ಗೋವ ಕಾವ ಹುಡುಗ, ನೀ ಹೋಗಬೇಡ ಈಗ
ಕಾಯಿಸಿದ ಹಾಲು ಕೊಡುವೆ, ಕಲ್ಲುಸಕ್ಕರೆ ಕೊಡುವೆ
ಕೈತುಂಬ ಬೆಣ್ಣೆ ಕೊಡುವೆ, ಹೊರಗೆಲ್ಲು ಹೋಗಬೇಡ ||
ಕಾಯಿಸಿದ ಹಾಲು ಬೇಡ, ಕಲ್ಲುಸಕ್ಕರೆ ಬೇಡ
ಉಲ್ಲಾಸದಿ ಗೋವ ಕಾಯ್ದು ಒಂದು ಕ್ಷಣದಿ ಮರಳಿ ಬರುವೆ
ಹೋಗಬೇಕು ಅಮ್ಮ, ನೀನು ತಡೆವುದೇತಕಮ್ಮ ||
ಯಮುನಾ ನದಿ ದಡದಿ ಕಳ್ಳರೆಲ್ಲ ಬಹಳಿಹರು
ಕಳ್ಳರು ಬಂದು ನಿನ್ನ ಹೊಡೆಯೆ ಭಯಪಡುವೆ ಕಣ್ಮಣಿಯೆ
ಗೋವ ಕಾವ ಹುಡುಗ, ನೀ ಹೋಗಬೇಡ ಈಗ ||
ಕಳ್ಳರನ್ನು ಕಂಡವರು ಇದ್ದಾರೊ ಹೇಳು ಅಮ್ಮ
ಒಂದು ವೇಳೆ ಇದ್ದರೂ ಬಡಿದು ಅವರ ಮಣಿಸುವೆನು
ಹೋಗಬೇಕು ಅಮ್ಮ, ನೀನು ತಡೆವುದೇತಕಮ್ಮ ||
ಘೋರವಾದ ಪ್ರಾಣಿಗಳು ಗೋವರ್ಧನ ಬೆಟ್ಟದಲಿ
ಕರಡಿ ಹುಲಿ ಕಂಡರೆ ನೀ ಭಯಪಡುವೆ ಕಣ್ಮಣಿಯೆ
ಗೋವ ಕಾವ ಹುಡುಗ, ನೀ ಹೋಗಬೇಡ ಈಗ ||
ಕಾಡಿನ ಮೃಗಗಳೆಲ್ಲ ನನ್ನ ಕಂಡು ಓಡುವವು
ಒಂದುಗೂಡಿ ಬಂದರು ಬೇಟೆಯಾಡಿ ಜಯಿಸಬಲ್ಲೆ
ಹೋಗಬೇಕು ಅಮ್ಮ, ನೀನು ತಡೆವುದೇತಕಮ್ಮ ||
ಪ್ರೀತಿಯಿಂದ ನಂದಗೋಪ ‘ಮಗನು ಎಲ್ಲಿ?’ ಎಂದು ಕೇಳೆ
ಏನೆಂದು ಹೇಳಲವಗೆ, ನನ್ನೊಲವ ಕಣ್ಮಣಿಯೆ
ಗೋವ ಕಾವ ಹುಡುಗ, ನೀ ಹೋಗಬೇಡ ಈಗ ||
‘ಬಾಲಕರ ಜೊತೆಯಲಿ ಚೆಂಡಿನಾಟ ಆಡುತಿಹನು’
ನೀನು ಹುಡುಕಿ ಕರೆದೊಡನೆ ಓಡಿ ಬಂದು ನಿಲ್ಲುವೆನು
ಹೋಗಬೇಕು ಅಮ್ಮ, ನೀನು ತಡೆವುದೇತಕಮ್ಮ ||
(ಮೂಲ ತಮಿಳು ಪದ್ಯ: ‘ಮಾಡ್ ಮೈಕ್ಕುಂ ಕಣ್ಣಾ’)