ಬೆವರಿನಲ್ಲಿ ಜೈವಿಕ ಇಂಧನದ ಇರುವಿಕೆಯ ಬಗ್ಗೆ ಈಗಾಗಲೇ ಹಲವು ಸಂಶೋಧನೆಗಳು ತಿಳಿಸಿವೆ. ಬೆವರಿನ ಕಣಗಳಲ್ಲಿ ಲ್ಯಾಕ್ಟೇಟ್ ಎಂಬ ರಾಸಾಯನಿಕವಿದೆ. ಚರ್ಮಕ್ಕೆ ಲಗತ್ತಿಸುವ ಬ್ಯಾಂಡ್–ಏಯ್ಡ್ ತರಹದ ಒಂದು ಸ್ಟಿಕ್ಕರ್ ಇದರ ಜೊತೆ ಒಂದು ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ಶಕ್ತಿಯಾಗಿ ಪರಿವರ್ತಿಸುತ್ತದೆ.
ಹಿಂದಿನ ಕಾಲದಲ್ಲಿ ಮನುಷ್ಯನ ಬೆವರು ಶಕ್ತಿ, ಶ್ರಮಗಳ ಸಂಕೇತವಾಗಿತ್ತು. ಬೆವರಿನಿಂದ ಶಕ್ತಿಯ ಉತ್ಪತ್ತಿಯಾಗುತ್ತದೆ ಎಂದಲ್ಲ, ಆದರೆ ಎಲ್ಲ ಶಕ್ತಿಗಳೂ ಬೆವರು ಸುರಿಸುವುದರಿಂದ – ಅಂದರೆ ಮನುಷ್ಯ ಪ್ರಯತ್ನದಿಂದ ಉತ್ಪತ್ತಿಯಾಗುತ್ತಿತ್ತು. ಕಾಲ ಬದಲಾಗಿದೆ. ಈಗ ಯಂತ್ರಗಳು ಮನುಷ್ಯನ ಬಹುತೇಕ ದೈಹಿಕ ಶ್ರಮವನ್ನು ವಹಿಸಿಕೊಂಡಿವೆ. ಅದಕ್ಕೆ ಬೇಕಿರುವ ಶಕ್ತಿಯನ್ನು ಪ್ರಕೃತಿಯಿಂದ ಪಡೆಯಲಾಗುತ್ತದೆ. ಸೂರ್ಯನಿಂದ, ಖನಿಜ-ತೈಲಗಳಿಂದ, ನೀರು-ಗಾಳಿಗಳ ಚಲನೆಯಿಂದ ಈಗ ನಾವು ಬಳಸುವ ಶಕ್ತಿಗಳು ಸಿಗುತ್ತವೆ.
ನಮ್ಮ ಬೆವರು ಆಧುನಿಕ ಜಗತ್ತಿನಲ್ಲಿ ಶಕ್ತಿಯ ಮೂಲವಾಗುವುದನ್ನು ಊಹಿಸಿದ್ದೀರಾ? ಶ್ರಮವಹಿಸಿ ಬೆವರಿಳಿಸುವುದಲ್ಲ – ಬೆವರು ಹರಿಸಿ ಶಕ್ತಿ ಪಡೆಯುವುದು. ಹೇಗೆಂದು ತಿಳಿಯಲು ಇತ್ತೀಚಿನ ಒಂದು ಆವಿಷ್ಕಾರವನ್ನು ಓದಿ: ಸ್ಮಾರ್ಟ್ ವಾಚು, ಸ್ಮಾರ್ಟ್ ಬಟ್ಟೆಗಳಂತಹ ಆಧುನಿಕ ಧರಿಸಬಹುದಾದ ಗ್ಯಾಜೆಟ್ಗಳಿಗೆ ನಾವು ರಿಚಾರ್ಜ್ ಮಾಡುತ್ತಿರಬೇಕಾಗುತ್ತದೆ. ಹೀಗಾಗಿ ಆ ಸಮಯದಲ್ಲಿ ಅದನ್ನು ಬಳಸಲು ಸಾಧ್ಯವಾಗುವುದಿಲ್ಲ. ಆದರೆ ನಾವು ಬಳಸುತ್ತಿರುವಾಗಲೇ ಅದು ಚಾರ್ಜ್ ಆಗುವಂತಾದರೆ? ಅದೂ ನಮ್ಮ ಬೆವರನ್ನೇ ಬಳಸಿ.
