1897ರ ಆರಂಭದಲ್ಲಿ ಮೊತ್ತಮೊದಲಬಾರಿ ಭಾರತದಲ್ಲಿ ಕಾಲಿರಿಸುತ್ತಿದ್ದಂತೆ ನಿವೇದಿತಾರನ್ನು ಎದುರುಗೊಂಡ ದೃಶ್ಯಾವಳಿ ಆಕೆಗೆ ಪೂರ್ತಿ ಅಪರಿಚಿತವಾಗಿತ್ತು: ದೇಹದ ಕೆಲವು ಭಾಗಗಳನ್ನ? ಆಚ್ಛಾದಿಸಿದ್ದ ವಿಚಿತ್ರ ದಿರಸುಗಳನ್ನು ಧರಿಸಿದ್ದವರು ಕೆಲವರಾದರೆ ನಿಲುವಂಗಿ ಧರಿಸಿದ್ದವರು ಕೆಲವರು. ಕೆಲವರ ತಲೆಗಳನ್ನು ಬಗೆಬಗೆಯ ಮುಂಡಾಸುಗಳು ಕವಿದಿದ್ದರೆ ಕೆಲವರ ಕಿವಿಗಳಲ್ಲಿ ಹೊಳೆಯುವ ಹತ್ತಕಡಕು. ಕೆಲವರ ತಲೆಗೂದಲು ಹೆರಳಿಗಾಗುವ? ಇಳಿಬಿದ್ದಿದ್ದರೆ ಕೆಲವರದು ಸೊಂಪಾದ ದಾಡಿ. ಮೂಲೆಯಲ್ಲೊಂದೆಡೆ ಅದಾವುದರ ಬಗೆಗೂ ಲಕ್ಷ್ಯವೇ ಇಲ್ಲದ ಭಸ್ಮಧಾರಿ ಸಾಧುವೊಬ್ಬನ ಧ್ಯಾನಸ್ಥ ಭಂಗಿ.
ನಾನು ಯಾವುದೊ ವಿಚಿತ್ರ ಲೋಕಾಂತರಕ್ಕೆ ಬಂದಿದ್ದೇನೆ ಎಂದು ಆಕೆಗೆ ಅನಿಸಿದ್ದರೆ ಸೋಜಿಗವಿಲ್ಲ.
ಆದರೆ ಈ ವಿಸ್ಮಯ ಇದ್ದುದು ಕೆಲವು ದಿನಗಳಷ್ಟೆ.
ಅಲ್ಪಕಾಲದಲ್ಲಿ ಭಾರತದ ಪರಿಸರಕ್ಕೆ ಆಕೆ ಎಷ್ಟು ಹೊಂದಿಕೊಂಡುಬಿಟ್ಟರೆಂದರೆ ಆಕೆಗೆ ತನ್ನದೇ ತವರಿಗೆ ಮರಳಿದ್ದೇನೆನಿಸಿತು. ಕೆಲವೇ ದಿನಗಳಲ್ಲಿ ಸಹಜವೆಂಬಂತೆ ಆಧ್ಯಾತ್ಮಿಕ ಸಾಧನೆಯ ಮತ್ತು ಜನಸೇವೆಯ ಮೊದಲ ಹೆಜ್ಜೆಗಳನ್ನಿರಿಸಿದರು.
ಬಾಲಿಕಾ ಶಾಲೆ
ನಿವೇದಿತಾರವರ ದೃಷ್ಟಿಯಲ್ಲಿ ಆದ್ಯತೆ ಸಲ್ಲಬೇಕಾಗಿದ್ದುದು ಜನಶಿಕ್ಷಣಕ್ಕೆ. ತನ್ನದೇ ಕಲ್ಪನೆಯ ಬಾಲಿಕಾ ಶಾಲೆಯನ್ನು ಆಕೆ ಸ್ಥಾಪಿಸುವಾಗ (೧೮೯೮ರ ಅಂತ್ಯ) ಆಕೆ ಭಾರತಕ್ಕೆ ಬಂದು ಎರಡು ವ?ಗಳ? ಆಗಿದ್ದವು.
