
ಜಗತ್ತಿನ ರಾಷ್ಟ್ರಗಳು, ಸಮಾಜಗಳು ಎಲ್ಲವೂ ಗತಿಶೀಲವಾದವು (ಡೈನಾಮಿಕ್); ಜಡವಾಗಿರುವುದಿಲ್ಲ. ಅದಕ್ಕೆ ಪ್ರಮುಖ ಕಾರಣವೆಂದರೆ, ಪ್ರತಿ ಸಮಾಜದ ಒಳಗೆ ಇರುವ ಅಂತಃಸತ್ತ್ವ. ಅದರ ಆಧಾರದ ಮೇಲೆ ಸಮಾಜಗಳು ಕೆಲಸ ಮಾಡುತ್ತವೆ. ಸಮಾಜ, ರಾಷ್ಟ್ರಗಳ ಏಳುಬೀಳುಗಳು ಈ ಅಂತಃಸತ್ತ್ವದ ಆಧಾರದ ಮೇಲೆಯೇ ಆಗುತ್ತವೆ. ಅದೇ ಆಯಾ ಸಮಾಜ, ರಾಷ್ಟ್ರಗಳ ಅನನ್ಯತೆಯನ್ನು (ಕ್ಯಾರೆಕ್ಟರ್) ಹೊರಹೊಮ್ಮಿಸುವುದು. ಒಂದು ಸಮಾಜ ಅಥವಾ ರಾಷ್ಟ್ರವು ಕಷ್ಟದ, ಆತಂಕದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾಗ, ಈ ಅಂತಃಸತ್ತ್ವ ಪೂರ್ಣಪ್ರಮಾಣದಲ್ಲಿ ಹೊರಹೊಮ್ಮುತ್ತದೆ. ಸಂಕಷ್ಟ ಪರಿಸ್ಥಿತಿಯನ್ನು ಎದುರಿಸಿ ಗೆದ್ದು ಬರುವ ಸಾಮಥ್ರ್ಯವನ್ನು ಸಮಾಜಕ್ಕೆ ನೀಡುತ್ತದೆ. ಈ ಅಂತಃಸತ್ತ್ವ ಬಹುಪಾಲು ಪ್ರಕಟಗೊಳ್ಳುವುದು ವ್ಯಕ್ತಿಗಳ ಸ್ವರೂಪದಲ್ಲಿ. ಬುದ್ಧ, ಮಹಾವೀರ, ಶಂಕರ, ಬಸವ, ವಿವೇಕಾನಂದ, ಕಾಳಿದಾಸ, ಭವಭೂತಿ, ಚಾಣಕ್ಯ, ಹಕ್ಕ-ಬುಕ್ಕರು, ರಣಜಿತ್ಸಿಂಹ, ಶಿವಾಜಿ – ಮೊದಲಾದವರೆಲ್ಲ ಆ ಅಂತಃಸತ್ತ್ವದ ಪ್ರತೀಕಗಳು. ಈ ಸಾಲಿಗೆ ಸೇರುವವರು ಗಾಂಧಿಜೀ ಅವರು. ಹತ್ತೊಂಬತ್ತನೆ ಶತಮಾನದ ಮಧ್ಯಭಾಗದಿಂದ ಇಪ್ಪತ್ತನೆಯ ಶತಮಾನದ ಮಧ್ಯಭಾಗದವರೆಗಿನದು ಕ್ರಾಂತಿ ಮತ್ತು ಸತ್ಯಾಗ್ರಹಗಳ ಧಾರೆಗಳಲ್ಲಿ ಸ್ವಾತಂತ್ರ್ಯ ಹೋರಾಟ ನಡೆಯುತ್ತಿದ್ದ ಕಾಲ. ಆ ಕಾಲಖಂಡದಲ್ಲಿ ಜನಿಸಿದ ಅನೇಕ ಮಹನೀಯರು ಶಕ್ತಿಯ ಆವಿರ್ಭಾವ ರೂಪವಾಗಿ ಸಮಾಜವನ್ನು ಮುನ್ನಡೆಸಿದರು. ಅದರ ಫಲರೂಪವಾಗಿ ಸ್ವಾತಂತ್ರ್ಯಪ್ರಾಪ್ತಿ ಆಯಿತು. ಆ ಹೊತ್ತಿನ ಸ್ವಾತಂತ್ರ್ಯಾಂದೋಲನದ ಒಂದು ವಿಶೇಷವೆಂದರೆ ಆಗ ಕೆಲಸ ಮಾಡಿದ ಎಲ್ಲ ಮಹನೀಯರೂ ಮಹಿಳೆಯರೂ ಸ್ವಾತಂತ್ರ್ಯ ಹೋರಾಟದ ಜೊತೆಗೆ ಸಮಾಜಸುಧಾರಣೆಯ ಕೆಲಸಗಳನ್ನೂ ಕೂಡ ಮಾಡಿದರು. ಸ್ವಾತಂತ್ರ್ಯದ ನಂತರ ಈ ದೇಶ ಹೇಗೆ ನಿರ್ಮಾಣವಾಗಬೇಕೆಂಬ ರೂಪರೇಖೆಗಳನ್ನೂ ತಯಾರಿಸಿದರು. ಏಕಕಾಲಕ್ಕೆ ಈ ಮೂರು ಸಂಗತಿಗಳನ್ನೂ ಮಾಡಿದರು. ಈ ಹಿನ್ನೆಲೆಯಲ್ಲಿ ನೋಡಿದಾಗ ಗಾಂಧಿಜೀ ಅಗ್ರಮಾನ್ಯರಾಗಿ ನಮಗೆ ಕಾಣುತ್ತಾರೆ. ಈ ಕಾರಣಕ್ಕಾಗಿಯೇ ಅವರು ನಮಗೆ ಪ್ರಾತಃಸ್ಮರಣೀಯರಾಗಿದ್ದಾರೆ. ಅವರ ಚಿಂತನೆಗಳು ಇಂದಿಗೂ ಮಾರ್ಗದರ್ಶನ ಮಾಡುತ್ತಿವೆ. ಅವರ ವಿಚಾರಗಳು ಸಮಾಜಕ್ಕೆ, ದೇಶಕ್ಕೆ ಮತ್ತು ನಮ್ಮ ವೈಯಕ್ತಿಕ ಜೀವನಕ್ಕೆ ಯಾವಾಗಲೂ ಪ್ರಸ್ತುತವಾಗಿವೆ.
ಗಾಂಧಿಜೀ ಚಿಂತನೆಗಳ ಬಗ್ಗೆ ವಿಚಾರ ಮಾಡುವ ಮುನ್ನ ಅವರ ಜೀವನದ ಸಂಕ್ಷಿಪ್ತ ಪರಿಚಯವನ್ನು ಮಾಡಿಕೊಳ್ಳುವುದು ಸೂಕ್ತ. ಇಂದಿನ ಗುಜರಾತಿನ ಪೆÇೀರಬಂದರಿನಲ್ಲಿ 1869ರ ಅಕ್ಟೋಬರ್ 2ರಂದು ಮೋಹನದಾಸ ಕರಮಚಂದ ಗಾಂಧಿ ಜನಿಸಿದರು. ಅವರ ತಂದೆ ಕರಮಚಂದ ಗಾಂಧಿ ಪೆÇೀರಬಂದರ್ ಸಂಸ್ಥಾನದ, ಆನಂತರ ರಾಜ್ಕೋಟ್ ಸಂಸ್ಥಾನದ ದಿವಾನರಾಗಿದ್ದರು. ತಾಯಿ ಪುತಲಿಬಾಯಿ. ನಮ್ಮೆಲ್ಲ ಮಹಾಪÀÅರುಷರ ಜೀವನದಲ್ಲಿ ಕಾಣುವ ಒಂದು ಸಾಮಾನ್ಯ ಅಂಶವನ್ನು ಗಾಂಧಿಯವರ ಜೀವನದಲ್ಲೂ ಕಾಣುತ್ತೇವೆ. ಮುಂದೆ ಅವರು ಮಹಾನ್ ವ್ಯಕ್ತಿಯಾಗಿ ಬೆಳೆದು, ಜೀವನದಲ್ಲಿ ರೂಢಿಸಿಕೊಂಡ ಉದಾತ್ತ ಮËಲ್ಯಗಳು, ಧಾರ್ಮಿಕ ಶ್ರದ್ಧೆ – ಇವಕ್ಕೆಲ್ಲ ಬಹುಪಾಲು ಕಾರಣ ಆದವರು ಅವರ ತಾಯಿ.

ಗಾಂಧಿಜೀ 1891ರಲ್ಲಿ ಲಂಡನ್ನಲ್ಲಿ ಬಾರ್-ಎಟ್-ಲಾ ಪರೀಕ್ಷೆ ಮುಗಿಸಿಕೊಂಡು ಭಾರತಕ್ಕೆ ಬಂದರು. ಅಂದು ವಕೀಲರಾಗಬೇಕಿದ್ದರೆ ಅದೇ ಅತ್ಯುನ್ನತ ಪರೀಕ್ಷೆಯಾಗಿದ್ದು, ಅದನ್ನು ಕಲಿಯಲು ಲಂಡನ್ನಿಗೆ ಹೋಗಬೇಕಿತ್ತು. ಬಳಿಕ ಅಂದಿನ ಬೊಂಬಾಯಿ ಪ್ರಾಂತದ ರಾಜಕೋಟ್ನಲ್ಲಿ ವಕೀಲವೃತ್ತಿಯನ್ನು ಆರಂಭಿಸಿದರು. 1893ರಲ್ಲಿ ವಕೀಲವೃತ್ತಿಯನ್ನು ನಡೆಸಲು ದಕ್ಷಿಣ ಆಫ್ರಿಕಾಕ್ಕೆ ಹೋದರು. ಆ ಕಾಲಖಂಡದಲ್ಲಿ, ದಕ್ಷಿಣ ಆಫ್ರಿಕದಲ್ಲಿ ಬಿಳಿಯ ಜನಾಂಗದವರ ವರ್ಣಭೇದ ನೀತಿ ಅತ್ಯಂತ ಅಸಹನೀಯವಾಗಿತ್ತು. ಭಾರತೀಯರನ್ನು ತುಚ್ಛವಾಗಿ ಕಾಣುತ್ತಿದ್ದರು. ಭಾರತೀಯರು ಯಾವುದೇ ವೃತ್ತಿಯಲ್ಲಿರಲಿ ಅವರನ್ನು ‘ಕೂಲಿ’ ಎಂದೇ ಸಂಬೋಧಿಸುತ್ತಿದ್ದರು – ಕೂಲಿ ವಕೀಲ, ಕೂಲಿ ಅಧ್ಯಾಪಕ, ಇತ್ಯಾದಿ. ಗಾಂಧಿಜೀ ಬ್ರಿಟಿಷರ ದೌರ್ಜನ್ಯ, ಅನ್ಯಾಯಗಳ ವಿರುದ್ಧ ಹೋರಾಡಲು ನಿಶ್ಚಯಿಸಿದರು. ಅಲ್ಲಿಯ ಭಾರತೀಯರನ್ನು ಸಂಘಟಿಸಿ ‘ಸತ್ಯಾಗ್ರಹ’ದ ಮೂಲಕ ಹೋರಾಟವನ್ನು ನಡೆಸಿದರು. ಸತ್ಯಾಗ್ರಹದ ಮೊದಲ ಪ್ರಯೋಗವನ್ನು ಗಾಂಧಿಜೀ ಅವರು ಮಾಡಿದ್ದು ದಕ್ಷಿಣ ಆಫ್ರಿಕಾದಲ್ಲಿಯೇ. ಅಲ್ಲಿ ಬ್ರಿಟಿಷರಿಂದ ನಡೆಯುತ್ತಿದ್ದ ದೌರ್ಜನ್ಯ, ಅನ್ಯಾಯಗಳ ವಿರುದ್ಧ ಹೋರಾಟ ನಡೆಸಿ ಜನರನ್ನು ಸಂಘಟಿಸಿದರು. ಅನೇಕ ರೀತಿಯ ಅನ್ಯಾಯದ ಕಾನೂನುಗಳನ್ನು ಬದಲಾಯಿಸುವಲ್ಲಿ ಯಶಸ್ವ್ವಿಯಾದರು. ಹಾಗಾಗಿ ಅವರ ಹೆಸರು ಜಗತ್ತಿಗೆ ಪರಿಚಯವಾಯಿತು.
ಮೌಲ್ಯಗಳ ಅನುಸರಣೆ
1915ರಲ್ಲಿ ಗಾಂಧಿಜೀ ಭಾರತಕ್ಕೆ ವಾಪಸು ಬಂದರು. ಭಾರತದಲ್ಲಿ ನಡೆಯುತ್ತಿದ್ದ ಸ್ವಾತಂತ್ರ್ಯ ಆಂದೋಲನದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಆಗ ಚಳವಳಿಯ ನೇತೃತ್ವ ವಹಿಸಿದ್ದವರು ಲೋಕಮಾನ್ಯ ಬಾಲಗಂಗಾಧರ ತಿಲಕರು ಮತ್ತು ಗೋಪಾಲಕೃಷ್ಣ ಗೋಖಲೆಯವರು. ಗಾಂಧಿಜೀ ಗೋಖಲೆಯವರನ್ನು ತಮ್ಮ ಗುರುವಾಗಿ ಸ್ವೀಕರಿಸಿದರು. ಮುಂದೆ 1915 ರಿಂದ 1948ರ ತನಕ 37 ವರ್ಷಗಳ ಕಾಲ ನಿರಂತರವಾಗಿ ಸ್ವಾತಂತ್ರ್ಯ ಆಂದೋಲನ ಮತ್ತು ಸಮಾಜಸುಧಾರಣೆಯ ಕಾರ್ಯಗಳ ನೇತೃತ್ವವನ್ನು ಗಾಂಧಿಜೀ ವಹಿಸಿದರು. ತಮಗೆ ಮಾರ್ಗದರ್ಶನ ರೂಪವಾಗಿ ಒಂದು ಸಂದೇಶ ಬೇಕೆÀಂದು ಗಾಂಧಿಯವರು ಕೇಳಿದಾಗ ಗೋಖಲೆಯವರು “ರಾಜಕೀಯವನ್ನು ಅಧ್ಯಾತ್ಮೀಕರಣಗೊಳಿಸಿ” (Spiritualise politics) ಎನ್ನುವ ಸಲಹೆ ನೀಡಿದರು. ಇಡೀ ದೇಶವನ್ನು ಸುತ್ತಿ ಭಾರತವನ್ನು ಅರಿಯಲು ತಿಳಿಸಿದರು. ತಮ್ಮ ಗುರುವಿನ ಆದೇಶದಂತೆ ಗಾಂಧಿಜೀ ಒಂದು ವರ್ಷ ಕಾಲ ಭಾರತದ ಪರ್ಯಟನೆಯನ್ನು ಮಾಡಿದರು. ದೇಶದ ಜನತೆಯನ್ನು ಪ್ರತ್ಯಕ್ಷ ಕಂಡರು. ರಾಜಕೀಯದಲ್ಲಿ ಅಧ್ಯಾತ್ಮವನ್ನು (Spiritualisation) ತರುವುದು ಹೇಗೆ ಎನ್ನುವ ಪ್ರಶ್ನೆ ಬರುತ್ತದೆ. ಆದರೆ ಗಾಂಧಿಯವರ ಜೀವನವನ್ನು ನೋಡಿದಾಗ ಅವರು ಅದಕ್ಕಾಗಿ ಹೇಗೆ ಪ್ರಯತ್ನಪಟ್ಟರು ಎಂಬುದು ತಿಳಿಯುತ್ತದೆ. ತಮ್ಮ ತಾಯಿಯವರ ಪ್ರಭಾವದಿಂದ ಗಾಂಧಿ ಮೂಲತಃ ಧಾರ್ಮಿಕ ಪ್ರವೃತ್ತಿಯವರಾಗಿದ್ದರು. ಅವರ ಎಲ್ಲ ಕಾರ್ಯಕ್ರಮ, ಸಭೆಗಳು ಅವರಿಗೆ ಪ್ರಿಯವಾಗಿದ್ದ “ವೈಷ್ಣವ ಜನತೋ” ಭಜನೆಯಿಂದ ಪ್ರಾರಂಭವಾಗುತ್ತಿದ್ದವು. ಪ್ರಸಿದ್ಧವಾದ ‘ರಘುಪತಿ ರಾಘವ ರಾಜಾರಾಂ’ ಭಜನೆಯನ್ನು ಕೂಡ ಹಾಡಲಾಗುತ್ತಿತ್ತು. ಭಗವದ್ಗೀತೆ ಮತ್ತು ಈಶಾವಾಸ್ಯ ಉಪನಿಷತ್ತುಗಳಿಂದ ಗಾಂಧೀಜಿ ತುಂಬ ಪ್ರಭಾವಿತರಾಗಿದ್ದರು. ಭಗವದ್ಗೀತೆಗೆ ಒಂದು ಅನುವಾದವನ್ನೂ ಅವರು ಬರೆದರು. ಸ್ಥಿತಪ್ರಜ್ಞನ ಲಕ್ಷಣವನ್ನು ತಿಳಿಸುವ ಭಗವದ್ಗೀತೆಯ ಶ್ಲೋಕಗಳು ಅವರ ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರಿದವು. ತಮ್ಮ ಉಪನ್ಯಾಸಗಳಲ್ಲಿ ಅದನ್ನು ಉದಾಹರಿಸುತ್ತಿದ್ದರು. ತಮ್ಮ ಗೀತಾನುವಾದವನ್ನು ಅವರು ‘ಅನಾಸಕ್ತಿಯೋಗ’ ಎಂದೇ ಕರೆದರು. ತಾವು ಮಾಡುವ ಎಲ್ಲ ಕೆಲಸಗಳು ಭಗವದ್ಗೀತೆಯ ಆದೇಶದಂತೆ ‘ಮಾ ಫಲೇಷು ಕದಾಚನ’ ಎಂಬ ಅನಾಸಕ್ತ ಯೋಗದಂತಿರಬೇಕೆಂದು ಅವರು ತಿಳಿದಿದ್ದರು. ಯಾವುದೇ ಅಪೇಕ್ಷೆ ಇಲ್ಲದೆ, ಆದರೆ ಮಾಡಬೇಕಾದ ಎಲ್ಲ ಕರ್ತವ್ಯಗಳನ್ನು ಮಾಡಬೇಕು – ಅದನ್ನವರು ಸ್ವತಃ ಪ್ರಯೋಗ ಮಾಡಿ ತೋರಿಸಿದರು. ಗಾಂಧಿಜೀ ತಮ್ಮ ಜೀವನದಲ್ಲಿ ಇಂತಹ ಅನೇಕ ಪ್ರಯೋಗಗಳನ್ನು ಮಾಡಿದ್ದರು. ಇವೆಲ್ಲವೂ ಅವರು ಮಾಡಿದ ಅಧ್ಯಾತ್ಮೀಕರಣದ ಪ್ರಯೋಗಗಳು. ಇಡೀ ಜಗತ್ತು ಭಗವಂತನಿಗೆ ಸೇರಿದ್ದು, ಅವನು ನೀಡಿದ್ದನ್ನು ನಾವು ಉಪಯೋಗಿಸಬೇಕು (ಈಶಾವಾಸ್ಯಮಿದಂ ಸರ್ವಂ; ತೇನ ತ್ಯಕ್ತೇನ ಭುಂಜೀಥಾಃ) ಎನ್ನುವ ಈಶಾವಾಸ್ಯ ಉಪನಿಷತ್ತಿನ ವಾಕ್ಯ ಅವರ ಮೇಲೆ ಬಹಳ ಪ್ರಭಾವ ಬೀರಿತ್ತು. ಅವರ ‘ಟ್ರಸ್ಟೀಶಿಪ್’ ಪರಿಕಲ್ಪನೆಗೆ ಈ ವಾಕ್ಯವೇ ಮೂಲ.
