ಮುಕ್ತಿ ಸೋಪಾನ – ಜಲಾಲಾಬಾದ್
ಪ್ರತಿಯೊಬ್ಬರ ಹೆಗಲ ಮೇಲೆ ಪೆÇಲೀಸ್ ಬಂದೂಕು, ಬೆನ್ನ ಮೇಲೆ ಕಾಡತೂಸುಗಳ ಚೀಲ, ಬಂದೂಕನ್ನು ಸ್ವಚ್ಛಗೊಳಿಸಲು ಬೇಕಾಗುವ ಕಬ್ಬಿಣದ ಕಂಬಿ ಮತ್ತು ಎಣ್ಣೆ ಡಬ್ಬಿ, ಕುಡಿಯುವ ನೀರಿನ ಪಾತ್ರೆ – ಇಷ್ಟನ್ನೂ ಹೊತ್ತ ಐವತ್ತಾರು ಸೈನಿಕರ ಕ್ರಾಂತಿಸೇನೆ ರಾತ್ರಿಯ ಕತ್ತಲಿನಲ್ಲಿ ಗುಡ್ಡದ ಕಡೆಗೆ ನಡೆಯಲಾರಂಭಿಸಿತು. ಹಸಿದ ಹೊಟ್ಟೆ, ಬಾಯಾರಿದ ದೇಹ! ಹೆಜ್ಜೆಗಳನ್ನು ಕಿತ್ತು ಕಿತ್ತು ಮುಂದೆ ಹಾಕುತ್ತ ಸಾಗುತ್ತಲಿದೆ ಯುವಕರ ತಂಡ. ಆದರೂ ಮನಸ್ಸಿನಲ್ಲಿ ಸಾಮ್ರಾಜ್ಯವಾದಿ ಸರಕಾರವನ್ನು ಸದೆಬಡಿದ ಅಮಲು. ಕತ್ತಲಿನಲ್ಲಿ ಬಹಳಷ್ಟು ದೂರ ಸಾಗಿದ ಮೇಲೆ ಮುಂದೆ ದಾರಿಯನ್ನು ಅಡ್ಡಗಟ್ಟುವ ಬೇಲಿ. ಎಲ್ಲರೂ ಬೇಲಿಯ ಬದಿ ದಣಿವಾರಿಸಿಕೊಳ್ಳಲು ಕುಳಿತರು.
ಬೇಲಿಯ ಆಚೆಕಡೆ ಕಲ್ಲಂಗಡಿ ಹಣ್ಣಿನ ತೋಟ ಕಂಡುಬರುತ್ತದೆ. ಹಣ್ಣಾದ ಕಲ್ಲಂಗಡಿಗಳನ್ನು ಕಂಡ ಎಲ್ಲರೂ ಬೇಲಿಯೊಳಕ್ಕೆ ನುಗ್ಗಿದರು. ಅದು ಹಾಚಿ ಮಿಯಾ ಎಂಬ ಯುವಕನಿಗೆ ಸೇರಿದ ತೋಟ. ರಾತ್ರಿಯಲ್ಲಿ ನರಿಗಳು ಹಣ್ಣುಗಳನ್ನು ನಾಶ ಮಾಡುತ್ತವೆ ಎಂದು ಆತ ಕಾವಲು ಕಾಯುತ್ತಿದ್ದ. ಆತ ಕೇಳುತ್ತಿರುವುದು ನರಿಗಳ ಸಪ್ಪಳದಂತಿಲ್ಲ. ಹಾಗಾದರೆ ತೋಟದೊಳಕ್ಕೆ ನುಗ್ಗಿರುವವರು ಯಾರೆಂದು ಆತ ಅರಸುತ್ತ ಬರುತ್ತಾನೆ. ಬಂದೂಕುಗಳನ್ನು ಹೊತ್ತ ಖಾಕಿ ಸಮವಸ್ತ್ರದ ಗುಂಪನ್ನು ಕಂಡ ಆತನಿಗೆ ಲೋಕನಾಥ ಬಾಲ್ ತಾವು ಪೆÇಲೀಸರು, ಡಕಾಯಿತರನ್ನು ಹುಡುಕಿಕೊಂಡು ಗುಡ್ಡದತ್ತ ಹೋಗುತ್ತಿರುವುದಾಗಿ ಹೇಳುತ್ತಾನೆ. ಹಾಚಿ ಮಿಯಾ ಅವರಿಗೆಲ್ಲ ಕಲ್ಲಂಗಡಿ ಹಣ್ಣುಗಳನ್ನು ನೀಡಿದನಾದರೂ ಹಣ ಪಡೆಯಲು ನಿರಾಕರಿಸುತ್ತಾನೆ. ಅರ್ಧಹಣ್ಣಾದ ಕಲ್ಲಂಗಡಿಯನ್ನು ತಿಂದ ಬಳಿಕ ಅವರಿಗೆ ಆತ ತೋಟದ ಮತ್ತೊಂದು ಬದಿಯಲ್ಲಿರುವ ಬೇಲಿಯನ್ನು ಸರಿಸಿ ಗುಡ್ಡದತ್ತ ಸಾಗಲು ಮಾರ್ಗದರ್ಶನ ಮಾಡುತ್ತಾನೆ.
ಹಾಚಿ ಮಿಯಾ ತೋರಿದ ದಾರಿಯಲ್ಲಿ ರೈಲ್ವೇ ಹಳಿಗಳನ್ನು ದಾಟಿ ಮುಂದುವರಿದ ಕ್ರಾಂತಿಕಾರಿಗಳು ನಗರಖಾನ ಗುಡ್ಡಗಳ ಸಾಲನ್ನು ತಲಪುತ್ತಾರೆ. ಇದು ಮೊದಲೇ ಆಲೋಚಿಸದ ಅನಿರೀಕ್ಷಿತ ಬೆಳವಣಿಗೆ. ಹಾದಿಯಲ್ಲಿ ಸಿಕ್ಕ ಕೊಳವೊಂದರಲ್ಲಿ ಎಲ್ಲರೂ ನೀರು ಕುಡಿದು ದಣಿವಾರಿಸಿಕೊಂಡು ಬೆಳಕು ಹರಿಯುವಷ್ಟರಲ್ಲಿ ಗುಡ್ಡದ ಮೇಲೆ ಸುರಕ್ಷಿತ ಆಶ್ರಯವನ್ನು ಹುಡುಕಿಕೊಳ್ಳುವ ಧಾವಂತದಲ್ಲಿ ಮುಂದೆ ಸಾಗುತ್ತಾರೆ. ದಟ್ಟವಾದ ಮರಗಳಿಂದ ಕೂಡಿದ ಗುಡ್ಡದ ಮೇಲೆ ಎಲ್ಲರೂ 4-8 ಮಂದಿಯ ಚಿಕ್ಕಚಿಕ್ಕ ಗುಂಪುಗಳಲ್ಲಿ ವಿಶ್ರಮಿಸುತ್ತಾರೆ. ಶತ್ರುಗಳ ಭಯದಿಂದ ನೀರನ್ನು ಹುಡುಕಲಾಗಲಿಲ್ಲ. ಸೂರ್ಯಸೇನ್, ಅಂಬಿಕಾ ಚಕ್ರವರ್ತಿ ಮತ್ತು ಲೋಕನಾಥ ಬಾಲ್ ಪ್ರತಿಯೊಂದು ಗುಂಪಿನ ಬಳಿ ಹೋಗಿ ಅವರ ಮನಃಸ್ಥಿತಿಯನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ನಾಯಕರ ಸಂಪೂರ್ಣ ಯೋಜನೆಯ ಅರಿವಿಲ್ಲದ ಬಾಲಕರು ಹೀಗೆ ಗುಡ್ಡದ ಮೇಲೆ ಅವಿತುಕೊಳ್ಳುವುದೂ ಒಂದು ತಂತ್ರವೆಂದು ಭಾವಿಸಿ ನಿಶ್ಚಿಂತರಾಗಿದ್ದರಲ್ಲದೆ ಅವರ ಸಾಹಸದ ಅಮಲಿನಲ್ಲಿ ಕೊಂಚವೂ ಆತಂಕವಿರಲಿಲ್ಲ.
ಏಪ್ರಿಲ್ 19ರ ಶನಿವಾರ. ಎಲ್ಲರೂ ಮಲಗಿ ವಿಶ್ರಾಂತಿ ಪಡೆದಿರುತ್ತಾರೆ. ಬಿಸಿಲಿನ ಝಳಕ್ಕೆ ಎಂಟು ಗಂಟೆಗೆ ಎಚ್ಚರಗೊಂಡ ಎಲ್ಲರೂ ಬಂದೂಕುಗಳಿಗೆ ಎಣ್ಣೆ ಹಚ್ಚಿ ಸ್ವಚ್ಛಗೊಳಿಸಲು ಪ್ರಾರಂಭಿಸುತ್ತಾರೆ. ತಮ್ಮಿಂದ ಬೇರ್ಪಟ್ಟ ಅನಂತ ಸಿಂಗ್ ಮತ್ತು ಗಣೇಶ್ ಘೋಷ್ರನ್ನು ಸಂಪರ್ಕಿಸಿ ನಗರದ ಸ್ಥಿತಿಗತಿಗಳನ್ನು ತಿಳಿದುಕೊಳ್ಳಲು ಪೆÇಲೀಸರಿಗೆ ಪರಿಚಯವಿಲ್ಲದವರನ್ನು ಕಳುಹಿಸಬೇಕೆಂದು ನಾಯಕರು ನಿರ್ಧರಿಸುವ ಮಾಸ್ತರ್ ದಾ ಮಣೀಂದ್ರ ಗುಹನನ್ನು ಕಳುಹಿಸಿಕೊಡುತ್ತಾನೆ. ಪರಿಚಿತರಿಂದ ಮಾಹಿತಿ ಕಲೆಹಾಕಿ ರಾತ್ರಿಯಾಗುತ್ತಿದ್ದಂತೆ ಹಿಂತಿರುಗಬೇಕೆಂದು ತಿಳಿಸುತ್ತಾನೆ. ಆದರೆ ಮಣೀಂದ್ರ ಗುಹ ಹಿಂತಿರುಗಿ ಬರಲಿಲ್ಲ.
