– ಪೂಜ್ಯ ಶ್ರೀ ಸಿದ್ಧಲಿಂಗ ಮಹಾಸ್ವಾಮಿಜೀ, ಸಿದ್ಧಗಂಗಾ ಮಠ |
ನಮ್ಮ ಭಾರತೀಯ ಕುಟುಂಬಪದ್ಧತಿ ವಿಶ್ವದಲ್ಲೇ ಎಲ್ಲಿಯೂ ಕಾಣಸಿಗದೆ ಇರುವಂತಹ ಅತಿಶಯದ ಪದ್ಧತಿ. ಇಷ್ಟು ಮಂದಿ ಒಟ್ಟಾಗಿ ಜೀವಿಸುವಂತಹ ವಾತಾವರಣವನ್ನು ಬೇರೆಲ್ಲೂ ಕಾಣಲು ಸಾಧ್ಯವಿಲ್ಲ. ನಮ್ಮ ಕುಟುಂಬಪದ್ಧತಿಯೂ ಜೀವನಶೈಲಿಯೂ ದೊಡ್ಡÀ ಆದರ್ಶವನ್ನು ಬೆಳೆಸಿಕೊಂಡು ಬಂದಂಥದ್ದು. ಎಲ್ಲ ಆಶ್ರಮಗಳಿಗೂ ಆಶ್ರಯಸ್ಥಾನ ಗೃಹಸ್ಥಾಶ್ರಮ ಎಂದು ಹೇಳಿಕೊಂಡು ಬಂದಿದ್ದಾರೆ. ‘ಧನ್ಯೋ ಗೃಹಸ್ಥಾಶ್ರಮೀ’ ಎಂದು ಹೇಳಿದ್ದಾರೆಯೆ ಹೊರತು ‘ಧನ್ಯೋ ಸಂನ್ಯಾಸಾಶ್ರಮೀ’ ಎಂದು ಎಲ್ಲಿಯೂ ಹೇಳಿಲ್ಲ. ಈ ಮಾತಿನ ಮೂಲಕ ಗೃಹಸ್ಥಾಶ್ರಮಕ್ಕೆ ಎಷ್ಟೊಂದು ಮಹತ್ತ್ವವನ್ನು ಕೊಟ್ಟಿದ್ದೇವೆ ಎನ್ನುವುದನ್ನು ತಿಳಿಯಬಹುದು.
ಹಿಂದಿನ ಕಾಲದಲ್ಲಿ ಅವಿಭಕ್ತ ಕುಟುಂಬಗಳಾಗಿದ್ದವು; ಆಧುನಿಕತೆ ಬೆಳೆದಂತೆ ನ್ಯೂಕ್ಲಿಯರ್ ಫ್ಯಾಮಿಲಿಗಳಾಗುತ್ತಿವೆ. ಹಿಂದೆ ಅವಿಭಕ್ತ ಕುಟುಂಬದಲ್ಲಿ ತಾತ, ಅಜ್ಜಿ, ಮಕ್ಕಳು, ಮೊಮ್ಮಕ್ಕಳು, ಮರಿಮೊಮ್ಮಕ್ಕಳು ಹೀಗೆ ಎಲ್ಲರೂ ಕೂಡಿ ಬಾಳುತ್ತಿದ್ದರು. ಕಷ್ಟ-ಸುಖ ಹಂಚಿಕೊಳ್ಳುವಿಕೆ ಇತ್ತು. ಈವತ್ತು ಏನಾಗಿದೆ ಎಂದರೆ, ತಂದೆ ತಾಯಿ ಒಂದು ಕಡೆ ಹೋಗಿರುತ್ತಾರೆ; ಮಕ್ಕಳು ಮತ್ತೊಂದು ಕಡೆಗೆ ಹೋಗಿರುತ್ತಾರೆ. ಮನೆ ಮಂದಿ ಒಂದು ಕಡೆ ಸೇರುವುದೇ ವಿರಳವಾಗುತ್ತಿದೆ. ಇದರ ಪರಿಣಾಮ ಏನೆಂದರೆ, ಆಧುನಿಕವಾದ ಮೊಬೈಲ್, ಟಿವಿ ಇತ್ಯಾದಿ ವಿಕ್ಷೇಪಸಾಧನಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿವೆ.
