ಅರವಿಂದರು ೧೯೦೬ರಲ್ಲಿ ಆರಂಭಿಸಿದ ’ವಂದೇ ಮಾತರಂ’ ಇಂಗ್ಲಿಷ್ ನಿಯತಕಾಲಿಕಕ್ಕೆ ಲೇಖನಗಳನ್ನು ನೀಡಿ ಪತ್ರಿಕೆಯ ಪ್ರವರ್ತನೆಯಲ್ಲಿಯೂ ತೊಡಗಿಕೊಂಡು ಶ್ರಮಿಸಿದವರು ನಿವೇದಿತಾ. ಅದಕ್ಕೂ ಹಿಂದಿನಿಂದ ನಡೆಯುತ್ತಿದ್ದ ’ಯುಗಾಂತರ’ ಪತ್ರಿಕೆಯ ಬೆನ್ನೆಲುಬಾಗಿದ್ದವರೂ ನಿವೇದಿತಾರವರೇ.
೧೯೦೬ರ ಮಧ್ಯಭಾಗದಲ್ಲಿ ಇಡೀ ಬಂಗಾಳವನ್ನು ಆವರಿಸಿದ ತೀವ್ರಕ್ಷಾಮದ ಪರಿಹಾರಕಾರ್ಯದಲ್ಲಿ ನಿವೇದಿತಾ ತಮ್ಮ ಎಲ್ಲ ಅನುಯಾಯಿ ತಂಡದೊಡನೆ ತೊಡಗಿಕೊಂಡದ್ದು ಸಹಜವೇ ಆಗಿತ್ತು.
ದಿನಗಳು ಕಳೆದಂತೆ ನಿವೇದಿತಾರವರ ಪ್ರಖರ ರಾಷ್ಟ್ರಭಕ್ತಿಯೂ ಸೇವಾಮನೋಭಾವವೂ ನಿರಂತರ ಶ್ರಮಮಗ್ನತೆಯೂ ಗೋಪಾಲಕೃ? ಗೋಖಲೆಯವರ ಮತ್ತಿತರ ನಾಯಕರ ಅಭಿಮಾನಕ್ಕೂ ಗೌರವಕ್ಕೂ ಪಾತ್ರವಾಗಿದ್ದವು.
೧೯೦೫-೬ರ ದಿನಗಳಲ್ಲಿ ವಂಗವಿಭಜನೆಗೆ ಪ್ರತಿರೋಧವೂ ಸ್ವದೇಶೀ ಆಂದೋಲನದ ಪ್ರವರ್ತನೆಯೂ ಎಲ್ಲರ ಗಮನವನ್ನು ಆವರಿಸಿದ್ದವು. ಅದೇ ಸಮಯದಲ್ಲಿ ಕಾಂಗ್ರೆಸಿನೊಳಗಿನ ಸ್ವರಾಜ್ಯವಾದಿಗಳಿಗೂ ಸೌಮ್ಯವಾದಿಗಳಿಗೂ ನಡುವಣ ಬಿರುಕು ತಾರಸ್ಥಾಯಿಗೆ ಮುಟ್ಟಿತ್ತು. ಸ್ವರಾಜ್ಯಾಂದೋಲನವು ಹೆಚ್ಚು ಸಕ್ರಿಯವಾಗಬೇಕೆಂದು ನಿವೇದಿತಾ ತೀವ್ರ ಆಕಾಂಕ್ಷೆ ತಳೆದಿದ್ದವರಾದರೂ ದೇಶದ ಪ್ರಮುಖ ಸಂಘಟನೆಯಾಗಿದ್ದ ಕಾಂಗ್ರೆಸಿನೊಳಗಡೆ ಒಡಕು ಮೂಡಿದ್ದುದು ಅವರಿಗೆ ನೋವನ್ನು ತಂದಿತು.