ಅಹಮದಾಬಾದಿನಲ್ಲಿ ಸಬರಮತಿ ದಡದಲ್ಲಿದ್ದ ಅವರ ಆಶ್ರಮಕ್ಕೆ ಸೇವಾವ್ರತಿಗಳಾಗಿ ಬರುವವರು ಮತ್ತು ಅನುಯಾಯಿಗಳಾಗಿ ಸತ್ಯಾಗ್ರಹದಲ್ಲಿ ತೊಡಗುವ ಕಾರ್ಯಕರ್ತರೆಲ್ಲರೂ ಪ್ರತಿದಿನ ಪ್ರಾತಃಸ್ಮರಣೆ ಮತ್ತು ಪ್ರಾರ್ಥನೆ ಮಾಡಬೇಕಿತ್ತು. ಪ್ರಾರ್ಥನೆಯಲ್ಲಿ ಸೇವಾವ್ರತಿಗಳು ಮತ್ತು ಸತ್ಯಾಗ್ರಹಿ ಕಾರ್ಯಕರ್ತರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಮೌಲ್ಯಗಳಿದ್ದವು:
- ಅಹಿಂಸಾ ಸತ್ಯ ಅಸ್ತೇಯ ಬ್ರಹ್ಮಚರ್ಯ ಅಸಂಗ್ರಹ
- ಶರೀರಶ್ರಮ ಅಸ್ವಾದ ಸರ್ವತ್ರ ಭಯವರ್ಜನ |
- ಸರ್ವಧರ್ಮಸಮಾನತ್ವ ಸ್ವದೇಶೀ ಸ್ಪರ್ಶಭಾವನ
- ಹೀ ಏಕಾದಶ ಸೇನಾನೀ ನಮ್ರತ್ವೇ ವ್ರತನಿಶ್ಚಯೇ ||
ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಸಂಗ್ರಹ, ಶರೀರ ಶ್ರಮ, ಅಸ್ವಾದ, ಸರ್ವತ್ರ ಭಯವರ್ಜನ, ಸರ್ವಧರ್ಮ ಸಮಾನತ್ವ, ಸ್ವದೇಶೀ, ಸ್ವರ್ಶಭಾವನಾ – ಇವು ಹನ್ನೊಂದು ಸೇವಾವ್ರತದಲ್ಲಿ ಸೇರಿವೆ ಎಂದು ಗಾಂಧಿಜೀ ಸೂತ್ರಿಸುತ್ತಿದ್ದರು. ಇವುಗಳನ್ನು ಪ್ರÀತಿಯೊಬ್ಬರೂ ಹೇಳುವುದμÉ್ಟೀ ಅಲ್ಲ, ಪಾಲಿಸಲು ಬೇಕಾದ ತರಬೇತಿಯನ್ನೂ ಆಶ್ರಮದಲ್ಲಿ ಕೊಡುತ್ತಿದ್ದರು.
ಗಾಂಧಿಜೀ ಅವರ ಧಾರ್ಮಿಕ ಪ್ರವೃತ್ತಿಯ ಬಗ್ಗೆ ನಾವು ತಿಳಿಯಬೇಕು. ಏಕೆಂದರೆ, ಮುಂದೆ ಅವರು ಯಾವ ರೀತಿ ಚಿಂತನೆಗಳನ್ನು ಮಾಡಿದರು, ಸತ್ಯಾಗ್ರಹವನ್ನು ಹೇಗೆ ರೂಪಿಸಿದರು, ಭವಿಷ್ಯದ ಭಾರತ ಹೇಗೆ ನಿರ್ಮಾಣವಾಗಬೇಕೆಂದು ಬಯಸಿದರು, ಜಗತ್ತಿಗೂ ಹೇಗೆ ಕಲ್ಯಾಣವಾಗಬೇಕು ಮುಂತಾದ ವಿಚಾರಗಳನ್ನು ಅವರು ಹೇಳಬೇಕಾದರೆ ಅವರ ಮನಸ್ಸಿನಲ್ಲಿ ಏನಿತ್ತು ಎಂಬುದು ನಮಗೆ ಅರ್ಥವಾಗಬೇಕಾಗುತ್ತದೆ. ಧಾರ್ಮಿಕವಾಗಿ ಅವರೊಬ್ಬ ಶ್ರದ್ಧಾವಂತರು. ಎಲ್ಲವನ್ನೂ ಪ್ರಜ್ಞಾಪೂರ್ವಕವಾಗಿ ವಿಚಾರ ಮಾಡಿದವರು. ಅವರ ಎಲ್ಲ ವಿಚಾರಗಳು ನಮ್ಮ ಹಿಂದೂಪರಂಪರೆಯಲ್ಲಿ ಬಂದಿರುವ ಚಿಂತನೆಗಳ ಆಧಾರದ ಮೇಲೆ ರೂಪಗೊಂಡವಾಗಿದ್ದವು. ಅವರು ತಮ್ಮ ಉಪನ್ಯಾಸಗಳಲ್ಲಿ, ಕಾರ್ಯಕರ್ತರಿಗೆ ಮಾಡುತ್ತಿದ್ದ ಬೋಧನೆಗಳಲ್ಲಿ ಮತ್ತು ರಾಜಕೀಯ ಭಾಷಣಗಳಲ್ಲಿ ಕೂಡ ಈ ಚಿಂತನೆಗಳನ್ನು ಬಳಸುತ್ತಿದ್ದರು. ಶ್ರದ್ಧೆ, ಅಹಿಂಸೆ, ಪ್ರಾರ್ಥನೆ, ಭಗವಂತ ಈ ಸಂಗತಿಗಳಿಲ್ಲದೆ ಅವರು ಮಾತನಾಡುತ್ತಲೇ ಇರಲಿಲ್ಲ. ಈ ದೃಷ್ಟಿಯಲ್ಲಿ ಅವರು ಅತ್ಯಂತ ಶ್ರದ್ಧಾವಂತ ಮತ್ತು ಪ್ರಜ್ಞಾವಂತ ಹಿಂದೂ ಆಗಿದ್ದರು. ಈ ವಿಚಾರಗಳನ್ನು ಅವರು ಆಧುನಿಕ ಪರಿಭಾμÉಯಲ್ಲಿ ತಿಳಿಸುತ್ತಿದ್ದರು.
ಅಷ್ಟೇ ಅಲ್ಲ, ಗಾಂಧಿಜೀ ಅವರ ವಿಚಾರಗಳನ್ನು ಗಮನಿಸುವಾಗ ಅದರಲ್ಲಿ ಸ್ವಾಮಿ ವಿವೇಕಾನಂದರು ಮತ್ತು ಶ್ರೀ ಅರವಿಂದರು ಹೇಳಿದಂತಹ ವಿಚಾರಗಳು ಕೂಡ ಕಾಣಿಸುತ್ತವೆ. ಅಲ್ಲದೇ, ಸಂಘದ ಸ್ಥಾಪಕ ಪರಮಪೂಜ್ಯ ಡಾಕ್ಟರ್ ಕೇಶವ ಬಲಿರಾಮ ಹೆಡಗೆವಾರ್ ಅವರ ವಿಚಾರಗಳು, ಅನಂತರ ಸಂಘವನ್ನು ಬೆಳೆಸಿದ ಶ್ರೀಗುರೂಜೀ ಗೋಲ್ವಲಕರ್ ಅವರ ವಿಚಾರಗಳು, ದೀನದಯಾಳ ಉಪಾಧ್ಯಾಯ ಅವರ ಏಕಾತ್ಮ ಮಾನವದರ್ಶನದ ವಿಚಾರಗಳು ಮತ್ತು ಗಾಂಧಿಜೀ ಅವರ ವಿಚಾರಗಳು – ಎಲ್ಲದರಲ್ಲೂ ಪರಸ್ಪರ ಸಾಮ್ಯ ಕಾಣಿಸುತ್ತದೆ. ಇದಕ್ಕೆ ಕಾರಣವೆಂದರೆ, ಎಲ್ಲರ ಚಿಂತನೆಗೂ ಮೂಲ ಒಂದೇ ಆಗಿರುವ, ಸಹಸ್ರಾರು ವರ್ಷಗಳಿಂದ ನಮ್ಮ ಪರಂಪರೆಯಲ್ಲಿ ಬೆಳೆದು ಬಂದಿರುವ ಹಿಂದೂ ಚಿಂತನೆಯ ವಿಚಾರಗಳು. ಈ ಕಾರಣದಿಂದ ನಮಗೆ ಇವೆಲ್ಲ ಸಮಾನವಾಗಿ ಕಾಣುತ್ತವೆ. ಆದ್ದರಿಂದ ಗಾಂಧಿಜೀ ಪ್ರತಿಪಾದನೆ ಮಾಡಿರುವ ವಿಚಾರಗಳು ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ ಹೇಳುವ ವಿಚಾರಗಳು ಸಮಾನಾಂತರ ಅಲ್ಲ್ಲ; ಬದಲಾಗಿ ಪರಸ್ಪರ ಒಂದಾಗಿ ಸೇರುವ ವಿಷಯಗಳು (ಪ್ಯಾರಲಲ್ ಅಲ್ಲ, ಕನ್ವರ್ಜಿಂಗ್). ಒಂದು ಸಮಾನ ಬಿಂದುವಿನಲ್ಲಿ ಎರಡೂ ಒಂದಾಗುತ್ತವೆ. ಈ ಹಿನ್ನೆಲೆಯೊಂದಿಗೆ ಗಾಂಧಿಯವರ ಚಿಂತನೆಗಳನ್ನು ನಾವು ಪರಿಶೀಲಿಸಬಹುದು.
ಸ್ವದೇಶೀ-ಸತ್ಯಾಗ್ರಹ-ಸರ್ವೋದಯ-ಸ್ವಾವಲಂಬನೆ
ಗಾಂಧಿಜೀ ನಮಗೆ ಮತ್ತು ಜಗತ್ತಿಗೆ ನೀಡಿದ ಎರಡು ದೊಡ್ಡ ಕೊಡುಗೆಗಳೆಂದರೆ, ಸತ್ಯಾಗ್ರಹ ಮತ್ತು ಅವರ ವಿಚಾರಗಳ ಸಾರಸಂಗ್ರಹವಾದ ಸರ್ವೋದಯ. ಸತ್ಯಾಗ್ರಹದ ವಿಷಯದಲ್ಲಿ ಬಹಳ ಪ್ರಮುಖವಾದ ಸಂಗತಿ ಎಂದರೆ, ಬ್ರಿಟಿಷರ ಪಾಶವೀ ಶಕ್ತಿ, ರಾಜಕೀಯ ಕುಟಿಲತೆಗಳು, ಚತುರತೆ ಮತ್ತು ಮಿಲಿಟರಿ ಶಕ್ತಿಗಳ ಮುಂದೆ ನಮ್ಮ ದೇಶದ ಜನತೆ ಹತಪ್ರಭರಾಗಿದ್ದರು. ಸ್ವಾತಂತ್ರ್ಯ ಹೋರಾಟವನ್ನು ಸ್ವಲ್ಪ ಜನ ನಡೆಸುತ್ತಿದ್ದರು. ಆದರೆ ಸಾಮಾನ್ಯ ಜನರಲ್ಲಿ ಹೆಚ್ಚಾಗಿ ‘ಯಾರು ರಾಜ್ಯ ಆಳಿದರೇನು? ನಮ್ಮ ಜೀವನ ನಾವು ನಡೆಸಿಕೊಂಡು ಹೋದರೆ ಸಾಕು. ರಾಮಾಯ ಸ್ವಸ್ತಿ, ರಾವಣಾಯ ಸ್ವಸ್ತಿ’ ಎನ್ನುವ ಭಾವನೆಯಿತ್ತು. ಅದನ್ನು ಬದಲಾಯಿಸಿ ಸಾಮಾನ್ಯರಲ್ಲಿ ನನಗೂ ಸ್ವಾತಂತ್ರ ಬೇಕು ಎನ್ನುವ ಅಭೀಪ್ಸೆಯನ್ನು ಮೂಡಿಸಿ, ರಾಮಾಯ ಸ್ವಸ್ತಿ ಎನ್ನುವುದೇ ಸರಿ; ಸ್ವಾತಂತ್ರ್ಯಕ್ಕಾಗಿ ಪಾಶವೀ ಶಕ್ತಿಯನ್ನು ಕೂಡ ನಾನು ಎದುರಿಸಬಲ್ಲೆ ಎಂಬ ಧೈರ್ಯ ಉಂಟುಮಾಡಿದ್ದಲ್ಲದೆ, ಸೋದರರೊಂದಿಗೆ ಸೋದರಿಯರು ಕೂಡ ಈ ಹೋರಾಟಕ್ಕೆ ಇಳಿಯುವಂತೆ ಮಾಡಿದ್ದು ಗಾಂಧಿಜೀಯವರ ‘ಸತ್ಯಾಗ್ರಹ’.ಅವರು, ಚರಖಾದಿಂದ ದಾರವನ್ನು ನೂಲುವುದನ್ನು ಪ್ರಚುರಪಡಿಸಿದಾಗ, ‘ನೂತುಬಿಟ್ಟರೆ ಸ್ವಾತಂತ್ರ್ಯ ಬರುತ್ತದೆಯೆ’ ಎಂದು ತಮಾಷೆ ಮಾಡಿದವರಿದ್ದರು. ನೂಲು ತೆಗೆಯುವುದರ ಹಿಂದೆ ಒಂದು ದೊಡ್ಡ ತತ್ತ್ವ ಇತ್ತು. ನಾನು ಹಾಕಿಕೊಳ್ಳುವ ಬಟ್ಟೆ ನಾನೇ ನೇಯ್ದ ನೂಲಿನಿಂದ ತಯಾರಾದ ಬಟ್ಟೆ – ಸ್ವದೇಶೀ. ಹಾಗೆಯೇ ನನ್ನನ್ನು ಆಳುವವರೂ ಕೂಡ ಸ್ವದೇಶೀ ಆಗಿರಬೇಕು. ಈಗ ವಿದೇಶೀಯರು ನಮ್ಮನ್ನು ಆಳುತ್ತಿದ್ದಾರೆ, ಅವರ ವಿರುದ್ಧ ಹೋರಾಡಬೇಕು. ಚರಖಾದಿಂದ ತೆಗೆದ ದಾರ ಈ ಭಾವನೆಗೆ ಸಂಕೇತವಾಯಿತು. ಆ ಕಾರಣದಿಂದಲೇ ಸತ್ಯಾಗ್ರಹ ನಮ್ಮ ದೇಶದಲ್ಲಿ ಮಾತ್ರವಲ್ಲ, ಬೇರೆ ಕಡೆಗಳಲ್ಲಿ ಕೂಡ ಪರಿಣಾಮಕಾರಿಯಾಗಿ ಬಳಕೆಯಾಯಿತು. ಅಮೆರಿಕದಲ್ಲಿ ಕಪ್ಪು ಸಮುದಾಯದವರ ಮೇಲೆ ನಡೆಯುತ್ತಿದ್ದ ದೌರ್ಜನ್ಯದ ವಿರುದ್ಧ ಹೋರಾಡಿದ ಮಾರ್ಟಿನ್ ಲೂಥರ್ ಕಿಂಗ್ ಕೂಡ ಉಪಯೋಗಿಸಿದ್ದು ಸತ್ಯಾಗ್ರಹ ಅಸ್ತ್ರವನ್ನೇ.

