ಫ್ರೆಂಚ್ ಗಾದೆಯೊಂದು ‘ಉಳಿತಾಯವೇ ವೆಚ್ಚಕ್ಕೆ ಮೂಲಧನ’ ಎಂದು ಸಾರಿದೆ. ಇಂದಿನ ಉಳಿತಾಯ ನಾಳೆಯ ವೆಚ್ಚಕ್ಕೆ ಆಧಾರವಾಗಲಿದೆಯೆಂಬ ಸಂದೇಶವನ್ನು ಈ ಗಾದೆ ನೀಡುತ್ತದೆ. ಕೇವಲ ಉಳಿತಾಯಕ್ಕಾಗಿ ಉಳಿತಾಯ ಆಗಬೇಕೆಂದು ಹೇಳುವುದು ಸರಿಯಲ್ಲ. ಬದಲಾಗಿ ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ಈ ತನಕ ಆದ ಅನುಭವದ ಆಧಾರದಲ್ಲಿ ನಾಳೆಯ ಹೂಡಿಕೆಗಾಗಿ ಇಂದು ಉಳಿತಾಯ ಮಾಡಬೇಕಾದ ಅಗತ್ಯವನ್ನು ಒಪ್ಪಬೇಕಾಗುತ್ತದೆ, ಪ್ರತಿಪಾದಿಸಬೇಕಾಗುತ್ತದೆ.
ಆದಾಯ, ವೆಚ್ಚ ಮತ್ತು ಉಳಿತಾಯಗಳ ನಡುವೆ ಇರುವ ಪರಸ್ಪರ ಸಂಬಂಧವನ್ನು ಸೈದ್ಧಾಂತಿಕವಾಗಿ ವಿಶ್ಲೇಷಿಸಿ ವಿಶ್ವಾದ್ಯಂತ ಹೆಸರು ಮಾಡಿದ ಆರ್ಥಿಕ ತಜ್ಞ ಜೆ.ಎಂ. ಕೀನ್ಸ್ನ ಆರಾಧಕ ಎ.ಎಚ್. ಹಾನ್ಸೆನ್ ತನ್ನ ಪುಸ್ತಕದಲ್ಲಿ (1953) ‘ಯಾವುದೇ ದಿವ್ಯ ತತ್ತ್ವವಾಗಿರಲಿ ಅದನ್ನು ವಿವಾದದ ಸಮುದ್ರದ ಮೇಲೆ ಎಸೆದಾಗ ತನ್ನ ಅಂತಃಸತ್ತ್ವವನ್ನು ಮತ್ತು ಶಕ್ತಿಯನ್ನು ಕಳೆದುಕೊಳ್ಳುತ್ತದೆ’ ಎಂದು ಹೇಳಿದ್ದು ಈಗಲೂ ಅರ್ಥಪೂರ್ಣವಾಗಿ ಉಳಿದುಕೊಂಡಿದೆ. ಈ ಕಾರಣಕ್ಕಾಗಿಯೇ ತ್ರಿಕಾಲಾಬಾಧಿತ ಅಭಿವೃದ್ಧಿ ಸಿದ್ಧಾಂತ ಇನ್ನೂ ಉದಯಿಸಿ ಬಂದಿಲ್ಲ. ಕೆಲವು ಪ್ರಮುಖ ಅಭಿವೃದ್ಧಿ ಸಿದ್ಧಾಂತಗಳು ಉಳಿತಾಯ ಮತ್ತು ಹೂಡಿಕೆ ಸಮನಾಗಿರಬೇಕೆಂದು ವಾದಿಸುವಾಗ ಕೊಳ್ಳುಬಾಕತನಕ್ಕೆ ಆಸ್ಪದ ನೀಡುವುದೇ ಇಲ್ಲ.
ವೈಯಕ್ತಿಕ ಹಿತ ಹಾಗೂ ರಾಷ್ಟ್ರದ ಆರ್ಥಿಕಭದ್ರತೆಯ ನಡುವಿನ ಅವಿನಾಭಾವ ಸಂಬಂಧವನ್ನು ಸರಿಯಾಗಿ ಗುರುತಿಸಿದರೆ ಉಳಿತಾಯದ ಪ್ರವೃತ್ತಿಗೆ ಅಡ್ಡಿಬಾರದಂತೆ ಕಾಳಜಿ ವಹಿಸಬಹುದು. ಈ ಸಂಬಂಧವನ್ನು ಕ್ಷುದ್ರ ರಾಜಕೀಯ ಕಾರಣಕ್ಕೆ ನಿರ್ಲಕ್ಷಿಸಿದರೆ ಸಾಲಮನ್ನಾದಂಥ ಜವಾಬ್ದಾರಿರಹಿತ ನಿರ್ಧಾರಗಳಿಗೆ ಸರಕಾರಗಳು ಶರಣಾಗಬಹುದು. ಈಗ ಸ್ಪಷ್ಟವಾಗಿ ದಾಖಲೆಯಾದ ಸತ್ಯ ಇದು. ಆರ್ಥಿಕಭದ್ರತೆಗೆ ಬೇಕಾದ ಜೀವನಶೈಲಿಯನ್ನು ಬೆಳೆಸುವ ಬದಲು ಹಿಂದಿನ ಯುಪಿಎ ಸರಕಾರ ಹಾಗೂ ಕೆಲವು ರಾಜ್ಯ ಸರಕಾರಗಳು ವೋಟ್ಬ್ಯಾಂಕ್ ನಿರ್ಮಾಣದ ಉದ್ದೇಶದಿಂದ ಸಾಲಮನ್ನಾ ನೀತಿಯನ್ನು ಸಾರುವ ದುಸ್ಸಾಹಸ ಮಾಡಿವೆ. ಆದ ಪ್ರಮಾದ ಮತ್ತೆ ಆಗದಂತೆ ಎಚ್ಚರಿಕೆ ವಹಿಸುವ ಆವಶ್ಯಕತೆ ಈಗ ನಿಚ್ಚಳವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಸಾಲಮನ್ನಾ ಪ್ರಯೋಗಗಳಿಂದಾದ ಅಪಾಯವನ್ನು ಈಗ ಮತ್ತೆ ಗುರುತಿಸಬೇಕು.
ದುಂದುವೆಚ್ಚಕ್ಕೆ ಬೇಕು ಉಳಿತಾಯದ ಕಡಿವಾಣ
ಅರ್ಥಶಾಸ್ತ್ರದ ಜನಕ ಎಂದೇ ಹೆಸರು ಮಾಡಿದ ಆಡಂ ಸ್ಮಿತ್ 1776ರಲ್ಲಿ ಬೆಳಕುಕಂಡ ‘ರಾಷ್ಟ್ರಗಳ ಸಂಪತ್ತಿನ ಸ್ವರೂಪ ಮತ್ತು ಕಾರಣಗಳ ಕುರಿತು ಒಂದು ವಿಚಾರಣೆ’ಎನ್ನುವ ಆತನ ಪುಸ್ತಕದಲ್ಲಿ ಆರ್ಥಿಕಾಭಿವೃದ್ಧಿಯಲ್ಲಿ ಬಂಡವಾಳ ಸಂಚಯನದ ಮಹತ್ತ್ವವನ್ನು ವಿಶದಪಡಿಸಿದ್ದ. ಜನಸಾಮಾನ್ಯರ ಉಳಿತಾಯದ ಪ್ರವೃತ್ತಿಯಿಂದಲೇ ಆರ್ಥಿಕಾಭಿವೃದ್ಧಿಗೆ ಬೇಕಾದ ಬಂಡವಾಳದ ಪ್ರಮಾಣ ಜಾಸ್ತಿಯಾಗುತ್ತದೆ, ದುಂದುವೆಚ್ಚ ಮತ್ತು ದುರ್ನಡತೆಯಿಂದ ಅದು ಕ್ಷೀಣಿಸುತ್ತದೆ ಎಂಬ ಆತನ ವಾದವನ್ನು ಈಗಲೂ ಆಗಾಗ ಪುನರುಚ್ಚರಿಸಲಾಗುತ್ತಿದೆ. ಸ್ಮಿತ್ ವೈಯಕ್ತಿಕ ಭದ್ರತೆ ಹಾಗೂ ರಾಷ್ಟ್ರದ ಆರ್ಥಿಕಪ್ರಗತಿಯ ನಡುವಿನ ಸಂಬಂಧವನ್ನು ತಿಳಿಸಿದ್ದಲ್ಲದೆ, ಕೊಳ್ಳುಬಾಕತನದ ಅಪಾಯಗಳನ್ನು ಸೂಚಿಸುವ ಎಚ್ಚರಿಕೆಯ ಗಂಟೆ ಬಾರಿಸಿದ್ದ.
ಇಪ್ಪತ್ತನೆಯ ಶತಮಾನವು ಅಭಿವೃದ್ಧಿ ಸಿದ್ಧಾಂತಗಳ, ಯೋಜನೆಗಳ ಶತಮಾನವಾಗಿತ್ತೆಂದು ಹೇಳಬಹುದು. ಮುಂದುವರಿದ ರಾಷ್ಟ್ರಗಳು ಅಭಿವೃದ್ಧಿದರವನ್ನು ಸರಾಗವಾಗಿ ಮುಂದುವರಿಸಿಕೊಂಡು ಹೋಗುವ ಸವಾಲನ್ನು ಎದುರಿಸುತ್ತಿದ್ದವು. ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರಗಳು ಅಭಿವೃದ್ಧಿದರವನ್ನು ಹೆಚ್ಚಿಸಿ ಹಸಿವು, ಬಡತನ ಮತ್ತು ನಿರುದ್ಯೋಗ ಸಮಸ್ಯೆಗಳಿಗೆ ಪರಿಹಾರ ಕಾಣುವ ಸವಾಲನ್ನು ಸ್ವೀಕರಿಸಬೇಕಾಯಿತು. ಭಾರತಕ್ಕೆ ಆಗ ಅಭಿವೃದ್ಧಿ ಮಾದರಿಯನ್ನು ಹುಡುಕುವುದು ಸಮಸ್ಯೆಯಾಗಿತ್ತಾದರೂ, ಸಾಮಾನ್ಯಜನರಲ್ಲಿದ್ದ ಉಳಿತಾಯದ ಗುಣಕ್ಕೆ ಭಂಗ ಬರಬಾರದೆಂಬ ಸತ್ಯವನ್ನು ಕಡೆಗಣಿಸುವಂತಿರಲಿಲ್ಲ. ದ್ವಿತೀಯ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ (1956-61) ಭಾರೀ ಉದ್ದಿಮೆಗಳಿಗೆ ಒತ್ತುನೀಡುವ ನೀತಿಯನ್ನು ಆಧಾರವಾಗಿಟ್ಟುಕೊಂಡ ನೆಹರು-ಮಹಲನೋಬಿಸ್ ಅಭಿವೃದ್ಧಿ ಮಾದರಿ ಕೂಡ ಉಳಿತಾಯದ ಮಹತ್ತ್ವವನ್ನು ಗಮನಿಸಿತ್ತು.
