
ಬ್ರಿಟಿಷ್ ಆರ್ಥಿಕ ತಜ್ಞ ಆಂಗಸ್ ಮ್ಯಾಡಿಸನ್ ಪ್ರಪಂಚದ ಎಲ್ಲ ಭಾಗಗಳ ಆರ್ಥಿಕ ಇತಿಹಾಸದ ಬಗ್ಗೆ ವ್ಯಾಪಕ ಸಂಶೋಧನೆ ನಡೆಸಿದಾತ. ಆತನ ವರದಿಯಂತೆ ೨೦೦೦ ವರ್ಷಗಳ ಹಿಂದೆ ಭಾರತದ ಜಿಡಿಪಿ ೩೩% ಇತ್ತು. ಒಂದು ಸಾವಿರ ವರ್ಷಗಳ ಹಿಂದೆ ೨೫% ಇತ್ತು. ಬ್ರಿಟಿಷರು ಭಾರತವನ್ನು ಬಿಟ್ಟು ಹೋದಾಗ ಕೇವಲ ೩% ಗೆ ಇಳಿದಿತ್ತು. ಜಗತ್ತಿನಲ್ಲಿ ಶ್ರೀಮಂತ ದೇಶವಾಗಿದ್ದ ಭಾರತ ಬ್ರಿಟಿಷ್ ಆಳ್ವಿಕೆಯ ನಂತರ ಪ್ರಪಂಚದಲ್ಲಿ ಅತ್ಯಂತ ದಯನೀಯ ಸ್ಥಿತಿ ತಲಪಿತ್ತು ಎಂದರೆ ೨೫೦ ವರ್ಷಗಳಲ್ಲಿ ಬ್ರಿಟಿಷರು ಭಾರತವನ್ನು ಎಷ್ಟು ಕೊಳ್ಳೆ ಹೊಡೆದಿರಬಹುದು ಎಂಬುದರ ಸ್ಪಷ್ಟ ಚಿತ್ರಣ ಸಿಗುತ್ತದೆ.
ಅಂತೆಯೇ ದುಂಡು ಮೇಜಿನ ಸಮ್ಮೇಳನದಲ್ಲಿ ಮಹಾತ್ಮಾ ಗಾಂಧಿಯವರು, ’ನೀವು (ಬ್ರಿಟಿಷರು) ಭಾರತವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಂಸ್ಕೃತಿಕವಾಗಿ ಹೇಳಲಾರದಷ್ಟು ಅಧಃಪತನಕ್ಕೆ ತಳ್ಳಿದ್ದೀರಿ. ಅದನ್ನು ಸರಿಪಡಿಸಲು ತುಂಬಾ ವರ್ಷಗಳೇ ಬೇಕಾಗುತ್ತದೆ’ ಎಂದು ತಮ್ಮ ರೋಷವನ್ನು ಹೊರ ಹಾಕಿದ್ದರು.
ಬ್ರಿಟಿಷರು ಭಾರತೀಯರನ್ನು ದೋಚುವುದಕ್ಕಾಗಿಯೇ ಅನೇಕ ಕಾನೂನುಗಳನ್ನು ಜಾರಿಗೊಳಿಸಿದ್ದರು. ದಿನಬಳಕೆಯ ವಸ್ತುಗಳ ಮೇಲೆ ನಿರ್ದಾಕ್ಷಿಣ್ಯ ತೆರಿಗೆ ವಿಧಿಸುತ್ತಿದ್ದರು. ಅದರಲ್ಲೂ ಮುಖ್ಯವಾಗಿ ಉಪ್ಪಿನ ಸಾಗಾಣಿಕೆಯ ಮೇಲೆ ಹದ್ದಿನ ಕಣ್ಣಿಡಲು, ತೆರಿಗೆ ಪಡೆಯಲು ೨೫೦೦ ಮೈಲು ಉದ್ದದ ಸುಂಕದ ಬೇಲಿಯನ್ನು ರೂಪಿಸಿದ್ದರು. ಇಂತಹದ್ದೊಂದು ಬೃಹತ್ತಾದ ಬೇಲಿಯ ಜಾಡುಹಿಡಿದು ಹೊರಟ ಬ್ರಿಟಿಷ್ ಸಂಶೋಧಕ ರಾಯ್ ಮ್ಯಾಕ್ಸ್ಹ್ಯಾಮ್ ದಾಖಲಿಸಿದ ಅಪೂರ್ವ ಅನುಭವಗಳ ಸಂಗ್ರಹರೂಪವೇ ’ಭಾರತದಲ್ಲೊಂದು ಸುಂಕದ ಬೇಲಿ’ ಪುಸ್ತಕ. ಇತಿಹಾಸ ಪುಸ್ತಕಗಳಲ್ಲಿ ಇಲ್ಲದ ಬ್ರಿಟಿಷರ ಅಮಾನವೀಯ ಮುಖವೊಂದನ್ನು ಅನಾವರಣ ಮಾಡುತ್ತದೆ.
