ನಾವು ನಿತ್ಯಸ್ಫೂರ್ತಿಯಿಂದ, ನಿರಂತರತೆಯಿಂದ ನಮ್ಮ ಕುಟುಂಬ ಮತ್ತು ಸಮಾಜಬಾಂಧವರೊಡನೆ ನಮ್ಮ ಅಮೂಲ್ಯವಾದ ಸಮಯವನ್ನು ವಿನಿಯೋಗಿಸುವಂತಾಗಬೇಕು. ‘ನಾನು’ ಎಲ್ಲರ ಜೊತೆಯಲ್ಲಿ ಬೆರೆಯಬೇಕು, ‘ನಾನು’ ಎಂಬುದು ‘ನಾವು’ ಎಂದಾದಾಗ, ಸಕಲಕಾರ್ಯಗಳೂ ಸಿದ್ಧಿಸುತ್ತವೆ. ಸ್ವದೇಶ, ಸ್ವಭಾಷೆ, ಸ್ವಭೂಷಣ ಇದು ನಮ್ಮ ಜೀವನದ ನಿತ್ಯದ ಗಾಯತ್ರಿಯಾಗಬೇಕು. ಆಗ ಎಲ್ಲ ಓರೆಕೋರೆಗಳನ್ನು ತಿದ್ದುವುದು ಸುಲಭವಾಗುತ್ತದೆ.
ಜೀವನವೊಂದು ವಿಶಿಷ್ಟವಾದ ಹಂದರ. ಇಲ್ಲಿ ಜೀವಿಯೊಂದು ಹುಟ್ಟುತ್ತದೆ. ಕಲಿಕೆ ಆರಂಭವಾಗುತ್ತದೆ. ಆರಂಭವಾದ ಕಲಿಕೆ ನಿರಂತರವಾಗಿ ಮುಂದುವರಿಯುತ್ತದೆ. ಕಲಿತಂಥ ವಿಚಾರಗಳನ್ನು ಉಪಯೋಗಿಸಿಕೊಂಡು ಜೀವನವನ್ನು ಇನ್ನಷ್ಟು ಸುಖಕರವನ್ನಾಗಿ ಮಾಡಿಕೊಳ್ಳುತ್ತ, ತಮ್ಮ ಸುಖದ ವರ್ಧನೆಗಳನ್ನೂ ಮಾಡಿಕೊಳ್ಳುತ್ತ, ನಿತ್ಯದ ಏಳು-ಬೀಳುಗಳನ್ನು ಅನುಭವಿಸುತ್ತ, ಕೊನೆಗೊಂದು ದಿನ ಸೃಷ್ಟಿಯಲ್ಲಿ ಜೀವವು ಲೀನವಾಗುತ್ತದೆ. ಇದು ಒಂದು ಕೊನೆಯಿಲ್ಲದ ಪ್ರಕ್ರಿಯೆ. ಹೀಗೆ ಎಲ್ಲ ಜೀವಿಗಳಿಗೂ ಇದು ಸಾಮಾನ್ಯ ಎಂದು ಯಾರೂ ಊಹಿಸಬಹುದು. ಆದರೆ ಪ್ರಾಣಿ-ಪಕ್ಷಿಗಳಲ್ಲಿ, ಕೆಲವು ಗಿಡ-ಮರಗಳಲ್ಲಿಯೂ ಹೀಗೊಂದು ವ್ಯವಸ್ಥೆ: ಪರಸ್ಪರವಾದ, ಅನ್ಯೋನ್ಯಭಾವದಿಂದ ಜೊತೆಯಾಗಿ ಜೀವಿಸುವಂಥ ವ್ಯವಸ್ಥೆ. ಅದು ಸಾಮಾನ್ಯವಾಗಿ ಇಬ್ಬರಿಗೂ ಕೊಡು-ಕೊಳ್ಳುವ ವ್ಯವಸ್ಥೆಯೇ ಆಗಿರುತ್ತದೆ. ಆದರೆ ಈ ಸಂಬಂಧ ಕೇವಲ ಬಾಹ್ಯವಾದುದು. ಆಂತರಂಗಿಕವಾಗಿ ಎಷ್ಟೋ ವೇಳೆ ಈ ಸಂಬಂಧಿಗಳ ನಡುವೆ ಯಾವುದೇ ಭಾವಬಂಧನವಿರುವುದಿಲ್ಲ.
ಆದರೆ ಮನುಷ್ಯರ ವಿಷಯಕ್ಕೆ ಬಂದಾಗ ಇದು ಸ್ವಲ್ಪ ಭಿನ್ನವಾಗುತ್ತದೆ. ತನ್ನ ಸುಖಕ್ಕಾಗಿ ತಾನು ಇನ್ನೊಬ್ಬರೊಡನೆ ವಾಸಿಸುತ್ತ, ಅವರೊಡನೆ ಬಾಹ್ಯವಾದ ಕೆಲವು ಸಹಕಾರಗಳ ನಡುವೆಯೂ ಕೂಡ ಅವರೊಂದಿಗೆ ಆಂತರಂಗಿಕವಾದ ಭಾವನೆ ಹಂಚಿಕೊಂಡು ಬಾಳುವಂಥ ವಿಶಿಷ್ಟ ವ್ಯವಸ್ಥೆಯನ್ನು ಇಲ್ಲಿ ನೋಡಬಹುದಾಗಿದೆ. ಆದರೆ ಇಲ್ಲಿ ಮೂಡುವ ಪ್ರಶ್ನೆ – ಇದೂ ಕೂಡ ಹೊರಮುಖವಾಗಿದ್ದರೆ? ಅಂಥ ಕೇವಲ ಹೊರಮುಖದ ವ್ಯವಸ್ಥೆಯನ್ನೂ ನಾವು ಪ್ರಪಂಚದಲ್ಲಿ ನೋಡುತ್ತೇವೆ. ಇನ್ನೊಬ್ಬರ ಕಷ್ಟ-ಸುಖಗಳನ್ನು ನಾವು ಅಂಗೀಕರಿಸುತ್ತ, ಅದನ್ನು ನಾವೂ ಕೂಡ ಅನುಭವಿಸುತ್ತ ‘ನಿನ್ನ ದಾರಿ ನಿನಗೆ, ನನ್ನ ದಾರಿ ನನಗೆ’ ಎನ್ನುವಂಥ ಎಷ್ಟೋ ಜನ ಜಗತ್ತಿನಲ್ಲಿ ಬದುಕುತ್ತಿದ್ದಾರೆ.
ಹೊರದೇಶಗಳಿಂದ ನಾವಿರುವ ಭಾರತದ ಪರಿಸರಕ್ಕೆ ಬಂದು ಇಳಿದಾಗ, ಹೊರಜಗತ್ತಿನ ಜನರು ‘ಬದುಕುತ್ತಿದ್ದಾರೆ’ ಎಂದೆನಿಸಿದರೆ ಇಲ್ಲಿಯ ಜನ ‘ಬಾಳುತ್ತಿದ್ದಾರೆ’ ಎಂದು ಸ್ಪಷ್ಟವಾಗಿ ಗೋಚರಿಸುತ್ತದೆ. ತಾನೊಬ್ಬ ವ್ಯಕ್ತಿ, ತನ್ನ ಸುತ್ತಲೂ ಒಂದು ಪರಿಸರವಿದೆ. ಅಂಥ ಅನೇಕ ಪರಿಸರಗಳನ್ನು ತನ್ನಲ್ಲಿ ಅಡಕ ಮಾಡಿಕೊಂಡಿರುವ ಒಂದು ಅದ್ಭುತ ಸೃಷ್ಟಿಯಿದೆ. ಈ ಸೃಷ್ಟಿಯನ್ನು ಮಾಡಿದ ಒಂದು ವಿಶಿಷ್ಟಶಕ್ತಿಯಿದೆ. ಇವೆಲ್ಲವೂ ಒಂದಕ್ಕೊಂದು ಪೂರಕ, ಕೇವಲ ಹೊರಮುಖವಾಗಿಯಲ್ಲ, ಬದಲಾಗಿ ಅಂತರಂಗದಿಂದ ಎಲ್ಲವೂ ಎಲ್ಲದರ ಇನ್ನೊಂದು ರೂಪ ಎನಿಸಿದಾಗ ಯಾರಿಗೂ ಎಲ್ಲಿಯೂ ಕೇಡು ಮಾಡಬಾರದು, ಕೆಡುಕಿದ್ದರೂ ಅದನ್ನು ಸರಿಪಡಿಸಬೇಕು, ಸರಿಪಡಿಸಿದ್ದನ್ನು ಸರಿಯಾಗಿ ಉಳಿಸಿಕೊಳ್ಳಬೇಕು – ಎನ್ನುವ ಹಂಬಲದಿಂದ ಇಂಥ ಜೀವನವನ್ನು ಉಳಿಸಿ ಏನಾದರೂ ವಿಶಿಷ್ಟವಾದುದನ್ನು ಸಾಧಿಸಬೇಕು ಎನ್ನುವಂಥ ಭಾವ ಬಲಿಯುತ್ತದೆ.
