ಅನಂತಸಿಂಗ್ ಮತ್ತು ಸಂಗಡಿಗರು
ಸೂರ್ಯಸೇನ್ ಗುಂಪಿನಂತೆ ಅನಂತಸಿಂಗ್ ಗುಂಪೂ ಚಿಂತಾಕ್ರಾಂತವಾಗಿತ್ತು. ಏಪ್ರಿಲ್ 18-19ರ ಮುಂಜಾನೆ ಸಮುದ್ರತೀರವನ್ನು ಸೇರಿದ ಅವರು ತಮ್ಮ ಕಾರನ್ನು ರಸ್ತೆಯ ಮೇಲೆ ಬಿಟ್ಟು ಚಿಕ್ಕ ದೋಣಿಯೊಂದರಲ್ಲಿ ಯಾರಿಗೂ ಕಾಣದಂತೆ ಮಲಗಿ ತೀರವನ್ನು ಸೇರಿದ್ದರು. ಮುಂಜಾನೆ ಗಣೇಶ್ ಘೋಷ್ ಸೀತಾಳಸಿಡುಬಿಗೆ ಬಲಿಯಾಗಿರುವುದನ್ನು ಗಮನಿಸುತ್ತಾರೆ. ಅವರ ಅಂದಾಜಿನಂತೆ ಬ್ರಿಟಿಷ್ ಸೇನೆಯ ಪಡೆಗಳು ಏಪ್ರಿಲ್ 20ರವರೆಗೆ ನಗರವನ್ನು ಪ್ರವೇಶಿಸುವ ಸಾಧ್ಯತೆ ಇರಲಿಲ್ಲ. ಹಾಗಾಗಿ ಹಿಂದಿನ ರಾತ್ರಿ ಆನಂದಗುಪ್ತನನ್ನು ಆತನ ಮನೆಯಲ್ಲಿ ಬಿಟ್ಟು ಬಂದಿದ್ದರಿಂದ ಸಂಜೆಯಾಗುತ್ತಿದ್ದಂತೆ ಆತನ ಮನೆಗೆ ಹೋದರೆ ಸೂರ್ಯಸೇನ್ ಗುಂಪನ್ನು ಸಂಪರ್ಕಿಸುವುದು ಸುಲಭವಾಗುವುದೆಂದು ಅವರು ನಿರ್ಧರಿಸಿದರು. ಕತ್ತಲಾಗುತ್ತಿದ್ದಂತೆ ಚಿಕ್ಕಪುಟ್ಟ ಓಣಿಗಳಲ್ಲಿ ಎಚ್ಚರಿಕೆಯಿಂದ ನಡೆದು ಆನಂದಗುಪ್ತನ ಮನೆ ಸೇರುತ್ತಾರೆ. ಆದರೆ ಅಲ್ಲಿ ಮುಖ್ಯವಾಹಿನಿಯ ಸುಳಿವಿರಲಿಲ್ಲ. ಮೂವರೂ ಅಲ್ಲಿಯೇ ಏಪ್ರಿಲ್ 19ರ ರಾತ್ರಿಯನ್ನು ಕಳೆಯುತ್ತಾರೆ. ಇಪ್ಪತ್ತರಂದು ಬೆಳಗ್ಗೆ ಮನೆಯ ಬಳಿ ಪೆÇಲೀಸರನ್ನು ಕಂಡ ನಾಲ್ವರೂ ಹಿಂಬಾಗಿಲಿನಿಂದ ಸಾಗಿ ಬಳಿಯಿರುವ ಗುಡ್ಡವೊಂದರಲ್ಲಿ ಅಡಗಿ ಕೂಡುತ್ತಾರೆ. ಕೆಲವು ಗಂಟೆಗಳ ಬಳಿಕ ಹಿಂತಿರುಗಿದ ಅವರಿಗೆ ಪೆÇಲೀಸರ ತಪಾಸಣೆಯಲ್ಲಿ ಆನಂದಗುಪ್ತನ ತಂದೆಯವರ ಜೇಬಿನಲ್ಲಿ ಹಿಮಾಂಶುವಿನ ಔಷಧಿಯ ಚೀಟಿ ದೊರಕಿದ್ದರಿಂದ ಅವರನ್ನು ಎಳೆದುಕೊಂಡು ಹೋಗಿದ್ದಾರೆಂದು ತಿಳಿದುಬರುತ್ತದೆ. ಆನಂದಗುಪ್ತನ ತಾಯಿ ಎಲ್ಲರೂ ಅಲ್ಲಿಂದ ತಕ್ಷಣ ಹೊರಟುಹೋಗುವಂತೆ ಸಲಹೆ ನೀಡಿದರು.
ಮನೆಯಿಂದ ಗುಡ್ಡದ ಕಡೆ ಹೊರಟ ಗಣೇಶ್ ಘೋಷ್ನ ಲೆಕ್ಕಾಚಾರದಂತೆ ಮುಖ್ಯವಾಹಿನಿ ಕಡಿದಾದ ಗುಡ್ಡ ಪ್ರದೇಶದಲ್ಲಿ ನಗರದಿಂದ ಆರೇಳು ಮೈಲಿಗಳನ್ನು ದಾಟಿ ಹೋಗುವ ಸಾಧ್ಯತೆಯಿರಲಿಲ್ಲ. ಹಾಗಾಗಿ ಅಲ್ಲಿಯೇ ಸುತ್ತಾಡುತ್ತ ಅವರನ್ನು ಹುಡುಕಬೇಕೆಂದು ನಿರ್ಧಸಿರುತ್ತಾನೆ. ಮಧ್ಯಾಹ್ನ ಪಾಂಚಲೈಶ್ ರೈಲ್ವೇ ನಿಲ್ದಾಣದ ಬಳಿಯ ಗುಡ್ಡದ ಬುಡ ಸೇರಿದ ಅವರು ಎದುರಿಗಿರುವ ಕಲ್ಲಂಗಡಿಹಣ್ಣಿನ ತೋಟದಲ್ಲಿ ಅದರ ಮಾಲೀಕನಿಂದ ಕೆಲವು ಹಣ್ಣುಗಳನ್ನು ಕೊಂಡುಕೊಳ್ಳುತ್ತಾರೆ. ಗಣ್ಯ ಮನೆತನದ ಸಭ್ಯ ಬಂಗಾಳಿಗಳಂತೆ ಪಂಚೆ ಶರ್ಟುಗಳನ್ನು ಧರಿಸಿರುವ ಈ ಮಹನೀಯರಿಗೆ ಹಿಂದಿನ ರಾತ್ರಿ ತನ್ನ ತೋಟದಿಂದ ‘ಪೆÇಲೀಸರ ಗುಂಪೆÇಂದು’ ಕಲ್ಲಂಗಡಿ ಹಣ್ಣುಗಳನ್ನು ತೆಗೆದುಕೊಂಡಿದ್ದನ್ನು ಹೇಳಲಿಲ್ಲ! ಭಾನುವಾರ ಏಪ್ರಿಲ್ 20ರ ಸಂಜೆ ಸುಮಾರು 4.30ರ ಸಮಯದಲ್ಲಿ ಅವರು ರೈಫಲ್ ಹೊತ್ತ ಗೂರ್ಖಾ ಸೈನಿಕರ ಪಡೆ ಗುಡ್ಡಗಳತ್ತ ಸಾಗುತ್ತಿರುವುದನ್ನು ಗಮನಿಸುತ್ತಾರೆ.
ಈಗ ಅವರಿಗೆ ಉಳಿದಿರುವುದು ಒಂದೇ ದಾರಿ: ನಗರದಲ್ಲಿರುವ ಸತಿಭೂಷಣ್ ಸೇನ್ನನ್ನು ಭೇಟಿಯಾಗುವುದು. ಎಲ್ಲರೂ ಆತನನ್ನು ಸತಿ ದಾ ಎಂದು ಕರೆಯುತ್ತಿದ್ದರು. ಮಾಸ್ತರ್ ದಾ ಖಂಡಿತವಾಗಿ ಸತಿಭೂಷಣ್ನನ್ನು ಸಂಪರ್ಕಿಸುತ್ತಾನೆ. ಕತ್ತಲಿನಲ್ಲಿ ಅವರು ಸತಿ ದಾನನ್ನು ಭೇಟಿ ಮಾಡಿದಾಗ ಆತ ಬಹಳ ಸಂತುಷ್ಟನಾಗಿ ಅವರ ಕಾರ್ಯಾಚರಣೆಗಾಗಿ ಬಹಳ ಹೆಮ್ಮೆಪಡುತ್ತಾನೆ. ದಾರಿಖರ್ಚಿಗಾಗಿ ನೂರು ರೂಪಾಯಿಯ ಕೆಲವು ನೋಟುಗಳನ್ನು ನೀಡಿ ಮಾಸ್ತರ್ ದಾನಿಂದ ಏನಾದರೂ ತಿಳಿದುಬಂದರೆ ಅದನ್ನು ಅವರಿಗೆ ತಲಪಿಸುವುದಾಗಿ ಹೇಳುತ್ತಾನೆ.
ಏಪ್ರಿಲ್ 20ರ ಸಂಜೆ ಸತಿ ದಾ ಅವನ ಮನೆಯಿಂದ ಹೊರಟ ಅನಂತ ತನ್ನ ಸಂಗಾತಿಗಳೊಂದಿಗೆ ಆಶ್ರಯ ಪಡೆಯಲು ನಗರದ ದಕ್ಷಿಣದಲ್ಲಿ ಕರ್ಣಫೂಲಿ ನದಿಯ ಬಳಿಯಿರುವ ರಜತ್ಸೇನ್ ಮನೆ ತಲಪಿದಾಗ ಅವರಿಗೆ ಆತ್ಮೀಯ ಸ್ವಾಗತ ದೊರಕುತ್ತದೆ. ರಜತನ ತಾಯಿ ಬಿನೋದಿನಿ ಊಟ ಬಡಿಸಿ ಮಹಡಿಯ ಮೇಲಿನ ರಜತ್ನ ಕೋಣೆಯಲ್ಲಿರುವಂತೆ ಆದೇಶಿಸುತ್ತಾಳೆ. 21ರ ಬೆಳಗ್ಗೆ ಅವರು ರಜತನ ತಂದೆಯೊಂದಿಗೆ ಕುಳಿತು ತಮ್ಮ ಸಾಹಸದ ಕಥೆಯನ್ನು ವಿವರಿಸುತ್ತಿರುವಾಗಲೇ ಮಕ್ಕಳು ಪೆÇಲೀಸರು ಬರುತ್ತಿರುವ ಮಾಹಿತಿಯನ್ನು ತರುತ್ತಾರೆ. ಓಡಿಹೋಗಲು ಅವಕಾಶವಿರಲಿಲ್ಲ. ತಕ್ಷಣ ರಜತ್ನ ತಂದೆ ಅವರನ್ನೆಲ್ಲ ಟೆರೇಸಿನ ಮೇಲಿರುವ ಅಟ್ಟದ ಮೇಲೆ ಅಡಗಿ ಕೂಡ್ರುವಂತೆ ಮಾಡುತ್ತಾರೆ. ಸಾರ್ಜೆಂಟ್ ಕೆಲ್ಲಿಯೊಂದಿಗೆ ಬಂದ ಪೆÇಲೀಸರು ಮನೆಯ ಪ್ರತಿಯೊಂದು ಕೋಣೆಯನ್ನು ಜಾಲಾಡಿದರಾದರೂ ಅಟ್ಟದ ಕಡೆ ಗಮನ ನೀಡಲಿಲ್ಲ. ಇನ್ನು ಚಿತ್ತಗಾಂವ್ನಲ್ಲಿರುವುದು ಭದ್ರವಲ್ಲ ಎಂದು ತೀರ್ಮಾನಿಸುವ ಅವರು, ಅಲ್ಲಿಂದ ಹೊರಟು ಡಬಲ್ ಮೂರಿಂಗ್ಸ್ ಬಳಿಯಿರುವ ರೈಲ್ವೇ ವಸತಿಯಲ್ಲಿರುವ ಗಣೇಶ್ ಘೋಷ್ನ ಸ್ನೇಹಿತ ದಿನೇಶ್ ಚಕ್ರವರ್ತಿಯ ಮನೆ ಸೇರುತ್ತಾರೆ.
