ಶಿಕ್ಷಣವ್ಯವಸ್ಥೆಯ ಕುರಿತು ಇಂದು ಸಾಕಷ್ಟು ಚಿಂತನ-ಮಂಥನಗಳು ನಡೆಯುತ್ತಿವೆ. ಅದರಲ್ಲಿ ಭಾರತದ ಶಿಕ್ಷಣವ್ಯವಸ್ಥೆಯು ಒಳಗೊಂಡಿರುವ ಕಲಿಕೆ ವಿಧಾನದ ಗುಣಮಟ್ಟ ಕಳಪೆ ಎನ್ನುವ ಮಾತು ವ್ಯಾಪಕವಾಗಿ ಕೇಳಬಂದಿದೆ. ಈ ನಡುವೆ ಕಂಡುಬರುವ ಆಶಾಕಿರಣವೆಂದರೆ ಹೊಸ ಪದ್ಧತಿಯೊಂದನ್ನು ಕಂಡುಹಿಡಿಯುವುದಕ್ಕೆ ಇದು ಸಕಾಲವಾಗಿದೆ; ವಿಶೇಷವಾಗಿ ಶಿಕ್ಷಣ ವ್ಯವಸ್ಥೆಯನ್ನು ನೌಕರಶಾಹಿಯ ಕಪಿಮುಷ್ಟಿಯಿಂದ ಮುಕ್ತಗೊಳಿಸಬೇಕಾಗಿದೆ. ವಿಶ್ವವಿದ್ಯಾಲಯ ಅನುದಾನ ಆಯೋಗವನ್ನು (ಯುಜಿಸಿ) ಇತ್ತೀಚೆಗೆ ಬರ್ಖಾಸ್ತುಗೊಳಿಸಿರುವುದು ಮತ್ತು ವಿವಾದಾಸ್ಪದ ಇನ್ಸ್ಟಿಟ್ಯೂಟ್ ಆಫ್ ಎಮಿನೆನ್ಸ್ (ಔನ್ನತ್ಯದ ಸಂಸ್ಥೆ) ಯೋಜನೆ ಬಗೆಗಿನ ಮಾತುಗಳು ಇಂದಿನ ತೃತೀಯ ದರ್ಜೆ ಶಿಕ್ಷಣವ್ಯವಸ್ಥೆಗೆ ಬದಲಾಗಿ ಬೇರೇನೋ ಬರಲಿದೆ ಎನ್ನುವ ಸೂಚನೆಯನ್ನು ಕೊಡುತ್ತಿವೆ.
ಏನಿದ್ದರೂ ಇಂದಿನ ಶಿಕ್ಷಣದ ಕಳಪೆ ಗುಣಮಟ್ಟ ಶಾಲಾಹಂತದಲ್ಲೇ ಹಣಿಕಿಕ್ಕುತ್ತದೆ. ಈ ನಿಟ್ಟಿನಲ್ಲಿ ನಾಟಕೀಯವಾದ ಬದಲಾವಣೆಯೇ ಅಗತ್ಯವೆನಿಸಿದ್ದು, ಉತ್ತಮ ಗುಣಮಟ್ಟದ ಸಾಧನೆಗೆ ಈ ಕೆಳಗಿನ ಕೆಲವು ಅಂಶಗಳನ್ನು ಪರಿಶೀಲಿಸಬಹುದು. ಮೊದಲನೆಯದಾಗಿ ಇಂದಿನ ಶಿಕ್ಷಣವ್ಯವಸ್ಥೆಯ ಮೂಲವನ್ನು ಮತ್ತು ಇದರಲ್ಲಿರುವ ದೋಷಗಳನ್ನು ಕಂಡುಹಿಡಿಯಬೇಕು. ಎರಡನೆಯದಾಗಿ, ಹೊಸ ಸವಾಲುಗಳನ್ನು ಎದುರಿಸುವುದಕ್ಕಾಗಿ ತಂತ್ರಜ್ಞಾನದ ಮುಂದುವರಿಕೆಯನ್ನು ಬಳಸಿಕೊಳ್ಳಬೇಕು; ಮತ್ತು ಮೂರನೆಯದಾಗಿ, ಪರಂಪರೆಯಿಂದ ಬಂದ ಶಿಕ್ಷಣದ ಒಳ್ಳೆಯ ಅಂಶಗಳನ್ನು ಮರಳಿ ಶೋಧಿಸಬೇಕು.
ಪಾರಂಪರಿಕ ಭಾರತಕ್ಕಿದೆ ಸಾಮರ್ಥ್ಯ
ಈ ಸಂಬಂಧವಾಗಿ ಪೂಜ್ಯ ಗುರು ದಲಾ ಲಾಮಾ ಅವರು ಏಪ್ರಿಲ್ ೩ರಂದು ನೀಡಿದ ಹೇಳಿಕೆ ಗಮನಾರ್ಹ ಮತ್ತು ಸಕಾಲಿಕವೆನಿಸುತ್ತದೆ. ಶಿಕ್ಷಣದಲ್ಲಿ ಪ್ರಾಚೀನ ಭಾರತೀಯ ಪರಂಪರೆಯನ್ನು ಹೇಗೆ ಸೇರಿಸಿಕೊಳ್ಳಬಹುದು ಎಂಬ ಬಗ್ಗೆ ಚರ್ಚೆ ನಡೆಯಬೇಕು. ಜಗತ್ತಿನ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ತನ್ನ ಪ್ರಾಚೀನ ಪರಂಪರೆಯನ್ನು ಆಧುನಿಕ ಶಿಕ್ಷಣದೊಂದಿಗೆ ಮೇಳೈಸುವ ಸಾಮರ್ಥ್ಯ ಭಾರತಕ್ಕಿದೆ ಎಂದವರು ಹೇಳಿದ್ದರು. ಇದು ನಿಜವಾಗಿಯೂ ಅಮೂಲ್ಯ ಮತ್ತು ಒಳನೋಟದಿಂದ ಕೂಡಿದ ಸಲಹೆಯಾಗಿದೆ; ಏಕೆಂದರೆ ಒಂದು ಕಾಲದಲ್ಲಿ ಭಾರತವು ಜಗತ್ತೇ ಮತ್ಸರಗೊಳ್ಳುವಂತಹ ಶಿಕ್ಷಣ ವಿಧಾನವನ್ನು ರೂಪಿಸಿಕೊಂಡಿತ್ತು; ನಾಲಂದಾ ಮತ್ತು ತಕ್ಷಶಿಲಾ ಅದಕ್ಕೆ ಉದಾಹರಣೆಗಳು.
