ್ನು ಸಮರ್ಪಿಸುವಂತೆ ಮಾಡುತ್ತದೆ. ಇದರಿಂದ ಎಲ್ಲ ಘಟನೆಗಳೊಂದಿಗೆ ಶಾಂತವಾಗಿ ವ್ಯವಹರಿಸುವ ಮನೋಬಲ ಮತ್ತು ವಿಶ್ವಾಸ ಬೆಳೆಯುತ್ತದೆ.
ನನ್ನ ಅನುಭವಗಳು, ಯೋಗಸೂತ್ರಗಳು ಹೇಳಿರುವ ಅಂಶಗಳಲ್ಲಿ ಕೇವಲ ಪ್ರಾರಂಭಿಕವಷ್ಟೇ. ಒಂದು ವರ್ಷದ ಅವಧಿಯಲ್ಲಿ ನಾನು ಕೇವಲ ನನ್ನ ಕೆಲವು ವಿಕ್ಷೇಪಗಳನ್ನು ಪರಿಹರಿಸಿಕೊಳ್ಳಲು ಶಕ್ತನಾದೆ. ಆದರೆ ಯೋಗವು ಹೇಳುವ ಸಮಾಧಿಸ್ಥಿತಿಯ, ವಿಶೇಷ ಶಕ್ತಿಗಳ ಅನುಭವ ನನಗಾಗಲಿಲ್ಲ. ಒಂದು ವರ್ಷದ ಅನುಭವಗಳನ್ನು ನನ್ನ ರೋಗಿಗಳ ಚಿಕಿತ್ಸೆಗಾಗಿ ಉಪಯೋಗಿಸಬಹುದೇ ಎಂಬ ವಿಚಾರ ನನ್ನಲ್ಲಿತ್ತು. ಆದರೆ ಅವನ್ನೆಲ್ಲ ತಾತ್ಕಾಲಿಕವಾಗಿ ಮಾಡಿದ್ದರಿಂದ, ಇನ್ನೂ ಹೆಚ್ಚಿನ ಪ್ರಯೋಗ ಆಗಬೇಕೆಂದೆನಿಸಿತು. ಆದರೂ ಯೋಗವು ಆತ್ಮದ ಅರಿವಿಗೆ ಪುಷ್ಟಿಕೊಡುವುದರಿಂದ ಅದರ ಮೂಲಕ ವ್ಯಕ್ತಿಯು ತನ್ನ ಮನಸ್ಸನ್ನು ತಾನೇ ಅವಲೋಕಿಸಿ ಅದನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಯೋಗದ ನಿಜವಾದ ಗುರಿಯು ಮೋಕ್ಷ. ಆದರೆ ವೈರಾಗ್ಯದ ಮನೋಭಾವವು ಸಾಮಾನ್ಯರಿಗೆ ಕಷ್ಟ. ಆದರೂ ನಿರಂತರವಾದ ಅಭ್ಯಾಸದಿಂದ, ಯಮ-ನಿಯಮಗಳ ಪಾಲನೆಯಿಂದ ಈ ಹಾದಿಯಲ್ಲಿ ಮುಂದುವರಿಯಬಹುದು. ನನ್ನ ಪ್ರಯೋಗಕ್ಕೆ ಮಿತಿಗಳಿದ್ದರೂ, ಅಭ್ಯಾಸ ಮಾಡಲು ಬೇಕಾದ ಜ್ಞಾನದ ಅಡಿಪಾಯವನ್ನು ಹಾಕಿಕೊಟ್ಟಿತು. ಇನ್ನು ಮುಂದೆ, ಸಾಧುಗಳ ಭೇಟಿ ನನ್ನ ಪ್ರಮುಖ ಗುರಿಯಾಯಿತು.
ಭಾಗ-೨
ಸಾಧುಗಳ ಭೇಟಿ
ಉದ್ದೇಶ ಮತ್ತು ಸ್ಥಳ
ಸಂನ್ಯಾಸಿಗಳು ಹೇಳುವಂತಹ ಆಧ್ಯಾತ್ಮಿಕ ಅನುಭವದ ಸ್ಥಿತಿಯು ನಿಜವೋ ಸುಳ್ಳೋ ಎಂಬುದು ನನ್ನನ್ನು ಕಾಡುವ ಪ್ರಶ್ನೆಯಾಗಿತ್ತು. ಸಂನ್ಯಾಸಿಗಳು ತಮ್ಮದೇ ಆದ ಒಂದು ಜೀವನಕ್ರಮವನ್ನಿಟ್ಟುಕೊಂಡಿರುತ್ತಾರೆ. ಅದರ ಅನುಭವವನ್ನೂ ತಿಳಿಯಬೇಕೆಂದು ನಾನು ಬಯಸಿದ್ದೆ. ಜೊತೆಗೆ ಸಾಧುಗಳ ಸಿದ್ಧಿಗಳು, ವಿಶೇಷ ಶಕ್ತಿಗಳ ಬಗ್ಗೆಯೂ ತಿಳಿಯುವ ಕುತೂಹಲವಿತ್ತು. ಪಾತಂಜಲ ಯೋಗಸೂತ್ರಗಳಲ್ಲೇ ಈ ತರಹದ ಸಿದ್ಧಿಗಳ ವರ್ಣನೆಯಿದೆ. ಇದರ ಸತ್ಯಾಸತ್ಯತೆ ನನ್ನನ್ನು ಕಾಡುತ್ತಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಸಾಧು-ಸಂನ್ಯಾಸಿಗಳು ಮಾನಸಿಕ ರೋಗಿಗಳಿಗೆ ಹೇಗೆ ಚಿಕಿತ್ಸಕರಾಗಿ ಕಾರ್ಯಮಾಡುತ್ತಾರೆ ಎಂಬುದು ನನ್ನ ಆಸಕ್ತಿಯಾಗಿತ್ತು. ಸಂನ್ಯಾಸಿಗಳಿಂದ ಮತ್ತಾವ ಹೊಸ ವಿಷಯಗಳನ್ನು ತಿಳಿಯಬಹುದು ಎಂಬುದೂ ಈ ಸಂಶೋಧನೆಯ ಉದ್ದೇಶಗಳಲ್ಲಿ ಸೇರಿತ್ತು.
ಹಿಂದುಧರ್ಮದ ಜೀವನಕ್ರಮದಲ್ಲಿ ೪ ಘಟ್ಟಗಳಿವೆ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸಂನ್ಯಾಸ. ಮದುವೆಯಾಗಿ ಮಕ್ಕಳನ್ನು ಬೆಳೆಸಿದ ಮೇಲೆ ಕಾಡಿಗೆ ಹೋಗಿ ಅಲ್ಲಿ ಗುಡಿಸಲಲ್ಲಿ ವಾಸಿಸುವುದು ವಾನಪ್ರಸ್ಥ. ತದನಂತರ ಎಲ್ಲ ಸಾಂಸಾರಿಕ ಇಚ್ಛೆಗಳನ್ನು ತ್ಯಜಿಸಿ ಪಾರಮಾರ್ಥಿಕವಾದ ಮೋಕ್ಷಕ್ಕಾಗಿ ಸಾಧನೆ ಮಾಡುವುದು ಸಂನ್ಯಾಸ.
ಯಾತ್ರಾಸ್ಥಳಗಳ ಮಹಾಸಂಗಮವಾದ ಹಿಮಾಲಯದಲ್ಲಿ ನಾನು ನೂರಾರು ಸಾಧುಗಳನ್ನು, ಕೆಲವು ಸ್ತ್ರೀಸಾಧುಗಳನ್ನೂ ಸಂದರ್ಶಿಸಿದೆ. ಬಹುತೇಕ ಮಂದಿ ಹಿಂದೆ ಹೇಳಿದ ಜೀವನಕ್ರಮದಲ್ಲಿಯೇ ಬದುಕು ಸವೆಸಿ ಸಂನ್ಯಾಸಿಗಳಾಗಿದ್ದರು. ಇನ್ನು ಕೆಲವರು ತಾರುಣ್ಯದಲ್ಲೇ ಸಂನ್ಯಾಸಿಯಾಗಿದ್ದರು. ಇವರೆಲ್ಲಾ ಸಂನ್ಯಾಸವನ್ನು ಹೇಗೆ ಮತ್ತು ಏತಕ್ಕಾಗಿ ಆಯ್ದುಕೊಂಡರು ಎಂಬುದನ್ನು ತಿಳಿಯುವುದು ನನ್ನ ಆಸಕ್ತಿಯಾಗಿತ್ತು.
ವಸ್ತುತಃ ಸಾಧು-ಸಂನ್ಯಾಸಿ ಈ ಎರಡೂ ಪದಗಳನ್ನು ಸಮಾನಾರ್ಥದಲ್ಲಿ ಬಳಸಿದರೂ, ಎರಡರ ಮಧ್ಯೆ ವ್ಯತ್ಯಾಸವಿದೆ. ಗುರುಗಳಿಂದ ದೀಕ್ಷೆಪಡೆದು ತಮ್ಮ ಪರಂಪರೆಯ ಆಚರಣೆಗಳನ್ನು ನಡೆಸುವವರು ಸಂನ್ಯಾಸಿಗಳು. ಇವರಿಗೆ ಕುಟುಂಬದವರ ಯಾವ ಸಂಬಂಧವೂ ಇರುವುದಿಲ್ಲ. ಹಣಕ್ಕಾಗಿ ಅಪೇಕ್ಷೆ ಪಡದೆ ಅಲೆಮಾರಿಗಳಾಗಿ ತಮ್ಮ ಬದುಕಿನ ಆವಶ್ಯಕತೆಗಳಿಗೆ ಬೇರೆಯವರ ಮೇಲೆ ಅವಲಂಬಿತರಾಗಿರುತ್ತಾರೆ. ಆದರೆ ಕೆಲವು ವ್ಯತಿರಿಕ್ತ ಉದಾಹರಣೆಗಳೂ ಸಿಗುತ್ತವೆ. ಕೆಲವು ಸಾಧು-ಸಂನ್ಯಾಸಿಗಳಿಗೆ ಆದಾಯವಿರುತ್ತದೆ. ಭೂಮಿ-ಜಮೀನು ಇರುತ್ತದೆ. ಆದರೆ ಅದನ್ನು ಸಮಾಜದ ಉಪಯೋಗಕ್ಕಾಗಿ ಬಳಸುತ್ತೇವೆಂದು ಹೇಳುತ್ತಾರೆ. ಕೆಲವರು ಯಾವ ದೀಕ್ಷೆಯನ್ನೂ ಪಡೆಯದೆ ಶಿವನನ್ನೇ ಸಾಕ್ಷಾತ್ ಗುರುವೆಂದು ಹೇಳಿಕೊಳ್ಳುತ್ತಾರೆ.
ಸಂನ್ಯಾಸಕ್ಕೆ ಭಾರತೀಯ ನಾಗರಿಕತೆಯಲ್ಲಿ ಪ್ರಾಚೀನ ಇತಿಹಾಸವಿದೆ. ಹರಪ್ಪ ನಾಗರಿಕತೆಯ ಕೆಲವು ಕುರುಹುಗಳು ಇದನ್ನು ಸಮರ್ಥಿಸುತ್ತವೆ. ಅಲ್ಲದೆ ವೇದ – ಉಪನಿಷತ್ತುಗಳು, ರಾಮಾಯಣಾದಿ ಗ್ರಂಥಗಳಲ್ಲಿ ಸಂನ್ಯಾಸ ಜೀವನದ ವಿವರಣೆ ಸಿಗುತ್ತದೆ. ಸಂನ್ಯಾಸಿಗಳಲ್ಲಿ ಮೂರು ಮುಖ್ಯ ಪಂಗಡಗಳಿವೆ: ವೈಷ್ಣವ, ಶೈವ ಮತ್ತು ಶಾಕ್ತ. ವೈಷ್ಣವರು ವಿಷ್ಣುವಿನ ಆರಾಧಕರು, ಶೈವರು ಶಿವನ ಆರಾಧಕರು, ಶಾಕ್ತರು ಶಕ್ತಿದೇವತೆಯ ಆರಾಧಕರು. ಎಲ್ಲರೂ ತಮ್ಮದೇ ಆದ ಆಚರಣೆ ಮತ್ತು ಸಂಪ್ರದಾಯಗಳನ್ನು ಹೊಂದಿದ್ದಾರೆ. ಶೈವರಲ್ಲಿನ ‘ದಶನಾಮಿ’ ಪಂಥವು ಶ್ರೀಶಂಕರಾಚಾರ್ಯರಿಂದ ಆರಂಭವಾಯಿತು. ಗಿರಿ, ಪರಿ, ಭಾರತಿ, ವನ, ಪರ್ವತ, ಅರಣ್ಯ, ಸಾಗರ, ತೀರ್ಥ, ಆಶ್ರಮ ಮತ್ತು ಸರಸ್ವತಿ – ಇವು ಈ ಪಂಥದ ಹತ್ತು ವಿಭಾಗಗಳು. ಆಯಾ ವಿಭಾಗದ ಸಾಧುಗಳು ತಮ್ಮ ಹೆಸರಿನ ಮುಂದೆ ಈ ಉಪಪದಗಳನ್ನು ಜೋಡಿಸಿಕೊಳ್ಳುತ್ತಾರೆ. ವೈಷ್ಣವ ಸಂಪ್ರದಾಯವು ಶ್ರೀರಾಮಾನುಜಾಚಾರ್ಯರಿಂದ ಕ್ರಿ.ಶ. ೧೦೦೦ದಲ್ಲಿ ಆರಂಭವಾಯಿತು.
ಸ್ವಾಮಿ ರಮಾನಂದರಿಂದ ಆರಂಭವಾದ ರಮಾನಂದಿ ಪಂಥವು, ಸ್ತ್ರೀಯರಿಗೆ ಮತ್ತು ಕೆಳಜಾತಿಯವರಿಗೆ ಸಂನ್ಯಾಸದೀಕ್ಷೆ ನೀಡಿಕೆಯನ್ನು ಸಮ್ಮತಿಸಿತು. ತುಳಸೀದಾಸರು, ಕಬೀರರು ಈ ಪಂಥಕ್ಕೆ ಸೇರಿದವರು. ವೈಷ್ಣವ, ಶೈವ ಸಂಪ್ರದಾಯಗಳೆರಡರಲ್ಲೂ ಸಾಧುಗಳನ್ನು ರಕ್ಷಿಸುವ ‘ನಾಗಾ’ ಸಾಧುಗಳ ಗುಂಪಿದೆ. ಅವರು ಅಖಾಡಾಗಳಲ್ಲಿ ವಾಸಮಾಡುತ್ತಾರೆ. ಕೆಲವರು ನಗ್ನರಾಗಿಯೂ, ಇನ್ನು ಕೆಲವರು ವಸ್ತ್ರಧಾರಿಗಳಾಗಿಯೂ ಇರುವರು. ಸದಾ ಆಕ್ರಮಣಶೀಲರಾಗಿರುವುದು ಇವರ ವೈಶಿಷ್ಟ್ಯ.
ಹೃಷಿಕೇಶದಲ್ಲಿ ಅನೇಕ ಸಾಧುಗಳನ್ನು ಭೇಟಿ ಮಾಡಿದೆ. ಇನ್ನು ಕೆಲವರನ್ನು ಹಿಮಾಲಯದಲ್ಲಿ ಸಂಚರಿಸುವಾಗ ಮಾರ್ಗಮಧ್ಯೆ ಸಂದರ್ಶಿಸಿದೆ. ಕೆಲವರು ಮಾತನಾಡಲು ಹಿಂಜರಿದರೂ ಬಹುತೇಕ ಎಲ್ಲರೂ ನಮಗೆ ಸಹಕಾರ ನೀಡಿದರು. ಅವರ ಆಶ್ರಮಗಳಲ್ಲಿ ವಿಶೇಷ ಆತಿಥ್ಯ ನೀಡಿದರು. ಅವರನ್ನು ಸಂದರ್ಶಿಸುವಾಗ ಕೆಲವು ಅಂಶಗಳನ್ನು ವಿಚಾರಿಸಲು ತಯಾರಾದೆ.
- ಅವರ ಬಾಲ್ಯ, ಕುಟುಂಬ ಮತ್ತು ಜೀವನದಲ್ಲಿ ನಡೆದು ಬಂದ ಹಾದಿ
- ಅಧ್ಯಾತ್ಮದ ಕಡೆ ಆಸಕ್ತಿ ಹುಟ್ಟಿದ ಬಗೆ ಮತ್ತು ಕಾರಣಗಳು
- ಸಂನ್ಯಾಸ ತೆಗೆದುಕೊಳ್ಳಲು ಕಾರಣಗಳು ಮತ್ತು ಸಂನ್ಯಾಸದ ಮೌಲ್ಯಗಳು
- ಸಂನ್ಯಾಸದೀಕ್ಷೆಯಲ್ಲಿನ ಅನುಭವಗಳು
- ಆಧ್ಯಾತ್ಮಿಕ ಅನುಭವಗಳು
- ಗುರುಗಳ ಜೊತೆಗಿನ ಒಡನಾಟಗಳು
- ಕೊನೆಯದಾಗಿ ಸಂನ್ಯಾಸದ ಬದುಕಿನ ಘಟ್ಟಗಳು. ಅವರ ಆಹಾರ ವಿಹಾರ ಮುಂತಾದವು; ಹಾಗೆಯೇ ಮನುಷ್ಯಸಹಜವಾದ ಲೈಂಗಿಕ ವಿಚಾರಗಳೂ ಚರ್ಚೆಯಲ್ಲಿದ್ದವು.
ವೇದಾಂತವನ್ನು ವ್ಯಕ್ತಿಯ ನಡವಳಿಕೆಯನ್ನು ಬದಲಿಸುವುದಕ್ಕೆ ಮಾತ್ರ ಉಪಯೋಗಿಸಿದರೆ, ಇರುವೆಯ ಮೇಲೆ ಅಣುಶಕ್ತಿಯನ್ನು ಪ್ರಯೋಗಿಸಿದಂತಾಗುತ್ತದೆ. ಆದರೂ ಪ್ರಾರಂಭಿಕ ವೇದಾಂತದ ಅಭ್ಯಾಸವು ಮನುಷ್ಯನ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆ. ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಬದುಕಿನ ನೆಮ್ಮದಿಗೆ ಬಹುಮುಖ್ಯ. ಜನರಿಗೆ ಕೆಲವು ಮೌಲ್ಯಗಳು ಮೇಲ್ಮಟ್ಟದಲ್ಲಷ್ಟೇ ಗೊತ್ತಿದೆ. ಆಳವಾಗಿ ತಿಳಿದಾಗ ಎಲ್ಲರೂ ಮೌಲ್ಯಗಳನ್ನು ರೂಢಿಸಿಕೊಳ್ಳಲು ಸಾಧ್ಯ. ಸಂನ್ಯಾಸವೆಂಬುದು ತಂತ್ರವಷ್ಟೇ. ಸಾಮಾನ್ಯವಾಗಿ ಜನರು ಯಾವುದೋ ಬಯಕೆಯಿಂದ ಕೆಲಸಮಾಡುತ್ತಾರೆ. ಆದರೆ ಕರ್ತವ್ಯಗಳಿರುವುದು ನಮ್ಮ ಆತ್ಮದ ಅರಿವಿಗೇ ಹೊರತು, ಭೌತಿಕ ಸುಖಕ್ಕಾಗಿ ಅಲ್ಲ ಎಂದು ಅರಿತರೆ ಅವನೇ ಸಂನ್ಯಾಸಿ.
ನಾವು ಸಂದರ್ಶಿಸುವ ವ್ಯಕ್ತಿಗಳ ಜೊತೆಗೆ, ಸಂದರ್ಶಿಸುವ ಸ್ಥಳವೂ ಮುಖ್ಯವಾಗುತ್ತದೆ. ಆಧ್ಯಾತ್ಮಿಕ ಪಾವಿತ್ರ್ಯ ಹೊಂದಿರುವ ಸ್ಥಳವು ಮನಸ್ಸನ್ನು ಉಲ್ಲ್ಲಾಸಗೊಳಿಸುತ್ತದೆ. ನಾನು ಸಾಧುಗಳನ್ನು ಸಂದರ್ಶಿಸಿದ್ದು ಬಹತೇಕ ಹಿಮಾಲಯ ಪ್ರದೇಶದಲ್ಲಿ ಅಲ್ಲಿ ಬೇಸಿಗೆಯ ಸಂದರ್ಭದಲ್ಲಿ ಲಕ್ಷಾಂತರ ಯಾತ್ರಿಕರು ಗಂಗೋತ್ರಿ, ಬದರಿ, ಹೃಷಿಕೇಶಕ್ಕೆ ಬರುತ್ತಾರೆ. ಅದರಲ್ಲಿ ಅರ್ಧದಷ್ಟು ಜನ ಸಾಧುಗಳೇ ಇರುತ್ತಾರೆ.
ನನ್ನ ಮೊದಲ ಭೇಟಿ ಹೃಷಿಕೇಶದಿಂದ ಆರಂಭವಾಯಿತು. ಅಲ್ಲಿಂದ ಗಂಗೋತ್ರಿಗೆ ಹೋಗುವ ಮಾರ್ಗ ರಮಣೀಯವಾಗಿದೆ. ಅಲ್ಲಿಯ ಶೀತವಾತಾವರಣಕ್ಕೆ ನನ್ನ ಆರೋಗ್ಯ ಸ್ವಲ್ಪ ಬಿಗಡಾಯಿಸಿತು. ಗಂಗೋತ್ರಿಯ ಮುಖ್ಯ ಆಕರ್ಷಣೆ ಗಂಗೆಯ ದೇಗುಲ. ಅಲ್ಲಿಯ ಅಂಗಡಿಗಳಲ್ಲಿ ಪ್ರಸಾದ, ಬೆಲೆಬಾಳುವ ಹರಳು, ಆಭರಣಗಳನ್ನು ಮಾರುತ್ತಾರೆ. ಗಂಗೆಯ ತಟದಲ್ಲಿ ಅನೇಕ ಸಾಧುಗಳು ಮಿಂದು ಜಪ ಮಾಡುತ್ತಿದ್ದರು. ಜೊತೆಗೆ ವಿಚಿತ್ರವಾದ ಆಚರಣೆ ಮಾಡುವ ಸಾಧುಗಳೂ ಇದ್ದರು. ಒಬ್ಬ ಸಾಧು ಒಂದೇ ಕಾಲಿನ ಮೇಲೆ ನಿಂತಿದ್ದರೆ, ಇನ್ನೊಬ್ಬರು ಒಮ್ಮೆ ಮಾತ್ರ ಊಟ ಮಾಡುವ ನಿಯಮವನ್ನಿಟ್ಟುಕೊಂಡಿದ್ದರು.
ನಮಗೆ ಉಳಿದುಕೊಳ್ಳಲು ಯೋಗಾಶ್ರಮವೆಂಬ ಸ್ಥಳ ಸಿಕ್ಕಿತು. ಇಲ್ಲಿ ಊಟ ಉಪಾಹಾರದ ವ್ಯವಸ್ಥೆಯಾಗಿತ್ತು. ಅಲ್ಲಿ ‘ಫಲಾಹಾರ ಬಾಬಾ’ ಎನ್ನುವವರ ಭೇಟಿಯಾಯಿತು. ಕೇವಲ ಹಣ್ಣುಗಳನ್ನು ತಿಂದೇ ಅವರು ೧೦೦ ವರ್ಷ ಬದುಕಿದ್ದರು. ಸದಾ ರಾಮಜಪ ಮಾಡುತ್ತಿದ್ದ ಅವರು ರಾಮಮಂತ್ರವೇ ತಮಗೆ ಶಕ್ತಿ ಎಂದು ಹೇಳಿದರು. ಅಲ್ಲಿದ್ದ ಇನ್ನೊಬ್ಬ ವ್ಯಕ್ತಿಯು ಮುಂಬಯಿಯವರಾಗಿದ್ದು ಅಲ್ಲಿನ ವ್ಯಾಪಾರೀಕರಣದ ಜನರಿಂದ ಬೇಸತ್ತು ಹಿಮಾಲಯಕ್ಕೆ ಬಂದಿದ್ದರು.
ಗಂಗೋತ್ರಿಯೇ ಗಂಗೆಯ ಮೂಲವಲ್ಲ. ಅದು ಇನ್ನೂ ೨೨ ಕಿ.ಮೀ. ದೂರದ ಗೌಮುಖದಲ್ಲಿದೆ. ನಾವು ಅಲ್ಲಿಗೆ ಹೋಗಲು ನಿರ್ಧರಿಸಿದೆವು. ನೇಪಾಳದ ಮಾಗದರ್ಶಿ ಒಬ್ಬ ನಮ್ಮನ್ನು ಕರೆದುಕೊಂಡು ಕಡಿದಾದ ದಾರಿಯಲ್ಲಿ ಹೊರಟ. ಸುತ್ತಮುತ್ತಲಿನ ಗಿಡಬಳ್ಳಿಗಳು, ಹೂವುಗಳು ಆನಂದ ನೀಡುತ್ತಿದ್ದರೂ, ಕೊರೆಯುವ ಚಳಿಗಾಳಿ ತೊಂದರೆ ನೀಡುತ್ತಿತ್ತು. ಮಧ್ಯೆ ‘ಭೋಜ್ಪಾಸ್’ ಎಂಬ ಪ್ರದೇಶದಲ್ಲಿ ಆಶ್ರಮವೊಂದರಲ್ಲಿ ಸ್ವಲ್ಪ ವಿಶ್ರಾಂತಿ ಪಡೆದೆವು. ಅಲ್ಲಿನ ಬಾಬಾ ಒತ್ತಾಯಪರ್ವಕವಾಗಿ ಊಟ ಮಾಡಿಸಿ ಸತ್ಕರಿಸಿದರು. ಅಲ್ಲಿಂದ ಮೇಲೆ ೫ ಕಿ.ಮೀ. ಅಂತರದಲ್ಲಿ `ತಪೋವನ’ವಿತ್ತು. ಕೇವಲ ೫ ಕಿ.ಮೀ. ಎಂಬ ಭಾವನೆಯಿಂದ ಹೊರಟ ನಮಗೆ ಜಾರಿಕೆಯಿಂದ ಕಲ್ಲು ಬಂಡೆಗಳ ಆ ದಾರಿಯಲ್ಲಿ ಸಾಗಲು ಎರಡು ಮೂರು ಗಂಟೆಗಳ ಸಮಯ ಬೇಕಾಯಿತು. ಆ ಕಷ್ಟಕರ ಪ್ರಯಾಣದ ನಂತರ, ಶಿಮ್ಲಾ ಬಾಬಾರ ಆಶ್ರಮ ತಲಪಿದೆವು.
ತಪೆವನವು ಪರ್ವತದ ಮೇಲೆ ಸಮತಟ್ಟಾದ, ಹುಲ್ಲುಗಾವಲಿನ ಪ್ರದೇಶ. ಸುಮಾರು ಒಂದು ಫಟ್ಬಾಲ್ ಮೈದಾನದಷ್ಟು ವಿಸ್ತಾರವಾಗಿದೆ. ಶಿವಲಿಂಗ ಪರ್ವತದ ತಪ್ಪಲಲ್ಲಿದೆ. ಇಲ್ಲಿ ಗಂಗೆಯು ಸಣ್ಣ ಕಾಲುವೆಯಂತೆ ಹರಿಯುತ್ತಾಳೆ. ೧೨,೦೦೦ ಅಡಿಯ ಪ್ರದೇಶದಿಂದ ೧೫,೦೦೦ ಅಡಿಯ ಎತ್ತರಕ್ಕೆ ಹೋಗಿದ್ದರಿಂದ ಬಹಳ ಆಯಾಸವಾಗಿ ಆರೋಗ್ಯ ಹದಗೆಟ್ಟಿತ್ತು. ಶಿಮ್ಲಾ ಬಾಬಾ ನಮಗೆ ಚಹಾ ಮಾಡಿಕೊಟ್ಟು, ಊಟ ನೀಡಿದರು. ನಾವು ಅಲ್ಲೇ ಒಂದು ಕೊಠಡಿಯಲ್ಲಿ ವಿಶ್ರಾಂತಿ ಪಡೆದೆವು.