ರೈಲ್ವೇಯಲ್ಲಿ ನೌಕರನಾಗಿರುವ ದಿನೇಶನ ತಾತನ ಮನೆ ಅದು. ರಾತ್ರಿ ಹತ್ತು ಗಂಟೆಯಾಗಿತ್ತು. ಎಲ್ಲರೂ ಮಲಗಿರುವ ಸಮಯ. ಜೀವನ್ ಘೋಷಾಲ್ ಮೆಲ್ಲಗೆ ಬೆಕ್ಕಿನಂತೆ ಹೆಜ್ಜೆಯಿಡುತ್ತ ದಿನೇಶನನ್ನು ಕರೆತರುತ್ತಾನೆ. ಮಿತ್ರರನ್ನು ಕಂಡ ದಿನೇಶ್ ಅಡುಗೆಮನೆಯಲ್ಲಿ ಜಾಗ ಕೊಡುತ್ತಾನೆ. ಸದ್ದಿಲ್ಲದೆ ಎಲ್ಲರೂ ಅಡುಗೆಮನೆ ಸೇರುತ್ತಾರೆ. ಒಂದೂ ಕಿಟಕಿ ಇಲ್ಲದ ಕೋಣೆಯದು. ಗಬ್ಬು ನಾರುತ್ತಿದೆ. ಗುಂಯ್ಗುಡುವ ದಪ್ಪದಪ್ಪ ಸೊಳ್ಳೆಗಳು. ದಿನೇಶ ಮತ್ತು ಆತನ ಅಣ್ಣ ಏನನ್ನೂ ಬೇಯಿಸುತ್ತಿರಲಿಲ್ಲ. ಹೀಗಾಗಿ ಕುಡಿಯುವ ನೀರಿನ ಒಂದು ಮಡಕೆಯನ್ನು ಬಿಟ್ಟರೆ ಅಲ್ಲಿ ತಿನ್ನಲು ಏನೂ ಇರಲಿಲ್ಲ. ದಿನೇಶನ ತಾತ ಬೆಳಗ್ಗೆ ಒಂಬತ್ತು ಗಂಟೆಗೆ
ಕೆಲಸಕ್ಕೆ ಹೋಗುವವರೆಗೂ ಇವರಿಗೆ ಆ ಕತ್ತಲ ಅಡುಗೆಕೋಣೆಯೇ ಆಸರೆಯಾಯಿತು.
ಅಂದು ಸಂಜೆ ಕೊಲ್ಕತಾಕ್ಕೆ ಹೋಗಲು ನಿರ್ಧರಿಸಿದ ಅವರಿಗೆ ಕೆಲವು ಸಾಮಗ್ರಿಗಳನ್ನು ಕೊಳ್ಳುವ ಆವಶ್ಯಕತೆ ಇತ್ತು. ದಿನೇಶ ಮಧ್ಯಾಹ್ನದ ಊಟ ತರಲು ಹೊರಹೋಗುತ್ತಾನೆ. ಹಿಂತಿರುಗುವಾಗ ಕೆಲವು ಬಟ್ಟೆಗಳು, ಎಣ್ಣೆ, ಸೋಪು, ಮುಖಕ್ಷೌರಕ್ಕೆ ಬೇಕಾಗುವ ರೇಜರ್, ಛತ್ರಿ, ತಾಮ್ರದ ನೀರಿನ ಚೆಂಬು, ಸೀಮೆಎಣ್ಣೆ ದೀಪ ತರಬೇಕೆಂದು ಆತನಿಗೆ ತಿಳಿಸಲಾಯಿತು. ಆದರೆ ಇವುಗಳಲ್ಲಿ ಯಾವುದೂ ಹೊಸತರಂತಿರಬಾರದು. ಎಲ್ಲವನ್ನೂ ಉಪಯೋಗಿಸಿದಂತೆ ಕಾಣಬೇಕೆಂದು ಒತ್ತಿಹೇಳಲಾಯಿತು.
ನಾಲ್ವರೂ ಮುಖಕ್ಷೌರ ಮಾಡಿಕೊಂಡು ಸಿದ್ಧರಾಗುತ್ತಾರೆ. ಅನಂತಸಿಂಗ್ ಸೊಂಟದಲ್ಲಿ ಎರಡು ರಿವಾಲ್ವರುಗಳನ್ನಿಟ್ಟು ಆನಂದನಿಗೆ ಧೋತಿ ಉಡಿಸುತ್ತಾನೆ. ‘ನಾನು ಒಬ್ಬ ಮೋಟರ್ಕಾರ್ ಮಾರುವ ದಲ್ಲಾಳಿ. ನೀನು ನನ್ನ ತಂಗಿಯ ಮಗ, ಇನ್ನೂ ಶಾಲಾ ವಿದ್ಯಾರ್ಥಿ. ನೆನಪಿರಲಿ’ ಎಂದು ಎಚ್ಚರಿಸುತ್ತಾನೆ. ಗಣೇಶ್ ಘೋಷ್ ಈಗಿನ್ನೂ ನೌಕರಿ ಸೇರಿರುವ ಒಬ್ಬ ಗುಮಾಸ್ತನಾಗಿದ್ದು ಮಾಖನ್ನ ಚಿಕ್ಕಪ್ಪನಾಗಿದ್ದಾನೆ. ಅನಂತ ಎಲ್ಲರಿಗೂ ಯಾರಿಗೂ ಅನುಮಾನಕ್ಕೆ ಆಸ್ಪದವಾಗದಂತೆ ಸುಲಲಿತವಾಗಿ ನಡೆಯುವ ರಂಗತಾಲೀಮು ನೀಡುತ್ತಾನೆ. ಆನಂತರ ಎಲ್ಲರ ಕಪೆÇೀಲಕಲ್ಪಿತ ಹೆಸರು, ತಂದೆ ಮತ್ತು ಗ್ರಾಮದ ಹೆಸರುಗಳನ್ನು ತಿಳಿಸಿ ಸಿದ್ಧಗೊಳಿಸುತ್ತಾನೆ.
ಸಂಜೆ 6.30ರ ಸಮಯ. ಒಬ್ಬೊಬ್ಬರ ಕೈಯಲ್ಲಿ ಒಂದು ಹರಕು ಛತ್ರಿ ಮತ್ತು ಚಾಪೆಯಲ್ಲಿ ಸುತ್ತಿರುವ ಬಟ್ಟೆಯ ಗಂಟುಗಳನ್ನು ಹಿಡಿದ ನಾಲ್ವರು ಹಳ್ಳಿಗರು ಹೊರಡುತ್ತಾರೆ. ಕಿರಿಯವ ಮುಂದೆ ಮುಂದೆ ನಡೆಯುತ್ತಿದ್ದರೆ ಅವನ ಹಿಂದೆ ವಯಸ್ಸಾದವ ನಡೆಯುತ್ತಿದ್ದಾನೆ. ಮುಂದಿರುವವನ ಕೈಯಲ್ಲಿ ಇನ್ನೂ ಹಚ್ಚಿರದ ಸೀಮೆಎಣ್ಣೆ ದೀಪವಿದೆ. ಅವರು ಎಂಟು ಮೈಲಿ ದೂರದಲ್ಲಿರುವ ಭಟಿಯಾರಿ ನಿಲ್ದಾಣದಲ್ಲಿ ರಾತ್ರಿ ಎಂಟು ಗಂಟೆಗೆ ಹೊರಡಲಿರುವ ರೈಲನ್ನು ಏರಬೇಕು. ರೈಲ್ವೇ ನಿಲ್ದಾಣದಲ್ಲಿ ನಿಂತ ಆನಂದ್ ದಾ ‘ನಾಲ್ಕು ಮೂರನೆ ದರ್ಜೆಯ ಟಿಕೆಟ್ ಕೊಡಿ’ ಎಂದು ಕೇಳುತ್ತಾನೆ. ಕುಮಿಲಾಗೆ ಟಿಕೆಟ್ ಕೊಳ್ಳುತ್ತಿರುವವನನ್ನು ಗಮನವಿಟ್ಟು ನೋಡಲು ಸ್ಟೇಶನ್ ಮಾಸ್ತರ್ ಎದ್ದು ಟಿಕೆಟ್ ಕಿಟಕಿಯವರೆಗೆ ಬರುತ್ತಾನೆ. ಅಷ್ಟರಲ್ಲಿ ಟಿಕೆಟ್ ನೀಡುವ ಗುಮಾಸ್ತ ‘ಭಟಿಯಾರಿಯಿಂದ ಕುಮಿಲಾಗೆ ಟಿಕೆಟ್ ಕೊಡುವ ವ್ಯವಸ್ಥೆಯಿಲ್ಲ. ಲಕ್ಷಮ್ ಜಂಕ್ಷನ್ ವರೆಗೂ ಟಿಕೆಟ್ ಕೊಳ್ಳಬೇಕು’ ಎಂದಾಗ ಅನಂತ ತಲೆಯಾಡಿಸುತ್ತಾನೆ. ರೈಲು ಆಗಲೇ ಪ್ಲಾಟ್ಫಾರಂ ಮೇಲೆ ನಿಂತಿದೆ. ತನ್ನನ್ನೇ ಗಮನಿಸುತ್ತಿರುವ ಸ್ಟೇಶನ್ ಮಾಸ್ತರನ ನೇರನೋಟ ಆನಂದನನ್ನು ವಿಚಲಿತಗೊಳಿಸುತ್ತದೆ. ಟಿಕೆಟ್ ಸಿಗುತ್ತಿದ್ದಂತೆ ಆತ ತನ್ನ ಸಂಗಾತಿಗಳತ್ತ ದೌಡಾಯಿಸುತ್ತಾನೆ. ನಾಲ್ವರೂ ಜನಸಂದಣಿಯಿಲ್ಲದ ಒಂದು ಬೋಗಿಯಲ್ಲಿ ಕುಳಿತುಕೊಳ್ಳುತ್ತಾರೆ. ಮುಖ ಕಾಣದಂತೆ ತಲೆಗೆ ಶಾಲನ್ನು ಹೊದ್ದು ತೂಕಡಿಸುವ ನಾಟಕ ಮಾಡಿದರೆ ಆನಂದ ಮಾತ್ರ ಎರಡೂ ಬಾಗಿಲುಗಳತ್ತ ದೃಷ್ಟಿ ಹಾಯಿಸುತ್ತ ಎಚ್ಚರಿಕೆಯಿಂದ ಕಾವಲು ಕೂರುತ್ತಾನೆ.
ಫೇನಿ ಗುಂಡಿನ ಕಾಳಗ
ಏಪ್ರಿಲ್ 22ರ ರಾತ್ರಿ ಕಳೆದು 23ರ ಮುಂಜಾನೆ 1 ಗಂಟೆಯ ಸಮಯದಲ್ಲಿ ರೈಲು ಫೇನಿ ನಿಲ್ದಾಣವನ್ನು ಸೇರುತ್ತದೆ. ಇದ್ದಕ್ಕಿದ್ದಂತೆ ‘ಯಾರ್ರೀ ಭಟಿಯಾರಿಯಿಂದ ಲಕ್ಷಮ್ಗೆ ಹೋಗುವವರು, ಯಾರ್ರೀ, ಟಿಕೆಟ್ ತೋರಿಸಿ’ ಎನ್ನುತ್ತ ಇಬ್ಬರು ಪೆÇಲೀಸ್ ಅಧಿಕಾರಿಗಳು ಹೆಗಲ ಮೇಲೆ ರೈಫಲ್ ಹೊತ್ತು ಕೈಯಲ್ಲಿ ಲಾಠಿ ಹಿಡಿದಿದ್ದ ಹತ್ತು ಪೇದೆಗಳೊಂದಿಗೆ ಬೋಗಿಯಲ್ಲಿ ನುಗ್ಗುತ್ತಾರೆ.
ಆನಂದ ಎಚ್ಚೆತ್ತುಕೊಂಡರೆ ಮಲಗಿದವನಂತೆ ಸೋಗುಹಾಕಿದ್ದ ಅನಂತಸಿಂಗ್ ಆಕಳಿಸುತ್ತ ತನ್ನ ಸೊಂಟದಲ್ಲಿದ್ದ ರಿವಾಲ್ವರಿನ ಮೇಲೆ ಕೈಯಾಡಿಸುತ್ತಾನೆ. ಗಣೇಶ್ ಘೋಷ್ನ ನಿದ್ದೆ ಇನ್ನೂ ಹರಿದಿಲ್ಲ. ಮಾಖನ್ ಘೋಷಾಲ್ ಶಸ್ತ್ರದ ಮೇಲೆ ಕೈಯನ್ನಿಟ್ಟು ಸಿದ್ಧನಾಗಿದ್ದಾನೆ. ಆದರೆ ಒಬ್ಬರನ್ನೊಬ್ಬರು ನೋಡುತ್ತಿಲ್ಲ. ಅಧಿಕಾರಿಗಳು ಹತ್ತಿರ ಬಂದಾಗ ಅನಂತಸಿಂಗ್ ತಮ್ಮಿಬ್ಬರ ಟಿಕೆಟ್ ತೋರಿಸುತ್ತಾನೆ. ಅದನ್ನು ನೋಡಿದ ಸಬ್-ಇನ್ಸ್ಪೆಕ್ಟರ್ ಜತೀಂದ್ರ ಮೋಹನ್ರಾಯ್ ಅದನ್ನು ಇನ್ಸ್ಪೆಕ್ಟರ್ ಅಬ್ದುಲ್ ಮೊಹಮದ್ ಫಾಜಲ್ ವಾಹಿದ್ ಕೈಗಿಡುತ್ತಾನೆ. ಅವೇ ನಂಬರಿನ ಟಿಕೆಟ್ಗಳು!