ಈ ನಡುವೆ ಏಪ್ರಿಲ್ ೨೯ರಂದು ಮಧ್ಯಪ್ರದೇಶ ಮುಖ್ಯಮಂತ್ರಿಗಳು, ರಾಜ್ಯಸರ್ಕಾರದ ವತಿಯಿಂದ ಗುರುಕುಲಗಳನ್ನು ನೋಂದಣಿಗೊಳಿಸಿ, ಅವುಗಳನ್ನು ಮುಖ್ಯವಾಹಿನಿಯ ಶಾಲೆಗಳಿಗೆ ಸಮಾನವಾಗಿ ಪರಿಗಣಿಸಲಾಗುವುದು ಎಂದು ಪ್ರಕಟಿಸಿದರು. ಕೆಲವು ವಿಶ್ಲೇಷಕರು ಅದೊಂದು ಅತಿರೇಕದ ಚಿಂತನೆ ಎಂದು ವ್ಯಂಗ್ಯವಾಡಿದರು; ನಾವಂದುಕೊಂಡಂತೆ ಅದು ಅಷ್ಟೇನೂ ಆಕರ್ಷಕವಲ್ಲದ ಪ್ರಸ್ತಾವವೂ ಇರಬಹುದು.
ಗಮನಾರ್ಹವಾದ ಸಂಗತಿಯೆಂದರೆ, ತಂತ್ರಜ್ಞಾನದ ಪ್ರಗತಿಯಿಂದಾಗಿ ಗುರುಕುಲ ಸೇರಿದಂತೆ ಸಾಂಪ್ರದಾಯಿಕ ಪದ್ಧತಿಗಳ ಬಗ್ಗೆ ಪರಿಶೀಲಿಸುವುದು ಸಾಧ್ಯವಷ್ಟೇ ಅಲ್ಲ, ಅನಿವಾರ್ಯ ಎನ್ನುವ ದಿನಗಳು
ಬರುತ್ತಿವೆ ಎನಿಸುತ್ತದೆ. ಇದು ಶುದ್ಧ ಪ್ರಾಯೋಗಿಕ ಪರಿಕಲ್ಪನೆ. ಕಳೆದ ಕೆಲವು ಶತಮಾನಗಳಲ್ಲಿ ನಾವು ಯಾವೊಂದು ಶಿಕ್ಷಣವ್ಯವಸ್ಥೆಯನ್ನು ರೂಪಿಸಿಕೊಂಡಿದ್ದೇವೋ ಅದು ಸಾಮ್ರಾಜ್ಯಶಾಹಿಗಳ ಆವಶ್ಯಕತೆಗಳನ್ನು ಪೂರೈಸುವಂಥದ್ದು ಮತ್ತು ಅವರು ನಮ್ಮ ಮೇಲೆ ಹೇರಿದ್ದು. ಅದನ್ನೀಗ ಪುನರ್ವಿಮರ್ಶೆಗೆ ಒಳಪಡಿಸಬೇಕಾಗಿದೆ.
ಪದ್ಧತಿ ಪಾಶ್ಚಿಮಾತ್ಯ; ಗುಣಮಟ್ಟದ ಕುಸಿತ
ವಸಾಹತುಶಾಹಿ ಶಿಕ್ಷಣಪದ್ಧತಿಯು (ಮೊದಲನೇ) ಕೈಗಾರಿಕಾ ಕ್ರಾಂತಿಯ ಉತ್ಪನ್ನವಲ್ಲದೆ ಬೇರೇನೂ ಅಲ್ಲ. ಅದು ವಿಲಿಯಂ ಬ್ಲೇಕ್ ಹೇಳುವ ಸೈತಾನನ ಕಪ್ಪು ಕಾರ್ಖಾನೆಗಳು ಎಂಬ ಕಲ್ಪನೆಗೆ ಅನುಗುಣವಾಗಿ ಮನುಷ್ಯಸಂಬಂಧಗಳನ್ನು ಕಡಿಯಿತು; ಆತ್ಮವನ್ನು ಜಡಗೊಳಿಸುವ ಕೈಗಾರಿಕಾ ಸಂಕೀರ್ಣಗಳ ಮೂಲಕ ಜನರನ್ನು ಕೃಷಿಜೀವನದಿಂದ ಆಚೆಗೆ ತಳ್ಳಿತು. ಈ ಕಾರ್ಖಾನೆಗಳಿಗೆ ಬೇಕಾಗಿದ್ದ ಜನಸಮೂಹ ಯಾವ ತರಹದ್ದೆಂದರೆ ಅವರು ಸಾಕ್ಷರರಾಗಿರಬೇಕು ಮತ್ತು ಪ್ರಶ್ನೆಕೇಳದೆ ಕೊಟ್ಟ ಸೂಚನೆಗಳನ್ನು ಪಾಲಿಸುವವರಾಗಿರಬೇಕು. ಅವರು ಚಿಂತಿಸುವ ಅಗತ್ಯವಿಲ್ಲ ಅಥವಾ ಸೃಷ್ಟಿಶೀಲರಾಗುವುದು ಕೂಡಬೇಕಾಗಿಲ್ಲ; ಅದೆಲ್ಲ ಬೇಕಾದದ್ದು ಇಂಜಿನಿಯರ್ಗಳು ಮತ್ತು ಮ್ಯಾನೇಜರುಗಳ ಒಂದು ಸಣ್ಣ ಗುಂಪಿಗೆ.