ಆರಂಭದಿಂದಲೇ ಹಲವಾರು ಹೊಸ ರೀತಿಯ ಎಂದರೆ ಬೇರೆ ಶಾಲೆಗಳಲ್ಲಿ ಇಲ್ಲದ ಚಟುವಟಿಕೆಗಳನ್ನು ಶಾಲೆಯಲ್ಲಿ ಅಳವಡಿಸಲಾಗಿತ್ತು: ಗ್ರಂಥಭಂಡಾರ, ಚರ್ಚಾಗೋಷ್ಠಿಗಳು, ಸಂಕೀರ್ತನೆ, ಇತ್ಯಾದಿ. ಹೀಗಾಗಿ ಸಂಪನ್ಮೂಲಗಳ ಕೊರತೆ ಇದ್ದರೂ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚುತ್ತಲೇ ಇದ್ದಿತು. ಜಗದೀಶಚಂದ್ರ ಬೋಸ್ರವರ ಸಹೋದರಿ ಲಾವಣ್ಯಪ್ರಭಾ ಮೊದಲಾದ ಹಿತೈಷಿಗಳು ಸ್ವಪ್ರೇರಿತರಾಗಿ ಮತ್ತು ನಿಃಸ್ವಾರ್ಥದಿಂದ ಶಾಲೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ವಿಶೇಷವೆಂದರೆ ಇಲ್ಲಿ ಕಲ್ಪಿಸಿದ್ದ ಅನುಕೂಲತೆಯಿಂದಾಗಿ ಎಳೆವಯಸ್ಸಿನವರು ಮಾತ್ರವಲ್ಲದೆ ಶಿಕ್ಷಣವಂಚಿತರಾಗಿದ್ದ ವಯಸ್ಕರು, ವಿಧವೆಯರೂ ಕಲಿಯಲು ಬರುತ್ತಿದ್ದುದು. ಶಾಲೆಯ ಸಂಕೀರ್ತನಾದಿ ಕಾರ್ಯಕ್ರಮಗಳಲ್ಲಿ ನೆರೆಕರೆಯ ನಿವಾಸಿಗಳು ಗಣನೀಯ ಸಂಖ್ಯೆಯಲ್ಲಿ ಬಂದು ಸೇರುತ್ತಿದ್ದರು. ಆಗಾಗ ಪ್ರವಚನಗಳನ್ನು ನೀಡಲು ರಾಮಕೃ? ಮಠದ ಸಂನ್ಯಾಸಿಗಳು ಬರುತ್ತಿದ್ದರು. ಶಾಲೆಯ ಪಾಠ್ಯಗಳಲ್ಲದೆ ಆವಶ್ಯಕತೆಯಿದ್ದ ಹೆಣ್ಣುಮಕ್ಕಳಿಗೆ ಮನೆಗೆಲಸ, ಹೊಲಿಗೆ ಮೊದಲಾದವನ್ನೂ ಕಲಿಸಲಾಗುತ್ತಿತ್ತು.
ಹೀಗೆ ಅದು ಹೆಸರಿಗೆ ವಿದ್ಯಾಲಯವಾಗಿದ್ದರೂ ಬಗೆಬಗೆಯ ಜನೋಪಯೋಗಿ ಚಟುವಟಿಕೆಗಳ ಮತ್ತು ಸಾಂಸ್ಕೃತಿಕ ಚೇತರಿಕೆಯ ಕೇಂದ್ರವೂ ಆಗಿತ್ತು. ಬೇರೆಡೆಗಳಂತಲ್ಲದೆ ಇಲ್ಲಿಗೆ ಎಲ್ಲ ಸಮುದಾಯಗಳ ಮಕ್ಕಳೂ ಬರುತ್ತಿದ್ದರು. ಇದೂ ಆಗಿನ ಸಾಮಾಜಿಕ ಪರಿಸರದ ಹಿನ್ನೆಲೆಯಲ್ಲಿ ತುಂಬಾ ಹೃದ್ಯವಾದ ವಿದ್ಯಮಾನವಾಗಿತ್ತು. ಪಾಠ್ಯವಿ?ಯಗಳ ಜೊತೆಗೆ ಮಕ್ಕಳಿಗೆ ಪೌರಾಣಿಕ, ಐತಿಹಾಸಿಕ, ಭೌಗೋಳಿಕಾದಿ ನಾನಾ ಸಂಗತಿಗಳ ಬಗೆಗೆ ತಿಳಿವಳಿಕೆ ನೀಡಲಾಗುತ್ತಿತ್ತು. ಪ್ರತಿದಿನ ಶಾಲೆ ಆರಂಭವಾಗುತ್ತಿದ್ದುದೇ ದೈವಪ್ರಾರ್ಥನೆ ಮತ್ತು ಭಾರತಮಾತಾವಂದನೆಯೊಂದಿಗೆ. ಹೀಗೆ ಅಲ್ಲಿಂದ ಎಷ್ಟು ದಶಕಗಳ ಅನಂತರ ವಿಶಾಲ ಅಡಿಪಾಯದ ಶಿಕ್ಷಣಕ್ರಮವೆಂದು ತಜ್ಞ ಆಯೋಗಗಳು ಸೂಚಿಸಿದ ಹಲವಾರು ಸುಧಾರಣೆಗಳನ್ನು ನಿವೇದಿತಾರವರು ೧೯೦೦ರ? ಹಿಂದೆಯೇ ಅಮಲಿಗೆ ತಂದಿದ್ದರು. ಸಹಜವಾಗಿ ಹಣದ ತೀವ್ರ ಮುಗ್ಗಟ್ಟು ಇರುತ್ತಿದ್ದರೂ ಸ್ವಾಮಿಜೀಯವರ ಪ್ರೋತ್ಸಾಹನ ನಿವೇದಿತಾರವರಿಗೆ ಪ್ರೋದ್ಭಲ ನೀಡುತ್ತಿತ್ತು.
ಶಾಲೆಯನ್ನು ಪ್ರವೇಶಿಸಿದೊಡನೆ ಎದುರಿನ ಗೋಡೆಯ ಮೇಲಿದ್ದ ದೊಡ್ಡ ಗಾತ್ರದ ಭಾರತದೇಶದ ಚಿತ್ರ ಸ್ವಾಗತಿಸುತ್ತಿತ್ತು.
