ಅಭಿವ್ಯಕ್ತಿ ಸ್ವಾತಂತ್ರ್ಯ, ಪ್ರಜಾಪ್ರಭುತ್ವ, ಮತಧರ್ಮಗಳ ಸ್ವಾತಂತ್ರ್ಯ, ಮುಂತಾದವು ಬಹಳ ಅದ್ಭುತವಾದ ಸಾಮಾಜಿಕ-ರಾಜಕೀಯ ಪರಿಕಲ್ಪನೆಗಳು. ‘ಅಭಿವ್ಯಕ್ತಿ ಸ್ವಾತಂತ್ರ್ಯ’ದ ಪ್ರಶ್ನೆ ಬಂದಾಗ ಇಂದಿರಾ ಗಾಂಧಿಯವರ ವಿಷಯವು ಬರಲೇಬೇಕಾಗುತ್ತದೆ. ಯಾವುದೇ ಸಿದ್ಧಾಂತವಿಲ್ಲದೆ, ರೀತಿ-ನೀತಿಗಳಿಲ್ಲದೆ ಮತ್ತು ಕೇವಲ ಅಧಿಕಾರದಲ್ಲಿ ಮುಂದುವರಿಯುವ ದುಷ್ಟ ಉದ್ದೇಶದಿಂದ ಅವರು ತುರ್ತುಪರಿಸ್ಥಿತಿಯನ್ನು ಘೋಷಿಸಿದರು. ಕಾಂಗ್ರೆಸ್ ಪಕ್ಷದಿಂದ ಪ್ರತ್ಯಕ್ಷವಾಗಿ-ಪರೋಕ್ಷವಾಗಿ ಸೌಲಭ್ಯಗಳನ್ನು, ಸೈಟು-ಪ್ರಶಸ್ತಿಗಳನ್ನು ದೋಚುವ ಹುನ್ನಾರದ ಕೆಲ ಪತ್ರಕರ್ತರು, ಕಲಾವಿದರು ಬೇಕೆಂದೇ ತುರ್ತುಪರಿಸ್ಥಿತಿಯ ಈ ಕರಾಳ ಅವಧಿಯನ್ನು ಮರೆಯುತ್ತಿದ್ದಾರೆ.
ಇಂದಿನ ಯುವಜನರು ಅಂದಿನ ತುರ್ತುಪರಿಸ್ಥಿತಿಯ ಬಗ್ಗೆ ಅಧ್ಯಯನ ಮಾಡಬೇಕು ಮತ್ತು ಹಿರಿಯರಿಂದ ಆ ದಿನಗಳ ವಿಷಯ ಅರಿಯಬೇಕು. ಆಗ ಪತ್ರಿಕೆಗಳಲ್ಲಿ ಬರೀ ಕಾಂಗ್ರೆಸ್ಸಿನ, ಇಂದಿರಾ ಕುಟುಂಬದ ಸುದ್ದಿಗಳು ಮಾತ್ರ ಬರಬೇಕಿತ್ತು. ಸತ್ಯಪೂರ್ಣ ಸುದ್ದಿಗಳೇ ಅಚ್ಚಾಗುತ್ತಿರಲಿಲ್ಲ. ವಿರೋಧ ಪಕ್ಷಗಳ ಸಹಸ್ರ ಸಹಸ್ರ ಸಂಖ್ಯೆಯ ನಾಯಕರನ್ನು, ಕಾರ್ಯಕರ್ತರನ್ನು ಜೈಲಿಗೆ ಹಾಕಲಾಗಿತ್ತು. ದೇಶದಲ್ಲಿ ಪ್ರಜಾಪ್ರಭುತ್ವದ ಹತ್ಯೆಯೇ ಆಗಿಹೋಗಿತ್ತು. ಕಾಂಗ್ರೆಸ್ ಪಕ್ಷದ ಬಾಲಬಡುಕತನದ ಗುಲಾಮೀ ಪರಂಪರೆಯಲ್ಲಿ ಇಂದಿಗೂ ಏನೂ ಬದಲಾವಣೆ ಆಗಿಲ್ಲ; ಇನ್ನೂ ಅಪಾಯಕಾರಿಯಾಗಿಯೇ ಇದೆ. ಪತ್ರಿಕಾ ಸ್ವಾತಂತ್ರ್ಯ, ಬರವಣಿಗೆಯ ಸ್ವಾತಂತ್ರ್ಯಗಳಿಗಿಂತ ಈ ತುರ್ತುಪರಿಸ್ಥಿತಿಯಲ್ಲಿ ಹೆಚ್ಚಿನ ತೊಂದರೆಯಾದುದು ‘ಅಭಿವ್ಯಕ್ತಿ ಸ್ವಾತಂತ್ರ್ಯ’ಕ್ಕೆ. ಜನ ಮುಕ್ತವಾಗಿ ಮಾತನಾಡುವಂತಿರಲಿಲ್ಲ, ಅಷ್ಟೇಕೆ ನಗುವಂತೆಯೂ ಇರಲಿಲ್ಲ. ಇಂದಿರಾ ಬಗೆಗೆ ಸರಳವಾದ ತಮಾಷೆಗೂ ಜನರು ಜೈಲುಪಾಲಾದ ಘಟನೆಗಳಿವೆ.