ಶಿಮ್ಲಾ ಬಾಬಾ, ಅಂತಹ ಪರ್ವತದಲ್ಲಿಯೂ ಕೇವಲ ಲುಂಗಿಯಂತಹ ವಸ್ತ್ರವನ್ನು ಮಾತ್ರ ಧರಿಸಿದ್ದರು. ಅಲ್ಲಿದ್ದ ಇನ್ನೊಬ್ಬ ಸಾಧುವು ಬರಿಗಾಲಲ್ಲಿ ಇಡೀ ಹಿಮಾಲಯ ಸಂಚಾರ ಮಾಡಿದ್ದರು. ಸುತ್ತಲೂ ಜನರನ್ನು ಸೇರಿಸಿ, ಮಧ್ಯೆ ಕಾಯಿಸಿಕೊಳ್ಳಲು ಬೆಂಕಿಹಾಕಿ ಆ ಸಾಧುವು ಮಾತನಾಡುತ್ತಿದ್ದರು. ನಮ್ಮನ್ನೂ ಅಲ್ಲಿಗೆ ಆಹ್ವಾನಿಸಿದರು. ಸಭಿಕನೊಬ್ಬ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಬ್ರಹ್ಮರಾಕ್ಷಸನನ್ನು ಪಳಗಿಸುವ ಬಗ್ಗೆ ಹೇಳಿದರು. ನಲವತ್ತು ದಿನಗಳ ಕಾಲ ಕೆಲವು ನಿಯಮಗಳನ್ನು ಪಾಲಿಸಿ, ಅಮಾವಾಸ್ಯೆಯ ದಿನ ಸ್ಮಶಾನಕ್ಕೆ ಹೋಗಿ ಆಲದ ಮರವನ್ನೇರಿ ಮಧ್ಯರಾತ್ರಿಯಲ್ಲಿ, ನಾನು ಹೇಳಿಕೊಟ್ಟ ಮಂತ್ರನ್ನು ಹೇಳಿದರೆ ಬ್ರಹ್ಮರಾಕ್ಷಸ ನಿಮ್ಮ ಕೈವಶವಾಗುತ್ತಾನೆ…. ಎಂದೆಲ್ಲ ವಿವರಿಸುವಾಗ ರೂಮಿನಲ್ಲಿ ಹೊಗೆಯು ದಟ್ಟವಾಗಿ ನಾವು ಹೊರಗೆ ಬಂದೆವು. ಮರಳಿ ಶಿಮ್ಲಾ ಬಾಬಾರ ಆಶ್ರಮಕ್ಕೆ ಬಂದಾಗ ಅವರು ಮತ್ತೆ ನಗುತ್ತಾ ನಮಗೆ ಬಿಸಿ ರೋಟಿ-ದಾಲ್ ನೀಡಿ ಉಪಚರಿಸಿದರು. ಬಾಬಾ, ನಿಮಗೆ ಒಬ್ಬರೇ ಇದ್ದು ಬೇಸರ ಬರುವುದಿಲ್ಲವೆ? ಎಂದು ಕೇಳಿದೆ. ಅವರು ಅಷ್ಟೇ ಮೃದುವಾಗಿ ನಾನು ಒಬ್ಬನೇ ಇದ್ದಾಗ ಧ್ಯಾನ ಮಾಡುತ್ತೇನೆ. ಯಾತ್ರಿಕರು ಬಂದಾಗ ಅವರ ಸೇವೆ ಮಾಡುತ್ತೇನೆ ಎಂದು ಹೇಳಿದರು. ಶಿಮ್ಲಾ ಬಾಬಾ ಆ ಕೊರೆಯುವ ಚಳಿಯಲ್ಲಿಯೂ ಬೆಳಗ್ಗೆ ೪ ಗಂಟೆಗೆ ಎದ್ದು ಯೋಗಾಭ್ಯಾಸ ಮಾಡುತ್ತಾರೆಂದು ತಿಳಿದು ಅಚ್ಚರಿಯಾಯಿತು. ಅವರಿಗೆ ಪ್ರಿಯವೆಂದು ಒಂದಿಷ್ಟು ಸಿಗರೇಟುಗಳನ್ನು ಅವರಿಗೆ ಕೊಟ್ಟು, ಮರುದಿನ ಬೆಳಗ್ಗೆ ವಾಪಸ್ ಗಂಗೋತ್ರಿಗೆ ಹೊರಟೆವು. ಮಾರ್ಗಮಧ್ಯೆ ಮತ್ತೆ ಹಲವಾರು ಸಾಧುಗಳ ಭೇಟಿಯಾಯಿತು. ನಮ್ಮ ನೇಪಾಳಿ ಮಾರ್ಗದರ್ಶಿ ಚಂಪಕ ನಮ್ಮನ್ನು ಸುರಕ್ಷಿತವಾಗಿ ಗಂಗೋತ್ರಿಗೆ ತಲಪಿಸಿದ. ಅವನ ಲವಲವಿಕೆ, ಉತ್ಸಾಹ ನಿಜಕ್ಕೂ ಶ್ಲಾಘನೀಯ.
ಸುಮಾರು ೨೮ ವರ್ಷದ ಚಂಪಕ, ಬಹುಶಃ ನಾನು ನೋಡಿದ ಅದ್ಭುತ ಮನಶ್ಶಾಸ್ತ್ರಜ್ಞ. ಸದಾ ನಮ್ಮನ್ನೂ ಪ್ರೇರೇಪಿಸುತ್ತಾ ಪ್ರಯಾಣವು ಬೇಸರ ಬರದಂತೆ ಕರೆದುಕೊಂಡು ಹೋದ. ಅವನ ಈ ಉತ್ಸಾಹ ಮತ್ತು ಆತ್ಮವಿಶ್ವಾಸಕ್ಕೆ ಅವನು ನಂಬಿದ್ದ ಗಂಗಾಮಾತೆಯೇ ಕಾರಣಳಾಗಿದ್ದಳು.
೧೯೮೮ರಲ್ಲಿ ಮತ್ತೊಮ್ಮೆ ಕೆನಡಾದ ಸಹಚರರೊಂದಿಗೆ ಗಂಗೋತ್ರಿಗೆ ಹೋದೆ. ಅವರ ಸಂಶೋಧನೆ ಸಂನ್ಯಾಸಿಗಳ ಕುರಿತಾಗಿತ್ತು. ವ್ಯಕ್ತಿಗಳು ತಮ್ಮ ವಿಭಿನ್ನ ಮಾನಸಿಕತೆಯನ್ನು ರಕ್ಷಿಸಿಕೊಳ್ಳಲು ಸಂನ್ಯಾಸಿಗಳಾಗಿ, ಸಾಮಾನ್ಯ ಬದುಕಿಗಿಂತ ದೂರವಿರುತ್ತಾರೋ ಹೇಗೆ? – ಎಂಬುದನ್ನು ವಿಶ್ಲೇಷಿಸಲು ಅವರ ಕಾರ್ಯನಡೆದಿತ್ತು. ನಾವು ಹರಿದ್ವಾರ, ಹಷಿಕೇಶ, ಬದರಿ ಮುಂತಾದ ಕಡೆ ಸಂಚರಿಸಿ ವಿವಿಧ ರೀತಿಯ ಸಾಧು-ಸಂತರನ್ನು ಭೇಟಿಯಾದೆವು.
ಬದರಿ, ಗಂಗೋತ್ರಿಗಳಲ್ಲಿ ಹಿಂದಿನದಕ್ಕಿಂತ ಹೆಚ್ಚು ಜನಸಂದಣಿ ಇತ್ತು. ಅಲ್ಲೊಬ್ಬ ಸ್ತ್ರೀಸಾಧುವು ನಮ್ಮನ್ನು ಹತ್ತಿರದಲ್ಲಿರುವ ‘ಮಾನಾ’ ಎಂಬ ಹಳ್ಳಿಗೆ ಕೊಂಡೊಯ್ದರು. ಇದು ಟಿಬೆಟ್ ಗಡಿಭಾಗದಲ್ಲಿನ ಭಾರತದ ಕೊನೆಯ ಹಳ್ಳಿ. ಇಲ್ಲಿನ ಜನರನ್ನು ‘ಭುತಿಯಾ’ಗಳೆಂದು ಕರೆಯುತ್ತಾರೆ. ಅದರೆ ಇವರು ಭೂತಾನ್ ದೇಶದವರಲ್ಲ, ಬದಲಿಗೆ ಟಿಬೆಟ್ನವರು. ಆದರೂ ಬೌದ್ಧ ಸಂಪ್ರದಾಯಕ್ಕಿಂತ ಹೆಚ್ಚು ಹಿಂದೂ ಆಚರಣೆಗಳನ್ನೇ ಪಾಲಿಸುತ್ತಾರೆ. ಇಲ್ಲಿ ಕೆಲವು ಗುಹಾಂತರ ದೇವಾಲಯಗಳನ್ನು, ಮಹಾಭಾರತಕ್ಕೆ ಸಂಬಂಧಿಸಿದ ಕೆಲವು ಶಿಲ್ಪಗಳನ್ನು ಕಂಡೆವು. ಹತ್ತಿರದಲ್ಲೇ ಅಲಕನಂದಾ ಪ್ರವಹಿಸುವ ಶಬ್ದ ಕೇಳುತ್ತಿತ್ತು. ಜೊತೆಗಿದ್ದ ಸಂನ್ಯಾಸಿನಿ ತನ್ನ ಕಥೆ ಹೇಳಿದಳು. ಸಣ್ಣವಳಿದ್ದಾಗ ಅವಳ ಪಾಲಕರು ಅವಳನ್ನು ಒಂದು ಆಶ್ರಮಕ್ಕೆ ಒಪ್ಪಿಸಿಬಿಟ್ಟರು. ಅಲ್ಲಿ ತನ್ನ ಸೋದರತ್ತೆಯೇ ಸಂನ್ಯಾಸಿನಿಯಾಗಿದ್ದರು. ಅವರ ಜೊತೆ ಬೆಳೆದ ಹುಡುಗಿಯೂ ಧಾರ್ಮಿಕ ವಿಚಾರದಲ್ಲೇ ಆಸಕ್ತಿ ತಳೆದು ದೀಕ್ಷೆ ಪಡೆದರು. ಈಗ ಈ ಪ್ರದೇಶದಲ್ಲಿ ಅನಾಥರು, ಮಹಿಳೆಯರ ಸೇವೆ ಮಾಡುತ್ತಾ ಕಾಲಕಳೆಯುತ್ತಿದ್ದರು.
೨೦೦೦ದಲ್ಲಿ ಮೂರನೇ ಬಾರಿ ಗಂಗೋತ್ರಿಗೆ ಹೋದಾಗ, ಹಿಂದೆ ನಮ್ಮನ್ನು ಗೌಮುಖಕ್ಕೆ ಕರೆದುಕೊಂಡುಹೋಗಿದ್ದ ನೇಪಾಳೀ ಮಾರ್ಗದರ್ಶಿ ಚಂಪಕ ಮತ್ತೆ ಸಿಕ್ಕಿದ. ಅವನ ಆರೋಗ್ಯ ಸ್ವಲ್ಪ ಕೆಟ್ಟಿದ್ದರೂ ಹಿಂದಿನಂತೆಯೇ ಉತ್ಸಾಹವಿತ್ತು. ಹಾಗೆ ನಡೆಯುತ್ತಾ ಗಂಗಾಮಾತೆಯ ಅನೇಕ ಪವಾಡಗಳನ್ನು, ವಿಶೇಷ ಘಟನೆಗಳನ್ನು ಹಂಚಿಕೊಂಡ. ನಮಗೆ ತುಂಬಾ ಹತ್ತಲಾಗದೆ ೩ ಕಿ.ಮೀ. ದೂರದಲ್ಲಿರುವ ‘ಫಲಾಹಾರ ಬಾಬಾ’ ಆಶ್ರಮಕ್ಕೆ ಬಂದೆವು. ಅವರಿಗೆ ನಮ್ಮ ನೆನಪಿರಲಿಲ್ಲ. ಆದರೂ ಆತ್ಮೀಯತೆಯಿಂದ ಮಾತನಾಡಿಸುತ್ತಾ, ನೀವು ದೇವರ ನಾಮಜಪ ಮಾಡುತ್ತೀರಾ? ಇಲ್ಲವೆಂದರೆ ಈಗಲೇ ಆರಂಭಿಸಿ. ರಾಮ, ಹರಿ, ಕೃಷ್ಣ ದೇವನಾಮ ಜಪಿಸುವುದೇ ಒಂದು ಆನಂದ. ಸತ್ಸಂಗಕ್ಕೆ ಹೋಗಿ. ನೀವು ಗಳಿಸಿದ ಆದಾಯದಲ್ಲಿ ಜನರ ಸೇವೆ ಮಾಡಿ ಎಂದೆಲ್ಲಾ ಹೇಳಿದರ. ಚಂಪಕನು ಆಶ್ರಮದ ಒಳಗೆ ಹೋಗಿ ಒಣಗಿದ ಅಪರೂಪವಾದ ಬ್ರಹ್ಮಕಮಲಗಳನ್ನು ನನ್ನ ಹೆಂಡತಿಗೆ ಕೊಟ್ಟ. ತಪೋವನವನ್ನು ನೋಡಲು ಪನಃ ಬನ್ನಿ ಎಂದು ಹೇಳಿ ಬೀಳ್ಕೊಟ್ಟ.
ಸಂನ್ಯಾಸಕ್ಕೆ ಮೊದಲ ಹೆಜ್ಜೆಗಳು
ನಾನು ಸಂದರ್ಶಿಸಿದ ನೂರಾರು ಸಾಧುಗಳಲ್ಲಿ, ಬಹುತೇಕ ಮಂದಿ ಬಾಲ್ಯದಿಂದಲೇ ಸಂನ್ಯಾಸದೆಡೆಗೆ ಒಲವು ಹೊಂದಿದ್ದವರು. ಇನ್ನು ಕೆಲವರು ತಮ್ಮ ಸುತ್ತಮುತ್ತಲಲ್ಲಿ ನಡೆದ ಯಾವುದೋ ಘಟನೆಯಿಂದ ಪರಿಣಾಮಹೊಂದಿ ಸಂನ್ಯಾಸದೀಕ್ಷೆ ತೊಟ್ಟವರು.
ಸ್ವಾಮಿ ವಾಸುದೇವಾನಂದ, ಬಾಲ್ಯದಲ್ಲಿಯೇ ಸ್ವಾಮಿ ವಿವೇಕಾನಂದರಿಂದ ಪ್ರಭಾವಿತರಾದವರು. ವಿದ್ಯಾರ್ಥಿದೆಸೆಯಲ್ಲಿಯೇ ಅನೇಕ ಬಾರಿ ಮನೆಬಿಟ್ಟು ಆಶ್ರಮಕ್ಕೆ ಹೋಗುತ್ತಿದ್ದರು. ಕಡೆಗೊಮ್ಮೆ ತಮ್ಮ ಕೆಲಸದ ಸಂದರ್ಶನಕ್ಕೆ ಹೋಗುವಾಗ ದಾರಿಯಲ್ಲಿ ಸಿಕ್ಕ ಸಂನ್ಯಾಸಿಯೊಂದಿಗೆ ಮಾತನಾಡುತ್ತಾ ಹಾಗೆಯೇ ಅವರ ಆಶ್ರಮಕ್ಕೆ ತೆರಳಿಬಿಟ್ಟರು. ಪೋಷಕರ ವಿರೋಧದ ನಡುವೆಯೂ ಸಂನ್ಯಾಸ ಸ್ವೀಕರಿಸಿದರು.
ಘನಶ್ಯಾಮದಾಸ, ತಮ್ಮ ಸಂನ್ಯಾಸದೀಕ್ಷೆಗೆ ತಮ್ಮ ಪರ್ವಜನ್ಮಕರ್ಮವೇ ಕಾರಣ ಎಂದು ಭಾವಿಸಿದವರು. ನಾನು ಎಲ್ಲರಂತೆಯೇ ವಿದ್ಯಾಭ್ಯಾಸ ಮುಗಿಸಿ ಕೆಲಸಮಾಡುತ್ತಾ ಮನೆಯನ್ನು ನಿರ್ವಹಿಸುತ್ತಿದ್ದೆ. ಜನರ ಸೇವೆ ಮಾಡಬೇಕೆಂಬ ಹಂಬಲ ಮತ್ತು ಆ ದೇವರ ಇಚ್ಛೆ ನನ್ನ ಸಂನ್ಯಾಸಕ್ಕೆ ಪ್ರೇರಣೆ. ಈ ಜಗತ್ತ್ತಿನಲ್ಲಿ ಪ್ರತಿಯೊಂದೂ ಆ ಈಶ್ವರನ ಆಣತಿಯಂತೆಯೇ ನಡೆಯತ್ತದೆ. ಭೂತ-ಭವಿಷ್ಯತ್-ವರ್ತಮಾನಗಳೆಲ್ಲಾ ಅವನ ಆಟಗಳೇ ಎಂದು ನುಡಿದರು.
೭೦ ವರ್ಷದ ರಮಾನಂದಗಿರಿ, ರೈತ ಕುಟುಂಬದಿಂದ ಬಂದವರಾಗಿದ್ದರು. ಯಾವಾಗ ಸಂಸ್ಕಾರಗಳು, ಕರ್ಮಗಳು ಬಲವತ್ತರವಾಗುವುವೋ, ಅಗ ಆ ಕೃಷ್ಣನೇ ತನ್ನೆಡೆಗೆ ಸೆಳೆದುಕೊಳ್ಳುತ್ತಾನೆ ಎಂದರು.
ನೀವು ಸಂನ್ಯಾಸಕ್ಕೆ ಅರ್ಹರು ಎಂದು ಹೇಗೆ ತಿಳಿಯಿತು? ಎಂದು ನಾನು ಕೇಳಿದೆ. ಅದಕ್ಕೆ ಪ್ರತಿಯಾಗಿ ಅದೆಲ್ಲವೂ ಪರ್ವಜನ್ಮದ ಫಲ. ಒಂದೋ ಸಂಸಾರದ ಕಷ್ಟಗಳಿಂದ ನೋವು ಅನುಭವಿಸಿ ಈ ಮಾರ್ಗಕ್ಕೆ ಬರುತ್ತಾರೆ. ಅಥವಾ ಬಾಲ್ಯದಿಂದಲೇ ಅದರ ಕಡೆ ಸೆಳೆತವಿರುತ್ತದೆ. ನನಗೆ ಬಾಲ್ಯದಿಂದಲೇ ಸಂನ್ಯಾಸದ ಒಲವಿತ್ತು. ಉಳಿದ ಹುಡುಗರು ಆಟವಾಡುತ್ತಿದ್ದರೆ, ನಾನು ಭಜನೆಯಲ್ಲೇ ಕಾಲಕಳೆಯುತ್ತಿದ್ದೆ ಎಂದು ಹೆಮ್ಮೆಯಿಂದ ಹೇಳಿದರು. ಮುಂದುವರಿಸುತ್ತಾ ನಾನೂ ೧೦-೧೨ ವರ್ಷಗಳ ಸಂಸಾರವನ್ನು ನಡೆಸಿದೆ. ದೈವೇಚ್ಛೆಯಿಂದ ನನ್ನ ಬಂಧನಗಳು ನಿವಾರಣೆಯಾಗತೊಡಗಿದವು. ಹೆಂಡತಿ, ತಂದೆ, ತಾಯಿ ಎಲ್ಲರೂ ಇಹಲೋಕ ತ್ಯಜಿಸಿದರು. ಇದ್ದ ಆಸ್ತಿಯನ್ನು ಸಹೋದರನಿಗೆ ಕೊಟ್ಟು, ನನ್ನ ಮಕ್ಕಳ ಜವಾಬ್ದಾರಿಯನ್ನೂ ಅವನಿಗೊಪ್ಪಿಸಿ ಸಂನ್ಯಾಸಿಯಾದೆ ಎಂದು ತಮ್ಮ ಕಥೆ ಹೇಳಿಕೊಂಡರು.
ಒಬ್ಬರ ಸಂತೋಷಕ್ಕಾಗಿ ಕೆಲಸ ಮಾಡಿ, ಅದರಿಂದ ಪ್ರತಿಫಲವನ್ನು ಅಪೇಕ್ಷಿಸಿ, ಅವರು ಸ್ಪಂದಿಸದಿದ್ದಾಗ ಬೇಸರಪಟ್ಟುಕೊಳ್ಳುವುದೆಂದರೆ, ಸ್ವಂತದ ಲಾಭಕ್ಕಾಗಿ ಕರ್ತವ್ಯ ಮಾಡಿದಂತೆ. ಉದಾರ ಮನಸ್ಸುಳ್ಳವರಿಗೆ ಪ್ರತಿಫಲಾಪೇಕ್ಷೆ ಇರುವುದಿಲ್ಲ. ತನ್ನತನದ ಅರಿವಾದಾಗ ಮತ್ತೊಬ್ಬರಲ್ಲಿ ಕರುಣೆ, ದಯೆ ಹೆಚ್ಚಾಗುತ್ತದೆ. ಮತ್ತು ಜೀವನದ ಭಯ ತೊಲಗುತ್ತದೆ. ಈ ಬದಲಾವಣೆಗಳನ್ನು ವ್ಯಕ್ತಿಯು ತಾನೇ ತನ್ನೊಳಗೆ ಕಂಡುಕೊಳ್ಳಬೇಕು.
ಇನ್ನೂ ಭೇಟಿಮಾಡಿದ ಅನಂತ, ಅಭಿನವ ಮುಂತಾದ ಸಾಧುಗಳ ಜೀವನವೂ ಹೀಗೆಯೇ ಬೆಳೆದುಬಂದಿತ್ತು. ಅನಂತ ಮೊದಲಿನಿಂದಲೂ ಅಧ್ಯಾತ್ಮದೆಡೆಗೆ ಒಲವನ್ನು ಇಟ್ಟುಕೊಂಡಿದ್ದರು. ಅಭಿನವ, ವಿದ್ಯಾರ್ಥಿದೆಸೆಯಲ್ಲಿ ರಾಮಕೃಷ್ಣಾಶ್ರಮವನ್ನು ಸೇರಿ ಅಲ್ಲಿ ಯೋಗ ಧರ್ಮಗಳ ಜ್ಞಾನಪಡೆದರು. ನೌಕರಿಯಲ್ಲಿದ್ದರೂ ಸಂಸಾರಕ್ಕೆ ಹೋಗದೆ ಸಂನ್ಯಾಸಕ್ಕೆ ತೆರಳಿದರು. ನೀರಿನಲ್ಲಿದ್ದರೂ ಕಮಲಪತ್ರವು ಹಸಿಯಾಗದಿರುವಂತೆ ಯಾವ ಬಂಧನಗಳಿಗೂ ನಾನು ಒಳಗಾಗಿಲ್ಲ ಎಂದು ಹೇಳಿದರು.
ಸ್ವಾಮಿ ಮುಕ್ತಾನಂದರ ಬದುಕು ಉಳಿದವರಿಗಿಂತ ಭಿನ್ನ. ಇವರು ನಾಗಾ ಸಾಧುಗಳ ಗುಂಪಿನವರು. ನಾಗಾ ಸಾಧುಗಳು ತಮ್ಮ ತೀಕ್ಷ್ಣತೆ ಮತ್ತು ಕಠೋರವರ್ತನೆಗಳಿಗೆ ಹೆಸರುವಾಸಿ.
ಸ್ವಾಮಿ ಮುಕ್ತಾನಂದರು ಒಬ್ಬ ಚಿತ್ರಕಲೆಗಾರರಾಗಿದ್ದರು. ನಾನು ಬೇರೆ ಸಾಧುವೊಬ್ಬರನ್ನು ಸಂದರ್ಶಿಸುವಾಗ, ಇವರು ಬಂದು ತಮ್ಮ ಆಶ್ರಮಕ್ಕೂ ಆಹ್ವಾನಿಸಿದರು. ನಾನು ಸಂಜೆ ಆಶ್ರಮಕ್ಕೆ ಹೋದಾಗ ಗೋಡೆಯ ಮೇಲೆ ವರ್ಣಚಿತ್ರ ರಚಿಸುತ್ತಿದ್ದರು. ನಾನು ಅವರ ಜೊತೆ ಸಂಭಾಷಣೆ ನಡೆಸಿ ರೆಕಾರ್ಡ್ ಮಾಡಿಕೊಂಡೆ.
ನಾಗಾ ಎಂಬ ಹೆಸರು, ನಗ್ನ ಎಂಬ ಪದದಿಂದ ಬಂದಿದೆ. ಆ ಸಾಧುಗಳು ಬೆತ್ತಲೆಯಾಗಿಯೇ ಇದ್ದು ಆಕ್ರಮಣಕಾರಿ ಮನಃಸ್ಥಿತಿ ಹೊಂದಿರುತ್ತಾರೆ. ನಾನು ಕೆಲವು ಸಲ ಪೋಟೋ ತೆಗೆಯುವಾಗ ಕೆಲವು ನಾಗಾ ಸಾಧುಗಳು ಕೋಪಗೊಂಡು ಅಟ್ಟಿಸಿಕೊಂಡು ಬಂದದ್ದೂ ಇದೆ. ೬ನೇ ಶತಮಾನದಲ್ಲಿ ಮಧುಸೂದನ ಸರಸ್ವತಿಯೆಂಬ ಸಾಧುವು ಅಕ್ಬರನ ಅಪ್ಪಣೆ ಪಡೆದು, ಸಾಧು-ಸಂತರನ್ನು ಮುಸ್ಲಿಂ ಫಕೀರರ ಆಕ್ರಮಣಗಳಿಂದ ತಡೆಯಲೆಂದೇ ಈ ನಾಗಾಸಾಧುಗಳ ಪರಂಪರೆಯನ್ನು ಹುಟ್ಟುಹಾಕಿದರು. ಮುಕ್ತಾನಂದರು ನಾಗಾಪರಂಪರೆಗೆ ವ್ಯತಿರಿಕ್ತವಾಗಿ ಶಾಂತಸ್ವಭಾವದವರಾಗಿದ್ದರು. ಅವರು ತಮ್ಮ ಜೀವನವನ್ನು ವಿವರಿಸುತ್ತಾ ಗುಜರಾತಿನಲ್ಲಿದ್ದ ಅವರ ಕುಟುಂಬದ ಬಗ್ಗೆ ಹೇಳಿದರು. ಜನ್ಮಾಷ್ಟಮಿಯ ರಾತ್ರಿ ಹುಟ್ಟಿದ್ದ ಅವರು ಬಾಲ್ಯದಲ್ಲಿಯೇ ಅಧ್ಯಾತ್ಮದಲ್ಲಿ ಆಸಕ್ತಿ ಇದ್ದವರು. ಅವರ ಜಾತಕದಲ್ಲಿ ಸಾಧುವಾಗುವ ಲಕ್ಷಣವಿತ್ತಂತೆ. ಶಾಲೆಯ ಓದು ಮುಗಿದ ಮೇಲೆ ಒಂದು ದಿನ ಮನೆಯಲ್ಲಿ ನಿರ್ಭೀತಿಯಿಂದ ನಾನು ಸಂನ್ಯಾಸಿಯಾಗುತ್ತೇನೆ ಎಂದು ಹೇಳಿದರು. ಮನೆಯ ಗುರುಗಳನ್ನು ಈ ವಿಷಯವಾಗಿ ಭೇಟಿಯಾದಾಗ, ಅವನಿಗೆ ಸಂನ್ಯಾಸದಲ್ಲಿ ಅಸಕ್ತಿಯಿದ್ದಲ್ಲಿ ಅವನನ್ನು ಆಶ್ರಮಕ್ಕೆ ಕಳುಹಿಸಿಕೊಡಿ ಎಂದರು. ಆಶ್ರಮಕ್ಕೆ ಸೇರಿದ ಹುಡುಗ ಆಸ್ಥೆಯಿಂದ ಎಲ್ಲ ಕೆಲಸಗಳನ್ನು ಮಾಡುತ್ತಿದ್ದ. ೮ ವರ್ಷಗಳ ನಂತರ ಹರಿದ್ವಾರದಲ್ಲಿ ಮಂಡಲೇಶ್ವರರ ಬಳಿಗೆ ಅಭ್ಯಾಸಕ್ಕೆ ಹೋದರು. [ನಾಗಾಸಾಧುಗಳು ವಾಸಿಸುವ ಸ್ಥಳಗಳಿಗೆ ಅಖಾಡಾಗಳೆಂದು ಹೆಸರು. ‘ಅಖಾಡಾ’ದ ಮುಖ್ಯಸ್ಥನನ್ನು ‘ಮಹಾಂತ’ನೆಂದೂ ಮತ್ತು ಅಲ್ಲಿನ ಆಧ್ಯಾತ್ಮಿಕ ಶಿಕ್ಷಕನಿಗೆ ‘ಮಂಡಲೇಶ್ವರ’ನೆಂದೂ ಕರೆಯುತ್ತಾರೆ.]
ಮುಕ್ತಾನಂದರು ನಾಲ್ಕೈದು ಅಭ್ಯಾಸದ ನಂತರ ನಾಗಾಸಾಧುಗಳಾಗಿ ದೀಕ್ಷೆ ಪಡೆದರು. ಈ ಸಂಪ್ರದಾಯದ ವೈಚಿತ್ರ್ಯವೆಂದರೆ ದೀಕ್ಷೆ ಪಡೆಯುವಾಗ ವ್ಯಕ್ತಿಯ ಲಿಂಗಕ್ಕೆ ಹಾನಿಯುಂಟು ಮಾಡುತ್ತಾರೆ. ತನ್ಮೂಲಕ ಮುಂದೆ ಎಂದಿಗೂ ಸಾಧುವಿಗೆ ಲೈಂಗಿಕ ಆಸಕ್ತಿಯು ಬರದಂತೆ ವ್ಯವಸ್ಥೆ ಮಾಡಲಾಗುತ್ತದೆ.
