ಪ್ರಾಥಮಿಕ ಶಾಲಾ ಹಂತದಲ್ಲಿ ನಾವೊಂದು ಕಥೆಯನ್ನು ಓದಿರುತ್ತೇವೆ. ಅದರಲ್ಲೊಬ್ಬ ದಯಾಪರನಾದ ರಾಜ. ತನ್ನ ಪ್ರಜೆಗಳಿಗೆ ಯಾವುದೇ ಅನ್ಯಾಯವಾಗಬಾರದು; ಆದರೂ ಅದಕ್ಕೆ ಕೂಡಲೇ ಪರಿಹಾರ ಸಿಗಬೇಕು. ಅದಕ್ಕಾಗಿ ಆತ ಒಂದು ವ್ಯವಸ್ಥೆಯನ್ನು ಮಾಡಿದ್ದ. ಅರಮನೆಯ ಮುಂದೆ ಒಂದು ಗಂಟೆ; ದೂರುಗಂಟೆ ಎಂದು ಅದಕ್ಕೆ ಹೆಸರು. ಗಂಟೆಗೆ ಒಂದು ಹಗ್ಗವನ್ನು ಕಟ್ಟಲಾಗಿರುತ್ತದೆ. ಅನ್ಯಾಯಕ್ಕೊಳಗಾದ ಯಾರೇ ಆದರೂ ಆ ಹಗ್ಗವನ್ನು ಜಗ್ಗಿ ಗಂಟೆಯನ್ನು ಬಾರಿಸಿದರೆ ಸಾಕು. ರಾಜ ವಿಚಾರಣೆ ನಡೆಸಿ ನ್ಯಾಯವನ್ನು ಒದಗಿಸುತ್ತಾನೆ.
ಒಮ್ಮೆ ಗಂಟೆ ಸದ್ದಾಯಿತು. ಯಾರೆಂದು ನೋಡಿದರೆ ಅದೊಂದು ಕುದುರೆ. ರಾಜ ವಿಚಾರಣೆ ನಡೆಸಿದ. ಮೂಕಪ್ರಾಣಿಯೆಂದು ಸುಮ್ಮನೆ ಬಿಡಲಿಲ್ಲ. ಪೂರ್ತಿ ವಿಚಾರಣೆ ಆಗುವ?ರಲ್ಲಿ ಬಡಕಲಾಗಿದ್ದ ಆ ಕುದುರೆಗೆ ಅದರ ಮಾಲೀಕ ಹೊಟ್ಟೆಗೆ ಸರಿಯಾಗಿ ಹಾಕುತ್ತಿರಲಿಲ್ಲ, ಅದರಿಂದಾಗಿ ಕುದುರೆ ಹಗ್ಗವನ್ನು ಹುಲ್ಲೆಂದು ಭಾವಿಸಿ ಅದಕ್ಕೆ ಬಾಯಿ ಹಾಕಿದೆ ಎಂದು ತೀರ್ಮಾನವಾಯಿತು.
ರಾಜನ ತೀರ್ಮಾನ ಸರಿಯಾಗಿಯೇ ಇತ್ತು. ಅಂತೂ ಕುದುರೆಗೆ ನ್ಯಾಯ ದೊರೆಯಿತು. ಇದೊಂದು ರೂಪಕ.
ಈಚೆಗೆ ಪ್ರಕಟಗೊಂಡು ಬಹುಬೇಗ ಮತ್ತೊಂದು ಮುದ್ರಣವನ್ನೂ ಕಂಡಿರುವ ಸಹನಾ ವಿಜಯಕುಮಾರ್ ಅವರ ಕಾದಂಬರಿ ಕಶೀರದಲ್ಲಿ ಇಂಥದ್ದೇ ಒಂದು ಸಂದರ್ಭ ಬರುತ್ತದೆ. ಕಶೀರ ಎಂದರೆ ಕಶ್ಮೀರ ಅಥವಾ ಕಾಶ್ಮೀರ. ಕಾಶ್ಮೀರ ಎಂದರೆ ಬೇರೇನನ್ನೂ ಹೇಳುವುದು ಬೇಡ ಎನಿಸುತ್ತದೆ. ರಕ್ತಪಾತ, ಜೀವಹಾನಿಗಳ ಮೂಲಕ ಪ್ರತಿದಿನ ಸುದ್ದಿಯಲ್ಲಿರುವ ನಮ್ಮ ದೇಶದ ಒಂದು ರಾಜ್ಯ.
ಒಂದು ದೇಶದ ರಾಜಕೀಯ ನಾಯಕರ ವೈಫಲ್ಯ ಮತ್ತು ಇಸ್ಲಾಂಪ್ರಾಯೋಜಿತ ಹಿಂಸೆಗಳಿಗೆ ಬಹುಶಃ ಜಗತ್ತಿನಲ್ಲಿ ಕಾಶ್ಮೀರಕ್ಕಿಂತ ಉತ್ತಮ ಉದಾಹರಣೆ ಸಿಗಲಾರದು; ಇರಲಿ.
ದೂರುಗಂಟೆಯ ದೂರು
ಕಾದಂಬರಿಯಲ್ಲಿ ಕೈಲಾಶ್ ಪಂಡಿತ್ ಅಥವಾ ಕೈಲಾಶ್ ಮಾಸ್ಟರ್ ಎನ್ನುವ ಒಂದು ಪಾತ್ರವಿದೆ; ಈತ ಸಾಕ? ವಯಸ್ಸಾದವರು. ೧೯೮೬, ೧೯೯೦ ಮುಂತಾದ ಕಾಲಾವಧಿಯಲ್ಲಿ ನಡೆದ ಹಿಂಸೆ ದೌರ್ಜನ್ಯಗಳನ್ನು ಕಣ್ಣಾರೆ ಕಂಡವರು. ಅವರ ಎದುರುಮನೆಯವರು, ಪರಿಚಿತವಾದ ಮುಸ್ಲಿಂ ಕುಟುಂಬದಿಂದ ನಡೆದ ಹಿಂಸೆ, ಕೊಲೆಗಳಿಂದ ಮಗ-ಮಗಳನ್ನು ಕಳೆದುಕೊಂಡು, ಆ ಆಘಾತದಿಂದ ಪತ್ನಿಯೂ ಸಾವನ್ನಪ್ಪಿ ತೀವ್ರ ಆಘಾತಕ್ಕೊಳಗಾದವರು. ಅಂದಿನಿಂದ ಮಾತನಾಡುವುದನ್ನೇ ಬಿಟ್ಟುಬಿಟ್ಟರು. ಈ
ಘಟನಾವಳಿಯಿಂದಾಗಿ ಆತ ತನ್ನ ಮನೆಯನ್ನು ಬಿಟ್ಟು ಕಶ್ಮೀರಿ ಪಂಡಿತರಿಗೆ ಪೊಲೀಸ್ ರಕ್ಷಣೆ ಸಹಿತವಾಗಿ ಒದಗಿಸಿದ್ದ ಪ್ರದೇಶ(ಘೆಟ್ಟೋ)ದಲ್ಲಿ ನಿಲ್ಲಬೇಕಾಯಿತು.
ಆಘಾತದಿಂದಾಗಿ ಮಾತು ನಿಲ್ಲಿಸಿದರೂ ಅವರು ಪ್ರತಿದಿನ ಮುಂಜಾನೆ ಒಂದು ಕೆಲಸವನ್ನು ಮಾಡುತ್ತಿದ್ದಾರೆ. ತಮಗೆ ದ್ರೋಹಬಗೆದ ಮುಸ್ಲಿಂ ಕುಟುಂಬದ ಮನೆಯೆದುರು ಕಂಬಕ್ಕೆ ಒಂದು ಗಂಟೆಯನ್ನು ಕಟ್ಟಿದ್ದಾರೆ. ಮುಂಜಾನೆ ಪ್ರಾರ್ಥನೆಗೆ ಮಸೀದಿಯ ಕರೆ
ಬರುತ್ತಲೇ ಮನೆಯಿಂದ ಹೊರಡುತ್ತಾರೆ; ಸೀದಾ ಅಲ್ಲಿಗೆ ಹೋಗಿ ಗಂಟೆಯನ್ನು ಬಾರಿಸುತ್ತಾರೆ; ಮತ್ತು ಮೆಗಚ್ಛ್ ಇನ್ನಾಫ್ (ನನಗೆ ನ್ಯಾಯ ಕೊಡಿ) ಎಂದು ಕೂಗುತ್ತಾರೆ. ಸ್ವಲ್ಪ ಹೊತ್ತು ಅಲ್ಲಿದ್ದು ಮನೆಗೆ ಮರಳುತ್ತಾರೆ. ಮಾತು ನಿಲ್ಲಿಸಿದ್ದ ಕೈಲಾಶ್ ಪಂಡಿತ್ ಇದನ್ನೆಲ್ಲ ಡೈರಿಯಲ್ಲಿ ಬರೆದಿಟ್ಟಿದ್ದಾರೆ. ಮನೆಯವರು ಆ ಡೈರಿಯನ್ನು ಕಾಶ್ಮೀರದ ಅಧ್ಯಯನಕ್ಕಾಗಿ ಕರ್ನಾಟಕದಿಂದ ಅಲ್ಲಿಗೆ ಹೋದ ಕಾದಂಬರಿಯ ನಾಯಕ (ಪಾತ್ರ) ನರೇಂದ್ರನಿಗೆ ಕೊಡುತ್ತಾರೆ. ಚೋಳರ ರಾಜ ಮನುವಿನ ಕಾಲದಲ್ಲಿ ಗಂಟೆ ಬಾರಿಸಿ ನ್ಯಾಯವನ್ನು ಪಡೆಯುವ ಪದ್ಧತಿಯಿತ್ತು ಎಂದು ಅವರು ಅದರಲ್ಲಿ ಉಲ್ಲೇಖಿಸಿದ್ದಾರೆ.
ಅವರು ಡೈರಿಯಲ್ಲಿ ಮತ್ತೆ ಮತ್ತೆ ಬರೆದಿದ್ದ ಸಾಂಕೇತಿಕವೆನಿಸುವ ಕೆಲವು ಸಾಲುಗಳು ವಿಶೇಷವಾಗಿ ಗಮನ ಸೆಳೆಯುತ್ತವೆ; ಅಲ್ಲಿನ ಹಿಂದೂಗಳ ಮೇಲೆ ಮೇಲಿಂದ ಮೇಲೆ ದೌರ್ಜನ್ಯಗಳು ನಡೆದ ಸಂದರ್ಭಗಳಲ್ಲಿ ಆತ ನಾನು ಕಶ್ಮೀರದ ರಾಜ. ಯಾವ ರಾಕ್ಷಸನ ಅಟ್ಟಹಾಸಕ್ಕೂ ಬೆದರೋಲ್ಲ. ನನ್ನ ರಾಜ್ಯವನ್ನ ತೊರೆದು ಹೋಗಲ್ಲ. ನನ್ನನ್ನ ವಿತಸ್ತಾ (ಝೀಲಂ) ನದಿಯಲ್ಲಿ ಮುಳುಗಿಸಿದರೂ ಸರಿ…. ಎಂದು ಬರೆಯುತ್ತಾ ಬಂದಿದ್ದರು.
ಮುಂದೆ ಮುಸ್ಲಿಂ ಉಗ್ರವಾದಿಗಳ ರಕ್ತದಾಹಕ್ಕೆ ಮಗ, ಮಗಳು, ಪತ್ನಿ ಎಲ್ಲ ಬಲಿಯಾಗಿ ಎಲ್ಲವನ್ನೂ ಕಳೆದುಕೊಂಡ ಸ್ಥಿತಿಯಲ್ಲಿ ಅವರ ಉದ್ಗಾರ ಹೀಗೆ ಬದಲಾಗುತ್ತದೆ: ನಾನು ಕೈಲಾಶ್ ಪಂಡಿತ. ಈಗ ಕಶ್ಮೀರದ ರಾಜನಲ್ಲ… ರಾಕ್ಷಸನ ಅಟ್ಟಹಾಸಕ್ಕೆ ತಲೆಬಾಗಿದ್ದೆ…. ನನ್ನ ರಾಜ್ಯವನ್ನ ತೊರೆದು ಹೋಗೋಕೆ ಸಿದ್ಧನಿದ್ದೆ…. ವಿತಸ್ತಾ ನದಿಯಲ್ಲಿ ಮುಳುಗಿ ಸಾಯೋಕೂ ಸಿದ್ಧನಿದ್ದೆ…. ನನ್ನ ಮಕ್ಕಳೇನು ಪಾಪ ಮಾಡಿದ್ದರು? ನನ್ನಿಂದಾದ ತಪ್ಪಾದರೂ ಏನು? ಮುಂದುವರಿದು ಮೆಗಚ್ಛ್ ಇನ್ನಾಫ್! ಕೈಗಳಲ್ಲಿ ನೆಲವನ್ನು ಬಡಿಯುವ
ಶಕ್ತಿಯೂ ಈಗ ಉಳಿದಿಲ್ಲ ಎಂದಿದ್ದಾರೆ.
