೧೯೦೦ರ ಅಂತ್ಯದಲ್ಲಿ ಭಾರತಕ್ಕೆ ಹಿಂದಿರುಗಿದಾಗಿನಿಂದ ಸ್ವಾಮಿಜೀಯವರ ದೇಹಸ್ಥಿತಿ ಹದಗೆಡುತ್ತಲೇ ಸಾಗಿತ್ತು. ೧೯೦೨ರ ಜುಲೈ ೪ರಂದು ಅವರು ದೇಹತ್ಯಾಗ ಮಾಡಿದರು. ಕೈಯಲ್ಲಿ ಹಿಡಿದಿದ್ದ ಜಪಮಾಲೆಯನ್ನು ನಿಮೀಲಿತನೇತ್ರರಾಗಿ ತಿರುಗಿಸುತ್ತಿದ್ದ ಸ್ವಾಮಿಜೀಯವರ ಬೆರಳುಗಳು ರಾತ್ರಿ ೯ರ ಸುಮಾರಿಗೆ ಇದ್ದಕ್ಕಿದ್ದಂತೆ ತಟಸ್ಥವಾದವು. ಒಂದೆರಡು ಬಾರಿ ದೀರ್ಘಶ್ವಾಸವನ್ನೆಳೆಯುತ್ತಿದ್ದಂತೆ ದೃಷ್ಟಿಯು ಭ್ರೂಮಧ್ಯದಲ್ಲಿ ಏಕಾಗ್ರಗೊಂಡಿತು. ಸ್ವಾಮಿಜೀಯವರ ಜೀವವು ಮೂಲನೆಲೆಗೆ ಮರಳಿತ್ತು. ಸ್ವಾಮಿಜೀ ಮೊದಲೇ ನಿರ್ದೇಶಿಸಿದ್ದಂತೆ ಅಂತ್ಯಸಂಸ್ಕಾರ ನಡೆಯಿತು. ಮೊದಲು ಅಗ್ನಿಸ್ಪರ್ಶ ಮಾಡಿದವರು ನಿವೇದಿತಾ; ಅವರ ಹಿಂದುಗೂಡಿ ಇತರ ಸಂನ್ಯಾಸಿಗಳು. ತಮ್ಮ ಜೀವಿತದ ಮುಂದಿನ ಭಾಗದಲ್ಲಿ ತಮ್ಮ ಕರ್ತವ್ಯ ಏನೆಂಬ ಬಗೆಗೆ ನಿವೇದಿತಾರವರ ಮನಸ್ಸಿನಲ್ಲಿ ಗೊಂದಲವಿರಲಿಲ್ಲ; ಹಿಂದೆಯೇ ನಿರ್ಧಾರ ಮಾಡಿದುದಾಗಿತ್ತು: ಹಿಂದೂಸಮಾಜವನ್ನು ಪುನಶ್ಚೇತನಗೊಳಿಸುವ ಸ್ವಾಮಿಜೀ ಅಭಿಯಾನವನ್ನು ಮುಂದುವರಿಸುವುದು. ಈ ವೇಳೆಗೇ ನಿವೇದಿತಾರವರ ಚಿಂತನೆಯ ಮತ್ತು ಮಾತಿನ ಪ್ರಖರತೆ ಸರ್ಕಾರದ ಗಮನಕ್ಕೆ ಬಂದಿದ್ದಿತು. ಹೀಗಾಗಿ ಸರ್ಕಾರೀ ಗುಪ್ತಚರರು ನಿವೇದಿತಾರವರ ಚಲನವಲನಗಳನ್ನು ಗಮನಿಸುವುದು, ಅವರು ಬರೆದ ಮತ್ತು ಅವರಿಗೆ ಬಂದ ಪತ್ರಗಳನ್ನು ಗುಪ್ತವಾಗಿ ಒಡೆದು ಓದುವುದು – ಇವೆಲ್ಲ ನಡೆದಿದ್ದವು. ಆದರೆ ನಿವೇದಿತಾರವರ ಮನೋರಚನೆಯಲ್ಲಿ ಯಾವುದೇ ಭೀತಿಗೆ ಅವಕಾಶವೇ ಇರಲಿಲ್ಲ.
ಕಳಚಿದ ಕೊಂಡಿ
ಸ್ವಾಮಿಜೀಯವರ ಮಹಾಸಮಾಧಿಯಾದ ಮೇಲೆ ಮಠದ ಅಧ್ಯಕ್ಷರಾದವರು ಸ್ವಾಮಿ ಬ್ರಹ್ಮಾನಂದರು. ಅವರ ಮತ್ತು ಸಹವರ್ತಿಗಳ ಅಭಿಮತದಲ್ಲಿ ಮಠವು ಅಧ್ಯಾತ್ಮಪ್ರಸಾರ ಮತ್ತು ಸೇವಾಕಾರ್ಯಗಳನ್ನು ವಿಸ್ತರಿಸುತ್ತ ಹೋಗಬೇಕು ಎಂಬುದಾಗಿತ್ತು. ಈ ಪ್ರಣಾಳಿಗೆ ನಿವೇದಿತಾ ಹೊಂದಿಕೊಂಡು ಮುಂದುವರಿದಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಆದರೆ ನಿವೇದಿತಾರವರ ಭಿನ್ನದೃಷ್ಟಿಯು ಆಗಲೇ ಮಠದ ಜ್ಯೇಷ್ಠರಿಗೆ ಸ್ಪಷ್ಟವಾಗಿಯೇ ತಿಳಿದಿತ್ತು.
