– ಶ್ರೀ ಶ್ರೀ 1008 ಶ್ರೀ ಸತ್ಯಾತ್ಮ ತೀರ್ಥ ಶ್ರೀಪಾದಂಗಳವರು, ಉತ್ತರಾದಿ ಮಠ
ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಕುಟುಂಬದ ವ್ಯವಸ್ಥೆ ಅದ್ಭುತವಾದದ್ದು. ಅವಿಭಕ್ತ ಕುಟುಂಬದ ಒಂದು ಪರಂಪರೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ನಡೆದುಬಂದಿದೆ.
ತಪ್ಪಿದಾಗ ತಿದ್ದಿ ಹೇಳಲು ಹಿರಿಯರಿರಬೇಕು
ವ್ಯಕ್ತಿಜೀವನದಲ್ಲಿ ಸರಿ-ತಪ್ಪುಗಳನ್ನು ಮಾಡುವುದು ಸಹಜ. ಸರಿ ಮಾಡಿದಾಗ ಬೆನ್ನುತಟ್ಟಿ ಪ್ರೋತ್ಸಾಹನೆಯನ್ನು ನೀಡುವ ಹಿರಿಯರು ಬೇಕು. ಅದರಂತೆಯೇ ತಪ್ಪು ಮಾಡಿದಾಗ ತಿದ್ದಿ ತೀಡಿ ಹೇಳುವ ಹಿರಿಯರ ಆವಶ್ಯಕತೆಯೂ ಇದೆ. ಅವಿಭಕ್ತ ಕುಟುಂಬದಲ್ಲಿ ಈ ಸೌಕರ್ಯವನ್ನು ನಾವು ಕಾಣಬಹುದು. ಮಕ್ಕಳು-ಸೊಸೆಯರು-ಅಣ್ಣತಮ್ಮಂದಿರು ಹೀಗೆ ಕುಟುಂಬದಲ್ಲಿ ಯಾರೇ ಚಿಕ್ಕವರು ತಪ್ಪು ಮಾಡಿದಾಗ ಹಿರಿಯರು ಬೋಧನೆಮಾಡಲು ಅವಕಾಶವಿತ್ತು. ನಾವು ಇತಿಹಾಸವನ್ನು ನೋಡುತ್ತ ಬಂದರೆ ಅದರ ಕಲ್ಪನೆ ಬರುತ್ತದೆ. ಹಿಂದಿನ ಕಾಲದಲ್ಲಿ ನ್ಯಾಯ-ನೀತಿ-ಧರ್ಮ-ಸಹನಶೀಲತೆ ಇವುಗಳನ್ನೆಲ್ಲ ಯಾವ ಉನ್ನತ ಮಟ್ಟದಲ್ಲಿ ನಾವು ಕಾಣುತ್ತಿದ್ದೆವೋ ಆ ತರಹದ ಉನ್ನತಮಟ್ಟದಲ್ಲಿ ಈವತ್ತು ಕಾಣುತ್ತಿಲ್ಲ. ಅದಕ್ಕೆ ಪ್ರಮುಖವಾದ ಕಾರಣ ಕುಟುಂಬದಲ್ಲಿ ಈ ತರಹದ ಹಿರಿಯರ ಮಾರ್ಗದರ್ಶನದ ಕೊರತೆ.
ಇಹ ಹಿ ರಚಯನ್ ಸಾಧ್ವೀಂ ಶಿಷ್ಯಃ ಕ್ರಿಯಾಂ ನ ನಿವಾರ್ಯತೇ |
ತ್ಯಜತಿ ತು ಯದಾ ಮಾರ್ಗಂ ಮೋಹಾತ್ ತದಾ ಗುರುರಂಕುಶಃ ||
ಎಂಬುದಾಗಿ ವಿಶಾಖದತ್ತ ಹೇಳಿದಂತೆ, ಮನುಷ್ಯ ತಪ್ಪು ಮಾಡಿದಾಗ ಎತ್ತಿತೋರಿಸುವ ವ್ಯಕ್ತಿ, ಅನುಭಾವಿಯಾದ ವ್ಯಕ್ತಿ, ಪ್ರಭಾವಿಯಾದ ವ್ಯಕ್ತಿ, ಬಂಧುತ್ವದಲ್ಲಿ ಇವನನ್ನು ಪ್ರೇಮದಿಂದ ಬಂಧನ ಮಾಡಿ ಮಾರ್ಗದರ್ಶನ ಮಾಡುವ ಹಿರಿಯ ವ್ಯಕ್ತಿಯ ಆವಶ್ಯಕತೆ ಬಹಳಷ್ಟಿದೆ.
