ಬೆಂಗಳೂರಿನ ಸಾಹಿತ್ಯ ಸಿಂಧು ಪ್ರಕಾಶನದವರು ಪ್ರಕಟಿಸಿರುವ ಒಂದು ಉತ್ತಮ ಪುಸ್ತಕ ’ದೀಪ್ತ ಶೃಂಗಗಳು’. ದೀಪ್ತ ಎಂದರೆ ಪ್ರಕಾಶಿಸುವ, ಹೊಳೆಯುವ ಎಂದು ಅರ್ಥ. ಶೃಂಗಗಳು ಎಂದರೆ ಶಿಖರಗಳು. ಸಮಾಜದಲ್ಲಿ ಕೋಟ್ಯಾಂತರ ವ್ಯಕ್ತಿಗಳಿದ್ದರೂ ಕೆಲವರು ತಮ್ಮ ಜ್ಞಾನದಿಂದ, ಸೇವೆಯಿಂದ, ಕಲಾ ಪ್ರೌಢಿಮೆಯಿಂದ ಸ್ತುತ್ಯ ಚರಿತದಿಂದ ಚಿನ್ನದ ಶಿಖರಗಳಂತೆ ದೇದೀಪ್ಯಮಾನರಾಗಿ ಕಂಗೊಳಿಸಿ ಎಲ್ಲರಿಗೂ ಆದರ್ಶವಾಗುತ್ತಾರೆ. ಇಪ್ಪತ್ತನೆಯ (ಮತ್ತು ಇಪ್ಪತ್ತೊಂದನೆಯ) ಶತಮಾನದಲ್ಲಿ ಕರ್ನಾಟಕದಲ್ಲಿದ್ದು, ಹಾಗೂ ಬೆಳಗಿದ ಏಳು ಜನ ಮಹನೀಯರ ಜೀವನಗಾಥೆಯನ್ನೂ ಸಾಧನೆ-ಸಿದ್ಧಿಗಳನ್ನೂ ಈ ಪುಸ್ತಕವು ಪರಿಚಯಿಸುತ್ತದೆ. ಪುಸ್ತಕದ ಕರ್ತೃ ಜ್ಞಾನವೃದ್ಧರೂ ವಯೋವೃದ್ಧರೂ ಆದ ಶ್ರೀಯುತ ಎಸ್.ಆರ್. ರಾಮಸ್ವಾಮಿಯವರು. ಈ ಪುಸ್ತಕದಲ್ಲಿ ಪರಿಚಯಿಸಲ್ಪಟ್ಟಿರುವ ವಿಶೇಷ ವ್ಯಕ್ತಿಗಳು. ರಾಜಕೀಯ ಅಧಿಕಾರದಿಂದಲೋ ಶ್ರೀಮಂತಿಕೆಯಿಂದಲೋ ಮೆರೆದು ವಿಜೃಂಭಿಸಿದವರಲ್ಲ. ಅವರ ವೈಶಿಷ್ಟ್ಯವನ್ನು ಲೇಖಕರೇ ಹೀಗೆ ಹೇಳಿದ್ದಾರೆ – ಅತಿ ಸಾಮಾನ್ಯ ಹಿನ್ನೆಲೆಯಿಂದ ಬಂದು ಕಠಿಣ ಪರಿಶ್ರಮದಿಂದಲೂ ಲೋಕಹಿತೇಚ್ಛೆಯಿಂದಲೂ ಸಮಾಜ ಜೀವನವನ್ನು ಕಾಂತಿಮಯಗೊಳಿಸಿದವರು ಈ ಮಹನೀಯರು. ಇವರಲ್ಲಿ ಕೆಲವರ ಪರಿಚಯ ನನಗೂ ಇತ್ತು. ಲೇಖಕರಿಗಂತೂ ಅವರೆಲ್ಲ ನಿಕಟ ಪರಿಚಿತರು. ಈ ಪುಸ್ತಕವನ್ನು ಓದುವುದರಿಂದ ಎಲ್ಲರಿಗೂ ಆ ಮಹನೀಯರ ಔನ್ನತ್ಯದ ಪರಿಚಯ ಒದಗುವುದರಲ್ಲಿ ಸಂಶಯವಿಲ್ಲ.
