ಫೇಸ್ಬುಕ್ ಮೂಲಕ ಲಕ್ಷಾಂತರ ಮಂದಿಯ ಖಾಸಗಿ ಮಾಹಿತಿಗಳು ವಾಣಿಜ್ಯೋದ್ದೇಶದಿಂದ ಅನಧಿಕೃತವಾಗಿ ಬಳಕೆಗೊಂಡು ಬಿಡಿಬೀಸಾಗಿ ವಿತರಣೆಯಾಗುತ್ತಿದ್ದುದು ಬಯಲಾಗಿ ಎಲ್ಲೆಡೆ ಆತಂಕ ಸೃಷ್ಟಿಸಿದ್ದುದರ ಹಿಂದುಗೂಡಿ ಫೇಕ್-ನ್ಯೂಸ್ ಎಂಬ ವೈರಲ್- ಫೀವರ್ ವ್ಯಾಪಕವಾಗಿ ಹರಡಿರುವುದು ಚಿಂತೆ ತಂದಿದೆ. ಫೇಕ್-ನ್ಯೂಸ್ ಎಂದರೆ ಆಧಾರರಹಿತವಾದ ಕಪೋಲಕಲ್ಪಿತ ಸುಳ್ಳುಸುದ್ದಿಗಳು. ಇವುಗಳಿಂದ ಯಾರೋ ಕೆಲವರಿಗೆ ಅಗ್ಗದ ಮನರಂಜನೆ ದೊರೆಯುವಷ್ಟಕ್ಕೆ ಇವುಗಳ ಸಂಚಲನೆ ಸೀಮಿತಗೊಂಡಿದ್ದರೆ ಉಪೇಕ್ಷೆ ಮಾಡಬಹುದಿತ್ತೇನೋ. ಆದರೆ ಕೆಲವು ಫೇಕ್-ನ್ಯೂಸ್ಗಳು ಎಷ್ಟು ಪ್ರಮಾದಕರವೆಂದರೆ ಅವು ವ್ಯಾಪಕ ಸಂಘ?ಗಳಿಗೂ ಹಿಂಸಾಚರಣೆಗಳಿಗೂ ಕಾರಣವಾಗಿವೆ. ಹೀಗೆ ಇವನ್ನು ಒಂದು ವಿಷಾಕ್ತ ವ್ರಣವೆಂದೇ ಭಾವಿಸಬೇಕಾಗಿದೆ. ತಿಳಿದೂ ತಿಳಿದೂ ಬುಡವಿಲ್ಲದ ಕಲ್ಪಿತ ಸುದ್ದಿಗಳನ್ನು ಅನಿರ್ಬದ್ಧವಾಗಿ ಪ್ರಸಾರಮಾಡುತ್ತಿವೆ ಸೋಷಿಯಲ್ ಮೀಡಿಯಾಗಳು. ಹೀಗೆ ಮೀಡಿಯಾಗಳಲ್ಲಿ ನಕಲಿ ಸುದ್ದಿಗಳ ತಾಂಡವ ನಡೆದಿದೆ.
ಕೆಲವು ನಿದರ್ಶನಗಳನ್ನು ನೋಡೋಣ.
ಉತ್ತರಭಾರತದಲ್ಲಿ ಮಕ್ಕಳನ್ನು ಅಪಹರಿಸುವ ದೊಡ್ಡ ಜಾಲವಿದೆ ಎಂಬುದು ಈಚೆಗೆ ಅಧಿಕ ಪ್ರಸಾರ ಪಡೆದ ಒಂದು ನಕಲಿ ಸುದ್ದಿ. ಅಂತರ್ಜಾಲದಲ್ಲಿ ಲಭ್ಯವಿದ್ದ ಯಾರಾರೋ ಮಕ್ಕಳ ಚಿತ್ರಗಳನ್ನೂ ಸುದ್ದಿಗೆ ಪೋಣಿಸಿ ಅಧಿಕೃತವೆಂದು ಬಿಂಬಿಸಲಾಗಿತ್ತು. ಈ ಸುದ್ದಿಗಳು ನಿರಾಧಾರವೆಂದು ಸಾರ್ವಜನಿಕರಿಗೆ ತಿಳಿಹೇಳಲು ಸರ್ಕಾರ ಅಗಾಧಶ್ರಮ ಪಡಬೇಕಾಯಿತು.
ಬೇರೆ ಯಾವುದೋ ದೇಶಗಳಲ್ಲಿ ಪೂಜಾಸ್ಥಾನಗಳನ್ನು ಕೆಡವಲಾದ ಘಟನೆಗಳು ಭಾರತದಲ್ಲಿ ನಡೆದವೆಂದು ಚಿತ್ರಸಹಿತ ಸೋಷಲ್ ಮೀಡಿಯಾಗಳಲ್ಲಿ ಪ್ರಸಾರಮಾಡಲಾಯಿತು. ಭಾರತದ ಪರಿಸರದಲ್ಲಿ ಅತ್ಯಂತ ಸ್ಫೋಟಕವಾದ ಇಂತಹ ಸಂಗತಿಗಳನ್ನು ನಕಲಿಸುದ್ದಿಗಳ ಪ್ರಸಾರಕ್ಕೆ ಸಾಮಗ್ರಿಯಾಗಿ ಮಾಡಿಕೊಳ್ಳುವುದರ ಪರಿಣಾಮವನ್ನು ಊಹಿಸಬಹುದು.
ಬಂಗ್ಲಾದೇಶದಲ್ಲಿಯೂ ಸಿರಿಯಾ ಮೊದಲಾದೆಡೆಗಳಲ್ಲಿಯೂ ನಡೆದಿರುವ ಸಂಘರ್ಷಗಳ ಚಿತ್ರಗಳನ್ನು ತೋರಿಸಿ ಅವು ಭಾರತದಲ್ಲಿ ನಡೆದವೆಂದು ಪ್ರಸಾರ ಮಾಡಲಾಗಿತ್ತು.
ಹಲವೊಮ್ಮೆ ಸ್ಥಳೀಯ ಜನತೆಗೆ ಹರ್ಷ ನೀಡುವ ಉದ್ದೇಶದಿಂದ ಸುದ್ದಿಗಳನ್ನು ಸೃಷ್ಟಿಸಲಾಗಿದೆ. ಜನಗಣಮನ ಜಗತ್ತಿನಲ್ಲಿಯೇ ಉತ್ಕೃಷ್ಟ ರಾಷ್ಟ್ರಗೀತೆಯೆಂದು ಬಿ.ಬಿ.ಸಿ. ಅಭಿಪ್ರಾಯಸಂಗ್ರಹದ ಆಧಾರದಿಂದ ಪ್ರಕಟಿಸಿದೆ ಎಂಬುದು ಇಂತಹದೊಂದು ನಿರಾಧಾರ ಪ್ರಸಾರ.
ಸಾರ್ವಜನಿಕ ವ್ಯಕ್ತಿಗಳ ತೇಜೋವಧೆ ಮಾಡಲು ಸೋಷಿಯಲ್ ಮೀಡಿಯಾ ಒಂದು ಸುಲಭ ಸಾಧನವಾಗಿ ಒದಗಿದೆ.
ಅಧಿಕಮೌಲ್ಯ ನೋಟುಗಳ ರದ್ದತಿಯ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಅಪಪ್ರಚಾರ ಮಾಡಲು ಈರುಳ್ಳಿಯ ದರ ರೂ. ೨೦೦ಕ್ಕೆ ಏರಿದೆಯೆಂದು ಕಥೆ ಹಬ್ಬಿಸಲಾಗಿತ್ತು.