ಅದೇ ಪದ್ಧತಿಯನ್ನು ಭಾರತಕ್ಕೆ ಆಮದು ಮಾಡಲಾಯಿತು. ಸಾಮ್ರಾಜ್ಯಕ್ಕೆ ಬೇಕಾದ ದುಡಿಯುವ ವರ್ಗವೆಂದರೆ- ಸಿಪಾಯಿಗಳು ಮತ್ತು ಕೂಲಿಗಳು; ಶಿಕ್ಷಣತಜ್ಞ ಮೆಕಾಲೆ ವರ್ಣಿಸಿದಂತೆ ರಕ್ತ ಮತ್ತು ಬಣ್ಣದಲ್ಲಿ ಭಾರತೀಯರು; ಅಭಿರುಚಿ, ಅಭಿಪ್ರಾಯ, ಮಾತು ಹಾಗೂ ಬುದ್ಧಿಶಕ್ತಿಯಲ್ಲಿ ಇಂಗ್ಲಿ?ರು. ಇದು ಈಗ ಮೆಕಾಲೆಯ ಕನಸನ್ನು ದಾಟಿ ಬಹಳ ಮುಂದುವರಿದಿದೆ; ಮತ್ತು ಇದರಿಂದ ಭಾರತಕ್ಕಾದ ಹಾನಿ ಸಣ್ಣದಲ್ಲ. ಸೋವಿಯತ್ ರಷ್ಯಾ ಮಾದರಿಯ ಮೇಲಿನಿಂದ ಕೆಳಕ್ಕೆ ಬರುವ ಕೇಂದ್ರೀಕೃತ ಶಿಕ್ಷಣ ಮತ್ತು ಸಂಶೋಧನ ಪದ್ಧತಿಯು ನಮ್ಮಲ್ಲಿ ಬಂದಿತು; ಆದರೆ ಸ್ವತಂತ್ರ ಚಿಂತನೆಯೇ ಅದರಿಂದ ನಾಶವಾಯಿತು. ಪರಿಣಾಮವಾಗಿ ದೇಶದ ಶಿಕ್ಷಣದ ಗುಣಮಟ್ಟ ಕುಸಿಯುತ್ತಾ ಬಂದಿದೆ.
ಈ ಶಿಕ್ಷಣ ಮತ್ತು ನಮ್ಮಲ್ಲಿ ಹಿಂದೆ ಇದ್ದ ಶಿಕ್ಷಣವ್ಯವಸ್ಥೆಗಳು ಪೂರ್ತಿ ವಿಭಿನ್ನವಾಗಿವೆ. ಹಿಂದಿನ ಶಿಕ್ಷಣದ ಬಗ್ಗೆ ನಮಗೆ ಹೆಚ್ಚು ಗೊತ್ತಿಲ್ಲ. ಧರ್ಮಪಾಲ್ ಅವರ ಗ್ರಂಥಗಳು ಸೇರಿದಂತೆ ಲಭ್ಯವಿರುವ ಅಲ್ಪಸ್ವಲ್ಪ ಮಾಹಿತಿಯನ್ನು ಆಧರಿಸಿ ಹೇಳುವುದಾದರೆ, ನಮ್ಮಲ್ಲಿ ವಿಶಾಲವಾದ ಮಾನವಿಕ (ವಿಷಯಗಳ) ಶಿಕ್ಷಣ ವ್ಯವಸ್ಥೆಯಿತ್ತು. ಅದು ಜೀವನಕ್ಕೆ ಸಮೀಪವಾಗಿದ್ದು, ಪ್ರಾಯೋಗಿಕ ಸಮಸ್ಯೆಗಳನ್ನು ಪರಿಹರಿಸುವಂತಿತ್ತು. ಸಾಂದರ್ಭಿಕ ಸಾಕ್ಷ್ಯಗಳು ಇದನ್ನು ದೃಢಪಡಿಸುತ್ತವೆ. ಏಕೆಂದರೆ ಪ್ರಾಚೀನ ಭಾರತದಲ್ಲಿ ಅದ್ಭುತವಾದ ಸಂಶೋಧನೆಗಳು, ಬೌದ್ಧಿಕ ಸಾಧನೆಗಳು ನಡೆದಿದ್ದವು. ಪಾಣಿನಿಯ ವ್ಯಾಕರಣ, ಪೈ ಮತ್ತು ಟ್ರಿಗೊನೊಮೆಟ್ರಿ ಬಗೆಗಿನ ಶೋಧಗಳು, ನ್ಯಾನೋ-ಕಾರ್ಬನ್ ಲೋಹಶಾಸ್ತ್ರ – ಊಟ್ಜ್ (ಉಕ್ಕು) ಕುರಿತು ತಮಿಳು ಉರುಕ್ಕುಗಳಲ್ಲಿ ಉಲ್ಲೇಖವಿದೆ.
ಈಗ ನಾಲ್ಕನೇ ಕೈಗಾರಿಕಾ ಕ್ರಾಂತಿ ನಮ್ಮನ್ನು ಆವರಿಸುತ್ತಿದೆ; ವಿಶೇ?ವಾಗಿ ಕಂಪ್ಯೂಟರಿನ ಶಕ್ತಿ ಮತ್ತು ಕೃತಕ ಬುದ್ಧಿಮತ್ತೆಗಳು ಮೊದಲ ಕೈಗಾರಿಕಾ ಕ್ರಾಂತಿಯ ಫಲಗಳನ್ನು ಶೂನ್ಯಗೊಳಿಸುತ್ತಿವೆ. ತನ್ನ ಸಿನೆಮಾ ಹಾರ್ಡ್ ಟೈಮ್ಸ್ನಲ್ಲಿ ಚಾರ್ಲಿ ಚಾಪ್ಲಿನ್ ತೋರಿಸುವಂತಹ ಕೂಲಿಕಾರರ ಸಮೂಹ ನಮಗಿಂದು ಬೇಕಾಗಿಲ್ಲ. ರೋಬೋಗಳು ಇಂದು ಕಾರ್ಖಾನೆಗಳನ್ನು ನಡೆಸುವ ಮತ್ತು ಬಿಳಿಕಾಲರ್ ಕೆಲಸಗಳನ್ನು ನಿರ್ವಹಿಸುವ ಮಟ್ಟಕ್ಕೆ ಬೆಳೆದುನಿಂತಿವೆ. ಆಕ್ಸ್ಫರ್ಡ್ ನಡೆಸಿದ The Future of Employment – How Susceptible Are Jobs to Computerisation?’ ಎನ್ನುವ ಪ್ರಸಿದ್ಧ ಅಧ್ಯಯನದ ಪ್ರಕಾರ ಇಂದು ಇರುವ ಒಟ್ಟು ಉದ್ಯೋಗಗಳಲ್ಲಿ ಶೇ. ೪೭ರಷ್ಟು ಮುಂದಿನ ೨೦ ವರ್ಷಗಳಲ್ಲಿ ಗತಾರ್ಥವಾಗಲಿವೆ. ಇಂಜಿನಿಯರ್ಗಳು ಹಿಂದೆ ಸ್ಲೈಡ್ರೂಲ್ಗಳು ಮತ್ತು ಲಾಗ್ ಟೇಬಲ್ಗಳನ್ನು ಬಳಸುತ್ತಿದ್ದರು; ಎಲೆಕ್ಟ್ರಾನಿಕ್ ಕ್ಯಾಲ್ಕ್ಯುಲೇಟರ್ನಿಂದ ಅವು ಮೂಲೆಗೆ ಹೋಗಿವೆ. ಹಿಂದೆ ನೇವಿಗೇಶನ್ಗೆ ಕಾಗದದ ಮ್ಯಾಪ್ಗಳಿದ್ದರೆ ಈಗ ಜಿಪಿಎಸ್ ಮತ್ತು ಗೂಗಲ್ ಮ್ಯಾಪ್ ಬಂದು ಅವನ್ನೆಲ್ಲ ಬದಿಗೊತ್ತಿವೆ. ಈ ಮೂಲಕ ಶಿಕ್ಷಣದ ಆಧಾರದಂತಿದ್ದು ಪರೀಕ್ಷೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದ ಜ್ಞಾಪಕಶಕ್ತಿ, ಬಾಯಿಪಾಠಗಳು ಮುಂದಿನ ದಿನಗಳಲ್ಲಿ ಉಪಯುಕ್ತ ಕೌಶಲಗಳು ಎನಿಸಲಾರವು.