ಮುಕ್ತವಾಗಿ ಜನ ಮಾತನಾಡುವಂತಿರಲಿಲ್ಲ, ನಗುವಂತಿರಲಿಲ್ಲ ಎಂಬಂತಹ ಅಂಶಗಳು ತುಂಬ ತುಂಬ ಭಯಾನಕ. ಇದು ಎಂದೋ ಘಟಿಸಿದ ಇತಿಹಾಸದ ಘಟನೆಯಲ್ಲ. ಇಂದಿನ ಕೋಟಿ ಕೋಟಿ ಜನ ಭಾರತೀಯರು ೧೯೭೫-೧೯೭೭ರ ಅವಧಿಯಲ್ಲಿ ಕಣ್ಣಾರೆ ಕಂಡ, ಅನುಭವಿಸಿದ ಘಟನಾವಳಿ.
ತಿರುಮಲೆ ತಾತಾಚಾರ್ಯ ಶರ್ಮರಂತಹ ಧೀಮಂತ ಸಂಪಾದಕರ, ಪತ್ರಕರ್ತರ ಕಥೆಗಳನ್ನು ಕೇಳುತ್ತ ಬೆಳೆದ ನಮ್ಮಂತಹವರಿಗೆ, ಯಾವುದಕ್ಕೂ ಹೇಸದ ಮತ್ತು ಭಾರತ-ವಿರೋಧಿಯಾದ ವಿದೇಶೀ ಶಕ್ತಿಗಳಿಂದ ಸಗಣಿ ತಿನ್ನುವ ಇಂದಿನ ಕೆಲ ಪತ್ರಕರ್ತರ ಸಂಗತಿಗಳು ದಿಗ್ಭ್ರಮೆ ಮೂಡಿಸುತ್ತವೆ ಮತ್ತು ವಿಷಾದ ತುಂಬುತ್ತವೆ. ಒಂದು ಕಾಲದಲ್ಲಿ ದಿಟ್ಟತನಕ್ಕೆ, ಸಾಹಸಕ್ಕೆ ಹೆಸರಾಗಿದ್ದ ‘ಇಂಡಿಯನ್ ಎಕ್ಸ್ಪ್ರೆಸ್’ ಪತ್ರಿಕೆಯನ್ನಾಗಲೀ, ‘ಹಿಂದೂ’ ಎಂಬ ಹೆಸರಿನ ಹಿಂದೂ-ದ್ವೇಷಿ ಭಾರತ-ದ್ವೇಷಿ ಪತ್ರಿಕೆಯನ್ನಾಗಲೀ ಇಂದಿನ ದಿನಗಳಲ್ಲಿ ನೋಡಿದರೆ, ಎಂತಹ ಕೆಟ್ಟ ಸ್ಥಿತಿಯಲ್ಲಿ ಈ ಕೆಲ ಪತ್ರಿಕೆಗಳಿವೆ ಎನ್ನಿಸಿಬಿಡಬಹುದು. ಇನ್ನು ಟಿ.ಆರ್.ಪಿ.ಯ ಬೆನ್ನುಬಿದ್ದಿರುವ ಮತ್ತು ಯಾವ ಮಟ್ಟಕ್ಕಾದರೂ ಇಳಿದು, ಏನೂ ಮಾಡಲು ತಯಾರಾಗಿರುವ ಕಿರುತೆರೆ ವಾಹಿನಿಗಳು ಜನರ ಸಾಮಾಜಿಕ-ನೈತಿಕ ಬದುಕನ್ನೇ ವಿಕೃತಗೊಳಿಸಿಬಿಟ್ಟಿವೆ.