ಇಂಥ “ನಾನಿದ್ದು, ನನ್ನವರೊಡನೆ” ಎಲ್ಲರೂ ಏನನ್ನಾದರೂ ಕೊಡುತ್ತ, ಪರಸ್ಪರವಾದ ನಂಬಿಕೆ-ವಿಶ್ವಾಸಗಳಿಂದ ಎಲ್ಲರ ಏಳ್ಗೆಗಾಗಿ ಶ್ರಮಿಸುವ ಒಂದು ಘಟಕವನ್ನು ನಾವು ಕುಟುಂಬ ಎಂದು ಕರೆಯಬಹುದು. ಇಂಥ ಕುಟುಂಬ ಕೇವಲ ಮನುಷ್ಯರದ್ದು ಮಾತ್ರ ಆಗಿರಲು ಸಾಧ್ಯವಿಲ್ಲ. ಆದರೆ ಪ್ರಾಣಿಗಳಿಗೆ ಮನುಷ್ಯರಷ್ಟು ವಿಶಿಷ್ಟಚಿಂತನೆ ಮಾಡಿ, ತನ್ಮೂಲಕ ಕಾರ್ಯಸಾಧನೆ ಮಾಡುವ ಸಾಮಥ್ರ್ಯವಿದ್ದರೆ ಅವರನ್ನೂ ಕುಟುಂಬದ ಸದಸ್ಯರನ್ನಾಗಿ ಮಾಡಿಕೊಳ್ಳಬಹುದು. ಹಾಗೆ ಮಾಡಿಕೊಂಡವರೂ ಅನೇಕರಿದ್ದಾರೆ. ಆದರೆ ಗಮ್ಯವೂ ಮುಖ್ಯವೆಂದು ಹೇಳುವುದಕ್ಕಾಗಿ ಕವಿವಾಣಿಯೊಂದು ಹೀಗೆ ಹೇಳುತ್ತದೆ –
ಆಹಾರಾರ್ಥಂ ಕರ್ಮ ಕುರ್ಯಾತ್ ಅನಿಂದ್ಯಂ
ಕುರ್ಯಾತ್ ಆಹಾರಂ ಪ್ರಾಣಸಂಧಾರಣಾರ್ಥಂ |
ಪ್ರಾಣಾಃ ಸಂಧಾರ್ಯಾಃ ತತ್ತ್ವವಿಜ್ಞಾನಹೇತೋಃ
ತತ್ತ್ವಂ ವಿಜ್ಞೇಯಂ ಏನ ಭೂಯೋ ನ ಜನ್ಮ ||
(ಅರ್ಥ – ನಿತ್ಯದ ಆಹಾರಕ್ಕಾಗಿ ನಿಂದಿತವಲ್ಲದ ಕೆಲಸವನ್ನು ಮಾಡಬೇಕು. ಪ್ರಾಣವನ್ನು ಧಾರಣೆಮಾಡಿಕೊಳ್ಳುವುದಕ್ಕೆ ಮಾತ್ರ ಆಹಾರವನ್ನು ಸೇವಿಸಬೇಕು. ಜೀವದ ಮತ್ತು ಜಗತ್ತಿನ ತತ್ತ್ವಜ್ಞಾನವನ್ನು ಅರಿಯುವುದಕ್ಕಾಗಿ ಮಾತ್ರವೇ ಪ್ರಾಣವನ್ನು ಧಾರಣೆ ಮಾಡಿಕೊಳ್ಳಬೇಕು, ಮತ್ತು ಮತ್ತೆ ಜನ್ಮ ಬಾರದೆ ಇರುವಂಥ ತತ್ತ್ವವನ್ನು ತಿಳಿಯಬೇಕು.)
ಇಂಥ ಉದಾತ್ತ ಚಿಂತನೆಯಿಂದ ಹೊರಟ ಹಿಂದೂ ಕುಟುಂಬಗಳು ಪೀಳಿಗೆಯಿಂದ ಪೀಳಿಗೆಗೆ ನಡೆದು ಸಾವಿರಾರು ಪೀಳಿಗೆಗಳು ಸಂದಿವೆ. ಹೀಗೆ ಸಂದಿರುವ ಅನೇಕ ಪೀಳಿಗೆಗಳ ಜ್ವಲಂತ ಜೀವಿತದ ಉದಾಹರಣೆಗಳು ನಮಗೆ ಮುಂದಿನ ದಾರಿದೀಪಗಳಾಗಿವೆ. ಇಂಥ ಸಂಸ್ಕøತಿಯ ಪ್ರವಾಹವು ಹೀಗೆ ಬಂದಿರುವುದು ಕುಟುಂಬಗಳಿಂದಲೇ, ಕುಟುಂಬದ ಸದಸ್ಯರಿಂದಲೇ ಎಂಬುದನ್ನು ಅರಿತಾಗ ಆ ಕುಟುಂಬಗಳು ಹೇಗಿದ್ದವು, ಅಲ್ಲಿದ್ದ ಜನರ ಜೀವನ ಹೇಗಿದ್ದಿತು, ಅಂದಿನ ಬದುಕು-ಬಾಳುಗಳು ಹೇಗಿದ್ದವು? ಎಂಬುದನ್ನು ಊಹಿಸಬಹುದು.
ಭಗವಂತನಿಂದ ಸೃಷ್ಟಿಯಾಯಿತು ಎಂಬ ವಿಶ್ವಾಸದಲ್ಲಿ ಈ ದೇಶದಲ್ಲಿ ಒಂದಷ್ಟು ವ್ಯವಸ್ಥೆಗಳು ರೂಪಿತವಾದವು. ವ್ಯಕ್ತಿಯೊಬ್ಬನ ಜೀವನದ ವಿವಿಧ ಜೀವಿತಾವಧಿಗಳನ್ನು ವ್ಯವಸ್ಥೆಗಾಗಿ ನಾಲ್ಕು ಭಾಗಗಳಾಗಿ ರೂಪಿಸಲಾಯಿತು. ಅವೆಂದರೆ – ಬ್ರಹ್ಮಚರ್ಯ, ಗಾರ್ಹಸ್ಥ್ಯ, ವಾನಪ್ರಸ್ಥ ಮತ್ತು ಸಂನ್ಯಾಸ. ಎಲ್ಲರಿಗೂ ನಿರ್ದಿಷ್ಟವಾದ ಕೆಲಸ-ಕಾರ್ಯಗಳು. ಅವುಗಳು ನಿಯತ ಕರ್ಮಗಳೂ ಹೌದು, ನೈಮಿತ್ತಿಕಗಳೂ ಹೌದು, ಕೆಲವೊಮ್ಮೆ ಕಾಮ್ಯವೂ ಹೌದು.
ಬ್ರಹ್ಮಚರ್ಯದಲ್ಲಿ ಗಳಿಸಿದ ವಿದ್ಯೆ ಧರ್ಮವನ್ನು ಎತ್ತಿ ಹಿಡಿಯುವ ಉದ್ದೇಶಕ್ಕಾಗಿ ಎಂಬ ಉದಾತ್ತತೆ ನೀಡಿದೆ ಈ ಸಮಾಜ. ಗಳಿಸಿದ ವಿದ್ಯೆಯಿಂದ ಜೀವನ ನಡೆಸುತ್ತ ಇಡೀ ಸಮಾಜದ ನಿರ್ವಹಣೆಯ ಜವಾಬ್ದಾರಿಯನ್ನು ಹೊರುವುದಕ್ಕಾಗಿ, ಜೊತೆಗೆ ತನ್ನ ಮತ್ತು ಸಮಾಜದ ಧರ್ಮವನ್ನು ಪಾಲಿಸುವುದಕ್ಕಾಗಿ ವಿವಾಹವಾಗಿ ಜೀವನ ನಡೆಸುವವನು ಗೃಹಸ್ಥ. ಹಲವು ವರ್ಷಗಳಷ್ಟು ಕಾಲ ಗೃಹಸ್ಥನ ಕರ್ತವ್ಯಗಳನ್ನು ನಿರ್ವಹಿಸಿ, ಮಕ್ಕಳಿಗೆ ಜವಾಬ್ದಾರಿಯನ್ನು ವಹಿಸಿ ತನ್ನ ಅನುಭವಗಳನ್ನು ಮೆಲುಕು ಹಾಕುತ್ತ, ಕಿರಿಯರಿಗೆ ಮಾರ್ಗದರ್ಶನವನ್ನು ನೀಡುತ್ತ ಸಮಾಜದ ಒಳಗೆ ಅಥವಾ ಹೊರಗೆ ಇದ್ದು ಜೀವನ ನಡೆಸುವುದು ವಾನಪ್ರಸ್ಥ. ಎಲ್ಲವನ್ನೂ ಪರಿತ್ಯಜಿಸಿ ಪರಮೇಷ್ಟಿಯನ್ನು ಕುರಿತಾಗಿ ಚಿಂತಿಸುವ ಆಶ್ರಮವೇ ಸಂನ್ಯಾಸ.
