ಹಿಂದೂ ಮನೆಯೆಂದರೆ ಅದು ಮಾಡು-ಗೋಡೆಗಳ ಬರಿಯ ಕಟ್ಟಡವಲ್ಲ; ಭಾವಬಂಧುರದ ತಾಣ, ಅನ್ಯವೆಂಬ ಭೇದವಿಲ್ಲದ ನೆಲೆ, ಬದುಕಿನ ಕಲೆಯನ್ನು ಕಲಿಯಬಹುದಾದ ಸಂಸ್ಕಾರಕೇಂದ್ರ.
ನಿಜಕ್ಕಾದರೆ ಗೊತ್ತು ಪರಿಚಯವಿಲ್ಲದ ವ್ಯಕ್ತಿ. ಎಲ್ಲಿಂದ ಬಂದ, ಯಾಕೆ ಬಂದ ಎಂಬ ಯಾವ ವಿವರವೂ ಗೊತ್ತಿಲ್ಲದೆ, ಹಾಗೆ ಗೊತ್ತುಮಾಡಿಕೊಳ್ಳುವ ಗೋಜಿಗೂ ಹೋಗದೆ ಮನೆಮಂದಿ ‘ವಿಶ್ವಂ ಭವತ್ಯೇಕನೀಡಮ್’ – ಎಂಬ ನಮ್ಮ ವಾಙ್ಮಯದ ಉಕ್ತಿಯಂತೆ ಇಡಿಯ ವಿಶ್ವವೇ ಒಂದು ಗೂಡು, ಅಂದರೆ ಮನೆ. ನೀಡಮ್ ಅಂದರೆ ಹಕ್ಕಿ ತನ್ನ ಪುಟ್ಟ ಸಂಸಾರಕ್ಕಾಗಿ ತಾನೇ ಕಟ್ಟಿಕೊಳ್ಳುವ ಗೂಡು. ಹಾಗಾಗಿ ಅದು ಬೇರೆಯವರು ನಿರ್ಮಿಸಿದ ಬಂಧನದ ಗೂಡಲ್ಲ, ಸ್ವಾಭಿಮಾನದಿಂದ ಕಟ್ಟಿದ ಸಂಬಂಧದ ಬೆಸುಗೆಯ ಸ್ವಾತಂತ್ರ್ಯವುಳ್ಳ ಗೂಡು. ವಿಶ್ವವೇ ಅಂಥ ಗೂಡೆಂದಾಗ ಅಲ್ಲಿ ಭಾವಸಂಬಂಧದ ಆಧಾರದಲ್ಲಿ ಎಲ್ಲರೂ ಒಂದೇ ಎಂಬ ತತ್ತ್ವವೂ ಇದೆ; ವಿಶ್ವವು ಎಲ್ಲರಿಗೂ ಸಮಾನವಾಗಿ ಸೇರಿದ್ದು ಎಂಬ ಆಶ್ರಯ ಭರವಸೆಯೂ ಇದೆ.
ಹೆಚ್ಚುಕಡಮೆ ಇದೇ ಧ್ವನಿಯನ್ನು ಹೊರಡಿಸುವ ಇನ್ನೊಂದು ಅಂಥ ವಾಕ್ಯ ‘ವಸುಧೈವ ಕುಟುಂಬಕಮ್’. ಇಲ್ಲಿ ಇಳೆಯನ್ನು ಒಂದು ಕುಟುಂಬವೆನ್ನಲಾಗಿದೆ. ಕುಟುಂಬದಂತೆ ಅಲ್ಲ, ಕುಟುಂಬವೇ. ಇಳೆಯೆಂದಾಗ ಇಲ್ಲಿಯ ಚರಾಚರವೆಲ್ಲವೂ ಸೇರಿದಂತೆ ಸಮಸ್ತ ಸೃಷ್ಟಿಯೂ ಒಳಗೊಂಡಿತು. ಇವೆಲ್ಲವೂ ನಮ್ಮ ಕುಟುಂಬಿಕರೇ.
ಇವೆರಡನ್ನು ಅಕ್ಕಪಕ್ಕ ಇಟ್ಟುಕೊಂಡು ನೋಡಿದರೆ ನಾವು ಯಾವುದೇ ಧಾರ್ಮಿಕ ವಿಧಿಗಳಲ್ಲಿ – ‘ಅಸ್ಮಾಕಂ ಸಹಕುಟುಂಬಾನಾಂ ಸ ಪರಿವಾರಾಣಾಂ ದ್ವಿಪದ ಚತುಷ್ಪದ ಸಹಿತಾನಾಂ ಕ್ಷೇಮ ಸ್ಥೈರ್ಯ ವಿಜಯ ವೀರ್ಯ ಆಯುರಾರೋಗ್ಯ ಐಶ್ವರ್ಯ…. ಕರ್ಮ ಕರಿಷ್ಯೇ’ – ಎಂದು ಎರಡು ಕಾಲಿನವುಗಳು, ನಾಲ್ಕು ಕಾಲಿನವುಗಳು ಸೇರಿದಂತೆ ಎಲ್ಲರಿಗೂ ಒಳ್ಳೆಯದಾಗಲಿ ಎಂದು ಯಾಕೆ ಪ್ರಾರ್ಥಿಸುತ್ತೇವೆ, ‘ಲೋಕಾಃ ಸಮಸ್ತಾಃ ಸುಖಿನೋ ಭವಂತು’ ಎಂದು ಯಾಕೆ ಹೇಳುತ್ತೇವೆ ಎಂದು ಅರ್ಥೈಸಿಕೊಳ್ಳುವುದು ಸುಲಭ. ಅದು ನಮ್ಮ ಉದಾರತೆಗಿಂತ ಮಿಗಿಲಾಗಿ ಎಲ್ಲರೂ ಎಲ್ಲವೂ ನಮ್ಮದೆಂಬ ಆತ್ಮಭಾವ ಇಲ್ಲಿ ಅತ್ಯಂತ ಸಹಜವಾಗಿ ಕೆಲಸ ಮಾಡುತ್ತಿದೆ ಅಷ್ಟೆ.