ಆರ್ಥಿಕಭದ್ರತೆಗೆ ಬೇಕಾದ ಜೀವನಶೈಲಿಯ ಬಗೆಗೆ ಸಮಾಜದ ಹಿತದೃಷ್ಟಿಯಿಂದ ಚಿಂತನೆ ಮಾಡಿದ ಕೆಲವೇ ಸಮಾಜವಾದಿಗಳಲ್ಲಿ ದಿನಕರ ದೇಸಾಯಿ ಒಬ್ಬರಾಗಿದ್ದರು. ಮುಂಬಯಿ ಪ್ರಾಂತದಲ್ಲಿ ಅಪಾರ ಪ್ರಮಾಣದಲ್ಲಿ ದೇಣಿಗೆ ಸಂಗ್ರಹಿಸಿ ತಮ್ಮ ಜಿಲ್ಲೆಯಾದ ಉತ್ತರಕನ್ನಡದಲ್ಲಿ ಶಾರದೆಗೆ ಶಾಲೆಗಳ ಹಾರ ಹಾಕಿದ ಅವರು ದುಂದುವೆಚ್ಚವನ್ನು ಎಂದೂ ಸಹಿಸುತ್ತಿರಲಿಲ್ಲ. ಅಲ್ಪ ಆದಾಯವುಳ್ಳವರೂ ಶಿಸ್ತಿನಿಂದ ಜೀವನ ಸಾಗಿಸಿ ಉಳಿತಾಯ ಮಾಡಬೇಕೆಂದು ಬಲವಾಗಿ ನಂಬಿಕೊಂಡಿದ್ದರು. ಅವರು ಬರೆದ ಎರಡು ಚೌಪದಿಗಳು ಜನಸಾಮಾನ್ಯರು ಮಿತವ್ಯಯದ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಮಾತ್ರ ಜೀವನದ ತಳಪಾಯ ಕಟ್ಟಿಕೊಳ್ಳಬಲ್ಲರೆಂದು ಹಿತ ಸಂದೇಶ ನೀಡುತ್ತವೆ.
ಒಂದು ಚೌಪದಿಯಲ್ಲಿ ಒಬ್ಬ ವ್ಯಕ್ತಿಯ ಹಂತದಲ್ಲಿ ಉಳಿತಾಯ ಯೋಜನೆ ಹೇಗಿದ್ದರೆ ಸರಿ ಎನ್ನುವುದನ್ನು ದೇಸಾಯಿ ತಿಳಿಸಿದ್ದು ಹೀಗೆ:
“ಇವು ನನ್ನ ಶರ್ಟಿನ ಮೂರು ಗುಂಡಿ
ಇವುಗಳಷ್ಟೇ ನನ್ನ ಜೀವಿತದ ಹುಂಡಿ.
ಪ್ರತಿ ತಿಂಗಳಿಗೆ ನಾನು ಮಾಡಿ ಉಳಿತಾಯ,
ಕಟ್ಟಬೇಕಂತೆ ಜೀವನದ ತಳಪಾಯ.”
ಉಳಿತಾಯ ಎಂದರೆ ಜೀವನದ ತಳಪಾಯವೆಂದು ತಿಳಿಸುವ ಉದ್ದೇಶದಿಂದಲೇ ದೇಸಾಯಿ ಈ ಚೌಪದಿ ಬರೆದಿದ್ದು. ಅದನ್ನು ಸಮರ್ಥವಾಗಿ ರೂಢಿಸಿಕೊಂಡು ಅವರು ಉತ್ತರಕನ್ನಡದಲ್ಲಿ ‘ಕೆನರಾ ವೆಲ್ಫೇರ್ ಟ್ರಸ್ಟ್’ ಅನ್ನು (ಸ್ಥಾಪನೆ: 1953) ಕಟ್ಟಿಬೆಳೆಸಿದ್ದರಿಂದಲೇ ಒಂದು ಮಾದರಿಯಾಗಬಲ್ಲ ದೊಡ್ಡ ಕೆಲಸ ಅವರಿಂದ ಸಾಧ್ಯವಾಯಿತು. ಮಿತವ್ಯಯ ವಾಸ್ತವದಲ್ಲಿ ಹಿತವ್ಯಯವಾಗಿ ಮಾರ್ಪಾಡು ಹೊಂದಿತು. ಈ ಕಾರಣಕ್ಕಾಗಿಯೇ ಕೆನರಾ ವೆಲ್ಫೇರ್ ಟ್ರಸ್ಟ್ ಇತರರಿಗೆ ಮಾದರಿಯಾದ ರೀತಿಯನ್ನು ಲೇಖಕ ಗೌರೀಶ ಕಾಯ್ಕಿಣಿ ಕೆನರಾ ವೆಲ್ಫೇರ್ ಟ್ರಸ್ಟಿನ ಬೆಳ್ಳಿಹಬ್ಬದ ಸಮಯದಲ್ಲಿ ಬಿಡುಗಡೆಯಾದ ಸ್ಮರಣಸಂಚಿಕೆಯಲ್ಲಿ ಪ್ರಕಟವಾದ ತಮ್ಮ ಸುದೀರ್ಘ ಇಂಗ್ಲಿಷ್ ಲೇಖನದಲ್ಲಿ (1979) ತಿಳಿಸಿದ್ದು ಸೊಗಸಾಗಿದೆ.
ಇನ್ನೊಂದು ಚೌಪದಿಯಲ್ಲಿ ರಾಷ್ಟ್ರೀಯ ಯೋಜನೆಯ ಮೇಲೆ ವ್ಯಂಗ್ಯದ ಚಾಟಿ ಬೀಸುವಾಗಲೇ ಮಿತವ್ಯಯ ಭದ್ರಬದುಕಿಗೆ ಸೋಪಾನ ಎಂದು ತಿಳಿಸಿದರು ದೇಸಾಯಿ:
“ರಾಷ್ಟ್ರೀಯ ಯೋಜನೆಗೆ ಹಣ ಬೇಕು, ನೀರೆ
ಆದಷ್ಟು ಚಿಕ್ಕದಾಗಲಿ ನಿನ್ನ ಸೀರೆ
ನೀನು ಧರಿಸುವ ರವಕೆಗೂ ಬೇಡ ತೋಳು
ಕಡಮೆ ಊಟ ಮಾಡಿ ಉಳಿಸೋಣ ಕಾಳು.”
ದೇಶದ ಯೋಜನೆಗಳಿಗೆ ಬೇಕಾದ ಹಣ ಒದಗಿಸಲು ಶತಾಯ ಗತಾಯ ಪ್ರಯತ್ನಿಸಬೇಕಾದ ಅನಿವಾರ್ಯತೆಯ ಬಗೆಗೆ ದೇಸಾಯಿ ಸ್ವಲ್ಪ ವ್ಯಂಗ್ಯೋಕ್ತಿಯನ್ನು ಬಳಸಿದ್ದು ಹೌದಾದರೂ, ಕೊಳ್ಳುಬಾಕತನದ ಅಪಾಯವನ್ನು ಅವರು ಸರಿಯಾಗಿ ಗುರುತಿಸಿದ್ದರು.
ಸಾಹಿತಿ ಎಸ್.ಎಲ್. ಭೈರಪ್ಪ ಸುಮಾರು ಆರು ವರ್ಷಗಳ ಹಿಂದೆ ಗುಜರಾತಿನ ಜನರಿಗೂ ಕರ್ನಾಟಕದ ಜನರಿಗೂ ಇರುವ ವ್ಯತ್ಯಾಸವನ್ನು ದೂರದರ್ಶನದ ಕಾರ್ಯಕ್ರಮವೊಂದರಲ್ಲಿ ತಿಳಿಸಿದ್ದು ಮನೋಜ್ಞವಾಗಿತ್ತು: “ಗುಜರಾತಿನ ಜನರು ಅನಗತ್ಯ ಖರ್ಚು ಮಾಡದೆ ಹಣ ಉಳಿಸುತ್ತಾರೆ, ಕರ್ನಾಟಕದ ಜನರು ಹಣ ಉಳಿಸದೇ ಅನಗತ್ಯ ಖರ್ಚು ಮಾಡುತ್ತಾರೆ” ಎಂದು ಅದರಲ್ಲಿ ಅವರು ಹೇಳಿದ್ದು ಸ್ವೀಕಾರಾರ್ಹ ವಿಚಾರವಾಗಿದೆ. ಅನಗತ್ಯ ಖರ್ಚು ಮಾಡುವುದು ಕೊಳ್ಳುಬಾಕತನವನ್ನು ಪ್ರತ್ಯಕ್ಷಪಡಿಸುವ ಒಂದು ಸ್ಪಷ್ಟಲಕ್ಷಣ. ಈಗಲೂ ಜಾಗತಿಕ ಅರ್ಥವ್ಯವಸ್ಥೆಯ ಹೆಚ್ಚಿನ ರಾಷ್ಟ್ರಗಳಲ್ಲಿ (ವಿಶೇಷವಾಗಿ ಗಣನೀಯ ಸಂಖ್ಯೆಯಲ್ಲಿರುವ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ) ಬೇಕಾಗಿರುವುದು ಉಳಿತಾಯದ ಪ್ರವೃತ್ತಿಯೇ ಹೊರತು ಕೊಳ್ಳುಬಾಕತನದ ಸಂಸ್ಕೃತಿಯಲ್ಲ.
ಇಳಿಮುಖವಾಗುತ್ತಿರುವ ಉಳಿತಾಯ ಪ್ರವೃತ್ತಿ
ತೀರ ಇತ್ತೀಚಿನ ವರ್ಷಗಳಲ್ಲಿ ಭಾರತದ ಯುವಕರಲ್ಲಿ ಉಳಿತಾಯದ ಆಸಕ್ತಿ ಕಡಮೆಯಾಗುತ್ತಿರುವುದನ್ನು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐ.ಎಂ.ಎಫ್.) 2019ರಲ್ಲಿ ಗಣನೆಗೆ ತೆಗೆದುಕೊಂಡಿತ್ತು. ಕೌಟುಂಬಿಕ ಉಳಿತಾಯದ ಪ್ರಮಾಣ 2010ರಲ್ಲಿ ಶೇ. 10ರಷ್ಟು ಇದ್ದದ್ದು 2018ರ ಹೊತ್ತಿಗೆ ಶೇ. 6.8ಕ್ಕೆ ಕುಸಿದಿದ್ದನ್ನು ಅದು ಗಂಭೀರವಾಗಿ ಪರಿಗಣಿಸುತ್ತ ಭಾರತದಲ್ಲಿ ಹದಿಹರೆಯದವರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಅವರಲ್ಲಿ ಉಳಿತಾಯ ಮಾಡುವ ಪ್ರವೃತ್ತಿ ಮಾತ್ರ ಸಾಕಷ್ಟು ಕಡಮೆ ಇದೆಯೆಂದು ಎಚ್ಚರಿಸಿತ್ತು.
ಭಾರತದಲ್ಲಿ ಕೌಟುಂಬಿಕ ಉಳಿತಾಯದ ಪ್ರಮಾಣ ಇಳಿಮುಖವಾಗುತ್ತಿದ್ದು, ದೇಶದ ಯುವಸಮೂಹದಲ್ಲಿ ವಿಶ್ವಾಸ ಮೂಡಿಸುವ ಕೆಲಸಮಾಡುವಂತೆ ಕೇಂದ್ರಸರಕಾರಕ್ಕೆ ಐ.ಎಂ.ಎಫ್. ಒತ್ತಾಯಿಸಿತ್ತು. ಇದು ಸಹ ದೇಶದ ಆರ್ಥಿಕಭದ್ರತೆಗೆ ಬೇಕಾದ ಉಳಿತಾಯದ ಪ್ರಮಾಣವನ್ನು ಹೆಚ್ಚಿಸುವ ಅಗತ್ಯವನ್ನು ಸ್ಪಷ್ಟವಾಗಿ ತೋರಿಸಿದೆ.
ವಿಶ್ವದ ಎರಡನೆಯ ಅತಿದೊಡ್ಡ ಆರ್ಥಿಕತೆಯನ್ನು ಹೊಂದಿದ ಚೀಣಾದ ಆಕ್ರಮಣಕಾರಿ ನೀತಿ ಖಂಡನಾರ್ಹವೆನ್ನುವುದರಲ್ಲಿ ಅನುಮಾನವೇ ಇಲ್ಲ. ಆದರೂ ಅದು ಆರ್ಥಿಕ ಪ್ರಗತಿ ಸಾಧಿಸುವಲ್ಲಿ ಮೇಲುಗೈ ಹೊಂದಿದ ದೇಶ ಎನ್ನುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಥಾಪಿತವಾದ ಸಂಗತಿ. ಅದು ಈಗ ಕೃಷಿ ಮತ್ತು ಉದ್ದಿಮೆ ರಂಗಗಳಲ್ಲಂತೂ ಅಭೂತಪೂರ್ವ ಅಭಿವೃದ್ಧಿ ಸಾಧಿಸಿದ ದೇಶ. ಸಾಮಾಜಿಕ ಮೂಲಸೌಕರ್ಯಗಳಾದ ಆರೋಗ್ಯ ಮತ್ತು ಶಿಕ್ಷಣ ರಂಗಗಳಲ್ಲಿ ಮೇಲುಗೈ ಸಾಧಿಸಿದ್ದರಿಂದ ಚೀಣಾದ ಕಾರ್ಮಿಕರ ಉತ್ಪಾದಕತೆ ಇತ್ತೀಚಿನ ವರ್ಷಗಳಲ್ಲಿ ಗಮನಾರ್ಹವಾಗಿ ಹೆಚ್ಚಿದೆ. ಕೌಟುಂಬಿಕ ಮತ್ತು ಕಾರ್ಪೊರೇಟ್ ವಲಯಗಳಲ್ಲಿ ಉಳಿತಾಯ ಮಾಡುವ ಪ್ರವೃತ್ತಿ ಬೆಳೆದು ಬಂದಿದ್ದು ಆ ದೇಶದ ಒಟ್ಟಾರೆ ಪ್ರಗತಿಗೆ ಅದು ದೊಡ್ಡ ನೆರವಾಗಿದೆ. 2019ರಲ್ಲಿ (ಕೊರೋನಾ ಹಾವಳಿ ಹರಡುವ ಮುನ್ನ) ಒಟ್ಟು ಉಳಿತಾಯದ ಪ್ರಮಾಣ ಅಲ್ಲಿಯ ಜಿಡಿಪಿಯ ಶೇ. 44.6ರಷ್ಟಾಗಿತ್ತೆಂಬುದು ಮಹತ್ತ್ವದ ಸಂಗತಿ. ಇದೇ ಪ್ರಮಾಣ 2019ರ ಮಾರ್ಚ್ ತಿಂಗಳಿನಲ್ಲಿ ಭಾರತದಲ್ಲಿ ಶೇ. 30ರಷ್ಟಿತ್ತು. ಯುವಕರಲ್ಲಿ ಹಲವಾರು ಕಾರಣಗಳಿಂದ ಉಳಿತಾಯ ಮಾಡುವ ಪ್ರವೃತ್ತಿ ಇಳಿಮುಖವಾಗಿದ್ದರಿಂದ ಒಟ್ಟು ಆಂತರಿಕ ಉಳಿತಾಯದ ಪ್ರಮಾಣ ವರ್ಷಗಳು ಕಳೆದಂತೆ ಭಾರತದಲ್ಲಿ ಕಡಮೆಯಾಗಿದ್ದು ಅಭಿವೃದ್ಧಿಯ ದೃಷ್ಟಿಯಿಂದ ಆತಂಕ ಹುಟ್ಟಿಸುವ ಬದಲಾವಣೆಯಾಗಿದೆ.
ಬ್ಯಾಂಕುಗಳ ತೊಟ್ಟಿಲಿಗೆ ಸಮೂಹ ಉಳಿತಾಯದ ಬಳ್ಳಿ
ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಂಶೋಧಕರಾಗಿಯೂ ಆಡಳಿತಗಾರರಾಗಿಯೂ (ಸಿಂಡಿಕೇಟ್ ಬ್ಯಾಂಕಿನ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್) ಕೆಲಸ ಮಾಡಿದ್ದ ನವೀನಚಂದ್ರ ಕೆ. ತಿಂಗಳಾಯ ಬರೆದ ‘ದಕ್ಷಿಣಭಾರತದ ಬ್ಯಾಂಕುಗಳು’ಎನ್ನುವ ಶೀರ್ಷಿಕೆಯ ಪುಸ್ತಕ 2010ರಲ್ಲಿ ಪ್ರಕಟವಾಯಿತು. ಸ್ವಾತಂತ್ರ್ಯಪೂರ್ವದಲ್ಲೇ ಅವಿಭಜಿತ ದಕ್ಷಿಣಕನ್ನಡ ಜಿಲ್ಲೆ ‘ಬ್ಯಾಂಕುಗಳ ತೊಟ್ಟಿಲು’ಎಂದು ಹೆಸರು ಮಾಡಿದ್ದನ್ನು ಅವರು ಬಹಳ ಸುಂದರವಾಗಿ ವರ್ಣಿಸುತ್ತಾರೆ. ತಿಂಗಳಾಯರು ಸಂದರ್ಭೋಚಿತವಾಗಿ ತಿಳಿಸುವಂತೆ, “ಯಾವ ಅಂಶಗಳು ದಕ್ಷಿಣಕನ್ನಡದ ಬ್ಯಾಂಕುಗಳನ್ನು ಬದುಕಿ ಉಳಿಯುವಂತೆ ಮಾಡಿವೆಯೋ, ಹಾಗೆಯೇ ಯಾವ ಅಂಶಗಳು ಕೊಯಂಬತ್ತೂರಿನ ಬ್ಯಾಂಕುಗಳನ್ನು ಅಲ್ಪಾವಧಿಯಲ್ಲೇ ಸಾವನ್ನಪ್ಪುವಂತೆ ಮಾಡಿದವು ಎಂಬುದರ ಬಗೆಗೆ ತಪಾಸಣೆ/ಸಂಶೋಧನೆ ನಡೆಸುವುದೂ ಅಷ್ಟೇ ಸೂಕ್ತ” ದಕ್ಷಿಣಕನ್ನಡದ ಬ್ಯಾಂಕುಗಳು ಬದುಕಿ ಬೆಳೆಯಲು ಪ್ರಧಾನ ಕಾರಣ ಇಲ್ಲಿಯ ಜನರಲ್ಲಿ ರಕ್ತಗತವಾಗಿ ಬಂದ ಉಳಿತಾಯ ಮಾಡುವ ಪ್ರವೃತ್ತಿ. ದೇಶ ಸ್ವತಂತ್ರವಾಗುವ ಮೊದಲೇ ಜನಸಾಮಾನ್ಯರಲ್ಲಿ ಉಳಿತಾಯದ ಪ್ರವೃತ್ತಿಯನ್ನು ಬೆಳೆಸಲು ಇಲ್ಲೇ ಹುಟ್ಟಿ ಬೆಳೆದ ಪ್ರಧಾನ ಬ್ಯಾಂಕುಗಳಾದ ಸಿಂಡಿಕೇಟ್, ಕೆನರಾ, ಕಾರ್ಪೊರೇಷನ್, ವಿಜಯಾ ಮತ್ತು ಕರ್ನಾಟಕ ಬ್ಯಾಂಕುಗಳು ನೀಡಿದ ಕೊಡುಗೆ ಅನನ್ಯವಾಗಿದೆ. ಸಿಂಡಿಕೇಟ್ಬ್ಯಾಂಕ್ ಪ್ರಾರಂಭಿಸಿದ ಸಣ್ಣಉಳಿತಾಯದ ಯೋಜನೆ ‘ಪಿಗ್ಮಿ ಡೆಪೆÇಸಿಟ್ ಸ್ಕೀಂ’ ಹಿಂದೆ ಇದ್ದ ಭಾರತೀಯ ಯೋಜನಾ ಆಯೋಗದ ಪ್ರಶಂಸೆಗೆ ಪಾತ್ರವಾಗಿತ್ತು. ವಿಶ್ವಬ್ಯಾಂಕ್ ಕೂಡ ಇದನ್ನು ಕೊಂಡಾಡಿದೆ. ಯೋಜನೆ ಯಾವುದೇ ಆಗಿರಲಿ; ಪ್ರವರ್ಧಮಾನ ರಾಷ್ಟ್ರಗಳಲ್ಲಿ ಉಳಿತಾಯವೇ ಆರ್ಥಿಕಪ್ರಗತಿಯ ಮೂಲ ಎನ್ನುವುದರಲ್ಲಿ ಸಂಶಯವಿಲ್ಲ. ಆರ್ಥಿಕಪ್ರಗತಿಯಿಂದ ಮುಂದೆ ಹೆಚ್ಚಿನ ಉಳಿತಾಯ ಸಾಧ್ಯ ಎನ್ನುವುದು ಮತ್ತೊಂದು ವಾಸ್ತವ. ಹೀಗೆಲ್ಲ ಹೇಳುವುದರಿಂದ ಮಿತವ್ಯಯವನ್ನು ಅನಗತ್ಯವಾಗಿ ವೈಭವೀಕರಿಸಿದಂತಾಗುವುದಿಲ್ಲ. ಬದಲಾಗಿ ಅದರ ಅಗತ್ಯವನ್ನು ಇನ್ನಷ್ಟು ಸ್ಫುಟಗೊಳಿಸಿದಂತಾಗುತ್ತದೆ.
