ಆಧ್ಯಾತ್ಮಿಕ ಲೇಖನಮಾಲೆ – 2

ಕಾವೇರೀಪಟ್ಟಣದಲ್ಲಿ ವೆಂಕಟನಾಥರ ಅನುರೂಪದ, ಅಪರೂಪದ, ಅನ್ಯೋನ್ಯ ದಾಂಪತ್ಯವು ಸುಖಕರವಾಗಿಯೇ ಸಾಗಿತ್ತು. ಬೇಕುಬೇಕೆಂಬ ಹಾಹಾಕಾರ-ಬಯಕೆಗಳಿಲ್ಲದ ಸಂತೃಪ್ತ ಮನಸ್ಸಿನ ಈ ದಂಪತಿಗಳಿಗೆ ತಮ್ಮ ಬದುಕಿನಲ್ಲಿದ್ದ ಬಡತನದಿಂದ ಬೇಸರವಿರಲಿಲ್ಲ. “ಇಟ್ಹಾಂಗೆ ಇರುವೆನು ಹರಿಯೇ” ಎಂಬ ಶ್ರೀಪಾದರಾಜರ ನುಡಿಯಂತೆ ದೇವರು ಕೊಟ್ಟಿರುವಷ್ಟು ಸಾಕೆಮಗೆ ಎಂಬ ತೃಪ್ತ ಮನೋಭಾವ. ದೈವದಲ್ಲಿ ಪ್ರೀತಿ, ಭಕ್ತಿ ತುಂಬಿಕೊಂಡಿದ್ದ ದಂಪತಿಗಳು. ಸಿರಿತನ-ವೈಭವಕ್ಕೆ ಎಂದೂ ಆಶಿಸದ ಅನನ್ಯ ಜೋಡಿ. ಹರಿಭಕ್ತಿಯೇ ತಮ್ಮೆಲ್ಲ ಸಿರಿಭಾಗ್ಯ ಎಂದು ತಿಳಿದ ತೃಪ್ತ ಬದುಕು ಅವರದ್ದಾಗಿತ್ತು. ಸದಾ ಹರಿಧ್ಯಾನದ ಜೊತೆಗೆ ವಿದ್ಯಾದಾನ ಎನ್ನುವುದನ್ನೂ ಬಿಡದೆ ನಡೆಸಿಕೊಂಡು ಬರುತ್ತಿದ್ದವರು ವೆಂಕಟನಾಥರು. ಹಾಲು-ಸಕ್ಕರೆ ಬೆರೆತಂತಿದ್ದ ಈ ದಾಂಪತ್ಯಕ್ಕೆ ಶುಭಯೋಗದಲ್ಲಿ ಮುಂದೆ ಪುತ್ರನೊಬ್ಬನ ಜನನವೂ ಆಯಿತು. ಮಗುವಿಗೆ ಲಕ್ಷ್ಮೀನಾರಾಯಣ ಎಂದು ನಾಮಕರಣವನ್ನು ಮಾಡಲಾಯಿತು. (ಇದೇ ಮಗುವು ಮುಂದೆ ಬೆಳೆದು ದೊಡ್ಡವನಾದ ಮೇಲೆ ಲಕ್ಷ್ಮೀನಾರಾಯಣಾಚಾರ್ಯರೆನ್ನಿಸಿಕೊಂಡು ಋಗ್ಭಾಷ್ಯ ಟೀಕೆಗೆ ಟಿಪ್ಪಣಿಯನ್ನು ರಚಿಸಿ ಪ್ರಖ್ಯಾತರಾದರು.)
ಈ ವೇಳೆಗಾಗಲೇ ವಿದ್ವತ್ ಪ್ರಪಂಚದಲ್ಲಿ ವೆಂಕಟನಾಥರ ಹೆಸರು ಬಹಳ ಪ್ರಖ್ಯಾತಿ ಹೊಂದಿತ್ತು. ವ್ಯಾಕರಣ ಪಾಂಡಿತ್ಯ, ಮೀಮಾಂಸಾ ಪ್ರಭುತ್ವ, ನ್ಯಾಯ ನೈಪುಣ್ಯ, ವೇದ ವೈದುಷ್ಯಗಳಲ್ಲಿ ಅತ್ಯಂತ ಪ್ರಗಲ್ಭ ಜ್ಞಾನಿ ಎಂದು ವೆಂಕಟನಾಥರು ಜನರ ಬಾಯಲ್ಲಿ ವೆಂಕಟನಾಥಾಚಾರ್ಯರೆಂದು ಪ್ರಖ್ಯಾತರಾದರು. ಜೊತೆಗೇ ವಂಶದ ವಿಶಿಷ್ಟ ಕಲೆಯಾದ ವೀಣಾವಾದನದಲ್ಲಿ ಚತುರತೆ ಮತ್ತು ನಿಪುಣತೆ ಬೆರೆತ ವಿದ್ವಾಂಸರೆಂದೂ ಪ್ರಖ್ಯಾತಿ ಇತ್ತು. ಇಷ್ಟಲ್ಲದೆ, ಆಗಿನ ಅವರ ಸಂಗೀತಸಭೆಗಳಲ್ಲಿ ನೆರೆದು ಸೇರುತ್ತಿದ್ದ, ವೀಣಾವಾದನ ಕೇಳುತ್ತಿದ್ದ ಪಂಡಿತ, ವಿದ್ವಾಂಸ, ಜ್ಞಾನಿಗಳಲ್ಲದೆ ಜನಸಾಮಾನ್ಯರೆಲ್ಲರ ಅಭಿಪ್ರಾಯ ಒಂದೇ ಆಗಿತ್ತು; ಅದೆಂದರೆ ಅವರ ಕೈಬೆರಳುಗಳು ವೀಣೆಯ ಮೇಲೆ ಓಡಾಡಿ ಹೊಮ್ಮಿಸುತ್ತಿದ್ದ ನಾದದಲ್ಲಿ ಹೃದಯವನ್ನು ಅಪ್ಪಿ ದೈವದ ಬಳಿ ಸೆಳೆದೊಯ್ಯುವ ಭಕ್ತಿರಸದ ಮಾಧುರ್ಯ ಹೊರಹೊಮ್ಮುತ್ತದೆ ಎನ್ನುವುದು.
ಹೀಗೆ ಪ್ರಖ್ಯಾತರಾಗಿದ್ದ ವೆಂಕಟನಾಥಾಚಾರ್ಯರಲ್ಲಿ ಶಾಸ್ತ್ರಗಳನ್ನೂ ವೀಣಾವಾದನವನ್ನೂ ಕಲಿಯುವ ಆಕಾಂಕ್ಷೆಯಿಂದ ಅವರಲ್ಲಿಗೆ ಅನೇಕ ವಿದ್ಯಾರ್ಥಿಗಳು ಬಂದು ಸೇರಿದರು. ಸುತ್ತಮುತ್ತಲ ಗ್ರಾಮಗಳಿಂದಲೂ ಅನೇಕಾನೇಕ ವಿದ್ಯಾಕಾಂಕ್ಷಿಗಳು ಬಂದು ಇವರಲ್ಲಿ ನೆಲೆಯಾದರು. ಅಂದಿನ ಕಾಲದ ನಮ್ಮ ಭಾರತೀಯ ವಿದ್ಯಾಭ್ಯಾಸದ ಕ್ರಮವೇ ಹೀಗಿತ್ತು. ಹಣ ಕೊಟ್ಟು ವಿದ್ಯಾರ್ಜನೆ ಮಾಡುವ ಪದ್ಧತಿ ಅಂದು ಇರಲೇ ಇಲ್ಲ, ಅಂದಿನವರಿಗೆ ಅದು ಗೊತ್ತೂ ಇರಲಿಲ್ಲ. ವಿದ್ಯೆ ಹೇಳಿಕೊಡುವ ಗುರುಗಳ ಮನೆಯೇ ‘ಗುರುಪೀಠ’ ಎನ್ನಿಸಿಕೊಳ್ಳುತ್ತಿತ್ತು. ಅಲ್ಲಿಗೆ ಬಂದು ಸೇರಿಕೊಳ್ಳುವ ವಿದ್ಯಾರ್ಥಿಗಳಿಗೆ ಊಟ, ವಸತಿ ಎಲ್ಲವನ್ನೂ ಗುರುಗಳೇ ಕಲ್ಪಿಸಿಕೊಟ್ಟು ವಿದ್ಯೆ ಹೇಳಿಕೊಡಬೇಕಿತ್ತು. ಎಲ್ಲ ಖರ್ಚು ವೆಚ್ಚಗಳೂ ಗುರುವಿನದೇ! ಅಪರೂಪಕ್ಕೆ ವಿದ್ಯಾರ್ಥಿಗಳ ಮನೆಯಿಂದ ಅಷ್ಟಿಷ್ಟು ಕಾಳುಕಡ್ಡಿ, ಬೆಳೆದ ತರಕಾರಿ ಬಂದುಬಿದ್ದರೆ ಅದೇ ದೊಡ್ಡದು! ಗುರುವಾದವನು ತನಗಾಗಿ ಏನನ್ನೂ ಯಾರಿಂದಲೂ ಬಯಸದೆಯೇ ನಿವ್ರ್ಯಾಜ ಅಂತಃಕರಣದಿಂದ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಟ್ಟು ಅವರ ವ್ಯಕ್ತಿತ್ವವನ್ನೂ ರೂಪಿಸಬೇಕಿತ್ತು. ಇದು ಅಂದಿನ ಗುರುಕುಲ ಶಿಕ್ಷಣಪದ್ಧತಿ. (ಬ್ರಿಟಿಷರು ಬಂದ ಮೇಲೆಯೇ ನಮ್ಮ ಸನಾತನ ವಿದ್ಯಾಪದ್ಧತಿಗೆ ಧಕ್ಕೆಯಾಗಿ ಅನ್ಯರೀತಿಯ ನೂತನ ಶಿಕ್ಷಣಪದ್ಧತಿ ಪ್ರಾರಂಭವಾದದ್ದು) ವಿದ್ಯಾಭ್ಯಾಸ ಪೂರ್ತಿ ಮುಗಿಸಿ ತೆರಳುವಾಗಲಷ್ಟೆ ಕೈಲಾದ ಅಥವಾ ಗುರು ಬಯಸಿದ ‘ಗುರುದಕ್ಷಿಣೆ’ ನೀಡುವಂಥ ಕ್ರಮವು ಜಾರಿಯಲ್ಲಿತ್ತು.
