1. ಮಾಸಿಹೋಗದ ವಾರಸಿಕೆ
“ನಿಜವಾದ ಒಬ್ಬ ಮಹಾತ್ಮನ ಬಗ್ಗೆ ಪ್ರಚಾರ ಮಾಡುವ ಆವಶ್ಯಕತೆ ಇಲ್ಲ. ಸರಿಯಾದ ಸಮಯ ಬಂದಾಗ ಗಾಂಧಿ ಲೋಕವಿದಿತರಾಗುತ್ತಾರೆ. ಏಕೆಂದರೆ ಜಗತ್ತಿಗೆ ಅವರ ಮತ್ತು ಅವರ ಸಂದೇಶದ ಆವಶ್ಯಕತೆ ಇದೆ.”
ಈ ಮಾತುಗಳನ್ನಾಡಿದ್ದವರು ರವೀಂದ್ರನಾಥ ಠಾಕೂರರು, 1920ರಲ್ಲಿ. ಕೆಲವೇ ವರ್ಷಗಳ ತರುವಾಯ ಠಾಕೂರರ ಮಾತು ನಿಜವಾದದ್ದನ್ನು ಕಂಡೆವು. ಅದಾದ ಮೇಲೆ ದುರದೃಷ್ಟದಿಂದ ಒಂದು ವಿಸ್ಮರಣೆಯ ಪರ್ವ ಆರಂಭವಾಯಿತು. ಅದು ಇಂದಿಗೂ ಮುಂದುವರಿದಿದೆ. ಆದರೆ ಗಾಂಧಿಯವರ ವಾರಸಿಕೆ ಅಷ್ಟು ಸುಲಭವಾಗಿ ಕೊಡವಿಕೊಳ್ಳುವಂಥದಲ್ಲ. ಅವರ ಚಿಂತನೆಯಿಂದ ದೇಶವನ್ನು ವಿಮುಖಗೊಳಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದ ಪಂ. ಜವಾಹರ್ಲಾಲ್ ನೆಹರುರವರೇ ತಮ್ಮ ಕೊನೆದಿನಗಳಲ್ಲಿ ತಾವು ವರ್ಷಗಳುದ್ದಕ್ಕೂ ಅನುಸರಿಸಿಕೊಂಡು ಬಂದಿದ್ದ ಧೋರಣೆಗಳ ಬಗೆಗೆ ಭ್ರಮನಿರಸನಗೊಂಡರು. 1964ರಲ್ಲಿ – ಅವಸಾನಕ್ಕೆ ಕೆಲವೇ ತಿಂಗಳ ಹಿಂದೆ – ಶ್ರೀಮನ್ ನಾರಾಯಣ್ ಅವರ ‘ಸೋಷಲಿಸ್ಮ್ ಇನ್ ಇಂಡಿಯನ್ ಪ್ಲಾನಿಂಗ್’ ಗ್ರಂಥಕ್ಕೆ ಬರೆದ ಮುನ್ನುಡಿಯಲ್ಲಿ ನೆಹರು ಹೀಗೆಂದಿದ್ದರು: “We must not forget that the essential objective to be aimed at is the quality of the individual and the concept of Dharma underlying it.” (“ವ್ಯಕ್ತಿಯ ಗುಣಮಟ್ಟದ ವರ್ಧನೆ, ಅದಕ್ಕೆ ತಳಪಾಯದಂತಿರುವ ಧರ್ಮದ ಸ್ಥಾಪನೆ – ಇವೇ ನಮ್ಮ ಅಂತಿಮ ಗುರಿಯಾಗಿರಬೇಕು – ಎಂಬುದನ್ನು ಮರೆಯಬಾರದು.”) ಆದರೆ ಈ ಮನವರಿಕೆಯಾಗುವ ವೇಳೆಗೆ ಕಾಲ ಮೀರಿತ್ತು. ಅವರ ಭ್ರಮೆಯೊಡನೆ ಏಕೀಭವಿಸಿದುದಕ್ಕಾಗಿ ದೇಶ ತೆತ್ತ ಬೆಲೆ ಅಪಾರ.
ಈ ಸಂಗತಿಗಳನ್ನು ಗಮನಿಸೋಣ:
“ಇಂದು ನಾವು ಮಹಾತ್ಮ ಗಾಂಧಿಯವರ ಮಾತುಗಳನ್ನು ನೆನಪಿಸಿಕೊಳ್ಳುವ ಆವಶ್ಯಕತೆಯಿದೆ. ನಿಷ್ಕಾರಣವಾಗಿ ಒಬ್ಬರ ಮೇಲೊಬ್ಬರು ದ್ವೇಷ ಸಾಧಿಸುತ್ತಿದ್ದಲ್ಲಿ ಇಡೀ ಜಗತ್ತೇ ನಾಶವಾದೀತು.”
– ಹೀಗೆಂದವರು ಇಸ್ರೇಲಿನ ವಿದೇಶಾಂಗ ಮಂತ್ರಿ ಷಿಮೊನ್ ಪೆರೆಸ್ – ಪಾಲೆಸ್ಟೀನ್ ಲಿಬರೇಶನ್ ಆರ್ಗಾನಿಸೇಶನ್ ಪ್ರತಿನಿಧಿಗಳೊಡನೆ ಶಾಂತಿಸಂಧಾನ ನಡೆಸುತ್ತಿದ್ದ ಸಂದರ್ಭದಲ್ಲಿ.
ಪಿ.ಎಲ್.ಓ. ಅಧ್ಯಕ್ಷ ಯಾಸೆರ್ ಅರಾಫತ್ರವರೂ ಹತ್ತಾರು ಸಂದರ್ಭಗಳಲ್ಲಿ ಮಹಾತ್ಮ ಗಾಂಧಿಯವರ ವಿಶ್ವಶಾಂತಿ ಸಂದೇಶವನ್ನು ನೆನೆದಿದ್ದರು.
ಗಾಂಧಿಯವರು ಜೀವಂತವಿದ್ದಾಗಲೇ ಭಗವಾನ್ ರಮಣಮಹರ್ಷಿಗಳು ಒಮ್ಮೆ ಹೇಳಿದ್ದರು: “ಹನುಮಂತನು ಚಿರಂಜೀವಿ ಎಂದು ಹೇಳುತ್ತಾರಷ್ಟೆ. ಹಾಗೆಂದರೆ ಯಾವುದೋ ಒಂದು ಕೋತಿ ಸಾಯದೆ ಸದಾಕಾಲಕ್ಕೂ ಉಳಿದಿರುತ್ತದೆ ಎಂದಲ್ಲ. ಆ ಮಾತಿನ ಅರ್ಥ ಶ್ರೀರಾಮನ ಆದರ್ಶಕ್ಕೆ ಸೇವೆ ಸಲ್ಲಿಸುವವರು ಯಾರಾದರೂ ಯಾವಾಗಲೂ ಇದ್ದೇ ಇರುತ್ತಾರೆ – ಎಂದು: ಇದೀಗ ಗಾಂಧಿಯವರು ಇರುವಂತೆ.”
