ಈಗ ಬಳಸುವ ಲಿಥಿಯಂ ಅಯೋನ್ ಬ್ಯಾಟರಿಗಳ ಬದಲು ಹೈಡ್ರೋಜನ್ ಬಳಸಿದರೆ ವಾಹನಗಳು ಹತ್ತುಪಟ್ಟು ಹೆಚ್ಚಿನ ದೂರವನ್ನು ಕ್ರಮಿಸಬಲ್ಲವು. ಹಾಗೂ ಚಾರ್ಜ್ ಮಾಡುವ ಸಮಯವೂ ಈಗಿರುವ ಬ್ಯಾಟರಿ-ಆಧಾರಿತ ವಾಹನಗಳ ಎರಡರಿಂದ ನಾಲ್ಕು ಗಂಟೆಗಳಿಗೆ ಬದಲಾಗಿ ಎಂಟು ನಿಮಿಷ ಸಾಕು. ಇದರ ಭಾರವೂ ಕಡಮೆ. ವಾಹನದ ಭಾರವು ಇಳಿಕೆಯಾದುದರ ಪರಿಣಾಮವಾಗಿ ಹೆಚ್ಚಿನ ಪ್ರಮಾಣದ ಸಾಗಾಣಿಕೆ ಸಾಧ್ಯ ಹಾಗೂ ಇಂಧನವ್ಯಯವೂ ಕಡಮೆಯಾಗುತ್ತದೆ. ವಾಯುಮಾಲಿನ್ಯದ ಸಮಸ್ಯೆಗೂ ಪರಿಹಾರ ಕಂಡುಕೊಂಡಂತೆ ಆಗುತ್ತದೆ.

ಪೆಟ್ರೋಲ್ಗಾಗಿ ಅರಬ್ ದೇಶಗಳು, ರಷ್ಯಾವನ್ನು ಅವಲಂಬಿತವಾಗಿರುವ ನಾವು ನಮ್ಮ ವಿದೇಶಿ ವಿನಿಮಯದ ಅತಿ ದೊಡ್ಡ ಭಾಗವನ್ನು ಅದಕ್ಕಾಗಿ ಮೀಸಲಿಟ್ಟಿದ್ದೇವೆ. ಇದರ ಪರಿಣಾಮವಾಗಿ ಯಾವುದೇ ಯುದ್ಧ ಮತ್ತು ಅಂತಾರಾಷ್ಟ್ರೀಯ ಬೆಳವಣಿಗೆಗಳು ಇಂಧನ ದರದ ಮೇಲೆ ನೇರ ಪರಿಣಾಮವನ್ನು ಬೀರುತ್ತಿದೆ. ಹೀಗಿರುವಾಗ ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ದೇಶಕ್ಕೆ ಅವಶ್ಯವೂ ಹೌದು ಕಠಿಣವೂ ಹೌದು.
ಬ್ಯಾಟರಿ ಚಾಲಿತ ಇಲೆಕ್ಟ್ರಿಕ್ ವಾಹನಗಳು ಒಂದಷ್ಟುಮಟ್ಟಿಗೆ ಈ ಹೊರೆಯನ್ನು ತಗ್ಗಿಸುವಲ್ಲಿ ಆಶಾಜನಕವಾಗಿರುವುದು ನಿಜ. ಆದರೆ ಒಂದೇ ಚಾರ್ಜ್ ಮೂಲಕ ಹೆಚ್ಚಿನ ದೂರವನ್ನು ಕ್ರಮಿಸಲು (ರೇಂಜ್) ಬ್ಯಾಟರಿಯ ಗಾತ್ರ ಮತ್ತು ಭಾರ ತೊಡಕಾಗಿದೆ. ಹೀಗಾಗಿ ಪ್ರಸ್ತುತ ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 200-300 ಕಿ.ಮೀ. ದೂರವನ್ನು ಚಲಿಸಬಹುದಾದ ವಾಹನಗಳಷ್ಟೇ ಚಾಲ್ತಿಯಲ್ಲಿವೆ.
