ಭಾರತದೊಡನೆ ಐಕಾತ್ಮ್ಯ
ವೈಚಿತ್ರ್ಯವೆಂದರೆ ಯಾವ ಸಾಮ್ರಾಜ್ಯಶಕ್ತಿಯು ಭಾರತವನ್ನು ಶೋಷಿಸಿ ಸತ್ತ್ವಹೀನಗೊಳಿಸಿದ್ದಿತೋ
ಅದೇ ನೆಲೆಯಿಂದ ಹುಟ್ಟಿಬಂದವರು ನಿವೇದಿತಾ ಎಂಬ ದೀಕ್ಷಾಭಿಧಾನ ಪಡೆದ ಮಾರ್ಗರೆಟ್ ನೊಬೆಲ್. ಸ್ವಾಮಿಜೀಯವರ ದಿಗ್ದರ್ಶನದಲ್ಲಿ ಭಾರತಸೇವೆಯ ವ್ರತಕ್ಕೆ ಬದ್ಧರಾಗಿ ಇಲ್ಲಿಯ ಜನಸಾಮಾನ್ಯರೊಡನೆ ಅವರು ಎ?ಮಟ್ಟಿನ ಐಕಾತ್ಮ್ಯವನ್ನು ಸಾಧಿಸಿದರೆಂದರೆ ಭಾರತದ ಉದಾತ್ತ ಪರಂಪರೆಯ ಅದ್ಯತನಕಾಲದ ಅತ್ಯಂತ ಸಮರ್ಥ ವ್ಯಾಖ್ಯಾತರೆನಿಸಿದರು; ರಾಷ್ಟ್ರೀಯತೆಗೆ ವಿನೂತನ ಮಾನದಂಡಗಳನ್ನು ಪ್ರವರ್ತನೆ ಮಾಡಿದರು. ಅವರ ಚಿಂತನೆಯ ಪ್ರಖರತೆ ಆಗಿನ ಜನನಾಯಕರಿಗೆ ಆದರ್ಶಪ್ರಾಯವೆನಿಸಿತು. ರಾಷ್ಟ್ರೀಯತೆ ಎಂಬುದು ಕೇವಲ ರಾಜಕೀಯ ಕ್ಷೇತ್ರಕ್ಕೆ ಪರಿಮಿತವಾದ ಕಲ್ಪನೆಯಲ್ಲವೆಂದೂ ಕಲಾ-ಸಾಹಿತ್ಯಾದಿ ಕ್ಷೇತ್ರಗಳೆಲ್ಲವೂ ಸ್ವದೇಶೀ ಭಾವನೆಯಿಂದ ಅನುಪ್ರಾಣಿತವಾಗಿರಬೇಕೆಂದೂ ಆಕೆ ಮಾಡಿದ ಮಂಡನೆ ಮತ್ತು ತದನುಗುಣ ಕಾರ್ಯಾವಳಿಯ ಪರಿಣಾಮವು ದೂರಗಾಮಿಯಾಯಿತು. ಶಿಕ್ಷಣ ಕ್ಷೇತ್ರದಲ್ಲಿ ಆಗಬೇಕಾದ ದಿಶಾಪರಿವರ್ತನೆ ಕುರಿತ ಆಕೆಯ ಮೌಲಿಕ ಚಿಂತನೆಗಳಂತೂ ಈಗಲೂ ಆಗೀಗ ಉಲ್ಲೇಖಗೊಳ್ಳುತ್ತಿರುತ್ತವೆ. ಅದರಂತೆ ಹಿಂದೂ ಪೌರಾಣಿಕ ಸಾಹಿತ್ಯವು ಕಾಲ್ಪನಿಕವಲ್ಲವೆಂದೂ ಸಾಂಕೇತಿಕಾರ್ಥ ತುಂಬಿರುವ ಪ್ರಗಲ್ಭ ವಾಙ್ಮಯವೆಂದೂ
ಆಕೆ ನೀಡಿದ ವ್ಯಾಖ್ಯಾನವೂ ಆಕೆಯ ಒಂದು ವಿಶಿಷ್ಟ ಕೊಡುಗೆಯಾಗಿದೆ. ಕಲೆಗಳ ಕ್ಷೇತ್ರದಲ್ಲಿ ಭಾರತೀಯ ದೃಷ್ಟಿ ಇರಬೇಕಾದುದು ಅತ್ಯವಶ್ಯವೆಂದು ಆಕೆ ಪ್ರವರ್ತಿಸಿದ ಚಿಂತನೆಯಂತೂ ಒಂದು ಹೊಸ ಚಿತ್ರಕಲಾಪ್ರಸ್ಥಾನದ ಆವಿಷ್ಕರಣಕ್ಕೆ ಕಾರಣವಾಯಿತು.
ತನ್ನ ಮೂಲ ಪಾಶ್ಚಾತ್ಯ ಮಾನಸಿಕತೆಯಿಂದ ಹೊರಬಂದು ಆಕೆ ಪೂರ್ಣವಾಗಿ ಹಿಂದೂಧರ್ಮವನ್ನು ಸ್ವೀಕರಿಸಿದುದು ಸುಲಭವೇನಾಗಿರಲಿಲ್ಲ. ಈ ಪರಿವರ್ತನೆಯ ಹಿಂದೆ ಪ್ರಬಲವಾಗಿ ಕೆಲಸ ಮಾಡಿದ್ದವು ಒಂದುಕಡೆ ಆಕೆಯ ಸ್ವತಂತ್ರ ಚಿಂತನೆ, ಇನ್ನೊಂದುಕಡೆ ಸ್ವಾಮಿ ವಿವೇಕಾನಂದರ ಅನನ್ಯ ಮಾರ್ಗದರ್ಶನ. ಇಬ್ಬರಿಂದಲೂ ಪರಸ್ಪರ ಪರೀಕ್ಷಣೆ ನಡೆದ ಮೇಲೆಯೇ ಆಕೆಯ ಸ್ವನಿವೇದನೆಯೂ ಸ್ವಾಮಿಜೀಯವರಿಂದ ಸ್ವೀಕಾರವೂ ನಡೆದಿದ್ದುದು.
