ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಪ್ರಚಾರಕರಾಗಿದ್ದ, ರಾಷ್ಟ್ರೋತ್ಥಾನ ಪರಿಷತ್ತಿನ ಅಗ್ರಶಿಲ್ಪಿಗಳಲ್ಲಿ ದಿವಂಗತ ಮೈ.ಚ. ಜಯದೇವ ಅವರು ಗಣ್ಯರು. ಅವರ ವ್ಯವಸ್ಥಾಕೌಶಲ, ಸಂಘಟನಾ ಚಾತುರ್ಯ, ಸಂಸ್ಥೆಗಳನ್ನು ಸಮಾಜಮುಖಿಯಾಗಿ ಮುನ್ನಡೆಸುವ ಕಲೆ – ಮುಂತಾದ ಮಾದರಿ ಗುಣಗಳು ಮುಂದಿನ ಪೀಳಿಗೆಯ ಕಾರ್ಯಕರ್ತರಿಗೆ ದಾರಿದೀಪವಾಗಬೇಕು ಎನ್ನುವ ಉದ್ದೇಶದಿಂದ, ನಾಡಿನ ಪ್ರಸಿದ್ಧ ಸಾಹಿತಿ ಡಾ| ಬಾಬು ಕೃಷ್ಣಮೂರ್ತಿ ಅವರ ಲೇಖನಿಯಿಂದ ಸಿದ್ಧಗೊಳ್ಳಲಿರುವ ಪುಸ್ತಕವೊಂದನ್ನು ಪ್ರಕಟಿಸುವ ಯೋಜನೆಯನ್ನು ರಾಷ್ಟ್ರೋತ್ಥಾನ ಪರಿಷತ್ ಹೊಂದಿದೆ.
ವಿಷಯವನ್ನು ಸಮಗ್ರಗೊಳಿಸುವ ದೃಷ್ಟಿಯಿಂದ, ಜಯದೇವಜೀ ಅವರ ಒಡನಾಡಿಗಳು, ಸ್ನೇಹಿತರು, ಬಂಧುಗಳು ಜಯದೇವಜೀ ಬಗ್ಗೆ ತಮಗೆ ತಿಳಿದಿರುವ ಪ್ರೇರಕ ಸಂಗತಿಗಳನ್ನು ಬರಹರೂಪದಲ್ಲಿ ನಮ್ಮೊಂದಿಗೆ ಹಂಚಿಕೊಂಡು, ಉದ್ದೇಶಿತ ಹೊತ್ತಗೆಯು ಮಾಹಿತಿಪೂರ್ಣವಾಗಿ ಪ್ರಕಟಗೊಳ್ಳಲು ಕಾರಣರಾಗಬೇಕೆಂದು ಕೋರಲಾಗಿದೆ.
ತಮ್ಮ ಬರಹದಲ್ಲಿ ಈ ಕೆಳಗಿನ ವಿಷಯಗಳು ಪ್ರಮುಖವಾಗಿ ಇರಲಿ:
- ನಿಮ್ಮ ನೆನಪಿನಲ್ಲಿರುವ, ಜಯದೇವಜೀ ಅವರಿಗೆ ಸಂಬಂಧಿಸಿದ, ಪ್ರೇರಣಾದಾಯಕ ಘಟನೆಗಳು
- ನಿಮ್ಮ ಮತ್ತು ಜಯದೇವಜೀ ಅವರ ಒಡನಾಟದ ಪ್ರೇರಕ ಸಂದರ್ಭಗಳು
- ನಿಮ್ಮ ಮತ್ತು ಜಯದೇವಜೀ ಮಧ್ಯೆ ನಡೆದ ವಿಚಾರಪ್ರಚೋದಕ ಮಾತುಕತೆಗಳು
- ಜಯದೇವಜೀ ಅವರಲ್ಲಿ ನೀವು ಗುರುತಿಸಿದ ಸಂಘಟನಾತ್ಮಕ ಗುಣವಿಶೇಷಗಳು
- ಒಬ್ಬ ಆದರ್ಶ ಕಾರ್ಯಕರ್ತರಾಗಿ ನಿಮಗೆ ಜಯದೇವಜೀ ಹೇಗೆ ಕಾಣುತ್ತಾರೆಂಬುದು.
- ನೀವು ಉಲ್ಲೇಖಿಸಲಿಚ್ಛಿಸುವ ಜಯದೇವಜೀ ಬಗೆಗಿನ ಇತರ ಮಹತ್ತ್ವದ ಸಂಗತಿಗಳು.
ಅಲ್ಲದೆ, ಜಯದೇವಜೀ ಅವರು ಬರೆದಿರುವ ಮಹತ್ತ್ವದ ಪತ್ರಗಳು ಹಾಗೂ ಅವರ ಛಾಯಾಚಿತ್ರಗಳು ತಮ್ಮ ಬಳಿಯಿದ್ದರೆ ಅವುಗಳನ್ನು ಪುಸ್ತಕದಲ್ಲಿ ಬಳಸಿಕೊಳ್ಳುವುದಕ್ಕಾಗಿ ನೀಡಬೇಕೆಂದು (ಪ್ರಕಟಣೆಯ ನಂತರ ಹಿಂದಿರುಗಿಸಲಾಗುವುದು) ಕೋರಲಾಗಿದೆ. ಪ್ರಕಟಣೆಗೆ ಸೂಕ್ತವಾದ ಬರಹಗಳನ್ನು, ಪತ್ರಗಳನ್ನು ಹಾಗೂ ಛಾಯಾಚಿತ್ರಗಳನ್ನು ಮಾತ್ರ ಆಯ್ದುಕೊಳ್ಳಲಾಗುವುದು.
ವಿವರಗಳನ್ನು ಕಳುಹಿಸಬೇಕಾದ ವಿಳಾಸ :
ಪ್ರಧಾನ ಕಾರ್ಯದರ್ಶಿ
ರಾಷ್ಟ್ರೋತ್ಥಾನ ಪರಿಷತ್
ಕೇಶವಶಿಲ್ಪ
ಕೆಂಪೇಗೌಡ ನಗರ
ಬೆಂಗಳೂರು- ೫೬೦ ೦೧೯
E-mail id: [email protected]