ದಿನಚರಿ, ರೀತಿ-ನೀತಿ, ಪರಂಪರೆ
ಸಮೃದ್ಧಿ+ಸಂಸ್ಕೃತಿ = ಹಿಂದೂ ಮನೆ.
ನಾನು ಒಂದು ‘ಕುಟುಂಬಮಿಲನ’ ಕಾರ್ಯಕ್ರಮಕ್ಕೆ ಹೋಗಿದ್ದೆ. ಹಲವು ಮಂದಿ ಅಪ್ಪ, ಅಮ್ಮ ಮತ್ತು ಅವರ ಮಕ್ಕಳು ಅದರಲ್ಲಿ ಭಾಗವಹಿಸಿದ್ದರು. ಅಪ್ಪಂದಿರಿಗೆ ನಾನು ಕೇಳಿದೆ: “ನೀವು ಬಾಲಕರಾಗಿದ್ದಾಗ ನಿಮ್ಮ ಬಳಿ ಎಷ್ಟು ಚಡ್ಡಿ, ಎಷ್ಟು ಷರಟು ಇದ್ದವು?” ಎಲ್ಲರೂ ಥಟ್ ಅಂತ ಉತ್ತರಿಸಿದರು – “ಎರಡು ಜತೆ.” ಅಮ್ಮಂದಿರನ್ನು ಕೇಳಿದೆ, “ನಿಮ್ಮ ಬಳಿ ಎಷ್ಟು ಲಂಗ, ಜಂಪರ್ ಇದ್ದವು?” ಅವರೂ ಹೇಳಿದರು, “ಎರಡೆರಡು.” ಮುಂದಿನ ಪ್ರಶ್ನೆಯನ್ನು ಮಕ್ಕಳಿಗೆ ಕೇಳಿದೆ – “ನಿಮ್ಮ ಬಳಿ ಎಷ್ಟು ಜತೆ ಇವೆ?” ಕೂಡಲೇ ಎಲ್ಲ ಮಕ್ಕಳೂ ಗಟ್ಟಿಯಾಗಿ ಹೇಳಿದರು, “ಅಂಕಲ್, ನಾವು ಕೌಂಟ್ ಮಾಡಿಯೇ ಇಲ್ಲ.” ಎಲ್ಲರೂ ನಕ್ಕರು. ಹಾಗೆಯೇ ಕೇಳುತ್ತಾ ಹೋದೆ, ಹಿರಿಯರಿಗೆ – ನಿಮ್ಮ ಮನೆಯಲ್ಲಿ ಆ ದಿನಗಳಲ್ಲಿ ವಾಶಿಂಗ್ ಮಶೀನ್, ಫ್ರಿಜ್, ಮಿಕ್ಸರ್-ಗ್ರೈಂಡರ್ ಇದ್ದವೇ? ಸ್ಕೂಟರ್, ಬೈಕ್, ಕಾರ್ ಇದ್ದವೇ? – ಎಂದು. ಇರಲಿಲ್ಲವೆಂಬುದೇ ಅವರ ಸಾಮಾನ್ಯ ಉತ್ತರವಾಗಿತ್ತು. ಮಕ್ಕಳನ್ನು ಕೇಳಿದೆ: “ನೀವು ರುಬ್ಬುವ ಗುಂಡು, ಒನಕೆ, ಮಣ್ಣಿನ ಒಲೆ ನೋಡಿದ್ದೀರಾ?” ಒಬ್ಬಿಬ್ಬರು ಕೇಳಿದರು, “ಅಂಕಲ್, ಹಾಗಂದ್ರೆ ಏನು?” ಪುನಃ ದೊಡ್ಡವರು ನಕ್ಕರು.
ಈ ಸಂಭಾಷಣೆಯ ಉಪಲಬ್ಧಿ ಇಷ್ಟೆ: ಕಾಲ ಉರುಳಿದಂತೆ ನಮ್ಮ ಕೊಳ್ಳುವ ಸಾಮಥ್ರ್ಯ ಹೆಚ್ಚಾಗಿದೆ. ಹೀಗಾಗಿ ಮನೆಯಲ್ಲಿ ಸಮೃದ್ಧಿ ಕಂಡುಬರುತ್ತಿದೆ.
ಮತ್ತೆ ಸಂಭಾಷಣೆಯನ್ನು ಮುಂದುವರಿಸುತ್ತ ಮೊದಲನೆಯದಾಗಿ ನಾನು ಹೇಳಿದೆ: ಮನೆ ಎಂದರೆ ಸೌಕರ್ಯಗಳ ಸಮೃದ್ಧಿ ಅಷ್ಟೆ ಅಲ್ಲ. ಪ್ರತಿ ಮನೆಗೂ ಒಂದು ಸಾಧಾರಣ ದಿನಚರಿ ಎಂದು ಇರುತ್ತದೆ. ಉದಾಹರಣೆಗೆ: ಸೂರ್ಯೋದಯಕ್ಕೆ ಮೊದಲು ಏಳುವುದು, ಎದ್ದನಂತರ ಮನೆಯ ಮುಂಬಾಗಿಲ ಬಳಿ ಸ್ವಚ್ಛ ಮಾಡುವುದು, ರಂಗೋಲಿ ಇಡುವುದು; ಬೆಳಗ್ಗೆ ಸ್ನಾನ, ಪೂಜೆ ಇತ್ಯಾದಿ.
ಇನ್ನು ಎರಡನೆಯದಾಗಿ: ದಿನಚರಿಯ ಜೊತೆಗೆ ಮನೆಗೆ ಅದರದೇ ಆದ ರೀತಿ-ನೀತಿ ಎಂದು ಇರುತ್ತದೆ: ಮನೆಮಂದಿಯೆಲ್ಲ ಒಟ್ಟಿಗೆ ಕುಳಿತು ಊಟ ತಿಂಡಿ ಮಾಡುವುದು, ಅತಿಥಿಗಳ ಸತ್ಕಾರ, ಹಿರಿಯರಿಗೆ ಗೌರವ ತೋರುವುದು, ಕಿರಿಯರ ಬಗೆಗೆ ಕಾಳಜಿ ವಹಿಸುವುದು, ಸಂಬಂಧಸೂಚಕ ಶಬ್ದಗಳಿಂದ ಪರಸ್ಪರರನ್ನು ಸಂಬೋಧಿಸುವುದು, ನೆÀರೆಯವರ ಕಷ್ಟ-ಸುಖದಲ್ಲಿ ಬೆರೆಯುವುದು ಇತ್ಯಾದಿ. ಈ ಬಗೆಗೆ ನಾನು ಅವರಿಗೆ ಕೇಳಿದ ಪ್ರಶ್ನೆ: “ಇಂಥ ರೀತಿ-ನೀತಿಗಳಲ್ಲಿ ಎಷ್ಟನ್ನು ಈಗಲೂ ಉಳಿಸಿಕೊಳ್ಳಲು ಸಾಧ್ಯವಾಗಿದೆ?” ಒಬ್ಬಿಬ್ಬರು ಧೈರ್ಯಮಾಡಿ ಉತ್ತರಿಸಿದರು: “ಇಂದಿನ ವೇಗದ, ಒತ್ತಡದ ದಿನಗಳಲ್ಲಿ ಅಷ್ಟೋ ಇಷ್ಟೋ ಉಳಿದುಕೊಂಡಿವೆ. ಈಗೀಗ ಧಾವಂತ ಹಾಗೂ ಸಮಯದ ಅಭಾವದಿಂದ ಅವೂ ಬಿಟ್ಟುಹೋಗುತ್ತಿವೆ.”
ಮೂರನೆಯದಾಗಿ: ನಮ್ಮ ಮನೆಗಳಲ್ಲಿ ಲಾಗಾಯ್ತ್ತಿನಿಂದ ಪೂರ್ವಜರು ನಮಗಾಗಿ ಹಾಕಿಕೊಟ್ಟು ಹೋಗಿರುವ ಒಂದು ಪರಂಪರೆ ಇದೆ. ಅನೇಕ ಹಬ್ಬಗಳು, ವ್ರತಗಳು; ಗೃಹಪ್ರವೇಶ, ಮದುವೆ – ಇತ್ಯಾದಿ ಮಂಗಲಕಾರ್ಯಗಳು.
ಇಲ್ಲಿ ನಾನು ಕೇಳಿದ ಪ್ರಶ್ನೆ: “ಈ ಪರಂಪರೆ ಎಂಬುದು ಕಾಲಬಾಹಿರವಾಗಿದೆಯೆ? ಇದರ ಆವಶ್ಯಕತೆ ಇಂದಿಗೂ ಇದೆಯೆ?” ಕೆಲವರೆಂದರು – “ಕಾಲ ಬದಲಾಗುತ್ತಾ ಇದೆ. ಹಾಗಾಗಿ ಆಚರಿಸುವ ಪದ್ಧತಿಯೂ ಬದಲಾಗುತ್ತಾ ಇದೆ. ಕೆಲವು ಬಿಟ್ಟುಹೋಗುತ್ತಾ ಇವೆ ಎಂಬುದೂ ನಿಜವೇ.”
ಇನ್ನೊಂದು ಗಮನಾರ್ಹ ಸತ್ಯಸಂಗತಿ ಎಂದರೆ – ದಿನಚರಿ, ರೀತಿ-ನೀತಿ ಹಾಗೂ ಪರಂಪರೆಗಳು ಮನೆಯ ಸಂಸ್ಕøತಿಗೆ ಹುಟ್ಟು ನೀಡಿವೆ. ಸಮೃದ್ಧಿ ಹಾಗೂ ಸಂಸ್ಕøತಿಗಳಲ್ಲಿ ತಾಳಮೇಳ ಇದ್ದಾಗ ಮಾತ್ರ ಮನೆಯಲ್ಲಿ ಶಾಂತಿ ಸಮಾಧಾನಗಳು, ಸಂತೃಪ್ತಿ ನೆಮ್ಮದಿಗಳು ನೆಲಸುತ್ತವೆ; ಮತ್ತು ಅಂಥ ಮನೆಗಳೇ ಆದರ್ಶ ಎನಿಸುತ್ತವೆ. ಮನಸ್ಸಿಗೆ ನೆಮ್ಮದಿ ನೀಡುವ ನೆಲೆಯೇ ಮನೆ.