ರಾಯ್ ಮ್ಯಾಕ್ಸ್ಹ್ಯಾಮ್ ಸರ್ ಡಬ್ಲ್ಯು.ಎಚ್. ಸ್ಲೀಮನ್ರ ’ ‘Transit Duties in India – mode of collecting them’ ಎಂಬ ಪುಸ್ತಕ ಓದಿದರು. ಅದರಲ್ಲಿ ಹೀಗೆ ದಾಖಲಾಗಿತ್ತು.
’ಉಪ್ಪಿನ ಮೇಲಿನ ಸುಂಕ ಸಂಗ್ರಹಣೆಗಾಗಿ ಒಂದು ರಾಕ್ಷಸೀ ವ್ಯವಸ್ಥೆ ರೂಪುಗೊಂಡಿತು. ಭಾರತದ ಭೂಭಾಗವನ್ನು ವ್ಯಾಪಿಸಿದ ಬೃಹತ್ ಬೇಲಿಯೊಂದನ್ನು ನಿರ್ಮಿಸಲಾಯಿತು. ೧೮೬೯ರಲ್ಲಿ ಈ ಬೇಲಿಯ ಉದ್ದ ಎರಡುಸಾವಿರದ ಮುನ್ನೂರು ಮೈಲು! ಸಿಂಧೂ ನದಿಯಿಂದ ಮದರಾಸಿನ ಮಹಾನದಿಯವರೆಗೆ ಈ ಬೇಲಿ ಹರಡಿತ್ತು. ಸುಮಾರು ೧೨ ಸಾವಿರ ಜನ ಈ ಬೇಲಿಯ ಕಾವಲಿಗೆಂದೇ ನಿಯುಕ್ತರಾಗಿದ್ದರು. ಮುಳ್ಳಿನ ಗಿಡಗಳು, ಪೊದೆಗಳು, ಬಳ್ಳಿಗಳು, ಬೃಹದಾಕಾರದ ಮರಗಳಿಂದ ರಚಿತವಾಗಿದ್ದ ಇಂಥ ಬೇಲಿಯನ್ನು, ಕರಸಂಗ್ರಹ ವ್ಯವಸ್ಥೆಯನ್ನು ಜಗತ್ತಿನ ಬೇರಾವ ನಾಗರಿಕ ದೇಶದಲ್ಲೂ ಕಾಣಲು ಸಾಧ್ಯವಿಲ್ಲ.’ ಎಂಬ ಟಿಪ್ಪಣಿ ಮ್ಯಾಕ್ಸ್ ಹ್ಯಾಮ್ರ ಗಮನ ಸೆಳೆಯಿತು. ಅವರು ಓದಿದ್ದ ಅಥವಾ ನಾವೆಲ್ಲರೂ ಓದಿದ್ದ ಯಾವ ಪುಸ್ತಕದಲ್ಲೂ ಸುಂಕದ ಬೇಲಿಯ ಕುರಿತ ಸಾಮಾನ್ಯ ಉಲ್ಲೇಖವೂ ಇಲ್ಲ. ಸ್ವಾತಂತ್ರ್ಯಕ್ಕಾಗಿ ಸುದೀರ್ಘ ಹೋರಾಟ ನಡೆದ ದೇಶದಲ್ಲಿ ಇದೊಂದು ಸೂಕ್ಷ್ಮವು ಜನರನ್ನು ಹೋರಾಟಕ್ಕೆ ಬಡಿದೆಬ್ಬಿಸುವ ಸಂಗತಿಯೂ ಆಗಿರಬೇಕಿತ್ತು. ನಿಜವಾಗಿ ಇಂಥದ್ದೊಂದು