
ನಿವೇದಿತಾರವರ ದಿಟ್ಟತನವನ್ನೂ ಭಾರತಪ್ರೇಮವನ್ನೂ ಜಾಹೀರುಮಾಡಿದ ಒಂದು ಪ್ರಸಂಗ ಅವರು ವೈಸರಾಯ್ ಕರ್ಜನನ ಮುಖಭಂಗ ಮಾಡಿದುದು. ಅದು ನಡೆದದ್ದು ಹೀಗೆ.
೧೯೦೫ರ ಫೆಬ್ರುವರಿ ೧೧ರಂದು ಕೊಲ್ಕತಾ ಮಹಾವಿದ್ಯಾಲಯದ ಪದವಿದಾನ ಸಮಾರಂಭ ನಡೆಯಿತು. ಆಮಂತ್ರಿತರಲ್ಲಿ ಉಚ್ಚನ್ಯಾಯಾಲಯದ ನ್ಯಾಯಾಧೀಶ ಗುರುದಾಸ ಬ್ಯಾನರ್ಜಿ, ನಿವೇದಿತಾ ಮೊದಲಾದ ಅನೇಕ ಗಣ್ಯರು ಇದ್ದರು. ಸ್ವಭಾವತಃ ಗರ್ವವೂ ಅಹಮಿಕೆಯೂ ತುಂಬಿದ ಕರ್ಜನನು ತನ್ನ ಭಾಷಣದಲ್ಲಿ ತನ್ನ ಎಂದಿನ ಸ್ವಚ್ಛಂದ ಧೋರಣೆಯಲ್ಲಿ ಎದುರಿಗೆ ಕುಳಿತವರೆಲ್ಲ ಅಜ್ಞರೆಂಬಂತೆ ವ್ಯಾಖ್ಯೆಗಳನ್ನು ಸುರಿಸತೊಡಗಿದ. ಅವನ ಮುಖ್ಯ ಮಂಡನೆಯೆಂದರೆ ಪಾಶ್ಚಾತ್ಯರು ಸ್ವಭಾವತಃ ಸತ್ಯಪ್ರಿಯರು, ಭಾರತೀಯರು ಸ್ವಭಾವತಃ ಕುಟಿಲರು -ಎಂಬುದಾಗಿತ್ತು! ಅವನ ಒಂದೊಂದು ಮಾತೂ ಅಲ್ಲಿ ಸೇರಿದ್ದ ಗಣ್ಯರಿಗೆ ನುಂಗಲಾಗದ ತುತ್ತು ಆಗಿತ್ತು. ಭಾರತೀಯರನ್ನು ಪ್ರಾದೇಶಿಕತೆ ಮೊದಲಾದ ಜಡತೆಗಳಿಂದ ಮುಕ್ತಗೊಳಿಸಿ ಅವರನ್ನು ’ಸಾಮ್ರಾಜ್ಯ’ದ ಶಿ? ಪ್ರಜೆಗಳನ್ನಾಗಿಸುವ ಹೊಣೆಗಾರಿಕೆ ಸತ್ತಾರೂಢ ಬ್ರಿಟಿ? ಅಧಿಕಾರಿಗಳ ಹೆಗಲಮೇಲಿದೆ – ಎಂದು ಮುಗಿಸಿದ, ಕರ್ಜನ್.
‘ಶಠಸ್ಯ ಶಾಠ್ಯಂ’
ಈ ಅಪಲಾಪ ಕೇಳಿ ನಿವೇದಿತಾರವರಿಗೆ ಹೇಗೆ ಅನಿಸಿತೆಂದು ಊಹಿಸಿಕೊಳ್ಳಬಹುದು. ಕರ್ಜನನ ಭಾಷಣದಲ್ಲಿ ಭಾರತೀಯರ ಬಗೆಗೆ ತುಂಬಿದ್ದ ಅವಹೇಳನದ ಧ್ವನಿ ನಿವೇದಿತಾರವರಿಗೆ ಅಸಹನೀಯವಾಯಿತು. ಅದಕ್ಕೆ ಯುಕ್ತವಾದ ಪ್ರತಿಕ್ರಿಯೆ ಬರಲೇಬೇಕೆಂದು ತಹತಹಿಸಿದರು; ಮತ್ತು ಆ ಪ್ರತಿಕ್ರಿಯೆ ಸಮಾಜೋನ್ನತರಿಂದ ಬರಬೇಕೆಂದೂ ಅಪೇಕ್ಷಿಸಿದರು.