ಸರ್ವಾನುಷ್ಠಾನವಿಶೇಷ
ಸಣ್ಣ ಗುಂಪಲ್ಲಿ, ಪುಟ್ಟ ಪ್ರದೇಶದಲ್ಲಿ, ಒಂದೇ ಭಾಷೆ-ಪರಂಪರೆ-ನಂಬಿಕೆಗಳಿರುವಲ್ಲೇ ಇಂಥ ಭಾವ ಔನ್ನತ್ಯವನ್ನು ಸಾಧಿಸುವುದು ಕಷ್ಟ. ಅಂಥದ್ದರಲ್ಲಿ ಪ್ರಾಚೀನದಲ್ಲಿ ಇಡಿಯ ವಿಶ್ವದ ಕುರಿತು ಅಂಥ ಅನುಷ್ಠಾನ ಅದ್ವೈತವನ್ನು ಹೇಗೆ ಸಾಧಿಸಿದರು?
ಇದಕ್ಕೆ ಉತ್ತರವೊಂದೇ – ನಮ್ಮ ಕುಟುಂಬ ಪದ್ಧತಿ.
ನೀವು ಇದನ್ನೇಕೆ ಹಾಗೆ ಮಾಡಿದಿರಿ ಎಂಬ ಒಂದು ನಿರ್ದಿಷ್ಟ ಕ್ರಮದ ಕುರಿತ ಪ್ರಶ್ನೆಗೆ `ಅದು ನಮ್ಮ ಪದ್ಧತಿ’ ಎಂಬ ಉತ್ತರವನ್ನು ಕೇಳುತ್ತೇವೆ ನೋಡಿ. ಎಂದರೆ, ಎಲ್ಲರೂ ಅನುಷ್ಠಾನ ಮಾಡಿದಾಗ ಪದ್ಧತಿಯಾಗುತ್ತದೆ. ಎಲ್ಲರಿಗೂ ಅಂಥ ನಿರ್ದಿಷ್ಟ ಕ್ರಮವೊಂದು ಸರಿಯೆಂದು, ಉತ್ತಮವೆಂದು, ಸಮಷ್ಟಿಗೆ ಹಿತವೆಂದು ಅನಿಸಿ ಅದಕ್ಕೆ ತಕ್ಕಂತೆ ತೊಡಗಿದಾಗ ಅಲ್ಲಿ ಪದ್ಧತಿಯೊಂದು ರೂಪಗೊಳ್ಳುತ್ತದೆ. ಅದು ಪೀಳಿಗೆಯಿಂದ ಪೀಳಿಗೆಗೆ ಸಂವಹನಗೊಂಡು ಸ್ಥಾಯೀರೂಪವನ್ನು ಪಡೆಯುತ್ತದೆ. ಹಿಂದೂ ಕುಟುಂಬ ಪದ್ಧತಿ ಹಾಗೆ ಪೀಳಿಗೆಯಿಂದ ಪೀಳಿಗೆಗೆ ದಾಟಿಕೊಂಡು ಬಂದ ಸಂಸ್ಕಾರಸಂಬಂಧಿತವಾದ ಒಂದು ಪದ್ಧತಿ.
ಮನೆಯಲ್ಲಿ ಒಂದು ಮಗು ಹುಟ್ಟಿದಾಗ ಸಹಜವಾಗಿ ಎಲ್ಲರಿಗೂ ಅದು ಸಂಭ್ರಮದ ಕ್ಷಣವಾಗುತ್ತದೆ. ಹೊಸ ಸದಸ್ಯನೊಬ್ಬ ಆ ಮನೆಗೆ ಪ್ರವೇಶ ಪಡೆಯುವ ಕ್ಷಣವದು. ಆದರೆ ಆ ಹೊಸ ಸದಸ್ಯನಿಗೆ ಇದಾವುದರ ಪರಿವೆಯೇ ಇರುವುದಿಲ್ಲ. ಕ್ರಮೇಣವಾಗಿ ಮಗು ತಾನು ಒಬ್ಬನೇ ಇರುವುದಲ್ಲ, ತನ್ನ ಜತೆಗೆ ತಾಯಿ ತಂದೆ ಅಣ್ಣ ಅಕ್ಕ ದೊಡ್ಡಮ್ಮ ದೊಡ್ಡಪ್ಪ ಚಿಕ್ಕಪ್ಪ ಚಿಕ್ಕಮ್ಮ ಅಜ್ಜಿ ಅಜ್ಜ ಹೀಗೆ ಮನೆಮಂದಿಯೆಲ್ಲರೂ ಇದ್ದಾರೆ ಎಂಬ ಭರವಸೆಯನ್ನು ಹೊಂದುತ್ತದೆ ಮತ್ತು ಅವರೆಲ್ಲರನ್ನೂ ತನ್ನವರೆಂಬ ಭರವಸೆಯನ್ನು ಅನುಭವಿಸುತ್ತದೆ. ಎಲ್ಲರೂ ತನ್ನವರು ಎಂಬುದು ನಮ್ಮ ಮನೆಗಳಲ್ಲಿ ಸಿಗುವ ವಿಶಿಷ್ಟ ಭಾವ.