ಹೀಗೆ ಸಾವಿರಾರು ವರ್ಷಗಳ ಹಿಂದೆಯೇ ವಾನಪ್ರಸ್ಥಿಗಳಿಂದ, ಸಂನ್ಯಾಸಿಗಳಿಂದ ಮತ್ತು ಋಷಿಮುನಿಗಳಿಂದ ರೂಪಿತವಾದ ಈ ಕೌಟುಂಬಿಕ ಸೂತ್ರಗಳೇ ಮುಂದೆ ಗೃಹ್ಯಸೂತ್ರಗಳಾಗಿ, ಬದುಕಿನ ಬೇಕು-ಬೇಡಗಳು, ಅವುಗಳ ವ್ಯಾಪ್ತಿ-ಉದ್ದೇಶಗಳನ್ನು ಸ್ಪಷ್ಟವಾಗಿ ತಿಳಿಸುವ ಮಾರ್ಗದರ್ಶಕ ಬಿಂದುಗಳಾಗಿ ಹೊರಟವು. ಮುಂದೆ ಬಂದ ಎಲ್ಲ ಚಿಂತಕರು, ಋಷಿಸ್ವರೂಪರೂ ಕೂಡ ಇವುಗಳನ್ನು ಪರಿಷ್ಕರಿಸುತ್ತ, ಇವೆಲ್ಲದರ ಅನುಷ್ಠಾನಕ್ಕೂ ಮೂಲವಾದ, ಪ್ರಬಲವಾದ ಮತ್ತು ಸೂಕ್ತವಾದ ವ್ಯವಸ್ಥೆಯನ್ನು ಮನಗಂಡು ಅದಕ್ಕಾಗಿ ರೂಪಿತವಾಗಿದ್ದ ಕುಟುಂಬವು ಬಲಾಢ್ಯವಾದರೆ ಎಲ್ಲ ಸಾಧನೆಗಳಿಗೆ ಅವಕಾಶವಿದೆ ಎಂದು ಮನಗಂಡು ಗೃಹಸ್ಥನ ಜೀವನವೇ ಶ್ರೇಷ್ಠ ಎಂದು ಸಾರಿದರು.
ಯಥಾ ವಾಯುಂ ಸಮಾಶ್ರಿತ್ಯ ವರ್ತಂತೇ ಸರ್ವಜಂತವಃ |
ತಥಾ ಗೃಹಸ್ಥಮಾಶ್ರಿತ್ಯ ವರ್ತಂತೇ ಸರ್ವ ಆಶ್ರಮಾಃ ||
ಹೇಗೆ ವಾಯುವನ್ನು ಆಶ್ರಯಿಸಿ ಎಲ್ಲ ಜೀವಿಗಳೂ ಬದುಕುತ್ತವೆಯೋ, ಹಾಗೆಯೇ ಗೃಹಸ್ಥನನ್ನು ಆಶ್ರಯಿಸಿ ಎಲ್ಲ ಆಶ್ರಮಗಳೂ ಇರುತ್ತವೆ – ಎಂಬ ಸ್ಪಷ್ಟ ಧೋರಣೆಯು ಹೊಮ್ಮಿದುದು ಇದೇ ವಿಚಾರದ ಹಿನ್ನೆಲೆಯಲ್ಲಿ.
ಈ ಚಿಂತನೆಯನ್ನು ಮೂಲವಾಗಿಟ್ಟುಕೊಂಡು ಇಂದಿನ ಸಮಾಜವನ್ನು ನೋಡಿದಾಗ ದಿಗ್ಭ್ರಮೆಯಾಗುತ್ತದೆ. ಕಾರಣ ಆ ಉದಾತ್ತ ಚಿಂತನೆಗೂ ಇಂದಿನ ಜೀವನಶೈಲಿಯಿಂದ ಸಿಗುತ್ತಿರುವ ಸಂಸ್ಕಾರಗಳಿಗೂ ಯಾವುದೇ ಸಂಬಂಧಗಳಿಲ್ಲವಲ್ಲ ಎಂಬ ವೇದನೆ ಕಾಡುತ್ತದೆ. ಆದರೆ, ಈ ಸಮಾಜ ಬೆಳೆದುಬಂದಿರುವ ವಿಧಾನವನ್ನೂ, ಇದರ ಇತಿಹಾಸವನ್ನೂ, ಇದೇ ದೇಶದಲ್ಲಿ ನಡೆದಂಥ ವಿವಿಧ ಕಾಂಡಗಳನ್ನೂ ಗಮನಿಸಿದಾಗ, ಸಮಾಜವೃಕ್ಷದ ಬೇರು ಇಂದೂ ಚೆನ್ನಾಗಿಯೇ ಇದ್ದು ಅಲ್ಲಲ್ಲಿ ಕೆಲವು ರೆಂಬೆ-ಕೊಂಬೆಗಳಲ್ಲಿ ರೋಗವಿರುವುದು ಕಂಡುಬರುತ್ತದೆ. ಮತ್ತೆ ನೀಡಬೇಕಾದ್ದೆಲ್ಲವನ್ನೂ ಬೇರಿಗೇ ನೀಡಬೇಕಾಗಿರುವುದರಿಂದ ಬೇರುಗಳಿಗೆ ಪೋಷಣೆಗಳನ್ನು ನೀಡುತ್ತ, ಹೊರಮುಖವಾಗಿ ರೋಗಗ್ರಸ್ತವಾಗಿರುವ ಭಾಗಗಳನ್ನು ಸವರುತ್ತ, ರೋಗದ ಕಾರಣವನ್ನು ಅರಿತು – ಅವುಗಳನ್ನು ನಿವಾರಿಸುವತ್ತ ಗಮನ ನೀಡಿದರೆ ನಮ್ಮ ಬಾಳು ಇನ್ನಷ್ಟು ಸೊಗಸಾದೀತು ಮತ್ತು ಸಮಾಜವೃಕ್ಷ ಇನ್ನಷ್ಟು ನಳನಳಿಸೀತು. ಅದಕ್ಕೆ ಇರುವ ವ್ಯವಸ್ಥೆಯೇ ಕುಟುಂಬಗಳನ್ನು ಜಾಗೃತಗೊಳಿಸುವುದು.
ಗತಿಯೇನು ಎನಗೆನುತ ಕೇಳ್ವವರೆ ಎಲ್ಲರುಂ |
ಹಿತವೆಂತು ಜಗಕೆಂದು ಕೇಳುವವರಾರು? ||
ಮತಿಯ ವಿಶ್ವದಿ ಬೆರಸಿ ಜೀವಿತವ ವಿಸ್ತರಿಸೆ |
ಪಥ ಮುಕ್ತಿಗಾಗಳೇ – ಮಂಕುತಿಮ್ಮ ||
ಎನ್ನುವ ಉದಾತ್ತತೆಯನ್ನು ಜೀವನದಲ್ಲಿ ಅಳವಡಿಸಬೇಕಾದುದು ಎಲ್ಲ ಸಮಾಜ ಬಾಂಧವರ, ಎಲ್ಲ ಆಶ್ರಮಸ್ಥರೂ ಅರಿತು, ಆಚರಿಸಿ, ಉಪದೇಶಿಸಬೇಕಾದ ವಿಚಾರ. ನಿತ್ಯಜೀವನದಲ್ಲಿ ಇಂಥದನ್ನು ಉದಾಹರಣೆಯಾಗಿ ನಡೆಸಿಕೊಡಬೇಕಾದ್ದೇ ಇಂದಿನ ಎಲ್ಲ ಸಮಸ್ಯೆಗಳಿಗೂ ಪರಿಹಾರ.
ಮಾನವರೊ ದಾನವರೊ ಭೂಮಾತೆಯನು ತಣಿಸೆ |
ಶೋಣಿತವನೆರೆಯುವರು ಬಾಷ್ಪ ಸಲುವುದಿರೆ? ||
ಏನು ಹಗೆ! ಏನು ಧಗೆ! ಏನು ಹೊಗೆ!ಯೀ ಧರಣಿ |
ಸೌನಿಕನ ಕಟ್ಟೆಯೇಂ? – ಮಂಕುತಿಮ್ಮ ||
ಅದಕ್ಕಾಗಿ ಅಂತರ್ಮುಖಿಗಳಾಗಿ ಸಮಸ್ಯೆಗಳೇನು, ಅವಕ್ಕೆ ಕಾರಣವೇನು ಮತ್ತು ಅವಕ್ಕೆ ಪರಿಹಾರವೇನು? – ಎಂಬ ಪ್ರಶ್ನತ್ರಯವನ್ನು ಚಿಂತಿಸಿದಾಗ ಉತ್ತರ ಹೊಳೆಯುವುದು ನಿಶ್ಚಿತ. ಹಿಂದೂ ಕುಟುಂಬದ ಅಂಗಗಳಾಗಿರುವ ಎಲ್ಲರೂ ಮುಕ್ತವಾಗಿ ಈ ಉತ್ತರಗಳನ್ನು ಜೀವನದಲ್ಲಿ ಅನುಷ್ಠಾನಗೊಳಿಸುವುದು ಸಮಷ್ಟಿಯ ಹಿತದೃಷ್ಟಿಯಿಂದ ಅತ್ಯಗತ್ಯ.