ಈಗ ವೆಂಕಟನಾಥಾಚಾರ್ಯರಲ್ಲಿ ಬಹಳಷ್ಟು ವಿದ್ಯಾಕಾಂಕ್ಷಿಗಳು ಬಂದು ಸೇರಿಕೊಂಡಿದ್ದಾರೆ. ಅವರಿಗೆಲ್ಲ ಪಾಠ ಹೇಳುವುದಷ್ಟೇ ಅಲ್ಲ, ಅವರ ಊಟಕ್ಕಾಗಿ ಸರಸ್ವತಿ ದಿನದಿನವೂ ಸಾಕಷ್ಟು ದೊಡ್ಡ ಪ್ರಮಾಣದಲ್ಲೇ ಅಡುಗೆ ಮಾಡಬೇಕಾಗುತ್ತಿತ್ತು. ಆದರೆ ಇದಕ್ಕಾಗಿ ದಂಪತಿಗಳು ತುಸುವೂ ಬೇಸರಿಸಿದವರಲ್ಲ. ಗುರುವಿಗೂ ಗುರುಪತ್ನಿಯ ಕೆಲಸಗಳಲ್ಲೂ ವಿದ್ಯಾರ್ಥಿಗಳು ನೆರವಾಗುತ್ತಿದ್ದರು. ಶಿಷ್ಯರು ಗುರುಸೇವೆ ಮಾಡಿಯೇ ವಿದ್ಯೆ ಕಲಿಯಬೇಕೆನ್ನುವುದು ಅಂದಿನ ಕಾಲದ ಅಲಿಖಿತ ನಿಯಮವೇ ಆಗಿತ್ತು. ವಿದ್ಯಾರ್ಥಿಗಳನ್ನೆಲ್ಲ ತನ್ನ ಹೊಟ್ಟೆಯ ಮಕ್ಕಳೆಂದೇ ಭಾವಿಸಿ ಅವರನ್ನೆಲ್ಲ ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದಳು ಗುರುಪತ್ನಿ. ಶಾಂತಿ, ಪ್ರೀತಿ, ಸೌಮ್ಯತೆ ಅವಳ ಹುಟ್ಟುಗುಣವೇ ಆಗಿತ್ತು. ವೆಂಕಟನಾಥಾಚಾರ್ಯರಂತೂ ಪಾಠಕ್ರಮಗಳಲ್ಲಿ ಎಷ್ಟು ಶಿಸ್ತು ಇತ್ತೋ ಅಷ್ಟೇ ಹೃದಯವಂತಿಕೆಯೂ ಇತ್ತು ಎಂಬಂತಿದ್ದ ಗುರುವಾಗಿದ್ದರು. ಹೀಗೆ ಸಾಕಷ್ಟು ಕಾಲ ಗುರುಕುಲಪದ್ಧತಿಯ ಶಿಕ್ಷಣವನ್ನು ಮುಂದುವರಿಸಿಕೊಂಡು ಬಂದರು ದಂಪತಿಗಳು.
ಆದರೆ ಅದು ಬಹುಕಾಲ ಮುಂದುವರಿಯಲಿಲ್ಲ. ವೆಂಕಟನಾಥಾಚಾರ್ಯರನ್ನು ಲೋಕದ ಎಲ್ಲ ಮನುಕುಲದ ಗುರುವಾಗಿ ಮಾಡಬಯಸಿದ್ದ ವಿಧಿಯ ಹುನ್ನಾರ ಬೇರೆಯೇ ಇತ್ತು ಎಂಬಂತೆ ಈ ಗ್ರಾಮದಲ್ಲಿದ್ದ ಗುರುಪೀಠಕ್ಕೆ ತೊಂದರೆ ಬಂದೇ ಬಂದಿತು. ಕಾವೇರಿಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶದ ಗ್ರಾಮಗಳಲ್ಲಿ ಪ್ರಾಕೃತಿಕ ವಿಕೋಪ ಕಾಣಿಸಿಕೊಂಡಿತು. ಮಳೆ ಬೀಳದೆ ಬೆಳೆ ಬೆಳೆಯದೆ ಎಲ್ಲೆಲ್ಲೂ ಕ್ಷಾಮವೇ ಹರಡಿತು. ಇಡೀ ಪರಿಸರಕ್ಕೇ ದಾರಿದ್ರ್ಯ ಬಡಿಯಿತು. ಹೀಗಿರುವಾಗ ವೆಂಕಟನಾಥರ ಗುರುಕುಲಕ್ಕೂ ಇದರ ಘೋರವಾದ ಪರಿಣಾಮ ಉಂಟಾಯಿತು. ವೆಂಕಟನಾಥರಲ್ಲಿದ್ದ ದವಸ ಧಾನ್ಯಗಳೆಲ್ಲ ಮುಗಿಯಿತು. ಬಡತನವಿದ್ದರೂ ಇದ್ದುದನ್ನೇ ವಿದ್ಯಾರ್ಥಿಗಳೊಂದಿಗೆ ಹಂಚಿ ತಿನ್ನುತ್ತಿದ್ದ ದಂಪತಿಗಳು ಕಂಗಾಲಾದರು. ಈಗ ಹೇಗೆ ನಿರ್ವಹಣೆ ಮಾಡಿಯಾರು? ಕಡೆಗೆ ವಿದ್ಯಾರ್ಥಿಗಳೇ ಗುರುಗಳ ಮನೆಯ ತೊಂದರೆಗಳನ್ನು ಮನಗಂಡು ತಾವಿನ್ನು ಗುರುವಿಗೆ ಭಾರವಾಗಿರಲಾಗದು ಎಂದು ತಾವೇ ನಿಶ್ಚಯಿಸಿಕೊಂಡು ಒಬ್ಬೊಬ್ಬರಾಗಿ ಗುರುಕುಲ ಬಿಟ್ಟು ಹೊರಟರು. ಕಣ್ಣೀರಿಡುತ್ತ ಅವರೆಲ್ಲ ಗುರುವಿಗೆ ನಮಿಸಿ ಹೊರಡುತ್ತಿರಬೇಕಾದರೆ ಅಸಹಾಯರಾಗಿ ನೋಡುತ್ತ ಹೃದಯದಲ್ಲಿ ಆದ್ರ್ರತೆ ದ್ರವಿಸುತ್ತ ದಂಪತಿಗಳು ನಿಂತುಬಿಟ್ಟರು. ಅವರನ್ನೆಲ್ಲ ಉಳಿಸಿಕೊಂಡು ಆಹಾರ ನೀಡಿ ವಿದ್ಯಾದಾನ ಮಾಡುವ ಸೌಭಾಗ್ಯ ಇನ್ನು ತನಗಿಲ್ಲವೆಂದು ಹತಾಶೆಗಳಿಂದ ನೊಂದರು ವೆಂಕಟನಾಥರು.
ಈಗ ಮನೆಯಲ್ಲಿ ದಂಪತಿಗಳು ಹಾಗೂ ಮಗು ಲಕ್ಷ್ಮೀನಾರಾಯಣ ಮಾತ್ರ. ದಂಪತಿಗಳು ಎಷ್ಟೆಷ್ಟೋ ದಿನಗಳು ಉಪವಾಸಬೀಳಬೇಕಾಗಿ ಬಂದಿತು. ಇಷ್ಟಾದರೂ ಯಾರನ್ನೂ ಬೇಡಲು ಹೋಗದೆ ಸದಾ ಭಗವಚ್ಚಿಂತನೆಯಲ್ಲಿ ತೊಡಗಿಕೊಂಡರು. ಸರಸ್ವತಿ ಬಡತನದ ದುಃಖ ನುಂಗಿಕೊಂಡು ತಾವೂ ದೇವರನಾಮಗಳನ್ನು ಹೇಳಿಕೊಳ್ಳುತ್ತ, ಮಗುವಿನ ಆಟ ವಿನೋದಗಳನ್ನು ನೋಡುತ್ತ ಕಷ್ಟ ಪರಿಹರಿಸಲು ದೈವವನ್ನು ಬೇಡುತ್ತ ಇದ್ದುಬಿಟ್ಟರು.
ಹೀಗೆ ದಂಪತಿಗಳು ಬಡತನದ ಬವಣೆಯಲ್ಲಿ ನವೆಯುತ್ತಿದ್ದಾಗಲೇ ವೆಂಕಟನಾಥರ ಆ ಬಡತನದ ಮನೆಗೇ ಒಂದು ರಾತ್ರಿ ಕಳ್ಳರು ನುಗ್ಗಿ ಇದ್ದ ಒಂದೆರಡು ಹರಕುಮುರುಕು ಪಂಚೆ, ಮಡಿವಸ್ತ್ರ, ಒಡಕು ಮಡಕೆ ಕುಡಿಕೆಗಳನ್ನು ಕದ್ದು ಪರಾರಿಯಾದರು. ದಂಪತಿಗಳು ಬೆಳಗ್ಗೆ ಎದ್ದು ನೋಡಿದರೆ ಮನೆ ಖಾಲಿ ಖಾಲಿ! “ಏನೂ ಇಲ್ಲದ ಈ ಮನೆಗೆ ಕದಿಯಲು ಬಂದಿರಬೇಕಾದರೆ ಆ ಕಳ್ಳರ ಬಡತನದ ಪರಿಸ್ಥಿತಿ ಇನ್ನೆಷ್ಟು ಶೋಚನೀಯವಾಗಿರಬಹುದು?” ಎಂದು ವ್ಯಥೆ ಪಟ್ಟಿತು ವೆಂಕಟನಾಥರ ಕರುಣಾದ್ರ್ರ ಹೃದಯ.
ಇನ್ನು ಇಲ್ಲಿದ್ದು ಏನು ಮಾಡುವುದು, ಹೇಗೆ ಬದುಕುವುದು ಎಂದು ಚಿಂತಿಸುತ್ತಿರಬೇಕಾದರೆ ಅವರಿಗೆ ಕುಂಭಕೋಣದ ವಿದ್ಯಾಪೀಠದ ಅಧಿಪತಿಗಳಾಗಿದ್ದ ಶ್ರೀ ಸುಧೀಂದ್ರತೀರ್ಥರ ನೆನಪಾಯಿತು. ಅಂತರ್ವಾಣಿಯೊಂದು ಗುರುಗಳಲ್ಲಿಗೆ ಹೋಗಿ ಶರಣಾಗುವುದೇ ಸೂಕ್ತವೆಂದು ಅಂತರಂಗದಲ್ಲೇ ಮೊರೆಯಿತು! ದೇವರೇ ತೋರಿಸಿದ ದಾರಿ ಇರಬಹುದೆಂದು ಭಾವಿಸಿ, ನಂಬಿ, ವೆಂಕಟನಾಥಾಚಾರ್ಯರು ಪತ್ನಿ ಮತ್ತು ಮಗುವಿನೊಂದಿಗೆ ಕಾವೇರಿಪಟ್ಟಣವನ್ನು ಬಿಟ್ಟು ಹೊರಟರು. “ಆಗುವುದೆಲ್ಲಾ ಒಳ್ಳೆಯದಕ್ಕೆ”, “ಕಷ್ಟ ಬರುವುದು ಮುಂದಿನ ಔನ್ನತ್ಯಕ್ಕೆ” ಎಂಬ ಮಾತುಗಳು ಸತ್ಯವಿರಬಹುದೇನೊ! ಮುಂದೆ ರಾಘವೇಂದ್ರಸ್ವಾಮಿಗಳಾಗಿ ರೂಪಗೊಳ್ಳಬೇಕಿದ್ದು ಅದಕ್ಕಾಗಿ ಅವರನ್ನು ಸುಧೀಂದ್ರತೀರ್ಥರಲ್ಲಿಗೆ ಒಯ್ಯುವ ಹುನ್ನಾರವನ್ನು ನಡೆಸಬೇಕೆಂದೇ ಮಳೆಬೆಳೆಗಳಿಲ್ಲದ ಕ್ಷಾಮಡಾಮರಗಳ ಮುನ್ನುಡಿಯನ್ನು ಬರೆಯಿತೇನೋ ವಿಧಿ! ಅಂತೂ ಚೋಳಮಂಡಲದ ವಿದ್ಯಾನಗರವೆಂದು ಪ್ರಸಿದ್ಧಿಹೊಂದಿದ್ದ ಕಾವೇರಿ ತೀರದಲ್ಲಿದ್ದ ಕುಂಭಕೋಣಕ್ಕೆ ಪತ್ನೀ ಪುತ್ರ ಸಹಿತರಾಗಿ ವೆಂಕಟನಾಥಾಚಾರ್ಯರು ಹೊರಟರು.
