ದಿವ್ಯಸ್ಮರಣೆ – 750ನೇ ಜನ್ಮವರ್ಷಾಚರಣೆಯ ಪರ್ವದ ನಮನ
ಶ್ರೀವೈಷ್ಣವ ದೇವಾಲಯಗಳಲ್ಲಿ ತಮಿಳು ಪ್ರಬಂಧಗಳನ್ನೂ ಸ್ತೋತ್ರಗಳನ್ನೂ ಹೇಳುವುದಕ್ಕೆ ಮೊದಲು ಕೆಳಗಿನ ಸ್ತುತಿಯನ್ನು ಹೇಳುವ ಸಂಪ್ರದಾಯವಿದೆ:
ರಾಮಾನುಜದಯಾಪಾತ್ರಂ
ಜ್ಞಾನವೈರಾಗ್ಯಭೂಷಣಮ್ |
ಶ್ರೀಮದ್ವೇಂಕಟನಾಥಾಯ
ವಂದೇ ವೇದಾಂತದೇಶಿಕಮ್ ||
ಶ್ರೀ ವೇದಾಂತದೇಶಿಕರನ್ನು ಹೀಗೆ ಸ್ತುತಿಸಿರುವವರು ಶ್ರೀಪರಕಾಲಮಠದ ಬ್ರಹ್ಮತಂತ್ರಸ್ವತಂತ್ರ ಜೀಯರ್ ಮಹಾಸ್ವಾಮಿಗಳು.
ಶ್ರೀರಂಗ, ಚೆನ್ನೈ ಮೊದಲಾದೆಡೆ ಶ್ರೀ ವೇದಾಂತದೇಶಿಕರದೇ ದೇವಾಲಯಗಳಿದ್ದು ಯಾತ್ರಾಸ್ಥಳಗಳಾಗಿವೆ.
ಭಗವದ್ರಾಮಾನುಜರಿಂದ ಪ್ರತಿಪಾದಿತವಾದ ವಿಶಿಷ್ಟಾದ್ವೈತ ವೇದಾಂತಪ್ರಸ್ಥಾನವನ್ನು ದೃಢಗೊಳಿಸಿ ಹೆಮ್ಮರವಾಗಿ ಬೆಳೆಸಿದವರು ಶ್ರೀ ವೇದಾಂತದೇಶಿಕರು. ಅದರಷ್ಟೆ ಮನನೀಯ ಸಂಗತಿಯೆಂದರೆ ಕವಿಯಾಗಿಯೂ ಅವರು ಉತ್ತುಂಗತೆಗೇರಿದವರು.
ಸಂಸ್ಕೃತ ಸಾಹಿತ್ಯೇತಿಹಾಸದಲ್ಲಿ ಒಂದುಕಡೆ ಶಾಸ್ತ್ರಸಾಹಿತ್ಯ, ಇನ್ನೊಂದುಕಡೆ ಕಾವ್ಯರಚನೆ – ಈ ಎರಡೂ ಕ್ಷೇತ್ರಗಳಲ್ಲಿ ಸಮಾನ ಪ್ರತಿಭೆಯನ್ನು ಮೆರೆದು ಸವ್ಯಸಾಚಿಗಳೆನಿಸಿದ ಹಲವರು ಧೀಮಂತರನ್ನು ಕಾಣುತ್ತೇವೆ. ಮೊದಲಿಗೇ ನೆನಪಾಗುವ ಹೆಸರುಗಳು ಕ್ಷೇಮೇಂದ್ರ, ಭೋಜ, ಶ್ರೀಹರ್ಷ, ಅಪ್ಪಯ್ಯದೀಕ್ಷಿತರು ಮೊದಲಾದವರವು. ಅದೇ ಪಂಕ್ತಿಯಲ್ಲಿ ಗಣನೆಗೆ ಬರುವ ಮತ್ತೊಬ್ಬ ಮೇಧಾವಿಗಳು ಶ್ರೀ ವೇದಾಂತದೇಶಿಕರೆಂದೂ ನಿಗಮಾಂತಮಹಾದೇಶಿಕರೆಂದೂ ಪ್ರಸಿದ್ಧರಾದ ವೇಂಕಟನಾಥರು. ಅವರು ಜೀವಿಸಿದ್ದುದು ಕ್ರಿ.ಶ. 1268ರಿಂದ 1369ರವರೆಗೆ. ಹೀಗೆ ಇದೀಗ ಅವರ 750ನೇ ಜನ್ಮವರ್ಷಾಚರಣೆಯ ಪರ್ವ.
ಶ್ರೀ ವೇದಾಂತದೇಶಿಕರ ಜನನವಾದದ್ದು ಕಂಚಿಯ ಸಮೀಪದ ತೂಪ್ಪಿಲ್ ಅಗ್ರಹಾರದಲ್ಲಿ. ಅವರ ತೀರ್ಥರೂಪರು ಅನಂತಸೂರಿ ಸೋಮಯಾಜಿ; ತಾಯಿ ತೋತಾರಂಬಾ. ಅವರ ಮನೆತನ ಭಗವದ್ರಾಮಾನುಜರ ಪ್ರಮುಖ ನೇರ ಶಿಷ್ಯರೊಬ್ಬರ ವಂಶದ್ದು. ಬಾಲ್ಯದಿಂದಲೇ ವೇಂಕಟನಾಥರ ಪ್ರತಿಭೆ ಪಂಡಿತರ ಹಾಗೂ ಸಾಮಾನ್ಯರ ಗಮನ ಸೆಳೆದಿತ್ತು. 20ನೇ ವಯಸ್ಸಿನ ವೇಳೆಗೇ ವೇದ-ವೇದಾಂಗಗಳಲ್ಲಿ ಕೃತಪರಿಶ್ರಮರಾಗಿದ್ದರು. ಅವರ ಪ್ರಮುಖ ಶಿಕ್ಷಣ ನಡೆದಿದ್ದುದು ಸೋದರಮಾವ ಆತ್ರೇಯ
ರಾಮಾನುಜಾಚಾರ್ಯರಲ್ಲಿ. ತಮ್ಮ 22-23ನೇ ವಯಸ್ಸಿನಿಂದಲೇ ಪರ್ಯಟನೆ, ವಿಶಿಷ್ಟಾದ್ವೈತ ಸಿದ್ಧಾಂತ ಪ್ರಸಾರ, ವಾಕ್ಯಾರ್ಥಗೋಷ್ಠಿಗಳಲ್ಲಿ ಪಾಲ್ಗೊಳ್ಳುವಿಕೆ, ಗ್ರಂಥರಚನೆ – ಹೀಗೆ ವಿವಿಧಮುಖಗಳಲ್ಲಿ ಔನ್ನತ್ಯವನ್ನುಮೆರೆದರು. ಅವರ ದೇಶಪರ್ಯಟನೆಯಲ್ಲಿ ಅವರಿಗೆ ವಿದ್ಯಾರಣ್ಯರ ಒಡನಾಟ ದೊರೆತಿತ್ತೆಂದು ಐತಿಹ್ಯವಿದೆ; ಗಟ್ಟಿ ಆಧಾರಗಳು ದುರ್ಲಭ.
ಹೇಗೇ ಇದ್ದರೂ ಈ ಈರ್ವರು ಮಹನೀಯರ ಒಡನಾಟದ ಬಗೆಗೆ ಉದಂತಗಳು ತಲೆಮಾರುಗಳುದ್ದಕ್ಕೂ ಉಳಿದುಬಂದಿವೆ. ಅವುಗಳಲ್ಲಿ ಪ್ರಸಿದ್ಧವಾದ ಒಂದು ಪ್ರಸಂಗ:
ವಿರಕ್ತ ಜೀವನ
ವೇಂಕಟನಾಥರು ಉಂಛವೃತ್ತಿಯಿಂದ (ನೆಲದಲ್ಲುದುರಿದ ಕಾಳುಗಳನ್ನಷ್ಟೇ ಆಯ್ದು ಅದರಿಂದ ಜೀವನ ನಡೆಸುವ ಕ್ರಮ) ಜೀವನ ನಡೆಸಿರುವರೆಂದು ಕೇಳಿದ ವಿದ್ಯಾರಣ್ಯರು ಅವರಿಗೆ ನೆಮ್ಮದಿಯನ್ನು ಕಲ್ಪಿಸಬಯಸಿ ವಿಜಯನಗರ ಆಸ್ಥಾನಕ್ಕೆ ಆಗಮಿಸುವಂತೆ ಆಮಂತ್ರಿಸಲು ವೇಂಕಟನಾಥರು ಹೀಗೆ ಉತ್ತರ ಬರೆದು ಕಳಿಸಿದರೆಂಬುದು ಒಂದು ಉದಂತ:
ಶಿಲಂ ಕಿಮನಲಂ ಭವೇದನಲಮೌದರಂ ಬಾಧಿತುಂ
ಪಯಃ ಪ್ರಸೃತಿಪೂರಕಂ ಕಿಮು ನ ಧಾರಕಂ ಸಾರಸಮ್ |
ಆಯತ್ನಮಲಮಲ್ಲಕಂ ಪಥಿಪಟಚ್ಚರಂ ಕಚ್ಚರಂ
ಭಜಂತಿ ವಿಬುಧಾಮುಧಾಹ್ಯ ಹಹ! ಕುಕ್ಷಿತಃ ಕುಕ್ಷಿತಃ ||
“ಹೊಟ್ಟೆಯ ಹಸಿವನ್ನು ತೀರಿಸಿಕೊಳ್ಳಲು ಕಣದಲ್ಲಿ ಬಿದ್ದಿರುವ ಅಥವಾ ಉದುರಿರುವ ಒಂದಷ್ಟು ಕಾಳುಗಳು ಸಾಕು. ಬಾಯಾರಿಕೆಯನ್ನು ತೀರಿಸಿಕೊಳ್ಳಲು ಕೊಳದಲ್ಲಿನ ಒಂದು ಬೊಗಸೆ ನೀರು ಸಾಕಾದೀತು. ಅನಾಯಾಸವಾಗಿ ದಾರಿಯಲ್ಲಿ ಎಲ್ಲಿಯೊ ಸಿಗುವ ಒಂದೆರಡು ಚಿಂದಿ ಬಟ್ಟೆಗಳು ಮಾನ ಮುಚ್ಚಿಕೊಳ್ಳುವ ಆಚ್ಛಾದನಕ್ಕೆ ಸಾಕು. ಜೀವಿಕೆ ಸಾಗಿಸಲು ಈ ಸುಲಭ ಮಾರ್ಗಗಳು ಇರುವಾಗ ಪಂಡಿತರೆನಿಸಿದವರು ಉದರಪೆÇೀಷಣೆಗಾಗಿ ನೀಚ ದೊರೆಗಳನ್ನು ಆಶ್ರಯಿಸುತ್ತಾರಲ್ಲ. ಛಿ!”
