
ಪೋರ್ಚುಗೀಸರಿಂದ ಆರಂಭಗೊಂಡ ಯೂರೋಪಿಯನ್ ವಸಾಹತು ಕಾಲದಲ್ಲಿ ಆಮದಾದ ಕ್ರೈಸ್ತಮತ ಪ್ರಚಾರ ವಿಷನರಿ’ರಿಗಳ ಚಟುವಟಿಕೆ ದೇಶದೆಲ್ಲೆಡೆ ತನ್ನ ಜಾಲವನ್ನು ವ್ಯವಸ್ಥಿತವಾಗಿ ಹರಡಿದೆ. ಭಾರತೀಯರನ್ನು ಕ್ರೈಸ್ತ ಮತಕ್ಕೆ ಮತಾಂತರಿಸುವುದು ಅವರ ಒಂದಂಶದ ಕಾರ್ಯಕ್ರಮವೆಂದು ಕಂಡುಬಂದರೂ ಅದರ ಮೂಲ ಉದ್ದೇಶ ಮತ್ತು ಮತಾಂತರದ ಕುಟಿಲ ಕಾರ್ಯತಂತ್ರಕ್ಕೆ ಇರುವ ಮುಖಗಳು ಅನೇಕ. ಭಾರತದಲ್ಲಿ ನಾನೂರು ವರ್ಷಗಳಿಗೂ ಮಿಕ್ಕಿ ನಡೆದಿರುವ ಕ್ರೈಸ್ತ ವಿಷನರಿ ಚಟುವಟಿಕೆಗಳ ಧೂರ್ತ ಕೆಲಸಗಳು ಮತ್ತು ಅದಕ್ಕೆ ಬಂದ ಪ್ರತಿರೋಧದ ಸ್ಥೂಲ ಪರಿಚಯವನ್ನು ಚಿಂತಕ-ಲೇಖಕ ಸೀತಾರಾಮ ಗೋಯಲ್ ಅವರ ’ಸ್ಯೂಡೋ ಸೆಕ್ಯುಲರಿಸಮ್ – ಕ್ರಿಶ್ಚಿಯನ್ ಮಿಶನ್ಸ್ ಆಂಡ್ ಹಿಂದು ರೆಸಿಸ್ಟನ್ಸ್’ ಎನ್ನುವ ಪುಸ್ತಕದಲ್ಲಿ ಕಾಣಬಹುದು. ಆಳವಾದ ಅಧ್ಯಯನ ಚಿಂತನೆಗಳ ಅನೇಕ ಮಹತ್ತ್ವದ ಗ್ರಂಥಗಳನ್ನು ಪ್ರಕಟಿಸಿದ ವಾಯ್ಸ್ ಆಫ್ ಇಂಡಿಯ ಪ್ರಕಾಶನ ಸಂಸ್ಥೆ ಹೊರತಂದ ಈ ಕೃತಿ ’ಹುಸಿ ಜಾತ್ಯಾತೀತವಾದ – ಕ್ರೈಸ್ತ ಮತಪ್ರಚಾರಕ ಸಂಸ್ಥೆಗಳು ಮತ್ತು ಹಿಂದೂ ಪ್ರತಿರೋಧ’ ಎನ್ನುವ ಹೆಸರಿನಲ್ಲಿ ಕನ್ನಡಕ್ಕೆ ಅನುವಾದಗೊಂಡಿದೆ.
ಸ್ವಾತಂತ್ರ್ಯಾನಂತರ ಪ್ರಚುರಕ್ಕೆ ಬಂದ ಎರಡು ಪ್ರಮುಖ ಶಬ್ದ ಅಥವಾ ನುಡಿಗಟ್ಟುಗಳು ಅಲ್ಲಿಂದಿಲ್ಲಿಗೂ ಕ್ರೈಸ್ತ ಮತಪ್ರಚಾರಕರಿಗೆ ಅನುಕೂಲಕರವಾಗಿ ಬಳಕೆಯಾಗುತ್ತಿವೆ. ಮೊದಲನೆಯದಾಗಿ ಮತಾಂತರ ವಿರೋಧಿಸುವವರನ್ನು ಸುಮ್ಮನಾಗಿಸಲು ’ಹಿಂದೂ ಕೋಮುವಾದಿಗಳು’ ಎನ್ನುವ ನುಡಿಗಟ್ಟಿನ ಬಳಕೆ ಪ್ರಾರಂಭವಾಯಿತು. ಇಂದಿಗೂ ಯಾರಾದರೂ ಅಲ್ಪಸಂಖ್ಯಾತರು ಎಂದು ಕರೆಯಲ್ಪಡುವವರ ತುಷ್ಟೀಕರಣವನ್ನು ಪ್ರಶ್ನಿಸಿದರೆ ಸನಾತನ ಭಾರತೀಯ ಪರಂಪರೆಗಳ ಪರವಾಗಿ ಮಾತನಾಡಿದರೆ ಅವರಿಗೆ ’ಕೋಮುವಾದಿಗಳ’ ಪಟ್ಟ ಸಿದ್ಧವಾಗಿರುತ್ತದೆ. `ಕೋಮುವಾದಿಗಳನ್ನು ಅಧಿಕಾರದಿಂದ ದೂರವಿಡಲು ಎಲ್ಲರೂ ಒಂದಾಗಬೇಕು’ ಎನ್ನುವ ಕರೆಗಳನ್ನು ನಾವು ರಾಜಕೀಯ ಚರ್ಚೆಗಳಲ್ಲಿ ಆಗಾಗ ಕೇಳುತ್ತಿರುತ್ತೇವೆ. ಇನ್ನೊಂದು ಯೂರೋಪಿನಿಂದ ಅನಾಮತ್ತಾಗಿ ಆಮದಾದ ’ಸೆಕ್ಯುಲರ್’ ಎನ್ನುವ ಶಬ್ದ. ಅದನ್ನು ’ಜಾತ್ಯತೀತ’ ಎಂದು ಕನ್ನಡದಲ್ಲಿ ಅನುವಾದ ಮಾಡಿದರೆ ಹಿಂದಿಯಲ್ಲಿ ’ಧರ್ಮ ನಿರಪೇಕ್ಷ’ ಎಂದು ಅನುವಾದಿಸಲಾಗುತ್ತದೆ. ’ಸೆಕ್ಯುಲರ್’ ಶಬ್ದದ ಮೂಲ ಇರುವುದು ಕ್ರಿಶ್ಚಿಯಾನಿಟಿಯಲ್ಲಿ. ’ಸೆಕ್ಯುಲರಿಸಮ್’ ಎಂದರೆ ರಾಜ್ಯದ ಆಡಳಿತದಿಂದ ರಿಲಿಜನ್ಅನ್ನು ಹೊರಗಿಡುವುದು, ರಿಲಿಜನ್ ಮತ್ತು ರಿಲಿಜನ್ನಿನ ವಿಷಯಗಳನ್ನು ಹೊರಗಿಡುವುದು, ಅವುಗಳ ಕುರಿತು ಅಸಡ್ಡೆ ಇತ್ಯಾದಿಯಾಗಿ ಎಲ್ಲ ಇಂಗ್ಲೀಷ್ ನಿಘಂಟುಗಳು ಅರ್ಥೈಸಿವೆ. ಇಲ್ಲಿ ರಿಲಿಜನ್ ಅಂದರೆ ಕ್ರಿಶ್ಚಿಯಾನಿಟಿ. ೧೮-೧೯ನೇ ಶತಮಾನದಲ್ಲಿ ಯೂರೋಪಿನ ದಾರ್ಶನಿಕ ಚಳುವಳಿ ಪ್ರಚಲಿತವಾಗಿದ್ದ ಕಾಲದಲ್ಲಿ ಈ ಪ್ರತ್ಯೇಕತೆ ಏಕೆ ಬಂತು ಎಂದರೆ ರಾಜ್ಯದ ಆಡಳಿತದಲ್ಲಿ ಚರ್ಚಿನ ಪ್ರಭಾವ ಮತ್ತು ಹಸ್ತಕ್ಷೇಪಗಳು ಹೆಚ್ಚಾದಾಗ ಅದನ್ನು ನಿಯಂತ್ರಿಸಬೇಕಾದ ಅಗತ್ಯ ಬಂದಿತ್ತು. ಆಗ ರಾಜಕೀಯ ವ್ಯವಸ್ಥೆಗೆ ನೀವು ಕೈಹಾಕಬೇಡಿ ಚರ್ಚಿನ ವ್ಯವಹಾರಕ್ಕೆ ನಾವು ಬರುವುದಿಲ್ಲ ಎಂದು ಮಾಡಿಕೊಂಡ ವ್ಯವಸ್ಥೆ ಈ ಸೆಕ್ಯುಲರಿಸಮ್. ಆದರೆ ಅದು ಭಾರತಕ್ಕೆ ಬರುತ್ತಲೇ ಜಾತ್ಯಾತೀತ ಎಂದು ಹೆಸರನ್ನು ಪಡೆದು ಸರ್ವಧರ್ಮ ಸಮಾನತೆ ಎನ್ನುವ ಅರ್ಥದಲ್ಲಿ ಬಳಕೆಯಾಗತೊಡಗಿತು. ಪಾಶ್ಚಾತ್ಯ ಶಬ್ದಕೋಶದಿಂದ ಈ ಶಬ್ದವನ್ನು ಹೆಕ್ಕಿತಂದ ಪ್ರಥಮ ಪ್ರಧಾನಮಂತ್ರಿ ನೆಹರು ಅದನ್ನು ವಿಸ್ತರಣಾವಾದಿ ಸಿದ್ಧಾಂತಗಳಾದ ಇಸ್ಲಾಮ್, ಕ್ರೈಸ್ತಮತ, ಕಮ್ಯೂನಿಸಮ್ಗಳ ರಕ್ಷಣೆಗೆ ಮತ್ತು ತನ್ನ ವಿರೋಧಿಗಳನ್ನು ಹಳಿಯಲು ಬಳಸಿಕೊಂಡರು. ನೋಡನೋಡುತ್ತಲೇ ಈ ಹುಸಿ ಸಿದ್ದಾಂತದ ಆಧಾರದ ಮೇಲೆ ಆರಂಭಗೊಂಡ ಸಂಸ್ಥೆಗಳು ಬೃಹದಾಕಾರವಾಗಿ ಬೆಳೆದು ಕಮ್ಯೂನಿಸಮ್, ಕ್ರಿಶ್ಚಿಯಾನಿಟಿಗಳ ಬೆಂಬಲಕ್ಕೆ ನಿಂತುಬಿಟ್ಟವು, ಅದಕ್ಕಾಗಿ ವಾಸ್ತವವನ್ನು ತಿರುಚಿ ವಿಕೃತಗೊಳಿಸುವ ಕೆಲಸ ಅನೂಚಾನಾಗಿ ನಡೆಯಿತು. ಸ್ವಾತಂತ್ರ್ಯಪೂರ್ವ ಅವಧಿಯಲ್ಲಿ ಅಷ್ಟೇಕೆ ಸಂವಿಧಾನ ರಚನೆಯ ಸಮಯದಲ್ಲಿ ನಡೆದ ಸುದೀರ್ಘ ಚರ್ಚೆಯಲ್ಲಿ ಎಲ್ಲೂ ಕಾಣದ ಈ ಶಬ್ದ ಕೊನೆಗೆ 1975ರಲ್ಲಿ ಸಂವಿಧಾನದ ಪ್ರಿಯಾಂಬಲ್ನಲ್ಲಿಯೂ ಸೇರಿಕೊಂಡುಬಿಟ್ಟಿತು. ಯುಗಯುಗಗಳಿಂದ ಅನೇಕತ್ವವನ್ನು ಪೋಷಿಸಿಕೊಂಡು ಬಂದ ಹಿಂದೂಧರ್ಮವನ್ನು ಹಳಿಯಲು ಕ್ರಿಶ್ಚಿಯನ್ ಮೂಲದ ’ಸೆಕ್ಯುಲರ್’ ಸಿದ್ದಾಂತ ಬಳಕೆಯಾಗುತ್ತಿರುವುದು ಮತ್ತು ಅದೇ ಕ್ರೈಸ್ತಮತದ ಪ್ರಚಾರದ ಬೆಂಬಲಕ್ಕೆ ನಿಂತಿರುವುದು ನೆಹರು ಆಡಳಿತ ಕಾಲದಲ್ಲಿ ಆರಂಭಗೊಂಡ ದೊಡ್ಡ ಪ್ರಮಾದಗಳಲ್ಲೊಂದು.