ರಾಘವೇಂದ್ರಸ್ವಾಮಿಗಳನ್ನಾಗಿ ವೆಂಕಟನಾಥರನ್ನು ರೂಪಗೊಳಿಸಿದ ಯತಿಗಳು ಶ್ರೀ ಸುಧೀಂದ್ರತೀರ್ಥರು. ರಾಘವೇಂದ್ರಸ್ವಾಮಿಗಳಂಥ ಯುಗಪುರುಷರಿಗೇ ಗುರುವಾದವರಿವರು, ರಾಘವೇಂದ್ರ ಗುರುಸಾರ್ವಭೌಮರಿಗೇ ಗುರುಗಳಿವರು ಎಂದ ಮೇಲೆ ಇವರು ಎಂಥ ಮಹಿಮಾಮಯ ಪುಣ್ಯವಿಶೇಷ ವ್ಯಕ್ತಿತ್ವದವರಾಗಿದ್ದಿರಬೇಕು! ಕ್ರಿ.ಶ. 1561ರಲ್ಲಿ ಜನಿಸಿದ ಇವರ ಬಾಲ್ಯನಾಮ ನಾರಾಯಣ ಎಂಬುದಾಗಿ. ವ್ಯಾಸತೀರ್ಥರ ಯತಿಶಿಷ್ಯರಾದ ವಿಜಯೀಂದ್ರತೀರ್ಥರಲ್ಲಿ ಅಧ್ಯಯನ ಮಾಡಿದವರು. ‘ಷಡ್ದರ್ಶನಾಚಾರ್ಯ’ ಎಂಬ ಪ್ರಶಸ್ತಿಗೆ ಭಾಜನರಾದವರು. ಸುಧೀಂದ್ರತೀರ್ಥರು ಅನೇಕ ರಾಜಮಹಾರಾಜರುಗಳಿಂದ ಸನ್ಮಾನಿತರಾದ ಯತಿಗಳು. ಗ್ವಾಲಿಯರ್ ಮಹಾರಾಜರಿಂದ ‘ದಿಗ್ವಿಜಯ ಸಿಂಹಾಸನಾಧೀಶ್ವರ’ ಎಂಬ ಬಿರುದನ್ನಲ್ಲದೆ ಸುವರ್ಣಪೀಠ, ಶ್ವೇತಚ್ಛತ್ರಗಳನ್ನು ಪಡೆದ ಮಹಾಗೌರವಾನ್ವಿತರು ಕೂಡ. ಬಿಜಾಪುರದ ಸುಲ್ತಾನ ಆದಿಲ್ಷಹಾ ಇವರಿಗೆ ‘ಜಗದ್ಗುರು’ ಎಂಬ ಪ್ರಶಸ್ತಿ ನೀಡಿ ‘ಆನೆ ಹೊಸೂರು’ ಎಂಬ ಗ್ರಾಮವನ್ನೇ ಬಳುವಳಿಯಾಗಿ ಅರ್ಪಿಸಿ ತನ್ನ ರಾಜ್ಯದ ದುರ್ಭಿಕ್ಷ ಪರಿಹಾರ ಮಾಡಿದ್ದಕ್ಕೆ ಕೃತಜ್ಞತೆಯನ್ನು ಸಮರ್ಪಿಸಿದ್ದಾನೆ. ಕರ್ನಾಟಕದ ದೊರೆ ಇಮ್ಮಡಿ ರಂಗರಾಜ ಮಹಾಪ್ರಭುಗಳು ಹಂಪೆಯ ಪಂಪಾವಿರೂಪಾಕ್ಷನ ದಿವ್ಯಸನ್ನಿಧಿಯಲ್ಲಿ 1576ರ ಜನವರಿ 28ರಂದು (ಯುವ ಸಂವತ್ಸರ, ಮಾಘ ಕೃಷ್ಣ ತ್ರಯೋದಶಿ ಸ್ಥಿರವಾರದಂದು) ಪಂಚಗ್ರಾಮಗಳನ್ನು (ಬಚ್ಚನಹಾಡು, ಖ್ಯಾಡ, ಯಡವಾಡ, ಚಂಚಿಲ, ಅರಳೀಹಳ್ಳಿ) ಉಂಬಳಿಯಾಗಿ ನೀಡಿ ಗೌರವಿಸಿದ್ದಾನೆಂದು ಶಾಸನವೊಂದು ತಿಳಿಸುತ್ತದೆ. ಕರ್ನಾಟಕದ ವೀರ ವೆಂಕಟಪತಿರಾಯರು ಸುಧೀಂದ್ರತೀರ್ಥರಿಗೆ ವಿಜಯಶಂಖ, ಶ್ವೇತಚ್ಛತ್ರ, ಚಾಮರ-ಪಲ್ಲಕ್ಕಿಗಳನ್ನು ನೀಡಿ ರಾಜಮರ್ಯಾದೆಯನ್ನು ಮಾಡಿ ಗೌರವಿಸಿರುವುದರ ಬಗ್ಗೆಯೂ ಶಾಸನವಿದೆ.
ಸುಧೀಂದ್ರತೀರ್ಥರು ಅತ್ಯಂತ ವಿಲಕ್ಷಣ ವ್ಯಕ್ತಿತ್ವದವರೆಂದೂ ಹೆಸರಾಗಿದ್ದರು. ಇದಕ್ಕೆ ಕಾರಣವಿಷ್ಟೆ: ಸಾಮಾನ್ಯವಾಗಿ ಮಧ್ವಮತಾನುಯಾಯಿ ಪಂಡಿತರುಗಳಿಗೆ ತತ್ತ್ವಶಾಸ್ತ್ರ ಹಾಗೂ ದರ್ಶನಶಾಸ್ತ್ರಗಳ ಮನನ, ಪಠಣ ಬಿಟ್ಟು ಗಮನವು ಬೇರೆ ಯಾವುದರತ್ತಲೂ ಸರಿಯುವುದಿಲ್ಲ ಎಂಬಂತಿದ್ದ ಆ ಕಾಲದಲ್ಲಿ ಸುಧೀಂದ್ರತೀರ್ಥರು ಮಠಾಧಿಪತಿಯಾಗಿದ್ದೂ ಕಾವ್ಯಾಲಂಕಾರ, ನಾಟಕ ಕ್ಷೇತ್ರಗಳತ್ತಲೂ ತಮ್ಮ ಗಮನಹರಿಸಿ ಸಾಧನೆ ಮಾಡಿದ್ದಲ್ಲದೆ ಧರ್ಮದರ್ಶನಗಳಲ್ಲಿಯೂ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಸಾಮಾನ್ಯವಾಗಿ ದ್ವೈತ ದಿಗ್ದಂತಿ ಪಂಡಿತರುಗಳಿಗೆ ಅರಸಿಕರು (ಗೊಡ್ಡುಗಳು ವೇದಾಂತ ಬಿಟ್ಟರೆ ಬೇರೇನೂ ಗೊತ್ತಿಲ್ಲದ ಶುಷ್ಕರು) ಎಂಬ ಕಲಂಕವಿದ್ದ ಆ ಕಾಲದಲ್ಲಿ ಸುಧೀಂದ್ರತೀರ್ಥರು ಈ ಮಾತಿಗೆ ಅಪವಾದವಾಗಿದ್ದವರೆನ್ನಲಾಗಿದೆ. ಸಾಹಿತ್ಯ ಕ್ಷೇತ್ರದಲ್ಲಿ ಮೌಲ್ಯಾತ್ಮಕ ಗ್ರಂಥಗಳನ್ನು ರಚಿಸಿದವರು, ಒಣವೇದಾಂತದ ಮರುಭೂಮಿ ಎಂದು ಕೆಲವೊಮ್ಮೆ ಅನ್ನಿಸಬಹುದಾದ ಧರ್ಮದರ್ಶನಗಳಲ್ಲಿ ಹಸಿರು ಕಾಣಿಸಿಕೊಟ್ಟವರು ಎಂದು ಸುಧೀಂದ್ರತೀರ್ಥರನ್ನು ಕುರಿತಾಗಿ ಅಭಿಪ್ರಾಯಗಳು ನೆಲೆಯಾಗಿವೆ.
ನಾರಾಯಣಾಚಾರ್ಯ ಎನ್ನುವ ಪಂಡಿತರು ಬರೆದಿರುವ ‘ರಾಘವೇಂದ್ರವಿಜಯ’ ಕೃತಿಯಲ್ಲಿ ಸುಧೀಂದ್ರತೀರ್ಥರನ್ನು ಕುರಿತಾದ ಅನೇಕ ವಿಷಯಗಳು ದಾಖಲಾಗಿವೆ. ವಿಜಯನಗರದ ಅರಸನಾದ ವೆಂಕಟಪತಿರಾಯನು ಸುಧೀಂದ್ರತೀರ್ಥರಿಗೆ ರತ್ನಾಭಿಷೇಕ ಮಾಡಿರುವುದರ ವರ್ಣನೆ ಈ ಕೃತಿಯಲ್ಲಿದೆ. ತಂಜಾವೂರಿನ ರಘುನಾಥ ನಾಯಕನ ಗೌರವಾದರಗಳಿಗೂ ಸುಧೀಂದ್ರತೀರ್ಥರು ಪಾತ್ರರಾಗಿದ್ದರೆಂದೂ ಈ ಕೃತಿಯಲ್ಲಿ ವಿವರಪೂರ್ವಕ ದಾಖಲೆ ಸಿಗುತ್ತದೆ.