ವೇಂಕಟನಾಥರ ವಿರಕ್ತಿಭಾವವನ್ನು ಪ್ರಕಟೀಕರಿಸುವ ಇನ್ನೊಂದು ಪದ್ಯ:
ನಾಸ್ತಿ ಪಿತ್ರಾರ್ಜಿತಂ ಕಿಂಚಿತ್
ನ ಮಯಾ ಕಿಂಚಿದಾರ್ಜಿತಮ್ |
ಅಸ್ತಿ ಮೇ ಹಸ್ತಿಶೈಲಾಗ್ರೇ
ವಸ್ತು ಪೈತಾಮಹಂ ಧನಮ್ ||
“ನನಗೆ ಮನೆತನದಿಂದ ಬಂದ ಆಸ್ತಿ ಇಲ್ಲ; ನಾನು ಏನನ್ನೂ ಗಳಿಸಿಯೂ ಇಲ್ಲ. ಆದರೂ ನಾನು ಶ್ರೀಮಂತನಾಗಿದ್ದೇನೆ. ನನ್ನ ‘ಪೈತಾಮಹ’ (ಪೂರ್ವಿಕರಿಂದ ಬಂದ) ನಿಧಿಯು ಹಸ್ತಿಶೈಲಾಗ್ರದಲ್ಲಿದೆ.”
ಆ ಸಂದರ್ಭದ ಪದ್ಯಗಳೇ ಸಂಕಲಿತವಾಗಿ ‘ವೈರಾಗ್ಯಪಂಚಕ’ ಎಂಬ ಹೆಸರಿನಲ್ಲಿ ಪ್ರಚಲಿತವಿವೆ.
ವಿದ್ಯಾರಣ್ಯ-ವೇಂಕಟನಾಥರ ವಿಷಯ ಹೇಗಾದರಿರಲಿ. ಆಗಿನ ದಕ್ಷಿಣಭಾರತವು ಅನ್ಯಾಕ್ರಮಣಗಳೂ ಸೇರಿದಂತೆ ಸಂಘರ್ಷಗಳನ್ನು ಎದುರಿಸಬೇಕಾದ ಸನ್ನಿವೇಶ ಇದ್ದುದಂತೂ ಹೌದು. ಇದನ್ನು ಶ್ರೀದೇಶಿಕರು ತಾವು ರಚಿಸಿರುವ ಶ್ರೀರಂಗನಾಥಸ್ತೋತ್ರ ‘ಅಭೀತಿಸ್ತವ’ದಲ್ಲಿ ವಾಚ್ಯವಾಗಿಯೆ ಉಲ್ಲೇಖಿಸಿದ್ದಾರೆ:
ಕಲಿಪ್ರಣಧಿಲಕ್ಷಣೈಃ ಕಲಿತಶಾಕ್ಯಲೋಕಾಯತೈಃ
ತುರುಷ್ಕಯವನಾದಿಭಿರ್ಜಗತಿ ಜೃಂಭಮಾಣಂ ಭಯಮ್ |
ಪ್ರಕೃಷ್ಟನಿಜಶಕ್ತಿಭಿಃ ಪ್ರಸಭಮಾಯುಧೈಃ ಪಂಚಭಿಃ
ಕ್ಷಿತಿ ತ್ರಿದಶರಕ್ಷಕೈಃ ಕ್ಷಪಯ ರಂಗನಾಥ ಕ್ಷಣಾತ್ ||
ಕಲಿಪ್ರಚಾರದೀಕ್ಷಿತರ್ ತುರುಷ್ಕಹೂಣಘಾತುಕರ್
ತ್ರಿಲೋಕಪುಣ್ಯಧಾಮಮಂ ಪ್ರಸಿದ್ಧ ರಂಗಧಾಮಮಂ |
ಛಲಂ ಚಲುಂಕಿ ಪೀಡಿಸಲ್ ವಿಲಾಸಗೊಳ್ವರೇಂ ವಿಭೋ
ತ್ರಿಲೋಕನಾಥ ತೋರು ನಿನ್ನ ಧರ್ಮರಕ್ಷದೀಕ್ಷೆಯಂ ||
(ಅನುವಾದ: ಡಿ.ವಿ.ಜಿ.)
ಮತ್ತೊಂದು ಜನಜನಿತ ದಂತಕಥೆ ಹೀಗಿದೆ: ಒಮ್ಮೆ ಶ್ರೀ ವೇದಾಂತದೇಶಿಕರನ್ನು ಅವಮಾನಿಸಲು ವಿರೋಧಿಗಳು ಪಾದರಕ್ಷೆಗಳ ಹಾರವು ಒಂದೆಡೆಗೆ ಶ್ರೀ ವೇದಾಂತದೇಶಿಕರು ಪ್ರವೇಶಿಸುತ್ತಿದ್ದಂತೆ ಅವರ ಕೊರಳಿಗೆ ಬೀಳುವ ಹಾಗೆ ಏರ್ಪಡಿಸಿದ್ದರಂತೆ. ಶ್ರೀ ದೇಶಿಕರು ಸ್ವಲ್ಪವೂ ವಿಚಲಿತರಾಗದೆ ಹೀಗೆಂದರಂತೆ:
ಕರ್ಮಾವಲಂಬಕಾಃ ಕೇಚಿತ್
ಕೇಚಿತ್ ಜ್ಞಾನಾವಲಂಬಕಾಃ |
ವಯಂ ತು ಹರಿದಾಸಾನಾಂ
ಪಾದರಕ್ಷಾವಲಂಬಿನಃ ||
“ಸಾಧಕರಲ್ಲಿ ಕೆಲವರು ಕರ್ಮಮಾರ್ಗವನ್ನೂ ಇನ್ನು ಕೆಲವರು ಜ್ಞಾನಮಾರ್ಗವನ್ನೂ ಅವಲಂಬಿಸುತ್ತಾರೆಂದು ಹೇಳುತ್ತಾರಷ್ಟೆ. ನಮಗಾದರೋ ಹರಿಭಕ್ತರ ಪಾದರಕ್ಷೆಗಳ ಅವಲಂಬನವೇ ಸಾಕು.”
ಅತುಲ್ಯ ಪ್ರತಿಭೆ
ವೇಂಕಟನಾಥರ ಬಾಲ್ಯಕಾಲದ್ದೆಂದು ಪ್ರಚಲಿತವಿರುವ ಒಂದು ಪ್ರಸಂಗ: ಒಮ್ಮೆ ನಡಾದೂರು ವರದಾಚಾರ್ಯರೆಂಬ ಘನಪಂಡಿತರು ಪ್ರವಚನ ನೀಡುತ್ತಿದ್ದಾಗ ನಡುವೆ ವಿಷಯಾಂತರದ ವಿಕ್ಷೇಪ ಒದಗಿತಂತೆ. ಅನಂತರ ಮುಖ್ಯವಿಷಯವನ್ನು ಎಲ್ಲಿ ನಿಲ್ಲಿಸಿದ್ದೆನೆಂದು ಆಚಾರ್ಯರು ತಡಕಾಡಲು
ತೊಡಗಿದಾಗ ಅಲ್ಲಿಗೆ ಬಂದಿದ್ದ ವೇಂಕಟನಾಥರು ಅದನ್ನು ಕೂಡಲೆ ಎತ್ತಿಕೊಟ್ಟರಂತೆ. ಅದರಿಂದ ಪ್ರಭಾವಿತರಾದ ವರದಾಚಾರ್ಯರು ವೇಂಕಟನಾಥರ ಬಗೆಗೆ ಹೀಗೆ ಉದ್ಗರಿಸಿದರಂತೆ:
ಪ್ರತಿಷ್ಠಾಪಿತವೇದಾಂತಃ ಪ್ರತಿಕ್ಷಿಪ್ತಬಹಿರ್ಮತಃ |
ಭೂಯಾಸ್ತ್ರೈವಿದ್ಯಮಾನ್ಯಸ್ತ್ವಂ ಭೂರಿಕಲ್ಯಾಣಭಾಜನಮ್ ||
“ಚಿರಂಜೀವಿಯೆ! ನೀನು ಮುಂದೆ ವೇದಾಂತಮತವನ್ನು ದೃಢವಾಗಿ ಸ್ಥಾಪಿಸಿ ಅದಕ್ಕೊದಗುವ ವಿರೋಧಗಳನ್ನು ಖಂಡಿಸಿ ಪಂಡಿತವಲಯದಿಂದ ಸಂಮಾನಕ್ಕೆ ಪಾತ್ರನಾಗಿ ನಿನಗೆ ಸರ್ವವಿಧ ಮಂಗಳಗಳೂ ನೆರೆದುಬರುತ್ತವೆ.”