ಪಂಡಿತರ ಡೈರಿ
ಅತ್ಯಂತ ಭೀಕರ ಅನುಭವವನ್ನು ಚಿತ್ರಿಸುವ ಕೈಲಾಶ್ ಪಂಡಿತರ ಡೈರಿ ಕಾದಂಬರಿಯ ರಸಘಟ್ಟಿಯಂತಿದೆ. ನನಗೆ ಯಾವುದನ್ನೂ ಶಿಕ್ಷಿಸಿ ಗೊತ್ತಿಲ್ಲ. ಪ್ರೀತಿಸಬಲ್ಲೆನಷ್ಟೆ. ಒಂದು ಸಣ್ಣ ಮಿಡತೆಯಿಂದ ಹಿಡಿದು ಮನು?ನವರೆಗೂ, ಅಷ್ಟು ಏಕೆ, ರಾಕ್ಷಸನನ್ನೂ ನಾನು ನಿರ್ವ್ಯಾಜವಾಗಿ ಪ್ರೀತಿಸಬಲ್ಲೆ. ನನ್ನ ತಂದೆಯವರು ಇದ್ದದ್ದೂ ಹಾಗೆಯೇ ಎನ್ನುವ ಕೈಲಾಶ್ ಅದೇ ಹೊತ್ತಿಗೆ ಎಲ್ಲ ಕಶ್ಮೀರಿ ಪಂಡಿತರ ಪರವಾಗಿ ಮಾತನಾಡುತ್ತಿದ್ದಾರೆ ಎನಿಸುತ್ತದೆ.
ಹಳ್ಳಿಯ ನೆಮ್ಮದಿಯ ಬದುಕು ನಮ್ಮದಾಗಿದ್ದಾಗಲೇ ಭಾರತದ ವಿಭಜನೆಯಾಗಿ ಪಾಕಿಸ್ತಾನದಿಂದ ಮುಸ್ಲಿಂ ಪಠಾಣರ ದಂಡೊಂದು ಬಂದು ಬಾರಾಮುಲ್ಲಾದಲ್ಲಿ ಹತ್ಯಾಕಾಂಡ ನಡೆಸುತ್ತಿರುವ ಸುದ್ದಿ ತಿಳಿದುಬಂತು. ಅವರು ಬೇಗ ಶ್ರೀನಗರವನ್ನು ತಲಪಿ ಅದನ್ನೂ ತಮ್ಮ ವಶಕ್ಕೆ ತೆಗೆದುಕೊಳ್ಳುವ ಹುನ್ನಾರದಲ್ಲಿದ್ದು, ದಾರಿಯಲ್ಲಿ ಸಿಗುವ ಎಲ್ಲ ಊರು-ಕೇರಿಗಳನ್ನು ಕೊಳ್ಳೆಹೊಡೆಯುತ್ತಿರು ಸುದ್ದಿಗಳೂ ಬಂದವು. ಪಾಕಿಸ್ತಾನದ ಗಡಿಯ ಹತ್ತಿರವಿದ್ದ ಬಾರಾಮುಲ್ಲಾದಲ್ಲಿ ನಡೆದ ಅನಾಚಾರಗಳ ಬಿಸಿ ನಮ್ಮನ್ನು ನೇರವಾಗಿ ತಟ್ಟಿರಲಿಲ್ಲ. ಆದರೆ ವಲಸೆ ಬಂದಿದ್ದ ಕೆಲವರು ಹೇಳುತ್ತಿದ್ದ ಮಾತುಗಳನ್ನು ಕೇಳಿ ನಮ್ಮ ಹಳ್ಳಿಯವರೆಲ್ಲರೂ ಬೆಚ್ಚಿದ್ದರು ಎಂಬುದು ಕಾಶ್ಮೀರದ ಸಮಸ್ಯೆಯ ಒಂದು ಹಂತ. ಮುಂದೆ ೧೯೮೦ರ ದಶಕದ ಹೊತ್ತಿಗೆ ಜಮಾತೆ – ಇಸ್ಲಾಮಿ ಮೌಲ್ವಿಗಳು ದೊಡ್ಡ ಸಂಖ್ಯೆಯಲ್ಲಿ ಕಾಶ್ಮೀರಕ್ಕೆ ಬಂದ ಮೇಲೆ ಪರಿಸ್ಥಿತಿಯಲ್ಲಿ ಶೀಘ್ರ ಬದಲಾವಣೆಗಳು ಕಾಣತೊಡಗಿದವು.
ಲೇಖಕಿ ಸಹನಾ ವಿಜಯಕುಮಾರ್ ಪುಸ್ತಕದ ತಮ್ಮ ಅರಿಕೆಯಲ್ಲಿ ಹೀಗೆ ಹೇಳುತ್ತಾರೆ: ಎಂಬತ್ತರ ದಶಕ ಜಾಗತಿಕವಾಗಿ ಇಸ್ಲಾಮಿನ ಧಾರ್ಮಿಕ ಮರುಹುಟ್ಟಿಗೆ ಕಾರಣವಾಯಿತು. ಅಗಾಧ ಪ್ರಮಾಣದ ತೈಲನಿಕ್ಷೇಪವಿದ್ದ ಮುಸ್ಲಿಂ ಬಾಹುಳ್ಯದ ಮಧ್ಯಪ್ರಾಚ್ಯ ದೇಶಗಳಲ್ಲಿ ತೈಲದ ಬೆಲೆ ಹಲವುಪಟ್ಟು ಏರಿಕೆ ಕಂಡು ಆ ದೇಶಗಳು ಬಿಲಿಯಗಟ್ಟಲೆ ಪೆಟ್ರೋಡಾಲರ್ಗಳನ್ನು ರಾತ್ರೋರಾತ್ರಿ ಗಳಿಸತೊಡಗಿದರೆ ದಶಕದ ಉತ್ತರಾರ್ಧದಲ್ಲಿ ಆ ಹಣದ ಬಹುಪಾಲು ತಮ್ಮ ದೇಶದೊಳಗಿನ ಸೆಕ್ಯುಲರಿಸಂನ ಹುಟ್ಟಡಗಿಸಲು ಮತ್ತು ಇತರ ರಾಷ್ಟ್ರಗಳನ್ನು ಇಸ್ಲಾಮೀಕರಿಸಲು ವ್ಯಯವಾಗತೊಡಗಿತು. ಈ ಪ್ರಕ್ರಿಯೆಯಲ್ಲಿ ಸೌದಿ ಅರೇಬಿಯಾ ಮತ್ತು ಲಿಬಿಯಾಗಳು ಪ್ರಮುಖ ಪಾತ್ರವಹಿಸಿದವು. ಹದಿನೈದು ವರ್ಷ ದೇಶಭ್ರಷ್ಟನಾಗಿದ್ದುಕೊಂಡೇ ಇರಾನಿನ ತುಂಬೆಲ್ಲ ಮೂಲಭೂತವಾದದ ಕಿಡಿ ಹೊತ್ತಿಸಿದ ಅಯಾತೊಲ್ಲಾ ಖೊಮೇನಿಗೆ ದೊರೆತ ಜಯವನ್ನು ಮಧ್ಯಪ್ರಾಚ್ಯದ ಪ್ರತಿಯೊಂದು ದೇಶವೂ ಮಾದರಿಯಾಗಿ ಪರಿಗಣಿಸಿದವು. ಆಗ ಹುಟ್ಟಿಕೊಂಡ ಇಸ್ಲಾಮೀಕರಣದ ಪ್ರಬಲವಾದ ಅಲೆ ಉತ್ತರ ಆಫ್ರಿಕದ ದೇಶಗಳಲ್ಲಿ ಮಾತ್ರವಲ್ಲದೆ ಇರಾಕ್, ಆಫಘನಿಸ್ತಾನ, ಇಂಡೋನೇಷ್ಯಾ, ಮಲೇಷ್ಯಾ ಮುಂತಾದ ಹಲವು ದೇಶಗಳಿಗೆ ಪ್ರವಹಿಸಿ ಬಂದಿತಾದರೂ, ನಮ್ಮ ನೆರೆಯ ಬಂಗ್ಲಾದೇಶ ಮತ್ತು ಪಾಕಿಸ್ತಾನಗಳಿಗೆ ಅದು ಅಪ್ಪಳಿಸಿದ ರಭಸಕ್ಕೆ ಭಾರತವೂ ತತ್ತರಿಸಿದ್ದು ಬಹುಮಂದಿಯ ಗಮನಕ್ಕೆ ಬರಲಿಲ್ಲ. ೧೯೭೭ರಲ್ಲಿ ತನ್ನ ಸಂವಿಧಾನದಿಂದ ಸೆಕ್ಯುಲರಿಸಂ ಅನ್ನು ತೆಗೆದುಹಾಕಿದ ಬಂಗ್ಲಾದೇಶ ಇಸ್ಲಾಮೀಕರಣಕ್ಕೆ ಸಿದ್ಧವಾಗಿ ಸ್ವಸಂತೋಷದಿಂದ ಸೌದಿಯ ತೆಕ್ಕೆಗೆ ಬಿತ್ತು. ಮೊದಲಿನಿಂದಲೂ ಸ್ವಾತಂತ್ರ್ಯವಾದಿ ಹಾಗೂ ಮೂಲಭೂತವಾದಿಗಳ ನಡುವಣ ಸ್ಪರ್ಧೆಯ ಅಂಗವಾಗಿದ್ದ ಪಾಕಿಸ್ತಾನ ಕೊನೆಗೆ ಮೂಲಭೂತವಾದಿಗಳ ಹಿಡಿತಕ್ಕೆ ಸಿಲುಕಿ ಸೌದಿಯಿಂದ ಧಾರಾಳವಾಗಿ ಹಣದ ಸಹಾಯ ಪಡೆಯಿತು; ಮರುಕ್ಷಣದಿಂದಲೇ ಭಾರತವನ್ನು ತನ್ನ ಕೈಲಾದಮಟ್ಟಿಗೆ ಇಸ್ಲಾಮೀಕರಿಸುವ ಉದ್ದೇಶಪೂರ್ತಿಗಾಗಿ ಶ್ರಮಿಸತೊಡಗಿತು. ಕಶ್ಮೀರದ ಸಮಸ್ಯೆಯನ್ನು ನಾವು ನೋಡಬೇಕಾದದ್ದು ಈ ಹಿನ್ನೆಲೆಯಲ್ಲಿ.
ಪೆಟ್ರೋಡಾಲರ್ ದಾಳಿ
ಅಂದರೆ ಪೆಟ್ರೋಡಾಲರ್ಗಳ ದಾಳಿ ಕಾಶ್ಮೀರದ ಮೇಲೂ ನಡೆಯಿತು. ಮೌಲ್ವಿಗಳು ಕಾಶ್ಮೀರಕ್ಕೆ ತಂಡೋಪತಂಡವಾಗಿ ಬರುತ್ತಲೇ ಅಲ್ಲಿಯ ವಾತಾವರಣ ಬದಲಾಯಿತು; ಮುಸ್ಲಿಂ ಯುವಕರ ವರ್ತನೆಯಲ್ಲಿ ಬದಲಾವಣೆ ಕಾಣಿಸಿತು. ಮುಸ್ಲಿಮರೇ ಒಂದು, ಹಿಂದುಗಳೇ ಒಂದು ಎಂಬ ವಾತಾವರಣ ಕಾಣಿಸತೊಡಗಿತು. ಹಿಂದುಗಳ ಮನೆಗಳ ಮೇಲೆ ಕಲ್ಲುಗಳು ಬೀಳಲಾರಂಭಿಸಿದವು. ಹಿಂದುಗಳು ಮನೆಬಿಟ್ಟು ಹೋಗುವ ಮಾತನಾಡುವ ಪರಿಸ್ಥಿತಿ ಬಂತು. ೧೯೮೬ರ ಫೆಬ್ರುವರಿಯಲ್ಲಿ ಕಾಶ್ಮೀರದ ಸರ್ಕಾರ ಬಿತ್ತು. ಅದೇ ನೆಪವಾಗಿ ಶ್ರೀನಗರದಲ್ಲಿ ಗಲಭೆ ನಡೆದು ಹಿಂದುಗಳ ಮನೆಗಳನ್ನು ಲೂಟಿ ಮಾಡಲಾಯಿತು. ನಗರದಲ್ಲಿ ಝೀಲಂ ನದಿಗೆ ಏಳೆಂಟು ಕಡೆ ಸೇತುವೆ ಇದ್ದು, ಕದಲ್ ಎನ್ನುವ ಆ ಪ್ರದೇಶಗಳಲ್ಲಿ ಹಿಂದುಗಳ ಬಹಳ? ಮನೆಗಳಿದ್ದವು. ಕೈಲಾಶ್ ಅವರ ಮನೆಗೆ ಪ್ರತಿದಿನ ಕಲ್ಲು ಬೀಳುತ್ತಿದ್ದವು. ಎಸೆಯುತ್ತಿದ್ದವ ಬೇರಾರೂ ಅಲ್ಲ; ನೆರೆಮನೆಯ ಬಶೀರ್ ಅಹಮದರ ಮಗ, ಇವರ ಒಂದು ಕಾಲದ ವಿದ್ಯಾರ್ಥಿ ಅಸಿಫ್. ಹಿಂದುಗಳು ಪ್ರತಿಭಟನೆ ನಡೆಸಿದರೆ ಕಲ್ಲುಬೀಳುವುದು ಜಾಸ್ತಿ ಆಗುತ್ತಿತ್ತು. ಹೆಣ್ಣುಮಕ್ಕಳು ಎಚ್ಚರದಿಂದ ಇರಬೇಕಾದ ಪರಿಸ್ಥಿತಿ ಬಂತು. ಮುಸ್ಲಿಂ ಹೆಂಗಸರಿಗೆ ಇಸ್ಲಾಮೀ ಉಡುಪು ಬಂದರೆ ಗುರುತಿಸಲು ಅನುಕೂಲವಾಗಲೆಂದು ಹಿಂದೂ ಹೆಂಗಸರು ತಿಲಕ ಇಡಬೇಕೆಂದು ಮುಸ್ಲಿಂ ಉಗ್ರವಾದಿಗಳಿಂದ ಸೂಚನೆ ಬಂದಿತ್ತು. ಆ ಹೊತ್ತಿಗೆ ಪಾಕಿಸ್ತಾನದಲ್ಲಿ ಸಶಸ್ತ್ರ ತರಬೇತಿ ಪಡೆದ ಉಗ್ರರೂ ಬಂದರು. ಪರಿಸ್ಥಿತಿ ಕೈಮೀರುತ್ತಿರುವ ಅರಿವು ಎಲ್ಲರಿಗೂ ಆಯಿತು. ೩೦೦ ವರ್ಷಕ್ಕೂ ಹಳೆಯ ಒಂದು ದೇವಸ್ಥಾನ ಸೇರಿದಂತೆ ನೂರಾರು ದೇವಸ್ಥಾನಗಳು ಸುಟ್ಟು ಭಸ್ಮವಾದವು. ಹತ್ತಾರು ಉಗ್ರಗಾಮಿ ಸಂಘಟನೆಗಳು ಅಸ್ತಿತ್ವಕ್ಕೆ ಬಂದವು. ಪಂಡಿತರ ನಾಯಕ ಟೀಕಾಲಾಲ್ ಟಿಪ್ಲೂ, ನ್ಯಾಯಮೂರ್ತಿ ಎಲ್.ಕೆ. ಗಂಜೂ ಅವರ ಹತ್ಯೆಗಳಾದವು. ನಮ್ಮೊಳಗೊಂದಾಗಿ; ಈ ಜಾಗ ಬಿಟ್ಟು ಹೋಗಿ ಅಥವಾ ಸಾಯಲು ಸಿದ್ಧರಾಗಿ ಎನ್ನುವ ಮಾತು ರಾಜಕೀಯ ಪಕ್ಷದವರಿಂದಲೇ ಬಂತು. ಇಲ್ಲೇನು ನಡೆಯುತ್ತೆ? ಇಸ್ಲಾಮೀ ಆಡಳಿತ ಎನ್ನುವ ಘೋಷಣೆ ಕೂಗುವುದು, ಹಿಂದುಗಳ ಮನೆಗಳಿಗೆ ಕಲ್ಲೆಸೆಯುತ್ತಾ ಮೆರವಣಿಗೆ ನಡೆಸುವುದು ಮಾಮೂಲಾಗಿತ್ತು. ಇಲ್ಲಿಂದ ಹೋಗಿ ಜೀವ ಉಳಿಸಿಕೊಳ್ಳಿ ಎಂದು ಮುಸ್ಲಿಮರು ಆತ್ಮೀಯ ಸಲಹೆ ನೀಡುತ್ತಿದ್ದರು: ಕೇಂದ್ರ, ರಾಜ್ಯ ಸರ್ಕಾರಗಳು ಪೂರ್ತಿ ನಿಷ್ಕ್ರಿಯವಾಗಿದ್ದವು.
