ಪ್ರಮುಖರ ಬಂಧನದಿಂದಾಗಿ ತಲೆದೋರಿದ್ದ ನಾಯಕತ್ವಾಭಾವ, ಹೆಚ್ಚು ಬಿಗಿಗೊಳ್ಳುತ್ತಿದ್ದ ಸರ್ಕಾರೀ ದಮನಶಾಹಿ – ಈ ಪ್ರತಿಕೂಲ ಸನ್ನಿವೇಶದಲ್ಲಿಯೂ ನಿರ್ಭೀತ ರಾಷ್ಟ್ರಭಕ್ತರ ಪ್ರಭುತ್ವವಿರೋಧಿ ಭೂಗತ ಚಟುವಟಿಕೆಗಳು ನಿಲ್ಲಲಿಲ್ಲ. ಇನ್ನು ಸ್ವದೇಶೀ ಆಂದೋಲನವಂತೂ ದೇಶದೆಲ್ಲೆಡೆ ವೃದ್ಧಿಂಗತವಾಗಿತ್ತು.
ಅರವಿಂದರ ಸ್ಥಾನಾಂತರದಿಂದಾಗಿ ನಿವೇದಿತಾ ವಹಿಸಿಕೊಳ್ಳಲೇಬೇಕಾಗಿಬಂದ ಕರ್ಮಯೋಗಿನ್ ಪತ್ರಿಕೆಗಾಗಿ ಅವರು ಮೌಲಿಕ ಲೇಖನಗಳನ್ನು ಬರೆದರು. ಆ ಬರಹಗಳಲ್ಲಿ ಅವರು ಸ್ಫುಟೀಕರಿಸಿದ ರಾ ದರ್ಶನವು ಚಿರಕಾಲಿಕ ಸಂಗತತೆಯುಳ್ಳದ್ದಾಗಿದೆ. ಉದಾಹರಣೆಗೆ ೧೯೧೦ ಮಾರ್ಚ್ ೧೨ರ ಸಂಚಿಕೆಯಲ್ಲಿ ಬರೆದ ಲೇಖನದಲ್ಲಿ ಅವರು ಹೀಗೆಂದಿದ್ದರು: ವೇದ-ಉಪನಿಷತ್ ಸಾಹಿತ್ಯದಲ್ಲಿ ಪ್ರತಿಪಾದಿತವಾಗಿರುವ ಧರ್ಮಸಂಸ್ಥಾಪನೆ ಮತ್ತು ರಾಜ್ಯನಿರ್ಮಿತಿಯಲ್ಲಿ ಶ್ರೇಷ್ಠ ಚಿಂತಕರ ಪರಾಮರ್ಶನೆಯಲ್ಲಿಯೂ ಸಂತಜನರ ಧ್ಯಾನಸ್ಫುರಿತ ಬೋಧೆಗಳಿಂದಲೂ ಅಭಿವ್ಯಕ್ತವಾಗುತ್ತಿದ್ದ ನೈಜಶಕ್ತಿಯೇ ದೀರ್ಘಕಾಲದ ತರುವಾಯ ಈಗ ಮತ್ತೊಮ್ಮೆ ಆವಿರ್ಭಾವಗೊಳ್ಳುತ್ತಿದೆ – ಎಂಬುದು ನನ್ನ ಗ್ರಹಿಕೆಯಾಗಿದೆ. ಆ ನೈಜಧರ್ಮದ ಇಂದಿನ ಹೆಸರು ರಾಷ್ಟ್ರೀಯತೆ. ಭಾರತದ ವರ್ತಮಾನಕಾಲದ ಬೇರುಗಳು ಇರುವುದು ಅದರ ಭೂತಕಾಲದಲ್ಲಿ; ಮತ್ತು ಆ ಬೇರುಗಳ ಅಧಿಷ್ಠಾನದ ಮೇಲೆಯೇ ಈ ದೇಶದ ಭವಿಷತ್ ಕಾಲವೂ ಪ್ರಕಾಶಗೊಳ್ಳಬೇಕಾಗಿದೆ.”