ಈ ಮಾತಿನ ಸತ್ಯತೆಗೆ ಪುರಾವೆಗಳ ಕೊರತೆಯಿಲ್ಲ.
ಫಿಲಿಪೈನ್ಸಿನ ಮೆನಿಲಾ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದ ಫಾದರ್ ಡೆಲಾ ಕೋಸ್ಟಾ ಸುವಿಖ್ಯಾತ ಇತಿಹಾಸಜ್ಞರು. ಇಳಿವಯಸ್ಸಿನಲ್ಲಿ ಅವರು ಅನಾರೋಗ್ಯದ ಕಾರಣ ಆರಿಸಿದ ಕೆಲವೇ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಿದ್ದರು. ಅವರ ತರಗತಿಗೆ ದಾಖಲೆಯಾಗಲು ಶಾಲೆ ತೆರೆಯುವುದಕ್ಕೆ ಮುಂಚೆಯೇ ಬೆಳಗಿನ ಜಾವದಿಂದಲೇ ಶಿಕ್ಷಾರ್ಥಿಗಳು ಸಾಲುಗಟ್ಟಿ ನಿಲ್ಲುತ್ತಿದ್ದರು. ಅಷ್ಟು ಬೇಡಿಕೆಯಿತ್ತು ಅವರ ಬೋಧನೆಗೆ. ಅವರ ಭಾಷಣಗಳಂತೂ ಮಾತಿಗೆಟುಕದಷ್ಟು ಪ್ರಶಸ್ತವೆನಿಸಿದ್ದವು.
ಅವರ ಕೊನೆಯ ದಿನಗಳಲ್ಲೊಮ್ಮೆ ಅವರು ಫಿಲಿಪೈನ್ಸ್ ವಿಶ್ವವಿದ್ಯಾಲಯದ ವರ್ಷಾರಂಭ ಭಾಷಣ ಮಾಡಿದರು. ಸ್ಮರಣೀಯವೆನಿಸಿದ ಅವರ ಆ ಭಾಷಣದ ವಿಷಯ – ಪೂರ್ವದೇಶಗಳಲ್ಲಿ ಕ್ರಿಸ್ತನು ಹೇಗೆ ಅಭಿವ್ಯಕ್ತಗೊಂಡಿದ್ದಾನೆಂಬುದು (“ಈಸ್ಟರ್ನ್ ಫೇಸ್ ಆಫ್ ಕ್ರೈಸ್ಟ್”). ಏಷ್ಯ ಖಂಡದ ಇತಿಹಾಸವನ್ನು ವಿಶ್ಲೇಷಿಸುತ್ತ ಇತಿಹಾಸವನ್ನು ರೂಪಿಸಿದ ಸೀಮಾಪುರುಷರು ಯಾರಾರೆಂದು ಅವರು ಹೇಳತೊಡಗಿದರು. ತಮ್ಮ ಗಣನೆಗೆ ಯೋಗ್ಯರೆಂದು ಅವರು ಆರಿಸಿದ್ದು ಮೂರು ವ್ಯಕ್ತಿಗಳನ್ನು – ಪ್ರಾಚೀನ ಯುಗದಲ್ಲೊಬ್ಬರು, ಆಧುನಿಕ ಯುಗದ ಆರಂಭಕಾಲದವರೊಬ್ಬರು, ಸಮಕಾಲೀನರೊಬ್ಬರು. ಈ ವಿಂಗಡಣೆಯಲ್ಲಿ ಅನುಕ್ರಮವಾಗಿ ಅವರು ಮೂವರನ್ನು ಹೆಸರಿಸಿದರು: (1) ಸಾಮಾಜಿಕ ಸುವ್ಯವಸ್ಥಿತಿಯ ಅಗತ್ಯವನ್ನು ಕ್ರಿ.ಪೂ. ಐದನೇ ಶತಮಾನದಷ್ಟು ಹಿಂದೆ ಜಗತ್ತಿಗೆ ಮನಗಾಣಿಸಿದ ಕನ್ಫ್ಯೂಷಿಯಸ್; (2) ರಾಷ್ಟ್ರವೊಂದರ ನಾಯಕನ ಮತ್ತು ಜನತೆಯ ಘನತೆಯನ್ನು ಪ್ರತ್ಯಕ್ಷಗೊಳಿಸಿದ ಫಿಲಿಪೈನ್ಸ್ ರಾಷ್ಟ್ರವೀರ ಜೋಸೆ ರಿಜಾಲ್ (19ನೇ ಶತಮಾನದ ಫಿಲಿಪೈನ್ಸಿನ ರಾಷ್ಟ್ರಭಕ್ತ); (3) ಅನ್ಯಾಯದೊಡನೆ ರಾಜಿಯಾಗದೆ ಅಹಿಂಸಾತ್ಮಕವಾಗಿಯೇ ಪ್ರತಿರೋಧ ತೋರುವುದರ ಮೂಲಕ ಅಲಕ್ಷಿತರ ಮತ್ತು ದಮನಕ್ಕೊಳಗಾದವರ ಗೌರವ-ಔನ್ನತ್ಯವನ್ನು ಇಪ್ಪತ್ತನೇ ಶತಮಾನದಲ್ಲಿ ಪ್ರಕಟೀಕರಿಸಿದ ಮಹಾತ್ಮ ಗಾಂಧಿ. ಭಾರತದಿಂದ ಸುದೂರದ ಆ ದ್ವೀಪಸಮುದಾಯದ ಜನರ ಅಸ್ತಿತ್ವವನ್ನು ಅರ್ಥೈಸುವಲ್ಲಿ ಆ ಜ್ಞಾನವೃದ್ಧರ ಕಣ್ಣಿಗೆ ಗೋಚರಿಸಿದ ದಾರ್ಶನಿಕ, ಮಹಾತ್ಮ ಗಾಂಧಿ.
ಜಗತ್ತಿನ ಇತರ ಹಲವಾರು ದೇಶಗಳ ಆಧುನಿಕ ಇತಿಹಾಸದ ಮೇಲೂ ಗಾಂಧಿಯವರ ಪ್ರಭಾವದ ಮುದ್ರಿಕೆ ಬಿದ್ದಿದೆ. ಅಮೆರಿಕದ ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಬ್ಲ್ಯು ಸಿ. ಸ್ಮಿತ್ ಹೀಗೆಂದಿದ್ದಾರೆ: “It has been said that the most important disciple of Mahatma Gandhi so far in the twentieth century has been Martin Luther King. In this among other ways Gandhi may be said to have participated consequentially in the Christian life of the United States.”