ಇನ್ನುಳಿದ ಸಾಧುಗಳು ಜೀವನದಲ್ಲಿನ ಯಾವುದೋ ಘಟನೆಯಿಂದ ಸಂನ್ಯಾಸಕ್ಕೆ ಬಂದವರಾಗಿದ್ದರು. ಅನೇಕರು ಬಾಲ್ಯದಲ್ಲಿಯೇ ಅನಾಥರಾಗಿದ್ದವರು. ಸ್ವಾಮಿ ಮಾಧವಾನಂದರು, ಬಾಲ್ಯದಲ್ಲಿಯೇ ಸಾಧುವಾಗಬೇಕೆಂದುಕೊಂಡಿದ್ದರೂ ೮ ವರ್ಷದವರಿದ್ದಾಗ ಅನುಭವಿಸಿದ ರೈಲು ದುರಂತದಿಂದ ಬಹಳ ಖಿನ್ನತೆಗೊಳಗಾಗಿದ್ದರು. ಅನಂತರ ಮಾವನ ಆಶ್ರಯದಲ್ಲಿ ಬೆಳೆದರು. ಜೀವನದಲ್ಲಿ ಆಸರೆಯೊಂದು ಬೇಕು. ಮದುವೆ ಮಾಡಿಕೋ ಎಂದು ಮಾವ ಹೇಳಿದಾಗ `ರೈಲು ದುರಂತದಲ್ಲಿ ನನ್ನನ್ನು ಕಾಪಾಡಿದವನೇ ಮುಂದೆಯೂ ಸಲಹುತ್ತಾನೆ’ ಎಂದು ಹೇಳಿ ರಾಮಕೃಷ್ಣಾಶ್ರಮವನ್ನು ಸೇರಿದರು.
ಮನದಮೋಹನದಾಸರು ೯೦ ವರ್ಷದ ಸಾಧುಗಳು. ಬಾಲ್ಯದಲ್ಲಿಯೇ ತಂದೆ-ತಾಯಿಗಳನ್ನು ಕಳೆದುಕೊಂಡ ಅವರು, ಒಬ್ಬ ಮಹಾತ್ಮರ ಆಶ್ರಮ ಸೇರಿದರು. ಅವರಿಂದಲೇ ದೀಕ್ಷೆ ಪಡೆದು ಅವರ ಸೇವೆ ಮಾಡುತ್ತಿದ್ದರು. ಮಹಾತ್ಮರು ತೀರಿಕೊಂಡ ಮೇಲೆ ಆಶ್ರಮದ ಮೇಲ್ವಿಚಾರಕರಾಗಿ, ಸ್ವಲ್ಪ ದಿನಗಳ ನಂತರ ತೀರ್ಥಯಾತ್ರೆಗೆಂದು ಸಂಚಾರಮಾಡಲು ಆರಂಭಿಸಿದರು. ನೀವು ಯಾಕೆ ಇಷ್ಟೊಂದು ಸಂಚಾರ ಮಾಡುತ್ತೀರಿ? ಎಂದು ನಾನು ಕೇಳಿದಾಗ, ಇದು ಜ್ಞಾನ ಪಡೆಯುವ ಒಂದು ಮಾರ್ಗ. ಈ ಯಾತ್ರೆಗಳಿಂದ ಬಹಳಷ್ಟು ಅನುಭವಗಳನ್ನು ಪಡೆದಿದ್ದೇನೆ ಎಂದರು. ತಾವು ಸಂನ್ಯಾಸಿಯಾಗಿರುವ ಬಗ್ಗೆ ಹೆಮ್ಮೆ ಮತ್ತು ಅಭಿಮಾನ ಹೊಂದಿದ್ದರು. ಓಂನಾಥ ಎಂಬ ಸಾಧುವೂ ಹೀಗೆಯೇ ಬಾಲ್ಯದಲ್ಲಿ ನಡೆದ ಅಪಘಾತದಲ್ಲಿ ಪಾಲಕರನ್ನು ಕಳೆದುಕೊಂಡು, ಬೇರಾವ ಆಶ್ರಯವಿಲ್ಲದಿದ್ದಾಗ, ಅಘೋರಿ ಸಾಧುವೊಬ್ಬರು ಅವರನ್ನು ದತ್ತು ತೆಗೆದುಕೊಂಡಿದ್ದರು.
ಸ್ವಾಮಿ ಗೋರಖಗಿರಿಯು ಮಹಾರಾಷ್ಟ್ರದವರು. ಅವರ ತಾಯಿ ಸತ್ತ ಮೇಲೆ, ತಂದೆ ಇನ್ನೊಂದು ಮದುವೆಯಾಗಿದ್ದು. ಮಲತಾಯಿಯು ಇವರನ್ನು ನಿಕೃಷ್ಟವಾಗಿ ಕಾಣುತ್ತಿದ್ದುದರಿಂದ ತೀವ್ರ ನೊಂದು ಮನೆಯಿಂದ ಹೊರಬಂದು; ಕೇವಲ ಮಂದಿರ ಆಶ್ರಮಗಳನ್ನು ಸುತ್ತುತ್ತಿದ್ದ ಯುವಕನು ಜೀವನವೇ ಬೇಸರವಾಗಿ ರೈಲಿನ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಹೋದಾಗ, ಒಬ್ಬ ವೃದ್ಧ ಸಾಧುವು ಬಂದು ಅವನ ಕೆನ್ನೆಗೆ ಬಾರಿಸಿ ತಡೆದರು. ೮೪ ಲಕ್ಷ ಜನ್ಮಗಳ ನಂತರ ಬರುವ ಮನುಷ್ಯಜೀವನದ ಮಹತ್ತ್ವವನ್ನು ವಿವರಿಸಿ ಅಲ್ಲಿಯೇ ಅವರಿಗೆ ದೀಕ್ಷೆ ಕೊಟ್ಟು ‘ಗೋರಖಗಿರಿ’ ಎಂದು ಹೆಸರಿಟ್ಟರು.
ಕೆಲವೊಮ್ಮೆ ದೇಹದ ನ್ಯೂನತೆಗಳೂ ಸಂನ್ಯಾಸ ತೆಗೆದುಕೊಳ್ಳಲು ಕಾರಣವಾಗುತ್ತವೆ ಎಂದು ಅಜಯ್ಸಿಂಗ್ ಎನ್ನುವ ಸಾಧುವಿನಿಂದ ತಿಳಿಯಿತು. ಬಾಲ್ಯದಲ್ಲಿ ಅವರಿಗಾದ ಕೆಲವು ಅವಮಾನಗಳು ಮನೆಬಿಟ್ಟು ಬರುವಂತೆ ಮಾಡಿದವು. ಮನೆಯವರು ತಡೆದರೂ ಇವರಿಗೆ ಅಲ್ಲಿರಲಾಗಲಿಲ್ಲ. ಆಶ್ರಮವೊಂದನ್ನು ಸೇರಿ ಅಲ್ಲಿ ಅಡುಗೆ ಮಾಡುತ್ತಿದ್ದರು. ಒಮ್ಮೆ ಅಡುಗೆ ಮಾಡುವಾಗ ಕೈ ಪರ್ಣ ಸುಟ್ಟು ಗಾಯವಾಯಿತು. ಅದರಿಂದ ಮುಂದೆ ಬೇರೆ ಕೆಲಸಗಳನ್ನು ಮಾಡದಂತಾಗಿ ಎಲ್ಲದರಲ್ಲೂ ಅನಾಸಕ್ತಿ ಉಂಟಾಯಿತು. ಭಜನೆಯೊಂದೇ ನನಗುಳಿದಿರುವುದು ಎಂದು ಭಾವಿಸಿ ಸಾಧುವಾಗಿಯೇ ಉಳಿದರು. ಗಾಯಕ್ಕೆ ಅನೇಕ ಚಿಕಿತ್ಸೆ ನೀಡಿದರೂ ಅದು ಫಲಕಾರಿಯಗಲಿಲ್ಲ.
ಅಜಯ್ಸಿಂಗ್ ಅವರು ದೀಕ್ಷೆ ತೆಗೆದುಕೊಂಡ ಸಾಧುವಾಗಿರಲಿಲ್ಲ. ಯಾವಾಗ ಸಮಯ ಬರುತ್ತದೋ ಆಗ ಗುರುಗಳೇ ದೀಕ್ಷೆ ಕೊಡುತ್ತಾರೆ ಎಂದು ಅವರು ಹೇಳಿದರು. ಅವರಿಗೆ ಸಾಧುವಾಗಲು ಆಸಕ್ತಿಯಿದ್ದರೂ ತಮ್ಮ ಅಂಗದ ನ್ಯೂನತೆಯಿಂದ ಬೇರೆ ಯಾವುದೇ ಸಾಧನೆ ಮಾಡದೆ ಹೀಗೆಯೇ ಉಳಿಯಬೇಕಾಯಿತು ಎಂಬ ಬೇಸರ ಅವರ ಮನಸ್ಸಿನಲ್ಲಿತ್ತು.
ಇನ್ನೊಬ್ಬ ಸಾಧುವು ತನಗೆ ಬರುವ ದುರದೃಷ್ಟದಿಂದ ತಪ್ಪಿಸಿಕೊಳ್ಳಲು ಸಂನ್ಯಾಸಿಯಾಗಿದ್ದರು. ಬಾಲ್ಯದಲ್ಲಿ ಜಾತಕ ನೋಡಿದ ಒಬ್ಬರು ಇವರಿಗೆ ಸಣ್ಣವಯಸ್ಸಿಗೆ ಮರಣ ಬರುತ್ತದೆ ಎಂದು ಹೇಳಿದ್ದರಂತೆ. ಸಾಧುವಾದರೆ ಇವನ್ನೆಲ್ಲಾ ಮೀರಿದ ಶಕ್ತಿ ಬರುತ್ತದೆ ಎಂದು ಭಾವಿಸಿದ್ದ ತಂದೆ-ತಾಯಿ ಅವನನ್ನು ಒಬ್ಬ ಗುರುವಿಗೆ ಒಪ್ಪಿಸಿದರು. ಅದರೆ ಸಾಧುವಾಗಬೇಕೆಂಬ ಹಂಬಲ ಬಾಲಕನಿಗೂ ಇದ್ದಿದ್ದರಿಂದ ಮನೆಗೆ ಹಿಂದಿರುಗಿ ಹೋಗದೆ ಸಾಧುವಾಗಿಯೇ ಉಳಿದರು. ಜೀವನದ ನಶ್ವರತೆಯನ್ನು ತಿಳಿದಿದ್ದ ಅವರು ಗುರುವಿನಂತೆಯೇ ವೈರಾಗ್ಯ ಹೊಂದಿದರು.
ಬದರಿಗೆ ಹೋಗುವಾಗ ಜೋಶಿಮಠದಲ್ಲಿ ಒಬ್ಬ ವಯಸ್ಸಾದ ಸಾಧು ಸಿಕ್ಕಿದರು. ಅವರ ಹೆಸರು ‘ಪಚಪನ್ ನಾರಾಯಣ್’ ತಮಿಳುನಾಡಿನ ಮಧುರೈನವರಾದ ಅವರು ಬಾಲ್ಯದಲ್ಲಿ ಅವರಿವರ ಮನೆಕೆಲಸ ಮಾಡುತ್ತಿದ್ದರು. ಅನಂತರ ಮುಂಬಯಿಯಲ್ಲಿ ಕೆಲವು ವರ್ಷ ಕಟ್ಟಡವೊಂದರಲ್ಲಿ ‘ಲಿಫ್ಟ್ ಮ್ಯಾನ್’ ಆಗಿ ಕೆಲಸ ಮಾಡುತ್ತಿದ್ದರು.
ವಯಸ್ಸಾದ ಮೇಲೆ ಕಾಶಿಗೆ ಬಂದು, ಅನಂತರ ಬದರಿಯ ಈ ಪ್ರದೇಶಕ್ಕೆ ಬಂದರು. ಇಲ್ಲಿರುವ ಹನುಮಾನ್ಮಂದಿರದಲ್ಲಿದ್ದ ಸಾಧುವಿನ ಸೇವೆ ಮಾಡುತ್ತಾ, ಅವರು ತೀರಿಕೊಂಡ ಮೇಲೆ ಇವರೇ ಮಂದಿರದ ನಿರ್ವಹಣೆ ಮಾಡಲು ಆರಂಭಿಸಿದರು. ಒಂದು ಬಾರಿ ಅವರು ತಮ್ಮ ಬಾಲ್ಯದ ಊರಿಗೆ ಹೋಗಿದ್ದರೂ, ಅಲ್ಲಿ ಬಹಳ ಕಾಲ ಇರಲು ಬೇಸರವಾಗಿ ಮತ್ತೆ ಈ ಮಂದಿರಕ್ಕೆ ಬಂದರು.
ಸಾಮಾನ್ಯವಾಗಿ ಸಾಧುಗಳು ತಮ್ಮ ಕುಟುಂಬದವರ ಸಂಬಂಧದಿಂದ ದೂರವಿದ್ದರೂ, ಕೂದಲೆಳೆಯ ಒಂದು ಮಾನಸಿಕ ಸಂಬಂಧ ಇದ್ದೇ ಇರುತ್ತದೆ. ಒಬ್ಬ ಸಾಧುವು ಬಾಲ್ಯದಲ್ಲೇ ಮನೆ ಬಿಟ್ಟು ಓಡಿ ಬಂದಿದ್ದರಿಂದ ಅವರ ತಾಯಿ ಅವನ ನೆನಪಿನಲ್ಲಿಯೇ ಕೊರಗುತ್ತಿದ್ದರು. ಅದು ತಿಳಿದ ಮೇಲೆ ಮನೆಗೆ ಹೋದರು. ಮಗ ಸಾಧುವಾಗಿದ್ದು ಖುಷಿಯೇ ಅಯಿತು. ಮಗ ಮತ್ತೆ ಬಂದನೆಂದು ಅವನನ್ನು ಸತ್ಕರಿಸಿದರಂತೆ. ಅತಿ ಖಿನ್ನಳಾಗಿದ್ದ ತಾಯಿ ತನ್ನ ವಿಷಯ ತಿಳಿದ ಮೇಲೆ ಮತ್ತೆ ಗೆಲುವಾದಳೆಂದು ಆ ಸಾಧ ಹೇಳಿದರು.
ನಾನು ಸಂದರ್ಶಿಸಿದ ಸಾಧುಗಳಲ್ಲಿ ಸ್ತ್ರೀಸಾಧುಗಳೂ ಇದ್ದರು. ಅವರಲ್ಲಿ ‘ಗೀತಾ’ ಎನ್ನುವವರು ಅನೇಕ ಅಡೆತಡೆಗಳ ಮಧ್ಯೆಯೂ ಸಂನ್ಯಾಸದ ಗುರಿಯನ್ನು ತಲಪಿದ್ದರು. ಗೀತಾಳ ತಂದೆ ವಿದೇಶದಲ್ಲಿ ಕೆಲಸಕ್ಕೆ ಇದ್ದಿದ್ದರಿಂದ, ಅಜ್ಜನಮನೆಯಲ್ಲಿ ಬೆಳೆದರು. ಆಗಲೇ ಪೌರಾಣಿಕ ಕಥೆಗಳನ್ನು ಕೇಳಿ ಧಾರ್ಮಿಕ ವಿಷಯಗಳ ಕಡೆ ಮನಸ್ಸು ನೆಟ್ಟರು. ಅನಂತರ ಮುಂಬಯಿಗೆ ಇಡೀ ಕುಟುಂಬ ವರ್ಗವಾದಾಗ, ಅಲ್ಲಿಯ ಶಾಲೆಯಲ್ಲಿ ಓದು ಕಷ್ಟವಾಯಿತು. ಕಾರಣ ಇಂಗ್ಲಿಷ್ ಭಾಷಾಜ್ಞಾನದ ಕೊರತೆ. ಆಗ ಅವರ ಸಂಬಂಧಿಕರು ಅವರಿಗೆ ಇಂಗ್ಲಿಷ್ ಹೇಳಿಕೊಟ್ಟು ಮತ್ತೆ ಓದಿನಲ್ಲಿ ಆಸಕ್ತಿ ಹುಟ್ಟಿಸಿದರು.
ಅವರು MBBS ಓದುವಾಗ ಸ್ವಾಮಿ ದಯಾನಂದರ ಸಂಪರ್ಕವಾಯಿತು. ಮನೆಯಲ್ಲಿ ತಂದೆ ಬಹು ಮುಂಗೋಪಿಯೂ ನಿಷ್ಠುರರೂ ಆಗಿದ್ದದ್ದರಿಂದ ಒಂದು ರೀತಿಯ ವಾಕ್ಸ್ವಾತಂತ್ರ್ಯ ಇರಲಿಲ್ಲ. ಆದರೆ ದಯಾನಂದರ ನಡವಳಿಕೆ, ಎಲ್ಲರೊಂದಿಗೆ ಸಹಜವಾಗಿ ಬೆರೆಯುವ ಸ್ವಭಾವದಿಂದ, ಗೀತಾ ಹೆಚ್ಚು ಪ್ರಭಾವಿತರಾದರು. ಗೀತಾಳ ತಂದೆಗೆ ಸಾಧುಗಳು-ಧರ್ಮ ಇವುಗಳಲ್ಲಿ ನಂಬಿಕೆ ಇರಲಿಲ್ಲ. ಆದರೆ ಯಾರಿಗೂ ತಿಳಿಯದಂತೆ ಗೀತಾ, ದಯಾನಂದರ ಲೇಖನ-ಪಸ್ತಕಗಳನ್ನು ಓದುತ್ತಾ, ಕೊನೆಗೆ ಈ ಮಾರ್ಗದಲ್ಲೇ ತಮ್ಮ ಮುಂದಿನ ಜೀವನವಿದೆ ಎಂದು ನಿರ್ಧರಿಸಿದರು. ಅದಕ್ಕೆ ಸಮ್ಮತಿಸದೆ, ತಂದೆ MD ಓದಲು ಒತ್ತಾಯಿಸಿದರು. ಅವರ ಒತ್ತಾಯದಂತೆ ಅನೇಕ ಕಷ್ಟಗಳ ನಡುವೆ MD ಓದನ್ನೂ ಮುಗಿಸಿದರು. ತದನಂತರ ಅವರಿಗೆ ಮದುವೆ ಮಾಡಲು ತಂದೆ-ತಾಯಿ ಹೊರಟಾಗ ಅದಕ್ಕೊಪ್ಪದೆ, ಮನೆಬಿಟ್ಟು ಬಂದು ಕಲ್ಕತ್ತಾದಲ್ಲಿದ್ದ ದಯಾನಂದರ ಆಶ್ರಮ ಸೇರಿದರು.
ಸಂನ್ಯಾಸಿಯಾಗುವುದಕ್ಕೂ ಮೊದಲು, ಸ್ವಲ್ಪ ವೇದಾಂತವನ್ನು ನಾನು ಕಲಿತಿದ್ದೆ. ಕೇವಲ ಸ್ಫೂರ್ತಿ, ಅಂತಃಸಾಕ್ಷಿಗಳೇ ಜ್ಞಾನಕ್ಕೆ ಮೂಲವಲ್ಲ. ಅವು ಜ್ಞಾನ ಪಡೆಯಲು ತಯಾರುಮಾಡುತ್ತವೆ. ಅಂತಿಮವಾಗಿ ಶಾಬ್ದಿಕ ಪ್ರಮಾಣವಾದ ವೇದಾಂತವನ್ನೇ ಅನುಸರಿಸಬೇಕು. ಸತ್ತ ಮೇಲೆಯೂ ಚೇತನದ ಅಸ್ತಿತ್ವ ಇರುವ ಸಾಧ್ಯತೆಯಿದೆ. ಮತ್ತು ಹಾಗಿದ್ದಲ್ಲಿ, ನಾವು ಬದುಕಿದಾಗ ಮಾಡಿದ ಕರ್ಮವೇ ಹಿಂಬಾಲಿಸುತ್ತದೆ.
ಅವರ ತಂದೆ ಅಲ್ಲಿಗೂ ಬಂದು ಗದ್ದಲ ಮಾಡಿದಾಗ, ದಯಾನಂದರೇ ಗೀತಾರಿಗೆ ವಾಪಸ್ ಮನೆಗೆ ಹೋಗಲು ಸೂಚಿಸಿದರು. ಮನೆಗೆ ಬಂದು ಹಳ್ಳಿಯೊಂದರಲ್ಲಿ ೧೨ ವರ್ಷ ವೈದ್ಯಕೀಯ ಸೇವೆ ಮಾಡಿದರು. ತಂದೆಯು ಕೊನೆಗೂ ಒಲ್ಲದ ಮನಸ್ಸಿನಿಂದ ಗೀತಾರಿಗೆ ಆಶ್ರಮ ಸೇರಲು ಅನುಮತಿ ನೀಡಿದ್ದರು. ಈ ಮಧ್ಯೆ ತಂದೆಗೆ ಕ್ಯಾನ್ಸರ್ ತಗಲಿತು. ಆಶ್ರಮದಲ್ಲಿದ್ದ ಗೀತಾ ಮನೆಗೆ ಬಂದು ತಂದೆ ಗುಣವಾಗುವವರೆಗೂ ಸೇವೆ ಮಾಡಿದರು. ತದನಂತರ ತಂದೆಗೂ ಮಗಳ ಜೀವನದ ನಿರ್ಧಾರವೇ ಸರಿಯೆಂದೆನಿಸಿತು.
ಗೀತಾ ದೀಕ್ಷೆ ತೆಗೆದುಕೊಂಡು, ಗುರುಗಳ ಕಾರ್ಯದಲ್ಲಿ ಸಹಾಯ ಮಾಡಲು ಪ್ರಾರಂಭಿಸಿದರು. ತಮ್ಮ ಕಥೆಯನ್ನು ಹೇಳುವಾಗ, ಅವರ ಮುಖದಲ್ಲಿ ಪ್ರಶಾಂತತೆಯ ಭಾವ ಹೊಳೆಯುತ್ತಿತ್ತು.
ಸ್ವಾಮಿ ದಯಾನಂದರ ಆಶ್ರಮದಲ್ಲಿ ಮತ್ತೊಬ್ಬ ವಿಶೇಷ ವ್ಯಕ್ತಿಯ ಪರಿಚಯವಾಯಿತು. ಆಶ್ರಮದಲ್ಲಿ ‘ಆಧ್ಯಾತ್ಮಿಕ ಜೀವನದಲ್ಲಿ ಬದುಕುವುದು ಹೇಗಿರುತ್ತದೆ. ಅದರ ಉಪಯೋಗಗಳೇನು?’ -ಎಂದು ಪ್ರಶ್ನೆಗಳನ್ನು ಕೇಳಿದಾಗ ಆಗ ಯಾರೂ ಉತ್ತರಿಸದಿದ್ದರೂ, ಎರಡು ದಿನಗಳ ನಂತರ ಈ ವ್ಯಕ್ತ್ತಿಯು ತಾನಾಗೇ ಬಂದು ತಮ್ಮ ಕಥೆಯನ್ನು ಹೇಳಿದರು:
ಇವರು ಮಧ್ಯಮ-ವರ್ಗದಿಂದ ಬಂದ ವ್ಯಕ್ತಿ. ವಿದೇಶದಲ್ಲಿ ಓದಬೇಕೆಂಬ ಹಂಬಲವಿದ್ದರೂ, ಮನೆಯ ಪರಿಸ್ಥಿತಿ ಅನುಕೂಲವಾಗಿರಲಿಲ್ಲ. ಅದರೂ ಕಷ್ಟಪಟ್ಟು ಓದಿ ಒಳ್ಳೆಯ ಉದ್ಯೋಗಕ್ಕೆ ಸೇರಿದರು. ಅಲ್ಲಿಯೂ ಜವಾಬ್ದಾರಿಯುತ ಸ್ಥಾನಗಳನ್ನು ನಿರ್ವಹಿಸಿದರು. ಹೈದರಾಬಾದಿಗೆ ಬಂದು ಅಲ್ಲಿಯ ಒಂದು ಸಣ್ಣ ಕಂಪೆನಿಯನ್ನು ದೊಡ್ಡ ಮಟ್ಟಕ್ಕೆ ಬೆಳೆಸಿದರು. ಇವರ ಹೆಂಡತಿಯೂ ಎಲ್ಲ ಕೆಲಸಗಳಲ್ಲಿ ಬೆಂಬಲಿಗರಾಗಿದ್ದರು. ಈ ಮಧ್ಯದಲ್ಲಿ ಸ್ವಾಮಿ ದಯಾನಂದರ ಸಂಪರ್ಕ ಬೆಳೆಯಿತು. ಮುಂದೆ, ಬೆಂಗಳೂರಿಗೆ ಬಂದ ಮೇಲೆ ಇವರ ಹೆಂಡತಿ ತೀರಿಕೊಂಡರು. ಆಗ ಜೀವನದಲ್ಲಿ ಯಾವ ಅರ್ಥವೂ ಇಲ್ಲ ಎಂದೆನಿಸಿ ವೇದಾಂತದ ಅಧ್ಯಯನ ಪ್ರಾರಂಭಿಸಿದರು.
ನಾನು ಮೊದಲು ಭೇಟಿಯಾದಾಗ, ಇವರು ಸಾಮಾನ್ಯ ವ್ಯಕ್ತಿಯೇ ಆಗಿದ್ದರು. ಅಧ್ಯಾತ್ಮಕ್ಕೆ ಸಂಬಂಧಿಸಿದ ಇ-ಮೇಲ್ಗಳನ್ನು ನನಗೆ ಕಳಿಸುತ್ತಿದ್ದರು. ಒಮ್ಮೆ ಕರೆ ಮಾಡಿ ನಾನೀಗ ಸಂನ್ಯಾಸ ಸ್ವೀಕರಿಸಿ, ಸ್ವಾಮಿ ಸರ್ವಭೂತಾನಂದ ಆಗಿದ್ದೇನೆ ಎಂದರು. ನಾನು ಮೂರನೇ ಬಾರಿ ಹೃಷಿಕೇಶಕ್ಕೆ ಹೋದಾಗ ಕಾವಿ ಬಟ್ಟೆಯಲ್ಲಿದ್ದ ಅವರನ್ನು ಮತ್ತೆ ಮಾತನಾಡಿಸಿದೆ.
ಅವರ ಗುರುಗಳಾದ ಸ್ವಾಮಿ ದಯಾನಂದರು ಇವರಿಗೆ ದೀಕ್ಷೆಕೊಡುವುದಕ್ಕೂ ಮೊದಲು ಇನ್ನು ೮ ಜನಕ್ಕೆ ದೀಕ್ಷೆ ಕೊಟ್ಟಿದ್ದರು. ತಾವು ಪಸ್ತಕಮುಖೇನ ಶಾಸ್ತ್ರ ಓದಿಲ್ಲವಾದರೂ ಗುರುಗಳ ಪ್ರವಚನದಿಂದ ಸಾಕಷ್ಟು ಜ್ಞಾನ ಪಡೆದಿರುವುದಾಗಿ ಹೇಳಿದರು. `ನನ್ನ ಆಸ್ತಿಯನ್ನು ಮಕ್ಕಳಿಗೆ ಹಂಚಿ, ಪ್ರಾಪಂಚಿಕ ಬಯಕೆಗಳನ್ನು ಬಹುತೇಕ ತ್ಯಜಿಸಿದ್ದೇನೆ’ ಎಂದರು.
ಜೊತೆಗೆ ಸಂನ್ಯಾಸದೀಕ್ಷೆಯ ಕ್ರಮವನ್ನು ವಿವರಿಸಿದರು. ಮೊದಲಿಗೆ ವ್ಯಕ್ತಿಯ ಕೇಶಮುಂಡನ ಮಾಡಲಾಗುತ್ತದೆ. ಅನಂತರ ಪರ್ವಜರಿಗೆ ತರ್ಪಣ ಕೊಡಬೇಕು. ಅದಾದ ಮೇಲೆ ಹೋಮವನ್ನು ಮಾಡಿ, ಇನ್ನು ಜಗತ್ತಿನ ಹಾಗೂ ಬಂಧುಗಳ ದೃಷ್ಟಿಯಲ್ಲಿ ತಾನು ಸತ್ತ ಹಾಗೆ ಎಂದು ಪರಗಣಿಸಬೇಕು. ಗಾಯತ್ರೀ ಜಪ ಮತ್ತು ಪವಿತ್ರ ಶ್ಲೋಕಗಳ ಪಠನ ಮಾಡಬೇಕು. ಅನಂತರ ವಸ್ತ್ರಗಳನ್ನೆಲ್ಲಾ ತೆಗೆದು ಉತ್ತರದಿಕ್ಕಿನೆಡೆ ನಡೆಯಬೇಕು. ಆಗ ಗುರುಗಳು ನಿಲ್ಲು, ನಾನು ನಿನಗೆ ದೀಕ್ಷೆ ಕೊಡುತ್ತೇನೆ ಎಂದು ಹೇಳುತ್ತಾರೆ. ಗುರುಗಳು ಅವರಿಗೆ ಹೊಸ ಹೆಸರನ್ನಿಟ್ಟು ದೀಕ್ಷೆ ಕೊಡುತ್ತಾರೆ. ಆ ಹೆಸರು ಆ ಕ್ಷಣದಲ್ಲಿಯೇ ಅವರಿಗೆ ಸ್ಫುರಿಸುತ್ತದೆ. ದೀಕ್ಷೆಯ ನಂತರ ಕಾವಿಬಟ್ಟೆ ಧರಿಸಿ ಭಿಕ್ಷೆ ಸ್ವೀಕರಿಸಬೇಕು. ಅಹಿಂಸೆ, ಪ್ರತಿಸ್ಪರ್ಧಿತನ ಇಲ್ಲದಿರುವುದು ಮತ್ತು ಆವಶ್ಯಕತೆಗಿಂತ ಹೆಚ್ಚು ಬೇಡದೆ ಇರುವುದು – ಈ ೩ ಅಂಶಗಳನ್ನು ಸಾಧುವಾದವನು ಪಾಲಿಸಬೇಕು.