ಭಾರತದ ವಿವಿಧ ಪ್ರಾಂತಗಳು, ತೀರ್ಥಕ್ಷೇತ್ರಗಳು ಮೊದಲಾದವುಗಳ ಪರಿಚಯವನ್ನು ಎಲ್ಲ ವಿದ್ಯಾರ್ಥಿಗಳಿಗೂ ಮಾಡಿಕೊಡಲಾಗುತ್ತಿತ್ತು.
ಶಾಲೆಗಾಗಿ ತಮ್ಮ ಒಂದು ವಿಶಾಲವಾದ ಮನೆಯನ್ನು ದಾನಮಾಡಲು ರವೀಂದ್ರನಾಥ ಠಾಕೂರರು ಮುಂದಾದರು. ಆದರೆ ಬಾಗಬಜಾರಿನಲ್ಲಿದ್ದ ಸ್ಥಳವು ಸ್ವಾಮಿಜೀಯವರಿಂದ ನಿರ್ದೇಶಗೊಂಡಿದ್ದುದು; ಹಾಗಾಗಿ ಸ್ಥಳ ಬದಲಾವಣೆಯ ಯೋಚನೆಯನ್ನು ನಿವೇದಿತಾರವರು ಮಾಡಲಿಲ್ಲ.
ಪುಷ್ಯಮಾಸದಲ್ಲಿ ಬಾಲಿಕೆಯರೂ ವಿಧವೆಯರೂ ಸೇರಿದಂತೆ ಬಡಾವಣೆಯ ಆಸುಪಾಸಿನ ಹತ್ತಾರು ಮಂದಿಯನ್ನು ಸಮಾವೇಶಗೊಳಿಸಿ ಗಂಗಾಜಲಾಭಿ?ಕಪೂರ್ವಕ ಸರಸ್ವತೀ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಗುತಿತ್ತು. ಅದೊಂದು ಇಡೀ ದಿನದ ವೈಭವಪೂರ್ಣ ಕಲಾಪವಾಗಿರುತ್ತಿತ್ತು.
ಬಾಲಿಕಾ ವಿದ್ಯಾಲಯದಲ್ಲಿಯೇ ಉಳಿದು ಪೂರ್ಣಸಮಯ ಶಾಲೆಯ ಕಲಾಪಗಳನ್ನು ನಡೆಸುತ್ತಿದ್ದ ಹಲವರು ಉತ್ತರೋತ್ತರ ರವೀಂದ್ರನಾಥ ಠಾಕೂರರ ಶಾಂತಿನಿಕೇತನದಲ್ಲಿ ಶಿಕ್ಷಕಿಯರಾಗಿ ಸೇರಿದರು.
ಸ್ವಾಭಿಮಾನ-ಜಾಗರಣ
ಹೊರತೋರಿಕೆಗೆ ವಿವೇಕಾನಂದರ ಶಿ? ಮತ್ತು ಬಾಲಿಕಾ ಶಾಲೆಯ ಸಂಚಾಲಕಿ ಆಗಿದ್ದರೂ ಆಂತರ್ಯದಲ್ಲಿ ನಿವೇದಿತಾ ಬೆಂಕಿಯ ಉಂಡೆಯೇ ಆಗಿದ್ದುದನ್ನು ಸವಿವರವಾಗಿ ಗ್ರಹಿಸಿದ್ದವರು ಬಹುಶಃ ನಿಕಟವರ್ತಿಗಳು ಮಾತ್ರ. ಪ್ರಖರ ರಾಷ್ಟ್ರೀಯತೆಯ ಪರವಾದ ಅವರ ಪ್ರತಿಪಾದನೆಯಂತೂ ಬಹಿರಂಗವಾಗಿಯೆ ಮಾತು-ಬರಹಗಳೆರಡರಲ್ಲಿಯೂ ವ್ಯಕ್ತವಾಗಿತ್ತು.
ಭಾರತದ ಸ್ವಾಭಿಮಾನಜಾಗೃತಿಗಾಗಿ ಶ್ರಮಿಸುತ್ತಿದ್ದ ಅನೇಕ ಸಣ್ಣ-ದೊಡ್ಡ ಸಂಘಟನೆಗಳೊಡನೆ ನಿವೇದಿತಾ ನಿಕಟಸಂಪರ್ಕದಲ್ಲಿದ್ದು ಪಥದರ್ಶನ ಮಾಡುತ್ತಿದ್ದುದು ಸಹಜ.
ತೀವ್ರ ಹಣದ ಮುಗ್ಗಟ್ಟು ಇದ್ದರೂ ಶಾಲೆಯು ತನ್ನ ಕಲ್ಪನೆಯಂತೆಯೆ ನಡೆಯಬೇಕೆಂಬ ನಿವೇದಿತಾರವರ ದಾರ್ಢ್ಯ ವಿಚಲಿತಗೊಳ್ಳಲಿಲ್ಲ. ಶಾಲೆಯಲ್ಲಿ ಕ್ರೈಸ್ತಮತಾನುಗುಣ ಶಿಕ್ಷಣವನ್ನು ಅಳವಡಿಸುವುದಾದರೆ ದೊಡ್ಡ ಪ್ರಮಾಣದ ದೇಣಿಗೆ ನೀಡಲು ಅತ್ಯಂತ ನಿಕಟವರ್ತಿ ಹಿತೈಷಿಯೊಬ್ಬರು ಉತ್ಸುಕರಾಗಿದ್ದರು. ಈ ಜಾಡಿನ ಯಾವುದೇ ನೆರವನ್ನು ಸ್ವೀಕರಿಸಲು ನಿವೇದಿತಾರವರ ತೀಕ್ಷ್ಣ ವಿರೋಧವಿದ್ದಿತು.