ಬೇಲಿ ಇದ್ದಿದ್ದೇ ಆಗಿದ್ದಲ್ಲಿ, ಅದು ಈಗಿರುವ ಜನರ ಮುತ್ತಾತಂದಿರ ಕಾಲದಲ್ಲಿ ಇದ್ದಿರಬೇಕು. ಹಾಗಾದರೆ ಭಾರತದ ಜನ, ಇತಿಹಾಸಕಾರರು ಇಷ್ಟು ಬೇಗ ಈ ಬೇಲಿಯನ್ನು ಮರೆತುಬಿಟ್ಟರೆ? ಸಹಜವಾಗಿ ಇದು ಭಾರತೀಯರಿಗೆ ಚುಚ್ಚಬೇಕಾದ ಪ್ರಶ್ನೆ, ಆದರೆ ಮ್ಯಾಕ್ಸ್ ಹ್ಯಾಮ್ರಿಗೆ ಕಾಡಿತು. ಮ್ಯಾಕ್ಸ್ ಹ್ಯಾಮ್ ಪರಿಚಿತರು, ಲೇಖಕರು, ಇತಿಹಾಸಕಾರರು ಹೀಗೆ ಅನೇಕರನ್ನು ಈ ಕುರಿತು ವಿಚಾರಿಸಿದರೂ ಪ್ರಯೋಜನವಾಗಲಿಲ್ಲ.
ಗ್ರಂಥಾಲಯಗಳನ್ನು ತಡಕಾಡಿದರು. ವರದಿಗಳು, ಗೆಜೆಟಿಯರ್ಗಳು, ನಕಾಶೆಗಳನ್ನು ಅಧ್ಯಯನ ಮಾಡಿ ಮಾಹಿತಿ ಕಲೆಹಾಕಿದರು. ಸುಂಕದ ಬೇಲಿಯ ಅವಶೇಷಗಳ ಶೋಧನೆಗೆ ಮ್ಯಾಕ್ಸ್ಹ್ಯಾಮ್ ಮೂರು ವರ್ಷಗಳ ಅವಧಿಯಲ್ಲಿ ಮೂರು ಬಾರಿ ಭಾರತದಾದ್ಯಂತ ವ್ಯಾಪಕ ಶೋಧನೆ ಕೈಗೊಳ್ಳುತ್ತಾರೆ. ಪ್ರಾಚೀನ ಕಾಲದಿಂದ ರೂಢಿಯಲ್ಲಿದ್ದ ಸುಂಕದ ಪದ್ಧತಿ ಅಧ್ಯಯನ ಮಾಡಿದರು. ಭಾರತದಲ್ಲಿ ಮೌರ್ಯರ ಕಾಲದಿಂದ ಕೇವಲ ಭೂಕಂದಾಯವಿತ್ತು. ಆದರೆ ಮೊಘಲರ ಕಾಲದಲ್ಲಿ ಉಪ್ಪಿನ ತೆರಿಗೆಯನ್ನು ಮುಸ್ಲಿಮರು ೨.೫% ಪಾವತಿಸಿದರೆ ಹಿಂದೂಗಳು ಎರಡು ಪಟ್ಟು ೫% ಪಾವತಿಸಬೇಕಾಗಿತ್ತು. ಬ್ರಿಟಿಷ್ ಆಳ್ವಿಕೆಯ ವೇಳೆ ವಿವಿಧ ಆಹಾರ ವಸ್ತುಗಳ ಮೇಲೆ ಅದರಲ್ಲೂ ಉಪ್ಪಿನ ಮೇಲೆ ವಿಧಿಸುತ್ತಿದ್ದ ತೆರಿಗೆ ಅಮಾನವೀಯತೆಯ ಪರಾಕಾಷ್ಠೆಯಾಗಿತ್ತು.