ಸಮಾರಂಭ ಮುಗಿದೊಡನೆ ತಮ್ಮೊಡನಿದ್ದ ನ್ಯಾಯಾಧೀಶ ಗುರುದಾಸ ಬ್ಯಾನರ್ಜಿ ಅವರನ್ನು ಕರೆದುಕೊಂಡು ಇಂಪೀರಿಯಲ್ ಲೈಬ್ರರಿಗೆ ಹೋದರು. ಅಲ್ಲಿಯ ಸಂಗ್ರಹದಲ್ಲಿದ್ದ ಕರ್ಜನನದ್ದೇ ಕೆಲವು ಸಮಯ ಹಿಂದಿನ ಬರಹವನ್ನು ನಿವೇದಿತಾ ಹೆಕ್ಕಿ ತೆಗೆದು ಬ್ಯಾನರ್ಜಿಯವರಿಗೆ ತೋರಿಸಿದರು. ಬ್ಯಾನರ್ಜಿ ಅದನ್ನು ನೋಡಿ ಅಚ್ಚರಿಗೊಂಡರು. ಆ ಬರಹದಲ್ಲಿದ್ದ ಒಂದು ಮಾಹಿತಿ – ೩೨ರ ವಯಸ್ಸಿನಲ್ಲಿದ್ದ ಕರ್ಜನನು ಕೊರಿಯಾ ಸಂಸ್ಥಾನದ ಮಹಾರಾಜರ ಭೇಟಿ ಪಡೆದುಕೊಳ್ಳಲು ತಾನು ೪೦ರ ವಯಸ್ಸಿನವನೆಂದೂ ಇತರ ಅಪದ್ಧಗಳನ್ನೂ ಮಹಾರಾಜರಿಗೆ ಹೇಳಿ ಮಹಾರಾಜರ ಓಲೈಕೆಯನ್ನು ಪಡೆದುಕೊಂಡಿದ್ದ. ಈ ಅಂಶಗಳಿಗೆ ಗಮನ ಸೆಳೆದು ಬ್ಯಾನರ್ಜಿಯವರನ್ನು ನಿವೇದಿತಾ ಕೇಳಿದರು: “ಈಗ ಹೇಳಿ. ಸುಳ್ಳುಗಾರರೆಂದರೆ ಯಾರು? ಕರ್ಜನನೇ ಅಥವಾ ಭಾರತೀಯರೆ?”
ಗುರುದಾಸರು ವಿಚಲಿತರಾದರು.
“ಇದಕ್ಕೆ ನೀವೇ ಸರಿಯಾದ ಉತ್ತರ ಬರೆದು ಪ್ರಕಟಿಸಬೇಕು” ಎಂದು ಅವರನ್ನು ನಿವೇದಿತಾ ಆಗ್ರಹಿಸಿದರು.
ಗುರುದಾಸರಾದರೋ ಸರ್ಕಾರೀ ನೌಕರರು. ಹೀಗಿರುವಾಗ ಅವರು ವೈಸರಾಯನ ಭಾ?ಣಕ್ಕೆ ಬಹಿರಂಗ ಪ್ರತಿಕ್ರಿಯೆ ತೋರುವುದು ಸ್ಪಷ್ಟವಾಗಿಯೆ ನಿಯಮೋಲ್ಲಂಘನೆಯಾಗುತ್ತಿತ್ತು. ಆದರೆ ನಿವೇದಿತಾರವರು ತೋರಿದ ಆಗ್ರಹ ಬ್ಯಾನರ್ಜಿಯವರಲ್ಲಿ ಎಷ್ಟು ಉದ್ವೇಜನೆಯನ್ನು ನಿರ್ಮಿಸಿತೆಂದರೆ ಅವರು ಪರಿಣಾಮವನ್ನು ಲೆಕ್ಕಿಸದೆ ಕರ್ಜನನ ಭಾಷಣಕ್ಕೆ ಉತ್ತರ ಬರೆಯಲು ಒಪ್ಪಿದರು.
ಇನ್ನೊಂದು ಸಣ್ಣ ವಿವರ: ಕರ್ಜನನು ತನ್ನ ಕುಟಿಲ ವರ್ತನೆಯಿಂದ ತಾನೇ ಇರುಸುಮುರುಸುಗೊಂಡು ಪುಸ್ತಕದ ಎರಡನೇ ಆವೃತ್ತಿಯಲ್ಲಿ ಆ ಭಾಗಗಳನ್ನು ತೆಗೆದುಹಾಕಿದ್ದ!
ಬ್ಯಾನರ್ಜಿಯವರು ಬರೆದಿದ್ದ ಲೇಖನದ ಜೊತೆಗೆ ನಿವೇದಿತಾರವರು ತಾವೇ ಇನ್ನೂ ಪ್ರಖರವಾದ ಇನ್ನೊಂದು ಲೇಖನವನ್ನೂ ಬರೆದು ಎರಡನ್ನೂ ಒಯ್ದು ’ಅಮೃತ ಬಾಜಾರ್ ಪತ್ರಿಕೆ’ಯ ಸಂಪಾದಕ ಮತಿಲಾಲ್ ಘೋಷರವರಿಗೆ ತಲಪಿಸಿದರು. ಘೋಷ್ ರವರಿಗಾದರೂ ವಿಷಯದ ಪೂರ್ಣ ಹಿನ್ನೆಲೆ ಸ್ಪಷ್ಟವಾಗಿರದಿದ್ದರೂ ನಿವೇದಿತಾರವರಲ್ಲಿ ಅವರಿಗೆ ಅಚಲ ವಿಶ್ವಾಸವಿದ್ದಿತು.
೧೯೦೫ರ ಫೆಬ್ರುವರಿ ೧೩ರ ಸಂಚಿಕೆಯಲ್ಲಿ ಪ್ರಕಟಗೊಂಡ ಈ ಲೇಖನಗಳು ಎಂತಹ ಸುಂಟರಗಾಳಿಯನ್ನು ಎಬ್ಬಿಸಿದವೆಂದು ಊಹಿಸಬಹುದು. ಬ್ಯಾನರ್ಜಿಯವರ ಪದವಿಯ ಕಾರಣದಿಂದಾಗಿ ಅವರ ಹೆಸರು ಪ್ರಕಟಗೊಂಡಿರಲಿಲ್ಲವಾದುದರಿಂದ ಎಲ್ಲರೂ ಅದು ಮತಿಲಾಲ್ ಘೋಷ್ ರವರ ಸಂಪಾದಕೀಯ ಲೇಖನವೆಂದೇ ಭಾವಿಸಿದರು. ಹೀಗೆ ವೈಸರಾಯನ ಮುಖಭಂಗ ಮಾಡಿದುದಕ್ಕೆ ಘೋಷ್ ವರೂ ಒಂದಷ್ಟುಮಟ್ಟಿಗೆ ಕೀರ್ತಿಭಾಜನರಾದರು!