ಟೇಗ್ರಾ ಮತ್ತು ಮನೋರಂಜನ್ ಸೇನ್ ಕಾಡಿನಲ್ಲಿ ಸಿಕ್ಕ ಮಾವಿನಕಾಯಿ ಮತ್ತು ಬೇಲದ ಕಾಯಿಯೊಂದಿಗೆ (ತಿooಜ ಚಿಠಿಠಿಟe – bಚಿeಟ) ಕುಡಿಯಲು ನೀರನ್ನು ಹೊತ್ತು ತರುತ್ತಾರೆ. ರಾತ್ರಿ 8.30ಕ್ಕೆ ಎಲ್ಲರೂ ಸಾಲಾಗಿ ಗುಡ್ಡದಿಂದ ಕೆಳಗಿಳಿದು ಮಧ್ಯರಾತ್ರಿಯ ವೇಳೆ ಅಡಿಕೆತೋಟ ಮತ್ತು ರೈಲ್ವೇ ಹಳಿಯ ಬಳಿಗೆ ತಲಪುತ್ತಾರೆ. ಅಂಬಿಕಾ ಚಕ್ರವರ್ತಿ ಹತ್ತಿರದ ಹಳ್ಳಿಯಿಂದ ತಿನ್ನಲು ತಿನಿಸನ್ನು ತರಲು ನಿರ್ಮಲ್ ಸೇನ್, ಲೋಕನಾಥ್ ಬಾಲ್, ರಜತ್ ಸೇನ್ ಹಾಗೂ ಮತ್ತೊಬ್ಬನನ್ನು ಫಕೀರ್ ಸೇನನೊಂದಿಗೆ ಕಳುಹಿಸುತ್ತಾನೆ. ಅವರು ಹಳ್ಳಿಯನ್ನು ತಲಪಿದಾಗ ಮುಂಜಾನೆ 2.00 ಗಂಟೆಯ ಸಮಯ. ಒಂದು ಅಂಗಡಿಯ ಮಾಲೀಕನನ್ನು ಎಬ್ಬಿಸಿ ಆತನ ಬಳಿಯಿದ್ದ ಬ್ರೆಡ್ಡು ಮತ್ತು ಬಿಸ್ಕತ್ತಿನ ಎಲ್ಲ ಸರಕನ್ನೂ ಮೂಟೆ ಕಟ್ಟಿಕೊಂಡು ಹಿಂತಿರುಗುತ್ತಾರೆ. ಮಾಲೀಕ ಒಂದೇ ಬಾರಿಗೆ 17 ರೂಪಾಯಿಗಳ ವ್ಯಾಪಾರವನ್ನು ಎಂದೂ ಕಂಡಿರಲಿಲ್ಲ! ಅಡಿಕೆತೋಟದಲ್ಲಿ ಕುಳಿತು ಅದನ್ನು ತಿಂದು ಅಲ್ಲಿದ್ದ ಕೊಳದಿಂದ ನೀರು ಕುಡಿಯುತ್ತಾರೆ. ಚೌಧರಿ ಹಾಟ್ ರೈಲ್ವೇ ನಿಲ್ದಾಣವನ್ನು ದಾಟಿ ಮತ್ತೊಂದು ಗುಡ್ಡವನ್ನು ಹತ್ತಲು ಪ್ರಾರಂಭಿಸುತ್ತಾರೆ.
ಏಪ್ರಿಲ್ 20ರಂದು ಭಾನುವಾರ ಸಂಜೆಯ ವೇಳೆಗೆ ಹುಡುಗರು ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಮಧ್ಯಾಹ್ನದ ವೇಳೆಗೆ ಅಂಬಿಕಾ ದಾ ಫಕೀರ್ ಸೇನ್ನನ್ನು ಫತೇಹಾಬಾದ್ ಹಳ್ಳಿಯಿಂದ ಸುದ್ದಿ ತರಲು ಕಳುಹಿಸುತ್ತಾನೆ. ಆತ ಸಂಜೆ ನಾಲ್ಕು ಗಂಟೆಯ ಒಳಗೆ ಹಿಂತಿರುಗಬೇಕು. ಫಕೀರ್ ಸೇನ್ ಹಿಂತಿರುಗಿ ಬರಲಿಲ್ಲ. ನಾಯಕರು ಮತ್ತೊಂದು ದಿನ ಕಾಯಲು ನಿರ್ಧರಿಸುತ್ತಾರೆ. ಅಂದು ರಾತ್ರಿ ಅವರು ಮತ್ತೆ ಫತೇಹಾಬಾದ್ನಿಂದ ಎರಡು ಮೈಲಿ ದಕ್ಷಿಣಕ್ಕಿರುವ ಮತ್ತೊಂದು ಗುಡ್ಡವನ್ನು ಸೇರುತ್ತಾರೆ.
ಏಪ್ರಿಲ್ 21ರಂದು ಬೆಳಗ್ಗೆ ನರೇಶ್ ರಾಯ್ ತಂಡದವರು ಹೊತ್ತು ತಂದಿದ್ದ ಹತ್ತು ಕಲ್ಲಂಗಡಿ ಹಣ್ಣುಗಳನ್ನು ಹೆಚ್ಚಿ ಎಲ್ಲರೂ ಒಂದೊಂದು ಚೂರನ್ನು ತಿನ್ನುತ್ತಾರೆ. ಟೇಗ್ರಾ ಎರಡು ತುಂಡುಗಳನ್ನು ತಿಂದಿದ್ದಕ್ಕಾಗಿ ಬೈಸಿಕೊಳ್ಳುತ್ತಾನೆ. ಕ್ರಾಂತಿಕಾರಿಗಳನ್ನು ಹುಡುಕಲು ಗುಡ್ಡದ ಮೇಲೆ ವಿಮಾನವೊಂದು ಹಾರಾಡುತ್ತಿರುವುದು ಕಂಡುಬರುತ್ತದೆ. ಮಧ್ಯಾಹ್ನ ಇಬ್ಬರು ಪೆÇಲೀಸ್ ಗೂಢಚಾರರು ದನ ಕಾಯುವವರಂತೆ ಕಾಣಿಸಿಕೊಳ್ಳುತ್ತಾರೆ. ಮಾಸ್ತರ್ ದಾ ಬದುಲ್ಲ ಪಹಾಡ್ ಗುಡ್ಡದ ಮೇಲಿಂದ ಬೆಳಗ್ಗೆ ಹತ್ತು ಗಂಟೆಗೆ ಅಮರೀಂದ್ರ ನಂದಿ ಮತು ದೀಪ್ತಿಮೇಧ ಚೌಧರಿಯನ್ನು ನಗರಕ್ಕೆ ಕಳುಹಿಸುತ್ತಾನೆ. ಅವರು ಮಧ್ಯದಲ್ಲಿ ಫಾತಿಕ್ಚರಿ ಎಂಬಲ್ಲಿ ಬಸ್ ಹಿಡಿದು 12-15 ಮೈಲಿ ದೂರದ ನಗರವನ್ನು ತಲಪಿ ಅಲ್ಲಿ ಅರ್ಧೇಂದು ಗುಹನನ್ನು ಭೇಟಿಮಾಡಿ, ಶಶಿಭೂಷಣ ಸೇನ್, ಆನಂದ ಗುಪ್ತ ಮತ್ತು ರಜತ್ ಸೇನ್ ಮನೆಗಳಿಗೆ ಹೋಗಿ ವಿಷಯ ತಿಳಿದುಕೊಂಡು ಸಂಜೆ ಏಳರ ಒಳಗೆ ಹಿಂತಿರುಗಬೇಕು.
ಮಧ್ಯಾಹ್ನ ಅಂಬಿಕಾ ದಾ ಹೆಗಲ ಮೇಲೆ ಬಾಳೆಯ ಗೊನೆ, ಎರಡೂ ಕೈಗಳಲ್ಲಿ ಮೊಸರಿನ ಮಡಕೆಗಳನ್ನು ಹೊತ್ತು ತಂದು ಎಲ್ಲರಿಗೂ ಊಟಕ್ಕೆ ಕರೆಯುತ್ತಾನೆ. ಗಡ್ಡ ಮೀಸೆ ಬೋಳಿಸಿ, ಸ್ನಾನ ಮಾಡಿ ಶುಭ್ರನಾಗಿದ್ದ ಅವನ ಮುಖ ಲಖಲಖನೆ ಹೊಳೆಯುತ್ತಿದೆ. ಅವಲಕ್ಕಿ, ಮೊಸರು, ಬಾಳೆಹಣ್ಣು ಮಧ್ಯಾಹ್ನದ ಊಟಕ್ಕಾದರೆ ರಾತ್ರಿ ಕಿಚಡಿ ಬರಲಿದೆ ಎಂದು ಘೋಷಿಸಿದಾಗ ಎಲ್ಲರಿಗೂ ಆನಂದವಾಗುತ್ತದೆ. ಕೈಯಲ್ಲಿ ‘ಪಾಂಚಜನ್ಯ’ ಪತ್ರಿಕೆಯ ಒಂದು ಪ್ರತಿ ಎಲ್ಲರಲ್ಲೂ ಮತ್ತಷ್ಟು ಕುತೂಹಲ ಕೆರಳಿಸುತ್ತದೆ. ನಗರದಲ್ಲಿ ಹೆಜ್ಜೆಹೆಜ್ಜೆಗೂ ಪೆÇಲೀಸ್ ಮತ್ತು ಸೇನೆಯ ಪಹರೆ ಹಾಕಲಾಗಿದೆ ಎಂಬ ಸುದ್ದಿ ಒಂದೆಡೆ ಅವರ ಚಿಂತೆಯನ್ನು ಹೆಚ್ಚಿಸಿದರೆ ಕ್ರಾಂತಿಯ ನಾಯಕರಾರೂ ಸೆರೆ ಸಿಕ್ಕಿಲ್ಲ ಅಥವಾ ಸಾವನ್ನಪ್ಪಿಲ್ಲ ಎಂಬುದು ನಿರಾಳಗೊಳಿಸುತ್ತದೆ.
ಕಾಡಿನಲ್ಲಿ ಊಟ ನೀರಿಲ್ಲದೆ ಸತತ ಅಲೆದಾಟ, ನಗರದಿಂದ ಸುದ್ದಿ ತರಲು ಹೋಗಿದ್ದ ಬಾಲಕರು ಹಿಂತಿರುಗದಿರುವುದು, ಹಾಗೂ ತನ್ನೊಂದಿಗಿರುವ ಯುವ ಸೈನಿಕರು ತಾಳ್ಮೆಗೆಡುತ್ತಿರುವುದನ್ನು ಕಂಡ ಮಾಸ್ತರ್ ದಾ ಏಪ್ರಿಲ್ 21ರಂದು ನಗರದ ಮೇಲೆ ದಾಳಿ ಮಾಡಲು ನಿರ್ಧರಿಸುತ್ತಾನೆ. ಮಾಸ್ತರ್ ದಾ ಸೇರಿದಂತೆ ಈಗ ಒಟ್ಟು ಐವತ್ತೆರಡು ಮಂದಿ ಇದ್ದಾರೆ. ತಲಾ ಹದಿನಾಲ್ಕು ಮಂದಿಯ ಮೂರು ಗುಂಪುಗಳು ಮತ್ತು ಹದಿಮೂರು ಮಂದಿಯ ಒಂದು ಗುಂಪು ಅಂದು ರಾತ್ರಿ ನಗರದಲ್ಲಿ ದಾಳಿ ಮಾಡಬೇಕು. ಎರಡು ಗುಂಪುಗಳು ಯೂರೋಪಿಯನ್ ಪಲ್ಟನ್ ಮೈದಾನದ ಕಡೆಯಿಂದ ನುಗ್ಗಿದರೆ ಮತ್ತೆರಡು ಗುಂಪುಗಳು ಪೆರೇಡ್ ಗ್ರೌಂಡ್ ಕಡೆಯಿಂದ ಮುನ್ನುಗ್ಗಬೇಕು. ಎರಡು ಗುಂಪುಗಳ ಗುರಿ ಸೆರೆಮನೆಯಾದರೆ ಎರಡು ಗುಂಪುಗಳು ಇಂಪೀರಿಯಲ್ ಬ್ಯಾಂಕನ್ನು ಆಕ್ರಮಿಸಬೇಕು. ತಮ್ಮ ಕಾರ್ಯಾಚರಣೆಯನ್ನು ಮುಗಿಸಿ ‘ಫೈರಿ ಹಿಲ್’ ಮೇಲೆ ಒಂದುಗೂಡಬೇಕು. ಅಲ್ಲಿಂದಲೇ ತಮ್ಮ ಅಂತ್ಯದವರೆಗಿನ ಹೋರಾಟವನ್ನು ಪೂರ್ಣಗೊಳಿಸಿ ದೇಶಕ್ಕೆ ಸ್ವಾತಂತ್ರ್ಯದ ಸಂದೇಶವನ್ನು ಸಾರಬೇಕು. ಇವಿಷ್ಟೂ ಅಂದು ಮಧ್ಯಾಹ್ನ ಮೂರು ಗಂಟೆಯ ವೇಳೆಗೆ ತೆಗೆದುಕೊಂಡ ನಿರ್ಣಯಗಳು.