ಅನೇಕ ಮಹನೀಯರ ಬಗೆಗೆ ಈ ಜಾಡಿನ ದಂತಕಥೆಗಳು ಪಾರಂಪರಿಕವಾಗಿ ಪ್ರಚಲಿತವಿರುತ್ತವೆ. ಅವುಗಳಲ್ಲಿ ಕೆಲವು ವಾಸ್ತವ ಘಟನೆಗಳೂ ಆಗಿದ್ದಾವು. ಮುಖ್ಯ ಸಂಗತಿಯೆಂದರೆ ಇವು ಕಲ್ಪಿತಗಳೇ ಆಗಿದ್ದರೂ, ಇವುಗಳಲ್ಲಿ ದೃಶ್ಯಮಾನವಾದ ಬೋಧಕತ್ವಗುಣವಂತೂ ಹಗಲಿನಷ್ಟು ಸ್ಫುಟವಾಗಿ ಇರುತ್ತವೆ. ಅವನ್ನು ಆ ನೆಲೆಯಲ್ಲಿಯೆ ಸ್ವೀಕರಿಸಿದರೂ ಪ್ರಯೋಜನಕರವೇ. ಇಂತಹ ಪ್ರಸಂಗಗಳು ಪ್ರೇರಣಾದಾಯಕಗಳೆಂಬುದನ್ನು ಅಲ್ಲಗಳೆಯಲಾಗದು. ಇವು ಕಲ್ಪಿತಗಳೆಂದೇ ಇರಿಸಿಕೊಂಡರೂ ಇವನ್ನು ಕಲ್ಪಿಸಿದವರು ಇತಿಹಾಸಪ್ರಜ್ಞೆಯಿಲ್ಲದ ದಡ್ಡರೆಂದು ಭಾವಿಸುವುದು ಸಾಹಸವೆನಿಸುತ್ತದೆ. ಆ ಪ್ರಸಂಗಗಳಿಂದ ವಾಙ್ಮಯೇತಿಹಾಸವು ಕಳೆಗೂಡಿದೆ ಎಂದು ಒಪ್ಪಬೇಕು.
ನಮ್ಮ ಪರಂಪರೆಯಲ್ಲಿ ‘ಅರ್ಥವಾದ’ಕ್ಕೂ ಒಂದು ಸ್ಥಾನವಿದೆಯಷ್ಟೆ.
ವೇಂಕಟನಾಥರನ್ನು ಕುರಿತ ಮತ್ತೊಂದು ದಂತಕಥೆ ಅವರ ಪ್ರಸಿದ್ಧವಾದ ‘ಸಂಕಲ್ಪಸೂರ್ಯೋದಯ’ ನಾಟಕಕ್ಕೆ ಸಂಬಂಧಿಸಿದುದು. ವಿಖ್ಯಾತವಾದ ‘ಪ್ರಬೋಧಚಂದ್ರೋದಯ’ ನಾಟಕದ ಕರ್ತೃ ಕೃಷ್ಣಮಿಶ್ರರು ತಮ್ಮ ನಾಟಕವನ್ನು ವೇಂಕಟನಾಥರಿಗೆ ಪರಿಶೀಲನೆಗಾಗಿ ನೀಡಿದಾಗ ಅದಕ್ಕಿಂತ ಪ್ರೌಢಮಟ್ಟದ ನಾಟಕವನ್ನು ರಚಿಸಬಯಸಿ ವೇಂಕಟನಾಥರು ‘ಸಂಕಲ್ಪಸೂರ್ಯೋದಯ’ ಕೃತಿಯನ್ನು ರಚಿಸಿದರಂತೆ. ಈ ಪ್ರಸಂಗಕ್ಕೂ ಗಟ್ಟಿಯಾದ ಇತಿಹಾಸಾಧಾರ ಕಾಣದು; ಏಕೆಂದರೆ ಚರಿತ್ರಕಾರರ ಪ್ರಕಾರ ಕೃಷ್ಣಮಿಶ್ರರು ವೇಂಕಟನಾಥರಿಗಿಂತ ಶತಮಾನದಷ್ಟೆ ಹಿಂದಿನವರು. ಅದು ಹೇಗೇ ಇದ್ದರೂ, ‘ಸಂಕಲ್ಪಸೂರ್ಯೋದಯ’ ನಾಟಕದ ಶ್ರೇಷ್ಠತೆಯು ಅಸಂದಿಗ್ಧವಾಗಿದೆ; ಅದು ವೇಂಕಟನಾಥರ ಪ್ರಮುಖ ಕೃತಿಗಳಲ್ಲಿ ಒಂದೆನಿಸಿದೆ.
ಕಂಚಿಯಲ್ಲಿ ನೆಲಸಿದ್ದ ವೇಂಕಟನಾಥರು ಆ ದಿನಗಳಲ್ಲಿ ವಿಶಿಷ್ಟಾದ್ವೈತಸಿದ್ಧಾಂತಕ್ಕೆ ಅನ್ಯ ಪಂಥಗಳಿಂದ ಉಂಟಾಗಿದ್ದ ಸವಾಲುಗಳನ್ನು ನಿರ್ವಹಿಸುವ ಸಾಮಥ್ರ್ಯವಿದ್ದವರೆಂದು ಗಣ್ಯತೆ ಪಡೆದಿದ್ದ ಹಿನ್ನೆಲೆಯಲ್ಲಿ ವೇಂಕಟನಾಥರು ಶ್ರೀರಂಗಕ್ಕೆ ತೆರಳಿ ಶ್ರೀರಾಮಾನುಜಪೀಠವನ್ನು ಅಲಂಕರಿಸಬೇಕೆಂಬ ಪ್ರಾರ್ಥನೆಗೆ ಓಗೊಟ್ಟು ಶ್ರೀರಂಗಕ್ಕೆ ಬಂದರು; ವಿಶಿಷ್ಟಾದ್ವೈತದರ್ಶನಪರವಾದ ‘ತತ್ತ್ವಮುಕ್ತಾಕಲಾಪ’, ಭಗವದ್ರಾಮಾನುಜಪ್ರಣೀತ ಶ್ರೀಭಾಷ್ಯದ ಮೇಲಣ ‘ತತ್ತ್ವಟೀಕಾ’ ವ್ಯಾಖ್ಯಾನ, ಇವಲ್ಲದೆ ‘ಗೀತಾರ್ಥಸಂಗ್ರಹರಕ್ಷಾ’ ಮೊದಲಾದ ನಾಲ್ಕಾರು ಸ್ವತಂತ್ರ ಗ್ರಂಥಗಳನ್ನೂ ರಚಿಸಿ ವೇದಾಂತಾಚಾರ್ಯರೆಂದೂ ವೇದಾಂತದೇಶಿಕರೆಂದೂ ಖ್ಯಾತರಾದರು. ಉತ್ತರೋತ್ತರ ‘ಕವಿತಾರ್ಕಿಕಸಿಂಹ’, ‘ಸರ್ವತಂತ್ರಸ್ವತಂತ್ರ’ ಮೊದಲಾದ ಬಿರುದುಗಳೂ ಅವರಿಗೆ ಸಂದವು.
14-15ನೇ ಶತಮಾನಗಳು ವಿವಿಧ ದಾರ್ಶನಿಕ ಪ್ರಸ್ಥಾನಗಳವರ ನಡುವೆ ತೀಕ್ಷ್ಣ ವಿವಾದಗಳು ನಡೆದಿದ್ದ ಕಾಲ. ಹೀಗಾಗಿ ವೇಂಕಟನಾಥರಿಗೆ ಸಂಬಂಧಿಸಿದಂತೆಯೂ ದಂತಕಥೆಗಳು ಪ್ರಚುರವಾಗಿವೆ. ವಿದ್ಯಾರಣ್ಯರಿಗೂ ಶ್ರೀ ಮಧ್ವಾಚಾರ್ಯಪೀಠದ ಅಕ್ಷೋಭ್ಯತೀರ್ಥರಿಗೂ ನಡುವೆ ವಾಕ್ಯಾರ್ಥ ನಡೆದು ಅದಕ್ಕೆ ಶ್ರೀ ವೇದಾಂತದೇಶಿಕರು ತೀರ್ಪುಗಾರರಾಗಿದ್ದರು – ಎಂದೆಲ್ಲ ಕಥನಗಳಿವೆ. ಇಂತಹ ವಿವರಗಳು ಐತಿಹಾಸಿಕವಾಗಿ ತಾಳೆಯಾಗುವುದು ಕಷ್ಟಕರ.