ಚಿಕ್ಕದಾದ ಕುಟುಂಬ
ಹಿಂದೆ ಕುಟುಂಬ ಎಂದರೆ ಕನಿಷ್ಠ ಮೂರು ತಲೆಮಾರುಗಳು, ಸಹೋದರರೆಲ್ಲರೂ ಒಂದೇ ಮನೆಯಲ್ಲಿ ಇರುತ್ತಿದ್ದರು; ವಿಧವೆಯಾದ ಸಹೋದರಿ ಇದ್ದರೆ, ಅವಳೂ ತನ್ನ ಮಕ್ಕಳೊಡನೆ ತಂದೆಯ ಮನೆಯಲ್ಲಿಯೇ ಇರುತ್ತಿದ್ದಳು. ಹಬ್ಬ-ಹರಿದಿನಗಳು, ಸಾವು-ನೋವುಗಳು, ಏಳು-ಬೀಳುಗಳು ಎಲ್ಲವನ್ನೂ ಒಟ್ಟಾಗಿ ಸ್ವೀಕರಿಸುವ ಮನಃಸ್ಥಿತಿಯಲ್ಲಿ ಬದುಕುತ್ತಿದ್ದರು. ನಡೆಸುತ್ತಿದ್ದ ವೃತ್ತಿಯಲ್ಲಿ ಎಲ್ಲರಿಗೂ ಸಮಪಾಲು. ಎಲ್ಲ ಮಕ್ಕಳನ್ನೂ ಸಮಾನವಾಗಿ ನೋಡುವ ಹಿರಿಯರು, ಎಲ್ಲರಿಗೂ ಹಂಚಿ ತಿನ್ನುವ ಮನಃಸ್ಥಿತಿ ಇರುತ್ತಿತ್ತು. ಅಂದು ದುಡಿಯುವ ಕೈಗಳು ಹೆಚ್ಚಿದ್ದವು, ಆದರೆ ದೊರೆಯುತ್ತಿದ್ದ ಆದಾಯ ಕಡಮೆ ಇರುತ್ತಿತ್ತು. ಹಣ ಹುಡುಕಿಕೊಂಡು ಹೊರಟವರು ಎಷ್ಟೋ. ಆದರೂ ಬದುಕಿಗೇನೂ ಬರವಿರಲಿಲ್ಲ. ಇದು ಸಾಮಾನ್ಯವಾಗಿ ಎಲ್ಲ ಹಳ್ಳಿಗಳ ಕುಟುಂಬದ ವಾಸ್ತವದ ಚಿತ್ರಣ. ಆದರೆ ನಗರೀಯ ಜೀವನಕ್ಕೆ ಪ್ರವೇಶ ಮಾಡಿದ ಕೂಡಲೇ, ಹಳ್ಳಿಯ ಎಲ್ಲ ಹುಳುಕುಗಳೂ ಎದ್ದು, “ಅವರೆಲ್ಲರೂ ಅಲ್ಲಿಯೇ ಇರಲಿ, ನಾವು (ನಗರದಲ್ಲಿರುವವರು) ನಮ್ಮ ಪಾಡಿಗೆ ನಾವು ಇರೋಣ” ಎಂಬ ಕುಬ್ಜ ಮನಃಸ್ಥಿತಿಯವರಾದದ್ದೇ ತಡ ಕುಟುಂಬವ್ಯವಸ್ಥೆ ಛಿದ್ರಗೊಂಡಿತು. ಇದರಿಂದ ವಿದೇಶೀ ಚಿಂತನೆಗಳು ಹೆಚ್ಚು ಜನಪ್ರಿಯತೆಯನ್ನು ಗಳಿಸಿ, ಎಲ್ಲವನ್ನೂ ಉಳಿಸುವ ದೃಷ್ಟಿಯಿಂದಲೇ ನೋಡಲಾಯಿತು. ಅದಕ್ಕಾಗಿ ಹೊರಟ ಸಿದ್ಧಾಂತಗಳೂ ಕೂಡ ‘ಜಗತ್ತಿನ ಅತಿದೊಡ್ಡ ಸಮಸ್ಯೆ ಜನಸಂಖ್ಯಾ ಸ್ಫೋಟ’ ಎಂದು ಬೊಬ್ಬೆ ಹೊಡೆದದ್ದರ ಪರಿಣಾಮವಾಗಿ ಇಲ್ಲಿಯೂ ಕೂಡ ‘ಚಿಕ್ಕ ಕುಟುಂಬ ಚೊಕ್ಕ ಕುಟುಂಬ’ ಎನ್ನುವಂತೆ ಬದಲಾಗಿಹೋಯಿತು. ಇದರಿಂದ ಹಂಚಿಕೊಂಡು ಬಾಳಬೇಕಿದ್ದ ಅಣ್ಣ-ತಮ್ಮಂದಿರು ತಮ್ಮ ಬಾಳನ್ನು, ತಮ್ಮ ಸಂಗಾತಿಗಾಗಿ, ತಮ್ಮ ಮಕ್ಕಳಿಗಾಗಿ, ತಮ್ಮ ಮೊಮ್ಮಕ್ಕಳಿಗಾಗಿ ಎನ್ನುತ್ತ ಸಮಾಜವನ್ನು ಮರೆತೇಬಿಟ್ಟರು. ಪರಿಣಾಮವಾಗಿ ಅನೇಕರು ಶ್ರೀಮಂತರಾದರು. ಬಡವರು ಬಡವರಾಗಿಯೇ ಉಳಿದರು.
ಸೂಕ್ತ ಶಿಕ್ಷಣದ ಕೊರತೆ
ಹೀಗೆ ಮುಂದುವರಿಯುತ್ತ, ಜೀವನದಲ್ಲಿ ಏಳು-ಬೀಳುಗಳನ್ನು ಅರಿತು, ಸೃಷ್ಟಿಯ ಸೋಜಿಗವನ್ನು ಸೃಷ್ಟಿಯ ಒಳಗೇ ಇದ್ದು ಅರಿಯುವುದಕ್ಕಿಂತ ಸೃಷ್ಟಿಯ ಒಂದಂಚಿನಲ್ಲಿ ನಿಂತು ಕನ್ನಡಿಯಲ್ಲಿ ತೋರಿಸುವ ಆನೆಯಂತೆ ಪ್ರಕೃತಿಯನ್ನು ತೋರಿಸಹೊರಟಿತು ಶಿಕ್ಷಣ ಪದ್ಧತಿ. ಮಕ್ಕಳಿಗೆ ಕೆಟ್ಟದ್ದನ್ನು ಕೊಡಬಾರದು, ಅವರು ತಮ್ಮ ಬುದ್ಧಿಮತ್ತೆಯನ್ನು ಒರೆಗೆ ಹಚ್ಚಬೇಕು ಎಂಬ ವಿಚಿತ್ರ ಸಿದ್ಧಾಂತವನ್ನು ಅಂಗೀಕರಿಸಿದ ನಾವು ಅವರು ಪ್ರಕೃತಿಯಲ್ಲಿ – ಮನೆ, ಹಳ್ಳಿ, ಕೆರೆ-ಕುಂಟೆ ಮೊದಲಾಗಿ ಜೀವನದಲ್ಲಿ ಕಲಿತದ್ದಕ್ಕಿಂತ ಶಾಲೆಯಲ್ಲಿ, ಪಾಠ್ಯಪುಸ್ತಕದಲ್ಲಿ ಕಲಿತದ್ದನ್ನು ಮಾತ್ರ ಒಂದು ಮಹಾಮಾನದಂಡವಾಗಿ ಸ್ವೀಕರಿಸಿದ ಪರಿಣಾಮ, ಪ್ರಕೃತಿಯ ವೈಶಿಷ್ಟ್ಯಕ್ಕಿಂತ ವಿಕೃತಿಯನ್ನು ನೈಪುಣ್ಯವೆಂದು ಬಗೆದದ್ದರಿಂದ, ಮನೆಯಲ್ಲಿಯ ಎಲ್ಲರೂ “ನೀನು ಓದಿಕೋ, ಓದಿ ದೊಡ್ಡವನಾಗು, ನಮ್ಮಂತೆ ನೀನಾಗುವುದು ಬೇಡ” ಎಂದು ಹೇಳುವಂಥ ಹಂತಕ್ಕೆ ಬಂದರು. ಸಂಸ್ಕøತಿಯ ಸೋಂಕೂ ಇಲ್ಲದೆ, ಪುಸ್ತಕದ ಬದನೇಕಾಯಿಗಳನ್ನು ಸರ್ಜಿಸುವ ಶಿಕ್ಷಣದಿಂದ ಮಕ್ಕಳಿಗೆ ದಿನನಿತ್ಯದ ಬದುಕಿಗೆ ದಾರಿದೀಪವಾಗಿರಬೇಕಿದ್ದ ಹೊಲ-ಗದ್ದೆ, ತೋಟ-ತೋಪು, ಹಿರಿಯರ ವೃತ್ತಿ-ಆಚಾರಗಳು, ಮನೆತನದಿಂದ ನಡೆಸಿಕೊಂಡು ಬಂದಿದ್ದ ವಿಶಿಷ್ಟ ಕಲೆಗಳು, ಹಿಂದಿನಿಂದ ಬಂದಿದ್ದ ಜ್ಞಾನರಾಶಿಯನ್ನು ಉಪಯೋಗಿಸಿಕೊಂಡು ಹೊಸದನ್ನು ಕಲ್ಪಿಸಿ ಸೃಷ್ಟಿಸುವ ವಿಶಿಷ್ಟವಾದದ್ದೆಲ್ಲವೂ ಕರಗಿದವು.
ವಿದೇಶೀ ಆಕರ್ಷಣೆಗಳು
ಹಂಚಿ ತಿನ್ನುವುದು ನಮ್ಮ ಸಂಸ್ಕøತಿಯ ಅಂಗವಾಗಿತ್ತು. ಭಿಕ್ಷಾಟನೆ ಈ ದೇಶದಲ್ಲಿ ಪಿಡುಗಾಗಿರಲಿಲ್ಲ. ಧರ್ಮಕ್ಕಾಗಿ ಭಿಕ್ಷೆ ನೀಡಿ ಎಂದು ಕೇಳುತ್ತಿದ್ದ ಸಾವಿರಾರು ಜನರು ಇರುತ್ತಿದ್ದರು. ಮತ್ತು ಭಿಕ್ಷೆ ನೀಡುವವನೂ ಕೂಡ ಕೈತುಂಬ ಭಿಕ್ಷೆ ನೀಡುತ್ತಿದ್ದ. ಜಗತ್ತಿನಲ್ಲಿ ಪ್ರಾಯಶಃ ಎಲ್ಲೂ ಕೇಳದ ಶಬ್ದ ನಮ್ಮ ದೇಶದಲ್ಲಿದೆ ಭಿಕ್ಷೆಯ ವಿಷಯದಲ್ಲಿ. ಅದೆಂದರೆ “ಸುಭಿಕ್ಷಾ”. ಸಮೃದ್ಧಿಯಿದ್ದಾಗ ಮಾತ್ರ ಸುಭಿಕ್ಷೆ ಇರಲು ಸಾಧ್ಯ. ಅಂಥ ಸುಭಿಕ್ಷೆಯ ಕಾಲ ಈ ದೇಶಕ್ಕೆ ವಿದೇಶೀಯರು ಬರುವುದಕ್ಕೆ ಮೊದಲು ಇತ್ತು. ಗೃಹಸ್ಥನನ್ನು ಆಶ್ರಯಿಸಿಕೊಂಡು ಮೂರೂ ಆಶ್ರಮಗಳು ಬಾಳುತ್ತಿದ್ದ ಪರಿ ಅದೇ ಅಲ್ಲವೆ?