ಮಹಾಮಹೋಪಾಧ್ಯಾಯ ವಿದ್ವಾನ್ ಎನ್. ರಂಗನಾಥ ಶರ್ಮರು: ಪಾಂಡಿತ್ಯಕ್ಕೂ ನಿರ್ದಿಷ್ಟ ಬರವಣಿಗೆಗೂ ಇನ್ನೊಂದು ಹೆಸರು ಈ ಮಹಾವಿದ್ವಾಂಸರು. ಕನ್ನಡದಲ್ಲೂ ಸಂಸ್ಕೃತದಲ್ಲೂ ಅಪಾರ ವಿದ್ವತ್ತನ್ನು ಗಳಿಸಿ, ಅಧ್ಯಾಪನದಿಂದ ನೂರಾರು ವಿದ್ಯಾರ್ಥಿಗಳನ್ನು ಅನುಗ್ರಹಿಸಿ, ಗ್ರಂಥರಚನೆಯಿಂದ ಸರಸ್ವತಿಯನ್ನು ಪ್ರಸನ್ನಗೊಳಿಸಿದ ಮಹಾನುಭಾವರು. ೧೯೬೬ರಲ್ಲಿ ರಾಷ್ಟ್ರರಾಜಧಾನಿ ದಿಲ್ಲಿಯಲ್ಲಿ ನಡೆದ ಅಖಿಲ ಭಾರತ ಸಂಸ್ಕೃತ ಸ್ಪರ್ಧೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಯಾಗಿದ್ದ ನಾನೂ ಕರ್ನಾಟಕ ದೇಶದ ಪ್ರತಿನಿಧಿಯಾಗಿ ಹೋಗಿದ್ದಾಗ ಪ್ರಾತಃಸ್ಮರಣೀಯ ವಿದ್ವಾನ್ ರಂಗನಾಥ ಶರ್ಮರೇ ನಮಗೆ ಮಾರ್ಗದರ್ಶಕರಾಗಿ ಬಂದಿದ್ದರು. ಅವರ ಶಿಷ್ಯವಾತ್ಸಲ್ಯವನ್ನು ನಾನು ಮರೆಯಲಾರೆ. ಎಸ್.ಆರ್. ರಾಮಸ್ವಾಮಿಯವರು ಅವರ ವ್ಯಕ್ತಿ ಚಿತ್ರಣವನ್ನು ಸುಂದರವಾಗಿ ಮಾಡಿದ್ದಾರೆ. ಅವರ ಮಾತಿನಲ್ಲಿ ಎಲ್ಲೂ ಅತಿಶಯೋಕ್ತಿಯಿಲ್ಲ. ಶರ್ಮರ ಪಾಂಡಿತ್ಯವನ್ನು ದಾರ್ಶನಿಕ ಕವಿ ಡಿವಿಜಿ ಅವರೇ ಮೆಚ್ಚಿ ಕೊಂಡಾಡಿದ್ದರು. ವಾಲ್ಮೀಕಿ ರಾಮಾಯಣವನ್ನು ಶರ್ಮರು ಕನ್ನಡದಲ್ಲಿ ಮಾಡಿದ್ದಾರೆ. ಅದರ ಪ್ರತಿಯೊಂದು ಸಂಪುಟಕ್ಕೂ ಡಿವಿಜಿ ಅವರೇ ಮುನ್ನುಡಿಯನ್ನು ಬರೆದಿದ್ದಾರೆ. ಸಂಸ್ಕೃತದಲ್ಲಿ ಶರ್ಮರು ರೂಪಕಗಳನ್ನು ಕವಿತೆಗಳನ್ನೂ ರಚಿಸಿ ಹೊಸ ಸಂಸ್ಕೃತ ಕವಿಗಳಿಗೆ ದಾರಿದೀಪವಾಗಿ ದೇವಭಾಷೆಗೆ ಮಾಡಿರುವ ಸೇವೆ ಉತ್ಕೃಷ್ಟವಾದುದು. ೨೦೧೪ನೇ ಇಸವಿಯಲ್ಲಿ ಮೈಸೂರಿನಲ್ಲಿ ಅವರಿದ್ದಾಗ ದಿವಂಗತರಾಗುವ ದಿನಕ್ಕೆ ಮೂರು ದಿವಸ ಮೊದಲು ಕೂಡ ಅವರು ಶ್ಲೋಕ ರಚನೆ ಮಾಡಿದ್ದರು. ಶತಾವಧಾನಿ ಗಣೇಶ್ ಅವರು ಶರ್ಮರ ಬಗೆಗೆ ಹೇಳಿದ ಒಂದು ನುಡಿಯನ್ನು ಈ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. ’ಸಾಹಿತ್ಯ ಲೋಕದ ಸಂಚಾರದಲ್ಲಿ ಶರ್ಮರದು ಧೀರೋದಾರ ನಡೆ.’ ಇದು ಸತ್ಯಸ್ಯ ಸತ್ಯ. ಶ್ರೀಶಂಕರಾಚಾರ್ಯರ ಕೃತಿಗಳನ್ನು ಅಮೂಲಾಗ್ರವಾಗಿ ಅಧ್ಯಯನ ಮಾಡಿ ಅದ್ವೈತದ ಸಾಕ್ಷಾತ್ಕಾರ ಮಾಡಿಕೊಂಡಿದ್ದ ಶರ್ಮರು ತಮ್ಮ ಕೊನೆಯ ದಿನಗಳನ್ನು ಮೈಸೂರಿನಲ್ಲಿ ಕಳೆದರು. ಅದು ಜಿಜ್ಞಾಸುಗಳ ಭಾಗ್ಯ.
ವಿದ್ಯಾಲಂಕಾರ ಪ್ರೊ. ಎಸ್.ಕೆ. ರಾಮಚಂದ್ರರಾಯರು: ಪ್ರಾಚೀನ ಭಾರತದಲ್ಲಿ ಸರ್ವ ತಂತ್ರ ಸ್ವತಂತ್ರರೆನಿಸಿಕೊಂಡಿದ್ದ ಅಭಿನವ ಗುಪ್ತಪಾದರು, ಕವಿತಾರ್ಕಿಕ ಸಿಂಹರೆಂದು ಪ್ರಖ್ಯಾತರಾಗಿದ್ದ ವೇದಾಂತ ದೇಶಿಕರು, ಕಲಿಕಾಲಸರ್ವಜ್ಞರೆಂದು ಪ್ರಸಿದ್ಧರಾಗಿದ್ದ ಹೇಮಚಂದ್ರಾಚಾರ್ಯರು ಮುಂತಾದವರಿಗೆ ಹೋಲಿಸಲು ಇಪ್ಪತ್ತನೆಯ ಶತಮಾನದ ಕರ್ನಾಟಕದಲ್ಲಿ ಅರ್ಹರಾಗಿದ್ದ ಶ್ರೇಷ್ಠವಿದ್ವಾಂಸರು ಎಸ್. ರಾಮಚಂದ್ರರಾಯರು. ಇವರ ವ್ಯಕ್ತಿತ್ವವನ್ನು ಎಸ್.ಆರ್. ರಾಮಸ್ವಾಮಿಯವರು ಅದ್ಭುತವಾಗಿ ಚಿತ್ರಿಸಿದ್ದಾರೆ. ರಾಮಚಂದ್ರರಾಯರ ಭಾಷಣವೆಂದರೆ ಶ್ರೋತೃಗಳಿಗೆ ಅಮೃತಪಾನ ಸಮಾನ. ನಾನು ಅವರ ಮಾತುಗಳನ್ನು ಕೇಳಿ ಮಂತ್ರಮುಗ್ಧನಾಗುತ್ತಿದ್ದೆ. ಸಂಸ್ಕೃತ ಸಾಹಿತ್ಯದಲ್ಲಾಗಲಿ, ದರ್ಶನಗಳಲ್ಲಾಗಲಿ, ಆಗಮಗಳಲ್ಲಾಗಲಿ, ಸಂಗೀತ ಶಾಸ್ತ್ರದಲ್ಲಾಗಲಿ ಅವರಿಗೆ ತಿಳಿಯದ ವಿಷಯವೇ ಇರಲಿಲ್ಲ. ಚಿತ್ರಕಲೆ, ಶಿಲ್ಪಕಲೆಗಳಲ್ಲೂ ಅವರಿಗೆ ನೈಪುಣ್ಯವಿತ್ತು. ಡಾ. ಆರ್. ಗಣೇಶ್ ಅವರು ರಾಮಚಂದ್ರರಾಯರ ಬಗೆಗೆ ಸರ್ವತಂತ್ರ ಸ್ವತಂತ್ರ ಎಂಬ ಗ್ರಂಥವನ್ನೇ ಬರೆದಿದ್ದಾರೆ. ರಾಯರನ್ನು ಕಂಡಿದ್ದವರು, ಅವರ ಮಾತನ್ನು ಕೇಳಿದ್ದವರು ಪುಣ್ಯವಂತರು. ಅವರು ರಚಿಸಿರುವ ಸಾಹಿತ್ಯ ಬೃಹತ್ತ್ವದಲ್ಲೂ ಮಹತ್ತ್ವದಲ್ಲೂ ಹಿಮಾಲಯೋಪಮ. ಒಮ್ಮೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಅಂದು ಕರ್ನಾಟಕ ರಾಜ್ಯಪಾಲರಾಗಿದ್ದ ಮಾನ್ಯ ಚತುರ್ವೇದಿಯವರ ಅಧ್ಯಕ್ಷತೆಯಲ್ಲಿ ಪುಸ್ತಕಗಳ ಲೋಕಾರ್ಪಣೆಯ ಸಮಾರಂಭ. ನನ್ನದೂ ಒಂದು ಪುಸ್ತಕ ಅಂದು ಬಿಡುಗಡೆಯ ಭಾಗ್ಯವನ್ನು ಪಡೆದಿತ್ತಾಗಿ ನಾನೂ ಆ ಸಮಾರಂಭದಲ್ಲಿ ಇದ್ದೆ. ಪುಸ್ತಕಗಳ ಪರಿಚಯವನ್ನು ಮಾಡಿಕೊಟ್ಟವರು ಎಸ್.ಕೆ. ರಾಮಚಂದ್ರರಾಯರು. ಅವರು ಇತರರ ಪುಸ್ತಕಗಳ ಬಗೆಗೆ ಹೊನ್ನುಡಿಗಳನ್ನಾಡಿ ಕೊಂಡಾಡಿದರು. ಜೊತೆಗೇ ಬಿಡುಗಡೆಯಾಗುತ್ತಿದ್ದ ತಮ್ಮ ಪುಸ್ತಕದ ಬಗೆಗೆ ಏನೂ ಹೇಳಲಿಲ್ಲ. ಅವರ ಹಿರಿತನಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ?
ವೇದಾಂತ ಸುಬ್ಬಯ್ಯ: ತೇಕಲ್ ಸುಬ್ಬಯ್ಯ ಶಾಸ್ತ್ರಿಗಳು ವೇದಾಂತ ಸುಬ್ಬಯ್ಯ ಎಂದೇ ಪ್ರಸಿದ್ಧರಾಗಿದ್ದರು. ಇವರದೂ ನನಗೆ ಪರಿಚಯವಿತ್ತು. ಬೆಂಗಳೂರಿನಲ್ಲಿ ರತ್ನವಿಲಾಸಬೀದಿಯಲ್ಲಿದ್ದ ಅವರ ಮನೆಗೆ ಹೋಗಿ ಆತಿಥ್ಯದ ಸವಿಯನ್ನನುಭವಿಸಿದ್ದೆ. ಶಂಕರಾಚಾರ್ಯರ ಗ್ರಂಥಗಳು ಇವರಿಗೆ ಕರತಲಾಮಲಕವಾಗಿದ್ದುವು. ಎಸ್.