ಸಂಸ್ಕಾರವಿಶೇಷ
ಈ ಭಾವ ಬಲಿತಂತೆ ಮಗುವಿಗೆ ಬಲವಾದ ಸಂಸ್ಕಾರವು ಲಭ್ಯವಾಗುತ್ತದೆ. ಮಗುವಿಗೆ ಕಲಿಸುವ ಭಾಷೆಯಲ್ಲಿ, ಕೆಲಸದಲ್ಲಿ ಎಲ್ಲದರಲ್ಲೂ ಸಂಸ್ಕಾರದ ಅಂಶವಿರುವುದರ ಕಡೆಗೆ ಒತ್ತು ಇರುತ್ತದೆ. ಮಗು ಒಳ್ಳೆಯದನ್ನೇ ಮಾತಾಡಬೇಕು, ಒಳ್ಳೆಯ ಶಬ್ದಗಳನ್ನೇ ಉಚ್ಚರಿಸಬೇಕು, ಸಾತ್ತ್ವಿಕ ಧ್ವನಿಯಿಂದಲೇ ಉಸುರಬೇಕು ಎಂಬ ಆಗ್ರಹ ತಾಯಂದಿರದಾಗಿರುತ್ತದೆ. ಮಗು ಅಪ್ಪಿತಪ್ಪಿಯೂ ಕೆಟ್ಟ ಶಬ್ದವನ್ನು ಹೇಳದಂತೆ ಅವರ ಎಚ್ಚರವಿರುತ್ತದೆ. ಅಂದರೆ ತಾಯಿಯಾದವಳು ಮಗುವಿಗೆ ಭಾಷೆಯನ್ನು ಕಲಿಸುವುದೆಂದರೆ ಅದು ಭಾಷೆಯಷ್ಟೇ ಅಲ್ಲ, ಉದಾತ್ತ ಸಂಸ್ಕಾರವೂ ಕೂಡ. ತಾನು ಅತ್ಯಂತ ಸುಲಭದಲ್ಲಿ ಮತ್ತು ಕಷ್ಟವಿಲ್ಲದೆ ಮಾಡಬಹುದಾದ ಕೆಲಸವನ್ನು ಮಗುವಿನ ಕೈಯಲ್ಲಿ ತಾಯಿ ಮಾಡಿಸುತ್ತಾಳೆ. ಹಾಗೆ ಮಾಡಿಸುವಾಗ ಅಮ್ಮನಿಗೆ ಸಹಾಯ ಮಾಡುವ, ಅಜ್ಜನ ಸೇವೆ ಮಾಡುವ, ದೊಡ್ಡಪ್ಪನ ಕಷ್ಟ ನಿವಾರಿಸುವ ಹೀಗೆ ಮಗು ಮಾಡುವ ಕೆಲಸವು ಇನ್ನೊಬ್ಬರಿಗಾಗಿ ಎಂಬ ಭಾವವನ್ನು ಆ ಮಗುವಿನಲ್ಲಿ ಮೂಡಿಸುತ್ತಾಳೆ. ಅಂದರೆ, ತಾಯಿ ಮಗುವಿಗೆ ಕೆಲಸವನ್ನು ಮಾತ್ರ ಕಲಿಸುವುದಿಲ್ಲ, ಜತೆಜತೆಗೇ ಸಂಸ್ಕಾರವನ್ನು ಕೂಡ. ಹೀಗೆ ತಾಯಿ ಮಗುವಿಗೆ ಏಕಕಾಲದಲ್ಲಿ ವಾತ್ಸಲ್ಯಮಯೀ ಅಮ್ಮನೂ ಆಗುತ್ತಾಳೆ, ತಿದ್ದಿ ತೀಡುವ ಗುರುವೂ ಆಗುತ್ತಾಳೆ. ಕ್ರಮೇಣ ಮನೆಮಂದಿಯೆಲ್ಲ ಇಂಥ ಸಂಸ್ಕಾರಪ್ರದಾನ ಮಾಡುವಲ್ಲಿ ತಾಯಿಗೆ ಸಹಕಾರಿಗಳಾಗುತ್ತಾರೆ, ಮಗುವಿಗೆ ಅನೌಪಚಾರಿಕ ಮಾರ್ಗದರ್ಶಕರಾಗುತ್ತಾರೆ. ಮಗು ತಮ್ಮದೆಂಬ ಭಾವ ಎಲ್ಲರದು. ಎಲ್ಲರೂ ತನ್ನವರೆಂಬ ಭಾವ ಮಗುವಿನದು. ಆಡುವ ಆಟದಲ್ಲಿ, ಮಾತಾಡುವ ಭಾಷೆಯಲ್ಲಿ, ಉಣ್ಣುವ ಊಟದಲ್ಲಿ ಹೀಗೆ ಎಲ್ಲದರಲ್ಲೂ ಮಗುವಿಗೆ ಸಂಸ್ಕಾರ, ಏಕಾತ್ಮಭಾವಗಳು ಅತ್ಯಂತ ಸಹಜವಾಗಿ ಲಭಿಸುತ್ತ ಹೋಗುತ್ತವೆ.