ಕರ್ನಾಟಕ ರಾಜ್ಯ ತನ್ನ ಐವತ್ತನೇ ವರ್ಷದ (2006) ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ಕಾಲದಲ್ಲಿ ಹೆಚ್ಚು ಪ್ರಚಾರಕ್ಕೆ ಬಂದಿದ್ದು ಇಲ್ಲಿ ಆದ ಬ್ಯಾಂಕಿಂಗ್ ಕ್ಷೇತ್ರದ ಬೆಳವಣಿಗೆ. ಪ್ರಾದೇಶಿಕ ಅಭಿವೃದ್ಧಿಗೆ ಇಲ್ಲಿಯ ಬ್ಯಾಂಕುಗಳು ತಮ್ಮದೇ ಆದ ಕೊಡುಗೆಗಳನ್ನು ನೀಡುತ್ತ ಬಂದಿದ್ದು ಸತ್ಯ. ತಿಂಗಳಾಯರೇ ತಿಳಿಸಿದಂತೆ ಕರ್ನಾಟಕ ರಾಜ್ಯದ ಬ್ಯಾಂಕುಗಳು ನೆರೆಯ ರಾಜ್ಯಗಳು ಮತ್ಸರಪಡಬಹುದಾದ ಪ್ರಗತಿಯನ್ನು ಸಾಧಿಸಿದ್ದು ದಾಖಲೆಗೆ ಸೇರಿದೆ. ಕೆನರಾ ಬ್ಯಾಂಕ್ 2006ರಲ್ಲಿ ತನ್ನ ಕಾರ್ಯಾಚರಣೆಯನ್ನು ಪ್ರಚುರಪಡಿಸುವಾಗ ‘ಸುದೃಢ ಕಾರ್ಯನಿರ್ವಹಣೆ, ಅತ್ಯುತ್ತಮ ಫಲಿತಾಂಶ’ ಎನ್ನುವ ಘೋಷಣೆ ಹೊರಡಿಸಿತ್ತು, ಆಗಲೇ ಸಾಮಾನ್ಯ ಗ್ರಾಹಕರ ಉಳಿತಾಯ ಪ್ರವೃತ್ತಿಯನ್ನು ಕೇಂದ್ರಬಿಂದುವನ್ನಾಗಿ ಪರಿಗಣಿಸಿತ್ತು. ತನ್ನ ಗ್ರಾಹಕ ವರ್ಗದಲ್ಲಿದ್ದ ಉಳಿತಾಯ ಪ್ರವೃತ್ತಿಗೆ ಪ್ರೋತ್ಸಾಹ ನೀಡುವ ಉದ್ದೇಶ ಹೊಂದಿದ ಸಿಂಡಿಕೇಟ್ ಬ್ಯಾಂಕ್ ತನ್ನ 2006ರ ಹಣಕಾಸು ವರ್ಷದ ಪ್ರಯಾಣವನ್ನು ‘ನಿರಂತರ ಪ್ರಯಾಣ – ಪ್ರಗತಿಯತ್ತ’ ಎಂದು ಸಾರಿತ್ತು. ಈಗಲೂ ಖಾಸಗಿರಂಗದಲ್ಲಿ ಹೆಸರು ಮಾಡಿರುವ ಕರ್ನಾಟಕ ಬ್ಯಾಂಕ್ ಬೆಳೆದದ್ದು ಜನಸಾಮಾನ್ಯರಲ್ಲಿದ್ದ ಉಳಿತಾಯ ಮಾಡುವ ಪ್ರವೃತ್ತಿಯನ್ನು ಹುರಿದುಂಬಿಸಿದ್ದರಿಂದ ಎನ್ನುವುದು ಬ್ಯಾಂಕಿನ ಇತಿಹಾಸ ಓದುವುದರಿಂದ ಕಂಡುಬರುತ್ತದೆ. ಬೆಳಗಾವಿ ಜಿಲ್ಲೆಯಲ್ಲಿ ಮೂಲಸೌಕರ್ಯಗಳ ಕೊರತೆಯಿದ್ದರೂ, ಜನರ ಉಳಿತಾಯ ಸಂಗ್ರಹ ಮಾಡುವಲ್ಲಿ ಬ್ಯಾಂಕುಗಳು ಹಿಂದೆ ಬಿದ್ದಿಲ್ಲ. ಹಲವಾರು ಸ್ಥಳೀಯ ಬ್ಯಾಂಕ್ಗಳು ಮುಂಬಯಿ-ಕರ್ನಾಟಕ ಪ್ರದೇಶದಲ್ಲಿ (ಸಾಗಾಟ-ಸಂಪರ್ಕದ ಸಮಸ್ಯೆಯಿದ್ದರೂ) ಸ್ವಲ್ಪವಾದರೂ ಬೆಳೆದದ್ದು ಜನಸಾಮಾನ್ಯರ ಉಳಿತಾಯವನ್ನು ಸಂಗ್ರಹ ಮಾಡಿದ್ದರಿಂದಲೇ. ಕರ್ನಾಟಕದಲ್ಲಿ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ಗಳು ಕೂಡ ಪ್ರಥಮ ಹಂತದಲ್ಲಿ ಬೆಳವಣಿಗೆ ಸಾಧಿಸಿದ್ದು ಸಾಮಾನ್ಯಜನರ ಉಳಿತಾಯ ಮಾಡುವ ಗುಣಕ್ಕೆ ಪ್ರೋತ್ಸಾಹ ನೀಡಿದ್ದರಿಂದ ಎನ್ನುವುದು ದಾಖಲೆಯಲ್ಲಿರುವ ಸಾಧನೆ.
ಕೃಷಿಗೆ ಮಹತ್ತ್ವ ಕೊಡುವ ಯಾವ ಸಾಮಾಜಿಕ ವ್ಯವಸ್ಥೆಯಾದರೂ ಧೈರ್ಯ ಹುಟ್ಟಿಸುವ ನಾಳೆ ಬರಬೇಕಾದರೆ ಇಂದು ಉಳಿತಾಯ ಮಾಡಬೇಕಾದ ಅಗತ್ಯವನ್ನು ತೋರಿಸುತ್ತದೆ. ವಿಶ್ವಕವಿ ರವೀಂದ್ರನಾಥ ಟಾಗೋರರು ಶಾಂತಿನಿಕೇತನ ಮತ್ತು ಶ್ರೀನಿಕೇತನದಲ್ಲಿ ಕಟ್ಟಿಬೆಳೆಸಿದ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕೃಷಿ, ಭೂನಿರ್ವಹಣೆ ಮತ್ತು ಗ್ರಾಮೀಣ ಜನತೆಯ ಉತ್ಪಾದಕತೆಯ ರಂಗಗಳಲ್ಲಿ ತಂತ್ರಜ್ಞಾನಾಧಾರಿತ ಪ್ರಯೋಗಗಳನ್ನು ಮಾಡಿದ್ದರು. ಆದರೂ ಅಭಿವೃದ್ಧಿ ವಿಚಾರದಲ್ಲಿ ದೇಶವು ಸ್ವಂತಿಕೆಯನ್ನು ಕಾಪಾಡಿಕೊಳ್ಳಬೇಕೆಂದು ಅವರು ಹೇಳಿದ್ದು ಅರ್ಥಪೂರ್ಣವಾಗಿದೆ. “ಪರಮಾತ್ಮ ಬೇರೆ ಬೇರೆ ದೇಶಗಳಿಗೆ ಬೇರೆ ಬೇರೆ ಪ್ರಶ್ನಪತ್ರಿಕೆಗಳನ್ನು ನೀಡಿದ್ದು, ನಕಲು ಹೊಡೆಯುವುದರಿಂದ ಪ್ರಯೋಜನವಾಗದು” ಎಂದು ಟಾಗೋರರು ಹೇಳಿದ್ದು ಸ್ಮರಣಾರ್ಹವಾಗಿದೆ. ಆರ್ಥಿಕಸುಧಾರಣೆಗಳು ಜಾರಿಯಾದ (1991) ನಂತರ ಕೃಷಿರಂಗ ನಿರ್ಲಕ್ಷ್ಯಕ್ಕೊಳಗಾಗಿ ಸಾಂಪತ್ತಿಕ ಸ್ಥಿತಿ ರಹಿತರಾದ, ಸಾಲದಲ್ಲಿ ಮುಳುಗಿಹೋದ ಅಸಂಖ್ಯಾತ ಸಣ್ಣ ಮತ್ತು ಅತಿಸಣ್ಣ ರೈತರು ಆತ್ಮಹತ್ಯೆಗೆ ಶರಣಾಗಬೇಕಾಯಿತು. ಆಗಲೇ ಇಷ್ಟು ದೊಡ್ಡ ದೇಶ ಯಾವ ಕಾರಣಕ್ಕೂ ಕೃಷಿಯನ್ನು ಅಲಕ್ಷಿಸುವಂತಿಲ್ಲವೆಂದು ತಿಳಿಯುವಂತಾಯಿತು. ಹಿಂದೆ ಪ್ರಧಾನಿಗಳಾಗಿದ್ದ ಎ.ಬಿ. ವಾಜಪೇಯಿ ಮತ್ತು ಮನಮೋಹನ್ ಸಿಂಗ್ ಮತ್ತು ಈಗ ಪ್ರಧಾನಿಯಾಗಿರುವ ನರೇಂದ್ರ ಮೋದಿ ಬಯಸಿದ ದ್ವಿತೀಯ ಹಸಿರುಕ್ರಾಂತಿಯಾಗಬೇಕಾದರೆ ರೈತಸಮುದಾಯ ಸುಭದ್ರ ನಾಳೆಯ ಆಗಮನಕ್ಕಾಗಿ ಇಂದೇ ಉಳಿತಾಯದ ಪ್ರವೃತ್ತಿಯನ್ನು ಬೆಳೆಸಿಕೊಳ್ಳಬೇಕಾಗಿದೆ. ಈಗಿನ ಸ್ಥಿತಿ-ಗತಿಯಲ್ಲಿ ಕೊಳ್ಳುಬಾಕ ಸಂಸ್ಕøತಿ ನಮ್ಮ ಸಣ್ಣ ಮತ್ತು ಅತಿಸಣ್ಣ ರೈತರ ಸಾಂಖ್ಯಿಕ ಪ್ರಾಧಾನ್ಯವುಳ್ಳ ಕೃಷಿ ಆಧಾರಿತ ಸಾಮಾಜಿಕ-ಸಾಂಸ್ಕೃತಿಕ ವ್ಯವಸ್ಥೆಗೆ ಹೇಳಿಸಿದ್ದೇ ಅಲ್ಲ.
