ಕಂಪ್ಯೂಟರುಗಳನ್ನು ಒಂದು ಸಂಪರ್ಕಜಾಲದಲ್ಲಿ ಪರಸ್ಪರ ಜೋಡಿಸಿ ಅವುಗಳ ಮಧ್ಯೆ ಮಾಹಿತಿ ಹಾಗೂ ಸಂವಹನ ಸಾಧ್ಯವಾಗುವಂತೆ ಮಾಡಿದ ವ್ಯವಸ್ಥೆಯನ್ನು ಇಂಟರ್ನೆಟ್ ಅಥವಾ ಅಂತರ್ಜಾಲ ಎಂದು ಕರೆಯಲಾಗಿತ್ತು. ಆದರೆ ಕಾಲ ಕ್ರಮೇಣ ಮೊಬೈಲು, ಟ್ಯಾಬ್ಲೆಟ್ಗಳಲ್ಲೂ ಇಂಟರ್ನೆಟ್ ಬಳಕೆ ಆರಂಭವಾಯಿತು. ಕಾಲದ ಜೊತೆ ದಾಪುಗಾಲಿಡುತ್ತಾ ಸಾಗುತ್ತಿರುವ ತಂತ್ರಜ್ಞಾನ ಅದರ ಮುಂದಿನ ಘಟ್ಟಕ್ಕೆ ಕಾಲಿರಿಸುತ್ತಿದ್ದು ಎಲ್ಲಾ ಯಂತ್ರ, ಗೃಹೋಪಯೋಗೀ ಸಾಧನಗಳನ್ನು ಆವರಿಸಲು ಆರಂಭಿಸಿದೆ. ಕಂಪ್ಯೂಟರುಗಳ ಗಾತ್ರ ಕಿರಿದಾಗಿರುವುದು, ಉತ್ಪಾದನಾ ವೆಚ್ಚ ಕಡಮೆಯಾಗಿರುವುದು, ವಯರ್ಲೆಸ್ ಸಂಪರ್ಕ ವ್ಯವಸ್ಥೆ ಎಲ್ಲೆಡೆ ಪಸರಿಸಿರುವುದು ಇಂತಹ ಅಗಾಧ ಸಾಧ್ಯತೆಯನ್ನು ತೆರೆದಿಟ್ಟಿದೆ.
ಅಂತರ್ಜಾಲದ ಜೊತೆ ಬೆಸೆದ ಈ ಹೊಸ ವಸ್ತುಗಳ ವೈವಿಧ್ಯತೆ ಕಡಮೆಯೇನಲ್ಲ. ಎಸಿ, ವಾಶಿಂಗ್ ಮಷಿನ್, ಕಾಲಿಂಗ್ಬೆಲ್, ಕೃಷಿ ಉಪಕರಣಗಳು, ಕನ್ನಡಕ, ಬೂಟು, ವಾಚು, ಕಾರುಗಳೆಲ್ಲ ಹೊಸ ಅಂತರ್ಜಾಲ ಸಂಪರ್ಕಸಾಧನಗಳಾಗಿವೆ. ಇದನ್ನು ಬಳಸಿ ಪಡಯಬಹುದಾದ ಪ್ರಯೋಜನಗಳು ಹಲವು.
ನಿಮ್ಮ ನಡೆಯನ್ನು ಲೆಕ್ಕವಿಡುವ ಫಿಟ್ನೆಸ್ ಬ್ಯಾಂಡ್ಗಳು ಈಗಾಗಲೇ ಸಾಕಷ್ಟು ಬಂದಿವೆ. ಮೊಬೈಲ್ ಜೊತೆ ಸಂಪರ್ಕ ಹೊಂದಿ ನಿಮಗೆ ನಿಯಮಿತ ಮಾಹಿತಿಯನ್ನು ನೀಡುವ ಕೆಲಸವನ್ನೂ ಇದು ಮಾಡುತ್ತದೆ.