ಬ್ರಿಟಿಷರ ರಾಜಕೀಯ ಸಾಮ್ರಾಜ್ಯ, ಆರ್ಥಿಕ ಸಾಮ್ರಾಜ್ಯ ಜೊತೆ ಜೊತೆಯಾಗಿ ಬೆಳೆದ ಪರಿಣಾಮ ’ಸ್ವರ್ಗತುಲ್ಯ’ ಎಂದು ವರ್ಣಿತವಾಗಿದ್ದ ಬಂಗಾಳ ದಯನೀಯ ಸ್ಥಿತಿ ತಲುಪಿತ್ತು. ಪ್ಲಾಸಿ, ಬಕ್ಸಾರ್ ಕದನಗಳ ಮೂಲಕ ಬಂಗಾಳ ನಂತರ ದೆಹಲಿಯನ್ನು ಆಕ್ರಮಿಸಿಕೊಂಡ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿ ವಸಾಹತುಕರಣವೆಂಬುದು ಹಗಲುಗಳ್ಳತನದ ಪರ್ಯಾಯವಾಚಿಯೇ ಆಗಿತ್ತು. ಕ್ರಮೇಣ ಲೂಟಿಯನ್ನು ಸುವ್ಯವಸ್ಥಿತಗೊಳಿಸುವುದಕ್ಕಾಗಿ ನಿಯಮಗಳೆಂಬ ಮುಖವಾಡಗಳು ರೂಪುಗೊಳ್ಳುತ್ತಾ ಹೋದವು. ಅವರು ಮಾಡಿದ್ದೇ ಕಾನೂನು, ಅವರು ವಿಧಿಸಿದ್ದೇ ತೆರಿಗೆ, ಅವರು ಹೇಳಿದ್ದೇ ನ್ಯಾಯನಿರ್ಣಯ, ಅವರು ಮಾಡಿದ್ದೆ ದಂಡನೆ. ವಾಸ್ತವವೆಂದರೆ ಸಾಮ್ರಾಜ್ಯಶಾಹಿಯೆಂಬುದೇ ಸುತರಾಂ ನೀತಿಗೆಟ್ಟ ಉಪಕ್ರಮವಾಗಿತ್ತು. ಹಿಂಸಾಚರಣೆಯೂ ಬಹುರೂಪಿ ಶೋಷಣೆಯೂ ಅದರ ಸಹಜ ಉತ್ಪನ್ನಗಳಾಗಿದ್ದವಷ್ಟೆ ಎಂಬ ವಿಷಯವನ್ನು ಮ್ಯಾಕ್ಸ್ ಹ್ಯಾಮ್ ನಿರ್ಭಯವಾಗಿ ದಾಖಲೆ ಸಮೇತ ಭಾರತದಲ್ಲೊಂದು ಸುಂಕದ ಬೇಲಿ ಪುಸ್ತಕದಲ್ಲಿ ತೆರೆದಿಡುತ್ತಾರೆ.