ಈ ಕ್ರಮವು ಬಹುತೇಕ ಎಲ್ಲ ಸಂನ್ಯಾಸಿಗಳಿಗೂ ಸಮವಾಗಿರುತ್ತದೆ. ಇದಾದ ಮೇಲೆ ಸಾಧುವು ಒಂಟಿಯಾಗಿದ್ದು ಯಾವ ಬಂಧು-ವರ್ಗದ ಸಂಪರ್ಕವೂ ಇಲ್ಲದೆ ಬದುಕುತ್ತಾರೆ.
ಗುರುಗಳು ಮತ್ತು ದೇವರು
ಧರ್ಮಗ್ರಂಥಗಳು ೪ ರೀತಿಯ ಯೋಗವನ್ನು ಹೇಳಿವೆ.
(೧) ಆತ್ಮನ ಜ್ಞಾನ ಮತ್ತು ಜಿಜ್ಞಾಸೆ. (೨) `ರಾಜಯೋಗ’ವು ಮಾನಸಿಕ-ದೈಹಿಕ ವ್ಯಾಯಾಮಗಳು ಮತ್ತು ನೈತಿಕ ಮೌಲ್ಯಗಳನ್ನು ತಿಳಿಸಿ ಮನಸ್ಸನ್ನು ಶಾಂತಗೊಳಿಸುತ್ತದೆ. (೩) ‘ಕರ್ಮಯೋಗ’ವು ಫಲಾಪೇಕ್ಷೆಯಿಲ್ಲದೆ ಕರ್ಮ ಮಾಡಲು ತಿಳಿಸುತ್ತದೆ. ಇದು ಬಹುತೇಕ ಮಂದಿಗೆ ಹೊಂದುವ ಯೋಗ. (೪) ಇನ್ನು ಕೊನೆಯ ‘ಭಕ್ತಿಯೋಗ’ವು ಭಗವಂತನಲ್ಲ್ಲಿ ಸಂಪರ್ಣ ಶರಣಾಗತಿಯನ್ನು ತಿಳಿಸುತ್ತದೆ. ಇದು ಭಾವನಾತ್ಮಕ ವ್ಯಕ್ತಿಗಳಿಗೆ ಸೂಚಿಸಿರುವ ಯೋಗವಾಗಿದೆ.
ನಾನು ಹತ್ತಾರು ಸಾಧುಗಳನ್ನು ಭೇಟಿಮಾಡಿದ್ದೇನೆ. ಬಹುತೇಕ ಎಲ್ಲರ ಮೂಲಧ್ಯೇಯವೂ ಒಂದೇ ತತ್ತ್ವವಾಗಿತ್ತು. ಅದು ಆತ್ಮನು ಬ್ರಹ್ಮನೊಂದಿಗೆ ಐಕ್ಯವಾಗುವುದು. ಇದೇ ಶ್ರೀಶಂಕರಾಚಾರ್ಯರು ಪ್ರತಿಪಾದಿಸಿದ ತತ್ತ್ವವೂ ಆಗಿದೆ. ಎಲ್ಲ ಸಾಧಗಳೂ ತಮ್ಮದೇ ಆಚರಣೆ ಹೊಂದಿದ್ದರು. ವೇದಾಂತಿಗಳು ವೇದ-ಶಾಸ್ತ್ರಗಳ ಅಧ್ಯಯನದಲ್ಲಿ ಮಗ್ನರಾಗಿದ್ದರೆ, ಭಕ್ತಿಪಂಥದವರು ಭಜನೆ-ಕೀರ್ತನೆಗಳನ್ನು ಮಾಡುತ್ತಿದ್ದರು. ಕೆಲವರು ಅತಿ ಕಷ್ಟವಾದ ವ್ರತಗಳನ್ನು ಸಂಕಲ್ಪಿಸಿ ನಡೆಸುತ್ತಿದ್ದರು.
ಭಾರತೀಯ ಸಂಸ್ಕೃತಿಯಲ್ಲಿ ಗುರುಗಳಿಗೆ ಮಹತ್ತ್ವದ ಸ್ಥಾನವಿದೆ. ಅನೇಕ ಸಾಧುಗಳು ತಮ್ಮ ಹಾಗೂ ಗುರುಗಳ ನಡುವಿನ ಒಡನಾಟವನ್ನು ತಿಳಿಸಿದರು. ರಮಾನಂದಗಿರಿಗಳು ಸರಿಯಾದ ಗುರು, ಮತ್ತು ಯೋಗ್ಯನಾದ ಶಿಷ್ಯನ ಸಂಬಂಧವು, ಅವರಿಬ್ಬರ ಮನಸ್ಸು ಸೂಕ್ತವಾಗಿ ಬೆರೆತಾಗಲೇ ಬೆಳೆಯತ್ತದೆ ಎಂದರು. ಮತ್ತೊಬ್ಬ ನಾಗಾ ಸಾಧುವು ಹೇಳಿದ್ದೇನೆಂದರೆ – ಅವರು ದೆಹಲಿಯ ಆಶ್ರಮವೊಂದಕ್ಕೆ ಹೋದಾಗ ಅಲ್ಲಿ ಒಬ್ಬ ವ್ಯಕ್ತಿಗೆ ಚಹಾ ಕೊಡಲು ಹೋದರು. ಆ ವ್ಯಕ್ತಿಯು ನಿನಗೆ ಗುರುಗಳಿದ್ದಾರೆಯೆ? ನೀನು ನನ್ನ ಶಿಷ್ಯನಾದರೆ ಮಾತ್ರ ಚಹಾ ಕುಡಿಯುತ್ತೇನೆ ಎಂದಾಗ ಆ ಕ್ಷಣದಲ್ಲಿಯೇ ಅವರ ಶಿಷ್ಯರಾದರು. ಗುರುಗಳು ೫,೦೦೦ ರೂ. ಕೊಟ್ಟು ಪರೀಕ್ಷಿಸಿದಾಗಲೂ `ನನಗೆ ಹಣಕ್ಕಿಂತ ಸಂನ್ಯಾಸವೇ ಇಷ್ಟ’ ಎಂದಾಗ ಅಲಹಾಬಾದಿಗೆ ಕರೆದುಕೊಂಡು ಹೋಗಿ ದೀಕ್ಷೆ ಕೊಟ್ಟರು ಎಂದು ಹೇಳಿದರು. ಅವರ ಗುರುಗಳು ಎಲ್ಲರನ್ನೂ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಸರಿಯಾಗಿ ಅಭ್ಯಾಸ ಮಾಡಿದಾಗ ಪ್ರಶಂಸೆಯನ್ನೂ ತಪ ಮಾಡಿದಾಗ ಶಿಕ್ಷೆಯನ್ನೂ ನೀಡಿತ್ತಾ ಯೋಗ-ಶಾಸ್ತ್ರಗಳನ್ನು ಕಲಿಸಿದ್ದರು.
ಮುಕ್ತಾನಂದರು ತಮ್ಮ ಗುರುಗಳ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿದ್ದರು. ನನ್ನ ಗುರುಗಳು ಕರುಣೆಯ ಕಡಲು. ಬೆಳಗ್ಗೆ ಮೊದಲು ತಾವು ಎದ್ದು ಆಮೇಲೆ ನನ್ನನ್ನು ಎಬ್ಬಿಸುತ್ತಿದ್ದರು. ಚಳಿಗಾಲದಲ್ಲಿ ತಾವೇ ಲಡ್ಡುಗಳನ್ನು ಮಾಡಿ ತಿನ್ನಿಸುತ್ತಿದ್ದರು. ನನಗೆ ವೇದಾಂತಶಾಸ್ತ್ರದ ಪಾಠ ಹೇಳಿದರು ಎಂದು ವಿವರಿಸಿದರು.
ರಮಾನಂದರ ಗುರುಗಳ ಹೆಸರು ಶ್ರೀಶ್ರೀ ೧೦೮ ಸ್ವಾಮಿ ವಿಶ್ವಾತ್ಮಾನಂದ. ಈ ೧೦೮ ಸಂಖ್ಯೆ ಯಾಕೆ ಸಾಧುಗಳಿಗೆ ಸೇರಿಸುತ್ತಾರೆ ಎಂಬ ಪ್ರಶ್ನೆ ನನ್ನಲ್ಲಿತ್ತು. ಅದನ್ನು ಕೇಳಿದಾಗ ಅದು ಶಿವನು ಧರಿಸಿರುವ ರುಂಡಮಾಲೆಯಲ್ಲಿರುವ ಕಪಾಲಗಳ ಸಂಖ್ಯೆ ಎಂದು ರಮಾನಂದರು ಹೇಳಿದರು. ಅಲ್ಲದೆ “ಅಷ್ಟು ಸಂಖ್ಯೆಯ ಕೀಲುಗಳು ನಮ್ಮ ದೇಹಲ್ಲಿವೆ, ಯಾವಾಗ ಆತ್ಮನೂ ಬ್ರಹ್ಮನೂ ಒಂದೇ ಎಂಬ ಜ್ಞಾನ ಬರುತ್ತದೋ ಆಗ ಆ ವ್ಯಕ್ತಿಯು ೧೦೮ ಸಂಖ್ಯೆಯನ್ನಿಟ್ಟುಕೊಳ್ಳಬಹುದು. ಈ ಜ್ಞಾನ ಸ್ವತಃ ಅಂತಶ್ಚಕ್ಷುವಿಗೆ ಗೋಚರವಾಗುತ್ತದೆ. ಹೊರಗಿನ ಜನರಿಗೆ ಇದರ ಅರಿವಾಗುವುದಿಲ್ಲ” ಎಂದರು.
ನಾನು ನೋಡಿದ ಸಾಧುಗಳಲ್ಲಿ ಅನೇಕರು ಅತ್ಯಂತ ಸುಶಿಕ್ಷಿತರೂ ಶಾಸ್ತ್ರಜ್ಞರೂ ಆಗಿದ್ದರು. ಇನ್ನು ಕೆಲವರು ಈ ಜೀವನ ಪರ್ವಜನ್ಮದ ಫಲವೆಂದು ಹೇಳುತ್ತಿದ್ದರು. ಹಿಂದುಧರ್ಮದಲ್ಲಿ ಅನೇಕ ಜಾತಿ, ದೇವರುಗಳ ಗುಂಪಿದೆ. ಆದರೆ ಶ್ರೀರಾಮಕೃಷ್ಣ ಪರಮಹಂಸರು ದೇವರೊಬ್ಬನೇ, ನಾಮ ಹಲವು. ನೀವು ಯಾವ ಹೆಸರಿನಿಂದ ಕರೆದರೂ ಅದು ಒಬ್ಬ ದೇವರಿಗೇ ಸಲ್ಲುತ್ತದೆ ಎಂದು ಹೇಳಿದ್ದಾರೆ. ಪ್ರತಿಯೊಬ್ಬರ ಆತ್ಮವೂ ದೈವಾತ್ಮಕವಾಗಿದ್ದರೂ ಆ ಸತ್ಯದ ಅರಿವಾಗುವುದು ಕಷ್ಟಕರ.
ಬದರಿನಾಥದ ಗಣೇಶಮಂದಿರದಲ್ಲಿ ವಿಶೇಷ ಸಾಧುವನ್ನು ನೋಡಿದೆವು. ಅಲ್ಲಿದ್ದ ಸ್ವಾಮಿ ಮಾಧವಾನಂದರು ಬಾಲ್ಯದಲ್ಲಿ ಪಾಲಕರನ್ನು ಕಳೆದುಕೊಂಡು ಅನಂತರ ಸಾಧುಗಳಾಗಿ ಇಲ್ಲಿಗೆ ಬಂದಿದ್ದರು. ದೇವರೇ ಪ್ರೇರೇಪಿಸಿ ತಮ್ಮನ್ನು ಇಲ್ಲಿಗೆ ಕರೆಸಿಕೊಂಡಿದ್ದಾಗಿ ಹೇಳಿದರು. ೨೫೦ ವರ್ಷಗಳ ಪ್ರಾಚೀನ ಗುಡಿಯನ್ನು ವರ್ಷವಿಡೀ ಚಳಿ-ಮಳೆಗೆ ಹೆದರದೆ ನೋಡಿಕೊಳ್ಳುತ್ತಿದ್ದರು. ದಾರಿಯಲ್ಲಿ ಹೋಗುವ ಲಾರಿ ಚಾಲಕರು ತಂದುಕೊಡುವ ಆಹಾರವೇ ಊಟ. ಇಡೀ ದಿನ ಮಂತ್ರಗಳ ಜಪ ಮಾಡುತ್ತಾ ಕಾಲ ಕಳೆಯುತ್ತಿದ್ದರು. ದೇವರೇ ಜೊತೆಯಿರುವಾಗ ತಮಗೆ ಒಂಟಿತನ ಕಾಡುವುದಿಲ್ಲವೆಂದು ಹೇಳಿದರು. ನೀವು ದೇವರನ್ನು ನೋಡಿದ್ದೀರಾ?” ಎಂದು ಕೇಳಿದಾಗ ಖಂಡಿತ ನೋಡಿದ್ದೇನೆ. ಪ್ರತಿ ಪದಾರ್ಥದಲ್ಲೂ ದೇವರಿದ್ದಾನೆ. ಈ ನದಿ, ಬೆಟ್ಟ, ಮರ, ಗಿಡ ಎಲ್ಲವೂ ದೇವರೇ. ಇಲ್ಲಿರುವುದು ಒಂದೇ ದೇಶ, ಒಂದೇ ಜಾತಿ, ಒಂದೇ ಧರ್ಮ – ಅದುವೇ ಸನಾತನಧರ್ಮ ಎಂದರು.
ಘನಶ್ಯಾಮದಾಸರು ಇಡೀ ಜೀವನವೇ ದೇವರ ಆಟ. ಅವನು ನಡೆಯಲು ಹೇಳಿದರೆ ನಾನು ನಡೆಯುತ್ತೇನೆ” ಎಂದರು; ದೇವರಿದ್ದಾನೆ, ಅದು ಅನುಭವಕ್ಕೆ ಮಾತ್ರ ಗೋಚರವಾಗುತ್ತದೆ ಎಂದರು. ಒರಿಸ್ಸಾದ ಸಾಧವೊಬ್ಬ ದೇವರನ್ನು ಅನೇಕ ರೂಪಗಳಲ್ಲಿ ನೋಡಿದ್ದಾಗಿ ಹೇಳಿದರು. “ಧ್ಯಾನದ ಸ್ಥಿತಿಯಲ್ಲಿದ್ದಾಗ ನೀವು ಯಾವ ರೂಪವನ್ನು ಅಪೇಕ್ಷಿಸುತ್ತೀರೋ ಆ ರೂಪದಲ್ಲಿ ದೇವರು ಕಾಣುತ್ತಾನೆ” ಎಂದರು. ಪ್ರೇಮದಾಸರು ಶಿವನೊಂದಿಗೆ ನೇರವಾಗಿ ಸಂವಾದ ಮಾಡುವುದಾಗಿಯೂ, ಅಲ್ಲದೆ ತಾವೂ ಪಜೆ ಮಾಡುವ ಶಿವಲಿಂಗದಲ್ಲಿ ದೇವರು ಪ್ರತ್ಯಕ್ಷ್ಷನಾಗಿದ್ದನೆಂದೂ ಹೇಳಿದರು.
ರಾಮಸುಖದಾಸರು “ಜಗತ್ತಿನ ಪರ್ಣ ಅಸ್ತ್ತಿತ್ವವನ್ನು ನಾನು ಕಂಡಿದ್ದೇನೆ” ಎಂದರು. “ಸಾಧುಗಳೊಡನೆ ಒಡನಾಡುವಾಗ ಅವರ ಜ್ಞಾನದ ಮೂಲವನ್ನು ಹುಡುಕಿ, ನೇರವಾಗಿ ಈಶ್ವರನಿಂದಲೇ ಆ ಜ್ಞಾನ ಪಡೆಯತ್ತೇನೆ” ಎಂದೂ ಹೇಳಿದರು. ನಾನು ಮಹಾಕಾಲನನ್ನು ನೋಡಿದ್ದೇನೆ. ನಿಶ್ಚಿತವಾದ ಗುರಿಯಿದ್ದರೆ, ಸಮಾಧಿಸ್ಥಿತಿಗೆ ಹೋಗುವ ಸಾಮರ್ಥ್ಯವಿದ್ದರೆ ಭಗವಂತನ ದರ್ಶನ ಸಾಧ್ಯ ಎಂದು ನುಡಿದರು.
ಅಲೆಮಾರಿ ಸಾಧುಗಳು
ಸಾಮಾನ್ಯವಾಗಿ ಸಾಧುಗಳು ತಮ್ಮದೇ ಆಶ್ರಮ ಅಥವಾ ಗುಡಿಸಲುಗಳಲ್ಲಿ ವಾಸಮಾಡುತ್ತಾರೆ. ಇನ್ನುಳಿದ ಸಾಧುಗಳು ನಿರಂತರ ಪ್ರಯಾಣಮಾಡುತ್ತಾ ಅಲೆಮಾರಿಗಳಾಗಿ ಬದುಕುತ್ತಾರೆ. ನಾನು ಸಂದರ್ಶಿಸಿದ ಒಬ್ಬ ನಾಗಾ ಸಾಧುವು ತಮ್ಮ ಅಲೆಮಾರಿ ಬದುಕನ್ನು ಹೀಗೆ ವಿವರಿಸಿದರು:
ನಾನು ನಾಲ್ಕೂ ಧಾಮಗಳನ್ನು (ಕೇದಾರನಾಥ, ಯಮುನೋತ್ರಿ, ಬದರಿನಾಥ, ಗಂಗೋತ್ರಿ) ಸುತ್ತಿದ್ದೇನೆ. ಕೆಲವೊಮ್ಮೆ ಸಾಧುಗಳ ಜೊತೆಗೆ, ಕೆಲವೊಮ್ಮೆ ಒಬ್ಬನೇ. ಒಬ್ಬನೇ ಹೋಗುವಾಗ ಭಯವಾಗಿದ್ದೇ ಇಲ್ಲ. ಗಾಂಜಾ-ಮದ್ಯ ಸೇವಿಸುವ ಸಾಧುಗಳನ್ನೂ ನೋಡಿದ್ದೇನೆ. ಅಲೆಮಾರಿ ಬದುಕು ವಿಶಿಷ್ಟವಾಗಿರುತ್ತದೆ. ದೇವ ರೊಂದಿಗೆ ಏಕಾಂತತೆ ಮೂಡುತ್ತದೆ. ದಟ್ಟ ಅರಣ್ಯಗಳಲ್ಲಿ ಹೋದರೂ ಹೆದರಿಕೆ ಇರುವುದಿಲ್ಲ ದೇವರ ಚಿಂತನೆ ಇರುವುದರಿಂದ. ಬರಿಗಾಲಲ್ಲೇ ಎಲ್ಲ ಕಡೆಗೂ ಸಂಚರಿಸುತ್ತೇನೆ.
ಈ ತರಹದ ಪ್ರಯಾಣದಿಂದ ಏನು ಉಪಯೋಗ? ಎಂದು ಕೇಳಿದಾಗ, ಒಂದು: ದೂರವಾಣಿಯಂತಹ ಮಾಧ್ಯಮ ಗಳಿಲ್ಲದಿದ್ದಾಗ ಸಾಧುಗಳೇ ಸುದ್ದಿವಾಹಕರಂತೆ ಕೆಲಸ ಮಾಡುತ್ತಿದ್ದರು. ಒಂದು ಊರಿನ ವಿಶೇಷಸುದ್ದಿಗಳು ಮತ್ತೊಂದೂರಿಗೆ ಸಿಗುತ್ತಿದ್ದವು. ಮತ್ತೊಂದು ಪ್ರಯೋಜನವೆಂದರೆ ನಿರಂತರ ಪ್ರಯಾಣದಲ್ಲಿದ್ದರೆ ಒಂದೇ ಸ್ಥಳಕ್ಕೆ ಅಂಟಿಕೊಳ್ಳಲು ಸಾಧ್ಯವಿಲ್ಲ. ತನ್ಮೂಲಕ ಊರು-ಜನರ ಮೋಹವೇ ಇರುವುದಿಲ್ಲ. ನಾವು ನಿತ್ಯವೂ ೫ ಮನೆಯಿಂದ ಭಿಕ್ಷೆ ತರುತ್ತೇವೆ. ಅದರಲ್ಲಿ ಒಂದು ಭಾಗ ಇರುವೆಗಳಿಗೂ, ಒಂದು ಭಾಗ ಗೋವಿಗೂ, ಒಂದು ಭಾಗ ನೀರಿಗೂ, ಒಂದು ಭಾಗ ನಮಗೂ, ಕೊನೆಯ ಭಾಗ ಬರುವ ಅತಿಥಿಗಳಿಗಾಗಿಯೂ ನೀಡುತ್ತೇವೆ” ಎಂದರು.
ನಿಮಗೆ ಸಾವಿನ ಭಯವಿಲ್ಲವೆ? ಎಂದು ಕೇಳಿದೆ. ಅದಕ್ಕವರು ಖಂಡಿತ ಇಲ್ಲ, ಏಕೆಂದರೆ ಆತ್ಮನಿಗೆ ಸಾವೇ ಇಲ್ಲ. ದೇಹ ಮಾತ್ರ ನಾಶವಾಗುತ್ತದೆ. ಈ ದೇಹ ಹೋದರೆ ಹೊಸ ಬಟ್ಟೆಯಂತೆ ಮತ್ತೊಂದು ದೇಹ ಬರುತ್ತದೆ ಎಂದರು. ದೇವರು ಎಲ್ಲ ಕಡೆ ಇರುವಾಗ ಈ ಕ್ಷೇತ್ರಗಳಿಗೆ ಯಾಕೆ ಹೋಗುತ್ತೀರಿ? ಎಂದು ಕೇಳಿದಾಗ, ಆ ಪ್ರದೇಶಗಳಲ್ಲಿ ಒಂದು ರೀತಿಯ ಶಕ್ತಿ ಇರುತ್ತದೆ. ಅಲ್ಲಿ ಹೋದಾಗ ಮೂಡುವ ತನ್ಮಯತೆ ಮತ್ತು ಏಕಾಗ್ರತೆ ಬೇರೆ ಕಡೆ ಸಾಧ್ಯವಿಲ್ಲ. ಜೊತೆಗೆ ಈ ಪ್ರದೇಶಗಳು ರಮಣೀಯವೂ, ಸುಂದರವೂ ಆಗಿರುತ್ತವೆ ಎಂದುತ್ತರಿಸಿದರು.
ಓಡಿಸ್ಸಾ ಆಶ್ರಮದ ಸಾಧುವೊಬ್ಬರು ತೀರ್ಥಯಾತ್ರೆಗೆ ಹೋಗುತ್ತಿರುವಾಗ ನಾನು ಭೇಟಿಯಾದೆ. ಅವರು ೩ನೇ ಬಾರಿ ಹಿಮಾಲಯಯಾತ್ರೆಗೆ ಬರುತ್ತಿದ್ದರು. ಯಾತ್ರೆಯಲ್ಲಿ ಒಬ್ಬನೇ ಇದ್ದಾಗ ಧ್ಯಾನ ಮಾಡುತ್ತೇನೆ. ಬೇರೆ ಸಾಧುಗಳ ಜೊತೆಯಿದ್ದರೆ ಧರ್ಮಗ್ರಂಥಗಳ ಚರ್ಚೆ ಮಾಡುತ್ತೇನೆ ಎಂದರು.
ಯಾತ್ರೆ ಎನ್ನುವುದು ಸಾಧುಗಳ ಜೀವನದ ಮುಖ್ಯಭಾಗ. ಕೆಲವೊಮ್ಮೆ ಅವರ ಗುರುಗಳೇ ಈ ಯಾತ್ರೆಗಾಗಿ ಆದೇಶಿಸುತ್ತಾರೆ. ಯಾತ್ರೆಯಲ್ಲಿ ಅವರಿಗೆ ಹಸಿವು, ಅವಮಾನ, ಅನನುಕೂಲತೆಗಳ ದರ್ಶನವಾಗಿ ಹೆಚ್ಚು ವಿರಕ್ತರಾಗುತ್ತಾರೆ. ಹೀಗಾಗಿ ದೀಕ್ಷೆ ಕೊಡುವ ಮೊದಲು ಇದೊಂದು ಪರೀಕ್ಷೆಯಂತೆಯೂ ಕೆಲವರು ಯಾತ್ರೆಗೆ ಹೋಗುತ್ತಾರೆ. ಜೊತೆಗೆ ಯಾತ್ರೆಯಿಂದ ಅನೇಕ ಮಹಾತ್ಮರ ಭೇಟಿಯಾಗುತ್ತದೆ.
ಕೆಲವೊಮ್ಮೆ ಸಮಯಕ್ಕೆ ಬಂದ ಅವಕಾಶದಿಂದಾಗಿ ಯಾತ್ರೆಯನ್ನು ಕೈಬಿಡುವ ಸಾಧುಗಳೂ ಇರುತ್ತಾರೆ. ರಮಾನಂದಗಿರಿ ತಮ್ಮ ಕಥೆಯನ್ನು ಹೇಳಿದರು. ನಾನು ಹರಿದ್ವಾರಕ್ಕೆ ಹೋಗಿದ್ದಾಗ, ಊಟದ ವ್ಯವಸ್ಥೆ ಗೊತ್ತಿರಲಿಲ್ಲ. ಕೊನೆಗೆ ಅನ್ನಕ್ಷೇತ್ರದಲ್ಲಿ ಊಟ ಕೊಡುತ್ತಾರೆಂದು ತಿಳಿದು ಅಲ್ಲಿಗೆ ಹೋಗುತ್ತಿದ್ದೆ. ಒಮ್ಮೆ ಸಾಧುಗಳ ಜೊತೆ ಸೇರಿ ಹೃಷೀಕೇಶಕ್ಕೆ ಬಂದೆ. ಅಲ್ಲಿಯೂ ಬೆಳಗ್ಗೆ ಅನ್ನಕ್ಷೇತ್ರದಲ್ಲಿ, ರಾತ್ರಿ ನೇಪಾಳಿ ಅನ್ನಕ್ಷೇತ್ರದಲ್ಲಿ ಊಟ ಸಿಗುತ್ತಿತ್ತು. ಒಂದು ದಿನ ಒಂದು ಕಥಾಸತ್ಸಂಗಕ್ಕೆ ಹೋದಾಗ, ಅಲ್ಲಿಯ ಪ್ರವಚನಕಾರನಿಗೆ ಕಣ್ಣಿನಲ್ಲಿ ನೋವು ಉಂಟಾಗಿ, ಪ್ರವಚನ ಮಾಡಲಾಗಲಿಲ್ಲ. ಪುರಾಣಗಳನ್ನು ಓದಿದ್ದ ನಾನೇ ಅಂದು ಪ್ರವಚನ ಮಾಡಿದೆ. ಅಲ್ಲಿಯ ಜನರಿಗೆ ತುಂಬಾ ಹಿಡಿಸಿತು ಮತ್ತು ಅಲ್ಲಿಂದ ಮುಂದೆ ಅಲ್ಲಿಯೇ ಇದ್ದು ನಿತ್ಯವೂ ಪ್ರವಚನ ಮಾಡಲು ಕೇಳಿಕೊಂಡರು. ನಾನೇನು ಪ್ರವಚನ ಮಾಡಲು ತರಬೇತಿ ಹೊಂದಿಲ್ಲವಾದರೂ. ಬಾಲ್ಯದಲ್ಲಿ ಕೇಳಿದ ಕಥೆಗಳೇ ನನ್ನ ಆಸ್ತಿ. ಅಂದಿನಿಂದ ನಾನು ಯಾತ್ರೆಗೆ ಹೋಗದೆ ಆಶ್ರಮದಲ್ಲೇ ಇದ್ದೇನೆ. ಸ್ವತಃ ಮಹಾತ್ಮರೇ ಈ ಆಶ್ರಮಕ್ಕೆ ಬರುವಾಗ, ನಾನೇಕೆ ಬೇರೆಡೆಗೆ ಹೋಗಲಿ! ಎಂದು ವಿವರಿಸಿದರು.