ಯಾವ ಅಭಿವೃದ್ಧಿ ಸಿದ್ಧಾಂತವೇ ಆಗಿರಲಿ, ಅದು ಸಾರ್ವಕಾಲಿಕ ಸತ್ಯವಾಗಲು ಸಾಧ್ಯವಿಲ್ಲವೆಂಬ ವಿಚಾರವನ್ನು ಮತ್ತೊಮ್ಮೆ ಒಪ್ಪಿಕೊಂಡು ನಾವು ಇಪ್ಪತ್ತನೆಯ ಶತಮಾನದ ಕೆಲವು ಸಿದ್ಧಾಂತಗಳನ್ನು ಪರಿಶೀಲಿಸಬಹುದು. ಆಸ್ಟ್ರಿಯಾದ ಜೋಸೆಫ್ ಶುಂಪಿಟರ್ ಅವರ ಪ್ರಕಾರ ಸಂಘಟನೆ ಮತ್ತು ಆವಿಷ್ಕಾರಗಳು ಅಭಿವೃದ್ಧಿಪ್ರಕ್ರಿಯೆಗೆ ಪ್ರೇರಕಶಕ್ತಿಗಳು. ಇದಕ್ಕೆ ಒಡೆತನಕ್ಕಿಂತ ನಾಯಕತ್ವ ಹೆಚ್ಚು ಮಹತ್ತ್ವದ್ದೆಂದು ಅವರು ವಾದಿಸಿದರೂ, ಕಡ್ಡಾಯ ಉಳಿತಾಯಗಳು ಹೊಸ ಉದ್ಯಮಿಗಳಿಗೆ ಬೇಕಾದ ನಿಧಿಯನ್ನು ಒದಗಿಸುತ್ತವೆ ಎಂದು ಹೇಳಿದ್ದನ್ನು ನೆನಪಿಸಿಕೊಳ್ಳಬೇಕಾಗಿದೆ. ಇಂಗ್ಲೆಂಡಿನ ಆರ್.ಎಫ್. ಹ್ಯಾರಡ್ ಮತ್ತು ಅಮೆರಿಕದ ಇ. ಡೋಮರ್ ಮಂಡಿಸಿದ ಅಭಿವೃದ್ಧಿ ಸಿದ್ಧಾಂತದಲ್ಲಿ ಉಳಿತಾಯ ಮತ್ತು ಹೂಡಿಕೆ ಪ್ರಕ್ರಿಯೆಗಳ ಪರಸ್ಪರ ಸಂಬಂಧದ ಮಹತ್ತ್ವವನ್ನು ತೋರಿಸಲಾಗಿದೆ. ಅಮೆರಿಕದ ಆರ್ಥಿಕ ತಜ್ಞ ಡಬ್ಲ್ಯೂ.ಡಬ್ಲ್ಯೂ. ರಾಸ್ಟೋ ಅವರು ಅಭಿವೃದ್ಧಿಯ ಹಂತಗಳನ್ನು ಗುರುತಿಸುವಾಗ ಒಂದು ಹಂತದಲ್ಲಿ ಅಭಿವೃದ್ಧಿಯ ವೇಗವನ್ನು ಕಾಯ್ದುಕೊಂಡು ಅದಕ್ಕೆ ಹೆಚ್ಚಿನ ಶಕ್ತಿ ತುಂಬಲು ಬೇಕಾದ ಸಾಂಸ್ಥಿಕ ಚೌಕಟ್ಟಿನ ಅಗತ್ಯವನ್ನು ವಿವರಿಸುತ್ತಾರೆ. ಜತೆಗೆ ಜನರ ಉಳಿತಾಯವನ್ನು ಸಂಗ್ರಹ ಮಾಡಬೇಕಾದ ಅಗತ್ಯವನ್ನು ತಿಳಿಸುತ್ತಾರೆ. ಜೋನ್ ರಾಬಿನ್ಸನ್ ಮಂಡಿಸಿದ ನವಸಂಪ್ರದಾಯ ಬೆಳವಣಿಗೆಯ ಮಾದರಿ ಉಳಿತಾಯ ಯಾವಾಗಲೂ ಬಂಡವಾಳ ಹೂಡಿಕೆಗೆ ಸಮನಾಗಿರಬೇಕೆಂದು ತಿಳಿಸುತ್ತದೆ. ಅಂದರೆ ಇದು ಉಳಿತಾಯದ ಅಗತ್ಯ ಮತ್ತು ಮಹತ್ತ್ವವನ್ನು ಸಿದ್ಧಾಂತದ ರೂಪದಲ್ಲಿ ಸಾರುತ್ತದೆ. ನಮ್ಮ ಕೇಂದ್ರಸರಕಾರದ ಹಣಕಾಸಿನ ವಿಭಾಗ ವಾರ್ಷಿಕ ಬಜೆಟ್ ಮಂಡನೆಗೆ ಮೊದಲು ಸಂಸತ್ತಿನಲ್ಲಿ ಮಂಡಿಸುವ ಆರ್ಥಿಕಸಮೀಕ್ಷೆ ಒಂದಲ್ಲ ಒಂದು ರೀತಿಯಲ್ಲಿ ಆಂತರಿಕ ಉಳಿತಾಯದ ಪ್ರಮಾಣ ಹೆಚ್ಚಾಗಬೇಕೆಂದು ತಿಳಿಸುತ್ತಿರುವುದು ಸುಳ್ಳಲ್ಲ.
ಸಮಸ್ಯೆಗಳ ಸುಳಿಗೆ ಕಾರಣವಾದ ಸಾಲಮನ್ನಾ ಪ್ರಯೋಗ
ಸಾಲಮನ್ನಾ ನೀತಿ ಬೇಜವಾಬ್ದಾರಿ ಪ್ರವೃತ್ತಿಯನ್ನು ಬೆಳೆಸಿದ್ದು, ಕೊಳ್ಳುಬಾಕ ಸಂಸ್ಕೃತಿಯಂತೆಯೆ ಅಪಾಯಕಾರಿಯಾಗಿದೆ. 1970 ಮತ್ತು 1980ರ ದಶಕಗಳಲ್ಲಿ ರೈತರ ಮೂಲಸಮಸ್ಯೆಗಳನ್ನು ಪರಿಹರಿಸಲು ವಿಫಲವಾದ ರಾಜ್ಯ ಸರಕಾರಗಳು ಸಾಲಮನ್ನಾ ಮಾಡುವ ಹವ್ಯಾಸ ಬೆಳೆಸಿಕೊಂಡವು. ಇದರಿಂದ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡುವ ರೈತ ಸಮುದಾಯದ ಮೂಲಸಂಸ್ಕೃತಿಗೆ ಧಕ್ಕೆಯೊದಗಿತು. ಆರನೇ ಪಂಚವಾರ್ಷಿಕ ಯೋಜನೆಯ (1980-85) ದಾಖಲೆಪತ್ರ ಸಾಲಮನ್ನಾ ಯೋಜನೆಗಳನ್ನು ಪ್ರೋತ್ಸಾಹಿಸದಂತೆ ನೀಡಿದ ಎಚ್ಚರಿಕೆಯನ್ನು ರಾಜ್ಯ ಸರಕಾರಗಳು ಲೆಕ್ಕಕ್ಕೇ ತೆಗೆದುಕೊಳ್ಳಲಿಲ್ಲ. ಏಳನೇ ಯೋಜನೆ (1985-90) ಸಹ ಸಾಲಮನ್ನಾ ಪರಿಪಾಠದ ವಿರುದ್ಧ ನೀಡಿದ ಎಚ್ಚರಿಕೆಯನ್ನು ರಾಜ್ಯ ಸರಕಾರಗಳು ನಿರ್ಲಕ್ಷಿಸಿದವು. 1990ರಲ್ಲಿ ಕೇಂದ್ರ ಸರಕಾರವೇ ಆಸಕ್ತಿವಹಿಸಿ ಕೃಷಿ ಮತ್ತು ಗ್ರಾಮೀಣ ಸಾಲಮನ್ನಾ ಯೋಜನೆಯನ್ನು ಘೋಷಿಸಿದಾಗ ಪ್ರಮಾದಗಳ ಸರಪಳಿ ನಿರ್ಮಾಣವಾಗಿ ಸಾಲಗಳ ದುರುಪಯೋಗಕ್ಕೆ ದಾರಿಯಾಯಿತು. ಕಾಲಕ್ರಮೇಣ ಕೃಷಿಕರ ಮಟ್ಟದಲ್ಲಿ ಅದು ಮುಂದಾಲೋಚನೆಯಿಲ್ಲದ ವೆಚ್ಚಗಳಿಗೆ ಮಾರ್ಗ ನಿರ್ಮಾಣ ಮಾಡಿದ್ದು ಕೂಡ ಸತ್ಯವೇ.