ವಿವಿಧ ವೇದಿಕೆಗಳಲ್ಲಿ ನಿವೇದಿತಾರವರು ನೀಡುತ್ತಿದ್ದ ಉಪನ್ಯಾಸಗಳ ಧ್ವನಿಯೂ ಧಾಟಿಯೂ ಮಠದ ಅಧ್ಯಕ್ಷರಾಗಿದ್ದ ಸ್ವಾಮಿ ಬ್ರಹ್ಮಾನಂದರಿಗೆ ಹಿತವೆನಿಸಲಿಲ್ಲ. ಅವರು ನಿವೇದಿತಾರಿಂದ ನಿರೀಕ್ಷಿಸಿದ್ದುದು ಅಧ್ಯಾತ್ಮಪ್ರಸಾರ ಕಾರ್ಯ ಮತ್ತು ಒಂದ? ಶಿಕ್ಷಣಾದಿ ಸೇವಾಕಾರ್ಯಗಳನ್ನು ಮಾತ್ರ. ಆದರೆ ಆಗಿನ ದೇಶದ ಸನ್ನಿವೇಶದಲ್ಲಿ ರಾಜಕೀಯದಿಂದ ಪೂರ್ಣ ವಿಮುಖರಾಗಿ ಉಳಿಯುವುದು ಸಾಧ್ಯವಾಗದೆಂಬ ವಾಸ್ತವವು ನಿವೇದಿತಾರವರ ಮನಸ್ಸಿನಲ್ಲಿ ದೃಢಗೊಂಡಿತ್ತು. ಅದನ್ನೇ ಅವರು ಸ್ವಾಮಿ ಬ್ರಹ್ಮಾನಂದರಿಗೆ ಅಸಂದಿಗ್ಧ ಮಾತುಗಳಲ್ಲಿ ಸ್ಪ?ಪಡಿಸಿದರು. ಅಂತಿಮವಾಗಿ ಅವರು ಸ್ವಾಮಿಗಳಿಗೆ ಹೇಳಿದುದು – “ನನ್ನ ದೃಷ್ಟಿಯಲ್ಲಿ ನನ್ನ ವೈಯಕ್ತಿಕ ಕಕ್ಷೆಯ ಕಾರ್ಯಗಳಿಗಿಂತ ಬಹುಪಾಲು ಹೆಚ್ಚು ಮಹತ್ತ್ವದ್ದು ಎಂದರೆ ದೇಶಕಾರ್ಯವೇ” ಎಂದು.
ಸ್ವಾಮಿ ಬ್ರಹ್ಮಾನಂದ ಮತ್ತು ಸ್ವಾಮಿ ಶಾರದಾನಂದರೊಡನೆ ನಿವೇದಿತಾರವರ ಚರ್ಚೆ ನಡೆದಾಗ ಮಠದ ವ್ಯವಸ್ಥೆಯಡಿಯಲ್ಲಿ ನಿವೇದಿತಾರವರ ಮುಂದುವರಿಕೆ ಸಾಧ್ಯವಾಗುವ ಸಂಭವ ಕಾಣಲಿಲ್ಲ. ಅಂತಿಮವಾಗಿ ಸ್ವಾಮಿ ಬ್ರಹ್ಮಾನಂದರು ಸೂಚಿಸಿದಂತೆ ನಿವೇದಿತಾರವರು ಮಠದ ವ್ಯವಸ್ಥೆಯಿಂದ ಹೊರಬಿದ್ದರು. ಸ್ವಾಮಿಜೀಯವರ ಮಹಾಸಮಾಧಿಯಾಗಿ ಆಗ್ಗೆ ಎರಡು ವಾರಗಳಷ್ಟೇ ಕಳೆದಿದ್ದವು.
ನಿವೇದಿತಾರವರ ’ರಾಜಕೀಯ’ ಚಟುವಟಿಕೆಗಳು ರಾಮಕೃಷ್ಣ ಮಠದ ಆಗಿನ ಪ್ರಮುಖರಿಗೆ ಇರುಸುಮುರುಸು ತಂದಿದ್ದುದು ಸಹಜ. ಅದು ಒಂದು ಸಂಸ್ಥೆಯಾಗಿ ರಾಮಕೃಷ್ಣ ಮಠದ ಆರಂಭಕಾಲವೆಂಬುದನ್ನು ನೆನಪಿಡಬೇಕು. ಆಗಿನ ಆದ್ಯತೆಯೆಂದರೆ ಸಾರ್ವಜನಿಕರ ಮತ್ತು ಸರ್ಕಾರದ ಸ್ವೀಕಾರ್ಯತೆಯನ್ನು (ಕನಿಷ್ಠ ಪಕ್ಷ ಅವಿರೋಧವನ್ನಾದರೂ) ಪಡೆದುಕೊಳ್ಳುವುದು – ಎಂದು ಮಠದ ಪ್ರಮುಖರಿಗೆ ಅನಿಸಿದ್ದರೆ ಅದು ಆಕ್ಷೇಪಣೀಯವೆನಿಸದು. ಹೀಗಾಗಿ ನಿವೇದಿತಾರವರು ನಡೆಸಿದ್ದಂತಹ ಜನ-ಸಂಘಟನೆ ಮೊದಲಾದ ಕಾರ್ಯಸರಣಿಗಳು ಮಠದ ಧೋರಣೆಗಳ ಅನುಸರಣೆ ಎಂಬ ಭಾವನೆ ಮೂಡದಿದ್ದರೆ ಮೇಲು ಎಂದು ಮಠದ ಆಗಿನ ಪ್ರಮುಖರಾದ ಸ್ವಾಮಿ ಬ್ರಹ್ಮಾನಂದರು ಸೂಚಿಸಿದ್ದರು. ಹಿಂದೆಯೂ ಒಂದೆರಡು ಬಾರಿ ಈ ಸೂಚನೆ ಬಂದಿತ್ತು. ಈಗಲಾದರೊ ನಿವೇದಿತಾರವರಿಗೆ ವಜ್ರಕವಚದಂತಿದ್ದ ಸ್ವಾಮಿಜೀಯವರೂ ಇರಲಿಲ್ಲ. ಹೀಗಾಗಿ ಮಠದ ಅಸ್ತಿತ್ವಕ್ಕೆ ತನ್ನಿಂದ ಧಕ್ಕೆಯೊದಗುವುದನ್ನು ತಾನು ಸುತರಾಂ ಇ?ಪಡುವುದಿಲ್ಲವೆಂದೂ ಅಲ್ಲಿಂದಾಚೆಗೆ (೧೮ ಜುಲೈ ೧೯೦೨) ತಾನು ಮಠವನ್ನು ಪ್ರತಿನಿಧಿಸುವುದಾಗಿ ಎಲ್ಲಿಯೂ ಹೇಳಿಕೊಳ್ಳುವುದಿಲ್ಲವೆಂದೂ ಸ್ವಾಮಿ ಬ್ರಹ್ಮಾನಂದರಿಗೆ ಅಧಿಕೃತ ಪತ್ರ ಬರೆದರು ನಿವೇದಿತಾ.
ಆಗಿನಿಂದಾಚೆಗೆ ನಿವೇದಿತಾರವರು ತಮ್ಮ ಪತ್ರವ್ಯವಹಾರಗಳಲ್ಲಿ ಮಠದ ಸಂಬಂಧವನ್ನು ಉಲ್ಲೇಖಿಸದೆ ’ರಾಮಕೃಷ್ಣರ ಭಕ್ತೆ ನಿವೇದಿತಾ’ ಎಂದಷ್ಟೇ ಬರೆಯುತ್ತಿದ್ದರು.
ಸ್ವಾಮಿಜೀಯವರ ಮಹಾಸಮಾಧಿಯಾದ ಎರಡೇ ವಾರಗಳೊಳಗೆ ಸ್ವಾಮಿಜೀಯವರ ಅತುಲನೀಯ ಅನುಯಾಯಿಯಾಗಿದ್ದ ನಿವೇದಿತಾರವರು ಮಠದಿಂದ ದೂರಸರಿಯಬೇಕಾಗಿ ಬಂದದ್ದನ್ನು ಒಂದು ವಿಧಿವೈಕಟ್ಯವೆನ್ನಬಹುದು.
ಪ್ರವಚನಪ್ರವಾಸ ಸರಣಿ
ತಾವು ಹಿಂದೆಯೇ ನಿರ್ಧರಿಸಿಕೊಂಡಿದ್ದಂತೆ ನಿವೇದಿತಾ ೧೯೦೨ರ ಸೆಪ್ಟೆಂಬರ್ ನಡುಭಾಗದಿಂದಾಚೆಗೆ ಕೊಲ್ಕತಾದಿಂದ ನಿ?ಮಿಸಿ ಪ್ರವಚನಪ್ರವಾಸ ಕೈಗೊಂಡರು. ಬರುಬರುತ್ತ ಅವರ ಕಾರ್ಯಕ್ರಮಗಳು ಹೆಚ್ಚುಹೆಚ್ಚು ಜನರನ್ನು ಆಕರ್ಷಿಸತೊಡಗಿದವು. ಮುಂಬಯಿ, ನಾಗಪುರ, ಬಡೌದೆ ಮೊದಲಾದೆಡೆ ನಡೆದ ನಿವೇದಿತಾ ಪ್ರವಚನಸರಣಿಯದು ಒಂದು ಘೋಷಯಾತ್ರೆಯೆ ಆಯಿತು.
೧೯೦೨ರ ಉತ್ತರಾರ್ಧದಲ್ಲಿ, ಎಂದರೆ ಸ್ವಾಮಿಜೀಯವರ ಮಹಾಸಮಾಧಿಯ ಅನಂತರದ ದಿನಗಳಲ್ಲಿ ನಿವೇದಿತಾ ಹಲವಾರೆಡೆ ನೀಡಿದ ಉಪನ್ಯಾಸಗಳಲ್ಲಿ ಒತ್ತಿಹೇಳುತ್ತಿದ್ದ ಸಂಗತಿಗಳು – ಭಾರತದ ಮೂಲಭೂತ ಐಕ್ಯ ಮತ್ತು ಅಖಂಡತೆ; ರಾ?ದ ಪುನರುತ್ಥಾನ ಸಾಧ್ಯವಾಗುವುದು ಧರ್ಮಜಾಗೃತಿಯ ಮೂಲಕ ಮತ್ತು ಶಕ್ತ್ಯಾರಾಧನೆಯ ಮೂಲಕ ಎಂಬುದು; ಮಹಿಳೆಯರ ಸರ್ವಾಂಗೀಣ ಏಳ್ಗೆ ಆಗಬೇಕಾದುದರ ಅನಿವಾರ್ಯತೆ; – ಮೊದಲಾದವು.
೧೯೦೨ರ ಅಂತ್ಯದ ಮತ್ತು ೧೯೦೩ರ ಆರಂಭದ ನಿವೇದಿತಾರವರ ದಕ್ಷಿಣಭಾರತ ಪ್ರವಾಸವನ್ನು ದಿಗ್ವಿಜಯವೆಂದೇ ಕರೆಯಬಹುದು. ಅವರ ಉಪನ್ಯಾಸಗಳಿಗೆ ಎಲ್ಲೆಡೆ ಅಭೂತಪೂರ್ವ ಜನಸ್ಪಂದನ ದೊರೆಯಿತು.
ಹೀಗೆ ಸ್ವಾಮಿಜೀಯವರ ಮಹಾಸಮಾಧಿಯಾದ ವ?ರ್ಧದಲ್ಲಿಯೆ ಸ್ವಾಮಿಜೀ ಜೀವಿತಾಶಯವನ್ನು ಮುನ್ನಡೆಸುವ ಗಣನೀಯ ಹೆಜ್ಜೆಗಳನ್ನು ನಿವೇದಿತಾ ಇರಿಸಿದ್ದರು.