೧೯೧೦ರ ಏಪ್ರಿಲ್ ನಡುಭಾಗದ ವೇಳೆಗೆ ಅರವಿಂದರು ಪುದುಚೇರಿಯಲ್ಲಿ ನೆಲೆಗೊಂಡದ್ದಾಗಿತ್ತು. ಹೀಗಾಗಿ ಅವರ ವಾಸ್ತವ್ಯದ ಬಗೆಗೆ ರಹಸ್ಯತೆಯ ಆವಶ್ಯಕತೆ ಈಗ ಉಳಿದಿರಲಿಲ್ಲ.
ಒಂದು ರೋಚಕ ಸಂಪರ್ಕ
೧೯೧೦ರ ಆರಂಭದ ದಿನಗಳಲ್ಲಿ ಒಂದು ಸ್ವಾರಸ್ಯಕರ ಪ್ರಸಂಗ ನಡೆಯಿತು. ಒಂದು ದಿನ ಮಧ್ಯಾಹ್ನ ನಿವೇದಿತಾರವರ ನಿವಾಸಕ್ಕೆ ಆಢ್ಯಳಾಗಿ ಕಾಣುತ್ತಿದ್ದ ಓರ್ವ ಯೂರೋಪಿಯನ್ ಮಹಿಳೆಯು ಅಧಿಕಾರಿಯಂತೆ ಕಾಣುತ್ತಿದ್ದ ಒಬ್ಬ ಆಂಗ್ಲೇಯನ ಮತ್ತು ಓರ್ವ ಅಮೆರಿಕನ್ ಮಹಿಳೆಯ ಸಂಗಡ ಭೇಟಿಗಾಗಿ ಬಂದರು. ಯೂರೋಪ್ ಮೂಲದ ಮಾರ್ಗರೆಟ್ ನೊಬೆಲ್ ಎಂಬಾಕೆ ನಿವೇದಿತಾ ಎಂಬ ಹೆಸರನ್ನು ಧರಿಸಿ ಪೂರ್ಣವಾಗಿ ಹಿಂದೂಧರ್ಮವನ್ನು ಸ್ವೀಕರಿಸಿ ಸಮಾಜದ ಉದ್ಬೋಧನಕಾರ್ಯಗಳಲ್ಲಿ ತೊಡಗಿಕೊಂಡಿರುವಳೆಂದು ಕೇಳಿ ಕುತೂಹಲಗೊಂಡು ಬಂದಿದ್ದುದಾಗಿ ಅವರು ತಿಳಿಸಿದರು. ಆಗಿನ ಪರಿಸರ ಹೇಗಿದ್ದಿತೆಂದರೆ ಮುಖ್ಯರಸ್ತೆಗಳನ್ನು ತಪ್ಪಿಸಿ ಗಲ್ಲಿಗಳಲ್ಲಿ ಹಾದು ರಹಸ್ಯವಾಗಿ ಆಕೆ ಬಂದಿದ್ದರು! ಆ ಭೇಟಿಯಲ್ಲಿ ನಿವೇದಿತಾ ಯಾವುದೇ ಆವೇಶಕ್ಕೆ ಒಳಗಾಗದೆ ಮಾರ್ಲೆ-ಮಿಂಟೋ ಸುಧಾರಣೆಗಳ ಹಲವು ರಚನಾತ್ಮಕ ಅಂಶಗಳು ಮೊದಲಾದ ವಿಷಯಗಳನ್ನು ಕುರಿತು ಆಳವಾದ ಪರಿಜ್ಞಾನದಿಂದ ಮಾತನಾಡಿದರು. ಭೇಟಿಯೂ ಮಾತುಕತೆಯೂ ಮುಗಿದು ನಿರ್ಗಮಿಸುವಾಗ ಬಂದಿದ್ದಾಕೆ ನಾನು ವೈಸ್ರಾಯ್ರವರ ಪತ್ನಿ ಲೇಡಿ ಮಿಂಟೋ ಎಂದಾಗ ನಿವೇದಿತಾ ದಿಗ್ಭ್ರಮೆಗೊಂಡರು. ಅವರು ಆ ಭೇಟಿಯನ್ನು ನಿರೀಕ್ಷಿಸಿರಲಿಲ್ಲ. ಅತ್ಯಂತ ಸೌಹಾರ್ದಪೂರ್ಣ ಮಾತುಕತೆಯಾದ ಮೇಲೆ ನಿವೇದಿತಾರವರ ಸಹಕಾರಿ ಕ್ರಿಸ್ಟೀನ್ ರಹಸ್ಯರೀತಿಯಲ್ಲಿಯೇ ಲೇಡಿ ಮಿಂಟೋರವರನ್ನು ಕರೆದೊಯ್ದು ಅವರಿಗೆ ದಕ್ಷಿಣೇಶ್ವರದ ಮತ್ತು ಬೇಲೂರುಮಠದ ದರ್ಶನವನ್ನು ಮಾಡಿಸಿ ಸ್ವದೇಶೀ ಬಿಸ್ಕತ್ತು ಚಹಾದಿಂದ ಸತ್ಕರಿಸಿ ಕಳುಹಿಸಿಕೊಟ್ಟಳು.