ಅದೊಂದು ಕಾಲವಿತ್ತು. ಭಾರತದಲ್ಲಿ ದೂರದರ್ಶನವು ಕಾಲೂರಿದಾಗ ಹೊಸ ಪ್ರಪಂಚವೇ ತೆರೆದುಕೊಂಡಿತು. ಆಕಾಶವಾಣಿಯಲ್ಲಿ ನಾವೆಲ್ಲ ಕೇಳಿ ಆನಂದಿಸುತ್ತಿದ್ದ ಸಂತೂರ್, ಸರೋದ್, ಸಿತಾರ್ ಮುಂತಾದ ವಾದ್ಯಗಳನ್ನೂ, ಅವುಗಳ ವಾದಕರಾದ ಮಹಾನ್ ಕಲಾವಿದರನ್ನೂ ಕಣ್ಣಾರೆ ಕಾಣುವ ಭಾಗ್ಯವೇ ಒದಗಿಬಂತು. ಅದಕ್ಕಿಂತ ಮೊದಲು, ವಾದ್ಯಗಳನ್ನು-ವಾದಕರನ್ನು ಪ್ರತ್ಯಕ್ಷ ನೋಡುವ ಅವಕಾಶವೇ ಸಾಮಾನ್ಯರಿಗಿರುತ್ತಿರಲಿಲ್ಲ. ಆದರೆ ಉಳಿದಂತೆ, ಸರ್ಕಾರಿ ಏಕಸ್ವಾಮ್ಯದ ಮತ್ತು ಆಳುವ ಪಕ್ಷದ ತುತ್ತೂರಿಯನ್ನೇ ಕೇಳಿ ಬೇಸರವೂ ಆಗುತ್ತಿತ್ತು. ಅನಂತರ ಖಾಸಗಿ ವಾಹಿನಿಗಳು ಪ್ರಸಾರ ಆರಂಭಿಸಿದಾಗ ಹೊಸತನವಿರಬಹುದೆಂಬ, ಏಕಸ್ವಾಮ್ಯ ನೀಗಬಹುದೆಂಬ ಆಶಾಭಾವನೆ ಮೂಡಿತು.
ಆದರೆ, ನೋಡಿ, ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ ಆಘಾತವೇ ಆಗುತ್ತದೆ. ಒಂದೆಡೆ, ದೂರದರ್ಶನದ ಚಂದನ – ಡಿಡಿ-ಭಾರತಿಗಳನ್ನು ಬಿಟ್ಟರೆ ಬೇರೆ ಯಾವ ವಾಹಿನಿಗಳಿಗೂ ಸಂಗೀತ, ಸಾಹಿತ್ಯ, ನೃತ್ಯ, ಶಿಲ್ಪಕಲೆಯಂತಹ ಸಾಂಸ್ಕೃತಿಕ ಆಯಾಮವೇ ಬೇಕಿಲ್ಲ. ಕ್ರೈಮ್, ಮಾಟ, ಅಪಘಾತ, ಭವಿಷ್ಯ, ರಾಜಕೀಯಗಳ ವಿನಃ ಬೇರೇನೂ ಬೇಡ. ಇವೆಲ್ಲ ಸೇರಿ, ನಮ್ಮ ಸಾಂಸ್ಕೃತಿಕ ಬದುಕನ್ನೇ ನಾಶ ಮಾಡಲು ಪಣ ತೊಟ್ಟಂತಿವೆ. ಇನ್ನೊಂದು ಮಗ್ಗುಲಲ್ಲಿ, ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಿರುವ ಅಗೋಚರ ಅಪಾಯಗಳ ಬಗೆಗೂ ಯೋಚಿಸೋಣ. ಕಾಣದ ಕೈಗಳ ಕತ್ತು ಹಿಸುಕುವ ಹುನ್ನಾರದ ಅಪಾಯದ ಕುರಿತೂ ಚಿಂತಿಸೋಣ:
ತುರ್ತುಪರಿಸ್ಥಿತಿ ಮತ್ತು ನೇರ ವಿದೇಶೀ ಆಳ್ವಿಕೆಗಳ ಅವಧಿಗಳ ಹೊರತಾಗಿಯೂ ಅಭಿವ್ಯಕ್ತಿ ಸ್ವಾತಂತ್ರ್ಯವು ಅಪಾಯದಲ್ಲಿ ಸಿಲುಕುವುದು ನಿಜಕ್ಕೂ ಭಯಾನಕ. ಅಂತೆಯೇ, ೧೯೪೭ರ ಅನಂತರ ಎಲ್ಲ ಬಗೆಯ ಸ್ವಾತಂತ್ರ್ಯಗಳೂ ನಮಗಿವೆ ಎಂಬ ಭ್ರಮೆಯಲ್ಲಿ ಬಹುಪಾಲು ಜನ ನಾವೆಲ್ಲಾ ತೇಲಾಡುವುದು ಇನ್ನಷ್ಟು ಭಯಾನಕ. ಇಂತಹ ಅನೇಕ ಆಘಾತಕಾರಿ ವಿಚಾರಗಳನ್ನು ಚಿಂತಕ ಸೀತಾರಾಮ ಗೋಯಲ್ ಅವರು ತಮ್ಮ ‘ಫ್ರೀಡಂ ಆಫ್ ಎಕ್ಸ್ ಪ್ರೆಷನ್’ (ಮೊದಲ ಮುದ್ರಣ ೧೯೯೮) ಕೃತಿಯಲ್ಲಿ ಅನಾವರಣಗೊಳಿಸಿದ್ದಾರೆ.
ಕಮ್ಯೂನಿಸ್ಟ್ ದೇಶಗಳಾದ ಚೀನಾ, ರಷ್ಯಾಗಳಲ್ಲಿ ಚರ್ಚಿನ ಮತ್ತು ಉಮ್ಮಾದ ಮತಾಂಧ ಶಕ್ತಿಗಳನ್ನು ಬಗ್ಗುಬಡಿಯಲಾಯಿತು. ಇಸ್ಲಾಮೀ ಪ್ರತ್ಯೇಕತಾವಾದವನ್ನು ಚೀನಾ ಹೊಸಕಿಹಾಕಿತು. ರಮಜಾನ್ ಆಚರಣೆ, ನಮಾಜು, ಉಪವಾಸಗಳು ಕಮ್ಯೂನಿಸ್ಟ್ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾದವು ಮತ್ತು ನಿಷೇಧಿತವಾದವು. ಕಳೆದ ಶತಮಾನದಲ್ಲಿ ರಷ್ಯಾದಲ್ಲಿ ಚರ್ಚ್ಗಳನ್ನು ಬದಲಾಯಿಸಿದುದನ್ನು ಬಿಡಿ, ಲಕ್ಷಾವಧಿ ಜನರ ಕಗ್ಗೊಲೆಯೇ ಆಯಿತು.