ಕಳೆದ 57 ವರ್ಷಗಳಲ್ಲಿ ನನ್ನ ಪ್ರವಾಸಕಾಲದಲ್ಲಿ ನನಗೆ ಸಹಸ್ರಾರು ಮನೆಗಳನ್ನು ಒಳಗಿನಿಂದ ಹಾಗೂ ಹೊರಗಿನಿಂದ ನೋಡುವ ವಿಪುಲ ಅವಕಾಶಗಳು ಸಿಕ್ಕಿವೆ. ‘ಸಮೃದ್ಧಿ’ ಹೆಸರಿನ ಹಲವು ಮನೆಗಳನ್ನೂ, ‘ಸಂಸ್ಕøತಿ’ ಹೆಸರಿನ ಹಲವು ಮನೆಗಳನ್ನೂ ನೋಡಿದ್ದೇನೆ. ಒಮ್ಮೆ ಒಂದು ದೊಡ್ಡ ಮನೆಯ ಗೇಟಿನ ಒಂದು ಬದಿಯಲ್ಲಿ ‘ಸಮೃದ್ಧಿ’ ಎಂದೂ ಇನ್ನೊಂದು ಬದಿಯಲ್ಲಿ ‘ಸಂಸ್ಕøತಿ’ ಎಂದೂ ಬರೆದಿದ್ದುದನ್ನು ನೋಡಿದೆ. ಆ ಮನೆಯಲ್ಲಿ ಅವೆರಡೂ ನೆಲಸಿರುವುದನ್ನು ಕಂಡು ನನಗೆ ಆನಂದವಾಯಿತು.
ಸಮೃದ್ಧಿಯದೇ ಪ್ರಭಾವ ಇರುತ್ತಾ, ಸಂಸ್ಕøತಿಯ ಅಭಾವ ಇರುವ ಮನೆಗಳಲ್ಲಿ ವಿಚಿತ್ರ ಸ್ವಭಾವದವರನ್ನು ನೋಡಬಹುದು. ಸಮೃದ್ಧಿಯ ಅಭಾವ ಇದ್ದ ಒಬ್ಬ ಬಡ ಕಾರ್ಯಕರ್ತನ ಮನೆಗೆ ಒಮ್ಮೆ ಹೋಗಿದ್ದೆ. ಹಬ್ಬದ ಅಡುಗೆ ಮಾಡಿದ್ದರು. ನಾನು ಕೇಳಿದೆ, “ಏನಪ್ಪಾ, ಇಂದು ಯಾವುದಾದರೂ ಹಬ್ಬವಿದೆಯೆ?” ಅದಕ್ಕೆ ಅವನು ವಿನಮ್ರವಾಗಿ ಉತ್ತರಿಸಿದ: “ನಮ್ಮ ಮನೆಗೆ ಅತಿಥಿಗಳು ಬಂದರೆ ಅದಕ್ಕಿಂತ ದೊಡ್ಡ ಹಬ್ಬ ಯಾವುದೂ ಇಲ್ಲ.” ಅರ್ಥಾತ್ ಅಲ್ಲಿ ಸಂಸ್ಕøತಿಯ ಶ್ರೀಮಂತಿಕೆ ಇತ್ತು; ಆದರೆ ಸಮೃದ್ಧಿಯ ಅಭಾವವೂ ಇತ್ತು. ಇದನ್ನು ನೋಡಿ ಅಪಾರ ಮರುಕವಾಯಿತು.
ಸುದಾಮನ ಮನೆಯಲ್ಲಿ ಸಮೃದ್ಧಿಯು ಶೂನ್ಯವಾಗಿತ್ತು, ಆದರೆ ಸಂಸ್ಕøತಿ ಅಪಾರವಾಗಿತ್ತು. ಅವನ ಮಿತ್ರ ಶ್ರೀಕೃಷ್ಣನ ಅರಮನೆಯಲ್ಲಿ ಸಮೃದ್ಧಿಯ ಜೊತೆಜೊತೆಗೆ ಸಂಸ್ಕøತಿಯೂ ಇತ್ತು. ಹೀಗಾಗಿ ಸುದಾಮ-ಶ್ರೀಕೃಷ್ಣರ ಭೇಟಿಯ ನಂತರ ಸುದಾಮನ ಮನೆಯಲ್ಲಿ ಸೌಕರ್ಯ ಉಂಟಾಯಿತು.
ಸಮೃದ್ಧಿ-ಸಂಸ್ಕøತಿಗಳಲ್ಲಿ ತಾಳಮೇಳ ಇದ್ದಾಗ ಮನೆಯು ತೀರ್ಥಕ್ಷೇತ್ರದಂತೆ ಶಾಂತಿಯ ಧಾಮವಾಗುತ್ತದೆ.
ಮನೆಯೇ ಸಂಸ್ಕಾರದ ಮೊದಲ ಕೇಂದ್ರ
ಆಗತಾನೇ ಹುಟ್ಟಿದ ಮಗು ಅಳುತ್ತದೆ. ಆಗ ಮನೆಯವರು ಸಂತಸದಿಂದ ನಗುತ್ತಾರೆ. ಮಗು ಬೆಳೆದು ದೊಡ್ಡ ವ್ಯಕ್ತಿಯಾಗಿ, ತನ್ನ ಜೀವನಯಾತ್ರೆ ಮುಗಿಸುವಾಗ ಆತ ಅಳಬಾರದು; ಉಳಿದವರು ನಗಬಾರದು. ಅವನು ಸಮಾಧಾನದಿಂದ ಸಾಯಬೇಕು. ಅಳುವವರು ಸುತ್ತಲಿನವರು. ಅಷ್ಟೇ ಅಲ್ಲ ಊರಿಗೆ ಊರೇ ಅಳಬೇಕು. ಇಂಥ ಜೀವನವನ್ನೇ ನಮ್ಮ ಹಿರಿಯರು ಅಪೇಕ್ಷಿಸಿದುದು.
“ಮಗು ಕಂಡದ್ದೆಲ್ಲವನ್ನೂ ಅಪೇಕ್ಷಿಸುವುದು ಹಾಗೂ ಹಟಹಿಡಿಯುವುದು. ಆದರೆ ಬೆಳೆದು ದೊಡ್ಡವನಾಗುತ್ತಿದ್ದಂತೆ ಸ್ವಂತಕ್ಕೆ ಎಷ್ಟು ಅಗತ್ಯವೋ ಅಷ್ಟನ್ನು ಮಾತ್ರ ತಾನು ಬಳಸಿಕೊಂಡು ಹೆಚ್ಚಿನದನ್ನು ಸಮಾಜಕ್ಕೆ ನೀಡಬೇಕು” ಎಂದಿದ್ದಾರೆ ಅನೇಕ ಪ್ರಾತಃಸ್ಮರಣೀಯರು. ಜೀವನದ ಸಾರ್ಥಕತೆ ಎಂದರೆ ಅದೇ. ಈ ಸಂದರ್ಭದಲ್ಲಿ ಅತ್ಯಂತ ಜನಪ್ರಿಯವಾಗಿದ್ದ ಒಂದು ಸಿನೆಮಾ ‘ಭೂತಯ್ಯನ ಮಗ ಅಯ್ಯು’ ನೆನಪಾಗುತ್ತದೆ.
ಸುತ್ತಲಿನವರನ್ನು ಸುಲಿದು ಶ್ರೀಮಂತನಾದವನು ಭೂತಯ್ಯ. ಅವನು ಸತ್ತಾಗ ಅವನ ಹೆಣಹೊರಲು ನಾಲ್ಕು ಜನರು ಕೂಡ ಮುಂದೆ ಬರಲಿಲ್ಲ. ಆದರೆ ಬದುಕಿನ ಉದ್ದಕ್ಕೂ ತನ್ನಲ್ಲಿ ಇದ್ದದ್ದನ್ನು ಇತರರಿಗೆ ನೀಡಿದ ದೇವಯ್ಯನು ಸತ್ತಾಗ ಇಡೀ ಊರಿಗೆ ಊರೇ ಕಣ್ಣೀರು ಸುರಿಸಿತು.
ದೇವಯ್ಯನದು ಸಾರ್ಥಕ ಜೀವನ, ಭೂತಯ್ಯನದು ನಿರರ್ಥಕವಾದದ್ದು. ಯಾರಿಗೂ ಭೂತಯ್ಯನಂಥ ಜೀವನ ಬೇಡ. ಎಲ್ಲ ಮನೆಗಳೂ ಹಣವಂತರನ್ನು ಸೃಷ್ಟಿ ಮಾಡಲಾರವು. ಆದರೆ ಪ್ರತಿ ಮನೆಯೂ ಗುಣವಂತರನ್ನು ಊರಿಗೆ ಕೊಡಬಲ್ಲದು. ಧೃತರಾಷ್ಟ್ರನ ಮಕ್ಕಳು ಅರಮನೆಯಲ್ಲಿ ಬೆಳೆದರೂ ಗುಣವಂತರಾಗಲಿಲ್ಲ; ಕಾರಣ ಸಂಸ್ಕಾರದ ಅಭಾವ. ಪಾಂಡವರು ವನವಾಸಿಗಳಾಗಿದ್ದರು, ಒಂದಷ್ಟು ಸಮಯ ಅಜ್ಞಾತವಾಸಿಗಳೂ ಆಗಿದ್ದರು. ಆದರೆ ಕುಂತಿ ಅವರಿಗೆ ಸಂಸ್ಕಾರ ನೀಡಿ ಗುಣವಂತರನ್ನಾಗಿ ಬೆಳೆಸಿದಳು – ಅಲ್ಲವೇ?
ಮನೆಯೇ ಮೊದಲ ಪಾಠಶಾಲೆ; ಜನನಿ ತಾನೆ ಮೊದಲ ಗುರುವು. ಜನನಿಯಿಂದ ಪಾಠ ಕಲಿತ ಮಕ್ಕಳೇ ಧನ್ಯರು.