ಸ್ವಾತಂತ್ರ್ಯದ ಪೂರ್ವದಲ್ಲಿ ಯೂರೋಪಿನ ವಸಾಹತುದಾರರ ಪ್ರತಿನಿಧಿಯಂತೆ ಕಾಣುತ್ತಿದ್ದ ಕ್ರೈಸ್ತ ಮತಪ್ರಚಾರಕರಿಗೆ ತದನಂತರ ಬ್ರಿಟಿಷರ ವಿರುದ್ಧದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಬಲವಾಗಿದ್ದ ಹಿಂದೂ ಪ್ರತಿರೋಧವು ಕ್ಷೀಣಗೊಂಡಾಗ ಅನುಕೂಲವೇ ಆಯಿತು. ಹಾಗೆಯೇ ಮಹಾತ್ಮಾ ಗಾಂಧಿಯವರ ಸರ್ವಧರ್ಮ ಸಮಭಾವ ಸಿದ್ಧಾಂತ, ಭಾರತ ಸಂವಿಧಾನ ನೀಡಿದ ಮತಪ್ರಚಾರದ ಸ್ವಾತಂತ್ರ್ಯಗಳು ಮಿಷನರಿಗಳ ಕೈಯಲ್ಲಿ ದುರುಪಯೋಗಗೊಳ್ಳತೊಡಗಿದವು. ೧೯೬೪ರಲ್ಲಿ ಪ್ರಕಟವಾದ ’ದಿ ಕ್ಯಾಥೋಲಿಕ್ ಚರ್ಚ್ ಇನ್ ಇಂಡಿಯಾ : ಯೆಸ್ಟರ್ಡೇ ಆಂಡ್ ಟುಡೇ’ ಎನ್ನುವ ಪುಸ್ತಕದಲ್ಲಿ ಲೇಖಕ ಫೆಲಿಕ್ಸ್ ಆಲ್ಫ್ರೆಡ್ ಪ್ಲಾಟ್ನರ್ ಸ್ವಾತಂತ್ರ್ಯಾನಂತರ ಭಾರತದಲ್ಲಿ ಕ್ರಿಶ್ಚಿಯನ್ ಮತಪ್ರಚಾರಕರಿಗೆ ಒದಗಿ ಬಂದ ಒಳ್ಳೆಯ ಕಾಲದ ಬಗ್ಗೆ ಹೀಗೆ ಬರೆಯುತ್ತಾನೆ: ’ಭಾರತದಲ್ಲಿ ಚರ್ಚ್ ಭಾರಿ ಸಂತೋಷಪಡಬೇಕು. ಏಕೆಂದರೆ ಭಾರತದ ಸಂವಿಧಾನ ಅದಕ್ಕೆ ಒಂದು ಸ್ವಚ್ಛಂದ ವಾತಾವರಣವನ್ನು ಕಲ್ಪಿಸಿದೆ. ಇದರಿಂದಾಗಿ ಸ್ವಾತಂತ್ರ್ಯ ಬಂದಾಗಿನಿಂದ ಚರ್ಚ್ ಯಾವುದೇ ಅಂಕೆ ಶಂಕೆಗಳಿಲ್ಲದೇ ಹಿಂದೆಂದೂ ಇಲ್ಲದಷ್ಟು ವ್ಯಾಪಕವಾಗಿ ತನ್ನ ಚಟುವಟಕೆಗಳನ್ನು ನಡಸಿಕೊಂಡು ಹೋಗಲು ಅನುಕೂಲವಾಗಿದೆ’.
ಪ್ರಧಾನಿ ನೆಹರು ೧೯೫೨ರ ಅಕ್ಟೋಬರ್ ೧೭ರಂದು ರಾಜ್ಯದ ಮುಖ್ಯಮಂತ್ರಿಗಳಿಗೆ ಹೊರಡಿಸಿದ ಸುತ್ತೋಲೆಯಲ್ಲಿ ’ತನಗೆ ಕ್ರೈಸ್ತಮತ ಪ್ರಚಾರಕರಿಂದ ಮತ್ತು ಭಾರತೀಯ ಹಾಗೂ ವಿದೇಶಿ ಕ್ರೈಸ್ತಮತ ಪ್ರಚಾರಕರಿಂದ ಬಂದ ದೂರುಗಳಲ್ಲಿ ಕೆಲವು ರಾಜ್ಯಗಳಲ್ಲಿ ಅವರ ವಿರುದ್ಧ ತಾರತಮ್ಯ ಮಾಡಲಾಗುತ್ತಿದೆ ಎಂದು ಕಂಡುಬಂದಿದೆ. ಕೆಲವೊಮ್ಮೆ ಕಿರುಕುಳ ನೀಡಲಾಗುತ್ತದೆ ಎಂದೂ ದೂರಲಾಗಿದೆ. ಅಂತಹ ಕೆಲವು ಘಟನೆಗಳು ನನ್ನ ಗಮನಕ್ಕೂ ಬಂದಿದೆ. ಈ ಬಗೆಯ ತಾರತಮ್ಯ ಏರ್ಪಡದಂತೆ ಸರ್ಕಾರಗಳು ವಿಶೇಷ ಗಮನ ಹರಿಸಬೇಕು’ ಎಂದು ಆದೇಶಿಸಿದರು. ಜೊತೆಗೆ ದಕ್ಷಿಣ ಭಾರತದಲ್ಲಿ ಕ್ರೈಸ್ತ ಮತಕ್ಕೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ಇತರ ಧರ್ಮಗಳಂತೆಯೇ ಅದೂ ಕೂಡ ಭಾರತದ ಭಾಗವಾಗಿಬಿಟ್ಟಿದೆ ಎಂದು ಅಪ್ಪಣೆ ಕೊಡಿಸಿಬಿಟ್ಟರು. ಮುಂದುವರಿದು ’ನನ್ನನ್ನು ವಿಧರ್ಮೀಯ ಅನಾಗರಿಕನೆಂದು ನೋಡುವ ಯಾರೊಬ್ಬರೂ ನಮ್ಮ ದೇಶಕ್ಕೆ ಬರುವುದು ಬೇಕಿಲ್ಲ. ಯಾರೋ ಒಬ್ಬರು ನನ್ನನ್ನು ಅಜ್ಞಾನಿ ಅಥವಾ ಧರ್ಮಬಾಹಿರ ಎಂದು ಕರೆದರೆ ನನಗೇನೂ ನಷ್ಟವಿಲ್ಲ. ಆದರೆ ನಮ್ಮ ಬಗ್ಗೆ ಕೀಳಾಗಿ ಮಾತನಾಡುವ ಯಾವ ವಿದೇಶೀಯನೂ ಭಾರತಕ್ಕೆ ಬರುವುದು ನನಗೆ ಇಷ್ಟವಿಲ್ಲ. ಆದರೆ ಯಾರಾದರೂ ವಿದೇಶೀಯರು ಸಮಾಜಸೇವೆ ಮಾಡುತ್ತೇನೆಂದು ಬಂದರೆ ನಾನು ಅವರನ್ನು ಸ್ವಾಗತಿಸುತ್ತೇನೆ’ ಎನ್ನುವ ದ್ವಂದ್ವ ಮಾತುಗಳನ್ನು ಹೇಳಿದರು. ಇಂತಹ ಸದವಕಾಶಕ್ಕೇ ಕಾಯುತ್ತಿದ್ದ ಕ್ರೈಸ್ತ ಮತಪ್ರಚಾರಕ ಸಂಸ್ಥೆಗಳು ಸ್ವಾತಂತ್ರ್ಯಾನಂತರದ ಕೆಲವು ವರ್ಷಗಳಲ್ಲಿ ದೇಶದೆಲ್ಲೆಡೆ ತಮ್ಮ ಬೇರುಗಳನ್ನು ಇಳಿಸತೊಡಗಿದವು.