ಅದರ ಹಿಂದುಗೂಡಿ ಲೇಖನಗಳು ಅನ್ಯ ಪ್ರಮುಖ ಪತ್ರಿಕೆಗಳಲ್ಲೂ ಪ್ರಕಟಗೊಂಡವು.
ಸರ್ವಾಧಿಕಾರಿ ಎಂದು ಹೆಸರಾಗಿದ್ದ ಕರ್ಜನನಿಗೇ ಸ್ಥಳೀಯರು ಸೆಡ್ಡುಹೊಡೆದ ಈ ಪ್ರಸಂಗಕ್ಕೆ ಎಷ್ಟು ವ್ಯಾಪಕ ಪ್ರಸಾರ ದೊರೆಯಿತೆಂದರೆ ದೂರದ ’ಲಂಡನ್ ಟೈಮ್ಸ್’ ಪತ್ರಿಕೆಯಲ್ಲಿ ಕೂಡ ಅದು ಉಲ್ಲೇಖಗೊಂಡಿತು.
ಬ್ರಿಟಿಷರ ಒಡೆತನದ ಪ್ರತಿಷ್ಠಿತ ’ಸ್ಟೇಟ್ಸ್ಮನ್’ ಪತ್ರಿಕೆಯಲ್ಲಿಯೂ ಈ ಲೇಖನಗಳು ಪ್ರಕಟಗೊಂಡವು. ಆ ಪತ್ರಿಕೆಯ ಸಂಪಾದಕ ರ್ಯಾಡ್ಕ್ಲಿಫ್ ಹಿಂದಿನಿಂದ ನಿವೇದಿತಾರವರ ಒಡನಾಟದಲ್ಲಿದ್ದು ಅವರ ಮೊನಚುಬರಹಗಳ್ನನು ತಪ್ಪದೆ ಪ್ರಕಟಿಸುತ್ತಿದ್ದರು. ಈ ಹಿನ್ನೆಲೆಯಿಂದಾಗಿ ಕೆಲಕಾಲಾನಂತರ ಅವರು ಸಂಪಾದಕ ಸ್ಥಾನಕ್ಕೆ ರಾಜೀನಾಮೆ ನೀಡಿ ಇಂಗ್ಲೆಂಡಿಗೆ ವಾಪಸಾಗಬೇಕಾಯಿತು.
ದಮನಶೀಲ ಸಾಮ್ರಾಜ್ಯಶಾಹಿಗೆ ಭಾರತೀಯರು ಮುಖಾ ಮುಖಿಯಾಗಿ ಸೆಟೆದುನಿಂತ ಆ ಪ್ರಸಂಗವು ಸ್ವಾತಂತ್ರ್ಯಸಂಘರ್ಷದ ಒಂದು ಸುವರ್ಣಕ್ಷಣ. ಅದರ ಹಿಂದೆ ಕೆಲಸಮಾಡಿದ್ದುದು ನಿವೇದಿತಾರವರ ಪ್ರಚಂಡ ಭಾರತಪ್ರೇಮ ಮತ್ತು ನಿರ್ಭೀತಿ.
ನಿವೇದಿತಾ ಕರ್ಜನನ ನಿಜರೂಪವನ್ನು ಬಯಲು ಮಾಡುವಷ್ಟಕ್ಕೆ ತೃಪ್ತರಾಗಲಿಲ್ಲ. ಅವನ ಅಪಲಾಪಗಳನ್ನು ಮೌನವಾಗಿ ಸಹಿಸಿಕೊಳ್ಳುತ್ತಬಂದಿದ್ದ ಭಾರತೀಯರನ್ನೂ ತರಾಟೆಗೆ ತೆಗೆದುಕೊಂಡರು. ಇಂತಹ ಅವಹೇಳನಕಾರಿ ಮಾತುಗಳಿಗೆ ಪ್ರತಿಕ್ರಿಯೆ ತೋರದೆ ಉಳಿದುದು ಅನಂತರದ ಕಾಲದಲ್ಲಿ ಅವರಿಗೇ ಜುಗುಪ್ಸೆ ತಂದೀತು – ಎಂದರು.
* * *
ಇತಿಹಾಸಗತಿಯ ರೀತಿ
ಕೆಲವು ಅಹಿತಕರ ಘಟನಾವಳಿಗಳಿಂದ ಅನುದ್ದಿಷ್ಟವಾಗಿ ಸತ್ಫಲಗಳು ಹೊಮ್ಮುವುದುಂಟು. ಅವನ್ನು ಹಾಗೆ ಯೋಜಿಸುವುದು ಸಂಭವಾತೀತವೆಂಬುದು ಸ್ಪಷ್ಟವಾಗಿಯೆ ಇದೆ. ಒಂದು ಘಟನಾವಳಿಯು ಇಂತಿಂತಹ ಪರಿಣಾಮಗಳಿಗೆ ದಾರಿಮಾಡಿತು – ಎಂದು ಹಿನ್ನೋಟದಿಂದ ಹೇಳಬಹುದಷ್ಟೆ.