ದಿನಚರಿ, ರೀತಿ-ನೀತಿ ಹಾಗೂ ಪರಂಪರೆಯ ಪಾಲನೆ ಆದಲ್ಲಿ ಮನೆಯು ಸಂಸ್ಕಾರದ ಕೇಂದ್ರವಾಗಬಲ್ಲದು.
ದಿನಚರಿ
ಒಂದು ಸುಭಾಷಿತ ಹೀಗಿದೆ:
ಆಹಾರ-ನಿದ್ರಾ-ಭಯ-ಮೈಥುನಂ ಚ
ಸಾಮಾನ್ಯಮೇತತ್ ಪಶುಭಿರ್ನರಾಣಾಂ |
ಧರ್ಮೋ ಹಿ ತೇಷಾಂ ಅಧಿಕೋ ವಿಶೇಷಃ
ಧರ್ಮೇಣ ಹೀನಾಃ ಪಶುಭಿಃ ಸಮಾನಾಃ ||
ಆಹಾರ, ನಿದ್ರೆ, ಭಯ ಹಾಗೂ ಸಂತಾನಾಭಿವೃದ್ಧಿಗಳು ಪ್ರಾಣಿ ಹಾಗೂ ಮನುಷ್ಯನಲ್ಲಿ ಸಮಾನ ಸಂಗತಿಗಳು. ಪ್ರಾಣಿಗಿಂತ ಮನುಷ್ಯನು ಶ್ರೇಷ್ಠನಾಗುವುದು ‘ಧರ್ಮ’ದಿಂದ.
ಧರ್ಮಪಾಲನೆಯ ಒಂದು ಸಾಂದರ್ಭಿಕ ಅಂಶ ಎಂದರೆ ದಿನಚರಿ. ನಿತ್ಯವೂ ಯಾವಾಗ ಏನು ಮಾಡಲೇಬೇಕು, ಯಾವಾಗ ಏನನ್ನು ಮಾಡಲೇಬಾರದು; ಮಾಡಲೇಬೇಕಾದುದನ್ನು ಶಕ್ತಿಮೀರಿ ಮಾಡಬೇಕು, ಮಾಡಲೇಬಾರದ್ದನ್ನು ಮಾಡಲೇಬಾರದು – ಎಂಬುದು ಗೃಹಸ್ಥಧರ್ಮದ ಸಾರ. ಈ ದೃಷ್ಟಿಯಿಂದ ಮನೆಯ ‘ದಿನಚರಿ’ಯನ್ನು ಸ್ವಲ್ಪ ಮೆಲುಕುಹಾಕೋಣ. ಇದರಲ್ಲಿ ಹೊಸ ಸಲಹೆ ಸಂಗತಿಗಳಿಲ್ಲ. ಇದು ನಮ್ಮ ಪೂರ್ವಜರ ವಾರಸಿಕೆಯಷ್ಟೆ. ಅದಕ್ಕಾಗಿ ‘ಮೆಲುಕು’ ಎಂಬ ಶಬ್ದವನ್ನು ಬಳಸಿದ್ದೇನೆ.
1. ಸೂರ್ಯೋದಯಕ್ಕೆ ಮೊದಲೇ ಏಳುವುದರಿಂದ ಮನೆಯ ದಿನಚರಿ ಪ್ರಾರಂಭವಾಗುತ್ತದೆ. ಗಿಡಮರಗಳೂ ಪಶುಪಕ್ಷಿಗಳೂ ಮುಂಜಾನೆಯೆ ಎದ್ದುಬಿಡುತ್ತವೆ. ಭಗವಂತನ ಸೃಷ್ಟಿಯಲ್ಲಿ ಮನುಷ್ಯನು ಶ್ರೇಷ್ಠ ಎನ್ನುತ್ತೇವೆ. ಇಂತಿರುವಾಗ ಮನುಷ್ಯನೇ ಉಳಿದೆಲ್ಲವುಗಿಂತ ತಡವಾಗಿ ಏಳುವ ಪ್ರವೃತ್ತಿ ಎಷ್ಟರಮಟ್ಟಿಗೆ ಉಚಿತವಾದೀತು? ಬೇಗ ಏಳಬೇಕಾದರೆ ಸುಲಭೋಪಾಯ ಒಂದಿದೆ; ಹಿಂದಿನ ದಿನ ರಾತ್ರಿ ಬೇಗ ಮಲಗಬೇಕು!
2. ಬೆಳಗ್ಗೆ ಬಲಮಗ್ಗುಲಿನಿಂದ ನಿಧಾನವಾಗಿ ಎದ್ದು ಹಾಸಿಗೆಯಲ್ಲಿ ಕುಳಿತು ಎರಡೂ ಅಂಗೈಗಳನ್ನು ನೋಡುತ್ತಾ –
ಕರಾಗ್ರೇ ವಸತೇ ಲಕ್ಷ್ಮೀಃ ಕರಮಧ್ಯೇ ಸರಸ್ವತೀ |
ಕರಮೂಲೇ ಸ್ಥಿತೇ ಗೌರೀ ಪ್ರಭಾತೇ ಕರದರ್ಶನಂ ||
ಸಮುದ್ರವಸನೇ ದೇವಿ ಪರ್ವತಸ್ತನಮಂಡಲೇ |
ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ ||
ಈ ಶ್ಲೋಕಗಳನ್ನು ಹೇಳಬೇಕು. ಏಕೆಂದರೆ ಕೈಗಳಿರುವುದೇ ಉತ್ತಮ ಕೆಲಸ ಮಾಡಲು. ಈ ಭೂಮಿ ಮಾತೃಭೂಮಿಯೇ ಹೊರತು ಭೋಗಭೂಮಿಯಲ್ಲ. ಆದ್ದರಿಂದ ಭೂಮಿಯನ್ನು ವಂದಿಸಬೇಕು ಎಂಬುದು ಈ ಶ್ಲೋಕಗಳÀ ಆಶಯ.
3. ಹಾಸಿಗೆ ಬಿಟ್ಟು ಎದ್ದ ನಂತರ ಹೊದಿಕೆ ಇತ್ಯಾದಿಗಳನ್ನು ಅಚ್ಚುಕಟ್ಟಾಗಿ ಮಡಿಚಿಡಬೇಕು. ಅನಂತರ ಸ್ವಲ್ಪ ಶುದ್ಧನೀರನ್ನು ಕುಡಿದು ಪ್ರಾತರ್ವಿಧಿ ü(ಎಂದರೆ ಶೌಚ ಮುಖಮಾರ್ಜನ ಇತ್ಯಾದಿ) ಮುಗಿಸಬೇಕು.
4. ನಮ್ಮ ಹಿರಿಯರು ‘ಶರೀರಮಾದ್ಯಂ ಖಲು ಧರ್ಮಸಾಧನಂ’ ಎಂದಿದ್ದಾರೆ. ಮಾಡಲೇಬೇಕಾದ ಎಲ್ಲ ಒಳ್ಳೆಯ ಕೆಲಸಗಳಿಗೆ ಉತ್ತಮ ಸಾಧನವು ನಮ್ಮ ಶರೀರವೇ ಆಗಿದೆ. ಅದನ್ನು ಆರೋಗ್ಯವಾಗಿ ಇಡಲು ಉದಯಕಾಲದ ಉಪಯೋಗ ಮಾಡಬಹುದು.
ಹೆಚ್ಚಿನ ಮಾಲಿನ್ಯ ಇಲ್ಲದಿರುವ ಆ ಹೊತ್ತಿನಲ್ಲಿ, ಭಗವಂತನು ಉಚಿತವಾಗಿ ಕೊಟ್ಟಿರುವ ಶುದ್ಧ ಗಾಳಿಯನ್ನು ಧಾರಾಳವಾಗಿ ಸೇವಿಸಲು ಬಯಲಿನಲ್ಲಿ ತಿರುಗಾಡಿ ಬರಬಹುದು. ಸರಳ ಪದ್ಮಾಸನದಲ್ಲಿ ಕುಳಿತು 5 ಬಾರಿ ಓಂಕಾರ ಹೇಳಿ, ಅನಂತರ 10 ನಿಮಿಷ ಪ್ರಾಣಾಯಾಮ, ಒಂದಷ್ಟು ಸರಳ ಆಸನಗಳನ್ನು ಮಾಡಬಹುದು.
ಬೆಂಗಳೂರಿನಲ್ಲಿ ರಾ.ಸ್ವ. ಸಂಘದ ಪ್ರಾಂತಕಾರ್ಯವಾಹರಾಗಿದ್ದ ದಿ|| ಅರಕಲಿ ನಾರಾಯಣ ಅವರು ಕ್ಯಾನ್ಸರ್ ಪೀಡಿತರಾಗಿದ್ದರು. ಅವರನ್ನು ಕಾಣಲು ನೂರಾರು ಜನರು ಮನೆಗೆ ಬರುತ್ತಿದ್ದರು. ಬಂದವರೆಲ್ಲರಿಗೂ ಏನಾದರೂ ಹಣ್ಣು ಪಾನೀಯದ ಸತ್ಕಾರ ಮಾಡುತ್ತಿದ್ದರು, ಅರಕಲಿಯವರ ಪತ್ನಿ. ಸುಮ್ಮನೆ ತೊಂದರೆ ತೆಗೆದುಕೊಳ್ಳಬೇಡಿ ಎಂದು ಹೇಳಿದಾಗ ಆಕೆ ಅಂದರು: “ನನ್ನ ತಾಯ್ತಂದೆ ನನಗೆ ಅನ್ನಪೂರ್ಣ ಅಂತ ಹೆಸರಿಟ್ಟಿದ್ದಾರೆ. ಹೆಸರಿಗೆ ಸ್ವಲ್ಪವಾದರೂ ನ್ಯಾಯ ಕೊಡಬೇಕಾದದ್ದು ನನ್ನ ಕರ್ತವ್ಯವಲ್ಲವೆ?”
ಬೆಳಗಿನ ಹೊತ್ತಿನ ಈ ಅಭ್ಯಾಸವು ಖಂಡಿತವಾಗಿ ನಮ್ಮನ್ನು ದಿನವಿಡೀ ಚುರುಕಾಗಿ ಇಡುತ್ತದೆ; ಲವಲವಿಕೆಯಿಂದ ಇರಲು ಅದು ಅನುಕೂಲವಾಗುತ್ತದೆ.