ಆರ್. ರಾಮಸ್ವಾಮಿಗಳು ಅವರ ಆಧ್ಯಾತ್ಮ ಪ್ರವೃತ್ತಿಯನ್ನೂ ವೇದಾಂತದಲ್ಲಿ ಅವರು ಏರಿದ ಮೆಟ್ಟಿಲುಗಳನ್ನೂ ಗುರುತಿಸಿದ್ದಾರೆ. ತಮ್ಮ ಆಳವಾದ ಅಧ್ಯಯನದಿಂದ ಮತ್ತು ನಿಷ್ಪಕ್ಷಪಾತ ಚಿಂತನೆಯಿಂದ ವೇದಾಂತ ಸುಬ್ಬಯ್ಯನವರು ಜನರಿಗೆ ಪರಿಚಿತರಾಗಿದ್ದರು. ಶ್ರೀ ಚಂದ್ರಶೇಖರ ಭಾರತೀಸ್ವಾಮಿಗಳ ಆದೇಶಾನುಸಾರವಾಗಿ ಅವರು ಶಾಂಕರಸಿದ್ಧಾಂತದ ಪ್ರಚಾರಕ್ಕಾಗಿಯೇ ತಮ್ಮ ಜೀವನವನ್ನು ಮೀಸಲಾಗಿಟ್ಟಿದ್ದರು. ಶಂಕರ ಜಯಂತಿಯನ್ನು ಅವರ ಮನೆಯಲ್ಲಿ ಪ್ರತಿವರ್ಷವೂ ವಿಜೃಂಭಣೆಯಿಂದ ನಡೆಸುತ್ತಿದ್ದರು. ಕನ್ನಡ, ತೆಲುಗು, ಇಂಗ್ಲಿಷ್ – ಈ ಮೂರು ಭಾಷೆಗಳಲ್ಲೂ ಅವರು ಗ್ರಂಥರಚನೆಯನ್ನು ಮಾಡಿದ್ದಾರೆ. ಭಾಮತೀ, ರತ್ನಪ್ರಭಾ ಇತ್ಯಾದಿ ವ್ಯಾಖ್ಯಾನಗಳ ಗೂಢಾಂಶಗಳನ್ನೂ ವಿಮರ್ಶೆಗೆ ಒಳಪಡಿಸಿದ ವೇದಾಂತ ಸುಬ್ಬಯ್ಯನವರು ಮಾಡಿರುವ ತತ್ತ್ವಾನ್ವೇಷಣೆಯ ಬಗೆಗೆ ಉತ್ತಮ ವಿಶ್ಲೇಷಣೆಯನ್ನು ಗ್ರಂಥಕಾರರಾದ ರಾಮಸ್ವಾಮಿಯವರು ಕೊಟ್ಟಿರುವುದನ್ನು ಜಿಜ್ಞಾಸುಗಳು ಗಮನಿಸಬೇಕು.
ಬೆಳೆಗೆರೆ ಕೃಷ್ಣಶಾಸ್ತ್ರಿಗಳು: ಡಾ. ಎಸ್.ಎಲ್. ಭೈರಪ್ಪನವರ ಮನೆಯಲ್ಲಿ ಒಮ್ಮೆ ನಾನು ಬೆಳಗೆರೆ ಕೃಷ್ಣಶಾಸ್ತ್ರಿಗಳನ್ನು ಕಂಡಿದ್ದೆ. ಒಮ್ಮೆ ನೋಡಿದರೂ ಸಾಕು. ಅವರ ಚಿತ್ರ ಮನಸ್ಸಿನಲ್ಲಿ ಸ್ಥಾಯಿಯಾಗಿ ಉಳಿದುಬಿಡುತ್ತದೆ. ಇವರ ಬಗೆಗೆ ಗ್ರಂಥಕಾರರು ಒಂದು ದಂತಕಥೆಯನ್ನು ಸ್ವಾರಸ್ಯಮಯವಾಗಿ ಹೇಳಿದ್ದಾರೆ. ’ಮೊದಲ ಪತ್ನಿಯ ನಿಧನಾ ನಂತರ ದ್ವಿತೀಯ ವಿವಾಹ ಆಗಬೇಕೆಂಬ ಒತ್ತಾಯ ನೆಂಟರಿಂದ ಬಂದಾಗ ಕೃಷ್ಣ ಶಾಸ್ತ್ರಿಗಳು ದಂತವೈದ್ಯರಲ್ಲಿಗೆ ಹೋಗಿ ಅಷ್ಟೂ ಹಲ್ಲುಗಳನ್ನು ಕೀಳಿಸಿಕೊಂಡು ಬಂದು ’ವೃದ್ಧ’ರಾಗಿ ಪ್ರಕಟಗೊಂಡದ್ದು ಮೊದಲಾದ ಘಟನೆಗಳು ಜನಜನಿತವೇ ಆಗಿದೆ.’ ಅವಧೂತರಂತೆ ಬಾಳಿದ ಕೃಷ್ಣ ಶಾಸ್ತ್ರಿಗಳು ಸಾಮಾನ್ಯರಲ್ಲಿ ಅಸಾಮಾನ್ಯರು. ಬಿಳಿಯುಡುಪಿನ ಸಂನ್ಯಾಸಿ ಎಂದು ಕೃಷ್ಣಶಾಸ್ತ್ರಿಗಳನ್ನು ಜನರು ವರ್ಣಿಸುತ್ತಿದ್ದರು. ಬೇರೆಯವರು ಮಾತಿನಲ್ಲಿ ಹೇಳುತ್ತಿದ್ದುದನ್ನು ಶಾಸ್ತ್ರಿಗಳು ಮಾತಿಲ್ಲದೆ ಮಾಡಿತೋರಿಸುತ್ತಿದ್ದರು. ಕರ್ಮಣ್ಯೇವಾಧಿಕಾರಸ್ತೇ ಎಂಬ ಗೀತೆಯ ಮಾತು ಅವರಲ್ಲಿ ಮೂರ್ತವಾಗಿತ್ತು. ಅವರು ಬರೆದಿರುವ ’ಸಾಹಿತಿಗಳ ಸ್ಮೃತಿ’ ’ಮರೆಯಲಾದೀತೆ?’ ’ಯೇಗ್ದಾಗೆಲ್ಲಾ ಐತೆ’ ಎಂಬ ಕೃತಿಗಳನ್ನು ಓದಿದವರಿಗೆಲ್ಲ ಅವರ ಉದಾತ್ತತೆಯ ಮತ್ತು ಉದಾರತೆಯ ಪರಿಚಯವಾಗದಿರದು. ಯೇಗ್ದಾಗೆಲ್ಲಾ ಐತೆ ನಾಟಕವಾಗಿಯೂ ಪ್ರದರ್ಶಿತವಾಗಿತ್ತು (೧೬.೨.೨೦೧೧). ಅದನ್ನು ಕೃಷ್ಣಶಾಸ್ತ್ರಿಗಳೂ ವೀಕ್ಷಿಸಿದ್ದರು ಎಂಬುದನ್ನು ರಾಮಸ್ವಾಮಿಯವರು ತಿಳಿಸಿದ್ದಾರೆ.
ಎಸ್.ವಿ. ನಾರಾಯಣಸ್ವಾಮಿರಾವ್: ಬೆಂಗಳೂರು ಸಾಂಸ್ಕೃತಿಕ ಚಟುವಟಿಕೆಗಳನ್ನು ಹೆಚ್ಚಾಗಿ ಪಡೆದಿರಲು ಕಾರಣವಾಗಿದ್ದ ಶ್ರೀರಾಮಸೇವಾ ಮಂಡಳಿಯ ಪಾತ್ರವನ್ನು ಹಿರಿಯರು ಬಲ್ಲರು. ಇದರ ಆಶ್ರಯದಲ್ಲಿ ರಾಮೋತ್ಸವ ಸಂದರ್ಭದಲ್ಲಿ ನಡೆಯುವ ಸಂಗೀತ ಕಛೇರಿಗಳು ಸುಪ್ರಸಿದ್ಧ ಶ್ರೀರಾಮಸೇವಾ ಮಂಡಳಿಯನ್ನೂ ಆರಂಭಿಸಿ ಸುಮಾರು ಅರವತ್ತು ವರ್ಷ ಅದರ ಸಾರಥ್ಯವನ್ನು ವಹಿಸಿದ್ದ ಎಸ್.