ಸ್ಮಾರ್ಟ್ ಟಿವಿ
ನಿಮ್ಮ ಇಷ್ಟದ ಧಾರಾವಾಹಿ/ರಿಯಾಲಿಟಿ ಶೋಗಳು ನೀವು ಬಿಡುವಾಗಿರುವ ಸಮಯದಲ್ಲಿ ಬರುತ್ತಿಲ್ಲವೇ? ಮೊಬೈಲ್/ಕಂಪ್ಯೂಟರುಗಳ ಎದುರು ಕುಳಿತು ಯೂಟ್ಯೂಬ್ ನೋಡುವುದು ಹಿತವೆನಿಸುತ್ತಿಲ್ಲವೇ? ಇಂಟರ್ನೆಟ್ ಜೊತೆ ಸಂಪರ್ಕಿಸಬಹುದಾದ ಟಿವಿ ಈ ಕೊರತೆಯನ್ನು ನೀಗಿಸುತ್ತದೆ. ನೀವು ಎಲ್ಲಿದ್ದರೂ ಆನ್-ಲೈನ್ ಮೂಲಕ ನಿಯಂತ್ರಿಸಬಹುದಾದ/ರೆಕಾರ್ಡ್ ಮಾಡಬಹುದಾದ, ಸೋಫಾದಲ್ಲಿ ಕುಳಿತು ಯೂಟ್ಯೂಬ್ ವೀಡಿಯೋ ವೀಕ್ಷಿಸಬಹುದಾದ ಟಿವಿಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯ ಇವೆ.
ವಿದ್ಯುತ್ ಹೀಟರ್/ಓವನ್/ಕುಕ್ಕರ್ ಇತ್ಯಾದಿಗಳು ಇಂಟರ್ನೆಟ್ ಜೊತೆ ಸಂಪರ್ಕದಲ್ಲಿದ್ದರೆ? ಮನೆ ತಲಪುವ ಮೊದಲೇ ನಿಮ್ಮ ಆಹಾರವನ್ನು ಬಿಸಿಯಾಗಿಸಲು ಸಂದೇಶ ಕಳುಹಿಸಬಹುದು. ನಿಮ್ಮ ಫ಼್ರಿಜ್ ಒಳಗಿರುವ ಆಹಾರದ ಮಾಹಿತಿಯನ್ನು ಕಛೇರಿಯಲ್ಲಿದ್ದಾಗಲೇ ತಿಳಿದುಕೊಳ್ಳಬಹುದು, ಅದೂ ನಿಮ್ಮ ಮೊಬೈಲ್ ಮೂಲಕ!
ಕ್ರೀಡೆಯಲ್ಲೂ ಇಂಟರ್ನೆಟ್!
ಇಂಟರ್ನೆಟ್ನಲ್ಲಿ ಆಟಗಳನ್ನು ಆಡಿಯಾಯಿತು. ಈಗ ಅಂಗಣದಲ್ಲಿ ಆಡುವ ಕ್ರೀಡೆಗಳಿಗೂ ಇಂಟರ್ನೆಟ್ ಆವರಿಸಿದೆ. ಚೆಂಡಿನೊಳಗಿರುವ ತಂತ್ರಾಂಶ ಚೆಂಡಿನ ವೇಗ, ಸಾಗಿ ಬಂದ ದಾರಿ ಇತ್ಯಾದಿಯನ್ನು ಅಂಗಣದಾಚೆಯಿರುವ ಕಂಪ್ಯೂಟರಿಗೆ ನಿರಂತರವಾಗಿ ಕಳಿಸುವ ವ್ಯವಸ್ಥೆ ಇದು. ಕ್ರೀಡಾಪಟುಗಳ ಬೂಟುಗಳಲ್ಲಿ, ಜಾಕೆಟ್ಗಳಲ್ಲಿ, ಹೆಲ್ಮೆಟ್ಗಳಲ್ಲೆಲ್ಲವೂ ಇಂಟರ್ನೆಟ್ ಡಿವೈಸ್ ಇರಿಸಬಹುದಾಗಿದ್ದು ಕ್ರೀಡೆಯನ್ನು ವೀಕ್ಷಿಸುವ ವಿಧವನ್ನು ಇದು ಬದಲಿಸಲಿದೆ.
ವಿದ್ಯುತ್ ದೀಪಗಳ ಬೆಳಕಿನ ಪ್ರಮಾಣ, ಬಣ್ಣವನ್ನು ಆನ್-ಲೈನ್ ನಿಯಂತ್ರಿಸುವ ಕಾಲವೂ ಬಂದಿದೆ. ಅಂತಹ ಬಲ್ಬುಗಳು ಈಗಾಗಲೇ ಸುದ್ದಿಮಾಡಿವೆ.