(“ಈ ಶತಮಾನದಲ್ಲಿ ಮಹಾತ್ಮ ಗಾಂಧಿಯವರ ವಾರಸಿಕೆಯನ್ನು ಮುಂದುವರಿಸಿದವರಲ್ಲಿ ಗಣ್ಯನೆಂದು ಮಾರ್ಟಿನ್ ಲೂಥರ್ ಕಿಂಗ್ ಪರಿಗಣಿತರಾಗಿದ್ದಾರೆ. ಈ ದೃಷ್ಟಿಯಿಂದಲೂ, ಅಮೆರಿಕದ ಧಾರ್ಮಿಕ ಜೀವನದ ಮೇಲೂ ಗಾಂಧಿಯವರ ಪ್ರಭಾವಮುದ್ರೆ ಬಿದ್ದಿದೆಯೆನ್ನಬಹುದು.”)
ಗಾಂಧಿಯವರು ಪ್ರತಿಪಾದಿಸಿದ ಗ್ರಾಮಾಧಾರಿತ ರಾಜ್ಯವ್ಯವಸ್ಥೆ ಕೇವಲ ತಾತ್ತ್ವಿಕ ಕಲ್ಪನೆಯಲ್ಲ, ಅದು ವ್ಯವಹಾರಸಾಧ್ಯವೂ ಆಗಿದೆ – ಎಂಬುದನ್ನು ಆಚರಿಸಿ ತೋರಿಸಿದರು, ಟಾಂಜಾನಿಯಾದ ಅಧ್ಯಕ್ಷರಾಗಿದ್ದ ಜೂಲಿಯಸ್ ನ್ಯೆರೇರೆ.
2. ಸಾಮಾಜಿಕ ಕ್ರಾಂತಿ: ದುರ್ಗಮ ಪ್ರಯಾಸ
ಭಾರತದಲ್ಲಿ ನಾಲ್ಕು ದಶಕಗಳ ಆವೇಶಪೂರಿತ ಯೋಜನೆಗಳ ಮತ್ತು ಬಗೆಬಗೆಯ ಪ್ರಯೋಗಗಳ ನಂತರ ದೇಶ ವಸಾಹತುಶಾಹಿಗೆ ಅಧೀನವಾಗುತ್ತಿದ್ದುದನ್ನು ನೋಡಿದ್ದೇವೆ. ದೇಶವನ್ನು ಹೆಚ್ಚುಹೆಚ್ಚು ಆಳದ ಕಂದಕಕ್ಕೆ ಒಯ್ದ ನಾಯಕತ್ವದ ವಿರುದ್ಧ ವಿವಿಧ ಸ್ತರಗಳಲ್ಲಿ, ವಿವಿಧ ಬಗೆಗಳಲ್ಲಿ ಜನತೆ ಚಿಂತಿತವಾಗಿದೆ. “ದುರಂತಮಯವಾದ ಈ ಎಂಬತ್ತರ ದಶಕದಲ್ಲಿ ಯುವಜನತೆಗೆ ತಮಗೆ ಭವಿಷ್ಯವೇ ಇಲ್ಲವೆನಿಸತೊಡಗಿದೆ. ಈ ಹತಾಶೆಗೆ ಪ್ರತಿಯಾಗಿ ಅವರಿಗೆ ಗಾಂಧಿಜೀ ಭರವಸೆ ತೋರುತ್ತಿದ್ದಾರೆ; ಭಾವಶೂನ್ಯತೆಗೆ ಪ್ರತಿಯಾಗಿ ಕಾರ್ಯಮಾರ್ಗವನ್ನು ಅವರು ಯುವಕರಿಗೆ ತೋರುತ್ತಿದ್ದಾರೆ” – ಎಂದು ತಮ್ಮ ಪುಸ್ತಕವೊಂದರಲ್ಲಿ ಮಾರ್ಜೋರಿ ಸೈಕ್ಸ್ ಹೇಳಿದರು. ಮುಂದಿನ ಪೀಳಿಗೆಗೆ ಗಾಂಧಿಜೀ ಕೊಟ್ಟುಹೋದ ಮುಖ್ಯ ವಾರಸಿಕೆಯನ್ನು ‘ಎಂಥ ಸನ್ನಿವೇಶದಲ್ಲೂ ಎದೆಗುಂದದ ಹೋರಾಟದ ಮನೋಧರ್ಮ’ – ‘The gift of the fight’ – ಎಂದು ಆಕೆ ಕರೆದಿದ್ದಾರೆ (ಈ ಪದಪುಂಜ ರವೀಂದ್ರನಾಥ ಠಾಕೂರರದು). ನಾವು ನಿರಂತರ ಸೆಣಸಾಡಬೇಕಾದದ್ದು ಕ್ಷುದ್ರತೆ, ಸ್ವಾರ್ಥ, ಅತ್ಯಾಸೆ ಹಾಗೂ ಇವುಗಳಿಂದ ಜನಿಸಿದ ಭಯ ಮತ್ತು ಹಿಂಸಾಪ್ರವಣತೆಗಳ ವಿರುದ್ಧ. ಈ ಸಮರ ಹೊರಗೆ ನಡೆಯುವಂತೆಯೇ ನಮ್ಮ ಒಳಗೂ ಸದಾ ನಡೆಯಬೇಕಾಗಿದೆ. “ನಾವು ಇಂದು ಎದುರಿಸುತ್ತಿರುವ ಸಮಸ್ಯೆಗಳೇ ಗಾಂಧಿಜೀಗೂ ಎದುರಾಗಿದ್ದವು. ಅವರೂ ಹಲವೊಮ್ಮೆ ತಮ್ಮ ಸೆಣಸಾಟದಲ್ಲಿ ವಿಫಲರಾದದ್ದುಂಟು. ನಮಗನಿಸುವಂತೆ ಕೈಚೆಲ್ಲಿ ಕುಳಿತುಕೊಳ್ಳೋಣವೆಂದು ಅವರಿಗೂ ಆಗಾಗ ಅನಿಸದೆ ಇರಲಿಲ್ಲ. ಆದರೆ ಅವರು ಹತಾಶೆಗೆ ಒಳಗಾಗಲಿಲ್ಲ. ಕೋಟಲೆ-ಕಹಿಗಳನ್ನು ಧಾರಾಳವಾಗಿ ಉಂಡರೂ ಅವರು ಭರವಸೆಯನ್ನೂ ಪ್ರಯತ್ನದ ಏಕಾಗ್ರತೆಯನ್ನೂ ಮಾನವಪ್ರೇಮವನ್ನೂ ಉಳಿಸಿಕೊಂಡಿದ್ದರು” – ಎಂದಿದ್ದಾರೆ, ಸೈಕ್ಸ್.