ಅಮರೀಂದ್ರ ನಂದಿ ಸಂಜೆ ಏಳುಗಂಟೆಯೊಳಗೆ ಹಿಂತಿರುಗಬೇಕಿತ್ತು. ಆದರೆ ಅವನು ಬಾರದಿದ್ದಾಗ ಕ್ರಾಂತಿಸೇನೆ ತಾವಿರುವ ಗುಡ್ಡವನ್ನು ತೊರೆದು ಮುಂದೆ ಹೋಗುತ್ತಾರೆ. ಆದರೆ ರಾತ್ರಿ ಒಂಬತ್ತು ಗಂಟೆಗೆ ಹಿಂತಿರುಗಿದ ಅಮರೀಂದ್ರ ಯಾರನ್ನೂ ಕಾಣದೆ ನಿರಾಶನಾಗಿ ನಗರಕ್ಕೆ ಹಿಂತಿರುಗುತ್ತಾನೆ. 21ರಂದು ಅಂಬಿಕಾ ಚಕ್ರವರ್ತಿ ಫತೇಹಾಬಾದ್ ಹಳ್ಳಿಯಲ್ಲಿರುವ ತನ್ನ ಸಂಬಂಧಿಯೊಬ್ಬನ ಮನೆಯಲ್ಲಿ ಕಿಚಡಿ ಮಾಡಿಸಲು ಏರ್ಪಾಡು ಮಾಡುತ್ತಾನೆ. ಹೀಗೆ ಒಟ್ಟಾರೆ ನಗರದಿಂದ ಸುದ್ದಿ ತಿಳಿಯಲು ಕಳುಹಿಸಲ್ಪಟ್ಟ ನಾಲ್ವರನ್ನು ಕಳೆದುಕೊಂಡಂತಾಯಿತು. ಸಂಜೆಯ ವೇಳೆಗೆ ಕಿಚಡಿ ಬರುತ್ತದೆ.
ರಾತ್ರಿ ಒಂಬತ್ತು ಗಂಟೆಯಿಂದ ನಡೆಯುತ್ತಿರುವ ಹುಡುಗರು ಸೋತುಹೋಗಿದ್ದಾರೆ. ಒಂದೊಂದು ಹೆಜ್ಜೆಯನ್ನೂ ಕಷ್ಟಪಟ್ಟು ಮುಂದಿಡುತ್ತಿದ್ದಾರೆ. ಆಗಲೇ ಆಗಸದಲ್ಲಿ ಬೆಳಕು ಮೂಡಲು ಪ್ರಾರಂಭಿಸಿತ್ತು. ನಗರವನ್ನು ತಲಪುವುದು ಅಸಾಧ್ಯವೇ ಸರಿ. ಎದುರುಗಡೆ ಚಿಕ್ಕದೊಂದು ಗುಡ್ಡ ನಿಂತಿದೆ. ತಪ್ಪಲಿನಲ್ಲಿದ್ದ ಕೊಳದಿಂದ ಎಲ್ಲರೂ ನೀರನ್ನು ಕುಡಿದಾದ ಬಳಿಕ ಲೋಕನಾಥ ಬಾಲ್ ಗುಡ್ಡದತ್ತ ನಡೆಯುತ್ತಾನೆ. ಮರದ ಆಶ್ರಯವೇ ಇಲ್ಲದ ಆ ಗುಡ್ಡ ಆತನಿಗೆ ತೃಪ್ತಿಕರವಾಗಿ ಕಾಣಲಿಲ್ಲ. ಅದರಿಂದ ಅರ್ಧ ಮೈಲಿ ದೂರದಲ್ಲಿ ನೈಋತ್ಯದಿಂದ ಪೂರ್ವದೆಡೆಗೆ ರೈಲ್ವೇ ಹಳಿ ದಾಟಿ ಹೋಗಿದೆ. ಆಚೀಚೆ ಇದ್ದ ಎರಡು ಎತ್ತರದ ಗುಡ್ಡಗಳನ್ನು ಹತ್ತುವುದು ಉತ್ತಮವೆನಿಸಿದರೂ ಬೆಳಕು ಹರಿಯುತ್ತಿರುವಾಗ ಐವತ್ತೊಂದು ಮಂದಿ ಬಂದೂಕುಗಳನ್ನು ಹೊತ್ತು ಅತ್ತ ನಡೆಯುವುದು ಸುರಕ್ಷಿತವೆನಿಸಲಿಲ್ಲ. ದಾರಿಯಲ್ಲಿ ಕಂಡ ಹಣ್ಣಾಗದ ಕೆಲವು ಕಲ್ಲಂಗಡಿಗಳನ್ನು ಹೊತ್ತು ತಂದಿರುತ್ತಾರೆ. ಅವು ಎಲ್ಲರಿಗೂ ಸಾಕಾಗುವಷ್ಟಿರಲಿಲ್ಲ. ಇದ್ದಷ್ಟನ್ನೇ ಕತ್ತರಿಸಿ ಹಂಚಿ ತಿನ್ನಬೇಕು. ದಾಳಿಯನ್ನು ಮರುದಿನಕ್ಕೆ ಮುಂದೂಡಿದ ನಾಯಕರು ಜಾರ್ಜೈಲ-ಬರ್ತಾಲಿಯಿಂದ ಒಂದು ಮೈಲಿ ದೂರದ ಮತ್ತೊಂದು ಗುಡ್ಡವನ್ನು ಸೇರುತ್ತಾರೆ. ಅದುವೇ ಜಲಾಲಾಬಾದ್ ಗುಡ್ಡ.
ಕ್ರಾಂತಿಸೇನೆ ಬೀಡುಬಿಟ್ಟ ಜಲಾಲಾಬಾದ್ ಗುಡ್ಡ ಸುತ್ತಲೂ ಅದಕ್ಕಿಂತ ಎತ್ತರದ ಗುಡ್ಡಗಳಿಂದ ಆವೃತವಾಗಿದ್ದು, ದಟ್ಟ ಮರಗಳಿಲ್ಲದೆ ಕುರುಚಲು ಗಿಡಗಳು, ಚಿಕ್ಕಪುಟ್ಟ ಪೆÇದೆಗಳಿಂದ ಕೂಡಿದ ಪ್ರದೇಶ. ಸೋಮವಾರ 21ರಂದು ‘ಈಸ್ಟರ್ನ್ ಫ್ರಾಂಟಿಯರ್ ರೈಫಲ್ಸ್’ನ ಕರ್ನಲ್ ಡಲ್ಲಾಸ್ ಸ್ಮಿಥ್ ಹಾಗೂ ‘ಸುರ್ಮಾ ಕಣಿವೆ ಲಘು ಅಶ್ವದಳ’ ಕ್ಯಾಪ್ಟನ್ ರಾಬಿನ್ಸನ್ ತಲಾ ಒಂದೊಂದು ತುಕಡಿಯೊಂದಿಗೆ ಚಿತ್ತಗಾಂವ್ ತಲಪಿದ್ದಾರೆ. ಮಫ್ತಿಯಲ್ಲಿರುವ ಪೆÇಲೀಸರು ಮತ್ತು ಗೂಢಚಾರರು ಸಂಗ್ರಹಿಸಿದ ಮಾಹಿತಿಯಂತೆ ಕ್ರಾಂತಿಕಾರಿಗಳು ಚಿತ್ತಗಾಂವ್-ಹಾಥಜಾರಿ ಮಾರ್ಗದಲ್ಲಿ ನಗರದಿಂದ ಐದು ಮೈಲಿ ದೂರದಲ್ಲಿರುವ ಚೌಧರಿ ಹಾಟ್ ಪ್ರದೇಶದಲ್ಲಿರುವ ಜಾರ್ಜೈಲ-ಬರ್ತಾಲಿ ಗುಡ್ಡಗಳ ಸುತ್ತಮುತ್ತ ಇರುವುದಾಗಿ ತಿಳಿದುಬಂದಿದೆ.
ಏಪ್ರಿಲ್ 22ರ ಬೆಳಗ್ಗೆ ಹನ್ನೊಂದು ಗಂಟೆಯ ಸಮಯ. ಸುಡುವ ಬಿಸಿಲು. ನೆರಳು ನೀಡುವ ಮರಗಳಿಲ್ಲ, ಕುಡಿಯುವ ನೀರಿನ ಒಂದು ಹೊಂಡವೂ ಕಾಣುತ್ತಿಲ್ಲ. ಕೆಲವರು ಕುಳಿತು ಹಿಂದಿನ ದಿನದ ಮಿಕ್ಕ ಕಿಚಡಿಯನ್ನು ತಿನ್ನುತ್ತಿದ್ದಾರೆ. ಬೆಳಗ್ಗಿನಿಂದ ಕಾವಲು ಕಾಯುತ್ತಿರುವವರು ಈಗ ಬದಲಾಗುತ್ತಾರೆ. ಹೊಸ ಗುಂಪು ಕಾವಲು ಕಾಯಲು ನಿಲ್ಲುತ್ತದೆ. ಮಾಸ್ತರ್ದಾ ಮತ್ತು ನಿರ್ಮಲ್ ಸೇನ್ ಕುಳಿತಿರುವ ದಿಕ್ಕಿನಲ್ಲಿ ನೋಡುತ್ತಾನೆ ಸುರೇಶ್. ಅವರಿಬ್ಬರೂ ಹುಡುಗರು ತಮ್ಮ ಪಾಲಿನ ಕಲ್ಲಂಗಡಿಯನ್ನು ಕಚ್ಚಿ ತಿಂದು ಎಸೆದ ಸಿಪ್ಪೆಗಳನ್ನು ತಿನ್ನುತ್ತಿದ್ದಾರೆ. ಅವರ ಪಾಲಿಗೆ ಕಾಯಿಯ ಒಂದು ತುಣುಕೂ ಸಿಕ್ಕಿರಲಿಲ್ಲ. ಕಂಡೂ ಕಾಣದವನಂತೆ ಸುರೇಶ್ ತನ್ನ ದೃಷ್ಟಿಯನ್ನು ಬದಲಿಸುತ್ತಾನೆ. ‘ನಿರ್ಮಲ್ ದಾ ಮತ್ತು ಮಾಸ್ತರ್ ದಾ ನಾವು ತಿಂದು ಎಸೆದಿದ್ದ ಕಲ್ಲಂಗಡಿಯ ಹಸಿರುಸಿಪ್ಪೆಯನ್ನು ಎತ್ತಿ ತಮ್ಮ ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಿದ್ದರು. ಇಂದಿಗೂ ಈ ದೃಶ್ಯ ನನ್ನ ಕಣ್ಣ ಮುಂದೆ ಕಟ್ಟಿದಂತಿದೆ.
ಸಾಯುವವರೆಗೆ ಮರೆಯಲಾಗದ ದೃಶ್ಯ ಅದು! ಈ ಸ್ವಾರ್ಥರಹಿತ ನಾಯಕರು ತಮ್ಮ ಯುವ ಕಾರ್ಯಕರ್ತರಿಗಾಗಿ ಮಾಡಿದ ತ್ಯಾಗ ಮತ್ತು ಬಲಿದಾನ ಇನ್ನೂ ಹಸಿರಾಗಿ ಉಳಿದಿದೆ’ ಎಂದು ಸುಬೋಧ್ ರಾಯ್ ದಾಖಲಿಸುತ್ತಾನೆ.
