ಮುಗಿಯದಿರಲಿ ಚಾರ್ಜು – ಆರದಿರಲಿ ಥಳುಕು
ನೀವೆಲ್ಲೇ ಇರಿ, ಈ ಕಾಲದ ತಂತ್ರಜ್ಞಾನಗಳು, ಅದರಲ್ಲೂ ಸ್ಮಾರ್ಟ್ಫೋನುಗಳು ನಿಮಗೆ ಹಲವು ರೀತಿಯಲ್ಲಿ ಸಹಕರಿಸುತ್ತಿರುತ್ತವೆ. ಜಗತ್ತಿನ ಜೊತೆ ಇಂಟರ್ನೆಟ್ ಇದೆ, ಅದು ಲಭ್ಯವಿಲ್ಲದಿದ್ದಾಗ ಫೋನ್ ಆಗಿ, ಸಂಪರ್ಕವ್ಯಾಪ್ತಿಯಿಂದ ಹೊರಗಿದ್ದಾಗ ಜಿಪಿಎಸ್ ಮೂಲಕ ನಕ್ಷೆ (map) ನಮಗೆ ದಾರಿ ತೋರಿಸಬಲ್ಲವು. ಫೋಟೋ ತೆಗೆಯಲು, ಎಫ್.ಎಂ. ಇದ್ದರೆ ರೇಡಿಯೋ ಕೇಳಲು, ನೋಟ್ ಬರೆದಿಡಲು, ಹಾಡು ಕೇಳಲು, ವಿಡಿಯೋ ನೋಡಲು ಹೀಗೆ ಒಂದಲ್ಲ ಒಂದು ರೀತಿಯಲ್ಲಿ ಮೊಬೈಲು, ಟ್ಯಾಬ್, ಲ್ಯಾಪ್ಟಾಪ್ ಮತ್ತಿತರ ಗ್ಯಾಜೆಟ್ಗಳನ್ನು ಬಳಸುತ್ತಿರುತ್ತೇವೆ. ನೆಟ್ವರ್ಕ್ ಇಲ್ಲದಿದ್ದರೂ ಪರವಾಗಿಲ್ಲ. ಆದರೆ ಬ್ಯಾಟರಿ ಒಂದಿಲ್ಲದಿದ್ದರೆ ಈ ಯಾವ ಕೆಲಸವನ್ನೂ ಮಾಡಲು ಸಾಧ್ಯವಿಲ್ಲ. ಬಳಕೆ ಜಾಸ್ತಿಯಾದಷ್ಟೂ ಜಾಸ್ತಿ ಸಾಮರ್ಥ್ಯದ ಬ್ಯಾಟರಿ ಬೇಕಾಗಿರುವುದಲ್ಲವೇ? ಹೀಗಾಗಿ ಬ್ಯಾಟರಿ ನಿರ್ವಹಣೆ ಮತ್ತು ಉಳಿತಾಯದ ಬಗ್ಗೆ ಕೆಲವು ಮಾಹಿತಿ ಇಲ್ಲಿದೆ.
ನಮ್ಮ ಮೊಬೈಲುಗಳಲ್ಲಿ ಅತ್ಯಂತ ದೊಡ್ಡ ಗಾತ್ರದ ಭಾಗವೇ ಅದರ ಬ್ಯಾಟರಿ. ಬ್ಯಾಟರಿಯ ಗಾತ್ರ ಹಾಗೂ ಭಾರವನ್ನು ಗಣನೀಯವಾಗಿ ತಗ್ಗಿಸಬಲ್ಲ ತಂತ್ರಜ್ಞಾನಗಳು ಇನ್ನೂ ಬಂದಿಲ್ಲ. ಹಾಗಾಗಿ ಕೊಠಡಿಯ ಗಾತ್ರವಿದ್ದ ಕಂಪ್ಯೂಟರಿನ ಸಾಮರ್ಥ್ಯ ಕೈಯಲ್ಲಿ ಹಿಡಿಯುವ ಮೊಬೈಲ್ವರೆಗೆ ತಗ್ಗಿದರೂ ನಿರ್ದಿಷ್ಟ ಶಕ್ತಿ ಉತ್ಪಾದಿಸುವ ಬ್ಯಾಟರಿಯ ಗಾತ್ರ ಬಹುತೇಕ ಹಾಗೆಯೇ ಇದೆ. ಬ್ಯಾಟರಿಯ ಬಳಕೆ ಕಡಮೆ ಬೇಕಿರುವ ತಂತ್ರಜ್ಞಾನಗಳು ಒಂದಷ್ಟು ಪ್ರಮಾಣದ ಬ್ಯಾಟರಿ ಸಮಸ್ಯೆಗಳನ್ನು ಪರಿಹರಿಸಿವೆ. ಆದರೂ ಹಲವು ದಿನಗಳ ವರೆಗೆ ಬ್ಯಾಟರಿ ಚಾರ್ಜ್ ಮಾಡದೆ ಕಾರ್ಯನಿರ್ವಹಿಸಬಹುದಾದ ಮೊಬೈಲುಗಳು ಕಡಮೆಯೇ. ಕ್ಯಾಮರಾ, ಬಿಲ್/ಟಿಕೆಟ್ ನೀಡುವ ಯಂತ್ರಗಳು, ಟ್ಯಾಬ್ಗಳು, ವಾಚ್, ಲ್ಯಾಪ್ಟಾಪ್ಗಳೂ ಇದಕ್ಕೆ ಹೊರತಾಗಿಲ್ಲ.