ಜ್ಞಾನಿ ಹಾಗೂ ಕವಿಯಾಗಿ ಮಠಾಧಿಪತ್ಯದಲ್ಲಿದ್ದ ಪ್ರತಿಭಾವಂತ ಯತಿಗಳಿವರು. ಅಲಂಕಾರಶಾಸ್ತ್ರ, ನಾಟಕಗಳನ್ನು ಬರೆದುದಲ್ಲದೆ ತರ್ಕತಾಂಡವದ ಮೇಲೆ ‘ಸದ್ಯುಕ್ತಿರತ್ನಾಕರ’ ಎಂಬ ಹೆಸರಿನ ವ್ಯಾಖ್ಯಾನಕೃತಿ ರಚಿಸಿದ್ದಾರೆ. ಇವಲ್ಲದೆ ಭಾಗವತದ ಎರಡನೇ ಮತ್ತು ಹನ್ನೊಂದನೇ ಸ್ಕಂಧಗಳನ್ನು ಕುರಿತ ವ್ಯಾಖ್ಯಾನ, ‘ಸುಭದ್ರಾ ಧನಂಜಯ’ವೆಂಬ ನಾಟಕವನ್ನೂ ರಚಿಸಿದ್ದಾರೆ. ಅಲ್ಲದೆ ‘ಸಾಹಿತ್ಯಸಾಮ್ರಾಜ್ಯ’ವೆಂಬ ಅಪೂರ್ವ ಗ್ರಂಥ ರಚಿಸಿ, ಅದರಲ್ಲಿ ಸಾಹಿತ್ಯಮೀಮಾಂಸೆಯ ಮುಖ್ಯ ವಿಷಯಗಳನ್ನೆಲ್ಲ ಕೂಲಂಕಷವಾಗಿ ವಿಮರ್ಶಿಸಿದ್ದಾರೆ. ಸಾಹಿತ್ಯಶಾಸ್ತ್ರ ಮೀಮಾಂಸೆಗೆ ಇದೊಂದು ಅಮೂಲ್ಯ ಕೊಡುಗೆ ಎಂದು ವಿಮರ್ಶಕರ ಅಭಿಪ್ರಾಯವಿದೆÀ. ಸರಳವಾದ ಗಂಭೀರವಾದ ಶೈಲಿಯಲ್ಲಿ ಕಾವ್ಯದ ಲಕ್ಷಣಾದಿಗಳನ್ನು ಕುರಿತು ಸಮಗ್ರ ಪರಿಶೀಲನೆಯನ್ನು ಇದರಲ್ಲಿ ಸುಧೀಂದ್ರತೀರ್ಥರು ಮಾಡಿದ್ದಾರೆ. ಜ್ಞಾನ ಮತ್ತು ಕಾವ್ಯಕೌಶಲ ಎರಡೂ ಪ್ರತಿಭೆ ಹೊಂದಿದ ಅಪರೂಪದ ಯತಿವರ್ಯರಿವರು.
ಹೌದು, ವೆಂಕಟನಾಥಾಚಾರ್ಯರೂ ಕವಿಯ ಮೃದು ಹೃದಯದವರು; ಅಪಾರ ಪಾಂಡಿತ್ಯ, ಜ್ಞಾನವಿದ್ದ ವಿದ್ವಾಂಸರು ಕೂಡ. ಹೀಗಿರುವಾಗ ಸುಧೀಂದ್ರತೀರ್ಥರಂಥ ಜ್ಞಾನ, ಕವಿತ್ವ, ವಿಮರ್ಶಾ ಪ್ರಜ್ಞೆಗಳನ್ನೊಳಗೊಂಡಿದ್ದ ಯತಿಗಳ ಉತ್ತರಾಧಿಕಾರಿಯಾಗಿ ವೆಂಕಟನಾಥಾಚಾರ್ಯರೇ ಬರಬೇಕಷ್ಟೆ! ಗುರುವಿನ ಪರಂಪರೆ ಉಳಿಸಲು ಸೂಕ್ತ ವ್ಯಕ್ತಿಯೇ ಶಿಷ್ಯನಾಗಬೇಕಷ್ಟೆ? ಹೀಗಾಗಿಯೇ ವಿಧಿ ವೆಂಕಟನಾಥಾಚಾರ್ಯರನ್ನು ಸುಧೀಂದ್ರತೀರ್ಥರಲ್ಲಿಗೆ ಕರೆತಂದಿತೇನೋ! ಸುಧೀಂದ್ರತೀರ್ಥರ ಜ್ಞಾನ, ಕವಿತ್ವ ಅಪಾತ್ರದಾನವಾಗಬಾರದಲ್ಲ! ಹೀಗಾಗಿ ಅವರ ಕೈಕೆಳಗೆ ರಾಘವೇಂದ್ರಸ್ವಾಮಿಗಳಾಗಿ ರೂಪಗೊಳ್ಳಲಿರುವ ವೆಂಕಟನಾಥಾಚಾರ್ಯರನ್ನು ಕರೆತಂದಿತು. ಸುಧೀಂದ್ರತೀರ್ಥರು ತಮ್ಮ ಶಿಷ್ಯನನ್ನಾಗಿ ವೆಂಕಟನಾಥಾಚಾರ್ಯರನ್ನು ಸ್ವೀಕರಿಸಿ ಅಪಾರ ಜ್ಞಾನನಿಧಿಯನ್ನಾಗಿ, ಭಾವುಕ ಭಕ್ತ ಕವಿಯಾಗಿ ಕಡೆದುದರಲ್ಲಿ ಅಚ್ಚರಿಯೇನಿಲ್ಲ.
ಕ್ರಿ.ಶ. 1623ರಲ್ಲಿ ಸುಧೀಂದ್ರತೀರ್ಥರು ಇಹಲೋಕದ ಬದುಕಿಗೆ ವಿದಾಯ ಹೇಳಿದರು. ಹಂಪೆಯ ನಡುಗಡ್ಡೆಯ ನವವೃಂದಾವನಗಳಲ್ಲಿ ಒಂದಾಗಿ, ವ್ಯಾಸತೀರ್ಥರ ವೃಂದಾವನದ ಸಮೀಪವೇ ಸುಧೀಂದ್ರತೀರ್ಥರ ವೃಂದಾವನವೂ ಇದೆ.
ಬದುಕಿಗೊಂದು ಆಸರೆ ಬೇಡಿ ತನ್ನಲ್ಲಿಗೆ ಪಯಣಿಸಿ ಆಗಮಿಸಿದ ವೆಂಕಟನಾಥರನ್ನು ಸುಧೀಂದ್ರತೀರ್ಥರು ಆದರದಿಂದಲೇ ಬರಮಾಡಿಕೊಂಡರು. ಅವರ ಗ್ರಾಮಕ್ಕೊದಗಿದ ಕ್ಷಾಮ ವಿಚಾರಗಳನ್ನೆಲ್ಲ ತಿಳಿದು ಪರಿಹಾರರೂಪವಾಗಿ ಕಾಳುಕಡ್ಡಿ ದವಸಧಾನ್ಯಗಳನ್ನು ಆ ಗ್ರಾಮಕ್ಕೆ ಕಳುಹಿಸಿಕೊಡುವುದಾಗಿ ತಿಳಿಸಿದರು. ಅದರಂತೆಯೇ ಏರ್ಪಾಡೂ ಮಾಡಿದರು. ತಮ್ಮ ಮಠದಲ್ಲಿಯೇ ವಾಸವಾಗಿದ್ದುಕೊಂಡು ಪಾಠಪ್ರವಚನಗಳನ್ನು ಮಾಡಿಕೊಂಡಿರಿ ಎಂದು ವೆಂಕಟನಾಥಾಚಾರ್ಯರಿಗೆ ವ್ಯವಸ್ಥೆ ಮಾಡಿಕೊಟ್ಟರು. ಹೆಂಡತಿ, ಮಗನೊಂದಿಗೆ ವಾಸವಾಗಿರಲು ಮಠಕ್ಕೆ ಸೇರಿದ್ದ ಪುಟ್ಟ ಮನೆಯೊಂದನ್ನು ಸಿದ್ಧಮಾಡಿಸಿಕೊಟ್ಟರು.
ವೆಂಕಟನಾಥರಿಗೆ ಸಂತೋಷವಾಗುವಂಥ ಉದ್ಯೋಗವೇ ಸಿಕ್ಕಿದ್ದರಿಂದ ಅವರೂ ತೃಪ್ತರಾಗಿ ಮಠದಲ್ಲಿ ವಾಸವಿದ್ದ ಪ್ರಾರಂಭಿಕ ಶಿಷ್ಯರಿಗೆ ಪಾಠ ಪ್ರವಚನ ಮಾಡತೊಡಗಿದರು. ಪ್ರತಿನಿತ್ಯವೂ ಪ್ರಾತಃಕಾಲದಲ್ಲಿ ಕಾವೇರಿ ನದಿಯಲ್ಲಿ ಮಿಂದು ಅಘ್ರ್ಯ ಪೂಜಾದಿಗಳನ್ನು ಮಾಡಿ ಮಠಕ್ಕೆ ಹೋಗಿ ಗುರುಗಳಾದ ಸುಧೀಂದ್ರತೀರ್ಥ ಶ್ರೀಪಾದಂಗಳವರ ದರ್ಶನಕ್ಕೆ ಬಂದು ನಮಿಸಿ ಕೆಲಕಾಲ ಅವರ ಸನ್ನಿಧಿಯಲ್ಲಿ ಕೂರುವುದು, ಕುಶಲವಾರ್ತೆಗಳನ್ನಾಡುವುದು; ತದನಂತರ ಗುರುವಿನ ಅಪ್ಪಣೆ ಪಡೆದು ವೇದಾಧ್ಯಯನದ ಪಾಠಶಾಲೆಗೆ ತೆರಳುತ್ತಿದ್ದರು. ಅಲ್ಲಿ ತಮಗಾಗಿ ಕಾದಿರುತ್ತಿದ್ದ ಮಠದ ಶಿಷ್ಯರಿಗೂ, ವಟುಗಳಿಗೂ, ಹೊರಗಿನಿಂದ ವೇದಾಧ್ಯಯನ ಮಾಡಲು ಅಲ್ಲಿಗೆ ಬರುತ್ತಿದ್ದ ಬಾಲಕರಿಗೂ ಅವರವರ ಕಲಿಕೆಯ ಹಂತಕ್ಕನುಗುಣವಾಗಿ ಅಮರಕೋಶ, ವ್ಯಾಕರಣ, ಛಂದಸ್ಸು, ಅಲಂಕಾರಶಾಸ್ತ್ರ, ಪುರಾಣ, ಶ್ರುತಿ, ಸ್ಮೃತಿ, ವೇದಾಗಮಗಳು ಈ ಎಲ್ಲವನ್ನೂ ಕುರಿತು ಪಾಠಮಾಡಲು ತೊಡಗುತ್ತಿದ್ದರು. ಇವಲ್ಲದೆ ಶ್ರೀ ಮಧ್ವಾಚಾರ್ಯರ, ಶ್ರೀ ಜಯತೀರ್ಥರ, ಶ್ರೀ ವ್ಯಾಸರಾಯರ ಗ್ರಂಥಗಳನ್ನು ಕುರಿತು ಕೂಡಾ ಪಾಠ ಪ್ರವಚನ ನಡೆಸುತ್ತಿದ್ದರು.
