– ಪೂಜ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು, ಶ್ರೀರಾಮಚಂದ್ರಪುರ ಮಠ
ಪ್ರಶ್ನೆ: ಭಾರತೀಯ ಕುಟುಂಬವ್ಯವಸ್ಥೆಯ ಪರಿಕಲ್ಪನೆ ಅನನ್ಯವಾದದ್ದು. ಈ ಕುರಿತು ತಮ್ಮ ಅಭಿಪ್ರಾಯ ಏನು?
ಉತ್ತರ: ಆಧ್ಯಾತ್ಮಿಕವಾಗಿ ಹೇಳುವುದಾದರೆ, ಜೀವನದ ಪರಮರಕ್ಷೆ ಎಂದರೆ ಅದ್ವೈತ ಆಗುವುದು; ಜೀವದೇವಾದ್ವೈತ ಎಂದರೆ ಜೀವ ಮತ್ತು ದೇವರು ಒಂದಾಗುವುದು; ಅದನ್ನು ನಾವು ಇಲ್ಲಿಯೇ ಅಭ್ಯಸಿಸಬೇಕು ಎನ್ನುವುದೇ ಭಾರತೀಯ ಕುಟುಂಬಪದ್ಧತಿಯ ಜೀವಾಳ. ಜೀವಾದ್ವೈತ ಬಂದ ಬಳಿಕ ಜೀವದೇವಾದ್ವೈತ ಬರುತ್ತದೆ. ನಮ್ಮ ಸುತ್ತಮುತ್ತ ಇರುವ ಜೀವಗಳ ಜೊತೆಯೇ, ಪ್ರಕೃತಿಯ ಜೊತೆಯೇ ನಾವು ಒಂದಾಗದೆಹೋದರೆ ದೇವರ ಜೊತೆ ಒಂದಾಗಲು ಹೇಗೆ ಸಾಧ್ಯ? ಹಾಗಾಗಿ ಇವೆಲ್ಲ ಚೈತನ್ಯದ ಕಿಡಿಗಳು. ದೇವರು ಎಂದರೆ ಮಹಾಚೈತನ್ಯದ ಪರಿಪೂರ್ಣ ರೂಪ. ಇಲ್ಲಿ ನಾವು ಒಂದಾಗಬೇಕು – ಇದು ಒಂದು ರೀತಿಯ ರಿಹರ್ಸಲ್ನಂತೆ. ಇದನ್ನು ಸಾಧನೆ ಎಂದು ನಾವು ಹೇಳುತ್ತೇವೆ. ಭಾರತೀಯ ಕುಟುಂಬಪದ್ಧತಿ ದೈವಸಾಧನೆಯ ಒಂದು ಭಾಗವೇ ಆಗಿದೆ; ಸುತ್ತಮುತ್ತ ಇರುವ ಜೀವಿಗಳ ಜೊತೆ ಒಂದಾಗಿ ಸಾಗುವಂತಹದ್ದು ದೈವಸಾಧನೆಯ ಭಾಗವೇ ಹೊರತು ಬೇರೇನಲ್ಲ.
ಬೇರೆಬೇರೆ ಕಾರಣಗಳನ್ನು ಇಟ್ಟುಕೊಂಡು ಒಂದಾಗಬಹುದು. ಅದರಲ್ಲಿ ಕುಟುಂಬ, ಸಮಾಜ, ಊರು, ದೇಶ ಎಲ್ಲವೂ ಒಂದಾಗಲು ಇರುವ ಮಾಧ್ಯಮಗಳು. ಈ ಎಲ್ಲದರಲ್ಲೂ ನಮಗೆ ಬಹಳ ಬಲವಾದ ಭಾವನೆಗಳಿವೆ. ನಮ್ಮ ದೇಶ ಎಂದು ಹೇಳುವಾಗ, ಊರು ಎನ್ನುವಾಗ ಬಹಳ ಅಭಿಮಾನ ಇರುತ್ತದೆ. ನಮ್ಮ ಕುಟುಂಬ ಎನ್ನುವಾಗಲೂ ಅದೇ ಭಾವನೆ ಬರುತ್ತದೆ ಮತ್ತು ಆ ಅಭಿಮಾನ ಬೇಕು.
ನಮ್ಮ ವಿದ್ಯಾಗುರುಗಳಾದ ರಾಮಭದ್ರಾಚಾರ್ಯರು ನಮಗೆ ಹೇಳುತ್ತಿದ್ದ ಮಾತು ಒಂದು ಇದೆ: ಒಂದು ವೃಕ್ಷವನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ಕೊಂಬೆಯನ್ನು ಕಡಿದರೂ ಬಾಕಿ ಉಳಿದಿರುವ ರೆಂಬೆ-ಕೊಂಬೆಗಳೂ ಬಾಡುತ್ತವೆ. ಕಡಿದ ಕೊಂಬೆಯ ಎಲೆಗಳು ಬಾಡುವುದು ಸಹಜ; ಬಾಕಿ ಇರುವ ಎಲೆಗಳು ಬಾಡುವುದು ಏಕೆ? ಪರಸ್ಪರ ಅಂತಹ ಒಂದು ಅವ್ಯಕ್ತ ಬಂಧ ಇದೆ. ಹಾಗೆಯೇ, ಅಪ್ಪ-ಅಮ್ಮ, ಮಗ-ಮಗಳು, ಅಣ್ಣ-ತಮ್ಮ, ಅಕ್ಕ-ತಂಗಿ, ನಾದಿನಿ, ಮೈದುನ ಇಂತಹ ಸಂಬಂಧಗಳಲ್ಲಿಯೂ ಭಾರತೀಯ ತತ್ತ್ವಶಾಸ್ತ್ರ ಹೇಳುವ ಪ್ರಕಾರ ಅಂತಹ ಒಂದು ಅವ್ಯಕ್ತ ಬಂಧ ಇರುತ್ತದೆ. ಈ ಬಂಧ ಇರುವ ಕಾರಣವೇ, ಎಲ್ಲಿಯೋ ಇರುವ ಒಬ್ಬನಿಗೆ ಏನು ತೊಂದರೆ ಆದರೂ, ಕಾರಣವೇ ತಿಳಿದಿಲ್ಲದಿದ್ದರೂ ಇಲ್ಲಿ ನಮಗೆ ತಳಮಳ ಆಗುತ್ತದೆ. ಅಥವಾ ಶಕುನ, ಸೂಚನೆಗಳು ಶರೀರದಲ್ಲೋ ಪ್ರಕೃತಿಯಲ್ಲೋ ನಮಗೆ ಗೋಚರಿಸುತ್ತವೆ. ಇವೆಲ್ಲವೂ ಒಂದು ಬ್ಲಾಕ್ ಇದ್ದಂತೆ; ಅನೇಕ ವ್ಯಕ್ತಿಗಳು ಸೇರಿದ ಒಂದು ಅಸ್ತಿತ್ವ ಅದು. ಆದ್ದರಿಂದಲೇ ಅಲ್ಲಿ ನೋವಾದರೆ, ಇಲ್ಲಿಯೂ ಅನುಭವಕ್ಕೆ ಬರುತ್ತದೆ; ಇಲ್ಲಿ ನೋವಾದರೆ ಅಲ್ಲಿಯೂ ನೋವಾಗುತ್ತದೆ. ಒಂದು ಕುಟುಂಬ ಎಂದರೆ ಹೀಗೆಯೇ ಬರುವುದು.