ಕ್ರೈಸ್ತಮತದ ಮಾತು ಹಾಗಿರಲಿ; ಸೈದ್ಧಾಂತಿಕವಾಗಿ ತಮ್ಮ ಮಾರ್ಗಕ್ಕೆ ಪೂರ್ಣ ವಿರುದ್ಧವೆನ್ನಲಾಗದ ಬ್ರಹ್ಮಸಮಾಜ ಕಾರ್ಯಕರ್ತರ ಸಂಗಡಿಕೆಯಿಂದಲೂ ನಿವೇದಿತಾ ವಿಮುಖರಾಗಿಯೆ ಉಳಿದರು. ಯಾವ ಕಾಳೀಮಾತೆಯ ಉಪಾಸನೆಯನ್ನು ಸ್ವಾಮಿಜೀಯವರೂ ಗುರುಮಹಾರಾಜರೂ ಆದರಿಸಿದ್ದರೋ ಅದರ ಹೊರತಾಗಿ ಬೇರಾವ ಸಾಧನಪದ್ಧತಿಗೂ ನಿವೇದಿತಾರವರ ಮನಸ್ಸಿನಲ್ಲಿ ಆಸ್ಪದವೇ ಇರಲಿಲ್ಲ. ಅದೇ ದಿನಗಳಲ್ಲಿ ಸ್ವಾಮಿಜೀಆಯೋಜಿತ ಸಭೆಯನ್ನು ಉದ್ದೇಶಿಸಿ ನಿವೇದಿತಾ ಮಾಡಿದ ಉಪನ್ಯಾಸದಲ್ಲಿ ಕಾಳೀಪೂಜನವು ಮೂಲಭೂತ ನಿಸರ್ಗಶಕ್ತಿಯೊಡನೆಯ ಐಕ್ಯವನ್ನು ಸಂಕೇತಿಸುತ್ತದೆ ಎಂದು ಮಾಡಿದ ಮಂಡನೆ ಎ? ಜನಪ್ರಿಯವಾಯಿತೆಂದರೆ ಅದಾದ ತರುವಾಯ ಬೇರೆಡೆಗಳಲ್ಲಿಯೂ ಪ್ರವಚನಗಳನ್ನು ನೀಡುವಂತೆ ನಿವೇದಿತಾರವರಿಗೆ ಆಮಂತ್ರಣಗಳು ಬರತೊಡಗಿದವು.
೧೯೦೦ರ ದಶಕದ ಆರಂಭಕಾಲದಲ್ಲಿ ರಾಷ್ಟ್ರೀಯತೆಯ ಜಾಗರಣದ ಉದ್ದೇಶದಿಂದ ಪ್ರಕಟವಾಗತೊಡಗಿದ ಬಿಪಿನಚಂದ್ರಪಾಲ್ರವರ ’ನ್ಯೂ ಇಂಡಿಯಾ’, ಬಾರೀಂದ್ರಕುಮಾರ್ ತಂಡದ ’ಯುಗಾಂತರ’, ಶ್ರೀ ಅರವಿಂದರ ’ವಂದೇ ಮಾತರಂ’ ತದನಂತರ ’ಕರ್ಮಯೋಗಿನ್’ ಮೊದಲಾದ ಪತ್ರಿಕೆಗಳಿಗೆ ಆರಂಭದಿಂದಲೂ ನೇರವಾಗಿಯೋ ಪರೋಕ್ಷವಾಗಿಯೋ ಬೆನ್ನೆಲುಬಾಗಿ ನಿಂತವರು ನಿವೇದಿತಾ. ವಾಸ್ತವವಾಗಿ ಈ ಪತ್ರಿಕೆಗಳು ಕೇವಲ ಪ್ರಸಾರಸಾಧನಗಳಾಗಿರದೆ ಜನ-ಸಂಘಟನಕೇಂದ್ರಗಳೂ ಆಗಿದ್ದವು; ರಾಷ್ಟ್ರಭಕ್ತಿಪ್ರವರ್ತಕ ಪ್ರಯಾಸಗಳೇ ಆಗಿದ್ದವು.
ನಿವೇದಿತಾರವರ ಮನಸ್ಸು ಎಷ್ಟು ಸಂವೇದನಶೀಲವಾಗಿತ್ತೆಂದರೆ ಯಾವುದೇ ಸನ್ನಿವೇಶವನ್ನೂ ಅವರು ಜನಪ್ರಬೋಧನಕ್ಕಾಗಿ ಬಳಸುವ ರೂಢಿಯನ್ನು ಬೆಳೆಸಿಕೊಂಡಿದ್ದರು.