ವಿ. ನಾರಾಯಣಸ್ವಾಮಿರಾವ್ ಅವರ ವ್ಯಕ್ತಿ ಚಿತ್ರಣವನ್ನು ಈ ಪುಸ್ತಕದಲ್ಲಿ ಕೊಡಲಾಗಿದೆ. ರಾಮೋತ್ಸವದ ಆಚರಣೆಯೇ ಅವರ ಲೈಫ್ಮಿಶನ್ ಆಗಿತ್ತು ಎಂಬುದನ್ನು ಗ್ರಂಥಕಾರರು ಹೇಳಿದ್ದಾರೆ. ೨೦೦೦ನೇ ಇಸವಿಯವರೆಗೆ ಅವರು ನಡೆಸಿದ ಈ ಮಹಾಕಾರ್ಯವನ್ನು ಈಗ ಅವರ ಮಕ್ಕಳಾದ ವರದರಾಜರು ಮುಂದುವರಿಸಿದ್ದಾರೆ ಎಂಬ ಮಾಹಿತಿಯೂ ಇಲ್ಲಿದೆ. ಇಲ್ಲಿರುವ ಒಂದು ವಾಕ್ಯ – ಮಂಡಲಿಯಲ್ಲಿ ಕಳೆದ ೭೮ ವರ್ಷಗಳಲ್ಲಿ ಭಾಗವಹಿಸಿರುವ ಕಲಾವಿದರನ್ನು ಪಟ್ಟಿ ಮಾಡಿದರೆ ಅದು ಇಪ್ಪತ್ತನೇ ಶತಮಾನದ ಕರ್ನಾಟಕ ಶಾಸ್ತ್ರೀಯ ಸಂಗೀತದ ಇತಿಹಾಸವೇ ಆಗುತ್ತದೆ.
ಟಿ.ಆರ್. ಶಾಮಣ್ಣ: ಇವರನ್ನು ನಾನು ಟಿ.ವಿ. ಪರದೆಯ ಮೇಲೆ ನೋಡಿದ್ದೆ. ಅವರದು ಸ್ಫಟಿಕ ಶುದ್ಧ ಚಾರಿತ್ರ್ಯ, ಸದಾ ಜನಪರ ನಿಲುವು ಆಗಿತ್ತೆಂಬುದೂ ಎಲ್ಲರಿಗೂ ತಿಳಿದ ವಿಷಯ. ಸರಳಜೀವನದಲ್ಲಿ ಸಂತೃಪ್ತಿ ಶಾಮಣ್ಣನವರ ಮುಖ್ಯ ಲಕ್ಷಣವಾಗಿತ್ತು. ’ಜನಹಿತಕ್ಕೆ ಪ್ರತಿಕೂಲವಾದ ಧೋರಣೆಯನ್ನು ಗಣ್ಯರು ತಳೆದಾಗ ಅವರು ಎಷ್ಟೇ ಪ್ರತಿಷ್ಠಿತರಾಗಿದ್ದರೂ ಅವರನ್ನು ವಿರೋಧಿಸಲು ಹಿಂದೆಗೆಯಬಾರದು’ ಎಂಬುದು ಶಾಮಣ್ಣನವರ ಧ್ಯೇಯ. ಇಂಥ ವ್ಯಕ್ತಿಗಳು ಯಾವಾಗಲೂ ವಿರಳ. ಈಗಂತೂ ಇಲ್ಲವೇ ಇಲ್ಲ ಎನಿಸುತ್ತದೆ. ಧ್ಯೇಯನಿಷ್ಠರ ಪರಿಸರದಲ್ಲೇ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡ ಟಿ.ಆರ್. ಶಾಮಣ್ಣನವರ ಚಿತ್ರಣ ಈ ಪುಸ್ತಕದಲ್ಲಿ ಚೆನ್ನಾಗಿ ಮೂಡಿಬಂದಿದೆ.