ಇತಿಹಾಸದ ಕರೆ
ಕಾಂಗ್ರೆಸ್ ಸಂಘಟನೆಯಲ್ಲಿ ಮಂದಗಾಮಿಗಳಿಗೂ ರಾ?ವಾದಿಗಳಿಗೂ ನಡುವೆ ಭಿನ್ನತೆ ಬೆಳೆದಲ್ಲಿ ಅದು ಸ್ವಾತಂತ್ರ್ಯೋದ್ಯಮವನ್ನು ದುರ್ಬಲಗೊಳಿಸಬಹುದೆಂದು ನಿವೇದಿತಾ ಚಿಂತಿತರಾಗಿದ್ದರು. ಒಡಕನ್ನು ನಿವಾರಿಸುವ ಪ್ರಯತ್ನವನ್ನು ಅವರು ಮಾಡದಿರಲಿಲ್ಲ. ಆದರೆ ಈ ವಿಷಯದಲ್ಲಿ ಅರವಿಂದರ ವಿಶ್ಲೇಷಣೆಯೂ ಮುಂಗಾಣ್ಕೆಯೂ ಸ್ಪಷ್ಟವಾಗಿದ್ದವು. ಇರುಸುಮುರುಸುಗಳನ್ನು ಸಹಿಸಿಯಾದರೂ ಹೋರಾಟದಲ್ಲಿ ತೀಕ್ಷ್ಣತೆಯನ್ನು ತರಬೇಕಾದುದು ಇತಿಹಾಸದ ಕರೆಯಾಗಿದೆ – ಎಂಬುದು ಅವರ ದೃಷ್ಟಿಯಾಗಿತ್ತು. ಅವರ ಪರಾಮರ್ಶನೆಯು ಯುಕ್ತವೇ ಆಗಿದ್ದೀತೆಂದು ನಿವೇದಿತಾ ಅಂತಿಮವಾಗಿ ಒಪ್ಪಿದರು.
ವಂಗವಿಭಜನೆಯು ಎಷ್ಟು ವ್ಯಾಪಕ ಅಸಮಾಧಾನವನ್ನು ಜನತೆಯಲ್ಲಿ ನಿರ್ಮಿಸಿತ್ತೆಂದರೆ ಸೌಮ್ಯ ಸ್ವಭಾವದವರೆಂದು ಹೆಸರಾಗಿದ್ದ ಗೋಖಲೆಯವರೂ ಕರ್ಜನನ ಅತಾರ್ಕಿಕ ಕ್ರಮವನ್ನು ತೀಕ್ಷ್ಣಶಬ್ದಗಳಲ್ಲಿ ಟೀಕಿಸಿದರು.
ಸ್ಮರಿಸಬೇಕಾದ ಒಂದು ವಿವರವೆಂದರೆ ಕಾಶಿ ಕಾಂಗ್ರೆಸ್ ಅಧಿವೇಶನದ (ಡಿಸೆಂಬರ್ ೧೯೦೫) ಅಧ್ಯಕ್ಷರಾದ ಗೋಖಲೆಯವರು ಅಧಿವೇಶನದ ಅಂತ್ಯದಲ್ಲಿ ನಿವೇದಿತಾರವರಿಗೆ ಅವರು ಭಾರತದ ಅಭ್ಯುದಯಕ್ಕಾಗಿ ನಡೆಸಿದ್ದ ಪ್ರಯಾಸಗಳಿಗಾಗಿ ಗೌರವಾರ್ಪಣೆ ಮಾಡಿದುದು. ಗೋಖಲೆಯವರು ಆಗ್ಗೆ ಅಲ್ಪಕಾಲ ಹಿಂದೆ ಆರಂಭಿಸಿದ್ದ “ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ’ ಸಂಘಟನೆಯ ರೂಪರೇಖೆಗಳನ್ನು ಮೊತ್ತಮೊದಲಿಗೆ ಸವಿವರವಾಗಿ ಹೊರಗೆಡಹಿದುದು ನಿವೇದಿತಾರವರ ನಿವಾಸದಲ್ಲಿ ನಡೆದಿದ್ದ ಗೋಷ್ಠಿಯೊಂದರಲ್ಲಿ.
ಗೋಖಲೆಯವರ ಅಪೇಕ್ಷೆಯಂತೆ ನಿವೇದಿತಾರವರು ಕಾಶಿ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡದ್ದು ಮಾತ್ರವಲ್ಲದೆ ಕಾಂಗ್ರೆಸ್ ಹೆಚ್ಚು ಕ್ರಿಯಾಶೀಲವಾಗಬೇಕಾದ ಮಾರ್ಗಗಳನ್ನೂ ಪ್ರಮುಖರಿಗೆ ಆಗ್ರಹಪೂರ್ವಕ ಸೂಚಿಸಿದರು. ಅಧಿವೇಶನದ ವರದಿಯನ್ನೂ ತಾವೇ ಸಿದ್ಧಪಡಿಸಿ ಗುಪ್ತನಾಮದಲ್ಲಿ ಅದನ್ನು ’ಸ್ಟೇಟ್ಸ್ಮನ್’ ಪತ್ರಿಕೆಗೆ ಕಳಿಸಿದರು.