ರಾತ್ರಿಯ ಮೆರವಣಿಗೆ
ಜನವರಿ ೧೯, ೧೯೯೦ರ ಮೆರವಣಿಗೆಯಂತೂ ತುಂಬ ಉಗ್ರವಾಗಿತ್ತು. ದಶಕಗಳಿಂದ ನಡೆದುಬಂದಿದ್ದ ಆಜಾದಿ (ಪ್ರತ್ಯೇಕತಾವಾದ) ಲಡಾಯಿಯ ಸ್ಥಾನದಲ್ಲೀಗ ಇಸ್ಲಾಂನ ಉಗ್ರವಾದ ನೇರವಾಗಿ ಬಂದು ಕುಳಿತಿತ್ತು. ಸ್ವಾತಂತ್ರ್ಯವೆಂದರೆ ಏನರ್ಥ? ಅಲ್ಲಾ ಬಿಟ್ಟರೆ ಬೇರೆ ದೇವರಿಲ್ಲ. ಪಾಕಿಸ್ತಾನದೊಂದಿಗೆ ನಮ್ಮ ಸಂಬಂಧವೇನು? ಅಲ್ಲಾ ಬಿಟ್ಟರೆ ಬೇರೆ ದೇವರಿಲ್ಲ ಎಂಬಂತಹ ಘೋ?ಣೆಗಳು ಅದನ್ನು ಸ್ಪ?ವಾಗಿಯೇ ಹೇಳಿದವು. ಕಶ್ಮೀರದಲ್ಲಿ ಇರಬೇಕಾದರೆ ಅಲ್ಲಾಹು ಅಕ್ಬರ್ ಅನ್ನಲೇಬೇಕು ಅಂದದ್ದೂ ಆಯಿತು. ಆಗ ಮಸೀದಿಗಳಿಂದ ಬಂದ ಒಂದು ಕೂಗು ಹೀಗೆ ಇತ್ತಂತೆ: ನಮಗಿಲ್ಲಿ ಹಿಂದೂ ಹೆಂಗಸರು ಮಾತ್ರ ಇರುವ, ಹಿಂದೂ ಗಂಡಸರು ಇರದ ಪಾಕಿಸ್ತಾನ ಬೇಕು ಎಂಬುದಾಗಿ. ಮೆರವಣಿಗೆಗಳು ಮನೆಯ ಸಮೀಪ ಬರುತ್ತಿದ್ದಾಗ ಹಿಂದೂ ಹೆಂಗಸರು ಮಗಳಿದ್ದರೆ ಅವಳನ್ನೂ ಕೊಂದು ತಾವು ಆತ್ಮಾಹುತಿಗೆ ಸಿದ್ಧರಾಗಿ ಇರುತ್ತಿದ್ದರಂತೆ. ಎದ್ದೇಳಿ ಮುಸ್ಲಿಮರೇ, ಓಡಿಹೋಗಿ ಕಾಫಿರರೇ. ಇನ್ನೇನು ಜಿಹಾದ್ ಬರಲಿದೆ ಎಂದು ಬರೆದ ಚೀಟಿಗಳು ಕೆಲವು ಹಿಂದೂ ಮನೆಗಳ ಮೇಲೆ ಪ್ರತ್ಯಕ್ಷವಾದವು.
ಇಷ್ಟಾದರೂ ಸರ್ಕಾರದಿಂದ ರಕ್ಷಣೆ ಸಿಗಲಿಲ್ಲ (೧೯೯೦). ಕಾಶ್ಮೀರದಲ್ಲಿ ಕಾಂಗ್ರೆಸ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ಗಳ ಸಮ್ಮಿಶ್ರ ಸರ್ಕಾರವಿತ್ತು. ಹಳ್ಳಿ- ಪಟ್ಟಣವೆನ್ನದೆ ಕಾಶ್ಮೀರದಿಂದ ಹಿಂದುಗಳ ವಲಸೆ ದೊಡ್ಡ ಪ್ರಮಾಣದಲ್ಲೇ ಆರಂಭವಾಯಿತು; ಅಷ್ಟೇ ಸಣ್ಣ ರಾಜ್ಯದಿಂದ ನಾಲ್ಕುಲಕ್ಷ ಜನ ಎಂದರೆ ಸಣ್ಣದಲ್ಲ; ಸುಮಾರು ೨೦ ಸಾವಿರ ಜನರ ಕೊಲೆ ನಡೆಯಿತೆಂದು ಅಂದಾಜು. ಅವರನ್ನು ಕೇಳುವವರೇ ಇಲ್ಲವಾಯಿತು. ಮನೆಯ ಸಾಮಾನು ಸಹಿತ ಹೊರಟ ಕುಟುಂಬಗಳ ಮೇಲೆ ದಾಳಿ ನಡೆದ ಕಾರಣ ಅಲ್ಲಿಂದ ಬರಿಗೈಯಲ್ಲಿ ಹೋದರು. ಸಾಮಾನು ಸಹಿತ ಹೋಗಿದ್ದರೆ ಜಮ್ಮು ಮುಂತಾದ ಕಡೆ ಒದಗಿಸಿದ ಟೆಂಟುಗಳಲ್ಲಿ ಇಡುವುದಕ್ಕೆ ಜಾಗವಾದರೂ ಎಲ್ಲಿತ್ತು?
ಒಬ್ಬರೇ ಉಳಿದರು!
ಆಗಲೇ ಕೈಲಾಶ್ ಪಂಡಿತರ ಕುಟುಂಬದ ದುರಂತ ಸಂಭವಿಸಿತು. ಮನೆಬಿಟ್ಟು ಹೋಗಲು ಗಾಡಿ ತರಲು ಹೋದ ಮಗ ಸತೀಶ್ ಬರಲೇ ಇಲ್ಲ. ಬಂದದ್ದು ಶವ; ನೆರೆಮನೆಯ ಆಸಿಫ್ ವ್ಯಾನಿನಲ್ಲಿ ತಂದು ಬಿಸಾಡಿ ಹೋದದ್ದು. ಪಂಡಿತರ ಮಗಳು ಸವಿತಾಳನ್ನು ಅವನೇ ಬಲಾತ್ಕಾರವಾಗಿ ಕೊಂಡೊಯ್ದ; ಅವಳ ಅತ್ಯಾಚಾರ, ಕೊಲೆ ನಡೆಯಿತು; ಕೈಲಾಶ್ರ ಪತ್ನಿ ಈ ಆಘಾತದಿಂದ
ಸ್ಥಳದಲ್ಲೇ ಸತ್ತರು. ಪಂಡಿತರ ಜೀವ ಉಳಿಯಿತು; ಮಾತು ಹೋಯಿತು. ಇಂತಹ ಚಿತ್ರಣದಲ್ಲಿ ಲೇಖಕಿ ಅಪಾರವಾದ ಯಶಸ್ಸನ್ನು ಕಂಡಿದ್ದಾರೆ. ಸಮರ್ಥವಾದ ಕ್ಷೇತ್ರಕಾರ್ಯ ನಡೆಸದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ.
ಪುಸ್ತಕದ ಮುನ್ನುಡಿಯಲ್ಲಿ ಡಾ| ಎಸ್.ಎಲ್. ಭೈರಪ್ಪ ಅವರು ಆ ಕುರಿತು ಅಪಾರ ಮೆಚ್ಚುಗೆಯೊಂದಿಗೆ ಹೀಗೆ ಹೇಳಿದ್ದಾರೆ: ಈ ಕಾದಂಬರಿಯನ್ನು ಬರೆಯಲು ಪ್ರವಾಸಿತಾಣಗಳನ್ನು ಮಾತ್ರ ನೋಡಿದರೆ ಏನೇನೂ ಸಾಲುವುದಿಲ್ಲ. ಭಯಂಕರ ಜೀವಾಪಾಯದ ಪ್ರದೇಶಗಳಲ್ಲಿ ಸಂದಿಗೊಂದಿಗಳಲ್ಲಿ ಅಲೆಯಬೇಕು. ಗಂಡಸರಿಗೇ ಜೀವಾಪಾಯ. ಹೆಂಗಸರಿಗೆ ಅದಕ್ಕಿಂತ ಹೆಚ್ಚಿನ ಅಪಾಯ. ಇಂಥ ಪರಿಸ್ಥಿತಿಯಲ್ಲಿ ಈ ಲೇಖಕಿಯು ಅಂಜದೆ ಘರ್ವಾಪಸಿ ಮಾಡಿ ಘೆಟ್ಟೋದಲ್ಲಿ ವಾಸಿಸುತ್ತಿರುವ ಕೆಲವೇ ಕೆಲವು ಕಶ್ಮೀರಿ ಹಿಂದೂಗಳನ್ನು ಸಂಪರ್ಕಿಸಿ, ಅವರ ಸಹಾಯ ಪಡೆದು ಅಲ್ಲಿ ಭಯದ ಮೂಲಕ ನಡೆದ ಸಹಸ್ರ ಸಹಸ್ರ ಸಂಖ್ಯೆಯ ಧರ್ಮಾಂತರ (ಮತಾಂತರ), ಅತ್ಯಾಚಾರ, ಕೊಲೆ, ರಕ್ತಪಾತದ ಸ್ಥಳಗಳನ್ನೆಲ್ಲ ನೋಡಿದ್ದಾರೆ. ಇಂದಿಗೂ ಭಯದಿಂದ ಕಂಗಾಲಾಗಿ ಜೀವವನ್ನು ಕೈಲಿ ಹಿಡಿದು ಬದುಕುತ್ತಿರುವ ಹಿಂದೂ ವೃದ್ಧರು, ಮಹಿಳೆಯರು, ತರುಣತರುಣಿಯರನ್ನು ಸಂದರ್ಶಿಸಿದ್ದಾರೆ.
ತಪ್ಪಿದ ಅಪಾಯ
ಕಳೆದ ಆಗಸ್ಟ್ ೫ರಂದು ಬೆಂಗಳೂರಿನಲ್ಲಿ ನಡೆದ ಕಾಶ್ಮೀರದ ಭೂತ-ವರ್ತಮಾನಗಳ ಅವಲೋಕನ ಎನ್ನುವ ಕಾರ್ಯಕ್ರಮದಲ್ಲಿ ಮಾತನಾಡಿದ ಸಹನಾ ವಿಜಯಕುಮಾರ್ ಅವರು ನನ್ನ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ವಿ?ಯಕ್ಕೂ ಆಧಾರವಿದೆ.