ಶಂಕರಾಚಾರ್ಯರು ಭಾಷ್ಯದಲ್ಲಿ ಹೇಳುತ್ತಾರೆ: ಒಂದು ಕರು ಎಂದು ತೆಗೆದುಕೊಳ್ಳೋಣ. ಸಾವಿರಾರು ದನಗಳ ಮಧ್ಯೆ ಕರುವಿಗೆ ತನ್ನ ತಾಯಿಯ ಗುರುತು ಸಿಗುತ್ತದೆ. ಇದು ಮನುಷ್ಯನ ಮಧ್ಯೆ ಮಾತ್ರ ಇರುವುದಲ್ಲ. ಕರು ತನ್ನ ತಾಯಿಯ ಬಳಿಯೇ ಹೋಗುತ್ತದೆ. ಹೇಗೆ ಗುರುತು ಸಿಗುತ್ತದೆ ಅಂದರೆ: ನಮ್ಮದು ಕೇವಲ ಒಪ್ಪಂದ ಅಲ್ಲ; ಮನುಷ್ಯ-ಮನುಷ್ಯ ಜೊತೆಗೆ ಇರುವುದು ಅಗ್ರಿಮೆಂಟ್ ಅಲ್ಲ. ಅದರಾಚೆಗೂ ವಿಷಯವಿದೆ. ಸಹಜವಾಗಿ ಒಂದು ಬಂಧುತ್ವ ಇದೆ. ಕೊಟ್ಟಿಗೆಯಲ್ಲಿ ಕರು ಇರುತ್ತದೆ. ದನ ಸ್ವಲ್ಪ ದೂರ ಇರುತ್ತದೆ. ಕರು ಇಲ್ಲಿಂದ ಅಂಬಾ ಎಂದರೆ ದನ ಕೂಡಲೇ ಸ್ಪಂದಿಸುತ್ತದೆ. ಧ್ವನಿ ಸರಿಯಾಗಿ ಕೇಳದೆ ಇರುವ ದೂರದಲ್ಲಿ ಇದ್ದರೂ ದನ ಸ್ಪಂದಿಸುತ್ತದೆ. ಇದನ್ನು ನಾವು ಅನುಭವದಲ್ಲಿ ನೋಡಬಹುದು.
ಇದೆಲ್ಲವೂ ಬಂಧವು ಇರುವುದಕ್ಕೆ ಸಾಕ್ಷಿಯಾಗಿದೆ. ಹಾಗಾಗಿಯೇ ನಮ್ಮಲ್ಲಿ ಅಶೌಚ ‘ಸೂತಕ’ ಆಚರಣೆಯೂ ಇದೆ. ಈಗ ನಮ್ಮ ಕುಟುಂಬದ ಒಳಗೆ ಒಬ್ಬ ತೀರಿ ಹೋದರೆ ಅಥವಾ ಹೊಸ ಸದಸ್ಯನ ಆಗಮನವಾದರೆ ಸೂತಕ ಆಚರಣೆ ಮಾಡುತ್ತೇವೆ. ಆಗಮನ, ನಿರ್ಗಮನಕ್ಕೆ ಅಂತಹ ಪರಿಣಾಮವಿದೆ ಎನ್ನುವುದರ ಸೂಚನೆಯೆ ಇದು. ಹಾಗೆ ನಮ್ಮ ಪರಂಪರೆಯ ದೃಷ್ಟಿಯಿಂದ ಪರಿಶೀಲಿಸುವುದಾದರೆ: ಒಬ್ಬನಿಗೆ ಮಕ್ಕಳು ಇಲ್ಲ ಎಂದುಕೊಳ್ಳೋಣ. ಆತನ ಅಣ್ಣ ಅಥವಾ ತಮ್ಮನ ಮಕ್ಕಳು ತರ್ಪಣ ಕೊಟ್ಟರೆ ಆ ಜೀವಕ್ಕೆ ತಂಪಾಗುತ್ತದೆ. ಸ್ವತಃ ಮಕ್ಕಳು ಅನಿವಾರ್ಯ; ಮಕ್ಕಳು ಶ್ರಾದ್ಧ-ಅಪರಕ್ರಿಯೆಗಳನ್ನು ಮಾಡಬೇಕು. ಇದೇ ಕಾರಣಕ್ಕೆ ಸಂತತಿ ಬೇಕೇ ಬೇಕು ಎನ್ನುವ ಆಗ್ರಹ ಇರುವುದು. ಮುಂದೆ ನಾವು ದೇಹ ಕಳಚಿ ಹೋದಾಗ ನಮಗೆ ತಂಪು-ತೃಪ್ತಿ ಸಿಗುವುದು ಇಲ್ಲಿ ಇರುವ ಮಕ್ಕಳಿಂದಾಗಿ. ನಮ್ಮ ಕುಟುಂಬ ಜೀವನದ ವ್ಯವಸ್ಥೆ ಕೇವಲ ಒಂದು ಒಪ್ಪಂದ ಅಲ್ಲ ಎಂದಿದ್ದು ಇದೇ ಕಾರಣಕ್ಕೆ. ಅದು ಇಲ್ಲಿಯೇ ಮುಗಿಯುವುದಿಲ್ಲ; ದೇಹ ಕಳಚಿ ಹೋದ ಬಳಿಕವೂ ಸಂಬಂಧ ಮುಂದುವರಿಯುತ್ತದೆ. ಅದು ಸಾವಿಗೇ ಮುಕ್ತಾಯವಾಗುವುದಿಲ್ಲ. ಗಂಡ ಹೆಂಡತಿಯ ಸಂಬಂಧವೂ ಕೂಡ ಅಂತೆಯೇ ಆಗಿದೆ. ಯಾರು ಮೊದಲೇ ಹೋದರೂ ಅಲ್ಲಿ ಕಾಯುತ್ತಾನೆ ಎಂದು ಲೆಕ್ಕ. ಸತಿಗೆ ಪತಿಲೋಕ ಪ್ರಾಪ್ತಿ; ಬಹಳ ವಿಶೇಷವಾದದ್ದು ಅದು. ನಮ್ಮಲ್ಲಿ ಶಾಸ್ತ್ರವಿದೆ; ‘ಅಭ್ಯುರ್ದತ್ತಾ ಕನ್ಯಾಃ’ ಅಂದರೆ: ಧಾರೆ ಎರೆದು ಕೊಟ್ಟ ಕನ್ಯೆ, ಇಲ್ಲಿ ಹೇಗೋ ಅಲ್ಲಿಯೂ ಹಾಗೆಯೇ ಎಂದು. ಪರಲೋಕದಲ್ಲಿಯೂ ಜೊತೆಗೇ ಇರುವಂತಹದ್ದು ಎಂದರ್ಥ. ನಮ್ಮದು ಎಷ್ಟು ಬಲವಾದ ಬಾಂಧವ್ಯ ನೋಡಿ. ನಮ್ಮಲ್ಲಿ ಇಷ್ಟೆಲ್ಲ ಅನಾಹುತಗಳ ಮಧ್ಯೆಯೂ ನಾವು ಜೊತೆಗೆ ಇರಲು ಈ ಬಲವಾದ ಬಾಂಧವ್ಯವೇ ಕಾರಣ. ಆಘಾತ ಆಗಿದೆ, ಆದರೆ ಪೂರ್ತಿ ಕಳಚಿಕೊಂಡಿಲ್ಲ. ದೇಹ ಕಳೆದುಹೋದ ತರುವಾಯವೂ ಜೀವಕ್ಕೆ ತಂಪು ಸಿಗುವುದು ಈ ಕುಟುಂಬವ್ಯವಸ್ಥೆಯ ಸದಸ್ಯರಿಂದ. ಅವರು ಪಾಪ ಮಾಡಿದರೂ ಅಲ್ಲಿ ನಮಗೆ ಪಾಪದಲ್ಲಿ ಪಾಲಿದೆ; ಪುಣ್ಯ ಮಾಡಿದರೂ ಪಾಲಿದೆ. ಮಕ್ಕಳನ್ನು ಒಳ್ಳೆಯ ರೀತಿಯಿಂದ ಬೆಳಸಬೇಕು; ಏಕೆಂದರೆ ಮಕ್ಕಳು ಪುಣ್ಯ ಮಾಡಿದರೆ ಪಾಲಿದೆ; ಅದೇ ಅವರು ಪತನಗೊಂಡರೆ ಈತನ ಮೇಲೆ ಅದು ಪರಿಣಾಮ ಬೀರುತ್ತದೆ. ‘ಕುಲಂ ಪವಿತ್ರಂ, ಜನನೀ ಕೃತಾರ್ಥಾ, ವಸುಂಧರಾ ಪುಣ್ಯವತೀ ಚ ಯೇನ’. ಒಬ್ಬ ಸಂನ್ಯಾಸ ಸ್ವೀಕಾರ ಮಾಡಿ ಮುಕ್ತನಾದರೆ ಆತನ ಹಿಂದಿನ-ಮುಂದಿನ ತಲೆಮಾರು ಎಲ್ಲಾ ಉದ್ಧಾರವಾಗುತ್ತದೆ ಎಂದು ಇದೆ. ಒಬ್ಬ ಆತ್ಮಸಾಧನೆ ಮಾಡಿ ಮುಕ್ತಿ ಹೊಂದಿದರೆ ಕೇವಲ ಆತ ಒಬ್ಬನೇ ಉದ್ಧಾರ ಆಗುವುದಲ್ಲ; ಅವನ ಇಡೀ ಕುಲವನ್ನೇ ಆತ ಉದ್ಧಾರ ಮಾಡುತ್ತಾನೆ. ಇಲ್ಲಿ ಅರಿವಿಗೆ ಬರುವುದು ಏನೆಂದರೆ: ಭಾರತೀಯ ಕುಟುಂಬಪದ್ಧತಿ ಅಷ್ಟು ಗಟ್ಟಿಯಾದ ಬಂಧ. ಅದು ಜೀವ-ಜೀವದ, ಆತ್ಮದ ಸ್ತರದಲ್ಲಿ ಇರುವುದು; ಕೇವಲ ಬಾಹ್ಯ ಅಥವಾ ಭೌತಿಕ ಅಲ್ಲ.