೧೯೦೭ರ ಜುಲೈ ೪ರಂದು ಸ್ವಾಮಿಜೀಯವರ ಪುಣ್ಯತಿಥಿಯ ನಿಮಿತ್ತ ನಿವೇದಿತಾ ತಮ್ಮ ಅನುಯಾಯಿಗಳು, ಹಲವರು ’ಕ್ರಾಂತಿಕಾರಿ’ಗಳು, ಸ್ವಾಮಿಜೀಯವರ ಪೂರ್ವಾಶ್ರಮದ ಸಹೋದರ ಭೂಪೇಂದ್ರನಾಥ ದತ್ತ ಮೊದಲಾದವರೊಡನೆ ಬೇಲೂರುಮಠದ ಸ್ವಾಮಿಜೀ ಸಮಾಧಿಯನ್ನು ಸಂದರ್ಶಿಸಿ ಶ್ರದ್ಧೆಯನ್ನು ಅರ್ಪಿಸಿದುದು ಒಂದು ಸ್ಮರಣೀಯ ಮತ್ತು ಅತ್ಯಂತ ಭಾವಪೂರ್ಣ ಸಂದರ್ಭ. ಸ್ವಾಮಿಜೀಯವರ ನೆನಪೂ ಅಲ್ಲಿ ನೆರೆದಿದ್ದವರ ಸದ್ಭಾವನೆಯೂ ನಿವೇದಿತಾರನ್ನು ಉದ್ವಿಗ್ನಗೊಳಿಸಿದುದು ಸಹಜ. ಮಾತುಗಳು ಹಿಂದಕ್ಕೆ ಸರಿದಿದ್ದವು. ಅಶ್ರುಧಾರೆಯೊಡನೆ ಅವರು ಭಾವತೀವ್ರತೆಯನ್ನು ತಡೆದುಕೊಳ್ಳಲಾಗದೆ ಪಕ್ಕಕ್ಕೆ ಸರಿದರು.
ಮುಂದುವರಿದ ದಮನಚಕ್ರ
‘ಯುಗಾಂತರ’ ಪತ್ರಿಕೆಯಲ್ಲಿ ’ರಾಜದ್ರೋಹ’ ಲೇಖನಗಳನ್ನು ಬರೆದಿದ್ದ ’ಅಪರಾಧ’ಕ್ಕಾಗಿ ಭೂಪೇಂದ್ರ ನಾಥ ದತ್ತರನ್ನು ಸರ್ಕಾರ ಬಂಧನಕ್ಕೆ ಒಳಪಡಿಸಿತು. ಜಾಮೀನು ನೀಡಿಕೆಗಾಗಿ ನ್ಯಾಯಾಲಯ ವಿಧಿಸಿದ ರೂ. ೨೦,೦೦೦ ಜಾಮೀನು ಹಣವನ್ನು ಕೂಡಲೇ ನ್ಯಾಯಾಲಯದಲ್ಲಿ ಸಲ್ಲಿಸಿ ಭೂಪೇಂದ್ರನಾಥರನ್ನು ಬಿಡುಗಡೆ ಮಾಡಿಸಿದವರು ನಿವೇದಿತಾ. ಈ ವರ್ತನೆಗಾಗಿ ನಿವೇದಿತಾರನ್ನೂ ’ರಾಜದ್ರೋಹಿ’ ಎಂದು ಹಲವು ಪ್ರಭುತ್ವಪರ ಇಂಗ್ಲಿಷ್ ಪತ್ರಿಕೆಗಳು ಟೀಕಿಸಿದವು.
ಕೆಲವೇ ದಿನಗಳಲ್ಲಿ ಮೊಕದ್ದಮೆಯ ವಿಚಾರಣೆ ನಡೆದು ಭೂಪೇಂದ್ರನಾಥ ದತ್ತರಿಗೆ ಒಂದುವರ್ಷ ಕಠಿಣ ಸೆರೆವಾಸವನ್ನು ನ್ಯಾಯಾಲಯ ವಿಧಿಸಿತು. ನಿವೇದಿತಾರಿಗೆ ಅದು ತೀವ್ರ ಮನೋವೇದನೆಯನ್ನು ತಂದಿತು.
ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದುದರಿಂದಾಗಿ – ಮತ್ತು ಆಗಿನ ಸನ್ನಿವೇಶದಲ್ಲಿ ದಮನಶೀಲ ಸರ್ಕಾರಕ್ಕೆ ಸ್ವಲ್ಪಕಾಲ ಕಾಣಿಸದಿರುವುದು ಮೇಲೆಂಬ ಹಿತೈಷಿಗಳ ಒತ್ತಾಯದಂತೆ – ೧೯೦೭ರ ನಡುಭಾಗದಲ್ಲಿ ನಿವೇದಿತಾ ಆರೋಗ್ಯಸುಧಾರಣೆಗಾಗಿ ಇಂಗ್ಲೆಂಡಿಗೆ ತೆರಳಿದರು. ಎರಡು ತಿಂಗಳು ಇಂಗ್ಲೆಂಡಿನಲ್ಲಿದ್ದು ಅನಂತರ ಕೆಲದಿನಗಳ ಮಟ್ಟಿಗೆ ಇತರ ಯೂರೋಪ್ ದೇಶಗಳಿಗೆ ಭೇಟಿ ನೀಡಿದರು.
ಇತ್ತ ಭಾರತದಲ್ಲಿ ಅದೇ ದಿನಗಳಲ್ಲಿ ಅರವಿಂದರ ವಿಚಾರಣೆ ಮತ್ತು ಖುಲಾಸೆ, ಬಿಪಿನ್ಚಂದ್ರ ಪಾಲ್ ಅವರಿಗೆ ಆರು ತಿಂಗಳ ಜೈಲುವಾಸ, ನ್ಯಾಯಾಲಯ ವಿಚಾರಣೆ ನಡೆಯುತ್ತಿದ್ದಾಗಲೇ ಬ್ರಹ್ಮಬಾಂಧವ ಉಪಾಧ್ಯಾಯರ ನಿಧನ ಮೊದಲಾದ ಘಟನೆಗಳು ನಡೆದಿದ್ದವು.
೧೯೦೮ರ ಆರಂಭದಲ್ಲಿ ನಿವೇದಿತಾರಿಗೆ ಲಂಡನ್ನಿಗೆ ಬಂದಿದ್ದ ರಷ್ಯಾದ ಕ್ರಾಂತಿಕಾರಿ ಕ್ರೊಪೋಟ್ಕಿನ್ ಭೇಟಿ ಆಯಿತು.
ಇಂಗ್ಲೆಂಡಿನ ವಾಸ್ತವ್ಯದ ಅವಧಿಯಲ್ಲಿ ಹಲವಾರೆಡೆ ಆಧ್ಯಾತ್ಮಿಕ-ಧಾರ್ಮಿಕ-ಸಾಮಾಜಿಕ ವಿ?ಯಗಳ ಬಗೆಗೆ ನಿವೇದಿತಾರವರ ಉಪನ್ಯಾಸಗಳು ಆದವು.
ಪರ್ವಕಾಲ
ಕಾರಣವು ಕರ್ಜನನ ದಮನಧೋರಣೆಯೇ ಇರಲಿ, ಸ್ವದೇಶೀ ಚಿಂತನೆಯ ಅನಿವಾರ್ಯತೆಯ ಮನವರಿಕೆ ಹರಡಿದುದೇ ಇರಲಿ – ವಿದೇಶೀ ಪ್ರಭುತ್ವಕ್ಕೆ ಜನತೆಯ ಪ್ರತಿಭಟನೆ ತೀಕ್ಷ್ಣಗೊಳ್ಳುತ್ತಿದ್ದುದು ನಿವೇದಿತಾರವರಿಗೆ ಸಂತಸ ತಂದಿತು. “ಕಾಳಿ ಮಾತೆ! ಇದೆಲ್ಲವೂ ನಿನ್ನ ಕೃಪೆಯಿಂದ ಆಗುತ್ತಿದೆ!” ಎಂದು ೧೯೦೭ರ ಡಿಸೆಂಬರ್ ೩೧ರ ತಮ್ಮ ದಿನಚರಿ ಟಿಪ್ಪಣಿಯಲ್ಲಿ ಉದ್ಗರಿಸಿದ್ದರು. ೧೯೦೮ರಲ್ಲಿ ನಡೆದ ಕಿಂಗ್ಸ್ಫರ್ಡ್ ಹತ್ಯಾಪ್ರಯತ್ನ, ಪ್ರಫುಲ್ಲ ಚಾಕಿ ಆತ್ಮಹತ್ಯೆ, ಮಾನಿಕ್ತೋಲಾದಲ್ಲಿ ಗುಪ್ತಚರ ಖಾತೆಯ ಶೋಧ, ಅರವಿಂದರೂ ಅವರ ಸೋದರ ಬಾರೀಂದ್ರರೂ ಸೇರಿದಂತೆ ೪೭ ಮಂದಿಯ ಬಂಧನ, ಜುಲೈ ತಿಂಗಳಲ್ಲಿ ಲೋಕಮಾನ್ಯ ತಿಲಕರಿಗೆ ಆರುವ?ಗಳ ಕಾರಾಗೃಹವಾಸದ ದಂಡನೆ, ಆಗಸ್ಟ್ ೧೧ರಂದು ಖುದಿರಾಮ್ ಬೋಸ್ಗೆ ನೇಣು ಶಿಕ್ಷೆ, ಅಶ್ವಿನಿಕುಮಾರ ದತ್ತ ಮೊದಲಾದ ೯ ಮಂದಿಯ ಗಡೀಪಾರು, ಅಕ್ಟೋಬರ್ ೧೬ರಂದು ಪೂರ್ವನಿಶ್ಚಿತವಿದ್ದಂತೆ ವಂಗವಿಭಜನೆ ಮತ್ತು ಉದ್ಗಮವಾದ ಪ್ರತಿಭಟನಾ ಸರಣಿ – ಇವನ್ನೆಲ್ಲ ನೆನೆಯುವಾಗ ೧೯೦೮ರ ವ?ವನ್ನು ಸ್ವಾತಂತ್ರ್ಯಸಂಘರ್ಷದ ಇತಿಹಾಸದಲ್ಲಿ ಒಂದು ’ವಾಟರ್ಶೆಡ್’ ಎಂದು ಪರಿಗಣಿಸುವುದು ಸೂಕ್ತ.
ಆ ಘಟನಾವಳಿಯ ಮುಂದುವರಿಕೆಯೆಂಬಂತೆ ೧೯೦೯ರ ಜುಲೈ ೧ರಂದು ಲಂಡನ್ನಿನಲ್ಲಿ ಮದನ್ಲಾಲ್ ಧೀಂಗ್ರಾನಿಂದ ಕರ್ಜನ್ ವೈಲಿಯ ಹತ್ಯೆ ನಡೆದುದು ಸುವಿದಿತ.
೧೯೦೯ರ ಜುಲೈ ೧೬ರಂದು ನಿವೇದಿತಾ ಮುಂಬಯಿ ತಲಪಿದರು. ಆ ವೇಳೆಗೆ ಸರ್ಕಾರದ ದಮನಚಕ್ರ ಇನ್ನ? ತೀಕ್ಷ್ಣಗೊಂಡಿತ್ತು. ಆ ಸನ್ನಿವೇಶದಲ್ಲಿ ತಿಲಕ್ ಮೊದಲಾದವರು ಬಂಧನದಲ್ಲಿ ಇದ್ದುದರಿಂದ ಹತಾಶ ಜನತೆಯ ಮನಸ್ಸಿನಲ್ಲಿ ಉತ್ಸಾಹ ತುಂಬಬಲ್ಲ ನಾಯಕರ ಕೊರತೆ ಇದ್ದಿತು. ಈ ಕೊರತೆಯನ್ನು ತಮ್ಮದೇ ಆದ ಭಿನ್ನರೀತಿಗಳಲ್ಲಿ ತುಂಬಿದವರು ನಿವೇದಿತಾ ಮತ್ತು ಅರವಿಂದರು.
ರಾಷ್ಟ್ರೀಯತೆ: ಅರವಿಂದರ ಸ್ಫುಟೀಕರಣ
ಜೈಲುವಾಸದಲ್ಲಿ ಅರವಿಂದರಿಗೆ ವಿವೇಕಾನಂದರ ಆತ್ಮಿಕ ದರ್ಶನದಿಂದ ಲಭಿಸಿದ ಚಿಂತನಸ್ಪಷ್ಟತೆಯ ಫಲವಾಗಿ ಅವರು ವಿವೇಕಾನಂದಪ್ರಣೀತ ಹಿಂದೂಧರ್ಮ ನಿರ್ವಚನದ ವಾರ್ತಿಕಕಾರರಾಗು ವಂತಾಯಿತು. ಜೈಲಿನಿಂದ ಮುಕ್ತಗೊಂಡ ಮೇಲೆ ಕೊಲ್ಕತಾದ ಉತ್ತರಪಾಡಾ ಬಡಾವಣೆಯ ಧರ್ಮಸಂರಕ್ಷಕ ಸಮಾಜವು ಏರ್ಪಡಿಸಿದ ಅಭಿನಂದನ ಸಮಾರಂಭದಲ್ಲಿ (ಮೇ ೩೦, ೧೯೦೯) ಅವರು ಮಾಡಿದ ಭಾಷಣ ಇತಿಹಾಸಾರ್ಹವೆನಿಸಿದೆ. ಅದುವರೆಗೆ ಚಿಂತಕರು ತಡಕಾಡುತ್ತಿದ್ದ ಪ್ರಶ್ನೆಗಳಿಗೆ ಅವರ ಉತ್ತರಪಾಡಾ ಭಾಷಣ ನಿರ್ಣಾಯಕ ಪರಿಹಾರವನ್ನು ನೀಡಿತು. ಸನಾತನ ಹಿಂದೂಧರ್ಮವೇ ಭಾರತದ ನೈಜರಾಷ್ಟ್ರೀಯತೆ – ಎಂಬ ಅರವಿಂದರ ಸ್ಫುಟೀಕರಣವು ಲೋಕಮಾನ್ಯ ತಿಲಕರ ಮತ್ತು ವಿವೇಕಾನಂದರ ಚಿಂತನೆಯ ಮೇಲಣ ವ್ಯಾಖ್ಯಾನವೇ ಆಗಿತ್ತು. ಅರವಿಂದರು ಅದನ್ನು ವಿನೂತನವಾಗಿ ಸ್ಫೋಟಗೊಳಿಸಿದುದು ಆಗಿನ ಎಂದರೆ ೨ಂನೇ ಶತಮಾನದ ಆರಂಭಕಾಲದ ಸಾಂದರ್ಭಿಕತೆಯಿಂದಾಗಿ ಮಹತ್ತ್ವ ಪಡೆಯಿತು. ಹಿಂದೂರಾಷ್ಟ್ರದ ಉದ್ಗಮವು ಸನಾತನಧರ್ಮದ ಆವಿಷ್ಕರಣದೊಡಗೂಡಿಯೇ ಆಯಿತೆಂಬ, ಅದು ಸನಾತನಧರ್ಮದೊಡಗೂಡಿಯೇ ಸಾಗಿ ಬಂದಿದೆಯೆಂಬ, ಅದು ಸಾಂಪ್ರತಕಾಲದಲ್ಲಿ ದೃಢಗೊಂಡು ಭವ್ಯತೆಯೆಡೆಗೆ ಮುನ್ನಡೆಯಬಹುದಾದುದು ಸನಾತನಧರ್ಮದ ಅಧಿ?ನದ ಮೇಲೆಯೇ ಎಂಬ ಅರವಿಂದರ ಉದ್ಘೋಷವು ಋಷಿವಾಕ್ಯಸದೃಶವೆನಿಸಿತು.
ಅಲ್ಪಕಾಲದ ತರುವಾಯ ಅರವಿಂದರು ಹೊರತಂದ ’ಕರ್ಮಯೋಗಿನ್’ ಪತ್ರಿಕೆಯ ಮುಖಶೀರ್ಷಿಕೆಯ ಅಡಿಯಲ್ಲಿ ಮುದ್ರಿತವಾಗುತ್ತಿದ್ದ ಧ್ಯೇಯವಾಕ್ಯ ’ತಸ್ಮಾದ್ ಯೋಗಾಯ ಯುಜ್ಯಸ್ವ’ ಎಂಬ ಗೀತೆಯ ಉಕ್ತಿ.
ಆ ದಿನಗಳಲ್ಲಿ ಅರವಿಂದರನ್ನು ಭೇಟಿ ಮಾಡಿದ ನಿವೇದಿತಾರವರಿಗೆ ಅವರ ಮುಖಭಾವದಲ್ಲಿಯೂ ಮಾತಿನಲ್ಲಿಯೂ ಹೊಸದೊಂದು ಅಲೌಕಿಕ ಕಾಂತಿಯೂ ಓಜಸ್ಸೂ ಕಂಡಿತು.