ವಿಪುಲ ಗ್ರಂಥರಚನೆ
ವೇಂಕಟನಾಥರು ಶತಾಧಿಕ ಗ್ರಂಥಕರ್ತರು. ಹಲವು ಪ್ರಕಾರಗಳಲ್ಲಿ ಅವರ ರಚನೆಗಳು ಇವೆ. ಅವುಗಳಲ್ಲಿ ಅಧಿಕಸಂಖ್ಯೆಯವು ವಿಶಿಷ್ಟಾದ್ವೈತದರ್ಶನಧಾರೆಯ ‘ರಹಸ್ಯ’ಗಳು (ಅಷ್ಟಾಕ್ಷರೀಮಂತ್ರಾನುಸಂಧಾನ ಇತ್ಯಾದಿ) ಮತ್ತು ಸ್ತೋತ್ರಗಳು; ಒಂದೆರಡು ಮೀಮಾಂಸಾಗ್ರಂಥಗಳು. ಗಣನೀಯ ಸಂಖ್ಯೆಯ ಕೃತಿಗಳು ಅನುಷ್ಠಾನಸಂಬಂಧಿಯಾದವು ಮತ್ತು ‘ಪ್ರಬಂಧ’ಗಳು. ಅವರಿಂದ ರಚಿತವಾದ ಏಳೆಂಟು ಕಾವ್ಯಕೃತಿಗಳಲ್ಲಿ ಅತ್ಯಂತ ಪ್ರಸಿದ್ಧವಾದವು ‘ಯಾದವಾಭ್ಯುದಯ’, ‘ಹಂಸಸಂದೇಶ’, ಹಾಗೂ ‘ಸುಭಾಷಿತನೀವೀ’ ಎಂಬ ನೀತಿಗ್ರಂಥ. ಪ್ರಾಕೃತಭಾಷೆಯಲ್ಲಿ ‘ಅಚ್ಯುತಶತಕ’ ಎಂಬ ಕೃತಿಯನ್ನು ರಚಿಸಿರುವುದು ಅವರ ಪ್ರೌಢಿಮೆಗೆ ತಾರ್ಕಣೆಯಾಗಿದೆ.
ತಮಿಳುಭಾಷೆಯಲ್ಲಿಯೂ ‘ಶತದೂಷಣಿ’, ‘ಪರಮತಭಂಗ’ ಮೊದಲಾದ ಅವರ ಕೃತಿಗಳು ಇವೆ.
ವಾಣೀ ಯಸ್ಯ ದ್ರಾಮಿಡೀ ಸಾಂಸ್ಕೃತೀ ಚ
ಪ್ರಾಯಃ ಪ್ರಾಚಾಂ ಆಶ್ರಯಾನ್ ಅನ್ವವಾದೀತ್ |
ಅರ್ವಾಚಾಮಪ್ಯಾಸ್ಯ ವೈಯಾತ್ಯಮೂಲಂ
ಜೀಯಾತ್ ಸೋಯಂ ಸರ್ವತಂತ್ರಸ್ವತಂತ್ರಃ ||
“ಯಾರು ತಮಿಳು-ಸಂಸ್ಕೃತಗಳೆರಡರಲ್ಲಿಯೂ ಪ್ರಾಚೀನರ ಆಶಯವನ್ನು ಸ್ಪಷ್ಟೀಕರಿಸಿರುವರೋ, ಅರ್ವಾಚೀನರ ಶಾಸ್ತ್ರಗ್ರಂಥ ವಿಚಾರಗಳನ್ನೂ ಸಮೀಕ್ಷಿಸಿರುವರೋ, ಆ ಸರ್ವತಂತ್ರಸ್ವತಂತ್ರರಿಗೆ ಸದಾ ಜಯವಾಗಲಿ.”
ಶಾಸ್ತ್ರವಾಙ್ಮಯ ಸಂರಕ್ಷಕರಾಗಿಯೂ ಶ್ರೀ ವೇದಾಂತದೇಶಿಕರಿಂದ ಗಣನಾರ್ಹ ಸೇವೆ ಸಂದಿತು.
ಹಸ್ತ್ರಪ್ರತಿಯಲ್ಲಿದ್ದು ಆಗಿನ ಅಸ್ಥಿರ ಸನ್ನಿವೇಶದಲ್ಲಿ ನಷ್ಟಗೊಳ್ಳುವ ಸಂಭವವಿದ್ದ ಸುದರ್ಶನಾಚಾರ್ಯರಚಿತ ‘ಶ್ರುತಪ್ರಕಾಶಿಕಾ’ ಹೆಸರಿನ ಶ್ರೀಭಾಷ್ಯದ ಮೇಲಿನ ವ್ಯಾಖ್ಯಾನವನ್ನು ಸಂರಕ್ಷಿಸುವುದರಲ್ಲಿ ಶ್ರೀ ದೇಶಿಕರ ಪಾತ್ರವಿದ್ದಿತು.
ಧರ್ಮಪ್ರಸಾರದ ಪಯಣದಲ್ಲಿ ನಾಸ್ತಿಕಮತಗಳ ನಿರಸನದಲ್ಲಿಯೂ ಆಸ್ತಿಕತೆಯ ಹಾಗೂ ಭಕ್ತಿಪಂಥದ ಸಮರ್ಥನೆಯಲ್ಲಿಯೂ ಶ್ರೀದೇಶಿಕರು ಮೆರೆದ ಪ್ರೌಢಿಮೆ ಅಸಾಮಾನ್ಯವಾಗಿದ್ದಿತು. ಈ ಹಿನ್ನೆಲೆಯಲ್ಲಿ ಅವರು ಮಹಾವಿಷ್ಣುವಿನ ‘ಘಂಟಾವತಾರ’ ಎಂಬ ಪ್ರಥೆ ಬೆಳೆದುದು ಸ್ವಾಭಾವಿಕ. ಇದು ಅವರದೇ ಶ್ರೇಷ್ಠ ಕೃತಿಯಾದ ‘ಸಂಕಲ್ಪಸೂರ್ಯೋದಯ’ ನಾಟಕದಲ್ಲಿಯೂ ಸೂಚಿತವಾಗಿದೆ:
ವಿತ್ರಾಸಿನೀ ವಿಬುಧವೈರವರೂಥಿನೀನಾಂ
ಪದ್ಮಾಸನೇನ ಪರಿಚಾರವಿಧೌ ಪ್ರಯುಕ್ತಾ |
ಉತ್ಪ್ರೇಕ್ಷ್ಯತೇ ಬುಧಜನೈರುಪಪತ್ತಿ ಭೂಮ್ನಾ
ಘಂಟಾ ಹರೇಸ್ಸಮಜನಿಷ್ಟ ಯದಾತ್ಮನೇತಿ ||
“ದೈವವಿರೋಧಿಗಳನ್ನು ನಡುಗಿಸುವ ಶಕ್ತಿಯನ್ನುಳ್ಳ ಮತ್ತು ಭಗವತ್ಸೇವೆಯಲ್ಲಿ ಬಳಕೆಗೊಳ್ಳುವ ಘಂಟೆಯೇ ವೇದಾಂತದೇಶಿಕರಾಗಿ ಅವತರಿಸಿತೆಂಬುದು ಪಂಡಿತರ ಹೇಳಿಕೆಯಾಗಿದೆ, ಎಂದರೆ ತಮ್ಮ ವಿದ್ವತ್ತಿನಿಂದಲೂ ಪ್ರಭಾವಾತಿಶಯದಿಂದಲೂ ನಾಸ್ತಿಕಪ್ರವೃತ್ತಿಯವರ ಎದೆಯನ್ನು ನಡುಗಿಸಿ ಸದಾ ಭಗವದುಪಾಸನೆಯಲ್ಲಿ ನಿರತರಾಗಿದ್ದುದರಿಂದ ಅವರು ‘ಘಂಟಾವತಾರ’ ಎಂಬ ಉನ್ನತ ಪ್ರಶಂಸೆಗೆ ಪಾತ್ರರಾದರು.”