ಅಂತಹ ಸ್ಥಾನಗಳು ನಮ್ಮಲ್ಲಿ ತುಂಬಾ ಇವೆ. ತಾಯಿ-ತಂದೆಗೆ ಗುರುಸ್ಥಾನ ಇದೆ. ಅವರ ವಚನಗಳನ್ನು ನಾವು ಪಾಲಿಸಬೇಕು. ಪಿತೃವಚನದ ಪಾಲನೆಗಾಗಿ ಶ್ರೀರಾಮನು ರಾಜ್ಯವನ್ನೇ ತ್ಯಾಗ ಮಾಡುತ್ತಾನೆ. ಒಂದು ವೇಳೆ ತಂದೆ ಬೆಂಕಿಗೆ ಹಾರು ಎಂದಿದ್ದರೆ ಹಾರುತ್ತಿದ್ದೆ, ಸಮುದ್ರಪ್ರವೇಶ ಮಾಡು ಎಂದರೆ ಮಾಡುತ್ತಿದ್ದೆ ಎಂದೂ ಶ್ರೀರಾಮ ಹೇಳುತ್ತಾನೆ. ಅಪ್ಪನಿಗೆ ನನ್ನ ಮೇಲೆ ಹಕ್ಕು ಇದೆ, ಆತ ಪ್ರಭು ಎಂದು ಶ್ರೀರಾಮ ಹೇಳುತ್ತಾನೆ. ಇಂತಹ ಗಟ್ಟಿಯಾದ ಬಂಧ ನಮ್ಮದು. ಈಗ ಅದು ಬೇರೆ ರೀತಿಯಾಗಿರಬಹುದು. ಅವರಿಗೆ ಅಂತಹ ಪ್ರಜ್ಞೆ ಇತ್ತು.
ಪ್ರಶ್ನೆ: ಕುಟುಂಬಗಳು ಒಡೆದು ಸಣ್ಣವಾಗುತ್ತಿರುವ ಕಾರಣ ಸಾಮಾಜಿಕ ಹಾಗೂ ವೈಯಕ್ತಿಕ ಜೀವನಮೌಲ್ಯಗಳು ಕುಸಿಯುತ್ತಿವೆಯೆ? ತಮ್ಮ ಅನಿಸಿಕೆ ಏನು?
ಉತ್ತರ: ಖಂಡಿತ; ನೂರಕ್ಕೆ ನೂರರಷ್ಟು. ಕುಟುಂಬವು ವಿಭಕ್ತ ಆಗುವಾಗ ಮೊದಲಿಗೆ ಅಜ್ಜ-ಅಜ್ಜಿ ವಿಯೋಗವನ್ನು ಅನುಭವಿಸುತ್ತಾರೆ. ಇಬ್ಬರೋ ಮೂವರೋ ಮಕ್ಕಳು ಇದ್ದರೆ ಎಲ್ಲಿಯೋ ಒಂದು ಕಡೆ ಅಜ್ಜ-ಅಜ್ಜಿ ಇರಲು ಸಾಧ್ಯ; ಎಲ್ಲರ ಜೊತೆ ಇರುವುದು ಅಸಾಧ್ಯವಾದ ವಾತಾವರಣ ಸೃಷ್ಟಿಯಾಗುತ್ತದೆ. ಸಣ್ಣಮಗುವಿಗೆ ಸಂಸ್ಕಾರಯುತವಾಗಿ ಬೆಳೆಯಬೇಕಾದ ಮುಖ್ಯವಾದ ಕೊಂಡಿಯೇ ತಪ್ಪಿಹೋಗುತ್ತದೆ. ಶಿಶು ಬೆಳೆಯುವಾಗ ಸರ್ವಾಂಗೀಣ ವಿಕಾಸ ಆಗಬೇಕು; ಆ ಮಗುವಿಗೆ ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಅಣ್ಣ-ತಮ್ಮ, ಅಕ್ಕ-ತಂಗಿ, ಚಿಕ್ಕಪ್ಪ-ದೊಡ್ಡಪ್ಪ ಎಲ್ಲರೂ ಸಿಗಬೇಕು. ಹೀಗಿರುವ ವಾತಾವರಣದಲ್ಲಿ ಕೆಲವು ಅಂಶಗಳು ಕೆಲವರಿಂದ, ಮತ್ತೆ ಒಂದಿಷ್ಟು ಅಂಶಗಳು ಇನ್ನೊಬ್ಬರಿಂದ ಪಡೆದುಕೊಂದು ಮಗು ಬೆಳೆಯುತ್ತದೆ. ಆದರೆ ಈಗ ಏನಾಗುತ್ತಿದೆ? ಅವೆಲ್ಲಾ ಇಲ್ಲವೇ ಇಲ್ಲ. ಹಾಗೆ ಮಗುವಿನ ಬೆಳವಣಿಗೆಯಲ್ಲಿ ಕೊರತೆ ಬಂತು; ಮಾನಸಿಕತೆಗೆ ಕೊರತೆ ಬಂತು. ಸಮಗ್ರ ಬೆಳವಣಿಗೆ ಅಸಾಧ್ಯವಾಗುತ್ತದೆ. ಸೀಮಿತವಾದ ಬೆಳವಣಿಗೆಯಷ್ಟೇ ಮಗುವಿಗೆ ಸಿಗುತ್ತದೆ. ಅಪ್ಪ-ಅಮ್ಮನೂ ಜೊತೆಗೆ ಇರುವುದಿಲ್ಲ; ಅವರಿಗೆ ಹೊರಗಿನ ಕೆಲಸವಿರುತ್ತದೆ. ಮಗುವನ್ನು ಬೇಬಿಸಿಟ್ಟಿಂಗ್ಗೆ ಹಾಕಿ ತೆರಳಿರುತ್ತಾರೆ. ಈಗ ಮಗುವಿಗೆ ಯಾವ ಸಂಸ್ಕಾರ ಬಂದೀತು? ತತ್ಪರಿಣಾಮವಾಗಿ ರಕ್ತದ ಸಂಸ್ಕಾರವೂ ಇಲ್ಲ, ಅಂತಹ ಬಾಂಧವ್ಯವೂ ಬರುವುದಿಲ್ಲ.