ದಾಸ್ಯ ಮಾನಸಿಕತೆಯಿಂದ ಮುಕ್ತಿ
ಒಮ್ಮೆ ಸ್ವಾಮಿಜೀಯವರ ಶಿಷ್ಯೆಯಾದ ಮೇಲೆ ಮತ್ತೆ ನಿವೇದಿತಾ ಹಿಂದಿರುಗಿ ನೋಡಲಿಲ್ಲ; ಮಾತ್ರವಲ್ಲ, ಹಿಂದೂಧರ್ಮದ ಆ ಕಾಲಖಂಡದ ಅತ್ಯಂತ ಪ್ರಖರ ಸಮರ್ಥಕರಾದರು; ಹಿಂದೂಧರ್ಮದ ಶ್ರೇ?ತೆಗೆ ವಿನೂತನ ಮತ್ತು ಯುಗಾನುಕೂಲ ವ್ಯಾಖ್ಯಾನವನ್ನು ನೀಡುವಷ್ಟು ಎತ್ತರಕ್ಕೆ ಬೆಳೆದರು. ಹಿಂದೂ ಧರ್ಮದೊಡನೆ ಆಕೆಯ ತಾದಾತ್ಮ್ಯ ಅಷಟ್ಉ ಸಂಪೂರ್ಣವಾಗಿತ್ತು, ಸಮೂಲವಾಗಿತ್ತು. ೧೯ನೇ ಶತಮಾನದಲ್ಲಿ ಬ್ರಿಟಿಷ್-ಯೋಜಿತ ಶೀಕ್ಷಣಪದ್ಧತಿಯಿಂದ ವೈಕಲ್ಯಕ್ಕೊಳಗಾಗಿದ್ದ ಭಾರತದ ಎಲೀಟ್ ವರ್ಗದ ಸ್ವವಿಸ್ಮೃತಿಗೆ ಅವಶ್ಯವಾಗಿ ಬೇಕಾಗಿದ್ದ ಶಲ್ಯಕ್ರಿಯೆಯ ರೂವಾರಿಯಾದರು ನಿವೇದಿತಾ.
ಎದ್ದುಕಾಣುವ ಒಂದು ವಿಪರ್ಯಾಸವೆಂದರೆ ಓರ್ವ ಐರೋಪ್ಯ ವ್ಯಕ್ತಿ ಅಷ್ಟು ಕ್ಷಿಪ್ರವಾಗಿ ಮತ್ತು ಸಂಪೂರ್ಣವಾಗಿ ಹಿಂದೂಧರ್ಮದೊಡನೆ ಏಕಾತ್ಮಭಾವವನ್ನು ಸಾಧಿಸಿಕೊಳ್ಳಬಲ್ಲವಳಾದರೆ, ಭಾರತಮೂಲದವರೇ ಆದ ಸಮಾಜೋನ್ನತ ವರ್ಗದ ಅನೇಕರು ರಾಜಕೀಯ ಸ್ವಾತಂತ್ರ್ಯವು ಪ್ರಾಪ್ತವಾದ ಏಳು ದಶಕಗಳ ತರುವಾಯವೂ ಮಾನಸಿಕ ದಾಸ್ಯಸ್ಥಿತಿಯಲ್ಲಿಯೆ ಮುಂದುವರಿದಿರುವುದು ಏಕೆ? – ಎಂಬುದು. ಈ ಜಡ್ಡುಗಟ್ಟಿದ ಸ್ಥಿತಿಯನ್ನು ವಿವೇಕಾನಂದ ಮೊದಲಾದ ನವೋತ್ಥಾನ ಪ್ರವರ್ತಕರು ನಿರೀಕ್ಷಿಸಿಯೇ ಇದ್ದರು. ಸ್ವಾಮಿ ಶ್ರದ್ಧಾನಂದರ ಚಿಂತಾಕುಲ ಹೇಳಿಕೆಯಂತೂ ಪ್ರಸಿದ್ಧವೇ ಆಗಿದೆ: ಅಂಗ್ರೇಜ್ ಲೋಗ್ ಇಧರ್ಸೇ ಚಲೇಜಾಯೇಂಗೇ, ಲೇಕಿನ್ ಅಂಗ್ರೇಜಿಯತ್ ರಹಜಾಯೆಗೀ. ತಾತ್ಪರ್ಯ ಸ್ಪಷ್ಟವಿದೆ: ಸ್ವಾತಂತ್ರ್ಯಪ್ರಾಪ್ತಿಯೇನೋ ಆಯಿತು, ಸ್ವರಾಜ್ಯಪ್ರಾಪ್ತಿ ಇನ್ನೂ ಆಗಬೇಕಾಗಿದೆ. ಸ್ವಾಮಿಜೀಯವರ ಮತ್ತು ನಿವೇದಿತಾರವರ ಚಿಂತನೆ-ವಿಶ್ಲೇಷಣೆಗಳು ನೂರು ವರ್ಷಗಳ ತರುವಾಯವೂ ಸಂಗತವೇ ಆಗಿವೆಯೆನ್ನಲು ಬೇರೆ ಪುರಾವೆಯ ಆವಶ್ಯಕತೆ ಇಲ್ಲ.