ಅರವಿಂದರ ಭೇಟಿ
ನಿವೇದಿತಾರವರ ಬಡೌದೆಯ ವಾಸ್ತವ್ಯದಿಂದಾದ ಒಂದು ಲಾಭವೆಂದರೆ ಅರವಿಂದರ ಭೇಟಿ. ಇಬ್ಬರೂ ಪರಸ್ಪರರ ಬಗೆಗೆ ಕೇಳಿದ್ದರಾದರೂ ವೈಯಕ್ತಿಕ ಭೇಟಿಯ ಸಂದರ್ಭ ಒದಗಿದುದು ಈಗಲೇ. ಆ ದಿನಗಳಲ್ಲಿ ಅರವಿಂದರ ಮನಸ್ಸು ಡೋಲಾಯಮಾನ ಸ್ಥಿತಿಯಲ್ಲಿ ಇದ್ದಿತು. ತಮ್ಮ ಜೀವನದ ಅಂತಿಮ ಲಕ್ಷ್ಯವೇನೆಂಬುದು ಸ್ಪ?ವಾಗಿದ್ದಿತಾದರೂ ನಡುವಿನ ಹಂತಗಳ ಬಗೆಗೆ ಅವರ ಮನಸ್ಸು ಹುಯ್ದಾಡುತ್ತಿದ್ದಿತು. ಅದಕ್ಕೆ ಮುಂಚೆಯೇ ಕ್ರಾಂತಿಕಾರಿ ಚಟುವಟಿಕೆಗಳಿಗೆ ಚಾಲನೆ ನೀಡುವ ಹಲವು ಪ್ರಯತ್ನಗಳನ್ನು ಅರವಿಂದರು ಮಾಡಿದ್ದರು. ಯತೀಂದ್ರನಾಥ ಬಂದೋಪಾಧ್ಯಾಯ ಎಂಬಾತನನ್ನೂ ಇನ್ನೂ ಒಬ್ಬಿಬ್ಬ ತರುಣರನ್ನೂ ಭೂಗತಕಾರ್ಯದ ಶಿಕ್ಷಣ ಪಡೆಯುವುದಕ್ಕಾಗಿ ಬಂಗಾಳಕ್ಕೆ ಅರವಿಂದರು ಕಳಿಸಿದ್ದರು.
ಆರಂಭದಲ್ಲಿ ಅಂದಿನ ಪರಿಸ್ಥಿತಿಯ ಬಗೆಗೂ ದಾರ್ಶನಿಕ ವಿ?ಯಗಳ ಬಗೆಗೂ ಇಬ್ಬರ ನಡುವೆ ಚರ್ಚೆಗಳು ನಡೆದವು. ಆದರೆ ಕ್ರಮೇಣ ಇಬ್ಬರ ಅಂತರಂಗಗಳೂ ಪ್ರಖರ ಶಕ್ತ್ಯುಪಾಸನೆಯ ದಿಕ್ಕಿನಲ್ಲಿ ಇದ್ದುದು ಇಬ್ಬರಿಗೂ ಮನವರಿಕೆಯಾಯಿತು. ನಿವೇದಿತಾರವರು ಆ ವೇಳೆಗೆ ತಮ್ಮ ಸಂಪರ್ಕಕ್ಕೆ ಬಂದಿದ್ದ ಭೂಗತ ಸಂಘಟನೆಗಳ ಬಗೆಗೆ ತಿಳಿಸಿ ಆ ಆಂದೋಲನಗಳಿಗೆ ಅರವಿಂದರಂತಹ ತೇಜೋವಂತರ ಆವಶ್ಯಕತೆ ಇದೆಯೆಂದು ತಿಳಿಸಿದರು. ಹೀಗೆ ಅರವಿಂದರ ಮನಸ್ಸಿನಲ್ಲಿ ಅಂಕುರಗೊಂಡಿದ್ದ ಶಕ್ತ್ಯುಪಾಸನೆಯ ಚಿಂತನಪ್ರಣಾಳಿಗೆ ದೋಹದ ದೊರೆತಂತೆ ಆಯಿತು. ಖಚಿತವಾದ ಯೋಜನೆಗಳು ಅವರ ಮನಸ್ಸಿನಲ್ಲಿ ಹರಳುಗಟ್ಟತೊಡಗಿದವು.
ಸಾಮ್ರಾಜ್ಯಶಾಹಿಗೆ ಪ್ರತಿರೋಧ
೧೯೦೩ರ ಆರಂಭದಲ್ಲಿ ದರ್ಪಿಷ್ಠ ಕರ್ಜನನು ದೆಹಲಿಯಲ್ಲಿ ಏರ್ಪಡಿಸಿದ ವಿಶೇಷ ದರ್ಬಾರು ಅರ್ಥಹೀನವೆಂದೂ ದುಂದುವೆಚ್ಚವೆಂದೂ ರವೀಂದ್ರನಾಥ ಠಾಕೂರರು ಮತ್ತಿತರರು ಪ್ರಖರವಾಗಿ ಟೀಕಿಸಿದಾಗ ಅದು ಹೆಚ್ಚುತ್ತಿರುವ ಜನಜಾಗೃತಿಯ ಸಂಕೇತವೆಂದು ಆನಂದಗೊಂಡವರು ನಿವೇದಿತಾ.
ಹಾಗೆ ವ್ಯಕ್ತಗೊಳ್ಳುತ್ತಿದ್ದ ಜನಾಭಿಮತದ ಮೊನಚನ್ನು ನೋಡುವಾಗ ಭಾರತವು ಅನತಿಕಾಲದಲ್ಲಿ ಸ್ವತಂತ್ರಗೊಳ್ಳುವ ಭರವಸೆ ತಮಗೆ ಕಾಣುತ್ತಿದೆ ಎಂದು ನಿವೇದಿತಾ ವ್ಯಾಖ್ಯೆ ಮಾಡಿದರು.