5. ಪ್ರತಿದಿನ ಬೆಳಗ್ಗೆ ಮನೆಯ ಮುಂಬಾಗಿಲಿನ ಮುಂದೆ ಕಸ ಗುಡಿಸಿ ಸ್ವಚ್ಛ ಮಾಡಿ ನೀರು ಚಿಮುಕಿಸಿ ರಂಗೋಲಿ ಇಡುವುದು; ಹಾಗೆಯೇ ಕಿಟಕಿಗಳನ್ನು ತೆರೆದು ಮನೆಯೊಳಗೆ ಶುದ್ಧ ಗಾಳಿಯಾಡಲು ಅನುವು ಮಾಡುವುದು ಮತ್ತು ಮನೆಯ ಒಳಗಡೆ ಕಸ ಗುಡಿಸಿ ಸ್ವಚ್ಛಗೊಳಿಸುವುದು ಮಾಡಬೇಕು. “ಎಲ್ಲಿ ಸ್ವಚ್ಛತೆ ಇದೆಯೋ ಅಲ್ಲಿ ದೇವನಿರುತ್ತಾನೆ. ಎಲ್ಲಿ ಕೊಳಕು ಇದೆಯೋ ಅಲ್ಲಿ ದೆವ್ವ ಇರುತ್ತದೆ” – ಎನ್ನುತ್ತದೆ ಹಿಂದಿ ಭಾಷೆಯ ಒಂದು ಸುಭಾಷಿತ.
ಸ್ವಚ್ಛ ಭಾರತಕ್ಕೆ ಸ್ವಚ್ಛ ಮನೆಯೇ ಮೂಲ.
6. ನಿತ್ಯ ಸ್ನಾನವನ್ನು ಬೆಳಗ್ಗೆಯೇ ಮಾಡುವುದು ಒಳ್ಳೆಯದು. ಸ್ನಾನದ ಅನಂತರ ದೇವರಮನೆಯಲ್ಲಿ ಒಂದೆರಡು ಗಳಿಗೆಯಾದರೂ ಇದ್ದು ಪೂಜಿಸುವುದರಿಂದ ಅಥವಾ ಕೊನೆಯ ಪಕ್ಷ ಧೂಪ ದೀಪ ಹೊತ್ತಿಸಿ ದೇವರ ನಾಮ ಹೇಳುವುದರಿಂದ ಮನಸ್ಸು ಸ್ವಚ್ಛವಾಗುತ್ತದೆ.
ದೇವರನ್ನು ನಂಬುವುದು ಮೂಲನಂಬಿಕೆಯೇ ಹೊರತು ಮೂಢನಂಬಿಕೆಯಲ್ಲ.
7. ಸದಾಕಾಲವೂ ಪ್ರಾಣವಾಯುವನ್ನು ಹೊರಸೂಸುವ ತುಲಸೀಗಿಡಕ್ಕೆ ನಮ್ಮ ಮನೆಯಲ್ಲಿ ಒಂದು ಸೂಕ್ತ ಸ್ಥಾನವೂ ಉಚಿತ ಗೌರವವೂ ಇರಬೇಕು.
8. ಬೆಳಗಿನ ಕೆಲಸಗಳನ್ನು ಮಾಡುವಾಗ ಮೆಲುದನಿಯಲ್ಲಿ ಸ್ತೋತ್ರಗಳನ್ನು ಹೇಳುವ ಅಭ್ಯಾಸ ಈಗಲೂ ಅಲ್ಲಲ್ಲಿ ಉಳಿದುಕೊಂಡಿದೆ. ಕೆಲವು ಮನೆಗಳಲ್ಲಿ ಸುಪ್ರಭಾತದ ಸ್ತೋತ್ರಗಳ ಧ್ವನಿಮುದ್ರಿಕೆ ಹಾಕುತ್ತಾರೆ. ಇದು ಒಳ್ಳೆಯ ಪದ್ಧತಿ.
9. ಊಟ-ಉಪಾಹಾರಗಳು ನಮ್ಮಮಟ್ಟಿಗೆ ಪ್ರಸಾದವೇ ಹೊರತು ‘ಮೇವು’ (ಈeeಜ) ಖಂಡಿತ ಅಲ್ಲ. ಅವುಗಳಿಗೆ ಒಂದು ನಿಶ್ಚಿತ ಸಮಯವನ್ನು ಮೀಸಲಿಡಲು ಪ್ರಯತ್ನಿಸಬೇಕು. ಬದಲಾಗುತ್ತಿರುವ ಕಾಲದಲ್ಲಿ ಇದೆಲ್ಲ ವ್ಯಾವಹಾರಿಕವಲ್ಲ ಎಂದು ಮಾತ್ರ ತಳ್ಳಿಹಾಕಬಾರದು.
10. ಸಂಜೆಯ ಹೊತ್ತು ಮನೆಯಲ್ಲಿ ಭಜನೆ ಮಾಡುವುದು ಉತ್ತಮ ಅಭ್ಯಾಸ. ಕನಿಷ್ಠ ದೇವರಿಗೆ ದೀಪ ಹೊತ್ತಿಸಿ ಒಂದೆರಡು ವಚನ, ಸ್ತೋತ್ರವನ್ನಾದರೂ ಹೇಳಬೇಕು.
11. ಅನಿವಾರ್ಯ ಕಾರಣಕ್ಕಲ್ಲದೆ ಸುಮ್ಮನೆ ತಡವಾಗಿ ಮಲಗುವ ಅಭ್ಯಾಸ ಬಿಡಬೇಕು. ಹಾಗೆಯೇ ರಾತ್ರಿಯ ಆಹಾರಸೇವನೆ ಸಹ ಬೇಗ ಆದರೆ ಆರೋಗ್ಯಕ್ಕೂ ಒಳ್ಳೆಯದು ಎನ್ನುವುದು ಹಿರಿಯರ ಅನುಭವದ ಮಾತು.
12. ಮಲಗುವ ಮೊದಲು ಶಾಂತವಾಗಿ ಕುಳಿತು ಒಂದೆರಡು ನಿಮಿಷ ಧ್ಯಾನÀ ಮಾಡುವುದು ಒಳ್ಳೆಯದು. ಈ ಹಿಂದೆಲ್ಲ ಮನೆಗಳಲ್ಲಿ ‘ರಾಮ ಸ್ಕಂದಂ ಹನೂಮಂತಂ ವೈನತೇಯಂ ವೃಕೋದರಂ, ಶಯನೇಷು ಸ್ಮರೇನ್ನಿತ್ಯಂ ದುಃಸ್ವಪ್ನಂ ತಸ್ಯ ನಶ್ಯತಿ’ ಎಂದು ಹೇಳುತ್ತಿದ್ದರಂತೆ. ರಾಮ, ಸುಬ್ರಹ್ಮಣ್ಯ, ಹನುಮಂತ ಮತ್ತು ಗರುಡರನ್ನು ನೆನೆಸಿಕೊಂಡರೆ ದುಃಸ್ವಪ್ನ ಬೀಳದು ಎಂಬುದು ನಮ್ಮ ನಂಬಿಕೆ.
ರೀತಿ-ನೀತಿ
‘ನಮ್ಮ ಮನೆ’ಯನ್ನು ವರ್ಣಿಸುವ ಒಂದು ಹಾಡಿನ ಪ್ರಾರಂಭ ಹೀಗಿದೆ:
ನಮ್ಮ ಮನೆ ಇದು ನಮ್ಮ ಮನೆ
ನಲಿವಿನ ಅರಿವಿನ ನಮ್ಮ ಮನೆ |
ರೀತಿ-ನೀತಿಗಳ ಭದ್ರಬುನಾದಿಯ ಮೇಲೆ ನಿಂತಿದೆ ನಮ್ಮ ಮನೆ. ರೀತಿ-ನೀತಿ ಎಂದರೆ ರೂಢಿ-ರಿವಾಜುಗಳು ಎಂದು. ಅನೇಕ ವರ್ಷಗಳಿಂದ ನಮ್ಮ ಮನೆಗಳ ಜೀವನಶೈಲಿಯಲ್ಲಿ ಇವು ಹಾಸುಹೊಕ್ಕಾಗಿವೆ. ಮನೆಮಂದಿಗೆಲ್ಲ ಸಂಸ್ಕಾರ ಕೊಡುವ ನಿಟ್ಟಿನಲ್ಲಿ ಈ ‘ರೀತಿ-ನೀತಿ’ಗಳ ಮಹತ್ತ್ವಪೂರ್ಣ ಭೂಮಿಕೆ ಇದೆ ಎಂಬುದು ಅನುಭವ. ಮನೆಗಳಲ್ಲಿ ಉಳಿಸಿಕೊಳ್ಳಲೇಬೇಕಾದ ಕೆಲವು ರೂಢಿ-ರಿವಾಜುಗಳನ್ನು ನೆನಪು ಮಾಡಿಕೊಳ್ಳೋಣ.
1 ಊಟವನ್ನು ಪ್ರಸಾದ ಎಂದು ಭಾವಿಸಬೇಕು. ದಿನದಲ್ಲಿ ಒಂದು ಹೊತ್ತಾದರೂ ಮನೆಯವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಬೇಕು. ಅಮ್ಮ ಬಡಿಸಬೇಕು. ಆಗ ಅದು ಮಾತೃಭೋಜನವಾಗುತ್ತದೆ. ಮಾತೃಭೋಜನದಲ್ಲಿ ಅಮ್ಮನ ಮಮತೆ ಮತ್ತು ವಾತ್ಸಲ್ಯ ಸೇರಿರುತ್ತದೆ. ‘ಭೋಜನ ಮಾತ್ರ’ದಲ್ಲಿ ಅವು ಇರುವುದಿಲ್ಲ.