ಕೆಲಸ ಮತ್ತು ವೃತ್ತಿ – ಬದಲಾವಣೆ
ಅವಲ್ಲದೆ ಕೆಲಸದ ಸ್ವರೂಪ ಬಹಳ ವೇಗವಾಗಿ ಬದಲಾಗುತ್ತಿದೆ. ಹಿಂದೆ ಜನ ಕೆಲಸ (job) ಬದಲಾಯಿಸುತ್ತಿದ್ದರೆ ಈಗ ವೃತ್ತಿಯನ್ನೇ (career) ಬದಲಾಯಿಸುತ್ತಾರೆ; ಕೆಲವರು ತಮ್ಮ ಆಸಕ್ತಿ ಬದಲಾದಂತೆ ಮತ್ತು ಅವಕಾಶಗಳು ಸಿಕ್ಕಿದಂತೆ ೩-೪ ಬಾರಿ ವೃತ್ತಿಯನ್ನು ಬದಲಿಸುತ್ತಿದ್ದಾರೆ. ಅಲ್ಲದೆ ಗಳಿಸಿದ ಜ್ಞಾನಜೀವಮಾನ ಬಹುಬೇಗ ಮುಗಿದುಹೋಗುತ್ತಿದೆ. ಹತ್ತು ವರ್ಷಗಳ ಹಿಂದೆ ನೀವು ಗಳಿಸಿದ ಕಂಪ್ಯೂಟರ್ ಜ್ಞಾನ ಇಂದು ಅರ್ಥಹೀನವಾಗುತ್ತಿದೆ; ಆದ್ದರಿಂದ ನೀವು ಸದಾ ಕಲಿಯುತ್ತಲೇ ಇರಬೇಕಾಗುತ್ತದೆ.
ಉದ್ಯೋಗ ಎಂಬುದರ ಅಸ್ತಿತ್ವವೇ ಅಲುಗಾಡುತ್ತಿದೆ. ದೊಡ್ಡ ಸಂಸ್ಥೆಗಳ ನಿರ್ವಹಣೆ ಸುಲಭವಾಗುತ್ತಿದೆ. ವ್ಯವಹಾರದ ವೆಚ್ಚ ಕಡಮೆಯಾಗುತ್ತಿದೆ (ರೊನಾಲ್ಡ್ ಕೋಸ್ನ ಸಿದ್ಧಾಂತದ ಪ್ರಕಾರ). ಹಗುರ ಆರ್ಥಿಕತೆ (gig economy) ಬೆಳೆದಂತೆ ಈ ಬದಲಾವಣೆ ಆಗುತ್ತಿದೆ. ದೂರವು ಇಲ್ಲವಾಗುತ್ತಿದೆ (death
of distance). ಇದಕ್ಕೆ ಬದಲಾಗಿ ಒಕ್ಕೂಟಗಳು (federations) ಬರಬಹುದು; ಅದರಂತೆ ಒಂದು ನಿರ್ದಿ? ಕೆಲಸಕ್ಕಾಗಿ ಸ್ವತಂತ್ರವಾಗಿರುವ ಕೆಲಸಗಾರರು ಒಂದೆಡೆ ಸೇರಬಹುದು; ಮತ್ತೆ ದೂರವಾಗಬಹುದು.
ಭಯಹುಟ್ಟಿಸುವ ಒಂದು ಅಂಶವೆಂದರೆ, ತಮ್ಮ ಕೌಶಲವು ನಿರುಪಯುಕ್ತವಾದ ಕಾರಣ ಒಂದು ದೊಡ್ಡ ಜನವರ್ಗ ಶಾಶ್ವತವಾಗಿ ನಿರುದ್ಯೋಗಿಗಳಾಗಬಹುದು. ಹಿಂದೆ ಒಂದು ಕೆಲಸ ಇಲ್ಲವಾದಾಗ ಅದರಲ್ಲಿದ್ದವರಿಗೆ ಬೇರೆ ತರಬೇತಿ ನೀಡಿ ಉದ್ಯೋಗದಲ್ಲಿ ಮುಂದುವರಿಸುವ ಕ್ರಮ ಇತ್ತು. (ಉದಾ. – ಎಟಿಎಂ ಬಂದಾಗ ಕೆಲಸ ಇಲ್ಲವಾದ ಬ್ಯಾಂಕ್ ಸಿಬ್ಬಂದಿಯನ್ನು ಜನಸಂಪರ್ಕದ ಮ್ಯಾನೇಜರ್ಗಳಾಗಿ ಬಳಸಿಕೊಳ್ಳಲಾಯಿತು.) ಅದು ಇನ್ನು ಹೆಚ್ಚು ಕಾಲ ನಡೆಯಲಾರದು. ಕೆಲವು ಕ್ಷೇತ್ರಗಳಲ್ಲಿ ಸಾರ್ವತ್ರಿಕ ಮೂಲಭೂತ ಆದಾಯದ (Universal Basic Income) ಪರಿಕಲ್ಪನೆ ಕಂಡುಬರುತ್ತಿದೆ; ಅಂದರೆ ಕೆಲವರು ಕಾಲಕಳೆದಂತೆ ಹೆಚ್ಚುವರಿ ಮತ್ತು ನಿರುಪಯುಕ್ತ ಎನಿಸುತ್ತಾರೆ. ಹಾಗಾಗದಂತೆ ನೋಡಿಕೊಳ್ಳಬೇಕಿದ್ದರೆ ಪ್ರತಿಯೊಬ್ಬರೂ ಆರಂಭದಲ್ಲೇ ಯೋಗ್ಯವಾದ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಈ ರೀತಿಯಲ್ಲಿ ಶಿಕ್ಷಣದ ಬಗೆಗಿನ ಬೇಡಿಕೆಯಲ್ಲಿ ವ್ಯಾಪಕ ಬದಲಾವಣೆಯಾಗಿದೆ. ಜನ ಕ್ರಮೇಣ ತುಂಬ ಸ್ಥಿತಿಸ್ಥಾಪಕ ಗುಣ ಇರುವ ಶಿಕ್ಷಣವನ್ನು ಬಯಸುತ್ತಾರೆ, ಅಂದರೆ ಸಮಸ್ಯೆ ಎದುರಾದಾಗ ಅದಕ್ಕೆ ಹೊಂದುವಂತೆ ತಮ್ಮನ್ನು ಬದಲಿಸಿಕೊಳ್ಳಲು ಸಾಧ್ಯವಾಗಬೇಕು. ಅದರ ಮೂಲಕ ನಿರುದ್ಯೋಗಿಗಳಾಗದೆ ಮುಕ್ತ ಏಜೆಂಟರಂತೆ ಕೆಲಸ ಮಾಡಿ ಆದಾಯ ಗಳಿಸಲು ಸಾಧ್ಯವಾಗಬೇಕು.