ಅರ್ಥಶಾಸ್ತ್ರಜ್ಞನಾದ ಆಡಂ ಸ್ಮಿತ್, ’ಭಾರತದಲ್ಲಿ ನಡೆದದ್ದು ಸೇನಾ ಪ್ರಾಬಲ್ಯಾಧಾರಿತ ಸರ್ವಾಧಿಕಾರಿ ಮತ್ತು ದಮನ ಧೋರಣೆಯೇ’ ಎಂದು ತನ್ನ Weಚಿಟಣh oಜಿ ಓಚಿಣioಟಿs (೧೭೭೬) ಗ್ರಂಥದಲ್ಲಿ ದಾಖಲಿಸುವಂತೆ ಬ್ರಿಟಿಷರು ಬಂಗಾಳ, ದೆಹಲಿ, ಸಿಂಧ್, ಪಂಜಾಬ್ ಸೇರಿದಂತೆ ಇಡೀ ಭರತ ಖಂಡವನ್ನು ಅನೈತಿಕವಾಗಿ ಸೈನ್ಯದಿಂದಲೇ ತೆಕ್ಕೆಗೆ ತೆಗೆದುಕೊಂಡು ಉಪ್ಪಿನ ಕರದಿಂದ ನಿರ್ದಾಕ್ಷಿಣ್ಯವಾಗಿ ಶೋಷಿಸಿದರು. ಮ್ಯಾಕ್ಸ್ಹ್ಯಾಮ್ ಇದಕ್ಕೆ ಪೂರಕವಾಗಿ ಒಂದು ಉದಾಹರಣೆ ನೀಡುತ್ತಾರೆ. ೧೭೭೦ರಲ್ಲಿ ಬಂಗಾಳದಲ್ಲಿ ಭೀಕರ ಕ್ಷಾಮ ಉಂಟಾಯಿತು. ಮೊಘಲರಿಂದ ದಿವಾನಿ ಹಕ್ಕನ್ನು ಕಸಿದು ತೆರಿಗೆ ಕಟ್ಟುವಂತೆ ಪೀಡಿಸಿದಾಗ ಜನರು ಬಿತ್ತನೆ ಬೀಜ ಮಾರಿ ಕಂದಾಯ ಕಟ್ಟಿದರು. ಕ್ಷಾಮದಲ್ಲೂ ಕಂಪೆನಿ ನೂರಾರು ಲಕ್ಷ ಲಾಭ ಮಾಡಿತು. ಕ್ಷಾಮ ಪರಿಹಾರಕ್ಕಾಗಿ ೩ ಕೋಟಿ ಜನರಿಗೆ ಕೇವಲ ೯೦ ಸಾವಿರ ರೂಪಾಯಿ ಬಿಡುಗಡೆ ಮಾಡಿತು. ಇದಕ್ಕಿಂತ ರಾಕ್ಷಸೀಕೃತ್ಯ ಮತ್ತೊಂದು ಇರಲು ಸಾಧ್ಯವೇ? ಎಂಬ ಭಾವ ಈ ಪುಸ್ತಕ ಮಾಡಿಸುತ್ತದೆ.
ಭಾರತದ ಶಾಲಾ-ಕಾಲೇಜು ಪಠ್ಯಕ್ರಮದಲ್ಲಿ ಬ್ರಿಟಿಷರು ತಂದ ವಿವಿಧ ಕಾನೂನುಗಳ, ನಿಯಮಗಳ ಮಾಹಿತಿ ನೀಡಲಾಗಿದೆಯೇ ವಿನಾ ಬ್ರಿಟಿಷರು ನಡೆಸಿದ ನಿರ್ದಾಕ್ಷಿಣ್ಯ, ರಕ್ತ ಹೀರುವ ಅಮಾನವೀಯ ಸತ್ಯಸಂಗತಿಗಳನ್ನು ವ್ಯವಸ್ಥಿತವಾಗಿ ಮುಚ್ಚಿಡುವ ಪ್ರಯತ್ನ ಬ್ರಿಟಿಷರು ಮಾಡುತ್ತಾರೆ. ಸ್ವಾತಂತ್ರ್ಯ ನಂತರವೂ ಮುಚ್ಚಿಡುವ, ಬಚ್ಚಿಡುವ ಪ್ರಯತ್ನ ನಿರಂತರವಾಗಿ ನಡೆದಿದೆ. ಬದಲಿಗೆ ಭಾರತೀಯ ಪರಂಪರಾಗತ ಮೌಲ್ಯಗಳ ಬಗ್ಗೆ ಹೆಚ್ಚು ಮಾತನಾಡುವ ಇತಿಹಾಸಕಾರರ ಜಾಣ ಮರೆವು, ಬ್ರಿಟಿಷರ ದುರಾಡಳಿತದ ಅನಾವರಣಕ್ಕೆ ಕೈ ಹಾಕದಿರುವುದು ಇತಿಹಾಸಕ್ಕೆ ಮಾಡಿದ ದ್ರೋಹವೂ ಹೌದು ಎಂಬ ಚಿಂತನೆಯನ್ನು ಮ್ಯಾಕ್ಸ್ ಹ್ಯಾಮ್ರ ’ಭಾರತದಲ್ಲೊಂದು ಸುಂಕದ ಬೇಲಿ’ ಪುಸ್ತಕ ಹುಟ್ಟು ಹಾಕುತ್ತದೆ.