‘ಹೆಸರೇನು?’ ಹವಾಲ್ದಾರ್ ಗುಡುಗಿದ. ‘ಮಹಿಮಚಂದ್ರ ಸೇನ್’ ಎನ್ನುತ್ತ ಅನಂತ ‘ನನ್ನ ಸೋದರಳಿಯ’ ಎಂದು ಆನಂದನ ಕಡೆಗೆ ಬೆರಳು ಮಾಡಿ ತೋರಿಸುತ್ತಾನೆ. ಗಣೇಶ್ ಮತ್ತು ಮಾಖನ್ ತಾವು ಗುಹ, ವ್ಯಾಪಾರಿಗಳು ಎಂದು ಗುರುತಿಸಿಕೊಳ್ಳುತ್ತಾರೆ.
‘ಎಲ್ಲಿಗೆ ಹೊರಟಿದ್ದೀರ? ಕುಮಿಲ? ಆದರೆ ಟಿಕೆಟ್ ಏಕೆ ಲಕ್ಷಂವರೆಗೆ ತೆಗೆದುಕೊಂಡಿದ್ದೀರ? ಮನೆಯ ವಿಳಾಸ ಏನು?’
‘ಅಭಯಾಶ್ರಮ, ಫೇನಿ ಬಜಾರ್’ ಅನಂತನ ಉತ್ತರ.
‘ಆರು ತಿಂಗಳಿನಿಂದ ನಾನು ಅಲ್ಲಿದ್ದೇನೆ. ನಿನ್ನನ್ನು ಎಂದೂ ಕಂಡಿಲ್ಲ’ ಎನ್ನುತ್ತ ಸಬ್-ಇನ್ಸ್ಪೆಕ್ಟರ್ ‘ಇಳಿಯಿರಿ, ಎಲ್ಲಾ ಕೆಳಕ್ಕಿಳಿಯಿರಿ’ ಎಂದು ಆದೇಶಿಸುತ್ತಾನೆ.
ಗಣೇಶ್ ಘೋಷ್ ತಕ್ಷಣ ಇನ್ಸ್ಪೆಕ್ಟರ್ ಕಾಲನ್ನು ಹಿಡಿದು ‘ಸಾಬ್, ನಾವು ಯಾವ ತಪ್ಪನ್ನೂ ಮಾಡಿಲ್ಲ, ನಿಮಗೆ ಏನೋ ತಪ್ಪುಕಲ್ಪನೆಯಾಗಿದೆ, ಪೆÇಲೀಸರನ್ನು ಕಂಡರೆ ಭಯಪಡುವ ಗ್ರಾಮಸ್ಥರು ನಾವು. ದಯವಿಟ್ಟು ನಮ್ಮನ್ನು ಬಿಟ್ಟುಬಿಡಿ’ ಎಂದು ಗೋಗರೆದ. ಇನ್ಸ್ಪೆಕ್ಟರ್ಗೆ ಆತನ ಮಾತಿನಲ್ಲಿ ನಂಬಿಕೆ ಬಂದಂತೆ ಕಾಣುತ್ತದೆ. ಆತ ‘ನೋಡಪ್ಪಾ. ನಾವು ಸರಕಾರಿ ನೌಕರರು. ಸರಕಾರದ ಕೆಲಸ ಮಾಡಬೇಕಾಗುತ್ತದೆ. ನಮಗೆ ಭಟಿಯಾರಿ ಸ್ಟೇಶನ್ ಮಾಸ್ಟರ್ ನಿಮ್ಮ ಟಿಕೆಟ್ ನಂಬರ್ ಟೆಲಿಗ್ರಾಮ್ ಮೂಲಕ ತಿಳಿಸದೆ ಹೋಗಿದ್ದಲ್ಲಿ ನಾವು ಇಲ್ಲಿಗೆ ಬರುತ್ತಿರಲಿಲ್ಲ. ನೀವೇನೂ ಗಾಬರಿಯಾಗಬೇಡಿ, ಯಾವುದೇ ತೊಂದರೆಯಾಗುವುದಿಲ್ಲ. ಬಾಯಿಮಾತಿನ ಹೇಳಿಕೆ ಪಡೆದು ಬಿಟ್ಟುಬಿಡುತ್ತೇವೆ’ ಎಂದು ನುಡಿಯುತ್ತಾನೆ.
ಅವರೆಲ್ಲ ರೈಲಿನಿಂದ ಕೆಳಗಿಳಿಯುತ್ತಾರೆ. ಅನಂತ ಕಾಯಿಲೆಯಿಂದ ಬಳಲಿದವನಂತೆ ಬೆನ್ನುಬಗ್ಗಿಸಿ ಮೆಲ್ಲಗೆ ನಡೆಯುತ್ತಿದ್ದಾನೆ. ಅವನ ತಲೆ ಅದುರುತ್ತಿದೆ. ಅವರು ಉತ್ತರದಿಕ್ಕಿನತ್ತ ತಪ್ಪಿಸಿಕೊಳ್ಳದಂತೆ ರೈಲ್ವೇ ಅಡ್ಡಗಟ್ಟಿ ನಿಂತಿದೆ. ದಕ್ಷಿಣದಿಕ್ಕಿಗೆ ಮುಳ್ಳುತಂತಿಯ ಬೇಲಿ ಹಾಕಲಾಗಿದೆ. ಬಿಡದೆ ಸತಾಯಿಸುತ್ತಿರುವ ಕೆಮ್ಮಿನಿಂದ ಹೈರಾಣಾದ ಅನಂತಸಿಂಗ್ ನೆಲದ ಮೇಲೆ ಕುಳಿತು ಸುಧಾರಿಸಿಕೊಳ್ಳುತ್ತಾನೆ. ಮಧ್ಯದಲ್ಲೇ ಅವನು ಸೊಂಟದಲ್ಲಿರುವ ಆಟೋಮ್ಯಾಟಿಕ್ ಪಿಸ್ತೂಲು ಮತ್ತು ವೆಬ್ಲೆ ರಿವಾಲ್ವರುಗಳನ್ನು ಸಡಿಲಗೊಳಿಸುತ್ತಾನೆ. ಆನಂದ ಮತ್ತು ಮಾಖನ್ ಆತನನ್ನು ಕೈಹಿಡಿದು ಎಬ್ಬಿಸುತ್ತಾರಲ್ಲದೆ ಕುಡಿಯುವ ನೀರಿಗಾಗಿ ಪ್ರಾರ್ಥಿಸುತ್ತಾರೆ. ಇಬ್ಬರ ಮುಖವೂ ಭಯದಿಂದ ಕಪ್ಪಿಟ್ಟುಹೋಗಿದೆ. ಸಬ್-ಇನ್ಸ್ಪೆಕ್ಟರ್ ಜತೀಂದ್ರಮೋಹನ್ ಕ್ರಾಂತಿಕಾರಿ ಶೌರೀಂದ್ರಮೋಹನ್ ಚೌಧರಿಯ ಸೋದರಮಾವ. ಏಪ್ರಿಲ್ 18ರ ರಾತ್ರಿ ರೈಲ್ವೇ ಹಳಿಗಳನ್ನು ಕೀಳುವುದರಲ್ಲಿ ಆತನ ಸೋದರಳಿಯನ ಕೈವಾಡ ಇದೆ ಎಂಬುದು ಈ ಸೋದರಮಾವನಿಗೆ ತಿಳಿದಿಲ್ಲ!
ಎಲ್ಲರೂ ಸಹಾಯಕ ಸ್ಟೇಶನ್ ಮಾಸ್ತರ್ ಪುಲಿನ್ಬಿಹಾರಿ ಮಜುಂದಾರ್ನ ಕೋಣೆಯನ್ನು ತಲಪುತ್ತಾರೆ. ಟಿಕೆಟ್ ಕಲೆಕ್ಟರ್ ಪ್ರಫುಲ್ಲ ಪಾಠಕ್ ಮತ್ತು ಅಬ್ದುಲ್ ಹಕೀಂ ಹಾಗೂ ಸಿಗ್ನಲ್ ತೋರಿಸುವ ಲಾಲ್ ಮಿಯಾ ತಮಾಷೆ ನೋಡಲು ಕೋಣೆಯೊಳಕ್ಕೆ ಕಾಲಿಡುತ್ತಾರೆ. ಇನ್ಸ್ಪೆಕ್ಟರ್ ಕುರ್ಚಿಯ ಮೇಲೆ ಕೂತರೆ ಅವನ ಮುಂದೆ ಅನಂತ, ಗಣೇಶ್ ಆನಂದ ಮತ್ತು ಮಾಖನ್ ನಿಲ್ಲುತ್ತಾರೆ. ಒಬ್ಬ ಪೆÇಲೀಸ್ ಪೇದೆ ಹಿಂದಿರುವ ಬೀರುವಿನ ಬಳಿ ನಿಲ್ಲುತ್ತಾನೆ. ಮಿಕ್ಕವರೆಲ್ಲ ಬಾಗಿಲಿನ ಹೊರಗೆ ಗುಂಪುಗಟ್ಟಿ ಕಿಟಕಿಯಿಂದ ನೋಡುತ್ತ ನಿಲ್ಲುತ್ತಾರೆ. ಸಬ್-ಇನ್ಸ್ಪೆಕ್ಟರ್ ಗಣೇಶ್, ಘೋಷ್ಗೆ ಅವನ ಗಂಟನ್ನು ಬಿಚ್ಚುವಂತೆ ಹೇಳುತ್ತಾನೆ. ಗಣೇಶ್ ಘೋಷ್ ನಿರಾಯಾಸವಾಗಿ ಅದನ್ನು ಬಿಚ್ಚಿಟ್ಟು ಅನಂತರ ಜಲಬಾಧೆಗೆ ಹೋಗಲು ಬಿಡುವಂತೆ ಕೇಳಿಕೊಳ್ಳುತ್ತಾನೆ. ಇನ್ಸ್ಪೆಕ್ಟರ್ ಹವಾಲ್ದಾರ್ ಮತ್ತು ಇಬ್ಬರು ಪೆÇಲೀಸರನ್ನು ಜೊತೆಮಾಡಿ ಕಳುಹಿಸುತ್ತಾನೆ. ಈಗ ಅನಂತನ ಸರದಿ. ‘ಸಾಹೇಬರೇ, ನಮ್ಮ ಗಂಟುಗಳನ್ನೆಲ್ಲ ನೋಡಿದ್ದೀರಿ. ಆದಷ್ಟು ಬೇಗ ನಮ್ಮ ಹೇಳಿಕೆಯನ್ನು ತೆಗೆದುಕೊಂಡು ಬಿಟ್ಟುಬಿಡಿ ಸ್ವಾಮಿ’ ಎಂದು ಹಲ್ಲುಗಿಂಜುತ್ತಾನೆ.
ಇನ್ಸ್ಪೆಕ್ಟರ್ ‘ಸ್ವಲ್ಪ ತಾಳಯ್ಯ. ಇನ್ನೂ ನಿಮ್ಮೆಲ್ಲರನ್ನೂ ಶಾರೀರಿಕ/ದೈಹಿಕವಾಗಿ ಪರಿಶೀಲಿಸಬೇಕು’ ಎಂದಾಗ ಹಿಂದೆ ನಿಂತಿದ್ದ ಪೆÇಲೀಸ್ ಪೇದೆ ಮಾಖನ್ ಘೋಷಾಲ್ನ ಸೊಂಟಕ್ಕೆ ಕೈಹಾಕಲು ಮುಂದಾಗುತ್ತಾನೆ. ಅದೊಂದೇ ಕ್ಷಣ! ಹಾರಿದ ಗುಂಡು ಪೇದೆಯ ತೊಡೆಗೆ ತಗಲಿತು. ಆತ ಟೇಬಲ್ ಮೇಲೆ ಕುಸಿದುಬೀಳುತ್ತಾನೆ. ಮತ್ತೊಂದು ಗುಂಡು ದೀಪವನ್ನು ನಂದಿಸುತ್ತದೆ. ಕತ್ತಲಿನಲ್ಲಿ ಆನಂದ ಬಾಗಿಲಿನತ್ತ ಓಡಿದ. ಅನಂತ್ಸಿಂಗ್ ಟೇಬಲ್ ಮೇಲಿಂದ ಹಾರಿ ಹೊರಗೋಡುತ್ತಾನೆ. ಈ ಗಲಾಟೆಯಲ್ಲಿ ಎಲ್ಲರೂ ತಮ್ಮ ಪಾಡಿಗೆ ತಾವು ಓಡುತ್ತಿದ್ದಾರೆ. ಅನಂತ ಮುಳ್ಳಿನ ಬೇಲಿ ಇರುವುದನ್ನು ಮರೆತು ದಕ್ಷಿಣದತ್ತ ಮುಖ ಮಾಡಿ ಓಡತೊಡಗಿದ.