ಗಾರ್ಹ ವೈಶಿಷ್ಟ್ಯ
ಹಿಂದೂ ಮನೆಯೆಂದರೆ ಅದು ಮಾಡು-ಗೋಡೆಗಳ ಬರಿಯ ಕಟ್ಟಡವಲ್ಲ; ಭಾವಬಂಧುರದ ತಾಣ, ಅನ್ಯವೆಂಬ ಭೇದವಿಲ್ಲದ ನೆಲೆ, ಬದುಕಿನ ಕಲೆಯನ್ನು ಕಲಿಯಬಹುದಾದ ಸಂಸ್ಕಾರಕೇಂದ್ರ. ‘ಅತಿಥಿ ದೇವೋ ಭವ’ ಎನ್ನುವುದು ಶಾಸ್ತ್ರದ ಸೂಚನೆ. ಅದರ ಅನುಷ್ಠಾನರೂಪವನ್ನು ಹಿಂದೂ ಮನೆಯಲ್ಲಿ ಕಾಣಬಹುದು. ಅತಿಥಿ ಎಂದರೆ ಕರೆಯದೆ ಬಂದವರು ಎನ್ನುವ ಒಂದು ವಿವರವಿದೆ. ಕರೆದು ಬಂದವರು ಅಭ್ಯಾಗತರು ಎಂಬ ನೆಲೆಯಲ್ಲಿ ಈ ವಿವರವಿರುವುದು. ಅತಿಥಿ ಅವರನ್ನು ಮನೆಗೆ ಬಂದ ದೇವರೆಂದೇ ಪರಿಗಣಿಸಿ, ದೇವಸಮಾನವಾಗಿ ಉಪಚರಿಸಿ, ತೃಪ್ತಭಾವವನ್ನು ಅವರಲ್ಲಿ ಕಂಡ ಬಳಿಕ, ಇನ್ನು ತಮ್ಮಿಂದ ಏನಾಗಬೇಕೆಂದು ವಿಚಾರಿಸಿ, ಅದನ್ನು ಯಥೋಚಿತವಾಗಿ ಪೂರೈಸಿದರೆ ಆತಿಥ್ಯ ಮಾಡಿದಂತಾಗುತ್ತದೆ. ಆತಿಥ್ಯದ ಅನುಷ್ಠಾನವನ್ನು ಮಗು ಕಣ್ಣಾರೆ ನೋಡುತ್ತದೆ, ಕೈಯಾರೆ ತೊಡಗುತ್ತದೆ, ಮನಸಾರೆ ಅನುಭವಿಸುತ್ತದೆ.
ಮನೆಯಲ್ಲಿ ಎಲ್ಲ ವಯೋಮಾನದವರೂ ಇರುತ್ತಾರೆ. ಮುಖ್ಯವಾಗಿ ಏರುವಯಸ್ಸಿನವರು ಮತ್ತು ಇಳಿವಯಸ್ಸಿನವರು. ಇಳಿವಯಸ್ಸಿನಲ್ಲಿ ಆರೋಗ್ಯದ ಸಮಸ್ಯೆ. ಏರುವಯಸ್ಸಿನಲ್ಲಿ ಯಾವುದೇ ಸಮಸ್ಯೆಯನ್ನು ಪರಿಹರಿಸುವ ಹುಮ್ಮಸ್ಸು. ಮನೆಯಲ್ಲಿ ಇವೆರಡು ಪರಸ್ಪರ. ಸಮಸ್ಯೆ ತಮ್ಮವರನ್ನು ಕಾಡಿದೆಯೆಂದಾಗ ಅದರ ಪರಿಹಾರಕ್ಕೆ ಧಾವಿಸುವುದು, ಕಾಳಜಿಯಿಂದ ತೊಡಗುವುದು ಮನೆಯ ಸದಸ್ಯರೆಲ್ಲರಲ್ಲಿ ಕಾಣಬಲ್ಲ ಸಹಜ ಚಿತ್ರಣ. ಮನೆ ತಮ್ಮದು, ಮನೆಮಂದಿ ತಮ್ಮವರು, ಯಾವುದೇ ರೀತಿಯ ಸಮಸ್ಯೆಯಿಂದ ಮನೆಯೂ ಮುಕ್ತವಾಗಿರಬೇಕು, ಮನೆಮಂದಿಯೂ ಮುಕ್ತವಾಗಿರಬೇಕು – ಮನೆಯ ಯಾವುದೇ ಸದಸ್ಯ ಆಲೋಚಿಸುವ ರೀತಿಯಿದು.