ಒಮ್ಮೆ ಭಗವದ್ಗೀತೆ ಕುರಿತ ಸ್ವಾಮಿಗಳೊಬ್ಬರ ಉಪನ್ಯಾಸ ಸಂದರ್ಭದಲ್ಲಿ ಕೆಲವು ಮಾತುಗಳನ್ನಾಡಲು ಬೇಡಿಕೆ ಬಂದಾಗ ನಿವೇದಿತಾ ಹೇಳಿದರು: “ಗೀತೆಯು ಅಪಾರ ಶಕ್ತಿಯ ಉಗಮಸ್ಥಾನವಾಗಿದೆ. ಅದರ ನಿಜವಾದ ಸತ್ತ್ವವನ್ನು ಗ್ರಹಿಸಿದವರಾರೂ ಒಂದು ಕೈಯಲ್ಲಿ ಧರ್ಮಗ್ರಂಥವನ್ನೂ ಇನ್ನೊಂದು ಕೈಯಲ್ಲಿ ಖಡ್ಗವನ್ನೂ ಹಿಡಿದು ರಾಷ್ಟ್ರೋನ್ನತಿಗಾಗಿ ಧಾವಿಸದಿರುವುದಿಲ್ಲ.”
ತರುಣ ತಂಡಗಳಿಗೆ ಅವರು ಪದೇ ಪದೇ ನೀಡುತ್ತಿದ್ದ ಆವಾಹನೆ – “ಭಾರತೀಯ ಸಂಸ್ಕೃತಿಯ ಸಮುನ್ನತಿಯ ಚಿತ್ರವು ಸದಾ ನಿಮ್ಮ ಅಂತಶ್ಚಕ್ಷುವಿನ ಎದುರಿಗೆ ವಿರಾಜಮಾನವಾಗಿರಬೇಕು. ಅದು ನಿಮಗೆ ಎಲ್ಲಕ್ಕಿಂತ ಮಿಗಿಲಾಗಿ ಪ್ರೇಮದ ವಸ್ತುವಾಗಿರಬೇಕು. ಆ ಪ್ರೇಮದಿಂದ ಅದ್ಭುತ ಶಕ್ತಿಯು ಉದ್ಬುದ್ಧವಾಗುತ್ತದೆ, ಎಂತಹ ಸವಾಲನ್ನಾದರೂ ದಿಟ್ಟವಾಗಿ ಎದುರಿಸಬಲ್ಲ ಸಾಮರ್ಥ್ಯವನ್ನು ನಿಮಗೆ ನೀಡುತ್ತದೆ.”
‘ನೀವು ನೀವಾಗಿರಿ’
ಹುಟ್ಟಿನಿಂದ ವಿದೇಶೀಯಳಾಗಿದ್ದ ಈ ಅಗ್ನಿಕನ್ಯೆ ಭಾರತದ ತರುಣರಿಗೆ ನಿರಂತರ ನೀಡುತ್ತಿದ್ದ ಸಂದೇಶ: “ನಿಮ್ಮ ಚಿಂತನೆ-ಆಚರಣೆಗಳೆಲ್ಲದರಲ್ಲಿಯೂ ನೀವು ಹಿಂದುಗಳಾಗಿರಿ. ಬೆಡಗಿನ ಪರಕೀಯ ಪ್ರಭಾವಗಳಿಗೆ ಬಲೆಬೀಳದಿರಿ” ಎಂದು.
ಅನುಶೀಲನ ಸಮಿತಿ ಮತ್ತು ಅಂತಹ ಇತರ ಸಂಘಟನೆಗಳಿಗೆ ಬಂದು ಸೇರುತ್ತಿದ್ದವರಲ್ಲಿ ಸಹಜವಾಗಿ ಬೌದ್ಧಿಕತೆಗಿಂತ ಭಾವತೀವ್ರತೆ ಅಧಿಕವಾಗಿರುತ್ತಿತ್ತು. ಇದನ್ನು ಗಮನಿಸಿದ ನಿವೇದಿತಾ ಆ ಉತ್ಸಾಹಿ ತರುಣ ತಂಡಗಳವರಿಗೆ ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮೊದಲಾದ ಮುಖ್ಯ ವಿ?ಯಗಳ ಬಗೆಗೆ ಬೋಧನೆ ನೀಡಿ ಅವರ ಮಾನಸಿಕ ಕ್ಷಮತೆಯನ್ನು ಹೆಚ್ಚಿಸುತ್ತಿದ್ದರು.