ಗಾಂಧಿಜೀ ಕೊಟ್ಟ ಇನ್ನೊಂದು ವಿಚಾರ ಸರ್ವೋದಯ. ಅವರ ಚಿಂತನೆಯಲ್ಲಿ ಸರ್ವೋದಯವೆಂದರೆ, ಸರ್ವರ ಉದಯ, ಇಡೀ ಸಮಾಜದ ಉತ್ಕರ್ಷ. ಇದು ಕೂಡ ಪ್ರಾಚೀನ ಕಾಲದಿಂದ ಹಿಂದೂಪರಂಪರೆಯ ಚಿಂತನೆಯೇ ಆಗಿದೆ. ವ್ಯಕ್ತಿ ಹಾಗೂ ಸಮಾಜ ಇವೆರಡೂ ಪ್ರಮುಖವಾಗಿರುವವು ಮತ್ತು ಅವೆರಡರ ಸರ್ವಾಂಗೀಣ ಉನ್ನತಿಯಾಗಬೇಕು. ವ್ಯಕ್ತಿ (ವ್ಯಷ್ಟಿ)-ಸಮಾಜ (ಸಮಷ್ಟಿ) ಇವು ಪರಸ್ಪರ ಪೂರಕವಾಗಿ ಇರಬೇಕು ಎನ್ನುವುದು ಆಶಯ. ಪಾಶ್ಚಾತ್ಯ ಚಿಂತನೆಯಲ್ಲಿ ವ್ಯಕ್ತಿಗೆ ಹೆಚ್ಚಿನ ಮಹತ್ತ್ವ ನೀಡಲಾಗುತ್ತದೆ. ವ್ಯಕ್ತಿಯ (Individual) ಉನ್ನತಿಯಾದರೆ ಸಾಕು ಎನ್ನುವ ಚಿಂತನೆ ಅಲ್ಲಿಯದು. ವಿಪರ್ಯಾಸವೆಂದರೆ ಈಗ ನಮ್ಮ ದೇಶದಲ್ಲೂ ಆ ಚಿಂತನೆ ಬೆಳೆಯುತ್ತಿದೆ. ವ್ಯಕ್ತಿ ಮತ್ತು ಸಮಾಜ ಎರÀಡರದ್ದೂ ಸರ್ವಾಂಗೀಣ ಉನ್ನತಿಯಾಗಬೇಕೆಂದು ಗಾಂಧಿ ಹೇಳಿದರು. ಸರ್ವೋದಯ ಸರ್ವರ ವಿಕಾಸಕ್ಕಾಗಿ ನೀಡಿದ ಸಿದ್ಧಾಂತ.
ಧರ್ಮಪ್ರಜ್ಞೆ
ಇದರಲ್ಲಿ ವ್ಯಕ್ತಿಯ ಮಹತ್ತ್ವವೇನೆಂದರೆ ಸಮಾಜವು ವ್ಯಕ್ತಿಗಳಿಂದ ಕೂಡಿದೆ. ಹೀಗಾಗಿ ವ್ಯಕ್ತಿಯ ಸುಧಾರಣೆ ಅಥವಾ ವಿಕಾಸವಾದಾಗ ಸಮಾಜವು ಸುಸ್ಥಿತಿಯಲ್ಲಿರುತ್ತದೆ. ಆದ್ದರಿಂದ ವ್ಯಕ್ತಿಯನ್ನು ಸುಧಾರಿಸಬೇಕು. ಇದು ಹಿಂದೂ ಚಿಂತನೆಯಲ್ಲಿ ಬಂದಿರುವ ಸಂಗತಿಯಾಗಿದ್ದು ಗಾಂಧಿಜೀ ಅದನ್ನೇ ಹೇಳುತ್ತಾರೆ. ಪಾಶ್ಚಾತ್ಯ ಚಿಂತನೆಯಲ್ಲಿ Man is a biological animal (ಮನುಷ್ಯ ಒಂದು ಜೈವಿಕ ಪ್ರಾಣಿ) ಎನ್ನುವ ಮಾತಿದೆ. ಜೈವಿಕ ಪ್ರಾಣಿಯಾಗಿರುವ ಮನುಷ್ಯ, ಮನುಷ್ಯ ಆಗುವುದು ಯಾವಾಗ?
ಪ್ರಾಣಿಗಿಂತ ಭಿನ್ನ ಎನ್ನಿಸುವುದು ಹೇಗೆ? ಹಿಂದು ಚಿಂತನೆಯಲ್ಲಿ ಅದನ್ನು ಸುಂದರ ಶ್ಲೋಕದಲ್ಲಿ ಹೇಳಿದ್ದಾರೆ:
ಆಹಾರ-ನಿದ್ರಾ-ಭಯ-ಮೈಥುನಂ ಚ
ಸಾಮಾನ್ಯಮೇತತ್ ಪಶುಭಿಃ ನರಾಣಾಂ |
ಧರ್ಮೋ ಹಿ ತೇಷಾಂ ಅಧಿಕೋ ವಿಶೇಷಃ
ಧರ್ಮೇಣ ಹೀನಾಃ ಪಶುಭಿಃ ಸಮಾನಾಃ ||
“ಆಹಾರ, ನಿದ್ರೆ, ಭಯ, ಮೈಥುನ – ಈ ನಾಲ್ಕು ವಿಷಯಗಳು ಪ್ರಾಣಿಗಳಿಗೂ ಮನುಷ್ಯರಿಗೂ ಸಮಾನ; ಧರ್ಮ ಮಾತ್ರ ಮನುಷ್ಯನ ವಿಶೇಷ). ಧರ್ಮಪ್ರಜ್ಞೆಯಿಂದಾಗಿಯೆ ಮನುಷ್ಯ ಪ್ರಾಣಿಗಳಿಂದ ಪ್ರತ್ಯೇಕ ಎನಿಸುತ್ತಾನೆ.”
ಈ ಧರ್ಮ ಎಂದರೆ ಏನು? ಪೂಜೆಪುನಸ್ಕಾರ ಮಾತ್ರ ಅಲ್ಲ; ಅದು ಧರ್ಮದ ಒಂದು ಭಾಗ ಮಾತ್ರ. ಶಮ, ದಮ, ಅಸ್ತೇಯ, ಮುಂತಾದ ಹತ್ತು ಲಕ್ಷಣಗಳಿರುವುದು ಧರ್ಮ.
ಧೃತಿಃ ಕ್ಷಮಾ ದಮೋýಸ್ತೇಯಂ
ಶೌಚಮಿಂದ್ರಿಯನಿಗ್ರಹಃ |
ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ
ಧರ್ಮಲಕ್ಷಣಮ್ ||
“ಕರ್ತವ್ಯದಲ್ಲಿ ಸ್ಥಿರತೆ, ಕ್ಷಮೆ, ತನ್ನ ಮೈಯ ಮೇಲೆ ಹತೋಟಿ, ಕದಿಯದಿರುವುದು, ಪರಿಶುದ್ಧಿ, ಇಂದ್ರಿಯಗಳನ್ನು ಹದ್ದಿನಲ್ಲಿ ಇರಿಸುವುದು, ಬುದ್ಧಿವ್ಯವಸಾಯ, ವಿದ್ಯಾರ್ಜನೆ, ಸತ್ಯನಿಷ್ಠೆ, ದ್ವೇಷವಿಲ್ಲದಿರುವುದು – ಈ ಹತ್ತು ಗುಣಗಳು ಸಾಮಾನ್ಯ ಧರ್ಮದ ಲಕ್ಷಣಗಳು.”
ಧರ್ಮದ ಆಧಾರದ ಮೇಲೆ ಮಾನವನ ವ್ಯಕ್ತಿತ್ವ ರೂಪಗೊಳ್ಳಬೇಕು. ಅದೇ ವ್ಯಕ್ತಿತ್ವನಿರ್ಮಾಣ (Man moulding). ಸ್ವಾಮಿ ವಿವೇಕಾನಂದರು ಹೇಳಿದ ವಿಚಾರವೂ ಇದೇ. ದೇಶಕ್ಕೆ ಸ್ವಾತಂತ್ರ್ಯ ಪ್ರಾಪ್ತಿಯಾಗಬೇಕು, ದೇಶದ ಉತ್ಕರ್ಷ ಆಗಬೇಕಾದರೆ ಏನು ಮಾಡಬೇಕೆಂದು ಇಡೀ ದೇಶದ ಪರ್ಯಟನೆ ಮಾಡಿದ ನಂತರ ವಿವೇಕಾನಂದರು My mission is man-making ಎಂದು ಹೇಳುತ್ತಾರೆ. ಗಾಂಧಿಜೀ ಅವರು ಆಶ್ರಮದಲ್ಲಿ ನೀಡುತ್ತಿದ್ದ ತರಬೇತಿಯೂ ಧರ್ಮ ಆಧಾರಿತವೇ. ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಚಾರ ಮತ್ತು ಗಾಂಧಿಯವರ ವಿಚಾರದಲ್ಲಿ ಸಾಮ್ಯವಿದೆ ಎನ್ನುವುದನ್ನು ಮೇಲೆ ಹೇಳಿದೆ. ಸಂಘ ಕೂಡ ವ್ಯಕ್ತಿಯ ಸರ್ವಾಂಗೀಣ ಉನ್ನತಿ, ವಿಕಾಸಗಳನ್ನೇ ಹೇಳುತ್ತದೆ. ವ್ಯಕ್ತಿಯು ಸ್ವಯಂಸೇವಕನಾಗಿ ನಿರ್ಮಾಣವಾದಾಗ (ಮೌಲ್ಡ್ ಆದಾಗ) ಸಮಾಜದ ಬದಲಾವಣೆಗೆ ಕಾರಣನಾಗುತ್ತಾನೆ, ಸಮಾಜದಲ್ಲಿ ಬದಲಾವಣೆ ತರಲು ಬೇಕಾದ ಗುಣಗಳು ಸಂಘದ ಸಂಸ್ಕಾರದ ಪರಿಣಾಮವಾಗಿ ಅವನಲ್ಲಿ ಉಂಟಾಗುತ್ತದೆ. ಸಂಘದ ಸರ್ವಾಂಗೀಣ ಕಲ್ಪನೆ ಮತ್ತು ಸರ್ವೋದಯದ ಕಲ್ಪನೆಗಳು ಎರಡೂ ಒಂದೇ. ಅದೇ ಸರ್ವರ ಉದಯದ ಕಲ್ಪನೆ.
ಸಂಘದಲ್ಲಿ ಪ್ರತಿನಿತ್ಯ ಹೇಳುವ ಪ್ರಾರ್ಥನೆಯಲ್ಲಿ ‘ಪರಂ ವೈಭವಂ ನೇತುಮೇತತ್ ಸ್ವರಾಷ್ಟ್ರಮ್’ ಎಂದು ಹೇಳಲಾಗುತ್ತದೆ. ಒಬ್ಬ ಸ್ವಯಂಸೇವಕ ಸಂಘದ ಕಾರ್ಯವನ್ನು ಮಾಡುವುದು ರಾಷ್ಟ್ರದ ಪರಮವೈಭವಕ್ಕೋಸ್ಕರ. ಇದನ್ನು ಸಾಧಿಸಬೇಕಾದರೆ ವ್ಯಕ್ತಿಗೆ ಲೌಕಿಕ ಮತ್ತು ಆಧ್ಯಾತ್ಮಿಕ ಎರಡೂ ಶಿಕ್ಷಣ ಆಗಬೇಕಾಗುತ್ತದೆ. ಇದನ್ನು ಸಂಘದ ಪ್ರಾರ್ಥನೆಯಲ್ಲಿ ‘ಸಮುತ್ಕರ್ಷ, ನಿಃಶ್ರೇಯಸ್ಸು’ ಎಂದು ಹೇಳಿದೆ. ವ್ಯಕ್ತಿಯ ಜೀವನ, ಸಮಾಜ ಮತ್ತು ರಾಷ್ಟ್ರದ ಜೀವನ ಎರಡೂ ಭೌತಿಕವಾಗಿ ಉನ್ನತ-ಸಮುತ್ಕರ್ಷ ಆಗಿರಬೇಕು. ಅದರೊಂದಿಗೆ ಆಧ್ಯಾತ್ಮಿಕ ಉನ್ನತಿ-ನಿಃಶ್ರೇಯಸ್ಸು ಕೂಡ ಆಗಿರಬೇಕು.
ಈ ವಿಚಾರಗಳು ನಮ್ಮ ಪರಂಪರೆಯಲ್ಲಿ ಸಹಸ್ರಾರು ವರ್ಷಗಳಿಂದ ಬಂದಿವೆ. ಯಾರಾರು ಸಮಾಜವನ್ನು ಮೇಲಕ್ಕೆ ಎತ್ತಲು ಸುಧಾರಿಸಲು ಸಮಾಜ ಮತ್ತು ರಾಷ್ಟ್ರಕ್ಕಾಗಿ ಕೆಲಸ ಮಾಡಿದರೋ, ಅವರೆಲ್ಲರೂ ಧ್ವನಿಸಿದ ಸಂಗತಿಗಳು ಇವೇ ಆಗಿವೆ.