ಕಾಶ್ಮೀರದ ಮುಸ್ಲಿಮರ ನಡುವೆಯೇ ಇದ್ದು ಅವರ ವಿಚಾರಗಳನ್ನು ತಿಳಿದುಕೊಳ್ಳಬೇಕೆಂದು ಅಲ್ಲಿಯ ಹೊಟೇಲೊಂದರಲ್ಲಿ ತಂಗಿದ್ದೆ. ಅದರ ವ್ಯವಸ್ಥಾಪಕ ಬೆಳಗಿನ ಜಾವ ೨ ಗಂಟೆವರೆಗೂ ನನ್ನೊಂದಿಗೆ ಮಾತನಾಡುತ್ತಿದ್ದರು. ಅವರದ್ದು ಒಂದೇ ವಾದ -ಕಾಶ್ಮೀರ ಸ್ವತಂತ್ರವಾಗಬೇಕು. ಹಾಗಾದರೆ ನೀವು ಪಾಕಿಸ್ತಾನವನ್ನು ಏಕೆ ಬೆಂಬಲಿಸುತ್ತೀರಾ? ಎಂದು ಕೇಳಿದ್ದಕ್ಕೆ ನಾವೆಲ್ಲ ಮುಸ್ಲಿಮರು ಎಂಬ ಕಾರಣಕ್ಕೆ ಎಂದು ಹೇಳಿದರು. ಮೊದಲು ತಾಳ್ಮೆಯಿಂದ ಮಾತನಾಡುತ್ತಿದ್ದ ನಾನು ಕ್ರಮೇಣ ಸಹನೆ ಕಳೆದುಕೊಂಡೆ.
ನಮ್ಮ ನಡುವೆ ಜಗಳವಾಯಿತು. ಸಿಟ್ಟಿನಿಂದ ಕೊಠಡಿಯ ಬಾಗಿಲನ್ನು ಜೋರಾಗಿ ಎಳೆದುಕೊಂಡು ಹೋದ ಆತನ ರೀತಿಯನ್ನು ನೋಡಿ ಭಯವಾಯಿತು ಎಂದಿದ್ದಾರೆ. ಮುಂದುವರಿದು, ಅಲ್ಲಿಂದ ಬಂದ ಆನಂತರವೇ ತಿಳಿದದ್ದು – ಹಿಂದೆ ಹೀಗೆ ಒಬ್ಬರು ಜಗಳವಾಡಿದ್ದಕ್ಕೆ ಹೊಟೇಲ್ ಕೊಠಡಿಗೆ ಬೆಂಕಿ ಹಚ್ಚಿದ್ದರಂತೆ. ಈ ರೀತಿಯ ಹಲವು ಅಪಾಯಗಳಿಂದ ಸ್ವಲ್ಪದರಲ್ಲೇ ಬಚಾವಾಗಿ ಬಂದಿದ್ದೇನೆ ಎಂದೂ ಸಹನಾ ತಿಳಿಸಿದ್ದಾರೆ. ಮುಖ್ಯಪಾತ್ರವಾದ ನರೇಂದ್ರ ಯಾರ ಬಳಿಯೆಲ್ಲ ಮಾತನಾಡಿದ್ದಾರೆ – ಅಲ್ಲೆಲ್ಲ ಸಹನಾ ಅವರನ್ನು ಇರಿಸಿ ನೋಡಬಹುದು ಎನಿಸುತ್ತದೆ.
ಕಶ್ಮೀರಿ ಪಂಡಿತರಿಗೆ ಘೋರ ಅನ್ಯಾಯವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲನೆಯದಾಗಿ, ಅವರ ಮೇಲೆ ನಾನಾಬಗೆಯ ಕಿರುಕುಳ, ಒತ್ತಡ, ಹಿಂಸೆ, ದೌರ್ಜನ್ಯಗಳು ನಡೆಯುತ್ತಿದ್ದರೂ ಯಾರೂ ಅವರ ನೆರವಿಗೆ ಧಾವಿಸಿ ಬರಲಿಲ್ಲ.
ರಾಜ್ಯಸರ್ಕಾರ ತನ್ನ ಕರ್ತವ್ಯದಲ್ಲಿ ತಪ್ಪಿದ್ದರೂ ಕೇಂದ್ರಸರ್ಕಾರವಾದರೂ ಬರಬೇಕಿತ್ತಲ್ಲವೆ? ಪಂಡಿತರು ಈ ದೇಶದ ಪ್ರಜೆಗಳಲ್ಲವೆ? ಅದಕ್ಕಿಂತ ಹೆಚ್ಚಾಗಿ ಮನು?ರೂ ಅಲ್ಲವೆ? ಅವರ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಯಾವ ತನಿಖೆ ನಡೆದಿದೆ? ಯಾರಿಗೆ ಶಿಕ್ಷೆಯಾಗಿದೆ? ಒಂದು ಬಾಬರಿ ಮಸೀದಿಯ ಬಗ್ಗೆ ಕೇಳುವವರು ಎಷ್ಟು ಜನ! ಕಾಶ್ಮೀರದಲ್ಲಿ ಉರುಳಿಸಲಾದ ೩೦೦ ದೇವಾಲಯಗಳಿಗೆ ಯಾವ ಬೆಲೆಯೂ ಇಲ್ಲವೆ? ಪಾಕಿಸ್ತಾನ ಮತ್ತು ಬಂಗ್ಲಾದೇಶಗಳಲ್ಲಿ ದೇವಾಲಯಗಳನ್ನು ನೆಲಸಮ ಮಾಡುವ ಕಾರ್ಯ ಈಗಲೂ ನಡೆಯುತ್ತಿದೆ ಅಲ್ಲವೆ?
ಟೆಂಟಿನಲ್ಲಿ ವಾಸ
ಮನೆ-ಮಠ ತೊರೆದು ಜೀವ ಉಳಿಸಿಕೊಳ್ಳಲು ಜಮ್ಮುವಿಗೆ ಹೋದ ಪಂಡಿತರಿಗೆ ಅಲ್ಲೂ ಅವಮಾನ ಕಾದಿತ್ತು. ಅಲ್ಲಿ ಜನರನ್ನು ವಲಸಿಗರೆಂದು ಗುರುತಿಸಲಾಯಿತು. ಮೇಲೆ ಹೇಳಿದ ಸಭೆಯಲ್ಲಿ ಮಾತನಾಡಿದ ಕಾಶ್ಮೀರ ಪಂಡಿತ ದಿಲೀಪ್ ಕಚ್ರೂ ಅವರು ಕಾಶ್ಮೀರಿ ಪಂಡಿತರು ಯಾವುದೇ ರಾಜ್ಯಕ್ಕೆ ಹೋದರೂ ಅವರನ್ನು ವಲಸಿಗರು ಎಂದೇ ಗುರುತಿಸಲಾಗುತ್ತಿದೆ. ಆದರೆ ದೇಶದ ಬೇರೆ ರಾಜ್ಯದವರನ್ನು ಹಾಗೆ ಮಾಡುವುದಿಲ್ಲ ಎಂದು ಆಕ್ಷೇಪಿಸಿದರು. ಹಾಗೆ ಸ್ಥಳಾಂತರಗೊಂಡ ಎಲ್ಲರನ್ನು ಕಶ್ಮೀರಿ ಪಂಡಿತರೆಂದು ಕರೆಯುವುದಕ್ಕೆ ಕೂಡ ಭೈರಪ್ಪನವರ ವಿರೋಧವಿದೆ.
ಪ್ರಥಮ ಪ್ರಧಾನಿ ನೆಹರು ಒಂದೆಡೆ, ಹಿಂದುಗಳು ನಿಮ್ಮನ್ನೂ ತುಳಿಯುತ್ತಾರೆ; ನಾನು ಮತ್ತು ನನ್ನ ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ನಿಮ್ಮ ಕ್ಷೇಮ ಎಂದು ಮುಸ್ಲಿಮರಿಗೆ ಹೇಳಿದರೆ ಇನ್ನೊಂದೆಡೆ ಮೇಲುಜಾತಿಯವರು ನಿಮ್ಮನ್ನು ಸಹಸ್ರಾರು ವರ್ಷಗಳಿಂದ ತುಳಿಯುತ್ತಿದ್ದಾರೆ ಎಂದು ಉಳಿದ ಜಾತಿಯವರಲ್ಲಿ ಹೇಳಿ ಅವರ ವೋಟುಗಳನ್ನೂ ಖಾತ್ರಿಮಾಡಿಕೊಂಡರು. ಇದರಿಂದ ಇವರಿಬ್ಬರಿಗೂ ಮೇಲುಜಾತಿಯ ಹಿಂದುಗಳೇ ಸಮಾನಶತ್ರುಗಳಾಗಿ ಕಾಣುವಂತಾಯಿತು. ಕಶ್ಮೀರದಲ್ಲಿ ಅತ್ಯಾಚಾರ, ದರೋಡೆ, ಕೊಲೆ ಮೊದಲಾದ ರಾಕ್ಷಸೀಕ್ರೌರ್ಯಕ್ಕೆ ಒಳಗಾಗಿ ಮನೆಮಠಗಳನ್ನು ತೊರೆದು ಜಮ್ಮುವಿಗೋ ಭಾರತದ ಇತರ ಭಾಗಗಳಿಗೋ ಓಡಿಬಂದವರನ್ನು ರಾಜ್ಯವಾಳುತ್ತಿದ್ದ ಪಕ್ಷ ಮಾತ್ರವಲ್ಲ; ವೃತ್ತಪತ್ರಿಕೆಗಳು ಕೂಡ ಕಶ್ಮೀರಿ ಪಂಡಿತರೆಂದು ಕರೆಯುತ್ತಿದ್ದರೇ ಹೊರತು ಕಶ್ಮೀರಿ ಹಿಂದೂಗಳೆಂದು ಹೆಸರಿಸುತ್ತಿರಲಿಲ್ಲ ಎಂದು ಆಕ್ಷೇಪಿಸುತ್ತಾರೆ.
ಆತ್ಮವಂಚನೆ ಮಾತು
೧೯೯೦ರಲ್ಲಿ ನಡೆದ ಕಶ್ಮೀರಿ ಹಿಂದೂಗಳ ಮಾರಣಹೋಮ ಹಾಗೂ ವಲಸೆಯ ಬಗೆಗಿನ ಪುಟಗಳನ್ನು ಒಂದೊಂದಾಗಿ ಹಿಂದೆ ಸರಿಸಿದರೆ ಅದು ನಮ್ಮನ್ನು ಕೊಂಡೊಯ್ಯುವುದು ಇಸ್ಲಾಮೀಕರಣ ಆರಂಭವಾದ ಚರಿತ್ರೆಯ ಪುಟಗಳಿಗೆ. ಹೀಗಿರುವಾಗ ನಾವು ಚರಿತ್ರೆಯನ್ನು ಮರೆತು ವರ್ತಮಾನದಲ್ಲಿ ಮಾತ್ರ ಜೀವಿಸಬೇಕು ಎಂಬರ್ಥದ ಮಾತುಗಳು ಯಾರ ಬಾಯಿಯಿಂದಲೇ ಬರಲಿ, ಅವು ಬೇಜವಾಬ್ದಾರಿಯುತ ಹಾಗೂ ಬಾಲಿಶ ಮಾತ್ರವಲ್ಲ, ಆತ್ಮವಂಚನೆಯಿಂದ ಹುಟ್ಟಿದವು ಎಂಬುದು ಲೇಖಕಿಯ ನಿಲವು. ಅದಕ್ಕನುಗುಣವಾಗಿ ಕಾಶ್ಮೀರ ಸಮಸ್ಯೆ ಇಂದಿನ ರೂಪವನ್ನು ಪಡೆದುಕೊಳ್ಳುವಲ್ಲಿ ಯಾರದೆಲ್ಲ ಹವಿರ್ಭಾಗವಿದೆ ಎಂಬುದನ್ನು ಸರಿಯಾಗಿ ಪತ್ತೆಹಚ್ಚಿ ಸವಿವರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
565 ರಾಜಸಂಸ್ಥಾನಗಳನ್ನು ಭಾರತದೊಂದಿಗೆ ವಿಲೀನಗೊಳಿಸಿದ ಕಾಂಗ್ರೆಸ್ ನಾಯಕರು, ಅದರಲ್ಲೂ ವಿಲೀನದ ಸಮಸ್ತ ಉಸ್ತುವಾರಿ ಹೊತ್ತಿದ್ದ ಸರ್ದಾರ್ ವಲ್ಲಭಭಾಯಿ ಪಟೇಲರು ಕಶ್ಮೀರದ ವಿ?ಯದಲ್ಲಿ ಮೃದುವಾಗಿದ್ದೇಕೆ? ಜುನಾಗಢದಲ್ಲಿ ಹೆಚ್ಚಿನ ಗಲಾಟೆಯಾಗದಿದ್ದರೂ ಹೈದರಾಬಾದಿನಲ್ಲಿ ರಜಾಕಾರರ ದಂಗೆ ಹತ್ತಿಕ್ಕಲು ಸೇನೆಯನ್ನೇ ಬಳಸಿಕೊಳ್ಳಬೇಕಾಯಿತಲ್ಲ. ಇಲ್ಲೂ ಅದೇ ಪೌರು?ದ ಅಗತ್ಯವಿದ್ದದ್ದು. ಒಂದು ದಿಕ್ಕಿಗೆ ಎಳೆಯುತ್ತಿದ್ದ ನೆಹರು ಹಾಗೂ ಶೇಖ್ ಅಬ್ದುಲ್ಲಾ ಜೋಡಿ; ಅವರಿಗೆ ವಿರೋಧ ಒಡ್ಡಲಾಗದೆ ಕೈಕಟ್ಟಿ ಕೂರಬೇಕಾಗಿದ್ದ ಸರ್ದಾರ್ ಪಟೇಲರು. ಅವರು ಕೈಕಟ್ಟಿ ಕೂತರು ಎನ್ನುವುದು ತಪ್ಪಾಗುತ್ತೆ. ಅವರು ಮನಸ್ಸು ಮಾಡಿದ್ದರಿಂದಲೇ ಭಾರತೀಯ ಸೇನೆ ಕಶ್ಮೀರಕ್ಕೆ ಬಂದಿಳಿದು ಇ?ನ್ನಾದರೂ ಉಳಿಸಿಕೊಂಡದ್ದು ಎಂದು ಕಾದಂಬರಿಯ ಸಂಜೀವ ಕೌಲ್ ಯೋಚಿಸುತ್ತಾರೆ.