ಸಮನ್ವಯಾಚಾರ್ಯ
ವಿಶೇಷವೆಂದರೆ ಶ್ರೀ ವೇದಾಂತದೇಶಿಕರ ಸವ್ಯಸಾಚಿತ್ವದಿಂದಾಗಿ ಅವರ ಕಾವ್ಯ-ನಾಟಕ ಕೃತಿಗಳಲ್ಲಿ ದಾರ್ಶನಿಕತೆ ಮಡುಗಟ್ಟಿರುವಂತೆ ಅವರ ಭಾಷ್ಯಾದಿ ಶಾಸ್ತ್ರಗ್ರಂಥಗಳಲ್ಲಿ ಕಾವ್ಯೋಪಮ ಸೌಂದರ್ಯವು ಎಲ್ಲೆಡೆ ಗಮನ ಸೆಳೆಯುತ್ತದೆ. ತಮಿಳು-ಮಣಿಪ್ರವಾಳಗಳಲ್ಲಿಯೂ ಶ್ರೀ ದೇಶಿಕರಿಗೆ ಪ್ರಭುತ್ವ ಇದ್ದಿತಾದರೂ, ಒಟ್ಟಾರೆ ಅವರ ಒಲವು ಸಂಸ್ಕೃತ ಪ್ರಾಬಂಧಿಕತೆಯ ಕಡೆಗೆ ಎನಿಸುತ್ತದೆ. ಇದೂ ಶ್ರೀ ದೇಶಿಕರ ಬಗೆಗೆ ಅನ್ಯ ಶ್ರೀವೈಷ್ಣವಶಾಖೆಗಳವರ
ಟೀಕೆಗೆ ವಸ್ತುವಾಯಿತೆಂಬುದು ಒಂದು ವಿಪರ್ಯಾಸ. ಆ ಕಾಲಖಂಡದ ಪರಿಸರ ಹಾಗಿದ್ದಿತು. ಇದು ಸ್ವಭಾವತಃ ಸಂವೇದನಶೀಲರಾದ ಶ್ರೀದೇಶಿಕರಂತಹವರನ್ನು ಎಷ್ಟು ಘಾಸಿಗೊಳಿಸಿರಬಹುದೆಂದು ಊಹಿಸಬಹುದು. ‘ಪಾದುಕಾಸಹಸ್ರ’ವನ್ನು ನಿವೇದಿಸಿದ ಬಳಿಕ ಶ್ರೀದೇಶಿಕರು ಹೇಳಿರುವ ಈ ಮಾತು ಮಾರ್ಮಿಕವಾಗಿದೆ:
ಆಪಾದಚೂಡಮನಪಾಯಿನಿ ದರ್ಶನೇýಸ್ಮಿನ್
ಆಶಾಸನೀಯಮಪರಂ ನ ವಿಪಕ್ಷಹೇತೋಃ |
ಆಪಾದಶಾನ್ತಿಮಧುರಾನ್ಪುನರಸ್ಮದೀಯಾನ್
ಅನ್ಯೋನ್ಯ ವೈರಜನನೀ ವಿಜಹಾತ್ವಸೂಯಾ ||
“ಭಗವದ್ರಾಮಾನುಜಪ್ರತಿಪಾದಿತ ದರ್ಶನವು ಆದ್ಯಂತವಾಗಿ ಎಷ್ಟು ಉದಾತ್ತವಾಗಿದೆಯೆಂದರೆ ಅದನ್ನು ಯಾವ ಪ್ರತಿಕಕ್ಷಿಗಳೂ ಅಲ್ಲಗಳೆಯುವುದು ಸಾಧ್ಯವೇ ಇಲ್ಲ. ಆದುದರಿಂದ ನಮ್ಮ ಸಮರ್ಥನೆಯ ಆವಶ್ಯಕತೆ ಅದಕ್ಕೆ ಇಲ್ಲವೇ ಇಲ್ಲ. ಹೀಗಿದ್ದರೂ ಅವರ ಪರಂಪರೆಗೇ ಸೇರಿದವರಲ್ಲಿ ಒಬ್ಬರು ಇನ್ನೊಬ್ಬರ ಬಗೆಗೆ ವೈರವನ್ನೂ ಅಸೂಯೆಯನ್ನೂ ತಳೆಯುವುದನ್ನು ಬಿಡಲೆಂಬುದು ನಮ್ಮ ಹಾರೈಕೆ.”
ಈ ದೃಷ್ಟಿವೈಶಾಲ್ಯದ ಹಿನ್ನೆಲೆಯಲ್ಲಿ ಶ್ರೀ ವೇದಾಂತದೇಶಿಕರು ‘ಸಮನ್ವಯಾಚಾರ್ಯ’ರೆಂದೂ ವಿಶ್ರುತರಾಗಿದ್ದಾರೆ.
ಪಾದುಕಾಸಹಸ್ರ
ಶ್ರೀ ದೇಶಿಕರಿಗೆ ಇದ್ದ ‘ಕವಿತಾರ್ಕಿಕಸಿಂಹ’ ಎಂಬ ಬಿರುದಿಗೆ ಅವರು ತಮ್ಮ ಅರ್ಹತೆಯನ್ನು ಸಮರ್ಥಿಸಿಕೊಳ್ಳುವಂತೆ ಪಂಥವು ಒದಗಿದಾಗ ಸವಾಲೊಡ್ಡಿದವರು ಕೇಳಿದ್ದಂತೆ ಶ್ರೀರಂಗನಾಥಸ್ವಾಮಿಯ ಚರಣಗಳನ್ನು ಕುರಿತೇ ಒಂದೇ ರಾತ್ರಿಯಲ್ಲಿ ‘ಪಾದುಕಾಸಹಸ್ರ’ವೆಂದು ಖ್ಯಾತವಾಗಿರುವ ಸಾವಿರ ಪದ್ಯಗಳನ್ನು ಅವರು ರಚಿಸಿದರೆಂಬುದು ಐತಿಹ್ಯ. ಹಿನ್ನೆಲೆ ಏನೇ ಇದ್ದರೂ ಶ್ರೀರಾಮಾನುಜದರ್ಶನದ ಸೂಕ್ಷ್ಮ ಅಂಶಗಳ ಸ್ಫುಟೀಕರಣವನ್ನೂ ವೈವಿಧ್ಯಮಯ ಅಲಂಕಾರಗಳನ್ನೂ ಬಂಧಗಳನ್ನೂ ಒಳಗೊಂಡ ‘ಪಾದುಕಾಸಹಸ್ರ’ ಪ್ರಶಸ್ತವೆನಿಸಿದೆ. ಅದರಂತೆ ಶ್ರೀನಿವಾಸನ ಕಾರುಣ್ಯಾತಿಶಯವನ್ನು ಕುರಿತೇ ವೇಂಕಟನಾಥರು ರಚಿಸಿರುವ ‘ದಯಾಶತಕ’ ಕೃತಿಯು ಭಕ್ತಿಸಾಹಿತ್ಯದಲ್ಲಿ ಮೇಲ್ಮಟ್ಟದ್ದೆನಿಸಿದೆ. ಶ್ರೀಭಾಷ್ಯಕ್ಕೆ ಶ್ರೀ ವೇದಾಂತದೇಶಿಕರು ರಚಿಸಿದ ‘ತತ್ತ್ವಟೀಕಾ’ ಅಧಿಭಾಷ್ಯವೂ ಶ್ರೀರಾಮಾನುಜರ ಗೀತಾಭಾಷ್ಯದ ಮೇಲಣ ‘ತಾತ್ಪರ್ಯಚಂದ್ರಿಕಾ’ ವ್ಯಾಖ್ಯಾನವೂ ‘ತತ್ತ್ವಮುಕ್ತಾಕಲಾಪ’ ಮೊದಲಾದ ಸ್ವತಂತ್ರ ಗ್ರಂಥಗಳೂ ಅವರ ಸಮುನ್ನತ ಶಾಸ್ತ್ರಾಧಿಕಾರಕ್ಕೆ ಸಾಕ್ಷ್ಯಗಳಾಗಿವೆ.
ಬ್ರಹ್ಮವು ಅದ್ವಯವೆಂಬುದು ನಿಶ್ಚಿತವಿದ್ದರೂ ಅದು ಜಡ, ಚೇತನ ಮೊದಲಾದ ತತ್ತ್ವಗಳೊಡಗೂಡಿ ವಿಶಿಷ್ಟವೆನಿಸುವುದಾದರೂ ಬ್ರಹ್ಮಕ್ಕೆ ವ್ಯತಿರಿಕ್ತವಾದದ್ದು ಯಾವುದೂ ಇಲ್ಲ; ಯಾವುದೇ ಜಗದ್ವಸ್ತುಗಳನ್ನು ಅರಿಯಲಾಗುವುದು ಅವುಗಳ ವಿಶೇಷಗಳಿಂದಲೇ, ಮತ್ತು ಬ್ರಹ್ಮದ ಪ್ರಸಕ್ತಿಯಲ್ಲಿ ವಿಶೇಷಣಗಳು ಇಲ್ಲದಿರಲೂಬಹುದು; – ಎಂಬ ಜಾಡಿನ ಶ್ರೀರಾಮಾನುಜಪಂಥವನ್ನು ಸಮರ್ಥಿಸುವ ಶ್ರೀದೇಶಿಕರ ದಾರ್ಶನಿಕ ಬರಹಗಳು ಯಥೇಷ್ಟವಾಗಿವೆ.
ಶ್ರೀದೇಶಿಕರ ಎಲ್ಲ ಗ್ರಂಥಗಳೂ ಪ್ರಶಸ್ತವೇ ಆಗಿದ್ದರೂ ಶುದ್ಧ ಸಾಹಿತ್ಯ ಕ್ಷೇತ್ರದವಾದ ‘ಯಾದವಾಭ್ಯುದಯ’ ಮತ್ತು ‘ಹಂಸಸಂದೇಶ’ ಕಾವ್ಯಗಳೂ ‘ಸಂಕಲ್ಪಸೂರ್ಯೋದಯ’ ನಾಟಕವೂ ‘ಸುಭಾಷಿತ ನೀವೀ’ ಹೆಸರಿನ ನೀತಿಬೋಧಕ ಪದ್ಯಸಂಕಲನವೂ ವಿಶೇಷ ಆದರಣೆಯನ್ನು ಪಡೆದುಕೊಂಡಿರುವುದು ಸಹಜ.
‘ಯಾದವಾಭ್ಯುದಯ’
ಭಾಗಶಃ ಮಾತ್ರ ಲಭ್ಯವಿರುವ ‘ಯಾದವಾಭ್ಯುದಯ’ ಕಾವ್ಯವು ಶ್ರೀಕೃಷ್ಣಚರಿತೆಯ ಕಾವ್ಯರೂಪ ಕಥನವಾಗಿದೆ. ಈ ಕಾವ್ಯಕ್ಕೆ ಅದ್ವೈತಾಚಾರ್ಯರಾದ ಅಪ್ಪಯ್ಯದೀಕ್ಷಿತರು ವ್ಯಾಖ್ಯಾನವನ್ನು ರಚಿಸಿರುವುದು ಒಂದು ತುಂಬಾ ಸ್ಪøಹಣೀಯವಾದ ಸಂಗತಿಯಾಗಿದೆ.