ಆನಂದ, ಮಾಖನ್ ಮತ್ತು ಗಣೇಶ್ ಘೋಷ್ ಕೊಲ್ಕತಾದತ್ತ ಹಿಂದಿನಿಂದ ಕೂಗುತ್ತ ಅಟ್ಟಿಸಿಕೊಂಡು ಬರುತ್ತಿದ್ದರೆ ಆನಂದ ಸಂಗಾತಿಗಳೆಲ್ಲಿದ್ದಾರೆ ಎಂಬುದನ್ನೂ ಗಮನಿಸುವ ವ್ಯವಧಾನವಿಲ್ಲದೆ ಓಡುತ್ತಿದ್ದಾನೆ. ಹಿಂದೆ ಬರುತ್ತಿರುವವರ ಕೂಗು ಕ್ಷೀಣಿಸತೊಡಗಿ ಕೊನೆಗೆ ನೀರವತೆ ಬೆನ್ನುಬೀಳುತ್ತದೆ. ಯಾವ ಸದ್ದೂ ಇಲ್ಲ. ಅಷ್ಟರಲ್ಲಿ ಮಾಖನ್ ಕೂಗಿದಂತಾಯಿತು. ನಿಂತು ನೋಡಿದರೆ ಅದು ಮಾಖನ್ ಹೌದು. ಮಾಖನ್ ಘೋಷಾಲ್ ಓಡಲಾಗದೆ ಕುಳಿತಿದ್ದಾನೆ. ಆನಂದ ಹತ್ತಿರ ಕೂತು ನೋಡಿದಾಗ ಮಾಖನ್ನ ಮೈಯೆಲ್ಲ ಒದ್ದೆಯಾಗಿದೆ. ರಕ್ತ! ಆನಂದ ಮಾಖನ್ನ ತಲೆಗೆ ಬಟ್ಟೆಯನ್ನು ಒತ್ತಿ ಹಿಡಿಯುತ್ತಾನೆ. ಬಾಗಿಲ ಬಳಿ ಇದ್ದ ಮಾಖನ್ ವಿವರಿಸುತ್ತಾನೆ ‘ನಾನೇ ಮೊದಲು ಹೊರಗೋಡಿದೆ. ಆದರೆ ಹೊರಗೆ ಓಡಿದ ಬಳಿಕ ಅನಂತ್ ದಾ ನನಗೆ ಕಾಣಿಸಲಿಲ್ಲ. ಅವನು ಒಳಗೇ ಇರಬಹುದೆಂದು ಆತನ ಸಹಾಯಕ್ಕಾಗಿ ಮತ್ತೆ ಕೋಣೆಯನ್ನು ಪ್ರವೇಶಿಸಿ ಬೀರುವಿನ ಹಿಂದೆ ಅವಿತುಕೊಳ್ಳಲು ಹೋದೆ. ಆಗ ನೆಲದ ಮೇಲೆ ಬಿದ್ದಿದ್ದ ಪೇದೆ ತನ್ನ ಲಾಠಿಯಿಂದ ತಲೆಯ ಮೇಲೆ ಎರಡು ಬಾರಿ ಹೊಡೆದು ನನ್ನ ಕೈಯಿಂದ ರಿವಾಲ್ವರನ್ನು ಕಿತ್ತುಕೊಂಡ. ಅವನು ಗುಂಡು ಹಾರಿಸುವುದರಲ್ಲಿ ನಾನು ಹೊರಗೆ ಓಡಿಬಂದೆ.’ ಸಂಗಾತಿಯ ಸಹಾಯಕ್ಕಾಗಿ ಧಾವಿಸಿದ ಮಾಖನ್ ತನ್ನ ಜೀವವನ್ನೇ ಪಣವಾಗಿಟ್ಟಿದ್ದ. ಹೆಗಲಿಗೆ ಒರಗಿದ ಮಾಖನ್ನನ್ನು ಹಿಡಿದು ಇಬ್ಬರೂ ಹತ್ತಿರದಲ್ಲಿದ್ದ ಕೊಳದತ್ತ ನಡೆದರು. ನೀರಿನಿಂದ ಮಾಖನ್ ಗಾಯವನ್ನು ತೊಳೆದ. ಆನಂದ ತನಗೆ ತೋಚಿದಂತೆ ಅದಕ್ಕೆ ಬಟ್ಟೆ ಕಟ್ಟುತ್ತಾನೆ. ಸ್ವಲ್ಪ ಕಾಲ ವಿಶ್ರಮಿಸಿ ನಿಧಾನವಾಗಿ ನಡೆಯತೊಡಗಿದರು. ಪ್ರಾಯಶಃ ಮುಂಜಾನೆ ಮೂರು ಗಂಟೆಯ ಸಮಯ. ಕಗ್ಗತ್ತಲಿನಿಂದ ಕೂಡಿದ ನಿರ್ಜನ ರಸ್ತೆಯಲ್ಲಿ ಇಬ್ಬರೂ ಕಾಲೆಳೆದುಕೊಂಡು ನಡೆಯುತ್ತಿದ್ದಾರೆ.
ಆಯಾಸಗೊಂಡಿರುವ ಮಾಖನ್ನನ್ನು ಸಂಭಾಳಿಸುತ್ತ ಆನಂದ ಹೆಜ್ಜೆ ಇಡುತ್ತಿದ್ದಾನೆ. ಅನಂತ ಮತ್ತು ಗಣೇಶ್ ಘೋಷ್ ಏನಾದರು? ಅವರೂ ಈ ಹಾದಿಯಲ್ಲಿ ಬರುತ್ತಿರಬಹುದೆ? ಸ್ವರ-ಅಪಸ್ವರಗಳ ಖಯಾಲಿ ಇಲ್ಲದೆ ಆನಂದ ಜೋರಾದ ದನಿಯಲ್ಲಿ ಹಾಡಲು ತೊಡಗುತ್ತಾನೆ. ದೂರದಲ್ಲೊಂದು ಅಸ್ಪಷ್ಟ ಆಕೃತಿ ನಡೆದು ಹೋಗುತ್ತಿರುವಂತೆ ಭಾಸವಾಗುತ್ತದೆ. ಪೆÇಲೀಸ್? ಅದು ತನ್ನ ನಡೆಯನ್ನು ಕ್ಷೀಣಗೊಳಿಸುತ್ತದೆ. ಇವರೂ ತಮ್ಮ ನಡಿಗೆಯನ್ನು ನಿಧಾನಗೊಳಿಸುತ್ತಾರೆ. ಅದು ಮರವೊಂದರ ಬಳಿ ಕುಳಿತುಕೊಳ್ಳುತ್ತದೆ. ಆನಂದ ಶಂಕೆಯಿಂದ ಹಿಂದೆ ನಿಲ್ಲುತ್ತಾನೆ. ಅದು ಎದ್ದು ಮತ್ತೊಮ್ಮೆ ಮುಂದೆ ನಡೆಯಲು ಪ್ರಾರಂಭಿಸಿದಾಗಲೂ ಆನಂದ ಸಾಕಷ್ಟು ಅಂತರವಿಟ್ಟು ಹಿಂಬಾಲಿಸುತ್ತಿದ್ದಾನೆ. ಕೊನೆಗೂ ಅದು ಮರವೊಂದರ ಬಳಿ ಕುಳಿತುಕೊಳ್ಳುತ್ತದೆ. ಈಗ ಕೈಯಲ್ಲಿ ಪಿಸ್ತೂಲನ್ನು ಹಿಡಿದ ಆನಂದ ನಿಧಾನವಾಗಿ ಆ ವ್ಯಕ್ತಿಯ ಬಳಿ ನಡೆದು ಎದೆಗೆ ಪಿಸ್ತೂಲನ್ನು ಹಿಡಿದು ‘ಯಾರು ನೀನು?’ ಎಂದು ಕೇಳುತ್ತಾನೆ. ಮುಖ ಮುಚ್ಚುವಂತೆ ತಲೆಯ ಮೇಲೆ ಮುಸುಕನ್ನು ಹೊದ್ದಿದ್ದ ಆ ವ್ಯಕ್ತಿ ‘ಶ್ರೀಮಾನ್ ಗಣೇಶ್ ಘೋಷ್’ ಎಂದುಸುರಿದಾಗ ಆನಂದನಿಗೆ ಜೀವ ಬಂದಂತಾಯಿತು. ನಗೆಯ ಬುಗ್ಗೆ ಒಡೆದಂತಾಯಿತು. ಪೆÇಲೀಸರು ಗಣೇಶನನ್ನು ಹಳಿಯ ಆಚೆ ಕರೆದುಕೊಂಡು ಹೋಗಲಿಲ್ಲ. ಆದರೆ ನಿಲ್ದಾಣದಲ್ಲಿಯೇ ಬಹಿರ್ದೆಸೆಗೆ ಹೋಗಲು ಗಣೇಶ ಹಿಂಜರಿಯುವವನಂತೆ ನಟಿಸುತ್ತಾನೆ. ಕೊನೆಗೂ ಅವನು ಕುಳಿತಾಗ ಹವಾಲ್ದಾರ್ ಮತ್ತು ಪೇದೆಗಳು ತಮ್ಮ ಕತ್ತನ್ನು ಬೇರೆಡೆ ತಿರುಗಿಸಿ ನಿಲ್ಲುತ್ತಾರೆ. ಅಷ್ಟರಲ್ಲಿ ನಿಲ್ದಾಣದಿಂದ ಗುಂಡಿನ ಸದ್ದು ಕೇಳಿಬಂದಿದೆ. ಅವರು ಗಣೇಶನ ಕಡೆ ನೋಡುತ್ತಿದ್ದಂತೆ ಆತನ ಕೈಯಲ್ಲಿದ್ದ ಎರಡು ಪಿಸ್ತೂಲುಗಳು ಅವರತ್ತ ತಿರುಗಿದ್ದವು. ಗಾಬರಿಗೊಂಡ ಅವರು ಅಲ್ಲಿಂದ ಓಡುತ್ತಾರೆ.