ಧಾರ್ಮಿಕ ಕೇಂದ್ರಗಳು – ಆಶ್ರಮಗಳು ಮತ್ತು ಮಠಗಳು
ಅಲೆಮಾರಿ ಸಾಧುಗಳಂತೆ, ಆಶ್ರಮದಲ್ಲಿ ಸ್ಥಿರವಾಗಿರುವ ಸಾಧುಗಳ ವಿವರಗಳೂ ನನಗೆ ದೊರೆತವು. ಕೆಲವರು ಆಶ್ರಮವಾಸದ ಬಗ್ಗೆ ಆಕ್ಷೇಪ ತೋರುತ್ತಾರೆ. ಆಶ್ರಮ ಕಟ್ಟಿಕೊಂಡವರು ಆಲಸಿಗಳು, ಸೌಲಭ್ಯಗಳ ಆಸೆಯಿಂದ ಅಲ್ಲಿಯೇ ಇರುತ್ತಾರೆ ಎಂಬ ಕೋಪ ಅಲೆಮಾರಿ ಸಾಧುಗಳಲ್ಲಿದೆ. ಆದರೆ ಬಹು ಪ್ರಾಚೀನ ಕಾಲದಿಂದಲೂ ಹೀಗೊಂದು ಆಶ್ರಮ ಅಥವಾ ಮಠದ ಅಸ್ತಿತ್ವ ಇರುವುದು ಕಂಡುಬರುತ್ತದೆ. ನಾನು ಇಂತಹ ಎರಡು ಆಶ್ರಮಗಳನ್ನು ಅಭ್ಯಸಿಸಲು ಮುಂದಾದೆ: ಒಂದು ಹೃಷೀಕೇಶದಲ್ಲಿರುವ ಭಕ್ತಿಪಂಥದ ಆಶ್ರಮ. ಇನ್ನೊಂದು ದಕ್ಷಿಣಭಾರತದಲ್ಲಿನ ವೇದಾಂತಿಗಳ ಮಠ.
ಹೃಷೀಕೇಶದಲ್ಲಿನ ರಾಮದೇವ ಪಾಠಿಯವರ ಆಶ್ರಮದೊಂದಿಗೆ ನನ್ನ ಸಂಪರ್ಕ ನಿಕಟವಾಗಿತ್ತು. ಅಲ್ಲಿ ಭಕ್ತಿಯ ವಾತಾವರಣ ಹೆಚ್ಚಾಗಿತ್ತು. ಒಳಗಡೆ ಹೋಗುತ್ತಿದ್ದಂತೆ ಸುಂದರ ಉದ್ಯಾನವನ, ಅತಿಥಿಗಳಿಗೆ ಕೂಡಲು ಉತ್ತಮ ವ್ಯವಸ್ಥೆಗಳಿದ್ದವು. ಮೊದಲ ಸಲ ಹೋದಾಗ ಅಲ್ಲೊಬ್ಬ ಮಾನಸಿಕವಾಗಿ ಖಿನ್ನನಾಗಿರುವ ವ್ಯಕ್ತಿಯನ್ನು ನೋಡಿ ಅವನಿಗೆ ಸೂಕ್ತ ಪರಿಹಾರ ನೀಡಿದೆ. ಉಳಿದವರೂ ನಾನು ವೈದ್ಯನೆಂದು ಬಹುವಾಗಿ ಗೌರವಿಸಿದರು.
“ಉತ್ಕೃಷ್ಟತೆಯೆಂದರೆ ನಮ್ಮನ್ನು ಜಗತ್ತಿಗೆ ಹೆಚ್ಚಾಗಿ ತೆರೆದುಕೊಳ್ಳುವುದು. ಅಂದರೆ, ನಮ್ಮ ಜೊತೆಗೆ, ನಮ್ಮ ಪ್ರೀತಿಪಾತ್ರರನ್ನು, ತಂದೆ-ತಾಯಿಯನ್ನು, ಎಲ್ಲರನ್ನೂ ನಮ್ಮಷ್ಟೇ ಪ್ರಮುಖರು ಎಂದು ತಿಳಿಯುವುದು. ಬಹುಶಃ ವೇದಾಂತವು ಹೇಳುವಂತೆ `ಎಲ್ಲವೂ ಬ್ರಹ್ಮನಾಗಿದ್ದಾನೆ’ ಎನ್ನುವುದು ಇದೇ.”
ಸ್ವಾಮಿ ರಾಮದೇವ ಪಾಠಿ `ಗರೀಬ್ದಾಸ’ ಸಂಪ್ರದಾಯದವರು. ಗರೀಬ್ದಾಸರು, ಕಬೀರ್ದಾಸರ ಅವತಾರ ಎಂದೇ ಪರಿಗಣಿಸಲ್ಪಟ್ಟವರು. ಇಲ್ಲಿ ಧರ್ಮಭೇದವಿಲ್ಲದೆ, ಲಿಂಗಭೇದವಿಲ್ಲದೆ ದೀಕ್ಷೆ ಕೊಡಲಾಗುತ್ತದೆ. ರಾಮದೇವರು ಜಾತೀಯತೆಯ ವಿರೋಧಿಗಳಾಗಿದ್ದರು.
ರಾಮದೇವರು ನೇಪಾಳದ ಗಡಿಯಲ್ಲಿ ಹುಟ್ಟಿದವರು. ಬಾಲ್ಯದಿಂದಲೇ ಎಲ್ಲರಿಗಿಂತ ಭಿನ್ನವಾಗಿ ಧಾರ್ಮಿಕ ವಿಚಾರಗಳಲ್ಲಿ ಭಾಗವಹಿಸುತ್ತಿದ್ದರು. ಅವರು ೮ ವರ್ಷದವರಿದ್ದಾಗ, ಆ ಊರಿಗೆ ಒಬ್ಬ ಸ್ವಾಮಿಜೀ ಬಂದರು. ರಾಮದೇವರು ನಿತ್ಯವೂ ಅವರ ಹತ್ತಿರ ಹೋಗಲಾರಂಭಿಸಿದರು. ಒಮ್ಮೆ ದೇವರಪೂಜೆಗೆ ತುಪ್ಪವಿಲ್ಲದಿದ್ದಾಗ ಈ ಬಾಲಕನನ್ನು ಕರೆದು ಗಂಗೆಯನ್ನು ಪ್ರಾರ್ಥಿಸಿ ತುಪ್ಪ ತೆಗೆದುಕೊಂಡು ಬಾ ಎಂದರು. ಬಾಲಕ ಕ್ಷೀರಗಂಗೆಗೆ (ಈ ಭಾಗದಲ್ಲಿ ಬೆಳ್ಳಗಿನ ಪ್ರವಾಹದಂತೆ ಗಂಗೆಯು ಇರುವುದರಿಂದ ಕ್ಷೀರಗಂಗೆ ಎಂದು ಹೆಸರು) ಹೋಗಿ, ಅಲ್ಲಿಂದ ಒಂದು ಪಾತ್ರೆಯಲ್ಲಿ ನೀರು ತೆಗೆದುಕೊಂಡು ಬಂದ. ಆ ಸಂನ್ಯಾಸಿ ಒಂದು ಕಡ್ಡಿಯನ್ನು ಅದರಲ್ಲಿ ಹಾಕಿ ತೋರಿಸಿದರೆ ಅದು ತುಪ್ಪವಾಗಿತ್ತಂತೆ. ಮತ್ತೊಮ್ಮೆ ‘ಧುನಿ’ ಎಂಬ ಪವಿತ್ರ ಕಟ್ಟಿಗೆಯನ್ನು ತರಲು ಹೋದಾಗ, ಒಂದು ಚಿರತೆ ಅಡ್ಡಬಂದರೂ ಅದು ಏನೂ ಮಾಡಲಿಲ್ಲ. ಈ ಘಟನೆಗಳಿಂದ ದೇವರ ಮೇಲಿನ ನಂಬಿಕೆ ಹೆಚ್ಚಾಯಿತು.
ಕೆಲವು ದಿನಗಳ ನಂತರ ಆ ಸ್ವಾಮಿಜೀ ಬೇರೆ ಊರಿಗೆ ಹೋದರು. ಅವರನ್ನು ಹುಡುಕುತ್ತಾ ರಾಮದೇವರು ದೆಹಲಿಗೆ ಹೋದರು. ಅಲ್ಲಿ ನರಸಿಂಗದಾಸ ಅನ್ನುವವರ ಜೊತೆ ಸೇರಿ, ಡಿಪ್ಲೊಮಾ, ಒ.ಂ. ತನಕ ಓದಿದರು. ಆ ನಂತರ ಸ್ವಲ್ಪದಿನ ಆರ್ಯಸಮಾಜದ ಪ್ರಭಾವವೂ ಅವರ ಮೇಲಾಗಿತ್ತು. ಆದರೆ ಒಮ್ಮೆ ಒಬ್ಬ ವ್ಯಕ್ತಿಯು ಅವರ ‘ಮೂರ್ತಿಪೂಜೆಯ ವಿರೋಧ’ವನ್ನು ಖಂಡಿಸಿದಾಗ, ಅದು ಸರಿಯೆನಿಸಿ ಆರ್ಯಸಮಾಜದ ಚಿಂತನೆಯಿಂದ ಹೊರಬಂದರು.
ರಾಮದೇವರು ಶಿಕ್ಷಕರಾಗಿ ಸೇವೆಸಲ್ಲಿಸುತ್ತಿದ್ದರು. ಆದರೆ ಸಂನ್ಯಾಸಿಯಾಗುವ ಹಂಬಲ, ಅವರನ್ನು ಹರಿದ್ವಾರ, ಹೃಷೀಕೇಶಕ್ಕೆ ಎಳೆಯಿತು. ಅವರು ಗುರುಗಳನ್ನು ಹುಡುಕುತ್ತಾ ಒಬ್ಬ ಸಾಧುವಿನ ಬಳಿ ಹೋದರು. ಮೊದಲು ಆ ಸಾಧುಗಳು ಸಂನ್ಯಾಸ ಕೊಡಲು ನಿರಾಕರಿಸಿದರು. ಆದರೆ ರಾಮದೇವರು ಬೆನ್ನುಬಿಡದೆ ದಿನವೂ ಅನ್ನಕ್ಷೇತ್ರದಿಂದ ಊಟ ತರುತ್ತಿದ್ದರು. ಹಾಗೆಯೇ ಶಾಸ್ತ್ರಗಳನ್ನು ಕಲಿತರು. ದೀಕ್ಷೆಗೂ ಮುಂಚೆ ಬರಿಗಾಲಲ್ಲಿ ಗೌಮುಖಕ್ಕೆ ಹೋಗಿ ಗಂಗೆಯ ನೀರನ್ನು ತಂದರು. ಗುರುಗಳ ಆಜ್ಞೆಯಂತೆ ಕಟ್ಟುನಿಟ್ಟಾದ ಬ್ರಹ್ಮಚರ್ಯ ಪಾಲಿಸುತ್ತಾ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಮಾಡಿದರು. ಕೊನೆಗೆ ಗುರುಗಳಿಂದ ದೀಕ್ಷೆ ಪಡೆದು ಸಂನ್ಯಾಸಿಗಳಾದರು.
ಗುರುಗಳ ಮರಣಾನಂತರ, ಇವರೇ ಆಶ್ರಮವನ್ನು ಅಚ್ಚುಕಟ್ಟಾಗಿ ನೋಡಿಕೊಂಡರು. ಯಾರ ಹತ್ತಿರವೂ ದುಡ್ಡು ಕೇಳದೆ, ಬಂದ ಸಹಾಯದಿಂದಲೇ ಆಶ್ರಮ ಬೆಳೆಸಿದರು. ಇಲ್ಲಿರುವ ಆಕಳುಗಳ ಹಾಲನ್ನು ಮಾರಾಟ ಮಾಡದೆ ಕೇವಲ ಅತಿಥಿಗಳಿಗಾಗಿ ಉಪಯೋಗಿಸುತ್ತಾರೆ. ರಾಮದೇವರ ದಿನಚರಿ ಬಹಳ ಕಠಿಣ. ಬೆಳಗ್ಗೆ ೩ ಗಂಟೆಗೆ ಏಳುವುದು, ಜಪ ಮಾಡುವುದು, ಭಕ್ತರನ್ನು ಸಂದರ್ಶಿಸುವುದು ಹೀಗೆ ದಿನವಿಡೀ ಕಾರ್ಯಮಗ್ನರಾಗಿರುತ್ತಿದ್ದರು.
ರಾಮದೇವರು ಜನರೊಂದಿಗೆ ಮಾತನಾಡುವ ಬಗೆಯೇ ಔಚಿತ್ಯಪೂರ್ಣವಾಗಿರುತ್ತಿತ್ತು. ಜನರ ಕಷ್ಟಗಳನ್ನು ಪೂರ್ಣವಾಗಿ ಆಲಿಸಿ, ಅವರಿಗೆ ಮನಸ್ಸಮಾಧಾನ ಆಗುವ ಹಾಗೆ ಪರಿಹಾರವನ್ನು ಹೇಳುವ ಕಲೆ ಅವರಿಗೆ ಕರಗತವಾಗಿತ್ತು. ಮಕ್ಕಳ ಜೊತೆ ತಮಾಷೆ ಮಾಡುತ್ತಾ, ಭಕ್ತರಿಗೆ ಅವರಿಷ್ಟದ ದೇವರ ಮಂತ್ರಗಳನ್ನು ಹೇಳುತ್ತಾ, ಯುವಕರಿಗೆ ಸದ್ಗುಣಗಳನ್ನು ತಿಳಿಸುತ್ತಾ ಮಾತನಾಡುತ್ತಿದ್ದರು. ದೇವರ ಬಿಂಬವನ್ನು ನಿನ್ನ ಹೃದಯದ ಕನ್ನಡಿಯಲ್ಲಿ ನೋಡಿಕೋ. ಕನ್ನಡಿ ಅಶುದ್ಧವಾಗಿದ್ದರೆ ಏನೂ ಕಾಣುವುದಿಲ್ಲ. ಆದ್ದರಿಂದ ನಿನ್ನ ಹೃದಯವನ್ನು ಶುದ್ಧಮಾಡು, ದೇವರು ಕಾಣುತ್ತಾನೆ ಎಂದು ಕಾವ್ಯಮಯವಾಗಿ ಉತ್ತರಿಸುತ್ತಿದ್ದರು.
ಅವರ ಗುರುಗಳ ಸಂಬಂಧದ ಬಗ್ಗೆ ಕೇಳಿದೆ. ನಾನೂ ನನ್ನ ಗುರುಗಳೂ ತಂದೆ-ಮಗನ ಹಾಗೆ ಇದ್ದೆವು. ಬಾಲ್ಯದಿಂದಲೂ ನನ್ನ ಕಷ್ಟದ ಸಮಯದಲ್ಲಿ ಎಷ್ಟೋ ಬಾರಿ ಅಪ್ಪಿಕೊಂಡು ಸಮಾಧಾನ ಪಡಿಸುತ್ತಿದ್ದರು ಎಂದರು. ಅಲೆಮಾರಿ ಸಾಧುಗಳ ಬಗ್ಗೆ ಕೇಳಿದಾಗ, ತೀರ್ಥಯಾತ್ರೆ ಉತ್ತಮವೇ. ಅದರಿಂದ ಬಹಳ ಜ್ಞಾನ ಲಭಿಸುತ್ತದೆ. ಆದರೆ ಅದೊಂದು ಚಟವಾಗಬಾರದು. ಪ್ರತಿವರ್ಷವೂ ಬದರಿಗೆ ಹೋಗುವುದರಲ್ಲೇನಿದೆ? ಎಂದರು. ನಿನ್ನನ್ನು ನೀನು ಅರಿತಾಗಲೇ ಮೋಕ್ಷ ಎಂದು ತಮ್ಮ ಮಾತು ನಿಲ್ಲಿಸಿದರು.
ನಾನು ನೋಡಿದ ಇನ್ನೊಂದು ಆಶ್ರಮ ವೇದಾಂತಿಗಳದ್ದು. ಅಲ್ಲಿಯ ಸಾಧು ಬಹುಶ್ರುತರೂ, ಜ್ಞಾನಿಗಳೂ ಆದ ಸ್ವಾಮಿ ದಯಾನಂದರು. ದೇಶ ವಿದೇಶಗಳಲ್ಲಿ ಅವರ ಪ್ರವಚನಕ್ಕೆ ಬೇಡಿಕೆ ಇತ್ತು. ನಾನು ಆಶ್ರಮಕ್ಕೆ ಹೋದಾಗ ಅಲ್ಲಿ ೧೦೦ ಜನರ ತಂಡಕ್ಕೆ ವೇದಾಂತದ ಶಿಬಿರ ನಡೆಯುತ್ತಿತ್ತು. ಅವರಲ್ಲಿ ಭಾರತೀಯರ ಜೊತೆಗೆ ಅಮೆರಿಕ, ಆಫ್ರಿಕಾದಿಂದ ಬಂದವರೂ ಇದ್ದರು. ಅವರೆಲ್ಲಾ ಪಾಶ್ಚಾತ್ಯ ಜೀವನಶೈಲಿಯಿಂದ ಬೇಸತ್ತು ಹಿಂದೂಗಳಾಗಿದ್ದರು. ಹೆಂಗಸರು ಸೀರೆ ಉಟ್ಟಿದ್ದರು. ಎಲ್ಲರೂ ತಿಲಕಗಳನ್ನು ಧರಿಸಿದ್ದರು.
ಈ ಆಶ್ರಮ ಮದ್ರಾಸಿನ ಹತ್ತಿರವಿದೆ. ಆಶ್ರಮದ ಸುತ್ತ ಉದ್ಯಾನವನ, ಕುಡಿಯುವ ನೀರಿನ ವ್ಯವಸ್ಥೆ, ವಿದ್ಯುತ್, ದೂರವಾಣಿ, ದೊಡ್ಡ ರೂಮುಗಳು, ಭೋಜನಶಾಲೆ – ಹೀಗೆ ಸುವ್ಯವಸ್ಥಿತವಾದ ಆಶ್ರಮ ಅದಾಗಿತ್ತು. ಅಲ್ಲದೆ, ಆಶ್ರಮದಲ್ಲಿ ಎಲ್ಲರಿಗೂ ವೇಳಾಪಟ್ಟಿ ತಯಾರು ಮಾಡಲಾಗಿತ್ತು. ಅಲ್ಲಿಯ ಊಟ ಶುದ್ಧವೂ, ಪೌಷ್ಟಿಕವೂ ಆಗಿತ್ತು. ಬೆಳಗ್ಗೆ ತಿಂಡಿಯಾದ ಮೇಲೆ ಭಕ್ತರು ಸ್ವಾಮಿಗಳನ್ನು ಭೇಟಿಯಾಗಲು ಬರುತ್ತಿದ್ದರು. ಪ್ರವಚನದ ಬಗ್ಗೆ ಸಂದೇಹಗಳು, ಸಮಾಜದ ಬಗ್ಗೆ, ಸ್ವಾಮಿಗಳ ಮುಂದಿನ ಪ್ರಯಾಣದ ಬಗ್ಗೆ, ಹೀಗೆ ವಿವಿಧ ರೀತಿಯ ಮಾತುಕತೆಗಳು ನಡೆಯುತ್ತಿದ್ದವು.
ಸ್ವಾಮಿಗಳು ದೈಹಿಕ ವ್ಯಾಯಾಮಕ್ಕೆ ಅಷ್ಟು ಪ್ರಾಮುಖ್ಯ ಕೊಟ್ಟಿರಲಿಲ್ಲ. ಯೋಗವೆಂಬುದು ಕೇವಲ ಶಿಸ್ತಿಗಾಗಿ ಇರುವ ಒಂದು ಘಟ್ಟ; ಆದರೆ ಜ್ಞಾನಕ್ಕಾಗಿ ವೇದಾಂತವನ್ನೇ ಅವಲಂಬಿಸಬೇಕು ಎಂಬುದು ಅವರ ತತ್ತ್ವ.
ದಯಾನಂದರು ತಮಿಳುನಾಡಿನ ಬ್ರಾಹ್ಮಣ ಕುಟುಂಬದವರು. ಆ ಕಾಲದಲ್ಲಿ ದ್ರವಿಡ ಚಳವಳಿಯಿಂದ ಬ್ರಾಹ್ಮಣ-ವಿರೋಧಿ ಅಲೆ ಇದ್ದರೂ, ಅದನ್ನು ಲೆಕ್ಕಿಸದೆ ನಿರ್ಭೀತಿಯಿಂದ ಬ್ರಾಹ್ಮಣ್ಯವನ್ನು ಪಾಲಿಸಿಕೊಂಡು ಬಂದಿದ್ದರು. ಓದಿನಲ್ಲಿ ಜಾಣನಾಗಿದ್ದ ಬಾಲಕ, ಸಣ್ಣವನಿದ್ದಾಗಿನಿಂದ ಅನೇಕ ಸಾತ್ತ್ವಿಕ ಗುಣಗಳನ್ನು ಬೆಳೆಸಿಕೊಂಡಿದ್ದ. ಕಷ್ಟದಲ್ಲಿರುವವರಿಗೆ ಸಹಾಯ ಮಾಡುವ ಗುಣ ಬಹಳವಾಗಿತ್ತು. ಓದಿನ ನಂತರ, ಮದ್ರಾಸಿನ ‘ಧಾರ್ಮಿಕ ಹಿಂದು’ ಪತ್ರಿಕೆಯಲ್ಲಿ ಕೆಲಸಕ್ಕೆ ಸೇರಿದರು. ಕೆಲವು ದಿನ ವಾಯುಪಡೆಯಲ್ಲಿ, ಅಲ್ಲಿಂದ ಬಂದು ‘ಲೆನ್ಸ್’ ಎಂಬ ಪತ್ರಿಕೆಯಲ್ಲಿ ಕೆಲಸ ಮಾಡಿದರು. ಒಮ್ಮೆ ಸ್ವಾಮಿ ಚಿನ್ಮಯಾನಂದರ ‘ಮುಂಡಕೋಪನಿಷತ್’ನ ಪ್ರವಚನ ಕೇಳಿ, ವೇದ-ಉಪನಿಷತ್ತಿನ ಬಗ್ಗೆ ಆಸಕ್ತಿ ಬೆಳೆಯಿತು. ಸಂಸ್ಕೃತ ಕಲಿಯಲು ಪ್ರಾರಂಭಿಸಿದರು. ಇವರ ಉದಾರ ಮನಸ್ಸು, ಸೇವಾ ಮನೋಭಾವ ಚಿನ್ಮಯಾನಂದರನ್ನೂ ಪ್ರಭಾವಿಸಿತ್ತು. ಹೀಗೆ ಸ್ವಾಮಿಗಳಿಗೆ ಹತ್ತಿರವಾಗಿದ್ದ ಅವರು. ಭಗವದ್ಗೀತೆಯ ಪರಿಷ್ಕರಣೆಯ ಕಾರ್ಯಕ್ಕೆ ಗುರುಗಳ ಜೊತೆ ಹಿಮಾಲಯಕ್ಕೆ ಹೋದರು. ಅಲ್ಲಿಂದ ಮರಳಿದ ಮೇಲೆ ಕೆಲವು ಕಾಲ ‘ತ್ಯಾಗ’ ನಿಯತಕಾಲಿಕೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಈ ಮಧ್ಯೆ ತಮ್ಮಲ್ಲಿದ್ದ ಅನೇಕ ಧಾರ್ಮಿಕ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ರಮಣಮಹರ್ಷಿ, ಕೃಷ್ಣಮೂರ್ತಿ, ವಿಲಿಯಮ್ ಬ್ಲೇಕ್ ಮುಂತಾದವರ ಗ್ರಂಥಗಳನ್ನು ಅಭ್ಯಾಸ ಮಾಡಿ, ವೇದಾಂತವೇ ಜ್ಞಾನಕ್ಕೆ ನೇರ ದಾರಿ ಎಂದು ನಿರ್ಧರಿಸಿದರು. ಶಂಕರಾಚಾರ್ಯರ ಅದ್ವೈತತತ್ತ್ವವನ್ನು ಆಳವಾಗಿ ಅಭ್ಯಾಸಮಾಡಿದ ಮೇಲೆ, ಸ್ವಾಮಿ ಚಿನ್ಮಯಾನಂದರಿಂದ ದೀಕ್ಷೆ ಪಡೆದ ನಂತರ ಗಂಗೋತ್ರಿ, ಹೃಷೀಕೇಶ ಮೊದಲಾದ ಕಡೆ ಸಂಚರಿಸಿ, ಅಲ್ಲಿ ಕೆಲವು ದಿನ ಏಕಾಂತವಾಸದಲ್ಲಿದ್ದು ಬ್ರಹ್ಮಸೂತ್ರಗಳ ಅಧ್ಯಯನ ಮಾಡಿದರು.
ತದನಂತರ ಗುರುಗಳ ಆಜ್ಞೆಯಂತೆ ಮರಳಿ ಆಶ್ರಮಕ್ಕೆ ಬಂದು ಯಜ್ಞ-ಯಾಗಗಳನ್ನು ಮಾಡಿದರು. ಗೀತೆ-ಉಪನಿಷತ್ತುಗಳ ತರಬೇತಿ ಶಿಬಿರಗಳನ್ನು ಆಯೋಜಿಸಲಾರಂಭಿಸಿದರು. ಚಿನ್ಮಯಾನಂದರಿಗೆ ಆರೋಗ್ಯ ಸರಿಯಿಲ್ಲದಿದ್ದಾಗ ಇವರೇ ಅಮೆರಿಕಕ್ಕೆ ಹೋಗಿ ಪ್ರವಚನ ನೀಡಿದರು. ಹೀಗೆ ಪ್ರಸಿದ್ಧರಾದ ಸ್ವಾಮಿ ದಯಾನಂದರು, ದೇಶ ವಿದೇಶಗಳಲ್ಲಿ ‘ಆರ್ಷ ವಿದ್ಯಾಪೀಠ’ಗಳನ್ನು ಸ್ಥಾಪಿಸಿದ್ದಾರೆ ಮತ್ತು ೧೦೦ಕ್ಕಿಂತ ಹೆಚ್ಚು ಜನರಿಗೆ ದೀಕ್ಷೆ ನೀಡಿದ್ದಾರೆ.
ನಾನು ಕೇಳಿದ ಹಲವು ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ಅದರ ಸಾರಾಂಶ ಹೀಗಿದೆ–
- ಸಮಾಜವು ಹದಗೆಟ್ಟಿದೆ. ನೈತಿಕ ಮೌಲ್ಯಗಳು ಕುಸಿದಿವೆ. ಕೆಲವರು ಖಿನ್ನತೆಗೊಳಗಾಗುತ್ತಾರೆ. ಕೆಲವರು ಡ್ರಗ್ಸ್, ಅಪರಾಧಪ್ರಕರಣಗಳಲ್ಲಿ ಭಾಗಿಯಾಗುತ್ತಾರೆ. ಕೆಲವರು ಅಧ್ಯಾತ್ಮದತ್ತ ಮನಸ್ಸು ಮಾಡುತ್ತಾರೆ. ಇವೆಲ್ಲವೂ ಅವರ ಕರ್ಮದ ಅನುಸಾರವಾಗಿ ನಡೆಯುತ್ತದೆ.
- ಯೋಗವು ಒಳ್ಳೆಯದು. ಅದು ಶಿಸ್ತನ್ನು ಕಲಿಸುತ್ತದೆ. ಆದರೆ ಅದರಿಂದ ಜ್ಞಾನ ಲಭಿಸುವುದಿಲ್ಲ. ಜ್ಞಾನ ಬೇಕಾದರೆ ವೇದಾಂತಕ್ಕೇ ಬರಬೇಕು.
- ಹಿಮಾಲಯದ ಎಷ್ಟೋ ಸಾಧುಗಳು ತಂತ್ರ ಕಲಿತವರು, ಶಾಸ್ತ್ರಜ್ಞರಲ್ಲ. ಹಿಮಾಲಯದ ಸೌಂದರ್ಯ ಆರಂಭದಲ್ಲಿ ಮುದ ಕೊಡುತ್ತದೆ. ಆದರೆ ನಿಜವಾದ ಆನಂದ ಸಿಗುವುದು ಜ್ಞಾನದಿಂದ.
- ‘ತಮಗಾಗಿ’ ಎಂದು ಸಮಯವಿಲ್ಲದವರು, ಸಮಾಜಕ್ಕಾಗಿ ನಿರಂತರ ದುಡಿಯಬಹುದು.
- ಸಂನ್ಯಾಸದಿಂದ ನನ್ನಲ್ಲಿ ಅಂತಹ ಬದಲಾವಣೆ ಆಗಿಲ್ಲ. ಏಕೆಂದರೆ ನಾನು ಬಾಲ್ಯದಿಂದಲೇ ಈ ಅಧ್ಯಾತ್ಮದ ಹಾದಿಯಲ್ಲಿದ್ದೇನೆ.