ಈ ತರಗತಿಗಳೆಲ್ಲ ಮುಗಿಯುವ ಹೊತ್ತಿಗೆ ಮಠದಲ್ಲಿ ಗುರುಗಳಿಂದ ಮೂಲರಾಮನ ಪೂಜೆಗೆ ತೊಡಗುವ ಸಮಯವಾಗುತ್ತಿತ್ತು. ವೆಂಕಟನಾಥಾಚಾರ್ಯರು ಸಹಾಯಕನಾಗಿ ತಾನೂ ಪೂಜೆ, ಮಹಾಮಂಗಳಾರತಿಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆನಂತರ ‘ಸಂಗೀತ ಸೇವಾಮವಧಾರಯ’ ಎಂಬ ಘೋಷಣೆ ಕೇಳಿದೊಡನೆ ವೀಣೆ ನುಡಿಸಲು ತೊಡಗುತ್ತಿದ್ದರು. ಇದು ಸುಧೀಂದ್ರತೀರ್ಥರ ಆದೇಶವಾಗಿತ್ತು. ಪ್ರತಿನಿತ್ಯವೂ ವೆಂಕಟನಾಥರ ಸಂಗೀತ ಕೇಳಲು ರಾಮದೇವರು ಅಪೇಕ್ಷಿಸುತ್ತಾನೆ ಎಂದವರು ಹೇಳಿಬಿಟ್ಟಿದ್ದರು. ಸಂಜೆಯ ಹೊತ್ತು ಗುರುಗಳೇ ‘ಶ್ರೀಮನ್ನ್ಯಾಯಸುಧಾ’ ಮುಂತಾದ ಮೇರುಗ್ರಂಥಗಳ ಜ್ಞಾನವನ್ನು ಕೆಲವರು ಹಿರಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರು. ಗುರುಗಳ ಆದೇಶದ ಮೇರೆಗೆ ವೆಂಕಟನಾಥರೂ ಈ ತರಗತಿಗಳಿಗೆ ಸೇರಿಕೊಂಡರು. ತಪ್ಪದೆ ಬಂದು ಪಾಠ ಕೇಳುತ್ತಿದ್ದರು. ವೆಂಕಟನಾಥಾಚಾರ್ಯರಲ್ಲಿ ಹುದುಗಿದ್ದ ಅಪಾರ ಪ್ರತಿಭೆ, ಪರಿಶ್ರಮದಿಂದ ಅಧ್ಯಯನ ನಡೆಸಿ ಜ್ಞಾನ ಸಂಪಾದಿಸುವ ಪರಿ ಈ ಎಲ್ಲವನ್ನೂ ಸುಧೀಂದ್ರತೀರ್ಥರು ಗಮನಿಸುತ್ತಲೇ ಇದ್ದರು. ದಿನೇ ದಿನೇ ಈ ಶಿಷ್ಯನ ವಿನಯಭರಿತವಾದ, ಶಿಸ್ತುಬದ್ಧವಾದ ನಡವಳಿಕೆ ಅವರಿಗೆ ಇಷ್ಟವಾಗುತ್ತ ಬಂದರೂ ಅದನ್ನು ತೋರ್ಪಡಿಸಿಕೊಳ್ಳದೆ ಪಾಠ ಹೇಳುತ್ತಿದ್ದರು.
ಒಮ್ಮೆ ಸುಧೀಂದ್ರತೀರ್ಥರು ಶ್ರೀಮನ್ನ್ಯಾಯಸುಧಾ ಗ್ರಂಥದ ಎರಡನೆಯ ಅಧ್ಯಾಯದ ಎರಡನೆಯ ಪಾದದಲ್ಲಿ ಒಂದು ವಾಕ್ಯವನ್ನು ವಿವರಿಸುತ್ತಿದ್ದರು. ಈ ವಾಕ್ಯದ ಪಾದಕ್ಕೆ ‘ಸಮಯಪಾದ’ವೆಂದೂ ಹೆಸರಿತ್ತು. ಆ ವಾಕ್ಯವನ್ನು ಸಮನ್ವಯಿಸಿ ವಿವರಿಸುವಾಗ ಅವರಿಗೇ ಏನೋ ಸಂಶಯ ಕಾಡಿತು. ಮರುದಿನ ವಿವರಿಸುತ್ತೇನೆಂದು ವಿದ್ಯಾರ್ಥಿಗಳಿಗೆ ತಿಳಿಸಿ ಪಾಠ ಅಲ್ಲಿಗೇ ನಿಲ್ಲಿಸಿದರು.
ವೆಂಕಟನಾಥರಿಗೆ ಒಂದು ಅಭ್ಯಾಸವಿತ್ತು. ಪ್ರತಿನಿತ್ಯವೂ ಗುರುಗಳಿಂದ ಪಾಠ ಕೇಳಿದ ಮೇಲೆ ರಾತ್ರಿಯ ಹೊತ್ತಿನಲ್ಲಿ ಅದನ್ನೇ ಮತ್ತೆ ಮತ್ತೆ ಮನನ, ಅಧ್ಯಯನ ಮಾಡುತ್ತ ಜೊತೆಗೇ ಆಯಾ ದಿನದ ಪಾಠದ ಟಿಪ್ಪಣಿಯನ್ನು ಬರೆದಿಡುವುದಲ್ಲದೆ, ಶ್ರೀಮನ್ಯಾಯಸುಧಾ ಗ್ರಂಥದ ಆಯಾ ಪಾಠಭಾಗಕ್ಕೆ ತನ್ನದೇ ಆದ ಸರಳವಾದ ಶೈಲಿಯೊಂದರಲ್ಲಿ ಸಾಮಾನ್ಯ ಜನರಿಗೂ ತಿಳಿಯುವಂಥ ರೀತಿಯ ಸಾರಾಂಶ, ಅರ್ಥಗಳ ಬಗೆಗಿನ ಟಿಪ್ಪಣಿ ಎಲ್ಲವನ್ನೂ ಬರೆದಿಡುತ್ತ ಬಂದಿದ್ದರು. ತಾನೇ ಬರೆದ ಈ ಟಿಪ್ಪಣಿಗೆ ‘ಶ್ರೀಮನ್ನ್ಯಾಯಸುಧಾ ಪರಿಮಳ’ವೆಂಬ ಅನ್ವರ್ಥವಾದ ಹೆಸರನ್ನೂ ಇರಿಸಿದ್ದರು. ಈ ರೀತಿಯ ಕಲಿಕೆಗೆ ಪ್ರಖರವಾದ ಬೆಳಕಾದರೂ ಇದ್ದಿತ್ತೆ? ಅಲ್ಲಲ್ಲಿ ಬಿದ್ದಿರುತ್ತಿದ್ದ ತರಗೆಲೆಗಳು, ಪುರಲೆಕಡ್ಡಿಗಳನ್ನು ಒಟ್ಟು ಮಾಡಿ ಬೆಂಕಿ ಹೊತ್ತಿಸಿ ಅದರ ಬೆಳಕಿನಲ್ಲಿ ಮಧ್ಯರಾತ್ರಿ ಕಳೆಯುವವರೆಗೂ ಹೀಗೇ ಅವರ ಓದು, ಬರಹ ಸಾಗಿರುತ್ತಿತ್ತು.
ಪ್ರತಿನಿತ್ಯದಂತೆ ಇಂದು ರಾತ್ರಿಯೂ ವೆಂಕಟನಾಥರು ಗುರುಗಳು ಹೇಳಿದ್ದ ಸಂಶಯದ ವಾಕ್ಯಪಾದವನ್ನು ತನಗೆ ತಿಳಿದಂತೆ ವಿಮರ್ಶಿಸಿ, ಅದಕ್ಕೆ ಸಮಂಜಸವಾದ ಟಿಪ್ಪಣಿಯನ್ನೂ ಬರೆದಿಟ್ಟರು. ಕಣ್ಣು ಬಾಡಿದ್ದರಿಂದ ತಾವು ಬರೆದ ಗ್ರಂಥದ ಹಾಳೆಗಳನ್ನೆಲ್ಲ ಅಲ್ಲಿಯೇ ಪಕ್ಕದಲ್ಲಿರಿಸಿ ಸಮೀಪದಲ್ಲೇ ತೋಳನ್ನು ತಲೆದಿಂಬಾಗಿರಿಸಿಕೊಂಡು ಮಲಗಿಬಿಟ್ಟರು. ಗಾಢನಿದ್ರೆ ಹತ್ತಿತು. ತರಗೆಲೆಗಳಿಂದ ಹೊತ್ತಿಸಿದ್ದ ಬೆಂಕಿ ಮಾತ್ರ ಇನ್ನೂ ಸಣ್ಣಗೆ ಉರಿಯುತ್ತ ತುಸು ಬೆಳಕು ಬೀರುತ್ತಿತ್ತು.
ಅಷ್ಟು ಹೊತ್ತೂ ಮಠದ ತಮ್ಮ ಕೊಠಡಿಯಲ್ಲಿ ಗ್ರಂಥಾಧ್ಯಯನ ಮಾಡುತ್ತಿದ್ದ ಸುಧೀಂದ್ರತೀರ್ಥರು ಅಧ್ಯಯನ ಸಾಕೆನಿಸಿ, ಮಲಗುವ ಮುನ್ನ ಬೆಳದಿಂಗಳ ಆ ರಾತ್ರಿಯಲ್ಲಿ ತುಸುಹೊತ್ತು ಕಾಲಾಡಿಸಿ ಬರೋಣವೆಂದು ಮಠದಿಂದ ಹೊರಗೆ ಸುತ್ತಾಡಲು ಬಂದರು. ದೂರದಲ್ಲೆಲ್ಲೋ ಸಣ್ಣ ಬೆಂಕಿ ಉರಿಯುತ್ತಿರುವುದು ಅವರ ಗಮನಕ್ಕೆ ಬಂದಿತು. ನೋಡಿ ಬರೋಣವೆಂದು ಅಲ್ಲಿಗೇ ನಡೆಯುತ್ತ ಬಂದರು. ನೋಡುವುದೇನು? ವೆಂಕಟನಾಥರು ಅಲ್ಲಿಯೇ ಮಲಗಿ ಗಾಢನಿದ್ರೆಯಲ್ಲಿದ್ದಾರೆ! ಬಳಿಯಲ್ಲೇ ಇರಿಸಿಕೊಂಡಿದ್ದ ಗ್ರಂಥದ ಹಾಳೆಗಳು ಗಾಳಿಗೆ ತುಸುವೇ ಪಟಪಟನೆ ಬಡಿಯುತ್ತಿವೆ! ವೆಂಕಟನಾಥರನ್ನೇ ನೋಡಿದರು ಗುರುಗಳು; ಹಾಸಲೂ ಇಲ್ಲ, ಹೊದೆಯಲೂ ಇಲ್ಲದೆ ಮಲಗಿದ್ದಾನೆ ಅವರ ಪ್ರಿಯ ಶಿಷ್ಯ! ಕರುಣೆಯುಕ್ಕಿತು ಗುರುಗಳ ಆ ಮಾತೃಹೃದಯದಲ್ಲಿ. ಹಿಂದುಮುಂದು ಏನೂ ಯೋಚಿಸದೆ ತಾವು ಹೊದ್ದಿದ್ದ ಬೆಲೆಬಾಳುವ ಉತ್ತರೀಯವನ್ನೇ ತೆಗೆದು ಶಿಷ್ಯನ ಮೈಮೇಲೆ ಬೆಚ್ಚಗಾಗುವಂತೆ ಹೊದೆಸಿಬಿಟ್ಟರು. ವೆಂಕಟನಾಥರಿಗೆ ಎಚ್ಚರವೇ ಇಲ್ಲ.