ಹಿಂದಿನ ದಿನದಂತೆ ಇಂದೂ ಇಬ್ಬರು ಸೌದೆ ಒಯ್ಯಲು ಬಂದವರೆಂದು ಹೇಳಿಕೊಳ್ಳುವ ವ್ಯಕ್ತಿಗಳು ಕಾವಲು ಕಾಯುತ್ತಿರುವವರ ಕಣ್ಣಿಗೆ ಬೀಳುತ್ತಾರೆ. ಅವರನ್ನು ಹಿಡಿದು ಚೆನ್ನಾಗಿ ತದಕಿದಾಗ ಅವರು ಎದ್ದು ಬಿದ್ದು ಓಡಿಹೋಗುತ್ತಾರೆ. ಈ ಸಂಗತಿ ಕೇಳಿದ ಮಾಸ್ತರ್ ದಾ ಮೊದಲಾದವರು ಚಿಂತಾಕ್ರಾಂತರಾದರು. ಹಿಂದಿನ ದಿನ ಬಂದವರು ಮಧ್ಯಾಹ್ನದ ವೇಳೆಯಲ್ಲಿ ಕಾಣಿಸಿಕೊಂಡಿದ್ದರು. ಅವರಿಗೆ ಪೆÇಲೀಸರಿಗೆ ಸುದ್ದಿ ತಲಪಿಸುವಷ್ಟು ಸಮಯವಿರಲಿಲ್ಲ. ಏಕೆಂದರೆ ಅಷ್ಟರಲ್ಲಿ ಎಲ್ಲರೂ ಆ ಗುಡ್ಡವನ್ನು ತ್ಯಜಿಸುವವರಾಗಿದ್ದರು. ಆದರೆ ಇಂದು ಇಬ್ಬರು ಬೆಳಗಿನ ಸಮಯದಲ್ಲೇ ತಮ್ಮನ್ನು ಕಂಡಿದ್ದಾರೆ. ಅವರು ಪೆÇಲೀಸರಿಗೆ ಸುದ್ದಿ ತಲಪಿಸಲು ಸಾಕಷ್ಟು ಸಮಯವಿದೆ.
ತುರ್ತುಪರಿಸ್ಥಿತಿಯನ್ನೆದುರಿಸಲು ಎಲ್ಲರೂ ತಮ್ಮ ತಮ್ಮ ಬಂದೂಕುಗಳನ್ನು ಮತ್ತೆ ಸ್ವಚ್ಛಗೊಳಿಸಿ ಎಲ್ಲವೂ ಸಮರ್ಪಕವಾಗಿ ಕೆಲಸ ಮಾಡುತ್ತಿವೆ ಎಂದು ದೃಢಪಡಿಸಿಕೊಳ್ಳುತ್ತಾರೆ. ಅಂತಿಮಕ್ಷಣ ಎಲ್ಲಿ ಬರಲಿದೆ –
ಇಲ್ಲಿಯೇ ಅಥವಾ ಚಿತ್ತಗಾಂವ್ನಲ್ಲಿಯೇ? ಲೋಕನಾಥ್ ದಾ ಎಲ್ಲರನ್ನೂ ಸುತ್ತ ಕೂರಿಸಿ ತಮ್ಮ ಅಂತಿಮ ಹೋರಾಟದ ಮಹತ್ತ್ವವನ್ನು ವಿವರಿಸುತ್ತಿದ್ದಾನೆ. ಅಷ್ಟರಲ್ಲಿ ಕಾವಲು ಕಾಯುತ್ತಿದ್ದ ಸುಬೋಧ್ ರಾಯ್ ಮತ್ತು ಮನೋರಂಜನ್ ಎದುರುಗಡೆಯ ಗುಡ್ಡದ ಮೇಲಿಂದ ಒಬ್ಬ ವ್ಯಕ್ತಿ ಬಟ್ಟೆಯೊಂದನ್ನು ಆಡಿಸುತ್ತಿದ್ದುದನ್ನು ಕಂಡಿದ್ದಾಗಿ ವರದಿ ಮಾಡುತ್ತಾರೆ. ಆಗ ಮಧ್ಯಾಹ್ನ ಸುಮಾರು ಎರಡು ಗಂಟೆಯ ಸಮಯವಾಗಿತ್ತು.
ಮಧ್ಯಾಹ್ನ ನಾಲ್ಕೂವರೆ ಗಂಟೆಯ ಸಮಯ. ಎಲ್ಲರನ್ನೂ ಎಂಟು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಒಂದೊಂದು ಗುಂಪಿಗೂ ಒಬ್ಬೊಬ್ಬ ನಾಯಕ. ಆತನ ನೇತೃತ್ವದಲ್ಲಿ ಗುಂಪುಗಳು ಕಾರ್ಯ ನಿರ್ವಹಿಸಲಿವೆ. ಮೊದಲೆರಡು ಗುಂಪುಗಳು ಮುಂಚೂಣಿಯಲ್ಲಿದ್ದರೆ ಮೂರು ಮತ್ತು ನಾಲ್ಕನೆಯ ಗುಂಪುಗಳು ಅವುಗಳ ಸಹಾಯಕ್ಕಾಗಿ ನಿಂತಿವೆ. ಗುಡ್ಡದ ಮೇಲೆ ಅವರಿಗಿಂತಲೂ ಎತ್ತರದ ಸ್ಥಳದಲ್ಲಿ ಐದು ಮತ್ತು ಆರನೆಯ ಗುಂಪುಗಳಿದ್ದು ಅವು ಸುತ್ತಲೂ ನಿಗಾ ಇಟ್ಟು ನೋಡುತ್ತಿರಬೇಕು. ಮಿಕ್ಕ ಎರಡು ಗುಂಪುಗಳು ಗುಡ್ಡದ ತಲೆಯ ಮೇಲಿದ್ದು ನಾಲ್ಕೂ ದಿಕ್ಕಿನಲ್ಲಿ ತಮ್ಮ ದೃಷ್ಟಿಯನ್ನಿಟ್ಟು ಕಾಯುತ್ತಿವೆ. ಶತ್ರುವಿನ ಆಕ್ರಮಣ ನಡೆದ ದಿಕ್ಕಿಗೆ ಅವು ತಕ್ಷಣದಲ್ಲಿ ಧಾವಿಸಬೇಕು. ಅಷ್ಟರಲ್ಲಿ ಗುಡ್ಡದ ಪಕ್ಕದಲ್ಲೇ ರೈಲೊಂದು ಚಲಿಸುವ ಸದ್ದು ಕೇಳಿಬರುತ್ತದೆ. ಎತ್ತರದ ಮರಗಳನ್ನೂ ದಾಟಿದ ದಟ್ಟವಾದ ಕಪ್ಪು ಹೊಗೆ ಆಗಸದಲ್ಲಿ ಕಾಣಿಸಿಕೊಳ್ಳುತ್ತದೆ. ಇಂಜಿನ್ನಿಗೆ ಬ್ರೇಕ್ ಹಾಕಿದ ಕ್ರೀಚ್ ಎಂಬ ಸದ್ದು. ಆದರೆ ಅಲ್ಲೆಲ್ಲೂ ರೈಲ್ವೆ ನಿಲ್ದಾಣವಿರಲಿಲ್ಲ. ಹತ್ತಿರದ ನಿಲ್ದಾಣವೆಂದರೆ ಎರಡೂವರೆ ಮೈಲಿ ದೂರದ ಚೌಧರಿ ಹಾಟ್ ಮಾತ್ರ. ಎಲ್ಲರಿಗೂ ಇದರ ಅರ್ಥ ನಿಚ್ಚಳವಾಯಿತು. ಸುಮಾರು ಐದು ಗಂಟೆಯ ಸಮಯ! ಆತ್ಮಾಹುತಿಯ ಸಮಯ ಬಂದಿದೆ.
ಗುಡ್ಡಗಳ ಮೇಲಿನ ಈ ಸುದೀರ್ಘ ‘ಪಿಕ್ನಿಕ್’ಗೆ ಬೇರಾವುದೇ ರೀತಿಯ ಅಂತ್ಯವಿರುವ ಸಾಧ್ಯತೆಯಿರಲಿಲ್ಲ. ಮಾಸ್ತರ್ ದಾ ಈ ಕಾರ್ಯಾಚರಣೆಯ ಸಾರಥ್ಯವನ್ನು ಲೋಕನಾಥ್ ಬಾಲ್ಗೆ ವಹಿಸುತ್ತಾನೆ. ಲೋಕನಾಥ್ ಬಾಲ್, ಮಾಸ್ತರ್ ದಾ, ಅಂಬಿಕಾ ದತ್ತ ಮತ್ತು ನಿರ್ಮಲ್ ಸೇನ್ ಬೆಟ್ಟದ ತಲೆಯ ಮೇಲಿನಿಂದ ನಿಗಾವಣೆಗಾಗಿ ನಿಲ್ಲುತ್ತಾರೆ. ಎಲ್ಲರ ಕಣ್ಣುಗಳು ಬೆಟ್ಟದ ತಪ್ಪಲಿನತ್ತ ನೆಟ್ಟಿವೆ. ದೂರದ ಭತ್ತದ ಗದ್ದೆಯಲ್ಲಿ ಸೈನಿಕರ ಓಡಾಟ ಕಾಣುತ್ತದೆ. ಮಾಸ್ತರ್ ದಾ ‘ಇಂದು ಜಲಾಲಾಬಾದ್ ಯಾವುದೇ ವಜ್ರದ ಗಣಿಗಿಂತ ಕಡಮೆಯಲ್ಲ’ ಎಂದು ನುಡಿಯುತ್ತಾನೆ. ಭತ್ತದ ಗದ್ದೆಯನ್ನು ಕ್ರಮಿಸಿದ ಸೈನಿಕರ ತಂಡ ಗುಡ್ಡದ ತಪ್ಪಲಿನ ಕಾಡಿನಲ್ಲಿ ಕಣ್ಮರೆಯಾಯಿತು. ಎತ್ತರದಲ್ಲಿದ್ದ ರಜತ್ ‘ಅವರು ಹತ್ತಿ ಬರುತ್ತಿದ್ದಾರೆ’ ಎಂದು ಕೂಗಿದ. ಸಮವಸ್ತ್ರ ಮತ್ತು ಶಿರಸ್ತ್ರಾಣಗಳಿಗೆ ಮರದ ಟೊಂಗೆ ಮತ್ತು ಎಲೆಗಳನ್ನು ಸಿಕ್ಕಿಸಿಕೊಂಡು ಕುಳ್ಳಗೆ, ದಪ್ಪ ಮೈಕಟ್ಟಿನ ಗೂರ್ಖಾ ರೆಜಿಮೆಂಟ್ನ ಸೈನಿಕರ ತಂಡ ಪೆÇದೆಗಳ ಹಿಂದೆ ಅವಿತುಕೊಳ್ಳುತ್ತ ಮೇಲೆ ಹತ್ತುತ್ತಿರುವುದು ಕಂಡುಬಂದಿತು. ಅವರು ಗುಡ್ಡದ ಪೂರ್ವಭಾಗವನ್ನು ಸಂಪೂರ್ಣವಾಗಿ ಸುತ್ತುವರಿದಿರುವುದನ್ನು ಲೋಕನಾಥ್ ಬಾಲ್ ಗಮನಿಸುತ್ತಾನೆ. ಲೋಕನಾಥ್ ಬಾಲ್ನ ಆದೇಶ ಹೊರಬೀಳುತ್ತದೆ. ‘ಎಲ್ಲರೂ ನಿಮ್ಮ ನಿಮ್ಮ ಜಾಗಗಳಲ್ಲಿ ಸನ್ನದ್ಧರಾಗಿ ದೂರ ದೂರ ಹರಡಿ ಮಲಗಿ. ಆಜ್ಞೆ ನೀಡುವವರೆಗೆ ಗುಂಡುಗಳನ್ನು ಹಾರಿಸಬೇಡಿ.’