ಮಹಾಭಾರತದ ಮಾರ್ಗದರ್ಶನ
ಮಹಾಭಾರತದ ಆದಿಪರ್ವದಲ್ಲಿ ಒಂದು ಕಥೆಯನ್ನು ಕೇಳುತ್ತೇವೆ. ವಿಭಾವಸು, ಸುಪ್ರತೀಕ – ಎಂಬ ಇಬ್ಬರು ಋಷಿಗಳು. ಅಣ್ಣ-ತಮ್ಮಂದಿರು. ತಪಸ್ವಿಗಳು. ಅಣ್ಣ ವಿಭಾವಸು ತಪಸ್ವಿಯಾದರೂ ಸ್ವಲ್ಪ ಕೋಪ ಜಾಸ್ತಿ. “ಅಣ್ಣ-ತಮ್ಮಂದಿರು ಸಹಬಾಳ್ವೆಯನ್ನು ನಡೆಸಬೇಕು. ಇಬ್ಬರೂ ಒಟ್ಟಾಗಿ ಇದ್ದು, ಹಣಕಾಸು ಎಲ್ಲವನ್ನೂ ಇಬ್ಬರೂ ಉಪಯೋಗಿಸುವ ರೀತಿಯಲ್ಲಿ ಜೀವನ ನಡೆಸಬೇಕು” ಎಂಬ ಮನಃಸ್ಥಿತಿಯನ್ನು ಹೊಂದಿದವ ಅಣ್ಣ ವಿಭಾವಸು. “ಆಸ್ತಿಯನ್ನು ವಿಭಾಗ ಮಾಡಿ ನನ್ನ ಪಾಲಿನದ್ದನ್ನು ನನಗೆ ಕೊಟ್ಟು ನನ್ನನ್ನು ಕಳಿಸಬೇಕು” ಎಂಬ ಆಲೋಚನೆಯಲ್ಲಿದ್ದವ ತಮ್ಮ ಸುಪ್ರತೀಕ. ಹಾಗಾಗಿ ತನ್ನ ಪಾಲು ಕೊಡುವಂತೆ ಸುಪ್ರತೀಕ ಬಹಳ ಹಠ ಮಾಡುತ್ತಾನೆ. ವಿಭಾವಸು ಅದಕ್ಕೆ ಒಪ್ಪುವುದಿಲ್ಲ. ಜಗಳ ಮುಂದುವರಿದು, ಕೋಪಗೊಂಡ ವಿಭಾವಸು “ನೀನು ಹಠ ಮಾಡುತ್ತಿದ್ದೀ. ಉನ್ಮತ್ತನಾಗಿದ್ದೀ. ಉನ್ಮತ್ತನಾದ ನಿನಗೆ ಉನ್ಮತ್ತವಾದ ಪ್ರಾಣಿ ಆನೆಯ ಜನ್ಮವು ಬರಲಿ” ಎಂಬುದಾಗಿ ಶಾಪ ನೀಡುತ್ತಾನೆ ಸುಪ್ರತೀಕನಿಗೆ. ತಮ್ಮ ಸುಪ್ರತೀಕ ಅವನೂ ತಪಸ್ವಿಯೇ ಆದ್ದರಿಂದ, “ನೀನು ಆಮೆಯಾಗು” ಎಂಬುದಾಗಿ ಅವನೂ ವಿಭಾವಸುವಿಗೆ ಶಾಪ ನೀಡುತ್ತಾನೆ. ಅವರಿಬ್ಬರೂ ಆನೆ-ಆಮೆಗಳಾಗಿ ಹುಟ್ಟಿದಾಗ, ಕಶ್ಯಪರ ಸೂಚನೆಯಂತೆ ಗರುಡ ಅವರಿಬ್ಬರನ್ನೂ ಸಂಹಾರ ಮಾಡಿ, ಅವರಿಬ್ಬರನ್ನೂ ಆ ಯೋನಿಗಳಿಂದ ಮೋಚನೆ ಮಾಡುತ್ತಾನೆ. ಇದು ಭಾರತದಲ್ಲಿ ಬರುವ ಕಥೆ.
ವಿಭಾವಸುವಿನ ವಿವೇಕನುಡಿಗಳು
ಈ ಪ್ರಸಂಗದಲ್ಲಿ ನಮಗೆ ಬೇಕಾದ ಅಂಶವೆಂದರೆ – ವಿಭಾವಸು ತನ್ನ ತಮ್ಮ ಸುಪ್ರತೀಕನಿಗೆ ಮಾಡಿದ ಸುಂದರ ಉಪದೇಶ.
ಅಥಾಬ್ರವೀತ್ ಸ ತಂ ಭ್ರಾತಾ ಸುಪ್ರತೀಕಂ ವಿಭಾವಸುಃ |
ವಿಭಾಗೇ ಬಹವೋ ದೋಷಾಃ ಭವಿಷ್ಯಂತಿ ಮಹಾತಪಃ ||
ವಿಭಾಗಂ ಬಹವೋ ಮೋಹಾತ್ ಕರ್ತುಮಿಚ್ಛಂತಿ ನಿತ್ಯಶಃ |
ತತೋ ವಿಭಕ್ತಾಶ್ಚಾನ್ಯೋನ್ಯಂ ನ ಪ್ರೀಯಂತೇsರ್ಥಮೋಹಿತಾಃ ||
ತತಃ ಸ್ವಾರ್ಥಪರಾನ್ ಲೋಕಾನ್(ಮೂಢಾನ್) ಪೃಥಗ್ಭೂತಾನ್ ಸ್ವಕೈರ್ಜನೈಃ |
ವಿದಿತ್ವಾ ಭೇದಯಂತ್ಯೇನಾನಮಿಲಾಮಿಲರೂಪಿಣಃ ||
ವಿದೀರ್ಣಾಶ್ಚಾಪರೇ ಭಿನ್ನಾನಂತರೇಷು ಪತಂತ್ಯಥ |