ಅಲ್ಲೇ ಕುಳಿತು ಸುಧೀಂದ್ರತೀರ್ಥರು ಶಿಷ್ಯ ಬರೆದಿಟ್ಟಿದ್ದ ಗ್ರಂಥಭಾಗಗಳ ಟಿಪ್ಪಣಿಗಳನ್ನೆಲ್ಲ ಸದ್ದಿಲ್ಲದೆ ಓದಿದರು. ಪುನಃ ಎಲ್ಲ ಹಾಳೆಗಳನ್ನೂ ಹಾಗೆಯೇ ಓರಣವಾಗಿರಿಸಿ ಮಠಕ್ಕೆ ಹಿಂದಿರುಗಿದರು.
ಮರುದಿನ ಎಚ್ಚರಾದ ವೆಂಕಟನಾಥರಿಗೆ ತಮ್ಮ ಮೈಮೇಲಿದ್ದ ಶಾಲನ್ನು ಕಂಡು ಅಚ್ಚರಿಯೂ, ಭಯವೂ ಉಂಟಾಯಿತು. ಅದು ಹೇಗೆ ಇಲ್ಲಿಗೆ ಬಂದಿತು? ಹೊದೆಸಿದವರಾರು? ಗುರುಗಳ ಶಾಲು ತಾನು ಹೊದೆಯಬಾರದಿತ್ತು ಎಂದು ತನ್ನ ತಪ್ಪಿಲ್ಲದಿದ್ದರೂ ಆತಂಕ, ಅಪರಾಧಪ್ರಜ್ಞೆ ಕಾಡಿತು. ಗುರುಗಳನ್ನೇ ಭೇಟಿಯಾಗಿ ನಿವೇದಿಸಿಕೊಳ್ಳುತ್ತೇನೆಂದು ನಿತ್ಯಾಹ್ನಿಕಗಳನ್ನು ಮುಗಿಸಿ ಮಠಕ್ಕೆ ತೆರಳಿದನು. ಅವರ ಕೈಯಲ್ಲಿ ಗುರುಗಳ ಶಾಲನ್ನು ನೋಡಿ ಉಳಿದ ವಿದ್ಯಾರ್ಥಿಗಳು ನಾನಾಬಗೆಯಲ್ಲಿ ಕುಹಕವಾಡಿ, ಸಂದೇಹ ಪ್ರಕಟಿಸಿ, ಅವರಿಗೆ ಘೋರ ಶಿಕ್ಷೆ ಕಾದಿದೆಯೆಂದು ಹೆದರಿಸಿ ನುಡಿಯಲಾರಂಭಿಸಿದರು.
ಆದರೆ ನಡೆದದ್ದೇ ಬೇರೆ. ಗುರುಗಳ ಸವಾರಿ ತರಗತಿಯೊಳಗೆ ಚಿತ್ತೈಸಿತು. ಗುರುಗಳು ಬೇರೆ ಯಾರ ಯಾವ ಮಾತಿಗೂ ಅವಕಾಶವಿಲ್ಲದಂತೆ ನೇರವಾಗಿ ಹಿಂದಿನ ದಿನ ನಡುರಾತ್ರಿಯಲ್ಲಿ ತಾವು ಕಂಡುದುದನ್ನೆಲ್ಲ ಹೇಳಿ, ಶಿಷ್ಯನ ಟಿಪ್ಪಣಿಗಳನ್ನೆಲ್ಲ ತಾವು ಓದಿದುದನ್ನೂ ತಿಳಿಸಿ ತಾವೇ ಮೆಚ್ಚುಗೆಯಿಂದ, ಅಕ್ಕರೆಯಿಂದ ತಮ್ಮ ಶಾಲನ್ನು ನಿದ್ರೆಯಲ್ಲಿದ್ದ ವೆಂಕಟನಾಥರಿಗೆ ಹೊದಿಸಿದ್ದನ್ನೂ ವಿವರವಾಗಿ ಹೇಳಿಬಿಟ್ಟರು! ತಮಗೆ ಕಾಣಿಸಿದ್ದ ಸಂಶಯದ ವಿಷಯಕ್ಕೆ ಸಂಬಂಧಿಸಿದಂತೆ ವೆಂಕಟನಾಥರು ಸಂಶಯ ಪರಿಹಾರ ಮಾಡಿ ವ್ಯಾಖ್ಯಾನವನ್ನು ಅದೆಷ್ಟು ಸಮಂಜಸವಾಗಿ ಬರೆದಿದ್ದಾರೆ ಎಂದು ಪೂರ್ಣವಾಗಿ ವಿವರಿಸಿ ಹೇಳಿ ಶಿಷ್ಯನನ್ನು ಅಪಾರವಾಗಿ ಮೆಚ್ಚಿಕೊಂಡರು. ವೆಂಕಟನಾಥರ ಜ್ಞಾನಾರ್ಜನೆಯ ಕ್ರಮ, ಶ್ರಮಗಳನ್ನು ಮತ್ತೆ ಮತ್ತೆ ಶ್ಲಾಘಿಸಿ ದಿವಾನರಿಂದ ಮತ್ತೊಂದು ಬೆಲೆಬಾಳುವ ಹೊಚ್ಚಹೊಸ ಶಾಲನ್ನು ತರಿಸಿ ಶಿಷ್ಯನಿಗೆ ಹೊದಿಸಿ ಅವರಿಗೆ ‘ಪರಿಮಳಾಚಾರ್ಯ’ ಎಂಬ ಬಿರುದನ್ನು ಅನುಗ್ರಹಿಸಿದರು.
ತರುಣ ವೆಂಕಟನಾಥರ ಮೇಧಾವಿತನಕ್ಕೆ ಗುರು ಸುಧೀಂದ್ರತೀರ್ಥರ ಮನಸ್ಸು ಸೋತಿತು. ಅವರನ್ನು ಪ್ರಿಯಶಿಷ್ಯನನ್ನಾಗಿ ಸ್ವೀಕರಿಸಿ ಮತ್ತಷ್ಟು ಆಳವಾಗಿ ವ್ಯಾಕರಣ, ಮೀಮಾಂಸೆ, ವ್ಯಾಸತೀರ್ಥರ ಚಂದ್ರಿಕಾ ಗ್ರಂಥ, ನ್ಯಾಯಾಮೃತ, ತರ್ಕತಾಂಡವಗಳನ್ನು ಅಧ್ಯಯನ ಮಾಡಲು ಸೂಚಿಸಿದ್ದಲ್ಲದೆ, ತಾವೂ ಈ ವಿಷಯಗಳಲ್ಲಿ ಈ ಶಿಷ್ಯನಿಗೆ ಪಾಠ ಹೇಳುತ್ತ ಅವನನ್ನು ಅಪಾರ ಜ್ಞಾನಿಯನ್ನಾಗಿ ರೂಪಿಸಲಾರಂಭಿಸಿದರು. ಪರಂಪರೆಯಿಂದ ಬಂದಿದ್ದ ದಿವ್ಯ ಜ್ಞಾನಗಂಗೆಯನ್ನು ತಮ್ಮ ಈ ಪ್ರಿಯ ಶಿಷ್ಯನಲ್ಲಿ ನೆಲಸುವಂತೆ ಹರಸಿದರು. ಅನಾದಿ ಕಾಲದಿಂದಲೂ ಉಳಿದು ಬೆಳೆದು ಬಂದಿದ್ದ ವೈದಿಕ ವಾಙ್ಮಯವನ್ನು ಭಾವಶುದ್ಧಿಯ ನೆಲೆಯಲ್ಲಿ ವೆಂಕಟನಾಥಾಚಾರ್ಯರು ಗುರುವಿನಿಂದ ಪೂರ್ಣವಾಗಿ ಅರಿತರು. ವೆಂಕಟನಾಥರಲ್ಲಿ ಅತಿಶಯ ಧಾರಣಶಕ್ತಿಯೂ, ವಿದ್ವದ್ ವಿಭೂತಿಯೂ ನೆಲೆಯಾಗುತ್ತ ಬಂದವು.
ಅಂದಿನ ದಿನಗಳಲ್ಲಿ ಎಲ್ಲ ಮಠದ ಶ್ರೀಪಾದರೂ ಸಂಚಾರ ಹೊರಟು ದೇಶಾಟನೆ ಮಾಡುವುದು ಒಂದು ಸಂಪ್ರದಾಯವಾಗಿಯೇ ನಡೆದುಬಂದಿತ್ತು. ಧರ್ಮಪ್ರಚಾರ ಇದರ ಮುಖ್ಯ ಉದ್ದೇಶವಾಗಿತ್ತು. ಬೇರೆ ಬೇರೆ ಪ್ರದೇಶದ ಗುರುಪೀಠ, ದೇವಮಂದಿರ, ರಾಜರ ಆಸ್ಥಾನಗಳಲ್ಲಿ ವಾಕ್ಯಾರ್ಥಗಳು, ವಾದವಿವಾದ ನಡೆದು ತಮ್ಮ ತಮ್ಮ ಧರ್ಮದ ಹಿರಿಮೆ ಮೆರೆಸುವುದು ಇನ್ನೊಂದು ಉದ್ದೇಶವಾಗಿತ್ತು.