ಆ ಭೇಟಿಯೂ ನಿವೇದಿತಾರವರ ಸೌಂದರ್ಯಗ್ರಹಣಪ್ರವೃತ್ತಿಯೂ ಚಿಂತನೆಯ ನಿಶಿತತೆಯೂ ಲೇಡಿ ಮಿಂಟೋರವರ ಮೇಲೆ ಎಷ್ಟು ಪ್ರಭಾವ ಬೀರಿತೆಂದರೆ ಅಲ್ಲಿಂದಾಚೆಯ ದಿನಗಳಲ್ಲಿ ಅವರಿಬ್ಬರ ನಡುವೆ ವಿಶೇಷ ಆತ್ಮೀಯತೆ ಏರ್ಪಟ್ಟಿತು.
ನಿವೇದಿತಾರವರು ಆಂಗ್ಲಪ್ರಭುತ್ವಕ್ಕೆ ಪ್ರತಿರೋಧವನ್ನು ಸಂಘಟಿಸುವ ಮತ್ತು ಪ್ರಭುತ್ವವಿರೋಧಿ ವಲಯಗಳನ್ನು ಪೋಷಿಸುವ ಕಲಾಪಗಳಿಗೆ ಪ್ರಾಥಮ್ಯ ನೀಡಿ ಕಾರ್ಯರತರಾಗಿದ್ದರೆಂಬ ಲೇಡಿ ಮಿಂಟೋ ಅವರ ಭಾವನೆಯಲ್ಲಿ ವೈಯಕ್ತಿಕ ಭೇಟಿಯ ಫಲವಾಗಿ ಗಣನೀಯ ಪರಿವರ್ತನೆ ತೋರಿತು. ನಿವೇದಿತಾರವರದು ದೇಶದ ಅಭ್ಯುದಯದ ಪರವಾದ ರಚನಾತ್ಮಕ ಚಿಂತನೆಯಾಗಿದ್ದಿತೆಂದು ಲೇಡಿ ಮಿಂಟೋರವರಲ್ಲಿ ಪೊಲೀಸ್ ಮತ್ತಿತರ ಅಧಿಕಾರಿಗಳಲ್ಲಿ ಮನೆಮಾಡಿದ್ದ ಸಂಶಯಮನೋವೃತ್ತಿಯನ್ನು ದೂರಮಾಡಬಹುದಾದ ಹಲವು ಸ್ನೇಹಪೂರ್ವಕ ಸಲಹೆಗಳನ್ನು ಲೇಡಿ ಮಿಂಟೋ ನೀಡಿದರು. ಅದರಿಂದ ಒಂದಷ್ಟು ಪ್ರಯೋಜನವೂ ಆಗಿ ನಿವೇದಿತಾರವರ ಮನಸ್ಸಿನ ಮೇಲಿದ್ದ ಒತ್ತಡ ಕಡಮೆಯಾಯಿತು
೧೯೧೦ರ ಜೂನ್ ತಿಂಗಳ ಆರಂಭದಲ್ಲಿ ವಿಜ್ಞಾನಿ ಜಗದೀಶಚಂದ್ರ ಬೋಸ್ ಮತ್ತು ಅವರ ಪತ್ನಿ ಅಮಲಾ ಬೋಸ್ ಅವರೊಡಗೂಡಿ ಕಾಶಿ, ಕೇದಾರನಾಥ, ಬದರೀ ಮೊದಲಾದ ತೀರ್ಥಕ್ಷೇತ್ರಗಳ ಪರ್ಯಟನ ಮಾಡಿದುದು ನಿವೇದಿತಾರವರಲ್ಲಿ ಉಲ್ಲಾಸ ತಂದಿತು. ತಮ್ಮ ಅಂತ್ಯ ಸಮೀಪಿಸುತ್ತಿರಬಹುದೆಂಬ ಭಾವನೆ ನಿವೇದಿತಾರವರ ಅಂತರಂಗದಲ್ಲಿ ಆ ದಿನಗಳಲ್ಲಿಯೆ ಮೂಡಿರಬಹುದೆ – ಎಂಬ ಶಂಕೆಗೆ ಅವಕಾಶವಿದೆ.