ಮನೆಮಂದಿಯೆಲ್ಲ ಪರಸ್ಪರರ ಬಗೆಗೆ, ಮುಖ್ಯವಾಗಿ ಹಿರಿಯರ ಬಗೆಗೆ, ಒಟ್ಟಾರೆಯಾಗಿ ಮನೆಯ ಬಗೆಗೆ ತೋರುವ ಇಂಥ ಕಾಳಜಿಯನ್ನು ಮಗು ಕಂಡನುಭವಿಸುತ್ತಿರುತ್ತದೆ. ಯಾರೂ ಅದಕ್ಕೆ ಮನೆಯ, ಮನೆಜನರ ಹಿತವನ್ನು ಬಯಸಬೇಕೆಂದು ಹೇಳಿಕೊಡಬೇಕಿಲ್ಲ, ಕಲಿಸಬೇಕಿಲ್ಲ, ಸಹಜವಾಗಿಯೇ ಅಂಥ ಭಾವನೆ ಅದರ ಸ್ವಭಾವವಾಗುತ್ತದೆ. ಗೊತ್ತು ಪರಿಚಯ ಇಲ್ಲದ ಅತಿಥಿಯನ್ನು ದೇವರೆಂದು ತಿಳಿವ ಹಿನ್ನೆಲೆಯ ಇಂಥ ಕೌಟುಂಬಿಕ ಪರಿಸರದಲ್ಲಿ ಸಮಾಜಬಂಧುಗಳನ್ನು ತನ್ನವರೆಂದು ಭಾವಿಸುವುದು ಸಹಜವೇ ಇದೆ. ಸಮಾಜವೂ ತನ್ನದೇ, ಸಮಾಜಬಂಧುಗಳೂ ತನ್ನವರೇ. ಅಲ್ಲಿ ಎದುರಾಗಬಲ್ಲ ಎಂಥದ್ದೇ ಸವಾಲು ತನಗೆದುರಾಗಿರುವ ಸವಾಲೇ ಸರಿ. ಅದರ ಪರಿಹಾರಕ್ಕೆ ತೊಡಗುವುದೂ ತನ್ನದೇ ಕರ್ತವ್ಯ. ಸಮಾಜದ, ಸಮಾಜಬಂಧುಗಳೆಲ್ಲರ ಕುರಿತು ಇಂಥ ಭಾವ ಮಗುತನದಲ್ಲೇ ಉದಾತ್ತಗೊಳ್ಳಲು ಮನೆ ಆಧಾರವಾಗುತ್ತದೆ.
ಮನೆಯ ಸದಸ್ಯನಾಗುವುದೆಂದರೆ ಮನೆಮಂದಿಯ ಜತೆ ಸಂಬಂಧ ಹೊಂದುವುದು. ಯಾರದೇ ಜತೆಗಿನ ಸಂಬಂಧಕ್ಕೆ ಮುಖ್ಯವಾಗಿ ಬೇಕಾದುದು ಭಾವದ್ರವ್ಯ. ತಾಯಿ ಮಗುವಿಗೆ ಅಪ್ಪನಿಂದ ತೊಡಗಿ ಒಬ್ಬೊಬ್ಬರನ್ನೇ ಸಂಬಂಧದ ನೆಲೆಯಲ್ಲಿ ಪರಿಚಯಿಸುತ್ತ ಹೋದಂತೆಲ್ಲ, ಅವರೆಲ್ಲ ತನಗಾಗಿ ಮಾಡುವ ಕಾರ್ಯವನ್ನು ನೋಡಿದಂತೆಲ್ಲ ಮಗುವಿನ ಭಾವಕೋಶ ಬೆಳೆಯುತ್ತ ಹೋಗುತ್ತದೆ. ಇದು ಬೆಳೆಬೆಳೆದು ಮನೆಮಂದಿಯ ಬಗೆಗೆ ಪ್ರೀತಿವಾತ್ಸಲ್ಯದ ಸ್ವರೂಪವನ್ನೂ ಸಮಾಜಬಂಧುಗಳ ಬಗೆಗೆ ಸ್ನೇಹಪ್ರೇಮಳ ಸ್ವರೂಪವನ್ನೂ ಪಡೆಯುತ್ತದೆ. ನಮ್ಮ ವಾಙ್ಮಯ ಸೂಚಿಸುವಂತೆ; ಮನುಷ್ಯ ಬದುಕಿನ ಆತ್ಯಂತಿಕ ಧ್ಯೇಯ ಪರಮಸತ್ಯದ ಜತೆಗಿನ ಸಂಬಂಧವನ್ನು ಕಂಡುಕೊಳ್ಳುವುದು. ಇದನ್ನು ಕಂಡುಕೊಳ್ಳಲು ಮನೆಮಂದಿಯ, ಸಮಾಜಬಂಧುಗಳ ಜತೆಗಿನ ಸಂಬಂಧ ಪೂರಕ, ಪ್ರಾರಂಭಿಕ ಮೆಟ್ಟಿಲು. ಪರಮಸತ್ಯವನ್ನು ಉಪನಿಷತ್ತು ‘ಅದು’ ಎಂದಿತು, ಉಳಿದ ಶಾಸ್ತ್ರಗಳು