ಆದ್ದರಿಂದ ನಾವು ಒತ್ತಿಹೇಳುವುದು ತುಂಬುಕುಟುಂಬದಲ್ಲಿ ವಾಸ ಮಾಡಬೇಕು ಎಂದು. ಲೌಕಿಕ ಕಾರಣವನ್ನೂ ಕೊಡಬಹುದು: ಗಂಡ-ಹೆಂಡತಿ ಇಬ್ಬರೇ ಇರುವಾಗಲೂ, ನಾಲ್ಕು ಜನರ ಜೊತೆ ಇರುವಾಗಲೂ ವ್ಯತ್ಯಾಸ ಇರುತ್ತದೆ. ಇಬ್ಬರೇ ಎಂದಾಗ ಕ್ರೌರ್ಯಪ್ರವೃತ್ತಿ ಜಾಸ್ತಿ. ಇವರು ಏನು ಮಾಡುತ್ತಾರೆ ಎಂದು ನೋಡಲು ಯಾರೂ ಇರುವುದಿಲ್ಲ. ಮನುಷ್ಯನ ಒಳಗೆ ಕ್ರೌರ್ಯ ಇದೆ; ಅದು ಇಂತಹ ಸಂದರ್ಭದಲ್ಲಿ ಹೊರಗೆ ಬರುತ್ತದೆ. ಈ ಸಂದರ್ಭದಲ್ಲಿ ಏನು ಆಗಬಹುದು ಎಂದು ಹೇಳುವುದು ಸಾಧ್ಯವಿಲ್ಲ. ಅದೇ ಮನೆಯ ತುಂಬಾ ಜನ ಇದ್ದರೆ, ಯಾರೋ ಒಬ್ಬಾತ ಹಾಗೆ ಮಾಡಬೇಡ ಎಂದು ಅಡ್ಡಬರುತ್ತಾನೆ. ಅಲ್ಲದೆ ಎಲ್ಲರೂ ಇರುವಾಗ ಅಂತಹ ಮನಃಸ್ಥಿತಿಯೂ ಬರುವುದಿಲ್ಲ. ಅಂದರೆ, ನಮ್ಮ ನಾಲಗೆಯ ಮೇಲೆ, ನಮ್ಮ ಕೈ-ಬಾಯಿಗಳ ಮೇಲೆ ನಿಯಂತ್ರಣ ಇರುತ್ತದೆ. ಅದೇ ಇಬ್ಬರೇ ಇದ್ದಾಗ ಸಂಸ್ಕಾರವೂ ಇಲ್ಲ, ನಿಯಂತ್ರಣವೂ ಇಲ್ಲ. ಈ ದೃಷ್ಟಿಯಿಂದಲೂ ತುಂಬುಕುಟುಂಬ ಬಹುಮುಖ್ಯ.
ಇತ್ತೀಚೆಗೆ ವಿಚ್ಛೇದನ ಹೆಚ್ಚಾಗುತ್ತಿದೆ. ಕಾರಣವೇನು? ನಮ್ಮ ಪ್ರಕಾರ ಪ್ರಮುಖ ಕಾರಣ: ಬಾಲ್ಯದಲ್ಲಿ ಹತ್ತಾರು ಮಕ್ಕಳು ಜೊತೆಗೇ ಬೆಳೆಯದೆ ಇರುವಂತಹದ್ದು. ಹಿಂದೆ ಅಣ್ಣ-ತಮ್ಮನ ಮಕ್ಕಳು ಎಲ್ಲಾ ಜೊತೆಯಾಗಿ ಬೆಳೆಯುತ್ತಿದ್ದರು. ಆಗ ಜಗಳ, ಹೊಂದಾಣಿಕೆ, ಮಾತು ಬಿಡುವುದು, ಮತ್ತೆ ಮಾತುಕತೆ ಎಲ್ಲವೂ ಇತ್ತು. ಮುಂದಿನ ಜೀವನಕ್ಕೆ ಪ್ರಾಕ್ಟೀಸ್ ಅಲ್ಲಿಯೇ ಆಗುತ್ತಿತ್ತು. ಅದೇ, ಒಂದೇ ಮಗುವಾದರೆ, ಅಪ್ಪ-ಅಮ್ಮ ಮಗುವಿಗೆ ಹೊಂದಿಕೊಳ್ಳುತ್ತಾರೆಯೆ ಹೊರತು ಮಗು ಹೊಂದಿಕೊಳ್ಳುವುದಿಲ್ಲ. ಮಗುವಿಗೆ ಹೊಂದಾಣಿಕೆ ಎನ್ನುವ ಶಬ್ದದ ಅರಿವೂ ಇರುವುದಿಲ್ಲ. ಪರಿಣಾಮ ಮುಂದೆ ಸಣ್ಣಸಣ್ಣ ಕಾರಣಗಳಿಗೆ ವಿಚ್ಛೇದನ. ಈಗ ನಾವು ಇಲ್ಲಿ ಬರುವ ಮೊದಲು ಅಂತಹದ್ದೇ ಒಂದು ಘಟನೆ ಆಲಿಸಿ ಬಂದೆವು. ಗಂಡ ಸಿ.ಎ., ಹೆಂಡತಿ ಎಲ್ಎಲ್.ಬಿ.; ಅವರಿಗೆ ವಿಚ್ಛೇದನ ಆಯಿತು. ಕಾರಣ ಏನೆಂದರೆ: ಹೆಂಡತಿ ಗಂಡನ ಭುಜದ ಮೇಲೆ ಕೈ ಇಟ್ಟಿದ್ದಳು. ಅಲ್ಲಿ ಸ್ವಲ್ಪ ಜನ ಇದ್ದ ಕಾರಣ ಗಂಡನಿಗೆ ಸಂಕೋಚವಾಗಿ ತೆಗೆಯಲು ಹೇಳಿದ್ದಾನೆ. ಇಬ್ಬರದ್ದೂ ತಪ್ಪು ಏನೂ ಇಲ್ಲ. ಹೆಂಡತಿ ಗಂಡನ ಭುಜದ ಮೇಲೆ ಕೈ ಇಟ್ಟದ್ದರಲ್ಲಿ ತಪ್ಪೇನಿಲ್ಲ. ಇವನದ್ದೂ ತಪ್ಪಿಲ್ಲ; ಜನ ಇದ್ದ ಕಾರಣ ಸ್ವಲ್ಪ ಸಂಕೋಚವಾಗಿತ್ತು. ಇಷ್ಟು ಸಣ್ಣ ವಿಷಯ ಕೊನೆಗೊಂಡಿದ್ದು ವಿಚ್ಛೇದನದಲ್ಲಿ. ಮೂಲ ಕಾರಣ ಏನು? ಹೊಂದಾಣಿಕೆ ತಿಳಿದಿಲ್ಲ ಅಷ್ಟೆ. ಇನ್ನೊಬ್ಬರು ಹೊಂದಿಕೊಳ್ಳಬೇಕು ಎನ್ನುವುದು ಇರುತ್ತದೆಯೇ ಹೊರತು ನಾವು ಕೂಡ ಹೊಂದಿಕೊಳ್ಳಬೇಕು ಎನ್ನುವ ಅರಿವು, ಮನಃಸ್ಥಿತಿ ಇರುವುದಿಲ್ಲ. ಪರಿಣಾಮವಾಗಿ ವಿಚ್ಛೇದನ ಏರುತ್ತಿದೆ, ಅಪ್ಪ-ಅಮ್ಮನನ್ನು ಮಕ್ಕಳು ನೋಡಿಕೊಳ್ಳುವುದಿಲ್ಲ; ಇವೆಲ್ಲಾ ಸಮಾಜದ ಮೇಲೆ ಆಗಿರುವ ದುಷ್ಪರಿಣಾಮಗಳು.