ವಿಶ್ವಸಂಸ್ಥೆಗೆ ಒಯ್ದರು
ಕಾಶ್ಮೀರದ ವಿಚಾರವನ್ನು ನೆಹರು ವಿಶ್ವಸಂಸ್ಥೆಗೆ ಒಯ್ದದ್ದು ೧೯೪೮ರ ಜನವರಿ ೧ರಂದು. ವಿಶ್ವಸಂಸ್ಥೆ ಕೂಡಲೆ ಚುರುಕಾಗಿ ಮೂರು ಅಂಶಗಳ ಸೂಚನೆ ನೀಡಿತು. ಮೊದಲನೆಯದಾಗಿ ಭಾರತ, ಪಾಕಿಸ್ತಾನ ಎರಡೂ ದೇಶಗಳು ಕೂಡಲೆ ಕದನವಿರಾಮವನ್ನು ಜಾರಿಗೊಳಿಸಬೇಕು. ಎರಡನೆಯದಾಗಿ ಪಾಕಿಸ್ತಾನ ಕಾಶ್ಮೀರದಲ್ಲಿರುವ ತನ್ನ ಎಲ್ಲ ಸೇನೆಯನ್ನು ವಾಪಸು ಕರೆಸಿಕೊಳ್ಳಬೇಕು ಮತ್ತು ಭಾರತವು ಅಲ್ಲಿ ತನ್ನ ಸೇನೆಯನ್ನು ಕನಿಷ್ಠ ಪ್ರಮಾಣಕ್ಕೆ ಇಳಿಸಬೇಕು; ಇನ್ನು ಮೂರನೆಯದಾಗಿ ವಿಲೀನಕ್ಕೆ ಜನಮತಗಣನೆಯನ್ನು ನಡೆಸಬೇಕು. ಇದರ ಅನುಷ್ಠಾನದ ಬಗ್ಗೆ ಪಾಕಿಸ್ತಾನ ಮೀನಮೇ? ಎಣಿಸುತ್ತಿರುವಾಗಲೇ ನೆಹರು ಏಕಪಕ್ಷೀಯವಾಗಿ ಕದನವಿರಾಮವನ್ನು ಜಾರಿಗೊಳಿಸಿದರು. ಪರಿಣಾಮವಾಗಿ ಗೆಲ್ಲುವ ಹಂತದಲ್ಲಿದ್ದ ಭಾರತದ ಸೇನೆ ತಟಸ್ಥವಾಯಿತು; ಒಂದ? ಸ್ಥಳ ಪಾಕಿಸ್ತಾನದ ಕೈಯಲ್ಲಿ ಉಳಿದು ಪಾಕಿಸ್ತಾನ-ಆಕ್ರಮಿತ ಕಾಶ್ಮೀರ (ಪಿಓಕೆ) ತಯಾರಾಯಿತು. ಗಿಲ್ಗಿಟ್ ಮತ್ತು ಬಾಲ್ಟಿಸ್ಥಾನಗಳನ್ನು ಬ್ರಿಟಿಷರು ಮೊದಲೇ ಅಕ್ರಮ ವಿಧಾನದಿಂದ ಪಾಕಿಸ್ತಾನಕ್ಕೆ ನೀಡಿದ್ದರು. ಇದರೊಂದಿಗೆ ರಷ್ಯಾ ಮತ್ತು ಭಾರತಗಳ ನೇರ ಸಂಪರ್ಕ ಆಗಬಾರದೆನ್ನುವ ಬ್ರಿಟಿಷರ ಉದ್ದೇಶ ಈಡೇರಿತು. ಯಾರದೋ ದುಡ್ಡು, ಎಲ್ಲಮ್ಮನ ಜಾತ್ರೆ ಎಂಬಂತೆ ಪಾಕಿಸ್ತಾನ ಪಿಓಕೆಯ ಸ್ವಲ್ಪ ಭಾಗವನ್ನು ಚೀನಾಕ್ಕೆ ನೀಡಿತು. ಚೀನಾ ಅಲ್ಲಿಗೆ ಬಂದು ಕುಳಿತುಕೊಳ್ಳುವ ಮೂಲಕ ಭಾರತದ ಇಬ್ಬರು ಶತ್ರುಗಳು ಅಲ್ಲಿ ಒಂದಾದರು. ಪರಿಣಾಮ ಯಾವ ಮಟ್ಟಕ್ಕೆ ಬಂತೆಂಬುದನ್ನು ನಾವು ಈಗಲೂ ದಿನವೂ ನೋಡುತ್ತಿದ್ದೇವೆ. ಒಂದು ದೇಶಕ್ಕೆ ಎರಡು ಸಂವಿಧಾನ ಸಲ್ಲದೆಂದು ಭಾರತೀಯ ಜನಸಂಘದ ನಾಯಕ ಶ್ಯಾಮಪ್ರಸಾದ್ ಮುಖರ್ಜಿಯವರು ಹೋರಾಟ ನಡೆಸಿದರು. ಸ್ವತಃ ಕಾಶ್ಮೀರಕ್ಕೆ ಪ್ರವೇಶಿಸಿದ ಅವರು ಅಲ್ಲಿ ಬಂದಿಯಾಗಿ ಪೊಲೀಸರ ವಶದಲ್ಲಿದ್ದಾಗಲೇ ಅನುಮಾನಾಸ್ಪದವಾಗಿ ಸಾವನ್ನಪ್ಪಿದರು.
೩೭೦ನೇ ವಿಧಿ
೧೯೫೬ರಲ್ಲಿ ಜಮ್ಮು-ಕಾಶ್ಮೀರದ ಸಂವಿಧಾನವು ಅಸ್ತಿತ್ವಕ್ಕೆ ಬಂತು. ಆಗ ೩೭೦ನೇ ವಿಧಿ ರದ್ದಾಗಬೇಕಿತ್ತು. ಶೇಕ್ ಅಬ್ದುಲ್ಲಾ ಬಗೆಬಗೆಯ ತಕರಾರು ತೆಗೆಯುತ್ತಿದ್ದು, ಅದರ ಮುಂದೆ ನೆಹರು ಅಸಹಾಯರಾಗಿದ್ದರು. ಆ ಹಂತದಲ್ಲಿ ೩೭೦ನೇ ವಿಧಿಯಲ್ಲಿ ಕೆಲವು ಬದಲಾವಣೆಗಳನ್ನು ತರಲಾಯಿತು. ಭಾರತದ ಚುನಾವಣಾ ಆಯೋಗ ಅಲ್ಲಿಗೂ ಅನ್ವಯವಾಯಿತು.
ಅಲ್ಲಿಗೆ ಪ್ರತ್ಯೇಕ ಪ್ರಧಾನಿ ಇಲ್ಲ ಎಂದಾಯಿತು. ಆದರೆ ದೇಶದ ಶಾಸನಗಳನ್ನು ಕಾಶ್ಮೀರ ಸರ್ಕಾರ ಜಾರಿ ಮಾಡದೆ ಇರಬಹುದು. ಉದಾಹರಣೆಗೆ ದೇಶದಲ್ಲಿ ಜಾರಿಗೆ ಬಂದ ಭ್ರ?ಚಾರ ತಡೆ ಕಾಯ್ದೆಯನ್ನು ಕಾಶ್ಮೀರ ಜಾರಿಗೊಳಿಸಲಿಲ್ಲ (೧೯೮೮). ಭಾರತೀಯ ದಂಡಸಂಹಿತೆಯ (ಐಪಿಸಿ) ಬದಲು ಅಲ್ಲಿ ರಣವೀರ ದಂಡಸಂಹಿತೆಯನ್ನು ಅಂಗೀಕರಿಸಿದರು. ೧೯೫೪ರಲ್ಲಿ ಜಾರಿಗೆ ತಂದ ಸಂವಿಧಾನದ ವಿಧಿ ೩೬ಎ ಅಂತೂ ಅನರ್ಥಗಳ ಪರಂಪರೆಯನ್ನೇ ಸೃಷ್ಟಿಸುತ್ತಿದೆ.
ದೇಶದ ಇತರ ಭಾಗದವರು ಕಾಶ್ಮೀರದಲ್ಲಿ ಜಾಗ ಖರೀದಿಸುವಂತಿಲ್ಲ. ಕಾಶ್ಮೀರದ ಒಬ್ಬಾಕೆ ಇತರ ರಾಜ್ಯದ ವ್ಯಕ್ತಿಯನ್ನು ಮದುವೆಯಾದರೆ ಆಕೆಯ ಮಕ್ಕಳಿಗೂ ಕಾಶ್ಮೀರದ ಆಸ್ತಿಯಲ್ಲಿ ಪಾಲು ಸಿಗುವುದಿಲ್ಲ. ಜಾಗಕ್ಕೆ ಸಂಬಂಧಿಸಿದ ಈ ಸಮಸ್ಯೆಯಿಂದಾಗಿ ಕಾಶ್ಮೀರದಲ್ಲಿ ಉದ್ಯಮಗಳು ಸ್ಥಾಪನೆಯಾಗುತ್ತಿಲ್ಲ; ಉದ್ಯೋಗಗಳು ಸೃಷ್ಟಿಯಾಗುತ್ತಿಲ್ಲ. ಅದರಿಂದಾಗಿ ಈಗ ಯುವಜನರಿಗೆ ಕಲ್ಲೆಸೆಯುವುದೇ ಒಂದು ಉದ್ಯೋಗವಾಗಿದೆ. ಭಾರತ ನೀಡುವ ಹಣದಿಂದ ಬದುಕುತ್ತಾ ಪಾಕಿಸ್ತಾನದೊಂದಿಗೆ ಸೇರುವ ಕನಸು ಕಾಣುವುದು ಕಾಶ್ಮೀರದ ಅವಸ್ಥೆಯಾಗಿದೆ.
ನೆಹರು ಆಣತಿಯಂತೆ ಶೇಖ್ ಅಬ್ದುಲ್ಲಾರ ಜೊತೆ ಕುಳಿತು ಸಂವಿಧಾನದ ಕರಡನ್ನು ಸಿದ್ಧಪಡಿಸಿದ ಗೋಪಾಲಸ್ವಾಮಿ ಅಯ್ಯಂಗಾರರು ಆ ಬಗ್ಗೆ ಸರ್ದಾರ್ ಪಟೇಲರನ್ನು ಸಂಪರ್ಕಿಸಲಿಲ್ಲ. ಇದಕ್ಕೂ ಮುನ್ನ ಕಶ್ಮೀರಕ್ಕೆ ಅಗತ್ಯವಿದ್ದ ಮೋಟಾರು ವಾಹನಗಳ ಖರೀದಿಯ ವಿಚಾರವಾಗಿ ಗೋಪಾಲಸ್ವಾಮಿಯವರಿಂದ ಸ್ಪಷ್ಟೀಕರಣ ಕೇಳಿದ್ದ ಸರ್ದಾರರಿಗೆ ನೆಹರು ಪತ್ರ ಬರೆದು ರಾಜ್ಯಗಳ ನಿರ್ವಹಣೆಗೆ ಮಾತ್ರ ಸೀಮಿತವಾಗಿರುವ ನಿಮ್ಮ ಸಚಿವಾಲಯದ ವ್ಯಾಪ್ತಿಗೆ ಕಶ್ಮೀರಕ್ಕೆ ಸಂಬಂಧಿಸಿದ ವಿಷಯಗಳು ಹೇಗೆ ಬರುತ್ತವೆ ಎನ್ನುವುದು ನನಗೆ ಅರ್ಥವಾಗುವುದಿಲ್ಲ. ನಾವು ತೆಗೆದುಕೊಳ್ಳುವ ನಿರ್ಧಾರಗಳ ಬಗ್ಗೆ ನಿಮಗೆ ಮಾಹಿತಿಯನ್ನಷ್ಟೇ ನೀಡುತ್ತೇವೆ. ನೀವು ಗೋಪಾಲಸ್ವಾಮಿ ಅವರೊಂದಿಗೆ ನಡೆದುಕೊಂಡ ರೀತಿಯಲ್ಲಿ ಸಹೋದ್ಯೋಗಿಯೊಬ್ಬರಿಗೆ ತೋರಿಸಬೇಕಾದ ಸೌಜನ್ಯವಿರಲಿಲ್ಲ ಎಂದು ನಾನು ಹೇಳಬಹುದೇ? ಎಂದು ಕೇಳಿದ್ದರು. ಅದನ್ನು ಓದಿದ ತಕ್ಷಣ ಸರ್ದಾರರು ರಾಜಿನಾಮೆ ನೀಡಬಯಸಿದ್ದು ಯಾರದೋ ಮನವೊಲಿಕೆಯಿಂದ ಸುಮ್ಮನಾದರಂತೆ. ಆದ್ದರಿಂದ ೩೭೦ನೇ ವಿಧಿಗೆ ಅನುಮೋದನೆ ದೊರಕಿಸಿಕೊಡುವಂತೆ ಪಟೇಲರನ್ನು ಕೇಳುವ ಸ್ಥಿತಿಯಲ್ಲಿ ನೆಹರು ಇರಲಿಲ್ಲ.