ಪರಬ್ರಹ್ಮ ಎಂದವು, ಪುರಾಣಗಳು ಭಗವಂತ ಎಂದವು, ಶ್ರೀಸಾಮಾನ್ಯರು ದೇವರು ಎಂದರು. ಏನೇ ಎನ್ನಿ, ಅದರ ಕುರಿತು ನಾವು ನಮ್ಮೊಳಗೆ ಬೆಳೆಸಿಕೊಳ್ಳಬೇಕಾದ ಭಾವ ಮುಖ್ಯ. ಭಾವಕೋಶವು ಈ ನಿಟ್ಟಿನಲ್ಲಿ ಬೆಳೆಬೆಳೆದು ಶ್ರದ್ಧೆಯಾಗುತ್ತದೆ, ಭಕ್ತಿಯಾಗುತ್ತದೆ. ಜ್ಞಾನದೆತ್ತರವನ್ನು ತಲುಪಬಲ್ಲದಾಗುತ್ತದೆ. ಮನುಷ್ಯನ ಭಾವಕೋಶವನ್ನು ಹಾಗೆ ಔನ್ನತ್ಯಕ್ಕೆ ಬೆಳೆಸಲು ಹಿಂದೂ ಮನೆಯಲ್ಲಿರುವ ಒಂದು ಸುಂದರ ವ್ಯವಸ್ಥೆಯೆಂದರೆ ದೇವರ ಕೋಣೆ. ಅದೇ ಸಮಾಜದ ವ್ಯವಸ್ಥೆಯಲ್ಲಿ ದೇವಸ್ಥಾನ, ಮಠಮಂದಿರಗಳು. ಮನುಷ್ಯನನ್ನು ಹಿಂದೂ ಮನೆಯು ಮನೆಗೆ ಸೀಮಿತಗೊಳಿಸದೆ ಉತ್ತಮ ಮನೆಸದಸ್ಯನಾಗುವುದರ ಜತೆಗೆ ಸಮಾಜಬಂಧುವೂ ಆಗುತ್ತ ವಿಶ್ವಕುಟುಂಬಿಯನ್ನಾಗಿ ಆತನ ವ್ಯಾಪ್ತಿಯನ್ನು ಹಿಗ್ಗಿಸಿ ಅಲ್ಲಿಗೇ ನಿಲ್ಲದೆ ದೇವನಾಗುವತ್ತ ಸಾಗಲು ದಾರಿ ಮಾಡಿಕೊಡುತ್ತದೆ.
ಯಾವ ಗೀತೆಯನ್ನೂ ಓದದೆ, ಮನೆಯಲ್ಲಿ ಲಭಿಸುವ ಇಂಥ ಸಂಸ್ಕಾರದಿಂದ ಮಗು ಕರ್ಮಯೋಗಿಯೂ ಆಗುತ್ತದೆ, ವಿಶ್ವಕುಟುಂಬಿಯೂ ಆಗುತ್ತದೆ.
ಮನೆ ವಿಶ್ವವ್ಯವಸ್ಥೆಯ ಅತಿಸಣ್ಣ ಘಟಕ. ‘ವಿಶ್ವನೀಡಮ್’ ಎಂಬಲ್ಲಿ, ‘ವಸುಧಾ ಕುಟುಂಬ’ ಎಂಬಲ್ಲಿ ಈ ಎರಡು ‘ಅತಿ’ ಎಂದರೆ ಗಡಿಗಳನ್ನು ಅಕ್ಕಪಕ್ಕ ಇಟ್ಟು ತಾತ್ತ್ವಿಕ ಸೂತ್ರವನ್ನು ನೀಡಲಾಗಿದೆ. ಎರಡು ‘ಅತಿ’ ಎಂದರೆ: ಒಂದು – ಇನ್ನದಕ್ಕಿಂತ ದೊಡ್ಡದಿಲ್ಲದ ವಿಶ್ವ ಮತ್ತು ಭೂಮಿ, ಎರಡು – ಇನ್ನಿದಕ್ಕಿಂತ ಸಣ್ಣದಿಲ್ಲದ ಮನೆ ಅಥವಾ ಕುಟುಂಬ.
ಭಾವ ವೈಶಿಷ್ಟ್ಯ
ವಿಶ್ವವೂ ಮನೆಯೂ ಅಕ್ಕಪಕ್ಕವೇ ಇರಬೇಕು. ಯಾಕೆಂದರೆ ಅವೆರಡರ ನಡುವೆ ಅವಿನಾಭಾವ ಸಂಬಂಧವಿದೆ. ವಿಶ್ವದ ಹ್ರಸ್ವರೂಪ ಮನೆ. ಮನೆಯ ವಿರಾಡ್ರೂಪ ವಿಶ್ವ. ಮನೆಮಂದಿ ತಮ್ಮೊಳಗೆ ಪರಸ್ಪರ ಏನೇನೆಲ್ಲವನ್ನು ಭಾವಿಸುತ್ತಾರೋ ಅವನ್ನೇ ವಿಶ್ವದೊಳಗಣ ಎಲ್ಲರೂ ಪರಿಭಾವಿಸಬೇಕು. ಇದು ನಿಜವಾದ ವೈಶ್ವಿಕಭಾವ.