ಹದಿನೆಂಟು-ಹತ್ತೊಂಬತ್ತನೇ ಶತಮಾನಗಳಲ್ಲಿ ಆಂಗ್ಲ ಆಕ್ರಮಕರು ನಡೆಸಿದ ದಮನಶಾಹಿಯಿಂದಾಗಿ ಭಾರತೀಯರಲ್ಲಿ ರಾಷ್ಟ್ರೀಯತಾಪ್ರಜ್ಞೆಯ ಮಹತ್ತ್ವವೂ ರಾಜಕೀಯ ಸ್ವಾಯತ್ತತೆಯ ಅನಿವಾರ್ಯತೆಯ ಪರಿಜ್ಞಾನವೂ ಹರಳುಗಟ್ಟಿದವು – ಎಂದು ವಾದಿಸಿದಲ್ಲಿ ಅದು ಪೂರ್ಣ ಸತ್ಯದೂರವೆನಿಸಲಾರದೇನೋ.
ಅದರಂತೆ ಇಪ್ಪತ್ತನೇ ಶತಮಾನದ ಆರಂಭದ ವ?ಗಳಲ್ಲಿ ಕರ್ಜನನು ನಡೆಸಿದ ದಬ್ಬಾಳಿಕೆಯೂ ವಂಗವಿಭಜನೆ ಮೊದಲಾದ ಘೋರಗಳೂ ಭಾರತೀಯರ ಸ್ವಾತಂತ್ರ್ಯಾಭಿಮುಖ ಪ್ರಯತ್ನಗಳಿಗೆ ರಭಸವನ್ನು ತಂದುಕೊಟ್ಟವು ಎನ್ನಬಹುದು. ವಂಗವಿಭಜನೆಯಿಂದಾಗಿ ದೇಶವ್ಯಾಪಿ ಸ್ವದೇಶೀ ಆಂದೋಲನಕ್ಕೆ ಚಾಲನೆ ದೊರೆಯಿತು. ಆ ಸಫಲ ಆಂದೋಲನವು ಇಡೀ ಜನಾಂಗದಲ್ಲಿ ಸ್ವವಿಶ್ವಾಸವನ್ನೂ ಬಲಗೊಳಿಸಿತು. ಇನ್ನೊಂದು ಗಣನೀಯ ಪರಿಣಾಮವೆಂದರೆ ಸಾಂವಿಧಾನಿಕ ಮನವಿದಾರಿಕೆಯಿಂದ ಸ್ವರಾಜ್ಯಸಾಧನೆ ಆಗಲಾರದೆಂಬ ಮತ್ತು ಹೆಚ್ಚು ಸಕ್ರಿಯ ಪ್ರಯಾಸಗಳು ಮಾತ್ರ ಫಲದಾಯಕವಾದಾವೆಂಬ ಮನಃಪರಿವರ್ತನೆಯನ್ನು ಆಗಿನ ರಾಜಕೀಯ ಅಗ್ರಣಿಗಳಲ್ಲಿ ತಂದಿತು. ಇದರ ಜೊತೆಗೇ ರಾಷ್ಟ್ರೀಯತಾಸ್ಥಾಪನೆಯು ತಾತ್ತ್ವಿಕವಾಗಿ ಸ್ವಧರ್ಮಾನುಸಂಧಾನದ್ದೇ ಇನ್ನೊಂದು ಮುಖವೆಂಬ ಸ್ಫುಟೀಕರಣವನ್ನು ನಿವೇದಿತಾರವರೂ ಅರವಿಂದರೂ ನೀಡಿದುದು ಸ್ವಾತಂತ್ರ್ಯಸಾಧನ ಪ್ರಯತ್ನವನ್ನು ಹೆಚ್ಚು ಘನಿಷ್ಠಗೊಳಿಸಿತು.
ಸ್ವದೇಶೀ ತಾತ್ತ್ವಿಕತೆಯು ಹೊಸದೇನಲ್ಲವಾದರೂ ರಾಜಕೀಯ ಸಾಧನವಾಗಿ ಅದರ ಉಪಯುಕ್ತತೆ ಈಗ ಪ್ರಕಟೀಕರಣಗೊಳ್ಳುವಂತಾಯಿತು. ವಿದೇಶೀ ವಸ್ತುಗಳ ವಿದೇಶೀ ವಸ್ತು ಬಹಿಷ್ಕಾರಕ್ಕೆ ನಿವೇದಿತಾ ಪ್ರೋತ್ಸಾಹ ನೀಡಿದುದಕ್ಕೆ ಎರಡು ಪ್ರಬಲ ಕಾರಣಗಳು ಇದ್ದವು. ಮೊದಲನೆಯದಾಗಿ ಬ್ರಿಟಿಷ್ ಪ್ರಭುತ್ವದ ನಿರಸನ; ಎರಡನೆಯದಾಗಿ ವಿದೇಶೀ ವಸ್ತು ದಹನವು ಯಾವುದೊ ಕೆಲ ವರ್ಗಗಳನ್ನಷ್ಟೆ ಅಲ್ಲದೆ ಮಹಿಳೆಯರೂ ಸೇರಿದಂತೆ ಎಲ್ಲ ಸಮಾಜವರ್ಗಗಳನ್ನೂ ಆಕರ್ಷಿಸಬಲ್ಲ ಅವಕಾಶ ಅದರಲ್ಲಿ ಇದ್ದುದು.