ಈ ಬಾರಿ ಸುಧೀಂದ್ರತೀರ್ಥರು ಚಾತುರ್ಮಾಸ್ಯ ವ್ರತದ ನಂತರ ಸಂಚಾರಕ್ಕೆ ಹೊರಡುವ ಸಮಯ ಸನ್ನಿಹಿತವಾಯಿತು. ಈ ಬಾರಿ ಪ್ರಿಯ ಶಿಷ್ಯ ವೆಂಕಟನಾಥರನ್ನು ಜೊತೆಗೇ ಕರೆದೊಯ್ಯಲು ಅವರು ಅಪೇಕ್ಷಿಸಿದರು. ವೆಂಕಟನಾಥರೂ ಸಂತೋಷದಿಂದಲೇ ಹೊರಟರು. ಅನೇಕ ಪುರ ಪಟ್ಟಣಗಳಲ್ಲಿ ಈ ಗುರುಶಿಷ್ಯರು ತಮ್ಮ ಪರಿವಾರದೊಂದಿಗೆ ಸಂಚಾರ ಮಾಡುತ್ತ, ಭಕ್ತರುಗಳಿಗೆ ಉಪದೇಶ ನೀಡುತ್ತ ಮುಂದುವರಿದರು. ಹಾಗೆಯೇ ದಕ್ಷಿಣ ದ್ವಾರಕೆಯೆಂದು ಪ್ರಸಿದ್ಧಿ ಹೊಂದಿದ್ದ ರಾಜಮನ್ನಾರುಗುಡಿ ಎಂಬ ಶ್ರೀಕೃಷ್ಣನ ಕ್ಷೇತ್ರಕ್ಕೆ ಬಂದರು. ಆ ಊರಿನಲ್ಲಿ ನೆಲಸಿದ್ದ ಶಂಭುಪಂಡಿತನೆಂಬ ಅದ್ವೈತಿಯು ನೀಡಿದ ಪಂಥಾಹ್ವಾನದ ಮೇರೆಗೆ ವಾಕ್ಯಾರ್ಥ ವಾದಗಳಿಗೆ ಒಪ್ಪಿಕೊಂಡು ಶಿಷ್ಯ ವೆಂಕಟನಾಥನನ್ನೇ ಇದಕ್ಕಾಗಿ ನಿಯೋಜಿಸಿದರು. ಊರ ಪ್ರಮುಖರು, ವಿದ್ವಾಂಸರ ಎದುರಿನಲ್ಲಿ ಸಭೆ ಸೇರಿ ‘ತತ್ತ್ವಮಸಿ’ ಎಂಬ ವಾಕ್ಯವನ್ನು ಕುರಿತು ವಾಕ್ಯಾರ್ಥ ಪ್ರಾರಂಭವಾಯಿತು. ವಾದವಿವಾದ ನಡೆಯಿತು. ವೆಂಕಟನಾಥಾಚಾರ್ಯರ ವಾದದ ರೀತಿ, ಹರಿತವಾದ ತೀಕ್ಷ್ಣವಾದ, ಆದರೆ ವಿನಯದಿಂದಲೇ ಮಂಡಿಸುತ್ತಿದ್ದ ರೀತಿ ನೋಡಿ ಸಭಿಕರೆಲ್ಲ ಮಾರುಹೋದರು. ಶಂಭುಪಂಡಿತನೇ ಕಡೆಗೆ ಸೋಲನ್ನೊಪ್ಪಿಕೊಂಡು ತನ್ನ ಬಿರುದುಬಾವಲಿಗಳನ್ನು ವೆಂಕಟನಾಥಾಚಾರ್ಯರಿಗೆ ಒಪ್ಪಿಸಿ ಶರಣಾದನು. ಶಿಷ್ಯನ ಈ ವಿಜಯಕ್ಕಾಗಿ ಸುಧೀಂದ್ರತೀರ್ಥರು ತುಂಬಿದ ಸಭೆಯಲ್ಲಿ ಶಿಷ್ಯನು ತನ್ನ ವಾದಸಮರ್ಥನೆಗೆ ವ್ಯಾಕರಣ ಮಹಾಭಾಷ್ಯ ವಾಕ್ಯಗಳನ್ನು ಸಕಾಲಿಕವಾಗಿ ಉದಾಹರಿಸಿದ್ದರಿಂದ ವೆಂಕಟನಾಥರಿಗೆ ‘ಮಹಾಭಾಷ್ಯ ವೆಂಕಟಾಚಾರ್ಯ’ ಎಂಬ ಬಿರುದನ್ನು ದಯಪಾಲಿಸಿದರು.
ಮುಂದೆ ತಂಜಾವೂರಿಗೆ ಬಂದರು. ಆಗ ಇಡೀ ದಕ್ಷಿಣ ಭಾರತದ ಸಾಂಸ್ಕೃತಿಕ ರಾಜಧಾನಿ ಎನ್ನಿಸಿ ಮೆರೆಯುತ್ತಿದ್ದುದು ತಂಜಾವೂರು. ಇಲ್ಲಿ ಭೂಪಾಲ ರಘುನಾಥ ನಾಯಕನು ಅದ್ಧೂರಿಯಾಗಿ ಗುರುಶಿಷ್ಯರ ಪರಿವಾರವನ್ನು ಸ್ವಾಗತಿಸಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿದನು. ಆನಂತರ ರಾಜನ ಆಸ್ಥಾನದಲ್ಲಿ ವಾಕ್ಯಾರ್ಥಗೋಷ್ಠಿ ಏರ್ಪಾಡಾಯಿತು. ಅನೇಕ ವಿದ್ವಾಂಸರು ಚರ್ಚೆ ನಡೆಸಿ ವೆಂಕಟನಾಥರದೇ ಮೇಲುಗೈಯಾಯಿತು. ‘ಕಾಕತಾಲೀಯ’ ಎಂಬ ಶಬ್ದದ ಮೇಲೆಯೇ ಅದ್ಭುತ ವಾಕ್ಯಾರ್ಥ ನಡೆಯಿತು. ಆನಂತರ ‘ತಪ್ತಮುದ್ರಾಂಕನ’ ವಿಚಾರದಲ್ಲಿಯೂ, ವಿಜಯೀಂದ್ರತೀರ್ಥರ ‘ಚಕ್ರಮೀಮಾಂಸಾ’ದ ಮೇಲೆಯೂ ವಾಕ್ಯಾರ್ಥ, ಚರ್ಚೆ ನಡೆದು, ವೆಂಕಟನಾಥರು ಅದ್ಭುತ ರೀತಿಯಲ್ಲಿ ವಾದಿಸಿ ಎದುರಾಳಿ ವಿದ್ವಾಂಸರನ್ನು ಪರಾಭವಗೊಳಿಸಿದರು. ಅವರ ತಲಸ್ಪರ್ಶಿ ಪಾಂಡಿತ್ಯ, ವಾಗ್ವೈಭವ, ಸಮರ್ಥನ ಸಾಮಥ್ರ್ಯ, ಪ್ರತಿಭಾ ವೈಶಿಷ್ಟ್ಯ, ಶ್ರುತಿಸ್ಮೃತಿ ಪ್ರಭುತ್ವ, ಇವೆಲ್ಲವನ್ನೂ ಕಂಡು ತಂಜಾವೂರಿನ ಜನತೆ, ರಾಜ, ಅಮಾತ್ಯ, ವಿದ್ವಾಂಸರೆಲ್ಲರೂ ನಿಬ್ಬೆರಗಾದರು. ರಘುನಾಥ ಭೂಪಾಲನು ವೆಂಕಟನಾಥರನ್ನು ಅಪಾರವಾಗಿ ಸಂಮಾನಿಸಿ ಗೌರವಿಸಿದನು. ಅನೇಕ ಖಿಲ್ಲತ್ತುಗಳನ್ನೂ ಬಿರುದುಗಳನ್ನೂ ಕೊಡಮಾಡಿದನು. ಅಪಾರವಾದ ವಿದ್ವತ್ತಿನ ಜೊತೆಗೆ ಕವಿಯ ಮೃದುಹೃದಯ ಹೊಂದಿದ್ದ ವೆಂಕಟನಾಥರು ಹೀಗೆ ಅಪಾರ ಜನಸಾಮಾನ್ಯರ, ಪಂಡಿತವರ್ಗದವರ ಮನ್ನಣೆಗೆ ಪಾತ್ರರಾದರು.
ಸಂಚಾರದಿಂದ ಮರಳಿ ಪೀಠಕ್ಕೆ ಹಿಂದಿರುಗಿ ಬಂದ ಮೇಲೆ ವೆಂಕಟನಾಥರು ಅಷ್ಟು ತಿಂಗಳುಗಳೇ ಅಗಲಿದ್ದ ತಮ್ಮ ಪ್ರೀತಿಯ ಪತ್ನಿ ಸರಸ್ವತಿಯ ಸಾಂಗತ್ಯದಲ್ಲಿ ಸಂತೋಷವಾಗಿದ್ದ ದಿನಗಳು ಅವು. ಪತಿಯ ದಿಗ್ವಿಜಯ ಕೇಳಿ ಅಪಾರವಾಗಿ ಹರ್ಷಿಸಿದ ಸರಸ್ವತಿ ಅಷ್ಟು ದಿನಗಳೂ ಸಂಚಾರದಲ್ಲಿ ಪತಿಯ ಆರೈಕೆ ಸರಿಯಾಗಿ ಆಗಿಲ್ಲವೆಂಬುದನ್ನು ಗಮನಿಸಿ ತೀವ್ರವಾದ ಕಾಳಜಿಯಿಂದ ಪತಿಯ ಸೇವಾಶುಶ್ರೂಷೆಯಲ್ಲಿ ತೊಡಗಿಕೊಂಡಳು. ಅವಳ ಸರ್ವಸ್ವವೂ ಪತಿಯೇ. ಅವಳ ಪೂರ್ಣ ಗಮನ, ನಮನ ಎಲ್ಲವೂ ಪತಿಗೆ ಮೀಸಲು. ಹೀಗೆ ದಂಪತಿಗಳು ಅನ್ಯೋನ್ಯತೆಯಿಂದ, ಅನುರಾಗದಿಂದ ಜಕ್ಕವಕ್ಕಿಗಳಂತೆ ಒಟ್ಟಿಗೇ ಸಾಂಗತ್ಯ ಸುಖದಲ್ಲಿದ್ದ ದಿನಗಳು. ಆದರೆ ದೈವೇಚ್ಛೆ ಬೇರೆ ಇತ್ತೆ? ಆ ಇಚ್ಛೆಯು ಸುಧೀಂದ್ರತೀರ್ಥರ ವಿಚಾರಮಂಡನೆಯಲ್ಲಿ ತೊಡಗಿಕೊಂಡಿತ್ತೆ? ‘ಬರುವುದೇನುಂಟೊಮ್ಮೆ ಬರುವ ಕಾಲಕ್ಕೆ ಬಹುದು, ಬಯಕೆ ಬರುವುದರ ಮುನ್ಸೂಚನೆ ಕಾಣೋ’ ಎಂಬ ಕವಿಸೂಕ್ತಿ ದಿಟವಾದುದೆಂಬಂತೆ ಇತ್ತೀಚೆಗೆ ಸುಧೀಂದ್ರತೀರ್ಥರಲ್ಲಿ ಬಯಕೆಯೊಂದು ಹೆಡೆಯೆತ್ತಿ ವಿಚಾರಗಳಲ್ಲಿ ತಲೆದೂಗುತ್ತಿತ್ತು. ಹೀಗೆ ಅವರಲ್ಲಿ ಇಚ್ಛೆಯೊಂದು ಪ್ರಬಲವಾಗಿ ಕಾಡಲು ಆರಂಭವಾಯಿತು. ಇದಕ್ಕೆ ಕಾರಣವೂ ಇತ್ತು. ಸಂಚಾರ ಮುಗಿಸಿ ಹಿಂದಿರುಗಿ ಬಂದಮೇಲೆ ತಮ್ಮ ಆರೋಗ್ಯ ಮೊದಲಿನಂತಿಲ್ಲವೆಂಬುದನ್ನೂ ಮನಗಂಡರವರು. ಆಗಾಗ ದೇಹಾಲಸ್ಯವಾಗುತ್ತಿತ್ತು. ಚೈತನ್ಯ ಕುಂದಿದಂತೆ ಭಾಸವಾಗುತ್ತಿತ್ತು. ನಿತ್ಯ ಪೂಜಾ ಪ್ರವಚನ ಮಾಡುತ್ತಿದ್ದರಾದರೂ ಮೊದಲಿನಂತೆ ತನ್ನಲ್ಲಿ ಶಕ್ತಿ ಇಲ್ಲವೆಂಬುದು ಅರಿವಿಗೆ ಪದೇಪದೇ ಬರುತ್ತಿತ್ತು. ವೃದ್ಧಾಪ್ಯದ ಪರಿಣಾಮಗಳೆಂದು ಅರ್ಥವಾಯಿತು. ಹೀಗಾಗಿ ಈ ಮಠದ, ವಿದ್ಯಾಪೀಠದ ಉತ್ತರಾಧಿಕಾರಿಯನ್ನು ತಾನು ನೇಮಿಸಲೇಬೇಕೆಂಬ ಇಚ್ಛೆ ಪ್ರಬಲವಾಗುತ್ತ ಬಂದಿತು. ಮಠದ ಮೂಲರಾಮದೇವರ ಪೂಜೆಯನ್ನು ನೇಮನಿಷ್ಠೆಗಳಿಂದ ಮಾಡಲು ಸೂಕ್ತ ಸಮರ್ಥರೂ ಯೋಗ್ಯರೂ ಆದವರನ್ನು ತಾನು ಪೀಠದಲ್ಲಿ ಕೂರಿಸಬೇಕಲ್ಲವೆ? ಈ ಎಲ್ಲ ವಿಚಾರಮಥನಗಳಲ್ಲಿ ಅವರಿಗೆ ಮನಸಿನ ಕಂಗಳ ಮುಂದೆ ಬರುತ್ತಿದ್ದ ವ್ಯಕ್ತಿ ಒಬ್ಬರೇ: ಅವರೇ ವೆಂಕಟನಾಥಾಚಾರ್ಯರು!