- ತಿಳಿವಳಿಕೆ ಸಾಮಾನ್ಯವಾಗಿ ಮೇಲ್ಮಟ್ಟದಲ್ಲಿ ಇರುತ್ತದೆ. ಅದೆಲ್ಲಾ ಮನಸ್ಸಿಗೆ ಇಳಿದಿರುವುದಿಲ್ಲ. ಹಾಗಾಗಿ ಮನಸ್ಸಿನ ನಿಯಂತ್ರಣ ಕಷ್ಟವಾಗುತ್ತದೆ. ಮೊದಲು ನಮ್ಮ ಭಾವನೆಗಳನ್ನು ಒಗ್ಗೂಡಿಸಿ ಅದನ್ನು ಪ್ರಜ್ಞೆಯ ಜೊತೆ ಸೇರಿಸಬೇಕು. ಆಗ ನಿಜವಾದ ತಿಳಿವಳಿಕೆ ಉಂಟಾಗುತ್ತದೆ.
- ಸಂನ್ಯಾಸಿಗಳಿಗೆ ನಾಳಿನ ಚಿಂತೆ ಇರುವುದಿಲ್ಲ. ನಾನಂತೂ ನಾಳೆಗಾಗಿ ಯಾವ ಯೋಜನೆಯನ್ನೂ ಮಾಡಿಕೊಳ್ಳುವುದಿಲ್ಲ.
- ಜನರು ಈ ಆಶ್ರಮಕ್ಕೆ ಅನೇಕ ಕಾರಣಗಳಿಗಾಗಿ ಬರುತ್ತಾರೆ. ಕೆಲವರು ತಮ್ಮ ಮಕ್ಕಳನ್ನೂ ಆಧ್ಯಾತ್ಮಿಕ ಹಾದಿಯಲ್ಲಿ ಬೆಳೆಸಬೇಕೆಂದು ಬರುತ್ತಾರೆ, ಕೆಲವರು ಆಧ್ಯಾತ್ಮಿಕ ಚರ್ಚೆ ಮಾಡಲು ಬರುತ್ತಾರೆ. ಇನ್ನು ಕೆಲವರು ಮಾನಸಿಕ ನೆಮ್ಮದಿ ಕಾಣಲು ಬರುತ್ತಾರೆ.
ನನ್ನ ಸಂದರ್ಶನದ ನಂತರ, ನನಗೆ ಅರಿವಾಗಿದ್ದಿಷ್ಟು: ಸ್ವಾಮಿ ದಯಾನಂದರು ಅತ್ಯಂತ ಪ್ರತಿಭಾಶಾಲಿಗಳು. ವೇದಾಂತವನ್ನು ಪೂರ್ಣವಾಗಿ ನಂಬಿ ಆರಾಧಿಸುವವರು. ನನಗೆ ವೈಯಕ್ತಿಕವಾಗಿ ವೇದಾಂತವೇ ಪರಮೋಚ್ಚ ಎಂದೆನಿಸಿಲ್ಲ. ಏಕೆಂದರೆ ಕೆಲವರಿಗೆ ರಾಜಯೋಗ ಮತ್ತು ಭಕ್ತಿಪಂಥಗಳೇ ಸರಿಹೊಂದುತ್ತವೆ. ಆದಾಗ್ಯೂ ದಯಾನಂದರು ಉತ್ತಮ ಮೇಧಾವಿಗಳು, ಅದ್ಭುತ ಶಿಕ್ಷಕರು. ಅವರ ಶಿಷ್ಯರೂ ಅಂತಹ ಪ್ರತಿಭಾಶಾಲಿಗಳೇ ಇದ್ದರು. ಸ್ವಾಮಿ ಶಾಶ್ವತಾನಂದ ಎಂಬ ಶಿಷ್ಯರು, ಈ ಆಶ್ರಮದಲ್ಲಿ ಸಂಸ್ಕೃತ ಕಲಿತು, ಎಲ್ಲ ಗ್ರಂಥಗಳನ್ನೂ ಓದಬಲ್ಲವರಾಗಿದ್ದಾರೆ. ಅವರನ್ನು ಮೋಕ್ಷದ ಬಗ್ಗೆ ಕೇಳಿದಾಗ, ಮೋಕ್ಷವೆಂಬುದು ಯಾವುದೇ ಮಿತಿಯಿಲ್ಲದ ಸ್ಥಿತಿ. ಈ ಜಗತ್ತೆಂಬುದು ಪ್ರಾತಿಭಾಸಿಕ. ಅದನ್ನು ತೆಗೆದುಹಾಕುವುದೇ ಮೋಕ್ಷ ಎಂದುತ್ತರಿಸಿದರು.
ಹೃಷೀಕೇಶದಲ್ಲಿ ಒಂದು ಆಶ್ರಮಕ್ಕೆ ಹೋದಾಗ, ಅಲ್ಲಿ ತಮಿಳುನಾಡಿನ ಒಂದು ಮಠದ ಸ್ವಾಮಿಜೀ ಬಂದಿದ್ದರು. ಆಶ್ರಮದ ಗುರುಗಳು ಆ ಮಠದ ಸ್ವಾಮಿಗಳನ್ನು ಭೇಟಿಮಾಡಲು ಸೂಚಿಸಿದರು. ಅವರು ಕೋಟ್ಯಧಿಪತಿಗಳಾಗಿದ್ದರೂ ಎಲ್ಲವನ್ನೂ ಬಿಟ್ಟು ಸಂನ್ಯಾಸಿಗಳಾಗಿದ್ದರಂತೆ.
ನಾನು ಅವರ ಕೊಠಡಿಗೆ ಹೋದಾಗ, ೭೭ ವರ್ಷದ ಆ ಸ್ವಾಮಿಜೀ ಆದರದಿಂದ ಬರಮಾಡಿಕೊಂಡರು. ನಾನೊಬ್ಬ ಮನಶ್ಶಾಸ್ತ್ರಜ್ಞನೆಂದು ತಿಳಿದ ಮೇಲೆ ನನ್ನ ಪ್ರಶ್ನೆಗಳಿಗೆ ಉತ್ತರಿಸುತ್ತಾ ಹೋದರು.
ಅವರೊಬ್ಬ ಛಾಯಾಚಿತ್ರಗ್ರಾಹಕರು. ಚಿತ್ರಕಾರರು ರಚಿಸುವ ಚಿತ್ರಗಳು, ಶಿಲ್ಪಗಳು ಇವುಗಳ ಫೋಟೋ ತೆಗೆದು ಮಾರುತ್ತಿದ್ದರು. ಅದರಿಂದ ಸಾಕಷ್ಟು ಹಣ ಗಳಿಸಿದ್ದರು. ಅವರ ಪೂರ್ವಜರಲ್ಲಿ ಒಬ್ಬರು ಈ ಮಠದ ಪೀಠಾಧಿಪತಿಗಳಾಗಿದ್ದರು. ಹೀಗಾಗಿ ಇವರ ಹಿಂದಿನ ಗುರುಗಳು ಈ ವ್ಯಕ್ತಿಯನ್ನು ಮುಂದಿನ ಅಧಿಕಾರಿಯನ್ನಾಗಿ ಮಾಡಲು ಇಚ್ಛಿಸಿದರು. ಮೊದಲಿಗೆ ಈ ವಿಷಯವನ್ನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲವಾದರೂ, ಪೀಠಾಧಿಪತಿಗಳು ಹಠಾತ್ತಾಗಿ ತೀರಿಕೊಂಡಿದ್ದರಿಂದ, ಶೀಘ್ರವಾಗಿ ಇವರನ್ನೇ ಸಂನ್ಯಾಸಿಯನ್ನಾಗಿ ಮಾಡಲಾಯಿತು. ಆಗಲೇ ೭೨ ವರ್ಷದವರಾಗಿದ್ದು, ಜೀವನದ ಹಲವು ಮಜಲುಗಳನ್ನು ನೋಡಿದ್ದರಿಂದ, ಮಠದ ಅಧಿಕಾರಿಯಾಗಿಯೂ ಸ್ವಲ್ಪ ಸೇವೆ ಮಾಡೋಣವೆಂದು ಅವರು ಮುಂದುವರಿದರು.
“ಎಲ್ಲರೂ ಸಾಮಾನ್ಯ ಬದುಕಿನಿಂದ ತಪ್ಪಿಸಿಕೊಳ್ಳಲೆಂದೋ, ಮಾನಸಿಕ ರೋಗದಿಂದಲೋ ಸಂನ್ಯಾಸಿಗಳಾಗುತ್ತಾರೆಂಬ ಕಲ್ಪನೆ ತಪ್ಪು. ಪತಂಜಲಿ ಮಹರ್ಷಿಗಳು ಮಾನಸಿಕವಾಗಿ ದುರ್ಬಲರಾದವರು ಯೋಗವನ್ನು ಅನುಸರಿಸಬಾರದು ಎಂದೇ ಹೇಳಿದ್ದಾರೆ.”
ಸ್ವಾಮಿಜೀ ಅವರ ವೈಯಕ್ತಿಕ ಜೀವನವನ್ನೂ ವಿವರಿಸಿದರು. ಚಿಕ್ಕಂದಿನಲ್ಲೇ ತಾಯಿಯನ್ನು ಕಳೆದುಕೊಂಡ ಅವರಿಗೆ, ಕುಡುಕರಾಗಿದ್ದ ತಂದೆಯೊಂದಿಗೆ ಬಾಳಲು ಸಾಧ್ಯವಾಗಲಿಲ್ಲ. ಆಗ ಥಿಯೊಸಾಫಿಕಲ್ ಸೊಸೈಟಿಯ ಮಾಂಟೆಸರಿ ಶಾಲೆಗೆ ಅವರನ್ನು ಸೇರಿಸಲಾಯಿತು. ಆ ಶಾಲೆಯ ಮುಖ್ಯೋಪಾಧ್ಯಾಯರೇ ಈ ಬಾಲಕನನ್ನು ದತ್ತು ತೆಗೆದುಕೊಂಡು ಸಾಕಿದರು. ಅದಕ್ಕೆ ಪ್ರತಿಯಾಗಿ ಇವರು ದೊಡ್ಡ ಸ್ಥಾನಕ್ಕೆ ಬಂದ ಮೇಲೆ, ಆ ಶಿಕ್ಷಕರ ಮಕ್ಕಳಿಗೆ ಒಳ್ಳೆಯ ಉದ್ಯೋಗಗಳನ್ನು ದೊರಕಿಸಿಕೊಟ್ಟಿದ್ದಾಗಿ ಹೇಳಿದರು.
ಜೊತೆಗೆ, ಇವರಿಗೆ ಪಠ್ಯೇತರ ಕಲೆಗಳಲ್ಲಿ ಆಸಕ್ತಿ ಇರುವುದನ್ನು ಗಮನಿಸಿ, ಸ್ವತಃ ರುಕ್ಮಿಣೀದೇವಿ ಅರುಂಡೇಲ್ (ಇವರು ಮಾಂಟೆಸರಿ ಶಾಲೆಯನ್ನು ನಿರ್ವಹಿಸುತ್ತಿದ್ದರು) ಅವರೇ ಸಹಾಯ ಮಾಡಿ, ಹೆಚ್ಚಿನ ಕಲಿಕೆಗೆ ವಿದೇಶಕ್ಕೆ ಕಳುಹಿಸಿಕೊಟ್ಟರು. ನ್ಯೂಯಾರ್ಕ್ನಲ್ಲಿ ವರ್ಣಛಾಯಾಚಿತ್ರಗ್ರಹಣ, ರಂಗಸಜ್ಜಿಕೆ ಮುಂತಾದ ಕಲೆಗಳನ್ನೆಲ್ಲಾ ಕಲಿತು ಬಹುಬೇಡಿಕೆಯ ಛಾಯಾಚಿತ್ರಗ್ರಾಹಕರಾದರು. ಅವರು ಮದುವೆಯಾಗಿರಲಿಲ್ಲ. ಹಾಗೆಂದು ಲೈಂಗಿಕತೆಯಿಂದ ದೂರವುಳಿದಿದ್ದೆ ಎಂದೂ ಅರ್ಥವಲ್ಲ ಎಂದು ಹೇಳಿಕೊಂಡರು.
ಅವರ ದೊಡ್ಡ ಕನಸೆಂದರೆ ದೇವಾಲಯಗಳ ಪುನರುತ್ಥಾನ. ದಕ್ಷಿಣ ಭಾರತದಲ್ಲಿನ ಸಾವಿರಾರು ದೇವಾಲಯಗಳಲ್ಲಿ ಅವುಗಳದ್ದೇ ಆದ ಸಂಸ್ಕೃತಿಗಳಿವೆ. ರಥಕಟ್ಟಲು, ಚಿತ್ರಬಿಡಿಸಲು, ವಾದ್ಯ ನುಡಿಸಲು, ಶಿಲ್ಪ ರಚಿಸಲು ಕಲಾವಿದರ ತಂಡವೇ ಬೇಕು. ಆದರೆ ಈಗಿನ ಪೀಳಿಗೆಯಲ್ಲಿ ಅಂತಹ ಆಸಕ್ತಿ ಕಡಮೆಯಾಗಿ, ಈ ಸಂಸ್ಕಾರಗಳು ಕುಂಠಿತವಾಗುತ್ತಿವೆ. ಅವನ್ನು ಮತ್ತೆ ಪ್ರಚುರಪಡಿಸಲು ಒಂದು ವಿಶ್ವವಿದ್ಯಾಲಯವನ್ನು ಸ್ಥಾಪಿಸಿ, ಅಲ್ಲಿ ಎಲ್ಲ ಕಲೆಗಳನ್ನು ಕಲಿಸುವುದು ಅವರ ಉದ್ದೇಶವಾಗಿತ್ತು. ಅದಕ್ಕಾಗಿ ಈಗಾಗಲೇ ಅದರ ಕಾರ್ಯವನ್ನಾರಂಭಿಸಿ ಹಲವು ಆಸಕ್ತರಿಗೆ ಶಿಕ್ಷಣದ ವ್ಯವಸ್ಥೆಯನ್ನು ಮಾಡಿದ್ದರು. ಜೊತೆಗೆ ಈಗ ದೇಶ ವಿದೇಶಗಳಲ್ಲಿ ಹಿಂದೂ ದೇವಾಲಯಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಅಲ್ಲಿಯೂ ಮುಂದೆ ಇಂತಹ ವಿಶ್ವವಿದ್ಯಾಲಯವನ್ನು ಸ್ಥಾಪಿಸುವ ಕನಸು ಹೊಂದಿದ್ದರು.
ಎಲ್ಲ ಸಂನ್ಯಾಸಿಗಳನ್ನೂ ಒಂದೇ ಸಾಮಾನ್ಯ ದೃಷ್ಟಿಯಲ್ಲಿ ಅವಲೋಕಿಸಲು ಸಾಧ್ಯವಿಲ್ಲವೆಂಬುದು ಈ ಮೂವರ ಸಂದರ್ಶನದಿಂದ ನನಗೆ ತಿಳಿಯಿತು. ಒಬ್ಬರು ಭಕ್ತಿಯ ಪ್ರಚಾರಕರು ಮತ್ತು ಅದ್ಭುತ ಕಥೆಗಾರರು, ಇನ್ನೊಬ್ಬರು ಪ್ರಕಾಂಡ ಪಂಡಿತರು, ಮತ್ತೊಬ್ಬರು ದೂರದರ್ಶಿ ಕಲಾವಿದರು. ಆದಾಗ್ಯೂ ಎಲ್ಲರೂ ಹಿಂದೂ ಸಂಪ್ರದಾಯದವರಾಗಿದ್ದರು.
ಸಾಧುಗಳು: ಮನಶ್ಶಾಸ್ತ್ರೀಯ ವಿಚಾರಗಳು ಮತ್ತು ಸಾಮಾಜಿಕ ಮನೋಭಾವಗಳು
ನಾನೊಬ್ಬ ಮನೋವೈದ್ಯನಾಗಿದ್ದರಿಂದ, ಜನರ ಸ್ವಭಾವ ಮತ್ತು ಸಾಮಾಜಿಕ ಪ್ರಜ್ಞೆಗಳ ಬಗ್ಗೆ ವಿಚಾರಿಸುವುದು ಸಹಜವೇ. ವ್ಯಕ್ತಿಗಳಲ್ಲಿ ಸಾಧುವಾಗುವ ಹಂಬಲ ಮೂಡುವುದಕ್ಕೆ ಅವರ ಮನಃಸ್ಥಿತಿಯ ಹಿನ್ನೆಲೆ ಹೇಗೆ ಪೂರಕವಾಗುತ್ತದೆ ಎಂಬ ಪ್ರಶ್ನೆ ನನ್ನಲ್ಲಿತ್ತು. ಎಲ್ಲ ಸಾಧುಗಳ ಬಾಲ್ಯವೂ ಸಾಮಾನ್ಯರಂತೆಯೇ ಇತ್ತು. ಅವರಲ್ಲಿ ಯಾರೂ ಮಾನಸಿಕ ಖಾಯಿಲೆ ಇದ್ದವರಂತೆ ಇರಲಿಲ್ಲ. ಬದಲಾಗಿ ಮಾನಸಿಕ ರೋಗವಿದ್ದವರಿಗೆ ಅವರು ಚಿಕಿತ್ಸೆಯನ್ನು ಕೊಡುತ್ತಿದ್ದರು.
ಸ್ವಾಮಿ ರಾಮದೇವರ ಆಶ್ರಮದಲ್ಲಿ ಕೆಲವರಿಗೆ ಚಿಕಿತ್ಸೆ ನೀಡಲು ನಾನು ಹೋಗುತ್ತಿದ್ದೆ. ಒಮ್ಮೆ ರಾಮದೇವರು ಸಾಧುಗಳ ನಿಜವಾದ ಲಕ್ಷಣವನ್ನು ಹೇಳುತ್ತಾ ನಿರಂತರ ಆಧ್ಯಾತ್ಮಿಕ ಮನಃಸ್ಥಿತಿಯಲ್ಲಿರುವುದು ಸಾಧನೆಯ ಅಂತಿಮ ಮತ್ತು ಕಷ್ಟದ ಘಟ್ಟ. ಈ ಸ್ಥಿತಿಯಲ್ಲಿ ಆತ್ಮವು ವಿಶ್ವದಲ್ಲಿ ಲೀನವಾಗಿರುತ್ತದೆ. ಒಮ್ಮೆ ಈ ಸ್ಥಿತಿ ತಲಪಿದವರು ಏನನ್ನೂ ಮಾಡುವ ಅಗತ್ಯವಿಲ್ಲ ಎಂದರು.
ಅಂತಹ ವ್ಯಕ್ತಿಗಳಿದ್ದಾರೆಯೆ? ನಾನು ಕೇಳಿದೆ.
ಸ್ವಲ್ಪ ದೂರದಲ್ಲಿ ಕುಳಿತಿದ್ದ ಸಾಧುವಿನ ಕಡೆ ಕೈಮಾಡಿ ಅವರು ಆ ತರಹದ ಸಾಧು. ಹೆಸರು ಸ್ವಾಮಿ ರಮಾನಂದ. ಶ್ರೀಮಂತ ಕುಟುಂಬದಿಂದ ಬಂದವರು. ನನ್ನ ಗುರುಗಳ ಅಪ್ಪಣೆ ಪಡೆದು ೩೦ ವರ್ಷಗಳ ಹಿಂದೆ ಈ ಆಶ್ರಮಕ್ಕೆ ಬಂದರು. ಮೊದಮೊದಲು ಎಲ್ಲರೊಂದಿಗೆ ಬೆರೆತು ಅಡುಗೆ, ಪಾತ್ರೆ ತೊಳೆಯುವಂತಹ ಕೆಲಸಗಳನ್ನೂ ಮಾಡುತ್ತಿದ್ದರು. ಬರುಬರುತ್ತಾ ಏಕಾಂತಕ್ಕೆ ಜಾರಿದರು. ಇತರರ ಜೊತೆ ಒಡನಾಟ ನಿಲ್ಲಿಸಿದರು. ತಮಗೆ ತಾವೇ ಮಾತನಾಡಿಕೊಳ್ಳುತ್ತಾರೆ, ನಗುತ್ತಾರೆ. ಆರೇಳು ತಿಂಗಳುಗಳ ಕಾಲ ಹಾಕಿದ ಬಟ್ಟೆಯನ್ನು ಹಾಗೆಯೇ ಧರಿಸಿರುತ್ತಾರೆ. ನಾವು ಈಗ ಅವರೊಂದಿಗೆ ಅಷ್ಟು ಬೆರೆಯುವುದಿಲ್ಲ. ಮಾತನಾಡಿಸಿದರೆ ಸಿಡುಕುತ್ತಾರೆ. ಆದರೆ ಅವರು ಬಹಳ ಜ್ಞಾನಿಗಳು ಎಂದರು. ನಾನು ಅವರನ್ನು ಗಮನಿಸಿದಾಗ, ರಮಾನಂದರು ಯಾವುದೋ ಮಾನಸಿಕ ರೋಗದಿಂದ ಬಳಲುತ್ತಿದ್ದಾರೆ ಎಂದು ಭಾಸವಾಯಿತು. ಅದನ್ನು ರಾಮದೇವರ ಬಳಿ ಹೇಳಿದಾಗ ಅವರು ಒಪ್ಪಲಿಲ್ಲ. ರಮಾನಂದರಂಥ ಸಾಧುಗಳೇ ಹಾಗೆ. ಅವರಿಗೆ ಶಕ್ತಿಗಳೆಲ್ಲ ಸಿದ್ಧಿಸಿರುತ್ತವೆ ಎಂದು ಹೇಳಿ, ರಮಾನಂದರ ಅಗೋಚರಶಕ್ತಿಗಳನ್ನು ತಿಳಿಸುವ ಘಟನೆಗಳನ್ನು ಹೇಳಿದರು.
ಸಾಮಾನ್ಯವಾಗಿ ಮಾನಸಿಕ ರೋಗವೆಂದರೆ ಖಿನ್ನತೆ ಅಥವಾ ಇತರರಿಗೆ ವಿಲಕ್ಷಣವಾಗಿ ಕಾಣುವ ಸ್ವಭಾವ ಇರುವುದು. ಆದರೆ ಈ ವ್ಯಕ್ತಿ ಖಿನ್ನತೆಯಲ್ಲಿಯೂ ಇರಲಿಲ್ಲ, ಇತರರಿಗೆ ಈ ವ್ಯಕ್ತಿಯ ನಡವಳಿಕೆ ವಿಲಕ್ಷಣವೆಂದೂ ಅನಿಸಿರಲಿಲ್ಲ. ಆದರೂ ಕೊನೆಯ ಪ್ರಯತ್ನವೆಂದು ಕೇಳಿದೆ, ಯಾಕೆ ರಮಾನಂದರು ಬೇರೆಯವರ ಮೇಲೆ ಸಿಡುಕುತ್ತಾರೆ? ಎಂದು. ಅದು ತನ್ನನ್ನು ಉಳಿದವರಿಂದ ದೂರವಿಟ್ಟುಕೊಳ್ಳಲು. ಶ್ರೀರಾಮಕೃಷ್ಣರ ಗುರುಗಳಾದ ತೋತಾಪುರಿಯವರ ಬಗ್ಗೆ ಕೇಳಿಲ್ಲವೇ, ಹಾಗೆಯೇ ಎಂದು ರಾಮದೇವರು ಹೇಳಿದಾಗ ನಾನು ಸುಮ್ಮನಾದೆ.
ಹೃಷೀಕೇಶದಲ್ಲಿ ರಮಾನಂದರಂತೆಯೇ ಮಾನಸಿಕವಾಗಿ ವಿಭಿನ್ನವಾಗಿದ್ದ ಹಲವು ಜನರನ್ನು ನೋಡಿದೆ. ಅವರೆಲ್ಲರೂ ದೈಹಿಕವಾಗಿ ಆರೋಗ್ಯವಂತರೇ ಆಗಿದ್ದರು. ಉಳಿದ ಮಾನಸಿಕ ರೋಗಿಗಳಿಗಿರುವ ಯಾವ ಲಕ್ಷಣಗಳೂ ಅವರಲ್ಲಿರಲಿಲ್ಲ.
ಜಗತ್ತಿನಲ್ಲಿ ಕೆಲವು ನಡವಳಿಕೆಗಳಿಗೆ ಹೇಗೆ ವಿಭಿನ್ನ ಅರ್ಥ ಬರುತ್ತದೆ ಎಂಬುದು ರಮಾನಂದರ ಕಥೆಯಿಂದ ತಿಳಿಯಿತು. ದಯಾನಂದರು ಹೇಳುವಂತೆ, ಕೇವಲ ಬೆಳೆದ ವಾತಾವರಣವೇ ಭವಿಷ್ಯವನ್ನು ನಿರ್ಧರಿಸುವುದಾದರೆ, ಒಂದೇ ಮನೆಯಲ್ಲಿ ಒಬ್ಬನು ಕಳ್ಳನೂ ಒಬ್ಬ ಸಾಧುವೂ ಆಗಲು ಹೇಗೆ ಸಾಧ್ಯ? ಹೀಗಾಗಿ ಎಲ್ಲದಕ್ಕೂ ಪ್ರಾರಬ್ಧವೇ ಕಾರಣ. ಪ್ರಾರಬ್ಧ, ಶಕ್ತಿಗಳ ಸಿದ್ಧಿ, ಪುನರ್ಜನ್ಮ ಇವು ಸಾಧುಗಳ ಹತ್ತಿರ ಕೇಳಲ್ಪಡುವ ಪದಗಳು. ನಾನು ನೋಡಿದ ಯಾವ ಸಾಧುವೂ ವಿಜ್ಞಾನಕ್ಕೆ ವಿರುದ್ಧವಾದ ಅಂತಹ ಯಾವ ಪವಾಡವನ್ನೂ ತೋರಿಸಲಿಲ್ಲ. ಓಂನಾಥನೆಂಬ ಸಾಧುವನ್ನು ಸಂದರ್ಶಿಸಿದಾಗ, ಅವರು ಅಘೋರಿಗಳ ಗುಂಪಿಗೆ ಸೇರಿದವರೆಂದು ಹೇಳಿದರು. ಶವದ ಮಾಂಸವನ್ನು ತಿನ್ನುವುದು, ಕೆಲವು ಆಚರಣೆಗಳನ್ನು ಪಾಲಿಸುವುದು, ಮಂತ್ರಗಳ ಪಠನದಿಂದ ಭೂತನಿಯಂತ್ರಣ ಶಕ್ತಿಯು ಬರುತ್ತದೆಂದು ಅವರು ಹೇಳಿದರು. ಅಲ್ಲದೇ ಕೆಲವು ಸಾಧುಗಳು ಮನಶ್ಶಾಂತಿ ಸಿಗುತ್ತದೆ ಎಂದು ಭಂಗಿ ಸೇದುತ್ತಾರೆ ಎಂದರು.
ಎಲ್ಲ ಸಾಧುಗಳೂ ತಮ್ಮ ಈ ಸಂನ್ಯಾಸಜೀವನದಲ್ಲಿ ಸಫಲರಾಗಿರುವುದಿಲ್ಲ. ರಮೇಶಗಿರಿ ಎಂಬವರ ಕಥೆಯಿಂದ ನನಗೆ ಇದು ಅರಿವಾಯಿತು. ನಾನು ಅವರನ್ನು ದಾರಿಯ ಮಧ್ಯದ ಒಂದು ಗುಡಿಸಲಿನಲ್ಲಿ ಸಂದರ್ಶಿಸಿದೆ. ನಾವು ಅಪರಿಚಿತರಾಗಿದ್ದರೂ, ಆ ಗುಡಿಸಲಿನ ದಂಪತಿಗಳು ಆತ್ಮೀಯವಾಗಿ ಆದರಿಸಿದರು. ಸಾಧುಗಳನ್ನು, ಅತಿಥಿಗಳನ್ನು ಹೀಗೆ ಸತ್ಕರಿಸುವುದು ಭಾರತದಲ್ಲಿ ಮಾತ್ರ.
ರಮೇಶಗಿರಿಯವರು ತಮ್ಮ ಜೀವನದ ಬಗ್ಗೆ ಹೇಳುವಾಗ, ಅವರ ಕಣ್ಣು ತೇವವಾಗಿತ್ತು. ಮನೆಯಲ್ಲಿ ತಂದೆ-ತಾಯಿ ವೃದ್ಧರಾಗಿದ್ದರು. ನಾದಿನಿಯ ದುರ್ನಡತೆ, ಉಪಟಳದಿಂದ ಬೇಸತ್ತು ಮನೆತೊರೆದು ವೃಂದಾವನಕ್ಕೆ ಬಂದರು. ಅಲ್ಲಿ ಭಿಕ್ಷೆ ಬೇಡಲು ಆರಂಭಿಸಿದರು. ಸ್ವಲ್ಪದಿನಗಳ ನಂತರ ಉಳಿದ ಭಿಕ್ಷುಕರ ಉಪಟಳ ತಾಳದೆ ಹರಿದ್ವಾರಕ್ಕೆ ಬಂದರು. ಇಲ್ಲಿ ಒಬ್ಬ ಗುರು ಸಿಕ್ಕರೂ, ಅವರು ಅಷ್ಟು ಒಳ್ಳೆಯವರಿರಲಿಲ್ಲ. ನನಗೆ ಕುಡಿತದ ಚಟ ಹಚ್ಚಿಸಿದ್ದೇ ಅವರು ಎಂದು ಕೋಪದಿಂದ ನುಡಿದರು, ನಾನೂ ಇತರರಂತೆ ೪ ಧಾಮಗಳನ್ನು ದರ್ಶಿಸಿದ್ದೇನೆ. ಒಂದೇ ಕಡೆ ಇದ್ದರೆ ಜನರಿಗೆ ಅಸಹ್ಯ ಹುಟ್ಟಿಸುತ್ತದೆ. ಅಲ್ಲದೆ ಊರೂರು ಅಲೆಯುವುದರಿಂದ ಅನೇಕರ ಪರಿಚಯವಾಗುತ್ತದೆ ಎಂದರು. ಪ್ರತಿಸಲ ರಾಖಿಹಬ್ಬಕ್ಕೆ ತಮ್ಮ ಸಹೋದರಿಯನ್ನು ನೋಡಲು ಮನೆಗೆ ಹೋಗುವುದಾಗಿ ಹೇಳಿ, ತಮ್ಮ ಭಾವಚಿತ್ರ ತೆಗೆದು ಮನೆಗೆ ಕಳಿಸುವಂತೆ ಹೇಳಿದರು. ‘ನಾನು ಇನ್ನು ಮುಂದೆ ಕುಡಿಯುವುದಿಲ್ಲ’ ಎಂದು ನನಗೆ ಪ್ರಮಾಣ ಮಾಡಿದರೂ, ಮರುದಿನ ಅವರನ್ನು ಗಂಗೆಯ ದಡದಲ್ಲಿ ನೋಡಿದಾಗ, ಅವರೇನೂ ತಮ್ಮ ಆಣೆಯನ್ನು ಉಳಿಸಿಕೊಂಡಂತೆ ಕಾಣಲಿಲ್ಲ.