ಹೀಗೆ ಪ್ರಸಾರಗೊಂಡಿರುವ ಹೊಣೆಗೇಡಿ ಸುದ್ದಿಗಳು ಲೆಕ್ಕವಿಲ್ಲದಷ್ಟು. ಅತ್ಯಂತ ಪ್ರಾಚೀನ ಭಾಷೆ ತಮಿಳು ಎಂದು ಸಂಶೋಧನೆಯಿಂದ ಹೊರಪಟ್ಟಿದೆ ಎಂಬ ಸುದ್ದಿಯನ್ನು ಕೆಲ ಸಮಯದ ಹಿಂದೆ ಹರಿಯಬಿಡಲಾಗಿತ್ತು.
ಬಹುಜನ ಸಮಾಜ ಪಾರ್ಟಿಯ ಯುವವಿಭಾಗ ನೀಡಿತೆಂದು ಹೇಳಲಾದ ಹೇಳಿಕೆ ಪ್ರಸಾರವಾಗಿತ್ತು. ಅಂತಹ ಅಕೌಂಟ್ ತಮ್ಮ ವ್ಯವಸ್ಥೆಯಲ್ಲಿ ಇಲ್ಲವೇ ಇಲ್ಲವೆಂದು ಮಾಯಾವತಿ ಸ್ಪಷ್ಟೀಕರಣ ನೀಡಿದರು.
ಇವಕ್ಕಿಂತ ಹಾನಿಯನ್ನುಂಟುಮಾಡಿದ ಒಂದು ಪ್ರಸಂಗವೆಂದರೆ ಯಾವುದೋ ಚಲನಚಿತ್ರದಲ್ಲಿದ್ದ ಗುಂಪು ಘರ್ಷಣೆ ತುಣುಕುಗಳನ್ನು ಹೆಕ್ಕಿತೆಗೆದು ಆ ಘಟನೆ ವಾಸ್ತವವಾಗಿ ನಡೆಯಿತೆಂಬಂತೆ ಪ್ರಸಾರ ಮಾಡಲಾಗಿತ್ತು.
ಫೇಕ್-ನ್ಯೂಸ್ ಎಂಬ ಶಬ್ದವನ್ನು ಹೆಚ್ಚು ಬಳಕೆಗೆ ತಂದವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ತಮಗೆ ಪ್ರತಿಕೂಲವೆನಿಸಿದ ಸುದ್ದಿಗಳನ್ನೆಲ್ಲ ಫೇಕ್-ನ್ಯೂಸ್ ಎಂದು ಹೆಸರಿಸಿ ಅವರು ತಳ್ಳಿಹಾಕುತ್ತ ಬಂದಿದ್ದಾರೆ.
ಫೇಕ್-ನ್ಯೂಸ್ ಪ್ರಸಾರವು ವ್ರಣದಂತೆ ಹರಡಲು ಮಾಧ್ಯಮಗಳ ಈಗಿನ ಅವನತಸ್ಥಿತಿಯೂ ಕಾರಣವಾಗಿದೆ. ವರದಿಗಳು ಪ್ರಾಮಾಣಿಕವೂ ನಿಷ್ಪಕ್ಷಪಾತದವೂ ಆಗಿರಬೇಕೆಂಬ ವ್ರತಪಾಲನೆ ಈಗ ಉಳಿದಿಲ್ಲ. ಪತ್ರಿಕೆಗಳು ದೊಡ್ಡ ಉದ್ಯಮವಾಗಿ ಬೆಳೆದಮೇಲೆ ಅವುಗಳಲ್ಲಿ ಪ್ರಕಟಗೊಂಡದ್ದೆಲ್ಲ ವಿಶ್ವಸನೀಯವಾಗಿರುತ್ತದೆಂಬ ನಿರೀಕ್ಷೆಯನ್ನೇ ಸಾರ್ವಜನಿಕರು