ಗಾಂಧಿಜೀಯವರ ಕಾಲದಲ್ಲಿ ನಮ್ಮ ದೇಶದಲ್ಲಿ ಪಾಶ್ಚಾತ್ಯ ವಿಚಾರಧಾರೆಯ ಪ್ರಭಾವ ಅತ್ಯಂತ ಜೋರಾಗಿತ್ತು. ಪ್ರಜಾಪ್ರಭುತ್ವ, ಅದರ ಸಹಚಿಂತನೆಗಳು, ಆರ್ಥಿಕ ದೃಷ್ಟಿ, ಅರ್ಥಶಾಸ್ತ್ರ(ಎಕನಾಮಿಕ್ಸ್)ದ ಬಗೆಗಿನ ಆ್ಯಡಂ ಸ್ಮಿತ್ ಮೊದಲಾದವರ ಕಲ್ಪನೆಗಳು – ಇದ್ದವು. ಇದರ ಪರಿಣಾಮವಾಗಿ ಪಾಶ್ಚಾತ್ಯ ಚಿಂತನೆಗಳಿಂದ ಬಂದದ್ದು ‘ಬಹುಜನ ಹಿತಾಯ ಬಹುಜನ ಸುಖಾಯ’ (greatest good of the greatest number). ಇದು ಕಲ್ಯಾಣ ರಾಜ್ಯ(welfare state)ಕ್ಕೆ ಸಂಬಂಧಪಟ್ಟ ಮಾತು. ಅಂದರೆ ಅತಿಹೆಚ್ಚು ಸಂಖ್ಯೆಯ ಜನರಿಗೆ ಒಳ್ಳೆಯದನ್ನು ಮಾಡುವುದು. ಅದನ್ನು ನಾವು ಒಪ್ಪಬಹುದೆ? ಅತಿ ಹೆಚ್ಚು ಜನರಿಗೆ ಎಂದರೆ ಯಾರೋ ಸ್ವಲ್ಪ ಜನಕ್ಕೆ ಒಳ್ಳೆಯದಾಗುವುದಿಲ್ಲ. ಅವರ ಸ್ಥಿತಿ ಏನು ಎಂಬ ಪ್ರಶ್ನೆ ಉಳಿದುಕೊಳ್ಳುತ್ತದೆ. ಇದು ಪಾಶ್ಚಾತ್ಯ ಚಿಂತನೆಯ ‘ಅತಿ ಹೆಚ್ಚು ಜನರಿಗೆ ಅತಿ ಹೆಚ್ಚು ಅನುಕೂಲ’ ಎನ್ನುವ ತತ್ತ್ವದ ಸಮಸ್ಯೆ. ಗಾಂಧಿಜೀ ತಮ್ಮ ಭಾಷಣಗಳಲ್ಲಿ ಮತ್ತು ‘ಹರಿಜನ್’ ಹಾಗೂ ‘ಯಂಗ್ ಇಂಡಿಯಾ’ಗಳಲ್ಲಿ ಬರೆದ ಲೇಖನಗಳಲ್ಲಿ ಸರ್ವೋದಯದ ಕಲ್ಪನೆಯನ್ನು ಸ್ಪಷ್ಟಪಡಿಸಿದ್ದಾರೆ. ಮುಂದೆ ಭಾರತ ಆಗಬೇಕಾದ್ದು ‘ವೆಲ್ಫೇರ್ ಸ್ಟೇಟ್’ ಅಲ್ಲ, ‘ಸರ್ವೋದಯ ರಾಷ್ಟ್ರ’ ಎಂದೂ ಹೇಳಿದ್ದಾರೆ. ಸರ್ವೋದಯ ರಾಷ್ಟ್ರದ ಪರಿಕಲ್ಪನೆ ನಮ್ಮ ಋಷಿಗಳ ಆಶಯಕ್ಕೆ ಅನುಗುಣವಾಗಿದೆ.
ಸರ್ವೇ ಭವಂತು ಸುಖಿನಃ ಸರ್ವೇ ಸಂತು ನಿರಾಮಯಾಃ | ಸರ್ವೇ ಭದ್ರಾಣಿ ಪಶ್ಯಂತು ಮಾ ಕಶ್ಚಿತ್ ದುಃಖಭಾಗ್ಭವೇತ್||
ಕೇವಲ ಮನುಷ್ಯರಷ್ಟೇ ಅಲ್ಲ, ಈ ಭೂಮಂಡಲದಲ್ಲಿ ಹುಟ್ಟಿರುವ ಪಶು, ಪಕ್ಷಿ, ಕ್ರ್ರಿಮಿಕೀಟ ಎಲ್ಲವೂ ದುಃಖವಿಲ್ಲದೆ ಇರಬೇಕು. ಗಾಂಧಿ ಇದನ್ನೇ ಹೇಳಿದರು. ಪಾಶ್ಚಾತ್ಯ ಪರಿಕಲ್ಪನೆಗಳು ಇಡೀ ಜಗತ್ತನ್ನು ಆಳುತ್ತಿದ್ದಾಗ, ನಮ್ಮ ದೇಶದಲ್ಲೂ ಅದೇ ರೀತಿ ರಾಷ್ಟ್ರನಿರ್ಮಾಣ ಆಗಬೇಕು ಎಂಬ ವಾದ ಪ್ರತಿಪಾದಿತವಾಗುತ್ತಿದ್ದಾಗ ‘ಬಹು ಜನ’ ಅಲ್ಲ ‘ಸರ್ವೇ ಭವಂತು’ ಎಂದು ಹೇಳಿದವರು ಗಾಂಧಿ. ಹಾಗಾಗಿ ಸರ್ವೋದಯಕ್ಕೆ ಮಹತ್ತ್ವ. ಸರ್ವೋದಯದ ವಿಚಾರಗಳು ಜೀವನದ ಎಲ್ಲ ರಂಗಗಳಿಗೂ ಅನ್ವಯವಾಗುತ್ತವೆ. ಎಲ್ಲ ರಂಗಗಳಲ್ಲಿ ಸರ್ವೋದಯವನ್ನು ಅನ್ವಯಿಸುವುದು ಹೇಗೆಂದು ಗಾಂಧಿಜೀ ವಿವರಿಸಿದ್ದಾರೆ.
ಸಾಮಾಜಿಕ ಸಮಾನತೆ
ಸಾಮಾಜಿಕ-ಸಮಾನತೆಯು ಸರ್ವೋದಯದ ರೀತಿ. ಸಾಮಾಜಿಕ ಸಮಾನತೆಯು ಹೇಗಿರಬೇಕು ಎಂಬ ಬಗ್ಗೆ ಗಾಂಧಿ ಬಹಳ ಸ್ಪಷ್ಟವಾದ ಅಭಿಪ್ರಾಯವನ್ನು ಇಟ್ಟುಕೊಂಡಿದ್ದರು. ಸರ್ವೋದಯದ ಸಾಮಾಜಿಕ ನೆಲೆಗಟ್ಟು, ಸಾಮಾಜಿಕ ಸಮಾನತೆ, ಸಮಾಜದಲ್ಲಿ ಸಾಮರಸ್ಯ – ಇವೆಲ್ಲ ಹೇಗಿರಬೇಕು ಎಂಬ ಬಗ್ಗೆ ಅವರು ತಮ್ಮ ಭಾಷಣಗಳಲ್ಲಿ ಹೇಳುತ್ತಿದ್ದರು; ‘ಯಂಗ್ ಇಂಡಿಯಾ’ದಲ್ಲಿ ಸ್ಪಷ್ಟವಾಗಿ ಬರೆಯುತ್ತಿದ್ದರು. ಜನರ ನಡುವೆ ವರ್ಗ (clas), ಜಾತಿ, ವರ್ಣ, ಅಂತಸ್ತು ಮುಂತಾದ ಯಾವುದೇ ಭೇದ ಇರಬಾರದು ಎಂದು ಗಾಂಧಿಜೀ ಪ್ರತಿಪಾದಿಸುತ್ತಿದ್ದರು. ಅಂತಸ್ತಿನ (status) ಪ್ರಶ್ನೆ ಬಂದಾಗ ಇಂದು ಕೂಡ ನಮ್ಮ ಸಮಾಜ ವಿಚಿತ್ರವಾಗಿ ನಡೆದುಕೊಳ್ಳುವುದನ್ನು ನಾವು ಕಾಣುತ್ತೇವೆ. ನಾವು ಶ್ರಮಿಕರನ್ನು ಕೀಳಾಗಿ ಕಾಣುತ್ತೇವೆ; ಬೌದ್ಧಿಕ ಕೆಲಸಗಳನ್ನು ಮಾಡುವವರನ್ನು ಶ್ರೇಷ್ಠ ಎಂದು ಭಾವಿಸುತ್ತೇವೆ. ಗಾಂಧಿಜೀ ಹೇಳುತ್ತಾರೆ – ಸಮಾಜಕ್ಕೆ ಎಲ್ಲರೂ ಬೇಕು; ಪಾಠ ಮಾಡುವ ಪ್ರೊಫೆಸರೂ ಬೇಕು, ಕ್ಷೌರ ಮಾಡುವ ಕ್ಷೌರಿಕನೂ ಬೇಕು. ಎರಡೂ ಕೆಲಸಗಳಿಗೆ ಅದರದ್ದೇ ಆದ ಗೌರವವಿದೆ (dignity of labour). ಆದರೆ ‘ಸ್ಟೇಟಸ್’ ಕಲ್ಪನೆ ಗೌರವಭಾವನೆಗೆ ಅಡ್ಡಿಯಾಗುತ್ತದೆ. ಬೌದ್ಧಿಕ ವಲಯದಲ್ಲಿ ಕೂಡ ಅಂತಸ್ತಿನ ತರತಮ ಇದೆ; ಕಂಪ್ಯೂಟರ್ ಸಯನ್ಸ್ ಓದಿದವರು ಸರ್ವಶ್ರೇಷ್ಠರು, ಹಿಸ್ಟರಿ ಆರ್ಕಿಯಾಲಜಿಗಳಿಗೆ ಆ ‘ಸ್ಟೇಟಸ್’ ಇಲ್ಲ; ಕನ್ನಡ ಓದಿದರಂತೂ ಇಲ್ಲವೇ ಇಲ್ಲ. ಇಂದು ಹೈಸ್ಕೂಲ್ ವಿದ್ಯಾರ್ಥಿಯ ದೆಸೆಯಿಂದ ಒಬ್ಬನ ಮನಸ್ಸಿನಲ್ಲಿ ಮೂಡುವುದು ಇಂತಹ ಸ್ಟೇಟಸ್ ಭಾವನೆಗಳು. ಸಮಾಜಕ್ಕೆ ಬೇಕಾಗುವ ಎಲ್ಲ ಕೆಲಸಗಳಿಗೂ ಗೌರವ, ಸರಿಯಾದ ಸಂಭಾವನೆ ಇರಬೇಕೆಂದು ಅವರು 90 ವರ್ಷಗಳ ಹಿಂದೆಯೇ ಪ್ರತಿಪಾದಿಸಿದ್ದುದು ಅವರ ದೂರದೃಷ್ಟಿಯ ದ್ಯೋತಕ. ಇನ್ನು ಅಸ್ಪೃಶ್ಯತೆಯ ನಿವಾರಣೆಯ ಬಗ್ಗೆ ಗಾಂಧಿಜೀ ಅವರಿಗೆ ಅತೀವ ಕಾಳಜಿ ಇತ್ತು. ಹರಿಜನ ಎನ್ನುವ ಪದವನ್ನು ಅವರು ಸೃಷ್ಟಿಮಾಡಿದ್ದೇ ಇದೇ ಕಾರಣಕ್ಕಾಗಿ. ತಾವು ನಡೆಸುವ ಒಂದು ಪತ್ರಿಕೆಗೆ ಅವರು ಅದೇ ಹೆಸರನ್ನು ಇಟ್ಟಿದ್ದರು; ಇನ್ನೊಂದು ಪತ್ರಿಕೆ ‘ಯಂಗ್ ಇಂಡಿಯಾ’. ದೇಶದ ಸ್ವಾತಂತ್ರ್ಯ ಹೋರಾಟವಿರಲಿ ಅಥವಾ ಯಾವುದೇ ಬದಲಾವಣೆ ಇರಲಿ, ಅದು ಇರುವುದು ಯುವಜನರ ಕೈಯಲ್ಲಿ ಎಂಬ ಹಿನ್ನೆಲೆಯಲ್ಲಿ ಯಂಗ್ ಇಂಡಿಯಾ ಎಂದು ಕರೆದಿದ್ದರು. ಎರಡೂ ಪತ್ರಿಕೆಗಳಲ್ಲಿ ಗಾಂಧಿ ಸ್ವಾತಂತ್ರ್ಯ ಹೋರಾಟ ಹಾಗೂ ಸಾಮಾಜಿಕವಾಗಿ ಆಗಬೇಕಾದ ಬದಲಾವಣೆಗಳ ಬಗ್ಗೆ ಬರೆಯುತ್ತಿದ್ದರು. ಯಾವುದೇ ವಿಷಯದಲ್ಲಿ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ಇವುಗಳ ಮೂಲಕ ತಿಳಿಸುತ್ತಿದ್ದರು. 1927ರಲ್ಲಿ ಗಾಂಧಿಜೀ ‘ಹರಿಜನೋದ್ಧಾರ’ ಎನ್ನುವ ಕಾರ್ಯಕ್ರಮವನ್ನು ಆರಂಭಿಸಿ, ಅದಕ್ಕಾಗಿ ದೇಶಾದ್ಯಂತ ಜನರ ಜಾಗೃತಿಗಾಗಿ ಅಭಿಯಾನ ನಡೆಸಿದರು, ಪ್ರವಾಸ ಮಾಡಿದರು.
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಓದುವಾಗ ಅದರಲ್ಲೊಂದು ವಿಶೇಷತೆಯನ್ನು ಕಾಣುತ್ತೇವೆ. ಸತ್ಯಾಗ್ರಹ, ಕ್ರಾಂತಿಕಾರಿಗಳ ಹೋರಾಟ – ಇವುಗಳ ನಡುವೆ ಸಮಾಜ ಸುಧಾರಣೆಯ ಕಾರ್ಯಗಳನ್ನೂ ಸತ್ಯಾಗ್ರಹಿಗಳೂ, ಕ್ರಾಂತಿಕಾರಿಗಳೂ ಮಾಡುತ್ತಿದ್ದರು. ಗಾಂಧಿಯವರು ಸತ್ಯಾಗ್ರಹ, ಅಸಹಕಾರ ಚಳವಳಿ, ಉಪ್ಪಿನ ಸತ್ಯಾಗ್ರಹ, ಅದರ ಅಂಗವಾಗಿ ದಂಡಿಯಾತ್ರೆ ಮೊದಲಾದ ಹೋರಾಟಗಳನ್ನು ನಡೆಸಿದರು. ಎರಡು ಹೋರಾಟಗಳ ನಡುವಿನ ಸಮಯದಲ್ಲಿ ಪ್ರವಾಸ ಮಾಡುತ್ತಿದ್ದರು. ಆಗ ಹರಿಜನೋದ್ಧಾರ, ಖಾದಿ ಗ್ರಾಮೋದ್ಯೋಗ ಪ್ರಚಾರದ ಕೆಲಸಗಳು ನಡೆಯುತ್ತಿದ್ದವು. ಸೈನಿಕ ಹೋರಾಟವಾದರೂ ಕೂಡ ಮಧ್ಯೆ ಸ್ವಲ್ಪ ವಿರಾಮ ಬೇಕಾಗುತ್ತದೆ. ಗಾಂಧಿಯವರ ನೇತೃತ್ವದಲ್ಲಿ ನಡೆದ ಚಳವಳಿಗಳಂತೂ ಅಹಿಂಸಾತ್ಮಕವಾದಂಥವು. ನಿರಂತರವಾಗಿ ಪೆÇಲೀಸರು ಮತ್ತು ಮಿಲಿಟರಿ ಬಲವನ್ನು ಉಪಯೋಗಿಸುತ್ತಿದ್ದ ಬ್ರಿಟಿಷರ ಪಾಶವೀಶಕ್ತಿಯನ್ನು 365 ದಿನವೂ ಎದುರಿಸುವುದು ಸುಲಭದ ಮಾತಲ್ಲ. ಹಾಗಿರುವಾಗ ನಡುವಿನ ವಿರಾಮ ಸಮಯವನ್ನು ಹೇಗೆ ಉಪಯೋಗಿಸಬೇಕು? ಸಮಾಜ ಸುಧಾರಣೆಯೂ ಆಗಬೇಕೆನ್ನುವ ಉದ್ದೇಶವನ್ನು ಹೊಂದಿದ್ದ ಗಾಂಧಿಜೀ ಹೋರಾಟದ ನಡುವೆ ಸುಧಾರಣೆಯ ಕೆಲಸಗಳನ್ನು ಜೋಡಿಸಿಕೊಂಡಿದ್ದರು. ಕಾರ್ಯಕರ್ತರಿಗೆ ಖಾದಿ ಪ್ರಚಾರ, ಆಸಕ್ತರಿಗೆ ಹಿಂದಿ ಕಲಿಸುವುದು ಮುಂತಾದ ಕೆಲಸಗಳನ್ನು ಕೊಟ್ಟರು. ಈ ರೀತಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಎರಡನ್ನೂ ಸೇರಿಸಿ ವಿವಿಧ ಚಟುವಟಿಕೆಗಳ ಮೂಲಕ ಸತ್ಯಾಗ್ರಹಿಗಳನ್ನು, ಜನರನ್ನು ಅವರು ಸಕ್ರಿಯವಾಗಿ ಇರಿಸಿದ್ದರು.