ನಮ್ಮ ದೇಶದ ದುರ್ದಶೆಗೆ ವಿದೇಶೀ ಪ್ರಭುತ್ವವೇ ಕಾರಣವೆಂದು ಬೊಟ್ಟುಮಾಡಿ ತೋರಿಸುವುದು ಹಿಂದೆ ಶಕ್ಯವಿತ್ತು. ಆ ಆರೋಪದಲ್ಲಿ ತಥ್ಯವೂ ಇತ್ತು. ಆದರೆ ಈಗ ಹಾಗೆ ಹೇಳುವ ಅವಕಾಶ ಉಳಿದಿಲ್ಲ. ಇಂದಿನ ಸ್ಥಿತಿಗೆ ದೇಶದ ಕರ್ಣಧಾರರೂ ಅವರನ್ನು ಆರಿಸಿದ ನಾವೂ ಹೊಣೆಗಾರರೇ ಹೊರತು ಬೇರಾರೂ ಇಲ್ಲ. ಭಾರತವನ್ನು ಬೇರಾವುದೋ ದೇಶದ ನಕಲನ್ನಾಗಿ ಮಾಡಹೊರಟ ನೇತಾರರ ಮನೋಧರ್ಮ ಒಂದು ಕಡೆ; ಪಾಶ್ಚಾತ್ಯ ಜಗತ್ತಿನ ಥಳಕು ಬೆಡಗಿಗೆ ಮನಸೋತ ಸಮಾಜೋನ್ನತ ವರ್ಗ ಇನ್ನೊಂದು ಕಡೆ. ಈ ಎರಡೂ ಪ್ರವೃತ್ತಿಗಳ ವಿರುದ್ಧ ಜನಸಾಮಾನ್ಯರು ಹೋರಾಡಬೇಕಾಗಿದೆ. ಇದು ದುರ್ಗಮ ಪ್ರಯಾಸವೆಂಬುದನ್ನು ಗಾಂಧಿಜೀ ಅರಿಯದವರಲ್ಲ. 1945ರ ಅಂತ್ಯದಲ್ಲಿ ಶಾಂತಿನಿಕೇತನದ ಅಧ್ಯಾಪಕ ತಂಡದೊಡನೆ ನಡೆಸಿದ ಸಂವಾದದಲ್ಲಿ ಗಾಂಧಿಜೀ ಹೇಳಿದರು: “Social revolution is a much more difficult thing to achieve than political revolution. It is also true that without a social revolution we shall not be able to leave India happier than when we were born. I can however indicate no royal road for bringing about a social revolution except that we should represent it in every detail of our own lives…… Try again and again, never say that you are defeated, never say that the people are no good. If you meet with no response, think that the failure is yours, not theirs. May I venture to suggest that there is no difficulty that
cannot be overcome by Tapashcharya? That is an almost untranslatable word: the nearest approach to its true meaning is perhaps single-minded devotion.”
(“ರಾಜಕೀಯ ಪರಿವರ್ತನೆಗಿಂತ ಹೆಚ್ಚು ಕಷ್ಟಸಾಧ್ಯವಾದದ್ದು ಸಾಮಾಜಿಕ ಪರಿವರ್ತನೆ. ನಮ್ಮ ಮುಂದಿನ ಪೀಳಿಗೆಗೆ ಈಗಿರುವುದಕ್ಕಿಂತ ಮೇಲಾದ ನಾಡೊಂದನ್ನು ನಾವು ಉಳಿಸಿಹೋಗಬೇಕೆಂದು ಬಯಸಿದಲ್ಲಿ ಸಾಮಾಜಿಕ ಪರಿವರ್ತನೆ ಅನಿವಾರ್ಯ. ಆದರೆ ನಮ್ಮ ಒಬ್ಬೊಬ್ಬರ ಜೀವನದ ಒಂದೊಂದು ಅಂಶದಲ್ಲಿಯೂ ಯುಕ್ತ ಪರಿವರ್ತನೆ ತರಲು ಶ್ರಮಿಸುವುದನ್ನುಳಿದು ಬೇರಾವ ಸುಲಭಮಾರ್ಗವೂ ಸಾಮಾಜಿಕ ಪರಿವರ್ತನೆಗೆ ಲಭ್ಯವಿಲ್ಲ… ಮೇಲಿಂದ ಮೇಲೆ ಈ ಪ್ರಯತ್ನ ಮಾಡುತ್ತಿರಿ. ಸೋತೆನೆಂದು ಒಮ್ಮೆಯೂ ಹೇಳಬೇಡಿ; ಜನರನ್ನು ತಿದ್ದುವುದಕ್ಕಾಗುತ್ತಿಲ್ಲ – ಎಂದು ಗೊಣಗಬೇಡಿ. ಜನ ಸ್ಪಂದಿಸದಿದ್ದರೆ ದೋಷ ಅವರದಲ್ಲ, ನಿಮ್ಮದೇ ಎಂದುಕೊಳ್ಳಿ… ತಪಶ್ಚರ್ಯೆಯಿಂದ ದಾಟಲಾಗದ ಸಮಸ್ಯೆ ಯಾವುದೂ ಇಲ್ಲ – ಎಂಬುದು ನನ್ನ ನಿಶ್ಚಯ. ‘ತಪಶ್ಚರ್ಯೆ’ಗೆ ಪರ್ಯಾಯ ಶಬ್ದವಿಲ್ಲ; ಏಕಾಗ್ರನಿಷ್ಠೆ ಎಂದು ಹೇಳಬಹುದು.”)
3. ನಿಜವಾದ ಸ್ವರಾಜ್ಯ
ಸ್ವರಾಜ್ಯವೆಂದರೆ ವಿದೇಶೀ ಆಳ್ವಿಕೆಯಿಂದ ಮುಕ್ತವಾಗುವುದು ಎಂದು ಮಾತ್ರ ಅರ್ಥೈಸಿದರೆ ತಪ್ಪಾಗುತ್ತದೆ. ಹೊರಗಿನ ಶತ್ರುಗಳ ಮೇಲೆ ಗೆಲವನ್ನು ಸಾಧಿಸಬಹುದು; ಆದರೆ ಒಳಗಿನ (ರಾಷ್ಟ್ರದೊಳಗಿನ, ಸಮಾಜದೊಳಗಿನ, ಹಾಗೂ ಪ್ರತಿಯೊಬ್ಬ ವ್ಯಕ್ತಿಯ ಒಳಗಿನ) ಶತ್ರುಗಳನ್ನು ಸೋಲಿಸುವುದು ಅದಕ್ಕಿಂತ ಬಹುಪಾಲು ಹೆಚ್ಚು ಕಷ್ಟ. ಪ್ರತಿಯೊಬ್ಬ ವ್ಯಕ್ತಿ ತನ್ನ ಮೇಲೆ ಪ್ರಭುತ್ವ ಸಾಧಿಸಿದಾಗಲೇ ದೇಶದ ಸ್ವರಾಜ್ಯ ಪೂರ್ಣಗೊಳ್ಳುವುದು. ಈ ಆಂತರಂಗಿಕ ವಿಜಯ ಸಾಧಿಸಲಾಗದಿದ್ದಲ್ಲಿ ಹೊರಗಿನ ನಾಮಮಾತ್ರದ ಸ್ವಾತಂತ್ರ್ಯವೂ ಹೆಚ್ಚು ಕಾಲ ಉಳಿಯಲಾರದು. ಇದು ಗಾಂಧಿಯವರ ಚಿಂತನೆ. ಇತಿಹಾಸದ ಪಾಠವು ಇದೇ ಆಗಿದೆ.