ನಿವೇದಿತಾರವರ ನಿರ್ಭೀತತೆ ಪದೇಪದೇ ಹೊಮ್ಮುತ್ತಿತ್ತು. ಒಂದು ಘಟನೆ ಉಲ್ಲೇಖನೀಯ.
ಕರ್ಜನನ ಅಧಿಕಾರಾವಧಿಯಲ್ಲಿ ೧೯೦೪ರಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಔಪಚಾರಿಕವಾಗಿಯೂ ಕೇಳದೆ ಭಾರತೀಯ ವಿಶ್ವವಿದ್ಯಾಲಯ ಕಾನೂನೊಂದನ್ನು ಜಾರಿಮಾಡಲಾಯಿತು. ಸರ್ಕಾರದ ಈ ಸ್ವಚ್ಛಂದತೆ ಜನರಲ್ಲಿ ಅಸಮಾಧಾನವನ್ನು ಉಂಟುಮಾಡಿದುದು ಸಹಜ. ಹತ್ತಾರು ಮಂದಿ ಜನಪ್ರಮುಖರು ವಿರೋಧವನ್ನು ವ್ಯಕ್ತಪಡಿಸಿದರು. ಹಾಗೆ ಪ್ರತಿಭಟಿಸಿದವರಲ್ಲಿ ರಾಸಬಿಹಾರಿ ಬೋಸ್ ಅವರೂ ಇದ್ದರು. ಅದರ ಬಗೆಗೆ ಬಂಗಾಳದ ಆಗಿನ ಲೆಫ್ಟಿನೆಂಟ್-ಗವರ್ನರ್ ಆಂಡ್ರೂ ಫ್ರೇಸರ್ ’ಇದೆಲ್ಲ ಪಡ್ಡೆ ಹುಡುಗರ ವಿರೋಧ’ ಎಂದು ವ್ಯಂಗ್ಯವಾಡಿದ – ‘A pushing lad’ ಎಂದೆಲ್ಲ ಉಪಹಾಸ ಮಾಡಿದ್ದ. ಅದಕ್ಕೆ ಪ್ರತಿಕ್ರಿಯೆಯಾಗಿ ಹೊಮ್ಮಿದ ರಾಸಬಿಹಾರಿ ಅವರ ಕಿರುಪುಸ್ತಿಕೆಯೊಂದನ್ನು ಪರಿಷ್ಕರಿಸುತ್ತ ನಿವೇದಿತಾರವರು ಫ್ರೇಸರನ ಅಪ್ರಬುದ್ಧ ಭಾಷೆಯನ್ನು ಲೇವಡಿ ಮಾಡಿ ’ಇಷ್ಟಾಗಿ ಈತ ಇಂಗ್ಲಿಷಿನವನೇನಲ್ಲವಲ್ಲ’ ಎಂಬ ವ್ಯಾಖ್ಯೆಯನ್ನು ಸೇರಿಸಿದ್ದರು. ಹಾಗೆ ಪರೋಕ್ಷವಾಗಿ ಫ್ರೇಸರನು ಸ್ಕಾಟ್ಲೆಂಡಿನವನೆಂಬ ಸಂಗತಿಗೆ ಗಮನ ಸೆಳೆದರು. (ಇಂಗ್ಲಿಷರ ನುಡಿಗಟ್ಟಿನಲ್ಲಿ ಸ್ಕಾಟಿಷ್ ಜನರೆಂಬ ಸಂಬೋಧನೆಯೆ ಪರಿಹಾಸಾತ್ಮಕ.)
ಸರ್ವಾಧಿಕಾರದ ಆಗಿನ ಸನ್ನಿವೇಶದಲ್ಲಿ ಬಂಗಾಳದ ಲೆಫ್ಟಿನೆಂಟ್-ಗವರ್ನರ್ನಂತಹವನನ್ನೇ ಯಾರಾದರೂ ಟೀಕಿಸುವುದು ಅಕಲ್ಪನೀಯವಾಗಿತ್ತು. ಆದರೆ ನಿವೇದಿತಾರವರ ಮೈಯ ಕಣಕಣದಲ್ಲಿ ಭಾರತಪ್ರೇಮ ಎಷ್ಟು ಮಡುಗಟ್ಟಿತ್ತೆಂದರೆ ಸರ್ಕಾರದ ಯಾವುದೇ ಜನವಿರೋಧಿ ಕ್ರಮಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ಸೂಚಿಸದೆ ಇರುತ್ತಿರಲಿಲ್ಲ.
ವಿಶ್ವವಿದ್ಯಾಲಯ ಆಯೋಗದ ನಡವಳಿಗಳನ್ನು ನೇರವಾಗಿಯೂ ಪರೋಕ್ಷವಾಗಿಯೂ ಟೀಕಿಸಿದ ನಿವೇದಿತಾರವರು ಶಿಕ್ಷಣದ ದಿಕ್ಕುದೆಸೆ ಕುರಿತು ನಿಶ್ಚಯಿಸಬೇಕಾದವರು ಜನತೆಯೇ – ಎಂಬ ಆವಾಹನೆಯನ್ನು ಇತ್ತರು.
