ನಿನ್ನ ಹಿರಿಮೆಯ ತಾಯೆ ಏನೆಂದು ಬಣ್ಣಿಸಲಿ ಬಲು ಶ್ರೇಷ್ಠ ನೀ ಕೊಟ್ಟ ಕೊಡುಗೆ
ನಾನೆಂಬುದದನಳಿಸಿ ಪ್ರೀತಿ, ಮಮತೆಯನೀವ ಕೂಡಿಬಾಳುವ ರೀತಿ ವರವು ನಮಗೆ
ಮನೆಯೆಂಬ ಮೂಲದೊಳು ಮನಮನಗಳೊಂದಾಗೆ ಸ್ನೇಹಸೇತುವು ಅದುವೆ ರಾಷ್ಟ್ರದೇಳಿಗೆಗೆ
ಚಿಣ್ಣರಿಗೆ ಸಂಸ್ಕಾರ-ಮೌಲ್ಯಗಳ ಕಲಿಸುವಾ ಹೊಣೆಯಿಹುದು ಮನೆಯಾ ಹಿರಿಯರಿಗೆ ||
ಮೋಹ ಮುಸುಕಲು ಈಗ ಸ್ವಾರ್ಥ ಸೆಳೆಯುತ್ತ, ನಿನ್ನ ಕೊಡುಗೆಗೆ ಘೋರ ಅಪಚಾರ
ಅನುಬಂಧವಿರದಿರಲು ಎಲ್ಲಿಹುದು ಭದ್ರತೆಯು, ಕಾಡುವುದು ಖಿನ್ನತೆಯ ಗ್ರಹಚಾರ
ಶೂನ್ಯವಾಗಿದೆ ತೃಪ್ತಿ, ದುಷ್ಟಚಟಗಳು ಹೆಚ್ಚಿ, ಸಮರಸತೆ ನಮ್ಮಿಂದ ಬಲುದೂರ
ಕಾಣದಾಗಿದೆ ರಕ್ಷೆ ವೃದ್ಧರಿಗೆ, ಅಬಲರಿಗೆ, ತಪ್ಪಿಹುದು ಎಲ್ಲ ಆಧಾರ ||
ಎಲ್ಲರೊಂದಾಗಿ ವಿಕೃತಿಗಳಳಿಸುತ್ತ ನುಡಿಸೋಣ ಸಂತಸದ ಝೇಂಕಾರ
ತರತಮದ ಭಾವವನು ಬೇರಿನಲೆ ಕಿತ್ತೆಸೆದು ಹಾಡೋಣ ಏಕತೆಯ ಓಂಕಾರ
ಮನಮನವು ಬೆಸೆದಿರುವ ಮನೆಯೆಂಬ ಮಂದಿರದಿ ಇಹುದೆಲ್ಲಿ ಹಕ್ಕೆಂಬ ಬಡಿವಾರ
ಮಮತೆಯಲಿ ಮಿಂದೆದ್ದ ಮಹಿಮೆಯಾ ದುಡಿಮೆಯಲಿ ಸಂತೃಪ್ತಿಯೆಂಬಾ ಪರಿಹಾರ ||
ಮಾತೃಶಕ್ತಿಯನು ಆದರಿಸಿ, ಗೌರವಿಸಿ ಮನೆಮಂದಿಯೊಂದಾಗಿ ದುಡಿಯೋಣ
ಮೆಚ್ಚಿನಲಿ, ಇಚ್ಛೆಯಲಿ ಮಾತುಕತೆಯಾಡುತ್ತ ಸ್ವಚ್ಛಹಾದಿಯಲಿ ಸಾಗೋಣ
ಮುರುಟಿದಾ ಬಂಧಕ್ಕೆ ಸ್ನೇಹಗಂಗೆಯನೆರೆದು ಹರುಷದಾ ಫಸಲನ್ನು ಬೆಳೆಯೋಣ
ಮಾತೃಭಾಷೆಯ ಸೊಗಡು ಸವಿಯುತ್ತ ಅನವರತ, ದೇಶೀಯ ವಸ್ತುಗಳ ಬಳಸೋಣ ||
– ಶಾರದಾ ವಿ. ಮೂರ್ತಿ