ಆದರೆ ತನ್ನ ಮನದ ಇಚ್ಛೆಯನ್ನು ಶಿಷ್ಯನಲ್ಲಿ ಅರುಹಲು ಅವರಿಂದ ಸಾಧ್ಯವಾಗದೆ ಬಹಳ ದಿನಗಳನ್ನು ಆಲೋಚನೆಯಲ್ಲೇ ಕಳೆದರು. ಕಾರಣ ಈ ಶಿಷ್ಯನ ಮೇಲಿರುವ ಮಮಕಾರ; ಅವನ ಮೇಲಿರುವ ಅಪಾರ ವಾತ್ಸಲ್ಯ-ಪ್ರೀತಿ! ಸಂಸಾರದಲ್ಲಿ ಅನ್ಯೋನ್ಯವಾಗಿ ಪತ್ನಿ ಪುತ್ರನ ಜೊತೆಗೆ ದಿನಗಳನ್ನು ಕಳೆಯುತ್ತಿರುವ ಶಿಷ್ಯನನ್ನು ಹೇಗಾದರೂ ಸಂಸಾರ ಬಿಟ್ಟು ಬಂದು ಸಂನ್ಯಾಸಿಯಾಗಿ ಮಠದ ಪೀಠ ಸ್ವೀಕರಿಸು, ಸ್ವಾಮಿಯಾಗು ಎಂದು ಕೇಳಲಿ? ಅನುರಾಗದ ದಾಂಪತ್ಯದಲ್ಲಿ ಸುಖಿಯಾಗಿರುವ ಗೃಹಸ್ಥ ಶಿಷ್ಯನನ್ನು ಪೀಠಾಧಿಪತಿಯಾಗು, ಹೆಂಡತಿ ಮಗುವನ್ನು ತ್ಯಜಿಸಿ ಬಾ ಎಂದು ಹೇಗೆ ಆದೇಶಿಸಲಿ? ಇನ್ನೂ ತುಂಬುಪ್ರಾಯದ ತರುಣ ವೆಂಕಟನಾಥ! ಸುಖಭೋಗಗಳನ್ನು ತ್ಯಜಿಸಿ ತ್ಯಾಗಜೀವನಕ್ಕೆ ಮುಡಿಪಾಗಿ ಬದುಕೆಂದು ಹೇಗೆ ನಿರ್ದೇಶಿಸಲಿ ತಾನು? ಸುಧೀಂದ್ರತೀರ್ಥರು ಸ್ವತಃ ಸ್ವಾಮಿಯಾಗಿ ವೈರಾಗ್ಯ ಜೀವನದಲ್ಲಿದ್ದರೂ ಶಿಷ್ಯನನ್ನು ವೈವಾಹಿಕ ಬದುಕು ಬಿಟ್ಟು ವಿರಾಗಿಯಾಗಿ ಬದುಕಲು ಬಾರೆಂದು ಶಿಷ್ಯನಿಗೆ ಆದೇಶ ನೀಡಲಾಗದೆ, ಬೇರೆ ಯಾರನ್ನೂ ಸ್ವಾಮಿಯಾಗಿಸಲು ಇಷ್ಟವೂ ಇಲ್ಲದೆ ಚಡಪಡಿಕೆಯಲ್ಲೆ ಅನೇಕ ದಿನಗಳು ಕಳೆದುಹೋದವು. ವೆಂಕಟನಾಥನ ಮೇಲಿದ್ದ ಪುತ್ರವಾತ್ಸಲ್ಯ ತಮ್ಮ ಇಚ್ಛೆಯನ್ನು ಅವನಿಗರುಹಲು ಅಡ್ಡಿಯಾಗಿತ್ತು!
ತನ್ನ ಗುರುವಿನ ಮನದಲ್ಲಿ ಆಗುತ್ತಿದ್ದ ಆಂದೋಲನದ ಪರಿವೆಯೇ ಇಲ್ಲದೆ ವೆಂಕಟನಾಥರು ಮಠಕ್ಕೆ ಅತ್ಯಂತ ನೇಮನಿಷ್ಠೆಗಳಿಂದ ನಡೆದುಕೊಳ್ಳುತ್ತ, ಭಗವದ್ವಿಚಾರದಲ್ಲೇ ಸದಾ ತೊಡಗಿಕೊಂಡು ಪಾಠ ಪ್ರವಚನಗಳನ್ನು ಮಾಡುತ್ತ, ಸದ್ಗ್ರಂಥಗಳನ್ನು ರಚಿಸುತ್ತ, ಗುರುಗಳಿಗೆ ಅವುಗಳನ್ನು ತೋರಿಸುತ್ತ, ಜೊತೆಯಾಗಿ ಸರ್ವ ವಿಧದಲ್ಲೂ ಅನುಕೂಲೆಯಾಗಿದ್ದ ಪತ್ನಿಯ ಪ್ರೀತಿ ಪ್ರೇಮಗಳ ಲೋಕದಲ್ಲೂ ವಿಹರಿಸುತ್ತ ತೃಪ್ತಿ-ಆನಂದಗಳಲ್ಲಿ ಮೃದುಮನಸ್ಸಿನ ವೆಂಕಟನಾಥರು ಸುಖಿಯಾಗಿ ಇದ್ದುಬಿಟ್ಟರು.
ತನ್ನ ದಾಂಪತ್ಯ ತೃಪ್ತ ಜೀವನವು ಅಲ್ಪಾಯುಸ್ಸಿನದೆಂದು ವೆಂಕಟನಾಥರಿಗೆ ಅಪ್ಪಿತಪ್ಪಿಯೂ ಅನಿಸಿರಲಿಲ್ಲ, ಅವರದನ್ನು ಕನಸು ಮನಸ್ಸಿನಲ್ಲಾದರೂ ಊಹಿಸಿದವರೇ ಅಲ್ಲ. ಅಂಥದ್ದರಲ್ಲಿ ಒಂದು ದಿನ ಸುಧೀಂದ್ರತೀರ್ಥರಿಂದ ಕರೆ ಬಂದಿತು. ಶಿಷ್ಯನನ್ನು ಪರಮಾಪ್ತತೆಯಿಂದ ಬಳಿ ಕೂಡಿಸಿಕೊಂಡು ತನ್ನ ಮನಸ್ಸಿನ ಇಚ್ಛೆಯನ್ನು ಗುರುಗಳು ಅರುಹಿಯೇಬಿಟ್ಟರು! ಪರಮಹಂಸಾಶ್ರಮ ಸ್ವೀಕರಿಸಬೇಕೆಂದೂ, ಕುಂಭಕೋಣದ ಮಠದ ಉತ್ತರಾಧಿಕಾರಿಯಾಗಬೇಕೆಂದೂ ಸಂಸಾರ ತ್ಯಜಿಸಿ ಸಂನ್ಯಾಸ ಸ್ವೀಕರಿಸಿ ಮಧ್ವಮತದ ಪೀಠವನ್ನು ಏರಬೇಕೆಂದೂ ಆದೇಶ ನೀಡಿದರು. ವೆಂಕಟನಾಥರು ತಬ್ಬಿಬ್ಬಾದರು; ಎಂದೂ ನಿರೀಕ್ಷಿಸಿರದಿದ್ದ ಈ ಕರೆ ಗುರುಗಳಿಂದ ಬಂದುದು ಅವರನ್ನು ದಿಙ್ಮೂಢರನ್ನಾಗಿಸಿತು. ಎಳೆಯ ವಯಸ್ಸಿನ ಪತ್ನಿ, ಎಳೆಯ ಬಾಲಕ ಪುತ್ರರಿಬ್ಬರೂ ಕಣ್ಮುಂದೆ ಬಂದರು. ಅವರಿಬ್ಬರನ್ನು ತಾನು ತ್ಯಜಿಸಿಬಿಡಬೇಕೆ?
ವೆಂಕಟನಾಥರ ಕಪೆÇೀಲಗಳಿಂದ ದುಃಖಾಶ್ರು ಜಿನುಗಿತು. ತಲೆತಗ್ಗಿಸಿ ಒಂದೇ ಸವನೆ ದುಃಖಿಸುತ್ತಿದ್ದ ತಮ್ಮ ಪ್ರೀತಿಯ ಶಿಷ್ಯನನ್ನು ಸುಧೀಂದ್ರತೀರ್ಥರು ನೋಡುತ್ತಲೇ ಇದ್ದರು.
(ಮುಂದುವರಿಯುತ್ತದೆ)