ಇರಿಸಿಕೊಂಡಿಲ್ಲ. ಪತ್ರಿಕೆಗಳ ಗುಣಮಟ್ಟದ ಕುಸಿತಕ್ಕೆ ಸೋಷಿಯಲ್ ಮೀಡಿಯಾ ಒಂದು ಶಕ್ತ ಪ್ರತಿಭಾರವಾಗಬಹುದೆಂಬ ಅನಿಸಿಕೆ ಆರಂಭದಲ್ಲಿ ಇದ್ದಿತು. ಆದರೆ ಈಗ ಆ ನಿರೀಕ್ಷೆ ಉಳಿದಿಲ್ಲ. ಸ್ಮಾರ್ಟ್ಫೋನ್ ಬಂದ ಮೇಲಂತೂ
ಸೋಷಿಯಲ್ ಮೀಡಿಯಾ ತನ್ನ ಸ್ವರೂಪವನ್ನೇ ಕಳೆದುಕೊಂಡಿದೆ. ಯಾರಿಂದಲೋ ಬಂದ ಯಾವ ಮಟ್ಟದ ಸುದ್ದಿಯಾದರೂ ಯಾಂತ್ರಿಕವಾಗಿ ಅಸಂಖ್ಯ ಜನರಿಗೆ ರವಾನೆಯಾಗಿಬಿಡುತ್ತದೆ. ವರದಿ, ವದಂತಿ, ಕಲ್ಪನೆ – ಇವುಗಳು ಒಂದರೊಡನೊಂದು ಬೆರೆತುಹೋಗಿವೆ. ಗುಣವತ್ತತೆಯ ಹ್ರಾಸವೂ ತಂತ್ರಜ್ಞಾನಾವಿಷ್ಕರಣಗಳ ಸೌಲಭ್ಯವೂ ಸೇರಿ ಹೊಣೆಗೇಡಿತನವನ್ನೂ ಸ್ವೈರತೆಯನ್ನೂ ಬೆಳೆಸಿವೆ. ಇದು ಸಮಾಜಜೀವನವನ್ನು ಕಲುಷಿತಗೊಳಿಸುತ್ತಿದೆ. ಗೋರಕ್ಷಕರು ಕಾನೂನನ್ನು ತಮ್ಮ ಕೈಗೆ ತೆಗೆದುಕೊಂಡು ಸ್ವೇಚ್ಛಾಚಾರದಲ್ಲಿ ತೊಡಗಿದ್ದಾರೆಂಬ ಸುದ್ದಿಗಳಲ್ಲಿ ಹೆಚ್ಚಿನವು ಕಾಲ್ಪನಿಕ.
ನಕಲಿಸುದ್ದಿಗಳನ್ನು ಕಾನೂನು ಕ್ರಮಗಳು ತಡೆಗಟ್ಟಬಲ್ಲವೆ? ಹಾಗೆಂದು ಎಲ್ಲ ಮೀಡಿಯಾಗಳನ್ನು ಸರ್ಕಾರ ನಿಯಂತ್ರಿಸ ಹೊರಟಲ್ಲಿ ಪರಿಣಾಮ ಏನಾದೀತು? ಇದಕ್ಕೆ ಭವಿ?ಕಾಲವೇ ಉತ್ತರಿಸಬಹುದು. ಹಾನಿಕರ ಸುದ್ದಿಗಳನ್ನು ಕುರಿತ ಆಕ್ಷೇಪಗಳ ಪರಿಶೀಲನೆ ವಿಶೇಷ ನ್ಯಾಯಾಲಯಗಳಿಂದ ಎಷ್ಟುಮಟ್ಟಿಗೆ ನಡೆದೀತೆಂಬುದನ್ನೂ ಕಾದು ನೋಡಬೇಕಾಗಿದೆ. ಅಶಿಸ್ತಿಗೆ ಚಾಲನೆ ಕೊಡುವುದು ಸುಲಭ. ಅದನ್ನು
ನಿಯಂತ್ರಣಕ್ಕೊಳಪಡಿಸುವುದು ಅತ್ಯಂತ ದುಸ್ತರ.