ಮೂವರೂ ನಡೆಯತೊಡಗಿದರು. ಮಾಖನ್ ಆನಂದನ ಮೇಲೆ ಒರಗಿದರೆ ಗಣೇಶನ ಮೈ ಸುಡುತ್ತಿದೆ. ರಾತ್ರಿಯೆಲ್ಲ ನಡೆದು ಬೆಟ್ಟದ ಸಾಲಿನಲ್ಲಿರುವ ದಟ್ಟವಾದ ಕಾಡಿನಲ್ಲಿ ಪ್ರವೇಶಿಸುವ ಅವರು ಫೇನಿಯಿಂದ ಸುಮಾರು ಹದಿನೈದು ಮೈಲಿ ದೂರ ಬಂದಿದ್ದಾರೆ. ನಸುಕಿನ ಬೆಳಕಿನಲ್ಲಿ ಆನಂದ ಇಬ್ಬರೂ ಸಂಗಾತಿಗಳನ್ನು ಗಮನಿಸುತ್ತಾನೆ. ಗಣೇಶನ ಮುಖ ಮೈ ಮೇಲೆಲ್ಲ ಇದ್ದ ಸೀತಾಳಸಿಡುಬಿನ ಗುಳ್ಳೆಗಳಲ್ಲಿ ಕೀವು ತುಂಬಿದೆ. ಕೆಲವು ಒಡೆದು ಒಣಗುತ್ತಿದ್ದರೆ ಅವುಗಳ ಪಕ್ಕದಲ್ಲೇ ಇನ್ನೂ ಹಸಿಯಾಗಿರುವ ಗುಳ್ಳೆಗಳು ಕಾಣಿಸಿಕೊಂಡಿವೆ. ಮಾಖನ್ ಮುಖದ ಮೇಲೆಲ್ಲ ಹೆಪ್ಪುಗಟ್ಟಿದ ರಕ್ತ. ನಿರ್ಜನ ಪ್ರದೇಶ. ನರಪಿಳ್ಳೆಯೂ ಕಾಣುತ್ತಿಲ್ಲ. ಅಲ್ಲೊಂದು ಚಿಕ್ಕ ನೀರಿನ ಕೊಳ ಕಾಣಿಸುತ್ತದೆ. ಹಳದಿಗಟ್ಟಿದ ನೀರು, ಪಕ್ಕದಲ್ಲೇ ಕೊಳೆತಿರುವ ಎಲೆ, ಬಳ್ಳಿಗಳು. ಬಾಯಾರಿದ ದೇಹಕ್ಕೆ ನೀರು ಅನಿವಾರ್ಯವಾಗಿದೆ. ಅದೇ ನೀರನ್ನು ಕುಡಿದು ಕೈಕಾಲುಗಳನ್ನು ತೊಳೆದುಕೊಳ್ಳುತ್ತಾನೆ. ಅಲ್ಲಿಂದ ಮೂರು ಗಂಟೆಗಳ ಪಯಣ. ಹಸಿವಿನಿಂದ ಮೂವರೂ ಕಂಗಾಲಾಗಿದ್ದಾರೆ. ಆಹಾರ ದೊರಕದಿದ್ದರೆ ಅಲ್ಲೇ ಉಪವಾಸ ಸಾಯಬೇಕಾಗುತ್ತದೆ. ಕಾಡಿನಲ್ಲಿ ಆಗೊಬ್ಬ ಸೌದೆ ಆಯುವವನು ಕಾಣಿಸಿಕೊಳ್ಳುತ್ತಾನೆ. ಗಣೇಶ ಆತನ ಬಳಿಸಾರಿ ಸಹಾಯ ಕೇಳಿದಾಗ ಆತ ಹತ್ತಿರದಲ್ಲಿರುವ ಗುಡಿಸಲುಗಳತ್ತ ಕೈ ಮಾಡಿ ತೋರಿಸುತ್ತಾನೆ. ಅವರು ಆ ಹಳ್ಳಿಯ ಗೌಡನ ಮುಂದೆ ನಿಂತಾಗ ಆತ ಅಚ್ಚರಿಯಿಂದ ‘ಡಕಾಯಿತರಾ?’ ಎಂದು ಕೇಳುತ್ತಾನೆ. ಅದಕ್ಕೆ ಗಣೇಶ ‘ಅಲ್ಲ ಸ್ವಾಮಿ ಅಲ್ಲ. ನಾವು ಯಾರ ಕೇಡನ್ನೂ ಬಯಸದ ದಾರಿ ತಪ್ಪಿ ಬಂದ ಹಳ್ಳಿಗರು’ ಎಂದು ಆಶ್ವಾಸನೆ ನೀಡುತ್ತಾನೆ. ಗೌಡನಿಗೆ ಗಣೇಶನ ಮೈಮೇಲಿನ ಸಿಡುಬಿನ ಗುಳ್ಳೆಗಳು ಆತನ ಮಾತನ್ನು ನಂಬಿ ದಯೆತೋರುವಂತೆ ಮಾಡಿತು. ಎಲ್ಲರಿಗೂ ತಟ್ಟೆಯಲ್ಲಿ ಬಿಸಿಬಿಸಿ ದಪ್ಪ ಅಕ್ಕಿಯ ಅನ್ನ, ಮೂರು ಅರೆ ಬೆಂದ ಬಾಳೆಯ ಹಣ್ಣುಗಳನ್ನು ನೀಡಲಾಯಿತು. ಅದರೊಂದಿಗೆ ಒಂದು ಪಾತ್ರೆ ಕುಡಿಯುವ ನೀರನ್ನು ಇಡಲಾಗಿದೆ. ಗಣೇಶ ಬಾಳೆಹಣ್ಣನ್ನು ಕಿವುಚಿ ಅದರೊಂದಿಗೆ ಅನ್ನವನ್ನು ಬೆರೆಸಿ ಉಂಡೆ ಮಾಡಿ ಬಾಯಲ್ಲಿಟ್ಟ. ಮಿಕ್ಕವರಿಬ್ಬರೂ ಅದನ್ನೇ ಮಾಡುತ್ತಾರೆ. ಹೊಟ್ಟೆ ತುಂಬ ಊಟ ಮಾಡಿದ ಅವರು ಅಲ್ಲಿಂದ ಹೊರಟರು. ಕುಮಿಲ ಬದಲಿಗೆ ಸಿಲ್ಹಟ್ನಲ್ಲಿರುವ ಆನಂದನ ಚಿಕ್ಕಮ್ಮ ಸುಮತಿ ಮಜುಂದಾರ್ ಸಹಾಯ ಪಡೆದು ಕೊಲ್ಕತಾಕ್ಕೆ ಹೋಗುವ ನಿರ್ಧಾರ ಮಾಡುತ್ತಾರೆ.
ದಿನವೆಲ್ಲ ಕಾಡಿನಲ್ಲಿ ಮಲಗಿ ವಿಶ್ರಮಿಸಿದ್ದ ಅವರು ಸಂಜೆಯಾಗುತ್ತಿದ್ದಂತೆ ಎಂಟು ಮೈಲಿ ದೂರದ ರೈಲ್ವೇ ನಿಲ್ದಾಣವನ್ನು ಸೇರಲು ಹಳಿಯ ಮಗ್ಗುಲಲ್ಲೇ ನಡೆದು ಹೊರಟರು. ಮಾರ್ಗದಲ್ಲಿ ಸಿಕ್ಕಲ್ಲೆಲ್ಲ ತಮ್ಮ ಶರ್ಟನ್ನು ಚಾಚಿ ಹೊಟ್ಟೆಗಾಗಿ ಭಿಕ್ಷೆ ಬೇಡಿದರೆ ಯಾರೂ ಭಿಕ್ಷೆ ಹಾಕಲಿಲ್ಲ. ಯಾರೋ ಒಬ್ಬ ಮಾತ್ರ ಸ್ವಲ್ಪ ಅವಲಕ್ಕಿಯನ್ನು ಹಾಕುತ್ತಾನೆ. ಮುಂದಿನ ಹಳ್ಳಿಯಲ್ಲಿ ಯಾವುದೋ ಧಾರ್ಮಿಕ ಪೂಜೆಗಾಗಿ ಹಳ್ಳಿಗರೆಲ್ಲ ಸೇರಿದ್ದಾರೆ. ಹಳ್ಳಿಯ ಗೌಡನಂತೆ ಕಾಣುವ ಹಿರಿಯನನ್ನು ಕಂಡು ಗಣೇಶ್ ಘೋಷ್ ಪ್ರಸಾದ ನೀಡುವಂತೆ ಬೇಡುತ್ತಾನೆ. ಆತ ಕೆರಳಿ ಹತ್ತಾರು ಪ್ರಶ್ನೆಗಳನ್ನು ಹಾಕುತ್ತಾನೆ. ಇವರ ಉತ್ತರಗಳಿಂದ ಎಲ್ಲರ ಮುಖದಲ್ಲೂ ಅನುಮಾನದ ಹೊಗೆಯಾಡುತ್ತಿದೆ. ಗೊಣಗಾಟ ಶುರುವಾಗಿದೆ. ತಕ್ಷಣ ಸಾವರಿಸಿಕೊಂಡ ಗಣೇಶ್ ಘೋಷ್ ತನ್ನ ವಿನಮ್ರತೆಯನ್ನು ಬದಿಗಿಟ್ಟು ಕೆರಳಿದ ದನಿಯಲ್ಲಿ ‘ವಕೀಲರಂತೆ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿದ್ದೀರಲ್ಲಾ ಸ್ವಾಮಿ, ನಾವೇನು ಕಳ್ಳರಾ, ಡಕಾಯಿತರಾ? ದೂರದ ಹಳ್ಳಿಯಿಂದ ಬಂದವರಿಗೆ ರಾತ್ರಿಯಲ್ಲಿ ಹೀಗೆಲ್ಲ ಕೇಳಿದರೆ ಹೇಗೆ?’ ಎಂದು ಸರಸರನೆ ಅವರಿಂದ ದೂರ ನಡೆಯತೊಡಗಿದ. ಆನಂದ ಮತ್ತು ಮಾಖನ್ ಸಹಿತ ಆತನನ್ನು ಹಿಂಬಾಲಿಸಿ ಹಳ್ಳಿಗರಿಂದ ತಪ್ಪಿಸಿಕೊಂಡರು.
ರಾತ್ರಿಯಾಗುತ್ತಿದೆ. ಹಲವು ಹಳ್ಳಿಗಳನ್ನು ದಾಟಿ ಮುಂದೆ ಹೋಗುತ್ತಿದ್ದಾರೆ. ಪ್ರತಿ ಹಳ್ಳಿಯಲ್ಲೂ ಇವರ ಹೆಜ್ಜೆಸಪ್ಪಳ ಕುತೂಹಲ ಕೆರಳಿಸಿ ಪ್ರಶ್ನೆಗಳಿಗೆ ಅವಕಾಶ ಮಾಡಿಕೊಡುತ್ತದೆ. ರೈಲ್ವೇ ನಿಲ್ದಾಣ ತಲಪಿದಾಗ ರಾತ್ರಿ ಹತ್ತು ಗಂಟೆಯಾಗಿತ್ತು. ಹತ್ತಿರದಲ್ಲಿದ್ದ ಪೇಟೆಯಲ್ಲಿ ಒಂದು ಅಂಗಡಿಯಿಂದ ಗಣೇಶ್ ಘೋಷ್ ಎಲ್ಲರಿಗೂ ಲುಂಗಿ ಮತ್ತು ತಲೆಗೆ ತುರ್ಕಿ ಟೋಪಿಗಳನ್ನು ಕೊಳ್ಳುತ್ತಾನೆ. ಒಂದು ಕಟ್ಟು ಬೀಡಿಯೂ ಸೇರಿತ್ತು. ಹತ್ತಿರದ ಹೊಲದಲ್ಲಿ ಅವರು ಬಟ್ಟೆ ಬದಲಿಸಿ ಮುಸಲ್ಮಾನರಂತೆ ನಿಲ್ದಾಣ ಸೇರಿದರು. ರೈಲು ಬಂದು ನಿಲ್ಲುತ್ತಿದ್ದಂತೆ ಹಲವಾರು ಪೆÇಲೀಸರು ಪ್ರತಿಯೊಂದು ಬೋಗಿಗೂ ನುಗ್ಗಿ ಪ್ರಯಾಣಿಕರನ್ನು ಪ್ರಶ್ನಿಸುತ್ತಿದ್ದಾರೆ. ಫೇನಿ ಅನುಭವ! ತಮ್ಮ ಹೊಸ ದಿರಿಸಿನಲ್ಲಿ ಇತರ ಪ್ರಯಾಣಿಕರ ಜೊತೆ ಕುಳಿತು ಬೀಡಿ ಸೇದುತ್ತಿದ್ದ ಮೂವರನ್ನು ಗುರುತಿಸುವುದು ಅಸಾಧ್ಯವಾಗಿತ್ತು. ರೈಲು ನಿಲ್ದಾಣ ಬಿಟ್ಟು ಹೊರಟಿತು.
ಮುಂದೆ ಮೂವರೂ ಜೊತೆಯಾಗಿ ಪ್ರಯಾಣಿಸುವುದು ಸುರಕ್ಷಿತವಲ್ಲ ಎಂದು ನಿರ್ಧರಿಸುವ ಗಣೇಶ್ ಮಾಖನ್ ಮತ್ತು ಆನಂದನಿಗೆ ಸಿಲ್ಹಟ್ನಲ್ಲಿರುವ ಚಿಕ್ಕಮ್ಮನ ಮನೆಗೆ ಹೋಗಿ ಬಳಿಕ ಕೊಲ್ಕತಾಕ್ಕೆ ಬರುವಂತೆ ಸೂಚಿಸುತ್ತಾನೆ. ಅದರಂತೆ ಅವರಿಬ್ಬರು ಚಿಕ್ಕಮ್ಮನ ಮನೆಗೆ ತಲಪಿದಾಗ ಶಾಲೆಯಲ್ಲಿ ಮುಖ್ಯೋಪಾಧ್ಯಾಯಿನಿಯಾಗಿದ್ದ ಚಿಕ್ಕಮ್ಮ ಒಬ್ಬರೇ ಇರುತ್ತಿದ್ದುದರಿಂದ ಕಾವಲುಗಾರ ಅವರಿಬ್ಬರನ್ನು ಮನೆಯೊಳಗೆ ಬಿಡಲಿಲ್ಲ. ಬಳಿಕ ಆನಂದ ‘ನಿಮ್ಮನ್ನು ಕಾಣಬೇಕಿದೆ – ಟೂನ್’ ಎಂದು ಚೀಟಿ ಬರೆದು ಕಳುಹಿಸುತ್ತಾನೆ. ಟೂನ್ ಎಂಬುದು ಮನೆಯವರು ಆನಂದನನ್ನು ಪ್ರೀತಿಯಿಂದ ಕರೆಯುವ ಹೆಸರು. ತಕ್ಷಣ ಬಂದ ಚಿಕ್ಕಮ್ಮ ಅವರಿಬ್ಬರನ್ನೂ ಮನೆಯೊಳಕ್ಕೆ ಕರೆದುಕೊಂಡಳು. ಅಂದು ಸಂಜೆಯೇ ಆಕೆ ಅವರಿಬ್ಬರಿಗೆ ಖಾದಿ ಉಡುಪುಗಳನ್ನು ತಂದುಕೊಡುತ್ತಾಳೆ. ಹೆಚ್ಚು ದಿನ ಅಲ್ಲಿರುವುದು ಸುರಕ್ಷಿತವಾಗಿರಲಿಲ್ಲ. ಹಾಗಾಗಿ ಅವರು ಕೊಲ್ಕತಾಕ್ಕೆ ಹೊರಡುತ್ತಾರೆ. ಚಿಕ್ಕಮ್ಮ ಅವರ ಕೈಲಿ ಮುನ್ನೂರು ರೂಪಾಯಿಗಳನ್ನಿಟ್ಟು ಬೀಳ್ಕೊಡುತ್ತಾಳೆ.