ಬ್ರಹ್ಮಚರ್ಯೆ ಎಂಬುದು ಸಂನ್ಯಾಸಜೀವನದ ಪ್ರಮುಖ ಅಂಶ. ಈ ಬಗ್ಗೆ ಹಲವಾರು ಜನ ತಮ್ಮ ಅನಿಸಿಕೆ ಹಂಚಿಕೊಂಡರು. ದೇವರ ಪೂಜೆ, ಗುರುಗಳ ಬೆಂಬಲ ಮತ್ತು ಸಜ್ಜನರ ಸಹವಾಸ. ಇವುಗಳಿಂದ ಬ್ರಹ್ಮಚರ್ಯ ಪಾಲನೆ ಸುಲಭ ಎಂದು ಮೋಹನದಾಸರು ಹೇಳಿದರು. ಮತ್ತೊಬ್ಬರು ನನಗೆ ಮದುವೆಯೇ ಆಗಿಲ್ಲ. ಎಲ್ಲವೂ ನಮ್ಮ ಭಾವನೆಯ ಮೇಲೆ ನಿಂತಿದೆ. ನಾನು ಯಾವಾಗಲೂ ಲೈಂಗಿಕ ಭಾವನೆಯಿಂದ ದೂರವೇ ಉಳಿದಿದ್ದೆ ಎಂದರು.
ವೇದಾಂತದ ವಿದ್ಯಾರ್ಥಿಯೊಬ್ಬರು ನನ್ನ ಮನೆಯಲ್ಲಿ ಗಂಡು-ಹೆಣ್ಣುಗಳ ಮಧ್ಯೆ ಒಡನಾಟ ಕಟ್ಟುನಿಟ್ಟಿನಲ್ಲಿ ಇತ್ತು. ಅಮೆರಿಕದಲ್ಲಿ ಒಬ್ಬನೇ ಇದ್ದಾಗಲೂ ನನಗೆ ಆ ತರಹದ ಭಾವಗಳು ಬರಲಿಲ್ಲ. ಬಹುಶಃ ಇದು ನನ್ನ ಪೂರ್ವಜನ್ಮದಿಂದ ಬಳುವಳಿಯಾಗಿ ಬಂದಿರಬಹುದು ಎಂದರು. ನಾಗಾಸಾಧುಗಳಲ್ಲಿ ಲೈಂಗಿಕತೆಯನ್ನು ಹತ್ತಿಕ್ಕುವುದೇ ಪ್ರಮುಖ ಅಂಶ. ಆ ಸಾಧುಗಳು ದೀಕ್ಷೆ ಪಡೆಯುವುದಕ್ಕೂ ಮುಂಚೆ ಅವರ ಲಿಂಗಕ್ಕೆ ಹಾನಿಯುಂಟುಮಾಡಿ, ಲೈಂಗಿಕಕ್ರಿಯೆಯ ಆಸಕ್ತಿ ಬರದಂತೆ ಮಾಡುತ್ತಾರೆ. ಮತ್ತೊಬ್ಬ ನಾಗಾಸಾಧುವು ನಾನು ಪ್ರತಿ ಹೆಂಗಸನ್ನೂ ನನ್ನ ತಾಯಿಯಂತೆ ಭಾವಿಸುವುದರಿಂದ, ನನಗೆ ಯಾವ ದುಷ್ಟಭಾವನೆಯೂ ಇಲ್ಲ ಎಂದರು.
ಸಾಧುವಾದ ಮಾತ್ರಕ್ಕೆ ಸಾಮಾಜಿಕ ಜವಾಬ್ದಾರಿ ಕಳಚಿತು ಎಂದರ್ಥವಲ್ಲ. ಹಾಗೆ ನೋಡಿದರೆ ಸಾಧುಗಳ ಜೀವನದಲ್ಲಿ ಸಮಾಜಸೇವೆಯೂ ಮುಖ್ಯ ಭಾಗವಾಗಿದೆ. ಅಭಿನವ ಎಂಬ ಸಾಧುವು, ಸಮಾಜದ ಸೇವೆ ಮಾಡಲೆಂದೇ ಸಂನ್ಯಾಸಿಯಾಗಿದ್ದರು. ಬಡವರ ಉದ್ಧಾರ, ಜನರಿಗೆ ಉದ್ಯೋಗ ಕೊಡಿಸುವುದು ಅವರ ಆದ್ಯತೆಯಾಗಿತ್ತು. ಮುಂದೆ ಒಂದು ಗುರುಕುಲವನ್ನು ತೆರೆದು ಅಲ್ಲಿ ಯೋಗ ಮತ್ತು ಅಧ್ಯಾತ್ಮವನ್ನು ಹೇಳಿಕೊಡುವ ಗುರಿ ಹೊಂದಿದ್ದರು. ನನಗೆ ಮೋಕ್ಷಕ್ಕಿಂತ ಮತ್ತೆ ಈ ಭೂಮಿಯಲ್ಲಿ ಹುಟ್ಟಿ ಜನರ ಸೇವೆ ಮಾಡುವುದೇ ಇಷ್ಟ ಎಂದರು. ಮತ್ತೊಬ್ಬ ಸಂನ್ಯಾಸಿಯು ಸಾಧುವು ಸೂರ್ಯನಿದ್ದಂತೆ. ಎಲ್ಲರಿಗೂ ದಾರಿ ತೋರುವುದೇ ಅವನ ಕೆಲಸ ಎಂದರು. ಸ್ವಾಮಿ ಮುಕ್ತಾನಂದರು ನಾವು ಸಮಾಜದಿಂದ ಕೆಲವನ್ನು ಪಡೆದಿದ್ದೇವೆ ಎಂದ ಮೇಲೆ, ಪ್ರತಿಯಾಗಿ ನಾವೂ ಸಮಾಜಕ್ಕಾಗಿ ಏನಾದರೂ ದುಡಿಯಲೇಬೇಕು ಎಂಬ ಭಾವ ಹೊಂದಿದ್ದರು. ಅವರು ಸುತ್ತಮುತ್ತಲಿನ ಶಾಲೆಯಲ್ಲಿ ಮಕ್ಕಳಿಗೆ ಸಹಾಯ, ಗೋಶಾಲೆಗಳಲ್ಲಿ ಗೋವುಗಳ ಸೇವೆಯನ್ನು ವಿಶೇಷವಾಗಿ ಮಾಡುತ್ತಿದ್ದರು.
ಸಾಧುವಾದ ಮಾತ್ರಕ್ಕೆ ಸಾಮಾಜಿಕ ಜವಾಬ್ದಾರಿ ಕಳಚಿತು ಎಂದರ್ಥವಲ್ಲ. ಹಾಗೆ ನೋಡಿದರೆ ಸಾಧುಗಳ ಜೀವನದಲ್ಲಿ ಸಮಾಜಸೇವೆಯೂ ಮುಖ್ಯ ಭಾಗವಾಗಿದೆ.
ಸಾಧುಗಳನ್ನು ಭೇಟಿ ಮಾಡಲು ನನಗಿದ್ದ ಇನ್ನೊಂದು ಕಾರಣ, ಹೇಗೆ ಒಬ್ಬ ಸಾಧುವು ಚಿಕಿತ್ಸಕನಾಗಿ ಕೆಲಸ ಮಾಡುತ್ತಾನೆ ಎನ್ನುವುದು. ಅದಕ್ಕಾಗಿ ನಾನು ಬಾಬಾ ಶಾಮಸುಂದರದಾಸ್ ಎಂಬ ಆಯುರ್ವೇದ ವೈದ್ಯರನ್ನು ಭೇಟಿಯಾದೆ. ಇವರು ಉದಾಸೀ ಸಂಪ್ರದಾಯದ ಸಾಧುಗಳು. ಈ ಸಂಪ್ರದಾಯವು ಗುರುನಾನಕರ ಶಿಷ್ಯರಾದ ಶ್ರೀಚಾಂದ್ರಿಂದ ಆರಂಭವಾಯಿತು. ಈ ಸಂಪ್ರದಾಯದವರು ಸ್ತ್ರೀದೇವತೆಯ ಮತ್ತು ಶಿವನ ಆರಾಧಕರು. ರಾಮದೇವರ ಆಶ್ರಮದಲ್ಲಿ ಒಬ್ಬ ರೋಗಿಗೆ ಚಿಕಿತ್ಸೆ ಕೊಡಲು ಅವರು ಬಂದಿದ್ದಾಗ ನಾನು ನೋಡಿದೆ. ಅವರ ಜೀವನದ ಬಗ್ಗೆ ನಾನು ತಿಳಿದದ್ದಿಷ್ಟು: ಬಾಬಾಜಿ ಬಾಲ್ಯದಲ್ಲಿ ಅಜ್ಜ-ಅಜ್ಜಿಯ ಹತ್ತಿರ ಬೆಳೆದರು. ಬಹುತೇಕ ಒಂಟಿಯಾಗಿಯೇ ಕಾಲಕಳೆಯುತ್ತಿದ್ದರು. ಅಜ್ಜ-ಅಜ್ಜಿ ಭೇಟಿಕೊಡುತ್ತಿದ್ದ ಮಹಾತ್ಮ ಗೋವಿಂದದಾಸರ ಜೊತೆಗೆ ಈ ಬಾಲಕನ ನಂಟು ಹೆಚ್ಚಾಯಿತು. ಇದನ್ನು ಗಮನಿಸಿದ ಗೋವಿಂದದಾಸರು, ಅವನು ಆಶ್ರಮದಲ್ಲೇ ಇರಲು ಸೂಚಿಸಿದರು.
ಇದಕ್ಕೂ ಮುಂಚೆ ಇವರು, ಮುತ್ತಜ್ಜನ ಜೊತೆ ಕಾಲಕಳೆಯುತ್ತಿದ್ದರು. ಅವರ ಮುತ್ತಜ್ಜ ಆಯರ್ವೇದ ವೈದ್ಯರಾಗಿದ್ದರಿಂದ, ಅವರ ಜೊತೆ ಬೆರೆತು, ಸಣ್ಣ ವಯಸ್ಸಿನಲ್ಲೇ ಅನೇಕ ಔಷಧಿಗಳನ್ನು ಕಲಿತಿದ್ದರು. ಸುಮಾರು ೨೮ ವರ್ಷದವರಿದ್ದಾಗ ಗುರುಗಳಿಂದ ದೀಕ್ಷೆ ಪಡೆದರು. ದೀಕ್ಷೆಯಾದ ಮೇಲೆ ಕಠಿಣವಾದ ಜಲತಪಸ್ಸು, ಅಗ್ನಿತಪಸ್ಸನ್ನು ಮಾಡಿದರು. ಜಲತಪಸ್ಸೆಂದರೆ ಶೂನ್ಯ ಡಿಗ್ರಿ ಉಷ್ಣಾಂಶವಿರುವ ಚಳಿಗಾಲದಲ್ಲಿ ಬೆಳಗ್ಗೆ ೩ ಗಂಟೆಗೆ ಎದ್ದು ೨೨೫ ಕೊಡ ತಣ್ಣೀರಿನ ಸ್ನಾನ ಮಾಡುವುದು. ಅಗ್ನಿತಪಸ್ಸೆಂದರೆ ೪೫ಡಿಗ್ರಿ ಉಷ್ಣಾಂಶವಿರುವ ಬೇಸಿಗೆಯಲ್ಲಿ ಸುತ್ತಲೂ ಬೆಂಕಿಯನ್ನು ಹಚ್ಚಿ, ಮಧ್ಯೆ ಜಪಮಾಡುವುದು. ಅವರು ತಮ್ಮ ತಪಸ್ಸು ಮತ್ತು ವೈದ್ಯಸೇವೆಯಿಂದ ಬಹುಪ್ರಸಿದ್ಧರಾದರು. ಅಲ್ಲಿಂದ ಮುಂದೆ ಹರಿದ್ವಾರಕ್ಕೆ ಬಂದು ಅಲ್ಲಿಯೂ ತಮ್ಮ ವೈದ್ಯಸೇವೆಯನ್ನು ಪ್ರಾರಂಭಿಸಿದರು. ಒಮ್ಮೆ ಪ್ರವಾಹದಲ್ಲಿ ಆಶ್ರಮ ಕೊಚ್ಚಿಕೊಂಡುಹೋದಾಗ, ರಾಮದೇವರೇ ಅವರನ್ನು ಸಲಹಿದರು. ತದನಂತರ ಮತ್ತೊಂದು ಆಶ್ರಮ ಕಟ್ಟಿ ನಿರ್ವಹಿಸುತ್ತಿದ್ದಾರೆ. ಬಾಬಾಜಿಯವರ ವೈದ್ಯಸೇವೆ, ಸದಾ ಉತ್ಸಾಹಶೀಲತೆ ಶ್ಲಾಘನೀಯವಾಗಿತ್ತು. ಗಂಗೋತ್ರಿಗೆ ಹೋಗುವ ಮಾರ್ಗದಲ್ಲಿರುವ ಭಗೀರಥ ಆಶ್ರಮದಲ್ಲಿ ಇನ್ನೊಬ್ಬ ಸ್ವಾಮಿಜೀಯನ್ನು ಭೇಟಿಮಾಡಿದೆ. ಆಶ್ರಮವಿದ್ದ ಸ್ಥಳ ಪ್ರಕೃತಿಸೌಂದರ್ಯದಿಂದ ನಯನಮನೋಹರವಾಗಿತ್ತು. ಅವರ ಜೀವನದ ಬಗ್ಗೆಯೂ ಹಲವು ವಿವರಗಳನ್ನು ಕಲೆಹಾಕಿದೆ.
ಆಂಧ್ರಪ್ರದೇಶ ಮೂಲದ ಈ ಸಾಧು, ಪ್ರಕೃತಿಯ ಮೇಲಿನ ಆಸಕ್ತಿಯಿಂದ ಹಿಮಾಲಯಕ್ಕೆ ಬಂದರು. ಪ್ರಕೃತಿ ಮತ್ತು ಅಧ್ಯಾತ್ಮ ಒಂದಕ್ಕೊಂದು ಪೂರಕ ಎಂದು ಹೇಳಿದರು. ಪ್ರಾಥಮಿಕ ಅಭ್ಯಾಸ ಮುಗಿಸಿದ್ದ ಅವರು ೨೦ ವರ್ಷದವರಾಗಿದ್ದಾಗ ಮನೆಬಿಟ್ಟರು. ಮನೆಯಲ್ಲಿ ಯಾವ ಸಮಸ್ಯೆ ಇಲ್ಲದಿದ್ದರೂ, ಸಂನ್ಯಾಸಿಯಾಗುವ ಬಯಕೆಯಿಂದ ಬಂದರು. ಹೃಷೀಕೇಶದಲ್ಲಿ ಸಂಸ್ಕೃತ ಮತ್ತು ಶಾಸ್ತ್ರಗಳನ್ನು ಕಲಿತರು. ಈಗ ದೆಹಲಿಯಲ್ಲಿ ವೇದಾಂತದ ಪಾಠ ಮಾಡುತ್ತಾರೆ. ಸ್ವಾಮಿಜೀಗಳು ಸ್ವಾಧ್ಯಾಯ, ಪಾಠ-ಪ್ರವಚನ, ಚಿಂತನೆಯಲ್ಲಿಯೇ ಸಮಯ ಕಳೆಯುತ್ತಿದ್ದರು. ಅವರ ಜೊತೆಗಿದ್ದ ಶಿಷ್ಯರೂ ಬಡಕುಟುಂಬಗಳಿಂದ ಬಂದವರಾಗಿದ್ದರು. ಸ್ವಾಮಿಗಳು ಅವರಿಗೆ, ಅವರ ಕುಟುಂಬದವರಿಗೆ ಅನೇಕ ಅನುಕೂಲಗಳನ್ನು ಮಾಡಿಕೊಟ್ಟಿದ್ದರು. ಹೀಗಾಗಿ ಆ ಹಳ್ಳಿಯಲ್ಲಿ ಪ್ರತಿಯೊಬ್ಬರೂ ಸ್ವಾಮಿಜೀಯನ್ನು ಅಪಾರವಾಗಿ ಗೌರವಿಸುತ್ತಿದ್ದರು.
ಸ್ವಾಮಿಜೀಗಳ ಜೊತೆಗಿನ ಸಂದರ್ಶನದ ಸಾರಾಂಶ ಇದು:
ವೇದಾಂತವನ್ನು ವ್ಯಕ್ತಿಯ ನಡವಳಿಕೆಯನ್ನು ಬದಲಿಸುವುದಕ್ಕೆ ಮಾತ್ರ ಉಪಯೋಗಿಸಿದರೆ, ಇರುವೆಯ ಮೇಲೆ ಅಣುಶಕ್ತಿಯನ್ನು ಪ್ರಯೋಗಿಸಿದಂತಾಗುತ್ತದೆ. ಆದರೂ ಪ್ರಾರಂಭಿಕ ವೇದಾಂತದ ಅಭ್ಯಾಸವು ಮನುಷ್ಯನ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆ. ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳುವುದು ಬದುಕಿನ ನೆಮ್ಮದಿಗೆ ಬಹುಮುಖ್ಯ. ಜನರಿಗೆ ಕೆಲವು ಮೌಲ್ಯಗಳು ಮೇಲ್ಮಟ್ಟದಲ್ಲಷ್ಟೇ ಗೊತ್ತಿದೆ. ಆಳವಾಗಿ ತಿಳಿದಾಗ ಎಲ್ಲರೂ ಮೌಲ್ಯಗಳನ್ನು ರೂಢಿಸಿಕೊಳ್ಳಲು ಸಾಧ್ಯ. ಸಂನ್ಯಾಸವೆಂಬುದು ತಂತ್ರವಷ್ಟೇ. ಸಾಮಾನ್ಯವಾಗಿ ಜನರು ಯಾವುದೋ ಬಯಕೆಯಿಂದ ಕೆಲಸಮಾಡುತ್ತಾರೆ. ಆದರೆ ಕರ್ತವ್ಯಗಳಿರುವುದು ನಮ್ಮ ಆತ್ಮದ ಅರಿವಿಗೇ ಹೊರತು, ಭೌತಿಕ ಸುಖಕ್ಕಾಗಿ ಅಲ್ಲ ಎಂದು ಅರಿತರೆ ಅವನೇ ಸಂನ್ಯಾಸಿ.
ಒಬ್ಬರ ಸಂತೋಷಕ್ಕಾಗಿ ಕೆಲಸ ಮಾಡಿ, ಅದರಿಂದ ಪ್ರತಿಫಲವನ್ನು ಅಪೇಕ್ಷಿಸಿ, ಅವರು ಸ್ಪಂದಿಸದಿದ್ದಾಗ ಬೇಸರಪಟ್ಟುಕೊಳ್ಳುವುದೆಂದರೆ, ಸ್ವಂತದ ಲಾಭಕ್ಕಾಗಿ ಕರ್ತವ್ಯ ಮಾಡಿದಂತೆ, ಉದಾರ ಮನಸ್ಸುಳ್ಳವರಿಗೆ ಪ್ರತಿಫಲಾಪೇಕ್ಷೆ ಇರುವುದಿಲ್ಲ. ತನ್ನತನದ ಅರಿವಾದಾಗ ಮತ್ತೊಬ್ಬರಲ್ಲಿ ಕರುಣೆ, ದಯೆ ಹೆಚ್ಚಾಗುತ್ತದೆ. ಮತ್ತು ಜೀವನದ ಭಯ ತೊಲಗುತ್ತದೆ. ಈ ಬದಲಾವಣೆಗಳನ್ನು ವ್ಯಕ್ತಿಯು ತಾನೇ ತನ್ನೊಳಗೆ ಕಂಡುಕೊಳ್ಳಬೇಕು.
“ಸಂನ್ಯಾಸಿಯಾಗುವುದಕ್ಕೂ ಮೊದಲು, ಸ್ವಲ್ಪ ವೇದಾಂತವನ್ನು ನಾನು ಕಲಿತಿದ್ದೆ. ಕೇವಲ ಸ್ಫೂರ್ತಿ, ಅಂತಃಸಾಕ್ಷಿಗಳೇ ಜ್ಞಾನಕ್ಕೆ ಮೂಲವಲ್ಲ. ಅವು ಜ್ಞಾನ ಪಡೆಯಲು ತಯಾರುಮಾಡುತ್ತವೆ. ಅಂತಿಮವಾಗಿ ಶಾಬ್ದಿಕ ಪ್ರಮಾಣವಾದ ವೇದಾಂತವನ್ನೇ ಅನುಸರಿಸಬೇಕು. ಸತ್ತ ಮೇಲೆಯೂ ಚೇತನದ ಅಸ್ತಿತ್ವ ಇರುವ ಸಾಧ್ಯತೆಯಿದೆ. ಮತ್ತು ಹಾಗಿದ್ದಲ್ಲಿ, ನಾವು ಬದುಕಿದಾಗ ಮಾಡಿದ ಕರ್ಮವೇ ಹಿಂಬಾಲಿಸುತ್ತದೆ ಎಂದರು.
ಆ ಸ್ವಾಮಿಗಳಲ್ಲಿದ್ದ ಬದ್ಧತೆ, ಸಮಯಪ್ರಜ್ಞೆ. ಅತಿಥಿಸತ್ಕಾರ, ಸಮಾಜದ ಬಗ್ಗೆ ಕಾಳಜಿ ಎಲ್ಲವೂ ನನಗೆ ಇಷ್ಟವಾಯಿತು. ಅವರ ಜೊತೆ ಕಳೆದ ದಿನಗಳಲ್ಲಿ ಅನೇಕ ವಿಷಯಗಳನ್ನು ತಿಳಿಯಲು ಸಾಧ್ಯವಾಯಿತು.
ಭಾಗ-೩
ಅಂತರ್ಮಥನ
ಭಾರತೀಯ ಆಧ್ಯಾತ್ಮಿಕತೆ ಮತ್ತು ಮಾನಸಿಕ ಆರೋಗ್ಯ
ಯೋಗದ ಬಗೆಗಿನ ಸಂಶೋಧನೆ ಮತ್ತು ಸಾಧುಗಳೊಂದಿಗಿನ ಒಡನಾಟ ನನಗೆ ಮನಶ್ಶಾಸ್ತ್ರ ಮತ್ತು ಭಾರತೀಯ ಅಧ್ಯಾತ್ಮದ ಒಲವನ್ನು ಮತ್ತಷ್ಟು ಹೆಚ್ಚಿಸಿತು. ವಿಜ್ಞಾನಿ, ಮನಶ್ಶಾಸ್ತ್ರಜ್ಞ, ಆಧ್ಯಾತ್ಮಿಕ ಗುರು ಎಲ್ಲರೂ ಸತ್ಯವನ್ನೇ ಗೌರವಿಸುತ್ತಾರೆ. ಸತ್ಯಕ್ಕೆ ವಿವಿಧ ಆಯಾಮಗಳಿವೆ. ಮನಶ್ಶಾಸ್ತ್ರಜ್ಞನು ವ್ಯಕ್ತಿಯನ್ನು ವೈಜ್ಞಾನಿಕ ಚೌಕಟ್ಟಿನಲ್ಲಿ ನೋಡಿದರೆ, ಒಬ್ಬ ಗುರು ಭಕ್ತನಂತೆ ಸ್ವೀಕರಿಸುತ್ತಾನೆ. ಆದರೆ, ದುಃಖಿತರಾದವರಿಗೆ ಸಾಂತ್ವನ ಹೇಳುವ ಕಾಯಕ ಇಬ್ಬರಲ್ಲೂ ಸಮಾನವಾಗಿದೆ. ಜೊತೆಗೆ, ಸಮಾಜದಲ್ಲಿ ಹೇಗೆ ಉತ್ತಮವಾಗಿ ಬದುಕಬೇಕೆಂಬ ವಿಚಾರದಲ್ಲೂ ಸಾಮ್ಯವಿದೆ. ಹಾಗಿದ್ದರೂ ಭಾರತದಲ್ಲಿ ಜನರು ಮನೋವೈದ್ಯರಿಗಿಂತ ಧಾರ್ಮಿಕ ಗುರುಗಳನ್ನೇ ಹೆಚ್ಚು ನಂಬುತ್ತಾರೆ ಮತ್ತು ಭೇಟಿಯಾಗುತ್ತಾರೆ.
`ನಾವೇಕೆ ದುಃಖ ಪಡುತ್ತೇವೆ?’ ಎಂಬ ಪ್ರಶ್ನೆಗೆ, ‘ಬಯಸಿದ್ದು ಸಿಗದಿದ್ದಾಗ ದುಃಖವಾಗುತ್ತದೆ’ ಎಂಬ ಸಾಮಾನ್ಯ ಅಂಶ ಗಮನಕ್ಕೆ ಬರುತ್ತದೆ. ಆದರೆ ಕೆಲವೊಮ್ಮೆ ಬಯಸಿದ್ದು ಸಿಕ್ಕಿದರೂ ಮತ್ತಾವುದೋ ರೀತಿಯಲ್ಲಿ ದುಃಖ, ಒತ್ತಡಗಳು ಮನಸ್ಸನ್ನು ಕಾಡುತ್ತಲೇ ಇರುತ್ತವೆ. ಹೀಗಾಗಿ ಭಾರತೀಯ ಶಾಸ್ತ್ರಗಳು ದುಃಖವೆನ್ನುವುದು ಅನಿವಾರ್ಯವಾದ ಬದುಕಿನ ಭಾಗವೆಂದು ಪರಿಗಣಿಸಿ, ಧರ್ಮಮಾರ್ಗವು ಈ ದುಃಖವನ್ನು ದೂರಸರಿಸುವ ಸಾಧನವಾಗಿದೆ ಎಂದು ಹೇಳುತ್ತವೆ.
ವೈದಿಕ ಸಾಹಿತ್ಯ ಮತ್ತು ಅನೇಕ ಗ್ರಂಥಗಳಲ್ಲಿ ಒತ್ತಡಕ್ಕೆ ಕಾರಣವಾಗುವ ಅಂಶಗಳನ್ನು ಹೇಳಲಾಗಿದೆ. ಇಂದ್ರಿಯಗಳ ಬಯಕೆಯಿಂದ ಕಾಮ, ಕಾಮದಿಂದ ಕ್ರೋಧ, ಕ್ರೋಧದಿಂದ ಮೋಹ, ಮೋಹದಿಂದ ಬುದ್ಧಿನಾಶ ಮತ್ತು ಕೊನೆಗೆ ವ್ಯಕ್ತಿನಾಶವಾಗುತ್ತದೆ ಎಂದು ಗೀತೆ ಹೇಳುತ್ತದೆ. ಭಾರತೀಯ ಸಾಹಿತ್ಯವು ೫ ಅಂಶಗಳನ್ನು ನಮಗೆ ಒತ್ತಿಹೇಳುತ್ತದೆ.