2008-09ರ ಕೇಂದ್ರ ಬಜೆಟ್ನಲ್ಲಿ ಘೋಷಣೆಯಾದ ಸಾಲಮನ್ನಾ ಯೋಜನೆ ಒಂದು ಅಂದಾಜಿನ ಪ್ರಕಾರ 70 ಸಾವಿರ ಕೋಟಿ ರೂ.ಗಳಿಗೂ ಮಿಕ್ಕಿದ ಮೊತ್ತದ ಭಾರವನ್ನು ದೇಶದ ಆರ್ಥಿಕತೆಯ ಮೇಲೆ ಹೇರಿತ್ತು. ಐದು ವರ್ಷಗಳ ನಂತರ ಅದರ ವೈಫಲ್ಯಗಳು ಬೆಳಕಿಗೆ ಬಂದವು. 2013ರ ಮಹಾ ಲೇಖಪಾಲರ (ಸಿಎಜಿ) ವರದಿ ತಿಳಿಸಿದಂತೆ ಕೃಷಿಯೇತರ ಉದ್ದೇಶಗಳಿಗಾಗಿ ರೈತರು ಪಡೆದುಕೊಂಡ ಸಾಲಗಳನ್ನು ಅಥವಾ ಮನ್ನಾ ಆಗುವ ಅರ್ಹತೆಯಿಲ್ಲದ ಕೃಷಿಸಾಲಗಳನ್ನು ಈ ಯೋಜನೆಯಡಿಯಲ್ಲಿ ಮನ್ನಾ ಮಾಡಲಾಗಿತ್ತು. ಅದೇ ವೇಳೆ ಮನ್ನಾ ಮಾಡಲೇಬೇಕಾದ ಸಾಲಗಳನ್ನು (ಸಣ್ಣ ಮತ್ತು ಅತಿ ಸಣ್ಣ ರೈತರ ಸಾಲಗಳೂ ಸೇರಿದಂತೆ) ಬ್ಯಾಂಕುಗಳು ಪರಿಗಣಿಸಿಯೇ ಇರಲಿಲ್ಲ. ಸಾಲಮನ್ನಾ ನಿಯಮಾವಳಿಯನ್ನು ಉಲ್ಲಂಘಿಸಿ ಸರ್ಕಾರಿ ಬ್ಯಾಂಕುಗಳೇ ಸರ್ಕಾರದಿಂದ ಸಾಕಷ್ಟು ಮೊತ್ತವನ್ನು ಪರಿಹಾರ ರೂಪದಲ್ಲಿ ಕಬಳಿಸಿದ್ದವು! 2014ರ ಡಿಸೆಂಬರ್ ತಿಂಗಳಿನಲ್ಲಿ 70ನೇ ಸುತ್ತಿನ ರಾಷ್ಟ್ರೀಯ ಮಾದರಿ ಸಮೀಕ್ಷೆ ವರದಿ ಶೇ. 50ರಷ್ಟು ರೈತ ಕುಟುಂಬಗಳು ಸಾಲದಲ್ಲಿ ಮುಳುಗಿದ್ದನ್ನು ಪ್ರಚುರಪಡಿಸಿತ್ತು. ಅಲ್ಲಿಗೆ ಸಾಲಮನ್ನಾ ಯೋಜನೆಗಳಿಂದ ರೈತರಿಗೆ ಸಿಗಬೇಕಾದ ಲಾಭ ಸಿಗಲಿಲ್ಲವೆನ್ನುವುದು ಸ್ಪಷ್ಟವಾಯಿತು. ಸಾಲಮನ್ನಾ ಜಾರಿಗೆ ಬಂದ ಎಲ್ಲ ರಾಜ್ಯಗಳಲ್ಲಿ ಇದು ಸಾರ್ವಜನಿಕ ಬೊಕ್ಕಸಕ್ಕೆ ಭಾರವಾದ ವೆಚ್ಚಕ್ಕೆ ಕಾರಣವಾಯಿತೇ ಹೊರತು, ಬೇರೇನು ಪ್ರಯೋಜನವೂ ಆಗಲಿಲ್ಲ. ಮಿತವ್ಯಯ ಪ್ರವೃತ್ತಿಗೆ ವ್ಯತ್ತಿರಿಕ್ತವಾದ ವಾತಾವರಣ ಸೃಷ್ಟಿಗೆ ಹಾದಿ ಮಾಡಿದ್ದರಿಂದಲೇ ಒಂದು ಸಾಲಮನ್ನಾ ಇನ್ನೊಂದು ಸಾಲಮನ್ನಾಕ್ಕೆ ಒತ್ತಡ ಸೃಷ್ಟಿಸಲು ಕಾರಣವಾಗಿದೆ. ಸಾಲದ ರೂಪದಲ್ಲಿ ಬಂದ ಹಣದ ಅಪವ್ಯಯವಾಗಿದೆ. ಸ್ವಲ್ಪಮಟ್ಟಿಗೆ ಕೊಳ್ಳುಬಾಕ ಸಂಸ್ಕೃತಿಯನ್ನು ಪ್ರಚೋದಿಸಲು ಕೂಡ ಕಾರಣವಾಗಿದೆಯೆಂದು ಹೇಳಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.
ಸಾಲಮನ್ನಾ ಒಂದು ಶಾಶ್ವತ ಪರಿಹಾರವಲ್ಲವೆನ್ನುವುದಕ್ಕೆ ಅದು ಅಧಿಕೃತವಾಗಿ ಜಾರಿಯಾದ ನಂತರವೂ ಪಂಜಾಬ್ ಮತ್ತಿತರ ರಾಜ್ಯಗಳಲ್ಲಿ ಮುಂದುವರಿದ ರೈತರ ಆತ್ಮಹತ್ಯೆಗಳೇ ಸಾಕ್ಷಿ. ರೈತರ ಬದುಕು ಹಸನಾದರೆ ಖಂಡಿತ ಅವರು ಸಾಲಮನ್ನಾದ ಬೇಡಿಕೆ ಇಡುವುದಿಲ್ಲ. ಸಾಲಮನ್ನಾ ಮಾಡಿದ ನಂತರ ಅದು ಸರಕಾರದ ಮಹಾಸಾಧನೆ ಎಂದು ಬಿಂಬಿಸುವ ಜಾಹೀರಾತುಗಳು ಕೆಲವು ದೈನಿಕಗಳಲ್ಲಿ ಪ್ರಕಟವಾಗಿ ಸಾರ್ವಜನಿಕ ಹಣ ಇನ್ನಷ್ಟು ಪೋಲಾಗುತ್ತದೆ. ಬಹುಮತದ ಬಲದಲ್ಲಿ ಸರಕಾರ ನಡೆಸುವ ರಾಜಕೀಯ ಪಕ್ಷಗಳು ರೈತರನ್ನು ತೀರ ಹಗುರವಾಗಿ ಕಾಣುವ ಅಪಾಯಕಾರಿ ಪ್ರವೃತ್ತಿ ಬೆಳೆಯುತ್ತಿದೆ. ಹೀಗೆ ಸಹಜವಾಗಿ ವೈಯಕ್ತಿಕ ಹಿತ ಹಾಗೂ ರಾಷ್ಟ್ರದ ಆರ್ಥಿಕಭದ್ರತೆಯ ನಡುವಿನ ಅವಿನಾಭಾವ ಸಂಬಂಧಕ್ಕೆ ಧಕ್ಕೆಯಾಗಿ ಸಾರ್ವಜನಿಕ ಹಣಕಾಸಿಗೆ ವಿಪತ್ತು ತಗಲುತ್ತಿದೆ. ವಿತ್ತೀಯ ನೀತಿಗೆ ದಿಕ್ಕುದೆಸೆ ಇಲ್ಲದಂತಾಗಿಹೋಗುತ್ತಿದೆ.
ಕರ್ನಾಟಕದಲ್ಲೂ ಸಾಲಮನ್ನಾ ಕಸರತ್ತುಗಳು ಆಗಾಗ ನಡೆದುಹೋಗಿದ್ದು, ಈ ಕಸರತ್ತುಗಳಿಂದ ಆದ ಲಾಭಕ್ಕಿಂತ ನಷ್ಟವೇ ಹೆಚ್ಚು. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ರಾಜ್ಯ ಸರಕಾರ ಘೋಷಿಸಿದ ಸಾಲಮನ್ನಾ ದುರುಪಯೋಗವಾದ ಹಲವಾರು ಪ್ರಕರಣಗಳು ಬಯಲಾದವು. ಸಾಲಮನ್ನಾ ರಾಜ್ಯದ ವಿತ್ತೀಯ ಬೊಕ್ಕಸದ ಮೇಲೆ ಭಾರವಾಗಿದ್ದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಎಚ್.ಡಿ. ಕುಮಾರಸ್ವಾಮಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದಾಗ 2018ರಲ್ಲಿ ಒಟ್ಟು 34 ಸಾವಿರ ಕೋಟಿ ರೂ.ಗಳ ರೈತರ ಸಾಲಮನ್ನಾ ಮಾಡಿದ್ದರಿಂದ ‘ಮನ್ನಾಭಾಯ್’ ಎನಿಸಿಕೊಂಡು ಧನ್ಯರಾದರು! ಆದರೆ ಅವರು ಕೊರತೆಯನ್ನು ನೀಗಲು ಪರದಾಟ ಪಡಬೇಕಾಯಿತು. ಪೆಟ್ರೋಲ್, ಡೀಸೆಲ್ ದುಬಾರಿ ಮಾಡಬೇಕಾಯಿತು. ವಿದ್ಯುತ್ ದರವನ್ನು ಏರಿಸಬೇಕಾಯಿತು. ವಾಹನ ನೋಂದಣಿ ತೆರಿಗೆಯನ್ನು ಹೆಚ್ಚಿಸಬೇಕಾಯಿತು. ಒಟ್ಟಾರೆ ಸಾಲಮನ್ನಾ ಒಂದು ಸಾಧನೆಯಾಗುವ ಬದಲು ಅನೇಕರಿಗೆ ವೇದನೆಯಾಯಿತು. ಅದರ ಲಾಭ ತಲಪಬೇಕಾದವರನ್ನು ತಲಪಲಿಲ್ಲವೆಂಬ ಕೊರಗು ಉಳಿದುಕೊಂಡಿದೆ. ಹೇಗೆಹೇಗೋ ಸಾಲಮನ್ನಾ ಮಾಡಿಸಿಕೊಳ್ಳುವಲ್ಲಿ ಕೈಚಳಕ ಪ್ರದರ್ಶಿಸಿದ ಕೃಷಿಕರು ಈಗ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಸಾರ್ವಜನಿಕ ಹಣದ ದುರುಪಯೋಗವಾದ ಅನೇಕ ಪ್ರಕರಣಗಳು ಹಿಂದಿನಂತೆ ಈಗಲೂ ಬೆಳಕಿಗೆ ಬಂದಿವೆ. ಈಗ ವೈಯಕ್ತಿಕ ಹಿತ ಮತ್ತು ರಾಜ್ಯದ ಆರ್ಥಿಕಭದ್ರತೆಯ ನಡುವಿನ ಸಂಬಂಧ ಇರಬೇಕಾದ ರೀತಿಯಲ್ಲಿ ಇಲ್ಲವಾದ್ದರಿಂದ ಕರ್ನಾಟಕದ ಆರ್ಥಿಕತೆ ಸಂಕಷ್ಟದಲ್ಲಿದೆ.
ಯುಪಿಎ ಅವಧಿಯಲ್ಲಾದ ಸಾಲಮನ್ನಾ ಅವಾಂತರಗಳನ್ನು ತಿಳಿಸುತ್ತ ಭಾರತೀಯ ರಿಸರ್ವ್ ಬ್ಯಾಂಕಿನ ಮಾಜಿ ಗವರ್ನರ್ ರಘುರಾಂ ರಾಜನ್ ಬೇಕಾಬಿಟ್ಟಿ ಸಾಲ ವಿತರಣೆ ಮತ್ತು ಮನ್ನಾದಂತಹ ಮುಂದಾಲೋಚನೆಯಿಲ್ಲದ ನಿರ್ಧಾರಗಳಿಂದ ವಸೂಲಾಗದ ಸಾಲದ ಸಮಸ್ಯೆ (ಎನ್.ಪಿ.ಎ.) ಮತ್ತಷ್ಟು ಹೆಚ್ಚಲಿದೆಯೆಂದು 2018ರಲ್ಲಿ ಎಚ್ಚರಿಕೆ ನೀಡಿದ್ದರು. ಸಾಲಮನ್ನಾ ಒತ್ತಡಕ್ಕೆ ಸ್ವಲ್ಪವೂ ಜಗ್ಗದ, ಬಗ್ಗದ ನರೇಂದ್ರ ಮೋದಿ ಸರಕಾರ ಕೋವಿಡ್-19 ಸಾಂಕ್ರಾಮಿಕದ ಪರಿಣಾಮವಾಗಿ ಸಾಲ ಮರುಪಾವತಿಸುವಲ್ಲಿ ತೊಂದರೆ ಎದುರಿಸುತ್ತಿರುವವರಿಗೆ ಮರುಹೊಂದಾಣಿಕೆಯ ಅವಕಾಶಮಾಡಿಕೊಟ್ಟಿರುವುದು ಸಮರ್ಪಕವಾದ, ಪ್ರಶಂಸಾರ್ಹ ನೀತಿ. ಕೃಷಿಯೇತರ ರಂಗಗಳಲ್ಲಿ ಸಾಲ ಮರುಹೊಂದಾಣಿಕೆಗೆ ಅರ್ಹರಾಗಿರುವ ಸಾಲಗಾರರನ್ನು ಗುರುತಿಸಿ ಅವರನ್ನು ಸಂಪರ್ಕಿಸುವ ಕೆಲಸ ಈಗ ಆಗುತ್ತಿದೆ. ಇದೇ ಆಗಬೇಕಾದ ಕೆಲಸ ಹೊರತು ಸಾರಾಸಗಟಾಗಿ ಸಾಲಮನ್ನಾ ಮಾಡುವುದರಿಂದ ತಾರ್ಕಿಕ ಹಿನ್ನೆಲೆ ಇಲ್ಲದ, ವಿವೇಚನಾರಹಿತ ಖಾಸಗಿ ದುಂದುಗಾರಿಕೆಗೆ ಹಾದಿ ಮಾಡಿಕೊಟ್ಟಂತಾಗುತ್ತದೆ. ಕೃಷಿರಂಗದಲ್ಲಾಗಲಿ, ಕೃಷಿಯೇತರ ರಂಗದಲ್ಲಾಗಲಿ ಸಾಲಮನ್ನಾ ಮಾಡುವುದು ಕೂಡ ಒಂದು ಸಾಧನೆಯೆಂದು ಪರಿಗಣಿಸಲು ಸಾಧ್ಯವೇ ನಮ್ಮ ಈ ಬೃಹತ್ ದೇಶದಲ್ಲಿ?