ರಮಣೀಯ ಶೈಲಿಯೂ ಒಂದೇ ವಸ್ತುವನ್ನು ಹಲವು ಬಗೆಗಳಲ್ಲಿ ವರ್ಣಿಸುವ ಚಮತ್ಕøತಿಯೂ ಶ್ರೀದೇಶಿಕರ ವೈಶಿಷ್ಟ್ಯಗಳು. ಉಪಮಾಲಂಕಾರಗಳಿಗಂತೂ ಕೊರತೆಯೇ ಇಲ್ಲ. ಕಾಳೀಯಮರ್ದನವನ್ನು ವಿವರಿಸುವ ಪದ್ಯದಲ್ಲಿ ಶ್ರೀಕೃಷ್ಣನ ನರ್ತನವನ್ನು ಪ್ರಸ್ತಾವಿಸುವಲ್ಲಿ ನೃತ್ತಾನುಗುಣ ಪದವಿಜೃಂಭಣೆಯನ್ನು ಗಮನಿಸಬಹುದು:
ಲೋಲಾಪತಚ್ಚರಣಲೀಲಾಹತಿಕ್ಷುರಿತ ಹಾಲಾಹಲೀನಿಜಫಣೇ
ನೃತ್ಯಂತಮಪ್ರತಿಘ ಕೃತ್ಯಂತಮಪ್ರತಿಮಮತ್ಯಂತ ಚಾರುವಪುಷಂ|
ದೇವಾದಿಭಿಸ್ಸಮಯಸೇವಾದರತ್ಪರಿತಹೇವಾಕ ಘೋಷಮುಖರೈಃ
ದೃಷ್ಟಾವಧಾನಮದತುಷ್ಟಾವಶೌರಿ ಮಹಿರಿಷ್ಟಾವರೋಧಸಹಿತಃ||
ಕಾವ್ಯದ ಆರಂಭದ ಸರ್ಗದಲ್ಲಿ ಬರುವ ವೈಕುಂಠಲೋಕ ವರ್ಣನೆ, ಆನಂತರದ ಭಾಗಗಳಲ್ಲಿ ಬರುವ ದೇವಕಿಯ ಗರ್ಭಸ್ಥಿತಿಯ ಮತ್ತಿತರ ವರ್ಣನೆಗಳೂ ಮನೋಹರವಾಗಿವೆ.
ಅಲ್ಲಲ್ಲಿನ ಸ್ವೋಪಜ್ಞ ಸನ್ನಿವೇಶಕಲ್ಪನೆಗಳೂ ರಂಜಕವಾಗಿವೆ. ನಿದರ್ಶನಕ್ಕೆ: ಹಣ್ಣನ್ನು ಕೊಳ್ಳಲು ಬಂದ ಕೃಷ್ಣನ ಕೈಗಳು ಹಣ್ಣು ಮಾರುವವಳನ್ನು ಹೇಗೆ ಮೋಹಗೊಳಿಸಿದವೆಂಬುದರ ರಮ್ಯ ವರ್ಣನೆ ಹೀಗಿದೆ:
ಸುಜಾತರೇಖಾತ್ಮಕಶಂಖಚಕ್ರಂ
ತಾಮ್ರೋದರಂ ತಸ್ಯ ಕರಾರವಿಂದಂ |
ವಿಲೋಕಯಂತ್ಯಾಃ ಫಲವಿಕ್ರಯಿಣ್ಯಾ
ವಿಕ್ರೇತುಮಾತ್ಮಾನಮಭೂದ್ವಿಮರ್ಶಃ ||
ಕೃಷ್ಣನಿಗೆ ಗೋವುಗಳ ಬಗೆಗೆ ಇರುವ ಅತಿಶಯ ಪ್ರೇಮಳತೆಯ ವರ್ಣನೆ ಇಲ್ಲಿದೆ:
ರೋಮಂಥ ಫೇನಾಂಚಿತ ಸೃಗ್ವಿಭಾಗೈಃ
ಆಸ್ಪಂದನೈರರ್ಧನಿಮೀಲಿತಾಕ್ಷೈಃ |
ಅನಾದೃತಸ್ತನ್ಯರಸೈರ್ಮುಕುಂದಃ
ಕಂಡೂಯಿತೈರ್ನಿರ್ವೃತಿಮಾಪವತ್ಸೈಃ ||
“ಕರುಗಳು ಬಾಯಿಯಲ್ಲಿ ನೊರೆ ಸುರಿಸುತ್ತ ಮೆಲುಕು ಹಾಕುವುದು, ಕೃಷ್ಣನು ನೇವರಿಸುವಾಗ ಅವು ಕಣ್ಣನ್ನು ಅರ್ಧ ಮುಚ್ಚಿಕೊಂಡು ಉಲ್ಲಾಸಗೊಳ್ಳುವುದು – ಈ ಸಂಭ್ರಮದಲ್ಲಿ ಅವು ಹಾಲು ಕುಡಿಯುವುದನ್ನೇ ಮರೆತುಬಿಡುತ್ತವೆ!”
ತಾತ್ತ್ವಿಕತೆಗೆ ಅಸಾಮಾನ್ಯ ಆಯಾಮವನ್ನು ನಿರ್ಮಿಸುವ ಶ್ರೀ ದೇಶಿಕರ ಕೌಶಲ ಎಲ್ಲೆಡೆ ವಿದ್ಯಮಾನವಾಗಿದೆ. ‘ಯಾದವಾಭ್ಯುದಯ’ದ ಆರಂಭಭಾಗದಲ್ಲಿಯೇ ಬರುವ ಈ ಪದ್ಯವನ್ನು ಗಮನಿಸಬಹುದು:
ಕ್ರೀಡಾತೂಲಿಕಯಾಸ್ವಸ್ಮಿನ್ ಕೃಪಾರೂಕ್ಷಿತಯಾ ಸ್ವಯಮ್ |
ಏಕೋ ವಿಶ್ವಮಿದಂ ಚಿತ್ರಂ ವಿಭುಃ ಶ್ರೀಮಾನಜೀಜನತ್ ||
“ಭಗವಂತನು ತನ್ನ ಲೀಲಾವಿಲಾಸಕ್ಕೆ ಮತ್ತು ತನ್ನ ಲೋಕಕಾರುಣ್ಯ ಸ್ವಭಾವದಿಂದಾಗಿ ಈ ಅಗಾಧ ಪ್ರಪಂಚವನ್ನು ಬೇರೊಬ್ಬರ ನೆರವಿಲ್ಲದೆ ತಾನೇ ತನ್ನಿಂದಲೇ ಸೃಷ್ಟಿಮಾಡಿದನು.”
ಕೇವಲ ವರ್ಣನೆಯೆಂದು ತೋರುವ ಈ ರಚನೆಯಲ್ಲಿ ಜಗತ್ಸೃಷ್ಟಿಗೆ ನಿಮಿತ್ತಕಾರಣ, ಉಪಾದಾನಕಾರಣ – ಎರಡೂ ಭಗವಂತನೇ ಆಗಿರುವನೆಂಬ ಶಾಸ್ತ್ರಸೂಕ್ಷ್ಮತೆಯೂ ನಿವಿಷ್ಟವಾಗಿದೆ.
‘ಸಂಕಲ್ಪಸೂರ್ಯೋದಯ’
‘ಸಂಕಲ್ಪಸೂರ್ಯೋದಯ’ ಕೃತಿಯು ಅದರ ಮಾತೃಕೆಯಾಗಿರಬಹುದಾದ ‘ಪ್ರಬೋಧಚಂದ್ರೋದಯ’ದಂತೆ ಒಂದು ದಾರ್ಶನಿಕ ನಾಟಕವಾಗಿದೆ. ಜೀವೋತ್ಕರ್ಷಪ್ರಸ್ಥಾನದ ಪರಾಮರ್ಶೆಗೆ ಇಲ್ಲಿ ನಾಟಕರೂಪ ಕೊಡಲಾಗಿದೆ. ಜಗಜ್ಜೀವನದ ಅಸ್ತವ್ಯಸ್ತತೆಗಳನ್ನು ಕತ್ತಲೆ ಎಂದು ಕಲ್ಪಿಸಲಾಗಿದೆ. ಈ ಕತ್ತಲೆಯನ್ನು ನೀಗಿಸಬಲ್ಲವನು ಸೂರ್ಯನು ಮಾತ್ರ, ಮತ್ತು ‘ಸೂರ್ಯೋದಯ’ವಾಗುವುದು ಭಗವದನುಗ್ರಹದಿಂದ – ಎಂಬುದು ಇಲ್ಲಿಯ ಸಂಯೋಜನೆ. ತಮ್ಮ ನಾಟಕಕ್ಕೆ ರಂಗವೇದಿಕೆಯಾಗಿರುವುದು ಶ್ರೀರಂಗನಾಥಸನ್ನಿಧಿಯೇ ಎಂದು ವಿವರಿಸಿದ್ದಾರೆ ಶ್ರೀದೇಶಿಕರು.