ತಾವು ಸಂಕಲ್ಪಿಸಿದ್ದಂತೆ ಸ್ವಾಮಿಜೀಯವರ ವಿಸ್ತೃತ ಜೀವನಚರಿತ್ರೆಯೊಂದನ್ನು ರಚಿಸುವ ಕಾರ್ಯ ಬಹುಶಃ ತಮ್ಮ ಆಗಿನ ಸ್ಥಿತಿಯಲ್ಲಿ ಆಗದೆನಿಸಿ ತಾವು ಅದಕ್ಕಾಗಿ ಸಂಗ್ರಹಿಸಿದ್ದ ಸಾಮಗ್ರಿಯ?ನ್ನೂ ಮಠದ ಸ್ವಾಧೀನಕ್ಕೆ ಒಪ್ಪಿಸಿದರು.
ಅಮೆರಿಕ ಪ್ರವಾಸ
ದೀರ್ಘಕಾಲದಿಂದ ನಿವೇದಿತಾರವರ ಎಲ್ಲ ಚಟುವಟಿಕೆಗಳಿಗೂ ಸತತ ಬೆಂಬಲ ನೀಡುತ್ತ ಬಂದಿದ್ದ ಮತ್ತು ಸ್ವಾಮಿಜೀಯವರ ನಿಷ್ಠಾವಂತ ಶಿಷ್ಯೆಯಾಗಿದ್ದ ಧೀರಾಮಾತಾ (ಮಿಸೆಸ್ ಹಿಲ್ಬುಲ್) ತೀವ್ರ ಅನಾರೋಗ್ಯದಲ್ಲಿರುವುದಾಗಿಯೂ ಅವರು ಕೊನೆಗಾಲದಲ್ಲಿ ನಿವೇದಿತಾರನ್ನು ಒಮ್ಮೆ ನೋಡಬಯಸಿರುವುದಾಗಿಯೂ ಸಂದೇಶ ಬಂದು ನಿವೇದಿತಾ ೧೯೧೦ರ ಅಕ್ಟೋಬರ್ ತಿಂಗಳಲ್ಲಿ ಅಮೆರಿಕಕ್ಕೆ ಹೋದರು. ಮರಣ ಆಸನ್ನವಾಗಿದ್ದ ಆ ಉದಾತ್ತ ಮಹಿಳೆ ನಿವೇದಿತಾರವರ ಬಾಲಿಕಾ ವಿದ್ಯಾಲಯಕ್ಕಾಗಿ ಎರಡು ಸಾವಿರ ಪೌಂಡುಗಳು ಮತ್ತು ಬೋಸ್ ವಿಜ್ಞಾನ ಸಂಶೋಧನಾಲಯಕ್ಕಾಗಿ ೩೦೦೦ ಪೌಂಡುಗಳನ್ನು ಸಂದಾಯ ಮಾಡುವಂತೆ ಮೃತ್ಯುಪತ್ರ ಬರೆದಿದ್ದರು. ನಿವೇದಿತಾ ಭೇಟಿಯಾದ ಅಲ್ಪಕಾಲದಲ್ಲಿ ಆಕೆ ಅಸುನೀಗಿದರು.