೧೯೦೯ರಲ್ಲಿ ನಿವೇದಿತಾರವರ ಮತ್ತು ಅರವಿಂದರ ಸಮಯವೂ ಶಕ್ತಿಯೂ ರಾಷ್ಟ್ರವಾದಿ ಕಾರ್ಯಕರ್ತರನ್ನು ಪ್ರೋತ್ಸಾಹಿಸುವುದರಲ್ಲಿಯೂ ಹಿಂದೂ-ಮುಸ್ಲಿಂ ವಿಭಜನೆಗೆ ಪೋಷಣೆ ನೀಡಹೊರಟಿದ್ದ ಮಾರ್ಲೆ- ಮಿಂಟೋ ’ಸುಧಾರಣೆ’ಗಳಿಗೆ ಪ್ರತಿಭಟನೆಯನ್ನು ರೂಪಿಸುವುದರಲ್ಲಿಯೂ ವ್ಯಯವಾಯಿತು.
ಸುಧಾರಣೆಗಳ ವಿಷಯದಲ್ಲಿ ಕಾಂಗ್ರೆಸಿನ ಅಧಿಕಮಂದಿಯ ಮನಸ್ಸುಗಳಲ್ಲಿ ಡೋಲಾಯಮಾನ ಸ್ಥಿತಿ ಇದ್ದಿತು. ರಾಷ್ಟ್ರದ ಏಕತೆಯ ಪರವಾಗಿ ದೃಢವಾಗಿ ಮಾತನಾಡಿದವರು ಸುರೇಂದ್ರನಾಥ ಬ್ಯಾನರ್ಜಿ ಮತ್ತು ಅಂತಹ ಒಬ್ಬಿಬ್ಬರು ಮಾತ್ರ.
ಅರವಿಂದರ ಸ್ಥಾನಾಂತರ
ಅರವಿಂದರನ್ನು ನಿರ್ದೋಷಿ ಎಂದು ನ್ಯಾಯಾಲಯ ಬಿಡುಗಡೆ ಮಾಡಿದ ಮೇಲೆಯೂ ಭೂಗತ ಕ್ರಾಂತಿಕಾರಿಗಳ ಪ್ರಭುತ್ವವಿರೋಧಿ ಚಟುವಟಿಕೆಗಳು ಮುಂದುವರಿದಿದ್ದುದನ್ನು ಗಮನಿಸಿ ಸರ್ಕಾರವು ಅರವಿಂದರ ’ವಿದ್ರೋಹಿ’ ಅಭಿಯಾನ ಇನ್ನೂ ನಡೆದಿರಬಹುದೆ ಎಂದು ಶಂಕಿಸಿತು. ಪರಿಣಾಮವಾಗಿ ಅರವಿಂದರನ್ನು ಮತ್ತೆ ಬಂಧಿಸಿ ಗಡೀಪಾರು ಮಾಡಬೇಕೆಂಬ ದಿಕ್ಕಿನಲ್ಲಿ ಸರ್ಕಾರ ಯೋಚಿಸತೊಡಗಿತು. ನಿವೇದಿತಾರವರ ಮಾಹಿತಿಸಂಗ್ರಹಣ ಚಾಣಾಕ್ಷತೆ ಎ? ದೂರಗಾಮಿಯಾಗಿದ್ದಿತೆಂದರೆ ಸರ್ಕಾರದ ಅತ್ಯುನ್ನತ ಅಧಿಕಾರಿವಲಯಗಳಲ್ಲಿ ನಡೆದಿದ್ದ ಯೋಚನೆಗಳೂ ಅವರಿಗೆ ಮುಟ್ಟುತ್ತಿದ್ದವು. ಹಾಗೆ ಎರಡುಮೂರು ಬಾರಿ ಸರ್ಕಾರವು ’ಮಾಡರ್ನ್ ರೆವ್ಯೂ’ ಸಂಪಾದಕ ರಾಮಾನಂದ ಚಟರ್ಜಿಯವರ ನಿವಾಸದ ಮೇಲೆ ದಾಳಿ ಮಾಡಲು ಯೋಜಿಸುತ್ತಿದ್ದುದನ್ನು ಮುಂಚಿತವಾಗಿ ಚಟರ್ಜಿಯವರಿಗೆ ತಿಳಿಸಿ ಅವರ ನಿವಾಸದಲ್ಲಿ ಪೊಲೀಸರಿಗೆ ಬೇಕಾಗುವಂತಹ ಯಾವ ಸಾಮಗ್ರಿಯೂ ಲಭಿಸದಂತೆ ನಿವೇದಿತಾ ನೋಡಿಕೊಂಡಿದ್ದರು.