ಯೂರೋಪಿನ ಇತಿಹಾಸವನ್ನು ಅಧ್ಯಯನ ಮಾಡಿದಾಗ, ನಮಗೆ ತಿಳಿದುಬರುವುದೇನೆಂದರೆ, ಪ್ರಭುತ್ವಗಳ ಮೇಲಿನ ಚರ್ಚ್ನ ಶತಮಾನಗಳ ಕಾಲದ ಹತೋಟಿಯ ವಿರುದ್ಧ ತಿರುಗಿಬಿದ್ದವರ ಸಿದ್ಧಾಂತವೇ ‘ಸೆಕ್ಯುಲರಿಸಂ’. ಸ್ವಾತಂತ್ರ್ಯೋತ್ತರ ಅವಧಿಯಲ್ಲಿ, ಜವಾಹರಲಾಲ್ ನೆಹರೂ ಅವರು ಭಾರತಕ್ಕೆ ಈ ‘ಸೆಕ್ಯುಲರಿಸಂ’ ಪದವನ್ನು ಪರಿಚಯಿಸಿದರು. ಆದರೆ ಪೂರ್ಣ ವಿರುದ್ಧಾರ್ಥದಲ್ಲಿ, ಅಂದರೆ ಚರ್ಚ್ನ ಪರವಾಗಿ (ಹಾಗೂ ಮುಲ್ಲಾಶಾಹಿ ಮತ್ತು ಕಮ್ಯೂನಿಸ್ಟರ ದುಷ್ಟಕೂಟದ ಪರವಾಗಿ) ಆದರೆ ಹಿಂದೂ ಸಮಾಜದ ವಿರುದ್ಧವಾಗಿ ಬಳಸಿದರು, ಬೆಳೆಸಿದರು. ಈಗಂತೂ ‘ಸೆಕ್ಯುಲರಿಸಂ’ ಎನ್ನುವುದು ಹಿಂದೂ ಸಮಾಜ, ಹಿಂದೂ ಧರ್ಮ, ಹಿಂದೂ ಸಂಸ್ಕೃತಿ, ಅಷ್ಟೇಕೆ ಹಿಂದೂ ಎನ್ನುವ ಎಲ್ಲದರ ವಿರುದ್ಧದ ಪದವೇ ಆಗಿಹೋಗಿದೆ.
ದ್ವಿತೀಯ ಮಹಾಯುದ್ಧದ ಅನಂತರ ಇಸ್ಲಾಮೀ ತೈಲ ರಾಷ್ಟ್ರಗಳ ಹಣವು ಹೊಳೆಯಂತೆಯೇ ಹರಿಯತೊಡಗಿದೆ. ಇಸ್ಲಾಮಿನ ಪ್ರಭಾವ ಹೆಚ್ಚಿಸುವಲ್ಲಿ, ಶಸ್ತ್ರಾಸ್ತ್ರಗಳ ಖರೀದಿಗೆ-ಸರಬರಾಜಿಗೆ, ರಾಜಕೀಯಕ್ಕೆ ಮತ್ತು ರಾಜಕೀಯ ಪಕ್ಷಗಳಿಗೆ, ಮಸೀದಿಗಳ ನಿರ್ಮಾಣಕ್ಕೆ ಈ ಹಣದ ಬಳಕೆಯಾಯಿತು ಮತ್ತು ಬಳಕೆಯಾಗುತ್ತಿದೆ. ಇನ್ನೂ ಅಪಾಯಕಾರಿಯೆಂದರೆ, ಭಾರತದ ಮಾಧ್ಯಮಗಳಂತೆಯೇ, ಪಾಶ್ಚಾತ್ಯ ಮಾಧ್ಯಮಗಳಲ್ಲಿಯೂ ಈ ಹಣವು ಪ್ರಭಾವಿಯಾಯಿತು. ಅಲ್ಲಿಯೂ, ಇಸ್ಲಾಮಿನ ಬಗೆಗಿನ ಟೀಕೆಯಿರಲಿ, ವಿದ್ವತ್ಪೂರ್ಣ ವಿಮರ್ಶೆಗೂ ಖಂಡನೆ, ಅವಹೇಳನಗಳು ಪ್ರಾರಂಭವಾದವು. ಇಸ್ಲಾಮಿನ ಸಮರ್ಥಕರು (ಂಠಿoಟogisಣs) ವೈಚಾರಿಕ ನೆಲೆಯಲ್ಲಿಯೂ ಬೆದರಿಕೆ ಒಡ್ಡಲಾರಂಭಿಸಿದರು. ಅನೇಕ ಪಾಶ್ಚಾತ್ಯ ವಿಶ್ವವಿದ್ಯಾಲಯಗಳಲ್ಲೂ ಪೆಟ್ರೋಡಾಲರ್ ಬೆಂಬಲಿತ ಮಾಫಿಯಾ ತಂಡವು ಹಬ್ಬುತ್ತಹೋಯಿತು.