ಇಂತಹದೊಂದು ಸಂಶೋಧನೆಯನ್ನು ಸ್ಯಾನ್ ಡಿಯಾಗೋ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಾಡಿದ್ದಾರೆ. ಈ ವಿಧಾನದ ಮೂಲಕ ಅಧಿಕ ಪ್ರಮಾಣದ ವಿದ್ಯುತ್ ಉತ್ಪಾದನೆ ಸಾಧ್ಯವಾಗದಿರಬಹುದು. ಆದರೆ ವಾಚುಗಳಂತಹ ಕಡಮೆ ವಿದ್ಯುತ್ ಮೂಲಕ ಬಳಸಬಹುದಾದ ಸಾಧನಗಳಿಗೆ ಇವುಗಳು ಸಾಕಾಗುತ್ತವೆ. ಅದಕ್ಕೆ ಪದೇ ಪದೇ ಚಾರ್ಜ್ ಮಾಡುವ ಕಿರಿಕಿರಿಯಂತೂ ತಪ್ಪಿದಂತಾಗುತ್ತದೆ.
ಬೆವರಿನಲ್ಲಿ ಜೈವಿಕ ಇಂಧನದ ಇರುವಿಕೆಯ ಬಗ್ಗೆ ಈಗಾಗಲೇ ಹಲವು ಸಂಶೋಧನೆಗಳು ತಿಳಿಸಿವೆ. ಬೆವರಿನ ಕಣಗಳಲ್ಲಿ ಲ್ಯಾಕ್ಟೇಟ್ ಎಂಬ ರಾಸಾಯನಿಕವಿದೆ. ಚರ್ಮಕ್ಕೆ ಲಗತ್ತಿಸುವ ಬ್ಯಾಂಡ್-ಏಯ್ಡ್ ತರಹದ ಒಂದು ಸ್ಟಿಕ್ಕರ್ ಇದರ ಜೊತೆ ಒಂದು ರಾಸಾಯನಿಕ ಕ್ರಿಯೆಯ ಮೂಲಕ ವಿದ್ಯುತ್ಶಕ್ತಿಯಾಗಿ ಪರಿವರ್ತಿಸುತ್ತದೆ.
ಹಳೆಯ ಕಾಲದ ವಾಚುಗಳಲ್ಲಿ ಬಳಸುತ್ತಿದ್ದ ಬ್ಯಾಟರಿಯ ಪವರ್ ಸ್ಮಾರ್ಟ್ ವಾಚುಗಳಿಗೆ ಸಾಲುವುದಿಲ್ಲ. ದೊಡ್ಡ ಬ್ಯಾಟರಿಗಳನ್ನು ಬಳಸಿದರೆ ವಾಚುಗಳು ದಪ್ಪವಾಗುತ್ತವೆ. ಇನ್ನು ತೆಳ್ಳಗಿನ ಬ್ಯಾಟರಿ ಸಂಶೋಧನೆಯಾದರೂ ಅವುಗಳು ಅಪಾಯಕಾರಿ. ಅದನ್ನು ದೇಹದಲ್ಲಿ ಧರಿಸುವುದು ಸುರಕ್ಷಿತವಲ್ಲ. ಹೀಗಾಗಿ ಬೇರೆ ಎಲ್ಲೋ ಉತ್ಪತ್ತಿಯಾದ ವಿದ್ಯುತ್ತನ್ನು ಶೇಖರಿಸಿಡಲು ಬ್ಯಾಟರಿಯ ಮೇಲೆ ಅವಲಂಬಿತವಾಗುವ ಬದಲು ದೇಹದಲ್ಲೇ ವಿದ್ಯುತ್ ಉತ್ಪಾದನೆಯಾಗುವುದು ಉಪಯುಕ್ತವಾಗಲಿದೆ.
ಸಂಶೋಧನೆಯಲ್ಲಿ ಸದ್ಯಕ್ಕೆ ಇನ್ನೂ ಹಲವಾರು ನ್ಯೂನತೆಗಳಿವೆ. ಪ್ರಾಯೋಗಿಕ ಹಂತದಿಂದ ಬರಲು ಸಮಯ ಬೇಕಾಗಬಹುದು. ಆದರೂ ತಂತ್ರಜ್ಞಾನಗಳು ನಮ್ಮನ್ನು ಆವರಿಸುವುದು ಇನ್ನೂ ಹೆಚ್ಚಾಗುವುದಂತೂ ಖಂಡಿತ.