ಅರವಿಂದರನ್ನು ಬಂಧಿಸುವ ಸರ್ಕಾರದ ಇಂಗಿತವನ್ನು ಗ್ರಹಿಸಿದ ನಿವೇದಿತಾರವರು ಅರವಿಂದರಲ್ಲಿಗೆ ಹೋಗಿ ಅವರು ಕೆಲಕಾಲದ ಮಟ್ಟಿಗಾದರೂ ಬ್ರಿಟಿ? ಇಂಡಿಯಾದ ಗಡಿಯಾಚೆ ಎಲ್ಲಿಯಾದರೂ ವಾಸ್ತವ್ಯವಿರುವುದು ಮೇಲೆಂದು ಆಗ್ರಹಪೂರ್ವಕ ಸಲಹೆ ಮಾಡಿದರು.
ಸರ್ಕಾರದ ಆಲೋಚನೆಗೆ ಅರವಿಂದರು ತಮ್ಮದೇ ಪ್ರತ್ಯಸ್ತ್ರ ಹೂಡಿದರು: ’ಕರ್ಮಯೋಗಿನ್’ ಪತ್ರಿಕೆಯಲ್ಲಿ ತಮ್ಮ ಅಂತಿಮ ’ಮೃತ್ಯುಪತ್ರ’ ಎಂಬ ಬರಹವನ್ನು ಪ್ರಕಟಿಸಿದರು!
ಆಗಿನ ಸನ್ನಿವೇಶದಲ್ಲಿ ಬಂಧನದಲ್ಲಿ ಕೊಳೆಯುವುದರಲ್ಲಿ ಅರ್ಥವಿಲ್ಲವೆಂದು ಯೋಚಿಸಿ ಸ್ಥಾನಾಂತರ ಗೊಳ್ಳಲು ಅರವಿಂದರು ನಿರ್ಧರಿಸಿದರು. ೧೯೧೦ರ ಫೆಬ್ರುವರಿ ನಡುಭಾಗದಲ್ಲಿ ಕೊಲ್ಕತಾದಿಂದ ಇದ್ದಕ್ಕಿದ್ದಂತೆ ಮರೆಯಾದರು.
ಅರವಿಂದರು ಕಾಣೆಯಾಗಿಲ್ಲವೆಂದೂ ಏಕಾಂತದಲ್ಲಿ ಇರುವರೆಂದೂ ಸುದ್ದಿಯನ್ನು ನಿವೇದಿತಾ ’ಕರ್ಮಯೋಗಿನ್’ ಪತ್ರಿಕೆಯ ಮರುಸಂಚಿಕೆಯಲ್ಲಿ ಪ್ರಕಟಿಸಿದರು.
ಕೊಲ್ಕತಾದಿಂದ ಹೊರಬಿದ್ದ ಅರವಿಂದರು ಮೊದಲು ಕೂಚುಹೂಡಿದ್ದು ಚಂದ್ರನಗರದಲ್ಲಿ. ಆ ಸಮಯದಲ್ಲಿಯೂ ಅರವಿಂದರು ಕೊಲ್ಕತಾದಲ್ಲಿಯೇ ಇರುವ ರೀತಿಯಲ್ಲಿಯೇ ಸರ್ಕಾರದೊಡನೆ ಪತ್ರವ್ಯವಹಾರ ನಡೆದಿತ್ತು.
ಸಾಧಕಬಾಧಕಗಳನ್ನು ವಿಮರ್ಶಿಸಿದ ಮೇಲೆ ಅರವಿಂದರು ನಿಶ್ಚಯಿಸಿದುದು ಫ್ರೆಂಚರ ಆಳ್ವಿಕೆಯಲ್ಲಿದ್ದ ಪುದುಚೇರಿಗೆ ಹೋಗಬೇಕೆಂದು. ಅವರು ಪುದುಚೇರಿ ತಲಪಿದುದು ೧೯೧೦ರ ಏಪ್ರಿಲ್ ೪ರಂದು. ಅಲ್ಲಿಂದಾಚೆಗೆ ಅರವಿಂದರು ಅಂತರ್ಮುಖಿಗಳಾದುದರ ಮತ್ತು ಅವರ ಸಾಧನೆಯ ವಿವರಗಳು ಸುವಿದಿತ.
(ಸಶೇಷ)