ಮನೆಯ ಕರೆಗಂಟೆ ಒತ್ತಿದ ತಕ್ಷ್ಷಣ ಎದುರಿಗಿರುವವರ ಚಿತ್ರ ತೆಗೆದು ನಿಮ್ಮ ಮೊಬೈಲ್ ಪರದೆಯಲ್ಲಿ ತೋರಿಸಿದರೆ ಹೇಗೆ? ನೀವು ಮನೆಯಲ್ಲಿ ಒಬ್ಬಂಟಿಯಾಗಿರಲಿ, ಮನೆಯಲ್ಲಿಲ್ಲದಿರಲಿ – ಇದು ನಿಮ್ಮ ಉಪಯೋಗಕ್ಕೆ ಬಂದೇ ಬರುತ್ತದೆ. ಕ್ಯಾಮರಾ ಮತ್ತು ವೈ-ಫ಼ೈ ಇರುವ ಕರೆಗಂಟೆ ಬಾಗಿಲಿಗೆ ಲಗತ್ತಿಸಿದಾಗ ಇದು ಸಾಧ್ಯ.
ಸ್ವಯಂಚಾಲಿತ ಗೇಟುಗಳು ನಿಮ್ಮ ಕಾರು ಬರುತ್ತಿರುವುದನ್ನು ಅಂತರ್ಜಾಲದ ಮೂಲಕ ತಿಳಿದುಕೊಂಡು ತನ್ನಿಂದತಾನೇ ತೆರೆದುಕೊಳ್ಳುವ ವ್ಯವಸ್ಥೆಯೂ ಬಂದಿದೆ.
ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಬೆಳೆದಂತೆ ಅಲ್ಲಿಯೂ ವಸ್ತುಗಳ ಇಂಟರ್ನೆಟ್ ತನ್ನ ಪರಿಣಾಮ ಬೀರಲಿದೆ. ರೋಗಗಳ ಪತ್ತೆಹಚ್ಚುವಿಕೆ ಮತ್ತು ಶಮನಕ್ಕೆ ಅಂತರ್ಜಾಲ ಸಂಪರ್ಕಿತ ವೈದ್ಯಕೀಯ ಉಪಕರಣಗಳು ತಮ್ಮ ಕೊಡುಗೆ ನೀಡಲಿವೆ.
ಮನೆಯ ವಿದ್ಯುತ್/ನೀರು ಸರಬರಾಜಿನ ಮೀಟರ್ ನೇರವಾಗಿ ಬಳಕೆ ಮಾಹಿತಿಯನ್ನು ಅಂತರ್ಜಾಲದ ಮೂಲಕ ಕಳುಹಿಸುವಂತಿದ್ದರೆ ಮೀಟರ್ ಓದುವವರು ಮನೆಗೆ ಬರಬೇಕಾಗಿಲ್ಲ. ಟಿಕೆಟ್ ಯಂತ್ರಗಳು ಇಂಟರ್ನೆಟ್ ಮೂಲಕವೇ ಕಾರ್ಯ ನಿರ್ವಹಿಸಬಹುದು. ಹೋಟೆಲುಗಳಲ್ಲಿ ನಿಮ್ಮ ಆರ್ಡರ್ ಅನ್ನು ಟ್ಯಾಬ್ಗಳಲ್ಲಿ ಬರೆಯುತ್ತಿದ್ದಂತೆ ಅಡುಗೆಮನೆಯ ಗೋಡೆಯಲ್ಲಿರುವ ಪರದೆಯಲ್ಲಿ ಅದು ಬಿತ್ತರವಾಗಿ, ಬಿಲ್ ಯಂತ್ರಕ್ಕೆ ಕೂಡ ಸೇರಬಹುದು.
ದೊಡ್ಡ ಕೃಷಿ ಕ್ಷೇತ್ರಗಳನ್ನು ಗಮನಿಸುವುದು, ನಿರ್ವಹಿಸುವುದು ಮುಂತಾದುದಕ್ಕೆ ಅಪಾರ ಸಮಯ ವ್ಯಯಿಸಬೇಕಾಗುತ್ತದೆ. ಕಾರ್ಮಿಕರ ಕೊರತೆಯಿದ್ದರೆ ಇನ್ನೂ ಕಷ್ಟ. ಅದರಲ್ಲಿ ಯಾಂತ್ರಿಕವಾದ ಕೆಲವು ಕೆಲಸಗಳನ್ನು ಆನ್-ಲೈನ್ ನಿರ್ವಹಿಸುವಂತಿದ್ದರೆ ಒಳಿತನಿಸುವುದಿಲ್ಲವೆ? ಕುಳಿತಲ್ಲಿಂದಲೇ ನೀರುಪೂರೈಕೆ, ಮಣ್ಣಿನ ಸ್ಥಿತಿ, ನೀರಿನ ಲಭ್ಯತೆ, ಬೆಳೆಗಳ ಬೆಳವಣಿಗೆ ಇತ್ಯಾದಿಗಳನ್ನು ತಿಳಿಯುವ ಯಂತ್ರ ಕೂಡ ವಸ್ತುಗಳ ಇಂಟರ್ನೆಟ್ ಪಟ್ಟಿಯಲ್ಲಿದೆ.