ಗಾಂಧಿಯವರು 1922ರಲ್ಲಿ ಕರ್ನಾಟಕಕ್ಕೆ ಪ್ರವಾಸ ಬಂದಾಗ ಜುಲೈ 27ರಂದು ಬೆಂಗಳೂರಿನ ಮಿಥಿಕ್ ಸೊಸೈಟಿಗೆ ಬಂದು ಭಾಷಣ ಮಾಡಿದ್ದರು. ಮಿಥಿಕ್ ಸೊಸೈಟಿ ಒಂದು ವಿದ್ವಾಂಸರ ಸಂಸ್ಥೆ; ಇತಿಹಾಸ, ಪುರಾತತ್ತ್ವ ಮತ್ತು ಶಾಸ್ತ್ರಗಳಿಗೆ ಸಂಬಂಧಪಟ್ಟ ಸಂಸ್ಥೆ ಎಂಬುದು ಅವರಿಗೆ ಗೊತ್ತಿತ್ತು. ಅಂದಿನ ಸಭೆಯಲ್ಲಿ ಬಹಳಷ್ಟು ವಿದ್ವಾಂಸರಿದ್ದರು. ಐರೋಪ್ಯ ವಿದ್ವಾಂಸರಿದ್ದರು; ಭಾರತೀಯ ವಿದ್ವಾಂಸರೂ ಇದ್ದರು. ಆ ಹಿನ್ನೆಲೆಯಲ್ಲಿ ಗಾಂಧಿ ತಮ್ಮ ಭಾಷಣದಲ್ಲಿ “ನಾನೊಬ್ಬ ನಿಷ್ಠಾವಂತ ಹಿಂದು. ನಿಷ್ಠಾವಂತ ಹಿಂದುವಾಗಿ ಈ ‘ಅಸ್ಪೃಶ್ಯತೆಯ ಆಚರಣೆ’ ನನ್ನ ಮನಸ್ಸಿಗೆ ತುಂಬ ನೋವು ತಂದಿದೆ. ಹಾಗಾಗಿ ಅದನ್ನು ತೊಡೆದುಹಾಕಬೇಕೆಂದು ಒಬ್ಬ ಸಕ್ರಿಯ ಕಾರ್ಯಕರ್ತನಾಗಿ (activist) ತಮ್ಮಲ್ಲಿ ಪ್ರಾರ್ಥಿಸುತ್ತೇನೆ. ನಾನೊಬ್ಬ ವಿದ್ವಾಂಸ ಅಲ್ಲ. ಆದರೂ ನನ್ನ ಪ್ರಕಾರ ಅಸ್ಪೃಶ್ಯತೆಗೆ ನಮ್ಮ ವೇದ, ಪುರಾಣ, ಉಪನಿಷತ್ತು, ಶಾಸ್ತ್ರಗ್ರಂಥಗಳಲ್ಲಿ ಯಾವುದೇ ಆಧಾರ ಇಲ್ಲ. ಅದನ್ನು ಹೇಳಬೇಕಾದ ವಿದ್ವಾಂಸ ನಾನಲ್ಲ. ಮಿಥಿಕ್ ಸೊಸೈಟಿಯಲ್ಲಿ ನೀವೆಲ್ಲ ವಿದ್ವಾಂಸರಿದ್ದೀರಿ. ಸಂಶೋಧನೆಯನ್ನು ಮಾಡುತ್ತಿದ್ದೀರಿ. ಆ ಕಾರಣದಿಂದ ನೀವು ಅಸ್ಪೃಶ್ಯತೆಗೆ ಧಾರ್ಮಿಕವಾಗಿ ನಮ್ಮ ಶಾಸ್ತ್ರಗ್ರಂಥಗಳಲ್ಲಿ ಯಾವುದೇ ಆಧಾರ ಇಲ್ಲ ಎಂಬುದನ್ನು ಸಾಕ್ಷಿ ಸಮೇತ ಹೇಳಿ ನನ್ನ ಕೈಗಳನ್ನು ಬಲಪಡಿಸಬೇಕೆಂದು ನಿಮ್ಮಲ್ಲಿ ನನ್ನ ಕಳಕಳಿಯ ಪ್ರಾರ್ಥನೆ” ಎಂದು ವಿನಂತಿಸಿದ್ದರು.
ಅಸ್ಪೃಶ್ಯತೆಯನ್ನು ತೊಡೆದುಹಾಕಲು ಗಾಂಧಿಜೀ ಕಾರ್ಯಕ್ರಮವನ್ನು ಹಾಕಿಕೊಂಡ ಪ್ರಾರಂಭದ ದಿನಗಳಲ್ಲಿ ಸಬರ್ಮತಿ ಆಶ್ರಮದಲ್ಲಿ ಒಂದು ಘಟನೆ ನಡೆಯಿತು. ಸೇವಾವ್ರತಿಗಳ ತರಬೇತಿಗೆ ಗಾಂಧಿಯವರು ಬಂದಿದ್ದರು. ಸೇವಾವ್ರತಿಗಳಾಗಲು ಇಬ್ಬರು ಹರಿಜನ ದಂಪತಿಗಳು ಕೂಡ ಬಂದಿದ್ದರು. ಅದನ್ನು ವಿರೋಧಿಸಿದ ಇತರ ತಥಾಕಥಿತ ಸವರ್ಣೀಯರು ಹರಿಜನ ದಂಪತಿಗಳನ್ನು ಸೇರಿಸಿಕೊಳ್ಳುವುದಾದರೆ ತಾವು ಸೇವಾವ್ರತಿಗಳಾಗಿ ಇರುವುದಿಲ್ಲ ಎಂದರು. ದವಸ ಧಾನ್ಯಗಳನ್ನು ದಾನ ಕೊಡುತ್ತಿದ್ದವರು ತಾವು ಕೊಡುವುದಿಲ್ಲ ಎಂದು ತಿಳಿಸಿದರು. ಅಂತಹ ಪ್ರಸಂಗ ನಿರ್ಮಾಣವಾದಾಗ ಕೂಡ ಗಾಂಧಿ ಹೇಳಿದ್ದು: ‘ನಾನು ಉಳಿದುಕೊಳ್ಳುವುದು ಸಬರ್ಮತಿ ಆಶ್ರಮದಲ್ಲಲ್ಲ. ಇಲ್ಲಿ ಹರಿಜನ ಸೇವಾವ್ರತಿ ದಂಪತಿಗಳಿಗೆ ಕೊಟ್ಟ ವಸತಿಯಲ್ಲೇ ನಾನು ಕೂಡ ಇರುತ್ತೇನೆ. ಈ ಕೆಲಸವನ್ನು ಮುಂದುವರಿಸುತ್ತೇನೆ. ಯಾರು ಸಿದ್ಧರೋ ಅವರು ಬನ್ನಿ, ಇಲ್ಲವಾದರೆ ಬೇರೆಯವರನ್ನು ತೆಗೆದುಕೊಂಡು ಮುಂದುವರಿಸುತ್ತೇನೆ’ ಎಂದರು. ಅವರ ಮನಸ್ಸಿನಲ್ಲಿ ಅಷ್ಟು ಗಟ್ಟಿಯಾದ ಕಳಕಳಿ ಇತ್ತು.
ಅಸ್ಪೃಶ್ಯತೆಯ ವಿಚಾರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಲವಿನ ಬಗ್ಗೆ ಹೇಳುವುದಾದರೆ ಸಂಘದಲ್ಲಿ ಜಾತಿಯ ಭಾವನೆಗಳೇ ಇಲ್ಲ. ಅಸ್ಪøಶ್ಯತೆಯಂತೂ ಇಲ್ಲವೇ ಇಲ್ಲ. 1934ರಲ್ಲಿ ವಾರ್ಧಾದಲ್ಲಿ ಸಂಘದ ಒಂದು ಶಿಬಿರ ನಡೆಯುತ್ತಿದ್ದಾಗ ಇದರ ಬಗ್ಗೆ ತಿಳಿದುಕೊಳ್ಳಲು ಗಾಂಧಿಜೀ ಅಲ್ಲಿಗೆ ಬಂದರು. ಎಲ್ಲೆಡೆ ಅವರು ವಿಚಾರಿಸುತ್ತಿದ್ದಂತೆ ಈ ಶಿಬಿರದಲ್ಲಿಯೂ ‘ಹರಿಜನರು ಇದ್ದಾರೆಯೆ?’ ಎಂದು ಕೇಳಿದರು. ಯಾವ ಭೇದವೂ ಇಲ್ಲದೆ ತಥಾಕಥಿತ ‘ಅಸ್ಪøಶ್ಯರು’ ಎಲ್ಲರೊಡನೆ ಬೆರೆತು ಇರುವುದನ್ನು ಕಂಡು ಆಶ್ಚರ್ಯಚಕಿತರಾದರು. ಆಗ ಅವರೊಂದಿಗೆ ಮೀರಾಬೆನ್, ಜಮನಾಲಾಲ್ ಬಜಾಜ್, ಮಹಾದೇವ ದೇಸಾಯಿ ಕೂಡ ಬಂದಿದ್ದರು. ಅದು ಡಿಸೆಂಬರ್ 25, 1934. ಆಗ ಡಾಕ್ಟರ್ಜೀ ಅಲ್ಲಿರಲಿಲ್ಲ. ಬೇರೆ ಕಡೆ ಪ್ರವಾಸಕ್ಕೆ ಹೋಗಿದ್ದರು. ಗಾಂಧಿಜೀ ಅವರ ಭೇಟಿಯ ವಿಷಯ ಬಂದ ವಿಷಯ ತಿಳಿದು ಮರುದಿನ ವಾರ್ಧಾ ಆಶ್ರಮಕ್ಕೆ ಹೋಗಿ ಗಾಂಧಿಯವರನ್ನು ಭೇಟಿ ಮಾಡಿದರು. ಆಗ ಗಾಂಧಿ ಬಹಳ ಮೆಚ್ಚುಗೆ ವ್ಯಕ್ತಪಡಿಸಿ, “ಈ ಒಂದು ಸಂಗತಿಯನ್ನು ನೀವು ಹೇಗೆ ಸಾಧಿಸಿದಿರಿ? ಇದು ನನ್ನ ನೆಚ್ಚಿನ ಕನಸಾಗಿದೆ” ಎಂದು ಹೇಳಿದರು. ಸಂಘದಲ್ಲಿ ಅಸ್ಪøಶ್ಯತೆಯ ಭಾವನೆಗಳನ್ನು ಮೀರುವುದು ಮತ್ತು ಎಲ್ಲರೂ ಒಂದೇ ಎನ್ನುವ ಭಾವನೆಯನ್ನು ಸ್ವಯಂಸೇವಕರಲ್ಲಿ ತರುವುದು ಸಾಧ್ಯವಾಗಿದೆ.
ಅದೇ ರೀತಿ 1938ರಲ್ಲಿ ಅಂಬೇಡ್ಕರ್ ಅವರು ಪುಣೆಯಲ್ಲಿ ನಡೆದ ಸಂಘದ ಶಿಬಿರಕ್ಕೆ ಭೇಟಿ ನೀಡಿದಾಗಲೂ ಅಂಥದೇ ಭಾವನೆಯನ್ನು ಹೊಂದಿದರು. “ಸವರ್ಣೀಯರು ಮತ್ತು ಹರಿಜನರ ನಡುವೆ ಇಲ್ಲಿ ಸಮಾನತೆಯನ್ನು ಕಾಣಬಹುದು. ಅಂತಹ ಭೇದಭಾವ ಇರುವ ಬಗ್ಗೆ ಇವರಿಗೆ ಗೊತ್ತೇ ಇಲ್ಲ. ಯಾರು ಸವರ್ಣೀಯರು, ಯಾರು ಹರಿಜನ ಎಂಬುದೇ ಇಲ್ಲಿ ಗೊತ್ತಿಲ್ಲ. ಇದು ನನಗೆ ಆನಂದ ತಂದಿದೆ” ಎಂದು ಅವರು ಹೇಳಿದ್ದರು. ಹೀಗೆ ಸಾಮಾಜಿಕ ಕಳಕಳಿಯಲ್ಲಿ ಗಾಂಧಿ, ಸಂಘ ಮತ್ತು ಅಂಬೇಡ್ಕರ್ ಸಮಾನಮನಸ್ಕರಾಗಿದ್ದರು, ಕಾರ್ಯಪ್ರವೃತ್ತರಾಗಿದ್ದರು.
ಆರ್ಥಿಕ ಪುನರ್ವಿರಚನೆ
ಗಾಂಧಿಯವರು ಹೇಳಿದ ಇನ್ನೊಂದು ಮಹತ್ತ್ವದ ಅಂಶ ಸರ್ವೋದಯದಲ್ಲಿ ಬರುವ ಅರ್ಥಿಕ ಪುನರ್ವಿರಚನೆಯ ಪ್ರಶ್ನೆ. ದೇಶದ ಆರ್ಥಿಕ ಪುನರ್ನಿರ್ಮಾಣ ಹೇಗಾಗಬೇಕು ಎಂದವರು ಸೂಚಿಸಿದರು. ಇದು ಪ್ರಮುಖ ಅಂಶ. ಏಕೆಂದರೆ ಬ್ರಿಟಿಷರ ಸುಮಾರು 150 ವರ್ಷಗಳ ಆಳ್ವಿಕೆಯ ಪರಿಣಾಮವಾಗಿ ದೇಶ ಸಂಪೂರ್ಣ ಬಡತನಕ್ಕೆ ಗುರಿಯಾಗಿತ್ತು. ಪ್ರತಿವರ್ಷ ಲಕ್ಷಾಂತರ ಪೌಂಡ್ ಹಣ ಹೇಗೆ ಭಾರತದಿಂದ ಹೊರಗೆ ಹೋಯಿತು – ಎಂದು ದಾದಾಭಾಯ್ ನವರೋಜಿ ವಿಶ್ಲೇಷಿಸಿ ಬರೆದಿದ್ದರು. ಸ್ವಾತಂತ್ರ್ಯಾ ನಂತರ ದೇಶದ ಪುನರ್ನಿರ್ಮಾಣ ಹೇಗಾಗಬೇಕು ಎಂಬ ಬಗ್ಗೆ ಬಹುತೇಕ ಎಲ್ಲ ಮಹನೀಯರು ಯೋಚಿಸಿದ್ದಾರೆ. ಸ್ವಾಮಿ ವಿವೇಕಾನಂದರು ಭಾರತದ ಭವಿಷ್ಯದ ಬಗ್ಗೆ ಚಿಂತಿಸಿದ್ದ ವಿಚಾರಗಳನ್ನು ಗಮನಿಸಿದ ಸುಭಾಷ್ ಚಂದ್ರ ಬೋಸ್ ಆಧುನಿಕ ಭಾರತದ ನಿರ್ಮಾಪಕ ಸ್ವಾಮಿ ವಿವೇಕಾನಂದ – ‘Swami Vivekananda is the maker of modern India’ ಎಂದೇ ಹೇಳಿದ್ದರು.
ದೇಶದ ಆರ್ಥಿಕ ಪುನರ್ನಿರ್ಮಾಣದ ವಿಷಯದಲ್ಲಿ ಕೂಡ ಗಾಂಧಿ ‘ಕಲ್ಯಾಣ ರಾಜ್ಯ’ ಬೇಡ; ‘ಸರ್ವೋದಯ’ವೇ ಬೇಕು ಎಂಬ ನಿಲವನ್ನು ಹೊಂದಿದ್ದರು: “ಅತ್ಯಂತ ಬಡವನಾದವನಿಗೆ ತನ್ನ ಅಂದಿನ ಊಟ ಸಿಕ್ಕಿದರೆ ಸಾಕು ಎಂದಿರುತ್ತದೆ. ಅದು ಸಲ್ಲದು. ತೀರಾ ಬಡವ ಕೂಡ ಇದು ತನ್ನ ದೇಶ, ಇದರ ಏಳಿಗೆಯಲ್ಲಿ ತನ್ನದೂ ಒಂದು ಪಾಲಿದೆ ಎಂದು ತಿಳಿಯುವಂತಾಗುವ ಭಾರತಕ್ಕಾಗಿ ನಾನು ದುಡಿಯುತ್ತೇನೆ. ನನ್ನ ಕನಸಿನ ಸ್ವರಾಜ್ಯ ಬಡವರ ಸ್ವರಾಜ್ಯ. ಉಳ್ಳವರೊಡನೆ ಸರಿಸಮನಾಗಿ ಜೀವನದ ಆವಶ್ಯಕತೆಗಳನ್ನು ಅವನು ಕೂಡ ಹೊಂದಿರಬೇಕು. ಮೂಲಭೂತ ಆವಶ್ಯಕತೆಗಳು ಎಲ್ಲರಿಗೂ ಸಮಾನವಾಗಿ ಸಿಗುವಂತೆ ಇರಬೇಕು” ಎಂದವರು ಹೇಳುತ್ತಿದ್ದರು.