ಜಾಗತೀಕರಣದ ಹಂದರದಲ್ಲಿ ಬೆಳೆದ ಕೊಳ್ಳುಬಾಕ ಸಂಸ್ಕೃತಿ
ವಿಶ್ವಾದ್ಯಂತ ಉತ್ಪಾದನೆ ಮತ್ತು ಅನುಭೋಗದ ಕ್ಷೇತ್ರಗಳಲ್ಲಿ ಬದಲಾವಣೆಯ ಅಲೆಗಳನ್ನು ಸೃಜಿಸಿದ್ದಲ್ಲದೆ ಅಮೆರಿಕದಂಥ ಬಲಾಢ್ಯ ರಾಷ್ಟ್ರಕ್ಕೆ ಅಗಾಧ ಲಾಭದ ಅವಕಾಶಗಳನ್ನು ಸೃಷ್ಟಿಸಿದ ವಿಶ್ವ ವ್ಯಾಪಾರ ಸಂಸ್ಥೆಯ ಸ್ಥಾಪನೆಗೆ ಕಾರಣವಾದ ಜಾಗತೀಕರಣದ ವೇಗಕ್ಕೆ ಈಗ ಸ್ವಲ್ಪ ಹಿನ್ನಡೆಯಾದರೂ, ಅದು ಒಂದು ದೊಡ್ಡ ಹಂದರವೆನ್ನುವುದರಲ್ಲಿ ಅನುಮಾನವೇ ಇಲ್ಲ. ಈ ಹಂದರದ ಅಡಿಯಲ್ಲೇ ವಿದೇಶೀ ವ್ಯಾಪಾರದ ಮೇಲೆ ಇದ್ದ ನಿರ್ಬಂಧಗಳು ಸಡಿಲಗೊಂಡಿದ್ದನ್ನು ಕಾಣಬಹುದು. ಅಂತಾರಾಷ್ಟ್ರೀಯ ಹೂಡಿಕೆಯ ಮೇಲೆ ಇದ್ದ ಷರತ್ತುಗಳು ಕಡಿತಗೊಂಡಿದ್ದನ್ನು ಗುರುತಿಸಬಹುದು. ಸಾಗಾಟ-ಸಂಪರ್ಕಗಳ ಸಾಧನಗಳಲ್ಲಾದ ಆವಿಷ್ಕಾರಗಳಂತೂ ಜೀವನದ ಸ್ವರೂಪವನ್ನೇ ಬದಲಿಸಿದ್ದು ಯಾರಿಗಾದರೂ ತೀರಾ ಸುಲಭದಲ್ಲಿ ತಿಳಿಯುತ್ತದೆ. ಜಾಗತೀಕರಣದ ವಿಶಾಲವಾದ ಚಪ್ಪರದ ಅಡಿಯಲ್ಲೇ ಯೂರೋಪಿನ ರಾಷ್ಟ್ರಗಳು ಬೆಳೆದಿವೆ, ಕೊಳ್ಳುಬಾಕತನದ ತವರು ಎನಿಸಿಕೊಂಡು ಹೂಡಿಕೆದಾರರಿಗೆ ರತ್ನಗಂಬಳಿ ಹಾಸಿದ, ಐಷಾರಾಮೀ ವಸ್ತುಗಳ ಉತ್ಪಾದನೆಗೆ ಬಾಗಿಲು ತೆರೆದಿಟ್ಟ ಅಮೆರಿಕ ಕೋವಿಡ್ ಹಾವಳಿ ಪ್ರಾರಂಭವಾಗುವ ತನಕವೂ ಝಗಮಗಿಸಿದ್ದನ್ನು ಗುರುತಿಸಿದ ಕೆಲವು ಕನ್ನಡದ ಸಾಹಿತಿಗಳೇ ಜಾಗತೀಕರಣವೆಂದರೆ ‘ಅಮೆರಿಕೀಕರಣ’ ಎಂದು ಭಾವಿಸಿಬಿಟ್ಟಿದ್ದರು! ವಿಶ್ವ ವ್ಯಾಪಾರ ಸಂಸ್ಥೆಯ (ಡಬ್ಲ್ಯೂ.ಟಿ.ಒ.) ಕಾರ್ಯಕಲಾಪದ ಪ್ರಥಮಹಂತದಲ್ಲಿ ಅಪಾರ ಲಾಭ ಗಳಿಸಿ ತನ್ನ ಹಿತಾಸಕ್ತಿಯನ್ನೂ ಪ್ರಭಾವವನ್ನೂ ಪ್ರದರ್ಶಿಸಿದ ಅಮೆರಿಕ ಆಧುನಿಕ ಕೊಳ್ಳುಬಾಕತನಕ್ಕೆ ಷೋಡಶೋಪಚಾರ ಮಾಡಿದ ದೇಶ.
ಹಾಗೆಂದು, ಕೊಳ್ಳುಬಾಕತನವಾಗಲಿ, ಅನುಭೋಗಿತ್ವವಾಗಲಿ ಅಮೆರಿಕದಲ್ಲಿ ಸಂಪೂರ್ಣವಾಗಿ ಇಪ್ಪತ್ತನೆಯ ಶತಮಾನದ ಅಂತ್ಯದಲ್ಲಿ ಮೈದಳೆದ ಪ್ರವೃತ್ತಿ ಎಂದು ಭಾವಿಸಬೇಕಾಗಿಲ್ಲ. 1899ರಲ್ಲೇ ಅಲ್ಲಿ ಸಮಾಜಶಾಸ್ತ್ರಜ್ಞರಾಗಿಯೂ ಆರ್ಥಿಕತಜ್ಞರಾಗಿಯೂ ಹೆಸರು ಮಾಡಿದ್ದ ಟಿ. ವೆಬ್ಲೆನ್ ಆಡಂಬರದ ಅನುಭೋಗದ ಮೇಲೆ ಒಂದು ಸಿದ್ಧಾಂತವನ್ನೇ ಬರೆದು ಮಿಂಚಿದ್ದರು. ಕಣ್ಣುಕೋರೈಸುವ ಅತಿ ತುಟ್ಟಿಯಾದ ಆಭರಣಗಳು-ವೈಢೂರ್ಯಗಳು, ದುಬಾರಿಯಾದ ರಿಸ್ಟ್ವಾಚ್ಗಳು ಮತ್ತು ಐಷಾರಾಮಿ ಕಾರುಗಳು ವೆಬ್ಲೆನ್ ಸರಕುಗಳೆಂದು ಪರಿಗಣಿಸಲ್ಪಟ್ಟಿವೆ. ಈಗಲೂ ಜಾಗತೀಕರಣದ ಗುಣ-ದೋಷಗಳ ಮೇಲೆ ಚರ್ಚೆ ನಡೆದಾಗ ವೆಬ್ಲೆನ್ ಬರೆದ ಪುಸ್ತಕ ಸುದ್ದಿ ಮಾಡುತ್ತದೆ. ಹಾಗೆಂದು, ವೆಬ್ಲೆನ್ ಎಂದೂ ಆಡಂಬರದ ಅನುಭೋಗದ ಆರಾಧಕರಾಗಿರಲಿಲ್ಲ. ಅವರು ಅಮೆರಿಕದಲ್ಲಾದ ಇತಿಮಿತಿಯಿಲ್ಲದ ಉತ್ಪಾದನೆಯನ್ನು ಮತ್ತು ಸಾಮಾಜಿಕ ನಷ್ಟವನ್ನು ಜೋರಾಗಿಯೇ ಟೀಕಿಸಿದ್ದರು. ಅದೇ ಸಂಪದ್ಭರಿತ ಅಮೆರಿಕದಲ್ಲಿ ಕೊಳ್ಳುಬಾಕತನ ನವನವೀನ ಆವಿಷ್ಕಾರಗಳಿಗೆ, ಶೋಧಗಳಿಗೆ ಮತ್ತು ವೈವಿಧ್ಯವುಳ್ಳ ಉತ್ಪಾದನಾ ವ್ಯವಸ್ಥೆಗೆ ದಾರಿ ಮಾಡುತ್ತಲೇ ಆಡಂಬರದ ವಿಲಾಸೀ ಜೀವನವು, ಸಂಪನ್ಮೂಲಗಳ ಭಾರೀ ನಷ್ಟಕ್ಕೆ ಎಡೆಮಾಡಿದೆ. ವಿಶ್ವಾದ್ಯಂತ ಕೊಳ್ಳುಬಾಕತನ ಪ್ರಚೋದಿಸುವ ನೀತಿಯನ್ನು ಅಮೆರಿಕ ಅನುಸರಿಸುತ್ತಿರುವುದರಿಂದ ಈಗ ಸಂಪನ್ಮೂಲದ ಅಭಾವ ಮತ್ತು ಆರ್ಥಿಕ ಅಸಮಾನತೆ ಜಾಗತಿಕ ಸಮಸ್ಯೆಗಳಾಗಿವೆ. ಈ ಸಮಸ್ಯೆಗಳೇ ಈಗ ಕೋವಿಡ್-19 ರಣವಾದ್ಯ ಬಾರಿಸುತ್ತಿರುವಾಗ ಭಾರತವೂ ಸೇರಿದಂತೆ ಅನೇಕ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸವಾಲಿನ ಜಡಿಮಳೆ ಸುರಿಸುತ್ತಿವೆ.