ಏಪ್ರಿಲ್ 22, ಸಂಜೆ 5.30ರ ಸಮಯ. ‘ಅರ್ಧದವರೆಗೆ ಹತ್ತಿದ್ದಾರೆ’ ನರೇಶ್ ಮೆಲುದನಿಯಲ್ಲಿ ಉಸುರುತ್ತಾನೆ. ಅವರೆಲ್ಲರ ಬೆರಳುಗಳು ಬಂದೂಕಿನ ಕುದುರೆಯನ್ನು ಹಿಡಿದಿವೆ. ಲೋಕನಾಥ್ ಬಾಲ್ ಒಮ್ಮೆಲೇ ಗರ್ಜಿಸಿದ ‘ಫೈರ್’. ಬಂದೂಕುಗಳು ಗುಂಡಿನ ಸುರಿಮಳೆಯನ್ನು ಪ್ರಾರಂಭಿಸಿದವು. ಅನಿರೀಕ್ಷಿತ ದಾಳಿಗೆ ತತ್ತರಿಸಿದ ಗೂರ್ಖಾ ಸೈನಿಕರಲ್ಲಿ ಅನೇಕರು ಕೆಳಗುರುಳಿದರೆ ಹಲವರು ನಿಂತಲ್ಲೇ ಕುಸಿದುಬೀಳುತ್ತಾರೆ. ಮಿಕ್ಕವರೆಲ್ಲ ಹಿಂದಕ್ಕೋಡುತ್ತಾರೆ. ಉತ್ಸಾಹದಿಂದ ಯುವಕರು ‘ವಂದೇ ಮಾತರಂ’ ಎಂದು ಜಯಘೋಷ ಕೂಗಿದ್ದುದು ಇಡೀ ಗುಡ್ಡದ ಮೇಲೆ ಪ್ರತಿಧ್ವನಿಸಿತು. ಕೆಳಗೆ ನಾಲೆಯ ಹತ್ತಿರ ಬ್ಯೂಗಲ್ ಊದುವುದು ಕೇಳಿಬಂದಾಗ ಎಲ್ಲರೂ ಅತ್ತ ನೋಡುತ್ತಾರೆ. ಮೂವರು ಬ್ರಿಟಿಷ್ ಅಧಿಕಾರಿಗಳೊಂದಿಗೆ ಮೊದಲಿಗಿಂತಲೂ ಹೆಚ್ಚಿನ ಸೈನಿಕರು ಮತ್ತೊಮ್ಮೆ ಆಕ್ರಮಣಕ್ಕೆ ಸಜ್ಜಾಗುತ್ತಿದ್ದಾರೆ. ಇಡೀ ಒಂದು ಕಂಪೆನಿ ಬ್ಯೂಗಲ್ ಮತ್ತು ಡ್ರಮ್ನ ಸದ್ದಿಗೆ ಹೆಜ್ಜೆಹಾಕುತ್ತ ಮುನ್ನಡೆಯತೊಡಗಿತು. ನಾಲೆಯ ಕಡೆಯಿಂದ ಅವರಿಗೆ ರಕ್ಷಣಾತ್ಮಕವಾಗಿ ಗುಂಡುಗಳನ್ನು ಹಾರಿಸಲಾಗುತ್ತಿದೆ. ಶತ್ರುಗಳು ತಮ್ಮ ಬಂದೂಕುಗಳ ವ್ಯಾಪ್ತಿಗೆ ಬರುವವರೆಗೂ ಕಾಯುತ್ತಿದ್ದ ಲೋಕನಾಥ್ ಬಾಲ್ ಮತ್ತೊಮ್ಮೆ ಕೂಗುತ್ತಾನೆ – ‘ಫೈರ್, ಲೋಡ್, ಫೈರ್’ – ಕ್ರಾಂತಿಕಾರಿಗಳ ಗ್ರೆನೇಡ್ಗಳು ಬರಸಿಡಿಲಿನಂತೆ ಸಿಡಿಯತೊಡಗಿದವು. ಪ್ರತಿದಾಳಿಯನ್ನು ಎದುರಿಸಲಾಗದ ಗೂರ್ಖಾ ಸೈನಿಕರು ಎರಡನೆಯ ಬಾರಿಯೂ ಹಿಮ್ಮೆಟ್ಟುತ್ತಾರೆ. ಮಾಸ್ತರ್ ದಾ ‘ವಂದೇ ಮಾತರಂ’ ಎಂದು ಕೂಗಿದಾಗ ಎಲ್ಲರೂ ದನಿಗೂಡಿಸುತ್ತಾರೆ.
ಸಂಜೆ 6.30ರ ಸಮಯ. ನಾಲೆಯ ಬಳಿ ಮತ್ತೊಮ್ಮೆ ಬ್ಯೂಗಲ್ ಊದಿದ ಸದ್ದು. ಕೆಳಗೆ ನಿಂತಿದ್ದ ಸೈನಿಕರು ಕೆಲವು ಸುತ್ತು ಗುಂಡುಗಳನ್ನು ಹಾರಿಸುತ್ತಾರೆ. ಅವರ ರೈಫಲ್ನ ಹೊಗೆ ಕಾಣಿಸಿದ ಕಡೆ ಕ್ರಾಂತಿಕಾರಿಗಳು ಗುಂಡುಗಳನ್ನು ಹಾರಿಸಿದರು. ಬ್ರಿಟಿಷರಿಗೆ ಬೇಕಾಗಿದ್ದುದೂ ಅಷ್ಟೆ! ಕ್ರಾಂತಿಕಾರಿಗಳ ಬಂದೂಕಿನ ಕಪ್ಪುಹೊಗೆ ಅವರಿರುವ ತಾಣವನ್ನು ತೋರಿಸಿಕೊಟ್ಟಿದೆ. ತಕ್ಷಣ ಆಗ್ನೇಯ ದಿಕ್ಕಿನ ಎತ್ತರದ ಗುಡ್ಡದ ಮೇಲಿದ್ದ ಮಶೀನ್ಗನ್ ಗುಂಡನ್ನು ಹಾರಿಸಲು ಪ್ರಾರಂಭಿಸಿತು. ‘ಶತ್ರು ಆಗ್ನೇಯ ದಿಕ್ಕಿನಲ್ಲಿದ್ದಾನೆ. ಹತ್ತು ಸುತ್ತು ಗುಂಡುಗಳನ್ನು ಹಾರಿಸಿ’ ಎಂದು ಲೋಕನಾಥ್ ಬಾಲ್ ಆದೇಶಿಸಿದ. 20-25 ಬಂದೂಕುಗಳು ಗುಂಡುಗಳನ್ನು ಹಾರಿಸುತ್ತಿದ್ದಂತೆ ಅವರಿರುವ ತಾಣದತ್ತ ಮಶೀನ್ಗನ್ ಗುಂಡುಗಳ ಸುರಿಮಳೆಯನ್ನೇ ಸುರಿಸತೊಡಗಿತು. ಈಶಾನ್ಯದಿಂದ ಮತ್ತೊಂದು ಮಶೀನ್ಗನ್ ಕಾರ್ಯಾರಂಭಮಾಡುತ್ತದೆ. ಒಂದು ನಿಮಿಷಕ್ಕೆ 250 ಗುಂಡುಗಳನ್ನು ಹಾರಿಸುವ ಸಾಮಥ್ರ್ಯವಿರುವ ಗನ್! ನಾಲೆಯ ಬಳಿಯಿಂದ ಮೂರನೆಯ ಮಶೀನ್ಗನ್ ಭೋರ್ಗರೆಯುತ್ತಿದೆ. ‘ಯಾರೂ ಅಲುಗಾಡಬೇಡಿ, ತಲೆ ಎತ್ತಬೇಡಿ. ಗುಂಡು ನಿಮಗೆ ತಗಲುವುದಿಲ್ಲ’ – ಲೋಕನಾಥ್ನ ಸೂಚನೆ.
ಕ್ರಾಂತಿಕಾರಿಗಳ ಬಂದೂಕುಗಳನ್ನು ದೀರ್ಘಕಾಲ ಬಳಸಿದಲ್ಲಿ ಬಿಸಿಯಾದ ಬಂದೂಕಿನ ನಳಿಕೆಯಲ್ಲಿ ಗುಂಡಿನ ಹೊರಕವಚ ಸಿಕ್ಕಿಕೊಳ್ಳುತ್ತಿತ್ತು. ಅದನ್ನು ಬಂದೂಕಿನ ಜೊತೆಯಲ್ಲಿರುವ ಒಂದು ಕಬ್ಬಿಣದ ಕಂಬಿಯಿಂದ ಚುಚ್ಚಿ ಹೊರಗೆಳೆಯಬೇಕು. ಜೀವನ್ಮರಣದ ಈ ಹೋರಾಟದಲ್ಲಿ ಹತ್ತು-ಹನ್ನೆರಡು ಗುಂಡುಗಳನ್ನು ಹಾರಿಸುತ್ತಿದ್ದಂತೆ ನಳಿಕೆಗಳಲ್ಲಿ ಗುಂಡಿನ ಕವಚಗಳು ಸಿಕ್ಕಿಕೊಳ್ಳಲಾರಂಭಿಸಿದವು. ಆದರೆ ಶತ್ರುಗಳು ಎಡೆಬಿಡದೆ ಗುಂಡುಗಳನ್ನು ಹಾರಿಸುತ್ತಿದ್ದಾರೆ. ಅಷ್ಟರಲ್ಲಿ ಸೂರ್ಯ ಸೇನ್ ಮತ್ತು ನಿರ್ಮಲ್ ಸೇನ್ ತೆವಳುತ್ತ ಬಂದು ಬಂದೂಕುಗಳಲ್ಲಿ ಸಿಕ್ಕಿಕೊಂಡಿರುವ ಗುಂಡುಗಳ ಕವಚಗಳನ್ನು ಹೊರಹಾಕಿ ಅವುಗಳನ್ನು ಬಳಕೆಗೆ ಯೋಗ್ಯವನ್ನಾಗಿ ಮಾಡತೊಡಗಿದರು.
ಇತ್ತ ರಣೋತ್ಸಾಹದಲ್ಲಿ ಎಲ್ಲರ ಅಚ್ಚುಮೆಚ್ಚಿನ ಬಾಲಕ ‘ಟೇಗ್ರಾ’ ಹರಿಗೋಪಾಲ ಬಾಲ್ ಎದ್ದುನಿಂತು ಗುರಿಹಿಡಿಯುತ್ತಾನೆ. ಒಂದೇ ಕ್ಷಣ! ಮಶೀನ್ಗನ್ ಗುಂಡುಗಳು ಅವನನ್ನು ಅಪ್ಪಳಿಸುತ್ತವೆ. ‘ಅಣ್ಣಾ. ನನಗೆ ಗುಂಡು ತಗಲಿದೆ. ನಾನು ಹೊರಟೆ, ನೀವೆಲ್ಲರೂ ಹೋರಾಟ ಮಾಡಿ’ ಎಂದು ತನ್ನ ಹಿರಿಯಣ್ಣ ಲೋಕನಾಥ್ ಬಾಲ್ಗೆ ಕೂಗಿ ಹೇಳುವ ಟೇಗ್ರಾ ಜಲಾಲಾಬಾದ್ನ ಮೊದಲ ಹುತಾತ್ಮನಾದ. ‘ಟೇಗ್ರಾ ಅಮರನಾಗಲಿ, ಕ್ರಾಂತಿ ಚಿರಾಯುವಾಗಲಿ’ – ಕ್ರಾಂತಿಕಾರಿಗಳು ಕೂಗುತ್ತಿದ್ದಂತೆ ಟೇಗ್ರಾ ಅನಂತದಲ್ಲಿ ಲೀನನಾದ. ಮುಂದಿನ ಬಲಿ ತ್ರಿಪುರ ಸೇನ್, ನರೇಶ್ ರಾಯ್, ಆತನಾಗುತ್ತಿದ್ದಂತೆ ಬಿಧು ಭಟ್ಟಾಚಾರ್ಯ, ಆನಂತರ ಪ್ರಭಾಸ್ ಬಾಲ್. ಹೀಗೆ ಒಬ್ಬರ ನಂತರ ಒಬ್ಬರಂತೆ 15-20 ನಿಮಿಷಗಳಲ್ಲಿ ‘ಚಿತ್ತಗಾಂವ್ ಶಸ್ತ್ರಾಗಾರ ದಾಳಿ’ಯ ಹುತಾತ್ಮರ ಸಂಖ್ಯೆ ಏರತೊಡಗಿತು.