ವಿಚಿತ್ರವೆಂದರೆ ಧೀರಾಮಾತಾ ಅವರ ಸಮೀಪಬಂಧುಗಳು ತೆಗೆದ ನಿರಾಧಾರ ತಗಾದೆಗಳಿಂದಾಗಿ ನಿವೇದಿತಾರವರಿಗೆ ಆ ನಿಗದಿಯಾಗಿದ್ದ ಹಣ ಕೈಸೇರಲಿಲ್ಲ; ಮತ್ತು ಮನುಷ್ಯರ ವರ್ತನೆ ಹಲವೊಮ್ಮೆ ಎಷ್ಟು ಕ್ಷುದ್ರ ಮಟ್ಟಕ್ಕೆ ಇಳಿಯುತ್ತದೆಂಬ ಅನುಭವ ಅವರಿಗೆ ವಿಷಾದ ತಂದಿತು.
ಭಾರತಕ್ಕೆ ಹಿಂದಿರುಗಿದ ಮೇಲೆ ನಿವೇದಿತಾರವರಲ್ಲಿ ಹೆಚ್ಚು ಕಾರ್ಯೋತ್ಸಾಹ ಉಳಿದಿರಲಿಲ್ಲ. ಹಲವರು ಕಾರ್ಯಕರ್ತರು ನೇಣಿಗೀಡಾಗಿದ್ದರೆ ಬಾರಿಂದ್ರಕುಮಾರ್ ಮೊದಲಾದವರೂ ಸಂಗಡ ಇರಲಿಲ್ಲ. ಕೆಲವರು ಬಂಧನದಲ್ಲಿದ್ದರೆ ಕೆಲವರು ಗಡೀಪಾರುಗೊಂಡಿದ್ದರು.
ನಿವೇದಿತಾ ಕ್ರಮೇಣ ಎಲ್ಲ ಚಟುವಟಿಕೆಗಳಿಂದ ವಿರಮಿಸತೊಡಗಿದರು. ೧೯೧೧ರ ಮೇ ತಿಂಗಳಿನಿಂದಾಚೆಗೆ ಹೆಚ್ಚು ಸಮಯ ಮಾಯಾವತಿ ಆಶ್ರಮದಲ್ಲಿ ಕಳೆಯುತ್ತಿದ್ದರು.
ಹಿಂದೆ ಇದ್ದ ಸಹಕಾರಿಗಳು ದೂರ ಸರಿದಿದ್ದುದರಿಂದ ವಿದ್ಯಾಲಯವನ್ನು ಮುಂದುವರಿಸುವುದು ದುಸ್ತರವಾಗಿತ್ತು.
ಕೊನೆಯ ದಿನಗಳು
೧೯೧೧ರ ಅಕ್ಟೋಬರ್ ಆರಂಭದಲ್ಲಿ ವಿಶ್ರಾಂತಿಗೆಂದು ಡಾರ್ಜಿಲಿಂಗಿಗೆ ಹೋದ ನಿವೇದಿತಾ ವಿಚಿತ್ರ ಕಾಯಿಲೆಯೊಂದಕ್ಕೆ ಸಿಲುಕಿದರು. ಆ ಸಮಯದಲ್ಲಿ ಡಾರ್ಜಿಲಿಂಗಿನಲ್ಲಿಯೆ ಮೊಕ್ಕಾಂ ಇದ್ದ ಖ್ಯಾತ ವೈದ್ಯ ನೀಲರತನ್ ಸರ್ಕಾರ್ ಸಾಧ್ಯವಿದ್ದ ಚಿಕಿತ್ಸೆ ನೀಡಿದರಾದರೂ ಕಾಯಿಲೆ ಗುಣವಾಗುವ ಲಕ್ಷಣ
ತೋರಲಿಲ್ಲ.