೧೫೦೦ರಿಂದ ೫೦೦೦ mAH (mAH – milliAmps Hour) ಸಾಮರ್ಥ್ಯದ ಬ್ಯಾಟರಿಗಳು ಬಹುತೇಕ ಸ್ಮಾರ್ಟ್ಫೋನಿನಲ್ಲಿರುತ್ತವೆ. ೨೦೦೦ mAH ಎಂದರೆ, 1A ವಿದ್ಯುತ್ ನಿರಂತರ ಬಳಕೆಯಾಗುತ್ತಿದ್ದಲ್ಲಿ ೨ ಗಂಟೆಗೆ ಬೇಕಾದ ವಿದ್ಯುತ್ ಅದರಲ್ಲಿ ಶೇಖರಿಸಬಹುದು ಎಂದರ್ಥ. ಸಾಮಾನ್ಯವಾಗಿ ಮೊಬೈಲ್ ಪರದೆ, ಇಂಟರ್ನೆಟ್, ಕರೆ, ಆಟಗಳು, ವಿಡಿಯೋ, ಧ್ವನಿ ಹೀಗೆ ನೀವು ಬಳಸುವ ಸವಲತ್ತುಗಳ ಮೇಲೆ ಆಧರಿಸಿ ಅರ್ಧದಿಂದ ಮೂರು ದಿನಗಳ ವರೆಗೆ ಒಮ್ಮೆ ಮಾಡಿದ ಚಾರ್ಜ್ ಉಳಿಯಬಹುದು. ಹೆಚ್ಚಿನ ಬಳಕೆ ನಿಮ್ಮದಿದ್ದರೆ ಮತ್ತು ಚಾರ್ಜ್ ಮಾಡುವ ಅವಕಾಶಗಳೂ ಇಲ್ಲದಿದ್ದರೆ ಹೆಚ್ಚು mAH ಮಾಪನವನ್ನು ನೀಡುವ ಮೊಬೈಲ್ ಖರೀದಿಸುವುದು ಉತ್ತಮ.
ಹೆಚ್ಚಿನ ಬ್ಯಾಟರಿ ಲಭ್ಯತೆಗೆ ಕೆಲವು ಸಲಹೆಗಳು
ಹೊಸ ಮೊಬೈಲ್/ಗ್ಯಾಜೆಟ್ ಕೊಂಡಾಗ ಮೊದಲ ಬಾರಿ ಅದನ್ನು ಸಂಪೂರ್ಣ ಚಾರ್ಜ್ ಮಾಡಿ ನಂತರ ಬಳಸಿ.
ಬ್ಲೂಟೂತ್, ವೈಫ಼ೈ ಇತ್ಯಾದಿಗಳನ್ನು ಬಳಸದೇ ಇರುವ ಸಂದರ್ಭಗಳಲ್ಲಿ ಆಫ್ ಮಾಡಿ. ಇದನ್ನು ಬೇಕೆಂದಾಗ ಆನ್ ಮಾಡಲು ಅವಕಾಶ ನೀಡಿರುತ್ತಾರೆ. ನಿಮ್ಮ ಮೊಬೈಲಿನ ಮಾಹಿತಿ, ಫೈಲುಗಳನ್ನು ಕ್ಲೌಡ್ ಮೂಲಕ ಬ್ಯಾಕಪ್ ಮಾಡುವ ವ್ಯವಸ್ಥೆಯಿದ್ದರೆ ಚಾರ್ಜ್ ಮಾಡುವ ಸಮಯದಲ್ಲಿ ಮಾತ್ರ ಬ್ಯಾಕಪ್ ಆಗುವಂತೆ ನೋಡಿಕೊಳ್ಳಬಹುದು. ಇದಕ್ಕೆ ಆಯ್ಕೆಗಳನ್ನು ನೀಡಿರುತ್ತಾರೆ.