ಭಿನ್ನಾನಾಮಭಿತೋ ನಾಶಃ ಕ್ಷಿಪ್ರಮೇವ ಪ್ರವರ್ತತೇ ||
ತಸ್ಮಾಚ್ಚೈವ ವಿಭಾಗಂ ನ ಪ್ರಶಂಸಂತಿ ಪಂಡಿತಾಃ ||
“ಹೇ ಸುಪ್ರತೀಕ! ಅವಿಭಕ್ತಕುಟುಂಬದಲ್ಲಿ ಇರುವ ಲಾಭಗಳು ಬಹಳ ಇವೆ. ವಿಭಕ್ತಕುಟುಂಬದಲ್ಲಿ ಆಗುವ ಹಾನಿಗಳೂ ಬಹಳ ಇವೆ. ಅಣ್ಣ-ತಮ್ಮಂದಿರು ದೂರ ಇರುವಾಗ ಅಣ್ಣನ ಎದುರು ಬಂದು ತಮ್ಮನ ಬಗ್ಗೆ ಚಾಡಿ ಹೇಳುವ ಜನರು ಇರುತ್ತಾರೆ. ತಮ್ಮನ ಎದುರು ಅಣ್ಣನ ಬಗ್ಗೆ ಚಾಡಿ ಹೇಳುತ್ತಾರೆ. ಅಣ್ಣ-ತಮ್ಮಂದಿರು ಪ್ರತ್ಯೇಕ ಇದ್ದರೂ ಪರಸ್ಪರ ಪ್ರೀತಿಯಿಂದ ಇರುತ್ತಾರೆ. ಅದನ್ನು ಸಹಿಸದೆ ಅಣ್ಣ-ತಮ್ಮಂದಿರಲ್ಲಿ ಜಗಳ ಹಚ್ಚಿ ದ್ವೇಷ ಉಂಟಾಗುವ ಹಾಗೆ ಮಾಡಿ, ಅಣ್ಣ-ತಮ್ಮಂದಿರು ಜಗಳ ಆಡುವುದನ್ನು ನೋಡಿ ಸಂತೋಷಪಡುವ ಜನರೂ ಅನೇಕರು ಸಮಾಜದಲ್ಲಿ ಇರುತ್ತಾರೆ. ನಾವು ಆಸ್ತಿನಿಮಿತ್ತ ಜಗಳವಾಡಿದರೆ ಅಂತಹವರಿಗೆ ಎಡೆ ಮಾಡಿ ಕೊಟ್ಟಂತಾಗುತ್ತದೆ. ಹಾಗಾಗುವುದು ಬೇಡ. ನಾವಿಬ್ಬರೂ ಒಟ್ಟಾಗಿ ಇರೋಣ. ಸುಖ-ದುಃಖಗಳನ್ನು ಇಬ್ಬರೂ ಹಂಚಿಕೊಂಡು ಬಾಳೋಣ. ನಮ್ಮಿಬ್ಬರ ಮಧ್ಯೆ ಬೇರೆಯವರು ಪ್ರವೇಶ ಮಾಡುವುದು ಬೇಡ. ನಾವು ಒಟ್ಟಾಗಿ ಇದ್ದರೆ ನಮ್ಮಲ್ಲಿ ಒಂದು ದೊಡ್ಡ ಶಕ್ತಿ ಇರುತ್ತದೆ” ಇತ್ಯಾದಿಯಾಗಿ ಅಣ್ಣ ವಿಭಾವಸು ತಮ್ಮ ಸುಪ್ರತೀಕನಿಗೆ ಉಪದೇಶ ಮಾಡುವ ರೋಚಕಪ್ರಸಂಗವನ್ನು ಮಹಾಭಾರತದಲ್ಲಿ ಕಾಣುತ್ತೇವೆ.
ಈ ರೀತಿಯ ಅವಿಭಕ್ತ ಕುಟುಂಬದ ಕಲ್ಪನೆ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಬಂದದ್ದು.
ಕುಲಧರ್ಮ – ಕುಲಾಚಾರಗಳನ್ನು ಕೇಳಲು ಹಿರಿಯರು ಬೇಕಲ್ಲವೇ?
ಈ ದೃಷ್ಟಿಯಲ್ಲಿ ನಾವು ಆಲೋಚನೆ ಮಾಡಿದರೆ, ‘ಅವಿಭಕ್ತ ಕುಟುಂಬ’ದಲ್ಲಿ ಇನ್ನೂ ಅನೇಕ ಲಾಭಗಳಿವೆ. ಪರಂಪರೆ, ಕುಲಧರ್ಮಗಳು, ಕುಲಾಚಾರಗಳು, ಬಂಧು-ಬಾಂಧವರಲ್ಲಿ ಇರುವಂತಹ ಸಂಬಂಧಗಳು, ತಮ್ಮ ಮನೆತನಕ್ಕೆ ಯಾರು ಯಾರು ಉಪಕಾರ ಮಾಡಿದ್ದಾರೆ, ಯಾವ ಯಾವ ಮನೆತನಗಳ ಸಂಬಂಧ ತಮ್ಮ ಮನೆತನಕ್ಕೆ ಇದೆ, ತಮ್ಮ ಮನೆತನದಲ್ಲಿ ಏನೆಲ್ಲ ಕುಲಧರ್ಮಗಳು ನಡೆಯುತ್ತಾ ಬಂದಿವೆ ಇತ್ಯಾದಿ ಮಹತ್ತ್ವದ ವಿಚಾರಗಳನ್ನೆಲ್ಲ ಕಾಲಕಾಲಕ್ಕೆ ತಿಳಿಸಿಕೊಡಲು ಹಿರಿಯರು ಜೊತೆಯಲ್ಲಿ ಇರಬೇಕು.