ಅನುಭವಿ ವೈದ್ಯರು ನೀಡಿದ ಯಾವ ಚಿಕಿತ್ಸೆಗಳೂ ಫಲಕಾರಿಯಾಗದೆ ನಿವೇದಿತಾರವರ ದೇಹಸ್ಥಿತಿ ಕ್ಷೀಣಿಸುತ್ತಲೇ ಹೋಯಿತು. ಜಗದೀಶಚಂದ್ರ ಬೋಸ್ ಮತ್ತು ಅಮಲಾ ಬೋಸ್ ಅತ್ಯಂತ ಆಸ್ಥೆಯಿಂದ ನಿವೇದಿತಾರಿಗೆ ಆರೈಕೆ ಮಾಡುತ್ತಿದ್ದರು.
ಮಾನಸಿಕವಾಗಿಯಂತೂ ನಿವೇದಿತಾ ಅಂತ್ಯಕ್ಕೆ ಸಿದ್ಧರಾಗಿಯೆ ಇದ್ದರು. ಬಾಧೆಯ ನಡುವೆಯೂ ಅವರು ಹಸನ್ಮುಖರಾಗಿ ಸಮೀಪದಲ್ಲಿದ್ದವರಿಗೆ ನನ್ನ ಜೀವಿತಕಾರ್ಯ ಮುಗಿದಿದೆ ಎನಿಸುತ್ತಿದೆ ಎಂದು ನಿರ್ಭಾವುಕರಾಗಿ ಆಗಾಗ ಹೇಳುತ್ತಿದ್ದರು.
ಸೋಜಿಗವೆಂದರೆ ಭವಿ?ದ್ದರ್ಶಕರೆಂಬಂತೆ ಸ್ವಾಮಿಜೀ ದಶಕದ? ಹಿಂದೆಯೆ ನಿವೇದಿತಾರಿಗೆ ನೀನು ಬಹಳವೆಂದರೆ ೪೪ ವ?ಗಳವರೆಗೆ ಇರಬಹುದ? ಎಂದು ಹೇಳಿದ್ದರು.
ಮೃತ್ಯುವೆಂದರೆ ಸ್ಥಿತ್ಯಂತರವಲ್ಲ, ಬಹುದಿನಗಳ ಪರಿಚಿತರ ಬಳಿಸಾರುವುದು ಎಂಬ, ಮತ್ತು ಆ ಪ್ರಿಯಕರನು ಬಂದು ಬಾಗಿಲು ತಟ್ಟಿದಾಗ ತಡಮಾಡದೆ ಸಂಭ್ರಮದಿಂದ ಬಾಗಿಲನ್ನು ತೆರೆದು ಅವನನ್ನು ಸ್ವಾಗತಿಸಬೇಕು ಎಂಬ ಧಾಟಿಯ ಚಿಂತನೆಗಳನ್ನು ನಿವೇದಿತಾ ತಮ್ಮ ಕೊನೆದಿನಗಳ ದಿನಚರಿಯಲ್ಲಿ ಬರೆದಿದ್ದರು. ಅವರನ್ನು ಪ್ರತಿದಿನ ತಪ್ಪದೆ ಭೇಟಿಯಾಗುತ್ತಿದ್ದ ಜಗದೀಶಚಂದ್ರ ಬೋಸ್ರೊಡನೆ ತಮ್ಮ ಅವಸಾನದ ಹಿಂದಿನ ದಿನದವರೆಗೆ ಉಲ್ಲಾಸದಿಂದಲೇ ಮಾತನಾಡುತ್ತಿದ್ದರು.ಆ ದಿನಗಳಲ್ಲಿ ಒಂದು ಅವರ್ಣನೀಯ ಪ್ರಶಾಂತಿ ಅವರ ಮುಖಮಂಡಲವನ್ನು ಆವರಿಸಿದ್ದಿತು.