ಇನ್ನು ಕೆಲವು ಆಪ್ಗಳು ಅವುಗಳನ್ನು ಬಳಸದಿರುವಾಗಲೂ ಹಿನ್ನೆಲೆಯಲ್ಲಿ ಯಾವತ್ತೂ ನಡೆಯುತ್ತಲೇ ಇರುತ್ತದೆ. ಅವುಗಳನ್ನು ನಿಲ್ಲಿಸಲು ರ್ಯಾಮ್ ಮ್ಯಾನೇಜರ್ ಅವಕಾಶ ನೀಡುತ್ತದೆ.
ನಿಮಗೆ ಪದೇ ಪದೇ ಮೊಬೈಲ್ ಪರದೆ ನೋಡುವ ಅಭ್ಯಾಸವಿದ್ದರೆ ಗಮನಿಸಿ. ಪ್ರತಿ ಬಾರಿ ನೀವು ಪರದೆಯನ್ನು ಆನ್ ಮಾಡಿದಾಗಲೂ ಒಂದಷ್ಟು ಬ್ಯಾಟರಿ ವ್ಯಯವಾಗುತ್ತದೆ.
ಓಡಾಟ, ಪ್ರಯಾಣಗಳ ಸಂದರ್ಭದಲ್ಲಿ ಅದರಲ್ಲೂ ಮುಖ್ಯವಾಗಿ ಸಂಪರ್ಕ ವ್ಯಾಪ್ತಿ ವಲಯದ ಹೊರಗೆ ಹೋಗುತ್ತಿರುವಾಗ ಮೊಬೈಲ್ ನಿರಂತರವಾಗಿ ನೆಟ್ವರ್ಕ್ ಹುಡುಕಾಟದಲ್ಲಿರುತ್ತದೆ. ಇದರಿಂದ ಹೆಚ್ಚು ಬ್ಯಾಟರಿ ಮುಗಿಯುತ್ತದೆ. ಬ್ಯಾಟರಿ ಕಡಮೆಯಿದೆ ಎಂಬ ಸಂದರ್ಭದಲ್ಲಿ, ನಿದ್ರಿಸುವ ಸಂದರ್ಭಗಳಲ್ಲಿ ಆಫ್ ಮಾಡಬಹುದು.
ನಿಮ್ಮ ಆಪರೇಟಿಂಗ್ ಸಿಸ್ಟಂ ಅನ್ನು ತಾಜಾ ಅವೃತ್ತಿಗೆ ಅಪ್-ಗ್ರೇಡ್ ಮಾಡಿ. ಸಾಮಾನ್ಯವಾಗಿ ಹೊಸ ಆವೃತ್ತಿಗಳಲ್ಲಿ ಅನೇಕ ಬ್ಯಾಟರಿ ವ್ಯಯವಾಗುವ ಸಮಸ್ಯೆಗಳನ್ನು ಪರಿಹರಿಸುತ್ತಿರುತ್ತಾರೆ.
ಮೊಬೈಲ್ ಪರದೆಯ ತೀಕ್ಷ್ಣತೆ (brightnesss)ಯನ್ನು ನಿಮಗೆ ಬೇಕಾದ್ದಕ್ಕಿಂತ ಜಾಸ್ತಿ ಇಡಬೇಡಿ. ನೀವು ಬಳಸದೇ ಇದ್ದಾಗ ಎಷ್ಟು ಹೊತ್ತಿನಲ್ಲಿ ಪರದೆ ಆಫ್ ಆಗಬೇಕೆಂದು ಆಯ್ಕೆ ಮಾಡಲು ಅವಕಾಶವಿರುತ್ತದೆ. ಇದನ್ನು ಕಡಮೆ ಮಾಡಿ. (ಚಿತ್ರ http://support.hp.com/doc-images/350/c03723827.jpg)
APPಗಳ ಸೂಚನೆ/ notificationಗಳನ್ನು ಅಗತ್ಯವಿಲ್ಲವಾದರೆ ಆಫ್ ಮಾಡಿ. ಉದಾಹರಣೆಗೆ ಫೇಸ್ಬುಕ್ ಎಲ್ಲಾ ಲೈಕ್, ಕಮೆಂಟ್ಗಳ ಬಗ್ಗೆ ಮಾಹಿತಿ ರವಾನಿಸುತ್ತಲೇ ಇದ್ದರೆ ಬ್ಯಾಟರಿ ಖರ್ಚಾಗುತ್ತಿರುತ್ತದೆ. ವಾಟ್ಸಾಪಿನಲ್ಲಿ ಗ್ರೂಪ್ ಮಾಹಿತಿಯ notification ಬೇಕಾಗಿಲ್ಲ, ಚಿತ್ರಗಳು ತಾನೇ ಡೌನ್ಲೋಡ್ ಆಗುವುದು ಬೇಡ ಅಂತೆಲ್ಲ ಅಯ್ಕೆ ಮಾಡಲು ಅವಕಾಶವಿದೆ.