ನಮ್ಮೀ ವೈಶ್ವಿಕಭಾವಕ್ಕೆ ಆಧಾರಭೂತವಾದ ವಿಚಾರವೆಂದರೆ ಹಿಂದೂ ರಾಷ್ಟ್ರೀಯತೆ. ಹಿಂದೂ ರಾಷ್ಟ್ರೀಯತೆಯು ವೇದ, ಉಪನಿಷತ್, ಗೀತೆ, ರಾಮಾಯಣ, ಮಹಾಭಾರತ ಇತ್ಯಾದಿ ನಮ್ಮ ಪ್ರಾಚೀನ ವಾಙ್ಮಯಗಳಿಂದ ತಾತ್ತ್ವಿಕ ಸಂಗತಿಗಳನ್ನು ಸ್ವೀಕರಿಸಿ ಪರಿಪುಷ್ಟಗೊಂಡಿದೆ. ಹಿಂದೂ ಮನೆಯ ಮೂಲದ್ರವ್ಯವೂ ಇವುಗಳಿಂದಲೇ ಲಭಿಸಿದ್ದು. ಹೀಗೆ ನಮ್ಮೀ ರಾಷ್ಟ್ರೀಯತೆಯ ಒಂದು ತುದಿ ಮನೆಯಲ್ಲಿದ್ದು ಮತ್ತೊಂದು ವಿಶ್ವವನ್ನು ಒಳಗೊಂಡಿದೆ.
ಮನೆಯನ್ನು ವಿಶ್ವದೋಪಾದಿಯಲ್ಲಿ ವಿಸ್ತರಿಸುವ, ವಿಶ್ವವನ್ನು ಮನೆಯ ಸ್ಫೂರ್ತಿಯಿಂದ ಉನ್ನತೀಕರಿಸುವ ನಮ್ಮೀ ವಿಚಾರದ ವ್ಯಾವಹಾರಿಕ ಬುನಾದಿ – ಹಿಂದೂ ಕುಟುಂಬ ಪದ್ಧತಿ.
ಈ ಹಿನ್ನೆಲೆಯಲ್ಲಿ – ಭಾರತೀಯ ಪರಂಪರೆಯಲ್ಲಿ ಭಾರತದಲ್ಲಿ ನಾಲ್ಕು ಆಶ್ರಮಗಳ ಪೈಕಿ ಗೃಹಸ್ಥಾಶ್ರಮ ಅತ್ಯಂತ ಶ್ರೇಷ್ಠ. ಒಬ್ಬ ಸುಭಾಷಿತಕಾರ ಹೇಳುವಂತೆ:
ಯಥಾ ವಾಯುಂ ಸಮಾಶ್ರಿತ್ಯ ವರ್ತಂತೇ ಸರ್ವಜಂತವಃ |
ತಥಾ ಗೃಹಸ್ಥಮಾಶ್ರಿತ್ಯ ವರ್ತಂತೇ ಸರ್ವ ಆಶ್ರಮಾಃ ||
(ಹೇಗೆ ವಾಯುವನ್ನು ಆಶ್ರಯಿಸಿ ಎಲ್ಲ ಜೀವಿಗಳೂ ಬದುಕುತ್ತವೆಯೋ, ಹಾಗೆಯೇ ಗೃಹಸ್ಥನನ್ನು ಆಶ್ರಯಿಸಿ ಎಲ್ಲ ಆಶ್ರಮಗಳೂ ಇರುತ್ತವೆ.)
ಚಾಣಕ್ಯರು ಕೂಡ ‘ಧನ್ಯೋ ಗೃಹಸ್ಥಾಶ್ರಮಃ’ ಎಂದು ಹೇಳಿದರು. ಈ ಧನ್ಯತೆಯು ಲಭಿಸಬೇಕಾದರೆ, ಮನೆಯಲ್ಲಿ ಇರಲೇಬೇಕಾದ, ಅನುಸರಿಸಲೇಬೇಕಾದ ಹತ್ತು ವಿಷಯಗಳನ್ನು ಕ್ರೋಡೀಕರಿಸಿ ಚಾಣಕ್ಯರು ಹೀಗೆ ಹೇಳುತ್ತಾರೆ:
ಸಾನಂದಂ ಸದನಂ ಸುತಾಶ್ಚ ಸುಧಿಯಃ ಕಾಂತಾ ಮನೋಹಾರಿಣೀ
ಸನ್ಮಿತ್ರಂ ಸುಧನಂ, ಸ್ವಯೋಷಿತಿ ರತಿಃ ಚಾಜ್ಞಾಪರಾಃ ಸೇವಕಾಃ |
ಆತಿಥ್ಯಂ ಶಿವಪೂಜನಂ ಪ್ರತಿದಿನಂ ಮೃಷ್ಟಾನ್ನಪಾನಂ ಗೃಹೇ
ಸಾಧೋಃ ಸಂಗಮುಪಾಸತೇ ಹಿ ಸತತಂ ಧನ್ಯೋ ಗೃಹಸ್ಥಾಶ್ರಮಃ ||
- ಸಾನಂದಂ ಸದನಂ: ನಗುನಗುತ್ತಾ ಇರುವ ಮನೆ
- ಸುತಾಶ್ಚ ಸುಧಿಯಃ: ಇಲ್ಲಿ ಬುದ್ಧಿವಂತ ಮಕ್ಕಳು ಎನ್ನುವುದರ ಅರ್ಥ ಭಾರತೀಯ ಸಂಸ್ಕೃತಿಯಲ್ಲಿ ಶರೀರ, ಮನಸ್, ಬುದ್ಧಿ ಮತ್ತು ಏಕಾತ್ಮತಾ ಭಾವ ಇದ್ದರೆ ಮಾತ್ರ ಬುದ್ಧಿವಂತ ಎನಿಸಿಕೊಳ್ಳುವುದು. ಹಣವಿದ್ದಾಗ ಅಲ್ಲ. ಮಕ್ಕಳಲ್ಲಿ ಈಗ ಶರೀರ ಮನಸ್ ಹಾಗೂ ಬುದ್ಧಿಯ ಬೆಳವಣಿಗೆಗೆ ವ್ಯವಸ್ಥೆ ಇದೆ. ಆದರೆ ಏಕಾತ್ಮತಾ ಭಾವವನ್ನು ಬೆಳೆಸಲು ಅಗತ್ಯವಾದಂಥ ವಾತಾವರಣ ಇಲ್ಲ. ಅದು ಇಲ್ಲದಿದ್ದರೆ ಅವರು ಬುದ್ಧಿವಂತರಾಗುವುದಿಲ್ಲ.