ಇನ್ನು ಸಾಮಾನ್ಯವಾಗಿ ಕಂಪ್ಯೂಟರ್ ಜೊತೆಗೆ ನೇರ ಸಂಪರ್ಕದಲ್ಲಿರುವಂತಹ ಪ್ರಿಂಟರ್, ಪ್ರೊಜೆಕ್ಟರುಗಳು ಅಂತರ್ಜಾಲದ ಮೂಲಕವೇ ಕಂಪ್ಯೂಟರುಗಳ ಜೊತೆ ಸಂಪರ್ಕವಾಗುತ್ತಿವೆ. ಹಲವು ಕಂಪ್ಯೂಟರ್, ಮೊಬೈಲುಗಳು ಮತ್ತು ವಯರ್ಲೆಸ್ ಸಂಪರ್ಕಗಳುಳ್ಳ ಕಛೇರಿಗಳಲ್ಲಿ ಇದು ಪ್ರಯೋಜನಕ್ಕೆ ಬರುತ್ತದೆ.
ರಸ್ತೆ ಸಿಗ್ನಲ್ಗಳು, ಪಾರ್ಕಿಂಗ್ ವ್ಯವಸ್ಥೆಗಳು, ಶಾಪಿಂಗ್ ಮಳಿಗೆಗಳಲ್ಲಿ ಶುಲ್ಕಪಾವತಿ, ವಾಯುಮಾಲಿನ್ಯ ಮಾಪನ, ಹೈನುಗಾರಿಕೆ, ವಿದ್ಯಾಭ್ಯಾಸ, ರೈಲು, ವಿಮಾನಯಾನ ಮುಂತಾದವುಗಳು ಇಂತಹ ಇನ್ನೂ ಕೆಲವು ಸಾಧ್ಯತೆಗಳಿರುವ ಕ್ಷೇತ್ರಗಳು. ಇಂತಹ ಇನ್ನಷ್ಟು ಸಾಧ್ಯತೆಗಳು ಇದನ್ನು ಓದುತ್ತಿರುವಂತೆಯೇ ನಿಮ್ಮ ತಲೆಯೊಳಗೆ ಹಾದುಹೋಗಿರಬಹುದು.
ಸಾಧ್ಯತೆಗಳಿಗೆ ಮಿತಿಯಿಲ್ಲ. ಕಾರ್ಖಾನೆಗಳಲ್ಲಿ, ಕಛೇರಿಗಳಲ್ಲಿ, ಸಾರಿಗೆಯಲ್ಲಿ ಹೀಗೆ ಹಲವು ಕ್ಷೇತ್ರಗಳಲ್ಲಿ ವಸ್ತುಗಳ ಇಂಟರ್ನೆಟ್ (Internet of Things / IoT) ಸಂಚಲನವನ್ನು ಮೂಡಿಸಲಿದೆ.
ಇವುಗಳಲ್ಲಿ ಕೆಲವು ತೀರಾ ಅತಿರೇಕ ಅನ್ನಿಸುವುದು ನಿಜ. ಆದರೆ ಹಲವು ತಂತ್ರಜ್ಞಾನಗಳು ಕೆಲ ವರ್ಷಗಳಲ್ಲಿ ಜೀವನದಲ್ಲಿ ಹಾಸುಹೊಕ್ಕಾಗಲಿವೆ. ಒಟ್ಟಿನಲ್ಲಿ ಅವುಗಳಿಂದ ನಮ್ಮ ಜೀವನ ಸರಳವಾಗಬೇಕೇ ಹೊರತು ಇನ್ನಷ್ಟು ಸಂಕೀರ್ಣವಾಗಬಾರದಷ್ಟೆ.
ಮುಂಬರುವ ಭವಿಷ್ಯ ಎದುರುಗೊಳ್ಳಲು ಲೇಖನ ಸಕಾಲಿಕ