‘ಸಂಕಲ್ಪಸೂರ್ಯೋದಯ’ ಮೂಲತಃ ದಾರ್ಶನಿಕ ಬೋಧೆಯ ಪ್ರಕಟೀಕರಣದ ಆಶಯದ್ದೆಂಬುದು ಸ್ಪಷ್ಟವೇ ಆಗಿದೆ. ಆ ಪ್ರತಿಪಾದನೆಯಲ್ಲಿ ಮೇಲ್ಮಟ್ಟದ ಕಾವ್ಯಮಾಧ್ಯಮವನ್ನು ಶ್ರೀದೇಶಿಕರು ಬಳಸಿರುವುದು ವಿಶೇಷ. ಕೃತಿಯು ನಾಟಕರೂಪದಲ್ಲಿರುವುದರಿಂದ ಪಾತ್ರಗಳ ನಡುವೆಯೂ ಕವಿ ಮತ್ತು ವಾಚಕರ ನಡುವೆಯೂ ಸಂವಾದ ಕಲ್ಪನೆಯ ಮೂಲಕ ತಾತ್ತ್ವಿಕತೆಯನ್ನು ಹೆಚ್ಚು ಆಪ್ತರೀತಿಯಲ್ಲಿ ಸಂವಹನ ಮಾಡುವುದು ಸಾಧ್ಯವಾಗಿದೆ. ಹೀಗೆ ಸಾಮಾನ್ಯವಾಗಿ ಶಾಸ್ತ್ರರಚನೆಗಳಲ್ಲಿ ನಿಶಿತತೆಯ ಅನಿವಾರ್ಯತೆಯಿಂದಾಗಿ ಇಣುಕುವ ಪೆಡಸುತನವನ್ನು ಕಡಮೆ ಮಾಡಲಾಗಿದೆ. ಹೀಗೆಂದರೆ ಶಾಸ್ತ್ರೀಯಾಂಶಗಳನ್ನು ದುರ್ಬಲಗೊಳಿಸಿರುವರೆಂದೇನಲ್ಲ. ಕೃತಿಯ ವಸ್ತುವೇ ವೇದಾಂತವಾಗಿದೆಯಲ್ಲ! ಆರಂಭದ ಅಂಕದ ಭಾಗಗಳನ್ನು ಬಾದರಾಯಣಸೂತ್ರಗಳ ಸಮನ್ವಯಾಧ್ಯಾಯ, ಅವಿರೋಧಾಧ್ಯಾಯಗಳ ಮೇಲಣ ಕಾವ್ಯರೂಪ ವ್ಯಾಖ್ಯಾನಗಳೆಂದೇ ಗಣಿಸಿ ಆಸ್ವಾದಿಸಬಹುದಾಗಿದೆ.
ನಾಟಕದ ‘ನಾಯಕ’ನಾದ ಸೂರ್ಯನು ಸಮ್ಯಗ್ಜ್ಞಾನವನ್ನು ಪ್ರತಿನಿಧಿಸುವುದು ಮೊದಲಾದ ಔಪಮ್ಯಮರ್ಯಾದೆಯನ್ನು ಉದ್ದಕ್ಕೂ ಪೋಷಿಸಿರುವುದು ಶ್ರೀದೇಶಿಕರ ಪ್ರತಿಭೌನ್ನತ್ಯಕ್ಕೆ ಸಾಕ್ಷಿಯಾಗಿದೆ. ಒಂದೆಡೆ ಹೀಗೆಂದಿದ್ದಾರೆ:
ಪತ್ಯೌ ದೂರಂಗತವತಿರವೌ ಪದ್ಮಿನೀವ ಪ್ರಸುಪ್ತಾ
ಮ್ಲಾನಾಕಾರಾ ಸುಮುಖನಿಭೃತಾ ವರ್ತತೇ ಬುದ್ಧಿರಂಬಾ |
ಮಾಯಾಯೋಗಾನ್ಮಲಿನಿತರುಚೌ ವಲ್ಲಭೇ ತುಲ್ಯಶೀಲಾ
ರಾಹುಗ್ರಸ್ತೇ ತುಹಿನಕಿರಣೇ ನಿಷ್ಪ್ರಭಾ ಯಾಮಿನೀವ ||
“ತನ್ನ ಪ್ರಿಯತಮನಾದ ಸೂರ್ಯನು ಕಣ್ಣಿಗೆ ಕಾಣಿಸದೆ ದೂರಂಗತನಾದಾಗ ವಿಹರಿಣಿಯಾದ ಕಮಲವು ಹತಾಶೆಯಿಂದ ಕುಗ್ಗುತ್ತದಷ್ಟೆ. ಹಾಗೆಯೇ ತನ್ನ ಪ್ರಿಯಕರನಾದ ಜೀವನು ಮಾಯಾಕ್ರಾಂತನಾದಾಗ (ಅವನ ಸ್ವಸ್ವರೂಪದರ್ಶನ ಮರೆಯಾದಾಗ) ಬುದ್ಧಿಯು ವಿರಹಿತಳಂತೆ ಸಂಕೋಚಗೊಳ್ಳುತ್ತದೆ. ಜೀವಾತ್ಮನು ಕಳೆಗುಂದಿದವನಾದಾಗ ಬುದ್ಧಿಯೂ ರಾಹುಗ್ರಸ್ತಚಂದ್ರನಿರುವ ರಾತ್ರಿಯಂತೆ ಕಳಾಹೀನವಾಗುತ್ತದೆ.”
ಹೀಗೆ ಇಡೀ ನಾಟಕವು ಮೋಕ್ಷಾಕಾಂಕ್ಷಿಗಳನ್ನು ಉದ್ದೇಶದಲ್ಲಿರಿಸಿಕೊಂಡು ರಚಿತವಾಗಿದೆ ಎನ್ನಬಹುದು. ನಡುನಡುವೆ ಆಗಂತುಕವಾಗಿ ಬರುವ ಕಾವ್ಯಸಹಜ ವರ್ಣನೆಗಳು ಒಂದು ಅಧಿಕಫÀಲ.
‘ಹಂಸಸಂದೇಶ’
ಕಾಳಿದಾಸರಚಿತ ‘ಮೇಘಸಂದೇಶ’ ಕಾವ್ಯವು ಆನಂತರದ ಕಾಲದಲ್ಲಿ ಒಂದು ಸಂದೇಶಕಾವ್ಯಪರಂಪರೆಗೆ ಕಾರಣವಾದದ್ದು ಸುವಿದಿತ. ಆ ಪರಂಪರೆಗೆ ಸೇರಿದ ಒಂದು ಉತ್ಕøಷ್ಟ ಕೃತಿ ಶ್ರೀ ದೇಶಿಕರು ರಚಿಸಿರುವ ‘ಹಂಸಸಂದೇಶ.’ ಈ ಕಾವ್ಯವಾದರೋ ಮೇಘಸಂದೇಶದ ಅನುವರ್ತಿ ನೆರಳಿನಂತೆಯೇ ಸಾಗಿದೆ. ಕಾಳಿದಾಸಕೃತಿಯಲ್ಲಿರುವಂತೆ ‘ಹಂಸಸಂದೇಶ’ ಕಾವ್ಯದಲ್ಲಿಯೂ ಹಿಮಾಲಯದಿಂದ ದಕ್ಷಿಣಾಂತದ ಸಿಂಧುಸಾಗರ ಪರ್ಯಂತ ಪ್ರಮುಖ ಕ್ಷೇತ್ರಗಳ ಸಂದರ್ಶನವಿದೆ. ಇಲ್ಲಿಯ ಕಥಾವಸ್ತುವಿನ ಹಂದರವಾದರೋ ಶ್ರೀರಾಮನ ಸೀತಾನ್ವೇಷಣೆ. ಕಾಳಿದಾಸ ಕೃತಿಯಲ್ಲಿ ಜಡವಾದ ಮೇಘವು ಮಾಧ್ಯಮವಾಗಿದ್ದರೆ ಶ್ರೀದೇಶಿಕರ ಕಾವ್ಯದಲ್ಲಿ ಸಚೇತನವಾದ ರಾಜಹಂಸವು ಮಾಧ್ಯಮವಾಗಿದೆ. ಇದು ಮೇಘಸಂದೇಶದ ಅನುಕೃತಿ ಎಂಬುದು ಸ್ಪಷ್ಟವಾಗಿಯೆ ಕಾಣುವಂತೆ ಉದ್ದಕ್ಕೂ ಸಾದೃಶ್ಯಗಳಿವೆ. ಅಲ್ಲಿ ಶಾಪಗ್ರಸ್ತ ಯಕ್ಷನು ವಿರಹತಪ್ತನಾಗಿ ಪ್ರಿಯೆಯ ಸಂಗಮಕ್ಕಾಗಿ ಹಾತೊರೆಯುವಂತೆ ಇಲ್ಲಿ ಶ್ರೀರಾಮನ ಪ್ರಸಕ್ತಿ:
ವಂಶೇ ಜಾತಸ್ಸವಿತುರನಘೇ ಮಾನಯನ್ ಮಾನುಷತ್ವಂ
ದೇವಃ ಶ್ರೀಮಾನ್ ಜನಕತನಯಾನ್ವೇಷಣೇ ಜಾಗರೂಕಃ ||
“ಪರಿಶುದ್ಧ ಸೂರ್ಯವಂಶಜಾತನಾದ ರಾಮನು ಲೋಕಹಿತಕ್ಕಾಗಿ ಮಾನುಷರೂಪ ತಳೆದು ಸೀತೆಯನ್ನು ಹುಡುಕುವುದರಲ್ಲಿ ತಲ್ಲೀನನಾದನು.”