ರಾಷ್ಟ್ರೀಯತಾಭಾವನೆಯ ಉಜ್ಜೀವನ
ಸಾಮ್ರಾಜ್ಯಶಾಹಿಯ ಮತ್ತು ದಾಸ್ಯದ ನೇರ ಹಾಗೂ ಪರೋಕ್ಷ ಪರಿಣಾಮಗಳನ್ನು ದೇಶವೆಲ್ಲ ದೀರ್ಘಕಾಲದಿಂದ ಅನುಭವಿಸಿತ್ತು. ಹೀಗಾಗಿ ಅವುಗಳ ಪರಿಜ್ಞಾನ ಜನತೆಗೆ ಇದ್ದೇ ಇದ್ದಿತು. ಎದ್ದುಕಾಣುತ್ತಿದ್ದ ಆಡಳಿತ ಸಂಬಂಧಿಯಾದ ಹಾಗೂ ಔದ್ಯಮಿಕ ಶೈಕ್ಷಣಿಕಾದಿ ಕ್ಷೇತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಅಂತಿಮ ಪರಿಹಾರವೆಂದರೆ ವಿದೇಶೀ ಪ್ರಭುತ್ವದ ಉಚ್ಚಾಟನೆ – ಎಂಬ ಅರಿವು ೧೯ನೇ ಶತಮಾನದ ಅಂತ್ಯದ ವೇಳೆಗೆ ಭಾರತೀಯರಲ್ಲಿ ಸ್ಪ?ವಾಗಿಯೇ ಮೂಡಿತ್ತು. ಆದರೂ ಸ್ವಭಾವತಃ ಸೌಮ್ಯರಾದ ಈ ದೇಶದ ಜನತೆಯಲ್ಲಿ ಪೂರ್ಣಸ್ವಾತಂತ್ರ್ಯಕ್ಕಾಗಿ ಹೆಚ್ಚಿನ ತುಡಿತ ಏರ್ಪಟ್ಟದ್ದು ೧೯ನೇ ಶತಮಾನದ ಅಂತ್ಯದಲ್ಲಿ. ೧೯ನೇ ಶತಮಾನದ ನಡುಭಾಗದಲ್ಲಿ ಅದುವರೆಗಿನ ಹಿಂದಿನ ಪ್ರಯಾಸಗಳಿಗಿಂತ ಹೆಚ್ಚು ವ್ಯಾಪಕ ಸಾಹಸ ನಡೆದಿತ್ತು. ಅನ್ಯಾನ್ಯ ಕಾರಣಗಳಿಂದ ಆ ಪ್ರಯತ್ನವು ಅರ್ಧಾಂತಕವಾಯಿತು. ಅದರ ಹಿಂದುಗೂಡಿ ವಿದೇಶೀ ಪ್ರಭುತ್ವದ ನಿಯಂತ್ರಣ ತೀಕ್ಷ್ಣಗೊಂಡಿತ್ತು. ಅದರೊಡಗೂಡಿ ಆಂಗ್ಲರು ಕೈಗೊಂಡ ಚಾಣಾಕ್ಷ ಯೋಜನೆಯೆಂದರೆ ಭಾರತೀಯರ ಅಂತರಂಗದಲ್ಲಿದ್ದ ರಾಷ್ಟ್ರೀಯತಾಭಾವನೆಯನ್ನೂ ಸ್ವಾಭಿಮಾನವನ್ನೂ ಶಿಥಿಲಗೊಳಿಸುವುದು. ಈ ಉದ್ದೇಶಕ್ಕಾಗಿ ಭಾರತೀಯರ ಪರಂಪರೆಯ ಅವಹೇಳನ, ಪಾಶ್ಚಾತ್ಯ ನಾಗರಿಕತೆ ಸರ್ವಶ್ರೇ?ವೆಂಬ ಮಿಥ್ಯೆಯ ಪ್ರಚಾರ – ಈ ಎರಡೂ ದಿಕ್ಕುಗಳಲ್ಲಿ ತೀವ್ರ ಅಭಿಯಾನಗಳನ್ನು ನಡೆಸಲಾಯಿತು. ಇದರ ಜೊತೆಗೆ ಕ್ರೈಸ್ತಮತವಿಸ್ತರಣ ಪ್ರಯತ್ನಗಳಂತೂ ಬ್ರಿಟಿಷ್ ಸರ್ಕಾರದ ಪರೋಕ್ಷ ಪೋಷಣೆಯಿಂದಲೇ ನಡೆಯುತ್ತಿದ್ದವು. ಸಮಸ್ಯೆಯ ಈ ಅಗಾಧತೆಯನ್ನು ಮೊದಲಿಗೆ ಗುರುತಿಸಿದವರು ಸ್ವಾಮಿ ದಯಾನಂದ ಸರಸ್ವತಿ ಅವರು; ಅನಂತರ ಸ್ವಾಮಿ ವಿವೇಕಾನಂದರು.