ಈ ನ್ಯೂಕ್ಲಿಯರ್ ಫ್ಯಾಮಿಲಿ ಎಂದರೆ, ಡಬಲ್ ಇನ್ಕಂ-ಕಿಡ್ಸ್ ಎನ್ನುವ ವ್ಯಾಖ್ಯಾನ ಇತ್ತು. ಈಗ ಮಕ್ಕಳೇ ಬೇಡ ಎನ್ನುವ ಮನಃಸ್ಥಿತಿಗೆ ಬರುತ್ತಿದ್ದಾರೆ. ಇದು ಸಮಾಜದ ಮೇಲೆ ಕೆಟ್ಟಪರಿಣಾಮ ಬೀರುವ ಸಂಗತಿ. ನ್ಯೂಕ್ಲಿಯರ್ ಫ್ಯಾಮಿಲಿಯಿಂದ ಉಪಯೋಗಕ್ಕಿಂತ ಕೆಟ್ಟ ಪರಿಣಾಮವೇ ಅಧಿಕವಾಗಿದೆ. ಈಗ ಸುಖವಿದೆ ಎನಿಸಬಹುದು; ಆದರೆ ಅದು ಕ್ಷಣಿಕ. ಕೆಲವು ವರ್ಷಗಳಾದ ಬಳಿಕ ತಮ್ಮವರು ಯಾರೂ ಇಲ್ಲ ಎನ್ನುವ ಅನಾಥಸ್ಥಿತಿಯನ್ನು ಅವರು ಅನುಭವಿಸುತ್ತಾರೆ.
ಆದ್ದರಿಂದ ಹಿಂದೆ ಯಾವ ವಾತಾವರಣವಿತ್ತೋ, ಆ ವಾತಾವರಣ ಬಂದರೆ ನಮ್ಮಲ್ಲಿ ನೀತಿ-ನಡವಳಿಕೆ, ಆಚಾರ-ವಿಚಾರ ಉಳಿದುಕೊಳ್ಳಲು ಸಾಧ್ಯವಾಗುತ್ತದೆನಿಸುತ್ತದೆ. ಅಲ್ಲದೆಹೋದರೆ, ಕುಟುಂಬಗಳಲ್ಲಿ ಬಿರುಕುಗಳು ಹೆಚ್ಚಾಗಿ, ಅದರ ಕೆಟ್ಟ ಪರಿಣಾಮ ಸಮಾಜದ ಮೇಲೆ ಆಗುತ್ತದೆ. ಆದರ್ಶಗಳು ಎಳವೆಯಲ್ಲಿ ಸಿಗುತ್ತಿಲ್ಲ. ಅವಿಭಕ್ತ ಕುಟುಂಬಗಳಿದ್ದಾಗ ಹೆಚ್ಚು ಶಾಂತಿ, ನೆಮ್ಮದಿ, ಪ್ರೀತಿ, ವಿಶ್ವಾಸದಿಂದ ಬದುಕಲು ಸಾಧ್ಯ. ಉದಾಹರಣೆಗೆ ನೋಡಿ: ಬೆಂಗಳೂರಿನಲ್ಲಿ ಬದುಕುತ್ತಿರುತ್ತಾರೆ, ಆದರೆ ಅಕ್ಕಪಕ್ಕದವರೇ ಪರಿಚಯವಿರುವುದಿಲ್ಲ. ನೆಂಟರು-ಇಷ್ಟರ ಪರಿಚಯ ಇರುವುದಿಲ್ಲ. ಇಂಥ ವಾತಾವರಣ ಹೋಗಬೇಕು, ಸುಸಂಸ್ಕೃತ ವಾತಾವರಣ ಬರಬೇಕು; ನಮ್ಮ ಹಿಂದಿನ ಭಾರತೀಯ ಕುಟುಂಬಪದ್ಧತಿ ಬಂದರೆ ಇವೆಲ್ಲ ಸುಧಾರಿಸಿಯಾವು.