ಗುಂಡಿನ ದಾಳಿ ನಿಂತಿದೆ. ಹೋರಾಟ ಪ್ರಾರಂಭಗೊಂಡು ಎರಡು ತಾಸುಗಳು ಕಳೆದಿವೆ. ಕತ್ತಲು ಆವರಿಸುತ್ತಿದೆ. ಲೋಕನಾಥ್ ಬಾಲ್ ಎಚ್ಚರಿಕೆಯಿಂದ ಶತ್ರುವಿನ ಮುಂದಿನ ನಡೆಯನ್ನು ಗಮನಿಸಲು ಪ್ರಯತ್ನಿಸುತ್ತಿದ್ದಾನೆ. ಮಬ್ಬುಗತ್ತಲಿನಲ್ಲಿ ಆಕೃತಿಗಳು ಅಸ್ಪಷ್ಟವಾಗುತ್ತವೆ. ಇದ್ದಕ್ಕಿದ್ದಂತೆ ಬ್ಯೂಗಲ್ ಸದ್ದು. ಶತ್ರು ಹಿಮ್ಮೆಟ್ಟುತ್ತಿದ್ದಾನೆ! ರೈಲು ಉಗಿಯನ್ನು ಬಿಡುತ್ತ ಹೊರಟಾಗ ಆಶ್ಚರ್ಯಚಕಿತನಾದ ಲೋಕನಾಥ್ ಬಾಲ್ ಕಿವಿಗಳನ್ನು ನಂಬಲಿಲ್ಲ. ಬಾಲಕರೆಲ್ಲರೂ ‘ವಂದೇ ಮಾತರಂ’, ‘ಕ್ರಾಂತಿಯು ಚಿರಾಯುವಾಗಲಿ’, ‘ಸಾಮ್ರಾಜ್ಯಶಾಹಿ ನಾಶವಾಗಲಿ’ ಎಂದು ಎದ್ದೆದ್ದು ಕುಣಿಯತೊಡಗಿದರು. ಕ್ಷಣಿಕವಾದ ಈ ಆನಂದ, ಸಂಭ್ರ,ಮದಲ್ಲಿ ಆತುರದಿಂದ ಎದ್ದು ನಿಂತವರಿಗೆ ಈಶಾನ್ಯದಲ್ಲಿದ್ದ ನಿಮಿಷಕ್ಕೆ 350 ಗುಂಡುಗಳನ್ನು ಹಾರಿಸುವ ‘ವಿಕರ್ಸ್’ ಮಶೀನ್ಗನ್ ಬುಸುಗುಡುತ್ತ ಕಚ್ಚತೊಡಗಿತು. ಹದಿನಾಲ್ಕು ವರ್ಷದ ಬಾಲಕ, ಎಲ್ಲರಿಗಿಂತಲೂ ಕಿರಿಯ ಕ್ರಾಂತಿಕಾರಿ, ನಿರ್ಮಲ್ ಲಾಲ ‘ನನಗೆ ಗುಂಡು ತಗಲಿದೆ’ ಎಂದು ಅರಚುತ್ತಾನೆ. ಎಲ್ಲರೂ ತಮ್ಮ ಬಂದೂಕುಗಳನ್ನು ಈಶಾನ್ಯ ದಿಕ್ಕಿನ ಕಡೆ ತಿರುಗಿಸಿ ಗುಂಡಿನ ಸುರಿಮಳೆಗೆ ಮುಂದಾಗುತ್ತಾರೆ. ಗುಂಡು ಬಿನೋದ್ ಬಿಹಾರಿ ದತ್ತನ ಹೆಗಲಿಗೆ ತಗಲಿದರೆ ಮತ್ತೊಂದು ಅಂಬಿಕಾ ಚಕ್ರವರ್ತಿಯ ಹಣೆಗೆ ಬಡಿಯುತ್ತದೆ. ಅರ್ಧೇಂದುವಿನ ಹೊಟ್ಟೆ ಸೀಳಿ ಕರುಳು ಹೊರಬಿದ್ದಿದೆ. ಆದರೂ ಅವನು ಸತ್ತಿಲ್ಲ, ಪುಲಿನ್ ಘೋಷ್ ಸಾಯುವ ಮುನ್ನ ತನ್ನ ಕೈಯಲ್ಲಿರುವ ಮಾವಿನಕಾಯಿಯನ್ನು ಲೋಕನಾಥ್ನತ್ತ ಚಾಚುತ್ತಿದ್ದಾನೆ. ಮಶೀನ್ಗನ್ನ ಗುಂಡಿನ ಬೆಲ್ಟನ್ನು ಬದಲಾಯಿಸುತ್ತಿದ್ದಾರೆ. ಒಂದೆರಡು ಕ್ಷಣ ಮೌನ. ಗಾಯಗೊಂಡ ಮೋತಿಲಾಲ್ ಕನುಂಗೊ ಪ್ರಜ್ಞಾಹೀನನಾದರೂ ಉಸಿರಾಡುತ್ತಿದ್ದಾನೆ. ಪಕ್ಕದಲ್ಲೇ ಕುಳಿತಿರುವ ಸುಬೋಧ್ ರಾಯ್ ಅವನಿಗೆ ನೀರನ್ನು ಕುಡಿಸುತ್ತಾನೆ.
ಬ್ರಿಟಿಷ್ ಸೇನೆ ಕೊನೆಗೂ ಹಿಂದಕ್ಕೆ ಹೋಗಿದೆ. ನಾಯಕರು ಟಾರ್ಚ್ ಹಿಡಿದು ಬಿದ್ದಿರುವವರನ್ನೆಲ್ಲ ಮುಟ್ಟಿ ನೋಡತೊಡಗುತ್ತಾರೆ. ಶಶಾಂಕ ಮೋಹನ್ ದತ್ತ, ಜಿತೇಂದ್ರ ದಾಸ್ ಗುಪ್ತ, ಮಧುಸೂದನ್ ದತ್ತ ಎಲ್ಲರೂ ಹುತಾತ್ಮ ಸೋಪಾನದಲ್ಲಿ ಮಲಗಿದ್ದಾರೆ. ಮಾಸ್ತರ್ ದಾ ಮತ್ತು ಲೋಕನಾಥ್ ಬಾಲ್ ಎಲ್ಲರನ್ನು ಮುಟ್ಟಿ ಅವರ ಬಳಿಯಿಂದ ಬಂದೂಕು ಮತ್ತು ಮದ್ದುಗುಂಡುಗಳನ್ನು ಹೆಕ್ಕಿ ತೆಗೆಯುತ್ತಾನೆ. ಮಾಟಿಲಾಲ್ ಕನುಂಗೊ, ಅರ್ಧೇಂದು ದಸ್ತಿದಾರ್ ಮತ್ತು ಅಂಬಿಕಾ ಚಕ್ರವರ್ತಿ ತೀವ್ರವಾಗಿ ಗಾಯಗೊಂಡಿದ್ದರೂ ಇನ್ನೂ ಪ್ರಾಣ ಹಿಡಿದುಕೊಂಡಿದ್ದಾರೆ. ಮಾಸ್ತರ್ ದಾ ಬಳಿ ಬಂದಾಗ ಅಂಬಿಕಾ ತನ್ನ ಬಳಿಯಿದ್ದ ಹಣವನ್ನು ಆತನಿಗೆ ನೀಡಿ ಬದುಕಿರುವವರನ್ನು ಕರೆದುಕೊಂಡು ಗುಡ್ಡದಿಂದ ನಿರ್ಗಮಿಸುವಂತೆ ಕೋರುತ್ತಾನೆ. ಎಲ್ಲರೂ ಸಾಲಾಗಿ ನಿಂತು ಹುತಾತ್ಮರಾದ ಸಂಗಾತಿಗಳಿಗೆ ಅಶ್ರುತರ್ಪಣ ನೀಡುತ್ತಾರೆ. ಒಕ್ಕೊರಳಿನಿಂದ ‘ಕ್ರಾಂತಿಯ ಹುತಾತ್ಮರು ಚಿರಾಯುವಾಗಲಿ’, ‘ಕ್ರಾಂತಿ ಸದಾ ಬೆಳಗಲಿ’, ‘ವಂದೇ ಮಾತರಂ’ ಘೋಷಿಸಿ ಗಾಯಗೊಂಡಿದ್ದ ಬಿನೋದ್ ಬಿಹಾರಿ ಚೌಧರಿಯನ್ನು ಜೊತೆಯಲ್ಲಿ ಕರೆದುಕೊಂಡು ಗುಡ್ಡದಿಂದ ನಿರ್ಗಮಿಸಲು ಪ್ರಾರಂಭಿಸುತ್ತಾರೆ.
ಅಂಬಿಕಾ ಚಕ್ರವರ್ತಿ ಮತ್ತು ಅರ್ಧೇಂದು ದಸ್ತಿದಾರ್
ಏಪ್ರಿಲ್ 23ರ ಮುಂಜಾನೆ ಮೂರು ಗಂಟೆಯ ಸಮಯ. ರಾತ್ರಿಯ ಚಳಿಯಲ್ಲಿ ನೀರವ ಮೌನ ಆವರಿಸಿರುವಾಗ ಆಗ ತಾನೆ ಆರಂಭಗೊಂಡ ತುಂತುರುಮಳೆಗೆ ಅಂಬಿಕಾನ ಪ್ರಜ್ಞೆ ಮರಳಿ ಬರುತ್ತದೆ. ಸುತ್ತಲೂ ಸಂಗಾತಿಗಳ ಶವಗಳು ಬಿದ್ದಿವೆ. ತಾನು ಎಲ್ಲಿದ್ದೇನೆ ಎಂಬ ಅರಿವೂ ಆತನಿಗಾಗುತ್ತಿಲ್ಲ. ಸೂರ್ಯನ ಕಿರಣಗಳು ಬೆಳಕುಬೀರುತ್ತಿದ್ದಂತೆ ಅಂಬಿಕಾ ಚಕ್ರವರ್ತಿಗೆ ನಿಧಾನವಾಗಿ ತಿಳಿವು ಮೂಡಲಾರಂಭಿಸಿತು. ಕಣ್ಣಿನ ಮೇಲೆ ಹೆಪ್ಪುಗಟ್ಟಿದ ರಕ್ತದಿಂದ ರೆಪ್ಪೆಗಳು ಒಂದನ್ನೊಂದು ಅಂಟಿಕೊಂಡಂತಾಗಿದ್ದುದರಿಂದ ಆತ ಕಣ್ಣನ್ನು ತೆರೆಯಲಾಗದೆ ಬಿದ್ದಿದ್ದಾನೆ. ರಕ್ತ ಕೆರೆದು ತೆಗೆಯಲು ಪ್ರಯತ್ನಿಸುತ್ತ ಚಿಂತಿಸತೊಡಗಿದ.