ಸ್ವಾತಂತ್ರ್ಯಸಮರ ಪರಾಕಾಷ್ಠ ಸ್ಥಿತಿ ತಲಪಿದ್ದ ದಿನಗಳಲ್ಲಿಯೂ ಗಾಂಧಿಜೀ ಹೇಳುತ್ತಿದ್ದದ್ದು ಇದೇ ಮಾತನ್ನು: “I am not interested in freeing India merely from the British yoke; I am bent on freeing India from any yoke whatsoever.” (“ಆಂಗ್ಲರ ಗುಲಾಮಗಿರಿಯಿಂದ ಭಾರತೀಯರನ್ನು ಮುಕ್ತಗೊಳಿಸಬೇಕೆಂದಷ್ಟೇ ನನ್ನ ಆಶಯವಲ್ಲ. ಭಾರತೀಯರನ್ನು ಎಲ್ಲ ವಿಧದ ದಾಸ್ಯದಿಂದಲೂ ವಿಮೋಚನೆಗೊಳಿಸಬೇಕೆಂಬುದು ನನ್ನ ಗುರಿ.”)
ಅದಾಗಿ ಎರಡು ದಶಕಗಳು ಉರುಳಿದವು. ಬ್ರಿಟಿಷರು ಕಾಲ್ತೆಗೆಯುವ ದಿವಸವು ಬಂದಿತು. ಆಗಲೂ ಗಾಂಧಿಜೀ ಪುನರುಚ್ಚರಿಸಿದರು: “Complete Independence is still far away” (“ಪೂರ್ಣಸ್ವರಾಜ್ಯ ಇನ್ನೂ ಬಹಳ ದೂರ ಇದೆ”). (‘ಹರಿಜನ್’, 10-8-1947)
ಇದೇ ಭಾವನೆಯನ್ನು ರವೀಂದ್ರನಾಥ ಠಾಕೂರರು 1921ರಷ್ಟು ಹಿಂದೆಯೆ ವ್ಯಕ್ತಪಡಿಸಿದ್ದರು: “Alien government is a veritable chameleon; today it is in the guise of the British; tomorrow or the next day it may take the shape of our own countrymen” (“ವಿದೇಶೀ ಪ್ರಭುತ್ವ, ಪರಕೀಯರ ದಬ್ಬಾಳಿಕೆ ಎಂಬುದು ಗೋಸುಂಬೆಯಂತೆ. ಇಂದು ಅದು ಬ್ರಿಟಿಷರ ರೂಪದಲ್ಲಿರಬಹುದು; ನಾಳೆಯೋ ನಾಡಿದ್ದೋ ಅದು ನಮ್ಮ ದೇಶೀಯರ ರೂಪದಲ್ಲಿಯೆ ಪ್ರತ್ಯಕ್ಷವಾದೀತು.”)
ರಾಜಕೀಯ ಸ್ವಾತಂತ್ರ್ಯ ಪ್ರಾಪ್ತಿಯ ನಂತರ ತಾವು ಸಾಬರಮತಿಗೆ ಹಿಂದಿರುಗಿ ‘ಪೂರ್ಣಸ್ವರಾಜ್ಯ’ಕ್ಕಾಗಿ ಹೋರಾಟವನ್ನು (`fight’ ಎಂಬ ಮಾತನ್ನು ಗಾಂಧಿಜೀ ಬಳಸಿದ್ದರು) ಮುಂದುವರಿಸುವುದಾಗಿ ಗಾಂಧಿಜೀ ಘೋಷಿಸಿಯೂ ಇದ್ದರು. ಭಾರತದ ಲಕ್ಷಾಂತರ ಹಳ್ಳಿಗಳಲ್ಲಿ ಒಂದೊಂದೂ ತನ್ನ ವ್ಯವಹಾರಗಳನ್ನು ತಾನೇ ನಿರ್ದೇಶಿಸಲು ಸಮರ್ಥವಾದಾಗ – ಯಾವುದೇ ಬಾಹ್ಯಶಕ್ತಿಯ (ಅದು ವಿದೇಶೀ ಇರಲಿ, ಸ್ವದೇಶದ್ದೇ ಇರಲಿ) ಆಕ್ರಮಣವನ್ನು ಎದುರಿಸಲು ಶಕ್ತವಾದಾಗ – ನಿಜವಾದ ಸ್ವಾತಂತ್ರ್ಯ ದೊರೆತಂತಾಗುತ್ತದೆ, ಎಂದೇ ಗಾಂಧಿಜೀಯವರ ಸ್ಪಷ್ಟ ಚಿಂತನೆ ಇತ್ತು.
1942ರಲ್ಲಿ ಎಸ್. ಸತ್ಯಮೂರ್ತಿ ಅವರು ಒಮ್ಮೆ ‘Bapu, your real work will begin when India is free’ (“ಬಾಪೂಜಿ, ನಿಮ್ಮ ನಿಜವಾದ ಕೆಲಸ ಆರಂಭವಾಗುವುದು ಭಾರತ ಸ್ವತಂತ್ರಗೊಂಡ ಮೇಲೆಯೇ”) ಎಂಬ ಮಾತನ್ನು ಹೇಳಿದಾಗ ಗಾಂಧಿಜೀ ಆ ಮಾತಿಗೆ ತಮ್ಮ ಪೂರ್ಣ ಸಮ್ಮತಿ ಸೂಚಿಸಿದ್ದರು.
ರಾಜಸ್ಥಾನದ ಒಬ್ಬ ಗಣ್ಯ ಗಾಂಧಿವಾದಿ ಸಾಮಾಜಿಕ ಕಾರ್ಯಕರ್ತ ಕಿಶೋರ್ ಸಂತ್ ಕೆಲವು ವರ್ಷ ಹಿಂದೆ ಪ್ರಬಂಧವೊಂದರಲ್ಲಿ ನೀಡಿದ ವಿಶ್ಲೇಷಣೆ ಇದು: “ಉನ್ನತ ಸಾಧನೆಯ ಶಕ್ತಿ-ಕೌಶಲಗಳನ್ನು ಪಡೆದಿರುವವರು ತಮ್ಮ ಪ್ರತಿಭೆಯನ್ನು ಸಮಾಜದ ಕಲ್ಯಾಣಕ್ಕಾಗಿ ಬಳಸದೆ ಸ್ವಾರ್ಥಪರಡಿಂಗಿದ್ದರೆ ದೇಶ ಸೊರಗುತ್ತದೆ. ಬುದ್ಧಿವಂತರ ಪ್ರತಿಭೆ ಧರ್ಮದಿಂದ ವಿಚ್ಛೇದಗೊಂಡಾಗ ಒಂದು ಆಸುರೀ ವರ್ಗ ನಿರ್ಮಾಣವಾಗುತ್ತದೆ.”