ಪುನಃ ಅವಿಭಕ್ತ ಕುಟುಂಬಗಳು ಬೇಕು ಎನ್ನುವುದೇ ನಮ್ಮ ಅಭಿಪ್ರಾಯ; ಅದು ಪ್ರಕೃತಿಸಹಜ. ಸಿಂಹಗಳ ಗುಂಪು ಎಂದರೆ ಗಂಡು ಸಿಂಹಗಳು, ಸಿಂಹಿಣಿಗಳು, ಸುಮಾರು ಮರಿಗಳು ಇರುತ್ತವೆ. ಒಂದೇ ಸಿಂಹದ ಮರಿ ಅಲ್ಲಿ ಇರುವುದಲ್ಲ. ಜೇನುಹುಳ ತೆಗೆದುಕೊಳ್ಳಿ – ಪೂರ್ತಿ ಜೇನುಸಮಾಜವೇ ಜೊತೆಗಿರುತ್ತದೆ. ಇರುವೆಗಳೂ ಅಷ್ಟೆ; ಸಮಾಜವೇ ಜೊತೆಗಿರುತ್ತದೆ. ಹುಲಿ, ಚಿರತೆ, ಜಿಂಕೆ, ಮಂಗ ಹೀಗೆ ಯಾವುದನ್ನೇ ತೆಗೆದುಕೊಂಡರೂ ಜೊತೆಯಾಗಿ ಒಂದು ಗುಂಪಿನಲ್ಲಿ ಇರುತ್ತವೆ. ಈ ಜೀವಜಾಲದಲ್ಲಿ ನೋಡುವಾಗ ಹಾಗೆ ಒಂದಾಗಿ ಇರಬೇಕಾದುದು ಸಹಜ. ನಾವು ಮಾತ್ರ ಏಕೆ ಬೇರೆ ಬೇರೆಯಾಗಿದ್ದೇವೆ? ಇದು ಅಸಹಜವಾದದ್ದು. ಬೇರೆ ಆಗಲು ಕಾರಣ ಏನು? ಹೊಂದಾಣಿಕೆ ಇರದಿರುವುದು; ಅದಕ್ಕೆ ಕೊಡುವ ಕಾರಣ ಆಲೋಚನಾ ಲಹರಿ ಒಂದೇ ಇಲ್ಲ ಎಂದು. ಒಬ್ಬ ಮನುಷ್ಯನದ್ದೇ ಆಲೋಚನಾ ಲಹರಿ ಒಂದೇ ರೀತಿ ಇರುವುದಿಲ್ಲ. ನಾವು ಇಂದು ಆಲೋಚನೆ ಮಾಡುತ್ತಿರುವ ವಿಚಾರವನ್ನು ನಾಳೆ ಅದೇ ರೀತಿ ಆಲೋಚನೆ ಮಾಡುತ್ತೇವೆ ಎನ್ನಲು ಸಾಧ್ಯವಿಲ್ಲ. ನಿನ್ನೆಯ ‘ನಾನು’ ಬೇರೆ, ಇಂದಿನ ‘ನಾನು’ ಬೇರೆ. ಎಷ್ಟೋ ನಮ್ಮ ನಿನ್ನೆಯ ನಿರ್ಧಾರಗಳು ನಮಗೇ ಇಂದು ತಪ್ಪು ಎನಿಸಬಹುದು. ಹೀಗಿದ್ದಾಗ ಇನ್ನೊಬ್ಬರ ಜೊತೆ ನಮ್ಮ ಎಲ್ಲ ಆಲೋಚನಾ ಲಹರಿಗಳು ಒಂದೇ ಆಗಿರಲು ಹೇಗೆ ಸಾಧ್ಯ? ನಾವು ಹೊಂದಾಣಿಕೆ ಮಾಡಿಕೊಂಡು ಹೋಗಬೇಕೇ ಹೊರತು, ದೂರ ಆಗುವುದು ಪರಿಹಾರ ಅಲ್ಲ.
ಅವಿಭಕ್ತ ಕುಟುಂಬದ ಅನುಕೂಲಗಳು ಹಲವು. ಖರ್ಚು ಕಡಮೆ ಆಗಬಹುದು, ಒಬ್ಬನ ಸಹಕಾರ ಇನ್ನೊಬ್ಬನಿಗೆ ಸಿಗುತ್ತದೆ. ಜೊತೆಯಾಗಿ ಇರುವ ಕಾರಣ ಆಪತ್ತು ಕಡಮೆ ಆಗಬಹುದು. ಯಾರೋ ಒಬ್ಬನಿಗೆ ಮಕ್ಕಳು ಇಲ್ಲದಿದ್ದರೂ ಅಲ್ಲಿ ಅದು ದೊಡ್ಡ ವಿಷಯವಾಗುವುದಿಲ್ಲ. ಆತ ವಿಶಾಲವಾದ ಕುಟುಂಬದ ಸದಸ್ಯನಾಗಿರುತ್ತಾನೆ, ಆತನ ಜೊತೆಯಾಗಿ ಹಲವರು ಇರುತ್ತಾರೆ. ಹೀಗೆ ಜೀವ-ಜೀವ ಬಂಧ ಎನ್ನುವುದು ಬಹಳ ಉತ್ತಮವಾದ ವಿಷಯ. ಇದನ್ನು ಜೀವಾದ್ವೈತ ಎನ್ನುವುದು ಇದೇ ಕಾರಣಕ್ಕೆ.