ಬಹಿಷ್ಕಾರಕ್ಕೆ ಸುರೇಂದ್ರನಾಥ ಬ್ಯಾನರ್ಜಿಯವರಂತಹ ಸಮುನ್ನತರ ನಾಯಕತ್ವವೂ ದೊರೆತದ್ದು ಅನಿಲ-ಅನಲ ಸಂಯೋಗದಂತೆ ಆಯಿತು. ದೇಶದೆಲ್ಲೆಡೆ ಸ್ವದೇಶೀ ಆಂದೋಲನಕ್ಕೆ ದೊರೆತ ಜನಸ್ಪಂದನವೂ ಜನತೆಯಲ್ಲಿ ಅದು ಮೂಡಿಸಿದ ನಿರ್ಭೀತಿ-ಐಕ್ಯಭಾವನೆಗಳೂ ಬ್ರಿಟಿಷ್ ಆಳರಸರನ್ನು ದಿಗ್ಭ್ರಮೆಗೊಳಿಸಿದವು. ಮೊದಮೊದಲು ಕೇವಲ ವಿದೇಶೀ ವಸ್ತು ಬಹಿಷ್ಕಾರ ಚಳವಳಿಯಾಗಿ ಕಂಡ ಸ್ವದೇಶೀ ಅನುಸಂಧಾನವು ಅಲ್ಪಕಾಲದಲ್ಲಿ ಜನಸಾಮಾನ್ಯರ ಕೈಯಲ್ಲಿನ ಮಂತ್ರದಂಡವೇ ಆಯಿತು.
ಜನಶಕ್ತಿಯ ಸಂಚಯ
ವಿದೇಶೀ ವಸ್ತು ಬಹಿಷ್ಕಾರಕ್ಕೆ ನಿವೇದಿತಾ ಪ್ರೋತ್ಸಾಹ ನೀಡಿದುದಕ್ಕೆ ಎರಡು ಪ್ರಬಲ ಕಾರಣಗಳು ಇದ್ದವು. ಮೊದಲನೆಯದಾಗಿ ಬ್ರಿಟಿಷ್ ಪ್ರಭುತ್ವದ ನಿರಸನ; ಎರಡನೆಯದಾಗಿ ವಿದೇಶೀ ವಸ್ತು ದಹನವು ಯಾವುದೊ ಕೆಲ ವರ್ಗಗಳನ್ನಷ್ಟೇ ಅಲ್ಲದೆ ಮಹಿಳೆಯರೂ ಸೇರಿದಂತೆ ಎಲ್ಲ ಸಮಾಜವರ್ಗಗಳನ್ನೂ ಆಕರ್ಷಿಸಬಲ್ಲ ಅವಕಾಶ ಅದರಲ್ಲಿ ಇದ್ದುದು. ವಾಸ್ತವವಾಗಿ ನಿವೇದಿತಾರವರ ಈ ನಿರೀಕ್ಷೆ ಕೈಗೂಡಿತು ಕೂಡಾ. ಆಗಿನ ಎಂದರೆ ೧೯೦೫ರ ಸನ್ನಿವೇಶದಲ್ಲಿ ಅವಶ್ಯವಾಗಿ ಆಗಬೇಕಾಗಿದ್ದ ಒಂದು ಕಾರ್ಯ ವೆಂದರೆ ಜನಶಕ್ತಿಯ ಕ್ರೋಡೀಕರಣ. ಇದು ಆದ ಹೊರತು ಸಮಸ್ತ ಸಮಾಜದಲ್ಲಿ ರಾಷ್ಟ್ರೀಯತೆಯ ಭಾವದ ಜಾಗರಣವು ದುಃಶಕ್ಯವೆನಿಸಿತ್ತು. ಸಮಾಜದ ಆತ್ಮವಿಶ್ವಾಸಕ್ಕೆ ಅಡಿಪಾಯವಾದ ಸ್ವಾವಲಂಬನ ಪ್ರವೃತ್ತಿಯ ವರ್ಧನೆಗೂ ಇದು ದಾರಿಮಾಡಿತು.
ನಿವೇದಿತಾ ವಿದೇಶಮೂಲದವರಾಗಿದ್ದ ಸಂಗತಿ ಆರಂಭದ ದಿನಗಳಲ್ಲಿ ಅವರ ಬಹಿರಂಗ ಚಟುವಟಿಕೆಗಳ ಬಗೆಗೆ ಅವರು ಹೆಚ್ಚು ಜಾಗರೂಕತೆ ವಹಿಸುವುದನ್ನು ಅವಶ್ಯವಾಗಿಸಿತ್ತು. ಆದರೆ ಕರ್ಜನ್ ಸರ್ಕಾರದಿಂದ ವಂಗವಿಭಜನೆಯ ದುಸ್ಸಾಹಸ ನಡೆದ ಮೇಲೆ ನಿವೇದಿತಾರವರು ಮೀನಮೇಷ ನೋಡುವುದರ ಆವಶ್ಯಕತೆ ಕಾಣಲಿಲ್ಲ. ಹಿಂದೂ ಸಮಾಜದ ಆತ್ಮವಿಶ್ವಾಸವನ್ನು ಸಚೇತನಗೊಳಿಸುವುದೇ ಆಗಿನ ಎಲ್ಲ ಸಮಸ್ಯೆಗಳಿಗೆ ಪರಿಹಾರ – ಎಂದು ಗಾಢವಾಗಿ ನಂಬಿದ್ದರು ನಿವೇದಿತಾ. ಇದನ್ನು