4. ವೈಶ್ವಿಕ ನೆಲೆ
ಅರ್ಥಶಾಸ್ತ್ರ, ತಂತ್ರಜ್ಞಾನ ಕ್ಷೇತ್ರಗಳಲ್ಲಿ ಗಾಂಧಿಜೀ ಚಿಂತನೆಯತ್ತ ಈಚಿನ ವರ್ಷಗಳಲ್ಲಿ ಜಗತ್ತಿನ ಗಮನ ಸೆಳೆದವರಲ್ಲಿ ‘ಸ್ಮಾಲ್ ಈಸ್ ಬ್ಯೂಟಿಫುಲ್’ ಗ್ರಂಥ ಬರೆದ ಇ.ಎಫ್. ಷೂಮ್ಯಾಕರ್ ಅಗ್ರಗಣ್ಯರೆನ್ನಬಹುದು. ಗಾಂಧಿಜೀ ನಿರ್ಗಮಿಸಿ ಹಲವು ದಶಕಗಳು ಕಳೆದ ಮೇಲೂ ಗಾಂಧಿಜೀ ಚಿಂತನೆಯ ಪ್ರಭಾವ ಸವೆದಿಲ್ಲ. ಮಾತ್ರವಲ್ಲ, ಅದು ಹಿಂದಿಗಿಂತ ಹೆಚ್ಚು ಸಂಗತವಾಗುತ್ತಿರುವುದು ಏಕೆ ಎಂಬುದನ್ನು ಷೂಮ್ಯಾಕರ್ ‘ಎ ಗೈಡ್ ಫಾರ್ ದಿ ಪಪ್ರ್ಲೆಕ್ಸ್ಡ್’ ಗ್ರಂಥದಲ್ಲಿ ವಿವೇಚಿಸಿದ್ದಾರೆ.
ಜಗತ್ತಿನ ಸಮಸ್ಯೆಗಳನ್ನು ಷೂಮ್ಯಾಕರ್ ಎರಡು ರೀತಿಯಾಗಿ ವಿಂಗಡಿಸಿದ್ದಾರೆ. ಕೆಲವು ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮಾನವನ ಪ್ರಯತ್ನಗಳು ಏಕಮುಖವಾಗಿ ಸಾಗುತ್ತಿರುತ್ತವೆ. ಉದಾಹರಣೆಗೆ ಸರಳ, ಸ್ವತಂತ್ರ, ಸ್ವಾವಲಂಬಿ ಪ್ರಯಾಣಸಾಧನವನ್ನು ರೂಪಿಸಹೊರಟು ಚಕ್ರಗಳು, ಅವುಗಳ ಆಕಾರಸುಧಾರಣೆ, ಎರಡು ಚಕ್ರಗಳನ್ನು ಒಂದರೊಡನೊಂದನ್ನು ಜೋಡಿಸುವ ಕಬ್ಬಿಣದ ಪಟ್ಟಿಗಳ ವಿನ್ಯಾಸ, ಚಕ್ರವನ್ನು ಕನಿಷ್ಠ ಪ್ರಯತ್ನದಿಂದ ತಿರುಗಿಸಲಾಗುವಂಥ ಕಾಲುಹಿಡಿಕೆ (ಪೆಡಲ್), ವೇಗ ಹೆಚ್ಚಾದಾಗ ನಿಯಂತ್ರಿಸಲು ಹೆದ್ದನ (ಬ್ರೇಕ್) – ಹೀಗೆ ಕಾಲಕ್ರಮೇಣ ಬೈಸಿಕಲ್ ಯಂತ್ರ ಅವಿಷ್ಕಾರಗೊಂಡಿತು. ಈ ಆವಿಷ್ಕಾರದ ಮಾರ್ಗದಲ್ಲಿ ತೋರಿದ ಸಮಸ್ಯೆಗಳನ್ನು ಏಕಮುಖವಾದ (ಕನ್ವರ್ಜೆಂಟ್) ಸಮಸ್ಯೆಗಳೆನ್ನಬಹುದು. ಇದರಲ್ಲಿ ವಿವಿಧ ಹಂತಗಳ ಸಮಸ್ಯೆಗಳು ಬೇರೆ ಬೇರೆಯವಾದರೂ ಏಕೈಕ ಗಮ್ಯದ ಬಗೆಗೆ ದೃಢತೆ ಇದ್ದದ್ದರಿಂದ ಸಮಸ್ಯೆಗಳು ಸಮರ್ಪಕವಾಗಿ ಪರಿಹಾರಗೊಂಡವು.
ಇನ್ನೊಂದು ವರ್ಗದ ಸಮಸ್ಯೆಗಳಲ್ಲಿ ಗಮ್ಯದ ಬಗೆಗೆ ದೃಢತೆಯು ಇರುವುದಿಲ್ಲ; ಪರಿಹಾರ ಪ್ರಯತ್ನಗಳು ಏಕಮುಖವಾಗಿಯೂ ಇರುವುದಿಲ್ಲ. ಶಿಕ್ಷಣ, ರಾಜಕಾರಣ ಮೊದಲಾದವು ಈ ವರ್ಗದವು. ಇವನ್ನು ವ್ಯಗ್ರ (ಡಿವರ್ಜೆಂಟ್) ಸಮಸ್ಯೆಗಳೆನ್ನಬಹುದು. ಸಮಾನತೆ, ಸ್ವಾತಂತ್ರ್ಯ – ಇವು ಒಂದರಿಂದೊಂದು ವಿಮುಖವಾದ ತತ್ತ್ವಗಳು. ಇವನ್ನು ಹೊಂದಿಸಲಾಗುವುದು ಅವೆರಡನ್ನೂ ಮೀರಿದ ಯಾವುದೋ ಉದಾತ್ತ ತತ್ತ್ವದ ಮಧ್ಯಪ್ರವೇಶದಿಂದ ಮಾತ್ರ. ಫ್ರಾನ್ಸಿನ ಮಹಾಕ್ರಾಂತಿಯ ಘೋಷಣೆಯನ್ನು (ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ) ಯೋಜಿಸಿದವನು ಅತ್ಯಂತ ಮೇಧಾವಿಯೇ ಇರಬೇಕು. ಇವುಗಳಲ್ಲಿ ಮೊದಲಿನೆರಡು ಪರಸ್ಪರ ವ್ಯತಿರಿಕ್ತವಾದವು; ಮೂರನೆಯದಾದ ಭ್ರಾತೃತ್ವ ಎರಡನ್ನೂ ಮೀರಿದ್ದು. ಸ್ವಾತಂತ್ರ್ಯ, ಸಮಾನತೆಗಳನ್ನು ಶಾಸನದ ಮೂಲಕ ವಿಧಿಸಬಹುದು. ಆದರೆ ಭ್ರಾತೃತ್ವವೆಂಬುದು ನೈತಿಕ ಶಕ್ತಿ. ಇದು ನೈತಿಕಶಕ್ತಿಯಾದದ್ದರಿಂದಲೇ ಹೆಚ್ಚು ಸಮರ್ಥವಾದದ್ದು. ಸ್ವಾತಂತ್ರ್ಯ, ಸಮಾನತೆಗಳ ವ್ಯಾಪ್ತಿಯನ್ನು ಕ್ಷುದ್ರಜನ ಹಿಗ್ಗಾಮುಗ್ಗಾ ಸೆಳೆದಾಡಬಹುದು. ಆದರೆ ಭ್ರಾತೃತ್ವ ಇಂಥ ಸೆಳೆದಾಟಗಳಿಗೆ ಒಳಪಡದೆ ಎತ್ತರದಲ್ಲಿ ನಿಲ್ಲುವ ಉದಾತ್ತ ತತ್ತ್ವ.