- ಕಾಂತಾ ಮನೋಹಾರಿಣೀ: ಮನಸ್ಸನ್ನು ಗೆಲ್ಲುವ ಪತ್ನಿ;
- ಸನ್ಮಿತ್ರಂ ಸುಧನಂ: ನೈಜ ಸಂಪತ್ತೆಂದರೆ ಯೋಗ್ಯ ಮಿತ್ರರು;
- ಸ್ವಯೋಷಿತಿ ರತಿಃ: ತನ್ನ ಪತ್ನಿಯೊಂದಿಗೆ ಮಾತ್ರ ಗಂಡು-ಹೆಣ್ಣಿನ ಸಂಬಂಧ; ಉಳಿದ ಎಲ್ಲ ಹೆಣ್ಣುಮಕ್ಕಳು ತಾಯಿಯಂತೆ;
- ಆಜ್ಞಾಪರಾಃ ಸೇವಕಾಃ: ಸೇವಕನನ್ನು ಮನೆಯ ಸದಸ್ಯನಂತೆ ಎಂದು ತಿಳಿದುಕೊಂಡಾಗ ನಮ್ಮ ಅನಿಸಿಕೆಗೆ ತಕ್ಕಂತೆ ಆತ ಕೆಲಸ ಮಾಡುತ್ತಾನೆ. ಮನೆಯಲ್ಲಿ ಕೆಲಸ ಮಾಡುವವರನ್ನು ನಮ್ಮ ಮನೆಯ ಸದಸ್ಯರಂತೆ ಭಾವಿಸುವುದು;
- ಆತಿಥ್ಯಂ: ಅತಿಥಿ ಸತ್ಕಾರ;
- ಶಿವಪೂಜನಂ: ಪ್ರತಿನಿತ್ಯ ದೇವರ ಪೂಜೆ; ಪೂಜೆ ಎಂದರೆ ಆರತಿ, ಗಂಟೆ ಇಷ್ಟೆ ಅಲ್ಲ. ಕೋಣೆಯಲ್ಲಿ ಕುಳಿತುಕೊಂಡು ಆತ್ಮಾವಲೋಕನ ಮಾಡುತ್ತಾ ತನ್ನನ್ನು ತಾನು ದೇವತ್ವದ ಎತ್ತರಕ್ಕೆ ಏರಿಸುವ ನಿಜವಾದ ಕಾರ್ಯವೇ ಪೂಜೆ;
- ಮೃಷ್ಟಾನ್ನಪಾನಂ ಗೃಹೇ: ಮನೆಯಲ್ಲಿ ಅಡುಗೆ; ಹೊಟೇಲ್ನಲ್ಲಿ ಅಲ್ಲ. ಶನಿವಾರ, ಆದಿತ್ಯವಾದ ಅಡುಗೆಕೋಣೆಗೆ ರಜೆ ಇಲ್ಲ;
- ಸಾಧೋಃ ಸಂಗಮುಪಾಸತೇ: ಸಜ್ಜನರ ಸಂಗ;
– ಇವಿಷ್ಟೂ ಯಾವ ಮನೆಯಲ್ಲಿ ಇರುತ್ತವೆಯೋ, ಆ ಮನೆಯ ಮಕ್ಕಳು ಸಹಜವಾಗಿ ವಿಶ್ವವನ್ನು ಒಂದು ಕುಟುಂಬವಾಗಿ ನೋಡುವಂತಹ ಶಕ್ತಿಯನ್ನು ಪಡೆಯುತ್ತಾರೆ.
ಈ ದೃಷ್ಟಿಯಲ್ಲಿ, ವಿಶ್ವಕ್ಕೆ ಕೌಟುಂಬಿಕ ಜೀವನಮೌಲ್ಯಗಳ ವಿಕಾಸದ ಕಾರಣದಿಂದ ‘ವಸುಧೈವ ಕುಟುಂಬಕಮ್’ ಎಂಬ ವಿರಾಡ್ರೂಪ ಪಡೆಯಲು ಚಾಣಕ್ಯನ ಈ ಸೂತ್ರಗಳು ನಮಗೆ ಸಹಕಾರಿಯಾಗುತ್ತವೆ.