ಹಿಂದೂ ಧರ್ಮ ಮತ್ತು ಕ್ರೈಸ್ತಮತದ ನಡುವಣ ಮುಖಾಮುಖಿಯಲ್ಲಿ ಲೇಖಕರು ಐದು ನಿರ್ದಿಷ್ಟ ಹಂತಗಳನ್ನು ಗುರುತಿಸುತ್ತಾರೆ. ಈ ಎಲ್ಲ ಹಂತಗಳಲ್ಲಿಯೂ ’ಕ್ರಿಸ್ತನೊಬ್ಬನೇ ಸತ್ಯ, ಅವರನೊಬ್ಬನೇ ದೇವರು’ ಹಾಗೂ ’ಹಿಂದೂಗಳು ಅವನನ್ನು ಒಪ್ಪಿಕೊಂಡರೆ ಮಾತ್ರ ಅವರಿಗೆ ಉಳಿಗಾಲ, ಇಲ್ಲವಾದರೆ ಇಲ್ಲ’ ಎನ್ನುವ ತಮ್ಮ ಮೂಲ ಸಿದ್ಧಾಂತಕ್ಕೆ ಕ್ರೈಸ್ತಮತ ಪ್ರಚಾರಕರು ಬಲವಾಗಿ ಅಂಟಿಕೊಂಡಿದ್ದಾರೆ ಎನ್ನುವುದನ್ನು ಒತ್ತಿ ಹೇಳುತ್ತಾರೆ. ಮೊದಲನೆಯ ಹಂತ ಪೋರ್ಚುಗೀಸ್ ಕಡಲ್ಗಳ್ಳರ ಆಗಮನದೊಂದಿಗೆ ಅದರಲ್ಲೂ ೧೫೪೨ರಲ್ಲಿ ಗೋವಾಕ್ಕೆ ಪ್ರಾನ್ಸಿಸ್ ಕ್ಸೇವಿಯರ್ನ ಆಗಮನದೊಂದಿಗೆ ಆರಂಭವಾಯಿತು. ಯೂರೋಪಿನಲ್ಲಿದ್ದಂತೆಯೇ ಇಲ್ಲಿಯೂ ಅದು ಅನಾಗರಿಕ ಭಾಷೆಯಲ್ಲಿ ಮತಪ್ರಚಾರವನ್ನು ನಡೆಸಲು ಆರಂಭಿಸಿತು. ಆದರೆ ಗೋವಾ ಮತ್ತಿತರ ಸಣ್ಣಪುಟ್ಟ ಪ್ರಾಂತಗಳನ್ನು ಹೊರತುಪಡಿಸಿ ಉಳಿದೆಡೆಗಳಲ್ಲಿ ಪೋರ್ಚುಗೀಸರು ಅಧಿಕಾರ ಕಳೆದುಕೊಂಡರು ಮತ್ತು ಇತರ ಯೂರೋಪಿನ ಅಧಿಪತ್ಯಗಳಿಗೆ ಕ್ರೈಸ್ತಮತದ ಕಡೆ ಬಹಳ ಗಮನಕೊಡದ ಕಾರಣ ಇದು ಸುದೈವವೋ ಎಂಬಂತೆ ಅಲ್ಪಾವಧಿಯದಾಗಿತ್ತು.
ಎರಡನೆಯ ಹಂತವು ೧೮೧೩ರಲ್ಲಿ ಮರಾಠರ ಅಂತಿಮ ಸೋಲಿನ ನಂತರ ಬ್ರಿಟಿ?ರ ಬಲವರ್ಧನೆಯಿಂದ ಆರಂಭವಾಯಿತು. ಬ್ರಿಟಿಷರು ಪ್ರಚಾರಕರಿಗೆ ಭೌತಿಕ ಬಲವನ್ನು ನೀಡದಿದ್ದರೂ ಬ್ರಿಟಿಷ್ ಸಾಮ್ರಾಜ್ಯಶಾಹಿಗೆ ಕ್ರಿಶ್ಚಿಯನ್ ಮತ ಬೆಳೆಯುವುದು ಪೂರಕ ಎಂದು ಪ್ರೋತ್ಸಾಹ ನೀಡಿದರು. ಆದರೆ ಹಿಂದೂ ಸುಧಾರಣಾವಾದಗಳ ಉತ್ಥಾನದೊಂದಿಗೆ – ಉದಾಹರಣೆಗೆ ಸ್ವಾಮಿ ದಯಾನಂದ ಸರಸ್ವತಿ ಹಾಗೂ ವಿವೇಕಾನಂದರಂತಹ ಧೀಮಂತ ವ್ಯಕ್ತಿಗಳ ಆಂದೋಲನ – ಈ ಹಂತವು ಅವಸಾನದ ಹಾದಿ ಹಿಡಿಯಿತು.