ಆದರೆ ಬಹಿರ್ಮುಖವಾಗಿ ಆಲೋಚಿಸುವ ಪಾಶ್ಚಾತ್ಯ ದೇಶಗಳು ಎಲ್ಲವನ್ನೂ ವಸ್ತುಗಳ ಮೂಲಕವಾಗಿಯೇ ಅಳೆಯುವ ಮಾನದಂಡಗಳನ್ನು ತಂದ ಪರಿಣಾಮವಾಗಿ ಇಲ್ಲಿಯೂ ಕೂಡ ಆವಶ್ಯಕತೆ ಇದೆಯೋ ಇಲ್ಲವೋ, ಅದಕ್ಕೊಂದು ಕಾರಣ ಇದೆಯೋ ಇಲ್ಲವೋ, ನಾವು ಅದನ್ನು ನಮ್ಮಲ್ಲಿ ಇಟ್ಟುಕೊಳ್ಳಬೇಕು ಎಂಬ ಮಾನಸಿಕತೆಯಿಂದ ವಿದೇಶದ ಎಲ್ಲ ವಿಚಾರಗಳನ್ನೂ, ವಸ್ತುಗಳನ್ನೂ ಕೊನೆಗೆ ವಿಷಗಳನ್ನೂ ನಮ್ಮಲ್ಲಿ ತುಂಬಿಕೊಳ್ಳಲಾರಂಭಿಸಿದೆವು. “ಉಪಾಯಂ ಚಿಂತಯೇತ್ ಪ್ರಾಜ್ಞಃ ತಥಾýಪಾಯಂ ಚ ಚಿಂತಯೇತ್” ಎಂಬ ಅರಿವು ಅನುಕರಿಸುವುದಕ್ಕಿಂತ ಮುಂಚೆ ಇರಬೇಕಿತ್ತು. ಬದಲಿಗೆ ಹೊಸದು, ಆಧುನಿಕವಾದದ್ದು ಎಂಬ ಹುಚ್ಚು ನಮ್ಮನ್ನು ಕಾಡಿದ್ದರಿಂದ ನಾವು ವಿದೇಶೀಯರ ಅಗ್ಗದ ನಕಲಾಗಿದ್ದೇವೆ. ಮನೆಯಲ್ಲಿ ಒಂದೂ ಕೆಲಸ ಮಾಡದೆ ಜಿಮ್ಗೆ ಹೋಗಿ ಶರೀರ ಸಂವರ್ಧನೆಯಲ್ಲಿ ತೊಡಗಿರುವ ಸಾವಿರಾರು ಜನರು ಉದಾಹರಣೆಯಾಗಿ ಸಿಗುತ್ತಾರೆ.
ವಿದೇಶೀ ವ್ಯವಸ್ಥೆಗೆ ಏನು ಬೇಕೋ ಅವರು ಅದನ್ನು ಹೊಂದಿಸಿಕೊಳ್ಳುತ್ತಾರೆ ಎಂಬುದು ವಾಸ್ತವವಾದರೂ, ನಮ್ಮ ನೆಲಕ್ಕೆ, ನಮ್ಮ ಆವಶ್ಯಕತೆಗೆ ಏನು ಬೇಕು, ಎಷ್ಟು ಬೇಕು, ಹೇಗೆ ಬೇಕು? – ಎಂಬುದರ ಸಾಮಾನ್ಯ ತಿಳಿವಳಿಕೆಯ ಕೊರತೆಯಿಂದ ನಾವು ‘ಕೊಳ್ಳುಬಾಕರು’ ಆಗಿದ್ದೇವೆ. “ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ” ಎಂದವರು ಹೀಗೆ ಮಾತನಾಡಬಹುದೇ? – ಎಂದರೆ, ಒಳಿತು ಕೆಡುಕುಗಳನ್ನು ಅರಿಯದೆ ಅನ್ಯರನ್ನು ಯಥಾವತ್ ಅನುಕರಿಸಿದರೆ ಅದು ಅಂಧಾನುಕರಣೆಯಾಗದೆ? ಯಾವುದು ಅನಿವಾರ್ಯ, ಯಾವುದು ಅವಶ್ಯ ಎಂಬುದನ್ನು ಆ ಕುಟುಂಬ ನಿರ್ಧರಿಸಬೇಕೇ ಹೊರತು ಬೇರಿನ್ನಾರೋ ಅಲ್ಲ.
ಮಾಧ್ಯಮಗಳು
ವಿದೇಶೀಯರ ನೆರಳಲ್ಲಿಯೇ, ಅದರಿಂದಲೇ ಕೃಪಾಪೆÇೀಷಿತವಾದ ಅನೇಕ ಮಾಧ್ಯಮಗಳು ಇಂದು ಭಾರತದಲ್ಲಿವೆ. ಸಲ್ಲದ ವಿಷಯಗಳ ವೈಭವೀಕರಣ, ಯಾವುದಕ್ಕೆ ಆದ್ಯತೆ ನೀಡಬೇಕೋ ಅದಕ್ಕೆ ನೀಡದೆ ಕೇವಲ ಸಮಯವನ್ನು ಕಳೆಯುವುದಕ್ಕಾಗಿಯೇ ಕಾರ್ಯಕ್ರಮಗಳನ್ನು ರೂಪಿಸುವುದು, ಸದಾ ಒಡಕಿನ ಚಿಂತನೆ ಮತ್ತು ಒಡಕಿನ ವಾರ್ತೆಗಳನ್ನೇ (ಬ್ರೇಕಿಂಗ್ ನ್ಯೂಸ್) ನೀಡುವ ಧಾರಾವಾಹಿಗಳು, ಕುಟುಂಬವನ್ನು ಒಂದು ಮಾಡುತ್ತೇವೆ ಎನ್ನುವ ಭರಾಟೆಯಲ್ಲಿ ಮನೆಯಲ್ಲಿಯ ಯಾರೋ ಒಬ್ಬಿಬ್ಬರನ್ನು ಖಳರಂತೆ ಚಿತ್ರಿಸಿ ವರ್ಷಾನುಗಟ್ಟಲೆ ಅದೇ ವಿಚಾರವನ್ನು ತಲೆಗೆ ತುಂಬುತ್ತ ಕೆಲಸ ಮಾಡುತ್ತ, ಕುಟುಂಬಸ್ಥರನ್ನು ನಂಬುವಂತಿಲ್ಲ ಎನ್ನುವ ವಿಷಬೀಜವನ್ನು ಬಿತ್ತುತ್ತಿವೆ.
ಚಲನಚಿತ್ರಗಳೂ ಕೂಡ ಇಂದು ವಿಚಾರವನ್ನು ಕೊಡುವ ಭರಾಟೆಯಲ್ಲಿ ಕೇವಲ ಯೌವನಸ್ಥರ ಸುತ್ತ ಮಾತ್ರವೇ ತಿರುಗುವುದರಿಂದ, ಅವರ ಭಾವನೆಗಳಿಗೇ ಹೆಚ್ಚು ಒತ್ತುಕೊಡುವುದರಿಂದ, ಇಡೀ ಪರಿವಾರ ಕುಳಿತು ನೋಡುವ ಚಿತ್ರ ಎಂದು ಜಾಹೀರು ಮಾಡಿ ತೆರೆಗಿಳಿಸುವ ಅನಿವಾರ್ಯತೆಗೆ ಬಂದುನಿಂತಿವೆ. ಎಲ್ಲರೂ ಒಟ್ಟಾಗಿ ನೋಡಬೇಕಾದ ಕಡೆ, ಅಲ್ಲಲ್ಲಿ ಕಿರಿಯರಿಗೆ ಬೇಡದ ಕುತೂಹಲಗಳನ್ನು ತುರುಕುವ, ಹಿರಿಯರಿಗೆ ನಮ್ಮ ಮಕ್ಕಳೂ ಹೀಗಿರಬಹುದೇ ಎಂಬ ಆತಂಕವನ್ನು ಹುಟ್ಟುಹಾಕುವಂಥ ಕೆಲಸಗಳನ್ನು ಮಾಡುತ್ತಿವೆ.