ಮನುಷ್ಯನು ಕಾಮಪರವಶನಾಗಿ, ಕ್ರೋಧಪರವಶನಾಗಿ, ಹಣ ಮೊದಲಾದವುಗಳ ಲೋಭದಿಂದ ಅನೇಕ ಸಂದರ್ಭಗಳಲ್ಲಿ ತಪ್ಪು ಹೆಜ್ಜೆ ಇಡುತ್ತಾನೆ. ಸಾಮಾನ್ಯವಾಗಿ ಈ ರೀತಿ ಆಶೆ-ಆಕಾಂಕ್ಷೆಗಳಿಗೆ ತುತ್ತಾಗಿ ತಾವು ತಪ್ಪು ಹೆಜ್ಜೆ ಇಟ್ಟಂತಹ ಸಂದರ್ಭಗಳಲ್ಲಿ ತಾವು ಅನುಭವಿಸಿದ ಸಿಹಿ-ಕಹಿ ಅನುಭವಗಳನ್ನು ಹಿರಿಯರು ಕಿರಿಯರ ಮುಂದೆ ವಿವರಿಸುತ್ತಾರೆ. ಅದು ಕಿರಿಯರಿಗೆ ಬಹಳ ದೊಡ್ಡದಾದ ಮಾರ್ಗದರ್ಶನ. ಜೊತೆಗೆ ಶಾಸ್ತ್ರಗಳ ಅಧ್ಯಯನ, ಅನೇಕ ಸಜ್ಜನರೊಂದಿಗೆ ಒಡನಾಟ ಇವುಗಳಿಂದಾಗಿ ತಾವು ತಿಳಿದ ತತ್ತ್ವಗಳನ್ನೂ ಹಿರಿಯರು ತಮ್ಮ ಕಿರಿಯರಿಗೆ ಹೇಳುವ ಸಾಧ್ಯತೆ ಇದೆ. ಕೇವಲ ಸಾಂಸಾರಿಕವಾದ ವಿಚಾರಗಳಲ್ಲಿ ಮಾತ್ರ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದಲ್ಲ. ಕಿಂತು ಧರ್ಮ, ಕರ್ಮ, ತತ್ತ್ವಜ್ಞಾನ, ದೇವರಲ್ಲಿ ಭಕ್ತಿ, ಗುರುಗಳಲ್ಲಿ ಭಕ್ತಿ, ಅವುಗಳಿಂದ ತಮ್ಮ ಹಿರಿಯರಿಗಾದಂತಹ ಲಾಭಗಳು, ದೇವ-ಗುರು-ಧರ್ಮಗಳ ಅನುಸರಣೆ ಮಾಡದಿದ್ದಾಗ ಆದಂತಹ ಹಾನಿಗಳು, ಇವೇ ಮುಂತಾದ ಮಹತ್ತ್ವದ ವಿಷಯಗಳನ್ನು ತಮ್ಮ ಕಿರಿಯರಿಗೆ ಹೇಳಲು ಹಿರಿಯರು ಸಮರ್ಥರು. ಅದಕ್ಕಾಗಿ ಹಿರಿಯರೊಂದಿಗೆ ಇರುವುದು ಬಹಳ ಲಾಭದಾಯಕವಾದ ಸಂಗತಿ.
ಹಿರಿಯರ ಹೃತ್ಪೂರ್ವಕ ಆಶೀರ್ವಾದ ಸಿಗುತ್ತದೆ
ಜೊತೆಗೆ, ನಮ್ಮ ಭಾರತೀಯ ಸಂಸ್ಕøತಿಯಲ್ಲಿ ಹಿರಿಯರ ಆಶೀರ್ವಾದಕ್ಕೆ ಬಹಳ ಮಹತ್ತ್ವವಿದೆ. ತಂದೆ-ತಾಯಿಗಳು, ಚಿಕ್ಕಪ್ಪ-ದೊಡ್ಡಪ್ಪಂದಿರು, ಅಣ್ಣ-ಅತ್ತಿಗೆ, ಅಕ್ಕ-ಭಾವ ಹೀಗೆ ಬಂಧುತ್ವದಲ್ಲಿ ಹಿರಿಯರಾದವರು ಅಥವಾ ವಿದ್ಯೆಯಲ್ಲಿ ಆಚಾರದಲ್ಲಿ ತಪಸ್ಸಿನಲ್ಲಿ ಹಿರಿಯರಾದವರು ‘ಮಂಗಳವಾಗಲಿ’ ಎಂಬುದಾಗಿ ಆಶೀರ್ವಾದ ಮಾಡಿದರೆ, ‘ವಾಚಂ ಅರ್ಥೋsನುಧಾವತಿ’ – ದೇವರು ಅವರ ಮಾತನ್ನು (ಆಶೀರ್ವಾದವನ್ನು) ಸತ್ಯಗೊಳಿಸುತ್ತಾನೆ. ತನ್ನ ಮಗ ಮಾರ್ಕಂಡೇಯ ಅಲ್ಪಾಯುಷಿ ಎಂದು ತಿಳಿದ ತಂದೆ ಮೃಕಂಡುಗಳು ಎದುರಿಗೆ ಸಿಗುವ ಎಲ್ಲ ಋಷಿ-ಮುನಿಗಳಿಗೆ ಹಿರಿಯರಿಗೆ ನಮಸ್ಕಾರ ಮಾಡಿಸುತ್ತಾರೆ. ಅವರೆಲ್ಲ ಹಿರಿಯರು ‘ದೀರ್ಘಾಯುಷ್ಮಾನ್ ಭವ’ ಎಂಬುದಾಗಿ ಮನದುಂಬಿ ಆಶೀರ್ವಾದ ಮಾಡುತ್ತಾರೆ. ಅವರ ಆ ಆಶೀರ್ವಾದಗಳ ಬಲದಿಂದ ಅಲ್ಪಾಯುಷಿಯಾಗಿದ್ದ ಮಾರ್ಕಂಡೇಯರು ದೀರ್ಘಾಯುಷಿಗಳಾದದ್ದು ಇತಿಹಾಸದಲ್ಲಿ ಪ್ರಸಿದ್ಧ. ಹಿರಿಯರ ಆಶೀರ್ವಾದದಲ್ಲಿ ಅಂತಹ ಒಂದು ಸಾಮರ್ಥ್ಯವನ್ನು ದೇವರು ಇಟ್ಟಿದ್ದಾನೆ.