ಕೃತಕ ಬುದ್ಧಿಮತ್ತೆ
ಅದೃಷ್ಟವಶಾತ್, ಪೂರೈಕೆಯ ದಿಕ್ಕಿನಲ್ಲಿ ಕೂಡ ಬದಲಾವಣೆಗಳಾಗುತ್ತಿವೆ; ಅದರಲ್ಲಿ ತಂತ್ರಜ್ಞಾನ ಮತ್ತು ಪಾರಂಪರಿಕ ಕಲಿಕೆಗಳು ಸಹಕರಿಸಬಲ್ಲವು. ತಂತ್ರಜ್ಞಾನದ ಸಾಧ್ಯತೆಗಳನ್ನು ಗಮನಿಸಿ. ಈಗ ಕೃತಕ ಬುದ್ಧಿಶಕ್ತಿಯ ಅನ್ವಯದ ಮೂಲಕ ಒಂದು ಪಾಠಪಟ್ಟಿ, ಪಾಠಕ್ರಮ, ಪರೀಕ್ಷೆ, ಸ್ವಯಂಶಿಕ್ಷಣ – ಇವು ಸಾಧ್ಯ. ಆಯಾ ವ್ಯಕ್ತಿಗನುಗುಣವಾಗಿ ಇದನ್ನು ಪಡೆದುಕೊಳ್ಳಬಹುದು.
ದೊಡ್ಡದಾದ ಕ್ಲಾಸ್ರೂಮಿಗೆ ಬದಲು ಬೇರೆ ವಿಧಾನವನ್ನು ಅನುಸರಿಸಬಹುದು. ಕ್ಲಾಸ್ರೂಂ ಶಿಕ್ಷಣ ಯಾವಾಗಲೂ ಸಾಮಾನ್ಯ ಮಟ್ಟದ ವಿದ್ಯಾರ್ಥಿಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ. ಅದರಿಂದ ಬುದ್ಧಿವಂತರು, ದಡ್ಡರು ಇಬ್ಬರಿಗೂ ನಷ್ಟ; ವಿದ್ಯಾರ್ಥಿಗಳಿಗೆ ಅವರವರ ಆಸಕ್ತಿ, ಸಾಮರ್ಥ್ಯದಂತೆ ಕಲಿಸಲು ಅಲ್ಲಿ ಸಾಧ್ಯವಾಗುವುದಿಲ್ಲ. ಭವಿಷ್ಯದ ಶಿಕ್ಷಣದಲ್ಲಿ ಆಲ್ಗೋರಿದಂ ಶಿಕ್ಷಣಕ್ಕೆ ಯಂತ್ರದ ಬಳಕೆ ಸಾಧ್ಯ.ಒಟ್ಟಿನಲ್ಲಿ ಮುಂದೆ ಕೃತಕ ಬುದ್ಧಿಮತ್ತೆಯು ಗುರುಕುಲದ ಗುರುವಿನ ಪಾತ್ರವನ್ನು ನಿರ್ವಹಿಸಬಹುದು. ಗುರುಕುಲದ ಆದರ್ಶ ಸನ್ನಿವೇಶದಲ್ಲಿ ಗುರುವಿಗೆ ಶಿಷ್ಯರ ಸಾಮರ್ಥ್ಯವು ಖಚಿತವಾಗಿ ತಿಳಿದು ಅದರಂತೆ ಕಲಿಸುತ್ತಿದ್ದರು; ಏಕೆಂದರೆ ಅವರು ಒಟ್ಟಿಗೇ ವಾಸಿಸುತ್ತಿದ್ದರು. ಅದರಿಂದ ಶಿಷ್ಯನ ಪ್ರತಿಭೆಗಳು ಕ್ರಮಕ್ರಮವಾಗಿ ವಿಕಾಸಗೊಳ್ಳುತ್ತಿದ್ದವು.
ಏಕಮುಖ ಕಲಿಕೆಗೆ ಬದಲಾಗಿ (ಅದರಲ್ಲಿ ಅಧ್ಯಾಪಕ ಭಾಷಣ ಮಾಡುತ್ತಿರುತ್ತಾನೆ) ಬಹುಮುಖೀ ಕಲಿಕೆಗೆ
ಅವಕಾಶ ಕಲ್ಪಿಸಬಹುದು; ಅದರಲ್ಲಿ ವಿದ್ಯಾರ್ಥಿಗಳ ನಡುವೆಯೂ ಕೊಡು-ಕೊಳ್ಳುವಿಕೆಗೆ ಅವಕಾಶವಿರುತ್ತದೆ. ಇದರಲ್ಲಿ ತಡೆಸೂತ್ರ – ಬ್ಲಾಕ್ಚೈನ್ ತಂತ್ರದ ಬಳಕೆ ಇರುತ್ತದೆ. ಅದರಿಂದಾಗಿ ಉದ್ಯೋಗದ ಮಾರುಕಟ್ಟೆಯಲ್ಲೂ ಅನುಕೂಲ ಆಗಬಹುದು.