ಮೂರನೆಯ ಹಂತವು ಆರಂಭವಾಗುವುದು, ಮಹಾತ್ಮಾ ಗಾಂಧಿ ಮತ್ತು ಅವರ ಸರ್ವ-ಧರ್ಮ- ಸಮಭಾವದ ಘೋ?ಣೆಯೊಂದಿಗೆ. ಈ ಹಂತದಲ್ಲಿ ರಕ್ಷಣಾತ್ಮಕವಾದ ಕ್ರೈಸ್ತಮತ ಪ್ರಚಾರಕರು ತಮ್ಮ ಅನಾಗರಿಕ ಕೊಳಕು ಭಾಷೆಯನ್ನು ಬದಲಾಯಿಸಿಕೊಂಡು ಒಳಗೆ ವಿಷತುಂಬಿದ್ದ ಆದರೆ ಮಧುರವಾದ ನಾಲಿಗೆಯ ವಿಷಂಸರ್ಪಗಳಾಗಿ ಬದಲಾದರು. ಲೇಖಕರು ಹೇಳುವಂತೆ ’ಕ್ರೈಸ್ತಮತಶಾಸ್ತ್ರವನ್ನು ಭಾರತೀಯ ಸಂದರ್ಭಗಳಿಗೆ ಅನ್ವಯವಾಗುವಂತೆ ವ್ಯಾಖ್ಯಾನಿಸಲು’ ಆರಂಭವಾಯಿತು.
ನಾಲ್ಕನೆಯ ಹಂತ ಆರಂಭವಾಗುವುದು ಸ್ವಾತಂತ್ರ್ಯ ಪ್ರಾಪ್ತಿಯೊಂದಿಗೆ. ಸಂವಿಧಾನವೇ ಮತಾಂತರಿಸುವ ಹಕ್ಕನ್ನು ಕೊಡುವುದರ ಜೊತೆಗೆ ದೇಶದ ಆಡಳಿತ ಮತ್ತು ರಾಜಕಾರಣದಲ್ಲಿ ಪ್ರಮುಖ ಸ್ಥಾನವನ್ನು ಆಕ್ರಮಿಸಿಕೊಂಡ ನೆಹರು ಅವರು ನಕಲಿ ಜಾತ್ಯತೀತತೆಯ ಮುಸಕನ್ನು ಧರಿಸಿ ಪ್ರತಿಯೊಂದು ಹಿಂದೂ ವಿರೋಧಿ ಆಲೋಚನೆಗೂ, ಆಂದೋಲನಕ್ಕೂ ಪ್ರೋತ್ಸಾಹ ನೀಡಿದರು. ನಂತರ ಬಂದ ಆಡಳಿತಗಳೆಲ್ಲ ’ಹಿಂದೂ ಕೋಮುವಾದ’ದ ಗುಮ್ಮನನ್ನು ಸೃಷ್ಟಿಸಿದವು, ಕ್ರೈಸ್ತ ಮತಾಂತರಿಗಳು ತಮ್ಮ ದಾರಿಗೆ ಅಡ್ಡ ಬಂದವರನ್ನು ಮತಾಂಧರು, ಹಿಂದೂ ನಾಝಿಗಳು ಇತ್ಯಾದಿಯಾಗಿ ಜರಿದರು ಎನ್ನುವುದನ್ನು ಲೇಖಕರು ವಿವರಿಸುತ್ತಾರೆ. ಈ ಹಂತ ಭಾರತದ ಇತಿಹಾಸದಲ್ಲೇ ಕ್ರೈಸ್ತ ಮತ ಪ್ರಚಾರದ ಅತ್ಯಂತ ಒಳ್ಳೆಯ ದಿನಗಳಾಗಿದ್ದವು. ಕ್ರೈಸ್ತ ಮತ ಪ್ರಚಾರ ಕೇಂದ್ರಗಳು ಮತ್ತು ಅವುಗಳ ಕಾರ್ಯ ಎಲ್ಲೆಡೆ ಅತ್ಯಂತ ವೇಗವಾಗಿ ಹರಡತೊಡಗಿದವು.
ಇನ್ನು ಐದನೇ ಹಂತ ಕ್ರಿಶ್ಚಿಯನ್ ಮತ ಪ್ರಚಾರಕ್ಕೆ ಅಲ್ಲಲ್ಲಿ ಎದ್ದ ವಿರೋಧಗಳ ನಂತರ ಇಂದಿಗೂ ಮುಂದುವರಿದಿದೆ. ತಮಿಳುನಾಡಿನ ಮೀನಾಕ್ಷಿಪುರಂನ ಸಾಮೂಹಿಕ ಮತಾಂತರ, ಕಾಶ್ಮೀರದಲ್ಲಿ ಪಾಕಿಸ್ತಾನ ಪ್ರೇರಿತ ಭಯೋತ್ಪಾದನೆ, ರಾಮಜನ್ಮಭೂಮಿ ಆಂದೋಲನ, ’ಹಿಂದುತ್ವ’ದಕ್ಕೆ ಸಿಕ್ಕ ಒತ್ತು ಈ ಎಲ್ಲ ಸನ್ನಿವೇಶಗಳ ನಡುವೆ ಕ್ರೈಸ್ತ ಮತ ಪ್ರಚಾರಕ ಸಂಸ್ಥೆಗಳು ತಮ್ಮ ಕಾರ್ಯಶೈಲಿಯನ್ನು ಕಾಲಕ್ಕನುಗುಣವಾಗಿ ಬದಲಾಯಿಸಿಕೊಳ್ಳುತ್ತ, ಹಿಂದೂ ಸಂಕೇತಗಳನ್ನು ಸಂಪ್ರದಾಯಗಳನ್ನೇ ಮತಪ್ರಚಾರದ ಅಸ್ತ್ರಗಳಾಗಿ ಬಳಸಿಕೊಳ್ಳುತ್ತ, ದಲಿತರು, ಆದಿವಾಸಿಗಳು ಅಸಹಾಯಕತೆಯನ್ನು ದುರುಪಯೋಗಪಡಿಸಿಕೊಳ್ಳುತ್ತ, ಸೇವೆಯ ಸೋಗಿನಲ್ಲಿ ಹೀಗೆ ಎಲ್ಲ ರೀತಿಯ ತಂತ್ರಗಳನ್ನು ಬಳಸಿಕೊಂಡು ಮತ ಪ್ರಚಾರ ನಡೆಸುವ ಕಾರ್ಯ ಇಂದಿಗೂ ಮುಂದುವರಿಸಿವೆ.