ವೈಯಕ್ತಿಕ ಕಾರಣಗಳು
ಇವೆಲ್ಲಕ್ಕಿಂತ ಮಿಗಿಲಾಗಿ, ವ್ಯಕ್ತಿಯೊಬ್ಬನ ವೈಯಕ್ತಿಕವಾದ ದೌರ್ಬಲ್ಯಗಳು, ಆಸೆ-ಆಕಾಂಕ್ಷೆಗಳು, ದುಃಖ-ದುಮ್ಮಾನಗಳು, ಮೋಹ-ಮರೆವುಗಳು, ಅತಿಸ್ನೇಹ-ವಾಂಛೆಗಳು, ಸ್ವಾರ್ಥ-ಅಸೂಯೆಗಳು, ಅವಿಶ್ವಾಸ-ಅತಿವಿಶ್ವಾಸಗಳು, ಭಯ-ಬಿಗುಮಾನಗಳು, ಕರ್ತವ್ಯಪರಾಙ್ಮುಖತೆಗಳು, ‘ಇದರಿಂದ ನನಗೇನು? ಇದನ್ನು ಹೇಳಲು ನೀನು ಯಾರು? ನಿನ್ನ ಕೆಲಸ ನೀಟಿು ನೋಡಿಕೋ’ – ಎಂಬ ಧೋರಣೆಗಳು, ‘ಸೋ ವಾಟ್’ ಚಿಂತನೆಗಳು, ಅನ್ಯಸಿದ್ಧಾಂತಗಳ ಪ್ರಭಾವಕ್ಕೆ ಒಳಗಾಗಿ ವೈಯಕ್ತಿಕ ಚಾರಿತ್ರ್ಯಕ್ಕಿಂತ ವೈಯಕ್ತಿಕ ಸುಖವೇ ಪ್ರಧಾನವೆನ್ನುವ ಚಿಂತನೆಗಳು, ಅನಗತ್ಯ ಕುತೂಹಲ ಕೆರಳಿಸುವ ಕೆಟ್ಟ ನಡೆನುಡಿಗಳು, ಏನು ಮಾಡಿದರೂ ತಪ್ಪಲ್ಲ ಎಂಬ ದಾರಿತಪ್ಪಿಸುವ ವಿಚಾರಗಳೇ ಮೊದಲಾದವು ನಮ್ಮ ಸಮಾಜದ ಕುಟುಂಬದಲ್ಲಿ ಎದ್ದು ಕಾಣುವ ವೈಯಕ್ತಿಕವಾದ ದೋಷಗಳು.
ತಪ್ಪು ಮಾಡಿದಾಗ ಆಗಬೇಕಾದ ನಾಚಿಕೆ ಇಲ್ಲದಿರುವುದು, ದೋಷಗಳನ್ನು ಸಹ್ಯವಾಗಿಸಿಕೊಳ್ಳದೆ ಇರುವುದು, ಸಭ್ಯತೆಯ ಹೆಸರಿನಲ್ಲಿ ಮೂಲತತ್ತ್ವವನ್ನು ಮರೆತಿರುವುದು, ಪಾಪಪ್ರಜ್ಞೆಯಿಲ್ಲದಿರುವುದು ಇಂದಿನ ಎಲ್ಲ ಪೀಳಿಗೆಯ ಜನರಲ್ಲಿಯೂ ಸಾಮಾನ್ಯವಾಗಿದೆ. ಇಂದು ಎಲ್ಲರಿಗೂ ವಿಚಾರಕ್ಕಿಂತ ವಿಧಾನವೇ ಮುಖ್ಯವಾಗಿಬಿಟ್ಟಿದೆ. ‘ಬಾಲಾದಪಿ ಸುಭಾಷಿತಂ ಗ್ರಾಹ್ಯಂ’ ಅಂದರೆ ಮಕ್ಕಳಿಂದಲೂ ಒಳ್ಳೆಯ ಮಾತನ್ನು ಗ್ರಹಿಸಬೇಕು ಎನ್ನುವ ವಾಕ್ಯದಲ್ಲಿ ಯಾರು ಹೇಳಿಕೊಟ್ಟರೂ ಕಲಿಯಬೇಕು ಎಂಬುದು ಅನೇಕರಿಗೆ ಮರೆತುಹೋಗಿದೆ. ಯಾರೇ ಆದರೂ ಒಳ್ಳೆಯದೇನನ್ನೇ ಆಗಲಿ, ಹೇಗೇ ಕೊಟ್ಟರೂ ಶಿರಸಾವಹಿಸಿ ಸ್ವೀಕರಿಸಬೇಕು ಎಂದು ಹೇಳಿಕೊಟ್ಟಿರುವ ನಮ್ಮ ಸಮಾಜದಲ್ಲಿ ಇಂದು, ನನಗೆ ಬೇಕಾದಂತೆ, ಸರಿಯಾಗಿ ಕೊಟ್ಟರೆ ಮಾತ್ರ ತೆಗೆದುಕೊಳ್ಳುತ್ತೇನೆ ಎಂಬ ಧೋರಣೆ ಎದ್ದು ಕಾಣುತ್ತದೆ. ಇದು ಆಬಾಲವೃದ್ಧರಾದಿಯಾಗಿ ಎಲ್ಲರಲ್ಲೂ ಕಂಡುಬರುವ ಒಂದು ಲಕ್ಷಣವಾಗಿದೆ.
ಅಜ್ಜ-ಅಜ್ಜಿಯರಂಥ ಹಿರಿಯರೂ ಕೂಡ ಇಂದಿನ ತಂತ್ರಜ್ಞಾನದಿಂದಲೇ ಅಭಿವೃದ್ಧಿ, ಅದರಿಂದಲೇ ಜೀವನ ಸುಲಭ, ಸುಖಕರ ಎಂದು ನಂಬಿ ನಡೆಯುತ್ತಿರುವುದರಿಂದ ಕಿರಿಯರಿಗೆ ಯಾವುದು, ಎಷ್ಟು, ಹೇಗೆ, ಏಕೆ ಎಂಬ ವಿಷಯಗಳ ಮನವರಿಕೆಯಾಗುತ್ತಿಲ್ಲ. ಇಂದಿನ ತಂದೆ-ತಾಯಿಯರು ಮಕ್ಕಳನ್ನು ಇನ್ನಷ್ಟು ಬುದ್ಧಿವಂತರನ್ನಾಗಿ, ಇನ್ನಷ್ಟು ಸುಖಿಗಳನ್ನಾಗಿ ಮಾಡಿಬಿಡಬೇಕು ಎಂಬ ಹುಂಬತನದಿಂದ ಇಡೀ ದಿನವನ್ನು ಹಣ ಗಳಿಸುವುದಕ್ಕೆ, ಬಳಸುವುದಕ್ಕೆ, ಉಳಿಸುವುದಕ್ಕೇ ಮೀಸಲಿಡುತ್ತಿದ್ದಾರೆ. ಇನ್ನು ಯೌವನಾವಸ್ಥೆಯಲ್ಲಿರುವ, ಈಗಷ್ಟೇ ವಿವಾಹವಾದವರೂ, ಕಾಲೇಜು ವಿದ್ಯಾರ್ಥಿ/ವಿದ್ಯಾರ್ಥಿನಿಯರೂ ಕೂಡ ಯೌವನವೇ ಶಾಶ್ವತ, ಯೌವನವಿರುವುದು ಸ್ವರತಿಸಾಧನೆಗಾಗಿ, ತಂತ್ರಜ್ಞಾನದಿಂದಲೇ ಬದುಕು, ಹಿರಿಯರೆಲ್ಲರೂ ಮೂರ್ಖರು, ಮದುವೆಯೆಂಬುದು ಕೇವಲ ಭೌತಿಕ ಸುಖಕ್ಕಾಗಿ ಮಾತ್ರ, ಮಕ್ಕಳೆಂದರೆ ಕಿರಿಕಿರಿ, ಮಕ್ಕಳಿಗೆ ಎಲ್ಲ ಗೊತ್ತಾಗುತ್ತದೆ – ಎಂಬಿತ್ಯಾದಿ ತಥಾಕಥಿತ ದುಷ್ಪ್ರಭಾವಿತ ವಿಚಾರಗಳಿಂದ ತುಂಬಿಹೋಗಿದ್ದಾರೆ. ಮಕ್ಕಳನ್ನು ಸಾಕಿ-ಸಲಹುವ ಎಲ್ಲ ಮೂಲ ವಿಧಾನಗಳನ್ನೂ ಮರೆತು, ಎಲ್ಲವೂ ಫಾಸ್ಟ್ ಎಂಬ ಜಾಣಮೂರ್ಖತನಕ್ಕೆ ಒಳಗಾಗಿ ಎಲ್ಲಕ್ಕೂ ಬಾಹ್ಯ ಕಾರಣಗಳನ್ನೇ ಕೊಡುತ್ತ, ಆಂತರಂಗಿಕ ಶಕ್ತಿ ನೀಡುವ ಮೂಲಕಾರ್ಯವನ್ನು ಯಾವುದೇ ವಯಸ್ಸಿನ ಹಿರಿಯರೂ ಮಾಡುತ್ತಿಲ್ಲವೆಂದೆನಿಸುತ್ತದೆ.