ಪೌರಸ್ತ್ಯ ಮತ್ತು ಪಾಶ್ಚಾತ್ಯ ಅಥವಾ ಸಾಂಪ್ರದಾಯಿಕ ಮತ್ತು ಆಧುನಿಕ ನಾಗರಿಕತೆಗಳ ನಡುವಣ ಮೂಲಭೂತ ವಿಮುಖತೆಯೇ ಇಂದಿನ ಹಲವಾರು ಸಮಸ್ಯೆಗಳ ಮೂಲದಲ್ಲಿರುವುದು. ಈ ವಿಮುಖ ಪ್ರವೃತ್ತಿಗಳು ನಡುವೆ ಗೆರೆ ಎಳೆದಂತೆ ಬೇರೆ ಬೇರೆ ಭೂಖಂಡಗಳಲ್ಲಿ ಹಂಚಿರುವವಲ್ಲ. ಎರಡೂ ಪ್ರವೃತ್ತಿಗಳನ್ನು ಒಂದೇ ದೇಶದ, ಸಮಾಜದ, ವ್ಯಕ್ತಿಯ ಒಳಗಡೆಯೂ ಕಾಣಲಾಗುತ್ತದೆ. ಹೀಗಿರುವುದರಿಂದ ಸಮಸ್ಯೆಗೆ ಪರಿಹಾರವನ್ನು ಸಾರ್ವತ್ರಿಕ, ವೈಶ್ವಿಕ ನೆಲೆಯಲ್ಲಿಯೇ ಅರಸಬೇಕಾಗುತ್ತದೆ. ಗಾಂಧಿಜೀ ಮಾಡಿದ್ದೂ ಇದೇ ಕೆಲಸವನ್ನು. ಭಿನ್ನ ನಾಗರಿಕತೆಗಳ ಮಿಲನಬಿಂದುವಿನಲ್ಲಿ ಎದೆಯೆತ್ತಿ ಕಾಲೂರಿ ನಿಂತವರು ಗಾಂಧಿಜೀ. ಈ ಕಾರಣದಿಂದ ಉಂಟಾಗಿರುವುದು ಸಮಕಾಲೀನ ಸ್ಥಿತಿಯಲ್ಲಿ ಗಾಂಧಿಯವರ ಮಹತ್ತ್ವ. ಇಡೀ ಮಾನವಜನಾಂಗದ ಗಮ್ಯ ಒಂದೇ; ಆದರೆ ಅದನ್ನು ತಲಪುವ ಸಾಧನಗಳ ಬಗ್ಗೆ ಗೊಂದಲಗಳಿವೆ. ಈ ಗೊಂದಲಗಳ ಪರಿಹಾರ ಶಕ್ಯವಾಗುವುದು ಮಾನವಕೇಂದ್ರಿತ ಮತ್ತು ಅಂತರಂಗಪ್ರಧಾನ ಚಿಂತನೆಯಿಂದ ಮಾತ್ರ.
5. ಗಾಂಧೀದರ್ಶನ
ಗಾಂಧೀದರ್ಶನದ ಕೆಲವು ಮೂಲಾಂಶಗಳನ್ನು ಪುನಃಸ್ಮರಣೆ ಮಾಡೋಣ. ಎಲ್ಲ ಹಿಂಸೆಯೂ ಅಜ್ಞಾನದಿಂದ ಜನ್ಯವಾದದ್ದು. ಹಿಂಸೆಗೆ ಚೋದನೆ ನೀಡುವ ಸ್ವಾರ್ಥ, ಕ್ರೋಧ ಮೊದಲಾದವುಗಳ ಮೂಲಕ ನಮ್ಮ ಹೆಗ್ಗುರಿಯನ್ನು ಮುಟ್ಟುವುದು ಅಸಾಧ್ಯ. ಅಹಿಂಸೆಯ ಮೂಲಕ ಮಾತ್ರ ಸತ್ಯದ ಸಾಕ್ಷಾತ್ಕಾರ ಸಾಧ್ಯ. ಅಹಿಂಸೆಯ ಪರಾಕಾಷ್ಠ ಸ್ಥಿತಿಯೇ ಸತ್ಯ – ಎಂದು ಗಾಂಧಿಜೀ ಹೇಳುತ್ತಾರೆ.
ಗಾಂಧಿಜೀಯವರ ಕಲ್ಪನೆಯ ‘ಅಹಿಂಸೆ’ ನಿಷೇಧಾತ್ಮಕವಾದ್ದಲ್ಲ, ಸಕರ್ಮಕವಾದ್ದು. ಗಿಡ ಪ್ರಾಣಿ ಕೀಟ ಸೇರಿದಂತೆ ಎಲ್ಲ ಜೀವಿಗಳ ಬಗ್ಗೆ ಪ್ರೇಮ ತಳೆಯಬೇಕೆಂಬುದೇ ಅಹಿಂಸೆಯ ತತ್ತ್ವ. ಈ ತತ್ತ್ವದ ಸಾರ್ವತ್ರಿಕತೆಯನ್ನು ಅಂಗೀಕರಿಸಿದಲ್ಲಿ ಒಬ್ಬ ವ್ಯಕ್ತಿ ತನ್ನ ಶತ್ರುವನ್ನೂ ಪ್ರೀತಿಸತಕ್ಕದ್ದೆಂದು ವಿಶ್ಲೇಷಿಸಿ ಹೇಳುವ ಆವಶ್ಯಕತೆಯಿಲ್ಲ. ಮಾನಸಿಕವಾಗಿಯೂ ಹಿಂಸಾಪ್ರವಣತೆಯಿಂದ ಮುಕ್ತವಾಗಿರುವ ಸ್ಥಿತಿಯೇ ಅಭಯ.
ಭಗವಂತನನ್ನು ಬಿಟ್ಟು ಬೇರಾವುದಕ್ಕೂ ಹೆದರದೆ ಇರುವವರಿಂದ ಮಾತ್ರ ಪೂರ್ಣ ಅಹಿಂಸೆಯ ಆಚರಣೆ ಸಾಧ್ಯ.