ಮೇಲಣ ಭೂಮಿಕೆಯಿಂದ ಸ್ಫುಟಗೊಂಡಿದ್ದ ಸಂಗತಿಯೆಂದರೆ ರಾಜಕೀಯಕ್ಷೇತ್ರದ ಮುಖಾಮುಖಿ, ಭಾರತೀಯ ಜನತೆಯ ಮಾನಸಿಕತೆಗೆ ಕವಿದಿದ್ದ ಗಲೀಜುಗಳ ನಿವಾರಣೆ – ಈ ಎರಡೂ ದಿಕ್ಕುಗಳಲ್ಲಿ ಸ್ವಾತಂತ್ರ್ಯಾಭಿಮುಖ ಪ್ರಯತ್ನಗಳು ಏಕಕಾಲದಲ್ಲಿ ನಡೆಯಬೇಕೆಂಬುದು. ೧೮೮೦ರ ವ?ಗಳಿಂದ ಹೆಚ್ಚಿನ ಜನನಾಯಕರು ಮಗ್ನರಾಗಿದ್ದುದು ರಾಜಕೀಯ ಸಂಧಾನಗಳಲ್ಲಿಯಷ್ಟೆ. ರಾಜಕೀಯ ಸಂಧಾನಗಳ ಅಪರ್ಯಾಪ್ತತೆಯನ್ನು ತುಂಬುವ ಎಂದರೆ ಜನತೆಯಲ್ಲಿ ಸ್ವಾಭಿಮಾನವನ್ನೂ ಪರಂಪರಾಪ್ರಜ್ಞೆಯನ್ನೂ ಜಾಗೃತಗೊಳಿಸುವ ಕಾರ್ಯವು ನಿರ್ಣಾಯಕ ಹಂತದಲ್ಲಿ ನಡೆದದ್ದು ಸ್ವಾಮಿ ವಿವೇಕಾನಂದ ಮತ್ತು ನಿವೇದಿತಾರವರಿಂದ.
ಈ ಸನ್ನಿವೇಶವನ್ನು ಮೆಲುಕುಹಾಕಿದಾಗ ಸ್ವಾತಂತ್ರ್ಯೋದ್ಯಮಕ್ಕೆ ನಿವೇದಿತಾರವರ ಕೊಡುಗೆ ಎಷ್ಟು ಮಹತ್ತ್ವದ್ದೆಂದು ಅರಿವಾದೀತು. ರಾಷ್ಟ್ರೀಯತೆಯನ್ನು ಬಿಟ್ಟು ಸಂಸ್ಕೃತಿ ಇರಲಾರದೆಂದು ವಿನೂತನ ನುಡಿಗಟ್ಟಿನಲ್ಲಿ ಪ್ರತಿಪಾದಿಸಿದ ಅರವಿಂದರನ್ನು ಆ ಯುಗದ ಆವಶ್ಯಕತೆಗೆ ಶ್ರುತಿಗೊಳಿಸುವುದರಲ್ಲಿಯೂ ನಿವೇದಿತಾರವರ ಪಾತ್ರವಿದ್ದಿತು.
ನೈಜ ಭಾರತದ ದರ್ಶನ
ಪರ್ವತಗಳಲ್ಲಿ ಅತ್ಯಂತ ಭವ್ಯವಾದ ಹಿಮಾಲಯದ ನೆಲೆಯಾಗಿರುವಂತೆ ಜಗತ್ತಿನ ಧರ್ಮಗಳಲ್ಲಿ ಅತ್ಯುನ್ನತವಾದುದರ ಉದ್ಗಮಸ್ಥಾನವೆಂದೂ ನಾನು ಭಾರತವನ್ನು ಪ್ರೀತಿಸುತ್ತೇನೆ. ಸರಳತೆಯು ಮೂರ್ತೀಭವಿಸಿದ ಇಲ್ಲಿಯ ಮನೆಮನೆಗಳಲ್ಲಿ ಕಾಣುವ ಕೌಟುಂಬಿಕ ಸೌಖ್ಯಾನುಭವ ಅನನ್ಯವಾದದ್ದು. ಇಲ್ಲಿಯ ಮಹಿಳೆಯರಾದರೋ ಮುಂಜಾವಿನಿಂದ ಸಂಜೆಯವರೆಗೆ ನಿಃಸ್ವಾರ್ಥದಿಂದಲೂ ಅತ್ಯಂತ ಸಹಜವಾಗಿಯೂ ಮನೆಮಂದಿಯ ಸೇವೆ ಮಾಡುತ್ತಿರುವುದರಲ್ಲಿ ಧನ್ಯತೆ ಕಾಣುತ್ತಾರೆ.
ಐರ್ಲೆಂಡ್-ಮೂಲದ ಭಗಿನಿ ನಿವೇದಿತಾ ಭಾರತದ ಬಗೆಗೆ ಮನಸ್ಸಿನಲ್ಲಿ ಧರಿಸಿದ್ದ ಮೇಲಣ ಚಿತ್ರಣವನ್ನು ಅವರ ವ್ಯಕ್ತಿತ್ವದ ವರ್ಣನೆಯೆಂದೂ ಭಾವಿಸಬಹುದು. ರಾಷ್ಟ್ರೀಯತೆಯ ತಳಹದಿಯ ಮೇಲೆ ಶಿಕ್ಷಣಕ್ರಮವು ರೂಪಿತವಾಗಬೇಕೆಂಬ ಅವರ ಚಿಂತನೆ ಮತ್ತು ಆ ದಿಶೆಯ ಅವರ ಪ್ರವರ್ತನೆಗಳು, ಶಿಕ್ಷಣವೂ ಸೇರಿದಂತೆ ಎಲ್ಲ ಆಭ್ಯುದಯಪ್ರಯಾಸಗಳು ಐತಿಹಾಸಿಕ ವಾರಸಿಕೆಯೊಡನೆ ಸಂಲಗ್ನಗೊಂಡಿರುವುದು ಅತ್ಯವಶ್ಯವೆಂಬ ದೃಢವಾದ ನಿಲವು, ರಾಷ್ಟ್ರೀಯತೆ ಮತ್ತು ಸಂಸ್ಕೃತಿ ಹಾಸುಹೊಕ್ಕಾದವೆಂಬ ಪ್ರತಿಪಾದನೆ, ಚಿತ್ರಕಲೆ ಮೊದಲಾದವು