ಇಂಥ ವಾತಾವರಣದಲ್ಲಿ ಬೆಳೆದ ಮಕ್ಕಳು, ಕಂಡದ್ದನ್ನೆಲ್ಲ ಪ್ರಶ್ನಿಸಬೇಕು, ಕೇಳಿದ್ದನ್ನೆಲ್ಲ ನುಡಿಯಬೇಕು, ಹೇಳಿದ್ದನ್ನೆಲ್ಲ ಮಾಡಬೇಕು, ಇಷ್ಟರ ಮೇಲೆ ಕಲಿತ ಎಲ್ಲವನ್ನೂ ಮಾಡಿ ನೋಡಬೇಕು ಎನ್ನುವ ಅಪಕ್ವ ಕುತೂಹಲದಲ್ಲಿರುವಾಗ ಹೊರಗಿನ ವಾತಾವರಣದಿಂದ ಪಡೆದ ಪ್ರದೂಷಣೆಯನ್ನು ಸಹಿಸುವುದು ಹೇಗೆ? ಹಾಗೆಂದು ಮಕ್ಕಳನ್ನು ಬೈಯಲಾದೀತೇ? ಮಕ್ಕಳು ಬೇಗ ಊಟ ಮಾಡುವುದಿಲ್ಲ ಎಂಬ ಕಾರಣಕ್ಕೆ ಮೊಬೈಲ್ ಕೈಗೆ ಹಿಡಿಸಿದ ತಾಯಿಗೆ, ಮುಂದೊಂದು ದಿವಸ ಮಗು ಮೊಬೈಲ್ ಚಟಕ್ಕೆ ಬಿದ್ದಿದೆ ಎಂದು ಹೇಳುವ ಅಧಿಕಾರವಿದೆಯೇ? ತಾನು ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿ, ಮಕ್ಕಳಿಗೆ ನಿಯಮಪಾಲನೆಯ ಪಾಠ ಹೇಳಿಕೊಟ್ಟರೆ ಮಕ್ಕಳು ಕಲಿಯುವರೇ? ತಾನೇ ಭಾರತೀಯ ಸಂಸ್ಕøತಿ ಗೊಡ್ಡು ಎಂದುಕೊಂಡು ಶಾಸ್ತ್ರ-ಸಂಪ್ರದಾಯ ಎಂದು ಒಣ ಉಪದೇಶವನ್ನು ನೀಡಿದರೆ ಮಕ್ಕಳು ಅದೇ ರೀತಿಯಲ್ಲಿ ಬೆಳೆಯುವರಲ್ಲವೇ? ಈ ಎಲ್ಲ ವಿಚಾರಗಳನ್ನು ಮುಂದಿಟ್ಟು ನೋಡಿದಾಗ ಮಕ್ಕಳದ್ದು ತಪ್ಪು ಎನ್ನಲಾದೀತೇ?
ಎಲ್ಲಕ್ಕಿಂತ ಮಿಗಿಲಾಗಿ ‘ವಿಪರೀತ ಚಿಂತನೆ’ಯ ಭೂತ ನಮ್ಮನ್ನು ಕಾಡುತ್ತಿದೆ. ಯಾವುದು ಯಾಕೆ, ಎಷ್ಟು, ಹೇಗೆ, ಯಾವಾಗ ಎಂಬುದನ್ನು ಯೋಚಿಸದ ಹಿರಿಯರು ಮಕ್ಕಳು ಹಾದಿತಪ್ಪಿದಾಗ ಅವರನ್ನು ಅತಿಯಾಗಿ ಶಿಕ್ಷಿಸುವುದು, ಅತಿಯಾಗಿ ಮೋಹಗೊಳಿಸುವುದು ಇತ್ಯಾದಿಗಳನ್ನು ಮಾಡಿದಾಗ, ವಾಸ್ತವಗಳನ್ನು ಅರಿಯದೆ ಬೆಳೆದ ಮಕ್ಕಳು ಆತ್ಮಹತ್ಯೆಗೆ ಶರಣಾಗುವುದು, ಧೂಮಪಾನ- ಕುಡಿತ-ಮಾದಕದ್ರವ್ಯಗಳ ವ್ಯಸನಿಗಳಾಗುವುದು, ಮದುವೆಯಾಗದೆ ಇರುವುದು, ಮದುವೆಯಾದವರು ವಿಚ್ಛೇದನ ಪಡೆಯುವುದು, ಲವ್ಜಿಹಾದ್, ಮತಾಂತರಗೊಳ್ಳುವುದು, ಅತ್ಯಾಚಾರ ನಡೆಸುವುದು, ಅತ್ಯಾಚಾರಕ್ಕೆ ಒಳಗಾಗುವುದು, ವಿಕೃತಿಗಳಾದ ಸಲಿಂಗಕಾಮ, ಸ್ವೇಚ್ಛಾಚಾರ ಮೊದಲಾದವನ್ನು ರೂಢಿಸಿಕೊಳ್ಳುವುದು ಸಮಾಜದ ಕೆಲವು ವರ್ಗಗಳಲ್ಲಿ ಇಂದು ಎಲ್ಲೆಡೆ ಕಂಡುಬರುತ್ತಿದೆ.
ಇದಕ್ಕೆ ಪೂರಕವೆಂಬಂತೆ ಇಂದು ಮಕ್ಕಳಿಗೆ ಎಲ್ಲವೂ ಬೇಕಾದಾಗ ಸಿಗುತ್ತಿರುವುದರಿಂದ ಅದರಲ್ಲೂ ಹಣ ಮತ್ತು ಮಾಹಿತಿ ಎಲ್ಲೆಡೆ ಸಿಗುತ್ತಿರುವುದರಿಂದ ಅವರಿಗೆ ಯಾವ ವಸ್ತು, ವಿಚಾರಗಳಿಗೂ ಬೆಲೆಯಿಲ್ಲದಾಗಿದೆ. ಶಾಲಾ-ಕಾಲೇಜುಗಳು ಕೇವಲ ಪಾಠ್ಯ ಮಾರುವ ಅಂಗಡಿಗಳಾಗಿವೆ. ಮಠ-ಮಾನ್ಯಗಳು ಕೇವಲ ಮತಾಚರಣೆಗೆ ಇಂಬುಗೊಡುತ್ತಿವೆಯೇ ಹೊರತು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವ ಧರ್ಮಕಾರ್ಯಗಳಿಗೆ ಅವಕಾಶ ಮಾಡಿಕೊಡುತ್ತಿವೆ ಎನಿಸುವುದಿಲ್ಲ.
ಹಾಗಿದ್ದರೆ ಈ ಸಮಸ್ಯೆಗೆ ಪರಿಹಾರವಿಲ್ಲವೆ? ನಾವು ಅಂಥ ಕೆಟ್ಟ ಪರಿಸ್ಥಿತಿಯಲ್ಲಿದ್ದೇವೆಯೆ? – ಎಂಬ ಪ್ರಶ್ನೆ ಎದುರಾಗುವುದು ಸಹಜವೇ. ಭಾರತ ಎಂದೂ ಸಮಸ್ಯೆಗಳಿಂದ ಕೂಡಿರಲಿಲ್ಲವೆಂದಲ್ಲ. ಆದರೆ ಪ್ರತಿಬಾರಿಯೂ ಎರಗಿದ ಸಮಸ್ಯೆಗೆ ತನ್ನಲ್ಲೇ ಪರಿಹಾರವನ್ನು ಕಂಡುಕೊಂಡು ಮುಂದುವರಿದಿದೆ. ಸಮಸ್ಯೆಯಿಲ್ಲದಿದ್ದರೆ ಬದುಕು ಒಂದರ್ಥದಲ್ಲಿ ಶೂನ್ಯವೇ ಸರಿ. ಆದರೆ ಕಾಲ ಕಾಲಕ್ಕೆ ಉಂಟಾಗುವ ಸಮಸ್ಯೆಗಳಿಗೆ ಪರಿಹಾರವನ್ನೂ ಕಂಡುಕೊಳ್ಳಬೇಕು. ಮತ್ತು ಆ ಪರಿಹಾರಗಳ ಪ್ರಾಮಾಣಿಕ ಚಿಂತನಾನುಷ್ಠಾನಗಳೂ ಆಗಬೇಕು.
ಮೊದಲಿಗೆ ಎಲ್ಲರಲ್ಲಿಯೂ ಆಗಬೇಕಾದದ್ದು ಸ್ವದೇಶಾಭಿಮಾನದ ಜಾಗೃತಿ. ಭಾರತದ ಪ್ರಾಚೀನತೆ, ಭಾರತದ ವಿಜ್ಞಾನ, ಭಾರತೀಯ ಕಲೆ, ಭಾರತೀಯ ಚಿಂತನೆಗಳೆಲ್ಲವನ್ನೂ ನಾವು ನಮ್ಮ ಇಂದಿನ ಪೀಳಿಗೆಗೆ ತಿಳಿಸಿಕೊಡಬೇಕು. ಅದಕ್ಕೆ ಮನೆಯೇ ಸೂಕ್ತ ಸ್ಥಾನ. ನಮ್ಮ ಗುರು-ಹಿರಿಯರು, ನಮ್ಮ ಋಷಿ-ಮುನಿಗಳು, ನಮ್ಮ ವಂಶಜರು, ನಮ್ಮ ಕುಲದ ಆಚಾರ್ಯರು ಎಲ್ಲರ ವಿಚಾರವಾಗಿಯೂ ತಿಳಿಸಿಕೊಡಬೇಕು. ಈ ದೇಶದ ಸಂಸ್ಕøತಿ, ಪುಣ್ಯಕ್ಷೇತ್ರಗಳು, ಪುರಾಣ-ಪ್ರಸಿದ್ಧರು, ಸಾಹಿತ್ಯ, ಕಲಾ ರಚನೆಗಳು ಮುಂತಾದ ಎಲ್ಲವನ್ನೂ ತಿಳಿಸಿಕೊಡಬೇಕು. ನಮ್ಮ ಇತಿಹಾಸಗ್ರಂಥಗಳಿಂದ ಈ ದೇಶದ ಅಸ್ಮಿತೆ ಆ ಕಾಲದಲ್ಲಿ ಹೇಗಿತ್ತು, ಮತ್ತು ಇಂದು ಹೇಗಿದೆ ಎಂಬುದನ್ನು ಯುವಪೀಳಿಗೆ ಮತ್ತು ಬಾಲಕ-ಬಾಲಕಿಯರು ಅರಿತಾಗ ಅವರಿಗೆ ನಮ್ಮ ಸಮಾಜದ ಬಗೆಗೆ ಗೌರವ ಮೂಡುವಂತಾದರೆ, ಮುಂದಿನ ದಿನಗಳಲ್ಲಿ ಅವರು ರಾಷ್ಟ್ರನಿಷ್ಠರಾಗಿ ಬಾಳುವರು.