ಅವಿಭಕ್ತಕುಟುಂಬ ಪದ್ಧತಿಯಲ್ಲಿ ಇದರ ಅದ್ಭುತವಾದ ಲಾಭ ಕಿರಿಯರಿಗೆ ಪಡೆಯಲು ಸಾಧ್ಯವಿದೆ. ತಂದೆ-ತಾಯಿ, ಅಣ್ಣ-ಅತ್ತಿಗೆ ಎಲ್ಲ ಹಿರಿಯರೊಂದಿಗೆ ಬಾಳುವ ಸಂದರ್ಭದಲ್ಲಿ ಪ್ರತಿನಿತ್ಯ ಎರಡು ಹೊತ್ತು ಹಿರಿಯರಿಗೆ ನಮಸ್ಕಾರ ಮಾಡಿ, ಅವರಿಂದ ಆಶೀರ್ವಾದ ಪಡೆದು ಜೀವನವನ್ನು ಮಂಗಲಮಯವನ್ನಾಗಿಸಿಕೊಳ್ಳಬಹುದಾದ ದೊಡ್ಡ ಸದವಕಾಶ ಅವಿಭಕ್ತಕುಟುಂಬದ ಪದ್ಧತಿಯಲ್ಲಿ ಇರುತ್ತದೆ.
ಬೈದು ಹೇಳಿದರೆ ಬಾಗಿ ನಡೆದಾಳು!
ಜೊತೆಗೆ, ಇಂದಿನ ಯುವಕ-ಯುವತಿಯರಿಗೆ ಒಂದು ಮಾತನ್ನೂ ಹೆಚ್ಚಾಗಿ ಹೇಳುವಂತಿಲ್ಲ. ತಿಳಿಹೇಳಿದರೆ ಕೋಪ ಬಂದುಬಿಡುತ್ತದೆ. ಸರಿಯಾದ ವಿವೇಕ ಇರುವುದಿಲ್ಲ. ಹಿರಿಯರು ಹೇಳಿದರೆ ಕೇಳಲು ಸಹನೆ ಇಲ್ಲ. ಹೀಗಾದರೆ ಜೀವನದಲ್ಲಿ ಸುಧಾರಣೆ ಹೇಗೆ ಸಾಧ್ಯ? ಕಾರಣ ಎಂದಿಗೂ ಹೇಳಿಸಿಕೊಂಡು, ಬೈಸಿಕೊಂಡು ಗೊತ್ತಿಲ್ಲ. ಅದೇ ಹಿರಿಯರ ಜೊತೆಯಲ್ಲೇ ಇದ್ದರೆ ಹತ್ತಾರು ಬಾರಿ ಹೇಳಿ, ಬೈದು, ತಿದ್ದಿ ಹೇಳುತ್ತಾರೆ. ‘ದೊಡ್ಡವರು ಹೇಳಿದಾಗ ಸಹನೆಯಿಂದ ಕೇಳಬೇಕು’ ಎಂಬ ವಾತಾವರಣ ಹಿಂದೆ ಇರುತ್ತಿತ್ತು. ಹೀಗಾಗಿ ಹೆಣ್ಣುಮಕ್ಕಳು ಮದುವೆ ಮಾಡಿಕೊಂಡು ಅತ್ತೆಮನೆಗೆ ಹೋದರೆ ಸುಖವಾಗಿ ಬಾಳುತ್ತಿದ್ದರು. ಕಾರಣ – ತಮ್ಮ ಮನೆಯಲ್ಲಿಯೇ ಸಾಕಷ್ಟು ತಿದ್ದಿಸಿಕೊಂಡು, ಬೈಸಿಕೊಂಡು ಒಂದು ರೀತಿಯ ಜೀವನದ ಕಲ್ಪನೆಯನ್ನು ಮನಸ್ಸಿನಲ್ಲಿ ಮೂಡಿಸಿಕೊಂಡು ಇರುತ್ತಿದ್ದರು. ಹಾಗಾಗಿ ಬೇರೆಯವರ ಮನೆಯಲ್ಲಿ ಹೊಂದಿಕೊಂಡು ಇರುವಂತಹ ಶಕ್ತಿ – ಆಸಕ್ತಿ ಸ್ತ್ರೀಯರಲ್ಲಿ ಇರುತ್ತಿತ್ತು. ಹಿರಿಯರ ಆಶ್ರಯವೇ ಇಲ್ಲವಾದರೆ, ಅತ್ತೆಮನೆಯಲ್ಲಿ ಹೊಂದಿಕೊಂಡು ಹೋಗುವುದು ಕಷ್ಟವಾಗಿ ಬದುಕು ಬೇಡವಾಗಬಹುದು.