ಬ್ಯಾಟರಿ ಸೇವಿಂಗ್/ಇಕೋ ಮೋಡ್ ಎಂಬ ಆಯ್ಕೆಯನ್ನು ಹಲವು ಮೊಬೈಲುಗಳು ನೀಡುತ್ತವೆ. ಚಾರ್ಜ್ ಕಡಮೆಯಿದ್ದಾಗ ಆ ಮೋಡ್ಗೆ ಬದಲಾಯಿಸುವ ಮೂಲಕ ಹಿನ್ನೆಲೆಯಲ್ಲಿ ಕೆಲಸಮಾಡುವ ಕೆಲವು appಗಳನ್ನು ತಡೆಹಿಡಿಯಬಹುದು.
ಇಷ್ಟೆಲ್ಲ ಮಾಡಿದರೂ ಬ್ಯಾಟರಿ ಸಾಕಾಗುವುದಿಲ್ಲ ಎಂದಾದರೆ ನೀವು ಬದಲಿ ವ್ಯವಸ್ಥೆಗಳನ್ನು ಮಾಡಬೇಕಾಗುತ್ತದೆ. ಚಾರ್ಜ್ ಮಾಡಲು ಗೋಡೆಯಲ್ಲಿರುವ ವಿದ್ಯುತ್ ಪ್ಲಗ್ಗಳೇ ಆಗಬೇಕಿಲ್ಲ ಎಂಬುದನ್ನು ನೆನಪಿಡಿ. ನಿಮ್ಮ ಜೊತೆ ಲ್ಯಾಪ್ಟಾಪ್ ಮತ್ತಿತರ USB ಪೋರ್ಟ್ ಇರುವ ಸಾಧನಗಳಿದ್ದಲ್ಲಿ ಅದರಿಂದ ನೇರವಾಗಿ ಚಾರ್ಜ್ ಮಾಡಬಹುದು. ಕಾರುಗಳಲ್ಲಿ ಸಾಮಾನ್ಯ ಕಾರ್ ಚಾರ್ಜರುಗಳು ಲಭ್ಯವಿರುತ್ತವೆ. ಇದಲ್ಲದೆ OTG ಸೌಲಭ್ಯವಿರುವ ಇನ್ನೊಂದು ಮೊಬೈಲಿನಿಂದ ನೇರವಾಗಿ ಚಾರ್ಜ್ ಮಾಡಲು ಕೂಡ ಸಾಧ್ಯವಿದೆ. ಇದಕ್ಕೆ OTG ಕೇಬಲ್ ಎಂಬ ಸಂಪರ್ಕ ತಂತಿ ಅಗತ್ಯವಿದೆ.
ನೀವು ಜಾಸ್ತಿ ಓಡಾಡುತ್ತೀರಿ ಅಥವಾ ಯಾವಾಗಲೂ ಚಾರ್ಜ್ ಮಾಡುವ ವ್ಯವಸ್ಥೆಯಿರುವುದಿಲ್ಲ ಎಂದಾದರೆ ಪವರ್ ಬ್ಯಾಂಕ್ ಎಂಬ ಸಾಧನವನ್ನು ಕೊಂಡುಕೊಳ್ಳಬಹುದು. ಇದಕ್ಕೆ ಒಂದು ಬಾರಿ ಚಾರ್ಜ್ ಮಾಡಿದರೆ ಮೂರ್ನಾಲ್ಕು ಬಾರಿ ಅದರಿಂದ ನಿಮ್ಮ ಮೊಬೈಲ್ ಬ್ಯಾಟರಿ ತುಂಬಿಸಿಕೊಳ್ಳಬಹುದು. (ಚಿತ್ರ https://online365.in/images/detailed/1/powerbank1_6wl6-uv.jpg ಕೊನೆಯದಾಗಿ, ಎಲ್ಲಿಗಾದರೂ ಹೊರಡುವ ಸಾಕಷ್ಟು ಮೊದಲೇ ಬ್ಯಾಟರಿ ತುಂಬಿಸಿಕೊಳ್ಳಲು ಮರೆಯಬೇಡಿ!
Comments are closed.