ಸ್ವತಂತ್ರ ಭಾರತದಲ್ಲಿ ನಾವು ಆರ್ಥಿಕ ಪುನರ್ವಿನ್ಯಾಸಕ್ಕೆ ಸೋವಿಯತ್ ಮಾದರಿಯನ್ನು ಅನುಸರಿಸಿದೆವು. ಪ್ರಧಾನಮಂತ್ರಿ ನೆಹರು ಅವರ ಆಗ್ರಹ ಇದಕ್ಕೆ ಕಾರಣ. ಆದರೆ ಗಾಂಧಿ ಬಹಳ ಹಿಂದೆಯೇ ‘ಯಂಗ್ ಇಂಡಿಯಾ’ದಲ್ಲಿ ಬರೆದಿದ್ದರು: “ಒಂದು ರಾಷ್ಟ್ರದ ಅರ್ಥನೀತಿಯು ಅಲ್ಲಿನ ವಾತಾವರಣ, ಭೂಗುಣ, ಜನರ ಸ್ವಭಾವಗಳನ್ನು ಅವಲಂಬಿಸಿರಬೇಕು. ಭಾರತದ ಪರಿಸ್ಥಿತಿ ಇಂಗ್ಲೆಂಡ್ ಇತ್ಯಾದಿಗಳಿಂದ ಪೂರ್ತಿ ವಿಭಿನ್ನ. ಆ ರೀತಿಯಲ್ಲಿ ನಮ್ಮ ದೇಶ ನಿರ್ಮಾಣ ಆಗಬೇಕು.” ಸೋವಿಯತ್ ಮಾದರಿಯನ್ನು ನಾವು ಅನುಕರಿಸಿದ್ದರಿಂದ ಈ 70 ವರ್ಷಗಳ ಕಾಲ ಭಾರತ ಆರ್ಥಿಕವಾಗಿ ಹಿಂದುಳಿಯಿತು. ‘ದೇಶದ ಆರ್ಥಿಕತೆಯಲ್ಲಿ ಯಾವೊಬ್ಬ ವ್ಯಕ್ತಿಯೂ ಆಹಾರ, ಬಟ್ಟೆ ಇಲ್ಲದೆ ತೊಂದರೆಗೆ ಒಳಗಾಗದಂತೆ ನೋಡಬೇಕು. ಪ್ರತಿಯೊಬ್ಬರಿಗೂ ಜೀವನನಿರ್ವಹಣೆಗೆ ಅಗತ್ಯವಾದ ಉದ್ಯೋಗ ಇರಬೇಕು. ಅದಕ್ಕಾಗಿ ಉತ್ಪಾದನೆಯ ಸಾಧನಗಳು, ಸಂಪನ್ಮೂಲಗಳು ಜನತೆಯ ನಿಯಂತ್ರಣದಲ್ಲಿರಬೇಕು. ಯಾರೋ ಒಬ್ಬನ ಕೈಯಲ್ಲಿ ಅದರ ಕ್ರೋಡೀಕರಣ ಆಗಬಾರದು. ದೈವದತ್ತವಾದ ಗಾಳಿ, ನೀರುಗಳಂತೆ ಅವು ಕೂಡ ಎಲ್ಲರಿಗೂ ಸಿಗಬೇಕು’ ಎಂದವರು ಕನಸು ಕಂಡಿದ್ದರು. ಅದೀಗ ತಲೆಕೆಳಗಾಗಿದೆ. ಈವತ್ತು ನೀರು ಕೂಡಾ ಮಾರಾಟವಾಗುತ್ತಿದೆ. ಗಾಳಿಯೊಂದು ಬಾಕಿ ಇದ್ದು, ಮಾಲಿನ್ಯದ ಕಾರಣದಿಂದ ಆಮ್ಲಜನಕದ ಬಾಟಲಿಗಳು ಕೂಡಾ ಮಾರಾಟಕ್ಕೆ ಬರಬಹುದು ಎನ್ನುವ ಪರಿಸ್ಥಿತಿ ಬರುತ್ತಿದೆ.
ಒಲ್ಲದ ಯಾಂತ್ರೀಕರಣ
ಗಾಂಧಿಜೀ ವ್ಯಾಪಕ ಯಾಂತ್ರೀಕರಣದ ಬಗ್ಗೆ ಹೇಳಿದ್ದಾರೆ. ಜನಬಲ ಕಡಮೆ ಇದ್ದು ಬಂಡವಾಳ ಮತ್ತು ತಾಂತ್ರಿಕ ಶÀಕ್ತಿಯನ್ನು ಆಧರಿಸಿರುವ ಪಾಶ್ಚಾತ್ಯ ಆರ್ಥಿಕ ವ್ಯವಸ್ಥೆಯ ನಮೂನೆಯನ್ನು ಜನಬಲ ಇರುವ ಮತ್ತು ಬಂಡವಾಳದ ಕೊರತೆಯುಳ್ಳ ಅಭಿವೃದ್ಧಿಶೀಲ ದೇಶಗಳ ಮೇಲೆ ಹೇರುವ ಪ್ರಯತ್ನ ಮಾಡಿದರೆ ಭಾರೀ ಪ್ರಮಾದವಾಗುತ್ತದೆ. ಭಾರತದಂತಹ ಜನಬಲವಿರುವ ದೇಶಕ್ಕೆ ಪಾಶ್ಚಾತ್ಯ ಮಾದರಿಯನ್ನು ಅನ್ವಯಿಸಿದರೆ ಅದರ ಮೂಲಭೂತ ಸಮಸ್ಯೆಗಳಾದ ನಿರುದ್ಯೋಗ ಮತ್ತು ಬಡತನಗಳನ್ನು ನಿವಾರಿಸಲು ಸಾಧ್ಯವಾಗದು – ಎಂದವರು ಹೇಳಿದ್ದರು. ನಮ್ಮಲ್ಲಿ ಇಂದು ವ್ಯಾಪಕವಾಗಿ ನಡೆಯುತ್ತಿರುವ ಯಾಂತ್ರೀಕರಣ ಕಂಪ್ಯೂಟರೀಕರಣಗಳನ್ನು ಗಮನಿಸಿದರೆ ಗಾಂಧಿಯವರ ಮಾತಿನ ಸತ್ಯದ ಅರಿವಾಗುತ್ತದೆ. ಕಾರ್ಖಾನೆಗಳ ಬೃಹತ್ (ಸಾಮೂಹಿಕ) ಉತ್ಪಾದನೆಯನ್ನು ಗಮನಿಸಿದ ಗಾಂಧಿ ‘ಯಂಗ್ ಇಂಡಿಯಾ’ದಲ್ಲಿ “ನಮಗೆ ಬೇಕಾದದ್ದು ಮಾಸ್ ಪ್ರೋಡಕ್ಷನ್ (Mass production) ಅಲ್ಲ; ಅಧಿಕ ಜನರಿಂದ ಉತ್ಪಾದನೆ (production by masses)” ಎಂದು ಬರೆದರು. ಏಕೆಂದರೆ ಸಂಪಾದನೆಗೆ ಜನರ ಕೈಗೆ ಕೆಲಸ ಬೇಕು. ಸ್ವದೇಶೀ ತತ್ತ್ವದ ಆಧಾರದ ಮೇಲೆ ಸ್ವಾವಲಂಬಿ ಅರ್ಥವ್ಯವಸ್ಥೆಯನ್ನು ರೂಪಿಸಬೇಕು. ದೇಶದ ಜನಬಲದ ಪೂರ್ಣ ಉಪಯೋಗವಾಗಬೇಕು, ನೈಸರ್ಗಿಕ ಸಂಪನ್ಮೂಲಗಳನ್ನು ಅತ್ಯಂತ ವಿವೇಚನೆಯಿಂದ ಬಳಸಬೇಕು. ಏಕೆಂದರೆ ಅವು ಶಾಶ್ವತವಾಗಿ ಸಿಗುವಂಥದ್ದಲ್ಲ. ನಿಸರ್ಗವು ಮನುಷ್ಯನ ಆವಶ್ಯಕತೆಯನ್ನು ಪೂರೈಸುತ್ತದೆಯೇ ಹೊರತು ದುರಾಸೆಯನ್ನಲ್ಲ (There is enough to meet every one’s need and not every one’s greed). ಬೃಹದ್ ಯಂತ್ರಗಳನ್ನು ಬಳಸಿ ಬೃಹತ್ ಪ್ರಮಾಣದಲ್ಲಿ ಉತ್ಪಾದಿಸಬಹುದು. ಆದರೆ ಹಾಗೆ ಉತ್ಪಾದಿತವಾದ ವಸ್ತುಗಳು ಬಳಕೆದಾರರ ಕೈಗೆ ಎಟುಕದಿದ್ದರೆ ಉತ್ಪಾದನೆ ಸಾರ್ಥಕವಾಗುವುದಿಲ್ಲ. ಬೃಹದ್ ಉದ್ಯಮಗಳು ಯಂತ್ರನಿಷ್ಠ ಆಗಿರುವುದರಿಂದ ಉದ್ಯೋಗಾವಕಾಶ ಕಡಮೆಯಾಗಿ ಜನರಿಗೆ ವರಮಾನ ಇರುವುದಿಲ್ಲ. ವಸ್ತುಗಳನ್ನು ಶ್ರೀಮಂತರು ಮಾತ್ರ ಕೊಳ್ಳಲು ಸಾಧ್ಯವಾಗುತ್ತದೆ. ಇದು ಗಾಂಧಿಜೀಯವರ ದೂರದೃಷ್ಟಿಯ ಚಿಂತನೆಗಳು.
ವಸ್ತುಗಳ ಉತ್ಪಾದನೆ ಹೆಚ್ಚಾದಾಗ ದೇಶದಲ್ಲಿ ವಿಕ್ರಯ ಮಾಡಲಾಗದ ಹೆಚ್ಚುವರಿ ವಸ್ತುಗಳನ್ನು ಹೊರದೇಶದಲ್ಲಿ ಮಾರುವ ಹವಣಿಕೆ ಪೈಪೆÇೀಟಿ ನಡೆಯುತ್ತÀದೆ. ಇಂದು ಆಗುತ್ತಿರುವುದು ಅದೇ. ಇಂಗ್ಲೆಂಡ್ ಮಾಡಿದ್ದು ಅದನ್ನೇ. ಅವರ ಉತ್ಪಾದನೆ ಅತಿ ಹೆಚ್ಚಾಯಿತು. ಅದನ್ನು ಮಾರಲು ನಮ್ಮ ದೇಶಕ್ಕೆ ತಂದರು. ಇಲ್ಲಿ ಅದನ್ನು ಮಾರುವುದಕ್ಕಾಗಿ ನಮ್ಮ ದೇಶದ ಉದ್ಯಮಗಳನ್ನೆಲ್ಲ ನಾಶಮಾಡಿದರು. ಇಂದು ಅಮೆರಿಕ ಮತ್ತಿತರ ದೇಶಗಳು ಮಾಡುತ್ತಿರುವುದು ಅದನ್ನೇ. ಈ ನಿಟ್ಟಿನಲ್ಲಿ ಗಾಂಧಿಯವರ ವಿಚಾರಗಳನ್ನು ನೋಡಬೇಕು. ‘ಗಾಂಧಿಯನ್ ಇಕನಾಮಿಕ್ಸ್’ ಎನ್ನುವಾಗ ಅನೇಕರು ಕುಚೋದ್ಯ ಮಾಡುತ್ತಾರೆ. ಆದರೆ ಗಾಂಧಿಯವರದ್ದು ಇಡೀ ಜಗತ್ತಿನ ಒಳಿತಿಗೆ ಬೇಕಾದ ಚಿಂತನೆ ಎಂಬುದನ್ನು ನಾವಿಂದು ಕಾಣುತ್ತಿದ್ದೇವೆ. ಪಂಡಿತ್ ದೀನದಯಾಳಜೀ ಅವರ ಏಕಾತ್ಮಮಾನವ ದರ್ಶನದಲ್ಲಿ ಬರುವ ವಿಚಾರವೂ ಇದೇ. ಪ್ರತಿಯೊಂದು ದೇಶದಲ್ಲಿನ ಹವಾಗುಣ, ಜನರ ಸ್ವಭಾವ, ಅಲ್ಲಿನ ಸಂಪನ್ಮೂಲಗಳ ಆಧಾರದ ಮೇಲೆ ಅಲ್ಲಿಗೆ ಬೇಕಾದ ವಸ್ತುಗಳ ಉತ್ಪಾದನೆ ಆಗಬೇಕೇ ಹೊರತು, ಎಲ್ಲೋ ತಯಾರಾಗುವ ವಸ್ತುಗಳು ಇಲ್ಲೂ ತಯಾರಾಗಬೇಕು ಎಂಬುದು ಸರಿಯಲ್ಲ. ಆದರೆ ಇಂದಿನ ಸಮಸ್ಯೆ ಎಲ್ಲ ವಸ್ತುಗಳನ್ನು ಇಲ್ಲೂ ತಯಾರಿಸಬೇಕು ಎನ್ನುವುದು.
ಮೆಷೀನ್ ಲರ್ನಿಂಗ್ ಹಾಗೂ ರೋಬೋಟಿಕ್ಸ್ ಎನ್ನುವ ಪದಗಳು ಇಂದು ಭಾರತದಲ್ಲಿಯೂ ಚಲಾವಣೆಗೆ ಬರುತ್ತಿವೆ. ಮನುಷ್ಯನ ಬುದ್ಧಿಶಕ್ತಿ ಹೇಗೆ ಕೆಲಸ ಮಾಡುತ್ತದೋ ಅದೇ ರೀತಿ ಯಂತ್ರ ಕೂಡ ಅರ್ಥ ಮಾಡಿಕೊಂಡು ಕೆಲಸ ಮಾಡುವುದು ಮೆಷೀನ್ ಲರ್ನಿಂಗ್. ಅದರಲ್ಲಿ ಸಂಶೋಧನೆ ಮಾಡುತ್ತಿರುವ ಒಬ್ಬ ಯುವಕನ ಉದ್ಗಾರ, “ನಾನು ಮಾಡುತ್ತಿರುವ ಕೆಲಸ ಮರದ ಕೊಂಬೆಯ ಮೇಲೆ ಕುಳಿತುಕೊಂಡು ಅದನ್ನು ಕಡಿಯುತ್ತಿರುವ ಕೆಲಸ.” ನಮ್ಮ ಆಧಾರವನ್ನು ನಾವೇ ನಾಶ ಮಾಡುವ ಕೆಲಸವೇ ಮೆಷೀನ್ ಲರ್ನಿಂಗ್. ದೊಡ್ಡ ದೊಡ್ಡ ಕಂಪ್ಯೂಟರ್ ಕಂಪೆನಿಗಳು ಇಷ್ಟು ಜನರನ್ನು ಕೆಲಸದಿಂದ ತೆಗೆದರು, ಪಿಂಕ್ಸ್ಲಿಪ್ ಕೊಟ್ಟರು ಎಂಬ ಮಾತುಗಳನ್ನು ನಾವು ಈಗಾಗಲೇ ಕೇಳುತ್ತಿದ್ದೇವೆ. ಈ ರೀತಿ ಆಗಬಾರದು. ದೇಶಕ್ಕೆ, ಜನತೆಗೆ ತೊಂದರೆಯಾಗದ ವ್ಯವಸ್ಥೆಗಳು ಇರಬೇಕೆಂದು ಗಾಂಧಿಜೀ 90 ವರ್ಷಗಳ ಹಿಂದೆಯೇ ಹೇಳಿದ್ದರು; ಅದು ಸಾರ್ವಕಾಲಿಕ ಸತ್ಯವಾಗಿ ಇಂದು ಗೋಚರಿಸುತ್ತಿದೆ.