ಅದಲ್ಲದೆ ಎಲ್ಲರಿಗೂ ವಿಪುಲವಾದ ಬೋಧನಸಾಮಗ್ರಿಗಳು ಸಿಗಲಿವೆ. ಮುಂದಿನ ದಿನಗಳಲ್ಲಿ ಯಾವುದೂ ದೂರ ಎನಿಸುವುದಿಲ್ಲ. ೪ಜಿ ಮತ್ತು ಒಂದು ಸ್ಮಾರ್ಟ್ಫೋನ್ ಲಭ್ಯವಾದಾಗ ದೇಶದ ಹೆಚ್ಚಿನ ವಿದ್ಯಾರ್ಥಿಗಳಿಗೆ ಬಹಳಷ್ಟು ಆನ್ಲೈನ್ ಕೋರ್ಸುಗಳು ಅಥವಾ ಮೂಕ್ಗಳು (ಎಂಓಓಸಿ) ಕೈಗೆಟುಕುತ್ತವೆ; ಅವುಗಳಲ್ಲಿ ಹೆಚ್ಚಿನವು ಉಚಿತ. ಇಲ್ಲಿ ಖಾನ್ ಅಕಾಡೆಮಿ, Courseera, Udacity, ಟೆಡ್, ವಿಕಿಪೀಡಿಯ, ಎಡ್ಎಕ್ಸ್ ಮತ್ತು ಅದೇ ರೀತಿ ಭಾರತೀಯ ಸಂಸ್ಥೆಗಳೂ ಇವೆ; ಇನ್ನು ಯೂಟ್ಯೂಬ್ ಇದ್ದೇ ಇದೆ. ಒಬ್ಬ ಉತ್ತಮ ಅಧ್ಯಾಪಕನಿಂದ ಶಿಕ್ಷಣ ಪಡೆಯುವುದಕ್ಕೆ ನೀವು ಒಂದು ಉತ್ತಮ ಸಂಸ್ಥೆಯಲ್ಲಿ ಪ್ರವೇಶ ಪಡೆಯುವ ಅಗತ್ಯವೇ ಇಲ್ಲ (ಆದರೆ ವಿಶ್ವವಿದ್ಯಾಲಯಗಳಿಗೆ ಅವುಗಳದ್ದಾದ
ಮೌಲ್ಯ, ಪದವಿನೀಡಿಕೆಯ ಅರ್ಹತೆ ಇತ್ಯಾದಿ ಇದೆ ಎಂಬುದು ನಿಜ).
ಪರಿಶ್ರಮಕ್ಕಿದೆ ಪ್ರತಿಫಲ
೨೦೧೮ ಮೇ ೯ರ ವರದಿಯಲ್ಲಿ ಗಮನಿಸಬೇಕಾದ ಕೆಲವು ಅಂಶಗಳಿವೆ; ಅದು ಮನಸ್ಸನ್ನು ಕಲಕುವಂಥದು. ಕೇರಳದ ಎರ್ನಾಕುಳಂ ರೈಲುನಿಲ್ದಾಣದ ಕೂಲಿ ಶ್ರೀನಾಥ್ ಕೇರಳ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣನಾದ. ರೈಲು ನಿಲ್ದಾಣದಲ್ಲಿ ವೈ-ಫೈ ಮೂಲಕ ಪ್ರಶ್ನಪತ್ರಿಕೆಗಳು, ಆನ್ಲೈನ್ ಪರೀಕ್ಷೆ ಫಾರ್ಮ್ ಮುಂತಾದವನ್ನು ಆತ ಡೌನ್ಲೋಡ್ ಮಾಡಿಕೊಂಡಿದ್ದ. ತನ್ನ ಸ್ಮಾರ್ಟ್ಫೋನ್ ಮತ್ತು ಇಯರ್ಫೋನ್ಗಳನ್ನಷ್ಟೇ ಬಳಸಿಕೊಂಡಿದ್ದ ಆತ ಚೆನ್ನಾಗಿ ಕಲಿತು ಲಿಖಿತ ಪರೀಕ್ಷೆಗಳಲ್ಲಿ ಪಾಸಾದ. ಏನೂ ಖರ್ಚಿಲ್ಲದೆ ಸ್ವಯಂ ಅಧ್ಯಯನಕ್ಕೆ ಇದು ಶ್ರೇಷ್ಠ ಉದಾಹರಣೆ.
ಬಡವಿದ್ಯಾರ್ಥಿ ಶ್ರೀನಾಥ್ ಇದನ್ನು ಸಾಧಿಸಬಹುದಾದರೆ ಸ್ಥಿತಿವಂತರಾದ ಮಧ್ಯಮವರ್ಗದ ವಿದ್ಯಾರ್ಥಿಗಳು ಅಥವಾ ವಯಸ್ಕರು ‘ಮೂಕ್’ಗಳ ಮೂಲಕ ಬಹಳಷ್ಟು ವಿಷಯಗಳ ಅಧ್ಯಯನ ಮಾಡಬಹುದು; ಇದರಲ್ಲಿ ಗಮನವಿಡಬೇಕಾದ ಅಂಶವೆಂದರೆ, ಹೇಗೆ ಕಲಿಯಬೇಕು ಎಂಬುದು; ಮತ್ತು ಮುಂದೆ ನಿರುಪಯುಕ್ತ ಆಗಬಹುದಾದ್ದನ್ನು ಕಲಿಯಬಾರದು.
ಮಾನವಿಕ ವಿಷಯಗಳಿಗೆ ಮತ್ತೆ ಮಣೆ
ಎರಡನೆಯದಾಗಿ, ಭವಿ?ದಲ್ಲಿ ಸ್ಟೆಮ್ (ಸಯನ್ಸ್, ಟೆಕ್ನಾಲಜಿ, ಇಂಜಿನಿಯರಿಂಗ್ ಮತ್ತು ಮೆಥಮೆಟಿಕ್ಸ್) ವಿಷಯಗಳು ಪರ್ಯಾಪ್ತವಾಗಲಾರದು. ಭಾರತದಲ್ಲಿ ಈ ನಾಲ್ಕು ವಿಷಯಗಳು ಉಪಯುಕ್ತ, ಅರ್ಥಪೂರ್ಣ ಎಂಬ ಭಾವನೆಯಿದೆ; ಬದಲಾಗಿ ಮಾನವಿಕ ವಿಷಯಗಳು ದುರ್ಬಲ, ಬಹುತೇಕ ನಿರುಪಯುಕ್ತ ಎಂಬ ಅಭಿಪ್ರಾಯವಿದೆ. ನಿಜವೆಂದರೆ, ಸ್ಟೆಮ್ ವಿಷಯಗಳೀಗ ಅಸಂಗತವೆನಿಸಿ ವಾಸ್ತವಜ್ಞಾನದಲ್ಲಿ ಅವುಗಳಿಗೆ ಸ್ಥಾನವಿಲ್ಲ ಎಂಬಂತಾಗಿದೆ. ಇಂಜಿನಿಯರುಗಳು ಕಂಪ್ಯೂಟರ್ನಲ್ಲಿ ವಿನ್ಯಾಸವನ್ನು ಮಾಡುತ್ತಾರೆ; ಕೈಯಿಂದ ಯಾರೂ ಮಾಡುವುದಿಲ್ಲ; ಅದು ಕೆಳಹಂತದವರ ಕ್ರಮ ಎನ್ನುವ ಭಾವನೆಯಿದೆ; ಏಕೆಂದರೆ ಕೈಯಿಂದ ಮಾಡಿದರೆ ಕೈಕೊಳೆಯಾಗುತ್ತದೆ!