ಹಾಗೆಂದು ಕ್ರೈಸ್ತ ಮತಪ್ರಚಾರ ಪ್ರಶ್ನಾತೀತವಾಗಿ ಯಾವುದೇ ಪ್ರತಿರೋಧವಿಲ್ಲದೇ ಮುಂದುವರಿಯಿತು ಎನ್ನುವಂತಿಲ್ಲ. ಈ ಕುರಿತಂತೆ ಕೆಲವು ಪ್ರಮುಖ ಸಂಗತಿಗಳನ್ನು ಲೇಖಕರು ಉಲ್ಲೇಖಿಸುತ್ತಾರೆ :
೧. ೧೯೫೩ರಲ್ಲಿ ಲಂಡನ್ನಿಂದ ಪ್ರಕಟವಾದ ಕೆ.ಎಮ್. ಪಣಿಕ್ಕರ್ ಅವರ ಪುಸ್ತಕ ’ಏ?ಂಚಿ ಆಂಡ್ ವೆಸ್ಟರ್ನ್ ಡಾಮಿನೆನ್ಸ್’
೨. ೧೯೫೬ರಲ್ಲಿ ಪ್ರಕಟವಾದ ’ದ ರಿಪೋರ್ಟ್ ಆಫ್ ದಿ ಕ್ರಿಶ್ಚಿಯನ್ ಮಿಷನರಿಗಳ ಆಕ್ಟಿವಿಟೀಸ್ ಕಮಿಟಿ, ಮಧ್ಯಪ್ರದೇಶ’ ಅಥವಾ ’ನಿಯೋಗಿ ಸಮಿತಿ ವರದಿ’
೩. ೧೯೭೮ರಲ್ಲಿ ಲೋಕಸಭೆಯಲ್ಲಿ ಓಂ ಪ್ರಕಾಶ ತ್ಯಾಗಿ ಮಂಡಿಸಿದ ’ಫ್ರೀಡಮ್ ಆಫ್ ರಿಲಿಜನ್’ ಮಸೂದೆ.
೪. ೧೯೯೪ರಲ್ಲಿ ಪ್ರಕಟಗೊಂಡ ಅರುಣ ಶೌರಿ ಅವರ ಪುಸ್ತಕ ’ ಮಿಷನರಿಗಳ ಇನ್ ಇಂಡಿಯಾ’
೫. ೧೯೯೬ರಲ್ಲಿ ಮಹಾರಾಷ್ಟ್ರ ಶಾಸನಸಭೆಯಲ್ಲಿ ಶಾಸಕ ಮಂಗಲ್ ಪ್ರಭಾತ್ ಲೋಧಾ ಅವರು ಮಂಡಿಸಿದ ಮಹಾರಾಷ್ಟ್ರ ಫ್ರೀಡಮ್ ಆಫ್ ರಿಲಿಜನ್’ ಮಸೂದೆ.
೧೯೫೦ರ ದಶಕದಲ್ಲಿ ಪ್ರಕಟಗೊಂಡ ಕೆ.ಎಮ್. ಪಣಿಕ್ಕರ್ ಅವರ ಅಧ್ಯಯನದ ಪ್ರಕಾರ ಏಷ್ಯಾದಲ್ಲಿ ೧೪೯೮ರಿಂದ ೧೯೪೫ರ ಅವಧಿಯಲ್ಲಿ ಇದ್ದ ಪಾಶ್ಚಾತ್ಯ ಸಾಮ್ರಾಜ್ಯಶಾಹಿಯ ಒಂದು ಸ್ಥೂಲ ಚಿತ್ರಣವನ್ನು ಒದಗಿಸುವುದಾಗಿತ್ತು. ಈ ಅಧ್ಯಯನದಲ್ಲಿ ’ಅವರಿಗೆ ಪಾಶ್ಚಾತ್ಯ ಫಿರಂಗಿ ನೌಕೆಗಳ, ರಾಜಕೀಯ ಒತ್ತಡಗಳ, ಗಡಿ ಉಲ್ಲಂಘನೆಯ ಹಕ್ಕುಗಳ ಮತ್ತು ನೇರವಾಗಿ ನಡೆದ ಗುಂಪು ಕದನಗಳ ಜೊತೆಜೊತೆಯಲ್ಲೇ ಯಾವಾಗಲೂ ಎಲ್ಲೆಂದರಲ್ಲಿ ಕ್ರೈಸ್ತ ಮತ ಪ್ರಚಾರಕೇಂದ್ರಗಳು ಕಂಡುಬಂದಿದ್ದವು’. ’ಕ್ರೈಸ್ತ ಮತ ಪ್ರಚಾರಕರು ಏಷ್ಯಾದಲ್ಲಿ ರಾಜರನ್ನಾಗಲೀ ಅಥವಾ ಮಾನ್ಯರನ್ನಾಗಲೀ ಮತಾಂತರಗೊಳಿಸಲು ಬಳಸುತ್ತಿದ್ದ ಮಾರ್ಗಗಳೆಂದರೆ ಬಲ ಕಪಟ ಅಥವಾ ಒಳಸಂಚು. ಪ್ರತಿಯೊಂದು ಸಂದರ್ಭದಲ್ಲೂ ಅವರ ನೈತಿಕತೆ ಪ್ರಶ್ನಾರ್ಹವಾಗಿತ್ತು’ ಎಂದು ಪಣಿಕ್ಕರ್ ಅಭಿಪ್ರಾಯಪಟ್ಟರು. ಪಣಿಕ್ಕರ್ ಎತ್ತಿದ ಕೆಲವೊಂದು ಮಿಷನರಿಗಳು ಕ್ರೈಸ್ತಮತ ಪ್ರಚಾರಕರಿಗೆ ಅತಿ ಹೆಚ್ಚಿನ ಆಘಾತ ಉಂಟುಮಾಡಿದವು ಎಂದು ಲೇಖಕರು ವಿವರಿಸುತ್ತಾರೆ – ’ಕ್ರೈಸ್ತಮತ ಪ್ರಚಾರಕರು ಬೋಧಿಸುತ್ತಿದ್ದ ’ಸತ್ಯ ಮತ್ತು ಜ್ಞಾನಗಳ ಏಕಸ್ವಾಮ್ಯ’ ಸಿದ್ಧಾಂತವು, ಹಿಂದೂ ಮತ್ತು ಬೌದ್ಧ ಮಾನಸಿಕತೆಗಳಿಗೆ ಪರಕೀಯವಾಗಿತ್ತು’. ’ಕೇವಲ ಯಾವುದೇ ಒಂದು ಪಂಥ ಮಾತ್ರ ಸತ್ಯ, ಉಳಿದವುಗಳೆಲ್ಲ ನಿಂದಾರ್ಹ ಎಂಬ ವಾದವೇ ಅವಿವೇಕ’, ’ಸತ್ಯ ಮತ್ತು ಜ್ಞಾನಗಳು ಯಾರೊಬ್ಬರ ಸ್ವತ್ತಲ್ಲ; ನಮಗೆ ನಿಮ್ಮ ಪ್ರಚಾರ ಕೇಂದ್ರಗಳ ಅಗತ್ಯವಿಲ್ಲ’ ಎನ್ನುವ ಅವರ ನೇರ ನುಡಿಗಳು ಕ್ರಿಶ್ಚಿಯನ್ ಮಿಷನರಿಗಳ ಉದ್ಯಮದ ಬುಡಕ್ಕೇ ನೇರವಾಗಿ ಪೆಟ್ಟು ಕೊಟ್ಟವು ಎಂದು ಲೇಖಕರು ವಿವರಿಸುತ್ತಾರೆ. ಆಳವಾದ ಅಧ್ಯಯನದಿಂದ ಹೊರಬಂದ ಪಣಿಕ್ಕರ್ ಅವರ ಪುಸ್ತಕ ಭಾರತದ ಉಪಖಂಡದಿಂದ ಹಿಡಿದು, ಚೀನಾ ಮತ್ತು ಜಪಾನ್ವರೆಗೆ ನಡೆದ ಕ್ರೈಸ್ತಮತ ಪ್ರಚಾರದ ಪ್ರಯತ್ನಗಳ ಸ್ಥೂಲ ಚಿತ್ರಣವನ್ನು ಮತ್ತು ಅದಕ್ಕಾಗಿ ಅನುಸರಿಸಿದ ಕುಟಿಲ ಮಾರ್ಗಗಳನ್ನು ದಾಖಲೆ ಸಮೇತ ತೆರೆದಿಟ್ಟವು. ಸೆಕ್ಯುಲರ್ವಾದಿಗಳು ಮತ್ತು ಕ್ರೈಸ್ತ ಮತಪ್ರಚಾರಕರು ಪಣಿಕ್ಕರ್ ಅವರ ಗ್ರಂಥವನ್ನು ವಿರೋಧಿಸಿದವಾದರೂ ಸೂಕ್ತ ಸಾಕ್ಷ್ಯಾಧಾರಗಳನ್ನು ನೀಡಿ ಅದನ್ನು ನಿರಾಕರಿಸಲು ವಿಫಲವಾದವು.
ಕ್ರೈಸ್ತಮತ ಪ್ರಚಾರಕರು ಬಲವಂತದಿಂದ, ಮೋಸ, ಹಣ ಅಥವಾ ಇತರ ವಸ್ತುಗಳ ಆಮಿಷ ಒಡ್ಡಿ ಅನಕ್ಷರಸ್ಥರ ಮೂಲನಿವಾಸಿಗಳು ಮತ್ತು ಹಿಂದುಳಿದವರನ್ನು ಮತಾಂತರಿಸುತಿದ್ದಾರೆ ಎನ್ನುವ ದೂರಿನ ಅನ್ವಯ ಮಧ್ಯಪ್ರದೇಶ ಸರ್ಕಾರವು ಈ ಕುರಿತು ತನಿಖೆ ನಡೆಸಲು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾಗಿದ್ದ ಡಾ. ಭವಾನಿಶಂಕರ ನಿಯೋಗಿ ಅವರ ನೇತೃತ್ವದಲ್ಲಿ ೧೯೫೪ರಲ್ಲಿ ಏಳು ಸದಸ್ಯರ ಸಮಿತಿಯನ್ನು ನೇಮಿಸಿತು. ವಿಸ್ತೃತ ತನಿಖೆ ನಡೆಸಿದ ನಿಯೋಗಿ ಸಮಿತಿ ೧೯೫೬ರಲ್ಲಿ ನೀಡಿದ ವರದಿಯು ರಾಜ್ಯದಾದ್ಯಂತ ವ್ಯಾಪಕವಾಗಿ ಹರಡಿಸುವ ಕ್ರೈಸ್ತ ಮತಪ್ರಚಾರದ ಕಾಣದೇ ಇರುವ ಮುಖವನ್ನು ತೋರಿಸಿತು. ಈ ವರದಿಯ ಕುರಿತು ಪುಸ್ತಕದಲ್ಲಿ ಉಲ್ಲೇಖಿಸಿರುವ ಕೆಲವು ಸಾಲುಗಳನ್ನು ಉದ್ಧರಿಸಿದರೆ ಅದರ ಗಂಭೀರತೆ ಅರ್ಥವಾಗಬಹುದು: ವರದಿಯು ’ಕ್ರೈಸ್ತಮತದ ಎರಡನೇ ಮಹಾಯುದ್ಧಾನಂತರದ ನೀತಿಯ’ ಕುರಿತಾಗಿ ಹೇಳುತ್ತ ಹಲವಾರು ಅಂಶಗಳನ್ನು ಕ್ರೈಸ್ತಮತದ ಮೂಲಗಳಿಂದಲೇ ಉದ್ಧರಿಸುತ್ತದೆ. ಭಾರತದಲ್ಲಿ ಈ ನೀತಿಯ ಉದ್ದೇಶ ಮೂರು ಬಗೆಯದಾಗಿತ್ತು : (೧) ರಾಷ್ಟ್ರೀಯ ಐಕ್ಯಸಾಧನೆಯ ಪ್ರಗತಿಯನ್ನು ತಡೆಯುವುದು. (೨) ಸಹಬಾಳ್ವೆಯ ತತ್ತ್ವದ ಬಗ್ಗೆ ಭಾರತ ಮತ್ತು ಅಮೆರಿಕ ದೇಶಗಳ ನಡುವೆ ಇರುವ ಮನೋಧರ್ಮಗಳ ವ್ಯತ್ಯಾಸವನ್ನು ಎತ್ತಿ ತೋರುವುದು. (೩) ಮತಪ್ರಚಾರಕ್ಕೆ ಭಾರತದ ಸಂವಿಧಾನವು ನೀಡಿರುವ ಸ್ವಾತಂತ್ರ್ಯದ ದುರ್ಲಾಭ ಪಡೆಯಲು ಮತ್ತು ಮುಸ್ಲಿಂ ಲೀಗ್ ಮಾದರಿಯಲ್ಲೇ, ಪ್ರಜಾಪ್ರಭುತ್ವವಾದಿ ಭಾರತದಲ್ಲಿ ಕ್ರೈಸ್ತಮತೀಯ ಪಕ್ಷವೊಂದನ್ನು ರಚಿಸಲು ಮತ್ತು ಕೊನೆಗೆ ಪ್ರತ್ಯೇಕ ದೇಶದ ಕೂಗು ಎಬ್ಬಿಸುವುದಕ್ಕೆ ಪ್ರಯತ್ನಿಸುವುದು. ಅದು ಸಾಧ್ಯವಾಗದೇ ಹೋದರೆ ಕನಿ? ’ಉಗ್ರಗಾಮಿ ಅಲ್ಪಸಂಖ್ಯಾತರನ್ನು’ ಸೃಷ್ಟಿಸುವುದು.