- ಅತಿಯಾದ ಸಂಗವೇ ಮಾನಸಿಕ ಕ್ಷೆಭೆಗೆ ಕಾರಣ. ಹೀಗಾಗಿ ವಿಷಯಗಳಿಂದ ವೈರಾಗ್ಯವನ್ನು ಎಲ್ಲ ಗ್ರಂಥಗಳೂ ಹೇಳುತ್ತವೆ. ಅದಕ್ಕಾಗಿ ಊಟ ಬಿಡುವುದು, ಹೊರಗೆ ಹೋಗದಿರುವುದು, ಕಾರ್ಯ ಮಾಡದಿರುವುದು ಇಂತಹ ವಿಪರೀತ ಕಾರ್ಯಗಳನ್ನೂ ಮಾಡುವವರಿದ್ದಾರೆ. ಆದರೆ ವೈರಾಗ್ಯ ಅಥವಾ ನಿರಪೇಕ್ಷಬುದ್ಧಿಯು ನಮ್ಮ ಮನಸ್ಸಿಗೆ ವಿರುದ್ಧವಾದ ಘಟನೆ ನಡೆದಾಗ ಅದನ್ನು ಸ್ವೀಕರಿಸುವ ಶಕ್ತಿಯಲ್ಲಿರುತ್ತದೆ. ಶ್ರೀಕೃಷ್ಣನು ಹೇಳುವಂತೆ ‘ಎಲ್ಲವನ್ನೂ ಬಿಟ್ಟುಬಿಡುವವನು ಮಹಾತ್ಮನಲ್ಲ. ಬದಲಿಗೆ, ಯಾವ ಬಂಧನಕ್ಕೂ ಒಳಗಾಗದೆ. ಅಪೇಕ್ಷೆಯಿಲ್ಲದೆ ಕೆಲಸ ಮಾಡುವವನೇ ನಿಜವಾದ ಮಹಾತ್ಮ.
- ಹೀಗೆ ನಿರಂತರ ಕರ್ತವ್ಯಪ್ರಜ್ಞೆಯೇ ಎರಡನೆಯ ಅಂಶ.
- ಮೂರನೆಯ ಅಂಶ, ಮಾನಸಿಕ ಸ್ಥಿರತೆ. ಇದು ಒಂದು ಸಲಕ್ಕೆ ಬರುವುದಲ್ಲ. ಅದೊಂದು ನಿರಂತರ ಪ್ರಕ್ರಿಯೆ. ಸೈಕಲ್ ಹೊಡೆಯಲು ಆರಂಭಿಸುವ ವ್ಯಕ್ತಿಗೆ ಮೊದಲು ಅದನ್ನು ನಿಯಂತ್ರಿಸಲು ಸಾಧ್ಯವಾಗದಿದ್ದರೂ ಕ್ರಮೇಣ ಅದನ್ನು ನಿಯಂತ್ರಿಸುವಂತೆ, ಮನದ ನಿಯಂತ್ರಣವೂ ಸಾಧ್ಯ.
- ವೈದ್ಯ ಮತ್ತು ರೋಗಿಯ ಮಧ್ಯೆ ಸಾಂಸ್ಕೃತಿಕ ಭೇದಗಳು ಚಿಕಿತ್ಸೆಗೆ ಅಡ್ಡಿಯಾಗುವುದಿಲ್ಲ. ಕಾಳಜಿ ಮತ್ತು ಸೇವಾಮನೋಭಾವವಿದ್ದಲ್ಲಿ ಎಂತಹ ರೋಗಿಯನ್ನಾದರೂ ಗುಣಪಡಿಸಬಹುದು.
- ನಾವು ಘಟನೆಗಳಿಗೆ ಕಾರಣಗಳನ್ನು ಹುಡುಕುವುದಕ್ಕಿಂತ, ಅದರ ಬಂಧನದಿಂದ ಹೊರಬರಬೇಕು. ಬುದ್ಧನು ಹೇಳುತ್ತಾನೆ: ನಮಗೆ ವಿಷಪೂರಿತ ಬಾಣ ಚುಚ್ಚಿದರೆ, ಮೊದಲು ಬಾಣವನ್ನು ಹೊರಗೆ ತೆಗೆಯಲು ಯೋಚಿಸಬೇಕೇ ಹೊರತು ಬಾಣ ಎಲ್ಲಿಂದ ಬಂತು, ಯಾರು ಬಿಟ್ಟರು ಎಂಬುದರ ಬಗ್ಗೆ ಅಲ್ಲ.
ಈ ಅಂಶಗಳನ್ನು ಕಲಿತ ಮೇಲೆ, ಯೋಗವು ಹೇಗೆ ಮಾನಸಿಕ ದುಃಖವನ್ನು ದೂರಮಾಡಲು ಸಹಕಾರಿ ಎಂಬ ಪ್ರಶ್ನೆಯಿತ್ತು. ಅಂತರ್ಜಾಲದಲ್ಲಿ ಯೋಗ ಮತ್ತು ಮಾನಸಿಕಚಿಕಿತ್ಸೆಗೆ ಸಂಬಂಧಿಸಿದ ಅನೇಕ ದಾಖಲೆಗಳು ದೊರೆತವು. ಪಾಶ್ಚಾತ್ಯರ ದೃಷ್ಟಿಕೋನದಲ್ಲಿ ಹಿಂದೆ ಹೇಳಿದಂತೆ ಬಯಸಿದ್ದು ಸಿಗದಿರುವುದೇ ದುಃಖಕ್ಕೆ ಕಾರಣ. ಅನೇಕ ವಿಜ್ಞಾನಿಗಳು ಬಯಕೆಗಳ ಮೂಲವನ್ನು ತಿಳಿಸಿದ್ದಾರೆ. ಜೈವಿಕ ವಿಷಯಗಳು (ಆಹಾರ, ಕಾಮ, ಇತ್ಯಾದಿ), ಆಳಬೇಕೆಂಬ ಆಸೆ. ಮರಣದ ಭಯ, ಕೋಪ, ಮೋಹ ಇವು ಮನಸ್ಸಿನ ಕ್ಷೆಭೆಗೆ ಮೂಲಗಳು. ಮಾನಸಿಕ ಚಿಕಿತ್ಸೆಯ ಕೇಂದ್ರ ಸ್ವವ್ಯಕ್ತಿತ್ವ, ತನ್ನನ್ನು ಅರಿತುಕೊಳ್ಳುವುದು. ಗ್ರೀಕ್ ಸಿದ್ಧಾಂತವು ನಾನು ಎಂಬುದು ಸ್ವತಂತ್ರ ತತ್ತ್ವ ಎಂದು ಹೇಳಿದರೆ, ಜುಡಾಯಿಕ್ ತತ್ತ್ವವು ನನ್ನ ಅಸ್ತಿತ್ವವು ಇತರರೊಂದಿಗೆ ಅವಲಂಬಿತವಾಗಿದೆ ಎಂದು ಹೇಳುತ್ತದೆ. ಮನಶ್ಶಾಸ್ತ್ರಜ್ಞರು ಎರಡೂ ತತ್ತ್ವಗಳ ಮೇಲೆ ಹಲವು ವಿಧಾನಗಳನ್ನು ರೂಪಿಸಿದ್ದಾರೆ. ಇನ್ನು ಹಲವು ಚಿಕಿತ್ಸೆಗಳು, ವ್ಯಕ್ತಿಗಿಂತ ಭಾವನೆಗಳಿಗೆ ಪ್ರಾಮುಖ್ಯ ಕೊಡುತ್ತವೆ. ಭಾವನೆಗಳನ್ನು, ಯೋಚನಾಲಹರಿಯನ್ನು ಬದಲಿಸುವ ಮೂಲಕ ಚಿಕಿತ್ಸೆ ಕೊಡಲಾಗುತ್ತದೆ.
ಭಾರತೀಯ ಶಾಸ್ತ್ರಗಳು ಕೆಲವು ವಿಷಯಗಳಲ್ಲಿ ಪಾಶ್ಚಾತ್ಯರ ತತ್ತ್ವವನ್ನು ಅಂಗೀಕರಿಸಿದರೂ, ದುಃಖದ ನಿವಾರಣೆಗೆ ವ್ಯಕ್ತಿಯ ಬಯಕೆಯನ್ನು ಪೂರೈಸುವುದೇ ಪರಿಹಾರ ಎಂಬ ಅವರ ವಾದವನ್ನು ಅಂಗೀಕರಿಸುವುದಿಲ್ಲ. ಬದಲಿಗೆ ದುಃಖವನ್ನು ತಡೆದು, ಜಗತ್ತು ಹೇಗಿದೆಯೋ ಹಾಗೆ ಸ್ವೀಕರಿಸಲು ಹೇಳುತ್ತದೆ. ಹಾಗಾದರೆ ಜಗತ್ತು ಹೇಗಿದೆ? ವೇದಾಂತದ ಪ್ರಕಾರ ಬ್ರಹ್ಮವೊಂದೇ ಸತ್ಯ, ಚೇತನ. ನಾವು ಬ್ರಹ್ಮದೊಂದಿಗಿನ ಸಂಬಂಧವನ್ನು ಮರೆತಿರುವುದೇ ದುಃಖಕ್ಕೆ ಕಾರಣ. ನಾವು ಈ ಜಗತ್ತಿನೊಂದಿಗೆ ಸುಳ್ಳು ಸಂಬಂಧವನ್ನು ಹೊಂದಿದ್ದೇವೆ. ಇದುವೆ ‘ಮಾಯಾ’. ಸಾಧಕನು ಈ ಮಾಯೆಯನ್ನು ತೆಗೆದುಹಾಕಿದಾಗ ನಿಜವಾದ ಬ್ರಹ್ಮವನ್ನು ಅನುಭವಿಸುತ್ತಾನೆ. ಇನ್ನು ಬೌದ್ಧತತ್ತ್ವವು ಬ್ರಹ್ಮನನ್ನು ಒಪ್ಪದಿದ್ದರೂ, ಜಗನ್ಮಿಥ್ಯೆಯನ್ನು ಒಪ್ಪುತ್ತದೆ. ನಮ್ಮಲ್ಲಿನ ಜ್ಞಾನವೇ ಜಗತ್ತಾಗಿ ಗೋಚರಿಸುತ್ತದೆ ಎಂದು ಅವರ ವಾದ. ಸಾಂಖ್ಯರ ಪ್ರಕಾರ ಜಗತ್ತು ಪೃಕೃತಿ-ಪುರುಷರ ವ್ಯಾಪಾರದಿಂದ ಆಗಿದೆ. ಸಾಧನೆಯ ಉದ್ದೇಶವೆಂದರೆ, ಚಂಚಲವಾದ ಪ್ರಾಕೃತಿಕ ಅಂಶಗಳನ್ನು ಸ್ಥಿರತೆಗೆ ತಂದು ಪುರುಷನನ್ನು ಉದ್ದೀಪನಗೊಳಿಸುವುದು.
ಭಾರತೀಯ ಮನಶ್ಶಾಸ್ತ್ರವು ಇದಕ್ಕಾಗಿ ವಿವಿಧ ತರಹದ ಯೋಗಗಳನ್ನು ಪರಿಚಯಿಸಿದೆ. ಅವರವರ ಯೋಚನೆ, ವ್ಯಕ್ತಿತ್ವಕ್ಕೆ ತಕ್ಕಂತೆ ಯೋಗಗಳನ್ನು ಆಯ್ಕೆ ಮಾಡಬಹುದು. ಇದರ ಜೊತೆಗೆ ಗುರುವಿನ ಪಾತ್ರವೂ ಈ ನಿಟ್ಟಿನಲ್ಲಿ ಗಣನೀಯವಾದದ್ದು. ಸಾಧಕನಾದವನು ಸ್ಥಿತಪ್ರಜ್ಞನಾಗಿರಬೇಕು. ಎಲ್ಲ ಸಂದರ್ಭಗಳಲ್ಲೂ ಸ್ಥೈರ್ಯವನ್ನಿಟ್ಟುಕೊಂಡು ವಿಶ್ವದ ಜೊತೆಗೆ ಅನುಕಂಪವನ್ನಿಡಬೇಕು. ಇಲ್ಲಿ ಅನುಕಂಪವೆಂದರೆ ಚೈತನ್ಯಶೀಲತೆ.
ಮಾನಸಿಕಚಿಕಿತ್ಸೆ ಮತ್ತು ಭಾರತೀಯ ಅಧ್ಯಾತ್ಮಕ್ಕೆ ವ್ಯತ್ಯಾಸಗಳಿವೆ. ಮಾನಸಿಕಚಿಕಿತ್ಸೆಯು ದಿನನಿತ್ಯದ ಬಯಕೆಗಳನ್ನು ಪೂರೈಸಲು ಯತ್ನಿಸಿದರೆ, ಅಧ್ಯಾತ್ಮವು ಜಗತ್ತಿನ ಉತ್ಕೃಷ್ಟತೆಯನ್ನು ಹೇಳುತ್ತದೆ. ಮಾನಸಿಕಚಿಕಿತ್ಸೆಯು ಅಹಂಭಾವವನ್ನು ಗಟ್ಟಿಗೊಳಿಸಿದರೆ, ಭಾರತೀಯ ಅಧ್ಯಾತ್ಮವು ಅದನ್ನು ದೂರವಿಡಲು ಹೇಳುತ್ತದೆ. ಮಾನಸಿಕಚಿಕಿತ್ಸೆಯು ಮಾನಸಿಕವಾಗಿ ಪ್ರಕ್ಷುಬ್ಧರಾಗಿರುವ ಜನರ ಕುರಿತಾಗಿ ಮಾತನಾಡಿದರೆ, ಅಧ್ಯಾತ್ಮವು ಮಾನಸಿಕ ಸ್ಥಿರತೆಯನ್ನು ಹೇಳುತ್ತದೆ. ಹಾಗೆಯೇ ಒಬ್ಬ ಚಿಕಿತ್ಸಕನಿಗೂ ಗುರುವಿಗೂ ವ್ಯತ್ಯಾಸವಿದೆ. ಚಿಕಿತ್ಸಕನು ರೋಗಿಯ ಚಿಕಿತ್ಸೆಯನ್ನಷ್ಟೇ ಮಾಡುತ್ತಾನೆ, ವ್ಯಕ್ತಿಯ ವೈಯಕ್ತಿಕ ಜೀವನವನ್ನು ಪ್ರವೇಶಿಸುವುದಿಲ್ಲ. ಆದರೆ ಗುರುವು ವ್ಯಕ್ತಿಯ ಎಲ್ಲ ಆಗುಹೋಗುಗಳಲ್ಲಿಯೂ ಭಾಗಿಯಾಗಿರುತ್ತಾನೆ.
ಈ ಆಧ್ಯಾತ್ಮಿಕ ಹಾದಿಯು ಎಲ್ಲರಿಗೂ ಸರಿಯಾಗುತ್ತದೆ ಎಂದೇನಿಲ್ಲ. ಕೃಷ್ಣನು ಹೇಳುವಂತೆ ಸಾವಿರ ಜನರಲ್ಲಿ ಒಬ್ಬನು ಪರಿಪೂರ್ಣತೆಗೆ ಪ್ರಯತ್ನಿಸುತ್ತಾನೆ. ಅಂತಹ ಸಾವಿರ ಜನರಲ್ಲಿ ಒಬ್ಬನು ನನ್ನ ಸತ್ಯವನ್ನು ತಿಳಿಯುತ್ತಾನೆ.
ಯೋಗದಿಂದ ಮಾನಸಿಕಚಿಕಿತ್ಸಾವಿಧಾನಕ್ಕೆ ಅನೇಕ ಉಪಯೋಗಗಳಿವೆ. ಯೋಗವು ನೀಡುವ ಮನಸ್ಸಿನ ಶಾಂತತೆ. ಆಧುನಿಕ ಚಿಕಿತ್ಸಾವಿಧಾನಗಳಿಗೇನೂ ಕಡಮೆಯಿಲ್ಲ. ನನ್ನ ಅನುಭವಗಳಿಂದ, ಯೋಗವಿಧಾನವನ್ನು ಚಿಕಿತ್ಸೆಯಲ್ಲಿ ಉಪಯೋಗಿಸಬಹುದೇ ಎಂಬ ಪ್ರಶ್ನೆಗೆ, ಉತ್ತರಗಳು ದೊರೆತಿದ್ದವು.
ಯೋಗವನ್ನು ೩ ಸ್ಥಿತಿಗಳಲ್ಲಿ ಉಪಯೋಗಿಸಬಹುದು. ಯೋಗ ಮತ್ತು ಭಾರತೀಯ ಅಧ್ಯಾತ್ಮವು ಭಾವೋದ್ವೇಗ ಮತ್ತು ಖಿನ್ನತೆಯನ್ನು ದೂರಮಾಡಿ ಮಾನಸಿಕ ಆರೋಗ್ಯವನ್ನು ವೃದ್ಧಿಸುತ್ತವೆ. ಈ ಮೊದಲ ಸ್ಥಿತಿಯು ಸ್ವಭಾವಗಳ ಬದಲಾವಣೆಗೆ ದಾರಿಮಾಡುತ್ತದೆ.
ಎರಡನೆಯ ಸ್ಥಿತಿ ಒಳನೋಟವನ್ನು ಪಡೆಯುವುದು. ಇದೂ ಪಾಶ್ಚಾತ್ಯ ಚಿಕಿತ್ಸಾವಿಧಾನಕ್ಕೆ ಸಮವಾಗಿದೆ.
ಮೂರನೆಯ ಸ್ಥಿತಿಯಲ್ಲಿ ಯೋಗವು ಮೋಕ್ಷಕ್ಕೆ ದಾರಿಯಾಗುತ್ತದೆ. ಯೋಗ ಎನ್ನುವುದು ಚಿಕಿತ್ಸೆ ಎನ್ನುವುದಕ್ಕಿಂತ ಆಧ್ಯಾತ್ಮಿಕ ಅನುಭೂತಿ. ಆಧ್ಯಾತ್ಮಿಕತೆಯನ್ನು ಸರಿಯಾದ ಶಬ್ದಗಳಲ್ಲಿ ವಿವರಿಸುವುದು ಕಷ್ಟ. ನನ್ನ ಪ್ರಕಾರ ಆಧ್ಯಾತ್ಮಿಕತೆ ಎನ್ನುವುದು ನಮ್ಮ ಅಸ್ತಿತ್ವದ ಮೇಲಿನ ಪ್ರಶ್ನೆಗಳಿಗೆ (ಬದುಕಿನ ಅರ್ಥ, ಸಾವು ಮುಂತಾದವು) ಸ್ಪಂದಿಸುವ ಮಾನಸಿಕ ಸ್ಥಿತಿ. ಮಾನವನ ಬುದ್ಧಿಯೇ ಈ ಪ್ರಶ್ನೋತ್ತರಗಳನ್ನು ಮಾಡಲು ಸಹಾಯ ಮಾಡುವುದಿಲ್ಲ. ವಿಜ್ಞಾನಿಗಳ ಪ್ರಕಾರ ನಮ್ಮ ಮಿದುಳಿನಲ್ಲಿ ಅರಿವಿನ ಆಯೋಜಕಗಳಿವೆ. ಅವುಗಳ ಮೂಲಕವೇ ನಮ್ಮ ಸುತ್ತ ಘಟನೆಗಳನ್ನು ಅವಲೋಕಿಸಲು, ಚಿಂತನೆಮಾಡಲು ಸಹಾಯ ಮಾಡುತ್ತವೆ. ಇನ್ನು ಸಾವಿನ ನಂತರದ ಜೀವನದ ಬಗ್ಗೆಯೂ ಪ್ರಾಚೀನ ಕಾಲದಿಂದಲೂ ಚಿಂತನೆ ನಡೆದಿತ್ತು ಎನ್ನುವುದಕ್ಕೆ ಅನೇಕ ಪ್ರಾಚ್ಯ ಪುರಾವೆಗಳು ದೊರೆತಿವೆ.
ಆಧ್ಯಾತ್ಮಿಕತೆಗೆ ಎರಡನೆಯ ಮಾರ್ಗವೆಂದರೆ ಅತೀಂದ್ರಿಯತೆ. ವೇದಗಳು ಇಂತಹ ಅತೀಂದ್ರಿಯತತ್ತ್ವವನ್ನು ವರ್ಣಿಸುತ್ತವೆ. ಅತೀಂದ್ರಿಯತೆ ಎಂದರೆ ಒಂದು ಅನಂತತತ್ತ್ವದಲ್ಲಿ ನಾವು ಒಂದು ಚಿಕ್ಕ ಭಾಗ ಎಂದು ಅರಿಯುವುದು. ಈ ಅರಿವಿನಿಂದ ಸಾವಿನ ಭಯ ಇಲ್ಲವಾಗುತ್ತದೆ. ಚಿಕ್ಕಮಕ್ಕಳಿಗೆ ಸಾಮಾನ್ಯವಾಗಿಯೇ ಆಧ್ಯಾತ್ಮಿಕತೆ ಇರುತ್ತದೆ. ಏಕೆಂದರೆ ಅವರ ತಿಳಿವಳಿಕೆಗೂ ಮೀರಿದ ಅನುಭವಗಳನ್ನು ಪಡೆಯುತ್ತಾರೆ ಎನ್ನುವುದು ವಿಜ್ಞಾನಿಗಳ ವಾದ.
ಮೂರನೆಯದಾಗಿ ಆಧ್ಯಾತ್ಮಿಕತೆಗೆ ಕಾರಣವೆಂದರೆ ಸಹಾಯ ಮತ್ತು ಬೆಂಬಲಿಸುವ ಮನೋಭಾವ. ನಮ್ಮ ಕಷ್ಟಕಾಲದಲ್ಲಿ ಕಾಳಜಿಮಾಡುವ, ಬೆಂಬಲಿಸುವ ಮಾತೃಶಕ್ತಿಯನ್ನು ನಾವು ಅಪೇಕ್ಷಿಸುತ್ತೇವೆ. ಇದುವೇ ಧರ್ಮ ಅಥವಾ ಅಧ್ಯಾತ್ಮ ಎಂಬುದು ಫ್ರಾಯ್ಡ್ನ ಅಭಿಪ್ರಾಯ. ದೇವರೆಂಬುದು ಜಗತ್ತಿನ ಸೃಷ್ಟಿಕರ್ತ ಮತ್ತು ರಕ್ಷಕ ಎಂದೇ ಎಲ್ಲ ಧರ್ಮದವರ ಅಭಿಪ್ರಾಯವಾಗಿದೆ.
ಇಂತಹ ಆಧ್ಯಾತ್ಮಿಕತೆಯ ಬಗ್ಗೆ ಯೋಗದ ೩ನೇ ಸ್ಥಿತಿಯು ತಿಳಿಸುತ್ತದೆ. ಯೋಗವು ಕೇವಲ ದೈಹಿಕ ವ್ಯಾಯಾಮವನ್ನಷ್ಟೇ ಹೇಳದೆ, ನೈತಿಕತೆಯನ್ನೂ ತಿಳಿಸುತ್ತದೆ. ಸತ್ಯಸಂಧತೆ ಮತ್ತು ಅಹಿಂಸೆ ಯೋಗಿಗಳಿಗಿರಬೇಕಾದ ಪ್ರಥಮ ಮೌಲ್ಯಗಳು. ಯಮ-ನಿಯಮಗಳಿಲ್ಲದ ಪ್ರಾಣಾಯಾಮವು ದೈಹಿಕ ಶ್ರಮವಾಗುತ್ತದೆ.
ಉತ್ಕೃಷ್ಟತೆಯೆಂದರೆ ನಮ್ಮನ್ನು ಜಗತ್ತಿಗೆ ಹೆಚ್ಚಾಗಿ ತೆರೆದುಕೊಳ್ಳುವುದು. ಅಂದರೆ, ನಮ್ಮ ಜೊತೆಗೆ, ನಮ್ಮ ಪ್ರೀತಿಪಾತ್ರರನ್ನು, ತಂದೆ-ತಾಯಿಯನ್ನು, ಎಲ್ಲರನ್ನೂ ನಮ್ಮಷ್ಟೇ ಪ್ರಮುಖರು ಎಂದು ತಿಳಿಯುವುದು. ಬಹುಶಃ ವೇದಾಂತವು ಹೇಳುವಂತೆ ಎಲ್ಲವೂ ಬ್ರಹ್ಮನಾಗಿದ್ದಾನೆ ಎನ್ನುವುದು ಇದೇ. ಈ ತಿಳಿವಳಿಕೆ ಹಠಾತ್ತನೆ ಬರುವುದಲ್ಲ. ಬದಲಾಗಿ ಕ್ರಮೇಣ ಸಿದ್ಧಿಸುತ್ತದೆ. ಚಿಕಿತ್ಸಕನು ತನ್ನ ರೋಗಿಯನ್ನು ಈ ಹಾದಿಯಲ್ಲಿ ಕರೆದುಕೊಂಡು ಹೋಗಿ, ಉತ್ಕೃಷ್ಟತೆಯನ್ನು ಸೃಷ್ಟಿ ಮಾಡಬಹುದು. ಆದರೆ ಎಲ್ಲ ರೋಗಿಗಳಿಗೂ ಈ ಹಾದಿ ಅನ್ವಯಿಸುವುದಿಲ್ಲ ಎಂಬ ತಿಳಿವಳಿಕೆಯೂ ವೈದ್ಯನಿಗಿರಬೇಕು.
ನಾನು ಒಂದು ವರ್ಷ ಅಭ್ಯಾಸ ಮಾಡಿದ ಸಾಧುಗಳು, ಯೋಗದ ೩ನೇ ಸ್ಥಿತಿಗೆ ತಲಪಲು ನಿಜವಾದ ಪ್ರಯತ್ನ ಮಾಡಿದವರು. ಅವರೆಲ್ಲರೂ ಮಾನಸಿಕವಾಗಿ ಆರೋಗ್ಯವಂತರಾಗಿದ್ದರು. ಅವರಿಗಿದ್ದ ಉತ್ಸಾಹ, ಸೇವಾಭಾವ ಎಲ್ಲದಕ್ಕೂ ವೈರಾಗ್ಯವೇ ಕಾರಣ. ಹೀಗೆ ಸಂನ್ಯಾಸಿಗಳಾಗಿ ಬದುಕುವುದು ಮಾನಸಿಕ ಅನಾರೋಗ್ಯವೆಂದು ಕೆಲವರು ಭಾವಿಸುತ್ತಾರೆ. ಆದರೆ ಅದು ಅಸತ್ಯ. ಏಕೆಂದರೆ ಬಾಲ್ಯದಿಂದಲೇ ಅವರೆಲ್ಲಾ ಆ ನಿಟ್ಟಿನಲ್ಲಿ ಮನಸ್ಸಿಟ್ಟು ಧಾರ್ಮಿಕ ಮಾರ್ಗವನ್ನನುಸರಿಸಿದ್ದವರು. ಈ ರೀತಿ, ಚಿಕ್ಕಂದಿನಿಂದಲೇ ಧಾರ್ಮಿಕ ಪ್ರವೃತ್ತಿ ಬರುವುದು ಭಾರತದಲ್ಲಷ್ಟೇ ಅಲ್ಲ, ಪಾಶ್ಶಾತ್ಯರಾಷ್ಟ್ರಗಳಲ್ಲೂ ಇಂತಹ ನಿದರ್ಶನಗಳಿರುವುದನ್ನು ಅಧ್ಯಯನಕಾರರು ತೋರಿಸಿದ್ದಾರೆ. ಸಂನ್ಯಾಸಿಯಾಗುವ ಈ ತುಡಿತವನ್ನು ಅರ್ಥಮಾಡಿಕೊಳ್ಳಲು ವಿಜ್ಞಾನಿಗಳೂ ಕಷ್ಟಪಟ್ಟಿದ್ದಾರೆ. ಸಂಗೀತಪ್ರಜ್ಞೆಯು ಕೆಲವರಲ್ಲಿ ಬಾಲ್ಯದಿಂದಲೇ ಇರುವಂತೆ, ಕೆಲವರಿಗೆ ಸಂನ್ಯಾಸದ ಪ್ರಜ್ಞೆ ಇರಬಹುದು. ಭಾರತೀಯಶಾಸ್ತ್ರವು ಸರಳವಾಗಿ ಇದನ್ನು ‘ಪೂರ್ವಜನ್ಮದ ಫಲ’ ಎಂದು ಹೇಳುತ್ತದೆ. ಕೆಲವು ಸಾಧುಗಳು ತಮ್ಮ ಮನೆಯಲ್ಲಿನ ತೊಂದರೆಗಳಿಂದಾಗಿ ಸಂನ್ಯಾಸಿಗಳಾಗಿದ್ದೂ ಕಂಡುಬರುತ್ತದೆ.
ಒಟ್ಟಿನಲ್ಲಿ, ಎಲ್ಲರೂ ಸಾಮಾನ್ಯ ಬದುಕಿನಿಂದ ತಪ್ಪಿಸಿಕೊಳ್ಳಲೆಂದೋ, ಮಾನಸಿಕ ರೋಗದಿಂದಲೋ ಸಂನ್ಯಾಸಿಗಳಾಗುತ್ತಾರೆಂಬ ಕಲ್ಪನೆ ತಪ್ಪು. ಪತಂಜಲಿ ಮಹರ್ಷಿಗಳು ಮಾನಸಿಕವಾಗಿ ದುರ್ಬಲರಾದವರು ಯೋಗವನ್ನು ಅನುಸರಿಸಬಾರದು ಎಂದೇ ಹೇಳಿದ್ದಾರೆ. ಆದಾಗ್ಯೂ, ಭಾರತದ ಪವಿತ್ರಕ್ಷೇತ್ರಗಳಲ್ಲಿ, ಕೆಲವು ಮಾನಸಿಕ ದುರ್ಬಲರೂ ಅನೇಕರಿಂದ ಸಹಾಯಪಡೆಯುತ್ತಿದ್ದರೆಂಬುದನ್ನು ನಾನು ಗಮನಿಸಿದ್ದೇನೆ.
Comments are closed.