2. ಊಟಮಾಡುವಾಗ ಟಿ.ವಿ., ಮೊಬೈಲ್ಗಳನ್ನು ಬಳಸಬಾರದು. ಶಾಂತವಾಗಿ ಸಂತೋಷದಿಂದ ಮಾತಾಡುತ್ತ ಊಟಮಾಡಬೇಕು. ಊಟಮಾಡುವಾಗ ಚೆಲ್ಲುವ ಅಭ್ಯಾಸ ಇರಬಾರದು. ಯಾವತ್ತೂ ಒಂದು ನಿಶ್ಚಿತ ಸ್ಥಳದಲ್ಲಿ ಕುಳಿತು ಊಟಮಾಡಬೇಕು. ಊಟಕ್ಕೆ ಮುಂಚೆ ‘ಓಂ ಸಹ ನಾವವತು, ಸಹ ನೌ ಭುನಕ್ತು, ಸಹ ವೀರ್ಯಂ ಕರವಾವಹೈ’ ಮಂತ್ರವನ್ನು ಹೇಳಬೇಕು. ಊಟವನ್ನು ಅದು ಬಿಸಿ ಇರುವಾಗಲೆ ಮಾಡಬೇಕು. ಆದರೆ ಊಟದ ನಡುವೆ ಬಿಸಿ ಬಿಸಿ ಮಾತುಗಳು ಇರಬಾರದು.
3. ‘ಅತಿಥಿದೇವೋ ಭವ’ ಇದು ನಮ್ಮ ಮನೆಯ ಸಂಸ್ಕøತಿ. ಹೀಗಾಗಿ ಬಂದವರನ್ನು ಖಾಲಿ ಹೊಟ್ಟೆಯಲ್ಲಿ ಕಳಿಸಬಾರದು. ಏನಾದರೂ ಉಪಚಾರ ಮಾಡಬೇಕು. ಊಟದ ಸಮಯದಲ್ಲಿ ಬಂದವರನ್ನು ಊಟಕ್ಕೆ ಎಬ್ಬಿಸಬೇಕು.
4. ಬಂಧು ಬಳಗದವರನ್ನೂ ಮಿತ್ರರನ್ನೂ ನಮ್ಮ ಮನೆಗೆ ಆಗಾಗ ಆಹ್ವಾನಿಸುತ್ತಿರಬೇಕು. ನಾವೂ ಅವರ ಮನೆಗಳಿಗೆ ಹೋಗುತ್ತಿರಬೇಕು.
5. ನೆರೆಕರೆಯವರ ಜತೆ ಸ್ನೇಹಸಂಬಂಧ ಇರಬೇಕು. ಪರಸ್ಪರ ಕಷ್ಟ-ಸುಖಗಳಲ್ಲಿ ಬೆರೆಯುತ್ತಿರಬೇಕು. ನಾವು ಪರಸ್ಪರ ಆಪದ್ಬಾಂಧವರಂತೆ ಇರಬೇಕು.
‘ನೆರೆಮನೆ ಇಲ್ಲದಿದ್ದರೆ ಅರಮನೆಯೂ ಸೆರೆಮನೆ’ ಎಂಬ ಗಾದೆ ಇದೆ.
6. ಹಿರಿಯರನ್ನು ಗೌರವಿಸಬೇಕು, ಕಿರಿಯರ ಬಗೆಗೆ ಕಾಳಜಿ ವಹಿಸಬೇಕು. ಮನೆಗೆ ಬಂದ ಹಿರಿಯರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆಯಬೇಕು. ಹಿರಿಯರು ಕಿರಿಯರನ್ನು ಆತ್ಮೀಯವಾಗಿ ಆಶೀರ್ವದಿಸಬೇಕು.
7. ನಮಸ್ಕಾರ, ಶರಣು ಶರಣಾರ್ಥಿ, ಮತ್ತೆ ಬನ್ನಿ, ಕ್ಷೇಮವೇ, ಕುಳಿತುಕೊಳ್ಳಿ, ಶುಭಂ, ಹೋಗಿಬರುತ್ತೇವೆ, ದೇವರು ನಿಮಗೆ ಒಳಿತನ್ನು ಮಾಡಲಿ, ಜಯ್ ಶ್ರೀರಾಮ, ಹರೇ ಶ್ರೀನಿವಾಸ ಇತ್ಯಾದಿ ಪದಪುಂಜಗಳ ಬಳಕೆ ಮನೆಯಲ್ಲಿ ಆಗುತ್ತಿರಬೇಕು.
8. ಮನೆಯಲ್ಲಿ ಪರಸ್ಪರ ಸಂಬೋಧಿಸುವಾಗ ಸಂಬಂಧಸೂಚಕ ಮಾತೃಭಾಷೆಯ ಶಬ್ದಗಳನ್ನು ಬಳಸುವುದರಿಂದ ಸಂಬಂಧಗಳು ಇನ್ನೂ ಗಟ್ಟಿಯಾಗುತ್ತವೆ. ಅಮ್ಮ-ಅಪ್ಪ, ಮಾವ, ಚಿಕ್ಕಪ್ಪ, ಕಾಕಾ, ಆಯೀ, ಅತ್ತಿಗೆ, ಅಕ್ಕ…. ಇತ್ಯಾದಿ ಶಬ್ದಗಳಲ್ಲಿ ಆತ್ಮೀಯಭಾವ ತುಂಬಿಕೊಂಡಿವೆ.
ಬೆಂಗಳೂರಿನ ಬಸವನಗುಡಿಯಲ್ಲಿ ಒಂದು ಶ್ರೀಮಂತ ಕುಟುಂಬ. ಮುತ್ತಜ್ಜ-ಮುತ್ತಜ್ಜಿ, ಅಜ್ಜ-ಅಜ್ಜಿ, ಮೊಮ್ಮಗ–ಮುಸ್ಸೊಸೆ ಹಾಗೂ ಪುಟ್ಟ ಮರಿಮಕ್ಕಳು. ಮೊಮ್ಮಗನು ಅಮೆರಿಕದಲ್ಲಿ ಒಳ್ಳೆಯ ನೌಕರಿಯಲ್ಲಿದ್ದ. ಅದನ್ನು ಬಿಟ್ಟು ಮನೆಗೆ ಹಿಂದಿರುಗಿ ಬಂದುಬಿಟ್ಟ. ಕಾರಣವೇನು ಎಂದು ಕೇಳಿದಾಗ ಅವನೆಂದ, “ಅಪ್ಪ-ಅಮ್ಮ, ಅಜ್ಜ–ಅಜ್ಜಿ ಜೊತೆಯಲ್ಲೇ ಇರಬೇಕು ಎನ್ನಿಸಿತು. ಅದಕ್ಕಾಗಿ ನಾನು ಹಿಂದಿರುಗಿ ಬಂದೆ.”
9. ಹಬ್ಬದ ದಿನಗಳಲ್ಲಿ ಮನೆಯಲ್ಲಿ ಪಾರಂಪರಿಕ ಉಡುಪುಗಳನ್ನು ಧರಿಸಬೇಕು.
10. ಮನೆಯ ಹೊರಗೆ ಚಪ್ಪಲಿಗಳನ್ನು ಸಾಲಾಗಿ ಜೋಡಿಸಿಟ್ಟರೆ ಮನೆಯ ಅಂದ ವೃದ್ಧಿಸುತ್ತದೆ. ಹಬ್ಬದ ದಿನಗಳಲ್ಲಿ ಮನೆಗೆ ಹಸಿರುತೋರಣ ಕಟ್ಟಬೇಕು. ಮನೆಯನ್ನು ದೇವಾಲಯದಂತೆ ಶೃಂಗಾರ ಮಾಡಬೇಕು.
11. ಮನೆಗೆಲಸವನ್ನು ಎಲ್ಲರೂ ಅಭಿಮಾನದಿಂದ ಹಂಚಿಕೊಂಡು ಮಾಡಬೇಕು. ನಾವೂ ಸಹ ಸದಾ ಸ್ವಚ್ಛವಾಗಿರಬೇಕು. ಹಿರಿಯರ ಒಂದು ಮಾತಿದೆ – “ದೇವರು ಬಡತನವನ್ನು ಕೊಡಬಹುದೇನೋ, ಆದರೆ ಕೊಳಕುತನವನ್ನು ಖಂಡಿತಾ ಕೊಟ್ಟಿಲ್ಲ.”
12. ಮಕ್ಕಳನ್ನು ಪ್ರೀತಿಸಬೇಕು; ಹಾಗೆಯೇ ತಪ್ಪು ಮಾಡಿದಾಗ ಶಿಕ್ಷಿಸಲೂ ಬೇಕು. ‘ಗಿಡವಾಗಿ ಬಗ್ಗದ್ದು ಮರವಾದ ನಂತರ ಬಗ್ಗುವುದಿಲ್ಲ’ ಎಂಬ ಗಾದೆ ಇದೆ. ಮಕ್ಕಳನ್ನು ಆಸ್ತಿಯಂತೆ ಬೆಳೆಸಬೇಕೇ ವಿನಾ ಅವರಿಗಾಗಿ ಆಸ್ತಿಯನ್ನು ಮಾಡುವುದಲ್ಲ.
ನಮ್ಮ ಕುಟುಂಬಗಳ ಭದ್ರತೆಯ ಬುನಾದಿಯೇ ಈ ರೀತಿ-ನೀತಿಗಳು. ಇವು ನಮ್ಮ ಪೂರ್ವಜರು ನಮಗಾಗಿ ಕೊಟ್ಟುಹೋಗಿರುವ ಅಮೂಲ್ಯ ಆಸ್ತಿ. ಇವನ್ನು ಕಡೆಗಣಿಸಿದರೆ ಕುಟುಂಬವು ಸಡಿಲವಾಗುವುದು. ಹಿರಿಯರ ಮೇಲ್ಪಂಕ್ತಿಯಲ್ಲಿ ಕಿರಿಯರೂ ರೀತಿ-ನೀತಿಗಳನ್ನು ಕಲಿಯುತ್ತಾರೆ ಎಂಬುದನ್ನು ಮರೆಯದಿರೋಣ.