ಪಾಶ್ಚಾತ್ಯಾನುಕರಣೆಯನ್ನು ತ್ಯಜಿಸಿ ದೇಶೀಯ ಮೂಲದ ವಸ್ತುಗಳಿಗೂ ತಂತ್ರಗಳಿಗೂ ಆದ್ಯತೆ ನೀಡಬೇಕೆಂಬ ದೃಷ್ಟಿ, ಎಲ್ಲಕ್ಕಿಂತ ಮಿಗಿಲಾಗಿ ಭಾರತದ ಭವಿಷ್ಯವನ್ನು ನಿರ್ದೇಶಿಸಬೇಕಾದುದು ಸ್ವಯಂ ಭಾರತವೇ ವಿನಾ ಪಾಶ್ಚಾತ್ಯ ಪ್ರಭಾವಗಳಲ್ಲವೆಂಬ ದೃಷ್ಟಿ; – ಸಂಕ್ಷಿಪ್ತವಾಗಿ ಇವು ನಿವೇದಿತಾರವರ ಮಹತ್ತ್ವದ ಕೊಡುಗೆ. ಈ ಹಲವು ಪರಾಮರ್ಶನೆಗಳು ಹೊಚ್ಚಹೊಸವೇನಲ್ಲದಿದ್ದರೂ ಇವೆಲ್ಲವನ್ನೂ ಸುಸಂಬದ್ಧಗೊಳಿಸಿ ಒಂದು ಅಖಂಡ ದರ್ಶನವಾಗಿ ಪ್ರತಿಪಾದಿಸಿದುದು ನಿವೇದಿತಾರವರ ಅನನ್ಯತೆ. ಇದೇ ಅವರೇ ಪರಿಭಾ?ಗೊಳಿಸಿದ ಕ್ರಿಯಾಶೀಲ ಹಿಂದೂಧರ್ಮ (ಅಗ್ರೆಸಿವ್ ಹಿಂದೂಯಿಸ್ಮ್) ಎಂಬ ನುಡಿಗಟ್ಟಿನಲ್ಲಿ ಪ್ರಚಲಿತವಾಗಿ ಈಗಲೂ ಮುಂದುವರಿದಿದೆ.
ಸಂಕಲ್ಪದಾರ್ಢ್ಯ
ವಿದೇಶೀ ಪ್ರಭುತ್ವದ ಸಂಕೋಲೆಗಳನ್ನು ಕೊಡವಿಕೊಳ್ಳುವ ತೀವ್ರತಮ ಪ್ರಯಾಸಕ್ಕೆ ಭಾರತ ಸಜ್ಜಾಗುತ್ತಿದ್ದ ಸಂಧಿಸಮಯದಲ್ಲಿ ಆ ಪ್ರಕ್ತಿಯೆಗೆ ವೇಗವರ್ಧಕವಾಗಿ ಕೆಲಸ ಮಾಡಿದುದು ನಿವೇದಿತಾರವರ ಪರಿಶ್ರಮ. ಅದು ೧೦-೧೨ ವರ್ಷಗಳಷ್ಟು ಅಲ್ಪ ಅವಧಿಯಲ್ಲಿ ನಡೆಯಿತೆಂಬುದು ವಿಸ್ಮಯಾವಹ. ಅದನ್ನು ಸಾಧ್ಯವಾಗಿಸಿದುದು ನಿವೇದಿತಾರವರ ಸಂಕಲ್ಪದಾರ್ಢ್ಯ. ಈ ತಥ್ಯವನ್ನು ಸ್ಮರಣೀಯವಾಗಿ ಶಬ್ದೀಕರಿಸಿದ್ದಾರೆ ಆ ಯುಗದ ನಾಯಕಾಗ್ರಣಿ ಸುರೇಂದ್ರನಾಥ ಬ್ಯಾನರ್ಜಿ:
ನಿವೇದಿತಾರವರ ಪ್ರತಿಯೊಂದು ಚಿಂತನೆ, ಪ್ರತಿಯೊಂದು ಕ್ರಿಯೆ, ಆಕೆಯ ಎಲ್ಲ ಭಾವನೆಗಳೂ ಕೇಂದ್ರಿತವಾಗಿದ್ದುದು ಭಾರತದ ಆಶೋತ್ತರಗಳಲ್ಲಿ ಮತ್ತು ಧ್ಯೇಯಚಿಂತನೆಗಳಲ್ಲಿ. ಪ್ರಾಚೀನಯುಗದ ಋಷಿಯೊಬ್ಬರು ಆಕೆಯ ದೇಹದಲ್ಲಿ ಪುನರವತರಿಸಿದರು ಎನಿಸುತ್ತದೆ. ಪಾಶ್ಚಾತ್ಯ ಪರಿಸರದಿಂದ ಸಚೇತನಗೊಂಡು ತನ್ನ ಪ್ರಾಚೀನ ನೆಲೆಯ ಸೇವೆಗಾಗಿ ಆಕೆ ಭಾರತಕ್ಕೆ ಹಿಂದಿರುಗಿ ಕಾರ್ಯೋನ್ಮುಖರಾದರೆನಿಸುತ್ತದೆ. ಭಾರತದ ಕನಸುಗಳೇ ನಿವೇದಿತಾರವರ ಕನಸುಗಳು. ಭಾರತದ ಚಿಂತನೆಯೇ ನಿವೇದಿತಾರವರ ಮೂಲಕ ಅಭಿವ್ಯಕ್ತಿ ಪಡೆಯಿತು. ಭಾರತದ ಮೂಲಸತ್ತ್ವವನ್ನು ಆಕೆ ಎಷ್ಟು ಸಹಜವಾಗಿ ಮತ್ತು ಋಜುವಾಗಿ ಅಂತರ್ಗತಗೊಳಿಸಿಕೊಂಡಿದ್ದರೆಂಬುದು ಆಕೆಯ ಬರಹದ ಪಂಕ್ತಿ ಪಂಕ್ತಿಯಲ್ಲಿಯೂ ಎದ್ದುಕಾಣುತ್ತದೆ. ಇಂತಹ ಅಸಾಮಾನ್ಯ ಒಳನೋಟ ಆಕೆಗೆ ಸಾಧ್ಯವಾದದ್ದು ಆಕೆ ಭಾರತದ ಬಗೆಗೆ ಬೆಳೆಸಿಕೊಂಡಿದ್ದ ಅಸೀಮ ಪ್ರೇಮದಿಂದ.