ಗ್ರಹಿಸುವುದು ಅವಶ್ಯವಿದೆ. ಏಕೆಂದರೆ ಆಗ್ಗೆ ಅಲ್ಪಕಾಲ ಹಿಂದೆಯೂ ಅನಂತರದ ಹಲವು ವರ್ಷಗಳಲ್ಲಿಯೂ ಆ ದಿನಗಳ ಮುಂಚೂಣಿ ನಾಯಕರಲ್ಲಿ ಹೆಚ್ಚಿನವರ ಗಮನ ಕೇಂದ್ರೀಕೃತವಾಗಿದ್ದುದು ರಾಜಕೀಯ ಸಂಧಾನಗಳ ಮೇಲೆ. ಕೇವಲ ರಾಜಕೀಯ ಸಂಧಾನಗಳು ಅಪರ್ಯಾಪ್ತವೆಂಬ ರಾಷ್ಟ್ರೀಯತಾಪರ ವರ್ಗಗಳ ಮಾನಸಿಕತೆಗೆ ಮುಂಚೂಣಿ ನಾಯಕರ ಸ್ಪಂದನ ದೊರೆಯತೊಡಗಿದುದು ೧೯೧೮-೧೯ರ ತರುವಾಯವೇ – ರೌಲೆಟ್ ಕಾಯಿದೆ, ಜಲಿಯನ್ವಾಲಾಬಾಗ್ ಮೊದಲಾದ ಘಟನಾವಳಿಯ ಅನಂತರದಲ್ಲಿ. ಈ ಸಕ್ರಿಯತೆಗೆ ನೆಲಗಟ್ಟನ್ನು ೧೯೦೫ರ? ಹಿಂದಿನಿಂದಲೇ ನಿರ್ಮಿಸಿದ್ದವರು ವಿಶೇಷವಾಗಿ ನಿವೇದಿತಾ ಮತ್ತು ಅರವಿಂದರು. ಅದುವರೆಗೆ ಅಸ್ಫುಟವಾಗಿದ್ದ ತಾತ್ತ್ವಿಕತೆಗೆ ಸೈದ್ಧಾಂತಿಕ ಅಧಿಷ್ಠಾನವನ್ನು ನಿವೇದಿತಾರವರೂ ಅರವಿಂದರೂ ಒದಗಿಸಿದುದು ಸ್ವಾತಂತ್ರ್ಯೋದ್ಯಮದ ಹೆಚ್ಚಿನ ಚೇತರಿಕೆಗೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿಯೆ ಗುರುದೇವ ರವೀಂದ್ರನಾಥ ಠಾಕೂರರು ನಿವೇದಿತಾರವರ ಕೊಡುಗೆಯ ಬಗೆಗೆ ಆಗಿಂದಾಗ ಪ್ರಶಂಸೋದ್ಗಾರ ಮಾಡುತ್ತಿದ್ದುದು.
ವಂಗವಿಭಜನೆಯ ಹಿನ್ನೆಲೆ
೧೯ನೇ ಶತಮಾನದ ನಡುಭಾಗದಲ್ಲಿ ’ಬಂಗಾಳ’ ಎಂಬ ಹೆಸರಿನಿಂದ ಸೂಚಿತವಾಗುತ್ತಿದ್ದುದು ಹೆಚ್ಚುಕಡಮೆ ಇಡೀ ಪೂರ್ವಭಾರತ. ಆ ಪ್ರಾಂತದಲ್ಲಿ ಪೂರ್ವ- ಪಶ್ಚಿಮ ಬಂಗಾಳವಲ್ಲದೆ ಅಸ್ಸಾಂ, ಬಿಹಾರ, ಒರಿಸ್ಸಾ – ಇವೂ ಸೇರಿದ್ದವು. ಪ್ರಾಂತವು ದೊಡ್ಡದಾದ? ಆಡಳಿತ ನಿಯಂತ್ರಣ ದುಷ್ಕರವೆಂದು ಭಾವಿಸಿ ಬ್ರಿಟಿಷ್ ಪ್ರಭುತ್ವ ಅದನ್ನು ಹಲವು ಭಾಗಗಳಾಗಿ ವಿಭಜಿಸುವುದು ರಾಜಕೀಯ ನಿಯಂತ್ರಣದ ದೃಷ್ಟಿಯಿಂದ ಅನುಕೂಲಕರವಾಗುತ್ತದೆಂದು ಭಾವಿಸಿ ಈ ದಿಶೆಯ ಕ್ರಮಗಳನ್ನು ಯೋಚಿಸುತ್ತಿತ್ತು. ಮೊದಲ ಹೆಜ್ಜೆಯಾಗಿ ೧೮೭೪ರಲ್ಲಿ ಅಸ್ಸಾಂ ಭಾಗವನ್ನು ಪ್ರತ್ಯೇಕಗೊಳಿಸಿತು. ಅನಂತರದ ಕಾಲದಲ್ಲಿ ಪ್ರಯಾಗವನ್ನೊಳಗೊಂಡ ಭಾಗವನ್ನು ’ಸಂಯುಕ್ತ ಪ್ರಾಂತ’ವಾಗಿ ರೂಪಿಸಲಾಯಿತು. ಜನಜಾಗೃತಿ ಆಗ? ಗರಿಗೆದರತೊಡಗಿದ್ದುದರಿಂದ ಆ ಸಮಯದಲ್ಲಿ ಜನತೆಯ ಕಡೆಯಿಂದ ಹೆಚ್ಚಿನ ಪ್ರತಿಭಟನೆ ಹೊಮ್ಮಲಿಲ್ಲ. ಆದರೆ ೧೯೦೫ರಲ್ಲಿ ಕರ್ಜನನು ಬಂಗಾಳ ಪ್ರಾಂತವನ್ನೇ ಹಿಂದೂ-ಬಹುಸಂಖ್ಯಾತ ಮತ್ತು ಮುಸ್ಲಿಂ-ಬಹುಸಂಖ್ಯಾತ ಹೋಳುಗಳಾಗಿ ಒಡೆಯಲು ಉಜ್ಜುಗಿಸಿದಾಗ ಹಿಂದಿನ ನಿಸ್ತೇಜ ಸ್ಥಿತಿ ಇರಲಿಲ್ಲ; ಬ್ರಿಟಿಷ್ ಪ್ರಭುತ್ವದ ಉಚ್ಚಾಟನೆ ಮಾತ್ರ ಭಾರತದ ಸ್ವಸಂಸ್ಕೃತಿಗೆ ಅನುಗುಣವಾದ ಅಭ್ಯುದಯಪ್ರಸ್ಥಾನಕ್ಕೆ ದಾರಿಮಾಡೀತು ಎಂಬ ಜಾಗೃತಿ ಮೂಡಿತ್ತು. ಕರ್ಜನನದು ಹಿಂದೂ ಜನಾಂಗದ ಸಾಮರ್ಥ್ಯವನ್ನು ಪ್ರತಿಬಂಧಿಸುವ ಉದ್ದೇಶದ್ದೆಂಬುದನ್ನು ಜನನಾಯಕರು ಕೂಡಲೇ ಗ್ರಹಿಸಿದರು. ನೋಡುನೋಡುತ್ತಿದ್ದಂತೆ ಅದುವರೆಗೆ ಕಂಡುಕೇಳರಿಯದ ಪ್ರಮಾಣದ ಪ್ರತಿಭಟನೆ ಕಾಳ್ಗಿಚ್ಚಿನಂತೆ ಹರಡಿತು; ’ವಂಗಭಂಗ ವಿರೋಧ’ ಎಂದು ಉಪಕ್ರಮಗೊಂಡಿದ್ದುದು ಕ್ಷಿಪ್ರವಾಗಿ ರಾಷ್ಟವ್ಯಾಪಿಯಾದ ’ಸ್ವದೇಶೀ ಆಂದೋಲನ’ವಾಗಿಯೂ ’ವಂದೇ ಮಾತರಂ ಆಂದೋಲನ’ವಾಗಿಯೂ ದೇಶದ ಉದ್ದಗಲಕ್ಕೆ ಪ್ರಸಾರಗೊಂಡಿತು.
ಆಂದೋಲನವನ್ನು ಸಮರ್ಥಿಸಿ ನಿವೇದಿತಾರವರು ಆ ದಿನಗಳಲ್ಲಿ ಬರೆದ ಪ್ರಖರ ಲೇಖನಗಳ ಓಜಃಪೂರ್ಣ ಧ್ವನಿಯೂ ತಾರ್ಕಿಕತೆಯೂ ಎಲ್ಲರ ಮನಸ್ಸನ್ನು ಸೆಳೆದವು. ಆ ಲೇಖನಗಳನ್ನು ವಿದೇಶೀ ಮೂಲದ ಮಹಿಳೆ ಬರೆದಿದ್ದ ಸಂಗತಿಯೂ ಅವು ’ಸ್ಟೇಟ್ಸ್ಮನ್’ ಅಂತಹ ಬ್ರಿಟಿಷ್ ಸ್ವಾಮ್ಯದ ಪತ್ರಿಕೆಯಲ್ಲಿಯೂ ಪ್ರಕಟಗೊಂಡು ವ್ಯಾಪಕ ಪ್ರಸಾರ ಪಡೆದದ್ದೂ ಸರ್ಕಾರವನ್ನು ತಳಮಳಗೊಳಿಸಿತು.
ವಿಶೇಷ ಸಂಗತಿಯೆಂದರೆ ಜನಾಂದೋಲನವು ವಿಭಜನ ರದ್ದತಿಗೆ ಸೀಮತವಿರತಕ್ಕದ್ದಲ್ಲವೆಂದೂ ಶಿಕ್ಷಣ, ಉದ್ಯಮ, ಕಲೆ, ಸಾಹಿತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ ಸ್ವದೇಶೀ ಪ್ರಸ್ಥಾನಕ್ಕೆ ದಾರಿಮಾಡಬೇಕೆಂದೂ ಆಂದೋಲನದ ನೆಲಗಟ್ಟನ್ನು ವಿಸ್ತರಿಸಲು ನಿವೇದಿತಾರವರೂ ರವೀಂದ್ರನಾಥ ಠಾಕೂರರೂ ಶ್ರಮಿಸಿದುದು ನವಭಾರತದ ಇತಿಹಾಸಕ್ಕೇ ಒಂದು ಹೊಸ ತಿರುವನ್ನು ನೀಡಿತು.