ಕಂಪೆನಿಗೆ ಹೆಚ್ಚು ಲಾಭ ತರುವ ಉದ್ದೇಶದಿಂದ ರಾಬರ್ಟ್ಕ್ಲೈವ್, ವಾರನ್ ಹೇಸ್ಟಿಂಗ್ಸ್ ತೆರಿಗೆ ಸುಧಾರಣೆಗಳನ್ನು ತಂದರು. ಉಪ್ಪಿನ ತಯಾರಿಕೆ, ಸಾಗಾಣಿಕೆ ಮತ್ತು ಮಾರಾಟದ ಮೇಲೆ ಹಿಂದೆಂದೂ ಇಲ್ಲದ ನಿಯಮ, ನಿರ್ಬಂಧ ಹೇರಿದರು. ಬಂಗಾಳ ಪ್ರಾಂತದಲ್ಲಿ ಪರಂಪರಾಗತವಾಗಿ ಉಪ್ಪು ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದ ಸುಮಾರು ೬೦ಸಾವಿರ ಮಾಲಂಗಿ ಪುರುಷರು ತಮ್ಮ ಕುಲಕಸುಬಿನಿಂದ ವಂಚಿತರಾದರು. ಗುತ್ತಿಗೆದಾರರು ಒಂದು ಮೌಂಡ್ (೮೨ ಪೌಂಡ್) ಉಪ್ಪನ್ನು ೫೦ ಪೈಸೆಗೆ ಖರೀದಿಸಿ ೧ ರೂ. ೫೦ ಪೈಸೆಗೆ ಮಾರಾಟ ಮಾಡಿ ಮಾಲಂಗಿಗಳ ರಕ್ತ ಹೀರಿದರು. ಕಂಪೆನಿ ೧೭೮೪-೮೫ರಲ್ಲಿ ಕೇವಲ ಉಪ್ಪಿನಿಂದ ೬೨,೫೭,೬೭೦ ರೂ. ಲಾಭ ಗಳಿಸಿತು! ಕಾಲ ಸರಿದಂತೆ ಉಪ್ಪಿನ ಮೇಲಿನ ತೆರಿಗೆ ಏರುತ್ತಾ ೧೮೨೩ರ ವೇಳೆಗೆ ೧ ಮೌಂಟ್ಗೆ ೧೨ ರೂಪಾಯಿ ಆಯಿತು. ಇದು ವಿಧಿಯಿಲ್ಲದೆ ಜನರು ಕಳ್ಳಸಾಗಾಣಿಕೆಯಲ್ಲಿ ತೊಡಗಿಕೊಳ್ಳುವಂತೆ ಪ್ರೇರೇಪಿಸಿತು. ವರ್ಷದಲ್ಲಿ ಎರಡು ತಿಂಗಳ ಆದಾಯವನ್ನು ಉಪ್ಪಿಗೆ ವ್ಯಯಿಸಬೇಕಾದ ದುಃಸ್ಥಿತಿ ಉದ್ಭವವಾಯಿತು. ಇದು ಜನರನ್ನು ಕಂಪೆನಿ ಉಗ್ರಾಣದಿಂದ ಕದಿಯಲು, ಅನಧಿಕೃತ ಉಪ್ಪು ತಯಾರಿಸಲು ಹಾಗೂ ಕಳ್ಳ ಸಾಗಾಣಿಕೆಗೆ ಪ್ರೇರೇಪಿಸಿತು. ಉಪ್ಪಿನ ತೆರಿಗೆ ಆದಾಯವು ಕಡಮೆಯಾಯಿತು.