ವಿದ್ವಾಂಸರೂ, ಚಿಂತಕರೂ ಆದ ರಾಮಸ್ವರೂಪ್ ಅವರ ‘ಅಂಡರ್ಸ್ಟ್ಯಾಂಡಿಂಗ್ ಇಸ್ಲಾಂ ಥ್ರೂ ಹದೀಸ್’ ಗ್ರಂಥದ ಪ್ರಕಟಣೆ, ನಿಷೇಧ, ನ್ಯಾಯಾಲಯಗಳಿಗೆ ಸುತ್ತಾಡಿದ ಘಟನಾವಳಿಯನ್ನು ಗೋಯಲ್ ಅವರು ತಮ್ಮ ‘ಅಭಿವ್ಯಕ್ತಿ ಸ್ವಾತಂತ್ರ್ಯ’ (ಇಂಗ್ಲಿಷ್ನಲ್ಲಿ ‘ಫ್ರೀಡಂ ಆಫ್ ಎಕ್ಸ್ಪ್ರೆಷನ್’. ಕನ್ನಡಕ್ಕೆ: ವಿ. ಕೃಷ್ಣ) ಕೃತಿಯಲ್ಲಿ ವಿವರಿಸಿದ್ದಾರೆ. ಕಾಣದ ಕೈಗಳ ಷಡ್ಯಂತ್ರವನ್ನು ಮತ್ತು ವ್ಯವಸ್ಥೆಯ ದೋಷಪೂರ್ಣ ಕಾರ್ಯಚಟುವಟಿಕೆಯ ರೀತಿಯನ್ನು ಬಯಲು ಮಾಡಿದ್ದಾರೆ. ಈ ಗ್ರಂಥದ ಪರಾಮರ್ಶೆಯಿಂದ ನಿಜವಾಗಿಯೂ ನಾವು ಹೇಳಿಕೊಳ್ಳುವ ಅಭಿವ್ಯಕ್ತಿ ಸ್ವಾತಂತ್ರ್ಯವು ಇದೆಯೇ, ಎಂಬ ಅನುಮಾನ ಮೂಡುತ್ತದೆ.
೧೯೮೨ರಲ್ಲಿ, ಅಮೆರಿಕಾದ ಟೆಕ್ಸಾಸ್ನಲ್ಲಿ ಎ.ಘೋಷ್ ಅವರು ಹದೀಸ್ ಕುರಿತಾದ ಈ ಇಂಗ್ಲಿಷ್ ಕೃತಿಯನ್ನು ಪ್ರಕಟಿಸಿದ್ದರು. ೧೯೮೩ರಲ್ಲಿ, ಗೋಯಲ್ ಅವರು ದೆಹಲಿಯಲ್ಲಿ ಇದನ್ನೇ ಪುನರ್ ಮುದ್ರಿಸಿದರು. ಇದು ‘ಸಹೀ ಮುಸ್ಲಿಂ’ ಪುಸ್ತಕದ ಸಾರಾಂಶರೂಪದ ಅನುವಾದ. ಹದೀಸ್ ಎಂದರೆ, ಪವಿತ್ರ ಪ್ರವಾದಿ ಮೊಹಮ್ಮದರು ಹೇಳಿದ, ಆಚರಿಸುತ್ತಿದ್ದ ಇಸ್ಲಾಮಿನ ಮತಸಂಬಂಧಿತ ಸಂಗತಿಗಳು. ಇದರಲ್ಲಿರುವ ಎಲ್ಲ ಅಂಶಗಳೂ ಅಧಿಕೃತ ಇಸ್ಲಾಮೀ ಗ್ರಂಥಗಳಿಂದ ಆರಿಸಿದಂತಹವೇ. ಆದರೂ ಇದು ನಿಷೇಧವಾಗಬಹುದಾದ ಸಂಭವವಿದೆ, ಎಂದು ತಿಳಿದುಬಂದಿತ್ತು. ಆದರೆ, ನಿಷೇಧವೇನೂ ಆಗಲಿಲ್ಲ. ಪುನರ್ ಮುದ್ರಣದ ಎಲ್ಲ ಪ್ರತಿಗಳೂ ಖರ್ಚಾದುದರಿಂದ ಗೋಯಲ್ ೧೯೮೭ರಲ್ಲಿ ಮತ್ತೊಮ್ಮೆ ಅಚ್ಚು ಮಾಡಿಸಿದರು. ರಾಮೇಶ್ವರ ಶುಕ್ಲ ಅವರು ಅನುವಾದಿಸಿದ ಇದೇ ಇಂಗ್ಲಿಷ್ ಮೂಲಕೃತಿಯ ಹಿಂದೀ ಅನುವಾದವೂ ಸಿದ್ಧವಾಯಿತು. ಡಿಸೆಂಬರ್ ೧೯೮೭ರಲ್ಲಿ ಹಿಂದೀ ಅವತರಣಿಕೆಯ ಮುದ್ರಿತ ಪುಟಗಳನ್ನು ಬೈಂಡ್ ಮಾಡುವವರಿಗೆ ಕಳುಹಿಸಲಾಯಿತು.