ಅವರು ದೇಹಬಿಟ್ಟದ್ದು ೧೯೧೧ರ ಅಕ್ಟೋಬರ್ ೧೩ರಂದು. ಕೈಯಲ್ಲಿ ಜಪಮಾಲೆ ಹಿಡಿದು ಧ್ಯಾನಸ್ಥರಾಗಿದ್ದಂತೆಯೆ ಪ್ರಕೃತಿಯಲ್ಲಿ ಲೀನರಾದರು.
ಗಣನೆಯಲ್ಲಿ ದೀರ್ಘವಲ್ಲದಿದ್ದರೂ ಸಂಚಿಯಲ್ಲಿ ಕೂರಿ ತುಂಬಿದಂತಹ ಆ ಘಟನಾಪೂರ್ಣ ಭಗವನ್ನಿವೇದಿತ ಬಾಳಿಗೆ ತೆರೆ ಬಿದ್ದಿತು.
ಪ್ರಶಾಂತ ಮನಸ್ಕತೆ
ಜಗತ್ತಿನ ಎಲ್ಲ ಆಗುಹೋಗುಗಳೂ ವಿಧಿನಿಯಾಮಕದಂತೆ ನಡೆಯುತ್ತವೆ ಎಂಬ ನಿಶ್ಚಯವು ನಿವೇದಿತಾರವರ ಅಂತರಂಗದಲ್ಲಿ ಹಿಂದಿನಿಂದಲೇ ಸ್ಥಿರಗೊಂಡಿತ್ತು. ಆದುದರಿಂದ ತಮ್ಮ ಬಗೆಗೆ ಆಂಗ್ಲ ಪ್ರಭುತ್ವದ ಅಧಿಕಾರಿಗಳು ತಳೆಯುತ್ತ ಬಂದಿದ್ದ ಶಂಕೆಗಳು, ತಮ್ಮ ನಿಕಟವಲಯದ ದೇಶಭಕ್ತರು ಎದುರಿಸಿದ್ದ ಬವಣೆಗಳು, ತಾವು ಅತ್ಯುತ್ಸಾಹದಿಂದ ಆರಂಭಿಸಿದ್ದ ಬಾಲಿಕಾ ವಿದ್ಯಾಲಯಕ್ಕೆ ಎದುರಾಗಿದ್ದ ಅನಿಶ್ಚಿತತೆಗಳು, ಅಂತಿಮವಾಗಿ ತಮ್ಮನ್ನು ತೀವ್ರ ಬಾಧೆಗೆ ಒಳಪಡಿಸಿದ್ದ ಕಾಯಿಲೆ – ಯಾವುದೂ ಅವರನ್ನು ಹೆಚ್ಚು ವಿಚಲಿತಗೊಳಿಸಿದಂತಿರಲಿಲ್ಲ. ಅವರ ಆಂತರಿಕ ಪ್ರಶಾಂತಿ ಕದಡಿರಲಿಲ್ಲ. ಸ್ವಾಮಿಜೀಯವರ ನಿಧನಾನಂತರ ತಾವು ಮಠದ ವ್ಯವಸ್ಥೆಯಿಂದ ಸ್ವಲ್ಪ ದೂರಸರಿಯಬೇಕಾಗಿ ಬಂದುದನ್ನೂ ಅವರು ಸ್ತಿಮಿತಮನಸ್ಕರಾಗಿಯೆ ಸ್ವೀಕರಿಸಿದ್ದರು, ಮತ್ತು ಅನಂತರವೂ ತಮ್ಮ ಸ್ವವಿಹಿತ
ಜನಜಾಗೃತಿಕಾರ್ಯಗಳನ್ನು ಹಿಂದಿನಂತೆಯೆ ಮುಂದುವರಿಸಿದ್ದರು. ಅಂತಹ ಅನಿಶ್ಚಿತತೆಗಳಿಂದ ಕ್ಷೆಭೆಗೆ ಒಳಗಾಗಬಾರದೆಂಬ ಜೀವನಸೂತ್ರವನ್ನು ಸ್ವಾಮಿಜೀಯವರ ಸಂಪರ್ಕದ ಆರಂಭದ ದಿನಗಳಿಂದಲೇ ಅವರು ರೂಢಿಸಿಕೊಂಡಿದ್ದರು. ಅವರು ಭಾರತಕ್ಕೆ ಸ್ಥಳಾಂತರಗೊಳ್ಳುವ ನಿರ್ಧಾರವನ್ನು ಪುನರ್ವಿಮರ್ಶೆ ಮಾಡುವಂತೆ ಮೇಲಿಂದ ಮೇಲೆ ಸ್ವಾಮಿಜೀ ಆಗ್ರಹಿಸಿದ್ದರು. ಆದರೆ ನಿವೇದಿತಾರವರ ಕೈಂಕರ್ಯ ಭಾರತೀಯ ಸಮಾಜದ ಹಿತಕ್ಕೆ ಮೀಸಲಾಗಿರಬೇಕೆಂದು ವಿಧಿಯೇ ಪೂರ್ವನಿಶ್ಚಯ ಮಾಡಿದ್ದಿರಬೇಕು.