ಅಭೂತವೂರ್ವ ಆಂದೋಲನ
ಹಿಂದೆಂದೂ ಕಾಣದಿದ್ದಷ್ಟು ವ್ಯಾಪಕ ಜನಾಭಿಪ್ರಾಯ ಮೂಡಿದ ಸಂಗತಿಯಾಗಲಿ ಸುರೇಂದ್ರನಾಥ ಬ್ಯಾನರ್ಜಿಯವರ ನೇತೃತ್ವದಲ್ಲಿ ಆ ಕಾಲಕ್ಕೆ ದಾಖಲೆಯೆನಿಸಿದಂತೆ ೮೦ ಸಾವಿರಕ್ಕೂ ಹೆಚ್ಚು ಜನ ಸಹಿ ಮಾಡಿದ ಮನವಿಯ ಸಲ್ಲಿಕೆಯಾಗಲಿ ದರ್ಪಿಷ್ಠ ವೈಸರಾಯನ ಮೇಲೆ ಪರಿಣಾಮ ಮಾಡಲಿಲ್ಲ. ಆತ ನಿಶ್ಚಯಿಸಿದ್ದಂತೆ ವಂಗವಿಭಜನೆ ನಡೆದುಹೋಯಿತು. ಜನಪ್ರತಿಭಟನೆಯೂ ತೀಕ್ಷ್ಣಗೊಳ್ಳುತ್ತ ಹೋಯಿತು. ಸಾರ್ವಜನಿಕ ಸಭೆಗಳೇನು, ಮೆರವಣಿಗೆಗಳೇನು, ರವೀಂದ್ರನಾಥ ಠಾಕೂರರ ಕರೆಯಂತೆ ರಕ್ಷಾಬಂಧನದ ದಿನ ಸಾವಿರಾರು ಜನರು ಗಂಗಾಸ್ನಾನದೊಡನೆ ಸಂಯುಕ್ತ ಬಂಗಾಲದ ಆವಾಹನೆ ಮಾಡಿದುದೇನು – ಹೀಗೆ ಮೊತ್ತಮೊದಲ ಬಾರಿಗೆ ಇಡೀ ಜನತೆ ಬಲಿಷ್ಠ ಸರ್ಕಾರದ ವಿರುದ್ಧ ಸೆಟೆದು ನಿಂತದ್ದು ಸತ್ಸಂಕಲ್ಪಶಕ್ತಿಯ ಪ್ರಕಟೀಕರಣದ ಒಂದು ಅದ್ಭುತ ಘಟನೆಯಾಯಿತು. ಈ ಪ್ರಮಾಣದ ಜನಾಕ್ರೋಶವನ್ನು ಬ್ರಿಟಿಷ್ ಸರ್ಕಾರ ಕನಸಿನಲ್ಲಿಯೂ ನಿರೀಕ್ಷಿಸಿರಲಿಲ್ಲ. ಕೊನೆಗೂ ಜನಾಭಿಮತಕ್ಕೆ ಗೆಲವು ದೊರೆತು ೧೯೧೩ರಲ್ಲಿ ವಿಭಜನೆ ರದ್ದಾದದ್ದು ಈಗ ಇತಿಹಾಸ.
ನಿವೇದಿತಾರವರ ಪಾಲಿಗಂತೂ ಅದು ತಾವು ಬಯಸಿದ್ದಂತಹ ಜನಶಿಕ್ಷಣಕ್ಕೆ ಸುವರ್ಣಾವಕಾಶವೇ ಆಯಿತು. ಭಾ?ಣ ಲೇಖನಗಳಿಂದ ತೃಪ್ತರಾಗದೆ ಅವರೇ ಕೈಗಾಡಿಯೊಂದರಲ್ಲಿ ಸ್ವದೇಶೀ ವಸ್ತುಗಳನ್ನು ಹೇರಿಕೊಂಡು ಬೀದಿಬೀದಿಗಳಲ್ಲಿ ಮಾರಾಟ ಮಾಡಿದರು.
ಇಲ್ಲಿಯ ಸಮಾಜದೊಡನೆ ನಿವೇದಿತಾ ಬೆಳೆಸಿಕೊಂಡಿದ್ದ ತಾದಾತ್ಮ್ಯವನ್ನು ಕಂಡು ಜನ ಪುಲಕಿತರಾದರು. ಅವರು ಬಂದರೆ ಭಾರತಮಾತೆಯೆ ಪ್ರತ್ಯಕ್ಷಳಾದಳೆಂಬ ಅನುಭೂತಿ ಜನರಿಗೆ ಆಗುತ್ತಿತ್ತು. ಅವರ ಪಾದಗಳಿಗೆ ಎರಗಿದವರು ಅದೆಷ್ಟೋ; ಅವರ ಪಾದಧೂಳಿಯನ್ನು ಶಿರಸ್ಸಿನಲ್ಲಿ ಧರಿಸಿದವರು ಎಷ್ಟೋ!
ದುರಾಗ್ರಹದ ರಾಜಕೀಯ ನಡಾವಳಿಗೆ ವಿದೇಶೀ ವಸ್ತು ಬಹಿಷ್ಕಾರ, ವಂದೇ ಮಾತರಂ ನಿಷೇಧದಂತಹ ಶಾಸನಗಳ ಉಲ್ಲಂಘನೆ, ಬಂಗಾಲವಲ್ಲದೆ ಅನ್ಯ ಪ್ರಾಂತಗಳಿಂದಲೂ ಪ್ರತಿಭಟನೆ, ಅಗ್ರಮಾನ್ಯ ಜನನಾಯಕರ ನೇತೃತ್ವದ ಸಭೆಗಳು ಮತ್ತು ನಿರ್ಣಯಗಳು – ಎಲ್ಲವೂ ಎಷ್ಟು ಅಗಾಧ ಪ್ರಮಾಣದಲ್ಲಿ ಹೊಮ್ಮಿದವೆಂದರೆ ಸರ್ಕಾರವನ್ನು ದಿಗ್ಭ್ರಾಂತವಾಗಿಸಿತು.
ಗಮನಿಸಬೇಕಾದ ಅಂಶವೆಂದರೆ – ವಿಶೇಷವಾಗಿ ನಿವೇದಿತಾರವರ ಮತ್ತು ಅರವಿಂದರ ದೂರದೃಷ್ಟಿಯಿಂದಾಗಿ ಜನಾಂದೋಲನವು ವಂಗವಿಭಜನೆಯ ರದ್ದತಿಯ ಆಚೆಗೂ ವಿಸ್ತರಿಸಿ ರಾಷ್ಟ್ರೀಯ ಶಿಕ್ಷಣಸಂಸ್ಥೆಗಳ ಮತ್ತು ದೇಶೀಯರ ನೇತೃತ್ವದ ಉದ್ಯಮಗಳ ಆರಂಭಕ್ಕೂ ಕಾರಣವಾಯಿತು. ಆ ಹಲವಾರು ಸಂಸ್ಥೆಗಳು ಈಗಲೂ ಎಂದರೆ ನೂರು ವರ್ಷಗಳ ತರುವಾಯವೂ ಮುಂದುವರಿದಿವೆ
(ಸಶೇಷ)