ನಮ್ಮಲ್ಲಿ ಇದ್ದ ಎಲ್ಲ ತರಹದ ತಪ್ಪು ಅಭಿಪ್ರಾಯಗಳನ್ನೂ ನಾವು ಬದಿಗಿರಿಸಿ, ಒಳ್ಳೆಯದನ್ನು ಮಾತ್ರ ಮಕ್ಕಳಿಗೆ ಹೇಳಿಕೊಡಬೇಕು. ಬ್ರಿಟಿಷರ ಗೊಡ್ಡು ಇತಿಹಾಸವನ್ನು ಬಿಟ್ಟು, ನಮ್ಮ ದೇಶದ ನೈಜ ಇತಿಹಾಸದ ಕುರಿತಾಗಿ ಎಲ್ಲೆಡೆಯೂ ಜನಜಾಗೃತಿ ಮೂಡಿಸಬೇಕು. ಇದು ಸಮಾಜಮುಖವಾದ್ದರಿಂದ, ಜನಜಾಗೃತಿಗಳು ಎಲ್ಲ ಪ್ರದೇಶಗಳಲ್ಲಿಯೂ ಆಗಬೇಕು. ಪ್ರತಿ ಊರಿನಲ್ಲಿಯೂ ಕೂಡ ಇದರ ಬಗೆಗೆ ವಿಶೇಷ ಉಪನ್ಯಾಸಗಳು ನಡೆಯುವಂತಾಗಬೇಕು. ಇದರ ಜೊತೆಯಲ್ಲಿ ವಿದೇಶಗಳನ್ನು ನೋಡಿ, ಅಲ್ಲಿ ಇದ್ದು, ಇಲ್ಲಿಗೆ ಬಂದವರು ಅಲ್ಲಿಯ ಗುಣಗಳನ್ನು ಹೇಳುವಂತೆ ನಮ್ಮ ಗುಣಗಳನ್ನೂ ಹೇಳಬೇಕು. ಇಲ್ಲಿಯ ದೋಷಗಳನ್ನು ಎತ್ತಿ ಆಡಿದಂತೆ ಅಲ್ಲಿಯ ಲೋಪದೋಷಗಳ, ಓರೆಕೋರೆಗಳ ವಿಷಯವಾಗಿಯೂ ತಿಳಿಸಿಕೊಡಬೇಕು. ಭಾರತದ ವಾತಾವರಣದಲ್ಲಿ ಪ್ರತಿದಿನವೂ ಅಡುಗೆ ಮಾಡಿಕೊಂಡರೆ, ಅಲ್ಲಿರುವವರು ದಿನವೂ ತಿನ್ನುವುದು ತಂಗಳನ್ನು ಎನ್ನುವುದನ್ನು ಎಷ್ಟೋ ಜನರು ತಿಳಿದೇ ಇಲ್ಲ. ಕೆಲವು ಪದ್ಧತಿಗಳು ಅವರಿಷ್ಟದಂತೆ, ವಾತಾವರಣದ ದೆಸೆಯಿಂದ ಇರುತ್ತವೆ ಎಂಬುದು ಎಷ್ಟೋ ಭಾರತೀಯರಿಗೆ ತಿಳಿದೇ ಇಲ್ಲ.
ನಮ್ಮಲ್ಲಿ ಇರುವ ಜಾತಿ, ಮತ, ಪಂಥ, ಪ್ರಾಂತ, ಪಂಗಡಗಳ ಗೊಡವೆಗಳನ್ನು ನಾವು ಕೇವಲ ನಮ್ಮ ಮನೆಗಳಿಗೆ ಮಾತ್ರವೇ ಸೀಮಿತಗೊಳಿಸಿಕೊಂಡು, ಸಮಾಜಕ್ಕೆ ಬಂದ ಕೂಡಲೇ ನಾವು ಸಮಾಜದ ಅಂಗಭೂತರಾಗಿರುವ ಸಾಮಾನ್ಯರು ಎಂಬ ಭಾವ ತಳೆಯಬೇಕು. ಇಂಥ ಯೋಗ್ಯ ಶಿಕ್ಷಣವನ್ನು ಕೊಟ್ಟರೆ ಮಾತ್ರ ಮಕ್ಕಳನ್ನು ತಿದ್ದಿ ತೀಡಬಹುದು.
ಶಿಕ್ಷಕ ಮತ್ತು ಮಹಿಳೆ ಇವರಿಬ್ಬರನ್ನು ಹಾಳುಗೆಡವಿದರೆ ಸಮಾಜ ಹಾಳಾಗುತ್ತದೆ ಎಂಬುದೊಂದು ಪ್ರಸಿದ್ಧವಾದ ಅನುಭವದ ಮಾತು. ಆದ್ದರಿಂದ, ಮನೆಯಲ್ಲಿ ತಾಯಿಯೇ ಗುರುವಾದ್ದರಿಂದ, ತಾಯಂದಿರನ್ನು ಮೊದಲಿಗೆ ದೇಶದ ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ತೊಡಗಿಸಬೇಕು. ಎಲ್ಲೆಡೆಯೂ ಮಾತೃಮಂಡಳಿಗಳು ಧರ್ಮ-ಸಂಸ್ಕøತಿ-ಇತಿಹಾಸ-ನಾಗರಿಕತೆ-ವಿಜ್ಞಾನ-ಕಲೆ-ಸಾಹಿತ್ಯ-ಭಾಷೆ ಮೊದಲಾದ ಎಲ್ಲ ಕ್ಷೇತ್ರಗಳಲ್ಲಿ ಭಾರತೀಯರ ಆದರ್ಶವನ್ನು ತಿಳಿಸಿಕೊಟ್ಟು ಮನೆ ಮನೆಗಳಲ್ಲಿ ಅಂತೆಯೇ ಪ್ರತಿ ಶಾಲೆಯಲ್ಲಿಯೂ ಇದು ಮುಂದುವರಿಯುವಂತೆ ಪ್ರಯತ್ನಿಸಬೇಕು.
ಮುಂದಿನ ಪೀಳಿಗೆಯ ಮಕ್ಕಳ ಬಗೆಗಿನ ವಿಶ್ವಾಸವನ್ನು ಹೆಚ್ಚುಮಾಡಿಕೊಂಡು ದೇಶ-ಧರ್ಮ ವಿರೋಧಿಯಾಗದೆ ಭಾರತೀಯವಾದ ಎಲ್ಲವನ್ನೂ ತಿಳಿದುಕೊಳ್ಳುತ್ತ, ಆಚರಣೆಯಲ್ಲಿ ತೊಡಗಿಕೊಂಡು ತದನಂತರದಲ್ಲಿ ಕೂಲಂಕಷವಾಗಿ ಅಧ್ಯಯನ ಮಾಡುವುದು ಒಳ್ಳೆಯದಾಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಹಿತಕ್ಕಾಗಿ, ಸಮಾಜಮುಖಿಯಾಗಿ ಈ ಎಲ್ಲ ಓರೆ-ಕೋರೆಗಳನ್ನು ತಿದ್ದುವ ಸಮಾಜಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ರಾಷ್ಟ್ರ ಮೊದಲು ಎಂಬ ಭಾವವನ್ನು ಎಲ್ಲೆಡೆ ಬಿತ್ತಬೇಕು. ಹಳೆ ಬೇರು ಹೊಸ ಚಿಗುರು ಎಂಬಂತೆ, ಬೇರುಗಳನ್ನು ಗಟ್ಟಿಗೊಳಿಸಬೇಕು, ಚಿಗುರುಗಳು ಒಣಗದಂತೆ ನೋಡಿಕೊಳ್ಳಬೇಕು. ಅದಕ್ಕೆ ನಾವು ನಿತ್ಯಸ್ಫೂರ್ತಿಯಿಂದ, ನಿರಂತರತೆಯಿಂದ ನಮ್ಮ ಕುಟುಂಬ ಮತ್ತು ಸಮಾಜಬಾಂಧವರೊಡನೆ ನಮ್ಮ ಅಮೂಲ್ಯವಾದ ಸಮಯವನ್ನು ವಿನಿಯೋಗಿಸುವಂತಾಗಬೇಕು. ‘ನಾನು’ ಎಲ್ಲರ ಜೊತೆಯಲ್ಲಿ ಬೆರೆಯಬೇಕು, ‘ನಾನು’ ಎಂಬುದು ‘ನಾವು’ ಎಂದಾದಾಗ, ಸಕಲಕಾರ್ಯಗಳೂ ಸಿದ್ಧಿಸುತ್ತವೆ. ಸ್ವದೇಶ, ಸ್ವಭಾಷೆ, ಸ್ವಭೂಷಣ ಇದು ನಮ್ಮ ಜೀವನದ ನಿತ್ಯದ ಗಾಯತ್ರಿಯಾಗಬೇಕು. ಆಗ ಎಲ್ಲ ಓರೆಕೋರೆಗಳನ್ನು ತಿದ್ದುವುದು ಸುಲಭವಾಗುತ್ತದೆ