ಮದರಾಸಿನಲ್ಲಿ ಕಿಕ್ಕಿರಿದು ನೆರೆದಿದ್ದ ಸಭಿಕರನ್ನು ಉದ್ದೇಶಿಸಿ ನಿವೇದಿತಾ ಹೇಳಿದರು: “ಅಧ್ಯಾತ್ಮದ ವಿ?ಯದಲ್ಲಿ ಪಾಶ್ಚಾತ್ಯ ಜಗತ್ತಿಗೆ ನೀವು ಕೊಡಬಹುದಾದುದು ಬಹಳವಿದೆ, ಅವರಿಂದ ಕಲಿಯಬೇಕಾದುದು ಏನೂ ಇಲ್ಲ. ಅದರಂತೆ ಸಮಾಜಾಭ್ಯುದಯಕ್ಕೆ ಸಂಬಂಧಿಸಿದಂತೆಯೂ ಅವಶ್ಯವಿರುವ ಪರಿವರ್ತನೆಗಳನ್ನು ನೀವೇ ಮಾಡಿಕೊಳ್ಳಬಲ್ಲಿರಿ; ಅದರಲ್ಲಿ ಮಧ್ಯಪ್ರವೇಶ ಮಾಡುವ ಅಧಿಕಾರ ಹೊರಗಿನವರಿಗೆ ಇರದು. ಬದಲಾವಣೆಯೆಂಬುದು ಜಗಜ್ಜೀವನದ ಭಾಗವೇ ಆಗಿದೆ. ಆದರೆ ಬದಲಾವಣೆಗಳು ಸ್ವನಿರ್ಣಯದಂತೆ ಆಗಬೇಕು. ಮೂರುಸಾವಿರ ವರ್ಷಗಳ? ಹಳೆಯ ನಾಗರಿಕತೆಯ ವಾರಸಿಕೆ ಇರುವ ಪ್ರಾಚ್ಯ ದೇಶೀಯರಿಗೆ ನಿನ್ನೆಮೊನ್ನೆಯ ಪಾಶ್ಚಾತ್ಯ ದೇಶಗಳು ಏನನ್ನು ಕಲಿಸಿಯಾವು?”
ಆ ಭಾಷಣದ ವರದಿಯನ್ನು ಪತ್ರಿಕೆಗಳಲ್ಲಿ ಓದಿದ್ದ ಸ್ವಾಮಿಜೀ ಅತ್ಯಂತ ಹರ್ಷಿತರಾದರು.
ಆ ದಿನಗಳಲ್ಲಿ ಮುಂಬಯಿ ಮೊದಲಾದೆಡೆ ಆಯೋಜಿತವಾಗಿದ್ದ ನಿವೇದಿತಾರವರ ಭಾಷಣಗಳಿಗೆ ಸಹಸ್ರ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುತ್ತಿದ್ದರು. ಎಲ್ಲೆಡೆಗಳಿಂದ ಉಪನ್ಯಾಸಗಳಿಗಾಗಿ ಬೇಡಿಕೆಗಳು ಬರುತ್ತಿದ್ದವು.
ವ್ಯಾಖ್ಯಾನಪ್ರವಾಸಗಳು
ಶಾಲೆಯ ನಿರ್ವಹಣೆಗಾಗಿ ಧನಸಂಗ್ರಹ ಮಾಡುವುದು, ಹಿಂದೂಧರ್ಮ ಪ್ರಸಾರ – ಎರಡೂ ಉದ್ದೇಶಗಳಿಂದ ನಿವೇದಿತಾ 1899-1901ರ ವರ್ಷಗಳಲ್ಲಿ ಇಂಗ್ಲೆಂಡ್ ಅಮೆರಿಕಗಳ ಪ್ರಮುಖ ಪಟ್ಟಣಗಳಲ್ಲಿ ವ್ಯಾಖ್ಯಾನಪ್ರವಾಸಗಳನ್ನು ಕೈಗೊಂಡರು. ಆರಂಭದಲ್ಲಿ ಅನುತ್ಸಾಹಕರವಾಗಿದ್ದರೂ ಕ್ರಮೇಣ ನಿವೇದಿತಾರವರ ಮಾತಿನ ಪ್ರಖರತೆ ಹೆಚ್ಚುಹೆಚ್ಚು ಜನರನ್ನು ಆಕರ್ಷಿಸತೊಡಗಿತು. ಆಗಿಂದಾಗ ಅವರ ಲೇಖನಗಳೂ ಪತ್ರಿಕೆಗಳಲ್ಲಿ ಪ್ರಕಾಶಗೊಂಡು ಅವಕ್ಕಾಗಿ ದೊರೆಯತೊಡಗಿದ ಸಂಭಾವನೆಗಳೂ ಶಾಲಾನಿಧಿಗೆ ಪೂರಕವಾದವು.
ನಿವೇದಿತಾರವರ ವ್ಯಾಖ್ಯಾನಪ್ರವಾಸಗಳು ಗಳಿಸಿಕೊಂಡಿದ್ದ ಜನಪ್ರಿಯತೆಯಿಂದ ಅಸಹನೆಗೊಂಡು ಕ್ರೈಸ್ತ ಮಿಶನರಿಗಳು ಬಗೆಬಗೆಯ ಕಿರುಕುಳಗಳಲ್ಲಿಯೂ ಮಿಥ್ಯಾಪ್ರಚಾರದಲ್ಲಿಯೂ ತೊಡಗಿದರು. ನಿವೇದಿತಾರವರಾದರೋ ಅದರಿಂದ ವಿಚಲಿತಗೊಳ್ಳದೆ ಅದನ್ನು ಕುರಿತೇ ತೀಕ್ಷ್ಣವಾಗಿ ಭಾಷಣಗಳನ್ನು ಮಾಡಿ ಕ್ರೈಸ್ತ ಮತಪ್ರಚಾರಕರ ಅಸಹಿಸ್ಣುತೆಯನ್ನು ಬಯಲು ಮಾಡಿದರು, ಲೇಖನಗಳನ್ನು ಬರೆದರು.
ಭಾರತದಿಂದ ನಿಷ್ಕೃಮಿಸಿ ಒಂದು ವರ್ಷವೇ ಕಳೆದಿದ್ದುದರಿಂದ ನಿವೇದಿತಾ ಭಾರತಕ್ಕೆ ಮರಳಬೇಕೆಂದು ಒಡನಾಡಿಗಳಿಂದ ಒತ್ತಾಯ ಬೆಳೆಯುತ್ತಿತ್ತು. ವಾಸ್ತವವಾಗಿ ಆ ಕಾಲಾವಧಿ ನಿವೇದಿತಾರವರ ಪಾಲಿಗೆ ಅಂತರ್ವೀಕ್ಷಣೆಯ ಮತ್ತು ಲಕ್ಷ್ಯನಿರ್ಧಾರದ ಸಮಯವಾಗಿತ್ತು. ಅಧ್ಯಾತ್ಮಸಾಧನೆಗೆ ಪ್ರಾಧಾನ್ಯ ಕೊಡಬೇಕೆ, ಅಥವಾ ಹೆಚ್ಚು ಜ್ವಲಂತಗೊಳ್ಳುತ್ತಿದ್ದ ಸ್ವಾತಂತ್ರ್ಯಸಂಘಟನಾದಿ ಚಟುವಟಿಕೆಗಳಲ್ಲಿ ದುಮುಕಬೇಕೆ – ಎಂಬ ರೀತಿಯ ಗೊಂದಲಗಳ ತಾಕಲಾಟ ನಿವೇದಿತಾರವರ ಮನಸ್ಸಿನೊಳಗಡೆ ನಡೆದಿತ್ತು. ಈ ಡೋಲಾಯಮಾನ ಸ್ಥಿತಿ ೧೯೦೧ರ ಅಂತ್ಯದವರೆಗೆ ಮುಂದುವರಿದಿತ್ತು. ಏತನ್ಮಧ್ಯೆ ಸ್ವಾಮಿಜೀಯವರ ಅನಾರೋಗ್ಯ ಉಲ್ಬಣಿಸುತ್ತಿದ್ದುದರ ವಾರ್ತೆ ತಲಪಿತು. ನಿವೇದಿತಾ ಕೂಡಲೇ ಭಾರತಕ್ಕೆ ತೆರಳಲು ಸಜ್ಜಾದರು.
ಸ್ವಾಮಿಜೀ ನಿರ್ಯಾಣ
ದಿನದಿಂದ ದಿನಕ್ಕೆ ಹದಗೆಡುತ್ತಿದ್ದ ಸ್ವಾಮಿಜೀ ದೇಹಸ್ಥಿತಿಯಿಂದ ಆತಂಕಗೊಂಡ ನಿವೇದಿತಾ ಸಂನ್ಯಾಸಸ್ವೀಕಾರವಾದ ಮೇಲೆ ಮ್ಯಾಕ್ಲಿಯಾಡ್ರಿಗೆ ಬರೆದ ಒಂದು ಪತ್ರ ಮಾರ್ಮಿಕವಾಗಿತ್ತು:
“ತಮ್ಮದೆಲ್ಲವನ್ನೂ ನರೇಂದ್ರನಿಗೆ ಧಾರೆಯೆರೆದ ಮೇಲೆ ಗುರುಮಹಾರಾಜರು ಜೀವಂತ ಇದ್ದುದು ಒಂದೂವರೆ ವರ್ಷ ಮಾತ್ರ. ಇದೀಗ ಸ್ವಾಮಿಜೀ ನನಗೆ ದೀಕ್ಷೆ ನೀಡಿರುವ ಸಂದರ್ಭದಲ್ಲಿಯೂ ಹಾಗೆಯೇ ಆದೀತೆ ಎಂದು ನನ್ನ ಮನಸ್ಸು ವಿಹ್ವಲಗೊಂಡಿದೆ.”
ದುರ್ದೈವವೆಂದರೆ ನಿವೇದಿತಾ ಶಂಕಿಸಿದ್ದಂತೆಯೆ ನಡೆದುಹೋಯಿತು. ನಿವೇದಿತಾರವರಿಗೆ ಸಂನ್ಯಾಸದೀಕ್ಷೆ ನೀಡಿದ ಮೇಲೆ ಸ್ವಾಮಿಜೀ ದೇಹಧಾರಿಗಳಾಗಿದ್ದುದು ಎರಡುವ? ಕಾಲ ಮಾತ್ರ. ಅಲ್ಲಿಂದಾಚೆಯ ದಿನಗಳಲ್ಲಿ ಸ್ವಾಮಿಜೀ ತೀವ್ರ ಅಸ್ವಸ್ಥತೆಯೊಡನೆ ನಿರಂತರ ಸಮರವನ್ನೆ ನಡೆಸಬೇಕಾಯಿತು.