ನವಯುಗಾಂಕುರ
ಕೊಲ್ಕತಾದ ಪುರಭವನದಲ್ಲಿ ನಡೆದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ರಾಸಬಿಹಾರಿ ಘೋಷ್ ನೀಡಿದ ಪರಾಮರ್ಶನೆ ಇದು: ಇದುವರೆಗೆ ಸುಪ್ತಸ್ಥಿತಿಯಲ್ಲಿದ್ದಂತೆ ತೋರುತ್ತಿದ್ದ ಜನತೆ ಈಗ ಚಲನಶೀಲತೆ ತೋರತೊಡಗಿರುವರೆಂದರೆ ಅದಕ್ಕೆ ಕಾರಣವಾಗಿರುವುದು ಅವರಲ್ಲಿ ನಿವೇದಿತಾ ತುಂಬಿದ ಸಕ್ರಿಯತೆ….. ಗತ-ಸಾಧನೆಗಳ ಬಗೆಗೆ ಹೆಮ್ಮೆಯೂ ಜಗತ್ತಿಗೇ ತನ್ನಿಂದ ಹಿಂದಿಗಿಂತ ಮಿಗಿಲಾದ ಕೊಡುಗೆ ಸಲ್ಲುವುದಿದೆಯೆಂಬ ವಿಶ್ವಾಸವೂ ಮೂಡಬೇಕೆಂದು ಆಕೆ ಶ್ರಮಿಸಿದರು. ಆಕೆಯ ಪರಿಶ್ರಮ ಸಾರ್ಥಕ ರೀತಿಯದಾಯಿತೆಂಬುದನ್ನು ಅಲ್ಲಗಳೆಯಲಾಗದು. ಮುಂದಿನವರಿಗಾಗಿ ಈ ಹೆದ್ದಾರಿಯನ್ನು ಆಕೆ ಪ್ರಶಸ್ತಗೊಳಿಸಿದ್ದಾರೆ…. ರಾಷ್ಟ್ರೀಯ ಸ್ವರೂಪದ ಜೀವನದ ಅಂಕುರ ಈಗ ಗೋಚರಿಸುತ್ತಿದೆಯೆಂದರೆ ಅದಕ್ಕೆ ಗಣನೀಯ ಪ್ರಮಾಣದಲ್ಲಿ ಕಾರಣವಾಗಿರುವುದು ನಿವೇದಿತಾ ನೀಡಿದ ಪ್ರಬೋಧನೆ.
ನಿವೇದಿತಾರನ್ನು ಸಮೀಪಿಸಿದರೆ ಪ್ರಕೃತಿಯ ಯಾವುದೋ ಪ್ರಚಂಡ ಶಕ್ತಿಯ ಸಂಪರ್ಕಕ್ಕೆ ಬಂದಂತೆ ಆಗುತ್ತಿತ್ತು… ಆಕೆಯ ಬೌದ್ಧಿಕ ಶಕ್ತಿವಂತಿಕೆಯೂ ಉದ್ಯಮಶೀಲತೆಯೂ ಆಕೆ ಜಗತ್ತಿನಲ್ಲಿ ಎಲ್ಲಿಯೇ ಇದ್ದರೂ ಆಕೆಗೆ ಪ್ರತಿಷ್ಠೆ ತರುತ್ತಿದ್ದವು. ಆ ಉನ್ನತ ಗುಣಗಳೊಡನೆ ಅಸೀಮ ಭಾರತಪ್ರೇಮವೂ ಬೆರೆತು ಆಕೆಯಿಂದ ಸೇವೆಯ ಪ್ರವಾಹವೇ ಹೊಮ್ಮುವಂತಾಯಿತು… ಆಕೆಯನ್ನು ಭಾರತಕ್ಕೆ ಆಕರ್ಷಿಸಿದುದೇ ಭಾರತದ ನೈಜ ಭವ್ಯತೆ.
– ಹೀಗೆ ಉದ್ಗಾರ ಮಾಡಿದವರು ಗೋಪಾಲ ಕೃಷ್ಣ ಗೋಖಲೆ.