ಪರಂಪರೆ
ಪ್ರಾಚೀನ ಕಾಲದಿಂದ ನಾವು ಪ್ರತಿ ಪೀಳಿಗೆಯಲ್ಲೂ ತಪ್ಪದೆ ಆಚರಿಸುತ್ತ ಬಂದಿರುವ ಕೆಲವು ಹಬ್ಬಗಳು, ವ್ರತಗಳು, ಉತ್ಸವಗಳು, ಜಾತ್ರೆಗಳು ಮತ್ತು ಕೆಲವು ವಿಧಿಗಳನ್ನು ನಾವು ನಮ್ಮ ಪರಂಪರೆ ಎನ್ನಬಹುದು. ವಿವಾಹ, ಗೃಹಪ್ರವೇಶ ಇತ್ಯಾದಿ ಶುಭಕಾರ್ಯಗಳೂ ನಮ್ಮ ಪರಂಪರೆಯೇ. ಇವೆಲ್ಲವನ್ನು ನಮ್ಮ ಶಕ್ತ್ಯನುಸಾರ ಶ್ರದ್ಧೆಯಿಂದ ಆಚರಿಸಬೇಕು; ಆದರೆ ಅಂಥ ಆಚರಣೆ ಅರ್ಥಪೂರ್ಣವಾಗಿರಬೇಕು; ತೋರಿಕೆಗಾಗಲಿ, ಆಡಂಬರಕ್ಕಾಗಲಿ ಅಲ್ಲ. ಇಲ್ಲಿ ಕೆಲವು ವಿಧಿಗಳನ್ನು ಮಾತ್ರ ಉಲ್ಲೇಖಿಸಲಾಗಿದೆ.
ಒಂದು ಊರಿನಲ್ಲಿ ಒಂದು ಮನೆಯ ಹೆಸರು ‘ಸಮಾಧಾನ’. ಇದೇನು, ಮನೆಯ ಹೆಸರು ಹೀಗೆ? – ಎಂದು ಕೇಳಿದಾಗ ಗೃಹಿಣಿ, ಗೃಹಸ್ಥ ಇಬ್ಬರೂ ಹೇಳಿದರು: “ನಮ್ಮ ಮನೆಯಲ್ಲಿ ನಾವೆಲ್ಲರೂ ತೃಪ್ತಿಯಿಂದ ಇದ್ದೇವೆ. ಕೊಳ್ಳುಬಾಕ ಜೀವನಶೈಲಿಗೆ ನಮ್ಮ ಮನೆಯಲ್ಲಿ ಅವಕಾಶವಿಲ್ಲ.” ಅವರ ಮನೆಯಲ್ಲಿ ಧಾರ್ಮಿಕತೆ ಇದೆ. ನಿತ್ಯ ಸೂರ್ಯೋದಯಕ್ಕೆ ಮುಂಚೆ ಏಳುತ್ತಾರೆ. ಸಂತೋಷದಿಂದ ಮನೆಯ ಕೆಲಸ ಮಾಡುತ್ತಾರೆ. ಪುಟ್ಟ ಮಕ್ಕಳೂ ಪೂಜೆ ಮಾಡುತ್ತಾರೆ, ಶ್ಲೋಕಾದಿ ಹೇಳುತ್ತಾರೆ. ಅತಿಥಿಸತ್ಕಾರಕ್ಕೆ ಎಂದೂ ಹಿನ್ನಡೆಯಿಲ್ಲ. ಜಾತೀಯತೆಯ ಲವಲೇಶವೂ ಇಲ್ಲ. ರಾಷ್ಟ್ರಕೇಂದ್ರಿತ ಬದುಕು ಇದೆ. ಇಂತಹ ಮನೆಗಳನ್ನು ಕರ್ನಾಟಕದಲ್ಲಿ ನೂರಾರು ಊರುಗಳಲ್ಲಿ ನೋಡಿರುವ ಸೌಭಾಗ್ಯ ನನ್ನದು.
1. ಜನ್ಮದಿನ, ಗೃಹಪ್ರವೇಶ, ವಿವಾಹ ಇತ್ಯಾದಿಗಳ ಮೂಲ ಉದ್ದೇಶವನ್ನು ಮರೆತುಹೋಗಬಾರದು. ಪಶ್ಚಿಮದ ದೇಶಗಳ ಅಂಧಾನುಕರಣೆ ಎಷ್ಟು ಸರಿ ಎಂಬ ಬಗೆಗೆ ಮತ್ತೆಮತ್ತೆ ಚಿಂತಿಸಬೇಕು.
2. ಜನ್ಮದಿನದಂದು ದೀಪ ಆರಿಸುವುದು, ಕೇಕ್ ಕತ್ತರಿಸುವುದು, ಉಡುಗೊರೆಗಳನ್ನು ಪಡೆಯುವುದು, ಅಂಧಾದುಂದಿ ಖರ್ಚುಮಾಡಿ ‘ಬರ್ಥ್ಡೇ ಪಾರ್ಟಿ’ ಮಾಡುವುದರಲ್ಲಿ ಸಂಸ್ಕಾರದ ಭಾಗ ಏನಿದೆ? ಬದಲಿಗೆ ಜನ್ಮದಿನದಂದು ಮಂಗಲಸ್ನಾನ ಮಾಡಿ ದೇವರಿಗೆ ದೀಪ ಹಚ್ಚಿ ನಮಸ್ಕರಿಸಬೇಕು; ಹಿರಿಯರಿಗೆ ವಂದಿಸಿ ಆಶೀರ್ವಾದ ಪಡೆಯಬೇಕು. ಆಯುಷ್ಮಂತನಾಗು, ವಿಜಯಿಯಾಗು, ಯಶಸ್ಸನ್ನು ಹೊಂದು – ಈ ರೀತಿಯ ಹಿರಿಯರ ಆಶೀರ್ವಾದಗಳಲ್ಲಿ ಶಕ್ತಿ ಇದೆ. ಉಡುಗೊರೆ ತೆಗೆದುಕೊಳ್ಳುವುದು ತಪ್ಪಲ್ಲ, ಆದರೆ ಅದಕ್ಕಿಂತ ಮಿಗಿಲಾದದ್ದು ದಾನ ಮಾಡುವುದು. ಹೋಟೆಲ್ಗೆ ಹೋಗುವ ಸಂಭ್ರಮದಲ್ಲಿ ದೇವಸ್ಥಾನವನ್ನು ಮರೆಯಬಾರದು.
3. ಗೃಹಪ್ರವೇಶ-ವಾಸ್ತುಶಾಂತಿಗಳು ‘House-warming Ceremony’ಗಿಂತ ಶ್ರೇಷ್ಠ. ವಾಸಿಸುವ ಮನೆಯಲ್ಲಿ ಅನಿಷ್ಟÀಶಕ್ತಿಗಳು ನುಸುಳಬಾರದು, ದೈವೀಶಕ್ತಿಯೇ ನೆಲಸಬೇಕು ಎನ್ನುವುದಕ್ಕಾಗಿ ಹೋಮ ಹವನಗಳನ್ನು ಮಾಡುವುದು. ಮನೆಗಳನ್ನು ದೇವಾಲಯಗಳಂತೆ ಪವಿತ್ರವಾಗಿ ಇಟ್ಟುಕೊಳ್ಳುವ ಸಲುವಾಗಿ ಗೃಹಪ್ರವೇಶದ ಧಾರ್ಮಿಕ ವಿಧಿಗಳು ಇವೆ.
3. ವಿವಾಹವೆಂಬುದು ಯುವಕ ಯುವತಿ ಒಟ್ಟಿಗೆ ವಾಸಿಸಲು ಹಿರಿಯರ, ಕಿರಿಯರ, ಬಂಧುಮಿತ್ರರ ಪರವಾನಿಗೆಯಷ್ಟೇ ಅಲ್ಲ, ಪರಸ್ಪರ ಒಪ್ಪಂದವೂ ಅಲ್ಲ. ಅದು ಒಂದು ವಿಶೇಷ ಜವಾಬ್ದಾರಿ; ಪರಸ್ಪರ ಬದ್ಧತೆ, ಶಾಶ್ವತ ಸಂಬಂಧಕ್ಕಾಗಿ ಒಂದು ಧಾರ್ಮಿಕ ಸಂಸ್ಕಾರ. ಗುರುಹಿರಿಯರ ಆಶೀರ್ವಾದಗಳಿಂದ ನವದಂಪತಿಗಳು ಒಂದು ಉತ್ತಮವಾದ ಕುಟುಂಬವನ್ನು ಸ್ಥಾಪಿಸುತ್ತಾರೆ. ‘ಧರ್ಮಪ್ರಜಾಭಿವೃದ್ಧ್ಯರ್ಥಂ’ ಎನ್ನುವ ಗುರಿಯನ್ನು ವಿವಾಹವು ಕೊಡುತ್ತದೆ. ಈ ವಿವಾಹಸಂಸ್ಕಾರ, ಉತ್ತಮ ಜವಾಬ್ದಾರಿ ನಿರ್ವಹಿಸುವ ಸಂಕಲ್ಪ ಮಾಡಲು ಮಂಗಲ ಮುಹೂರ್ತ ಬೇಕು ಮತ್ತು ಹಿರಿಯರ ಉಪಸ್ಥಿತಿ ಆಶೀರ್ವಾದ ಆವಶ್ಯಕ. ಆಡಂಬರ, ಮೋಜುಮಸ್ತಿಗಳ ಪ್ರದರ್ಶನವಾಗಬಾರದು. ಮದುವೆಗೆ ಮುಂಚೆಯೇ ರಿಸೆಪ್ಶನ್, ಮದುವೆಯಲ್ಲಿ ವಿಡಿಯೋ ಹಾಗೂ ಫೋಟೋಗ್ರಾಫರ್ಗಳದ್ದೇ ಕಾರುಬಾರು, ಮದುವೆ ಆಗುತ್ತಿದ್ದಂತೆಯೇ ಹನಿಮೂನ್ ಇವೆಲ್ಲವೂ ನಮ್ಮನ್ನು ದಾರಿತಪ್ಪಿಸುವ ಸಂಗತಿಗಳು.
“ಮದುವೆಯ ಈ ಬಂಧ ಅನುರಾಗದ ಅನುಬಂಧ, ಏಳೇಳು ಜನುಮಗಳ ತೀರದ ಸಂಬಂಧ” – ಎಂಬ ಚಿಂತನೆ ಈಗ ಎಲ್ಲಿ ಹೋಯಿತು; ನಮ್ಮ ಪರಂಪರೆಗೆ ನಾವು ವಿದಾಯ ಹೇಳುತ್ತಿದ್ದೇವೆಯೆ?