ಪ್ರಶ್ನೆ: ಭಾರತೀಯ ಕುಟುಂಬಪದ್ಧತಿಯಲ್ಲಿ ಶಿಕ್ಷಣದ ಪಾತ್ರವೇನು?
ಉತ್ತರ: ರಾಮಾಯಣ ಮೊಟ್ಟಮೊದಲು ಪ್ರಯೋಗವಾದದ್ದೇ ಶಿಕ್ಷಣ ಕಾವ್ಯವಾಗಿ. ವಾಲ್ಮೀಕಿ ಮಹರ್ಷಿಗಳು ರಾಮಾಯಣ ಬರೆದು ಲವ-ಕುಶರಿಗೆ ಪಾಠಮಾಡುತ್ತಾರೆ; ಅದು ಶಿಕ್ಷಣದ ಅಂಗವಾಗಿತ್ತು. ವೇದಾಧ್ಯಯನವಾಗಿತ್ತು. ವೇದಗಳು ಅರ್ಥವಾಗಬೇಕಾದರೆ ರಾಮಾಯಣದ ಮೂಲಕ ಅರ್ಥಮಾಡಿಸುವುದೇ ಆಗಿತ್ತು. ನಮ್ಮಲ್ಲಿ ಪ್ರಥಮ ಸರ್ವೋಪರಿ ಶಿಕ್ಷಣಕಾವ್ಯ ಎಂದರೆ ಅದು ರಾಮಾಯಣ. ರಾಮಾಯಣದಲ್ಲಿ ಕುಟುಂಬಜೀವನದ ಮೌಲ್ಯಗಳೇ ಇರುವುದು. ಕುಟುಂಬಜೀವನದ ಪಾಠವಾಗಿ ಬಹಳ ಮೌಲ್ಯಯುತವಾದದ್ದು. ರಾಮನ ಭಾವನೆ, ಭರತನ ಭಾವನೆ, ಲಕ್ಷ್ಮಣನ ಭಾವನೆ ಅಥವಾ ದಶರಥನ ಭಾವನೆ, ಕೌಸಲ್ಯೆಯ ಭಾವನೆ ಎಲ್ಲವೂ ಇವೆ. ಹಾಗೆಯೇ ಅಲ್ಲಿ ಹೇಗೆ ಇರಬಾರದು ಎನ್ನುವುದಕ್ಕೂ ಉದಾಹರಣೆ ಇವೆ. ವಿಭೀಷಣನಿಗೆ ಧರ್ಮಸಂಕಟ ಬಂತು. ಧರ್ಮದ ಜೊತೆಗೆ ನಿಲ್ಲಬೇಕು ಎಂದರೆ ಅಣ್ಣ ರಾವಣನನ್ನು ಬಿಟ್ಟು ನಿಲ್ಲಬೇಕು, ಅಂತಹ ಸ್ಥಿತಿಯನ್ನು ಅಣ್ಣ ನಿರ್ಮಾಣ ಮಾಡಿದನು. ವಾಲಿ-ಸುಗ್ರೀವರು ಹೇಗೆ ಇರಬಾರದು ಎನ್ನುವುದನ್ನು ತೋರಿಸಿದ್ದೂ ಕೂಡ ಧನಾತ್ಮಕ ವಿಷಯವೇ. ಧನಾತ್ಮಕ ಏಕೆಂದರೆ, ಏಕೆ ಆ ರೀತಿ ಇರಬಾರದು ಎನ್ನುವುದರ ಪರಿಣಾಮವನ್ನು ತೋರಿಸಿದೆ ರಾಮಾಯಣ. ವಾಲಿ-ಸುಗ್ರೀವರು ಬೇರೆ ಆಗಿದ್ದರ ಪರಿಣಾಮ ವಾಲಿಯ ವಧೆ ಆಯಿತು. ರಾವಣ-ವಿಭೀಷಣ ಬೇರೆಯಾದರು, ರಾವಣನ ವಧೆ ಆಯಿತು. ಹೀಗೆ ಕಾವ್ಯದ ಸಂದೇಶ ಏನೆಂದರೆ: ಬೇರೆಯಾದಾಗ ಪತನವಾಗುತ್ತದೆ. ಜೊತೆಯಾಗಿ ಇದ್ದುದರ ಪರಿಣಾಮ ರಾಮನು ರಾಜನಾಗುತ್ತಾನೆ. ಭರತ ಯುವರಾಜನಾಗುತ್ತಾನೆ. ಈಗ ಯೋಚಿಸಿ. ಇಂದು ರಾಮಾಯಣ ಶಿಕ್ಷಣ ಕಾವ್ಯವಾಗಿದ್ದರೆ, ಅದರ ಪರಿಣಾಮ ಬೇರೆಯದ್ದೇ ಆಗಿರುತ್ತಿತ್ತು. ಹೀಗೆ ಶಿಕ್ಷಣ ಬಹಳ ದೊಡ್ಡವಿಷಯ.