ನಮ್ಮ ದೇಶದಲ್ಲಿ ಬೇರೂರಿಕೊಂಡಿರುವ ಅಸಮಾನತೆಯ ಸವಾಲುಗಳ ಸಾಲನ್ನು 2018ರ ಜನವರಿಯಲ್ಲಿ ಅಂತಾರಾಷ್ಟ್ರೀಯ ಹಕ್ಕುಗಳ ಸಂಘಟನೆ ‘ಒಕ್ಸಾಮ್ ಇಂಡಿಯಾ’ ತನ್ನ ವರದಿಯಲ್ಲಿ ಪ್ರಭಾವ ಬೀರುವ ರೀತಿಯಲ್ಲಿ ಬೆಳಕಿಗೆ ತಂದಿತ್ತು. 2017ರಲ್ಲಿ ಭಾರತದಲ್ಲಿ ಗಳಿಕೆಯಾದ ಸಂಪತ್ತಿನ ಶೇ. 73ರಷ್ಟು ಪಾಲನ್ನು ಕೇವಲ ಶೇ. 1ರಷ್ಟು ಅತಿ ಶ್ರೀಮಂತರು ತಮ್ಮದಾಗಿಸಿಕೊಂಡಿದ್ದರು. ಅದೇ ವರ್ಷ ದೇಶದ 67 ಕೋಟಿ ಜನರ ಸಂಪತ್ತಿನಲ್ಲಿ ಕೇವಲ ಶೇ. 1ರಷ್ಟು ಅತ್ಯಲ್ಪ ಹೆಚ್ಚಳವಾಗಿತ್ತು. ಇದು ಇಲ್ಲಿ ಸಂಪತ್ತಿನ ಹಂಚಿಕೆಯಲ್ಲಿ ಉಂಟಾಗಿರುವ, ದೀರ್ಘ ಇತಿಹಾಸವುಳ್ಳ ತೀವ್ರ ಅಸಮತೋಲನವನ್ನು ಬಿಂಬಿಸಿದೆ ಎಂದು ವರದಿ ಎಚ್ಚರಿಸಿತ್ತು. ಅತಿಯಾಗಿ ದುಬಾರಿಯಾಗಿರುವ ಸಾಮಗ್ರಿಗಳನ್ನು, ತುಟ್ಟಿಯಾದ ಸೊಬಗಿನ ವಸ್ತುಗಳನ್ನು ಮತ್ತು ಶ್ರೀಮಂತಿಕೆಯ ಭರ್ಜರಿ ಪ್ರತೀಕವಾದ ವಾಹನಗಳನ್ನು ಖರೀದಿಸಿ ಕೊಳ್ಳುಬಾಕತನವನ್ನು ಪ್ರದರ್ಶಿಸುವುದು ತೀರ ಸಣ್ಣಸಂಖ್ಯೆಯಲ್ಲಿರುವ ಶ್ರೀಮಂತರಿಗೆ ಮಾತ್ರ ಸಾಧ್ಯ ಎನ್ನುವುದು ಧಾರಾಳವಾಗಿ ಸ್ಪಷ್ಟವಾಗುತ್ತದೆ. ಅವೆಲ್ಲ ಬಹುದೊಡ್ಡ ಸಂಖ್ಯೆಯಲ್ಲಿರುವ ಜನಸಾಮಾನ್ಯರ ಕೈಗೆ ಎಟುಕದ ಕಣ್ಣುಕೋರೈಸುವ ಹಣ್ಣುಗಳೆನ್ನುವುದು ಕೂಡ ನಿಜ. ಮೊದಲೇ ಕಣ್ಣಿಗೆ ಬೀಳುತ್ತಿದ್ದ ಅಸಮಾನತೆ 1991ರ ಆರ್ಥಿಕ ಸುಧಾರಣೆಗಳು ಜಾರಿಯಾದ ನಂತರ ಇನ್ನಷ್ಟು ವಿಷಮಗೊಂಡು ಈಗ ಚಿಂತಾಜನಕ ಸವಾಲಿನ ರೂಪ ತಾಳಿದೆ.
ಭಾರತದಲ್ಲಿ ಆರ್ಥಿಕ ಬೆಳವಣಿಗೆಯ ಲಾಭ ಕೆಲವೇ ಕೆಲವು ವ್ಯಕ್ತಿಗಳ ಕೈಗೆ ಸೇರುತ್ತಿರುವುದು ಅಪಾಯದ ಅಂಶ ಎಂದು ಒಕ್ಸಾಮ್ ಇಂಡಿಯಾದ ಪ್ರಧಾನ ಕಾರ್ಯಕಾರಿ ಅಧಿಕಾರಿ ನಿಶಾ ಅಗರವಾಲ್ 2018ರಲ್ಲೇ ಹೇಳಿದ್ದರು. ‘ಶತಕೋಟ್ಯಧಿಪತಿಗಳ ಸಂಖ್ಯೆ ಹೆಚ್ಚುತ್ತಿರುವುದು ಬೆಳೆಯುತ್ತಿರುವ ಆರ್ಥಿಕತೆಯ ಸ್ವರೂಪವಾಗಿರದೆ ಅದರ ವೈಫಲ್ಯದ ಲಕ್ಷಣ’ ಎಂದು ಅವರು ಎಚ್ಚರಿಸಿದ್ದು ಸಮರ್ಪಕವಾಗಿದೆ. ಪರಿಸ್ಥಿತಿ ಹೀಗಿರುವಾಗ ಪಾಲ್ಗೊಳ್ಳುವಿಕೆಯ ಅಭಿವೃದ್ಧಿ ಆಕಾಶದ ಹೂವಾಗಿ ಉಳಿದಿರುವುದು ಸಹಜ.
ಈಗ ಕೊರೋನಾ ಹಾವಳಿ ವ್ಯಾಪಕವಾಗಿ ದೇಶದ ಆರ್ಥಿಕತೆಯಲ್ಲಿ ವೈಪರೀತ್ಯಗಳು ಮತ್ತು ಅಸಮಾನತೆಗಳು ಉಲ್ಬಣಗೊಂಡಿವೆ. ಇತ್ತೀಚಿನ ವರೆಗಿನ ವಾಸ್ತವಗಳನ್ನೂ, ಈಗ ರಾಷ್ಟ್ರಾದ್ಯಂತ ತಲ್ಲಣ ಮೂಡಿಸುತ್ತಿರುವ ಕೊರೋನಾಜನಿತ ಅನುಭವಗಳನ್ನೂ ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿರುವ ನೀತಿನಿರ್ಮಾಪಕರು ಪರಿಗಣಿಸಲೇಬೇಕಾಗಿದೆ. ಹಳೆಯ ಮತ್ತು ಇತ್ತೀಚಿನ ಅನುಭವಗಳ ಬೆಳಕಿನಲ್ಲಿ ನೋಡಿದರೆ ಸಾಲಮನ್ನಾ ಮಾಡುವ ನೀತಿಗೆ ವಿದಾಯ ಹೇಳುವ ಅಗತ್ಯ ಈಗ ತೀರಾ ಸ್ಪಷ್ಟ.
ಯಾವ ದೃಷ್ಟಿಯಿಂದ ನೋಡಿದರೂ, ಇಷ್ಟು ದೊಡ್ಡ ದೇಶದಲ್ಲಿ ಉಳಿತಾಯದ ಪ್ರವೃತ್ತಿ ಬಹಳ ದೊಡ್ಡ ಸಂಖ್ಯೆಯಲ್ಲಿರುವ ಸಾಮಾನ್ಯ ಜನರ ಆರ್ಥಿಕಭದ್ರತೆ ಒದಗಿಸಬಲ್ಲ ಜೀವನಶೈಲಿಗೆ ಆಧಾರವಾಗಬಹುದೇ ಹೊರತು ಕೆಲವೇ ಕೆಲವು ಜನರ ತೆಕ್ಕೆಯೊಳಗೆ ಸಿಲುಕಿ ನರ್ತಿಸಬಲ್ಲ ಕೊಳ್ಳುಬಾಕತನ ಸಂಕೀರ್ಣವಾದ, ಬೃಹತ್ ಸಾಮಾಜಿಕ ವ್ಯವಸ್ಥೆಗೆ ಹೊಂದುವ ಹೊದಿಕೆಯಾಗಲು ಸಾಧ್ಯವಿಲ್ಲ. ಈ ಹಿಂದೆ ಮಾಡಿದ ಪ್ರಮಾದಗಳನ್ನು ಕೇವಲ ರಾಜಕೀಯ ಕಾರಣಕ್ಕೆ ಸಮರ್ಥಿಸಿಕೊಳ್ಳುವ ಬದಲು ಪ್ರಜೆಗಳ ವೈಯಕ್ತಿಕ ಕ್ಷೇಮ ಮತ್ತು ರಾಷ್ಟ್ರದ ಆರ್ಥಿಕಭದ್ರತೆಯ ನಡುವೆ ಇರುವ ಅವಿನಾಭಾವ ಸಂಬಂಧವನ್ನು ರಕ್ಷಿಸಿಕೊಳ್ಳುವ ಪ್ರಯತ್ನ ನಮ್ಮ ಒಕ್ಕೂಟವ್ಯವಸ್ಥೆಯಲ್ಲಿ ಆಗಬೇಕು. ದೇಶಾದ್ಯಂತ ಆರ್ಥಿಕಭದ್ರತೆಗೆ ಬೇಕಾದ ಜೀವನಶೈಲಿಯನ್ನು ರೂಪಿಸಬಲ್ಲ ಆಡಳಿತವ್ಯವಸ್ಥೆಯನ್ನು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಪುರಸ್ಕರಿಸಬೇಕು. ಮುಂದಿನ ಹಂತದಲ್ಲಿ ಆರ್ಥಿಕಭದ್ರತೆ ಬೆಳೆದು, ಸಮಾಜಕ್ಕೆ ಬೇಕಾದ ಜೀವನಶೈಲಿಯನ್ನು ಹುರಿದುಂಬಿಸಿ ಅದು ಭಾರತದ ಒಕ್ಕೂಟ ವ್ಯವಸ್ಥೆಗೆ ಪೂರಕವಾಗಬೇಕಾದ ಅಗತ್ಯವಿದೆ. ಬೇಡವಾದ ವ್ಯಾಪಕ ಬಡತನ ಇಲ್ಲಿ ಅನಿವಾರ್ಯ ಎನ್ನುವ ಭಾವನೆ ಬೇಗನೆ ಮರೆಯಾಗಿ ತೀರ ಅಗತ್ಯವಾದ ಪಾಲ್ಗೊಳ್ಳುವಿಕೆಯ ಅಭಿವೃದ್ಧಿಯ ಗುರಿಯತ್ತ ದೇಶ ತನ್ನ ಪ್ರಯಾಣದ ವೇಗವನ್ನು ಹೆಚ್ಚಿಸಿಕೊಳ್ಳಬೇಕಾಗಿದೆ.