ಈ ಎಲ್ಲ ವ್ಯೂಹಗಳಿಂದ ಹೊರಬಂದು ಭಾರತವು ಭವಿಷ್ಯದಲ್ಲಿ ಇಂಧನ ಸ್ವಾವಲಂಬನೆಯನ್ನು ಮಾತ್ರವಲ್ಲದೇ ರಫ್ತು ಮಾಡುವ ಸಾಧ್ಯತೆಯನ್ನೂ ಒಳಗೊಂಡಿರುವ ಒಂದು ಕ್ಷೇತ್ರ – ಹಸಿರು ಹೈಡ್ರೋಜನ್ (ಜಲಜನಕ) ಇಂಧನ. ಇದನ್ನು ಕಾರ್ಯಗತವಾಗಿಸಲು ಸರ್ಕಾರ ಭಾರೀ ಪ್ರಮಾಣದ ತಯಾರಿಯಲ್ಲಿ ತೊಡಗಿಕೊಂಡಿದೆ. ರಿಲಯನ್ಸ್, ಅದಾನಿ, ಟಾಟಾಗಳಂತಹ ದೈತ್ಯ ಕಂಪೆನಿಗಳು ಕೂಡ ಇದಕ್ಕಾಗಿ ಭಾರೀ ಪ್ರಮಾಣದ ಹೂಡಿಕೆ ಮಾಡುತ್ತಿವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇದೇ ಫೆ. 1ರಂದು ಮಂಡಿಸಿದ ಬಜೆಟ್ನಲ್ಲಿ ಹೈಡ್ರೋಜನ್ ಇಂಧನ ಮಿಷನ್ (Hydrogen Fuel Misson) ಬಗ್ಗೆ ಪ್ರಸ್ತಾಪಿಸಿದ್ದರು. 2021-22ರ ಹಣಕಾಸು ವರ್ಷದಲ್ಲಿ ಹಸಿರು ಇಂಧನ (Green Fuel) ಮೂಲಗಳಿಂದ ಜಲವಿದ್ಯುತ್ ತಯಾರಿಸಲು ಹೈಡ್ರೋಜನ್ ಇಂಧನ ಮಿಷನ್ ಆರಂಭಿಸುವ ಪ್ರಸ್ತಾವನೆ ಇದೆ ಎಂದು ತಿಳಿಸಿದ್ದರು.
ಕಳೆದ ವರ್ಷ ಒಮ್ಮೆ ರಸ್ತೆ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಪಾರ್ಲಿಮೆಂಟ್ಗೆ ಹೈಡ್ರೋಜನ್ ಇಂಧನಚಾಲಿತ ವಾಹನದಲ್ಲಿ ಆಗಮಿಸಿ ಸುದ್ದಿ ಮಾಡಿದ್ದು ನೆನಪಿರಬಹುದು. ಹೈಡ್ರೋಜನ್ ಇಂಧನ ಬಳಕೆಯ ಬಗ್ಗೆ ದೇಶದ ಗಮನ ಸೆಳೆಯಲು ಅವರು ಸ್ವದೇಶೀ ತಂತ್ರಜ್ಞಾನ ಆಧಾರಿತ ಹೈಡ್ರೋಜನ್ ಚಾಲಿತ ಕಾರಿನಲ್ಲಿ ಬಂದಿದ್ದರು.
ಏನಿದು ಹಸಿರು ಹೈಡ್ರೋಜನ್?
ಹೈಡ್ರೋಜನ್ ಇಂಧನ ಎಂದರೆ ಹೈಡ್ರೋಜನನ್ನು ನೇರ ಇಂಧನವಾಗಿ ಬಳಸುವುದಲ್ಲ. ಎಲೆಕ್ಟ್ರಿಕ್ ಇಂಧನವನ್ನು ಸಂಗ್ರಹಿಸಲು ಈಗಿರುವ ಲಿಥಿಯಂ ಅಯೋನ್ ಬ್ಯಾಟರಿಗಳ ಬದಲಾಗಿ ಹೈಡ್ರೋಜನ್ ಅನ್ನು ಬಳಸುವುದು. ನವೀಕರಿಸಬಹುದಾದ ಮೂಲದಿಂದ ತಯಾರಾದ ವಿದ್ಯುತನ್ನು ನೀರಿನ ಮೂಲಕ ಹಾಯಿಸಿ ಅದರಿಂದ ಹೈಡ್ರೋಜನ್ ಗ್ಯಾಸನ್ನು ಚಾರ್ಜ್ ಮಾಡಲಾಗುತ್ತದೆ.