ಯಾರೋ ನರಳಾಡುವ ಸದ್ದು ಕಿವಿಗೆ ಬೀಳುತ್ತಿದೆ. ಹಿಂದಿನ ದಿನದ ನೆನಪು ಒಂದೊಂದಾಗಿ ಮರುಕಳಿಸತೊಡಗಿದವು. ಸೂರ್ಯಸೇನ್ ತನ್ನ ಬಳಿ ಬಗ್ಗಿ ಕುಳಿತು ಮಾತನಾಡುತ್ತಿದ್ದಾನೆ. ತಾನು ಆತನಿಗೆ ಹಣವನ್ನು ತೆಗೆದುಕೊಡುತ್ತಿದ್ದೇನೆ. ಯಾರೋ ಅವನ ಪಕ್ಕದಲ್ಲಿ ರಿವಾಲ್ವರು ಇಟ್ಟಿರುವುದಾಗಿ ಹೇಳುತ್ತಿದ್ದಾರೆ. ಪ್ರಾಯಶಃ ಅದು ಸುಬೋಧ ರಾಯ್ ದನಿಯಿರಬೇಕು. ಅಂಬಿಕಾ ಪಕ್ಕದಲ್ಲಿ ಕೈಯಾಡಿಸುತ್ತಾನೆ. ಬಂದೂಕು, ರಿವಾಲ್ವರ್ ಕೈಗೆ ಸಿಗುತ್ತದೆ.
ಏಳಲು ಪ್ರಯತ್ನಿಸುತ್ತಾನೆ. ಆದರೆ ಸಾಧ್ಯವಾಗುತ್ತಿಲ್ಲ. ಹಣೆಯ ಮೇಲೆ ಕೈಯಾಡಿಸಿದರೆ ಗಟ್ಟಿ ವಸ್ತುವೊಂದು ಬೆರಳಿಗೆ ತಗಲುತ್ತದೆ. ಹಣೆಯ ಸುತ್ತಲಿನ ಚರ್ಮವನ್ನು ಒತ್ತಿ ಹಿಂಡಿದಾಗ ಹಣೆಯನ್ನು ಹೊಕ್ಕಿದ್ದ ಗುಂಡು ಸಿಗುತ್ತದೆ. ಪುನಃ ಯಾರೋ ನರಳುವ ಸದ್ದು. ‘ಅಂಬಿಕಾ ದಾ, ನಾನಿನ್ನೂ ಬದುಕಿದ್ದೇನೆ.’ ಅದು ಅರ್ಧೇಂದು ದಸ್ತಿದಾರ್ನ ದನಿ. ಹತ್ತಿರದಲ್ಲೇ ಬಿದ್ದಿದ್ದ ಆತನಿಗೆ ‘ಬಾ, ಅರ್ಧೇಂದು, ಎದ್ದು ಬಾ. ನಾವೀಗ ಇಲ್ಲಿಂದ ಹೊರಡಬೇಕು’ ಎನ್ನುತ್ತಾನೆ. ಒಂದು ಕೈಯಲ್ಲಿ ಹೊಟ್ಟೆಯನ್ನು ಹಿಡಿದುಕೊಂಡ ಅರ್ಧೇಂದು ಬಂದೂಕನ್ನು ಆಧಾರವಾಗಿ ಊರುತ್ತ ಏಳುತ್ತಾನೆ. ಆದರೆ ಹೊಟ್ಟೆ ಸೀಳಿ ಕರುಳು ಹೊರಗೆ ಬಂದಿದ್ದರಿಂದ
ಒಂದೆರಡು ಹೆಜ್ಜೆಯನ್ನೂ ಇಡಲಾರದೆ ಕುಸಿದು ಬೀಳುತ್ತಾನೆ. ‘ಹೋಗು, ಅಂಬಿಕಾ ದಾ. ನಾನು ಬರಲಾರೆ. ಸ್ವಾತಂತ್ರ್ಯ ಅಥವಾ ಸಾವು ಎಂಬ ಮಾಸ್ತರ್ ದಾನ ಮಾತು ನನಗೆ ನೆನಪಿದೆ. ಅದನ್ನು ನಾನು ಪಾಲಿಸುತ್ತೇನೆ.’ ಅಂಬಿಕಾನ ಹೃದಯ ತುಂಬಿಬಂದಿತು. ನಿಧಾನವಾಗಿ ಸಂಗಾತಿಯನ್ನು ಬೀಳ್ಕೊಟ್ಟು ಕೆಳಗಿಳಿಯತೊಡಗಿದ. ತಲೆ ಸುತ್ತುತ್ತಿದೆ. ಮುಗ್ಗರಿಸಿ ಬೀಳುತ್ತಾನೆ, ಸಾವರಿಸಿಕೊಂಡು ಏಳುತ್ತಾನೆ. ಪೂರ್ತಿ ಬೆಳಗಾಗಲು ಇನ್ನೂ ಸುಮಾರು ಒಂದು ಗಂಟೆಯ ಸಮಯವಿದೆ. ನಿಧಾನವಾಗಿ ತೆವಳುತ್ತ ಅಂಬಿಕಾ ಗುಡ್ಡದ ತಪ್ಪಲಿನಲ್ಲಿ ದಟ್ಟವಾದ ಪೆÇದೆಗಳ ನಡುವೆ ಇರುವ ಒಂದು ಗುಹೆಯಲ್ಲಿ ಅಡಗಿಕೊಳ್ಳುತ್ತಾನೆ.
* * * * *
ಅಡಗಿ ಕುಳಿತ ಗುಹೆಯಿಂದ ಅಂಬಿಕಾ ಚಕ್ರವರ್ತಿಗೆ ಜಲಾಲಾಬಾದ್ ಗುಡ್ಡ ಕಾಣುತ್ತಿದೆ. ರೈಲೊಂದು ಬಂದ ಸದ್ದು. ಸೈನಿಕ ಅಧಿಕಾರಿಗಳ ದನಿ ಕೇಳಲಾರಂಭಿಸಿತು. ಕ್ರಾಂತಿಕಾರಿಗಳನ್ನು ಹುಡುಕಲು ಹಿಂತಿರುಗಿ ಬಂದ ಬ್ರಿಟಿಷ್ ಸೇನೆ ಗುಡ್ಡದ ಮೇಲೆಲ್ಲ ಅಲೆದಾಡುತ್ತಿದೆ. ಬಿದ್ದಿರುವ ನೀರಿನ ಮಡಕೆಗಳು, ಬರಿದಾದ ಗುಂಡಿನ ಕವಚಗಳು, ಕ್ರಾಂತಿಕಾರಿಗಳ ಟೋಪಿ ಮತ್ತು ಬ್ಯಾಜ್ಗಳನ್ನು ಕಲೆಹಾಕುತ್ತಿದ್ದಾರೆ. ಹಾಗೆಯೇ ಅಂಬಿಕಾ ಚಕ್ರವರ್ತಿಯ ಕಣ್ಣೆವೆಗಳು ಮುಚ್ಚಲಾರಂಭಿಸಿದವು. ದಣಿದ ದೇಹ ನಿದ್ದೆಗೆ ಜಾರಿತು. ಎಷ್ಟೋ ಹೊತ್ತಿನ ಮೇಲೆ ಕಣ್ಣು ಬಿಟ್ಟಾಗ ಜಲಾಲಾಬಾದ್ ಗುಡ್ಡದ ಮೇಲೆ ಬೆಂಕಿ ಧಗಧಗನೆ ಉರಿಯುತ್ತಿದೆ. ಪ್ರಾಯಶಃ ಹುತಾತ್ಮರಾದ ಕ್ರಾಂತಿಕಾರಿಗಳನ್ನು ಗುಡ್ಡೆ ಮಾಡಿ ಬೆಂಕಿ ಒಡ್ಡಿರಬೇಕೆಂದು ಊಹಿಸುತ್ತಾನೆ. ಸಂಜೆಯಾಗತೊಡಗಿದೆ.
ಯಾರದೋ ಹೆಜ್ಜೆಯ ಸಪ್ಪಳ. ಇದ್ದಕ್ಕಿದ್ದಂತೆ ಕೈಯಲ್ಲಿ ಉದ್ದನೆಯ ಈಟಿಯೊಂದನ್ನು ಹಿಡಿದ ದೃಢಕಾಯ ವ್ಯಕ್ತಿಯೊಬ್ಬ ಕಣ್ಣಿಗೆ ಕಾಣುತ್ತಾನೆ. ಆತ ಹಳ್ಳಿಯ ಪಟೇಲ. ಅಂಬಿಕಾ ರಿವಾಲ್ವರನ್ನು ಹಿಡಿದು ಎದುರಾದಾಗ ಆತ ತನ್ನ ಕೈಯಗಳನ್ನು ಮೇಲೆತ್ತಿ ನಿಲ್ಲುತ್ತಾನೆ. ಅಂಬಿಕಾ ‘ಅಣ್ಣಾ, ನಾವು ಬ್ರಿಟಿಷರ ವಿರುದ್ಧ ಹೋರಾಡಿದವರು. ನಾನು ನಿನಗೆ ಹಾನಿ ಮಾಡುವುದಿಲ್ಲ. ಹೋರಾಟದಲ್ಲಿ ಗಾಯಗೊಂಡಿರುವ ನನಗೆ ಹಳ್ಳಿಯಲ್ಲಿರುವ ನನ್ನ ಸ್ನೇಹಿತನ ಮನೆ ತಲಪಲು ಸಹಾಯ ಮಾಡುವೆಯಾ?’ ಎಂದು ಪ್ರಶ್ನಿಸಿದಾಗ ಆತ ಅವನನ್ನು ಫತೇಹಾಬಾದ್ನಲ್ಲಿರುವ ಡಾ. ಬೇಗಲ ಚಕ್ರವರ್ತಿಯ ಮನೆಗೆ ಕರೆದೊಯ್ಯುತ್ತಾನೆ. ಸಂಜೆ ಎಂಟುಗಂಟೆಯ ಸಮಯವಾಗಿದೆ. ಗಾಯಗೊಂಡು ಅರೆಬೆತ್ತಲೆಯಾಗಿದ್ದ ಅಂಬಿಕಾನನ್ನು ಕಂಡು ಗಾಬರಿಗೊಂಡ ಡಾಕ್ಟರ್
ನಾಚಿಕೆಯಿಲ್ಲದೆ ‘ಅಂಬಿಕಾ ಬಾಬು, ನಾನೊಬ್ಬ ಸಂಸಾರವೊಂದಿಗ. ನಿನಗೆ ಸಹಾಯ ಮಾಡಿದುದು ಪೆÇಲೀಸರಿಗೆ ತಿಳಿದರೆ ನಾನು ಜೈಲು ಸೇರಬೇಕಾಗುತ್ತದೆ. ದಯವಿಟ್ಟು ಇಲ್ಲಿಂದ ಹೊರಟುಹೋಗು’ ಎಂದು ಗೋಗರೆದ. ಆದರೆ ಆತನ ಮಾತಿಗೆ ಜಗ್ಗದೆ ಅಂಬಿಕಾ ಬೆದರಿಕೆ ಹಾಕಿದಾಗ ಮರುಮಾತಿಲ್ಲದೆ ಡಾಕ್ಟರ್ ಔಷಧೋಪಚಾರ ಹಾಗೂ ಆಶ್ರಯ ನೀಡುತ್ತಾನೆ.