ಡಿಸೆಂಬರ್ ೧೯ರಂದು ಪೋಲೀಸರು ಬೈಂಡ್ ಮಾಡುವವರನ್ನು ಬಂಧಿಸಿ, ಬೈಂಡ್ ಆಗಿರದ ಹಾಳೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ ಎಂಬುದು ಗೋಯಲ್ ಅವರಿಗೆ ತಿಳಿದುಬಂದಿತು. ಅಷ್ಟರಲ್ಲಿ ಗೋಯಲ್ ಅವರ ಕಚೇರಿಯನ್ನೇ ಪೊಲೀಸರು ಸುತ್ತುವರಿದಿದ್ದರು. ಅನಂತರ ಜೀಪಿನಲ್ಲಿ ಗೋಯಲ್ ಅವರು ಠಾಣೆಗೂ ಹೋದರು. ಪೊಲೀಸರು ಎಂದಿನಂತೆ ದುರ್ಭಾಷೆಯಲ್ಲಿ ಗೋಯಲರನ್ನು ನಿಂದಿಸತೊಡಗಿದರು. ಬಂಧನ, ಅನಂತರ ಬಂದೀಖಾನೆಯಲ್ಲಿ ವಾಸ, ಅನಂತರ ಮ್ಯಾಜಿಸ್ಟ್ರೇಟರಿಂದ ಜಾಮೀನಿನ ಮೇಲೆ ಬಿಡುಗಡೆ.
ಈ ಹದೀಸ್ ಕೃತಿಯ ಇಂಗ್ಲಿಷ್ ಮತ್ತು ಹಿಂದಿ ಆವೃತ್ತಿಗಳನ್ನು ಪರಿಶೀಲಿಸಲು ದೆಹಲಿ ಆಡಳಿತವು ಸಮಿತಿಯೊಂದನ್ನೂ ನೇಮಿಸಿತು. ಆಕ್ಷೇಪಾರ್ಹವಾದುದು ಏನೂ ಇಲ್ಲವೆಂದು ವರದಿ ಬಂದು, ಸೆಪ್ಟೆಂಬರ್ ೧೯೯೦ರಲ್ಲಿ ಪ್ರಕರಣವು ನ್ಯಾಯಾಲಯದಲ್ಲಿ ವಜಾಗೊಳಿಸಲ್ಪಟ್ಟಿತು. ಇಷ್ಟಾದರೂ ೧೯೯೦ರ ನವೆಂಬರ್ನಲ್ಲಿ ಹಿಂದೀ ಆವೃತ್ತಿಯ ಮತ್ತು ೧೯೯೧ರ ಮಾರ್ಚ್ನಲ್ಲಿ ಇಂಗ್ಲಿಷ್ ಆವೃತ್ತಿಯ ನಿಷೇಧವಾಯಿತು. ನಿಷೇಧಾಜ್ಞೆಗೆ ಸಹಿ ಹಾಕಿದವರು, ದೆಹಲಿ ಆಡಳಿತದ ಹೊಸ ಉಪಕಾರ್ಯದರ್ಶಿ ಎಂ.ಯು. ಸಿದ್ದಿಕಿ. ಅನಂತರದ್ದು ಹತ್ತು ವರ್ಷಗಳ ದೀರ್ಘಕಾಲದ ಅವಧಿಯ ನ್ಯಾಯಾಲಯಗಳ ಅಲೆದಾಟ. ಬಹು ಮಂದಿ ನ್ಯಾಯಾಧೀಶರೇ “ಏನೂ ತೀರ್ಮಾನವನ್ನೇ ತೆಗೆದುಕೊಳ್ಳದೇ” ವರ್ಗವಾಗಿ ಹೋಗುತ್ತಿದ್ದರು. ಪ್ರಕಾಶಕರ ಮೇಲಿನ ಕೇಸುಗಳ ಇತ್ಯರ್ಥವಾದುದು, ಪ್ರಕರಣದ ವಜಾ ಆದುದು ೧೯೯೭ರ ಮೇ ತಿಂಗಳಲ್ಲಿ.