“ನೆಹರು ರೋಯೇಗಾ”
ಗೋಪಾಲಸ್ವಾಮಿ ಅವರು ಕರಡನ್ನು ಮಂಡಿಸಿದಾಗ ಭಾರೀ ಕೋಲಾಹಲವುಂಟಾಗಿ ಎಲ್ಲರೂ ಅದರ ವಿರುದ್ಧ ಸಿಡಿದುನಿಂತರು. ಅಸಹಾಯರಾದ ಗೋಪಾಲಸ್ವಾಮಿ ಸರ್ದಾರರಿಗೆ ಫೋನ್ ಮಾಡಿ ನೆರವು ಯಾಚಿಸಿದರು. ನೆಹರು ಇದ್ದಿದ್ದರೆ ಬೇರೆ ಮಾತು. ಅವರ ಅನುಪಸ್ಥಿತಿಯಲ್ಲಿ ಅವರ ಆದೇಶಗಳನ್ನು ಪಾಲಿಸುತ್ತಿರುವ ಗೋಪಾಲಸ್ವಾಮಿಯ ಮೇಲೆ ಒತ್ತಡ ಹೇರುವುದು ಹೇಗೆ? ನನ್ನ ಸಹಾಯ
ಬೇಡಿ ಬಂದ ಆತನ ಕೈಬಿಡುವುದು ಹೇಗೆ? ಎಂದು ಅನುಮೋದನೆ ದೊರಕಿಸಿಕೊಟ್ಟ ಸರ್ದಾರರು ಆಗ ಜವಾಹರಲಾಲ್ ರೋಯೇಗಾ (ಜವಾಹರಲಾಲ್ ಅಳುವುದಕ್ಕಿದ್ದಾನೆ) ಎಂದು ಹೇಳಿದ್ದರಂತೆ!
ಅದಕ್ಕೆ ಹೆಚ್ಚುಕಾಲ ಬೇಕಾಗಲಿಲ್ಲ. ತಾವು ಕೈಹಿಡಿದು ಬೆಂಬಲಿಸುತ್ತಿದ್ದ ಶೇಖ್ ಅಬ್ದುಲ್ಲಾ, ತಮ್ಮೆದುರಿಗೆ ಭಾರತದೊಂದಿಗೆ ವಿಲೀನವಾಗುವ ಮಾತನಾಡಿ ತಮ್ಮ ಬೆನ್ನ ಹಿಂದೆ ಸ್ವತಂತ್ರ ಕಶ್ಮೀರದ ಕನಸುಗಳನ್ನು ವಿದೇಶೀಯರೊಂದಿಗೆ ಹಂಚಿಕೊಳ್ಳುತ್ತಿದ್ದುದನ್ನು ಕಂಡು ವಿಹ್ವಲರಾದ ನೆಹರು ಕಶ್ಮೀರದ ವಿಷಯದಲ್ಲಿ ನಾನು ಅಸಹಾಯನೆನಿಸುತ್ತಿದೆ. ಏನು ಮಾಡಬೇಕೆಂಬುದೇ ಗೊತ್ತಾಗುತ್ತಿಲ್ಲ ಎಂದು ಅಕ್ಷರಶಃ ಹಲುಬಿಕೊಂಡು ಪತ್ರಗಳನ್ನು ಬರೆಯುವಂತಾಯಿತು. ಆಗ ಪಟೇಲರು ಇರಲಿಲ್ಲ.
ಈ ಎಲ್ಲ ವಿವರಗಳು ನರೆಂದ್ರನ ಒಂದು ಲೇಖನದಲ್ಲಿ ಬರುವಂತೆ ಕಾದಂಬರಿಯಲ್ಲಿ ಲೇಖಕಿ ಹೆಣೆದಿದ್ದಾರೆ. ಇಲ್ಲಿ ನರೆಂದ್ರ ಏಕಕಾಲದಲ್ಲಿ ಕಾಶ್ಮೀರದಲ್ಲಿರುವಾಗಲೇ ಬೆಂಗಳೂರಿನಲ್ಲೂ ಇರುವಂತೆ ಸನ್ನಿವೇಶ ರೂಪುಗೊಂಡಿದೆ. ಕಾದಂಬರಿಯಲ್ಲಿ ಕಮ್ಯೂನಿಸ್ಟ್ ಬೆಂಬಲಿಗನಾದ ಸುಂದರಕೃಷ್ಣ ಮತ್ತು ಕರ್ನಾಟಕದ ಸಚಿವರೊಬ್ಬರಿಗೆ ಆಪ್ತೆಯಾಗುವ ಮೂಲಕ ಕಾಂಗ್ರೆಸ್ಪರಳಂತೆ ಕಾಣುವ ಮೀರಾದೇವಿ ಪತ್ರಿಕೆಯಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿ ದೇಶದ ಬುದ್ಧಿಜೀವಿಗಳ ಅಭಿಪ್ರಾಯದ ಲೇಖನವನ್ನು ಪ್ರಕಟಿಸುತ್ತಾರೆ. ಸ್ನೇಹಿತರ ಮೂಲಕ ಅದನ್ನು ತಿಳಿದ ನರೇಂದ್ರ ಅಲ್ಲಿಂದಲೇ ಪ್ರತಿಕ್ರಿಯಾತ್ಮಕ ಲೇಖನವನ್ನು ಕಳುಹಿಸಿ ಪ್ರಕಟಣೆಗೆ ವ್ಯವಸ್ಥೆ ಮಾಡುತ್ತಾನೆ. ಇನ್ನೊಂದು ಸಂದರ್ಭ ಟಿ.ವಿ. ಚಾನೆಲ್ನ ಚರ್ಚೆಯಲ್ಲೂ ಹಾಗೆಯೇ ಆಗುತ್ತದೆ. ಕಾಶ್ಮೀರದಿಂದಲೇ ಆತ ಚರ್ಚೆಯಲ್ಲಿ ಭಾಗವಹಿಸಿ ಎದುರಾಳಿಗಳ ಬಾಯಿ ಮುಚ್ಚಿಸುತ್ತಾನೆ. ಕಲೆಯ ಹದಕ್ಕೆ ಈ ಸಂಬಂಧವಾಗಿ ಲೇಖಕಿಯ ಸಾಧನೆಯನ್ನು ಎಸ್.ಎಲ್. ಭೈರಪ್ಪ ಹೀಗೆ ವಿಶ್ಲೇಷಿಸುತ್ತಾರೆ:
ವಿವರಗಳನ್ನು ಹುಡುಕಿ ತುಂಬುವುದು ಅಷ್ಟೊಂದು ಕಷ್ಟಕರವಲ್ಲ. ಅವುಗಳನ್ನು ಕಲೆಯ ಹದಕ್ಕೆ ಕರಗಿಸಿ ಬೆಸೆಯುವುದೇ ಸೃಷ್ಟಿಶೀಲತೆ. ತಮ್ಮ ಮೊದಲ ಕಾದಂಬರಿಯಲ್ಲಿ ರಮ್ಯಪ್ರೇಮದ ವಸ್ತುವನ್ನು ಕರ್ತವ್ಯದ ಮೌಲ್ಯದ ದೃಷ್ಟಿಯಿಂದ ವಿಶ್ಲೇಷಿಸಿ, ಪ್ರಜ್ಞಾವಂತ ಓದುಗರ ಮನ್ನಣೆಯನ್ನು ಪಡೆದ ಸಹನಾ ಅವರು ಈ ಎರಡನೆಯ ಕಾದಂಬರಿಯಲ್ಲಿ ಮಹತ್ತರವಾದ ವಸ್ತುವನ್ನು ಕಂಡುಕೊಂಡು ಬಹುತೇಕ ಸಫಲರಾಗಿದ್ದಾರೆ. ತಮ್ಮ ಕುಟುಂಬದಲ್ಲೋ, ನೆರೆಹೊರೆಯಲ್ಲೋ, ಪ್ರಾಂತದಲ್ಲೋ ನಡೆಯುವ ಘಟನೆಗಳನ್ನು ಆರಿಸಿ ಚಂದವಾದ ಕಥೆ ಬರೆಯುವುದು ಚಂದದ ಕೆಲಸ, ರಂಗೋಲಿ ಇಟ್ಟಂತೆ.
ಇಡೀ ರಾಷ್ಟ್ರದ, ಇಡೀ ಮಾನವಜನಾಂಗದ ಸಾಂಸ್ಕೃತಿಕ ಸಂಘ?ವನ್ನು ಕಾಣಿಸುವ ವಸ್ತುವನ್ನು ಹಿಡಿಯುವುದು, ಅದಕ್ಕೆ ಬೇಕಾದ ಅಧ್ಯಯನ, ಧೈರ್ಯ, ಚಿಂತನೆ, ಅನ್ವೇಷಣೆಗಳಲ್ಲಿ ತೊಡಗುವುದು ದೊಡ್ಡ ಭವಿಷ್ಯದ ಭರವಸೆ. ಈ ಲೇಖಕಿಯು ಈ ಕಾದಂಬರಿಯ ಮೂಲಕ ಅಂಥ ಭರವಸೆಯನ್ನು ಕೊಟ್ಟಿದ್ದಾರೆ.
ಸೃಜನಶಕ್ತಿಯು ಲಿಂಗಭೇದವನ್ನು ಮೀರಿದುದು. ಹಾಗೆ ಮೀರಿ ಬೆಳೆದವರು ಮಾತ್ರ ಪ್ರಧಾನ ಕೃತಿಕಾರರಾಗುತ್ತಾರೆ. ಅಂಥ ಪ್ರಧಾನ ಕೃತಿಕಾರರಾಗುವ ಎಲ್ಲ ಗುಣಲಕ್ಷಣಗಳ ಮೊಗ್ಗನ್ನೂ ಸಹನಾ ಅವರು ಇಲ್ಲಿ ಪ್ರಕಟಿಸಿದ್ದಾರೆ.
ಸ್ವತಃ ಓರ್ವ ಪ್ರಧಾನ ಕೃತಿಕಾರರಾದ ಭೈರಪ್ಪನವರಿಂದ ಇಂತಹ ಶ್ಲಾಘನೆಗೆ ಪಾತ್ರರಾಗುವುದು ಸಣ್ಣ ಸಾಧನೆಯಲ್ಲ. ಇಡೀ ರಾಷ್ಟ್ರದ, ಇಡೀ ಮಾನವಜನಾಂಗದ ಸಾಂಸ್ಕೃತಿಕ ಸಂಘರ್ಷವನ್ನು ಕಾಣಿಸುವ ವಸ್ತು ಎಂದು ಭೈರಪ್ಪನವರು ಹೇಳುವಾಗ ಅವರ ಆವರಣ ಕಾದಂಬರಿ ನೆನಪಾಗದೆ ಇರುವುದಿಲ್ಲ. ಮೊದಲ ಬಾರಿಗೆ ಇಸ್ಲಾಮನ್ನು ವಿಶ್ಲೇಷಣೆಗೆ ಒಳಪಡಿಸುವಾಗ ಭೈರಪ್ಪ ಅಂತಹ ಅಧ್ಯಯನ, ರ್ಯ, ಚಿಂತನೆ, ಅನ್ವೇಷಣೆಗಳನ್ನು ಪ್ರಕಟಿಸಿದ್ದರು.
ಕೆಲವು ವಿಷಯಗಳಲ್ಲಿ ಕಶೀರ ಆವರಣದ ಮುಂದುವರಿಕೆಯಂತಿದೆ. ನನ್ನ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ವಿಚಾರಕ್ಕೂ ಆಧಾರ ಇದೆ ಎನ್ನುವ ಸಹನಾ ಅವರ ಮಾತು ಕಾದಂಬರಿಯನ್ನು ಓದುವಾಗ ಹೆಜ್ಜೆಹಜ್ಜೆಗೂ ಅನುಭವಕ್ಕೆ ಬರುತ್ತದೆ.
ಧರ್ಮಕ್ಕೆ ಸಂಬಂಧಿಸಿದ ಚರ್ಚೆಗಳು, ಮುಖ್ಯವಾಗಿ ಕುರ್ಆನ್ನ ಉಲ್ಲೇಖಗಳು ಇದನ್ನು ದೃಢಪಡಿಸುತ್ತವೆ. ವಿಶೇಷವಾಗಿ ಇಸ್ಲಾಂ ಒಂದು ಶಾಂತಿಪ್ರಿಯ ಮತ ಎಂಬುದು ಸಾಮಾನ್ಯವಾಗಿ ಕೇಳಿಬರುವ ಒಂದು ಮಾತು. ಟಿವಿ ವಾಹಿನಿಯ ಒಂದು ಚರ್ಚೆಯಲ್ಲಿ ಭಾಗವಹಿಸಿದ ನರೇಂದ್ರ ನಮ್ಮ ರಾಜಕಾರಣಿಗಳು, ಬುದ್ಧಿಜೀವಿಗಳು ತೇಲಿಬಿಡುವ ಸವಕಲು ವಿಚಾರಗಳನ್ನು ಬುಡಸಹಿತ ಕತ್ತರಿಸಿ ಹಾಕುತ್ತಾನೆ. ಕಾಶ್ಮೀರ ಸಮಸ್ಯೆಯನ್ನು ಈಗ ಉಲ್ಬಣಿಸುತ್ತಿರುವುದರಲ್ಲಿ ಇಸ್ಲಾಂ ವಿಚಾರಗಳ ಪಾಲು ಮುಖ್ಯವಾದುದರಿಂದ ಇವೆಲ್ಲ ಕಾದಂಬರಿಯ ಚೌಕಟ್ಟಿನೊಳಗೆ ಅರ್ಥಪೂರ್ಣವಾಗಿ ಕೂಡಿಕೊಳ್ಳುತ್ತವೆ.