ಬ್ರಿಟಿಷರು ಇದನ್ನು ತಡೆಗಟ್ಟಲು ಕರಸಂಗ್ರಹ ಕೇಂದ್ರ ತೆರೆದರು. ಕಳ್ಳಸಾಗಾಣಿಕೆ ನಡೆಯುವ ರೇಖೆಯನ್ನು ಗುರುತಿಸಿ, ಚೌಕಗಳನ್ನು ತೆರೆದರು. ಚೌಕಗಳು ಒಂದೇ ರೇಖೆಯಲ್ಲಿ ಬರುವಂತೆ ನಿರ್ಮಿಸಿ ಸುಂಕದ ರೇಖೆ ಎಂದು ಕರೆದರು. ಮತ್ತಷ್ಟು ಬಿಗಿಗೊಳಿಸುವ ನಿಟ್ಟಿನಲ್ಲಿ ರೇಖೆಯ ಉದ್ದಕ್ಕೂ ಒಣ ಬೇಲಿ ನಿರ್ಮಿಸಿದರು.
ಸುಂಕ ಪಡೆಯಲು, ತಪಾಸಣೆ ಮಾಡಲು, ಬಂಧಿಸುವ ಸಲುವಾಗಿ ೧೨ ಸಾವಿರ ಸಿಬ್ಬಂದಿ ನೇಮಕವಾದರು. ಪರಿಣಾಮವಾಗಿ ಬ್ರಿಟಿಷರಿಗೆ ೧೮೬೯-೭೦ರಲ್ಲಿ ಉಪ್ಪಿನಿಂದ ೧ ಕೋಟಿ ೨೫ ಲಕ್ಷ ರೂ. ಲಾಭ ತಂದಿತು. ಅಧಿಕಾರಿಗಳು ಕೆಳಹಂತದ ಸಿಬ್ಬಂದಿಗೆ ಕಿರುಕುಳ ನೀಡಿದರು. ಕೆಳಹಂತದ ಸಿಬ್ಬಂದಿ ಜನಸಾಮಾನ್ಯರಿಗೆ ತೀವ್ರ ಭ್ರಷ್ಟಾಚಾರ, ದೌರ್ಜನ್ಯದಿಂದ ಹಿಂಸಿಸಿದರು. ಒಟ್ಟಿನಲ್ಲಿ ಸುಂಕದ ಬೇಲಿ ’ಬ್ರಿಟಿಷರು ಭಾರತೀಯರ ಮೇಲೆ ಹೇರಿದ ಅನ್ಯಾಯದ ತೆರಿಗೆಯ ಸ್ಮಾರಕವಾಗಿತ್ತು’. ೧೯೭೯ ಏಪ್ರಿಲ್ ೧ ರಿಂದ ಭಾರತಾದ್ಯಂತ ಉಪ್ಪಿನ ತೆರಿಗೆ ಏಕರೂಪತೆ ಪಡೆದಿದ್ದರಿಂದ ಸುಂಕ ರದ್ದಾಯಿತು. ಕ್ರಮೇಣ ಸುಂಕದ ಬೇಲಿ ಮರೆಯಾಯಿತು. ಅನೇಕ ಕಡೆ ಸುಂಕದ ಬೇಲಿ ಕಡಿದು ರಸ್ತೆ, ರೈಲು ಹಳಿ ಮತ್ತು ಸೇತುವೆ ನಿರ್ಮಾಣ ಮಾಡಲಾಯಿತು. ಹೀಗೆ ಒಂದು ಕಾಲದಲ್ಲಿ ಉಪ್ಪಿನ ಮೂಲಕ ಜನಸಾಮಾನ್ಯರನ್ನು ದುಃಸ್ಥಿತಿಗೆ ತಳ್ಳಿದ್ದ ಸುಂಕದ ಬೇಲಿ ಜನಮಾನಸದಿಂದ ಮರೆಯಾಯಿತು. ದುರ್ದೈವವೆಂದರೆ, ಇತಿಹಾಸಕಾರರ ದೃಷ್ಟಿಯಿಂದಲೂ ಕಣ್ಮರೆಯಾಯಿತು.
ಝಾನ್ಸಿ ಬಳಿಕ ಎರಿಕ್ನಲ್ಲಿ ರಾಧೇಶ್ಯಾಮ್ ಪೂಜಾರಿ ಮತ್ತು ಫಾಕಾನಗರದಲ್ಲಿ ಸಾಬಲ್ಸಿಂಗ್ ಮೂಲಕ ಹುಣಸೇಮರಗಳ ಸಾಲು, ಸುಂಕದ ಬೇಲಿ ಇರುವಿಕೆಯನ್ನು ಪ್ರತ್ಯಕ್ಷ ಕಂಡು, ನಕಾಶೆ, ಜಿಪಿಎಸ್ಗೂ ತಾಳೆಯಾದಾಗ ಸುಂಕದ ಬೇಲಿಯ ಅಸ್ತಿತ್ವ ಖಚಿತಗೊಳ್ಳುತ್ತದೆ. ಮ್ಯಾಕ್ಸ್ ಹ್ಯಾಮ್ರ ಛಲಬಿಡದ ಮೂರು ವರ್ಷಗಳ ಸಂಶೋಧನೆ ಮತ್ತು ಪ್ರವಾಸಗಳು ಫಲಿಸಿದ್ದವು. ಸುಂಕದ ಬೇಲಿ ’ಇರಲೇ ಇಲ್ಲ’ ಎಂಬ ನಂಬಿಕೆ ಸುಳ್ಳಾಗಿ ಸುಂಕದ ಬೇಲಿಯ ಅವಶೇಷಗಳನ್ನು ಪತ್ತೆಹಚ್ಚುವಲ್ಲಿ ಮ್ಯಾಕ್ಸ್ ಹ್ಯಾಮ್ರ ವಿಶ್ವಾಸ, ಶ್ರಮ ಗೆದ್ದಿತು.
’ಭಾರತದಲ್ಲೊಂದು ಸುಂಕದ ಬೇಲಿ’ ಪುಸ್ತಕ ಸೀಮಿತ ಮಾಹಿತಿಯೊಂದಿಗೆ ಸಂಶೋಧನೆ ನಡೆಸುವ ಪ್ರತಿಯೊಬ್ಬರಿಗೂ ಪ್ರೇರಣೆಯಾಗಬಲ್ಲದು. ಬ್ರಿಟಿಷರ ಅನೇಕ ಕರಾಳ ಮುಖಗಳನ್ನು ಅದರಲ್ಲೂ ಉಪ್ಪಿನ ತೆರಿಗೆಯ ಅಮಾನವೀಯತೆಯನ್ನು ಜಗತ್ತಿನೆದುರು ತೆರೆದಿಟ್ಟ ಬಗೆ ಪುಸ್ತಕದಲ್ಲಿ ಉತ್ಕೃಷ್ಟವಾಗಿ ವ್ಯಕ್ತವಾಗಿದೆ.
ಆಂಗ್ಲಮೂಲದ ಅನುಭವ ಕಥನವನ್ನು ಸಂಗ್ರಹಿಸಿ ಅರ್ಥವತ್ತಾಗಿ, ಸೂಕ್ತ ಭಾಷೆ ಬಳಕೆಯೊಂದಿಗೆ ಕನ್ನಡ ಓದುಗರಿಗೆ ನೀಡಿರುವ ಎಸ್.ಎನ್. ನರೇಂದ್ರಕುಮಾರ್ ರವರ ಪ್ರಯತ್ನ ಅಭಿನಂದನಾರ್ಹ.
ಭಾರತದ ನೈಜ ಇತಿಹಾಸವನ್ನು ಮರೆಮಾಚುವ, ತಿರುಚುವ, ವಸಾಹತುಶಾಹಿ ಬೌದ್ಧಿಕ ಚಿಂತನೆಗಳನ್ನು ಬಯಲು ಮಾಡುವ ಅಗತ್ಯತೆ ಇದ್ದು, ಇಂತಹ ಸಂಶೋಧನೆಗಳು ಇತಿಹಾಸದ ಕರಾಳ ನಿಜಸ್ವರೂಪ ಅರಿಯುವ ಮೂಲಕ ಭವ್ಯ ಭಾರತ ನಿರ್ಮಾಣಕ್ಕೆ ಸಹಕಾರಿಯಾಗಬಲ್ಲವು.
ಧನಂಜಯ್ ಕೆ.ಎಸ್. ಉಪನ್ಯಾಸಕರು, ಕೋಡಂಬಳ್ಳಿ ಸರ್ಕಾರಿ ಪಿಯು ಕಾಲೇಜ್, ಚನ್ನಪಟ್ಟಣ