4. ಹಣಕಾಸಿನ ಬಗ್ಗೆ ನಮ್ಮ ಪರಂಪರೆ ಏನು ಹೇಳುತ್ತದೆ? ಹಣವು ಲಕ್ಷ್ಮಿಯ ಒಂದು ರೂಪ. ಹಾಗಾಗಿ ಧನಲಕ್ಷ್ಮಿ ಎಂಬ ಪರಿಕಲ್ಪನೆ ಇದೆ. ಮನುಷ್ಯನು ಲಕ್ಷ್ಮೀಪತಿ ಆಗಬೇಕೊ ಲಕ್ಷ್ಮೀದಾಸನಾಗಬೇಕೊ? ದುಂದುವೆಚ್ಚಕ್ಕಾಗಲಿ ಜಿಪುಣತನಕ್ಕಾಗಲಿ ಸಾಲ ಮಾಡುವುದಕ್ಕಾಗಲಿ ನಮ್ಮ ಪರಂಪರೆಯಲ್ಲಿ ಅವಕಾಶವಿಲ್ಲ. ‘ಸಾಲವನು ಕೊಂಬಾಗ ಹಾಲೋಗರವುಂಡಂತೆ’ ಎಂಬ ಸರ್ವಜ್ಞನ ವಚನವೇ ಇದೆ.
ಅನ್ಯಾಯವಾಗಿ ಹಣ ಗಳಿಸಲು ಸಾಲ ಕೊಡುವುದಲ್ಲ. ಸಾಲ ಎಂಬುದು ‘ನೆರವು’. ಸಾಲ ಮಾಡಿದರೆ ಋಣಮುಕ್ತನಾಗಬೇಕು. ‘ಶುಭ ಲಾಭ’ ಹಾಗೂ ಲಾಭದಲ್ಲಿ ಸಮಾಜಕ್ಕಾಗಿ ದಾನ ಮಾಡುವುದು ನಮ್ಮ ಪರಂಪರೆ. ಹಾಗೆಯೆ ಉಳಿತಾಯವೂ ನಮ್ಮ ಪರಂಪರೆ. ಉಳಿತಾಯವು ‘ಆಪದ್ಧನ’ ಎನ್ನುತ್ತದೆ ನಮ್ಮ ಪರಂಪರೆ.
‘ಉಳಿತಾಯದ ಮನೆಯು ಅಂದದ ಅರಮನೆ’ ಎಂಬ ಗಾದೆ ಇದೆ.
5. ಮನೆಯ ಮಂಗಲಕಾರ್ಯಗಳಲ್ಲಿ ಗುರುಗಳಿಗೆ, ಮಠಗಳಿಗೆ, ದೇವಾಲಯಗಳಿಗೆ ಶ್ರದ್ಧಾಭಕ್ತಿಯಿಂದ ನಿಧಿ ಸಮರ್ಪಣೆ ಮಾಡುವ ಪರಂಪರೆ ನಮ್ಮದು. ಇದನ್ನು ವಿಸ್ತರಿಸಿ ನಮ್ಮ ಸಮಾಜಕ್ಕಾಗಿ, ದೇಶಕ್ಕಾಗಿ ನಿಧಿ ಕೊಡುವ ಪರಂಪರೆಯನ್ನು ಪೆÇೀಷಿಸಬೇಕು. ಅದನ್ನು ‘ಮಂಗಲನಿಧಿ’ ಎನ್ನುತ್ತಾರೆ.
6. ಹಬ್ಬಗಳು, ವ್ರತಗಳು ನಮ್ಮ ಪರಂಪರೆಯ ಅವಿಭಾಜ್ಯ ಅಂಗಗಳು. ಜೀವನಕ್ಕೆ ಒಂದು ಉದಾತ್ತ ದೃಷ್ಟಿಯನ್ನು ಹಬ್ಬಗಳು ಕೊಡುತ್ತವೆ. ಸಮಷ್ಟಿಭಾವವನ್ನೂ ಅಖಿಲಭಾರತೀಯ ದೃಷ್ಟಿಯನ್ನೂ ಹಬ್ಬಗಳು ಕೊಡುತ್ತವೆ. ವ್ರತಗಳು ನಮ್ಮಲ್ಲಿ ಶಿಸ್ತು, ಸಂಯಮ, ನಿಯತ್ತು, ನಿರ್ಮೋಹ ಇತ್ಯಾದಿ ಸದ್ಗುಣಗಳನ್ನು ಬೆಳೆಸುತ್ತವೆ. ಗತಿಸಿಹೋದ ಹಿರಿಯರನ್ನು ವರ್ಷದಲ್ಲಿ ಒಮ್ಮೆ ಕೃತಜ್ಞತೆಯಿಂದ ನೆನಪಿಸಿಕೊಳ್ಳುವುದೂ ನಮ್ಮ ಪರಂಪರೆ.
ಉಡುಪಿಯಲ್ಲಿ ಒಬ್ಬ ಉದ್ಯಮಿಯ ಮಗನ ಉಪನಯನದಲ್ಲಿ ಒಂದು ವಿಶೇಷವಿತ್ತು. ಉಪನಯನ ಪದ್ಧತಿ ಇರುವ ಬ್ರಾಹ್ಮಣರಲ್ಲದ ವಿವಿಧ ಸಮುದಾಯಗಳ 21 ವಟುಗಳನ್ನು ಅವರು ಪ್ರೀತಿಯಿಂದ ಕರೆದು ತಮ್ಮ ಮಗನ ಜತೆಯಲ್ಲಿಯೆ ಸಾಮೂಹಿಕ ಉಪನಯನ ಮಾಡಿಸಿದರು. ಉಡುಪಿಯ ಹಿರಿಯ ಮಠಾಧೀಶ ಪೇಜಾವರ ಶ್ರೀಗಳು ಸ್ವತಃ ಉಪಸ್ಥಿತರಿದ್ದು ಎಲ್ಲ ವಟುಗಳನ್ನು ಆಶೀರ್ವದಿಸಿದರು. ಉಡುಪಿಯ ಎಲ್ಲ ಸಮುದಾಯಗಳಿಂದಲೂ ಸಾವಿರದಷ್ಟು ತಂದೆತಾಯಿಯರೂ ಗೌರವಪೂರ್ಣ ಆತಿಥ್ಯ ಸ್ವೀಕರಿಸಿದರು. ಯಕ್ಷಗಾನ, ಭಜನೆ, ಹಿರಿಯರಿಂದ ಸಾಂದರ್ಭಿಕವಾದ ಶುಭಾಶಂಸನೆ ಹಾಗೂ ಮಂಗಲವಾದ್ಯಗಳ ವಾದನ ಸಮಾರಂಭದ ಮೆರುಗನ್ನು ಹೆಚ್ಚಿಸಿದವು. ಕರ್ನಾಟಕದಲ್ಲಿ ಕೆಲವು ದೇವಸ್ಥಾನಗಳು, ಕೆಲವು ಮಠಾಧೀಶರು ಹಾಗೂ ಕೆಲವು ಸಂಸ್ಥೆಗÀಳು ಸಾಮೂಹಿಕ ವಿವಾಹಗಳನ್ನು ನಮ್ಮ ಪರಂಪರೆಗೆ ತಕ್ಕಂತೆ ಆಚರಿಸುತ್ತಾರೆ. ನವದಂಪತಿಗಳಿಗೆ ಪಾರಂಪರಿಕ ಜವಾಬ್ದಾರಿಯನ್ನು ತಿಳಿಸುತ್ತಾರೆ. ಅಲ್ಲಲ್ಲಿ ನಡೆಯುವ ನವದಂಪತಿ ಸಮಾವೇಶ, ಕುಟುಂಬಮಿಲನಗಳ ನಮ್ಮ ಪರಂಪರೆಯನ್ನು ನೆನಪಿಸುತ್ತಾರೆ.
ಮನೆಯವರೆಲ್ಲರಿಗೂ ತಿಳಿದಿರಬೇಕಾದ ಕೆಲವು ವಿಷಯಗಳು
1. ದೇವರಿದ್ದಾನೆ. ಅವನು ಎಲ್ಲೆಲ್ಲೂ ಇದ್ದಾನೆ. ಅವನಿಗೆ ಜಾತಿ ಇಲ್ಲ. ಭಾಷೆಯಿಲ್ಲ, ರೂಪವಿಲ್ಲ. ಅವನು ಅಗೋಚರನಾದರೂ ಅವನ ಅನುಭವ ಆಗಿರುವ ಸತ್ಪುರುಷರು, ನಾರಿಯರು ಇದ್ದಾರೆ.
‘ದೇವರು ಮೂಲನಂಬಿಕೆಯೇ ವಿನಾ ಮೂಢನಂಬಿಕೆಯಲ್ಲ’.
2. ಮನುಷ್ಯ ಪ್ರಾಣಿಯಲ್ಲ, ಅವನು ದೈವಾಂಶಸಂಭೂತ. ಸಂಸ್ಕಾರವನ್ನು ಪಡೆಯುವುದರಿಂದ ‘ಮಾನವ’ನು ‘ಮಾಧವ’ನಾಗಬಲ್ಲ.
3. ಪ್ರಕೃತಿಯು ಆವಶ್ಯಕತೆಗಳನ್ನು ಮಾತ್ರ ಪೂರೈಸುತ್ತದೆ. ದುರಾಶೆಯನ್ನಲ್ಲ. ಆದ್ದರಿಂದ ಪ್ರಕೃತಿಯ ಪೋಷಣೆ ಮಾಡಬೇಕು; ಶೋಷಣೆ ಅಲ್ಲ.
4. ನಮ್ಮ ಕುಟುಂಬವು ಮಾತೃಪ್ರಧಾನವಾದದ್ದು; ಪುರುಷಪ್ರಧಾನವಾದದ್ದಲ್ಲ.
5. ವರದಕ್ಷಿಣೆ ಎಂಬುದು ವಿಕೃತಿ.