ಗ್ರಾಮಾಭಿವೃದ್ಧಿ
ಭಾರತದ ಆರ್ಥಿಕ ಪುನರ್ವಿನ್ಯಾಸವು ಗ್ರಾಮಘಟಕದ ಮುಖಾಂತರವೇ ಆಗಬೇಕು ಎಂಬುದು ಗಾಂಧಿಯವರ ಇನ್ನೊಂದು ನಿಲವು. ಗ್ರ್ರಾಮೀಣ ಪ್ರದೇಶದ ಎಲ್ಲರಿಗೂ ವ್ಯವಸಾಯವೊಂದೇ ಆಸರೆ ಆಗಲಾರದು. ಈಗಾಗಲೇ ವ್ಯವಸಾಯದ ಮೇಲೆ ಜನರ ಒತ್ತಡ ಹೆಚ್ಚಾಗಿಯೇ ಇದೆ. ಮುಂದೆ ಬೆಳೆಯುತ್ತಾ ಹೋಗುವ ಗ್ರಾಮೀಣ ಜನಬಲವನ್ನು ಅಲ್ಲೇ ಬಳಸಿಕೊಳ್ಳಬೇಕು. ಅದು ನಗರದ ಕಡೆಗೆ ವಲಸೆ ಹೋಗಿ ಅಲ್ಲಿ ಸಮಸ್ಯೆಯನ್ನು ಸೃಷ್ಟಿ ಮಾಡಬಾರದು ಎಂದಾದರೆ ಗ್ರಾಮೀಣ ಪ್ರದೇಶದಲ್ಲೇ ಅದರ ಬಳಕೆ ಆಗಬೇಕು. ಅದಕ್ಕಾಗಿ ಗ್ರಾಮೀಣ ಪ್ರದೇಶದಲ್ಲಿ ಗ್ರಾಮ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಗ್ರಾಮಸಮುದಾಯದ ಜನರಿಗೆ ವಸತಿ, ಶಿಕ್ಷಣ, ಆರೋಗ್ಯ ರಕ್ಷಣೆ, ಸೇವಾಸೌಕರ್ಯಗಳ ಒದಗಣೆ ಆಗಬೇಕು. ಎಲ್ಲ ಗ್ರಾಮಗಳು ಈ ರೀತಿ ಸುಸಜ್ಜಿತವಾದಾಗ ವಲಸೆ ನಡೆಯುವುದಿಲ್ಲ. ಲಕ್ಷೋಪಲಕ್ಷ ಕೃಷಿ ಕೈಗಾರಿಕೆಗಳಿರುವ ಸುಸಂಸ್ಕಂತ, ಸಂಪದ್ಭರಿತ ಸ್ವಾವಲಂಬಿ ರಾಷ್ಟ್ರವಾಗಿ ಭಾರತ ಮೆರೆಯುತ್ತದೆ ಎಂದವರು ಹೇಳಿದ್ದರು.
ಆದರೆ ಇಂದು ಗ್ರಾಮಗಳು ಕೇವಲ ವೃದ್ಧರು ಇರುವ ಜಾಗಗಳಾಗಿವೆ. ಗ್ರಾಮೀಣ ಯುವಕರು ನಗರವಾಸಿಗಳಾಗಿದ್ದಾರೆ. ನಗರಗಳ ಜನಸಂಖ್ಯೆ ಬೆಳೆದು ಅನಪೇಕ್ಷಣೀಯ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಇಂದಿಗೂ ರಾಷ್ಟ್ರೀಯ ಸ್ವಯಂಸೇವಕ ಸಂಘ ತೆಗೆದುಕೊಂಡಿರುವ ಗ್ರಾಮವಿಕಾಸ ಕಾರ್ಯಕ್ಕೆ ಮೂಲ ಪ್ರೇರಣೆ ಇಂತಹ ಚಿಂತನೆಗಳೇ. ದೀನದಯಾಳಜೀ ಅವರ ಏಕಾತ್ಮ ಮಾನವದರ್ಶನ ಕೂಡ ಇದೇ ವಿಚಾರವನ್ನು ಹೇಳುತ್ತಿದೆ.
ಶಿಕ್ಷಣದ ತಳಹದಿ ಮತ್ತು ಮಾತೃಭಾಷೆ
ಶಿಕ್ಷಣ ಕುರಿತು 1937ರಲ್ಲೇ ಗಾಂಧಿಜೀ ರಾಷ್ಟ್ರೀಯ ಶಿಕ್ಷಣ ಹೇಗಿರಬೇಕೆಂದು ವಿವರಿಸಿದ್ದರು. ಆಗ ಪ್ರಚಲಿತವಾಗಿದ್ದದ್ದು ಬ್ರಿಟಿಷರ ಮೆಕಾಲೆ ಪ್ರಣೀತ ಶಿಕ್ಷಣ. ಇಂದಿಗೂ ಅದೇ ನಡೆಯುತ್ತಿದೆ. ಅದು ನಮ್ಮ ದೇಶಕೆÀ್ಕ ಯುಕ್ತವಲ್ಲ. ಶಿಕ್ಷಣ ಹೇಗಿರಬೇಕೆಂದು ಗಾಂಧಿಜೀ 1937ರಲ್ಲಿ ‘ಹರಿಜನ’ ಪತ್ರಿಕೆಯಲ್ಲಿ ಬರೆದರು. ಎಲ್ಲ ಮಕ್ಕಳಿಗೆ ಏಳುವರ್ಷಗಳ ಮೂಲ ಶಿಕ್ಷಣ (basic education)
ಸಿಗಬೇಕು. ಅದು ಕಡ್ಡಾಯ ಪ್ರಾಥಮಿಕ ಶಿಕ್ಷಣ. ಶಿಕ್ಷಣಮಾಧ್ಯಮವು ತಾಯಿನುಡಿ (ಅಥವಾ ಪ್ರಾದೇಶಿಕ ಭಾμÉ) ಆಗಿರಬೇಕು. ಶಿಕ್ಷಣದೊಂದಿಗೆ ಮಕ್ಕಳಿಗೆ ಯಾವುದಾದರೊಂದು ಉತ್ಪಾದಕ ಕಸುಬನ್ನು ಕಲಿಸಬೇಕು. ಅದರಿಂದ ಮಕ್ಕಳು ತಮ್ಮ ಕಾಲ ಮೇಲೆ ನಿಲ್ಲಲು ಸಮರ್ಥರಾಗುತ್ತಾರೆ. ಗಾಂಧಿಜೀ ಇದನ್ನು ಅಂದೇ ಬರೆದಿದ್ದರೂ ಕೂಡ ದೇಶದಲ್ಲಿ ಇಂದಿಗೂ ಪÀÅಸ್ತಕದ ಬದನೆಕಾಯಿ ಆಗುವಂತಹ ಅಸಂಖ್ಯಾತ ಶಿಕ್ಷಿತರು ತಯಾರಾಗುತ್ತಿದ್ದಾರೆ. ಸಮಾಜಕ್ಕೆ ಬೇಕಾದ ಕೆಲಸಗಳನ್ನು ಮಾಡಲು ಅವರಿಗೆ ಬರುವುದಿಲ್ಲ. ಖಾಲಿ ಇರುವ ಸಾವಿರಾರು ಕೆಲಸಗಳಿಗೆ ಬೇಕಾದ ಜನ ಸಿಗುತ್ತಿಲ್ಲ. ಪದವೀಧರರು ನಿರುದ್ಯೋಗಿಗಳಾಗಿದ್ದಾರೆ. ವಿದ್ಯಾರ್ಥಿಗಳಿಗೆ ಆರಂಭದಿಂದ ನೈತಿಕ ಶಿಕ್ಷಣ (ethical education) ಇರಬೇಕೆಂಬುದನ್ನು ಗಾಂಧಿಜೀ ಬಲವಾಗಿ ಪ್ರತಿಪಾದಿಸಿದರು. ಅದಕ್ಕೆ ಪ್ರತಿಕ್ರಿಯೆಯಾಗಿ ಓರ್ವ ಮುಸಲ್ಮಾನ್ ವಿದ್ವಾಂಸರು, ‘ಬೇಕಾಗಿರುವುದು ನೈತಿಕ ಶಿಕ್ಷಣವಲ್ಲ; ಮತೀಯ (religion) ಶಿಕ್ಷಣ’ ಎಂದು ಬರೆದರು. ಗಾಂಧಿಜೀ ಅದನ್ನು ಖಂಡಿಸಿ, ‘ನಾವು ಕೊಡಬೇಕಾಗಿರುವುದು ಇಡೀ ಜಗತ್ತಿಗೆ ಬೇಕಾದ ಸಾರ್ವತ್ರಿಕ ಮೌಲ್ಯಗಳು (universal values) ಇರುವ ನೈತಿಕ ಶಿಕ್ಷಣ’ ಎಂದು ಸ್ಪಷ್ಟಪಡಿಸಿದರು.
ಸಾರ್ವತ್ರಿಕ ಮೌಲ್ಯಗಳು ಸಿಗುವಂಥದ್ದು ಹಿಂದೂ ಚಿಂತನೆಯಲ್ಲಿ. ಈ ಚಿಂತನೆಗಳನ್ನು ಸಣ್ಣವಯಸ್ಸಿನಲ್ಲೇ ಕಲಿಸಿದರೆ ಯೋಗ್ಯ ನಾಗರಿಕರು ತಯಾರಾಗುತ್ತಾರೆಂದು ಗಾಂಧಿ ಹೇಳಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಸಾಮುದಾಯಿಕ ಶಿಕ್ಷಣ (ಚಟುವಟಿಕೆ) ಕೊಡಬೇಕು. ಶಾಲೆಯ ಆವರಣವನ್ನು ಸ್ವಚ್ಛಗೊಳಿಸುವುದು, ಸಣ್ಣ ಪುಟ್ಟ ಕೆಲಸ ಮಾಡುವುದು, ತರಗತಿಗೆ ಬೇಕಾದ್ದನ್ನು (ಮ್ಯಾಪು ಇತ್ಯಾದಿ) ತಂದು ಕೊಡುವುದು, ಬೋರ್ಡ್ ಒರೆಸುವುದು ಇತ್ಯಾದಿ. ಅದರಿಂದ ವಿದ್ಯಾರ್ಥಿಗೆ ಬಾಲ್ಯದಲ್ಲೇ ಸಾಮಾಜಿಕ ಕಾರ್ಯಗಳನ್ನು ಮಾಡಬೇಕೆಂಬ ಭಾವನೆ ಬರುತ್ತದೆ.
ಆದರೆ ಇಂದು ನಡೆಯುತ್ತಿರುವುದು ಏನು? ವಿದ್ಯಾರ್ಥಿಗಳಿಂದ ಅತ್ಯಂತ ಹೆಚ್ಚು ಡೊನೇಶನ್ ಪಡೆಯುವುದು, ಏರ್ಕಂಡಿಶನ್ ಕ್ಲಾಸ್ರೂಂ ಒದಗಿಸುವುದು ನಡೆಯುತ್ತಿದೆ. ಸಮಾಜಹಿತಕ್ಕೆ ಇದು ಒಳ್ಳೆಯದಲ್ಲ. ಹಿಂದೆ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಓದಿದವರಿಗೆ ಮಕ್ಕಳಿಂದ ಚಿಕ್ಕಪುಟ್ಟ ಕೆಲಸಗಳನ್ನು ಮಾಡಿಸುತ್ತಿದ್ದದ್ದು ನೆನಪಿರಬಹುದು. ಈಗ ಏರ್ಕಂಡಿಶನ್ ಕ್ಲಾಸ್ರೂಮಿನಲ್ಲಿ ವಿಡಿಯೋ ಮೂಲಕ ಪಾಠ ಮಾಡುವುದೇ ಹೆಚ್ಚುಗಾರಿಕೆಯಾಗಿದೆ. ಇಂತಹ ಸಾಧನ-ಸಲಕರಣೆಗಳು ಬರುವ ಮುಂಚೆಯೇ ಗಾಂಧಿ ಅದು ಒಳ್ಳೆಯದಲ್ಲ ಎಂದಿದ್ದರು.
ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣವನ್ನು ನೀಡಬೇಕೆಂದು ಗಾಂಧಿಜೀ ಅವರ ಆಗ್ರಹವಾಗಿತ್ತು. “ವಿದೇಶೀ ಮಾಧ್ಯಮವು ನಮ್ಮ ಮಕ್ಕಳಿಗೆ ತುಂಬ ತ್ರಾಸದಾಯಕವಾಗಿದೆ. ಅವರ ಮಿದುಳೂ ಸೋತು ಸುಸ್ತಾಗುವಂತೆ ಮಾಡಿದೆ. ಅದು ಅವರ ನರಮಂಡಲಗಳಲ್ಲಿ ವಿಪರೀತ ಬಿಗಿತ ಮತ್ತು ಬಳಲಿಕೆಯನ್ನು ಉಂಟುಮಾಡುತ್ತದೆ. ಈ ಮಾಧ್ಯಮದಿಂದಾಗಿ ನಮ್ಮ ಮಕ್ಕಳು ಬರೀ ಉರು ಹೊಡೆಯುವವರು ಅಥವಾ ನಕಲು ಮಾಡುವವರಾಗಿದ್ದರೆ, ಅನುಕರಣಪ್ರಿಯರೂ ಆಗಿದ್ದಾರೆ. ಇದರಿಂದಾಗಿ ಅವರಲ್ಲಿ ಯಾವುದೇ ಸ್ವಂತಿಕೆಯ ಸ್ವೋಪಜ್ಞತೆಯ ಮೌಲಿಕ ವಿಚಾರಗಳು ಇರುವುದಿಲ್ಲ. ಸ್ವತಂತ್ರ ವಿಚಾರಕ್ಕೂ ಕಾರ್ಯಕ್ಕೂ ಅವರು ಅನರ್ಹರಾಗಿದ್ದಾರೆ. ತಾವು ಕಲಿತದ್ದನ್ನು ತಮ್ಮ ಕುಟುಂಬಕ್ಕೂ ಜನಸಮುದಾಯಕ್ಕೂ ತಲಪಿಸಲು ಕೂಡ ಅವರು ಅಸಮರ್ಥರಾಗಿದ್ದಾರೆ” ಎಂದವರು ಆಕ್ಷೇಪಿಸಿದ್ದರು.
ಕೆಲವು ದಿನಗಳ ಹಿಂದೆ ಪತ್ರಿಕೆಗಳಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರವು (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್) ಇಡೀ ದೇಶದಲ್ಲಿ ಪ್ರಥಮ ಸ್ಥಾನ(ಣoಠಿ)ದಲ್ಲಿರುವ ಶಿಕ್ಷಣಸಂಸ್ಥೆ ಎಂಬುದಾಗಿ ವರದಿಯಾಗಿತ್ತು. ಇದರಿಂದ ಎಲ್ಲರಿಗೂ ಹೆಮ್ಮೆ ಆಗಿತ್ತು. ಆದರೆ ಜಾಗತಿಕಮಟ್ಟದಲ್ಲಿ ವಿಜ್ಞಾನ ಮಂದಿರ 250ನೆ ಸ್ಥಾನಕ್ಕಿಂತ ಕೆಳಗಿದೆ ಎಂದು ಕೂಡ ಪ್ರಕಟವಾಯಿತು. ಯಾಕಿಷ್ಟು ಕಡಮೆ? ಗಾಂಧಿಜೀ ಹೇಳಿದಂತೆ – ಪ್ರಾರಂಭಿಕ ಶಿಕ್ಷಣವು ಮಾತೃಭಾμÉಯಲ್ಲಿ ಇಲ್ಲದ ಪರಿಣಾಮವಾಗಿ ಮಕ್ಕಳಲ್ಲಿ ಗ್ರಹಣ ಸಾಮಥ್ರ್ಯ, ಸ್ವತಂತ್ರ ಆಲೋಚನೆ ಮತ್ತು ಸಂಶೋಧನಾ ಪ್ರವೃತ್ತಿಗಳು ಕುಗ್ಗುತ್ತವೆ. ಸಂಶೋಧನೆ ಎಂದರೆ ಬೇರೆಯವರು ಮಾಡಿದ್ದರ ನಕಲು ಅಥವಾ ಅನುಕರಣೆ ಆಗುತ್ತಿದೆ. ಆದ್ದರಿಂದ ಪ್ರತಿಭಾವಂತರು ತಯಾರಾಗುತ್ತಿಲ್ಲ.