ಜೀವಂತ ಪಾತ್ರಗಳು
ಇಂತಹ ವಸ್ತುಗಳನ್ನು ಆರಿಸಿಕೊಂಡ ಕಾದಂಬರಿಯಲ್ಲಿ ಪಾತ್ರಗಳು ಸಹಜವಾಗಿ ವಿಕಾಸಹೊಂದಲು ಸಾಧ್ಯವೇ? ಅಥವಾ ಅವು ಕೇವಲ ಯಾವುದೋ ವಾದವನ್ನು ಮಂಡಿಸುವುದಕ್ಕೆ ಸೀಮಿತವಾಗುತ್ತವೆಯೆ? ಇನ್ನು ನಮ್ಮ ಬಹಳಷ್ಟು ವಿಮರ್ಶಕರು ಭೈರಪ್ಪನವರ ಬಗೆಗೆ ಹೇಳುವಂತೆ ವಿಚಾರಗಳ ಭಾರದಿಂದ ಕಾದಂಬರಿ, ವಿಶೇಷವಾಗಿ ಇದರ ಪಾತ್ರಗಳು ಬಳಲುತ್ತಿವೆಯೆ – ಎನ್ನುವ ಪ್ರಶ್ನೆಗಳು ಇಲ್ಲಿ ಏಳಬಹುದು. ಆದರೆ ವೈವಿಧ್ಯಮಯ ಮತ್ತು ಬಹುಸಂಖ್ಯೆಯ ಪಾತ್ರಗಳನ್ನು ತಂದು ಸೂಕ್ಷ್ಮವಾಗಿ ಚಿತ್ರಿಸುವಲ್ಲಿ ಲೇಖಕಿ ಯಶಸ್ವಿಯಾಗಿದ್ದಾರೆಂದು ಧಾರಾಳವಾಗಿ ಹೇಳಬಹುದು. ಪ್ರಸ್ತುತ ಪಾತ್ರಗಳಲ್ಲಿ ವೈವಿಧ್ಯವನ್ನು ಗುರುತಿಸಿದ ಭೈರಪ್ಪ, ಪಾತ್ರಗಳ ಮೂಲಕ ಲೇಖಕಿ ಕಾದಂಬರಿಯ ವಿವರಗಳನ್ನು ಕಲೆಯಮಟ್ಟಕ್ಕೆ ಏರಿಸಿದ್ದಾರೆ ಎಂದು ಗುರುತಿಸಿದ್ದಾರೆ.
ಕೈಲಾಶ್ ಪಂಡಿತ್ ಅವರನ್ನು ಈಗಾಗಲೆ ಗಮನಿಸಿದ್ದೇವೆ. ಇಲ್ಲಿನ ಹೃದಯನಾಥ ಪಂಡಿತರು ಒಂದು ಪುರಾತನ ದೇವಸ್ಥಾನದ ಅರ್ಚಕರು, ಸಂಸ್ಕೃತ ವಿದ್ವಾಂಸರು. ಕಾಶ್ಮೀರದ ಸಮಸ್ಯೆಗೆ ಆದಿಶಂಕರರು ಪರಿಹಾರ ಸೂಚಿಸಬೇಕೆಂದು ಕನಸು-ಮನಸಿನಲ್ಲೆಲ್ಲ ಹಂಬಲಿಸುವವರು. ಶಂಕರರು ಪರಿಹಾರ ಸೂಚಿಸುತ್ತಿಲ್ಲವಲ್ಲಾ ಎಂದವರು ವಿಹ್ವಲರಾಗಿದ್ದಾಗ ನರೇಂದ್ರನ ಪ್ರವೇಶವಾಗುತ್ತದೆ.
ಬ್ರಹ್ಮಚಾರಿಗಳಾದ ಅವರು ಹಿಂಸೆಯ ಕಾರಣಕ್ಕಾಗಿ ಶ್ರೀನಗರವನ್ನು ಬಿಡಲಿಲ್ಲ. ಆದರೆ ಅವರ ದೇವಾಲಯಕ್ಕೆ ಬರುವ ಜನರೇ ಇಲ್ಲವಾಯಿತು. ಧರ್ಮ, ಇಸ್ಲಾಂ ಮುಂತಾಗಿ ನರೇಂದ್ರನಲ್ಲಿ ಸುದೀರ್ಘ ಚರ್ಚೆ ನಡೆಸಿದ ಅವರು, ಮಕ್ಕಳಿಗೆ ಕಥೆ ಹೇಳುವ ಮೂಲಕ ಭವಿಷ್ಯದ ಉತ್ತಮ ಜನಾಂಗವನ್ನು ರೂಪಿಸುವುದರಲ್ಲಿ ಸಾರ್ಥಕತೆಯನ್ನು ಹುಡುಕುವ ಮಟ್ಟಕ್ಕೆ ಬರುತ್ತಾರೆ. ನರೇಂದ್ರನಿಂದಾಗಿ ಮತ್ತೆ ಮಾತನಾಡಲು ಆರಂಭಿಸುವ ಕೈಲಾಶ್ ಪಂಡಿತರು ಕೂಡ ಕಥೆ, ಪಾಠ ಹೇಳುವ ಸ್ಥಿತಿಗೆ ಬರುತ್ತಾರೆ.
ನರೇಂದ್ರ ಉ(ಇ)ಳಿದುಕೊಂಡ ಮನೆಯವರಾದ ಸಂಜೀವ್ ಕೌಲ್, ಆರತಿ ದಂಪತಿಗಳದ್ದೊಂದು ವಿಶಿಷ್ಟ ರೀತಿಯ ಸಮಸ್ಯೆ. ಕಾಶ್ಮೀರದಿಂದ ಸ್ಥಳಾಂತರಗೊಂಡು ಜಮ್ಮುವಿಗೆ ಹೋದ ದಂಪತಿ ಟೆಂಟ್ ವಾಸ, ಇಕ್ಕಟ್ಟಾದ ಮನೆಗಳಲ್ಲಿ ವಾಸ ಇತ್ಯಾದಿ ಅಮಾನವೀಯ ಪರಿಸ್ಥಿತಿಯನ್ನು ಎದುರಿಸುತ್ತಾರೆ; ದಂಪತಿ ಎಲ್ಲರೊಂದಿಗೆ ಮಲಗಬೇಕಾದ ಪರಿಸ್ಥಿತಿ. ಅದರಿಂದಾಗಿ ದಾಂಪತ್ಯದ ಜೀವನಾಡಿಯೇ ಬತ್ತಿಹೋಗುವ ಕ? ಒದಗಿದರೂ ದಾಂಪತ್ಯದ ಮೌಲ್ಯವನ್ನು ಕಾಪಾಡಿಕೊಳ್ಳುತ್ತಾರೆ. ಆರತಿ ಕೌಲ್ ಅವರು (ಸ್ವಗತ) ಹೇಳಿಕೊಳ್ಳುವುದನ್ನು ಬಿಟ್ಟರೆ ಅವರ ಒಳಗಿನ ನೋವು ಎಲ್ಲೂ ಕಾಣಿಸುವುದಿಲ್ಲ.
ಕಾಶ್ಮೀರದಲ್ಲಿ ಕಾಣುವ ಮುಸ್ಲಿಂ ಪಾತ್ರಗಳನ್ನು ಸಹನಾ ವಿಜಯಕುಮಾರ್ ಮುಕ್ತಮನಸ್ಸು ಮತ್ತು ಅತ್ಯಂತ ಸಹಾನುಭೂತಿಯಿಂದ ಚಿತ್ರಿಸಿದ್ದಾರೆ. ಕೈಲಾಶ್ ಪಂಡಿತ್ ಅವರ ಆತ್ಮೀಯರಾಗಿದ್ದು, ಊರಿನ ವಾತಾವರಣ ಹಾಳಾಗಿ, ಮನೆಯಲ್ಲಿಯೂ ಪತ್ನಿ ಮತ್ತು ಉಗ್ರವಾದಿಯಾಗುವ ಮಗ ಆಸಿಫ್ನಿಂದಾಗಿ ಕೈಲಾಶ್ರಿಗೆ ಮುಖಕೊಟ್ಟು ಮಾತನಾಡಲಾಗದ ಪರಿಸ್ಥಿತಿಗೆ ತಲಪುವ ಬಶೀರ್ ಅಹಮದ್ ಅವರು ಮಕ್ಕಳನ್ನು ಕಳೆದುಕೊಳ್ಳುವ ಘೋರ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಆಸಿಫ್ಎ ನ್ಕೌಂಟರ್ನಲ್ಲಿ ಸತ್ತರೆ, ಇನ್ನೊಬ್ಬ ಮಗ ಅನ್ವರ್ ತಮ್ಮ ಅಂಗಡಿಗೆ ಬೆಂಕಿ ಬಿದ್ದು ಸಾಯುತ್ತಾನೆ. ನರೇಂದ್ರ ಅವರಲ್ಲೂ ಮಾತನಾಡುತ್ತಾನೆ; ಅವರದ್ದು ಕೂಡ ದೂರುಗಂಟೆ ಬಾರಿಸಿ ನ್ಯಾಯಕೇಳಬೇಕಾದ ಪರಿಸ್ಥಿತಿ.
ಕಲ್ಲೆಸೆಯುವ ಮತ್ತು ಕಲ್ಲೆಸೆಯುವುದಕ್ಕೆ ಹುಡುಗರನ್ನು ಒದಗಿಸುತ್ತಿದ್ದ ಮುಷ್ತಾಕ್ ಹಲವು ಏರುಪೇರುಗಳನ್ನು ಕಂಡು ದುರಂತ ಅಂತ್ಯಕ್ಕೆ ಗುರಿಯಾಗುತ್ತಾನೆ. ಆಜಾದಿ ಲಡಾಯಿಗೆ ಸೇರಿದ ಈತನ ಗೆಳೆಯನನ್ನು ಹಿಂಸೆಯ ಪ್ರತಿರೂಪವಾದ ಉಗ್ರರು ಭೀಕರವಾಗಿ ಕೊಲ್ಲುತ್ತಾರೆ. ನರೆಂದ್ರನ ಬಳಿ ಮಾತುಕತೆ ನಡೆಸಿದ ಮು?ಕ್ನಲ್ಲಿ ಬದಲಾವಣೆಯೂ ಕಾಣುತ್ತದೆ. ಆದರೆ ಅವನನ್ನು ಮಾತುಕತೆಗೆ ಕರೆಸಿಕೊಂಡ ಧಾರ್ಮಿಕಗುರು ಮುಫ್ತಿ ಲತೀಫ್ ಹಂತಕರಿಗೆ ಆತನನ್ನು ಒಪ್ಪಿಸುತ್ತಾನೆ. ಮುಷ್ತಾಕ್ನ ಅಂತ್ಯ ಕಾಡುವಂತಿದೆ.
ಇಷ್ಟವಾಗುವ ಸಲೀಂ
ಇದರಲ್ಲಿ ಡ್ರೈವರ್ ಸಲೀಮನೇ ವಾಸಿ. ಕಶ್ಮೀರದ ಪಂಡಿತರು, ಕಶ್ಮೀರಕ್ಕೆ ಬರುವ ಪ್ರವಾಸಿಗರು ಸೇರಿದಂತೆ ಎಲ್ಲರಲ್ಲೂ ಬೆರೆಯುವಂತಹ ಒಂದು ವಾತಾವರಣವನ್ನು ತನ್ನ ಮಟ್ಟಿಗೆ ಆತ ಕಲ್ಪಿಸಿಕೊಂಡಿದ್ದಾನೆ. ನರೇಂದ್ರ, ಸಂಜೀವ ಕೌಲ್ ಇವರಿಗೆಲ್ಲ ಆತ್ಮೀಯನಾಗಿ, ಹೇಳಿದ ಕೆಲಸಗಳನ್ನೆಲ್ಲ ಶ್ರದ್ಧೆಯಿಂದ ಮಾಡುತ್ತಾ ವಿಶ್ವಾಸಕ್ಕೆ ಪಾತ್ರನಾಗುತ್ತಾನೆ. ಬಗೆಬಗೆಯ ಪ್ರತಿಭಟನೆಗಳ ಹೆಸರಿನಲ್ಲಿ ಕಲ್ಲೇಟಿಗೆ ಗುರಿಯಾಗುವ ಪೊಲೀಸ್ ಲಕ್ಷ್ಮಣ ಸಂಧು ಒತ್ತಡದ ನಡುವೆಯೂ ಪ್ರೀತಿ, ಮಾನವೀಯತೆಗಳ ಸೆಲೆಗೆ ಸ್ಪಂದಿಸುತ್ತಾನೆ.
ಈ ನಡುವೆ ಧರ್ಮವನ್ನು ಮೀರಿ ನ್ಯಾಯವನ್ನು ಹುಡುಕುವ ಪಾತ್ರಗಳು, ಮುಖ್ಯವಾಗಿ ಹಲವು ಯುವಜನರಿದ್ದಾರೆ. ಕಶ್ಮೀರದ ಇಂದಿನ ಪರಿಸ್ಥಿತಿಯಲ್ಲಿ, ಏನು ಮಾಡಬೇಕೆಂದು ಅವರಿಗೆ ಗೊತ್ತಿಲ್ಲ. ಅವರಲ್ಲಿ ಬಹಳ ಮಂದಿ ಉದ್ಯೋಗಾಕಾಂಕ್ಷಿಗಳಿದ್ದಾರೆ. ಆಜಾದಿ ಲಡಾಯಿ ನಾಯಕರು ದೊರೆತ ಸಂಪತ್ತನ್ನು ಕಬಳಿಸುತ್ತಾ ಯಾರದೋ ಮಕ್ಕಳಿಂದ ಸೈನಿಕರಿಗೆ ಕಲ್ಲು ಹೊಡೆಸುತ್ತಾರೆ. ಆದರೆ ತಮ್ಮ ಮಕ್ಕಳನ್ನು ವಿದೇಶದಲ್ಲಿರಿಸಿ ಉತ್ತಮ ಶಿಕ್ಷಣ ಕೊಡಿಸುತ್ತಾರೆ. ಅವರು ಅಲ್ಲಿ ನೆಮ್ಮದಿಯಾಗಿದ್ದರೆ ಬಡಮಕ್ಕಳು ಇಲ್ಲಿ ಗುಂಡೇಟು ತಿಂದು ಸಾಯುತ್ತಾರೆ ಎಂಬ ಕಟುಸತ್ಯ ಅವರ ಮುಂದಿದೆ. ಅಲ್ಲಿ ರೋಸಿಹೋದದ್ದು ನಿರುದ್ಯೋಗ ಮತ್ತು ಅಧಿಕಾರದ ದುರುಪಯೋಗಗಳಿಂದ. ಆ ಸಿಟ್ಟನ್ನು ಹಿಂದುಗಳ ಮೇಲೆ ತಿರುಗಿಸುವಲ್ಲಿ ಮೂಲಭೂತವಾದಿಗಳು ಯಶಸ್ವಿಯಾದದ್ದು ಕಾಶ್ಮೀರದ ವಾಸ್ತವ.