ಈ ಪ್ರಕರಣ, ಬಂಧನ, ನಿಷೇಧ ಇತ್ಯಾದಿಗಳ ಹಿನ್ನೆಲೆಯಲ್ಲಿ ಗೋಯಲ್ ಅವರು ಸಂಪಾದಿಸಿರುವ ಈ ಕೃತಿಯಲ್ಲಿ ಅರುಣ್ ಶೌರಿ, ಕೊನ್ರಾಡ್ ಎಲ್ಸ್ಟ್, ರಾಮಸ್ವರೂಪ್, ತಸ್ಲಿಮಾ ನಸ್ರೀನ್, ಅನ್ವರ್ ಷೇಕ್ ಮುಂತಾದವರ ಲೇಖನಗಳಿವೆ, ಒಳನೋಟಗಳಿವೆ, ಮುಖ್ಯವಾಗಿ ಅಭಿವ್ಯಕ್ತಿ ಸ್ವಾತಂತ್ರ್ಯವು ಪ್ರಸ್ತುತ ಅವಧಿಯಲ್ಲಿಯೂ ಎದುರಿಸುತ್ತಿರುವ ಬಹು-ಆಯಾಮಗಳ ಅಪಾಯಗಳ ಚಿತ್ರಣವಿದೆ.
ವಿಚಿತ್ರ, ನೋಡಿ. ದೆಹಲಿ ಆಡಳಿತವು ತಾನೇ ‘ಅಂಡರ್ಸ್ಟ್ಯಾಂಡಿಂಗ್ ಇಸ್ಲಾಂ ಥ್ರೂ ಹದೀಸ್’ ಕೃತಿಯನ್ನು ಪರಿಶೀಲಿಸಿ, ಆಕ್ಷೇಪಾರ್ಹ ಅಂಶಗಳಿಲ್ಲವೆಂಬುದನ್ನು ಕಂಡುಕೊಂಡಿತ್ತು ಹಾಗೂ ಈ ಪುಸ್ತಕವು ಎಂಟು ವರ್ಷಗಳಿಂದಲೂ ಮುದ್ರಿತ ರೂಪದಲ್ಲಿ ಜನಗಳ ಬಳಿ ಇದೆ ಎಂಬುದನ್ನೂ ಪರಿಗಣಿಸದೆ, ೧೯೯೧ರ ಮಾರ್ಚ್ನಲ್ಲಿ ನಿಷೇಧಿಸಿತು.
ಭಾರತದ ಸೆಕ್ಯುಲರಿಸಮ್ಮಿನ ರೀತಿಗಳೇ ವಿಚಿತ್ರ! ಈ ‘ಅಭಿವ್ಯಕ್ತಿ ಸ್ವಾತಂತ್ರ್ಯ’ ಗ್ರಂಥದ ಪರಾಮರ್ಶೆಯಿಂದ, ನಿಜವಾಗಿಯೂ ನಮಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದೆಯೇ ಎಂಬ ಪ್ರಶ್ನೆ ಹಾಗೂ ಅನುಷಂಗಿಕವಾಗಿ ವಿಷಾದಭಾವಗಳು ಮೂಡುತ್ತವೆ.
– ಮಂಜುನಾಥ ಅಜ್ಜಂಪುರ, ಸದಸ್ಯರು, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