ಅನಾಥಪ್ರಜ್ಞೆ-ಅನೈತಿಕಸಂಬಂಧಗಳಿಗೆ ಅವಕಾಶ
ಇನ್ನೂ ಅನೇಕ ಸಂದರ್ಭಗಳನ್ನು ನೋಡುತ್ತೇವೆ. ಗಂಡ ಚಿಕ್ಕ ವಯಸ್ಸಿನಲ್ಲಿ ಹೆಂಡತಿಯನ್ನು ಕಳೆದುಕೊಳ್ಳಬಹುದು, ಹೆಂಡತಿ ಗಂಡನನ್ನು ಕಳೆದುಕೊಳ್ಳಬಹುದು. ವಿಭಕ್ತಕುಟುಂಬವಾಗಿದ್ದರೆ, ಒಬ್ಬ ಸಂಗಾತಿ ಮತ್ತೊಬ್ಬ ಸಂಗಾತಿಯನ್ನು ಕಳೆದುಕೊಂಡಾಗ, (ಧರ್ಮದಿಂದ ಜೀವನ ನಡೆಸಬೇಕೆಂದು ಅಪೇಕ್ಷೆ ಇದ್ದರೂ) ನನ್ನನ್ನು ರಕ್ಷಿಸುವವರು ಯಾರೂ ಇಲ್ಲವೆಂಬ ಅನಾಥಪ್ರಜ್ಞೆ ಉಂಟಾಗಿ ಜೀವನ ಏರುಪೇರಾಗಬಹುದು. ಅಥವಾ ಶಿಕ್ಷಕರಾರೂ ಇಲ್ಲದ ಕಾರಣ ಧರ್ಮದ ಚೌಕಟ್ಟಿನಿಂದ ಹೊರಬಂದು ಅನೈತಿಕ ಸಂಬಂಧ ಮೊದಲಾದ ಅಪರಾಧಗಳನ್ನು ಮಾಡುವ ಅವಕಾಶವೂ ಇರುತ್ತದೆ.
ಅದೇ ಅವಿಭಕ್ತಕುಟುಂಬದ ವ್ಯವಸ್ಥೆಯಿದ್ದಾಗ ಯಾವುದೇ ರೀತಿಯ ಅನಾಥಪ್ರಜ್ಞೆ ಬರುವುದಿಲ್ಲ. ತನ್ನ ಜೊತೆಗೆ ಬೇರೆ ಬೇರೆ ಹಿರಿಯರಿದ್ದಾರೆ, ದುಃಖ ಹಂಚಿಕೊಳ್ಳಲು ನಾಲ್ಕಾರು ಹೃದಯಗಳಿವೆ, ಸಮಸ್ಯೆಗಳನ್ನು ಪರಿಹಾರ ಮಾಡಿ ದಾರಿ ತೋರುವವರಿದ್ದಾರೆ ಎಂಬ ಧೈರ್ಯದಿಂದ ಧರ್ಮದಿಂದ ಜೀವನ ನಡೆಸಲು ಸಾಧ್ಯವಾಗುತ್ತಿತ್ತು.
ಜೊತೆಗೆ, ತನ್ನ ಸ್ವೇಚ್ಛಾಚಾರಕ್ಕಾಗಿ ಯಾವ ವ್ಯಕ್ತಿ ತನ್ನ ಒಡಹುಟ್ಟಿದ ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು, ಚಿಕ್ಕಪ್ಪ-ದೊಡ್ಡಪ್ಪಂದಿರು ಇವನ ಜೊತೆ ಇದ್ದೇ ಸಂಸಾರ ನಡೆಸಲಾರ ಎಂದರೆ, ತನ್ನ ಆತ್ಮೀಯರ ಜೊತೆಗೆ ಇರುವ ಹೃದಯವೈಶಾಲ್ಯ ಹೊಂದಿಲ್ಲ ಎಂದರೆ, ಇನ್ನು ಸಮಾಜವನ್ನು ಅವನು ಹೇಗೆ ಕಟ್ಟಲು ಸಾಧ್ಯ? ‘ವಸುಧೈವ ಕುಟುಂಬಕಂ’ ಎಂಬ ಧೋರಣೆಯೊಂದಿಗೆ ತನ್ನ ದೇಶವನ್ನೇ ತನ್ನ ಕುಟುಂಬ ಎಂದು ನೋಡುವ ವಿಶಾಲದೃಷ್ಟಿ ಅವನಿಗೆ ಸಾಧ್ಯವಾದೀತೆ? ಈ ದೃಷ್ಟಿಯಲ್ಲಿಯೆ ಅವಿಭಕ್ತಕುಟುಂಬದ ಕಲ್ಪನೆ ಪ್ರಾಚೀನ ಕಾಲದಲ್ಲಿ ಇದ್ದದ್ದು.
ಇಂದು ನಾವೇನು ಮಾಡೋಣ?