ಪಾರಂಪರಿಕ ಭಾರತೀಯ ಶಿಕ್ಷಣಕ್ರಮದೊಂದಿಗೆ ಹೋಲಿಸಿದರೆ ಇದು ಪೂರ್ತಿ ವಿರುದ್ಧ ಎನಿಸುತ್ತದೆ. ಪಾರಂಪರಿಕ ಶಿಕ್ಷಣವು ಪ್ರಾಯೋಗಿಕಕ್ಕೆ ಒತ್ತುನೀಡಿತ್ತು. ೩,೦೦೦ ವರ್ಷಗಳ ಹಿಂದಿನ ಬೌಧಾಯನದ ಶುಲ್ಬ ಸೂತ್ರಗಳು ಕೆಲಸಗಳನ್ನು ಕೈಯಿಂದಲೇ ಮಾಡಬೇಕೆಂದು ಹೇಳುತ್ತವೆ. ಉದಾಹರಣೆಗೆ, ಅಗ್ನಿಕುಂಡದ ನಿರ್ಮಾಣ. ಬೌಧಾಯನನಿಗೆ ಪೈಥಾಗೊರಸ್ ಸಿದ್ಧಾಂತ ಗೊತ್ತಿತ್ತು; ಅದನ್ನು ಬೌಧಾಯನ ಎಂದು ಕೂಡ ಈಗ ಕರೆಯುತ್ತಾರೆ. ಅದು ಸೈದ್ಧಾಂತಿಕ ಸೂತ್ರಕ್ಕಿಂತ ಹೆಚ್ಚಾಗಿ ಸಮಸ್ಯೆಯ ಪ್ರಾಯೋಗಿಕ ಪರಿಹಾರವಾಗಿತ್ತು (ಮಂಜುಲ ಭಾರ್ಗವ ಇದನ್ನು ವಿವರಿಸಿದ್ದಾರೆ). ಪೈಥಾಗೊರಸ್ ಸಿದ್ಧಾಂತವನ್ನು ತಿಳಿದಿದ್ದ ಭಾರತೀಯರು ಅದನ್ನು ವ್ಯಾಪಕವಾಗಿ ಬಳಸಿದರೆ ಚೀನೀಯರು ಅದಕ್ಕೆ ಔಪಚಾರಿಕವಾದ ಪುರಾವೆಯನ್ನು ಒದಗಿಸಿದರು.
ಹಿಂದೆ ಪ್ರಾಯೋಗಿಕಕ್ಕೆ ಒತ್ತು ನೀಡುತ್ತಿದ್ದ ಭಾರತೀಯರಾದ ನಾವು ನಡುವೆ ಎಲ್ಲೋ ಆ ಗುಣವನ್ನು ಕಳೆದುಕೊಂಡೆವು. ಅದರಿಂದಾಗಿ ಪ್ರಬಂಧಗಳನ್ನು ಧಾರಾಳ ಬರೆದೆವಲ್ಲದೆ ಸಂಬಂಧಪಟ್ಟ ವಸ್ತುವನ್ನು ಉತ್ಪಾದಿಸಲಿಲ್ಲ; ಸ್ವಾತಂತ್ರ್ಯಾನಂತರ ಇದು ಸ್ವಷ್ಟವಾಗಿ ಕಾಣಿಸುತ್ತದೆ. ಇದು ಆತಂಕಕಾರಿ. ಬ್ರಿಟಿಷ್ ಸಾಮ್ರಾಜ್ಯದ ಅಡಿಯಲ್ಲಿ ನಮ್ಮಲ್ಲಿ ಸಿ.ವಿ. ರಾಮನ್, ಜೆ.ಸಿ. ಬೋಸ್, ಎಸ್.ಎನ್. ಬೋಸ್, ಶ್ರೀನಿವಾಸ ರಾಮಾನುಜನ್ ಎಲ್ಲ ಆಗಿಹೋದರು. ಸ್ವಾತಂತ್ರ್ಯಾನಂತರ ನಮ್ಮ ಶಿಕ್ಷಣ ಎಷ್ಟು ಕೆಟ್ಟುಹೋಗಿದೆ ಎಂಬುದಕ್ಕೆ ಇದೊಂದೇ ಉದಾಹರಣೆ ಸಾಕು.
ವಸ್ತುಗಳ ಭೌತಿಕ ನಿರ್ಮಾಣಕ್ಕೆ ಪ್ರೋತ್ಸಾಹ ನೀಡುವ ಉತ್ಪಾದನಾ ಆಂದೋಲನ (The Maker Movement) ಕೂಡ ಪುಸ್ತಕದ ಬದನೆಕಾಯಿಗೆ ಇನ್ನೊಂದು ಉದಾಹರಣೆ ಆಗಬಹುದು (ಒಂದು
ಉದಾಹರಣೆ ೩ಡಿ ಮುದ್ರಣ). ನಮಗೆ ಅಂಟಿದ ಇನ್ನೊಂದು ಸಮಸ್ಯೆ ಇಂಗ್ಲಿ?ನ ವ್ಯಾಮೋಹ. ಇಂಗ್ಲಿಷ್ ಜ್ಞಾನದಿಂದಾಗಿ ನಮ್ಮ ಸಂಶೋಧಕರು ಇತರರ ಸಂಶೋಧನೆಯನ್ನು ಮೂಲದಲ್ಲೇ ಓದಿಕೊಂಡು ಪ್ರಯೋಜನ ಪಡೆಯಲು ಸಾಧ್ಯವಾಯಿತೆಂದು ಕೆಲವರು ವಾದಿಸುತ್ತಾರೆ. ಆದರೆ ತಮ್ಮದೇ ಭಾಷೆಗೆ ಅಂಟಿಕೊಂಡಿರುವ ಚೀನೀಯರು ಅಮೆರಿಕದವರಿಗಿಂತ ಹೆಚ್ಚು ಸಂಶೋಧನ ಪ್ರಬಂಧಗಳನ್ನು ಬರೆದಿದ್ದಾರೆ; ಪೇಟೆಂಟ್ಗಳನ್ನು ಮಾಡಿಕೊಂಡಿದ್ದಾರೆ. ವೈದ್ಯಕೀಯ ಅಥವಾ ಕಾನೂನಿನಂತೆಯೇ ತಾಂತ್ರಿಕ ವಿಷಯಗಳಿಗೆ ಕೂಡ ನಾವು ನಮ್ಮ ಮಾತೃಭಾ?ಗಳತ್ತ ತಿರುಗುವುದು ಉತ್ತಮವೆನಿಸುತ್ತದೆ.