ಏಕಾಗ್ರ ಪರಿಶ್ರಮ
ಭಾರತದ ಜನಸಮುದಾಯಕ್ಕೇ ಮಾತೆ – ಎಂದು ನಿವೇದಿತಾರವರನ್ನು ವರ್ಣಿಸಿದವರು ಗುರುದೇವ ರವೀಂದ್ರನಾಥ ಠಾಕೂರರು:
“ಆಕೆಯನ್ನು ನೋಡಿದರೆ ವ್ಯಕ್ತಿಯ ಅಂತರಂಗದ ಚೈತನ್ಯವೇ ಹೊರಗೆ ಮೂರ್ತಿಮಂತವಾಗಿದೆ ಎನಿಸುತ್ತಿತ್ತು. ಹೊರಗಿನ ಭೌತ ಅಭ್ಯಂತರಗಳನ್ನೆಲ್ಲ ಭೇದಿಸಿ ಅಂತಃಸತ್ತ್ವದ ಚೈತನ್ಯಪೂರ್ಣತೆಯೂ ಪ್ರಜ್ವಲತೆಯೂ ಹೇಗೆ ಪ್ರಕಾಶಗೊಳ್ಳಬಲ್ಲದು – ಎಂಬುದನ್ನು ಆಕೆಯ ವ್ಯಕ್ತಿತ್ವದಲ್ಲಿ ದರ್ಶಿಸಿದ ನಾವು ಧನ್ಯರು. ಮನುಷ್ಯವ್ಯಕ್ತಿಯ ಅದಮ್ಯ ಉದಾತ್ತತೆಯನ್ನು ಆಕೆಯಲ್ಲಿ ಕಂಡ ನಾವು ಭಾಗ್ಯಶಾಲಿಗಳು… ನಿವೇದಿತಾ ತಮ್ಮ ಭವ್ಯ ಜೀವಿತವಷ್ಟನ್ನೂ ನಮಗೆ ದಾನ ಮಾಡಿದರು – ತನಗಾಗಿ ರವೆಯ?ನ್ನೂ ಉಳಿಸಿಕೊಳ್ಳದೆ. ತನ್ನ ಬಾಳಿನ ಪ್ರತಿ ದಿನದ ಪ್ರತಿ ಕ್ಷಣದಲ್ಲಿಯೂ ಆಕೆ ತನ್ನಲ್ಲಿದ್ದ ಶ್ರೇಷ್ಠತಮ ಸತ್ತ್ವವನ್ನು ಉಪಾಯನವಾಗಿ ನಮಗಿತ್ತರು. ಮನುಷ್ಯನಿಗೆ ಒದಗಬಹುದಾದ ಎಲ್ಲ ಕ್ಲೇಶಗಳೂ ಆಕೆಯನ್ನೂ ಆವರಿಸಿದ್ದವು. ಆದರೆ ಆಕೆ ದೃಢವಾಗಿ ನಂಬಿದ್ದ ಲಕ್ಷ್ಯದ ಸಾಧನೆಯೊಡನೆ ಬೇರಾವ ಬಾಹ್ಯಜೀವನ ಸನ್ನಿವೇಶಗಳನ್ನೂ ಬೆರೆಸದೆ ಏಕಾಗ್ರಚಿತ್ತದಿಂದ ಮುಂದೆಸಾಗಿದರು; ತನ್ನಲ್ಲಿನ ಅತ್ಯಂತ ಶ್ರೇಷ್ಠವಾದುದನ್ನು ಆಕೆ ಸಮಾಜಕ್ಕೆ ನೀಡಲೆಳಸಿದರು…ಆಕೆಯನ್ನು ಜನಸಮುದಾಯದ ಮಾತೆ ಎಂದು ಪರಿಗಣಿಸಬೇಕಾದುದು ಈ ಕಾರಣದಿಂದ… ಮೇಲಿಂದ ಮೇಲೆ ಆಕೆಯ ಬಾಯಿಂದ ಹೊಮ್ಮುತ್ತಿದ್ದ ನಮ್ಮ ಜನ ಎಂಬ ಪ್ರಯೋಗದಲ್ಲಿ ಧ್ವನಿತವಾಗುತ್ತಿದ್ದ ಪೂರ್ಣ ಏಕಾತ್ಮತೆಯನ್ನು ನಾವು ಬೇರಾರ ವಾಕ್ಕಿನಲ್ಲಿಯೂ ಕಾಣುತ್ತಿರಲಿಲ್ಲ.”
ನಿವೇದಿತಾರವರ ಚಿಂತನೆ ಎಷ್ಟು ಆಳವೂ ದೀರ್ಘಗಾಮಿಯೂ ಆಗಿದ್ದಿತೆಂಬುದನ್ನು ಈಚಿನ ವರ್ಷಗಳ ಬೆಳವಣಿಗೆಗಳು ಸಾಬೀತುಪಡಿಸಿವೆ. ಈಚಿನ ದಶಕಗಳಲ್ಲಿ ಎದ್ದುತೋರಿರುವ ವಿದ್ಯಮಾನವೆಂದರೆ ಹಿಂದೂಧರ್ಮಕ್ಕೆ ವಿದೇಶೀಯರಿಂದ ಎರಗಿರುವ ಸವಾಲುಗಳಿಗಿಂತ ಹೆಚ್ಚಿನ ಸವಾಲು ಎದುರಾಗಿರುವುದು ದೇಶದೊಳಗಿನ ವಿಕೃತಮನಸ್ಕರಿಂದ: ಎನ್ಆರ್ಐಗಳಿಗಿಂತ ಆರ್ಎನ್ಐ(ರೆಸಿಡೆಂಟ್ ನಾನ್-ಇಂಡಿಯನ್ಸ್)ಗಳಿಂದ ಹೆಚ್ಚಿನ ಉಪಟಳವಾಗುತ್ತಿದೆ. ಹಿಂದೆ ಇದ್ದುದು ಪಾಶ್ಚಾತ್ಯ ಪ್ರಭುತ್ವವಾದರೆ ಈಗ – ಸ್ವಾತಂತ್ರ್ಯಪ್ರಾಪ್ತಿಯ ಏಳುದಶಕಗಳ ತರುವಾಯವೂ – ಪ್ರಬಲಿಸಿರುವುದು ಎಲೀಟ್ ವರ್ಗದ ಪಾಶ್ಚಾತ್ಯೀಕೃತ ಮನೋವೃತ್ತಿ ಮತ್ತು ಅದರೊಡಗೂಡಿದ ನಿಧರ್ಮೀಯತೆ; ಛದ್ಮ ಉದಾರವಾದ ಮತ್ತು ಸಮಾಜಭಂಜಕ ಪ್ರವೃತ್ತಿ. ನಿರಂತರ ಚಾಲನೆಯಲ್ಲಿರುವ ಈ ವ್ಯಗ್ರತೆಗಳಿಂದಾಗಿ ಹಿಂದೂಧರ್ಮದ ಮೂಲಸತ್ತ್ವವಾದ ಆಧ್ಯಾತ್ಮಿಕತೆಯಿಂದಲೇ ಒಂದು ವ್ಯಾಪಕ ಜನವರ್ಗವು ಒಂದ?ಮಟ್ಟಿಗೆ ವಿಮುಖವಾಗುವಂತಾಗಿದೆ. ಹಾಗೆಂದು ಆಧ್ಯಾತ್ಮಿಕ-ಧಾರ್ಮಿಕ ಆಂದೋಲನಗಳಿಗೇನೂ ಕೊರತೆಯಿಲ್ಲ. ಆದರೆ ಯಾವುದು ಬಾಹ್ಯ ಆಕ್ರಮಣಗಳ ವಿರುದ್ಧ ಸಶಕ್ತ ಪ್ರಹರಿಯಾಗಬೇಕಿತ್ತೋ ಅದು ಹವ್ಯಾಸಿ ಚಟುವಟಿಕೆಯ ಸ್ತರಕ್ಕೆ ಇಳಿದಿದೆ ಎನಿಸುತ್ತದೆ; ಜಗತ್ತನ್ನೇ ಗೆಲ್ಲಬಲ್ಲೆನೆಂಬ ಸಿಂಹಗರ್ಜನೆಗೆ ಬದಲಾಗಿ ಸ್ವರಕ್ಷಕ ರೀತಿಯ ಮಂದ್ರಸ್ವರವ? ಕೇಳಬರುತ್ತಿದೆ. ಇದನ್ನು ನೋಡುವಾಗ ಬಲೋಪಾಸಕರಾಗೋಣ ಎಂಬ ವಿವೇಕಾನಂದರೂ ನಿವೇದಿತಾರವರೂ ಮೊಳಗಿಸಿದ ತೂರ್ಯಧ್ವನಿ ನೂರು ವ?ಗಳ ತರುವಾಯವೂ ಸಂಗತವೇ ಆಗಿದೆ. ಸದ್ಯಕ್ಕೆ ಇತರ ದೇವತೆಗಳನ್ನೆಲ್ಲ ಪಕ್ಕಕ್ಕೆ ಸರಿಸಿ ಪೌರು?ವೆಂಬ ದೇವತೆಯನ್ನು ಉಪಾಸನೆ ಮಾಡೋಣ ಎಂಬ ವಿವೇಕಾನಂದರು ನೀಡಿದ ಕರೆಗಿಂತ ಪ್ರಖರವಾದುದು ಬೇರೆ ಏನಿರಲು ಸಾಧ್ಯ? ಆ ಅಭಿಯಾನವನ್ನೇ ಪ್ರಜ್ವಲವಾಗಿ ಮುಂದುವರಿಸಿದವರು ನಿವೇದಿತಾ. ಭಾರತವರ್ಷ ಎಂಬ ಮಾತನ್ನು ಉಚ್ಚರಿಸುವಾಗಲೇ ನಿವೇದಿತಾ ಪುಲಕಗೊಳ್ಳುತ್ತಿದ್ದರು.
ದುರ್ಮೇಧಸರಿಂದ ಆಘಾತಗಳು ಹೆಚ್ಚುತ್ತಿವೆಯೆಂದು ಪ್ರಲಪಿಸಿ ಅಸಹಾಯಕ ಮನೋಭಾವ ತಳೆದು ಆತ್ಮಗ್ಲಾನಿಗೊಳಗಾಗುವುದರಿಂದ ಏನೂ ಪ್ರಯೋಜನವಾಗದು. ಪೌರುಷವೊಂದೇ ತಾರಕವಾಗಬಲ್ಲದು. ಸದ್ಯಃಸ್ಥಿತಿಯಿಂದ ಖಿನ್ನರಾಗದೆ ಸ್ವನಿಶ್ಚಿತ ಲಕ್ಷ್ಯದೆಡೆಗೆ ದೃಢವಾದ ಹೆಜ್ಜೆಗಳನ್ನಿಡುತ್ತ ಶಕ್ತಿಪುಂಜಗಳಾಗಿ ವಿಜೃಂಭಿಸಿರಿ – ಎಂದು ನಿವೇದಿತಾರವರು ನೀಡಿದ ಓಜಃಪೂರ್ಣ ಮಂತ್ರೋದ್ಘೋಷವು ಅವರ ಸಾರ್ಧಶತಾಬ್ದದ ಸಂದರ್ಭದಲ್ಲಿಯೂ ದಾರಿದೀಪವಾಗುಳಿದಿದೆ.
ಡಾರ್ಜಿಲಿಂಗ್ನಲ್ಲಿ ಇರುವ ಅವರ ಸಮಾಧಿಯ ಮೇಲೆ ದಾಖಲೆಗೊಂಡಿರುವ ಅಂಕಿತದ ಮಾತುಗಳು ಶತಾಂಶವೂ ಯಥಾರ್ಥ:
“ತನ್ನ ಸರ್ವಸ್ವವನ್ನೂ ಭಾರತಕ್ಕೆ ಅರ್ಪಿಸಿದ ಭಗಿನಿ ನಿವೇದಿತಾ ಇಲ್ಲಿ ವಿಶ್ರಮಿಸಿದ್ದಾಳೆ.”
(ಮುಗಿಯಿತು)