ಅಂದರೆ ಕ್ರೈಸ್ತಮತ ಪ್ರಚಾರದ ಹಿಂದಿರುವುದು ದೇಶವಿರೋಧಿ ಕುತಂತ್ರ ಎನ್ನುವುದು ಂಚಿ?ಂಔ. ಮತಾಂತರದ ಮೂಲಕ ಕ್ರೈಸ್ತ ಬಾಹುಳ್ಯವಾಗಿರುವ ಭಾರತದ ಕೆಲವು ಪೂರ್ವೋತ್ತರ ರಾಜ್ಯಗಳಲ್ಲಿ ಆಗಾಗ ಪ್ರತ್ಯೇಕತೆಯ ಕೂಗು ಏಳುವುದರ ಹಿಂದೆ ಯಾರು ಇರುವುದು ಎನ್ನುವುದೂ ಸ್ಪಷ್ಟ. ಮಧ್ಯಪ್ರದೇಶದಲ್ಲಿರುವ ಕ್ರೈಸ್ತ ಮತಪ್ರಚಾರ ಸಂಸ್ಥೆಗಳು ಅವರಿಗೆ ಹರಿದು ಬರುತ್ತಿರುವ ದೊಡ್ಡ ಪ್ರಮಾಣದ ವಿದೇಶೀ ಹಣ ಇವುಗಳ ವಿವರವನ್ನು ನಿಯೋಗಿ ಸಮಿತಿಯು ದಾಖಲಿಸಿತು.


ಇಂದಿನ ಸ್ಥಿತಿಯೇನೂ ಭಿನ್ನವಾಗಿಲ್ಲ. `ಜಾತ್ಯತೀತತೆ’ಯ ಮುಸುಕಿನಲ್ಲಿ ಕ್ರೈಸ್ತ ಮತಪ್ರಚಾರ ನಿರಂತರವಾಗಿ ನಡೆಯುತ್ತಿದೆ. ಜೊತೆಗೆ ಆಧುನಿಕ ತಂತ್ರಜ್ಞಾನಗಳ ಸಹಾಯವೂ ಅದಕ್ಕೆ ದೊರಕುತ್ತಿದೆ. ಉದಾಹರಣೆಗೆ ತಮಿಳು sಭಾಷೆಯೊಂದರಲ್ಲೇ ಹತ್ತಕ್ಕೂ ಹೆಚ್ಚು ಕ್ರೈಸ್ತ ಮತಬೋಧನೆಯ ಟಿವಿ ಚಾನೆಲ್ಗಳಿವೆ. ಈ ಕಾರ್ಯಕ್ಕೆ ವಿವಿಧ ಮುಖವಾಡ ಹೊತ್ತ ಕ್ರೈಸ್ತ ’ಸೇವಾ’ ಸಂಘಗಳ ಹೆಸರಿನಲ್ಲಿ ದೇಶವಿದೇಶಗಳಲ್ಲಿ ಬೃಹತ್ ಪ್ರಮಾಣದಲ್ಲಿ ಹಣವೂ ಸಂಗ್ರಹವಾಗುತ್ತದೆ. ದಲಿತರು ಆದಿವಾಸಿಗಳು ಹಿಂದುಳಿದವರೇ ಅವರ ಆಮಿಷಗಳಿಗೆ ಗುರಿಯಾಗುತ್ತಿದ್ದಾರೆ. ಕ್ರೈಸ್ತರಾಗಿ ಮತಾಂತರವಾದರೆ ದಲಿತರು ಆದಿವಾಸಿಗಳ ಸಂಸ್ಕೃತಿ ಉಳಿಯಬಹುದೇ? ಎನ್ನುವ ಪ್ರಶ್ನೆ ಅವರ ಸಂಸ್ಕೃತಿ ಜಾನಪದಗಳನ್ನು ಉಳಿಸಬೇಕೆಂದು ಬೊಬ್ಬಿರಿಯುವ ಜಾತ್ಯತೀತರಿಗೆ ಎಂದೂ ಬಂದೆ ಇಲ್ಲ. ಆದರೆ ಈ ಹುಸಿ ಜಾತ್ಯತೀತತೆಯ ವಿರುದ್ಧ ಸಿಡಿದೇಳದಿದ್ದರೆ ಹಿಂದೂ ಸಮಾಜ, ಸನಾತನ ಭಾರತೀಯ ಸಂಸ್ಕೃತಿಯು ಘೋರ ಪರಿಣಾಮವನ್ನು ಎದುರಿಸಬೇಕಾದುದಂತೂ ಸತ್ಯ.
ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