ಪಾಶವೀ ಪ್ರವೃತ್ತಿಯನ್ನು ಗಾಂಧಿಜೀ ಅಲ್ಲಗಳೆಯುವುದಿಲ್ಲ. ಆದರೆ ಮೂಲಸ್ವರೂಪದಲ್ಲಿ ಮನುಷ್ಯಸಮಾಜ ಉದಾತ್ತವೆಂದು ಅವರು ನಂಬಿದ್ದಾರೆ.
ಸ್ವಯಮನುಶಾಸನ, ನಮ್ರತೆಗಳು ಅತ್ಯಧಿಕ ಪ್ರಮಾಣದಲ್ಲಿ ಬೆರೆತಿರುವುದೇ ‘ಸ್ವಾತಂತ್ರ್ಯ’ದ ಉತ್ಕೃಷ್ಟರೂಪ – ಎಂದಿದ್ದಾರೆ ಅವರು.
ಅಭಯವೆಂದರೆ ಇನ್ನೊಬ್ಬರಿಗಿಂತ ನಾವು ಶಕ್ತಿವಂತರಾಗಿರುವುದರಿಂದ ಉಂಟಾಗುವ ಭಾವವಲ್ಲ. ಗಾಂಧಿಯವರ ಕಲ್ಪನೆಯಲ್ಲಿ ನೈತಿಕತೆಯ ಪ್ರಮುಖ ಲಾಂಛನವೇ ಅಭಯ.
ನಾವು ನಿಜವಾಗಿ ಭಯಪಡಬೇಕಾದದ್ದು ‘ನನ್ನಿಂದ ಪಾಪ ಸಂಭವಿಸೀತು’ ಎಂದು ಮಾತ್ರ.
ಈ ಭಯಕ್ಕೆ ಕಾರಣ ಧನ, ವಿದ್ಯೆ, ಪ್ರತಿಷ್ಠೆ ಮುಂತಾದವುಗಳಲ್ಲಿ ನಾವು ಬೆಳೆಸಿಕೊಳ್ಳುವ ಅತ್ಯಾಸಕ್ತಿ, ಅಭಿನಿವೇಶ. ಯಾರಿಗೆ ಧನ ಮೊದಲಾದ ಪರಿಕರಗಳ ಪೊಳ್ಳುತನ ಮನವರಿಕೆಯಾಗಿದೆಯೋ ಅವನು ನಿರ್ಭಯನಾಗಿರುತ್ತಾನೆ.
ಅತ್ಯಂತ ಶ್ರೀಮಂತರು, ಬಲಶಾಲಿಗಳೇ ಅತ್ಯಂತ ಭಯಗ್ರಸ್ತರು – ಎಂಬುದನ್ನು ಪ್ರತ್ಯಕ್ಷವಾಗಿ ಜಗತ್ತಿನಲ್ಲಿ ನೋಡಬಹುದು.
ಜಗತ್ತನ್ನೇ ತೃಣಸಮಾನವಾಗಿ ಪರಿಗಣಿಸುವ ವಿರಕ್ತ ನರಪೇತಲನಾಗಿರಬಹುದು, ನಿರ್ಗತಿಕನಾಗಿರಬಹುದು.
ಪೆÇೀಪ್ ಅವರು ಭಾರತಕ್ಕೆ ಬಂದಾಗ ಅವರೊಡನೆ ಸುಮಾರು ಒಂದು ನೂರು ಜನ ಅಂಗರಕ್ಷಕರಿದ್ದುದರ ಬಗ್ಗೆ ಸ್ವಾಮಿ ಚಿನ್ಮಯಾನಂದರು ನಕ್ಕು ಹೇಳಿದ್ದರು: “ಹಿಂದೂ ಸಂನ್ಯಾಸಿಯೊಬ್ಬ ಕಾವಿ ಧರಿಸಿ ಒಬ್ಬನೇ ಜಗತ್ತನ್ನೆಲ್ಲ ಸುತ್ತಬಲ್ಲ. ಚಿನ್ನದ ಕಿರೀಟವನ್ನೂ ವಜ್ರದ ಆಭರಣಗಳನ್ನೂ ತೊಟ್ಟವರಿಗೆ ಅಂಗರಕ್ಷಕ ಸಿಬ್ಬಂದಿಯೂ ಮೆಶಿನ್ಗನ್ನುಗಳೂ ಬೇಕಾಗುತ್ತವೆ.”
ಎಲ್ಲರೂ ಅಹಿಂಸಾತತ್ತ್ವವನ್ನು ಮಾನ್ಯ ಮಾಡಿದಲ್ಲಿ ಶೋಷಣೆಗೆ ಆಸ್ಪದವಿರುವುದಿಲ್ಲ.
ಔದ್ಯಮಿಕ ಪಾಶ್ಚಾತ್ಯ ನಾಗರಿಕತೆಯನ್ನು ಗಾಂಧಿಜೀ ಕಟುವಾಗಿ ಟೀಕಿಸಿದುದೂ ಅದು ಶೋಷಣೆಯನ್ನೊಳಗೊಂಡಿದೆಯೆಂಬ ಕಾರಣದಿಂದ.
ನಾವು ಕೊಚ್ಚಿಕೊಳ್ಳುವ ಅದ್ಭುತ ಅನ್ವೇಷಣೆಗಳಿಂದ ಮಾನವನ ನೈತಿಕತೆ ಒಂದು ಅಂಗುಲದಷ್ಟಾದರೂ ಹೆಚ್ಚಿದೆಯೆ? – ಎಂದು ಕೇಳುತ್ತಾರೆ, ಗಾಂಧಿಜೀ.
ಆತ್ಮದ ವಿಕಾಸಕ್ಕೇ ನಿಜವಾಗಿ ಪ್ರಗತಿ ಎಂಬ ಹೆಸರು ಸಲ್ಲುವುದು – ಎಂಬುದು ಗಾಂಧಿಯವರ ಖಚಿತ ನಿಲವು.
ಈ ಜೀವನಸಮನ್ವಯವನ್ನು ಇಪ್ಪತ್ತನೇ ಶತಮಾನದ ಪರಿಭಾಷೆಯಲ್ಲಿ ಪ್ರತಿಪಾದಿಸಿದುದು ಗಾಂಧಿಜೀಯವರ ಮಹತ್ತರವಾದ ಕೊಡುಗೆ.
ದೇಶವಿದೇಶಗಳಲ್ಲಿ ಅತ್ಯುನ್ನತರೆನಿಸಿರುವ ಚಿಂತಕರನೇಕರು ದಿಶಾದರ್ಶನಕ್ಕಾಗಿ ಗಾಂಧಿಜೀಯವರ ಜೀವನವನ್ನೂ, ವಾಙ್ಮಯವನ್ನೂ ಅಭ್ಯಾಸ ಮಾಡಿರುವುದು, ಅಭ್ಯಾಸ ಮಾಡುತ್ತಿರುವುದು ಇದೇ ಕಾರಣದಿಂದ.
(ಉತ್ಥಾನ, ಅಕ್ಟೋಬರ್ 1994)