ಗೋಖಲೆ ಸಂಗಡಿಕೆ
೧೯೦೩ರ ಬೇಸಗೆಯಲ್ಲಿ ಬಿಸಿಲಿನ ಧಗೆ, ಪ್ಲೇಗಿನ ಹಾವಳಿ – ಎರಡರಿಂದಲೂ ದೂರವಿರಲು ಹಲವಾರು ಜನಪ್ರಮುಖರು ತಂಪುಹವೆಯ ಡಾರ್ಜಿಲಿಂಗಿಗೆ ಹೋಗಲು ನಿಶ್ಚಯಿಸಿದರು. ಜಗದೀಶಚಂದ್ರಬೋಸ್ ಮೊದಲಾದವರು ಆ ತಂಡದಲ್ಲಿ ಇದ್ದರು. ಆ ಪ್ರವಾಸದ ಒಂದು ಸುಂದರ ಫಲಿತವೆಂದರೆ ನಿವೇದಿತಾರವರಿಗೆ ಆಗಿನ ಕಾಂಗ್ರೆಸ್ ಧುರೀಣ ಗೋಪಾಲಕೃಷ್ಣ ಗೋಖಲೆಯವರ ಪರಿಚಯ. ಇಬ್ಬರ ಚಿಂತನರೀತಿಗಳು ಬೇರೆಯವೇ ಎಂಬುದು ವಿದಿತವೇ ಇದ್ದಿತು. ಗೋಖಲೆಯವರು ಸೌಮ್ಯಮಾರ್ಗಿಗಳು; ನಿವೇದಿತಾ ತೀವ್ರಮಾರ್ಗಿಗಳು. ಆದರೆ ಅಸ್ಖಲಿತ ರಾಷ್ಟ್ರಪ್ರೇಮವು ಇಬ್ಬರನ್ನೂ ಗಾಢವಾಗಿ ಬೆಸೆದಿತ್ತು. ನಿವೇದಿತಾರಂತಹ ಪ್ರತಿಭಾಶಾಲಿಗಳು ಕಾಂಗ್ರೆಸ್ ಸಂಘಟನೆಯಲ್ಲಿ ಸೇರಬೇಕೆಂದು ಗೋಖಲೆಯವರು ಇಚ್ಛಿಸಿದುದು ಸಹಜವಾಗಿತ್ತು. ಆದರೆ ಆಗಿನ ಕಾಂಗ್ರೆಸ್ ವಾಡಿಕೆಯಲ್ಲಿ ಇದ್ದಂತಹ ಕೇವಲ ನಿರ್ಣಯಗಳ ಚಲಾವಣೆಯಲ್ಲಿ ತಮಗೆ ಆಸಕ್ತಿ ಇಲ್ಲವೆಂದು ನಿವೇದಿತಾ ಸ್ಪ?ಪಡಿಸಿದರು. ಆದರೂ ಸಜ್ಜನಿಕೆಯ ಮೂರ್ತಿಯಾದ ಗೋಖಲೆಯವರ ಆಪೇಕ್ಷೆಯಂತೆ ಕಾಂಗ್ರೆಸಿನ ಕಾಶಿ ಅಧಿವೇಶನಕ್ಕೆ ಆಮಂತ್ರಿತರಾಗಿ ನಿವೇದಿತಾ ಹೋಗಿ ಬಂದರು.
ಗೋಖಲೆ ಮತ್ತು ಸಂಗಡಿಗರಲ್ಲಿ ಹೆಚ್ಚು ತೀವ್ರ ಯೋಜನೆಗಳ ಬಗೆಗೆ ಇನ್ನೂ ಆಸಕ್ತಿ ಬೆಳೆಯದಿದ್ದುದರ ಬಗೆಗೆ ಗೋಖಲೆಯವರಿಗೆ ಬರೆದ ಪತ್ರವೊಂದರಲ್ಲಿ ನಿವೇದಿತಾರವರು ವೇದನೆ ವ್ಯಕ್ತಪಡಿಸಿದ್ದರು.
ಈ ಯಾವ ಧೃಗ್ಭೇದಗಳೂ ಅವರಿಬ್ಬರ ನಡುವಿನ ಗಾಢ ಆತ್ಮೀಯತೆಗೆ ಭಂಗ ತರಲಿಲ್ಲ.
ಹಿಂದೂಧರ್ಮ: ಹೊಸ ವಾಖ್ಯಾನ
ನಿವೇದಿತಾರವರ ಡಾರ್ಜಿಲಿಂಗ್ ವಾಸ್ತವ್ಯದಿಂದಾದ ಒಂದು ಲಾಭವೆಂದರೆ ಅವರು ಮೂರು ವ? ಹಿಂದೆ ಇಂಗ್ಲೆಂಡಿನಲ್ಲಿ ಬರೆಯಲು ಆರಂಭಿಸಿದ್ದ ’ಭಾರತೀಯ ಜೀವನದಲ್ಲಿನ ಅಂತಸ್ಸೂತ್ರ’ (The Web of Indian Life) ಗ್ರಂಥವನ್ನು ಪೂರ್ಣ ಮಾಡಿದುದು. ಆ ಗ್ರಂಥವಾದರೋ ನಿವೇದಿತಾರವರ ಒಂದು ಪ್ರಮುಖ ಬರಹವೆಂದು ಇಂದಿಗೂ ಗಣಿಸಲ್ಪಟ್ಟಿದೆ. ಹಿಂದೂ ಸಂಸ್ಕೃತಿಯ ಬಗೆಗೆ ಅತ್ಯಂತ ಆತ್ಮೀಯ ಗ್ರಹಿಕೆ ವ್ಯಕ್ತವಾಗಿರುವುದರ ಜೊತೆಗೆ ನಿವೇದಿತಾರವರ ಬದುಕಿಗೆ ನಿರ್ದೇಶಕವಾಗಿದ್ದ ಪ್ರೇರಣೆಗಳ ದಟ್ಟಣೆಯೂ ಅಲ್ಲಿ ವ್ಯಕ್ತಗೊಂಡಿದೆ.