ಈ ಸತ್ಯವನ್ನು ಅವರ ಮುಂದೆ ಹಿಡಿದಾಗ ಕೆಲವು ಯುವಕರು ನರೇಂದ್ರನ ಮಾತುಗಳಿಗೆ ಕಿವಿಗೊಡುತ್ತಾರೆ. ಬೆಂಗಳೂರಿನ ಸಭೆಯಲ್ಲಿ ಮಾತನಾಡಿದ ಸಹನಾ ವಿಜಯಕುಮಾರ್, ಭಯೋತ್ಪಾದನೆ, ಹಿಂಸಾಕೃತ್ಯಗಳನ್ನು ಮಾಡುತ್ತಿರುವುದು ಸರಿಯೋ ತಪ್ಪೋ ಎಂದು ಯೋಚಿಸುವ ಜಿಜ್ಞಾಸೆಯನ್ನು ಹೊಂದಿರುವ ಎಷ್ಟು ಯುವಮನಸ್ಸುಗಳು ಕಾಶ್ಮೀರದಲ್ಲಿವೆ. ಅವರನ್ನೆಲ್ಲ ನಮ್ಮೊಂದಿಗೆ ಸೇರಿಸಿಕೊಳ್ಳುವ ಪ್ರಯತ್ನ ಆಗಬೇಕಿದೆ ಎನ್ನುವ ಆಶಯವನ್ನು ಪ್ರಕಟಿಸಿದರು.
ವಿಚಿತ್ರ ಮಾನವೀಯತೆ
ಒಟ್ಟಿನಲ್ಲಿ ಕಾಶ್ಮೀರದ ಕುರಿತು ಯೋಚಿಸಿದಾಗೆಲ್ಲ ಮತ್ತೆಮತ್ತೆ ಕಾಡುವ ಅಂಶವೆಂದರೆ, ಯಾರ ತಪ್ಪಿಗಾಗಿ ಕಶ್ಮೀರದ ಹಿಂದುಗಳಿಗೆ ಈ ಶಿಕ್ಷೆ? ಜಗತ್ತು ಇಂದು ತುಂಬ ನಾಗರಿಕವಾಗಿದೆ; ಮಾನವೀಯತೆಗೆ ಧಕ್ಕೆಯಾದರೆ ಪ್ರಶ್ನಿಸುವವರಿದ್ದಾರೆ ಎಂದು ನಾವು ಕೇಳುತ್ತೇವೆ. ಆದರೆ ಜಾಗತಿಕ ಮಟ್ಟದಲ್ಲಿ, ಮುಖ್ಯವಾಗಿ ಭಾರತದ ಬುದ್ಧಿಜೀವಿಗಳ ಮಟ್ಟದಲ್ಲಿ ಕೇಳುತ್ತಿರುವುದು ಸೇನೆಯ ಕಾರ್ಯಾಚರಣೆಯಿಂದ ಉಗ್ರವಾದಿಗಳ ಮಾನವೀಯತೆಗೆ ಧಕ್ಕೆಯಾಗಿದೆ ಎಂಬ ಮಾತುಗಳನ್ನು. ಹಾಗಾದರೆ ಕಾಶ್ಮೀರದ ಪಂಡಿತರ ಸಾವು-ನೋವುಗಳು, ಬೇರುಸಹಿತ ಕಿತ್ತಂತಹ ಸ್ಥಳಾಂತರಗಳಿಗೆ ಯಾವ ಅರ್ಥವೂ ಇಲ್ಲವೆ? ಮಾನವೀಯತೆಯ ಹೆಸರಿನಲ್ಲಿ ಇಂತಹ ತಾರತಮ್ಯವನ್ನು ಮಾಡಬಹುದೆ? ಹಾಗಾದರೆ ಅದೆಂತಹ ಮಾನವೀಯತೆ?
ಪಟೇಲರಿಗೆ ಬ್ರೇಕ್
ಜಮ್ಮು-ಕಾಶ್ಮೀರದ ಬಗೆಗಿನ ನಿರ್ಧಾರವನ್ನು ಪಟೇಲರು ಕಶ್ಮೀರದ ರಾಜ ಹರಿಸಿಂಗ್ಗೆ ಬಿಡಲು ಕಾರಣ ಇತ್ತು. ಸಂಪರ್ಕಿಸಲು ಸರಿಯಾದ ಭೂಮಾರ್ಗ ಇರಲಿಲ್ಲ. ಗುರುದಾಸಪುರ ಜಿಲ್ಲೆ ಪಠಾಣಕೋಟ್ನಿಂದ ಜಮ್ಮುವಿಗೆ ೬೫ ಮೈಲು. ಆ ಕಿರುರಸ್ತೆಯನ್ನು ಅಗಲಗೊಳಿಸಲು ಪಟೇಲರು ಎಂಟೇ ತಿಂಗಳು ಗಡುವು ನೀಡಿ ಮಾಡಿ ಮುಗಿಸಿದರು. ಆಗ ನೆಹರು ತಾನು ಪಂಡಿತ ಎನ್ನುವ ನೆಪ ಹೇಳಿ ಕಾಶ್ಮೀರದ ಹೊಣೆಯನ್ನು ಸರ್ದಾರರಿಂದ ಪಡೆದು ಖಾತೆಯಿಲ್ಲದ ಸಚಿವ ಗೋಪಾಲಸ್ವಾಮಿ ಅಯ್ಯಂಗಾರರಿಗೆ ನೀಡಿದರು. ನೆಹರು ಅವಿವೇಕದಿಂದಾಗಿ ಕಶ್ಮೀರದ ವಿಷಯದಲ್ಲಿ ಸಾಲುಸಾಲು ತಪ್ಪುಗಳು ನಡೆಯತೊಡಗಿದಾಗ ಬಕ್ಷಿ ಗುಲಾಮ್ ಮೊಹಮ್ಮದ್ ಮತ್ತು ಶೇಖ್ ಅಬ್ದುಲ್ಲಾ ಸರ್ದಾರರಲ್ಲಿ ಕಶ್ಮೀರದ ಸಮಸ್ಯೆಯನ್ನು ನೀವೇ ಕೈಗೆತ್ತಿಕೊಂಡು ಹೈದರಾಬಾದಿನಂತೆ ಏಕೆ ಮುಗಿಸಬಾರದು? – ಎಂದು ಕೇಳಿದರು. ಆಗ ಪಟೇಲರು ನೀವು ಹೋಗಿ ನಿಮ್ಮ ಗೆಳೆಯನಿಗೆ ಎರಡೇ ಎರಡು ತಿಂಗಳು ಸುಮ್ಮನಿರುವುದಕ್ಕೆ ಹೇಳಿ. ಸಮಸ್ಯೆಯನ್ನು ನಾನು ನಿವಾರಿಸುತ್ತೇನೆ ಎಂದರಂತೆ.
ಕಶ್ಮೀರದ ವಿಷಯದಲ್ಲಿ ಪಟೇಲ್ ಮತ್ತು ನೆಹರು ಮುಖಾಮುಖಿ ಆಗುವುದು ಮತ್ತೆ ಕೂಡ ಮುಂದುವರಿಯಿತು. ಅಕ್ಟೋಬರ್ ೨೬, ೧೯೪೭ರಂದು ರಾಜಾ ಹರಿಸಿಂಗ್ ಭಾರತದೊಂದಿಗಿನ ವಿಲೀನ ಒಡಂಬಡಿಕೆಗೆ ಸಹಿ ಹಾಕಿದರು. ಅದರ ಅನಂತರವೇ ಕಶ್ಮೀರದ ರಕ್ಷಣೆಗೆ ಭಾರತದ ಸೇನೆ ಹೋದದ್ದು. ಆದ್ದರಿಂದ ರಾಜಾ ಹರಿಸಿಂಗ್ ಭಾರತದೊಂದಿಗೆ ವಿಲೀನಕ್ಕೆ ಒಪ್ಪಿರಲಿಲ್ಲ ಎನ್ನುವ ಮಾತಿಗೆ ಯಾವುದೇ ಅರ್ಥವಿಲ್ಲ. ಈ ನಡುವೆ ಬ್ರಿಟಿ?ರಿಗೆ ಒಂದು ಸ್ವಾರ್ಥವಿತ್ತು. ರಷ್ಯಾ ಮತ್ತು ಭಾರತ ಭೌಗೋಳಿಕವಾಗಿ ನೇರ ಸಂಪರ್ಕಕ್ಕೆ ಬರಬಾರದೆಂಬುದು ಅವರ ತಂತ್ರವಾಗಿತ್ತು. ಗವರ್ನರ್ – ಜನರಲ್ ಆಗಿ ಮುಂದುವರಿದಿದ್ದ ಮೌಂಟ್ಬ್ಯಾಟನ್ ವಿಲೀನದ ಬಗ್ಗೆ ಜನಮತಗಣನೆಯ ಪ್ರಸ್ತಾವವನ್ನು ಮುಂದಿಟ್ಟು ಪ್ರಧಾನಿ ನೆಹರು ಮೂಲಕ ಅದನ್ನು ವಿಶ್ವಸಂಸ್ಥೆಯ ಮುಂದೆ ಹೇಳಿಸಿದರು. ವಿಲೀನದ ವಿಚಾರವನ್ನು ಜಮ್ಮು-ಕಾಶ್ಮೀರ ಸಂವಿಧಾನ ಸಭೆಗೆ ಬಿಡೋಣ ಎಂದು ತೀರ್ಮಾನವಾಯಿತು. ಆ ಹೊತ್ತಿಗೆ ಅದು ಆಗಿರಲಿಲ್ಲ. ಆದ್ದರಿಂದ ತಾತ್ಕಾಲಿಕ ಎಂಬ ನೆಲೆಯಲ್ಲಿ ೩೭೦ನೇ ವಿಧಿಯನ್ನು ಭಾರತದ ಸಂವಿಧಾನಕ್ಕೆ ಸೇರಿಸಿದರು. ಪರಿಣಾಮವಾಗಿ ರಕ್ಷಣೆ, ಹಣಕಾಸು ಮತ್ತು ಸಂವಹನ (ಸಂಪರ್ಕ) ಖಾತೆಗಳನ್ನು ಬಿಟ್ಟು ಇತರ ವಿಚಾರಗಳು ಜಮ್ಮು-ಕಾಶ್ಮೀರ ಸಂವಿಧಾನ ಸಭೆಯ ಒಪ್ಪಿಗೆಯಿಲ್ಲದೆ ಕಾಶ್ಮೀರದಲ್ಲಿ ಜಾರಿ ಇಲ್ಲ ಎಂಬ ಪರಿಸ್ಥಿತಿ ಬಂತು. ಹೀಗೆ ತಾತ್ಕಾಲಿಕ ಎಂದು ಸೇರಿಕೊಂಡ ೩೭೦ನೇ ವಿಧಿ ಗಟ್ಟಿಯಾಗಿ ತಳವೂರಿತು; ಮತ್ತು ಆ ರಾಜ್ಯದ ಎಲ್ಲ ಸಮಸ್ಯೆಗಳ ಮೂಲ ಎಂಬಂತಾಯಿತು.
ಒಂದಂತೂ ಸತ್ಯ. ನಾವು ಸುಮ್ಮನೆ ಕುಳಿತಿದ್ದರೂ ಸಮಸ್ಯೆ ಇದ್ದಂತೆ ಇರುವುದಿಲ್ಲ. ಉಲ್ಬಣವಾಗುತ್ತಲೇ ಇರುತ್ತದೆ. ಕಾಶ್ಮೀರಕ್ಕೆ ಸ್ವಾತಂತ್ರ್ಯ ಕೊಡುವುದೇ ಈ ಸಮಸ್ಯೆಗೆ ಪರಿಹಾರ ಎನ್ನುವಲ್ಲಿಗೆ ಕೊಂಡೊಯ್ಯುವ ಬಗ್ಗೆ ದೇಶದಲ್ಲಿ ಬಹಳ? ಜನ ಆಸಕ್ತರಾಗಿರುವಂತಿದೆ.
ಇವರಿಗೆ ಇತಿಹಾಸ ಬೇಕಿಲ್ಲ; ಸಂಸ್ಕೃತಿ ಬೇಕಿಲ್ಲ. ದೇಶಕ್ಕೆ ಕಾಶ್ಮೀರ ಎ? ಮುಖ್ಯ ಎಂಬುದು ಬೇಕಿಲ್ಲ. ಆದ್ದರಿಂದ ಪರಿಹಾರದ ಕೆಲಸ ನಿಜವಾಗಿಯೂ ಪರಿಣಾಮಕಾರಿ ಇರಬೇಕು; ಮತ್ತು ವಿಳಂಬ ಸಲ್ಲದು.