ಅವಸಾನದಶೆಯಲ್ಲಿ ನಿವೇದಿತಾರವರ ಮುಖವನ್ನು ಅದೊಂದು ಬಗೆಯ ಅಲೌಕಿಕ ನಿಸ್ತರಂಗತೆಯೂ ಮಾಧುರ್ಯವೂ ನೆಮ್ಮದಿಯೂ ಆವರಿಸಿದ್ದುದನ್ನು ಅವರ ಆರೈಕೆಯಲ್ಲಿ ನಿರತರಾಗಿದ್ದ ಜಗದೀಶಚಂದ್ರ ಬೋಸ್ ದಂಪತಿಗಳು ಗಮನಿಸಿದರು. ನಿನ್ನ ಜೀವಿತಕಾರ್ಯ ನಡುವಯಸ್ಸಿನೊಳಗೇ ಮುಕ್ತಾಯಗೊಳ್ಳುತ್ತದೆ ಎಂದು ಸ್ವಾಮಿಜೀ ನುಡಿದಿದ್ದ ಭವಿ?ಕ್ತಿಯನ್ನು ನಿವೇದಿತಾ ಕೊನೆದಿನಗಳಲ್ಲಿ ಹಲವುಬಾರಿ ಮೆಲುಕುಹಾಕಿ ಸಮೀಪದಲ್ಲಿದ್ದವರಿಗೆ ಹೇಳಿದ್ದರು.
ಜೀವದ ಮೂಲಸ್ವರೂಪವು ನಿರಾಕಾರವಾದುದರಿಂದ ಮರಣದಲ್ಲಿ ಅದು ಲೊಕಾಂತರಗೊಳ್ಳುತ್ತದೆಂಬ ಅನುಮಿತಿಯೂ ನಿರಾಧಾರವೇ ಎನಿಸುತ್ತದೆ; ಅದನ್ನು ಪೂರ್ಣವಾಗಿ ಧ್ಯಾನಸ್ಥಿತಿಯೆಡೆಗಿನ ಕ್ರಮಣವೆಂದಷ್ಟೆ ಭಾವಿಸಬಹುದೇನೋ – ಎಂಬ ಧಾಟಿಯ ತಮ್ಮ ಚಿಂತನಗಳನ್ನು ತಮ್ಮ ದಿನಚರಿ ಪುಸ್ತಕದಲ್ಲಿ ಅವರು ಬರೆದಿರಿಸಿದ್ದರು.
ಅಂತ್ಯಕಾಲದಲ್ಲಿ ಅವರ ವಾಸ್ತವ್ಯವಿದ್ದ ಡಾರ್ಜಿಲಿಂಗಿನ ರಮ್ಯ ಬಾಹ್ಯ ಪರಿಸರವು ನಿವೇದಿತಾರವರ ಆಂತರ್ಯದಲ್ಲಿ ಪ್ರತಿಫಲಿತವಾದಂತಿತ್ತು.
(ಸಶೇಷ)