ಸಂದರ್ಭ ಒದಗಿದಾಗಲೆಲ್ಲ ವಿದ್ಯಾರ್ಥಿಸಮುದಾಯಗಳನ್ನು ಉದ್ದೇಶಿಸಿ ನಿವೇದಿತಾ ಉಪನ್ಯಾಸಗಳನ್ನು ನೀಡುತ್ತಿದ್ದರು. ಅವರು ಆಗಿಂದಾಗ ಆವಾಹನೆ ನೀಡುತ್ತಿದ್ದುದು ವಿದ್ಯಾರ್ಥಿಗಳು ವ್ಯಾಸಂಗದ ಜೊತೆಜೊತೆಗೆ ಸಮಾಜಪುರುಷನ ಕರೆಗೂ ಸ್ಪಂದಿಸಬೇಕು – ಎಂಬುದು.
ಶಿಕ್ಷಣಪದ್ಧತಿಯನ್ನು ಕುರಿತ ಉಪನ್ಯಾಸಗಳಲ್ಲಿಯೂ ನಿವೇದಿತಾರವರು ಶಿಕ್ಷಣವು ರಾಷ್ಟ್ರೀಯತೆಗೆ ಅಭಿಮುಖವಾಗಿರಬೇಕೆಂಬುದನ್ನು ಮೇಲಿಂದ ಮೇಲೆ ಒತ್ತಿ ಹೇಳುತ್ತಿದ್ದರು.
೧೯೦೪ರ ಫೆಬ್ರುವರಿ ೨೬ರಂದು ಕೊಲ್ಕತಾದ ಪುರಭವನದಲ್ಲಿ ಬಿಪಿನ್ಚಂದ್ರ ಪಾಲ್ರವರ ಅಧ್ಯಕ್ಷತೆಯಲ್ಲಿ ’ಪ್ರಖರ ಹಿಂದೂಧರ್ಮ’ ಎಂಬ ವಿ?ಯವಾಗಿ ನಿವೇದಿತಾರವರು ಮಾಡಿದ ಉಪನ್ಯಾಸವು ಅತ್ಯಂತ ಪ್ರಭಾವಿಯಾಗಿದ್ದಿತು. ಧರ್ಮವನ್ನು ಕುರಿತ ಚಿಂತನೆಗೆ ಅದು ಹೊಸ ತಿರುವನ್ನು ನೀಡಿತೆನ್ನಬಹುದು.
ಅನ್ಯಾಕ್ರಮಣಗಳಿಗೆ ಶಕ್ತಿವಂತವಾದ ಪ್ರತಿಕ್ರಿಯೆಯನ್ನು ತೋರುವುದು ನೈಜಧರ್ಮದ ಕಕ್ಷೆಗೆ ಸೇರಿದುದೇ – ಎಂಬ ಸ್ಪಷ್ಟೀಕರಣವನ್ನು ಅದುವರೆಗೆ ಯಾರೂ ಇ? ಪರಿಣಾಮಕಾರಿಯಾಗಿ ವ್ಯಕ್ತಪಡಿಸಿರಲಿಲ್ಲ. ಈ ಸ್ಪಷ್ಟೀಕರಣವು ಹಿಂದೂಧರ್ಮದ ನವೋತ್ಥಾನಕ್ಕೆ ನಿವೇದಿತಾರವರ ವಿಶಿ? ಕೊಡುಗೆ ಎಂದು ಇಂದಿಗೂ ಸ್ಮರಿಸಲಾಗುತ್ತಿದೆ.
ನಿವೇದಿತಾರವರ ಉಜ್ಜ್ವಲ ಪ್ರತಿಪಾದನೆಯನ್ನು ಕೇಳಿ ಬಿಪಿನ್ಚಂದ್ರ ಪಾಲ್ ಅವರೇ ರೋಮಾಂಚಗೊಂಡರು. “ಹಿಂದೂಧರ್ಮ ಕುರಿತ ಇಂತಹ ವ್ಯಾಖ್ಯಾನದ ಆವಶ್ಯಕತೆ ಈಗ ತೀವ್ರವಾಗಿತ್ತು” ಎಂದು ಉದ್ಗರಿಸಿದರು. ನಿವೇದಿತಾರವರದು ವಿವೇಕಾನಂದರ ಚಿಂತನೆಯ ಹೆಚ್ಚು ಯುಗಾನುಕೂಲ ಸ್ಫುಟೀಕರಣ ಎಂಬುದು ನಿಸ್ಸಂದೇಹವಾಗಿತ್ತು.
೧೯೦೪ರ ವರ್ಷದುದ್ದಕ್ಕೂ ಹತ್ತಾರೆಡೆಗಳಲ್ಲಿ ವಿವಿಧ ವೇದಿಕೆಗಳಲ್ಲಿ ನಿವೇದಿತಾರವರ ಪ್ರಖರ ಭಾ?ಣಗಳು ಆದವು. ನಿವೇದಿತಾರವರ ತೂರ್ಯಧ್ವನಿಯ ಘೋ?ದಿಂದ ಪರೋಕ್ಷ ಪರಿಣಾಮಗಳೂ ಆದವು. ಅವರ ಚಿಂತನೆಯ ಜಾಡನ್ನೂ ನುಡಿಗಟ್ಟನ್ನೂ ರವೀಂದ್ರನಾಥ ಠಾಕೂರ್ ಮತ್ತು ಬಿಪಿನ್ಚಂದ್ರಪಾಲ್ ಸೇರಿದಂತೆ ಪ್ರಮುಖ ರಾಷ್ಟ್ರೀಯತಾವಾದಿಗಳೆಲ್ಲ ಬಳಸತೊಡಗಿದರು.