ಏಪ್ರಿಲ್ 24ರ ಮಧ್ಯರಾತ್ರಿಯ ವೇಳೆಯಲ್ಲಿ ಅಂಬಿಕಾ 7-8 ಮೈಲಿ ದೂರದ ನೊವಾಪಾರ ಹಳ್ಳಿಯನ್ನು sಸೇರುತ್ತಾನೆ. ಅಲ್ಲಿ ಪಕ್ಷದ ಕಾರ್ಯಕರ್ತ ನಿಬಾರನ್ ಎಂಬಾತನ ಮನೆ ತಲಪಿದಾಗ ಆತ ಊರಲ್ಲಿಲ್ಲ ಎಂದು ತಿಳಿಯುತ್ತದೆ. ಆತನ ನೆರೆಯಲ್ಲಿದ್ದ ಮತ್ತೊಬ್ಬ ಸ್ನೇಹಿತ ಆಶ್ರಯ ನೀಡಲು ಹಿಂಜರಿಯುತ್ತಾನೆ. ನೊವಾಪಾರಗೆ ಸಮೀಪದಲ್ಲಿ ವಾಸಿಸುತ್ತಿದ್ದ ಸೋದರತ್ತೆಯ ಮನೆಗೆ ಹೋಗುತ್ತಾನೆ. ಆಕೆಯ ಮಗ ಒಬ್ಬ ಸರಕಾರಿ ಅಧಿಕಾರಿ. ಅಂಬಿಕಾನನ್ನು ಕಂಡ ಸೋದರತ್ತೆ ‘ನನ್ನ ಮಗನನ್ನು ಸರ್ವನಾಶ ಮಾಡಲು ಇಲ್ಲಿಗೇಕೆ ಬಂದೆ, ಹೋಗು’ ಎಂದು ದೆವ್ವ ಕಂಡವಳಂತೆ ಕಿರುಚತೊಡಗಿದಳು. ಅಂಬಿಕಾ ಕಠೋರನಾಗಿ ನಿಲ್ಲುತ್ತಾನೆ. ‘ಅತ್ತೆ, ಕಿರುಚಬೇಡ. ನಿನ್ನ ಮಗನಿಗೆ ಒಳ್ಳೆಯದಾಗಬೇಕಿದ್ದರೆ ಸುಮ್ಮನೆ ನಾನು ಹೇಳಿದ್ದನ್ನು ಕೇಳು. ಇಂದು ರಾತ್ರಿ ನಾನು ಇಲ್ಲಿರಬೇಕಿದೆ. ಇಲ್ಲದಿದ್ದರೆ ನಿಮ್ಮ ಸಂಸಾರವೇ ಕ್ರಾಂತಿಕಾರಿಗಳ ಜೊತೆ ಸಂಬಂಧವಿಟ್ಟುಕೊಂಡಿದೆ ಎಂದು ನಾನು ಪೆÇಲೀಸರಿಗೆ ಹೇಳುತ್ತೇನೆ’ ಎಂದು ಬೆದರಿಸುತ್ತಾನೆ. ಕೊನೆಗೂ ಅಂದು ರಾತ್ರಿ ಅಲ್ಲಿ ಉಳಿಯುವ ಅವನಿಗೆ ಸ್ನಾನ, ಊಟ ಮತ್ತು ವಿಶ್ರಾಂತಿ ದೊರಕುತ್ತದೆ. ಮರುದಿನ ಬೆಳಗಾಗುತ್ತಿದ್ದಂತೆ ಜ್ವರದಿಂದ ಮೈ ಸುಡುತ್ತಿದ್ದರೂ ಅಲ್ಲಿಂದ ಹೊರಟ ಅಂಬಿಕಾನಿಗೆ ಆತನ ಸ್ವಂತ ಹಳ್ಳಿ ದಿವಾನ್ಪುರದ ಅಮ್ಜಾದ್ ಆಲಿ ಎಂಬ ರೈತನ ನೆನಪಾಗುತ್ತದೆ.
ಸರಿರಾತ್ರಿಯಲ್ಲಿ ‘ಅಮ್ಜಾದ್ ಚಾಚಾ, ಅಮ್ಜಾದ್ ಚಾಚಾ’ ಎಂದು ಕರೆಯುವ ಸದ್ದನ್ನು ಕೇಳಿದ ಅಮ್ಜಾದ್ ಆಲಿಯು ಬಾಗಿಲು ತೆರೆದು ನೋಡಿದರೆ ಅಂಬಿಕಾ ನಿಂತಿದ್ದಾನೆ. ‘ಅಂಬಿಕಾ, ನೀನಿನ್ನೂ ಬದುಕಿದ್ದೀಯಾ? ಬಾ ಒಳಗೆ ಬಾ, ಇದು ನಿನ್ನ ಮನೆ ಎಂದುಕೋ’ ಎಂದು ಆಶ್ಚರ್ಯಚಕಿತನಾಗಿ ತಬ್ಬಿಕೊಳ್ಳುತ್ತಾನೆ. ‘ನೋಡು, ನಾವು ಮುಸಲ್ಮಾನರು. ಹಾಗಾಗಿ ಬ್ರಿಟಿಷರಿಗೆ ನಮ್ಮ ಮೇಲೆ ಅನುಮಾನ ಬರುವುದಿಲ್ಲ. ನೀನಿಲ್ಲಿ ಸುರಕ್ಷಿತವಾಗಿ ಇರಬಹುದು’ ಎಂದು ಆತ್ಮೀಯತೆಯಿಂದ ಒಳಕ್ಕೆ ಕರೆದೊಯ್ಯುತ್ತಾನೆ. ಹನ್ನೆರಡು ದಿನಗಳ ಕಾಲ ಅಮ್ಜಾದ್ ಚಾಚಾ, ಆತನ ಪತ್ನಿ ಹಾಗೂ ಮಗ ಅಂಬಿಕಾನ ಶುಶ್ರೂಷೆಯಲ್ಲಿ
ತೊಡಗುತ್ತಾರೆ. ಸರಕಾರ ಅಂಬಿಕಾನ ತಲೆಯ ಮೇಲೆ ಐದು ಸಾವಿರ ರೂಪಾಯಿ ಬಹುಮಾನ ಸಾರಿದೆ. ಆದರೆ ಬಡ ಅಮ್ಜಾದ್ ಆಲಿ ದ್ರೋಹ ಬಗೆಯಲಿಲ್ಲ. ಆರೋಗ್ಯ ಸುಧಾರಿಸಿದ ಬಳಿಕ ಅಂಬಿಕಾ ಅಮ್ಜಾದ್ ಆಲಿಯ ಮಗನ ಸಹಾಯದಿಂದ ಸೂರ್ಯಸೇನ್ ಜೊತೆ ಸಂಪರ್ಕ ಸಾಧಿಸುವಲ್ಲಿ ಸಫಲನಾದ. ಅಂಬಿಕಾ ಚಕ್ರವರ್ತಿ ಮಾಸ್ತರ್ ದಾ ಆದೇಶದ ಮೇರೆಗೆ ಅಲ್ಲಿಂದ ಬೇರೊಂದು ಸ್ಥಳಕ್ಕೆ ಹೋಗುತ್ತಾನೆ.
ಏಪ್ರಿಲ್ 24ರ ಬೆಳಗ್ಗೆ ಬ್ರಿಟಿಷರು ಸಿವಿಲ್ ಸರ್ಜನ್, ಫೋಟೋಗ್ರಾಫರ್ ಸಮೇತ ಜಲಾಲಾಬಾದ್ ಗುಡ್ಡದ ಮೇಲಕ್ಕೆ ತಲಪುತ್ತಾರೆ. ಸತ್ತವರ ಸಾವಿಗೆ ಕಾರಣ ಸ್ಪಷ್ಟವಾಗಿರುವುದರಿಂದ ಮರಣೋತ್ತರ ಪರೀಕ್ಷೆಯ ಅಗತ್ಯವಿಲ್ಲ ಎನ್ನುತ್ತಾನೆ ಸಿವಿಲ್ ಸರ್ಜನ್! ಅರ್ಧೇಂದು ದಸ್ತಿದಾರ್ನನ್ನು ಆಸ್ಪತ್ರೆಗೆ ರವಾನಿಸಲಾಯಿತು. ಅರ್ಧೇಂದು ಮಾರನೆಯ ದಿನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆಯುತ್ತಾನೆ. ಗುಡ್ಡದ ಮೇಲೆ ಪೆÇಲೀಸರು ಮಾಟಿಲಾಲ್ ಕನುಂಗೊನ ಹೇಳಿಕೆಯನ್ನು ತೆಗೆದುಕೊಳ್ಳುತ್ತಿರುವಾಗಲೇ ಆತ ಪ್ರಾಣ ಕಳೆದುಕೊಳ್ಳುತ್ತಾನೆ. ಸಾವಿನಲ್ಲೂ ಆತ ಯಾವ ಗುಟ್ಟನ್ನೂ ಬಿಟ್ಟುಕೊಟ್ಟಿರಲಿಲ್ಲ. ಮೃತದೇಹಗಳನ್ನು ವಿವಸ್ತ್ರಗೊಳಿಸಿ ಫೋಟೋ ತೆಗೆದುಕೊಳ್ಳಲಾಯಿತು. ಜಾನ್ಸನ್ ಪ್ರತಿಯೊಬ್ಬ ಕ್ರಾಂತಿಕಾರಿಯ ದೇಹದ ಫೋಟೋವನ್ನು ಪ್ರತ್ಯೇಕವಾಗಿ ತೆಗೆದರೆ ಫೋಟೋಗ್ರಾಫರ್ ಮೂರು ದೇಹಗಳನ್ನು ಅಕ್ಕಪಕ್ಕಗಳಲ್ಲಿ ಮಲಗಿಸಿ ತೆಗೆಯುತ್ತಾನೆ. ಗುಡ್ಡದ ಮೇಲೆ ದೊರೆತ ವಸ್ತುಗಳಲ್ಲಿ 43 ಪೆÇಲೀಸ್ ಬಂದೂಕುಗಳು, ಒಂದು ದಂತದ ಹಿಡಿಯುಳ್ಳ ಪಿಸ್ತೂಲು, 936 ಗುಂಡುಗಳಿರುವ ಕಾಡತೂಸುಗಳು, 998 ಬರಿದಾದ ಕಾಡತೂಸು ಕವಚಗಳು, 164 ರಿವಾಲ್ವರ್ ಕಾಡತೂಸುಗಳು ಮತ್ತು ಒಂದು ಕತ್ತಿಯನ್ನು ವಶಪಡಿಸಿಕೊಳ್ಳುತ್ತಾರೆ. ನರೇಶ್ ರಾಯ್ ಜೇಬಿನಲ್ಲಿ ದೊರೆತ ಯೂರೋಪಿಯನ್ ಕ್ಲಬ್ನ ಭೂಪಟದಲ್ಲಿರುವ ಕ್ಲಬ್ನ ಪ್ರವೇಶ ಮತ್ತು ನಿರ್ಗಮನ ದ್ವಾರ, ಕಿಟಕಿ, ಬಿಲಿಯಡ್ರ್ಸ್ ಟೇಬಲ್ ಇರುವ ಜಾಗ, ಕುರ್ಚಿಗಳು ಇತ್ಯಾದಿ ವಿಸ್ತೃತ ವಿವರಗಳು ಬ್ರಿಟಿಷರನ್ನು ಬೆಚ್ಚಿಬೀಳುವಂತೆ ಮಾಡುತ್ತದೆ. ಅಸ್ಸಾಂ ಬಂಗಾಳ ರೈಲ್ವೇಯವರು ಕಳುಹಿಸಿದ ಸೌದೆಯನ್ನು ಒಂದು ಹಳ್ಳದಲ್ಲಿ ಒಡ್ಡಿ ಅವುಗಳ ಮೇಲೆ ಎಲ್ಲ ಮೃತ ದೇಹಗಳನ್ನು ಇಟ್ಟು ಪೆಟ್ರೋಲ್ ಸುರಿಯಲಾಯಿತು. ಬಳಿಕ ಮತ್ತೊಂದು ಸಾಲು ಸೌದೆಯನ್ನು ಒಡ್ಡಿ ಬೆಂಕಿ ಹಚ್ಚಲಾಯಿತು. ಮೃತರಾದ ಕ್ರಾಂತಿಕಾರಿ ಸೈನಿಕರಿಗೆ ಯಾವ ಸೈನಿಕ ಮರ್ಯಾದೆಯನ್ನೂ ನೀಡಲಿಲ್ಲ, ಮಾತ್ರವಲ್ಲ ಅವರ ಸಂಬಂಧಿಗಳಿಗೆ ಸುದ್ದಿಯನ್ನೂ ಕಳುಹಿಸಲಿಲ್ಲ.