ಶಿಕ್ಷಣ ಎಂದಾಗ, ತಾಯಿಯದು ಬಹುಮುಖ್ಯ ಪಾತ್ರ. ತಾಯಿ ಇಲ್ಲದೆ ಮನೆ ಎನ್ನುವುದು ಪೂರ್ಣವಾಗುವುದಿಲ್ಲ. ‘ಗೃಹಿಣೀ ಗೃಹ ಮುಚ್ಯತೇ’: ನಮ್ಮಲ್ಲಿ ಮನೆ ಕುರಿತು ಹೇಳುವುದು – ಇಟ್ಟಿಗೆಯಿಂದ ಕಟ್ಟಿದ ಕಟ್ಟಡವಷ್ಟೆ ಮನೆಯಲ್ಲ; ಗೃಹಿಣಿಯೇ ಗೃಹ. ತಾಯಿ ಜೀವದ ಸುತ್ತವೇ ಎಲ್ಲವೂ ಜೋಡಿಸಲ್ಪಡುವುದು; ತಾಯಿ ಎಲ್ಲವನ್ನೂ ಜೋಡಿಸುವ ಬಿಂದು. ಅದೇ ಕಾರಣಕ್ಕೆ ಹೇಳುತ್ತಿರುವುದು ನಾವು ಅವಿಭಕ್ತ ಕುಟುಂಬ ಬೇಕು ಎಂದು. ಒಂದೇ ತಾಯಿಯ ಮಕ್ಕಳು ಬೇರೆಬೇರೆ ಹೋಗಿ ಇರುವುದು ಏಕೆ? ಆ ತಾಯಿಯನ್ನೇ, ತಾಯಿಯ ಗರ್ಭವನ್ನೇ ಪಾಲು ಮಾಡಿದಂತೆ ಅಲ್ಲವೆ? ಹಾಗಾಗಿ ತಾಯಿಯೇ ಕುಟುಂಬ, ಕುಟುಂಬದ ಆತ್ಮ. ಅಲ್ಲಿರುವ ತ್ಯಾಗ ಅನನ್ಯ. ಅಡುಗೆ ತಾನು ಮಾಡುತ್ತಾಳೆ, ತಾನು ಬಿಸಿಬಿಸಿ ಎಂದಿಗೂ ಊಟ ಮಾಡುವುದಿಲ್ಲ. ಎಲ್ಲರದೂ ಊಟವಾದ ಬಳಿಕ ಆಕೆ ಊಟ ಮಾಡುತ್ತಾಳೆ; ಎಷ್ಟು ಉಳಿದಿದೆಯೋ, ಏನು ಉಳಿದಿದೆಯೋ ಅದನ್ನು ಸೇವಿಸುತ್ತಾಳೆ. ಅಲ್ಲಿಂದ ಆರಂಭಿಸಿ ತ್ಯಾಗವೇ ಆಗುತ್ತಾ ಹೋಗುತ್ತದೆ; ತ್ಯಾಗವೇ ತಾಯಿ. ಪ್ರಸವವೇದನೆ ಎಂದರೆ ಎಂತಹದ್ದು ಅದು? ಅಲ್ಲಿಯೇ ದೊಡ್ಡ ತ್ಯಾಗವಿದೆ. ತಾಯಿಯ ಸುತ್ತವೇ ಕುಟುಂಬದ ನೇಯ್ಗೆಯಾಗಿರುವುದು.
ಪ್ರಶ್ನೆ: ಇಂದು ಅನಿವಾರ್ಯ ಕಾರಣಗಳಿಗಾಗಿ ಕುಟುಂಬಗಳು ವಿಭಜನೆಯಾಗುತ್ತಿವೆ; ಇಂತಹ ಸಂದರ್ಭದಲ್ಲಿ, ನಿಮ್ಮ ಅಭಿಪ್ರಾಯದಂತೆ, ಕುಟುಂಬವ್ಯವಸ್ಥೆಯ ಪ್ರಾಮುಖ್ಯದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಲು ಮತ್ತು ವ್ಯವಸ್ಥೆಯನ್ನು ಪೋಷಿಸಿ ಸಂರಕ್ಷಿಸಲು ಧಾರ್ಮಿಕ ಸಂಘ-ಸಂಸ್ಥೆಗಳ ಹಾಗೂ ಮಠ-ಮಾನ್ಯಗಳ ಪಾತ್ರವೇನು?
ಉತ್ತರ: ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಎರಡು ಕ್ರಮವಿದೆ. ವೈಯಕ್ತಿಕವಾಗಿ ವಿಷಯಕ್ಕೆ ಬಂದಾಗ ನಾವು ಅದನ್ನು ಪರಿಹರಿಸಿ ಒಂದು ಮಾಡಲು ಪ್ರಯತ್ನ ಮಾಡಬೇಕು. ಎಷ್ಟು ವಿಷಯಗಳು ಬಂದರೂ ನಾವು ಜೊತೆಗೆ ಇರಿ ಎಂದೇ ಹೇಳುವುದು. ಹೋಗುವುದು ಬರುವುದು ಇಲ್ಲ ಎಂದು ಹಲವರು ಬರುತ್ತಾರೆ. ಇಂತಹ ವಿಚಾರಕ್ಕೆ ಬಂದಾಗ, ಮಂತ್ರಾಕ್ಷತೆ ಕೊಡುತ್ತೇವೆ, ನಾಳೆಯಿಂದ ಒಬ್ಬನ ಮನೆಗೆ ಇನ್ನೊಬ್ಬ ಹೋಗಬೇಕು, ಜೊತೆಯಾಗಿ ಇರಬೇಕು ಎಂದೇ ಹೇಳುತ್ತೇವೆ. ನಾವು ಎಂದಲ್ಲ, ಇದು ಆಗಲೇಬೇಕಾದ್ದು. ವೈಯಕ್ತಿಕ ನೆಲೆಯಲ್ಲಿ ಅಣ್ಣ-ತಮ್ಮನ ವಿಷಯ, ಗಂಡ-ಹೆಂಡತಿ ವಿಷಯ ಬಂದಾಗ ಕೂಡಿಸಲು ಪ್ರಯತ್ನಿಸಬೇಕು. ಸಾಮಾಜಿಕವಾಗಿ ಬಂದಾಗ, ಈಗ ನಾವು ಸಂದೇಶ ಕೊಟ್ಟ ರೀತಿ; ಸಾಮೂಹಿಕ ಜೀವನ ಬೇಕು ಎನ್ನುವುದು. ಇದನ್ನು ನಾವು ವೇದಿಕೆಗಳಲ್ಲಿ ಪ್ರೇರಣಾದಾಯಿಯಾಗಿ ಹೇಳಬೇಕಾಗುತ್ತದೆ. ಆಶೀರ್ವಚನದಲ್ಲಿಯೋ, ಕಾರ್ಯಕ್ರಮಗಳಲ್ಲಿಯೋ ಇದನ್ನು ಹೇಳಬೇಕು. ಅವಿಭಕ್ತ ಕುಟುಂಬಕ್ಕೆ, ಸಮಷ್ಟಿ ಜೀವನಕ್ಕೆ ಒತ್ತುಕೊಡಬೇಕಾಗುತ್ತದೆ.