ಹೈಡ್ರೋಜನ್ ಫ್ಯುಯಲ್ ಸೆಲ್, ವಿದ್ಯುಚ್ಛಕ್ತಿಯನ್ನು ಉತ್ಪಾದಿಸುವುದಕ್ಕಾಗಿ ಜಲಜನಕದ ರಾಸಾಯನಿಕ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಇದು ವಿದ್ಯುಚ್ಛಕ್ತಿಯನ್ನು ಉತ್ಪಾದಿಸಲು ಜಲಜನಕ (ಹೈಡ್ರೋಜನ್) ಮತ್ತು ಆಮ್ಲಜನಕ (ಆಕ್ಸಿಜನ್)ವನ್ನು ಸಂಯೋಜಿಸುತ್ತದೆ ಮತ್ತು ನೀರು ಹಾಗೂ ಶಾಖವನ್ನು ಸಹ-ಉತ್ಪನ್ನಗಳಾಗಿ ಹೊರತರುತ್ತದೆ.
ಯಾಕೆ ಹಸಿರು ಹೈಡ್ರೋಜನ್?
ಈಗ ಬಳಸುವ ಲಿಥಿಯಂ ಅಯೋನ್ ಬ್ಯಾಟರಿಗಳ ಬದಲು ಹೈಡ್ರೋಜನ್ ಬಳಸಿದರೆ ವಾಹನಗಳು ಹತ್ತುಪಟ್ಟು ಹೆಚ್ಚಿನ ದೂರವನ್ನು ಕ್ರಮಿಸಬಲ್ಲವು.

ಚಾರ್ಜ್ ಮಾಡುವ ಸಮಯ: ಬ್ಯಾಟರಿ-ಆಧಾರಿತ ವಾಹನಗಳನ್ನು ಚಾರ್ಜಿಂಗ್ಗೆ ತಗಲುವ ಎರಡರಿಂದ ನಾಲ್ಕು ಗಂಟೆಗಳ ಬದಲಾಗಿ ಎಂಟು ನಿಮಿಷಗಳು ಸಾಕು. ಮುಖ್ಯವಾಗಿ ಭಾರೀ ಗಾತ್ರದ ಸರಕು ಸಾಕಾಣಿಕೆ ವಾಹನಗಳಿಗೆ ಈ ಸಮಯದ ಉಳಿತಾಯ ಬಹಳ ಪರಿಣಾಮಕಾರಿಯಾಗುತ್ತದೆ.
ಕಡಮೆ ಭಾರ: ಇದರ ಬಳಕೆಯಿಂದ ವಾಹನದ ಭಾರವು ಇಳಿಕೆಯಾಗುತ್ತದೆ. ಇದರ ಪರಿಣಾಮವಾಗಿ ಸರಕು ಸಾಗಾಣಿಕೆಯಲ್ಲಿ ಹೆಚ್ಚಿನ ಪ್ರಮಾಣದ ಸಾಗಾಣಿಕೆ ಸಾಧ್ಯವಾಗುತ್ತದೆ ಹಾಗೂ ವಾಹನದ ಭಾರದಿಂದಾಗುವ ಇಂಧನದವ್ಯಯ ಕಡಮೆಯಾಗುತ್ತದೆ. ವಾಯುಮಾಲಿನ್ಯದ ಸಮಸ್ಯೆಗೂ ಪರಿಹಾರ ಕಂಡುಕೊಂಡಂತೆ ಆಗುತ್ತದೆ.
* * *
ಕೇಂದ್ರ ಸರ್ಕಾರ ರಾಷ್ಟ್ರೀಯ ಜಲಜನಕ ಯೋಜನೆ (National Hydrogen Mission)ಯನ್ನು ಸ್ಥಾಪಿಸಿದೆ. ಭವಿಷ್ಯದಲ್ಲಿ ದೇಶವನ್ನು ವಿದ್ಯುತ್-ಸ್ವತಂತ್ರವನ್ನಾಗಿ ಮಾಡಲು ಭಾರತವನ್ನು ಹಸಿರು ಜಲಜನಕ ಉತ್ಪಾದನೆಯ ಕೇಂದ್ರವನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶ.
ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ (CSIR) ಮತ್ತು ಖಾಸಗಿ ಸಂಸ್ಥೆ KPIT ಲಿಮಿಟೆಡ್ ಅಭಿವೃದ್ಧಿಪಡಿಸಿದ ಭಾರತದ ಮೊದಲ ಸ್ಥಳೀಯ ಹೈಡ್ರೋಜನ್ ಇಂಧನ ಸೆಲ್ ಬಸ್ಸನ್ನು ಪುಣೆಯಲ್ಲಿ ಅನಾವರಣಗೊಳಿಸಲಾಗಿದೆ.
ಫೆಬ್ರುವರಿ 2022ರಲ್ಲಿ ಆಸ್ಟ್ರೇಲಿಯಾ ದೇಶದೊಂದಿಗೆ ಹೈಡ್ರೋಜನ್ ಇಂಧನ ಉತ್ಪಾದನೆಗಾಗಿ ಪರಸ್ಪರ ಸಹಕಾರ ನೀಡುವ ಒಪ್ಪಂದವನ್ನೂ ಭಾರತ ಮಾಡಿಕೊಂಡಿದೆ. ಇದು ಅತಿ ಕಡಮೆ ಬೆಲೆಯಲ್ಲಿ ಸೋಲಾರ್ ಮತ್ತು ಸ್ವಚ್ಛ ಹೈಡ್ರೋಜನ್ ತಯಾರಿಕೆಯಲ್ಲಿ ಸಹಕಾರಿಯಾಗಲಿದೆ.
ಜಲಜನಕ-ಇಂಧನ ಎಂಜಿನ್ಗಳು ಮತ್ತು ವಿದ್ಯುತ್ ಸ್ಥಾವರಗಳೊಂದಿಗೆ ಇನ್ನೂ ಸಮಸ್ಯೆಗಳಿದ್ದು, ಸಾರಿಗೆ, ಸಂಗ್ರಹಣೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸಬೇಕಾಗಿದೆ.
- ಭಾರತದ ಭವಿಷ್ಯಕ್ಕೆ ಹೈಡ್ರೋಜನ್ ಶಕ್ತಿ
- ಭಾರತದ ನವೀಕರಿಸಲಾಗುವ (renewable) ಇಂಧನಗಳ ಉತ್ಪಾದನಾ ವೆಚ್ಚ, ಜಗತ್ತಿನಲ್ಲಿಯೇ ಅತೀ ಕಡಮೆ. ಇದು ಹೈಡ್ರೋಜನ್ ಕನಸನ್ನು ಸಾಕಾರಗೊಳಿಸಲು ಪೂರಕವಾಗಿದೆ.
- ಕೇಂದ್ರ ಸರ್ಕಾರವು 2030ರ ಒಳಗೆ ದೇಶದಲ್ಲಿ 500GW ನವೀಕರಿಸಲಾಗುವ ಇಂಧನ ಉತ್ಪಾದಿಸುವ ಗುರಿಯನ್ನು ಹೊಂದಿದೆ. ಇದು ಉತ್ಪಾದನೆಯನ್ನು ಇನ್ನಷ್ಟು ಉತ್ತೇಜಿಸಲಿದೆ.
- ಪ್ಯಾರಿಸ್ ಒಪ್ಪಂದದ ಪ್ರಕಾರ ಭಾರತವು 2030ರ ವೇಳೆಗೆ ತನ್ನ ಕಾರ್ಬನ್ ಹೊರಸೂಸುವಿಕೆಯನ್ನು 2005ರ ಮಟ್ಟದ 33%ರಷ್ಟು ಕಡಿತಗೊಳಿಸಬೇಕಾಗಿದೆ.
- ಹಸಿರು ಹೈಡ್ರೋಜನ್ ರಫ್ತಿಗೆ ಉತ್ತಮ ಅವಕಾಶಗಳಿದ್ದು ಭಾರತದಲ್ಲಿ ಉತ್ಪಾದನಾ ವೆಚ್ಚ ಕಡಮೆಯಾಗಿರುವುದು ಇದಕ್ಕೆ ಸಹಕಾರಿಯಾಗಲಿದೆ.