ಗಣೇಶ್ ಘೋಷ್ ಏಕಾಂಗಿಯಾಗಿ ರೈಲ್ವೇ ನಿಲ್ದಾಣದಲ್ಲಿ ಹರಿದ ಶಾಲನ್ನು ಹೊದ್ದು ಜನರ ಮಧ್ಯೆ ಸೇರಿ ಕುಳಿತಿದ್ದಾನೆ. ಸಿಗರೇಟ್ ಮತ್ತು ಬೆಂಕಿಪೆÇಟ್ಟಣ ಮಾರುವ ಬಾಲಕನೊಬ್ಬ ಸಿಗರೇಟ್ ಕೊಳ್ಳುವಂತೆ ದುಂಬಾಲುಬೀಳುತ್ತಾನೆ. ಬೇಡ ಎಂದಾಗ ಆತ ಅಳುಮುಖದಿಂದ ಗಣೇಶನ ಪಕ್ಕದಲ್ಲಿ ಕುಳಿತು ‘ಅಣ್ಣಾ, ಸ್ವದೇಶೀಗಳು ಚಟ್ಟೋ ಗ್ರಾಮದಲ್ಲಿ ದಾಳಿ ಮಾಡಿದಾಗಿನಿಂದ ವ್ಯಾಪಾರವೇ ಇಲ್ಲ’ ಎಂದು ಅಲವತ್ತುಕೊಳ್ಳುತ್ತಾನೆ. ಗಣೇಶ ಕನಿಕರದಿಂದ ಒಂದು ಪ್ಯಾಕೆಟ್ ಸಿಗರೇಟ್ ಕೊಂಡು ಅದರಿಂದ ಒಂದು ಸಿಗರೇಟನ್ನು ಹಚ್ಚಿ ಸೇದತೊಡಗಿದಾಗ ಅಲ್ಲಿಯೇ ನಿಂತಿದ್ದ ತರುಣನೊಬ್ಬ ಬಂದು ಕ್ಯಾತೆ ತೆಗೆಯುತ್ತಾನೆ. ‘ಏನು ಮಾಡುತ್ತಿದ್ದೀಯ? ಕಾಂಗ್ರೆಸ್ನ ಹೆಸರು ಕೇಳಿದ್ದೀಯ? ಅವರು ವಿದೇಶೀ ವಸ್ತುಗಳನ್ನು ಬಹಿಷ್ಕರಿಸುವ ಪಣ ತೊಟ್ಟಿದ್ದರೆ, ನೀನು ಕುಳಿತು ವಿದೇಶೀ ಸಿಗರೇಟ್ ಸೇದುತ್ತಿದ್ದೀಯ?’ ಎಂದು ತಿರಸ್ಕಾರದಿಂದ ನುಡಿಯುತ್ತಾನೆ. ಅಷ್ಟರಲ್ಲಿ ರೈಲು ಬಂದಿದ್ದರಿಂದ ಗಣೇಶ್ ಇತರ ಪ್ರಯಾಣಿಕರೊಂದಿಗೆ ಮೂರನೇ ದರ್ಜೆಯ ಬೋಗಿಯಲ್ಲಿ ಹತ್ತಿ ಕುಳಿತುಕೊಳ್ಳುತ್ತಾನೆ. ಬೋಗಿಯನ್ನು ಪ್ರವೇಶಿಸುವ ಗಾರ್ಡ್ ಒಬ್ಬ ಗಣೇಶನ ಬಟ್ಟೆಗಂಟನ್ನು ಬಿಚ್ಚುವಂತೆ ಆದೇಶಿಸಿದಾಗ ಅಲ್ಲಿಯೇ ಇದ್ದ ಆ ಯುವಕ ‘ಏನ್ರೀ, ನಿಮಗೇನಾದರೂ ಬುದ್ಧಿ ಇದೆಯಾ? ಸುಮ್ಮನೆ ಯಾಕೆ ಬಡವರನ್ನು ಗೋಳಾಡಿಸುತ್ತೀರ?’ ಎಂದು ಗಾರ್ಡ್ ಮೇಲೆ ರೇಗುತ್ತಾನೆ. ಕೊಲ್ಕತಾ ಸೇರಿದ ಗಣೇಶ್ ಘೋಷ್ ಕಿರಣ್ ಮುಖರ್ಜಿಯ ಮನೆಯನ್ನು ಸುರಕ್ಷಿತವಾಗಿ ಸೇರುತ್ತಾನೆ. ಸರಕಾರ ಗಣೇಶ್ ಘೋಷ್, ಅನಂತಸಿಂಗ್ ಮತ್ತು ಸೂರ್ಯಸೇನ್ರವರ ಫೆÇೀಟೋಗಳನ್ನು ಮುದ್ರಿಸಿ ಐದುಸಾವಿರ ರೂಪಾಯಿಗಳ ಬಹುಮಾನ ಘೋಷಿಸಿರುವುದು ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.
ಕೊಲ್ಕತಾದತ್ತ ಅನಂತಸಿಂಗ್
ಇತ್ತ ಅನಂತಸಿಂಗ್ ಮುಳ್ಳುಬೇಲಿಗೆ ಸಿಕ್ಕಿಕೊಂಡಾಗ ಆತನ ಬಟ್ಟೆಯೆಲ್ಲ ಹರಿದು ಚಿಂದಿಯಾಗುತ್ತದೆ. ಮೈಯೆಲ್ಲ ಚುಚ್ಚಿದ ಗಾಯ. ರಕ್ತ ಒಸರುತ್ತದೆ. ಅಲ್ಲೇ ಪ್ರಯಾಣಿಕರು ಹೊರಹೋಗುವ ಗೇಟಿನಿಂದ ಹೊರಗೋಡಿದ ಅನಂತ ಕತ್ತಲಿನಲ್ಲಿ ಕೆಸರಿನ ಹೊಂಡದಲ್ಲಿ ಕಾಲುಜಾರಿ ಬೀಳುತ್ತಾನೆ. ಪಕ್ಕದಲ್ಲೇ ಕಟ್ಟಲಾಗುತ್ತಿದ್ದ ಗುಡಿಸಲಿನ ಗೋಡೆಗೆ ಗಿಲಾಯಿ ಮಾಡಲು ಮಣ್ಣಿಗೆ ನೀರು ಹೊಯ್ದು ಸಿದ್ಧಗೊಳಿಸಲಾದ ಕೆಸರಿನ ಹೊಂಡ. ಅದರಲ್ಲಿ ಮುಳುಗತೊಡಗಿದ ಅನಂತ ಹರಸಾಹಸ ಮಾಡಿ ಹೊರಬರುತ್ತಾನೆ. ಮೈಯೆಲ್ಲ ಮಣ್ಣು ಮೆತ್ತಿಕೊಂಡಿದೆ. ಉರಿಯುವ ಗಾಯಗಳು, ಒಸರುವ ರಕ್ತ. ಈಗವನು ರೈಲ್ವೇ ಹಳಿಗಳ ಪಕ್ಕದಲ್ಲಿರುವ ಹೊಲಗದ್ದೆಗಳನ್ನು ದಾಟುತ್ತ ಉತ್ತರದಲ್ಲಿರುವ ಗುಡ್ಡದತ್ತ ಓಡತೊಡಗಿದ. ರಾತ್ರಿ ಬಹಳ ಹೊತ್ತಿನವರೆಗೂ ಓಡುತ್ತಿದ್ದ ಅನಂತ ಕಾಲುವೆಯೊಂದರ ಬಳಿ ಕುಳಿತು ಮೈ, ಕೈಕಾಲುಗಳಿಗೆ ಮೆತ್ತಿಕೊಂಡಿರುವ ಮಣ್ಣನ್ನು ತೊಳೆದು ತೆಗೆಯುತ್ತಾನೆ. ಕೈಯಲ್ಲಿದ್ದ ಒಂಬತ್ತು ಗುಂಡುಗಳ ಪಿಸ್ತೂಲಿನಿಂದ ಒಂದು ಗುಂಡನ್ನು ಹಾರಿಸಿದ್ದ. ಅದರಲ್ಲೀಗ ಎಂಟು ಗುಂಡುಗಳು ಉಳಿದಿವೆ. ಮತ್ತೊಂದು ರಿವಾಲ್ವರಿನಲ್ಲಿ ಕೇವಲ ಒಂದು ಗುಂಡಿದೆ. ಪಿಸ್ತೂಲನ್ನು ಸ್ವಚ್ಛಗೊಳಿಸಿದಾಗ ಅದರ ಸ್ಪ್ರಿಂಗ್ ಮುರಿದಿರುವುದನ್ನು ಗಮನಿಸಿದ ಅನಂತನಿಗೆ ಈಗ ಕೈಯಲ್ಲಿರುವ ಎರಡೂ ಆಯುಧಗಳು ನಿಷ್ಪ್ರಯೋಜಕವಾಗಿದ್ದವು. ಬಿಸಿಲಿನ ಝಳಕ್ಕೆ ಅನಂತ ಕಣ್ಣು ತೆರೆಯದಾದ.
ಕಣ್ಣುಗಳ ಮುಂದೆ ಮರ ಗಿಡಗಳು ಗಿರಿಗಿಟ್ಟಲೆ ಆಡುತ್ತಿರುವಂತೆ ಭಾಸವಾಗುತ್ತದೆ. ಪ್ರಾಯಶಃ ಬೆಳಗಿನ ಎಂಟು ಗಂಟೆಯಾಗಿರಬಹುದು ಎಂದುಕೊಳ್ಳುತ್ತಾನೆ. ಪಕ್ಕದಲ್ಲಿರುವ ನಿಷ್ಪ್ರಯೋಜಕ ಆಯುಧಗಳನ್ನು ಅಲ್ಲೇ ಪೆÇದೆಯಲ್ಲಿ ಗುಂಡಿ ತೋಡಿ ಮಣ್ಣಿನಿಂದ ಮುಚ್ಚುತ್ತಾನೆ. ಹರಿದು ಚಿಂದಿಯಾದ ಬಟ್ಟೆಯಲ್ಲಿ ಸೊಂಟವೊಂದನ್ನು ಬಿಟ್ಟು ಮಿಕ್ಕೆಲ್ಲ ದೇಹ ಬೆತ್ತಲೆಯಾಗಿದೆ. ಈಗ ಹೊಸತೊಂದು ಅವತಾರ ತಾಳುತ್ತಾನೆ. ಅರೆಬೆತ್ತಲೆ ಹುಚ್ಚ, ಮನ ಬಂದಾಗ ನಗುವ, ಅಳುವ ಹುಚ್ಚ; ಒಮ್ಮೆ ಬಡಬಡಿಸಿದರೆ ಮತ್ತೊಮ್ಮೆ ಬಾಯಿಯೇ ಇಲ್ಲದ ಮೂಕ, ಕಿವುಡ. ಕಪಟ ನಾಟಕವಾಡುತ್ತ ಗುಡ್ಡದ ಮೇಲಿನ ಕಾಡಿನಿಂದ ಕೆಳಗಿಳಿಯತೊಡಗಿದ. ಹಸಿವಿನಿಂದ ಹುಲ್ಲಿನ ಮೇಲೆ ಯಾರೋ ಅರ್ಧ ಕಚ್ಚಿ ಎಸೆದ ಮಾವಿನಕಾಯಿಯನ್ನು ತಾನೂ ಕಚ್ಚಿ ತಿನ್ನುತ್ತಾನೆ. ಸ್ವಲ್ಪ ದೂರದಲ್ಲಿ ಹೊಲದಲ್ಲಿ ಹೆಂಗಸೊಬ್ಬಳು ಕೆಲಸ ಮಾಡುತ್ತಿದ್ದಾಳೆ. ಅನಂತ ಅಳುತ್ತ, ಚೀರುತ್ತ ಮಾತುಬಾರದ ಹುಚ್ಚನಂತೆ ಹೊಟ್ಟೆ-ಬಾಯಿ ತೋರಿಸುತ್ತ ಆಕೆಯ ಸಮೀಪ ಹೋಗುತ್ತಾನೆ. ಆಕೆ ಕನಿಕರದಿಂದ ತನ್ನ ಬಳಿಯಿದ್ದ ಒಂದು ಕಲ್ಲಂಗಡಿಯನ್ನು ನೀಡಿ ತನ್ನ ಪಾತ್ರೆಯಲ್ಲಿದ್ದ ನೀರನ್ನು ಅವನ ಬೊಗಸೆಗೆ ಸುರಿಯುತ್ತಾಳೆ. ಅಷ್ಟರಲ್ಲಿ ಹೊಲದ ಆ ಬದಿಯಿಂದ ಕೆಲವು ಗಂಡಸರು ಬರುತ್ತಿರುವುದನ್ನು ಕಂಡ ಅನಂತ ಸುಮ್ಮನೆ ಅಲ್ಲಿಂದ ದೂರ ಸರಿಯುತ್ತಾನೆ.