ಆಗಿನ ಸಾಮಾಜಿಕ ಸನ್ನಿವೇಶದಲ್ಲಿ ಹಿಂದೂಧರ್ಮಕ್ಕೆ ನಿವೇದಿತಾರಂತಹ ಸಮರ್ಥಕರ ಆವಶ್ಯಕತೆ ತೀವ್ರವಾಗಿದ್ದಿತೆಂದು ಎಲ್ಲರ ಭಾವನೆಯಾಗಿತ್ತು. ಸ್ವಯಂ ಶ್ರೀ ಶಾರದಾ ಮಾತೆಯವರೇ “ಈಕೆ ಹಿಂದಿನ ಜನ್ಮದಲ್ಲಿ ಹಿಂದುವೇ ಆಗಿದ್ದವರು. ನಮ್ಮ ಧರ್ಮದ ಹೆಚ್ಚಿನ ಪ್ರಸರಣಕ್ಕಾಗಿ ಈಗ ಜಗತ್ತಿನ ಬೇರೊಂದು ಭಾಗದಲ್ಲಿ ಜನಿಸಿದ್ದಾಳೆ” ಎನ್ನುತ್ತಿದ್ದರು. ನಿವೇದಿತಾರವರ ನಿಷ್ಠಯನ್ನೂ ದೃಢತೆಯನ್ನೂ ಶ್ರೀ ಮಾತೆಯವರು ಹೃದಯತುಂಬಿ ಪ್ರಶಂಸಿಸುತ್ತಿದ್ದರು.
ಚಟುವಟಿಕೆಯ ಪುಂಜ
ಅದೇ ದಿನಗಳಲ್ಲಿ ನಿವೇದಿತಾರವರ ಅಂತರಂಗವನ್ನು ಉಲ್ಲಾಸಗೊಳಿಸಿದ ಇನ್ನೊಂದು ಸನ್ನಿವೇಶವೆಂದರೆ ಸ್ವಾಮಿಜೀಯವರ ಪೂರ್ವಾಶ್ರಮದ ತಾಯಿ ಭುವನೇಶ್ವರೀದೇವಿಯ ಮತ್ತು ಸೋದರ ಭೂಪೇಂದ್ರನಾಥ ದತ್ತರ ನಿಕಟ ಪರಿಚಯ. ಭೂಪೆಂದ್ರನಾಥರಾದರೋ ಭೂಗತ ಕಾರ್ಯಕರ್ತರ ನಿರಂತರ ಒಡನಾಟದಲ್ಲಿದ್ದವರು. ಅವರ ಈ ದಿಶೆಯ ಚಟುವಟಿಕೆಗಳಿಗೆ ತಾಯಿಯವರು ಪ್ರೋತ್ಸಾಹ ನೀಡುತ್ತಿದ್ದುದು ಅವರನ್ನು ನಿವೇದಿತಾರವರಿಗೆ ಹೆಚ್ಚು ಆತ್ಮೀಯರನ್ನಾಗಿಸಿತು.
ಒಟ್ಟಿನ ಮೇಲೆ ಆ ದಿನಗಳು ನಿವೇದಿತಾರವರ ಪಾಲಿಗೆ ಸತತ ಚಟುವಟಿಕೆಗಳ ಪರ್ವವಾಗಿದ್ದವು. ಹೆಚ್ಚುಕಡಮೆ ಪ್ರತಿದಿನ ಎಲ್ಲಿಯೊ ಭಾಷಣ, ಯಾವುದೋ ಪತ್ರಿಕೆಗೆ ತುರ್ತು ಲೇಖನ, ಆಸಕ್ತರೊಡನೆ ಸತತ ಭೇಟಿಗಳು. ದೂರದ ಮದರಾಸು, ಮುಂಬಯಿ ಪ್ರಾಂತಗಳ ಅಗ್ರಿಮ ಪತ್ರಿಕೆಗಳಿಂದಲೂ ಲೇಖನಗಳಿಗಾಗಿ ಬೇಡಿಕೆಗಳು ಬರುತ್ತಿದ್ದವು.
ಈ ನಿರಂತರ ಚಟುವಟಿಕೆಗೆ ಇನ್ನೊಂದು ಮುಖವೂ ಇದ್ದಿತು. ಲೇಖನಗಳಿಗಾಗಿ ಬಂದ ಸಂಭಾವನೆಯಷ್ಟೂ ಶಾಲೆಗಾಗಿ ವಿನಿಯೋಗವಾಗುತ್ತಿತ್ತು.
ಮೊದಲಿಗೆ ಬಂಗಾಳಿ ಭಾಷೆಯಲ್ಲಿ ’ಪ್ರವಾಸಿ’ ಎಂಬ ಹೆಸರಿನ ಪ್ರತಿಷ್ಠಿತ ಪತ್ರಿಕೆಯನ್ನು ನಡೆಸುತ್ತಿದ್ದವರೂ ನಿವೇದಿತಾರಿಗೆ ಅತ್ಯಂತ ಆತ್ಮೀಯರೂ ಆಗಿದ್ದ ರಾಮಾನಂದ ಚಟ್ಟೋಪಾಧ್ಯಾಯರು ಇಂಗ್ಲಿಷಿನಲ್ಲಿಯೂ ’ಮಾಡರ್ನ್ ರೆವ್ಯೂ’ ನಿಯತಕಾಲಿಕವನ್ನು ಆರಂಭಿಸಿದುದು ನಿವೇದಿತಾರವರ ಸಲಹೆಯಂತೆಯೇ (೧೯೦೭). ಆರಂಭದ ಎರಡು ವರ್ಷ ಸತತವಾಗಿ ನಿವೇದಿತಾರವರು ’ಮಾಡರ್ನ್ ರೆವ್ಯೂ’ ಪತ್ರಿಕೆಗೆ ಲೇಖನಗಳನ್ನು ಬರೆದರು. ಅಲ್ಪಕಾಲದಲ್ಲಿ ಆ ಪತ್ರಿಕೆ ರಾಷ್ಟ್ರಮಟ್ಟದಲ್ಲಿಯೂ ಪ್ರತಿಷ್ಠ ಗಳಿಸಿಕೊಂಡಿತು.
(ಸಶೇಷ)