6. ಆಮಂತ್ರಣಪತ್ರಿಕೆಗಳು ಪಾರಂಪರಿಕ ಶೈಲಿಯಲ್ಲಿ ಹಾಗೂ ಮಾತೃಭಾಷೆಯಲ್ಲಿರುವುದು ಆದರ್ಶ. ‘ಅಪವಾದ’ಕ್ಕಾಗಿ ಇಂಗ್ಲಿಷ್ ಬಳಕೆಯಾದರೆ ತಪ್ಪಲ್ಲ.
7. ನಮ್ಮ ಮನೆಯಲ್ಲಿ ಜಾತೀಯತೆ, ಅಸ್ಪøಶ್ಯತೆಗಳಿಗೆ ಸ್ಥಾನವಿರಬಾರದು. ಮನೆಯು ದೇಶಭಕ್ತಿಯ ಕೇಂದ್ರವಾಗಬೇಕು. ಸ್ವದೇಶೀ, ಸ್ವಭಾಷೆ, ಸ್ವಭೂಷಣಗಳ ತ್ರಿವಳಿ ಅನುಭವ ಮನೆಯಲ್ಲಿ ಆಗುತ್ತಿರಬೇಕು.
ನರಗುಂದದಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ. ಒಬ್ಬ ಶತಾಯುಷಿ ಹಿರಿಯರು. ಕುಟುಂಬದವರು ಅತ್ಯಂತ ಶ್ರದ್ಧೆಯಿಂದ ಶತಾಬ್ದ ಪ್ರಯುಕ್ತ ಶಾಂತಿ ಕಾರ್ಯಕ್ರಮವನ್ನು ಮಾಡಿದರು. ತನ್ನಿಮಿತ್ತ ನಮ್ಮೀ ದೇಶವನ್ನು ಕೃತಜ್ಞತೆಯಿಂದ ಸ್ಮರಿಸಿ ದೇಶಕ್ಕಾಗಿ ಒಂದು ಸೇವಾನಿಧಿ ಸಮರ್ಪಿಸಲು ‘ಮಂಗಲನಿಧಿ’ ಕಾರ್ಯಕ್ರಮವನ್ನು ಹಮ್ಮಿಕೊಂಡರು.
ಮನೆಯ ಮಟ್ಟಿಗಷ್ಟೆ ಆ ಕಾರ್ಯಕ್ರಮ ಸೀಮಿತ ಇರಲಿಲ್ಲ. ಊರಿನ ಕಾರ್ಯಕ್ರಮದಂತೆ ಇತ್ತು. ಸಾವಿರಾರು ಪುರಜನರು, ಹತ್ತಾರು ಮಠಾಧೀಶರು, ಹತ್ತಾರು ವಿದ್ವಜ್ಜನರ ವಿಶಾಲ ಸಮಾವೇಶ.
ಅಗ್ರಾಸನದಲ್ಲಿ ಆ ಹಿರಿಯಚೇತನವನ್ನು ಕುಳ್ಳಿರಿಸಿದರು. ಮಕ್ಕಳು, ಸೊಸೆಯಂದಿರು ಆದಿಯಾಗಿ ಆ ಕುಟುಂಬದ 34 ಮಂದಿ ಸದಸ್ಯರು ಒಟ್ಟಾಗಿ ‘ನಿಮ್ಮೊಲುಮೆ ನಮಗಿರಲಿ ತಂದೆ, ಕೈಹಿಡಿದು ನೀ ನಡೆಸು ಮುಂದೆ’ ಎಂಬ ಹಾಡನ್ನು ಹಾಡುತ್ತಿದ್ದರು. ಆ ಸಮಯದಲ್ಲೂ ಯಜಮಾನರ ಮಕ್ಕಳು ನೂರು ಹಣತೆಗಳನ್ನು ವಿಶಾಲ ತಟ್ಟೆಯಲ್ಲಿಟ್ಟು ಶತಾಯುಷಿ ಹಿರಿಯರಿಗೆ ಆರತಿ ಎತ್ತಿದರು.
ಒಬ್ಬಿಬ್ಬರು ಪೂಜ್ಯ ಮಠಾಧೀಶರು ಆ ಹಿರಿಯಚೇತನರ ಆದರ್ಶ ವ್ಯಕ್ತಿತ್ವವನ್ನು ಅನಾವರಣಮಾಡಿ ಆಶೀರ್ವದಿಸಿದರು. ಹಿರಿಯರ ಒಬ್ಬ ಸುಪುತ್ರ ತಂದೆಯವರಿಂದ ಇಡೀ ಮನೆಮಂದಿಗೆ ಸಿಗುತ್ತಿದ್ದ ಸಂಸ್ಕಾರವನ್ನು ಅಭಿಮಾನದಿಂದಲೂ ಗೌರವದಿಂದಲೂ ಸ್ಮರಿಸಿದರು. ‘ಮಂಗಲನಿಧಿ’ ಏನೆಂಬುದರ ಕುರಿತಾಗಿ ಹಿರಿಯ ಸ್ವಯಂಸೇವಕರೊಬ್ಬರು ಮಾತನಾಡುತ್ತ ಹೇಳಿದರು: ‘ಭಾರತದಲ್ಲಿ ನಾವು ಅಲ್ಲ, ಭಾರತಮಾತೆಯ ಅಂಗಾಂಗಗಳು ನಾವು. ಹೀಗಾಗಿ ಭಾರತಕ್ಕಾಗಿ ನಾವು ಬದುಕಬೇಕು ಎಂಬ ಸಂಕಲ್ಪದ ಸಂಕೇತವಾಗಿ ಈ ಮಂಗಲನಿಧಿ.’
ಕಾರ್ಯಕ್ರಮದ ನಂತರ ಎಲ್ಲರೂ ಆ ಹಿರಿಯರಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಎಲ್ಲರಿಗೂ ‘ದಾಸೋಹ’ದ ಆತ್ಮೀಯ ವ್ಯವಸ್ಥೆಯನ್ನು ಕುಟುಂಬದವರೇ ಮಾಡಿದ್ದರು.
ಉಪಸಂಹಾರ
ಭಾರತವು ಜಗತ್ತಿಗೆ ಹಲವಾರು ಶ್ರೇಷ್ಠ ಕೊಡುಗೆಗಳನ್ನು ನೀಡಿದೆ. ಈ ಪೈಕಿ ಭಾರತೀಯ ಕುಟುಂಬ ವ್ಯವಸ್ಥೆ ಅನುಪಮವಾದುದು. ಪ್ರತಿಯೊಬ್ಬ ವ್ಯಕ್ತಿಯನ್ನು ‘ನಾನು’ ಎಂಬ ವ್ಯಕ್ತಿವಾದದಿಂದ ‘ನಾವು’ ಎಂಬ ಸಮಷ್ಟಿಭಾವಕ್ಕೆ ಮೇಲೆತ್ತುವುದೇ ನಮ್ಮ ಕುಟುಂಬವ್ಯವಸ್ಥೆಯ ಹಿರಿಮೆ.
ವ್ಯಷ್ಟಿ, ಸಮಷ್ಟಿ, ಸೃಷ್ಟಿ ಹಾಗೂ ಪರಮೇಷ್ಠಿ ಎಂಬ ನಾಲ್ಕು ಮೆಟ್ಟಿಲುಗಳು ಮನುಷ್ಯನನ್ನು ದೇವರ ಕಡೆಗೆ ಒಯ್ಯುತ್ತವೆ. ಈ ಸಂಸ್ಕಾರದಲ್ಲಿ ಕುಟುಂಬದ ಪಾತ್ರವೇ ಅತಿ ದೊಡ್ಡದು. ಲಾಗಾಯ್ತಿನಿಂದ ಈ ಭೂಮಿಕೆ ನಿರ್ವಹಿಸುತ್ತ ಬಂದಿರುವ ನಮ್ಮ ಕುಟುಂಬಗಳಲ್ಲಿ ಸಮೃದ್ಧಿ ಹೆಚ್ಚಾದಂತೆ ಸಂಸ್ಕøತಿ ಕಡಮೆಯಾಗುತ್ತಿದೆಯೇ ಎಂಬ ಆತಂಕ ಉಂಟಾಗುತ್ತಿದೆ. ನಮ್ಮ ‘ಕುಟುಂಬ’ವು ಅಪ್ರಸ್ತುತವಾಗುತ್ತಿದೆ, ಕಾಲಬಾಹಿರವಾಗುತ್ತಿದೆ ಎನ್ನುವ ದುರವಸ್ಥೆಯೇನೂ ಬಂದಿಲ್ಲ. ದಿನಚರಿ, ರೀತಿ-ನೀತಿ, ಪರಂಪರೆಯನ್ನು ಉಳಿಸಿಕೊಂಡು ಬರುತ್ತಿರುವ ಕುಟುಂಬಗಳು ಸಾಕಷ್ಟು ಇವೆ. ಆದರೆ ಕುಟುಂಬ ವ್ಯವಸ್ಥೆಯಲ್ಲಿ ಅಲ್ಲಲ್ಲಿ ಬಿರುಕುಗಳು ಕಂಡುಬರುತ್ತಿವೆಯೇ ಎಂಬ ಆತಂಕ ಹಿರಿಯರನ್ನು ಕಾಡುತ್ತಿದೆ. ‘ಆಧುನಿಕತೆ’ಯ ಪ್ರಶ್ನೆಗಳಿಗೆ ಸಮರ್ಥವಾಗಿ ಉತ್ತರಿಸಿ ನಮ್ಮ ಕುಟುಂಬದ ಆಂತರಿಕ ಸತ್ತ್ವವನ್ನು ಉಳಿಸಿಕೊಂಡು ಮುಂದುವರಿಸಬೇಕಾದ ಸವಾಲನ್ನು ಸ್ವೀಕರಿಸೋಣ, ಮುನ್ನಡೆಯೋಣ. ಇದೇ ವರ್ತಮಾನದ ಪೀಳಿಗೆಯ ಜವಾಬ್ದಾರಿಯಾಗಿದೆ.
‘ಕುಟುಂಬೋ ರಕ್ಷತಿ ರಕ್ಷಿತಃ’ – ನಮ್ಮ ಕುಟುಂಬವನ್ನು ನಾವು ರಕ್ಷಿಸಿದರೆ ಕುಟುಂಬವು ನಮ್ಮನ್ನು ರಕ್ಷಿಸುತ್ತದೆ.