ಸಮುದ್ರವನ್ನು ದಾಟಿ ಬಂದು ಭೇಟಿಯಾದ ಆಂಜನೇಯನ ಮೂಲಕ ಶ್ರೀರಾಮನಿಗೆ ಸೀತೆಯು ಸಂದೇಶ ಕಳಿಸುತ್ತಾಳೆ:
ಧಾರಯಿಷ್ಯಾಮಿ ಮಾಸಂ ತು ಜೀವಿತಂ ಶತ್ರುಸೂದನ |
ಮಾಸಾದೂಧ್ರ್ವಂ ನ ಜೀವಿಷ್ಯೇ ತ್ವಯಾ ಹೀನಾ ನೃಪಾತ್ಮಜ ||
ಒಂದು ತಿಂಗಳೊಳಗಾಗಿ ಶ್ರೀರಾಮನು ಬಂದು ತನ್ನನ್ನು ಮುಕ್ತಗೊಳಿಸಿ ಒಯ್ಯದಿದ್ದಲ್ಲಿ ತಾನು ಜೀವಂತ ಉಳಿಯಲಾರೆನೆಂದು ಹೇಳಿಕಳಿಸುತ್ತಾಳೆ. ಮುಂದಿನ ಕ್ರಮಗಳನ್ನು ಕುರಿತು ಚಿಂತಿತನಾಗಿದ್ದಾಗ ಶ್ರೀರಾಮನ ಕಣ್ಣಿಗೆ ಪದ್ಮಸರೋವರದಲ್ಲಿ ವಿಹರಿಸುತ್ತಿರುವ ಹಂಸವು ಕಾಣುತ್ತದೆ. ಹಂಸದ ವಿಲಾಸವಿಭ್ರಮಗಳಲ್ಲಿ ಶ್ರೀರಾಮನು ಸೀತೆಯ ಪ್ರತಿರೂಪವನ್ನೇ ಕಾಣುತ್ತಾನೆ. ಸೀತೆಗೆ ಪ್ರತಿಸಂದೇಶ ಕಳಿಸಲು ಹಂಸವನ್ನೇ ಏಕೆ ಮಾಧ್ಯಮವಾಗಿ ತೊಡಗಿಸಬಾರದೆಂದು ಯೋಚಿಸತೊಡಗುತ್ತಾನೆ; ಹಂಸವನ್ನು ಪ್ರಾರ್ಥಿಸುತ್ತಾನೆ. ತೆರಳುವ ಮೊದಲು ಹಂಸವು ತನ್ನ ದಯಿತೆಯಾದ ಪದ್ಮಿನಿಯ ಅನುಜ್ಞೆ ಪಡೆಯಬೇಕು – ಎಂದೆಲ್ಲ ಸೂಚನೆಗಳನ್ನು ನೀಡುತ್ತಾನೆ; ಹಂಸವು ಕ್ರಮಿಸಬೇಕಾದ ಮಾರ್ಗವನ್ನು ಸವಿವರವಾಗಿ ತಿಳಿಸುತ್ತಾನೆ.
ವಿರಹಿತ ನಾಯಕನನ್ನು ಕ್ಷಣಮಾತ್ರವೂ ಅಗಲಿಕೆ ಕಾಡದಿರಲಿ – ಎಂಬ ಆಶಂಸನೆಯೊಡನೆ ಕಾವ್ಯ ಮುಗಿಯುತ್ತದೆ.
ಸ್ತ್ರೋತ್ರಸಾಹಿತ್ಯ; ಸುಭಾಷಿತಗಳು
ಶ್ರೀ ವೇದಾಂತದೇಶಿಕರು ರಚಿಸಿದ ಸ್ತೋತ್ರಗಳೂ ಸಾಮಾನ್ಯವಾಗಿ ಸ್ತೋತ್ರಗಳಲ್ಲಿ ತುಂಬಿರುವ ಭಕ್ತ್ಯುದ್ಗಾರಗಳಿಗಿಂತ ಮೇಲ್ಮಟ್ಟದವಾಗಿವೆ. ನಿದರ್ಶನಕ್ಕೆ: ಕೃಷ್ಣನು ಬೆಣ್ಣೆ ಕದಿಯುವ ಜನಜನಿತ ಪ್ರಸಂಗವನ್ನು ಆಧರಿಸಿದ ಈ ಪದ್ಯವನ್ನು ‘ಗೋಪಾಲವಿಂಶತಿ’ಯಲ್ಲಿ ಕಾಣುತ್ತೇವೆ:
ಹರ್ತುಂ ಕುಂಭೇ ವಿನಿಹಿತಕರಃ ಸ್ವಾದು ಹೈಯಂಗವೀನಂ
ದೃಷ್ಟ್ವಾ ದಾಮಗ್ರಹಣಜಟುಲಾಂ ಮಾತರಂ ಜಾತರೋಷಾಮ್|
ಪಾಯಾದೀಷತ್ಪ್ರಚಲಿತಪದೋ ನಾಪಗಚ್ಛನ್ನ ತಿಷ್ಠನ್
ಮಿಥ್ಯಾಗೋಪಸ್ಸಪದಿ ನಯನೇ ಮೀಲಯನ್ವಿಶ್ವಗೋಪ್ತಾ||
ಕೃಷ್ಣನು ಬೆಣ್ಣೆಗಾಗಿ ಮಡಕೆಯಲ್ಲಿ ಕೈಹಾಕುವ ವೇಳೆಗೆ ಅಲ್ಲಿಗೆ ತಾಯಿ ಬಂದದ್ದನ್ನು ಗಮನಿಸಿ ಅಲ್ಲಿಂದ ನಿರ್ಗಮಿಸಲು ಯತ್ನಿಸುವುದು, ಆದರೆ ತಾಯಿ ಸಮೀಪಕ್ಕೆ ಬಂದುಬಿಟ್ಟಾಗ ಏನೂ ಮಾಡಲು ತೋರದೆ ಕಣ್ಣುಮುಚ್ಚಿಕೊಂಡು ನಿಂತಿರುವುದು – ಇಂತಹ ಸರ್ವಪರಿಚಿತ ವಸ್ತುವನ್ನು ಸ್ಮರಣೀಯ ಪದ್ಯವಾಗಿಸಿರುವ ಶ್ರೀದೇಶಿಕರ ಪ್ರತಿಭೆಯನ್ನು ಎಲ್ಲೆಡೆ ಕಾಣುತ್ತೇವೆ.
‘ಸುಭಾಷಿತನೀವೀ’ ಸಂಕಲನದ ಪದ್ಯಗಳಲ್ಲಿ ದಟ್ಟವಾದ ಲೋಕಾನುಭವವನ್ನು ಎಲ್ಲೆಡೆ ಗುರುತಿಸಬಹುದು. ಒಂದು ಉದಾಹರಣೆ ಪ್ರಕೃತಕ್ಕೆ ಪರ್ಯಾಪ್ತವಾದೀತು.
ಜನಿತ್ವಾýಪಿ ಮಹಾಗೋತ್ರೇ ನಿಮಗ್ನಾ ವಕ್ರಚೇಷ್ಟಿತಾಃ |
ವೈಪರೀತ್ಯಂ ವಿತನ್ವಂತಿ ಸಮೇಷು ವಿಷಮೇಷು ಚ ||
(ಖಲಪದ್ಧತಿಃ)
“ಲೋಕದಲ್ಲಿ ಕೆಲವರು ಉತ್ತಮಕುಲದಲ್ಲಿ ಜನಿಸಿದ್ದರೂ ಕೆಟ್ಟ ದಾರಿ ಹಿಡಿದಿರುತ್ತಾರೆ: ನದಿಯು ದೊಡ್ಡ ಪರ್ವತದಲ್ಲಿ ಉಗಮಗೊಂಡರೂ ಇದು ಸಮತಲ, ಇದು ಏರು-ತಗ್ಗು ಎಂಬ ಭೇದಗಳನ್ನು ಲಕ್ಷ್ಯಮಾಡದೆ ಎಲ್ಲ ಕಡೆ ವಿಚ್ಛøಂಖಲವಾಗಿ ಹರಿಯುವ ಹಾಗೆ. ಅದರಂತೆ ಕೆಲವರು ಉತ್ತಮವಂಶಜರಾದರೂ ಇವರು ಒಳ್ಳೆಯವರು, ಇವರು ಕೆಟ್ಟವರು ಎಂಬೀ ವಿವೇಚನೆ ಮಾಡದೆ ಎಲ್ಲರಲ್ಲಿಯೂ ವಿಪರೀತಾಚರಣೆ ಮಾಡಿ ಅಧಃಪಾತ ಹೊಂದುತ್ತಾರೆ.”
ವೇದಾಂತದೇಶಿಕರದೆಂದು (ತಿರೋಧಾನ ಕ್ರಿ.ಶ. 1369) ಉಪಲಬ್ದವಿರುವ ಅವರ ಚರಮಶ್ಲೋಕ ಹೀಗಿದೆ:
ಅಬ್ದೇ ಸೌಮ್ಯೇ ಚ ವಾರೇ ಗತವತಿತರಣೌ ವೃಶ್ಚಿಕಂ ಕೃತ್ತಿಕಕ್ರ್ಷೇ
ರಾಕಾಯಾಂ ವೇಂಕಟೇಶೋ ಯತಿನೃಪತಿಮತಂ ಸರ್ವತಃ ಸ್ಥಾಪಯಿತ್ವಾ |
ವೇದಾಂತಾಚಾರ್ಯನಾಮಾ ವಿರಚಿತವಿವಿಧಾನೇಕದಿವ್ಯಪ್ರಬಂಧಃ
ಶ್ರೀಶೈಲಾಧೀಶಘಂಟಾಕೃತಿವಪುರಭವದ್ದೇಶಿಕೇಂದ್ರೋ ದಯಾಳುಃ||
ವೇದಾಂತಾಸಕ್ತರಿಗೂ ಸಾಹಿತ್ಯಾಭ್ಯಾಸಿಗಳಿಗೂ ಅಮೂಲ್ಯನಿಧಿಯನ್ನು ನೀಡಿರುವ ಶ್ರೀ ವೇದಾಂತದೇಶಿಕರಿಗೆ ಅವರ 750ನೇ ಜನ್ಮವರ್ಷಾಚರಣೆಯ ಪರ್ವದಲ್ಲಿ ಶತನಮನಗಳು.