ಕೊನೆಯ ಎರಡು ತಿಂಗಳಲ್ಲಿ ಸ್ವಾಮಿಜೀ ಆರೋಗ್ಯ ಶಿಥಿಲತೆಯ ಕಾರಣದಿಂದಾಗಿ ಎಲ್ಲ ಬಾಹ್ಯ ಚಟುವಟಿಕೆಗಳಿಂದ ವಿಮುಖರಾದರು. ತಮ್ಮ ಮೇಲೆ ಸಹಚರರು ಬೆಳೆಸಿಕೊಂಡಿದ್ದ ಅವಲಂಬನೆ ಮುಂದುವರಿಯದಿರಲೆಂದೂ ಸ್ವಾಮಿಜೀ ಯೋಚಿಸಿದ್ದಿರಬೇಕು. ಹೆಚ್ಚು ಹೆಚ್ಚು ಸಮಯ ಧ್ಯಾನದಲ್ಲಿ ಲೀನರಾಗಿ ಇರುತ್ತಿದ್ದರು. ಕೊನೆಯ ದಿನಗಳಲ್ಲಿ ಒಂದೆರಡು ಬಾರಿ ಪಂಚಾಂಗವನ್ನು ತರಿಸಿಕೊಂಡು ಪರಿಶೀಲಿಸಿದರು. ಹೀಗೆ ದೇಹತ್ಯಾಗದ ಮುಹೂರ್ತವನ್ನೂ ಅವರು ನಿರ್ಣಯಿಸಿಕೊಂಡಿದ್ದಂತೆ ಅನಿಸುತ್ತದೆ; ತಮ್ಮ ಪಾರ್ಥಿವ ಅವಶೇಷದ ದಹನಸಂಸ್ಕಾರ ಎಲ್ಲಿ ನಡೆಯಬೇಕೆಂಬ ಸೂಚನೆಯನ್ನು ನೀಡಿದ್ದರು. ಬಾಗಬಜಾರಿನ ವಸತಿಯಲ್ಲಿದ್ದ ನಿವೇದಿತಾ ದೈವಪ್ರೇರಿತವೆಂಬಂತೆ ಸ್ವಾಮಿಜೀಯವರ ಮಹಾಸಮಾಧಿಗೆ ಮೂರುದಿವಸ ಹಿಂದೆ ಬೇಲೂರಿಗೆ ತೆರಳಿ ಇಡೀ ಒಪ್ಪತ್ತು ಸ್ವಾಮಿಜೀಯವರೊಡನೆ ಆಪ್ತವಾಗಿ ಕಳೆದದ್ದು ಈರ್ವರಿಗೂ ಉಲ್ಲಾಸದಾಯಕವಾಯಿತು.
ಮಹಾಸಮಾಧಿಯ (೧೯೦೨ ಜುಲೈ ೪) ದಿನದಂದೂ ಸ್ವಾಮಿಜೀ ದೈನಂದಿನಿಯನ್ನು ಉತ್ಸಾಹಪೂರ್ಣವಾಗಿ ನಡೆಸಿದುದು ಅವರ ಅಂತರಂಗವು ತಲಪಿದ್ದ ಪ್ರಶಾಂತ ಸ್ಥಿತಿಯನ್ನು ಬಿಂಬಿಸುತ್ತದೆ: ಸೂರ್ಯೋದಯದ ವೇಳೆಗೆ ಉತ್ಥಾನ, ಎರಡುಮೂರು ತಾಸಿನ ಧ್ಯಾನ, ಹಾಡಿನ ಗುಣುಗುಣಿಸುವಿಕೆಯೊಡನೆ ಶತಪಥ, ತಮ್ಮ ಅಭ್ಯಾಸಕ್ಕೆ ಭಿನ್ನವಾಗಿ ಎಲ್ಲರೊಡನೆ ಭೋಜನ, ಅಪರಾಹ್ನದಲ್ಲಿ ಎರಡೂವರೆ ಗಂಟೆಗಳ? ಕಾಲ ಕಿರಿಯರಿಗೆ ’ಲಘುಕೌಮುದೀ’ ವ್ಯಾಕರಣ ಬೋಧನೆ, ಸಂಜೆ ಸ್ವಲ್ಪ ವಾಯುವಿಹಾರ, ಅನಂತರ ಒಂದು ತಾಸು ರುದ್ರಾಕ್ಷಮಾಲೆಯೊಡನೆ ಜಪಾನುಸಂಧಾನ. ರಾತ್ರಿ ೯ರ ವೇಳೆಗೆ ದೇಹವು ಉಪಶಾಂತವಾಯಿತು. ಮುಖಮಂಡಲದಲ್ಲಿ ಅದೊಂದು ಅಲೌಕಿಕ ಭಾವ ನೆಲೆಸಿತ್ತು.
ಅಂದು ಮುಂಜಾನೆಯಿಂದ ಹಲವುಬಾರಿ ಸ್ವಾಮಿಜೀ ಸ್ವಗತವಾಗಿ ಗುಣುಗಿಕೊಳ್ಳುತ್ತಿದ್ದ ಹಾಡು – “ಮನ ಚಲ ನಿಜನಿಕೇತನೇ” (ಮನಸ್ಸೇ! ಈಗ ನೀನು ನಿನ್ನ ಮನೆಗೆ ಹೋಗು).