ಎಸ್.ಆರ್. ರಂಗನಾಥನ್: ಪದ್ಮಶ್ರೀ ಡಾ. ಎಸ್.ಆರ್. ರಂಗನಾಥನ್ ಅವರ ಹೆಸರು ಗ್ರಂಥಾಲಯ ವಿಜ್ಞಾನವನ್ನು ತಿಳಿದವರಿಗೆಲ್ಲರಿಗೂ ಸುಪರಿಚಿತ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲೂ ಅವರನ್ನು ಗ್ರಂಥಾಲಯ ವಿಜ್ಞಾನ ಪಿತಾಮಹ ಎಂದು ಗೌರವಿಸುತ್ತಾರೆ. ಲೈಬ್ರೆರಿಯನ್ ಆಫ್ ದ ವರ್ಲ್ಡ್ ಎನ್ನುವ ಅಭಿಧಾನ ಅವರಿಗಿತ್ತು. ಪ್ರಸ್ತುತ ಪುಸ್ತಕದಲ್ಲಿ ಅವರ ವ್ಯಕ್ತಿಚಿತ್ರಣವಿದೆ. ಪುಸ್ತಕಗಳು ಇರುವುದು ಬಳಕೆಗಾಗಿ, ವಾಚಕನ ಸಮಯ ವ್ಯರ್ಥವಾಗಬಾರದು. ಪ್ರತಿ ಪುಸ್ತಕಕ್ಕೂ ಒಬ್ಬ ಓದುಗ ಇರುತ್ತಾನೆ, ಪ್ರತಿ ಓದುಗನಿಗೂ ಯಾವುದೋ ಪ್ರತ್ಯೇಕ ಪುಸ್ತಕ ಬೇಕಾಗಿರುತ್ತದೆ, ಗ್ರಂಥಾಲಯ ಸದಾ ವಿಕಾಸಶೀಲ ಎಂಬ ಐದು ಸೂತ್ರಗಳನ್ನು ಡಾ. ಎಸ್.ಆರ್. ರಂಗನಾಥನ್ ಆವಿಷ್ಕರಿಸಿದ್ದರು. ಗಣಿತಶಾಸ್ತ್ರವನ್ನು ಕಲಿತ ಗಣಿತಶಾಸ್ತ್ರಬೋಧಕರಾಗಿ ವೃತ್ತಿಯನ್ನು ಆರಂಭಿಸಿದ ವ್ಯಕ್ತಿ ಗ್ರಂಥಾಲಯ ವಿಜ್ಞಾನದಲ್ಲಿ ಇಷ್ಟು ದೊಡ್ಡ ಹೆಸರನ್ನು ಗಳಿಸಿದುದು ಒಂದು ಅದ್ಭುತ. ಅವರ ಬದುಕಿನ ಅನೇಕ ಸ್ವಾರಸ್ಯಪೂರ್ಣ ಘಟನೆಗಳ ವರ್ಣನೆಗಳೂ ಈ ಪುಸ್ತಕದಲ್ಲಿವೆ.ಹೀಗೆ ನಾನಾ ಕ್ಷೇತ್ರಗಳಲ್ಲಿ ಬೆಳಗಿ ನಾಡಿನ ಸಂಸ್ಕೃತಿಗೆ ಅಪಾರ ಮತ್ತು ಅಮೂಲ್ಯ ಕೊಡುಗೆಯನ್ನು ನೀಡಿ ಕಣ್ಮರೆಯಾಗಿರುವ ಏಳು ಜನರ ಪರಿಚಯವನ್ನು ಮಾಡಿರುವ ದೀಪ್ತ ಶೃಂಗಗಳು ಎಲ್ಲರೂ ಓದಬೇಕಾದ ಒಂದು ಪುಸ್ತಕವೆಂದು ಹೇಳಬಹುದು. ಇದರಲ್ಲಿ ಕೊಟ್ಟಿರುವ ಛಾಯಾ ಚಿತ್ರಗಳೂ ಆ ಮಹನೀಯರ ವ್ಯಕ್ತಿತ್ವಕ್ಕೂ ಸಾಧನೆಗೂ ಸಾಕ್ಷಿಗಳಂತಿವೆ. ಇಂಥ ಪುಸ್ತಕವನ್ನು ರಚಿಸಿದ ವಂದನೀಯ ಎಸ್.ಆರ್. ರಾಮಸ್ವಾಮಿಯವರಿಗೂ ಅದನ್ನು ಪ್ರಕಟಿಸಿರುವ ಸಾಹಿತ್ಯ ಸಿಂಧು ಪ್ರಕಾಶನದವರಿಗೂ ನನ್ನ ನಮನಗಳು.
ಕೃಪೆ: ಮೈಸೂರು ಮಿತ್ರ
ಚಿನ್ನದ ಶಿಖರಗಳಂತೆ ದೇದೀಪ್ಯಮಾನರಾದ ಆದರ್ಶರು
Month : March-2020 Episode : Author : ಡಾ. ಹೆಚ್.ವಿ. ನಾಗರಾಜರಾವ್