ಎಲ್ಲ ಸಮಯದಲ್ಲಿ ಹುಚ್ಚನ ಪಾತ್ರ ಕನಿಕರ ತರುವುದಿಲ್ಲ. ರಸ್ತೆಯಲ್ಲಿ ನಡೆಯುವಾಗ ಅವನನ್ನು ಹಿಂಬಾಲಿಸುವ ಕೆಲ ಹುಡುಗರು ಕಲ್ಲುಗಳನ್ನು ಎಸೆಯುತ್ತ ರೇಗಿಸತೊಡಗುತ್ತಾರೆ. ಕಲ್ಲೊಂದು ಬಡಿದಾಗ ನೋವಿನಿಂದ ಕಣ್ಣಲ್ಲಿ ನೀರು ಒಸರಿತು. ಸುಮಾರು ಒಂದು ಮೈಲಿಯವರೆಗೂ ಸತಾಯಿಸಿದ ಹುಡುಗರು ಸ್ವಾರಸ್ಯ ಕಳೆದುಕೊಂಡು ಹಿಂತಿರುಗಿದರು. ಫೇನಿಯಿಂದ ಬಿಲೋನಿಯಾಕ್ಕೆ ಹೋಗುವ ಮಾರ್ಗದಲ್ಲಿ ಹೊಸ ರೈಲ್ವೇ ಹಳಿಗಳನ್ನು ಕಂಡ ಅನಂತ ಅದೇ ಜಾಡಿನಲ್ಲಿ ನಡೆಯತೊಡಗಿದ. ಎತ್ತರದ ಆವರಣದ ಗೋಡೆಯ ಹಿಂದೆ ದೊಡ್ಡ ಮನೆಯೊಂದು ಕಾಣಿಸಿದಾಗ ಅನಂತ ಮನೆಯ ಅಂಗಳದಲ್ಲಿ ಕಾಲಿಡುತ್ತಾನೆ. ಮಧ್ಯಾಹ್ನ ಎರಡು ಗಂಟೆಯಾಗಿದೆ. ಅನಂತನನ್ನು ಕಾಣುತ್ತಿದ್ದಂತೆ ಹತ್ತು ಹದಿನೈದು ಬಾಲಕರು ಓಡೋಡಿ ಬರುತ್ತಾರೆ. ಎಲ್ಲರೂ ಅವನನ್ನು ಅಣಕಿಸುವುದು, ಗದರಿಸುವುದು ಮಾಡುತ್ತಾರೆ. ಅನಂತ ತನ್ನ ಹೊಟ್ಟೆ ಬಾಯಿಯತ್ತ ಸಂಜ್ಞೆ ಮಾಡಿ ಊಟ ಕೇಳುತ್ತಾನೆ. ಅವರೆಲ್ಲ ಜೋರಾಗಿ ನಗುತ್ತಾರೆ. ಅಷ್ಟರಲ್ಲಿ ಮನೆಯೊಳಗಿನಿಂದ ಸರಿಸುಮಾರು ಹುಡುಗರ ವಯಸ್ಸಿನ ಸೀರೆಯುಟ್ಟ ಹೆಣ್ಣುಮಗಳು ಹೊರಬರುತ್ತಾಳೆ. ಆಕೆಯನ್ನು ಕಂಡ ಬಾಲಕರೆಲ್ಲ ಸುಮ್ಮನಾಗುತ್ತಾರೆ. ಅನಂತ ತನ್ನ ಹಸಿವನ್ನು ಸಂಜ್ಞೆಯಿಂದ ಮತ್ತೆ ತೋರಿಸುತ್ತಾನೆ. ಆಕೆ ಒಳಗೆ ಹೋಗಿ ಅನ್ನ, ಬೇಳೆಸಾರು, ತರಕಾರಿ ಮತ್ತು ಮೀನಿನ ತುಂಡುಗಳನ್ನು ಹಾಕಿರುವ ಒಂದು ಎಲೆಯನ್ನು ದೂರದಲ್ಲಿಟ್ಟು ಅದನ್ನು ತೆಗೆದುಕೊಳ್ಳುವಂತೆ ಕೈಸನ್ನೆ ಮಾಡುತ್ತಾಳೆ. ಅನಂತ ಅದನ್ನು ತೆಗೆದುಕೊಂಡು ಕೊಳದ ಬಳಿ ಬಂದು ಒಮ್ಮೆ ಬಲಗೈ ಮತ್ತೊಮ್ಮೆ ಎಡಗೈ ಹೀಗೆ ಎರಡೂ ಕೈಗಳನ್ನು ಬಳಸುತ್ತ ಹೊಟ್ಟೆ ತುಂಬ ತಿನ್ನುತ್ತಾನೆ. ಹುಡುಗರ ತುಂಟಾಟ, ಅಣಕು ಆಟದ ಮುಂದೆ ಆ ಬಾಲಕಿಯ ಕಾರುಣ್ಯ ಅನಂತನಿಗೆ ಊಟ ನೀಡಿತ್ತು. ಊಟ ಮುಗಿಸಿ ತನ್ನ ದಾರಿ ಹಿಡಿಯುವ ಮುನ್ನ ಆತ ಮತ್ತೆ ಹಿಂತಿರುಗಿ ನೋಡುತ್ತಾನೆ. ಆ ಬಾಲೆ ಮನೆಬಾಗಿಲಲ್ಲಿ ನಿಂತು ಆತ ಹೋಗುವುದನ್ನೇ ನೋಡುತ್ತಿದ್ದಳು.
ಮುಂದಿನ ಹಳ್ಳಿ. ದಾರಿಯಲ್ಲಿ ಸಿಕ್ಕ ಚಿಕ್ಕ ನದಿಯಲ್ಲಿ ಮುಳುಗಿ ಎದ್ದ ಅನಂತನಿಗೆ ದಡದಲ್ಲಿ ಕುಳಿತಿದ್ದ ಬೆಸ್ತನೊಬ್ಬ ಕಾಣಿಸುತ್ತಾನೆ. ಆತನಿಗೆ ಅನಂತ ತನ್ನ ಹೊಟ್ಟೆಯನ್ನು ತೋರಿಸುತ್ತಾನೆ. ಆತ ಅನಂತನನ್ನು ತನ್ನ ಗುಡಿಸಲಿಗೆ ಕರೆದುಕೊಂಡು ಹೋದ. ಒಳಕ್ಕೆ ಹೋಗುತ್ತಿದ್ದಂತೆ ಮನೆಯವರೆಲ್ಲರೂ ಅನಂತನನ್ನು ಸುತ್ತುವರಿಯುತ್ತಾರೆ. ದೊಡ್ಡ ತಟ್ಟೆಯೊಂದರಲ್ಲಿ ಊಟ ಇಡಲಾಯಿತು. ಅನಂತ ಮೂಕನಂತೆ ಊಟ ಮಾಡತೊಡಗಿದ. ಮನೆಯವರಿಗೆ ಕುತೂಹಲ. ಒಬ್ಬೊಬ್ಬರು ಒಂದೊಂದು ಮಾತನಾಡುತ್ತಿದ್ದರೆ ಅವಾವುದೂ ಕೇಳದವನಂತೆ ಅನಂತ ಊಟ ಮಾಡುತ್ತಿದ್ದಾನೆ. ಆದರೆ ಒಬ್ಬ ಮುದುಕ ಮಾತ್ರ ‘ನೀನು ಏನೇ ಹೇಳು. ಆತ ಹುಚ್ಚನಂತೆ ಕಾಣುವುದಿಲ್ಲ. ಸಿಐಡಿ ಇರಬಹುದು, ಯಾರಿಗೆ ಗೊತ್ತು’ ಎಂದಾಗ ಅನಂತನಿಗೆ ಇನ್ನು ಹೆಚ್ಚು ಹೊತ್ತು ಅಲ್ಲಿರುವುದು ಅಪಾಯಕಾರಿ ಎನ್ನಿಸಿತು. ಇದ್ದಕ್ಕಿದ್ದಂತೆ ಕೈಕಾಲುಗಳು ಅದರತೊಡಗಿದಂತೆ ಮಾಡಿ ಎದ್ದು ಹೊರಗೋಡಿದ. ಮನೆಯಾತ ಹಿಂದೆ ಬರಲು ನೋಡಿದನಾದರೂ ಅನಂತರ ಸುಮ್ಮನಾದ. ಬಿಲೋನಿಯಾ ಪೇಟೆ ಎದುರಾಯಿತು. ರಾತ್ರಿಯಾಗಿದ್ದುದರಿಂದ ಹೆಚ್ಚಿನ ಜನಜಂಗುಳಿ ಇರಲಿಲ್ಲ. ರೈಲ್ವೇ ಹಳಿಗಳ ಸಮೀಪ ತಲಪಿದ ಅನಂತನಿಗೆ ಹಲವರು ಬೆಂಕಿ ಹಾಕಿಕೊಂಡು ಕುಳಿತಿರುವುದು ಕಂಡುಬಂದಿತು. ಅಷ್ಟರಲ್ಲಿ ಬ್ಯೂಗಲ್ ಸದ್ದು. ತಾನು ದಂಡುಪ್ರದೇಶಕ್ಕೆ ಬಹಳ ಸಮೀಪದಲ್ಲಿದ್ದೇನೆಂಬ ಅರಿವು ಅವನಿಗಾಯಿತು. ಅಲ್ಲಿಂದ ಸಾಧ್ಯವಾದಷ್ಟು ವೇಗವಾಗಿ ಗುಡ್ಡಗಳತ್ತ ಜಾರಬೇಕೆಂದು ಕತ್ತಲಿನಲ್ಲಿ ಮುನ್ನಡೆದ.
ರಾತ್ರಿಯೆಲ್ಲ ಗುಡ್ಡದ ಮೇಲೆ ಮಲಗಿದ್ದ ಅನಂತಸಿಂಗ್ ಬೆಳಗಾಗುತ್ತಲೇ ಕಣ್ಣುಬಿಡುತ್ತಾನೆ. ಮಣ್ಣಿನ ಮೇಲೆ ಮಲಗಿದ್ದ ದೇಹ ಮರಗಟ್ಟಿಹೋಗಿತ್ತು. ಕೆಳಗಿಳಿದು ನಡೆಯತೊಡಗಿದ. ಮುಂಜಾವಿನ ಬೆಳಕಿನಲ್ಲಿ ಒಬ್ಬಿಬ್ಬರು ರೈತರು ತಮ್ಮ ಎತ್ತುಗಳೊಂದಿಗೆ ಹೊಲಗಳತ್ತ ಸಾಗುತ್ತಿದ್ದಾರೆ. ಅನಂತಸಿಂಗ್ ಒಬ್ಬನನ್ನು ಮಾತನಾಡಿಸುತ್ತಾನೆ. ‘ಅಣ್ಣಾ, ಒಂದು ನಿಮಿಷ ತಾಳು. ನನ್ನ ಗತಿ ಹೇಗಾಗಿದೆ ನೋಡಣ್ಣಾ. ನಾನೊಬ್ಬ ಸ್ವದೇಶೀ. ಪೆÇಲೀಸರೊಂದಿಗೆ ಹೋರಾಡಿ ಕೆಲವರನ್ನು ಗುಂಡಿಟ್ಟು ಕೊಂದೆ.’ ‘ಪೆÇಲೀಸರನ್ನು ಕೊಂದಿದ್ದೇಕೆ?’ ‘ಅದು ನಮ್ಮ ದೇಶಕ್ಕಾಗಿ. ಅವರು ನಮ್ಮ ಅಮಾಯಕರ ಮೇಲೆ ದಬ್ಬಾಳಿಕೆ ನಡೆಸಿ ಕೊಲ್ಲುತ್ತಿದ್ದಾರೆ.’ ಆತ ಸೂಕ್ಷ್ಮವಾಗಿ ತಲೆಯಾಡಿಸಿ ತನ್ನನ್ನು ಹಿಂಬಾಲಿಸುವಂತೆ ಸೂಚಿಸಿದ. ಹೊಲ ತಲಪುತ್ತಿದ್ದಂತೆ ಅನಂತನನ್ನು ಒಂದೆಡೆ ಕೂರಿಸಿ ಆತ ತನ್ನ ಕೆಲಸ ಪ್ರಾರಂಭಿಸುತ್ತಾನೆ. ಚಿತ್ತಗಾಂವ್ನ ಬ್ರಿಟಿಷರ ಸಹಾಯಕ್ಕಾಗಿ ಬಂದಿರುವ ತ್ರಿಪುರಾ ಮಹಾರಾಜರ ಸೇನೆಯ ಶಿಬಿರದಿಂದ ಬ್ಯೂಗಲ್ ಸದ್ದು ಕೇಳುತ್ತಿದೆ. ಸ್ವಲ್ಪ ಸಮಯದಲ್ಲಿ ಯುವಕನೊಬ್ಬ ಬಂದ. ಆತ ಯುವಕನಿಗೆ ನೇಗಿಲನ್ನು ಕೊಟ್ಟು ಅನಂತನನ್ನು ಗುಡಿಸಲಿಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಒಂದು ಶರ್ಟ್ ಮತ್ತು ಪಂಚೆಯನ್ನು ನೀಡಿ ಒಂದು ಕೋಣೆಯಲ್ಲಿ ಬಿಡುತ್ತಾನೆ. ಒಬ್ಬ ವಯಸ್ಸಾದ ಮಹಿಳೆ ತಟ್ಟೆಯಲ್ಲಿ ಅವಲಕ್ಕಿ, ಬೆಲ್ಲದ ಜೊತೆಯಲ್ಲಿ ಒಂದು ಚೆಂಬು ನೀರನ್ನು ಇಡುತ್ತಾಳೆ. ಅದು ಗ್ರಾಮಸ್ಥರ ಮೃಷ್ಟಾನ್ನ ಭೋಜನ. ಅದನ್ನು ಮುಗಿಸಿ ಆತ ನೆಲದ ಮೇಲೆ ಅಡ್ಡಾಗುತ್ತಾನೆ.