‘ಹರಿಜನ’ ಪತ್ರಿಕೆಯಲ್ಲಿ ಅವರು ಬರೆದ ಇನ್ನೊಂದು ವಾಕ್ಯ ಹೀಗಿದೆ: “If I had the power of a despot I would today stop the tuition of our boys and girls through a foreign media and require all the teachers and professors be dismissed” (ನನಗೆ ಸರ್ವಾಧಿಕಾರಿಯ ಅಧಿಕಾರವಿದ್ದರೆ ವಿದೇಶೀ ಮಾಧ್ಯಮದಲ್ಲಿ ಕಲಿಸುವುದನ್ನು ತಕ್ಷಣ ನಿಲ್ಲಿಸುತ್ತಿದ್ದೆ; ಮತ್ತು ಎಲ್ಲ ಅಧ್ಯಾಪಕರನ್ನು ವಜಾ ಮಾಡುತ್ತಿದ್ದೆ!). ಆ ಮೂಲಕ ಬದಲಾವಣೆ ತರುತ್ತಿದ್ದೆ ಎಂದ ಗಾಂಧಿಜೀಯವರು ಭಾರತೀಯ ಭಾಷೆಗಳಲ್ಲಿ ಪಠ್ಯಪುಸ್ತಕಕ್ಕಾಗಿ ತಾನು ಕಾಯುತ್ತಿರಲಿಲ್ಲ; ಅದು ಅನಿವಾರ್ಯವಾಗಿ ಬದಲಾಗುತ್ತವೆ ಎಂದು ಹೇಳಿದರು. ಇಂದು ನಾವು ನೋಡುವುದೇನು? ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳ ನಿರೂಪಣೆಯನ್ನು ಕೂಡ ಇಂಗ್ಲಿಷನಲ್ಲೇ ಮಾಡುತ್ತಾರೆ. ಅಷ್ಟರಮಟ್ಟಿಗೆ ನಮ್ಮಲ್ಲಿ ಆಂಗ್ಲಭಾಷೆಯ ವ್ಯಾಮೋಹ ತುಂಬಿಕೊಂಡಿದೆ. ನಿಜವಾದ ಶಿಕ್ಷಣವು ಮಕ್ಕಳ ಒಳಗಿರುವ ಪ್ರತಿಭೆಯನ್ನು ಹೊರಗೆ ತರುವಂತಿರಬೇಕು ಎಂದು ಗಾಂಧಿ ಹೇಳಿದರೆ, ಸ್ವಾಮಿ ವಿವೇಕಾನಂದರು, ಮನುಷ್ಯರಲ್ಲಿ ಈಗಾಗಲೇ ಇರುವ ಪರಿಪೂರ್ಣತೆಯ ಪ್ರಕಟೀಕರಣವೇ ಶಿಕ್ಷಣ ಎಂದರು.
ಸ್ವರಾಜ್ಯ
ನಿಜವಾದ ಸ್ವರಾಜ್ಯ (ಸ್ವರಾಜ್) ಹೇಗಿರಬೇಕು ಎಂಬುದನ್ನು ಗಾಂಧಿಜೀ ವಿವರಿಸುತ್ತಾ, ವಿದೇಶೀ ಆಳ್ವಿಕೆಯಿಂದ ಮುಕ್ತವಾದ ಮಾತ್ರಕ್ಕೆ ಅದು ನಿಜವಾದ ಸ್ವರಾಜ್ಯ ಎಂದು ತಿಳಿದರೆ ತಪ್ಪಾಗುತ್ತದೆ. ಬ್ರಿಟಿಷರನ್ನು ಹೊರಹಾಕಿದ ಮಾತ್ರಕ್ಕೆ ಸ್ವರಾಜ್ಯ ಬರುವುದಿಲ್ಲ. ಅದಲ್ಲದೆ ಹೊರಗಿನ ಶತ್ರುಗಳ ಮೇಲೆ ಗೆಲವನ್ನು ಸಾಧಿಸುವುದು ಸುಲಭ. ಬದಲಾಗಿ ಒಳಗಿನ, ಅಂದರೆ ರಾಷ್ಟ್ರದ ಒಳಗಿನ, ಸಮಾಜದ ಒಳಗಿನ ಮತ್ತು ವ್ಯಕ್ತಿಯ ಒಳಗಿನ ಶತ್ರುಗಳ ಮೇಲೆ ಪ್ರಭುತ್ವ ಸಾಧಿsಸಿದಾಗಲೇ ದೇಶದ ಸ್ವಾತಂತ್ರ್ಯ ಪೂರ್ಣವಾಗುತ್ತದೆ. ಅದೇ ನಿಜವಾದ ಸ್ವರಾಜ್ಯ ಎಂದು ಹೇಳಿದ್ದರು. ಇಂದು ನಾವು ರಾಷ್ಟ್ರದ ಒಳಗೆ ಎಂತೆಂತಹ ಅಪಾಯಕಾರಿ ಸನ್ನಿವೇಶಗಳನ್ನು, ವ್ಯಕ್ತಿಗಳನ್ನು ಕಾಣುತ್ತಿದ್ದೇವೆ! ಅತ್ಯಂತ ಅನಿಷ್ಟ ಸಂಗತಿಯಾದ ಅಸ್ಪøಶ್ಯತೆಯನ್ನು ಕಾಣುತ್ತಿದ್ದೇವೆ. ಜೊತೆಗೆ ವೈಯಕ್ತಿಕವಾದ ನಮ್ಮ ಲಾಲಸೆಗಳು, ಅದರಿಂದ ಉತ್ಪತ್ತಿಯಾಗುವ ಲಂಚ, ಭ್ರμÁ್ಟಚಾರ – ಈ ಶತ್ರುಗಳನ್ನು ನಾಶ ಮಾಡಿದಾಗಲೇ ನಿಜವಾದ ಸ್ವರಾಜ್ಯ. ಇಲ್ಲವಾದರೆ ಸ್ವಾತಂತ್ರ್ಯ ಸಿಕ್ಕಿತು; ಆದರೆ ಅದು ನಮಗಲ್ಲ ಎಂಬ ಪರಿಸ್ಥಿತಿ. ಗಾಂಧಿಜೀ ಹೇಳುತ್ತಿದ್ದರು: `I am not interested in India merely free of British yoke. I am bent on India free from every yoke whatsoever’. ನಮ್ಮ ಮೇಲೆ ಇಂತಹ ಯಾವಾವ ದಬ್ಬಾಳಿಕೆ (ಹೊರೆ) ಇದೆ, ಅದೆಲ್ಲದರಿಂದ ಬಿಡುಗಡೆಯಾದಾಗ ಮಾತ್ರ ಪೂರ್ಣ ಸ್ವರಾಜ್ಯ ಸಿಕ್ಕಿದಂತೆ. ಸ್ವಾತಂತ್ರ್ಯಪ್ರಾಪ್ತಿಗೆ ಕೇವಲ ಐದು ದಿನಗಳ ಮುನ್ನ ‘ಹರಿಜನ’ದಲ್ಲಿ ಅವರು “ಪೂರ್ಣ ಸಾತಂತ್ರ್ಯವು ಇನ್ನೂ ತುಂಬ ದೂರದಲ್ಲಿದೆ” ಎಂದು ಬರೆದರು. ಅಂದರೆ ಸ್ವಾತಂತ್ರ್ಯದ ಕೆಲಸ ಇನ್ನೂ ಪೂರ್ಣಗೊಳ್ಳಬೇಕಾಗಿದೆ. ಸ್ವಾಮಿ ವಿವೇಕಾನಂದರು ಅದನ್ನೇ ಹೇಳಿದ್ದರು: “ಬ್ರಿಟಿಷರು ಹೋದ ಮಾತ್ರಕ್ಕೆ ಸಾಲದು; ಜಗತ್ತಿನ ಸಿಂಹಾಸನದ ಮೇಲೆ ತಾಯಿ ಭಾರತಿ ಮತ್ತೆ ವಿರಾಜಮಾನಳಾಗಬೇಕು” ಎಂದು. ದೀನದಯಾಳಜೀ, ಶ್ರೀಗುರೂಜೀ ಎಲ್ಲರೂ ಇದೇ ಅಭಿಪ್ರಾಯವನ್ನು ತಾಳಿದ್ದರು.
ಸ್ವತಂತ್ರ ಭಾರತದ ಇಂದಿನ ಸ್ಥಿತಿಯನ್ನು ನೋಡಿದಾಗ ನಮಗೆ ಗೋಚರಿಸುವುದು: ಬಹಳ ಹಿಂದೆಯೇ ಗಾಂಧಿಜೀ ಸಮಾಜದಲ್ಲಿ ಬೆಳೆಯಬಹುದಾದ ಸಪ್ತ ಸಾಮಾಜಿಕ ಪಾತಕಗಳ ಬಗ್ಗೆ ಎಚ್ಚರಿಸಿದ್ದರು. ಅವು ಹೀಗಿವೆ: ತತ್ತ್ವರಹಿತ ರಾಜಕೀಯ, ದುಡಿಮೆ ಇಲ್ಲದ ಸಂಪತ್ತು, ನೀತಿರಹಿತ ವಾಣಿಜ್ಯ, ಶೀಲ ಇಲ್ಲದ ಶಿಕ್ಷಣ, ಆತ್ಮಸಾಕ್ಷಿ ಇಲ್ಲದ ಭೋಗ, ಮಾನವೀಯತೆ ಇಲ್ಲದ ವಿಜ್ಞಾನ ಹಾಗೂ ತ್ಯಾಗವಿಲ್ಲದ ಪೂಜೆ. ಇವುಗಳ ಬಗ್ಗೆ ವ್ಯಾಖ್ಯಾನ ಬೇಕಾಗಿಲ್ಲ; ಏಕೆಂದರೆ ಇವು ನಿರಂತರ ನಮ್ಮ ಅನುಭವಕ್ಕೆ ಬರುತ್ತಿರುವ ಸಂಗತಿಗಳು.
ದೂರದರ್ಶಿತ್ವ
ಗಾಂಧಿಜೀ ಸುಮಾರು 90 ವರ್ಷಗಳ ಹಿಂದೆಯೇ ಸಮಾಜದ ಎಲ್ಲ ವಿಷಯಗಳ ಬಗ್ಗೆ ತಮ್ಮ ಅನುಭವದ ಬೆಳಕನ್ನು ಹರಿಸಿದ ದ್ರಷ್ಟಾರ. ಅವರ ವಿಚಾರಗಳೆಲ್ಲವೂ ನಮ್ಮ ಪ್ರಾಚೀನ ಪರಂಪರೆಯಿಂದ ಬಂದವು. ಮಾನವಸಮಾಜ ಹೇಗೆ ನಿರ್ಮಾಣವಾಗಬೇಕು ಎನ್ನುವುದೇ ಅದರ ಸಾರ. ನಮ್ಮ ದೇಶದಲ್ಲಿ ಜನಿಸಿದ ಎಲ್ಲ ಮಹಾಪುರುಷರು ಇದೇ ಬಗೆಯ ಭಾವನೆಗಳನ್ನು ಪ್ರಕಟಿಸಿದ್ದರು. ಗಾಂಧಿಜೀಯವರು ಸ್ವಾತಂತ್ರ್ಯಪೂರ್ವದಲ್ಲಿ ತೆಗೆದುಕೊಂಡ ಕೆಲವು ರಾಜಕೀಯ ನಿರ್ಧಾರಗಳು ಮತ್ತು ನಿರ್ಣಯಗಳು ಅಹಿತಕರ ಸಮಸ್ಯೆಗಳನ್ನು ಸೃಷ್ಟಿಸಿತು. ಅವುಗಳ ದುಷ್ಪರಿಣಾಮಗಳು ಇಂದಿಗೂ ಕಾಡುತ್ತಿವೆ. ಆದರೆ ಗಾಂಧಿಜೀಯವರು ಈ ನಿರ್ಧಾರಗಳನ್ನು ನಿರ್ಣಯಗಳನ್ನು ರಾಷ್ಟ್ರಕ್ಕೆ ಹಿತವಾಗುತ್ತದೆ ಎನ್ನುವ ಪ್ರಾಮಾಣಿಕ ನಂಬಿಕೆಯಿಂದ ತೆಗೆದುಕೊಂಡಿದ್ದರು ಎಂಬುದನ್ನು ನಾವು ಗಮನಿಸಬೇಕು. ರಾಷ್ಟ್ರ ಮತ್ತು ಸಮಾಜ ಹಿತಗಳು ಬಿಟ್ಟು ಬೇರಾವ ಚಿಂತನೆಗಳು ಅವರ ಮನದಲ್ಲಿ ಇರಲಿಲ್ಲ.
ಗಾಂಧಿಜೀಯವರ ಮಹಾನ್ ಶಿಷ್ಯರು – ಸರ್ದಾರ್ ವಲ್ಲಭಭಾಯಿ ಪಟೇಲ್, ಜೆ.ಬಿ. ಕೃಪಲಾನಿ, ಕೆ.ಎಂ. ಮುನ್ಶಿ, ಪುರುಷೋತ್ತಮದಾಸ್ ಟಂಡನ್, ಬಾಬು ರಾಜೇಂದ್ರಪ್ರಸಾದ್, ಚಕ್ರವರ್ತಿ ರಾಜಗೋಪಾಲಾಚಾರಿ ಎಲ್ಲರೂ ಗಾಂಧಿಜೀಯವರ ಹಿಂದೂಪರಂಪರೆಯ ಚಿಂತನೆಗಳಿಂದ ಪ್ರಭಾವಿತರಾದವರೇ. ಆದರೆ ಗಾಂಧಿಜೀ ಅವರ ಪ್ರೀತಿಯ ಶಿಷ್ಯ ಜವಾಹರಲಾಲ್ ನೆಹರೂ ಅವರು ಮಾತ್ರ ತಮ್ಮ ಗುರುವಿನ ಚಿಂತನೆಗಳಿಂದ ದೂರವಿದ್ದದ್ದು ವಿಪರ್ಯಾಸ.
ಗಾಂಧಿಜೀ ಅವರ ಸರ್ವೋದಯ ಕಲ್ಪನೆಗೆ ಜಾನ್ ರಸ್ಕಿನ್ನ ‘ಅನ್ಟು ದಿಸ್ ಲಾಸ್ಟ್’ ಕೃತಿ ಕಾರಣ ಎನ್ನುವವರಿದ್ದಾರೆ. ಜಾನ್ ರಸ್ಕಿನ್ ಪಾಶ್ಚಾತ್ಯ ಪರಂಪರೆಯ ತತ್ತ್ವ ‘ಬಹುಜನ ಹಿತಾಯ’ವನ್ನು ತಿರಸ್ಕರಿಸಿ ‘ಸರ್ವರ ಒಳಿತಿನ’ ತತ್ತ್ವವನ್ನು ಪ್ರತಿಪಾದಿಸಿದ್ದ. ಗಾಂಧಿಜೀ ಈ ಕೃತಿಯನ್ನು ಓದಿ ಪ್ರಭಾವಿತರಾಗಿದ್ದರು. ಆದರೆ, ಅವರು ನಡೆಸಿದ ಜೀವನ, ಪ್ರತಿಪಾದಿಸಿದ ಮೌಲ್ಯಗಳು, ಮಾರ್ಗಗಳು ಪ್ರಾಚೀನ ಕಾಲದಿಂದ ಬಂದ ಹಿಂದೂಪರಂಪರೆಯ ಚಿಂತನೆಗಳು. ಜಾನ್ ರಸ್ಕಿನ್ ತತ್ತ್ವಗಳು ಇದಕ್ಕೆ ಪೂರಕವಾಗಿದ್ದವು. ಗಾಂಧಿಜೀಯವರ ಕಲ್ಪನೆಯ ಭವ್ಯಭಾರತವನ್ನು ನಿರ್ಮಾಣ ಮಾಡುವುದರಲ್ಲಿ ಜನತೆ ಕೈಜೋಡಿಸಿದರೆ ಅದೇ ಗಾಂಧಿಜೀಯವರಿಗೆ ಸಲ್ಲಿಸುವ ನಮನ.
(ಲೇಖಕರು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ-ಮಧ್ಯ ಕ್ಷೇತ್ರೀಯ ಸಂಘಚಾಲಕರು ಹಾಗೂ ಬೆಂಗಳೂರಿನ ‘ದಿ ಮಿಥಿಕ್ ಸೊಸೈಟಿ’ಯ ಕಾರ್ಯದರ್ಶಿ. ‘ವಿಜ್ಞಾನಕ್ಷೇತ್ರಕ್ಕೆ ಭಾರತದ ಕೊಡುಗೆ’ ವಿಷಯದ ಕುರಿತಾಗಿ ವಿ. ನಾಗರಾಜ್ ಅವರು ಆಳವಾದ ಅಧ್ಯಯನವನ್ನು ನಡೆಸಿದ್ದಾರೆ ಮತ್ತು ರಾಜ್ಯದಾದ್ಯಂತ ಹತ್ತಾರು ಕಾಲೇಜುಗಳಲ್ಲಿ ಹಾಗೂ ಅಧ್ಯಯನವೇದಿಗಳಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ.)