ರಿಯಲ್-ಟೈಮ್ ಟ್ರಾನ್ಸ್ಲೇಶನ್ (ಅನುವಾದ) ಮೂಲಕ ನಮ್ಮ ಜನ ವಿವಿಧ ವಿ?ಯಗಳನ್ನು ತಮ್ಮ ಮಾತೃಭಾಷೆಯಲ್ಲೇ ತಿಳಿದುಕೊಳ್ಳಬಹುದು. ಸ್ವಯಂ (ಆಟೊಮೆಟಿಕ್) ಅನುವಾದ ಮಾಮೂಲಾಗಿ ಸಿಕ್ಕಿತೆಂದರೆ ವಿದ್ಯಾರ್ಥಿಗಳಿಗೆ ತಮ್ಮ ಮಾತೃಭಾಷೆಯಲ್ಲೇ ಕಲಿಯಲು ಸಾಧ್ಯವಾಗುತ್ತದೆ. ಮೂಕ್ ಗಳ ಎಲ್ಲ ವಿಷಯಗಳು ಅವರಿಗೆ ಸುಲಭವಾಗಿ ಕರಗತವಾಗುತ್ತವೆ.
ನಮ್ಮ ಪಾರಂಪರಿಕ ಶಿಕ್ಷಣದ ಯಾವ ಅಂಶ ನಮಗೀಗ ಉಪಯುಕ್ತ ಎನ್ನುವ ಪ್ರಶ್ನೆಯನ್ನು ಇಲ್ಲಿ ಇನ್ನೊಮ್ಮೆ ಎತ್ತಬಹುದು. ಧರ್ಮಪಾಲ್ ಅವರು ಹಿಂದೆ ನಮ್ಮಲ್ಲಿ ಇತ್ತೆಂದು ದಾಖಲಿಸಿದ ವಿಷಯಗಳಲ್ಲಿ ವ್ಯಾಕರಣ, ತರ್ಕ, ಗಣಿತ, ಖಗೋಳಶಾಸ್ತ್ರ, ರಸ (ಅಲಂಕಾರಶಾಸ್ತ್ರ), ದರ್ಶನ (ತತ್ತ್ವಶಾಸ್ತ್ರ), ಅರ್ಥಶಾಸ್ತ್ರ (ರಾಜ್ಯಶಾಸ್ತ್ರ) ಮತ್ತು ಪ್ರಮಾಣ(ಪ್ರಮಾಣ-ಪ್ರಮೇಯ ವಿಚಾರ)ಗಳು ಸೇರಿವೆ. ಈ ವಿಷಯಗಳು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎನ್ನುವುದರ ಬಗೆಗೆ ಎರಡುಮಾತಿಲ್ಲ; ಅಂತಹ ವಿದ್ಯಾರ್ಥಿಗಳು ಇನ್ನಷ್ಟು ಹೊಸವಿಷಯಗಳನ್ನು ಕಲಿಯಬಲ್ಲರು. ಇದೇ ಇಂದಿನ ಸಂಕುಚಿತ ತಾಂತ್ರಿಕ ಶಿಕ್ಷಣವನ್ನು ಮೀರಿ, ವಿಶಾಲವಾದ ಮಾನವಿಕ ಶಿಕ್ಷಣ ಎನಿಸಬಲ್ಲದು; ಅಂದರೆ ದಲಾ ಲಾಮಾ ಹೇಳಿದ್ದು ಸರಿ.
ಒಂದು ಅಂಶವಂತೂ ನಿಜ. ಈಗ ಇರುವ ಸಿಬಿಎಸ್ಇ ಅಥವಾ ಇನ್ನೊಂದು ಶಿಕ್ಷಣಕ್ರಮವನ್ನು ಬಿಟ್ಟು ರಾತ್ರೋರಾತ್ರಿ ಗುರುಕುಲ ಪದ್ಧತಿಗೆ ಬದಲಾಯಿಸಿಕೊಳ್ಳಿ ಎಂದು ಯಾರೂ ಹೇಳಲಾರರು. ಆಧುನಿಕ ಶಿಕ್ಷಕರಿಗೆ ಪ್ರಯೋಜನಕಾರಿ ಆಗಬಹುದಾದ ಒಂದೆರಡು ಅಂಶಗಳಾದರೂ ನಮ್ಮ ಪ್ರಾಚೀನ ಗುರುಗಳಲ್ಲಿ ಇದ್ದವು. ಎರಡೂ ಪದ್ಧತಿಗಳ ಒಳ್ಳೆಯ ಅಂಶಗಳನ್ನು ತೆಗೆದು ಒಂದು ಹೊಸ ಶಿಕ್ಷಣ ವ್ಯವಸ್ಥೆಯನ್ನು ರೂಪಿಸುವುದು ಉತ್ತಮ. ಅದರಿಂದ ಭಾರತದ ಮುಂದಿನ ತಲೆಮಾರು ಸ್ಪರ್ಧಾತ್ಮಕವಾಗಿ ರೂಪುಗೊಳ್ಳಬಲ್ಲದು.
ಇಂಗ್ಲಿಷ್ ಮೂಲ: ರಾಜೀವ್ ಶ್ರೀನಿವಾಸನ್ ಅನುವಾದ : ಎಚ್. ಮಂಜುನಾಥ್ ಭಟ್
ಸೌಜನ್ಯ: ಸ್ವರಾಜ್ಯ ಇಂಗಿಷ್ ಮಾಸಪತ್ರಿಕೆ