ಸಂಜೆ ಅದೇ ವ್ಯಕ್ತಿ ಅನಂತ ಎಲ್ಲಿಗೆ ಹೋಗಬೇಕು, ಯಾವ ಮಾರ್ಗದಲ್ಲಿ ಹೋಗುತ್ತಾನೆ ಇತ್ಯಾದಿ ವಿವರಗಳನ್ನು ಕೇಳಿದ ಬಳಿಕ ಆತನ ಬಳಿ ಎಷ್ಟು ಹಣ ಇದೆಯೆಂದು ಕೇಳುತ್ತಾನೆ. ಅನಂತ ತನ್ನ ಬಳಿ ಇದ್ದ ಹಣವನ್ನೆಲ್ಲ ಆತನ ಕೈಗೆ ಹಾಕುತ್ತಾನೆ. ಆತನ ಹೆಸರು ಸುರೇನ್. ಏಪ್ರಿಲ್ 27ರಂದು ಅನಂತನನ್ನು ಯಾರೂ ಹೆಚ್ಚು ಬಳಸದ ಮಾರ್ಗದಲ್ಲಿ ಕರೆದುಕೊಂಡು ಹೊರಡುತ್ತಾನೆ. ದಾರಿಯಲ್ಲಿ ಸಿಕ್ಕ ಪೆÇಲೀಸ್ ಚೌಕಿಯಲ್ಲಿ ‘ಮೂಕ’ನೊಂದಿಗೆ ಬಂದ ಸುರೇನ್ ಪೆÇಲೀಸರಿಗೆ ತೃಪ್ತಿಕರವಾಗಿ ಎಲ್ಲ ಉತ್ತರಗಳನ್ನು ನೀಡಿದ ಬಳಿಕ ಚೊಡ್ಡೊಗ್ರಾಮ್ ತಲಪುತ್ತಾರೆ. ಅಲ್ಲಿಂದ ಕುಮಿಲ 20 ಮೈಲಿ ದೂರದಲ್ಲಿದೆ. ಅಂದು ಕುಮಿಲಾಗೆ ಹೋಗುವ ಬಸ್ ಪ್ರಯಾಣಿಕರನ್ನು ಹತ್ತಿಸಿಕೊಳ್ಳದೆ ರಿಪೇರಿಗಾಗಿ ಹೋಗಲಿದೆ. ಸುರೇನ್ ಬಸ್ ಚಾಲಕನೊಂದಿಗೆ ಮಾತನಾಡಿ ತಮ್ಮಿಬ್ಬರನ್ನು ಕರೆದೊಯ್ಯುವಂತೆ ಮನ ಒಲಿಸುತ್ತಾನೆ. ಚಾಲಕ ಒಪ್ಪಿದನಾದರೂ ಹೊರಡಲು ಇನ್ನೂ ಎರಡು ತಾಸುಗಳಿವೆ ಎಂದು ಹೇಳುತ್ತಾನೆ. ಇಬ್ಬರೂ ಅದೇ ಹಳ್ಳಿಯಲ್ಲಿರುವ ಸುರೇನ್ನ ದಾಯಾದಿಯ ಮನೆಗೆ ಹೋದಾಗ ಅನಂತನನ್ನು ಬಿಟ್ಟು ಸುರೇನ್ ಮತ್ತು ಆತನ ದಾಯಾದಿ ಮಾತಿನಲ್ಲಿ ಮಗ್ನರಾಗುತ್ತಾರೆ. ಎರಡು ಗಂಟೆಗಳ ಬಳಿಕ ಅವರು ಬಸ್ನಿಲ್ದಾಣ ತಲಪಿದಾಗ ಬಸ್ ಹೊರಡಲು ಸಿದ್ಧವಾಗಿ ನಿಂತಿತ್ತು. ಸುರೇನ್ ಅನಂತನನ್ನು ಒಬ್ಬನೇ ಹೋಗುವಂತೆ ಸೂಚಿಸುತ್ತಾನೆ. ಅನಂತ ಸ್ವಲ್ಪ ಹಣ ಕೊಡುವಂತೆ ಕೇಳಿದರೆ ಅದಕ್ಕೆ ಕೈಯಾಡಿಸುತ್ತಾನೆ. ಬಸ್ ಹೊರಡುತ್ತದೆ. ಮಾರ್ಗದಲ್ಲಿ ಬಸ್ ಚಾಲಕನಿಗೆ ಅನಂತ ಕುಮಿಲಾದಲ್ಲಿ ವಕೀಲರಾಗಿರುವ ಕಾಮಿನಿ ದತ್ತರವರ ಪರಿಚಯವಿದೆಯೇ ಎಂದು ಕೇಳುತ್ತಾನೆ. ಕಾಮಿನಿ ದತ್ತ ಎಲ್ಲರಿಗೂ ಚಿರಪರಿಚಿತರು. ಒಮ್ಮೆ ಅವರನ್ನು ಕಂಡರೆ ತನ್ನ ಸಮಸ್ಯೆಗಳಿಗೆಲ್ಲ ಮುಕ್ತಿ ದೊರಕುತ್ತದೆ ಎಂಬ ಭಾವನೆಯಿಂದ ಅನಂತ ನಿಶ್ಚಿಂತನಾಗುತ್ತಾನೆ.
ಅನಂತ ನೇರವಾಗಿ ಕಾಂಗ್ರೆಸ್ ಕಾರ್ಯಕರ್ತ ಕಾಮಿನಿ ದತ್ತರವರ ಮನೆ ತಲಪುತ್ತಾನೆ. ಕಾಮಿನಿ ದತ್ತ ಹಾಗೂ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮೌಲ್ವಿ ಮುಕುಲೇಶ್ವರ್ ರಹಮಾನ್ ಆತನನ್ನು ಹೃದಯಪೂರ್ವಕವಾಗಿ ಸ್ವಾಗತಿಸುತ್ತಾರೆ. ಅನಂತ ರಹಮಾನ್ರವರ ಮನೆಯಲ್ಲಿ ಮೂರು ದಿನಗಳ ಕಾಲ ರಹಸ್ಯ ಅತಿಥಿಯಾಗಿ ಉಳಿಯುತ್ತಾನೆ. ಕಾಮಿನಿ ದತ್ತ ಕೊಲ್ಕತಾದಲ್ಲಿ ತನ್ನ ಸಹೋದರ ನರೇನ್ ದತ್ತನ ಮನೆಯಲ್ಲಿರುವಂತೆ ವ್ಯವಸ್ಥೆ ಮಾಡುತ್ತಾನೆ. ಕುಮಿಲಾದಿಂದ ರಹಮಾನ್ ಕೊಲ್ಕತಾದವರೆಗೆ ಲುಂಗಿ, ಕಮೀಜ್ ಮತ್ತು ತುರ್ಕಿ ಟೋಪಿಯನ್ನು ಧರಿಸಿದ ಅನಂತನೊಂದಿಗೆ ಸಂಗಾತಿಯಾಗಿ ಮೌಲ್ವಿ ಇರಾದ್ ಉಲ್ಲಾನನ್ನು ಕಳುಹಿಸಿದಾಗ ಅನಂತ ಆತನೊಂದಿಗೆ ಮುಸಲ್ಮಾನನಂತೆ ನಟಿಸುತ್ತ ಕೊಲ್ಕತಾ ತಲಪುತ್ತಾನೆ.
ಕೊಲ್ಕತಾದಲ್ಲಿ ‘ಜುಗಾಂತರ’ದ ಪ್ರಮುಖನಾಗಿರುವ ಭೂಪೇನ್ ದತ್ತ ಅನಂತನ ಸಹಾಯಕ್ಕೆ ಮುಂದಾಗುತ್ತಾನೆ. ಅಂದು ರಾತ್ರಿ ಭೂಪೇನ್ ದತ್ತ ಕಾರಿನಲ್ಲಿ ಅನಂತನನ್ನು ಕಿದ್ದರ್ಪುರ ಬಂದರಿನ ಬಳಿಯಿರುವ ಕ್ರೈಸ್ತ ಕುಟುಂಬದ ಮನೆಗೆ ಕರೆದುಕೊಂಡು ಹೋಗುತ್ತಾನೆ. ಅಲ್ಲಿ ಈಗಾಗಲೇ ಗಣೇಶ್, ಮಾಖನ್ ಮತ್ತು ಆನಂದ ಗುಪ್ತ ಆಶ್ರಯ ಪಡೆದಿರುತ್ತಾರೆ. ಮಾಖನ್ ಮತ್ತು ಆನಂದನಿಗೆ ಸೀತಾಳಸಿಡುಬು ಎದ್ದಿದ್ದು ಅವರಿಬ್ಬರೂ ಶುಶ್ರೂಷೆ ಪಡೆಯುತ್ತಿದ್ದಾರೆ. ಅವರು ಗುಣಮುಖರಾಗುತ್ತಿದ್ದಂತೆ ಭೂಪೇನ್ ನಾಲ್ವರನ್ನೂ ಫ್ರೆಂಚ್ ವಸಾಹತು ಚಂದ್ರನಗರಕ್ಕೆ ಕರೆದುಕೊಂಡು ಹೋಗುತ್ತಾನೆ.
ಚಿತ್ತಗಾಂವ್ನ ಕ್ರಾಂತಿಕಾರಿಗಳಿಗೆ ಶ್ರೀರಕ್ಷೆ ಒದಗಿಸುವ ಹೊಣೆ ಹೊತ್ತ ಭೂಪೇಂದ್ರಕುಮಾರ್ ದತ್ತ ಯಾರಿಗೂ ಅನುಮಾನ ಬಾರದಂತೆ ಚಂದ್ರನಗರದಲ್ಲಿ ಮನೆಯೊಂದನ್ನು ಪಡೆದು ಅನಂತಸಿಂಗ್, ಗಣೇಶ್ ಘೋಷ್, ಆನಂದಗುಪ್ತ ಮತ್ತು ಮಾಖನ್ ಘೋಷಾಲ್ರನ್ನು ಅಲ್ಲಿಗೆ ರವಾನಿಸುತ್ತಾನೆ. ಮನೆಯ ಉಸ್ತುವಾರಿಗಾಗಿ ಕೊಲ್ಕತಾದ ಸುಹಾಸಿನಿ ಗಂಗೂಲಿ ಹಾಗೂ ಮತ್ತೊಬ್ಬ ಕ್ರಾಂತಿಕಾರಿ ಶಶಧರ್ ಆಚಾರ್ಯನನ್ನು ಪತಿ-ಪತ್ನಿಯ ಪಾತ್ರ ನಿರ್ವಹಿಸಲು ಕಳುಹಿಸುತ್ತಾನೆ. ಸುಹಾಸಿನಿ ಗಂಗೂಲಿ ಅಲ್ಲಿಯ ಶಾಲೆಯೊಂದರಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಉದ್ಯೋಗಕ್ಕೆ ಸೇರುತ್ತಾಳೆ. (ಮುಂದುವರಿಯುವುದು)