ನಾಲ್ಕು ಕವನಗಳು
೧. ಮತ್ತೆ ಮತ್ತೆ
ಮತ್ತೆ ಮತ್ತೆ ಸೋತು
ಹರಳುಗಟ್ಟಿದ ಸುಣ್ಣ ನಾನು;
ಸುಟ್ಟು ಬಿಡಿ ನನ್ನ
ನಿಮ್ಮ ಗೋಡೆಗಳ ಬೆಳಗುತ್ತೇನೆ!
ಮತ್ತೆ ಮತ್ತೆ ಎಲೆಗಳುದುರಿ
ಬೋಳಾದ ಮರ ನಾನು;
ಕಡಿದು ಬಿಡಿ ನನ್ನ
ನಿಮ್ಮ ಒಲೆಗೆ ಉರುವಲಾಗುತ್ತೇನೆ!
ಮತ್ತೆ ಮತ್ತೆ ಕರಗಿ
ಮಂಕಾದ ಬಿದಿಗೆ ಚಂದ್ರ ನಾನು;
ನೋಡಿ, ನಕ್ಕುಬಿಡಿ ನನ್ನ
ನಿಮ್ಮ ಮನವ ಹುಣ್ಣಿಮೆಯಾಗಿಸುತ್ತೇನೆ!
೨. ಪಾಡು
ಕೊರಿಯಾದಲ್ಲಿ
ಅಣ್ವಸ್ತ್ರದ
ಪರೀಕ್ಷೆ!
ಸಿರಿಯಾದಲ್ಲಿ
ಅನ್ನ ವಸ್ತ್ರದ
ಪ್ರತೀಕ್ಷೆ!
ಅವರಿಗೆ
ಬೇಕಂತೆ ರಕ್ಷೆ!
ಇವರಿಗಿಲ್ಲ ಭಿಕ್ಷೆ!
ಎರಡೂ ದಕ್ಕದ
ಮನುಕುಲಕ್ಕೆ…
ಇದೆಂಥ ಶಿಕ್ಷೆ!?
೩. ಇದು ಸಿರಿಯಾ?
ಐಶಾರಾಮದ ಕೋಡು
ಮೂಡುತ್ತಲೇ
ಮನುಷ್ಯ ಭೂಮಿಯನ್ನು
ಬಗೆಬಗೆದು ತಿನ್ನತೊಡಗಿದ!
ಗಂಧ, ಗಾಳಿ ತೀರಿದಂತೆ
ತಿರೆಯೂ ಕೊರಡು!
ಬರಡು!
ಅದೋ ಸಿರಿಯಾ…!
ಇದು ಸಿರಿಯಾ?
೪. ಎಲ್ಲ ಮೀರಿದರುಂಟು…
ಹೆಸರು ಇಟ್ಟವರು
ಮರೆತು ಹೋದರು;
ಕತೆಯ ಕಟ್ಟಿದವರು
ಕಳೆದು ಹೋದರು!
ದಿನಾ ದೂರುವವರ
ಸಂತೈಸುವನೇ ನೇಸರ;
ದಿನಾ ಸಾಯುವವರಿಗೆ
ಅಳುವನೇ ದಿನಕರ?
ಹೆಸರೆಷ್ಟು ಉಳಿದವನ
ಬೆಳಕ ಬೆರಗಿನಲಿ;
ಕತೆಗಳೆಷ್ಟು ಉಳಿದವನ
ಕ್ಷಿತಿಜದ ಪಥದಲಿ?
ಗುಡಿಯ ಬೆಳಗುವ ದೀಪವ
ಹಿಡಿಯಬಹುದಲ್ಲದೆ
ಬಾನಬಯಲ ಬೆಳಗುವ
ಭಾಸ್ಕರನ ತಡವಬಹುದೆ?
ಹುಟ್ಟು-ಸಾವು, ನೋವು-ನಲಿವು, ಬಿರುದು-ಬಾವಲಿ
ಎಲ್ಲ ಮೀರಿದರುಂಟು ನಿನಗೂ ಜಾಗ ಬಾನಿನಲಿ!
ಚಂ.ಸು. ಪಾಟೀಲ
ಲೇಖಕರು ಪ್ರಕೃತಿಪರ ರೈತರು
www.facebook.com/chamsupatil
ಪ್ರಭುಸಮ್ಮಿತ
ಓಲಗದಲ್ಲಿ ವಿರಾಜಮಾನ
ರಾಜ
ಬಗೆ ಬಗೆಯ ಬಿರುದು ಬಾವಲಿಗಳ ಸಹಿತ
ಸಾಲುಗಟ್ಟಿದ್ದಾರೆ ಜನ
ಹೂ ಹಣ್ಣು ಅಹವಾಲುಗಳ ಜೊತೆಗೆ
ಅವನೋ ಅನಾ
ಮತ್ತಾಗಿ ಅವರು ತಂದ
ಅರೆಬಿರಿದ ಹೂಗಳ ಹಿಸುಕಿ
ಇದು ಗಂಧ
ಮಿಡಿ ಕಾಯಿ ದೋರುಗಾಯಿಗಳ ಹಿಂಡಿ
ಇದೇ ರಸವೆನುವ
ಮರುದಿನದಿಂದ ಅದೇ ಶಾಸನ
ಸಂಗೀತ ಸೇವಾ ಅವಧಾರಯ
ಎಂದಾಗ ಇದ್ದೆಲ್ಲ ಕವಿಗಳು
ಗಾಯಕರು ಸಿದ್ಧ
ನೀವೆಲ್ಲ ನನ್ನ ಶ್ರುತಿಗೇ ಬದ್ಧ
ರಾಗಿ ಎಂದಾಗ ಅವರು ಕಂಗಾಲು
ಕವಿಯೋ
ಸ್ವಚ್ಛಂದ ಛಂದ ವಿಹಾರಿ
ಗಾಯಕನೋ
ಮಿಡಿದಂತೆ ಏಕತಾರಿ
ಕುಕಿಲಿರಿವ ಕೋಗಿಲೆಯ ಕುಣಿವ ನವಿಲಿನ
ಹರಿವ ನೀರಿನ ಶ್ರುತಿಯ ಹಿಡಿಯುವ
ಮಸಿಯು ಇಳಿಯದು ಎಂದ ಕವಿ
ಶ್ರುತಿಯು ಸೇರದು ಎಂದ ಗಾಯಕ
ಓಲಗದಲ್ಲೀಗ ಗದ್ದಲವೋ ಗದ್ದಲ
ನಾನೆ ಬರೆಯುವೆ ನಾನೆ ಹಾಡುವೆ
ಹೊಟ್ಟೆ ಹೊರೆಯಲೆಂದೇ ಇರುವ ನೀವುಗಳು
ನನ್ನ ಅನುಸರಿಸಿ ಎಂದ
ಈಗ
ರಾಜ್ಯದ ತುಂಬ ಅವನ ಶಾಸನವೇ ಕವಿತೆ
ಅದರದ್ದೇ ಪಾಡು.

ಪಿ ಬಿ. ಪ್ರಸನ್ನ
ಲೇಖಕರು ಕನ್ನಡ ಭಾಷಾ ಸಹ ಪ್ರಾಧ್ಯಾಪಕರು
polyaprasanna@rediffmail.com