ಆದರೆ, ಈವತ್ತಿನ ವಾತಾವರಣದಲ್ಲಿ ದೇಶ-ಕಾಲಗಳೆಲ್ಲ ಬದಲಾಗಿದೆ. ಮನುಷ್ಯ ಎಲ್ಲ ರೀತಿಯಿಂದ ಮುಂದೆ ಬರುತ್ತಿದ್ದಾನೆ. ಇಂತಹ ಸ್ಥಿತಿಯಲ್ಲಿ ಪ್ರಾಚೀನಕಾಲದ ಆ ಅವಿಭಕ್ತಕುಟುಂಬದ ಕಲ್ಪನೆಯನ್ನು ಮನಸ್ಸಿನಲ್ಲಿ ಮಾಡಿಕೊಂಡು, ಗಂಡು-ಹೆಣ್ಣು ಎಲ್ಲರೂ ಧೈರ್ಯದಿಂದ, ವಿಶ್ವಾಸದಿಂದ ಆ ರೀತಿಯ ಸ್ವಭಾವವನ್ನು ಮೈಗೂಡಿಸಿಕೊಂಡು ಮುನ್ನಡೆಯುವುದು ಸ್ವಲ್ಪ ಕಷ್ಟ ಎಂದು ಅನಿಸಿದರೂ ಸಹ, ಒಂದು ಮಧ್ಯಮಾರ್ಗವನ್ನು ಹುಡುಕುವುದು ಯೋಗ್ಯ ಅನಿಸುತ್ತದೆ.
ಒಮ್ಮೆಯಾದರೂ ಒಟ್ಟಿಗೆ ಸೇರಬೇಕು
ವಿಭಕ್ತಕುಟುಂಬಗಳಾಗಿ ಇಂದು ಎಲ್ಲರೂ ಪ್ರತ್ಯೇಕವಾಗಿ ಇದ್ದರೂ ಸಹ ಒಂದೊಂದು ವಿಶೇಷ ಪ್ರಸಂಗದಲ್ಲಿಯಾದರೂ ಕುಟುಂಬದ ಎಲ್ಲ ಸದಸ್ಯರೂ ಒಟ್ಟಿಗೆ ಸೇರುವಂತಹ ಒಂದು ಕಾರ್ಯ ನಡೆಯಬೇಕು. ಕೆಲವು ಕಾಲದ ಹಿಂದೆ ಮದುವೆ – ಉಪನಯನ – ಶ್ರಾದ್ಧ ಮೊದಲಾದ ಸಂದರ್ಭಗಳಲ್ಲಿಯಾದರೂ ಎಲ್ಲರೂ ಒಟ್ಟಿಗೆ ಸೇರುತ್ತಿದ್ದರು. ಆದರೆ ಇಂದು ಅಂತಹ ಸಂದರ್ಭಗಳಲ್ಲಿಯೂ ಸಹ ಬೆರಳೆಣಿಕೆಯಷ್ಟು ಜನ ಮಾತ್ರ ಸೇರುವಂತಾಗಿದೆ. ಬಂಧು-ಬಾಂಧವರಿಗಿಂತಲೂ ಬೇರೆ ಇಷ್ಟಮಿತ್ರರೇ ಹೆಚ್ಚು ಸೇರುವಂತಾಗಿದೆ. ಹಾಗಾಗದೆ ಒಂದು ಮನೆತನದ ಎಲ್ಲ ಬಂಧುಗಳೂ ಒಂದು ವರ್ಷದಲ್ಲಿ ಕನಿಷ್ಠಪಕ್ಷ ಒಂದು ಬಾರಿ -ಎರಡು ಬಾರಿಯಾದರೂ ಒತ್ತಟ್ಟಿಗೆ ಸೇರಿ ಧರ್ಮ-ಕರ್ಮಗಳ, ತಮ್ಮ ಸುಖ-ದುಃಖಗಳ, ಇನ್ನಿತರ ಸಂಪ್ರದಾಯಗಳ, ಕುಲಾಚಾರಗಳ ಬಗ್ಗೆ ಮಾತಾಡಿ, ಕಿರಿಯರಿಗೆ ಹಿರಿಯರು ತಿಳಿಹೇಳಬೇಕು. ಹಿರಿಯರು ಕಿರಿಯರ ಸಮಸ್ಯೆಗಳನ್ನು ಬಗೆಹರಿಸುವುದು, ಕಿರಿಯರು ಹಿರಿಯರ ಸಮಸ್ಯೆಗಳಿಗೆ ಸ್ಪಂದಿಸುವುದು ಹೀಗೆ ಒಂದು ರೀತಿಯಲ್ಲಿ ಅವಿಭಕ್ತಕುಟುಂಬದ ಲಾಭ ಆಗುವಂತೆ ಪ್ರಯತ್ನ ಮಾಡುವುದಕ್ಕೆ ಇಂದು ಸಾಧ್ಯವಿದೆ.