* * *
ಧರಿಸಬಹುದಾದ ಉಪಕರಣಗಳು ಭವಿಷ್ಯದಲ್ಲಿ ಇನ್ನಷ್ಟು ರೀತಿಯ ಆಯಾಮಗಳನ್ನು ಪಡೆಯಲಿವೆ. ಸ್ಮಾರ್ಟ್ ವಾಚ್, ಇಯರ್ ಫೋನುಗಳನ್ನು ನಾವು ಈಗಾಗಲೇ ಧರಿಸುತ್ತಿದ್ದೇವೆ. ನಮ್ಮ ಹೆಜ್ಜೆಗಳನ್ನು ಗುರುತಿಸಿ ಲೆಕ್ಕಹಾಕುವ ಮತ್ತು ದಾರಿ ತೋರಿಸುವ ಪಾದರಕ್ಷೆಗಳು, ಬಣ್ಣ ಬದಲಾಯಿಸುವ ಬಟ್ಟೆಗಳು ಮೊದಲಾದ ಅನ್ವೇಷಣೆಗಳು ನಡೆದಿವೆ. ವೈದ್ಯಕೀಯ ಕ್ಷೇತ್ರದಲ್ಲಿಯೂ ಇಂತಹ ತಂತ್ರಜ್ಞಾನಗಳ ಬಳಕೆ ನಡೆದೇ ಇದೆ. ತೋಳಿಗೆ ಲಗತ್ತಿಸುವ ಸ್ಟಿಕ್ಕರ್ ರೀತಿಯ ಸ್ಮಾರ್ಟ್ ಉಪಕರಣ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಗ್ರಹಿಸಿ ಅದರ ಏರಿಳಿಕೆಯನ್ನು ನಿರಂತರ ದಾಖಲಿಸುವಂತಹದು ಈಗಾಗಲೇ ಬಂದಿವೆ.
ನಾವು ತಂತ್ರಜ್ಞಾನವನ್ನೆಲ್ಲ ದೇಹದಲ್ಲಿ ಧರಿಸುತ್ತ ಹೋದಂತೆ ಅವುಗಳ ನಿರ್ವಹಣೆ, ಚಾರ್ಜಿಂಗ್ ಎಲ್ಲ ತಲೆನೋವಾಗಬಲ್ಲದಲ್ಲವೆ? ಅದಕ್ಕೆ ಈ ಸಂಶೋಧನೆಗಳು ಖಂಡಿತ ಸಹಕಾರಿಯಾಗಬಲ್ಲವು.
* * *
ಬೆವರು ಮಾತ್ರವಲ್ಲ, ನಾವು ಮಾಡುವ ವಿವಿಧ ಚಟುವಟಿಕೆಗಳಿಂದಲೂ ವಿದ್ಯುತ್ತನ್ನು ತಯಾರಿಸುವ ಪ್ರಯತ್ನಗಳು ನಡೆದೇ ಇವೆ. ಕೀಬೋರ್ಡ್ ಮೂಲಕ ನಾವು ಟೈಪ್ ಮಾಡುವಾಗ ಬಳಸುವ ಒತ್ತಡದಿಂದಲೇ ವಿದ್ಯುತ್ತನ್ನು ಪಡೆಯುವುದು ಇದರಲ್ಲೊಂದು. ಜಿಮ್ಗಳಲ್ಲಿ ಮಾಡುವ ವ್ಯಾಯಾಮದಿಂದ, ಸೈಕಲ್ ತುಳಿಯುವುದರಿಂದ ಇತ್ಯಾದಿ ಹಲವು ರೀತಿಯ ಚಟುವಟಿಕೆಗಳು ವಿವಿಧ ಪ್ರಮಾಣದ ವಿದ್ಯುತ್ತನ್ನು ಉತ್ಪಾದಿಸಬಲ್ಲವು.
ಜಲಪಾತಗಳಲ್ಲಿ ಜಲಚಕ್ರಗಳನ್ನು ಬಳಸಿ, ಗಾಳಿಯಂತ್ರ, ಸೋಲಾರ್ ಬಳಸಿ, ಕಲ್ಲಿದ್ದಲು ಮುಂತಾದ ಮೂಲಗಳನ್ನು ಬಳಸಿ ಉತ್ಪಾದಿಸುವ ವಿದ್ಯುತ್ತನ್ನು ನಾವಾಗಲೇ ಬಳಸುತ್ತಿದ್ದೇವೆ. ನಮ್ಮ ದೇಹದಿಂದಲೇ ತಯಾರಾಗುವ ವಿದ್ಯುತ್ ಭವಿಷ್ಯದಲ್ಲಿ ನಮಗೆ ನೆರವಾಗಲಿದೆ.