ಮಗಳ ಮದುವ್ಯಾಗ ಕೊಡಾಕs ಬೇಕಂತ
ಅಪ್ಪ ಮಾಡಿಸಾಕ ಹತ್ತಿದ್ದ ಕುಸುರಿಯ
ಕರಿಮರದ ಮಂಚ..
ಗಟ್ಟುಳ್ಳ ಮಂಚಾಗಬೇಕು ಎರಡು ಮಕ್ಕಳಾದ್ರೂ
ಮಲಗಿಸಿ ಮಕ್ಕೋಳ್ಳಾಕ ಬೇಕು ಅಂತ
ತಲಿ ತಿಂದಿದ್ದ ಕೊಂಚ
ಕಿಟಕಿಯಾಗs ಇಣುಕಿ
ನೋಡಿದ ಮಗಳ ಮೊಗದಾಗ
ಭರಪೂರ ನಾಚಿಕೆ
ಅಪ್ಪನ ಮೊಗದಾಗ ಮುಗುಳ್ನಗಿ
ನೆಂಟರಿಷ್ಟರೆಲ್ಲ ಅಕ್ಕಿಕಾಳ ಹಾಕಿ
ಉಂಡು, ಉಟ್ಟು ಹಾಡಿ ಹರಸಿ
ಹೋಗೂ ಹೊತ್ತಿನಾಗ
ಮೌನದಾಗ ಮಂಚ
ಈ ಮನಿಯಿಂದ ಆ ಮನಿಗ
ಮಂಚದ ತುಂಬೆಲ್ಲ
ಅರಳಿದ ಸುಮ ಅತ್ತರಿನ ಘಮ
ಪಿಸುಮಾತು ಹುಸಿಮುನಿಸು
ರನ್ನ ಚಿನ್ನರಿಗೆ ನೂರೆಂಟು ಪುಳಕ
ಹಂಚಿಕೊಳ್ಳುವ ತವಕ
ಹೊಲವಾದ ಮಂಚದಲಿ
ಹೂವೊಂದು ಫಲವೊಂದು
ಎಣ್ಣೆ, ಉಚ್ಚೆಯ ಕಂಪು
ನಗು ಅಳು ಮಕ್ಕಳ ಇನಿದನಿ
ಹೂ ನನದೆಂದನು ರನ್ನ
ಫಲ ನನದೆಂದಳು ಚಿನ್ನ
ಹಿಸ್ಸೆ ಮಾಡಿದರೂ ಹಿಸ್ಸೆಯಾಗದ
ದಾಂಪತ್ಯಕ್ಕ ಮಂಚಾನೇ ಸಾಕ್ಷಿ
ಮಗಳು ಶಾಣ್ಯಾಕಿ
ಮಗ ಧಾಂಧ್ಲಾಂವಾ
ವಸ್ತ್ರ, ವಡವಿ, ಸೈಟು, ಮನಿ
ಬೇಕು, ಬ್ಯಾಡ, ಸುಸ್ತು, ಅಸ್ತು
ಒಲವಿನೂಟದ ಜೊತೆಗೆ ಚರ್ಚಾಕೂಟ
ರ್ರೀ ರಾತ್ರಿ ಚೆನ್ನಾಗಿ ನಿದ್ದೆ ಬಂತೇನ್ರೀ?
ನೆರೆತ ಕೂದಲ ಅಜ್ಜಿ
ಕಿವಿ ಕಿವುಡಾದ ಅಜ್ಜನಿಗೆ ನಿತ್ಯ ಕೇಳಿದಾಗ
ಮನೆ ಮಂದಿಗೆ ಸರಿರಾತ್ರಿಯಲ್ಲಿಯೂ
ಬೆಳ್ಳಂಬೆಳಗಾದಂತೆ
ಮಂಚದ ತುಂಬೆಲ್ಲ ನೋವಿನೆಣ್ಣೆಯ ಕಂಪು
ಒಮ್ಮೆ ಅಜ್ಜಿಗೆ ಅಜ್ಜ ಮಗು
ಇನ್ನೊಮ್ಮೆ ಅಜ್ಜಗ ಅಜ್ಜಿ ಮಗು
ಮೊಮ್ಮಕ್ಕಳೊಂದಿಗೆ ಇಬ್ಬರೂ ಮಕ್ಕಳ
ಮೊಮ್ಮಗಳ ಮದುವ್ಯಾಗ
ಕರಿಮರದ ಮಂಚ ಕೊಡಾಕs ಬೇಕು
ಅಂತ ಅಜ್ಜಿ ಮಗಗ ಹೇಳೇ ಹೇಳ್ತಾಳ
ವಿದೇಶದಾಗಿರೂ ಹುಡುಗನ ಮನಿಗ
ಮಂಚಾ ಕಳಿಸೂದರ ಹ್ಯಾಂಗ
ಮಗ ಕೇಳೇ ಕೇಳ್ತಾನ !