ಮಠ-ಮಾನ್ಯರ ಮಾರ್ಗದರ್ಶನ
ಈ ದೃಷ್ಟಿಯಲ್ಲಿ ಮಠ-ಮಂದಿರಗಳು, ವಿದ್ವಾಂಸರು-ಉಪನ್ಯಾಸಕರು-ಮಾರ್ಗದರ್ಶಕರು-ಯತಿಗಳು ಜನಸಾಮಾನ್ಯರಿಗೆ ಈ ಬಗ್ಗೆ ತಿಳಿಸಿ ಹೇಳಬೇಕು. ಇದರ ಮಹತ್ತ್ವವನ್ನು ತೋರಿಸಿಕೊಡಬೇಕು. ಅವಿಭಕ್ತಕುಟುಂಬವಲ್ಲದಿದ್ದರೂ ಕೆಲವು ಸಮಾರಂಭಗಳಲ್ಲಿ ಎಲ್ಲರೂ ಸೇರಿ, ಎಲ್ಲರೊಡನೆ ಸಮಾಲೋಚನೆ ಮಾಡುವಂತೆ ಮಾರ್ಗದರ್ಶನ ಮಾಡಬೇಕು. ಮಠ-ಮಂದಿರಗಳು, ಸಂಘ-ಸಂಸ್ಥೆಗಳು ಆ ಆ ಮನೆತನಗಳ ಕಾರ್ಯಕ್ರಮಗಳನ್ನು ತಮ್ಮಲ್ಲಿ ಮಾಡಲು ಎಲ್ಲ ರೀತಿಯ ಅನುಕೂಲತೆಗಳನ್ನು ಮಾಡಿಕೊಡಬೇಕು. ಹಾಗೂ ಅಣ್ಣತಮ್ಮಂದಿರಲ್ಲಿ ಸಣ್ಣಪುಟ್ಟ ಮನಸ್ತಾಪಗಳು – ಸಮಸ್ಯೆಗಳು ಇದ್ದಲ್ಲಿ ಮಠ-ಮಂದಿರಗಳಿಂದ, ಯತಿಗಳು-ವಿದ್ವಾಂಸರಿಂದ, ಹಿರಿಯರಿಂದ ಅವುಗಳನ್ನು ಪರಿಹರಿಸುವ ಸದುಪದೇಶಗಳು ಸಿಗುವಂತಾಗಬೇಕು. ಆ ಹಿರಿಯರ ಮಾತುಗಳಿಂದ, ಸದುಪದೇಶಗಳಿಂದ ಅಣ್ಣತಮ್ಮಂದಿರು ಸುಧಾರಣೆ ಮಾಡಿಕೊಂಡರೆ, ನ್ಯಾಯಾಲಯಗಳ ಮೆಟ್ಟಿಲುಗಳನ್ನೇರುವುದು ತಪ್ಪಬಹುದು.
ಇದಲ್ಲದೆ ಮಾತುಗಳು ಸಮಾಲೋಚನೆಗಳದು ಕುಟುಂಬಗಳನ್ನು ಒಗ್ಗೂಡಿಸಲು ಮಾನುಷ ಪ್ರಯತ್ನವಾದರೂ, ಅದರ ಜೊತೆಗೆ ದೈವೀಶಕ್ತಿಯನ್ನೂ ಪಡೆದುಕೊಳ್ಳಲು ಎಲ್ಲರೂ ಸೇರಿ ಸಾಂಘಿಕವಾಗಿ ಸಾಮೂಹಿಕವಾಗಿ ಪಾರಾಯಣ – ಹೋಮ ಮುಂತಾದ ಧಾರ್ಮಿಕ ಕಾರ್ಯಗಳನ್ನು ನಡೆಸುವಂತೆ ಪ್ರೋತ್ಸಾಹನ – ಮಾರ್ಗದರ್ಶನಗಳು ಮಠ-ಮಾನ್ಯರಿಂದ ಆಗಬೇಕು.
ಅವಿಭಕ್ತರನ್ನು ಆದರಿಸಬೇಕು
ಜೊತೆಗೆ, ಅನೇಕ ಕುಟುಂಬಗಳು ಪ್ರಾಚೀನ ಪದ್ಧತಿಗೆ ಮನ್ನಣೆ ನೀಡಿ, ಕುಟುಂಬಸ್ಥರಿಗೆ ಉತ್ತಮ ಸಂಸ್ಕಾರಗಳನ್ನು ನೀಡುವ ಸದಭಿಪ್ರಾಯದಿಂದ ಇಂದಿಗೂ ಅವಿಭಕ್ತವಾಗಿ ಉಳಿದಿವೆ. ಸಮಸ್ಯೆಗಳೇನೇ ಬಂದರೂ ಒಗ್ಗಟ್ಟಿನಿಂದ ನಿವಾರಿಸಿಕೊಂಡು, ಸಮಾಜಕ್ಕೆ ಆದರ್ಶವಾಗಿ ಮುನ್ನಡೆಯುತ್ತಿರುವ ಬೆರಳೆಣಿಕೆಯಷ್ಟು ಅವಿಭಕ್ತಕುಟುಂಬಗಳನ್ನು ಇಂದಿಗೂ ಕಾಣುತ್ತೇವೆ. ಅಂತಹ ಅವಿಭಕ್ತಕುಟುಂಬದ ಆದರ್ಶವ್ಯಕ್ತಿಗಳನ್ನು ಸಭೆ-ಸಮಾರಂಭಗಳಲ್ಲಿ ಆಹ್ವಾನಿಸಿ ಸತ್ಕರಿಸಿದರೆ ವಿಭಕ್ತರಿಗೊಂದು ಪ್ರೇರಣೆ ಸಿಗಬಹುದು. ಅಂತಹ ಅವಿಭಕ್ತರ ಸತ್ಕಾರಗಳೂ ಅಲ್ಲಲ್ಲಿ ನಡೆಯಬೇಕು.
ಇದರಿಂದ ನಮ್ಮ ಸಮಾಜದಲ್ಲಿ ಒಂದು ರೀತಿಯ ಅಭಿವೃದ್ಧಿ, ಭರವಸೆ, ಧೈರ್ಯ, ಭಾರತೀಯ ಪ್ರಾಚೀನ ಸಂಪ್ರದಾಯದ ಪುನರುಜ್ಜೀವನ ಆಗುವುದಕ್ಕೆ ಸಾಧ್ಯ ಎಂಬುದಾಗಿ ನಾವು ಭಾವಿಸುತ್ತೇವೆ.
ಸಂದರ್ಶನ